108 ಭೀಮಕರ್ಣಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಜಯದ್ರಥವಧ ಪರ್ವ

ಅಧ್ಯಾಯ 108

ಸಾರ

ಧೃತರಾಷ್ಟ್ರನ ಪಶ್ಚಾತ್ತಾಪ (1-15). ಭೀಮಸೇನನು ಕರ್ಣನ ಕುದುರೆಗಳನ್ನು ಸಂಹರಿಸಿದುದು (16-33). ಭೀಮಸೇನನಿಂದ ಧೃತರಾಷ್ಟ್ರನ ಮಗ ದುರ್ಜಯನ ವಧೆ (34-41).

07108001 ಧೃತರಾಷ್ಟ್ರ ಉವಾಚ।
07108001a ಅತ್ಯದ್ಭುತಮಹಂ ಮನ್ಯೇ ಭೀಮಸೇನಸ್ಯ ವಿಕ್ರಮಂ।
07108001c ಯತ್ಕರ್ಣಂ ಯೋಧಯಾಮಾಸ ಸಮರೇ ಲಘುವಿಕ್ರಮಂ।।

ಧೃತರಾಷ್ಟ್ರನು ಹೇಳಿದನು: “ಸಮರದಲ್ಲಿ ಲಘುವಿಕ್ರಮ ಕರ್ಣನೊಡನೆ ಯುದ್ಧಮಾಡುವ ಭೀಮಸೇನನ ವಿಕ್ರಮವನ್ನು ಅತಿ ಅದ್ಭುತವಾದುದೆಂದು ನಾನು ಅಭಿಪ್ರಾಯಪಡುತ್ತೇನೆ.

07108002a ತ್ರಿದಶಾನಪಿ ಚೋದ್ಯುಕ್ತಾನ್ಸರ್ವಶಸ್ತ್ರಧರಾನ್ಯುಧಿ।
07108002c ವಾರಯೇದ್ಯೋ ರಣೇ ಕರ್ಣಃ ಸಯಕ್ಷಾಸುರಮಾನವಾನ್।।
07108003a ಸ ಕಥಂ ಪಾಂಡವಂ ಯುದ್ಧೇ ಭ್ರಾಜಮಾನಮಿವ ಶ್ರಿಯಾ।
07108003c ನಾತರತ್ಸಂಯುಗೇ ತಾತ ತನ್ಮಮಾಚಕ್ಷ್ವ ಸಂಜಯ।।

ಅಯ್ಯಾ! ಯಕ್ಷ-ಅಸುರ-ಮಾನವರನ್ನೂ ಸೇರಿ ತ್ರಿದಶರೇ ಉದ್ಯುಕ್ತರಾಗಿ ಯುದ್ಧಕ್ಕೆ ಬಂದರೂ ಶಸ್ತ್ರಧರರೆಲ್ಲರನ್ನೂ ರಣದಲ್ಲಿ ತಡೆಯಬಲ್ಲಂತಹ ಕರ್ಣನು ಯುದ್ಧದಲ್ಲಿ ಶ್ರೀಯಿಂದ ಬೆಳಗುತ್ತಿದ್ದ ಪಾಂಡವ ಭೀಮನನ್ನು ಹೇಗೆ ಜಯಿಸಲಿಲ್ಲ? ಅದನ್ನು ನನಗೆ ಹೇಳು ಸಂಜಯ!

07108004a ಕಥಂ ಚ ಯುದ್ಧಂ ಭೂಯೋಽಭೂತ್ತಯೋಃ ಪ್ರಾಣದುರೋದರೇ।
07108004c ಅತ್ರ ಮನ್ಯೇ ಸಮಾಯತ್ತೋ ಜಯೋ ವಾಜಯ ಏವ ವಾ।।

ಇಬ್ಬರೂ ಪ್ರಾಣಗಳನ್ನು ಪಣವನ್ನಾಗಿರಿಸಿದ ಆ ಯುದ್ಧವು ಹೇಗೆ ನಡೆಯಿತು? ಅಲ್ಲಿ ಇಬ್ಬರಿಗೂ ಜಯ ಅಥವಾ ಅಪಜಯಗಳು ಸಮವಾಗಿ ಸಿಕ್ಕಿರಬೇಕೆಂದು ನನಗನಿಸುತ್ತದೆ.

07108005a ಕರ್ಣಂ ಪ್ರಾಪ್ಯ ರಣೇ ಸೂತ ಮಮ ಪುತ್ರಃ ಸುಯೋಧನಃ।
07108005c ಜೇತುಮುತ್ಸಹತೇ ಪಾರ್ಥಾನ್ಸಗೋವಿಂದಾನ್ಸಸಾತ್ವತಾನ್।।

ಸೂತ! ರಣದಲ್ಲಿ ಕರ್ಣನು ಬಂದನೆಂದರೆ ನನ್ನ ಮಗ ಸುಯೋಧನನು ಸಾತ್ವತರೊಂದಿಗೆ ಗೋವಿಂದ ಮತ್ತು ಪಾರ್ಥರನ್ನು ಗೆಲ್ಲುವ ಉತ್ಸಾಹತಳೆಯುತ್ತಾನೆ.

07108006a ಶ್ರುತ್ವಾ ತು ನಿರ್ಜಿತಂ ಕರ್ಣಮಸಕೃದ್ಭೀಮಕರ್ಮಣಾ।
07108006c ಭೀಮಸೇನೇನ ಸಮರೇ ಮೋಹ ಆವಿಶತೀವ ಮಾಂ।।

ಭೀಮಕರ್ಮಿ ಭೀಮಸೇನನಿಂದ ಸಮರದಲ್ಲಿ ಕರ್ಣನು ಸೋತನೆಂದು ಕೇಳಿ ನನಗೆ ಅತೀವ ಮಂಕಾಗಿದೆ.

07108007a ವಿನಷ್ಟಾನ್ಕೌರವಾನ್ಮನ್ಯೇ ಮಮ ಪುತ್ರಸ್ಯ ದುರ್ನಯೈಃ।
07108007c ನ ಹಿ ಕರ್ಣೋ ಮಹೇಷ್ವಾಸಾನ್ಪಾರ್ಥಾನ್ಜ್ಯೇಷ್ಯತಿ ಸಂಜಯ।।

ಸಂಜಯ! ಅನ್ಯಾಯವಾಗಿ ನನ್ನ ಮಕ್ಕಳು ಕೌರವರು ವಿನಾಶಹೊಂದುತ್ತಾರೆಂದು ನನಗನ್ನಿಸುತ್ತದೆ. ಏಕೆಂದರೆ ಕರ್ಣನು ಮಹೇಷ್ವಾಸ ಪಾರ್ಥರನ್ನು ಗೆಲ್ಲಲಾರ.

07108008a ಕೃತವಾನ್ಯಾನಿ ಯುದ್ಧಾನಿ ಕರ್ಣಃ ಪಾಂಡುಸುತೈಃ ಸಹ।
07108008c ಸರ್ವತ್ರ ಪಾಂಡವಾಃ ಕರ್ಣಮಜಯಂತ ರಣಾಜಿರೇ।।

ಪಾಂಡುಸುತರೊಂದಿಗೆ ಕರ್ಣನು ಯಾವ ಯಾವ ಯುದ್ಧಗಳನ್ನು ಮಾಡಿದ್ದಾನೋ ಅವುಗಳೆಲ್ಲದರಲ್ಲಿ ರಣಾಜಿರದಲ್ಲಿ ಪಾಂಡವರು ಕರ್ಣನನ್ನು ಗೆದ್ದಿದ್ದಾರೆ.

07108009a ಅಜಯ್ಯಾಃ ಪಾಂಡವಾಸ್ತಾತ ದೇವೈರಪಿ ಸವಾಸವೈಃ।
07108009c ನ ಚ ತದ್ಬುಧ್ಯತೇ ಮಂದಃ ಪುತ್ರೋ ದುರ್ಯೋಧನೋ ಮಮ।।

ಅಯ್ಯಾ! ವಾಸವನೊಂದಿಗೆ ದೇವತೆಗಳಿಗೂ ಕೂಡ ಪಾಂಡವರು ಅಜೇಯರು. ನನ್ನ ಮೂಡ ಮಗ ದುರ್ಯೋಧನನು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ.

07108010a ಧನಂ ಧನೇಶ್ವರಸ್ಯೇವ ಹೃತ್ವಾ ಪಾರ್ಥಸ್ಯ ಮೇ ಸುತಃ।
07108010c ಮಧುಪ್ರೇಪ್ಸುರಿವಾಬುದ್ಧಿಃ ಪ್ರಪಾತಂ ನಾವಬುಧ್ಯತೇ।।

ಧನೇಶ್ವರನಂತಿರುವ ಪಾರ್ಥನ ಧನವನ್ನು ಅಪಹರಿಸಿ ನನ್ನ ಬುದ್ಧಿಯಿಲ್ಲದ ಮಗನು ಜೇನು ಹುಡುಕುವವನಂತೆ ಮುಂದಿರುವ ಪ್ರಪಾತವನ್ನು ಅರಿತುಕೊಳ್ಳಲಿಲ್ಲ.

07108011a ನಿಕೃತ್ಯಾ ನಿಕೃತಿಪ್ರಜ್ಞೋ ರಾಜ್ಯಂ ಹೃತ್ವಾ ಮಹಾತ್ಮನಾಂ।
07108011c ಜಿತಾನಿತ್ಯೇವ ಮನ್ವಾನಃ ಪಾಂಡವಾನವಮನ್ಯತೇ।।

ಮೋಸಗಾರನಾದ ಅವನು ಆ ಮಹಾತ್ಮರ ರಾಜ್ಯವನ್ನು ಮೋಸದಿಂದ ಅಪಹರಿಸಿ ಅದನ್ನು ತಾನು ಗೆದ್ದಿರುವುದೆಂದೇ ಭಾವಿಸಿ ಪಾಂಡವರನ್ನು ಅಪಮಾನಿಸುತ್ತಿದ್ದಾನೆ.

07108012a ಪುತ್ರಸ್ನೇಹಾಭಿಭೂತೇನ ಮಯಾ ಚಾಪ್ಯಕೃತಾತ್ಮನಾ।
07108012c ಧರ್ಮೇ ಸ್ಥಿತಾ ಮಹಾತ್ಮಾನೋ ನಿಕೃತಾಃ ಪಾಂಡುನಂದನಾಃ।।

ಅಕೃತಾತ್ಮನಾದ ನಾನೂ ಕೂಡ ಮಕ್ಕಳ ಮೇಲಿನ ಪ್ರೀತಿಯಿಂದ ಧರ್ಮದಲ್ಲಿ ನೆಲೆಸಿದ್ದ ಮಹಾತ್ಮ ಪಾಂಡುನಂದರನ್ನು ಮೋಸಗೊಳಿಸಿದೆ.

07108013a ಶಮಕಾಮಃ ಸದಾ ಪಾರ್ಥೋ ದೀರ್ಘಪ್ರೇಕ್ಷೀ ಯುಧಿಷ್ಠಿರಃ।
07108013c ಅಶಕ್ತ ಇತಿ ಮನ್ವಾನೈಃ ಪುತ್ರೈರ್ಮಮ ನಿರಾಕೃತಃ।।

ದೀರ್ಘಪ್ರೇಕ್ಷೀ ಪಾರ್ಥ ಯುಧಿಷ್ಠಿರನು ಸದಾ ಶಾಂತಿಯನ್ನೇ ಬಯಸುತ್ತಿದ್ದನು. ಆದರೆ ನನ್ನ ಮಕ್ಕಳು ಮತ್ತು ಇತರರು ಅವರು ಅಶಕ್ತರೆಂದು ಭಾವಿಸಿ ಶಾಂತಿಯನ್ನು ನಿರಾಕರಿಸಿದರು.

07108014a ತಾನಿ ದುಃಖಾನ್ಯನೇಕಾನಿ ವಿಪ್ರಕಾರಾಂಶ್ಚ ಸರ್ವಶಃ।
07108014c ಹೃದಿ ಕೃತ್ವಾ ಮಹಾಬಾಹುರ್ಭೀಮೋಽಯುಧ್ಯತ ಸೂತಜಂ।।

ಆ ಅನೇಕ ಪ್ರಕಾರಗಳ ದುಃಖಗಳನ್ನು ಹೃದಯದಲ್ಲೆಲ್ಲ ತುಂಬಿರಿಸಿಕೊಂಡು ಮಹಾಬಾಹು ಭೀಮನು ಸೂತಪುತ್ರ ಕರ್ಣನೊಡನೆ ಯುದ್ಧಮಾಡಿದನು.

07108015a ತಸ್ಮಾನ್ಮೇ ಸಂಜಯ ಬ್ರೂಹಿ ಕರ್ಣಭೀಮೌ ಯಥಾ ರಣೇ।
07108015c ಅಯುಧ್ಯೇತಾಂ ಯುಧಿ ಶ್ರೇಷ್ಠೌ ಪರಸ್ಪರವಧೈಷಿಣೌ।।

ಸಂಜಯ! ಪರಸ್ಪರರನ್ನು ವಧಿಸಲು ಬಯಸಿದ್ದ ಯುದ್ಧದಲ್ಲಿ ಶ್ರೇಷ್ಠರಾದ ಕರ್ಣ-ಭೀಮರಿಬ್ಬರೂ ರಣದಲ್ಲಿ ಹೇಗೆ ಯುದ್ಧಮಾಡಿದರೆಂದು ನನಗೆ ಹೇಳು.”

07108016 ಸಂಜಯ ಉವಾಚ।
07108016a ಶೃಣು ರಾಜನ್ಯಥಾ ವೃತ್ತಃ ಸಂಗ್ರಾಮಃ ಕರ್ಣಭೀಮಯೋಃ।
07108016c ಪರಸ್ಪರವಧಪ್ರೇಪ್ಸ್ವೋರ್ವನೇ ಕುಂಜರಯೋರಿವ।।

ಸಂಜಯನು ಹೇಳಿದನು: “ರಾಜನ್! ವನದಲ್ಲಿರುವ ಆನೆಗಳಂತೆ ಪರಸ್ಪರರನ್ನು ವಧಿಸಲು ಬಯಸಿದ್ದ ಕರ್ಣ-ಭೀಮರ ನಡುವೆ ನಡೆದ ಸಂಗ್ರಾಮದ ಕುರಿತು ಕೇಳು.

07108017a ರಾಜನ್ವೈಕರ್ತನೋ ಭೀಮಂ ಕ್ರುದ್ಧಃ ಕ್ರುದ್ಧಮರಿಂದಮಂ।
07108017c ಪರಾಕ್ರಾಂತಂ ಪರಾಕ್ರಮ್ಯ ವಿವ್ಯಾಧ ತ್ರಿಂಶತಾ ಶರೈಃ।।

ರಾಜನ್! ಕ್ರುದ್ಧ ವೈಕರ್ತನನು ಕ್ರುದ್ಧ ಅರಿಂದಮ ಭೀಮನ ಪರಾಕ್ರಮವನ್ನು ಮೀರಿಸಿ ಅವನನ್ನು ಮುನ್ನೂರು ಬಾಣಗಳಿಂದ ಹೊಡೆದನು.

07108018a ಮಹಾವೇಗೈಃ ಪ್ರಸನ್ನಾಗ್ರೈಃ ಶಾತಕುಂಭಪರಿಷ್ಕೃತೈಃ।
07108018c ಆಹನದ್ಭರತಶ್ರೇಷ್ಠ ಭೀಮಂ ವೈಕರ್ತನಃ ಶರೈಃ।।

ಭರತಶ್ರೇಷ್ಠ! ವೈಕರ್ತನನು ರಣದಲ್ಲಿ ಭೀಮನ ಮೇಲೆ ಮಹಾವೇಗದಿಂದ ಮೊನಚಾಗಿದ್ದ ಬಂಗಾರದಿಂದ ಮಾಡಲ್ಪಟ್ಟಿದ್ದ ಶರಗಳನ್ನು ಪ್ರಯೋಗಿಸಿದನು.

07108019a ತಸ್ಯಾಸ್ಯತೋ ಧನುರ್ಭೀಮಶ್ಚಕರ್ತ ನಿಶಿತೈಸ್ತ್ರಿಭಿಃ।
07108019c ರಥನೀಡಾಚ್ಚ ಯಂತಾರಂ ಭಲ್ಲೇನಾಪಾತಯತ್ ಕ್ಷಿತೌ।।

ಆಗ ಭೀಮನು ಮೂರು ನಿಶಿತ ಭಲ್ಲಗಳಿಂದ ಕರ್ಣನ ಧನುಸ್ಸನ್ನು ಕತ್ತರಿಸಿ, ರಥನೀಡೆಯನ್ನೂ ಮತ್ತು ಸಾರಥಿಯನ್ನೂ ನೆಲಕ್ಕುರುಳಿಸಿದನು.

07108020a ಸ ಕಾಂಕ್ಷನ್ಭೀಮಸೇನಸ್ಯ ವಧಂ ವೈಕರ್ತನೋ ವೃಷಃ।
07108020c ಶಕ್ತಿಂ ಕನಕವೈಡೂರ್ಯಚಿತ್ರದಂಡಾಂ ಪರಾಮೃಶತ್।।

ಭೀಮಸೇನನ ವಧೆಯನ್ನು ಬಯಸಿ ವೃಷ ವೈಕರ್ತನನು ಕನಕ-ವೈಡೂರ್ಯ ಚಿತ್ರಿತ ಹಿಡಿಯುಳ್ಳ ಶಕ್ತಿಯನ್ನು ತೆಗೆದುಕೊಂಡನು.

07108021a ಪ್ರಗೃಹ್ಯ ಚ ಮಹಾಶಕ್ತಿಂ ಕಾಲಶಕ್ತಿಮಿವಾಪರಾಂ।
07108021c ಸಮುತ್ಕ್ಷಿಪ್ಯ ಚ ರಾಧೇಯಃ ಸಂಧಾಯ ಚ ಮಹಾಬಲಃ।
07108021e ಚಿಕ್ಷೇಪ ಭೀಮಸೇನಾಯ ಜೀವಿತಾಂತಕರೀಮಿವ।।

ಕಾಲಶಕ್ತಿಯಂತಿರುವ ಆ ಮಹಾಶಕ್ತಿಯನ್ನು ಹಿಡಿದು ಸಂಧಾನಮಾಡಿ ಮಹಾಬಲ ಭೀಮಸೇನನ ಜೀವವನ್ನೇ ಕೊನೆಗೊಳಿಸುವನೋ ಎಂಬಂತೆ ರಾಧೇಯನು ಅವನ ಮೇಲೆ ಎಸೆದನು.

07108022a ಶಕ್ತಿಂ ವಿಸೃಜ್ಯ ರಾಧೇಯಃ ಪುರಂದರ ಇವಾಶನಿಂ।
07108022c ನನಾದ ಸುಮಹಾನಾದಂ ಬಲವಾನ್ಸೂತನಂದನಃ।
07108022e ತಂ ಚ ನಾದಂ ತತಃ ಶ್ರುತ್ವಾ ಪುತ್ರಾಸ್ತೇ ಹೃಷಿತಾಭವನ್।।

ಪುರಂದರನು ವಜ್ರವನ್ನು ಹೇಗೋ ಹಾಗೆ ಆ ಶಕ್ತಿಯನ್ನು ಪ್ರಯೋಗಿಸಿ ಸೂತನಂದನ ರಾಧೇಯನು ಜೋರಾಗಿ ಮಹಾನಾದಗೈದನು. ಆಗ ಅವನ ಆ ಕೂಗನ್ನು ಕೇಳಿ ನಿನ್ನ ಪುತ್ರರಿಗೆ ಹರ್ಷವುಂಟಾಯಿತು.

07108023a ತಾಂ ಕರ್ಣಭುಜನಿರ್ಮುಕ್ತಾಮರ್ಕವೈಶ್ವಾನರಪ್ರಭಾಂ।
07108023c ಶಕ್ತಿಂ ವಿಯತಿ ಚಿಚ್ಚೇದ ಭೀಮಃ ಸಪ್ತಭಿರಾಶುಗೈಃ।।

ಕರ್ಣನ ಭುಜದಿಂದ ಹೊರಟ ಆ ಸೂರ್ಯ-ಅಗ್ನಿಯರ ಪ್ರಭೆಯುಳ್ಳ ಶಕ್ತಿಯನ್ನು ಭೀಮನು ಏಳು ಆಶುಗಗಳಿಂದ ತುಂಡರಿಸಿಬಿಟ್ಟನು.

07108024a ಚಿತ್ತ್ವಾ ಶಕ್ತಿಂ ತತೋ ಭೀಮೋ ನಿರ್ಮುಕ್ತೋರಗಸನ್ನಿಭಾಂ।
07108024c ಮಾರ್ಗಮಾಣ ಇವ ಪ್ರಾಣಾನ್ಸೂತಪುತ್ರಸ್ಯ ಮಾರಿಷ।।
07108025a ಪ್ರಾಹಿಣೋನ್ನವ ಸಂರಬ್ಧಃ ಶರಾನ್ಬರ್ಹಿಣವಾಸಸಃ।
07108025c ಸ್ವರ್ಣಪುಂಖಾಂ ಶಿಲಾಧೌತಾನ್ಯಮದಂಡೋಪಮಾನ್ಮೃಧೇ।।

ಮಾರಿಷ! ಪೊರೆಬಿಟ್ಟ ಹಾವಿನಂತಿರುವ ಆ ಶಕ್ತಿಯನ್ನು ತುಂಡರಿಸಿ ರಣದಲ್ಲಿ ಸಂರಬ್ಧ ಭೀಮನು ಸೂತಪುತ್ರನ ಪ್ರಾಣಗಳನ್ನು ಹೀರುವವೋ ಎಂತಿರುವ ನವಿಲುಗರಿಗಳಿದ್ದ ಸ್ವರ್ಣಪುಂಖಗಳ ಶಿಲೆಗಳಲ್ಲಿ ಮಸೆದ ಯಮದಂಡಗಳಂತಿದ್ದ ಮಾರ್ಗಣ ಶರಗಳನ್ನು ಪ್ರಯೋಗಿಸಿದನು.

07108026a ಕರ್ಣೋಽಪ್ಯನ್ಯದ್ಧನುರ್ಗೃಹ್ಯ ಹೇಮಪೃಷ್ಠಂ ದುರಾಸದಂ।
07108026c ವಿಕೃಷ್ಯ ಚ ಮಹಾತೇಜಾ ವ್ಯಸೃಜತ್ಸಾಯಕಾನ್ನವ।।

ಕರ್ಣನು ಆಗ ಇನ್ನೊಂದು ಬಂಗಾರದ ಬೆನ್ನುಳ್ಳ ದುರಾಸದ ಧನುಸ್ಸನ್ನು ಹಿಡಿದು ಜೋರಾಗಿ ಎಳೆದು ಒಂಭತ್ತು ಸಾಯಕಗಳನ್ನು ಪ್ರಯೋಗಿಸಿದನು.

07108027a ತಾನ್ಪಾಂಡುಪುತ್ರಶ್ಚಿಚ್ಚೇದ ನವಭಿರ್ನತಪರ್ವಭಿಃ।
07108027c ವಸುಷೇಣೇನ ನಿರ್ಮುಕ್ತಾನ್ನವ ರಾಜನ್ಮಹಾಶರಾನ್।
07108027e ಚಿತ್ತ್ವಾ ಭೀಮೋ ಮಹಾರಾಜ ನಾದಂ ಸಿಂಹ ಇವಾನದತ್।।

ರಾಜನ್! ವಸುಷೇಣನು ಪ್ರಯೋಗಿಸಿದ ಆ ಒಂಭತ್ತು ನತಪರ್ವ ಮಹಾಶರಗಳನ್ನೂ ಪಾಂಡುಪುತ್ರನು ಕತ್ತರಿಸಿದನು. ಮಹಾರಾಜ! ಕತ್ತರಿಸಿ ಭೀಮನು ಸಿಂಹದಂತೆ ಜೋರಾಗಿ ಗರ್ಜಿಸಿದನು.

07108028a ತೌ ವೃಷಾವಿವ ನರ್ದಂತೌ ಬಲಿನೌ ವಾಶಿತಾಂತರೇ।
07108028c ಶಾರ್ದೂಲಾವಿವ ಚಾನ್ಯೋನ್ಯಮತ್ಯರ್ಥಂ ಚ ಹ್ಯಗರ್ಜತಾಂ।।
07108029a ಅನ್ಯೋನ್ಯಂ ಪ್ರಜಿಹೀರ್ಷಂತಾವನ್ಯೋನ್ಯಸ್ಯಾಂತರೈಷಿಣೌ।
07108029c ಅನ್ಯೋನ್ಯಮಭಿವೀಕ್ಷಂತೌ ಗೋಷ್ಠೇಷ್ವಿವ ಮಹರ್ಷಭೌ।।

ಕಾವಿಗೆ ಬಂದಿರುವ ಹಸುವಿಗಾಗಿ ಹೊಡೆದಾಡುವ ಬಲಶಾಲೀ ಹೋರಿಗಳಂತೆ ಅಥವಾ ಒಂದೇ ಮಾಂಸದ ತುಂಡಿಗೆ ಸೆಣಸಾಡುವ ಹುಲಿಗಳಂತಿದ್ದ ಅವರಿಬ್ಬರೂ ಗರ್ಜಿಸುತ್ತಾ ಅನ್ಯೋನ್ಯರನ್ನು ಗೆಲ್ಲಲು ಅನ್ಯೋನ್ಯರಲ್ಲಿ ಅವಕಾಶವನ್ನು ಹುಡುಕುತ್ತಿದ್ದರು. ಕೊಟ್ಟಿಗೆಯಲ್ಲಿರುವ ಎರಡು ಮಹಾ ಹೋರಿಗಳಂತೆ ಅನ್ಯೋನ್ಯರನ್ನು ದುರುಗುಟ್ಟಿ ನೋಡುತ್ತಿದ್ದರು.

07108030a ಮಹಾಗಜಾವಿವಾಸಾದ್ಯ ವಿಷಾಣಾಗ್ರೈಃ ಪರಸ್ಪರಂ।
07108030c ಶರೈಃ ಪೂರ್ಣಾಯತೋತ್ಸೃಷ್ಟೈರನ್ಯೋನ್ಯಮಭಿಜಘ್ನತುಃ।।

ಅನಂತರ ಪರಸ್ಪರರನ್ನು ದಂತಗಳ ತುದಿಯಿಂದ ತಿವಿಯುವ ಎರಡು ಆನೆಗಳಂತೆ ಸಂಪೂರ್ಣವಾಗಿ ಎಳೆದ ಬಿಲ್ಲಿನಿಂದ ಪ್ರಯೋಗಿಸಿದ ಶರಗಳಿಂದ ಅನ್ಯೋನ್ಯರನ್ನು ಹೊಡೆದರು.

07108031a ನಿರ್ದಹಂತೌ ಮಹಾರಾಜ ಶರವೃಷ್ಟ್ಯಾ ಪರಸ್ಪರಂ।
07108031c ಅನ್ಯೋನ್ಯಮಭಿವೀಕ್ಷಂತೌ ಕೋಪಾದ್ವಿವೃತಲೋಚನೌ।।

ಮಹಾರಾಜ! ಅವರಿಬ್ಬರೂ ಪರಸ್ಪರರನ್ನು ಶರವೃಷ್ಟಿಯಿಂದ ಸುಡುತ್ತಾ ಕೋಪದಿಂದ ಕಣ್ಣುಗಳನ್ನು ತಿರುಗಿಸುತ್ತಾ ಅನ್ಯೋನ್ಯರನ್ನು ದುರುಗುಟ್ಟಿ ನೋಡುತ್ತಿದ್ದರು.

07108032a ಪ್ರಹಸಂತೌ ತಥಾನ್ಯೋನ್ಯಂ ಭರ್ತ್ಸಯಂತೌ ಮುಹುರ್ಮುಹುಃ।
07108032c ಶಂಖಶಬ್ದಂ ಚ ಕುರ್ವಾಣೌ ಯುಯುಧಾತೇ ಪರಸ್ಪರಂ।।

ಅನ್ಯೋನ್ಯರನ್ನು ನೋಡಿ ನಗುತ್ತಾ, ಮತ್ತೆ ಮತ್ತೆ ಬೈದಾಡುತ್ತಾ, ಶಂಖಗಳನ್ನು ಊದಿ ಶಬ್ಧಮಾಡುತ್ತಾ ಪರಸ್ಪರರೊಂದಿಗೆ ಯುದ್ಧಮಾಡುತ್ತಿದ್ದರು.

07108033a ತಸ್ಯ ಭೀಮಃ ಪುನಶ್ಚಾಪಂ ಮುಷ್ಟೌ ಚಿಚ್ಚೇದ ಮಾರಿಷ।
07108033c ಶಂಖವರ್ಣಾಶ್ಚ ತಾನಶ್ವಾನ್ಬಾಣೈರ್ನಿನ್ಯೇ ಯಮಕ್ಷಯಂ।।

ಮಾರಿಷ! ಪುನಃ ಭೀಮನು ಅವನ ಧನುಸ್ಸನ್ನು ಹಿಡಿಯಲ್ಲಿಯೇ ತುಂಡರಿಸಿದನು. ಶಂಖದ ಬಿಳುಪಿನ ಅವನ ಕುದುರೆಗಳನ್ನೂ ಬಾಣಗಳಿಂದ ಯಮಕ್ಷಯಕ್ಕೆ ಕಳುಹಿಸಿದನು.

07108034a ತಥಾ ಕೃಚ್ಚ್ರಗತಂ ದೃಷ್ಟ್ವಾ ಕರ್ಣಂ ದುರ್ಯೋಧನೋ ನೃಪಃ।
07108034c ವೇಪಮಾನ ಇವ ಕ್ರೋಧಾದ್ವ್ಯಾದಿದೇಶಾಥ ದುರ್ಜಯಂ।।

ಹಾಗೆ ಕಷ್ಟದಲ್ಲಿ ಸಿಲುಕಿದ ಕರ್ಣನನ್ನು ನೋಡಿ ಕ್ರೋಧದಿಂದ ಕಂಪಿಸುತ್ತಿರುವಂತಿದ್ದ ನೃಪ ದುರ್ಯೋಧನನು ದುರ್ಜಯನಿಗೆ ಆದೇಶವನ್ನಿತ್ತನು:

07108035a ಗಚ್ಚ ದುರ್ಜಯ ರಾಧೇಯಂ ಪುರಾ ಗ್ರಸತಿ ಪಾಂಡವಃ।
07108035c ಜಹಿ ತೂಬರಕಂ ಕ್ಷಿಪ್ರಂ ಕರ್ಣಸ್ಯ ಬಲಮಾದಧತ್।।

“ದುರ್ಜಯ! ಹೋಗು! ಅಲ್ಲಿ ಪಾಂಡವನು ರಾಧೇಯನನ್ನು ನುಂಗಿಬಿಡುವಂತಿದ್ದಾನೆ. ಆ ಗಡ್ಡವಿಲ್ಲದವನನ್ನು ಬೇಗನೆ ಕೊಲ್ಲು! ಕರ್ಣನ ಬಲವನ್ನು ಹೆಚ್ಚಿಸು!”

07108036a ಏವಮುಕ್ತಸ್ತಥೇತ್ಯುಕ್ತ್ವಾ ತವ ಪುತ್ರಸ್ತವಾತ್ಮಜಂ।
07108036c ಅಭ್ಯದ್ರವದ್ಭೀಮಸೇನಂ ವ್ಯಾಸಕ್ತಂ ವಿಕಿರಂ ಶರಾನ್।।

ಇದನ್ನು ಕೇಳಿದ ನಿನ್ನ ಮಗನು ನಿನ್ನ ಮಗನಿಗೆ ಹಾಗೆಯೇ ಆಗಲೆಂದು ಹೇಳಿ ಕರ್ಣನೊಡನೆ ಹೋರಾಡುತ್ತಿದ್ದ ಭೀಮಸೇನನನ್ನು ಆಕ್ರಮಣಿಸಿ ಅವನ ಮೇಲೆ ಶರಗಳನ್ನು ಚೆಲ್ಲಿದನು.

07108037a ಸ ಭೀಮಂ ನವಭಿರ್ಬಾಣೈರಶ್ವಾನಷ್ಟಭಿರರ್ದಯತ್।
07108037c ಷಡ್ಭಿಃ ಸೂತಂ ತ್ರಿಭಿಃ ಕೇತುಂ ಪುನಸ್ತಂ ಚಾಪಿ ಸಪ್ತಭಿಃ।।

ಅವನು ಭೀಮನನ್ನು ಒಂಭತ್ತು ಬಾಣಗಳಿಂದ ಮತ್ತು ಕುದುರೆಗಳನ್ನು ಎಂಟರಿಂದ ಹೊಡೆದನು. ಆರರಿಂದ ಸಾರಥಿಯನ್ನು, ಮೂರರಿಂದ ಕೇತುವನ್ನು ಮತ್ತು ಏಳರಿಂದ ಅವನನ್ನೂ ಪುನಃ ಹೊಡೆದನು.

07108038a ಭೀಮಸೇನೋಽಪಿ ಸಂಕ್ರುದ್ಧಃ ಸಾಶ್ವಯಂತಾರಮಾಶುಗೈಃ।
07108038c ದುರ್ಜಯಂ ಭಿನ್ನಮರ್ಮಾಣಮನಯದ್ಯಮಸಾದನಂ।।

ಸಂಕ್ರುದ್ಧನಾದ ಭೀಮಸೇನನೂ ಕೂಡ ಆಶುಗಗಳಿಂದ ದುರ್ಜಯನ ಮರ್ಮಗಳನ್ನು ಭೀದಿಸಿ ಅವನನ್ನೂ, ಅವನ ಕುದುರೆಗಳನ್ನೂ, ಸಾರಥಿಯನ್ನೂ ಯಮಸಾದನಕ್ಕೆ ಕಳುಹಿಸಿದನು.

07108039a ಸ್ವಲಂಕೃತಂ ಕ್ಷಿತೌ ಕ್ಷುಣ್ಣಂ ಚೇಷ್ಟಮಾನಂ ಯಥೋರಗಂ।
07108039c ರುದನ್ನಾರ್ತಸ್ತವ ಸುತಂ ಕರ್ಣಶ್ಚಕ್ರೇ ಪ್ರದಕ್ಷಿಣಂ।।

ಗಾಯಗೊಂಡ ಹಾವಿನಂತೆ ಹೊರಳಾಡಿ ಆರ್ತನಾಗಿ ರೋದಿಸಿ ನೆಲದ ಮೇಲೆ ಬಿದ್ದ ಅಲಂಕೃತನಾಗಿದ್ದ ನಿನ್ನ ಮಗನನ್ನು ಕರ್ಣನು ಪ್ರದಕ್ಷಿಣೆ ಮಾಡಿದನು.

07108040a ಸ ತು ತಂ ವಿರಥಂ ಕೃತ್ವಾ ಸ್ಮಯನ್ನತ್ಯಂತವೈರಿಣಂ।
07108040c ಸಮಾಚಿನೋದ್ಬಾಣಗಣೈಃ ಶತಘ್ನೀಮಿವ ಶಂಕುಭಿಃ।।

ಆಗ ಭೀಮಸೇನನು ಅತ್ಯಂತ ವೈರಿಯಾದ ಕರ್ಣನನ್ನು ವಿರಥನನ್ನಾಗಿ ಮಾಡಿ ಬಾಣಗಣಗಳಿಂದ ಅವನನ್ನು ಚುಚ್ಚಿ ಮುಳ್ಳುಗಳಿಂದ ತುಂಬಿರುವ ಶತಘ್ನಿಯಂತೆ ಮಾಡಿದನು.

07108041a ತಥಾಪ್ಯತಿರಥಃ ಕರ್ಣೋ ಭಿದ್ಯಮಾನಃ ಸ್ಮ ಸಾಯಕೈಃ।
07108041c ನ ಜಹೌ ಸಮರೇ ಭೀಮಂ ಕ್ರುದ್ಧರೂಪಂ ಪರಂತಪಃ।।

ಸಾಯಕಗಳಿಂದ ಭೇದಿಸಲ್ಪಟ್ಟರೂ ಪರಂತಪ ಅತಿರಥ ಕರ್ಣನು ಸಮರದಲ್ಲಿ ಕ್ರುದ್ಧರೂಪ ಭೀಮನನ್ನು ಬಿಟ್ಟು ಹೋಗಲಿಲ್ಲ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಭೀಮಕರ್ಣಯುದ್ಧೇ ಅಷ್ಠಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಭೀಮಕರ್ಣಯುದ್ಧ ಎನ್ನುವ ನೂರಾಎಂಟನೇ ಅಧ್ಯಾಯವು.