ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 106
ಸಾರ
ಭೀಮಸೇನ-ಕರ್ಣರ ಯುದ್ಧದ ಕುರಿತು ಧೃತರಾಷ್ಟ್ರನ ಪ್ರಶ್ನೆಗಳು (1-16). ಭೀಮಸೇನನಿಂದ ಕರ್ಣನ ಪರಾಜಯ (17-54).
07106001 ಧೃತರಾಷ್ಟ್ರ ಉವಾಚ।
07106001a ಯೌ ತೌ ಕರ್ಣಶ್ಚ ಭೀಮಶ್ಚ ಸಂಪ್ರಯುದ್ಧೌ ಮಹಾಬಲೌ।
07106001c ಅರ್ಜುನಸ್ಯ ರಥೋಪಾಂತೇ ಕೀದೃಶಃ ಸೋಽಭವದ್ರಣಃ।।
ಧೃತರಾಷ್ಟ್ರನು ಹೇಳಿದನು: “ಅರ್ಜುನನ ರಥದ ಬಳಿಯಲ್ಲಿ ಮಹಾಬಲ ಕರ್ಣ ಮತ್ತು ಭೀಮರು ಯುದ್ಧಮಾಡುತ್ತಿರುವಾಗ ರಣವು ಯಾವ ರೂಪವನ್ನು ತಳೆಯಿತು?
07106002a ಪೂರ್ವಂ ಹಿ ನಿರ್ಜಿತಃ ಕರ್ಣೋ ಭೀಮಸೇನೇನ ಸಂಯುಗೇ।
07106002c ಕಥಂ ಭೂಯಸ್ತು ರಾಧೇಯೋ ಭೀಮಮಾಗಾನ್ಮಹಾರಥಃ।।
ಹಿಂದೆಯೇ ಸಮರದಲ್ಲಿ ಕರ್ಣನು ಭೀಮಸೇನನಿಂದ ಸೋತಿದ್ದನು. ಪುನಃ ಹೇಗೆ ಮಹಾರಥ ರಾಧೇಯನು ಭೀಮನನ್ನು ಎದುರಿಸಿದನು.
07106003a ಭೀಮೋ ವಾ ಸೂತತನಯಂ ಪ್ರತ್ಯುದ್ಯಾತಃ ಕಥಂ ರಣೇ।
07106003c ಮಹಾರಥಸಮಾಖ್ಯಾತಂ ಪೃಥಿವ್ಯಾಂ ಪ್ರವರಂ ರಥಂ।।
ಅಥವಾ ಭೀಮನಾದರೋ ಮಹಾರಥನೆಂದು ಭುವಿಯಲ್ಲಿಯೇ ಪ್ರಖ್ಯಾತನಾದ ಶ್ರೇಷ್ಠ ರಥ ಸೂತತನಯನನ್ನು ರಣದಲ್ಲಿ ಹೇಗೆ ಎದುರಿಸಿದನು.
07106004a ಭೀಷ್ಮದ್ರೋಣಾವತಿಕ್ರಮ್ಯ ಧರ್ಮಪುತ್ರೋ ಯುಧಿಷ್ಠಿರಃ।
07106004c ನಾನ್ಯತೋ ಭಯಮಾದತ್ತ ವಿನಾ ಕರ್ಣಂ ಧನುರ್ಧರಂ।।
ಭೀಷ್ಮ-ದ್ರೋಣರನ್ನು ಬಿಟ್ಟು ಧನುರ್ಧರ ಕರ್ಣನಲ್ಲದೇ ಬೇರೆ ಯಾರಿಗೂ ಧರ್ಮಪುತ್ರ ಯುಧಿಷ್ಠಿರನು ಹೆದರುವುದಿಲ್ಲ.
07106005a ಭಯಾನ್ನ ಶೇತೇ ಸತತಂ ಚಿಂತಯನ್ವೈ ಮಹಾರಥಂ।
07106005c ತಂ ಕಥಂ ಸೂತಪುತ್ರಂ ಹಿ ಭೀಮೋಽಯುಧ್ಯತ ಸಂಯುಗೇ।।
ಆ ಮಹಾರಥನ ಭಯದಿಂದ ಸತತವೂ ಚಿಂತೆಗೊಳಗಾಗಿ ಅವನು ನಿದ್ದೆ ಮಾಡುವುದಿಲ್ಲ. ಅಂಥಹ ಸೂತಪುತ್ರನೊಂದಿಗೆ ಭೀಮನು ಹೇಗೆ ರಣರಂಗದಲ್ಲಿ ಯುದ್ಧಮಾಡಿದನು?
07106006a ಬ್ರಹ್ಮಣ್ಯಂ ವೀರ್ಯಸಂಪನ್ನಂ ಸಮರೇಷ್ವನಿವರ್ತಿನಂ।
07106006c ಕಥಂ ಕರ್ಣಂ ಯುಧಾಂ ಶ್ರೇಷ್ಠಂ ಭೀಮೋಽಯುಧ್ಯತ ಸಂಯುಗೇ।।
ಬ್ರಹ್ಮಣ್ಯ, ವೀರ್ಯಸಂಪನ್ನ, ಸಮರದಿಂದ ಪಲಾಯನಮಾಡದ, ಯೋಧರಲ್ಲಿ ಶ್ರೇಷ್ಠ ಕರ್ಣನೊಡನೆ ರಣದಲ್ಲಿ ಹೇಗೆ ಯುದ್ಧಮಾಡಿದನು?
07106007a ಯೌ ತೌ ಸಮೀಯತುರ್ವೀರಾವರ್ಜುನಸ್ಯ ರಥಂ ಪ್ರತಿ।
07106007c ಕಥಂ ನು ತಾವಯುಧ್ಯೇತಾಂ ಸೂತಪುತ್ರವೃಕೋದರೌ।।
ಅರ್ಜುನನ ರಥದ ಸಮೀಪದಲ್ಲಿಯೇ ನಡೆದ ಸೂತಪುತ್ರ-ವೃಕೋದರರ ಯುದ್ಧವು ಹೇಗಾಯಿತು?
07106008a ಭ್ರಾತೃತ್ವಂ ದರ್ಶಿತಂ ಪೂರ್ವಂ ಘೃಣೀ ಚಾಪಿ ಸ ಸೂತಜಃ।
07106008c ಕಥಂ ಭೀಮೇನ ಯುಯುಧೇ ಕುಂತ್ಯಾ ವಾಕ್ಯಮನುಸ್ಮರನ್।।
ಮೊದಲೇ ಭೀಮನಲ್ಲಿ ಭ್ರಾತೃತ್ವವನ್ನು ಕಂಡುಕೊಂಡ ಕರುಣಿ ಸೂತಜನು ಕುಂತಿಯ ವಾಕ್ಯವನ್ನು ಸ್ಮರಿಸಿಕೊಂಡು ಭೀಮನೊಂದಿಗೆ ಹೇಗೆ ಯುದ್ಧಮಾಡಿದನು?
07106009a ಭೀಮೋ ವಾ ಸೂತಪುತ್ರೇಣ ಸ್ಮರನ್ವೈರಂ ಪುರಾ ಕೃತಂ।
07106009c ಸೋಽಯುಧ್ಯತ ಕಥಂ ವೀರಃ ಕರ್ಣೇನ ಸಹ ಸಂಯುಗೇ।।
ವೀರ ಭೀಮನಾದರೋ ಸೂತಪುತ್ರನು ಹಿಂದೆ ಮಾಡಿದ ವೈರವನ್ನು ಸ್ಮರಿಸಿಕೊಂಡು ಕರ್ಣನೊಂದಿಗೆ ಸಮರದಲ್ಲಿ ಹೇಗೆ ಯುದ್ಧಮಾಡಿದನು?
07106010a ಆಶಾಸ್ತೇ ಚ ಸದಾ ಸೂತ ಪುತ್ರೋ ದುರ್ಯೋಧನೋ ಮಮ।
07106010c ಕರ್ಣೋ ಜೇಷ್ಯತಿ ಸಂಗ್ರಾಮೇ ಸಹಿತಾನ್ಪಾಂಡವಾನಿತಿ।।
ಸೂತ! ನನ್ನ ಮಗ ದುರ್ಯೋಧನನು ಸಂಗ್ರಾಮದಲ್ಲಿ ಪಾಂಡವರನ್ನು ಒಟ್ಟಿಗೇ ಕರ್ಣನು ಜಯಿಸುತ್ತಾನೆ ಎಂದು ಆಶಿಸಿದ್ದನು.
07106011a ಜಯಾಶಾ ಯತ್ರ ಮಂದಸ್ಯ ಪುತ್ರಸ್ಯ ಮಮ ಸಂಯುಗೇ।
07106011c ಸ ಕಥಂ ಭೀಮಕರ್ಮಾಣಂ ಭೀಮಸೇನಮಯುಧ್ಯತ।।
ಸಂಯುಗದಲ್ಲಿ ನನ್ನ ಮಗನ ಜಯದ ಆಶಯನಾಗಿದ್ದ ಕರ್ಣನು ಹೇಗೆ ಭೀಮಕರ್ಮಿ ಭೀಮಸೇನನೊಂದಿಗೆ ಯುದ್ಧಮಾಡಿದನು?
07106012a ಯಂ ಸಮಾಶ್ರಿತ್ಯ ಪುತ್ರೈರ್ಮೇ ಕೃತಂ ವೈರಂ ಮಹಾರಥೈಃ।
07106012c ತಂ ಸೂತತನಯಂ ತಾತ ಕಥಂ ಭೀಮೋ ಹ್ಯಯೋಧಯತ್।।
ಯಾರನ್ನು ಆಶ್ರಯಿಸಿ ನನ್ನ ಮಕ್ಕಳು ಆ ಮಹಾರಥರೊಂದಿಗೆ ವೈರವನ್ನು ಸಾಧಿಸಿದರೋ ಆ ಸೂತತನಯನೊಡನೆ ಭೀಮನು ಹೇಗೆ ಯುದ್ಧಮಾಡಿದನು?
07106013a ಅನೇಕಾನ್ವಿಪ್ರಕಾರಾಂಶ್ಚ ಸೂತಪುತ್ರಸಮುದ್ಭವಾನ್।
07106013c ಸ್ಮರಮಾಣಃ ಕಥಂ ಭೀಮೋ ಯುಯುಧೇ ಸೂತಸೂನುನಾ।।
ಸೂತಪುತ್ರನಿಂದ ಉಂಟಾದ ಅನೇಕ ಪ್ರಕರಣಗಳನ್ನು ನೆನಪಿಸಿಕೊಳ್ಳುತ್ತಾ ಭೀಮನು ಸೂತಸೂನುವಿನೊಂದಿಗೆ ಹೇಗೆ ಯುದ್ಧಮಾಡಿದನು?
07106014a ಯೋಽಜಯತ್ಪೃಥಿವೀಂ ಸರ್ವಾನ್ರಥೇನೈಕೇನ ವೀರ್ಯವಾನ್।
07106014c ತಂ ಸೂತತನಯಂ ಯುದ್ಧೇ ಕಥಂ ಭೀಮೋ ಹ್ಯಯೋಧಯತ್।।
ಪೃಥ್ವಿಯ ಸರ್ವರನ್ನೂ ಒಂದೇ ರಥದಲ್ಲಿ ಗೆದ್ದ ವೀರ್ಯವಾನ್ ಸೂತತನಯನನ್ನು ಯುದ್ಧದಲ್ಲಿ ಭೀಮನು ಹೇಗೆ ಎದುರಿಸಿದನು?
07106015a ಯೋ ಜಾತಃ ಕುಂಡಲಾಭ್ಯಾಂ ಚ ಕವಚೇನ ಸಹೈವ ಚ।
07106015c ತಂ ಸೂತಪುತ್ರಂ ಸಮರೇ ಭೀಮಃ ಕಥಮಯೋಧಯತ್।।
ಕುಂಡಲಗಳು ಮತ್ತು ಕವಚದೊಂದಿಗೆ ಹುಟ್ಟಿದ್ದ ಆ ಸೂತಪುತ್ರನೊಂದಿಗೆ ಸಮರದಲ್ಲಿ ಭೀಮನು ಹೇಗೆ ಯುದ್ಧಮಾಡಿದನು?
07106016a ಯಥಾ ತಯೋರ್ಯುದ್ಧಮಭೂದ್ಯಶ್ಚಾಸೀದ್ವಿಜಯೀ ತಯೋಃ।
07106016c ತನ್ಮಮಾಚಕ್ಷ್ವ ತತ್ತ್ವೇನ ಕುಶಲೋ ಹ್ಯಸಿ ಸಂಜಯ।।
ಅವರಿಬ್ಬರ ನಡುವೆ ಯುದ್ಧವು ಹೇಗೆ ನಡೆಯಿತು ಮತ್ತು ಅವರಿಬ್ಬರಲ್ಲಿ ಯಶಸ್ಸು ಯಾರದ್ದಾಯಿತು ಎನ್ನುವುದನ್ನು ನನಗೆ ಹೇಳು ಸಂಜಯ! ಹೇಳುವುದರಲ್ಲಿ ನೀನು ಕುಶಲನಾಗಿದ್ದೀಯೆ.”
07106017 ಸಂಜಯ ಉವಾಚ।
07106017a ಭೀಮಸೇನಸ್ತು ರಾಧೇಯಮುತ್ಸೃಜ್ಯ ರಥಿನಾಂ ವರಂ।
07106017c ಇಯೇಷ ಗಂತುಂ ಯತ್ರಾಸ್ತಾಂ ವೀರೌ ಕೃಷ್ಣಧನಂಜಯೌ।।
ಸಂಜಯನು ಹೇಳಿದನು: “ಭೀಮಸೇನನಾದರೋ ರಥಿಗಳಲ್ಲಿ ಶ್ರೇಷ್ಠ ರಾಧೇಯನನ್ನು ಬಿಟ್ಟು ವೀರರಾದ ಕೃಷ್ಣ-ಧನಂಜಯರು ಇರುವಲ್ಲಿ ಹೋಗ ಬಯಸಿದನು.
07106018a ತಂ ಪ್ರಯಾಂತಮಭಿದ್ರುತ್ಯ ರಾಧೇಯಃ ಕಂಕಪತ್ರಿಭಿಃ।
07106018c ಅಭ್ಯವರ್ಷನ್ಮಹಾರಾಜ ಮೇಘೋ ವೃಷ್ಟ್ಯೇವ ಪರ್ವತಂ।।
ಮಹಾರಾಜ! ಹಾಗೆ ಹೋಗುತ್ತಿರುವ ಅವನನ್ನು ತಡೆಗಟ್ಟಿ ರಾಧೇಯನು ಮೇಘಗಳು ಪರ್ವತದ ಮೇಲೆ ಹೇಗೋ ಹಾಗೆ ಭೀಮಸೇನನ ಮೇಲೆ ಕಂಕಪತ್ರಿಗಳನ್ನು ಸುರಿಸಿದನು.
07106019a ಫುಲ್ಲತಾ ಪಂಕಜೇನೇವ ವಕ್ತ್ರೇಣಾಭ್ಯುತ್ಸ್ಮಯನ್ಬಲೀ।
07106019c ಆಜುಹಾವ ರಣೇ ಯಾಂತಂ ಭೀಮಮಾಧಿರಥಿಸ್ತದಾ।।
ಬಲಶಾಲಿ ಆಧಿರಥಿಯು ಅರಳುತ್ತಿರುವ ಕಮಲದಂತಹ ಮುಖದಲ್ಲಿ ನಗೆಯಾಡುತ್ತಾ ಹೋಗುತ್ತಿದ್ದ ಭೀಮನನ್ನು ಯುದ್ಧಕ್ಕೆ ಆಹ್ವಾನಿಸಿದನು. 5107106020a ಭೀಮಸೇನಸ್ತದಾಹ್ವಾನಂ ಕರ್ಣಾನ್ನಾಮರ್ಷಯದ್ಯುಧಿ।
07106020c ಅರ್ಧಮಂಡಲಮಾವೃತ್ಯ ಸೂತಪುತ್ರಮಯೋಧಯತ್।।
ಕರ್ಣನು ಯುದ್ಧಕ್ಕೆ ನೀಡಿದ ಆ ಆಹ್ವಾನವನ್ನು ಕೇಳಿ ರೋಷಗೊಂಡ ಭೀಮಸೇನನು ಅರ್ಧಮಂಡಲಪರ್ಯಂತ ತಿರುಗಿ ಸೂತಪುತ್ರನನ್ನು ಎದುರಿಸಿ ಯುದ್ಧಮಾಡತೊಡಗಿದನು.
07106021a ಅವಕ್ರಗಾಮಿಭಿರ್ಬಾಣೈರಭ್ಯವರ್ಷನ್ಮಹಾಯಸೈಃ।
07106021c ದ್ವೈರಥೇ ದಂಶಿತಂ ಯತ್ತಂ ಸರ್ವಶಸ್ತ್ರಭೃತಾಂ ವರಂ।।
ದ್ವೈರಥಯುದ್ಧಕ್ಕೆ ಪ್ರಯತ್ನಿಸುತ್ತಿದ್ದ ಸರ್ವ ಶಸ್ತ್ರಭೃತರಲ್ಲಿ ಶ್ರೇಷ್ಠ ಕವಚಧಾರಿ ಕರ್ಣನನ್ನು ಭೀಮಸೇನನು ನೇರವಾಗಿ ಹೋಗುವ ಬಾಣಗಳ ಮಳೆಗರೆದು ಮುಚ್ಚಿಬಿಟ್ಟನು.
07106022a ವಿಧಿತ್ಸುಃ ಕಲಹಸ್ಯಾಂತಂ ಜಿಘಾಂಸುಃ ಕರ್ಣಮಕ್ಷಿಣೋತ್।
07106022c ತಂ ಚ ಹತ್ವೇತರಾನ್ಸರ್ವಾನ್ ಹಂತುಕಾಮೋ ಮಹಾಬಲಃ।।
ಶೀಘ್ರವಾಗಿ ಕಲಹವನ್ನು ಕಡೆಗಾಣಿಸಲು ಮತ್ತು ಕರ್ಣ ಹಾಗೂ ಅವನ ಇತರ ಅನುಯಾಯಿಗಳೆಲ್ಲರನ್ನೂ ಸಂಹರಿಸಿಬಿಡಲು ಮಹಾಬಲ ಭೀಮಸೇನನು ಯೋಚಿಸಿದನು.
07106023a ತಸ್ಮೈ ಪ್ರಾಸೃಜದುಗ್ರಾಣಿ ವಿವಿಧಾನಿ ಪರಂತಪಃ।
07106023c ಅಮರ್ಷೀ ಪಾಂಡವಃ ಕ್ರುದ್ಧಃ ಶರವರ್ಷಾಣಿ ಮಾರಿಷ।।
ಅಸಹನೆಯಿಂದ ಪರಮ ಕ್ರುದ್ಧನಾದ ಪರಂತಪ ಪಾಂಡವನು ಕರ್ಣನ ಮೇಲೆ ವಿವಿಧ ಉಗ್ರ ಬಾಣಗಳ ಮಳೆಯನ್ನೇ ಸುರಿಸಿದನು.
07106024a ತಸ್ಯ ತಾನೀಷುವರ್ಷಾಣಿ ಮತ್ತದ್ವಿರದಗಾಮಿನಃ।
07106024c ಸೂತಪುತ್ರೋಽಸ್ತ್ರಮಾಯಾಭಿರಗ್ರಸತ್ಸುಮಹಾಯಶಾಃ।।
ಸುಮಹಾಯಶಸ್ವಿ ಸೂತಪುತ್ರನು ಮತ್ತಗಜದ ನಡುಗೆಯುಳ್ಳ ಭೀಮಸೇನನ ಆ ಬಾಣಗಳ ಮಳೆಯನ್ನೂ ಅಸ್ತ್ರಮಾಯೆಗಳನ್ನೂ ನಿರಸನಗೊಳಿಸಿಬಿಟ್ಟನು.
07106025a ಸ ಯಥಾವನ್ಮಹಾರಾಜ ವಿದ್ಯಯಾ ವೈ ಸುಪೂಜಿತಃ।
07106025c ಆಚಾರ್ಯವನ್ಮಹೇಷ್ವಾಸಃ ಕರ್ಣಃ ಪರ್ಯಚರದ್ರಣೇ।।
ಮಹಾರಾಜ! ವಿದ್ಯೆಯಲ್ಲಿ ಆಚಾರ್ಯನಷ್ಟೇ ಗೌರವಾನ್ವಿತನಾದ ಮಹೇಷ್ವಾಸ ಕರ್ಣನು ರಣದಲ್ಲಿ ಸಂಚರಿಸುತ್ತಿದ್ದನು.
07106026a ಸಂರಂಭೇಣ ತು ಯುಧ್ಯಂತಂ ಭೀಮಸೇನಂ ಸ್ಮಯನ್ನಿವ।
07106026c ಅಭ್ಯಪದ್ಯತ ರಾಧೇಯಸ್ತಮಮರ್ಷೀ ವೃಕೋದರಂ।।
ಕ್ರೋಧದಿಂದ ಯುದ್ಧಮಾಡುತ್ತಿದ್ದ ಅಸಹನಶೀಲ ವೃಕೋದರ ಭೀಮಸೇನನನ್ನು ರಾಧೇಯನು ನಗುತ್ತಲೇ ಎದುರಿಸಿದನು.
07106027a ತನ್ನಾಮೃಷ್ಯತ ಕೌಂತೇಯಃ ಕರ್ಣಸ್ಯ ಸ್ಮಿತಮಾಹವೇ।
07106027c ಯುಧ್ಯಮಾನೇಷು ವೀರೇಷು ಪಶ್ಯತ್ಸು ಚ ಸಮಂತತಃ।।
ಸುತ್ತಲೂ ವೀರರೆಲ್ಲರೂ ಯುದ್ಧವನ್ನು ನೋಡುತ್ತಿರುವಾಗ ರಣದಲ್ಲಿ ಕರ್ಣನು ನಗುತ್ತಿರುವುದನ್ನು ಕೌಂತೇಯ ಭೀಮಸೇನನು ಸಹಿಸಿಕೊಳ್ಳಲಿಲ್ಲ.
07106028a ತಂ ಭೀಮಸೇನಃ ಸಂಪ್ರಾಪ್ತಂ ವತ್ಸದಂತೈಃ ಸ್ತನಾಂತರೇ।
07106028c ವಿವ್ಯಾಧ ಬಲವಾನ್ಕ್ರುದ್ಧಸ್ತೋತ್ತ್ರೈರಿವ ಮಹಾದ್ವಿಪಂ।।
ಮಾವುತನು ಮಹಾ ಗಜವನ್ನು ಅಂಕುಶದಿಂದ ತಿವಿಯುವಂತೆ ಬಲವಾನ್ ಭೀಮಸೇನನು ಕ್ರುದ್ಧನಾಗಿ ಕರ್ಣನ ಎದೆಗೆ ಕರುವಿನ ದಂತಗಳಿಂದ ತಯಾರಿಸಿದ ಬಾಣಗಳಿಂದ ಹೊಡೆದನು.
07106029a ಸೂತಂ ತು ಸೂತಪುತ್ರಸ್ಯ ಸುಪುಂಖೈರ್ನಿಶಿತೈಃ ಶರೈಃ।
07106029c ಸುಮುಕ್ತೈಶ್ಚಿತ್ರವರ್ಮಾಣಂ ನಿರ್ಬಿಭೇದ ತ್ರಿಸಪ್ತಭಿಃ।।
ಬಣ್ಣದ ಕವಚವನ್ನು ಧರಿಸಿದ್ದ ಸೂತಪುತ್ರನ ಸಾರಥಿಯನ್ನಾದರೂ ಚೆನ್ನಾಗಿ ಪ್ರಯೋಗಿಸಿದ, ಸುಂದರ ಪುಂಖಗಳುಳ್ಳ ಎಪ್ಪತ್ಮೂರು ನಿಶಿತ ಶರಗಳಿಂದ ಭೇದಿಸಿದನು.
07106030a ಕರ್ಣೋ ಜಾಂಬೂನದೈರ್ಜಾಲೈಃ ಸಂಚನ್ನಾನ್ವಾತರಂಹಸಃ।
07106030c ವಿವ್ಯಾಧ ತುರಗಾನ್ವೀರಃ ಪಂಚಭಿಃ ಪಂಚಭಿಃ ಶರೈಃ।।
ಅನಂತರ ಗಾಳಿಯ ವೇಗದಲ್ಲಿ ಹೋಗುವ ಬಂಗಾರದ ಬಾಣಗಳ ಜಾಲದಿಂದ ಕರ್ಣನನ್ನೂ, ಐದೈದು ಬಾಣಗಳಿಂದ ಅವನ ಕುದುರೆಗಳನ್ನೂ ವೀರ ಭೀಮನು ಹೊಡೆದನು.
07106031a ತತೋ ಬಾಣಮಯಂ ಜಾಲಂ ಭೀಮಸೇನರಥಂ ಪ್ರತಿ।
07106031c ಕರ್ಣೇನ ವಿಹಿತಂ ರಾಜನ್ನಿಮೇಷಾರ್ಧಾದದೃಶ್ಯತ।।
ರಾಜನ್! ಆಗ ನಿಮಿಷಾರ್ಧದಲ್ಲಿ ಭೀಮಸೇನನ ರಥದ ಬಳಿ ಕರ್ಣನು ಪ್ರಯೋಗಿಸಿದ ಬಾಣಮಯ ಜಾಲವು ಕಂಡಿತು.
07106032a ಸರಥಃ ಸಧ್ವಜಸ್ತತ್ರ ಸಸೂತಃ ಪಾಂಡವಸ್ತದಾ।
07106032c ಪ್ರಾಚ್ಚಾದ್ಯತ ಮಹಾರಾಜ ಕರ್ಣಚಾಪಚ್ಯುತೈಃ ಶರೈಃ।।
ಮಹಾರಾಜ! ಕರ್ಣನ ಧನುಸ್ಸಿನಿಂದ ಹೊರಟ ಬಾಣಗಳಿಂದ ಪಾಂಡವನು ರಥ-ಧ್ವಜ-ಸೂತನೊಂದಿಗೆ ಮುಚ್ಚಿ ಹೋದನು.
07106033a ತಸ್ಯ ಕರ್ಣಶ್ಚತುಃಷಷ್ಟ್ಯಾ ವ್ಯಧಮತ್ಕವಚಂ ದೃಢಂ।
07106033c ಕ್ರುದ್ಧಶ್ಚಾಪ್ಯಹನತ್ಪಾರ್ಶ್ವೇ ನಾರಾಚೈರ್ಮರ್ಮಭೇದಿಭಿಃ।।
ಕರ್ಣನು ಕ್ರುದ್ಧನಾಗಿ ಅರವತ್ನಾಲ್ಕರಿಂದ ಭೀಮನ ದೃಢ ಕವಚವನ್ನು ಹೊಡೆದನು. ಹಾಗೆಯೇ ಮರ್ಮಭೇದೀ ನಾರಾಚಗಳಿಂದ ಅವನನ್ನೂ ಹೊಡೆದನು.
07106034a ತತೋಽಚಿಂತ್ಯ ಮಹಾವೇಗಾನ್ಕರ್ಣಕಾರ್ಮುಕನಿಃಸೃತಾನ್।
07106034c ಸಮಾಶ್ಲಿಷ್ಯದಸಂಭ್ರಾಂತಃ ಸೂತಪುತ್ರಂ ವೃಕೋದರಃ।।
ಆದರೆ ಕರ್ಣನ ಬಿಲ್ಲಿನಿಂದ ಹೊರಟು ಮಹಾವೇಗದ ಬಾಣಗಳ ಕುರಿತು ಯೋಚಿಸಿ ಸ್ವಲ್ಪವೂ ಗಾಬರಿಗೊಳ್ಳದೇ ವೃಕೋದರನು ಸೂತಪುತ್ರನನ್ನು ಆಕ್ರಮಣಿಸಿದನು.
07106035a ಸ ಕರ್ಣಚಾಪಪ್ರಭವಾನಿಷೂನಾಶೀವಿಷೋಪಮಾನ್।
07106035c ಬಿಭ್ರದ್ಭೀಮೋ ಮಹಾರಾಜ ನ ಜಗಾಮ ವ್ಯಥಾಂ ರಣೇ।।
ಮಹಾರಾಜ! ರಣದಲ್ಲಿ ಕರ್ಣನ ಚಾಪದಿಂದ ಹೊರಟ ಹಾವಿನ ವಿಷಗಳಂತಿದ್ದ ಬಾಣಗಳಿಂದ ಭೀಮನು ಭಯಪಡಲಿಲ್ಲ ಮತ್ತು ವ್ಯಥೆಗೊಳ್ಳಲಿಲ್ಲ.
07106036a ತತೋ ದ್ವಾತ್ರಿಂಶತಾ ಭಲ್ಲೈರ್ನಿಶಿತೈಸ್ತಿಗ್ಮತೇಜನೈಃ।
07106036c ವಿವ್ಯಾಧ ಸಮರೇ ಕರ್ಣಂ ಭೀಮಸೇನಃ ಪ್ರತಾಪವಾನ್।।
ಆಗ ಸಮರದಲ್ಲಿ ಪ್ರತಾಪವಾನ್ ಭೀಮಸೇನನು ತಿಗ್ಮ ತೇಜಸ್ಸುಳ್ಳ ನಿಶಿತ ಮೂವತ್ತೆರಡು ಭಲ್ಲಗಳಿಂದ ಕರ್ಣನನ್ನು ಹೊಡೆದನು.
07106037a ಅಯತ್ನೇನೈವ ತಂ ಕರ್ಣಃ ಶರೈರುಪ ಸಮಾಕಿರತ್।
07106037c ಭೀಮಸೇನಂ ಮಹಾಬಾಹುಂ ಸೈಂಧವಸ್ಯ ವಧೈಷಿಣಂ।।
ಅದಕ್ಕೆ ಪ್ರತಿಯಾಗಿ ಕರ್ಣನು ಹೆಚ್ಚೇನೂ ಪ್ರಯತ್ನಪಡದೇ ಸೈಂಧವನ ವಧೈಷಿಣಿ ಮಹಾಬಾಹು ಭೀಮಸೇನನನ್ನು ಶರಗಳಿಂದ ಮುಚ್ಚಿಬಿಟ್ಟನು.
07106038a ಮೃದುಪೂರ್ವಂ ಚ ರಾಧೇಯೋ ಭೀಮಮಾಜಾವಯೋಧಯತ್।
07106038c ಕ್ರೋಧಪೂರ್ವಂ ತಥಾ ಭೀಮಃ ಪೂರ್ವವೈರಮನುಸ್ಮರನ್।।
ರಾಧೇಯನು ಭೀಮನೊಂದಿಗೆ ಮೃದುವಾಗಿ ಹೋರಾಡುತ್ತಿದ್ದನು. ಆದರೆ ಹಿಂದಿನ ವೈರವನ್ನು ಸ್ಮರಿಸಿಕೊಳ್ಳುತ್ತಾ ಭೀಮನು ಕ್ರೋಧದಿಂದ ಹೋರಾಡುತ್ತಿದ್ದನು.
07106039a ತಂ ಭೀಮಸೇನೋ ನಾಮೃಷ್ಯದವಮಾನಮಮರ್ಷಣಃ।
07106039c ಸ ತಸ್ಮೈ ವ್ಯಸೃಜತ್ತೂರ್ಣಂ ಶರವರ್ಷಮಮಿತ್ರಜಿತ್।।
ಭೀಮಸೇನನು ಅವನ ಆ ಅಪಮಾನವನ್ನು52 ಸ್ವಲ್ಪವೂ ಸಹಿಸಿಕೊಳ್ಳಲಿಲ್ಲ. ಆ ಅಮಿತ್ರಜಿತುವು ಕರ್ಣನ ಮೇಲೆ ಬೇಗನೇ ಶರವರ್ಷವನ್ನು ಸುರಿಸಿದನು.
07106040a ತೇ ಶರಾಃ ಪ್ರೇಷಿತಾ ರಾಜನ್ಭೀಮಸೇನೇನ ಸಂಯುಗೇ।
07106040c ನಿಪೇತುಃ ಸರ್ವತೋ ಭೀಮಾಃ ಕೂಜಂತ ಇವ ಪಕ್ಷಿಣಃ।।
ರಾಜನ್! ರಣದಲ್ಲಿ ಭೀಮಸೇನನಿಂದ ಕಳುಹಿಸಲ್ಪಟ್ಟ ಆ ಬಾಣಗಳು ಕರ್ಣನ ಮೇಲೆ ಎಲ್ಲ ಕಡೆ ಕೂಗುತ್ತಿರುವ ಪಕ್ಷಿಗಳಂತೆ ಬಿದ್ದವು.
07106041a ಹೇಮಪುಂಖಾ ಮಹಾರಾಜ ಭೀಮಸೇನಧನುಶ್ಚ್ಯುತಾಃ।
07106041c ಅಭ್ಯದ್ರವಂಸ್ತೇ ರಾಧೇಯಂ ವೃಕಾಃ ಕ್ಷುದ್ರಮೃಗಂ ಯಥಾ।।
ಮಹಾರಾಜ! ಭೀಮಸೇನನ ಧನುಸ್ಸಿನಿಂದ ಹೊರಟ ಆ ಹೇಮಪುಂಖದ ಬಾಣಗಳು ತೋಳಗಳು ಕ್ಷುದ್ರ ಮೃಗವನ್ನು ಹೇಗೋ ಹಾಗೆ ಆಕ್ರಮಣಿಸಿದವು.
07106042a ಕರ್ಣಸ್ತು ರಥಿನಾಂ ಶ್ರೇಷ್ಠಶ್ಚಾದ್ಯಮಾನಃ ಸಮಂತತಃ।
07106042c ರಾಜನ್ವ್ಯಸೃಜದುಗ್ರಾಣಿ ಶರವರ್ಷಾಣಿ ಸಂಯುಗೇ।।
ರಾಜನ್! ಸಂಯುಗದಲ್ಲಿ ಎಲ್ಲ ಕಡೆಯಿಂದ ಮುತ್ತಲ್ಪಟ್ಟ ರಥಿಗಳಲ್ಲಿ ಶ್ರೇಷ್ಠ ಕರ್ಣನಾದರೋ ಭೀಮನ ಮೇಲೆ ಉಗ್ರ ಶರವರ್ಷಗಳನ್ನು ಸುರಿಸಿದನು.
07106043a ತಸ್ಯ ತಾನಶನಿಪ್ರಖ್ಯಾನಿಷೂನ್ಸಮರಶೋಭಿನಃ।
07106043c ಚಿಚ್ಚೇದ ಬಹುಭಿರ್ಭಲ್ಲೈರಸಂಪ್ರಾಪ್ತಾನ್ವೃಕೋದರಃ।।
ಆವನ ಆ ವಜ್ರಗಳಂತಿರುವ ಬಾಣಗಳನ್ನು ಅವು ತನಗೆ ತಾಗುವುದರೊಳಗೇ ಅನೇಕ ಭಲ್ಲಗಳಿಂದ ಸಮರಶೋಭಿ ವೃಕೋದರನು ಕತ್ತರಿಸಿಬಿಟ್ಟನು.
07106044a ಪುನಶ್ಚ ಶರವರ್ಷೇಣ ಚಾದಯಾಮಾಸ ಭಾರತ।
07106044c ಕರ್ಣೋ ವೈಕರ್ತನೋ ಯುದ್ಧೇ ಭೀಮಸೇನಂ ಮಹಾರಥಂ।।
ಭಾರತ! ಯುದ್ಧದಲ್ಲಿ ಪುನಃ ಕರ್ಣ ವೈಕರ್ತನನು ಮಹಾರಥ ಭೀಮಸೇನನನ್ನು ಶರವರ್ಷಗಳಿಂದ ಮುಚ್ಚಿ ಬಿಟ್ಟನು.
07106045a ತತ್ರ ಭಾರತ ಭೀಮಂ ತು ದೃಷ್ಟವಂತಃ ಸ್ಮ ಸಾಯಕೈಃ।
07106045c ಸಮಾಚಿತತನುಂ ಸಂಖ್ಯೇ ಶ್ವಾವಿಧಂ ಶಲಲೈರಿವ।।
ಭಾರತ! ಅಲ್ಲಿ ನಾವು ಮುಳ್ಳುಗಳು ನಿಗುರಿನಿಂತ ಮುಳ್ಳು ಹಂದಿಯಂತೆ ಸಾಯಕಗಳಿಂದ ಚುಚ್ಚಲ್ಪಟ್ಟ ಭೀಮನನ್ನು ನೋಡಿದೆವು.
07106046a ಹೇಮಪುಂಖಾನ್ಶಿಲಾಧೌತಾನ್ಕರ್ಣಚಾಪಚ್ಯುತಾಂ ಶರಾನ್।
07106046c ದಧಾರ ಸಮರೇ ವೀರಃ ಸ್ವರಶ್ಮೀನಿವ ಭಾಸ್ಕರಃ।।
ಕರ್ಣನ ಚಾಪದಿಂದ ಹೊರಟ ಹೇಮಪುಂಖಗಳ ಶಿಲಾಧೌತ ಶರಗಳನ್ನು ಸಮರದಲ್ಲಿ ವೀರ ಭೀಮನು ಭಾಸ್ಕರನು ತನ್ನ ಕಿರಣಗಳನ್ನು ಹೇಗೋ ಹಾಗೆ ಸಹಿಸಿಕೊಂಡನು.
07106047a ರುಧಿರೋಕ್ಷಿತಸರ್ವಾಂಗೋ ಭೀಮಸೇನೋ ವ್ಯರೋಚತ।
07106047c ತಪನೀಯನಿಭೈಃ ಪುಷ್ಪೈಃ ಪಲಾಶ ಇವ ಕಾನನೇ।।
ರಕ್ತದಲ್ಲಿ ಸರ್ವಾಂಗಗಳೂ ತೋಯ್ದುಹೋಗಿರಲು ಭೀಮಸೇನನು ಕಾನನದಲ್ಲಿ ಕೆಂಪುಹೂಗಳು ಬಿಟ್ಟಿರುವ ಪಲಾಶ ವೃಕ್ಷದಂತೆ ರಾರಾಜಿಸಿದನು.
07106048a ತತ್ತು ಭೀಮೋ ಮಹಾರಾಜ ಕರ್ಣಸ್ಯ ಚರಿತಂ ರಣೇ।
07106048c ನಾಮೃಷ್ಯತ ಮಹೇಷ್ವಾಸಃ ಕ್ರೋಧಾದುದ್ವೃತ್ಯ ಚಕ್ಷುಷೀ।।
ಮಹಾರಾಜ! ಆದರೆ ರಣದಲ್ಲಿ ಕರ್ಣನ ನಡತೆಯನ್ನು ಮಹೇಷ್ವಾಸ ಭೀಮನು ಸ್ವಲ್ಪವೂ ಸಹಿಸಿಕೊಳ್ಳಲಿಲ್ಲ. ಕ್ರೋಧದಿಂದ ಕಣ್ಣುಗಳನ್ನು ತಿರುಗಿಸಿದನು.
07106049a ಸ ಕರ್ಣಂ ಪಂಚವಿಂಶತ್ಯಾ ನಾರಾಚಾನಾಂ ಸಮಾರ್ಪಯತ್।
07106049c ಮಹೀಧರಮಿವ ಶ್ವೇತಂ ಗೂಢಪಾದೈ53ರ್ವಿಷೋಲ್ಬಣೈಃ।।
ಅವನು ಕರ್ಣನನ್ನು ಇಪ್ಪತ್ತೈದು ನಾರಾಚಗಳಿಂದ ಹೊಡೆದನು. ಆಗ ಅವನು ವಿಷಯುಕ್ತ ಸರ್ಪಗಳಿಂದ ಕೂಡಿದ ಶ್ವೇತಪರ್ವತದಂತೆ ಶೋಭಿಸಿದನು.
07106050a ತಂ ವಿವ್ಯಾಧ ಪುನರ್ಭೀಮಃ ಷಡ್ಭಿರಷ್ಟಾಭಿರೇವ ಚ।
07106050c ಮರ್ಮಸ್ವಮರವಿಕ್ರಾಂತಃ ಸೂತಪುತ್ರಂ ಮಹಾರಣೇ।।
ಅಮರವಿಕ್ರಾಂತ54 ಭೀಮನು ಮಹಾರಣದಲ್ಲಿ ಸೂತಪುತ್ರನ ಮರ್ಮಗಳಿಗೆ ಹದಿನಾಲ್ಕು ಬಾಣಗಳಿಂದ ಹೊಡೆದನು.
07106051a ತತಃ ಕರ್ಣಸ್ಯ ಸಂಕ್ರುದ್ಧೋ ಭೀಮಸೇನಃ ಪ್ರತಾಪವಾನ್।
07106051c ಚಿಚ್ಚೇದ ಕಾರ್ಮುಕಂ ತೂರ್ಣಂ ಸರ್ವೋಪಕರಣಾನಿ ಚ।।
ಆಗ ತಕ್ಷಣವೇ ಸಂಕ್ರುದ್ಧನಾದ ಪ್ರತಾಪವಾನ್ ಭೀಮಸೇನನು ಕರ್ಣನ ಧನುಸ್ಸನ್ನೂ ಸರ್ವೋಪಕರಣಗಳನ್ನೂ ತುಂಡರಿಸಿದನು.
07106052a ಜಘಾನ ಚತುರಶ್ಚಾಶ್ವಾನ್ಸೂತಂ ಚ ತ್ವರಿತಃ ಶರೈಃ।
07106052c ನಾರಾಚೈರರ್ಕರಶ್ಮ್ಯಾಭೈಃ ಕರ್ಣಂ ವಿವ್ಯಾಧ ಚೋರಸಿ।।
ಅನಂತರ ತ್ವರೆಮಾಡಿ ಶರಗಳಿಂದ ಅವನ ನಾಲ್ಕು ಕುದುರೆಗಳನ್ನೂ ಸಾರಥಿಯನ್ನೂ ಸಂಹರಿಸಿದನು. ಸೂರ್ಯನ ರಶ್ಮಿಗಳಂತೆ ಪ್ರಕಾಶಿಸುವ ನಾರಾಚಗಳಿಂದ ಕರ್ಣನ ಎದೆಗೂ ಹೊಡೆದನು.
07106053a ತೇ ಜಗ್ಮುರ್ಧರಣೀಂ ಸರ್ವೇ ಕರ್ಣಂ ನಿರ್ಭಿದ್ಯ ಮಾರಿಷ।
07106053c ಯಥಾ ಹಿ ಜಲದಂ ಭಿತ್ತ್ವಾ ರಾಜನ್ಸೂರ್ಯಸ್ಯ ರಶ್ಮಯಃ।।
ಮಾರಿಷ! ರಾಜನ್! ಸೂರ್ಯನ ರಶ್ಮಿಗಳು ಮೋಡವನ್ನು ಭೇದಿಸುವಂತೆ ಆ ಶರಗಳು ಎಲ್ಲವೂ ಕರ್ಣನನ್ನು ಭೇದಿಸಿ ನೆಲವನ್ನು ಹೊಕ್ಕವು.
07106054a ಸ ವೈಕಲ್ಯಂ ಮಹತ್ಪ್ರಾಪ್ಯ ಚಿನ್ನಧನ್ವಾ ಶರಾರ್ದಿತಃ।
07106054c ತಥಾ ಪುರುಷಮಾನೀ ಸ ಪ್ರತ್ಯಪಾಯಾದ್ರಥಾಂತರಂ।।
ಧನುಸ್ಸು ತುಂಡಾಗಿ, ಶರಗಳಿಂದ ನೋವುತಿಂದು ಅತೀವ ಕಷ್ಟಕ್ಕೊಳಗಾದ ಆ ಪುರುಷಮಾನೀ ಕರ್ಣನು ಮತ್ತೊಂದು ರಥವನ್ನೇರಿ ಅಲ್ಲಿಂದ ಹೊರಟುಹೋದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಕರ್ಣಪರಾಜಯೇ ಷಡಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಕರ್ಣಪರಾಜಯ ಎನ್ನುವ ನೂರಾಆರನೇ ಅಧ್ಯಾಯವು.