ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 104
ಸಾರ
ಭೀಮಸೇನನಿಂದ ಕರ್ಣನ ಪರಾಜಯ, ಪಾಂಡವ ಸೇನೆಯಲ್ಲಿ ಹರ್ಷ (1-33).
07104001 ಧೃತರಾಷ್ಟ್ರ ಉವಾಚ।
07104001a ತಥಾ ತು ನರ್ದಮಾನಂ ತಂ ಭೀಮಸೇನಂ ಮಹಾಬಲಂ।
07104001c ಮೇಘಸ್ತನಿತನಿರ್ಘೋಷಂ ಕೇ ವೀರಾಃ ಪರ್ಯವಾರಯನ್।।
ಧೃತರಾಷ್ಟ್ರನು ಹೇಳಿದನು: “ಹಾಗೆ ಮೋಡಗಳ ಗುಡುಗಿನಂತೆ ಗರ್ಜಿಸುತ್ತಿದ್ದ ಮಹಾಬಲ ಭೀಮಸೇನನನ್ನು ಯಾವ ವೀರರು ಸುತ್ತುವರೆದರು?
07104002a ನ ಹಿ ಪಶ್ಯಾಮ್ಯಹಂ ತಂ ವೈ ತ್ರಿಷು ಲೋಕೇಷು ಸಂಜಯ।
07104002c ಕ್ರುದ್ಧಸ್ಯ ಭೀಮಸೇನಸ್ಯ ಯಸ್ತಿಷ್ಠೇದಗ್ರತೋ ರಣೇ।।
ಸಂಜಯ! ರಣದಲ್ಲಿ ಕ್ರುದ್ಧನಾದ ಭೀಮಸೇನನ ಎದಿರು ನಿಲ್ಲುವವರನ್ನು ಈ ಮೂರು ಲೋಕಗಳಲ್ಲಿಯೂ ಕಾಣೆವು!
07104003a ಗದಾಮುದ್ಯಚ್ಚಮಾನಸ್ಯ ಕಾಲಸ್ಯೇವ ಮಹಾಮೃಧೇ।
07104003c ನ ಹಿ ಪಶ್ಯಾಮ್ಯಹಂ ತಾತ ಯಸ್ತಿಷ್ಠೇತ ರಣಾಜಿರೇ।।
ಅಯ್ಯಾ! ಮಹಾಯುದ್ಧದಲ್ಲಿ ಕಾಲನಂತೆ ಗದೆಯನ್ನೆತ್ತಿ ಬರುವ ಭೀಮನನ್ನು ರಣದಲ್ಲಿ ತಡೆದು ನಿಲ್ಲುವವರನ್ನು ನಾನು ಕಾಣೆನು.
07104004a ರಥಂ ರಥೇನ ಯೋ ಹನ್ಯಾತ್ಕುಂಜರಂ ಕುಂಜರೇಣ ಚ।
07104004c ಕಸ್ತಸ್ಯ ಸಮರೇ ಸ್ಥಾತಾ ಸಾಕ್ಷಾದಪಿ ಶತಕ್ರತುಃ।।
ರಥವನ್ನು ರಥದಿಂದ ಮತ್ತು ಆನೆಯನ್ನು ಆನೆಯಿಂದ ನಾಶಪಡಿಸುವ ಅವನ ಎದಿರು, ಸಾಕ್ಷಾತ್ ಶತಕ್ರತುವೇ ಆದರೂ, ಯಾರು ತಾನೇ ನಿಂತಾರು?
07104005a ಕ್ರುದ್ಧಸ್ಯ ಭೀಮಸೇನಸ್ಯ ಮಮ ಪುತ್ರಾನ್ಜಿಘಾಂಸತಃ।
07104005c ದುರ್ಯೋಧನಹಿತೇ ಯುಕ್ತಾಃ ಸಮತಿಷ್ಠಂತ ಕೇಽಗ್ರತಃ।।
ನನ್ನ ಮಕ್ಕಳನ್ನು ಕೊಲ್ಲಲು ಬಯಸಿದ ಕ್ರುದ್ಧ ಭೀಮಸೇನನ ಮುಂದೆ ದುರ್ಯೋಧನನ ಹಿತದಲ್ಲಿ ನಿರತರಾದ ಯಾರು ತಾನೆ ನಿಂತುಕೊಂಡರು?
07104006a ಭೀಮಸೇನದವಾಗ್ನೇಸ್ತು ಮಮ ಪುತ್ರತೃಣೋಲಪಂ।
07104006c ಪ್ರಧಕ್ಷ್ಯತೋ ರಣಮುಖೇ ಕೇ ವೀರಾಃ ಪ್ರಮುಖೇ ಸ್ಥಿತಾಃ।।
ನನ್ನ ಮಕ್ಕಳನ್ನು ಹುಲ್ಲಿನ ಮೆದೆಗಳಂತೆ ಭಸ್ಮಮಾಡಿಬಿಡಬಲ್ಲ ಭೀಮಸೇನನೆಂಬ ದಾವಾಗ್ನಿಯನ್ನು ಯಾವ ವೀರರು ಎದುರಿಸಿ ನಿಂತರು?
07104007a ಕಾಲ್ಯಮಾನಾನ್ಹಿ ಮೇ ಪುತ್ರಾನ್ಭೀಮೇನಾವೇಕ್ಷ್ಯ ಸಂಯುಗೇ।
07104007c ಕಾಲೇನೇವ ಪ್ರಜಾಃ ಸರ್ವಾಃ ಕೇ ಭೀಮಂ ಪರ್ಯವಾರಯನ್।।
ಪ್ರಜೆಗಳೆಲ್ಲರನ್ನೂ ಸಂಹರಿಸುವ ಕಾಲನಂತೆ ನನ್ನ ಮಕ್ಕಳನ್ನು ಸಂಹರಿಸುತ್ತಿದ್ದ ಭೀಮನನ್ನು ನೋಡಿ ಸಂಯುಗದದಲ್ಲಿ ಯಾರು ತಾನೇ ಭೀಮನನ್ನು ಸುತ್ತುಕಟ್ಟಿದರು?
07104008a ಭೀಮವಹ್ನೇಃ ಪ್ರದೀಪ್ತಸ್ಯ ಮಮ ಪುತ್ರಾನ್ದಿಧಕ್ಷತಃ।
07104008c ಕೇ ಶೂರಾಃ ಪರ್ಯವರ್ತಂತ ತನ್ಮಮಾಚಕ್ಷ್ವ ಸಂಜಯ।।
ನನ್ನ ಪುತ್ರರನ್ನು ಸುಡುವ ಉರಿಯುತ್ತಿರುವ ಭೀಮಾಗ್ನಿಯನ್ನು ಯಾವ ಶೂರರು ಆಕ್ರಮಣಿಸಿದರು? ಅದನ್ನು ನನಗೆ ಹೇಳು ಸಂಜಯ!”
07104009 ಸಂಜಯ ಉವಾಚ।
07104009a ತಥಾ ತು ನರ್ದಮಾನಂ ತಂ ಭೀಮಸೇನಂ ಮಹಾರಥಂ।
07104009c ತುಮುಲೇನೈವ ಶಬ್ದೇನ ಕರ್ಣೋಽಪ್ಯಭ್ಯಪತದ್ಬಲೀ।।
ಸಂಜಯನು ಹೇಳಿದನು: “ಹಾಗೆ ಗರ್ಜಿಸುತ್ತಿದ್ದ ಮಹಾರಥ ಭೀಮಸೇನನನ್ನು ಅಷ್ಟೇ ತುಮುಲ ಶಬ್ಧದಿಂದ ಬಲೀ ಕರ್ಣನು ಎದುರಿಸಿದನು.
07104010a ವ್ಯಾಕ್ಷಿಪನ್ಬಲವಚ್ಚಾಪಮತಿಮಾತ್ರಮಮರ್ಷಣಃ।
07104010c ಕರ್ಣಸ್ತು ಯುದ್ಧಮಾಕಾಂಕ್ಷನ್ದರ್ಶಯಿಷ್ಯನ್ಬಲಂ ಬಲೀ।।
ಭೀಮನನ್ನು ಸಹಿಸಲಾರದೇ ಬಲವತ್ತಾಗಿ ಚಾಪವನ್ನು ಸೆಳೆದು ಯುದ್ಧಾಕಾಂಕ್ಷಿಯಾಗಿ ಬಲೀ ಕರ್ಣನು ಬಲವನ್ನು ಪ್ರದರ್ಶಿಸಿದನು.
07104011a ಪ್ರಾವೇಪನ್ನಿವ ಗಾತ್ರಾಣಿ ಕರ್ಣಭೀಮಸಮಾಗಮೇ।
07104011c ರಥಿನಾಂ ಸಾದಿನಾಂ ಚೈವ ತಯೋಃ ಶ್ರುತ್ವಾ ತಲಸ್ವನಂ।।
ಕರ್ಣ-ಭೀಮಸೇನರ ಆ ಸಮಾಗಮದಲ್ಲಿ ಅವರಿಬ್ಬರ ಚಪ್ಪಾಳೆ ಶಬ್ಧವನ್ನು ಕೇಳಿಯೇ ರಥಿಗಳು ಮತ್ತು ಅಶ್ವಾರೋಹಿಗಳ ಶರೀರಗಳು ಕಂಪಿಸಿದವು.
07104012a ಭೀಮಸೇನಸ್ಯ ನಿನದಂ ಘೋರಂ ಶ್ರುತ್ವಾ ರಣಾಜಿರೇ।
07104012c ಖಂ ಚ ಭೂಮಿಂ ಚ ಸಂಬದ್ಧಾಂ ಮೇನಿರೇ ಕ್ಷತ್ರಿಯರ್ಷಭಾಃ।।
ರಣರಂಗದಲ್ಲಿ ಭೀಮಸೇನನ ಘೋರ ನಿನಾದವನ್ನು ಕೇಳಿ ಭೂಮಿ-ಆಕಾಶಗಳು ಗಾಭರಿಗೊಂಡಿವೆಯೋ ಎಂದು ಕ್ಷತ್ರಿಯರ್ಷಭರು ತಿಳಿದುಕೊಂಡರು.
07104013a ಪುನರ್ಘೋರೇಣ ನಾದೇನ ಪಾಂಡವಸ್ಯ ಮಹಾತ್ಮನಃ।
07104013c ಸಮರೇ ಸರ್ವಯೋಧಾನಾಂ ಧನೂಂಷ್ಯಭ್ಯಪತನ್ ಕ್ಷಿತೌ।।
ಪುನಃ ಮಹಾತ್ಮ ಪಾಂಡವನ ಘೋರನಾದದಿಂದಾಗಿ ಸಮರದಲ್ಲಿದ್ದ ಸರ್ವಯೋಧರ ಧನುಸ್ಸುಗಳು ನೆಲದ ಮೇಲೆ ಬಿದ್ದವು.
07104014a ವಿತ್ರಸ್ತಾನಿ ಚ ಸರ್ವಾಣಿ ಶಕೃನ್ಮೂತ್ರಂ ಪ್ರಸುಸ್ರುವುಃ।
07104014c ವಾಹನಾನಿ ಮಹಾರಾಜ ಬಭೂವುರ್ವಿಮನಾಂಸಿ ಚ।।
ಮಹಾರಾಜ! ವಾಹಕ ಪ್ರಾಣಿಗಳೆಲ್ಲವೂ ಹೆದರಿ ಮಲ-ಮೂತ್ರಗಳನ್ನು ವಿಸರ್ಜಿಸಿದವು. ಲವಲವಿಕೆಯನ್ನೂ ಕಳೆದುಕೊಂಡವು.
07104015a ಪ್ರಾದುರಾಸನ್ನಿಮಿತ್ತಾನಿ ಘೋರಾಣಿ ಚ ಬಹೂನಿ ಚ।
07104015c ತಸ್ಮಿಂಸ್ತು ತುಮುಲೇ ರಾಜನ್ಭೀಮಕರ್ಣಸಮಾಗಮೇ।।
ರಾಜನ್! ಭೀಮ ಮತ್ತು ಕರ್ಣರ ಆ ತುಮುಲ ಸಮಾಗಮದಲ್ಲಿ ಅನೇಕ ಘೋರ ನಿಮಿತ್ತಗಳು ಉಂಟಾದವು.
07104016a ತತಃ ಕರ್ಣಸ್ತು ವಿಂಶತ್ಯಾ ಶರಾಣಾಂ ಭೀಮಮಾರ್ದಯತ್।
07104016c ವಿವ್ಯಾಧ ಚಾಸ್ಯ ತ್ವರಿತಃ ಸೂತಂ ಪಂಚಭಿರಾಶುಗೈಃ।।
ಅನಂತರ ಕರ್ಣನು ಇಪ್ಪತ್ತು ಶರಗಳಿಂದ ಭೀಮನನ್ನು ಗಾಯಗೊಳಿಸಿದನು. ತ್ವರೆಮಾಡಿ ಅವನ ಸಾರಥಿಯನ್ನು ಕೂಡ ಐದು ಆಶುಗಗಳಿಂದ ಹೊಡೆದನು.
07104017a ಪ್ರಹಸ್ಯ ಭೀಮಸೇನಸ್ತು ಕರ್ಣಂ ಪ್ರತ್ಯರ್ಪಯದ್ರಣೇ।
07104017c ಸಾಯಕಾನಾಂ ಚತುಹ್ಷಷ್ಟ್ಯಾ ಕ್ಷಿಪ್ರಕಾರೀ ಮಹಾಬಲಃ।।
ಮಹಾಬಲ ಭೀಮಸೇನನಾದರೋ ಜೋರಾಗಿ ನಕ್ಕು ಅರವತ್ನಾಲ್ಕು ಕ್ಷಿಪ್ರಕಾರೀ ಸಾಯಕಗಳಿಂದ ರಣದಲ್ಲಿ ಕರ್ಣನನ್ನು ಹೊಡೆದನು.
07104018a ತಸ್ಯ ಕರ್ಣೋ ಮಹೇಷ್ವಾಸಃ ಸಾಯಕಾಂಶ್ಚತುರೋಽಕ್ಷಿಪತ್।
07104018c ಅಸಂಪ್ರಾಪ್ತಾಂಸ್ತು ತಾನ್ಭೀಮಃ ಸಾಯಕೈರ್ನತಪರ್ವಭಿಃ।
07104018e ಚಿಚ್ಚೇದ ಬಹುಧಾ ರಾಜನ್ದರ್ಶಯನ್ಪಾಣಿಲಾಘವಂ।।
ರಾಜನ್! ಮಹೇಷ್ವಾಸ ಕರ್ಣನು ಅವನ ಮೇಲೆ ನಾಲ್ಕು ಸಾಯಕಗಳನ್ನು ಪ್ರಯೋಗಿಸಿದನು. ಅವು ತಲುಪುವುದರೊಳಗೇ ಅವುಗಳನ್ನು ಭೀಮನು ಸಾಯಕ ನತಪರ್ವಗಳಿಂದ ಅನೇಕ ಚೂರುಗಳಾಗಿ ತುಂಡರಿಸಿ ತನ್ನ ಕೈಚಳಕವನ್ನು ತೋರಿಸಿದನು.
07104019a ತಂ ಕರ್ಣಶ್ಚಾದಯಾಮಾಸ ಶರವ್ರಾತೈರನೇಕಶಃ।
07104019c ಸಂಚಾದ್ಯಮಾನಃ ಕರ್ಣೇನ ಬಹುಧಾ ಪಾಂಡುನಂದನಃ।।
ಕರ್ಣನಿಂದ ಬಹಳ ಬಾರಿ ಮುಚ್ಚಲ್ಪಟ್ಟ ಪಾಂಡುನಂದನನು ಕರ್ಣನನ್ನೂ ಕೂಡ ಅನೇಕ ಶರಸಮೂಹಗಳಿಂದ ಮುಚ್ಚಿದನು.
07104020a ಚಿಚ್ಚೇದ ಚಾಪಂ ಕರ್ಣಸ್ಯ ಮುಷ್ಟಿದೇಶೇ ಮಹಾರಥಃ।
07104020c ವಿವ್ಯಾಧ ಚೈನಂ ಬಹುಭಿಃ ಸಾಯಕೈರ್ನತಪರ್ವಭಿಃ।।
ಮಹಾರಥ ಭೀಮನು ಕರ್ಣನ ಧನುಸ್ಸನ್ನು ಮುಷ್ಟಿದೇಶದಲ್ಲಿ ಕತ್ತರಿಸಿದನು ಮತ್ತು ಅನೇಕ ನತಪರ್ವ ಸಾಯಕಗಳಿಂದ ಅವನನ್ನೂ ಹೊಡೆದನು.
07104021a ಅಥಾನ್ಯದ್ಧನುರಾದಾಯ ಸಜ್ಯಂ ಕೃತ್ವಾ ಚ ಸೂತಜಃ।
07104021c ವಿವ್ಯಾಧ ಸಮರೇ ಭೀಮಂ ಭೀಮಕರ್ಮಾ ಮಹಾರಥಃ।।
ಆಗ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಶಿಂಜನಿಯನ್ನು ಬಿಗಿದು ಸೂತಜ ಕರ್ಣನು ಸಮರದಲ್ಲಿ ಮಹಾರಥಿ ಭೀಮಕರ್ಮಿ ಭೀಮನನ್ನು ಹೊಡೆದನು.
07104022a ತಸ್ಯ ಭೀಮೋ ಭೃಶಂ ಕ್ರುದ್ಧಸ್ತ್ರೀನ್ ಶರಾನ್ನತಪರ್ವಣಃ।
07104022c ನಿಚಖಾನೋರಸಿ ತದಾ ಸೂತಪುತ್ರಸ್ಯ ವೇಗಿತಃ।।
ಅವನ ಮೇಲೆ ತುಂಬಾ ಕ್ರುದ್ಧನಾದ ಭೀಮನು ಮೂರು ನತಪರ್ವ ಶರಗಳನ್ನು ವೇಗದಿಂದ ಸೂತಪುತ್ರನ ಎದೆಗೆ ಗುರಿಯಿಟ್ಟು ಹೊಡೆದು ನಾಟಿಸಿದನು.
07104023a ತೈಃ ಕರ್ಣೋಽಭ್ರಾಜತ ಶರೈರುರೋಮಧ್ಯಗತೈಸ್ತದಾ।
07104023c ಮಹೀಧರ ಇವೋದಗ್ರಸ್ತ್ರಿಶೃಂಗೋ ಭರತರ್ಷಭ।।
ಭರತರ್ಷಭ! ಅವನ ಎದೆಯ ಮಧ್ಯವನ್ನು ಹೊಕ್ಕ ಆ ಬಾಣಗಳಿಂದ ಕರ್ಣನು ಮೂರು ಶೃಂಗಗಳುಳ್ಳ ಪರ್ವತದಂತೆ ಕಂಗೊಳಿಸಿದನು.
07104024a ಸುಸ್ರಾವ ಚಾಸ್ಯ ರುಧಿರಂ ವಿದ್ಧಸ್ಯ ಪರಮೇಷುಭಿಃ।
07104024c ಧಾತುಪ್ರಸ್ಯಂದಿನಃ ಶೈಲಾದ್ಯಥಾ ಗೈರಿಕರಾಜಯಃ।।
ಆ ತೀಕ್ಷ್ಣ ಶರಗಳಿಂದ ಗಾಯಗೊಂಡ ಅವನು ಧಾತುಗಳು ತುಂಬಿದ ನೀರನ್ನು ಪ್ರಸವಿಸುವ ಪರ್ವತದಂತೆ ರಕ್ತವನ್ನು ಸುರಿಸಿದನು.
07104025a ಕಿಂ ಚಿದ್ವಿಚಲಿತಃ ಕರ್ಣಃ ಸುಪ್ರಹಾರಾಭಿಪೀಡಿತಃ।
07104025c ಸಸಾಯಕಂ ಧನುಃ ಕೃತ್ವಾ ಭೀಮಂ ವಿವ್ಯಾಧ ಮಾರಿಷ।
07104025e ಚಿಕ್ಷೇಪ ಚ ಪುನರ್ಬಾಣಾನ್ ಶತಶೋಽಥ ಸಹಸ್ರಶಃ।।
ಉತ್ತಮ ಪ್ರಹಾರದಿಂದ ತುಂಬಾ ಪೀಡಿತನಾಗಿದ್ದರೂ ಕರ್ಣನು ಸ್ವಲ್ಪವೂ ವಿಚಲಿತನಾಗಲಿಲ್ಲ. ಮಾರಿಷ! ಧನುಸ್ಸನ್ನೇ ಸಹಾಯವಾಗಿರಿಸಿಕೊಂಡು ಕರ್ಣನು ಪುನಃ ನೂರಾರು ಸಹಸ್ರಾರು ಬಾಣಗಳನ್ನು ಭೀಮನ ಮೇಲೆ ಪ್ರಯೋಗಿಸಿದನು.
07104026a ಸ ಚಾದ್ಯಮಾನಃ ಸಹಸಾ ಕರ್ಣೇನ ದೃಢಧನ್ವಿನಾ।
07104026c ಧನುರ್ಜ್ಯಾಮಚ್ಚಿನತ್ತೂರ್ಣಮುತ್ಸ್ಮಯನ್ಪಾಂಡುನಂದನಃ।।
07104027a ಸಾರಥಿಂ ಚಾಸ್ಯ ಭಲ್ಲೇನ ಪ್ರಾಹಿಣೋದ್ಯಮಸಾದನಂ।
07104027c ವಾಹಾಂಶ್ಚ ಚತುರಃ ಸಂಖ್ಯೇ ವ್ಯಸೂಂಶ್ಚಕ್ರೇ ಮಹಾರಥಃ।।
ದೃಢಧನ್ವಿ ಕರ್ಣನಿಂದ ಹಾಗೆ ಒಮ್ಮೆಲೇ ಮುಚ್ಚಿಹೋದ ಪಾಂಡುನಂದನ ಮಹಾರಥ ಭೀಮನು ನಗುತ್ತಾ ಬಿಲ್ಲನ್ನು ಸೆಳೆದು ಭಲ್ಲದಿಂದ ಕರ್ಣನ ಸಾರಥಿಯನ್ನು ಯಮಸಾದನಕ್ಕೆ ಕಳುಹಿಸಿದನು. ರಣದಲ್ಲಿ ಅವನ ನಾಲ್ಕು ಕುದುರೆಗಳನ್ನೂ ಸಂಹರಿಸಿದನು.
07104028a ಹತಾಶ್ವಾತ್ತು ರಥಾತ್ಕರ್ಣಃ ಸಮಾಪ್ಲುತ್ಯ ವಿಶಾಂ ಪತೇ।
07104028c ಸ್ಯಂದನಂ ವೃಷಸೇನಸ್ಯ ಸಮಾರೋಹನ್ಮಹಾರಥಃ।।
ವಿಶಾಂಪತೇ! ಕುದುರೆಗಳು ಹತವಾದ ಆ ರಥದಿಂದ ಹಾರಿ ಮಹಾರಥ ಕರ್ಣನು ಮಗ ವೃಷಸೇನನ ರಥವನ್ನು ಏರಿದನು.
07104029a ನಿರ್ಜಿತ್ಯ ತು ರಣೇ ಕರ್ಣಂ ಭೀಮಸೇನಃ ಪ್ರತಾಪವಾನ್।
07104029c ನನಾದ ಸುಮಹಾನಾದಂ ಪರ್ಜನ್ಯನಿನದೋಪಮಂ।।
ರಣದಲ್ಲಿ ಕರ್ಣನನ್ನು ಸೋಲಿಸಿ ಪ್ರತಾಪವಾನ್ ಭೀಮಸೇನನು ಮಳೆಗಾಲದ ಗುಡುಗಿನಂತೆ ಜೋರಾಗಿ ಗರ್ಜಿಸಿದನು.
07104030a ತಸ್ಯ ತಂ ನಿನದಂ ಶ್ರುತ್ವಾ ಪ್ರಹೃಷ್ಟೋಽಭೂದ್ಯುಧಿಷ್ಠಿರಃ।
07104030c ಕರ್ಣಂ ಚ ನಿರ್ಜಿತಂ ಮತ್ವಾ ಭೀಮಸೇನೇನ ಭಾರತ।।
ಭಾರತ! ಅವನ ಆ ಕೂಗನ್ನು ಕೇಳಿ, ಭೀಮಸೇನನಿಂದ ಕರ್ಣನು ಸೋತನು ಎಂದು ತಿಳಿದು ಯುಧಿಷ್ಠಿರನು ಪರಮ ಹರ್ಷಿತನಾದನು.
07104031a ಸಮಂತಾಚ್ಚಂಖನಿನದಂ ಪಾಂಡುಸೇನಾಕರೋತ್ತದಾ।
07104031c ಶತ್ರುಸೇನಾಧ್ವನಿಂ ಶ್ರುತ್ವಾ ತಾವಕಾ ಹ್ಯಪಿ ನಾನದನ್।
07104031e ಗಾಂಡೀವಂ ಪ್ರಾಕ್ಷಿಪತ್ಪಾರ್ಥಃ ಕೃಷ್ಣೋಽಪ್ಯಬ್ಜಮವಾದಯತ್।।
ಆಗ ಪಾಂಡವರ ಸೇನೆಯಲ್ಲಿ ಎಲ್ಲ ಕಡೆ ಶಂಖವನ್ನು ಊದಿದರು. ಶತ್ರುಸೇನೆಗಳ ಧ್ವನಿಯನ್ನು ಕೇಳಿ ನಿನ್ನವರೂ ಕೂಡ ಕೂಗಿದರು. ಪಾರ್ಥನು ಗಾಂಡೀವವನ್ನು ಮೊಳಗಿಸಿದನು ಮತ್ತು ಕೃಷ್ಣನು ಶಂಖವನ್ನೂದಿದನು.
07104032a ತಮಂತರ್ಧಾಯ ನಿನದಂ ಧ್ವನಿರ್ಭೀಮಸ್ಯ ನರ್ದತಃ।
07104032c ಅಶ್ರೂಯತ ಮಹಾರಾಜ ಸರ್ವಸೈನ್ಯೇಷು ಭಾರತ।।
ಮಹಾರಾಜ! ಭಾರತ! ಆ ಎಲ್ಲ ಕೂಗುಗಳನ್ನೂ ಅಡಗಿಸಿ ಗರ್ಜಿಸುತ್ತಿದ್ದ ಭೀಮಸೇನನ ಕೂಗಿನ ಧ್ವನಿಯು ಎಲ್ಲ ಸೇನೆಗಳಲ್ಲೂ ಕೇಳಿಬಂದಿತು.
07104033a ತತೋ ವ್ಯಾಯಚ್ಚತಾಮಸ್ತ್ರೈಃ ಪೃಥಕ್ಪೃಥಗರಿಂದಮೌ।
07104033c ಮೃದುಪೂರ್ವಂ ಚ ರಾಧೇಯೋ ದೃಢಪೂರ್ವಂ ಚ ಪಾಂಡವಃ।।
ಆಗ ಆ ಇಬ್ಬರು ಅರಿಂದಮ ಕರ್ಣ-ಭೀಮರು ಬೇರೆ ಬೇರೆ ಅಸ್ತ್ರಗಳಿಂದ - ರಾಧೇಯನು ಮೃದುವಾಗಿಯೂ ಪಾಂಡವನು ಜೋರಾಗಿಯೂ - ಹೋರಾಡಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಭೀಮಸೇನಪ್ರವೇಶೇ ಕರ್ಣಪರಾಜಯೇ ಚತುರಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಭೀಮಸೇನಪ್ರವೇಶೇ ಕರ್ಣಪರಾಜಯ ಎನ್ನುವ ನೂರಾನಾಲ್ಕನೇ ಅಧ್ಯಾಯವು.