105 ದುರ್ಯೋಧನಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಜಯದ್ರಥವಧ ಪರ್ವ

ಅಧ್ಯಾಯ 105

ಸಾರ

ದುರ್ಯೋಧನ-ದ್ರೋಣರ ಸಂವಾದ (1-21). ಯುಧಾಮನ್ಯು-ಉತ್ತಮೌಜರೊಂದಿಗೆ ದುರ್ಯೋಧನನ ಯುದ್ಧ, ಪರಾಜಯ (22-36).

07105001 ಸಂಜಯ ಉವಾಚ।
07105001a ತಸ್ಮಿನ್ವಿಲುಲಿತೇ ಸೈನ್ಯೇ ಸೈಂಧವಾಯಾರ್ಜುನೇ ಗತೇ।
07105001c ಸಾತ್ವತೇ ಭೀಮಸೇನೇ ಚ ಪುತ್ರಸ್ತೇ ದ್ರೋಣಮಭ್ಯಯಾತ್।।

ಸಂಜಯನು ಹೇಳಿದನು: “ಆ ಸೇನೆಯು ಚದುರಿಹೋಗಲು, ಸೈಂಧವನಿಗಾಗಿ ಅರ್ಜುನ, ಸಾತ್ವತ ಸಾತ್ಯಕಿ ಮತ್ತು ಭೀಮಸೇನರು ಹೊರಟು ಹೋಗಲು ನಿನ್ನ ಮಗನು ದ್ರೋಣನ ಬಳಿಸಾರಿದನು.

07105001e ತ್ವರನ್ನೇಕರಥೇನೈವ ಬಹುಕೃತ್ಯಂ ವಿಚಿಂತಯನ್।
07105002a ಸ ರಥಸ್ತವ ಪುತ್ರಸ್ಯ ತ್ವರಯಾ ಪರಯಾ ಯುತಃ।।

ಆಗ ನಿನ್ನ ಮಗನು ಒಬ್ಬನೇ ರಥದಲ್ಲಿ ಕುಳಿತುಕೊಂಡು ಅನೇಕ ಕೆಲಸಗಳ ಕುರಿತು ಚಿಂತಿಸುತ್ತಾ ಅತ್ಯಂತ ವೇಗದಿಂದ ಹೊರಟನು.

07105002c ತೂರ್ಣಮಭ್ಯಪತದ್ದ್ರೋಣಂ ಮನೋಮಾರುತವೇಗವಾನ್।
07105003a ಉವಾಚ ಚೈನಂ ಪುತ್ರಸ್ತೇ ಸಂರಂಭಾದ್ರಕ್ತಲೋಚನಃ।।

ಮನಸ್ಸು-ಮಾರುತಗಳ ವೇಗದಿಂದ ಬೇಗನೆ ದ್ರೋಣನನ್ನು ಸಮೀಪಿಸಿದ ನಿನ್ನ ಮಗನು ಕ್ರೋಧದಿಂದ ರಕ್ತಲೋಚನನಾಗಿ ಹೀಗೆ ಹೇಳಿದನು:

07105003c ಅರ್ಜುನೋ ಭೀಮಸೇನಶ್ಚ ಸಾತ್ಯಕಿಶ್ಚಾಪರಾಜಿತಃ।
07105004a ವಿಜಿತ್ಯ ಸರ್ವಸೈನ್ಯಾನಿ ಸುಮಹಾಂತಿ ಮಹಾರಥಾಃ।।
07105004c ಸಂಪ್ರಾಪ್ತಾಃ ಸಿಂಧುರಾಜಸ್ಯ ಸಮೀಪಮರಿಕರ್ಶನಾಃ।
07105004e ವ್ಯಾಯಚ್ಚಂತಿ ಚ ತತ್ರಾಪಿ ಸರ್ವ ಏವಾಪರಾಜಿತಾಃ।।

“ಅರಿಕರ್ಶನರಾದ ಅರ್ಜುನ, ಭೀಮಸೇನ ಮತ್ತು ಅಪರಾಜಿತ ಸಾತ್ಯಕಿಯರು ಎಲ್ಲ ಮಹಾ ಸೇನೆಗಳನ್ನೂ, ಮಹಾರಥರನ್ನೂ ಸೋಲಿಸಿ ಸಿಂಧುರಾಜನ ಸಮೀಪಕ್ಕೆ ಹೋಗಿಯಾಯಿತು! ಅಲ್ಲಿಯೂ ಕೂಡ ಈ ಅಪರಾಜಿತರು ಎಲ್ಲರೂ ನಮ್ಮ ಮೇಲೆ ಆಕ್ರಮಣ ನಡೆಸಿದ್ದಾರೆ.

07105005a ಯದಿ ತಾವದ್ರಣೇ ಪಾರ್ಥೋ ವ್ಯತಿಕ್ರಾಂತೋ ಮಹಾರಥಃ।
07105005c ಕಥಂ ಸಾತ್ಯಕಿಭೀಮಾಭ್ಯಾಂ ವ್ಯತಿಕ್ರಾಂತೋಽಸಿ ಮಾನದ।।

ಮಾನದ! ಮಹಾರಥ ಪಾರ್ಥನಾದರೋ ರಣದಲ್ಲಿ ತಮ್ಮನ್ನು ಅತಿಕ್ರಮಿಸಿ ಹೋರಟು ಹೋಗಿರಬಹುದು. ಆದರೆ ಸಾತ್ಯಕಿ-ಭೀಮಸೇನರು ನಿಮ್ಮನ್ನು ಹೇಗೆ ಅತಿಕ್ರಮಿಸಿ ಹೋದರು?

07105006a ಆಶ್ಚರ್ಯಭೂತಂ ಲೋಕೇಽಸ್ಮಿನ್ಸಮುದ್ರಸ್ಯೇವ ಶೋಷಣಂ।
07105006c ನಿರ್ಜಯಂ ತವ ವಿಪ್ರಾಗ್ರ್ಯ ಸಾತ್ವತೇನಾರ್ಜುನೇನ ಚ।।
07105007a ತಥೈವ ಭೀಮಸೇನೇನ ಲೋಕಃ ಸಂವದತೇ ಭೃಶಂ।
07105007c ಕಥಂ ದ್ರೋಣೋ ಜಿತಃ ಸಂಖ್ಯೇ ಧನುರ್ವೇದಸ್ಯ ಪಾರಗಃ।।

ವಿಪ್ರಾಗ್ರ್ಯ! ಸಾತ್ವತನಿಂದ ಮತ್ತು ಅರ್ಜುನನಿಂದ ಹಾಗೆಯೇ ಭೀಮಸೇನನಿಂದ ನೀವು ಸೋತಿರೆಂದರೆ ಈ ಲೋಕದಲ್ಲಿ ಸಮುದ್ರವು ಒಣಗಿಹೋದಷ್ಟೇ ಆಶ್ಚರ್ಯಕರ ವಿಷಯವಾಗಿದೆ. ಲೋಕದಲ್ಲಿ ಜನರು ಜೋರಾಗಿ ಕೇಳುತ್ತಿದ್ದಾರೆ - ಧನುರ್ವೇದದಲ್ಲಿ ಪಾರಂಗತ ದ್ರೋಣನು ಯುದ್ಧದಲ್ಲಿ ಹೇಗೆ ಸೋತ? – ಎಂದು.

07105008a ನಾಶ ಏವ ತು ಮೇ ನೂನಂ ಮಂದಭಾಗ್ಯಸ್ಯ ಸಂಯುಗೇ।
07105008c ಯತ್ರ ತ್ವಾಂ ಪುರುಷವ್ಯಾಘ್ರಮತಿಕ್ರಾಂತಾಸ್ತ್ರಯೋ ರಥಾಃ।।

ಆ ಮೂವರು ಪುರುಷವ್ಯಾಘ್ರ ರಥರು ನಿಮ್ಮನ್ನು ಅತಿಕ್ರಮಿಸಿ ಹೋದರೆಂದರೆ ಸಂಯುಗದಲ್ಲಿ ಈ ಮಂದಭಾಗ್ಯನ ನಾಶವಾಯಿತೆಂದೇ ಅಲ್ಲವೇ?

07105009a ಏವಂ ಗತೇ ತು ಕೃತ್ಯೇಽಸ್ಮಿನ್ಬ್ರೂಹಿ ಯತ್ತೇ ವಿವಕ್ಷಿತಂ।
07105009c ಯದ್ಗತಂ ಗತಮೇವೇಹ ಶೇಷಂ ಚಿಂತಯ ಮಾನದ।।

ಮಾನದ! ಹೀಗೆ ನಡೆದಿರುವಾಗ ಮುಂದೇನು ಮಾಡುವುದಿದೆ ಎನ್ನುವುದನ್ನು ಹೇಳಿ. ಆದದ್ದು ಆಗಿಹೋಯಿತು. ಈಗ ಏನು ಮಾಡಬೇಕು ಎನ್ನುವುದನ್ನು ಯೋಚಿಸಿ.

07105010a ಯತ್ಕೃತ್ಯಂ ಸಿಂಧುರಾಜಸ್ಯ ಪ್ರಾಪ್ತಕಾಲಮನಂತರಂ।
07105010c ತದ್ಬ್ರವೀತು ಭವಾನ್ ಕ್ಷಿಪ್ರಂ ಸಾಧು ತತ್ಸಂವಿಧೀಯತಾಂ।।

ಈ ಪರಿಸ್ಥಿತಿಯಲ್ಲಿ ಸಿಂಧುರಾಜನು ಏನು ಮಾಡಬೇಕು ಎನ್ನುವುದನ್ನು ಹೇಳಿ. ಅದನ್ನು ಬೇಗನೆ ವಿಧಿವತ್ತಾಗಿ ಕಾರ್ಯಗತಗೊಳಿಸಲಿ!”

07105011 ದ್ರೋಣ ಉವಾಚ।
07105011a ಚಿಂತ್ಯಂ ಬಹು ಮಹಾರಾಜ ಕೃತ್ಯಂ ಯತ್ತತ್ರ ಮೇ ಶೃಣು।
07105011c ತ್ರಯೋ ಹಿ ಸಮತಿಕ್ರಾಂತಾಃ ಪಾಂಡವಾನಾಂ ಮಹಾರಥಾಃ।
07105011e ಯಾವದೇವ ಭಯಂ ಪಶ್ಚಾತ್ತಾವದೇಷಾಂ ಪುರಃಸರಂ।।

ದ್ರೋಣನು ಹೇಳಿದನು: “ಮಹಾರಾಜ! ಏನು ಮಾಡಬೇಕೆಂದು ನಾನು ಬಹಳವಾಗಿ ಯೋಚಿಸಿ ಹೇಳುವುದನ್ನು ಕೇಳು. ಕೇವಲ ಮೂವರು ಪಾಂಡವ ಮಹಾರಥರೇ ನನ್ನನ್ನು ಅತಿಕ್ರಮಿಸಿ ಹೋಗಿದ್ದಾರೆ. ಮುಂದೆ ಹೋಗಿರುವವರ ಕುರಿತು ಭಯಪಡುವಷ್ಟೇ ಹಿಂದೆ ಉಳಿದಿರುವವರ ಕುರಿತು ಭಯಪಡಬೇಕು.

07105012a ತದ್ಗರೀಯಸ್ತರಂ ಮನ್ಯೇ ಯತ್ರ ಕೃಷ್ಣಧನಂಜಯೌ।
07105012c ಸಾ ಪುರಸ್ತಾಚ್ಚ ಪಶ್ಚಾಚ್ಚ ಗೃಹೀತಾ ಭಾರತೀ ಚಮೂಃ।।

ಆದರೆ ಎದಿರು ಕೃಷ್ಣ-ಧನಂಜಯರಿರುವಲ್ಲಿ ಇನ್ನೂ ಹೆಚ್ಚಿನ ಜಾಗ್ರತೆಯಿರಬೇಕೆಂದು ಅನಿಸುತ್ತದೆ. ಭಾರತೀ ಸೇನೆಯು ಮುಂದಿನಿಂದ ಮತ್ತು ಹಿಂದಿನಿಂದ ಎರಡೂ ಕಡೆಗಳಿಂದ ಆಕ್ರಮಣಿಸಲ್ಪಟ್ಟಿದೆ.

07105013a ತತ್ರ ಕೃತ್ಯಮಹಂ ಮನ್ಯೇ ಸೈಂಧವಸ್ಯಾಭಿರಕ್ಷಣಂ।
07105013c ಸ ನೋ ರಕ್ಷ್ಯತಮಸ್ತಾತ ಕ್ರುದ್ಧಾದ್ಭೀತೋ ಧನಂಜಯಾತ್।।

ಸೈಂಧವನ ರಕ್ಷಣೆಯು ನಮ್ಮ ಮೊದಲ ಕರ್ತವ್ಯವೆಂದು ನಾನು ತಿಳಿಯುತ್ತೇನೆ. ಅಯ್ಯಾ! ಧನಂಜಯನಿಂದ ಭೀತನಾದ ಅವನು ನಮ್ಮ ರಕ್ಷಣೆಗೆ ಅರ್ಹನಾಗಿದ್ದಾನೆ.

07105014a ಗತೌ ಹಿ ಸೈಂಧವಂ ವೀರೌ ಯುಯುಧಾನವೃಕೋದರೌ।
07105014c ಸಂಪ್ರಾಪ್ತಂ ತದಿದಂ ದ್ಯೂತಂ ಯತ್ತಚ್ಚಕುನಿಬುದ್ಧಿಜಂ।।

ವೀರರಾದ ಯುಯುಧಾನ-ವೃಕೋದರರಿಬ್ಬರೂ ಸೈಂಧವನಲ್ಲಿಗೆ ತಲುಪಿದ್ದಾರೆ. ಶಕುನಿಯ ಬುದ್ಧಿಯಿಂದ ಹುಟ್ಟಿದ ದ್ಯೂತದಿಂದಲೇ ನಮಗೆ ಈ ಪರಿಸ್ಥಿತಿಯು ಬಂದೊದಗಿದೆ.

07105015a ನ ಸಭಾಯಾಂ ಜಯೋ ವೃತ್ತೋ ನಾಪಿ ತತ್ರ ಪರಾಜಯಃ।
07105015c ಇಹ ನೋ ಗ್ಲಹಮಾನಾನಾಮದ್ಯ ತಾತ ಜಯಾಜಯೌ।।

ಸಭೆಯಲ್ಲಿ ಆಟವಾಡಿದಾಗ ಅಲ್ಲಿ ಜಯವೂ ಇರಲಿಲ್ಲ, ಸೋಲೂ ಇರಲಿಲ್ಲ. ಅಯ್ಯಾ! ಆದರೆ ಆಡುತ್ತಿರುವ ಈ ಆಟದಲ್ಲಿ ಜಯ-ಪರಾಜಯಗಳಿವೆ.

07105016a ಯಾನ್ಸ್ಮ ತಾನ್ಗ್ಲಹತೇ ಘೋರಾಂ ಶಕುನಿಃ ಕುರುಸಂಸದಿ।
07105016c ಅಕ್ಷಾನ್ಸಮ್ಮನ್ಯಮಾನಃ ಸ ಪ್ರಾ ಕ್ಶರಾಸ್ತೇ ದುರಾಸದಾಃ।।
07105017a ಯತ್ರ ತೇ ಬಹವಸ್ತಾತ ಕುರವಃ ಪರ್ಯವಸ್ಥಿತಾಃ।

ಅಯ್ಯಾ! ಕುರುಸಂಸದಿಯಲ್ಲಿ, ಅನೇಕ ಕುರುಗಳು ಸೇರಿದ್ದಲ್ಲಿ, ದಾಳಗಳೆಂದು ತಿಳಿದು ಆಟವಾಡುತ್ತಿದ್ದುದು ಮುಗ್ಧ ದಾಳಗಳಾಗಿರಲಿಲ್ಲ. ಅವು ಕಣ್ಣಿಗೆ ಕಾಣದೇ ಇರುವ ಘೋರ ದುರಾಸದ ಬಾಣಗಳಾಗಿದ್ದವು.

07105017c ಸೇನಾಂ ದುರೋದರಂ ವಿದ್ಧಿ ಶರಾನಕ್ಷಾನ್ವಿಶಾಂ ಪತೇ।।
07105018a ಗ್ಲಹಂ ಚ ಸೈಂಧವಂ ರಾಜನ್ನತ್ರ ದ್ಯೂತಸ್ಯ ನಿಶ್ಚಯಃ।
07105018c ಸೈಂಧವೇ ಹಿ ಮಹಾದ್ಯೂತಂ ಸಮಾಸಕ್ತಂ ಪರೈಃ ಸಹ।।

ವಿಶಾಂಪತೇ! ರಾಜನ್! ಈ ಸೇನೆಗಳೇ ಆಟಗಾರರೆಂದೂ, ಶರಗಳೇ ದಾಳಗಳೆಂದೂ, ಸೈಂಧವನೇ ದ್ಯೂತವನ್ನು ನಿಶ್ಚಯಿಸುವ ಪಣವೆಂದೂ ತಿಳಿ. ಸೈಂಧವನೇ ಈಗ ನಾವು ಶತ್ರುಗಳೊಂದಿಗೆ ಹೋರಾಡುತ್ತಿರುವ ಈ ಮಹಾದ್ಯೂತದ ಪಣ.

07105019a ಅತ್ರ ಸರ್ವೇ ಮಹಾರಾಜ ತ್ಯಕ್ತ್ವಾ ಜೀವಿತಮಾತ್ಮನಃ।
07105019c ಸೈಂಧವಸ್ಯ ರಣೇ ರಕ್ಷಾಂ ವಿಧಿವತ್ಕರ್ತುಮರ್ಹಥ।
07105019e ತತ್ರ ನೋ ಗ್ಲಹಮಾನಾನಾಂ ಧ್ರುವೌ ತಾತ ಜಯಾಜಯೌ।।

ಮಹಾರಾಜ! ಆದುದರಿಂದ ನಾವೆಲ್ಲರೂ ನಮ್ಮ ಜೀವವನ್ನೇ ಮುಡುಪಾಗಿಟ್ಟು ರಣದಲ್ಲಿ ವಿಧಿವತ್ತಾಗಿ ರಕ್ಷಣೆಯನ್ನು ಮಾಡಬೇಕಾಗಿದೆ. ಅಯ್ಯಾ! ಅಲ್ಲಿ ಆಟವಾಡುವ ನಮ್ಮವರ ಜಯ-ಅಪಜಯಗಳು ನಿರ್ಧರಿಸಲ್ಪಡುತ್ತದೆ.

07105020a ಯತ್ರ ತೇ ಪರಮೇಷ್ವಾಸಾ ಯತ್ತಾ ರಕ್ಷಂತಿ ಸೈಂಧವಂ।
07105020c ತತ್ರ ಯಾಹಿ ಸ್ವಯಂ ಶೀಘ್ರಂ ತಾಂಶ್ಚ ರಕ್ಷಸ್ವ ರಕ್ಷಿಣಃ।।

ಎಲ್ಲಿ ಆ ಪರಮೇಷ್ವಾಸರು ಸೈಂಧವನನ್ನು ಪ್ರಯತ್ನಪಟ್ಟು ರಕ್ಷಿಸುತ್ತಿದ್ದಾರೋ ಅಲ್ಲಿಗೆ ಶೀಘ್ರವಾಗಿ ಸ್ವಯಂ ನೀನು ಹೋಗು. ಆ ರಕ್ಷಕರನ್ನು ರಕ್ಷಿಸು!

07105021a ಇಹೈವ ತ್ವಹಮಾಸಿಷ್ಯೇ ಪ್ರೇಷಯಿಷ್ಯಾಮಿ ಚಾಪರಾನ್।
07105021c ನಿರೋತ್ಸ್ಯಾಮಿ ಚ ಪಾಂಚಾಲಾನ್ಸಹಿತಾನ್ಪಾಂಡುಸೃಂಜಯೈಃ।।

ನಾನು ನಿನ್ನೊಂದಿಗೆ ಇತರರನ್ನು ಅಲ್ಲಿಗೆ ಕಳುಹಿಸುತ್ತೇನೆ ಮತ್ತು ಇಲ್ಲಿಯೇ ಇದ್ದುಕೊಂಡು ಪಾಂಚಾಲರೊಂದಿಗೆ ಪಾಂಡವ-ಸೃಂಜಯರನ್ನು ತಡೆಯುತ್ತೇನೆ.”

07105022a ತತೋ ದುರ್ಯೋಧನಃ ಪ್ರಾಯಾತ್ತೂರ್ಣಮಾಚಾರ್ಯಶಾಸನಾತ್।
07105022c ಉದ್ಯಮ್ಯಾತ್ಮಾನಮುಗ್ರಾಯ ಕರ್ಮಣೇ ಸಪದಾನುಗಃ।।

ಆಗ ದುರ್ಯೋಧನನು ತಕ್ಷಣವೇ ಆಚಾರ್ಯನ ಶಾಸನದಂತೆ, ತನ್ನ ಅನುಯಾಯಿಗಳೊಂದಿಗೆ ಆ ಉಗ್ರ ಕರ್ಮವನ್ನು50 ಮಾಡಲು ಉತ್ಸಾಹಿತನಾಗಿ ಹೊರಟನು.

07105023a ಚಕ್ರರಕ್ಷೌ ತು ಪಾಂಚಾಲ್ಯೌ ಯುಧಾಮನ್ಯೂತ್ತಮೌಜಸೌ।
07105023c ಬಾಹ್ಯೇನ ಸೇನಾಮಭ್ಯೇತ್ಯ ಜಗ್ಮತುಃ ಸವ್ಯಸಾಚಿನಂ।।

ಆ ಸಮಯದಲ್ಲಿ ಚಕ್ರರಕ್ಷಕ ಪಾಂಚಾಲ್ಯ ಯುಧಾಮನ್ಯು-ಉತ್ತಮೌಜಸರು ಸೇನೆಯನ್ನು ಹೊರಗಿನಿಂದ ಭೇದಿಸಿ ಸವ್ಯಸಾಚಿಯ ಬಳಿ ಹೋಗುತ್ತಿದ್ದರು.

07105024a ತೌ ಹಿ ಪೂರ್ವಂ ಮಹಾರಾಜ ವಾರಿತೌ ಕೃತವರ್ಮಣಾ।
07105024c ಪ್ರವಿಷ್ಟೇ ತ್ವರ್ಜುನೇ ರಾಜಂಸ್ತವ ಸೈನ್ಯಂ ಯುಯುತ್ಸಯಾ।।

ರಾಜನ್! ಮಹಾರಾಜ! ಇದಕ್ಕೂ ಮೊದಲು ಅರ್ಜುನನು ಯುದ್ಧಮಾಡುತ್ತಾ ನಿನ್ನ ಸೇನೆಯನ್ನು ಪ್ರವೇಶಿಸಿದಾಗ ಕೃತವರ್ಮನು ಇವರಿಬ್ಬರನ್ನೂ ತಡೆದಿದ್ದನು.

07105025a ತಾಭ್ಯಾಂ ದುರ್ಯೋಧನಃ ಸಾರ್ಧಮಗಚ್ಚದ್ಯುದ್ಧಮುತ್ತಮಂ।
07105025c ತ್ವರಿತಸ್ತ್ವರಮಾಣಾಭ್ಯಾಂ ಭ್ರಾತೃಭ್ಯಾಂ ಭಾರತೋ ಬಲೀ।।

ಆಗ ಭಾರತ ಬಲಶಾಲೀ ದುರ್ಯೋಧನನು ಉತ್ತಮವಾಗಿ ಯುದ್ಧಮಾಡುತ್ತಾ ತ್ವರೆಮಾಡಿ ಒಟ್ಟಿಗೇ ಮುಂದುವರೆಯುತ್ತಿದ್ದ ಅವರಿಬ್ಬರು ಸಹೋದರರನ್ನು ಎದುರಿಸಿದನು.

07105026a ತಾವಭಿದ್ರವತಾಮೇನಮುಭಾವುದ್ಯತಕಾರ್ಮುಕೌ।
07105026c ಮಹಾರಥಸಮಾಖ್ಯಾತೌ ಕ್ಷತ್ರಿಯಪ್ರವರೌ ಯುಧಿ।।

ಮಹಾರಥರೆಂದು ಪ್ರಸಿದ್ಧರಾದ ಅವರಿಬ್ಬರು ಕ್ಷತ್ರಿಯ ಪ್ರವರರೂ ಧನುಸ್ಸನ್ನು ಸೆಳೆದು ದುರ್ಯೋಧನನೊಂದಿಗೆ ಯುದ್ಧಕ್ಕೆ ತೊಡಗಿದರು.

07105027a ಯುಧಾಮನ್ಯುಸ್ತು ಸಂಕ್ರುದ್ಧಃ ಶರಾಂಸ್ತ್ರಿಂಶತಮಾಯಸಾನ್।
07105027c ವ್ಯಸೃಜತ್ತವ ಪುತ್ರಸ್ಯ ತ್ವರಮಾಣಃ ಸ್ತನಾಂತರೇ।।

ಯುಧಾಮನ್ಯುವಾದರೋ ಸಂಕ್ರುದ್ಧನಾಗಿ ತ್ವರೆಮಾಡಿ ನಿನ್ನ ಮಗನ ಸ್ತನಾಂತರದಲ್ಲಿ ಮುನ್ನೂರು ಉಕ್ಕಿನ ಶರಗಳನ್ನು ಪ್ರಯೋಗಿಸಿದನು.

07105028a ದುರ್ಯೋಧನೋಽಪಿ ರಾಜೇಂದ್ರ ಪಾಂಚಾಲ್ಯಸ್ಯೋತ್ತಮೌಜಸಃ।
07105028c ಜಘಾನ ಚತುರಶ್ಚಾಶ್ವಾನುಭೌ ಚ ಪಾರ್ಷ್ಣಿಸಾರಥೀ।।

ರಾಜೇಂದ್ರ! ದುರ್ಯೋಧನನಾದರೋ ಪಾಂಚಾಲ್ಯ ಉತ್ತಮೌಜಸನ ನಾಲ್ಕು ಕುದುರೆಗಳನ್ನೂ ಇಬ್ಬರು ಪಾರ್ಷ್ಣಿಸಾರಥಿಗಳನ್ನೂ ಸಂಹರಿಸಿದನು.

07105029a ಉತ್ತಮೌಜಾ ಹತಾಶ್ವಸ್ತು ಹತಸೂತಶ್ಚ ಸಂಯುಗೇ।
07105029c ಆರುರೋಹ ರಥಂ ಭ್ರಾತುರ್ಯುಧಾಮನ್ಯೋರಭಿತ್ವರನ್।।

ಕುದುರೆಗಳು, ಸೂತರೂ ಹತರಾಗಲು ಉತ್ತಮೌಜಸನು ತ್ವರೆಮಾಡಿ ಸಹೋದರ ಯುಧಾಮನ್ಯುವಿನ ರಥವನ್ನೇರಿದನು.

07105030a ಸ ರಥಂ ಪ್ರಾಪ್ಯ ತಂ ಭ್ರಾತುರ್ದುರ್ಯೋಧನಹಯಾಂ ಶರೈಃ।
07105030c ಬಹುಭಿಸ್ತಾಡಯಾಮಾಸ ತೇ ಹತಾಃ ಪ್ರಾಪತನ್ಭುವಿ।।

ಸಹೋದರನ ರಥವನ್ನೇರಿ ಅವನು ದುರ್ಯೋಧನನ ಕುದುರೆಗಳನ್ನು ಅನೇಕ ಶರಗಳಿಂದ ಹೊಡೆಯುತ್ತಿರಲು ಅವು ಹತವಾಗಿ ಭೂಮಿಯ ಮೇಲೆ ಬಿದ್ದವು.

07105031a ಹಯೇಷು ಪತಿತೇಷ್ವಸ್ಯ ಚಿಚ್ಚೇದ ಪರಮೇಷುಣಾ।
07105031c ಯುಧಾಮನ್ಯುರ್ಧನುಃ ಶೀಘ್ರಂ ಶರಾವಾಪಂ ಚ ಸಂಯುಗೇ।।

ಕುದುರೆಗಳು ಬೀಳಲು ಯುಧಾಮನ್ಯುವು ಶೀಘ್ರವಾಗಿ ಸಂಯುಗದಲ್ಲಿ ಪರಮ ಧನುಸ್ಸಿನಿಂದ ದುರ್ಯೋಧನನ ಧನುಸ್ಸನ್ನೂ ಶರಾವಾಪವನ್ನೂ ಕತ್ತರಿಸಿದನು.

07105032a ಹತಾಶ್ವಸೂತಾತ್ಸ ರಥಾದವಪ್ಲುತ್ಯ ಮಹಾರಥಃ।
07105032c ಗದಾಮಾದಾಯ ತೇ ಪುತ್ರಃ ಪಾಂಚಾಲ್ಯಾವಭ್ಯಧಾವತ।।

ಕುದುರೆ-ಸಾರಥಿಯರು ಸತ್ತುಹೋದ ರಥದಿಂದ ಧುಮುಕಿ ನಿನ್ನ ಮಗ ಮಹಾರಥನು ಗದೆಯನ್ನೆತ್ತಿಕೊಂಡು ಪಾಂಚಾಲ್ಯರ ಕಡೆ ಧಾವಿಸಿದನು.

07105033a ತಮಾಪತಂತಂ ಸಂಪ್ರೇಕ್ಷ್ಯ ಕ್ರುದ್ಧಂ ಪರಪುರಂಜಯಂ।
07105033c ಅವಪ್ಲುತೌ ರಥೋಪಸ್ಥಾದ್ಯುಧಾಮನ್ಯೂತ್ತಮೌಜಸೌ।।

ಎರಗಿ ಬೀಳುತ್ತಿರುವ ಆ ಕ್ರುದ್ಧ ಪರಪುರಂಜಯನನ್ನು ನೋಡಿ ಯುಧಾಮನ್ಯು-ಉತ್ತಮೌಜಸರು ರಥದಿಂದ ಕೆಳಗೆ ಹಾರಿದರು.

07105034a ತತಃ ಸ ಹೇಮಚಿತ್ರಂ ತಂ ಸ್ಯಂದನಪ್ರವರಂ ಗದೀ।
07105034c ಗದಯಾ ಪೋಥಯಾಮಾಸ ಸಾಶ್ವಸೂತಧ್ವಜಂ ರಣೇ।।

ಆಗ ಅವರು ಗದೆಯಿಂದ ರಥಗಳಲ್ಲಿಯೇ ಶ್ರೇಷ್ಠ ಗದೀ ದುರ್ಯೋಧನನ ಹೇಮಚಿತ್ರಿತ ರಥವನ್ನು ಕುದುರೆ-ಸಾರಥಿ-ಧ್ವಜಗಳೊಂದಿಗೆ ರಣದಲ್ಲಿ ಪುಡಿ ಪುಡಿ ಮಾಡಿದರು.

07105035a ಹತ್ವಾ ಚೈನಂ ಸ ಪುತ್ರಸ್ತೇ ಹತಾಶ್ವೋ ಹತಸಾರಥಿಃ।
07105035c ಮದ್ರರಾಜರಥಂ ತೂರ್ಣಮಾರುರೋಹ ಪರಂತಪಃ।।

ಹೀಗೆ ಹತಾಶ್ವ ಹತಸಾರಥಿಯಾದ ನಿನ್ನ ಮಗ ಪರಂತಪನು ಬೇಗನೇ ಮದ್ರರಾಜನ ರಥವನ್ನೇರಿದನು.

07105036a ಪಾಂಚಾಲಾನಾಂ ತು ಮುಖ್ಯೌ ತೌ ರಾಜಪುತ್ರೌ ಮಹಾಬಲೌ।
07105036c ರಥಮನ್ಯಂ ಸಮಾರುಹ್ಯ ಧನಂಜಯಮಭೀಯತುಃ।।

ಪಾಂಚಾಲ ನಾಯಕರಾದ ಅವರಿಬ್ಬರು ಮಹಾಬಲಿ ರಾಜಪುತ್ರರೂ ಇನ್ನೊಂದು ರಥವನ್ನೇರಿ ಧನಂಜಯನ ಬಳಿ ತಲುಪಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ದುರ್ಯೋಧನಯುದ್ಧೇ ಪಂಚಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ದುರ್ಯೋಧನಯುದ್ಧ ಎನ್ನುವ ನೂರಾಐದನೇ ಅಧ್ಯಾಯವು.