110 ಭೀಮಸೇನಪರಾಕ್ರಮಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಜಯದ್ರಥವಧ ಪರ್ವ

ಅಧ್ಯಾಯ 110

ಸಾರ

ಧೃತರಾಷ್ಟ್ರನ ಪಶ್ಚಾತ್ತಾಪ (1-23). ಭೀಮಸೇನನಿಂದ ಐವರು ಧಾರ್ತರಾಷ್ಟ್ರರ - ದುರ್ಮರ್ಷಣ, ದುಃಸ್ಸಹ, ದುರ್ಮದ, ದುರ್ಧರ ಮತ್ತು ಜಯ – ವಧೆ (24-39).

07110001 ಧೃತರಾಷ್ಟ್ರ ಉವಾಚ।
07110001a ದೈವಮೇವ ಪರಂ ಮನ್ಯೇ ಧಿಕ್ಪೌರುಷಮನರ್ಥಕಂ।
07110001c ಯತ್ರಾಧಿರಥಿರಾಯಸ್ತೋ ನಾತರತ್ಪಾಂಡವಂ ರಣೇ।।

ಧೃತರಾಷ್ಟ್ರನು ಹೇಳಿದನು: “ಪ್ರಯತ್ನಪಟ್ಟು ಹೋರಾಡುತ್ತಿರುವ ಆಧಿರಥಿ ಕರ್ಣನೂ ರಣದಲ್ಲಿ ಪಾಂಡವ ಭೀಮನನ್ನು ಮೀರಿಸಲಾರನೆಂದರೆ ದೈವವೇ ಮೇಲೆಂದು ಸ್ವೀಕರಿಸಬೇಕು. ಅರ್ಥವಿಲ್ಲದ ಪೌರುಷಕ್ಕೆ ಧಿಕ್ಕಾರ!

07110002a ಕರ್ಣಃ ಪಾರ್ಥಾನ್ಸಗೋವಿಂದಾಂ ಜೇತುಮುತ್ಸಹತೇ ರಣೇ।
07110002c ನ ಚ ಕರ್ಣಸಮಂ ಯೋಧಂ ಲೋಕೇ ಪಶ್ಯಾಮಿ ಕಂ ಚನ।
07110002e ಇತಿ ದುರ್ಯೋಧನಸ್ಯಾಹಮಶ್ರೌಷಂ ಜಲ್ಪತೋ ಮುಹುಃ।।

“ಕರ್ಣನು ಗೋವಿಂದನೊಡನೆ ಪಾರ್ಥರನ್ನು ರಣದಲ್ಲಿ ಗೆಲ್ಲುವ ಉತ್ಸಾಹದಿಂದ ಇದ್ದಾನೆ. ಲೋಕದಲ್ಲಿ ಕರ್ಣನ ಸಮನಾದ ಯೋಧನು ಯಾರನ್ನೂ ಕಾಣೆನು!” ಎಂದು ದುರ್ಬುದ್ಧಿ ದುರ್ಯೋಧನನು ಮತ್ತೆ ಮತ್ತೆ ಹೇಳುತ್ತಿದ್ದನು.

07110003a ಕರ್ಣೋ ಹಿ ಬಲವಾನ್ ಶೂರೋ ದೃಢಧನ್ವಾ ಜಿತಕ್ಲಮಃ।
07110003c ಇತಿ ಮಾಮಬ್ರವೀತ್ಸೂತ ಮಂದೋ ದುರ್ಯೋಧನಃ ಪುರಾ।।

ಸೂತ! “ಕರ್ಣನು ಬಲವಂತ. ಶೂರ. ದೃಢಧನ್ವಿ. ಆಯಾಸಗೊಳ್ಳದವ.” ಎಂದೆಲ್ಲ ಹಿಂದೆ ನನಗೆ ಮಂದ ದುರ್ಯೋಧನನು ಹೇಳುತ್ತಿದ್ದನು.

07110004a ವಸುಷೇಣಸಹಾಯಂ ಮಾಂ ನಾಲಂ ದೇವಾಪಿ ಸಂಯುಗೇ।
07110004c ಕಿಮು ಪಾಂಡುಸುತಾ ರಾಜನ್ಗತಸತ್ತ್ವಾ ವಿಚೇತಸಃ।।

“ರಾಜನ್! ವಸುಷೇಣನ ಸಹಾಯವೊಂದಿದ್ದರೆ ನನಗೆ ಯುದ್ಧದಲ್ಲಿ ದೇವತೆಗಳೂ ಸಮರಲ್ಲ. ಇನ್ನು ಸತ್ತ್ವವನ್ನು ಕಳೆದುಕೊಂಡಿರುವ ವಿಚೇತಸ ಪಾಂಡುಸುತರು ಯಾವ ಲೆಖ್ಕಕ್ಕೆ?”

07110005a ತತ್ರ ತಂ ನಿರ್ಜಿತಂ ದೃಷ್ಟ್ವಾ ಭುಜಂಗಮಿವ ನಿರ್ವಿಷಂ।
07110005c ಯುದ್ಧಾತ್ಕರ್ಣಮಪಕ್ರಾಂತಂ ಕಿಂ ಸ್ವಿದ್ದುರ್ಯೋಧನೋಽಬ್ರವೀತ್।।

ಅಲ್ಲಿ ಸೋತು ವಿಷವಿಲ್ಲದ ಸರ್ಪದಂತೆ ಯುದ್ಧದಿಂದ ನುಸುಳಿಕೊಂಡು ಹೋದ ಕರ್ಣನನ್ನು ನೋಡಿ ದುರ್ಯೋಧನನು ಏನನ್ನಾದರೂ ಹೇಳಿದನೇ?

07110006a ಅಹೋ ದುರ್ಮುಖಮೇವೈಕಂ ಯುದ್ಧಾನಾಮವಿಶಾರದಂ।
07110006c ಪ್ರಾವೇಶಯದ್ಧುತವಹಂ ಪತಂಗಮಿವ ಮೋಹಿತಃ।।

ಅಯ್ಯೋ! ಮೋಹಿತ ದುರ್ಯೋಧನನು ಯುದ್ಧದಲ್ಲಿ ಹೆಚ್ಚು ಪಳಗಿರದ ದುರ್ಮುಖನೊಬ್ಬನನ್ನೇ ಪತಂಗವನ್ನು ಬೆಂಕಿಯಲ್ಲಿ ಹಾಕುವಂತೆ ಭೀಮನೊಡನೆ ಯುದ್ಧಮಾಡಲು ಕಳುಹಿಸಿದನು.

07110007a ಅಶ್ವತ್ಥಾಮಾ ಮದ್ರರಾಜಃ ಕೃಪಃ ಕರ್ಣಶ್ಚ ಸಂಗತಾಃ।
07110007c ನ ಶಕ್ತಾಃ ಪ್ರಮುಖೇ ಸ್ಥಾತುಂ ನೂನಂ ಭೀಮಸ್ಯ ಸಂಜಯ।।

ಸಂಜಯ! ಭೀಮನ ಮುಂದೆ ಅಶ್ವತ್ಥಾಮ, ಮದ್ರರಾಜ, ಕೃಪ ಮತ್ತು ಕರ್ಣರು ಒಂದಾಗಿಯೂ ನಿಲ್ಲಲು ಶಕ್ಯರಾಗಲಿಲ್ಲ.

07110008a ತೇಽಪಿ ಚಾಸ್ಯ ಮಹಾಘೋರಂ ಬಲಂ ನಾಗಾಯುತೋಪಮಂ।
07110008c ಜಾನಂತೋ ವ್ಯವಸಾಯಂ ಚ ಕ್ರೂರಂ ಮಾರುತತೇಜಸಃ।।

ಅವರೂ ಕೂಡ ಈ ಮಾರುತತೇಜಸ್ವಿಯ ಸಾವಿರ ಆನೆಗಳ ಸಮನಾದ ಮಹಾಘೋರ ಬಲವನ್ನೂ, ಅವನ ಕ್ರೂರ ಕಸರತ್ತುಗಳನ್ನೂ ಬಲ್ಲರು.

07110009a ಕಿಮರ್ಥಂ ಕ್ರೂರಕರ್ಮಾಣಂ ಯಮಕಾಲಾಂತಕೋಪಮಂ।
07110009c ಬಲಸಂರಂಭವೀರ್ಯಜ್ಞಾಃ ಕೋಪಯಿಷ್ಯಂತಿ ಸಂಯುಗೇ।।

ಆ ಕ್ರೂರಕರ್ಮಿ, ಪ್ರಳಯಕಾಲದ ಯಮನಂತಿರುವವನನ್ನು ಅವನ ಬಲ-ಉತ್ಸಾಹ-ವೀರ್ಯಗಳನ್ನು ತಿಳಿದವರೂ ರಣದಲ್ಲಿ ಏಕೆ ಕೆರಳಿಸಿದರು?

07110010a ಕರ್ಣಸ್ತ್ವೇಕೋ ಮಹಾಬಾಹುಃ ಸ್ವಬಾಹುಬಲಮಾಶ್ರಿತಃ।
07110010c ಭೀಮಸೇನಮನಾದೃತ್ಯ ರಣೇಽಯುಧ್ಯತ ಸೂತಜಃ।।

ಸೂತಜ! ಮಹಾಬಾಹು ಕರ್ಣನು ಭೀಮಸೇನನ ಬಲವನ್ನು ಲೆಕ್ಕಿಸದೇ ತಾನೊಬ್ಬನೇ ತನ್ನ ಬಲವನ್ನು ಮಾತ್ರ ಅವಲಂಬಿಸಿಕೊಂಡು ರಣದಲ್ಲಿ ಯುದ್ಧಮಾಡಿದನು.

07110011a ಯೋಽಜಯತ್ಸಮರೇ ಕರ್ಣಂ ಪುರಂದರ ಇವಾಸುರಂ।
07110011c ನ ಸ ಪಾಂಡುಸುತೋ ಜೇತುಂ ಶಕ್ಯಃ ಕೇನ ಚಿದಾಹವೇ।।

ಸಮರದಲ್ಲಿ ಪುರಂದರನು ಅಸುರನನ್ನು ಹೇಗೋ ಹಾಗೆ ಕರ್ಣನನ್ನು ಗೆದ್ದ ಆ ಪಾಂಡುಸುತನನ್ನು ಯುದ್ಧದಲ್ಲಿ ಗೆಲ್ಲಲು ಯಾರಿಗೂ ಸಾಧ್ಯವಿಲ್ಲ.

07110012a ದ್ರೋಣಂ ಯಃ ಸಂಪ್ರಮಥ್ಯೈಕಃ ಪ್ರವಿಷ್ಟೋ ಮಮ ವಾಹಿನೀಂ।
07110012c ಭೀಮೋ ಧನಂಜಯಾನ್ವೇಷೀ ಕಸ್ತಮರ್ಚೇಜ್ಜಿಜೀವಿಷುಃ।।

ಧನಂಜಯನನ್ನು ಹುಡುಕುತ್ತಾ ದ್ರೋಣನನ್ನೇ ಸದೆಬಡಿದು ಏಕಾಂಗಿಯಾಗಿ ನನ್ನ ಸೇನೆಗಳನ್ನು ಹೊಕ್ಕಿದ ಆ ಭೀಮನನ್ನು ಜೀವಿಸಲು ಬಯಸಿದ ಯಾರುತಾನೇ ಎದುರಿಸಿಯಾರು?

07110013a ಕೋ ಹಿ ಸಂಜಯ ಭೀಮಸ್ಯ ಸ್ಥಾತುಮುತ್ಸಹತೇಽಗ್ರತಃ।
07110013c ಉದ್ಯತಾಶನಿವಜ್ರಸ್ಯ ಮಹೇಂದ್ರಸ್ಯೇವ ದಾನವಃ।।

ಸಂಜಯ! ಭೀಮನ ಎದಿರು ನಿಲ್ಲಲು ಯಾರು ತಾನೇ ಉತ್ಸಾಹಿತರಾಗಿದ್ದಾರೆ? ವಜ್ರವನ್ನು ಎತ್ತಿ ಹಿಡಿದಿರುವ ಮಹೇಂದ್ರನನ್ನು ಯಾವ ದಾನವನು ಎದುರಿಸಿಯಾನು?

07110014a ಪ್ರೇತರಾಜಪುರಂ ಪ್ರಾಪ್ಯ ನಿವರ್ತೇತಾಪಿ ಮಾನವಃ।
07110014c ನ ಭೀಮಸೇನಂ ಸಂಪ್ರಾಪ್ಯ ನಿವರ್ತೇತ ಕದಾ ಚನ।।

ಯುಮರಾಜನ ಪುರವನ್ನು ಸೇರಿದ ಮನುಷ್ಯರೂ ಹಿಂದಿರುಗಿ ಬಂದು ಬಿಡಬಹುದು. ಆದರೆ ಭೀಮಸೇನನನ್ನು ಎದುರಿಸಿ ಯಾರೂ ಹಿಂದಿರುಗುವುದಿಲ್ಲ.

07110015a ಪತಂಗಾ ಇವ ವಹ್ನಿಂ ತೇ ಪ್ರಾವಿಶನ್ನಲ್ಪಚೇತಸಃ।
07110015c ಯೇ ಭೀಮಸೇನಂ ಸಂಕ್ರುದ್ಧಮಭ್ಯಧಾವನ್ವಿಮೋಹಿತಾಃ।।

ಸಂಕ್ರುದ್ಧ ಭೀಮಸೇನನನ್ನು ಅಲ್ಪಚೇತಸ ವಿಮೋಹಿತ ಯಾರು ಆಕ್ರಮಣಿಸುತ್ತಾರೋ ಅವರು ಅಗ್ನಿಯನ್ನು ಪ್ರವೇಶಿಸುವ ಪತಂಗಗಳಂತೆ.

07110016a ಯತ್ತತ್ಸಭಾಯಾಂ ಭೀಮೇನ ಮಮ ಪುತ್ರವಧಾಶ್ರಯಂ।
07110016c ಶಪ್ತಂ ಸಂರಂಭಿಣೋಗ್ರೇಣ ಕುರೂಣಾಂ ಶೃಣ್ವತಾಂ ತದಾ।।
07110017a ತನ್ನೂನಮಭಿಸಂಚಿಂತ್ಯ ದೃಷ್ಟ್ವಾ ಕರ್ಣಂ ಚ ನಿರ್ಜಿತಂ।
07110017c ದುಃಶಾಸನಃ ಸಹ ಭ್ರಾತ್ರಾ ಭಯಾದ್ಭೀಮಾದುಪಾರಮತ್।।

ಅಂದು ಸಭೆಯಲ್ಲಿ ಕೋಪದಿಂದ ಉಗ್ರನಾಗಿದ್ದ ಭೀಮನು ಕುರುಗಳು ಕೇಳಿಸಿಕೊಳ್ಳುವಂತೆ ನನ್ನ ಮಕ್ಕಳ ವಧೆಯ ಕುರಿತು ಮಾಡಿದ ಶಪಥವನ್ನು ನೆನಪಿಸಿಕೊಂಡೇ ಮತ್ತು ಕರ್ಣನೂ ಅವನಿಂದ ಸೋತಿರುವುದನ್ನು ನೋಡಿ ಹೆದರಿಯೇ ಸಹೋದರರೊಂದಿಗೆ ದುಃಶಾಸನನು ಅವನಿಂದ ದೂರವಿದ್ದಿರಬೇಕು.

07110018a ಯಶ್ಚ ಸಂಜಯ ದುರ್ಬುದ್ಧಿರಬ್ರವೀತ್ಸಮಿತೌ ಮುಹುಃ।
07110018c ಕರ್ಣೋ ದುಃಶಾಸನೋಽಹಂ ಚ ಜೇಷ್ಯಾಮೋ ಯುಧಿ ಪಾಂಡವಾನ್।।

ಸಂಜಯ! “ಯುದ್ಧದಲ್ಲಿ ಕರ್ಣ, ದುಃಶಾಸನ ಮತ್ತು ನಾನು ಪಾಂಡವರನ್ನು ಗೆಲ್ಲುತ್ತೇವೆ!” ಎಂದು ಸಮಿತಿಯಲ್ಲಿ ಆ ದುರ್ಬುದ್ಧಿ ದುರ್ಯೋಧನನು ಮತ್ತೆ ಮತ್ತೆ ಹೇಳುತ್ತಿದ್ದನು.

07110019a ಸ ನೂನಂ ವಿರಥಂ ದೃಷ್ಟ್ವಾ ಕರ್ಣಂ ಭೀಮೇನ ನಿರ್ಜಿತಂ।
07110019c ಪ್ರತ್ಯಾಖ್ಯಾನಾಚ್ಚ ಕೃಷ್ಣಸ್ಯ ಭೃಶಂ ತಪ್ಯತಿ ಸಂಜಯ।।

ಸಂಜಯ! ಕರ್ಣನು ಭೀಮನಿಂದ ಸೋತು ವಿರಥನಾದುದನ್ನು ನೋಡಿ ದುರ್ಯೋಧನನು ಕೃಷ್ಣನಿಗೆ ಹೇಳಿದುದರ ಕುರಿತು ಪಶ್ಚಾತ್ತಾಪಪಡುತ್ತಿರಬಹುದು.

07110020a ದೃಷ್ಟ್ವಾ ಭ್ರಾತೄನ್ಹತಾನ್ಯುದ್ಧೇ ಭೀಮಸೇನೇನ ದಂಶಿತಾನ್।
07110020c ಆತ್ಮಾಪರಾಧಾತ್ಸುಮಹನ್ನೂನಂ ತಪ್ಯತಿ ಪುತ್ರಕಃ।।

ತನ್ನ ಕವಚಧಾರಿ ಸಹೋದರರು ಯುದ್ಧದಲ್ಲಿ ಭೀಮಸೇನನಿಂದ ಹತರಾದುದನ್ನು ನೋಡಿ ನನ್ನ ಮಗನು ತನ್ನ ಅಪರಾಧದಿಂದ ಬಹಳವಾಗಿ ಪರಿತಪಿಸುತ್ತಿರಬಹುದು.

07110021a ಕೋ ಹಿ ಜೀವಿತಮನ್ವಿಚ್ಚನ್ಪ್ರತೀಪಂ ಪಾಂಡವಂ ವ್ರಜೇತ್।
07110021c ಭೀಮಂ ಭೀಮಾಯುಧಂ ಕ್ರುದ್ಧಂ ಸಾಕ್ಷಾತ್ಕಾಲಮಿವ ಸ್ಥಿತಂ।।

ಜೀವಂತವಾಗಿರಲು ಬಯಸಿದ ಯಾರು ತಾನೇ ಕ್ರುದ್ಧನಾಗಿ ಉರಿಯುತ್ತಿರುವ ಸಾಕ್ಷಾತ್ ಅಂತಕನಂತೆ ನಿಂತಿರುವ ಭೀಮಾಯುಧ ಪಾಂಡವ ಭೀಮನನ್ನು ಕೆರಳಿಸುತ್ತಾರೆ?

07110022a ವಡವಾಮುಖಮಧ್ಯಸ್ಥೋ ಮುಚ್ಯೇತಾಪಿ ಹಿ ಮಾನವಃ।
07110022c ನ ಭೀಮಮುಖಸಂಪ್ರಾಪ್ತೋ ಮುಚ್ಯೇತೇತಿ ಮತಿರ್ಮಮ।।

ವಡವ ಅಗ್ನಿಯ ಮಧ್ಯದಿಂದಲಾದರೂ ಮನುಷ್ಯನು ಹೊರಬರಬಹುದು. ಆದರೆ ಭೀಮನ ಎದುರಿನಿಂದ ಬಿಡುಗಡೆಯಿಲ್ಲ ಎಂದು ನನ್ನ ಅಭಿಪ್ರಾಯ.

07110023a ನ ಪಾಂಡವಾ ನ ಪಾಂಚಾಲಾ ನ ಚ ಕೇಶವಸಾತ್ಯಕೀ।
07110023c ಜಾನಂತಿ ಯುಧಿ ಸಂರಬ್ಧಾ ಜೀವಿತಂ ಪರಿರಕ್ಷಿತುಂ।।

ಯುದ್ಧದಲ್ಲಿ ಕ್ರುದ್ಧ ಪಾಂಡವರಾಗಲೀ, ಪಾಂಚಲರಾಗಲೀ, ಕೇಶವ-ಸಾತ್ಯಕಿಯರಾಗಲೀ, ತಮ್ಮ ಜೀವವನ್ನು ರಕ್ಷಿಸಿಕೊಳ್ಳಲು ನೋಡುವುದಿಲ್ಲ.”

07110024 ಸಂಜಯ ಉವಾಚ।
07110024a ಯತ್ಸಂಶೋಚಸಿ ಕೌರವ್ಯ ವರ್ತಮಾನೇ ಜನಕ್ಷಯೇ।
07110024c ತ್ವಮಸ್ಯ ಜಗತೋ ಮೂಲಂ ವಿನಾಶಸ್ಯ ನ ಸಂಶಯಃ।।

ಸಂಜಯನು ಹೇಳಿದನು: “ಕೌರವ್ಯ! ನಡೆಯುತ್ತಿರುವ ಈ ಜನಕ್ಷಯವನ್ನೇನು ನೀನು ಶೋಕಿಸುತ್ತಿರುವೆಯೋ ಆ ಜಗತ್ತಿನ ವಿನಾಶಕ್ಕೆ ಮೂಲಕಾರಣನು ನೀನೇ ಎನ್ನುವುದರಲ್ಲಿ ಸಂಶಯವಿಲ್ಲ.

07110025a ಸ್ವಯಂ ವೈರಂ ಮಹತ್ಕೃತ್ವಾ ಪುತ್ರಾಣಾಂ ವಚನೇ ಸ್ಥಿತಃ।
07110025c ಉಚ್ಯಮಾನೋ ನ ಗೃಹ್ಣೀಷೇ ಮರ್ತ್ಯಃ ಪಥ್ಯಮಿವೌಷಧಂ।।

ಮಕ್ಕಳ ಮಾತಿಗೆ ಬಂದು ಸ್ವಯಂ ನೀನೇ ಈ ಮಹಾ ವೈರವನ್ನು ಕಟ್ಟಿಕೊಂಡಿದ್ದೀಯೆ. ಹಿತವಾದುದನ್ನು ಒತ್ತಿ ಹೇಳಿದರೂ ಸಾಯುವವನು ಒತ್ತಾಯವಾಗಿ ಕುಡಿಸುವ ಔಷಧವನ್ನು ಹೇಗೋ ಹಾಗೆ ನೀನು ಅದನ್ನು ಸ್ವೀಕರಿಸಲಿಲ್ಲ.

07110026a ಸ್ವಯಂ ಪೀತ್ವಾ ಮಹಾರಾಜ ಕಾಲಕೂಟಂ ಸುದುರ್ಜರಂ।
07110026c ತಸ್ಯೇದಾನೀಂ ಫಲಂ ಕೃತ್ಸ್ನಮವಾಪ್ನುಹಿ ನರೋತ್ತಮ।।

ನರೋತ್ತಮ! ಮಹಾರಾಜ! ಜೀರ್ಣಿಸಿಕೊಳ್ಳಲು ಅಸಾಧ್ಯವಾದ ಕಾಲಕೂಟ ವಿಷವನ್ನು ಸ್ವಯಂ ನೀನೇ ಕುಡಿದು ಅದರ ಈ ಪರಿಣಾಮಗಳನ್ನು ಅನುಭವಿಸುತ್ತಿದ್ದೀಯೆ.

07110027a ಯತ್ತು ಕುತ್ಸಯಸೇ ಯೋಧಾನ್ಯುಧ್ಯಮಾನಾನ್ಯಥಾಬಲಂ।
07110027c ಅತ್ರ ತೇ ವರ್ಣಯಿಷ್ಯಾಮಿ ಯಥಾ ಯುದ್ಧಮವರ್ತತ।।

ಅವರಿಗೆ ಬಲವಿದ್ದಷ್ಟೂ ಯೋಧರು ಯುದ್ಧಮಾಡುತ್ತಿದ್ದರೂ ನೀನು ಅವರ ಕುರಿತು ಕೆಟ್ಟದಾಗಿ ಮಾತನಾಡುತ್ತಿದ್ದೀಯೆ. ಅಲ್ಲಿ ಹೇಗೆ ಯುದ್ಧವು ನಡೆಯಿತೋ ಹಾಗೆ ನಿನಗೆ ವರ್ಣಿಸುತ್ತೇನೆ.

07110028a ದೃಷ್ಟ್ವಾ ಕರ್ಣಂ ತು ಪುತ್ರಾಸ್ತೇ ಭೀಮಸೇನಪರಾಜಿತಂ।
07110028c ನಾಮೃಷ್ಯಂತ ಮಹೇಷ್ವಾಸಾಃ ಸೋದರ್ಯಾಃ ಪಂಚ ಮಾರಿಷ।।

ಮಾರಿಷ! ಭೀಮಸೇನನಿಂದ ಕರ್ಣನು ಸೋತುದನ್ನು ನೋಡಿ ಐವರು ಮಹೇಷ್ವಾಸ ಸೋದರರು ಸಹಿಸಿಕೊಳ್ಳಲಿಲ್ಲ.

07110029a ದುರ್ಮರ್ಷಣೋ ದುಃಸ್ಸಹಶ್ಚ ದುರ್ಮದೋ ದುರ್ಧರೋ ಜಯಃ।
07110029c ಪಾಂಡವಂ ಚಿತ್ರಸನ್ನಾಹಾಸ್ತಂ ಪ್ರತೀಪಮುಪಾದ್ರವನ್।।

ಬಣ್ಣದ ಕವಚಗಳನ್ನು ಧರಿಸಿದ ದುರ್ಮರ್ಷಣ, ದುಃಸ್ಸಹ, ದುರ್ಮದ, ದುರ್ಧರ ಮತ್ತು ಜಯ ಇವರು ಬೆಳಗುತ್ತಿರುವ ಪಾಂಡವನನ್ನು ಆಕ್ರಮಣಿಸಿದರು.

07110030a ತೇ ಸಮಂತಾನ್ಮಹಾಬಾಹುಂ ಪರಿವಾರ್ಯ ವೃಕೋದರಂ।
07110030c ದಿಶಃ ಶರೈಃ ಸಮಾವೃಣ್ವಂ ಶಲಭಾನಾಮಿವ ವ್ರಜೈಃ।।

ಅವರು ಮಹಾಬಾಹು ವೃಕೋದರನನ್ನು ಎಲ್ಲಕಡೆಗಳಿಂದ ಸುತ್ತುವರೆದು ಹಾರಾಡುವ ಮಿಡಿತೆಗಳಂತಿದ್ದ ಶರಗಳಿಂದ ದಿಕ್ಕುಗಳನ್ನೇ ತುಂಬಿಬಿಟ್ಟರು.

07110031a ಆಗಚ್ಚತಸ್ತಾನ್ಸಹಸಾ ಕುಮಾರಾನ್ದೇವರೂಪಿಣಃ।
07110031c ಪ್ರತಿಜಗ್ರಾಹ ಸಮರೇ ಭೀಮಸೇನೋ ಹಸನ್ನಿವ।।

ಸಮರದಲ್ಲಿ ಒಮ್ಮಿಂದೊಮ್ಮೆಲೇ ಮೇಲೆ ಎರಗಿದ ಆ ದೇವರೂಪೀ ಕುಮಾರರನ್ನು ಭೀಮಸೇನನು ನಗುತ್ತಲೇ ಎದುರಿಸಿದನು.

07110032a ತವ ದೃಷ್ಟ್ವಾ ತು ತನಯಾನ್ಭೀಮಸೇನಸಮೀಪಗಾನ್।
07110032c ಅಭ್ಯವರ್ತತ ರಾಧೇಯೋ ಭೀಮಸೇನಂ ಮಹಾಬಲಂ।।

ನಿನ್ನ ಮಕ್ಕಳು ಭೀಮಸೇನನ ಸಮೀಪಹೋದುದನ್ನು ನೋಡಿ ರಾಧೇಯನು ಮಹಾಬಲ ಭೀಮಸೇನನನ್ನು ಆಕ್ರಮಣಿಸಿದನು.

07110033a ವಿಸೃಜನ್ವಿಶಿಖಾನ್ರಾಜನ್ಸ್ವರ್ಣಪುಂಖಾಂ ಶಿಲಾಶಿತಾನ್।
07110033c ತಂ ತು ಭೀಮೋಽಭ್ಯಯಾತ್ತೂರ್ಣಂ ವಾರ್ಯಮಾಣಃ ಸುತೈಸ್ತವ।।

ರಾಜನ್! ಸ್ವರ್ಣಪುಂಖಗಳ ಶಿಲಾಶಿತ ವಿಶಿಖಗಳನ್ನು ಬಿಡುತ್ತಾ ಅವನು ನಿನ್ನ ಮಕ್ಕಳು ತಡೆಯುತ್ತಿದ್ದ ಭೀಮಸೇನನನ್ನು ಬೇಗನೆ ಆಕ್ರಮಣಿಸಿದನು.

07110034a ಕುರವಸ್ತು ತತಃ ಕರ್ಣಂ ಪರಿವಾರ್ಯ ಸಮಂತತಃ।
07110034c ಅವಾಕಿರನ್ಭೀಮಸೇನಂ ಶರೈಃ ಸನ್ನತಪರ್ವಭಿಃ।।

ಆಗ ಕುರುಗಳು ಕರ್ಣನನ್ನು ಎಲ್ಲಕಡೆಗಳಿಂದ ಸುತ್ತುವರೆದು ಭೀಮಸೇನನನ್ನು ಸನ್ನತಪರ್ವ ಶರಗಳಿಂದ ಮುಚ್ಚಿದರು.

07110035a ತಾನ್ಬಾಣೈಃ ಪಂಚವಿಂಶತ್ಯಾ ಸಾಶ್ವಾನ್ರಾಜನ್ನರರ್ಷಭಾನ್।
07110035c ಸಸೂತಾನ್ಭೀಮಧನುಷೋ ಭೀಮೋ ನಿನ್ಯೇ ಯಮಕ್ಷಯಂ।।

ರಾಜನ್! ಭೀಮಧನುಷೀ ಭೀಮನು ಇಪ್ಪತ್ತೈದು ಬಾಣಗಳಿಂದ ಆ ನರರ್ಷಭರನ್ನು ಅವರ ಕುದುರೆ-ಸಾರಥಿಯರೊಂದಿಗೆ ಯಮಲೋಕಕ್ಕೆ ಕಳುಹಿಸಿದನು.

07110036a ಪ್ರಾಪತನ್ಸ್ಯಂದನೇಭ್ಯಸ್ತೇ ಸಾರ್ಧಂ ಸೂತೈರ್ಗತಾಸವಃ।
07110036c ಚಿತ್ರಪುಷ್ಪಧರಾ ಭಗ್ನಾ ವಾತೇನೇವ ಮಹಾದ್ರುಮಾಃ।।

ರಥದ ಮೇಲಿಂದ ಅಸುನೀಗಿ ಅವರು ಸೂತರೊಂದಿಗೆ ರಥದ ಮೇಲಿಂದ ಬೀಳುವಾಗ ಅವರು ಬಣ್ಣ ಬಣ್ಣದ ಹೂಗಳು ತುಂಬಿದ್ದ ಮಹಾವೃಕ್ಷವು ಭಿರುಗಾಳಿಗೆ ತುಂಡಾಗಿ ಬಿದ್ದಂತೆ ತೋರಿದರು.

07110037a ತತ್ರಾದ್ಭುತಮಪಶ್ಯಾಮ ಭೀಮಸೇನಸ್ಯ ವಿಕ್ರಮಂ।
07110037c ಸಂವಾರ್ಯಾಧಿರಥಿಂ ಬಾಣೈರ್ಯಜ್ಜಘಾನ ತವಾತ್ಮಜಾನ್।।

ಆಧಿರಥಿ ಕರ್ಣನ ಸುತ್ತಲೂ ಇದ್ದ ನಿನ್ನ ಮಕ್ಕಳನ್ನು ಬಾಣಗಳಿಂದ ಸಂಹರಿಸಿದ ಭೀಮಸೇನನ ವಿಕ್ರಮವನ್ನು ಅಲ್ಲಿ ನೋಡಿದೆವು.

07110038a ಸ ವಾರ್ಯಮಾಣೋ ಭೀಮೇನ ಶಿತೈರ್ಬಾಣೈಃ ಸಮಂತತಃ।
07110038c ಸೂತಪುತ್ರೋ ಮಹಾರಾಜ ಭೀಮಸೇನಮವೈಕ್ಷತ।।

ಮಹಾರಾಜ! ಭೀಮನ ನಿಶಿತ ಬಾಣಗಳಿಂದ ಎಲ್ಲ ಕಡೆಗಳಿಂದಲೂ ತಡೆಯಲ್ಪಟ್ಟ ಸೂತಪುತ್ರನು ಭೀಮಸೇನನನ್ನು ನೋಡುತ್ತ ನಿಂತುಬಿಟ್ಟನು.

07110039a ತಂ ಭೀಮಸೇನಃ ಸಂರಂಭಾತ್ಕ್ರೋಧಸಂರಕ್ತಲೋಚನಃ।
07110039c ವಿಸ್ಫಾರ್ಯ ಸುಮಹಚ್ಚಾಪಂ ಮುಹುಃ ಕರ್ಣಮವೈಕ್ಷತ।।

ಭೀಮಸೇನನೂ ಕೂಡ ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ಮಹಾ ಚಾಪವನ್ನು ಮತ್ತೆ ಮತ್ತೆ ಟೇಂಕರಿಸುತ್ತಾ ಕರ್ಣನನ್ನು ದುರುಗುಟ್ಟಿ ನೋಡಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಭೀಮಸೇನಪರಾಕ್ರಮೇ ದಶಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಭೀಮಸೇನಪರಾಕ್ರಮ ಎನ್ನುವ ನೂರಾಹತ್ತನೇ ಅಧ್ಯಾಯವು.