ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 102
ಸಾರ
ಸಾತ್ಯಕಿ-ಅರ್ಜುನರನ್ನು ಕಾಣದೇ ಚಿಂತಿತನಾದ ಯುಧಿಷ್ಠಿರನು ಭೀಮಸೇನನು ಅವರ ಹಿಂದೆ ಕಳುಹಿಸಲು ಯೋಚಿಸಿದುದು (1-23). ಸಾತ್ಯಕಿ-ಅರ್ಜುನರ ಸಹಾಯಕ್ಕೆ ಹೋಗಲು ಯುಧಿಷ್ಠಿರನು ಭೀಮಸೇನನನ್ನು ಕೇಳಿದುದು (24-42). ಯುಧಿಷ್ಠಿರನನ್ನು ರಕ್ಷಿಸುವ ಭಾರವನ್ನು ಧೃಷ್ಟದ್ಯುಮ್ನನ ಮೇಲಿರಿಸಿ ಭೀಮಸೇನನು ಸಾತ್ಯಕಿ-ಅರ್ಜುನರನ್ನು ಹಿಂಬಾಲಿಸಿ ಹೋದುದು (43-65). ಭೀಮಸೇನ-ದ್ರೋಣರ ಯುದ್ದ (66-89). ಭೀಮಸೇನನು ಧೃತರಾಷ್ಟ್ರನ ಹನ್ನೊಂದು ಪುತ್ರರನ್ನು – ಕುಂಡಭೇದಿ, ಸುಷೇಣ, ದೀರ್ಘನೇತ್ರ, ವೃಂದಾರಕ, ಅಭಯ, ರೌದ್ರಕರ್ಮ, ದುರ್ವಿಮೋಚನ, ವಿಂದ, ಅನುವಿಂದ, ಸುವರ್ಮ, ಸುದರ್ಶನ – ಸಂಹರಿಸಿದುದು (90-105).
07102001 ಸಂಜಯ ಉವಾಚ।
07102001a ವ್ಯೂಹೇಷ್ವಾಲೋಡ್ಯಮಾನೇಷು ಪಾಂಡವಾನಾಂ ತತಸ್ತತಃ।
07102001c ಸುದೂರಮನ್ವಯುಃ ಪಾರ್ಥಾಃ ಪಾಂಚಾಲಾಃ ಸಹ ಸೋಮಕೈಃ।।
ಸಂಜಯನು ಹೇಳಿದನು: “ಪಾಂಡವರ ವ್ಯೂಹವು ಅಲ್ಲಲ್ಲಿಯೇ ಅಲ್ಲೋಲಕಲ್ಲೋಲಗೊಳ್ಳುತ್ತಿರಲು ಸೋಮಕ-ಪಾಂಚಾಲರೊಂದಿಗೆ ಪಾರ್ಥರು ದೂರದಲ್ಲಿ ಸೇರಿದರು.
07102002a ವರ್ತಮಾನೇ ತಥಾ ರೌದ್ರೇ ಸಂಗ್ರಾಮೇ ಲೋಮಹರ್ಷಣೇ।
07102002c ಪ್ರಕ್ಷಯೇ ಜಗತಸ್ತೀವ್ರೇ ಯುಗಾಂತ ಇವ ಭಾರತ।।
07102003a ದ್ರೋಣೇ ಯುಧಿ ಪರಾಕ್ರಾಂತೇ ನರ್ದಮಾನೇ ಮುಹುರ್ಮುಹುಃ।
07102003c ಪಾಂಚಾಲೇಷು ಚ ಕ್ಷೀಣೇಷು ವಧ್ಯಮಾನೇಷು ಪಾಂಡುಷು।।
07102004a ನಾಪಶ್ಯಚ್ಚರಣಂ ಕಿಂ ಚಿದ್ಧರ್ಮರಾಜೋ ಯುಧಿಷ್ಠಿರಃ।
07102004c ಚಿಂತಯಾಮಾಸ ರಾಜೇಂದ್ರ ಕಥಮೇತದ್ಭವಿಷ್ಯತಿ।।
ಭಾರತ! ರಾಜೇಂದ್ರ! ಹಾಗೆ ರೌದ್ರ ರೋಮಾಂಚಕಾರೀ ಸಂಗ್ರಾಮವು ನಡೆಯುತ್ತಿರಲು, ಪ್ರಲಯವೋ ಎಂಬಂತೆ ತೀವ್ರವಾಗಿ ಜನರ ನಾಶವಾಗುತ್ತಿರಲು, ಯುದ್ಧದಲ್ಲಿ ಪರಾಕ್ರಾಂತ ದ್ರೋಣನು ಮತ್ತೆ ಮತ್ತೆ ಗರ್ಜಿಸುತ್ತಿರಲು, ವಧಿಸಲ್ಪಡುತ್ತಿರುವ ಪಾಂಚಾಲ ಮತ್ತು ಪಾಂಡವರ ಸೇನೆಗಳು ಕ್ಷೀಣಿಸುತ್ತಿರಲು, ಮೊರೆಹೊಗಲು ಯಾರನ್ನೂ ಕಾಣದೇ ರಾಜಾ ಯುಧಿಷ್ಠಿರನು ಇದು ಹೇಗಾಗುತ್ತದೆ ಎಂದು ಜಿಂತಿಸತೊಡಗಿದನು.
07102005a ತತ್ರಾವೇಕ್ಷ್ಯ ದಿಶಃ ಸರ್ವಾಃ ಸವ್ಯಸಾಚಿದಿದೃಕ್ಷಯಾ।
07102005c ಯುಧಿಷ್ಠಿರೋ ದದರ್ಶಾಥ ನೈವ ಪಾರ್ಥಂ ನ ಮಾಧವಂ।।
ಸವ್ಯಸಾಚಿಯನ್ನು ಹುಡುಕುತ್ತಾ ಎಲ್ಲ ದಿಕ್ಕುಗಳಲ್ಲಿಯೂ ಕಣ್ಣು ಹಾಯಿಸಿದನು. ಆದರೆ ಯುಧಿಷ್ಠಿರನು ಪಾರ್ಥನನ್ನಾಗಲೀ ಮಾಧವನನ್ನಾಗಲೀ ಕಾಣಲಿಲ್ಲ.
07102006a ಸೋಽಪಶ್ಯನ್ನರಶಾರ್ದೂಲಂ ವಾನರರ್ಷಭಲಕ್ಷಣಂ।
07102006c ಗಾಂಡೀವಸ್ಯ ಚ ನಿರ್ಘೋಷಮಶೃಣ್ವನ್ವ್ಯಥಿತೇಂದ್ರಿಯಃ।।
ಆ ನರಶಾರ್ದೂಲ ವಾನರರ್ಷಭಲಕ್ಷಣನನ್ನು ಕಾಣದೇ ಗಾಂಡೀವದ ನಿರ್ಘೋಷವನ್ನು ಕೇಳದೇ ಅವನು ವ್ಯಥಿತನಾದನು.
07102007a ಅಪಶ್ಯನ್ಸಾತ್ಯಕಿಂ ಚಾಪಿ ವೃಷ್ಣೀನಾಂ ಪ್ರವರಂ ರಥಂ।
07102007c ಚಿಂತಯಾಭಿಪರೀತಾಂಗೋ ಧರ್ಮರಾಜೋ ಯುಧಿಷ್ಠಿರಃ।
07102007e ನಾಧ್ಯಗಚ್ಚತ್ತದಾ ಶಾಂತಿಂ ತಾವಪಶ್ಯನ್ನರರ್ಷಭೌ।।
ವೃಷ್ಣಿಯರ ರಥರಲ್ಲಿ ಶ್ರೇಷ್ಠ ಸಾತ್ಯಕಿಯನ್ನೂ ಕಾಣದೇ ಧರ್ಮರಾಜ ಯುಧಿಷ್ಠಿರನು ಚಿಂತೆಯಿಂದ ತಳಮಳಗೊಂಡನು. ಆ ಇಬ್ಬರು ನರರ್ಷಭರನ್ನು38 ಕಾಣದೇ ಶಾಂತಿಯನ್ನು ಹೊಂದಲಿಲ್ಲ.
07102008a ಲೋಕೋಪಕ್ರೋಶಭೀರುತ್ವಾದ್ಧರ್ಮರಾಜೋ ಮಹಾಯಶಾಃ।
07102008c ಅಚಿಂತಯನ್ಮಹಾಬಾಹುಃ ಶೈನೇಯಸ್ಯ ರಥಂ ಪ್ರತಿ।।
ಲೋಕದ ಕಟುಮಾತಿಗೆ ಹೆದರಿ ಮಹಾಯಶಸ್ವಿ ಮಹಾಬಾಹು ಧರ್ಮರಾಜನು ಶೈನೇಯನ ರಥದ ಕುರಿತು ಚಿಂತಿಸತೊಡಗಿದನು:
07102009a ಪದವೀಂ ಪ್ರೇಷಿತಶ್ಚೈವ ಫಲ್ಗುನಸ್ಯ ಮಯಾ ರಣೇ।
07102009c ಶೈನೇಯಃ ಸಾತ್ಯಕಿಃ ಸತ್ಯೋ ಮಿತ್ರಾಣಾಮಭಯಂಕರಃ।।
“ಫಲ್ಗುನನು ಹೋದದಾರಿಯಲ್ಲಿಯೇ ಹೋಗೆಂದು ನಾನು ಮಿತ್ರರಿಗೆ ಅಭಯವನ್ನುಂಟುಮಾಡುವ ಶಿನಿಯ ಮೊಮ್ಮಗ ಸತ್ಯ ಸಾತ್ಯಕಿಯನ್ನು ಕಳುಗಿಸಿ ಕೊಟ್ಟೆನು.
07102010a ತದಿದಂ ಹ್ಯೇಕಮೇವಾಸೀದ್ದ್ವಿಧಾ ಜಾತಂ ಮಮಾದ್ಯ ವೈ।
07102010c ಸಾತ್ಯಕಿಶ್ಚ ಹಿ ಮೇ ಜ್ಞೇಯಃ ಪಾಂಡವಶ್ಚ ಧನಂಜಯಃ।।
ಮೊದಲು ಒಬ್ಬನ ಕುರಿತು ಮಾತ್ರ ಚಿಂತೆಯಿತ್ತು. ಈಗ ಇಬ್ಬರ ಕುರಿತು ನನಗೆ ಚಿಂತೆಯಾಗುತ್ತಿದೆ. ಸಾತ್ಯಕಿ ಮತ್ತು ಪಾಂಡವ ಧನಂಜಯ ಇಬ್ಬರ ಕುರಿತೂ ನಾನು ತಿಳಿದುಕೊಳ್ಳಬೇಕಾಗಿದೆ.
07102011a ಸಾತ್ಯಕಿಂ ಪ್ರೇಷಯಿತ್ವಾ ತು ಪಾಂಡವಸ್ಯ ಪದಾನುಗಂ।
07102011c ಸಾತ್ವತಸ್ಯಾಪಿ ಕಂ ಯುದ್ಧೇ ಪ್ರೇಷಯಿಷ್ಯೇ ಪದಾನುಗಂ।।
ಪಾಂಡವನಿಗೆ ಸಹಾಯಕನಾಗಿ ಅವನ ದಾರಿಯನ್ನೇ ಅನುಸರಿಸಿ ಹೋಗೆಂದು ಸಾತ್ಯಕಿಯನ್ನು ಕಳುಹಿಸಿ, ಈಗ ಯುದ್ಧದಲ್ಲಿ ಸಾತ್ಯಕಿಯ ಕುರುಹನ್ನರಿಯಲು ಯಾರನ್ನು ಕಳುಹಿಸಿಕೊಡಲಿ?
07102012a ಕರಿಷ್ಯಾಮಿ ಪ್ರಯತ್ನೇನ ಭ್ರಾತುರನ್ವೇಷಣಂ ಯದಿ।
07102012c ಯುಯುಧಾನಮನನ್ವಿಷ್ಯ ಲೋಕೋ ಮಾಂ ಗರ್ಹಯಿಷ್ಯತಿ।।
07102013a ಭ್ರಾತುರನ್ವೇಷಣಂ ಕೃತ್ವಾ ಧರ್ಮರಾಜೋ ಯುಧಿಷ್ಠಿರಃ।
07102013c ಪರಿತ್ಯಜತಿ ವಾರ್ಷ್ಣೇಯಂ ಸಾತ್ಯಕಿಂ ಸತ್ಯವಿಕ್ರಮಂ।।
ಯುದ್ಧದಲ್ಲಿ ಯುಯುಧಾನನನ್ನು ಹುಡುಕದೇ ಕೇವಲ ಸಹೋದರ ಅರ್ಜುನನನ್ನು ಮಾತ್ರ ಹುಡುಕಲು ಪ್ರಯತ್ನಿಸಿದೆನೆಂದರೆ “ಸಹೋದರನ ಅನ್ವೇಷಣೆಯನ್ನು ಮಾಡಲು ಧರ್ಮರಾಜ ಯುಧಿಷ್ಠಿರನು ವಾರ್ಷ್ಣೇಯ ಸತ್ಯವಿಕ್ರಮಿ ಸಾತ್ಯಕಿಯನ್ನು ತ್ಯಜಿಸಿಬಿಟ್ಟನು!” ಎಂದು ಜನರು ನನ್ನನ್ನು ನಿಂದಿಸುತ್ತಾರೆ.
07102014a ಲೋಕಾಪವಾದಭೀರುತ್ವಾತ್ಸೋಽಹಂ ಪಾರ್ಥಂ ವೃಕೋದರಂ।
07102014c ಪದವೀಂ ಪ್ರೇಷಯಿಷ್ಯಾಮಿ ಮಾಧವಸ್ಯ ಮಹಾತ್ಮನಃ।।
ಜನರಿಂದ ಅಪವಾದವು ಬರಬಾರದೆಂದು ನಾನು ಮಹಾತ್ಮ ಮಾಧವನು ಹೋದ ದಾರಿಯಲ್ಲಿ ಪಾರ್ಥ ವೃಕೋದರನನ್ನು ಕಳುಹಿಸುತ್ತೇನೆ.
07102015a ಯಥೈವ ಚ ಮಮ ಪ್ರೀತಿರರ್ಜುನೇ ಶತ್ರುಸೂದನೇ।
07102015c ತಥೈವ ವೃಷ್ಣಿವೀರೇಽಪಿ ಸಾತ್ವತೇ ಯುದ್ಧದುರ್ಮದೇ।।
ನನಗೆ ಶತ್ರುಸೂದನ ಅರ್ಜುನನ ಮೇಲೆ ಎಷ್ಟು ಪ್ರೀತಿಯಿದೆಯೋ ಅಷ್ಟೇ ಯುದ್ಧದುರ್ಮದ ವೃಷ್ಣಿವೀರ ಸಾತ್ಯಕಿಯ ಮೇಲೂ ಇದೆ.
07102016a ಅತಿಭಾರೇ ನಿಯುಕ್ತಶ್ಚ ಮಯಾ ಶೈನೇಯನಂದನಃ।
07102016c ಸ ತು ಮಿತ್ರೋಪರೋಧೇನ ಗೌರವಾಚ್ಚ ಮಹಾಬಲಃ।
07102016e ಪ್ರವಿಷ್ಟೋ ಭಾರತೀಂ ಸೇನಾಂ ಮಕರಃ ಸಾಗರಂ ಯಥಾ।।
ಮಿತ್ರನಿಗೆ ಸಹಾಯಮಾಡಬೇಕೆಂಬ ಗೌರವದಿಂದ ಮಹಾಬಲ ಶೈನೇಯನಂದನನು ನನ್ನಿಂದ ಅತಿ ಭಾರವನ್ನು ಹೊತ್ತು ಮೊಸಳೆಯು ಸಮುದ್ರವನ್ನು ಹೇಗೋ ಹಾಗೆ ಭರತರ ಸೇನೆಯನ್ನು ಪ್ರವೇಶಿಸಿರುವನು.
07102017a ಅಸೌ ಹಿ ಶ್ರೂಯತೇ ಶಬ್ದಃ ಶೂರಾಣಾಮನಿವರ್ತಿನಾಂ।
07102017c ಮಿಥಃ ಸಂಯುಧ್ಯಮಾನಾನಾಂ ವೃಷ್ಣಿವೀರೇಣ ಧೀಮತಾ।।
ಧೀಮತ ವೃಷ್ಣಿವೀರನೊಂದಿಗೆ ಯುದ್ಧಮಾಡುತ್ತಿರುವ ಪಲಾಯನ ಮಾಡದ ಶೂರರ ಶಬ್ಧವು ಇಗೋ ಕೇಳಿಬರುತ್ತಿದೆ.
07102018a ಪ್ರಾಪ್ತಕಾಲಂ ಸುಬಲವನ್ನಿಶ್ಚಿತ್ಯ ಬಹುಧಾ ಹಿ ಮೇ।
07102018c ತತ್ರೈವ ಪಾಂಡವೇಯಸ್ಯ ಭೀಮಸೇನಸ್ಯ ಧನ್ವಿನಃ।
07102018e ಗಮನಂ ರೋಚತೇ ಮಹ್ಯಂ ಯತ್ರ ಯಾತೌ ಮಹಾರಥೌ।।
ಅವನಿಗೆ ಆ ಸೇನೆಯು ಬಹಳವಾಗಿದೆ ಎಂದು ನನಗನ್ನಿಸುತ್ತದೆ. ಆ ಮಹಾರಥರಿಬ್ಬರು ಎಲ್ಲಿಗೆ ಹೋಗಿದ್ದಾರೋ ಅಲ್ಲಿಗೆ ಧನ್ವಿ ಭೀಮಸೇನನನ್ನೂ ಕಳುಹಿಸಲು ಇದು ಸರಿಯಾದ ಸಮಯವೆಂದು ನನಗನ್ನಿಸುತ್ತದೆ.
07102019a ನ ಚಾಪ್ಯಸಹ್ಯಂ ಭೀಮಸ್ಯ ವಿದ್ಯತೇ ಭುವಿ ಕಿಂ ಚನ।
07102019c ಶಕ್ತೋ ಹ್ಯೇಷ ರಣೇ ಯತ್ತಾನ್ಪೃಥಿವ್ಯಾಂ ಸರ್ವಧನ್ವಿನಃ।
07102019e ಸ್ವಬಾಹುಬಲಮಾಸ್ಥಾಯ ಪ್ರತಿವ್ಯೂಹಿತುಮಂಜಸಾ।।
ಭೀಮಸೇನನಿಗೆ ಸಹಿಸಲಸಾದ್ಯವಾದದು ಭೂಮಿಯಲ್ಲಿ ಏನೂ ಇಲ್ಲ. ಪ್ರಯತ್ನಪಟ್ಟು ರಣದಲ್ಲಿ ಯುದ್ಧಮಾಡಿದರೆ ಇವನು ಭೂಮಿಯ ಸರ್ವಧನ್ವಿಗಳನ್ನೂ ಎದುರಿಸಬಲ್ಲ. ತನ್ನದೇ ಬಾಹುಬಲವನ್ನು ಆಶ್ರಯಿಸಿ ಸೇನೆಗಳನ್ನು ನಿರಾಯಾಸವಾಗಿ ಎದುರಿಸಬಲ್ಲನು.
07102020a ಯಸ್ಯ ಬಾಹುಬಲಂ ಸರ್ವೇ ಸಮಾಶ್ರಿತ್ಯ ಮಹಾತ್ಮನಃ।
07102020c ವನವಾಸಾನ್ನಿವೃತ್ತಾಃ ಸ್ಮ ನ ಚ ಯುದ್ಧೇಷು ನಿರ್ಜಿತಾಃ।।
ಯಾರ ಬಾಹುಬಲವನ್ನು ಆಶ್ರಯಿಸಿ ನಾವೆಲ್ಲರೂ ವನವಾಸವನ್ನು ಪೂರೈಸಿ ಹಿಂದಿರುಗಿದೆವೋ ಆ ಮಹಾತ್ಮನಿಗೆ ಸೋಲೇ ಇಲ್ಲ.
07102021a ಇತೋ ಗತೇ ಭೀಮಸೇನೇ ಸಾತ್ವತಂ ಪ್ರತಿ ಪಾಂಡವೇ।
07102021c ಸನಾಥೌ ಭವಿತಾರೌ ಹಿ ಯುಧಿ ಸಾತ್ವತಫಲ್ಗುನೌ।।
ಈಗ ಸಾತ್ವತನಿರುವಲ್ಲಿಗೆ ಪಾಂಡವ ಭೀಮನು ಹೋದರೆ ಯುದ್ಧದಲ್ಲಿ ಸಾತ್ವತ-ಫಲ್ಗುನರಿಬ್ಬರಿಗೂ ಸಹಾಯಕನಿದ್ದಾನೆಂದಾಗುತ್ತದೆ.
07102022a ಕಾಮಂ ತ್ವಶೋಚನೀಯೌ ತೌ ರಣೇ ಸಾತ್ವತಫಲ್ಗುನೌ।
07102022c ರಕ್ಷಿತೌ ವಾಸುದೇವೇನ ಸ್ವಯಂ ಚಾಸ್ತ್ರವಿಶಾರದೌ।।
ನಿಜವಾಗಿಯೂ ನಾನು ರಣದಲ್ಲಿ ವಾಸುದೇವನಿಂದ ರಕ್ಷಿತ, ಸ್ವಯಂ ಅಸ್ತ್ರವಿಶಾರದ ಸಾತ್ವತ-ಫಲ್ಗುನರ ಕುರಿತು ಚಿಂತಿಸಬಾರದು.
07102023a ಅವಶ್ಯಂ ತು ಮಯಾ ಕಾರ್ಯಮಾತ್ಮನಃ ಶೋಕನಾಶನಂ।
07102023c ತಸ್ಮಾದ್ಭೀಮಂ ನಿಯೋಕ್ಷ್ಯಾಮಿ ಸಾತ್ವತಸ್ಯ ಪದಾನುಗಂ।
07102023e ತತಃ ಪ್ರತಿಕೃತಂ ಮನ್ಯೇ ವಿಧಾನಂ ಸಾತ್ಯಕಿಂ ಪ್ರತಿ।।
ನನ್ನ ಶೋಕವನ್ನು ನಾಶಗೊಳಿಸಿಕೊಳ್ಳಬೇಕಾದುದು ಅವಶ್ಯಕವಾಗಿದೆ. ಆದುದರಿಂದ ಸಾತ್ವತನನ್ನು ಹಿಂಬಾಲಿಸಲು ಭೀಮನನ್ನು ನಿಯೋಜಿಸುತ್ತೇನೆ. ಆಗ ಸಾತ್ಯಕಿಗೆ ಪ್ರತೀಕಾರವನ್ನು ಮಾಡಿದಂತಾಗುತ್ತದೆ ಎಂದು ನನಗನ್ನಿಸುತ್ತದೆ.”
07102024a ಏವಂ ನಿಶ್ಚಿತ್ಯ ಮನಸಾ ಧರ್ಮಪುತ್ರೋ ಯುಧಿಷ್ಠಿರಃ।
07102024c ಯಂತಾರಮಬ್ರವೀದ್ರಾಜನ್ಭೀಮಂ ಪ್ರತಿ ನಯಸ್ವ ಮಾಂ।।
ಹೀಗೆ ಮನಸ್ಸಿನಲ್ಲಿಯೇ ನಿಶ್ಚಯಿಸಿ ಧರ್ಮಪುತ್ರ ಯುಧಿಷ್ಠಿರನು “ನನ್ನನ್ನು ಭೀಮನಿರುವಲ್ಲಿಗೆ ಕರೆದೊಯ್ಯಿ!” ಎಂದು ಸಾರಥಿಗೆ ಹೇಳಿದನು.
07102025a ಧರ್ಮರಾಜವಚಃ ಶ್ರುತ್ವಾ ಸಾರಥಿರ್ಹಯಕೋವಿದಃ।
07102025c ರಥಂ ಹೇಮಪರಿಷ್ಕಾರಂ ಭೀಮಾಂತಿಕಮುಪಾನಯತ್।।
ಧರ್ಮರಾಜನ ಮಾತನ್ನು ಕೇಳಿ ಹಯಕೋವಿದ ಸಾರಥಿಯು ಹೇಮಮಯ ರಥವನ್ನು ಭೀಮಸೇನನ ಬಳಿಗೆ ಕೊಂಡೊಯ್ದನು.
07102026a ಭೀಮಸೇನಮನುಪ್ರಾಪ್ಯ ಪ್ರಾಪ್ತಕಾಲಮನುಸ್ಮರನ್।
07102026c ಕಶ್ಮಲಂ ಪ್ರಾವಿಶದ್ರಾಜಾ ಬಹು ತತ್ರ ಸಮಾದಿಶನ್।।
ಭೀಮಸೇನನ ಬಳಿಸಾರಿ ಸಮಯಕ್ಕೆ ಸರಿಯಾದುದನ್ನು ನೆನಪಿಸಿಕೊಂಡು ಕಳವಳಗೊಂಡು ರಾಜನು ಅಲ್ಲಿ ಅವನಿಗೆ ಬಹುರೀತಿಗಳಲ್ಲಿ ಹೇಳಿಕೊಂಡನು39.
07102027a ಯಃ ಸದೇವಾನ್ಸಗಂಧರ್ವಾನ್ದೈತ್ಯಾಂಶ್ಚೈಕರಥೋಽಜಯತ್।
07102027c ತಸ್ಯ ಲಕ್ಷ್ಮ ನ ಪಶ್ಯಾಮಿ ಭೀಮಸೇನಾನುಜಸ್ಯ ತೇ।।
“ಭೀಮಸೇನ! ಯಾರು ಗಂಧರ್ವ-ದೈತ್ಯರೊಂದಿಗೆ ದೇವತೆಗಳನ್ನು ಕೂಡ ಪರಾಯಜಗೊಳಿಸುತ್ತಾನೋ ಆ ನಿನ್ನ ತಮ್ಮನ ಕುರುಹು ನನಗೆ ಕಾಣುತ್ತಿಲ್ಲ.”
07102028a ತತೋಽಬ್ರವೀದ್ಧರ್ಮರಾಜಂ ಭೀಮಸೇನಸ್ತಥಾಗತಂ।
07102028c ನೈವಾದ್ರಾಕ್ಷಂ ನ ಚಾಶ್ರೌಷಂ ತವ ಕಶ್ಮಲಮೀದೃಶಂ।।
ಹಾಗೆ ಬಂದಿದ್ದ ಧರ್ಮರಾಜನಿಗೆ ಭೀಮಸೇನನು ಹೇಳಿದನು: “ಈ ರೀತಿ ನೀನು ತಳಮಳಗೊಂಡಿರುವುದನ್ನು ನಾನು ಈ ಮೊದಲು ನೋಡಿರಲಿಲ್ಲ ಕೇಳಿರಲಿಲ್ಲ.
07102029a ಪುರಾ ಹಿ ದುಃಖದೀರ್ಣಾನಾಂ ಭವಾನ್ಗತಿರಭೂದ್ಧಿ ನಃ।
07102029c ಉತ್ತಿಷ್ಠೋತ್ತಿಷ್ಠ ರಾಜೇಂದ್ರ ಶಾಧಿ ಕಿಂ ಕರವಾಣಿ ತೇ।।
ಹಿಂದೆ ದುಃಖದಿಂದ ದೀನರಾಗಿದ್ದ ನಮಗೆ ನೀನೇ ಗತಿಯಾಗಿದ್ದೆಯಲ್ಲವೇ? ರಾಜೇಂದ್ರ! ಏಳು! ಎದ್ದೇಳು! ನಿನಗೇನು ಮಾಡಬೇಕು ಹೇಳು!
07102030a ನ ಹ್ಯಸಾಧ್ಯಮಕಾರ್ಯಂ ವಾ ವಿದ್ಯತೇ ಮಮ ಮಾನದ।
07102030c ಆಜ್ಞಾಪಯ ಕುರುಶ್ರೇಷ್ಠ ಮಾ ಚ ಶೋಕೇ ಮನಃ ಕೃಥಾಃ।।
ಮಾನದ! ಏಕೆಂದರೆ ಆಸಾಧ್ಯವೆಂಬ ಯಾವ ಕಾರ್ಯವೂ ನನಗೆ ತಿಳಿಯದು40. ಕುರುಶ್ರೇಷ್ಠ! ಆಜ್ಞಾಪಿಸು! ಮನಸ್ಸನ್ನು ಶೋಕಗೊಳಿಸಬೇಡ41!”
07102031a ತಮಬ್ರವೀದಶ್ರುಪೂರ್ಣಃ ಕೃಷ್ಣಸರ್ಪ ಇವ ಶ್ವಸನ್।
07102031c ಭೀಮಸೇನಮಿದಂ ವಾಕ್ಯಂ ಪ್ರಮ್ಲಾನವದನೋ ನೃಪಃ।।
ಆಗ ಕಣ್ಣೀರುತುಂಬಿದವನಾಗಿ, ಕೃಷ್ಣಸರ್ಪದಂತೆ ನಿಟ್ಟುಸಿರುಬಿಡುತ್ತಾ, ಕಂದಿದ ಮುಖವುಳ್ಳ ನೃಪನು ಭೀಮಸೇನನಿಗೆ ಈ ಮಾತನ್ನಾಡಿದನು.
07102032a ಯಥಾ ಶಂಖಸ್ಯ ನಿರ್ಘೋಷಃ ಪಾಂಚಜನ್ಯಸ್ಯ ಶ್ರೂಯತೇ।
07102032c ಪ್ರೇರಿತೋ ವಾಸುದೇವೇನ ಸಂರಬ್ಧೇನ ಯಶಸ್ವಿನಾ।
07102032e ನೂನಮದ್ಯ ಹತಃ ಶೇತೇ ತವ ಭ್ರಾತಾ ಧನಂಜಯಃ।।
07102033a ತಸ್ಮಿನ್ವಿನಿಹತೇ ನೂನಂ ಯುಧ್ಯತೇಽಸೌ ಜನಾರ್ದನಃ।
ಯಶಸ್ವಿ ವಾಸುದೇವನು ಉದ್ವೇಗದಿಂದ ಊದಿದ ಪಾಂಚಜನ್ಯ ಶಂಖದ ನಿರ್ಘೋಷವು ಕೇಳಿ ಬರುತ್ತಿದೆಯೆಂದರೆ42 ನಿನ್ನ ತಮ್ಮ ಧನಂಜಯನು ಹತನಾಗಿ ಮಲಗಿರಬಹುದೇ? ಅವನು ಹತನಾಗಲು ಜನಾರ್ದನನೇ ಈಗ ಯುದ್ಧಮಾಡುತ್ತಿರಬಹುದು.
07102033c ಯಸ್ಯ ಸತ್ತ್ವವತೋ ವೀರ್ಯಮುಪಜೀವಂತಿ ಪಾಂಡವಾಃ।।
07102034a ಯಂ ಭಯೇಷ್ವಭಿಗಚ್ಚಂತಿ ಸಹಸ್ರಾಕ್ಷಮಿವಾಮರಾಃ।
07102034c ಸ ಶೂರಃ ಸೈಂಧವಪ್ರೇಪ್ಸುರನ್ವಯಾದ್ಭಾರತೀಂ ಚಮೂಂ।।
ಯಾವ ಸತ್ತ್ವವತನ ವೀರ್ಯವನ್ನು ಅವಲಂಬಿಸಿ ಪಾಂಡವರು ಜೀವಿಸುತ್ತಿರುವರೋ, ಭಯವಾದಾಗ ಅಮರರು ಸಹಸ್ರಾಕ್ಷನಲ್ಲಿ ಮೊರೆಹೊಗುವಂತೆ ಯಾರನ್ನು ಪಾಂಡವರು ಮೊರೆಹೊಗುವರೋ ಆ ಶೂರ ಅರ್ಜುನನು ಸೈಂಧವನಿಗಾಗಿ ಭಾರತರ ಸೇನೆಯನ್ನು ಹೊಕ್ಕಿದ್ದಾನೆ.
07102035a ತಸ್ಯ ವೈ ಗಮನಂ ವಿದ್ಮೋ ಭೀಮ ನಾವರ್ತನಂ ಪುನಃ।
07102035c ಶ್ಯಾಮೋ ಯುವಾ ಗುಡಾಕೇಶೋ ದರ್ಶನೀಯೋ ಮಹಾಭುಜಃ।।
07102036a ವ್ಯೂಢೋರಸ್ಕೋ ಮಹಾಸ್ಕಂಧೋ ಮತ್ತದ್ವಿರದವಿಕ್ರಮಃ।
07102036c ಚಕೋರನೇತ್ರಸ್ತಾಮ್ರಾಕ್ಷೋ ದ್ವಿಷತಾಮಘವರ್ಧನಃ।।
ಭೀಮ! ಆ ಶ್ಯಾಮವರ್ಣದ43, ಯುವಕ, ಗುಡಾಕೇಶ44, ಸುಂದರ, ಮಹಾಭುಜ, ವಿಶಾಲ ಎದೆಯ, ಮಹಾಸ್ಕಂಧ, ಮದಿಸಿದ ಆನೆಯ ನಡುಗೆಯುಳ್ಳ45, ಚಕೋರಪಕ್ಷಿಗಳಂಥ ಕಣ್ಣುಗಳುಳ್ಳ, ಎಣ್ಣೆಗೆಂಪಿನ ಕಣ್ಣುಳ್ಳ46, ಶತ್ರುಗಳ ಭಯವನ್ನು ಹೆಚ್ಚಿಸುವ ಅರ್ಜುನನು ಹೋಗಿದ್ದುದು ನಮಗೆ ತಿಳಿದಿದೆ. ಆದರೆ ಅವನು ಪುನಃ ಹಿಂದಿರುಗಿಲ್ಲ.
07102037a ತದಿದಂ ಮಮ ಭದ್ರಂ ತೇ ಶೋಕಸ್ಥಾನಮರಿಂದಮ।
07102037c ಅರ್ಜುನಾರ್ಥಂ ಮಹಾಬಾಹೋ ಸಾತ್ವತಸ್ಯ ಚ ಕಾರಣಾತ್।।
07102038a ವರ್ಧತೇ ಹವಿಷೇವಾಗ್ನಿರಿಧ್ಯಮಾನಃ ಪುನಃ ಪುನಃ।
07102038c ತಸ್ಯ ಲಕ್ಷ್ಮ ನ ಪಶ್ಯಾಮಿ ತೇನ ವಿಂದಾಮಿ ಕಶ್ಮಲಂ।।
ಅರಿಂದಮ! ನಿನಗೆ ಮಂಗಳವಾಗಲಿ! ಇದೇ ನನ್ನ ಶೋಕಕ್ಕೆ ಕಾರಣ. ಮಹಾಬಾಹೋ! ಅರ್ಜುನನಿಗಾಗಿ ಮತ್ತು ಸಾತ್ವತನ ಕಾರಣದಿಂದಾಗಿ ನನ್ನ ಶೋಕವು ತುಪ್ಪದ ಆಹುತಿಯಂತೆ ಹತ್ತಿ ಉರಿಯುವ ಅಗ್ನಿಯಂತೆ ಪುನಃ ಪುನಃ ಹೆಚ್ಚಾಗುತ್ತಿದೆ. ಅವನನ್ನು ಕಾಣದೇ ನಾನು ಶೋಕದಲ್ಲಿ ಮುಳುಗಿಹೋಗಿದ್ದೇನೆ.
07102039a ತಂ ವಿದ್ಧಿ ಪುರುಷವ್ಯಾಘ್ರಂ ಸಾತ್ವತಂ ಚ ಮಹಾರಥಂ।
07102039c ಸ ತಂ ಮಹಾರಥಂ ಪಶ್ಚಾದನುಯಾತಸ್ತವಾನುಜಂ।
07102039e ತಮಪಶ್ಯನ್ಮಹಾಬಾಹುಮಹಂ ವಿಂದಾಮಿ ಕಶ್ಮಲಂ।।
ನಿನ್ನ ಮಹಾರಥ ಅನುಜನನ್ನು ಅನುಸರಿಸಿಹೋದ ಆ ಮಹಾರಥ ಪುರುಷವ್ಯಾಘ್ರ ಮಹಾಬಾಹು ಸಾತ್ವತನನ್ನು ಕೂಡ ಕಾಣದೆ ನಾನು ಶೋಕದಲ್ಲಿ ಮುಳುಗಿಹೋಗಿದ್ದೇನೆ ಎಂದು ತಿಳಿ.
07102040a ತಸ್ಮಾತ್ಕೃಷ್ಣೋ ರಣೇ ನೂನಂ ಯುಧ್ಯತೇ ಯುದ್ಧಕೋವಿದಃ।
07102040c ಯಸ್ಯ ವೀರ್ಯವತೋ ವೀರ್ಯಮುಪಜೀವಂತಿ ಪಾಂಡವಾಃ।।
ಆದುದರಿಂದ ಯಾವ ವೀರ್ಯವತನ ವೀರ್ಯವನ್ನು ಅವಲಂಬಿಸಿ ಪಾಂಡವರು ಜೀವಿಸುತ್ತಿದ್ದಾರೋ ಆ ಯುದ್ಧಕೋವಿದ ಕೃಷ್ಣನೇ ರಣದಲ್ಲಿ ಯುದ್ಧಮಾಡುತ್ತಿರಬೇಕು.
07102041a ಸ ತತ್ರ ಗಚ್ಚ ಕೌಂತೇಯ ಯತ್ರ ಯಾತೋ ಧನಂಜಯಃ।
07102041c ಸಾತ್ಯಕಿಶ್ಚ ಮಹಾವೀರ್ಯಃ ಕರ್ತವ್ಯಂ ಯದಿ ಮನ್ಯಸೇ।
07102041e ವಚನಂ ಮಮ ಧರ್ಮಜ್ಞ ಜ್ಯೇಷ್ಠೋ ಭ್ರಾತಾ ಭವಾಮಿ ತೇ।।
ಕೌಂತೇಯ! ಧರ್ಮಜ್ಞ! ನಿನ್ನ ಹಿರಿಯ ಅಣ್ಣನಾಗಿರುವ ನನ್ನ ಮಾತಿನಂತೆ ಮಾಡಬೇಕೆಂದು ನಿನಗನ್ನಿಸಿದರೆ ಎಲ್ಲಿ ಧನಂಜಯ ಮತ್ತು ಮಹಾವೀರ್ಯ ಸಾತ್ಯಕಿಯರು ಹೋಗಿರುವರೋ ಅಲ್ಲಿಗೆ ಹೋಗು.
07102042a ನ ತೇಽರ್ಜುನಸ್ತಥಾ ಜ್ಞೇಯೋ ಜ್ಞಾತವ್ಯಃ ಸಾತ್ಯಕಿರ್ಯಥಾ।
07102042c ಚಿಕೀರ್ಷುರ್ಮತ್ಪ್ರಿಯಂ ಪಾರ್ಥ ಪ್ರಯಾತಃ ಸವ್ಯಸಾಚಿನಃ।
07102042e ಪದವೀಂ ದುರ್ಗಮಾಂ ಘೋರಾಮಗಮ್ಯಾಮಕೃತಾತ್ಮಭಿಃ।।
ಪಾರ್ಥ! ಸವ್ಯಸಾಚಿಯು ಹೋದ ದುರ್ಗಮವೂ ಘೋರವೂ ಮತ್ತು ಪಳಗಿಲ್ಲದವರು ಹೋಗಲು ಅಸಾಧ್ಯವೂ ಆದ ದಾರಿಯನ್ನು ಅನುಸರಿಸಿ ಹೋಗಿ ಅರ್ಜುನನ ಕುರಿತೂ ಸಾತ್ಯಕಿಯ ಕುರಿತೂ ತಿಳಿದುಕೊಂಡು ನನಗೆ ತಿಳಿಸು. ನನಗೆ ಪ್ರಿಯವಾದ ಈ ಕೆಲಸವನ್ನು ಮಾಡು.”
07102043 ಭೀಮಸೇನ ಉವಾಚ।
07102043a ಬ್ರಹ್ಮೇಶಾನೇಂದ್ರವರುಣಾನವಹದ್ಯಃ ಪುರಾ ರಥಃ।
07102043c ತಮಾಸ್ಥಾಯ ಗತೌ ಕೃಷ್ಣೌ ನ ತಯೋರ್ವಿದ್ಯತೇ ಭಯಂ।।
ಹಿಂದೆ ಬ್ರಹ್ಮ, ಈಶಾನ, ಇಂದ್ರ ಮತ್ತು ವರುಣರು ಏರಿದ್ದ ಆ ರಥವನ್ನು ಏರಿ ಕೃಷ್ಣರಿಬ್ಬರೂ ಹೋಗಿದ್ದಾರೆ. ಅವರಿಗೆ ಭಯವೆಂಬುದೇ ಇಲ್ಲ.
07102044a ಆಜ್ಞಾಂ ತು ಶಿರಸಾ ಬಿಭ್ರದೇಷ ಗಚ್ಚಾಮಿ ಮಾ ಶುಚಃ।
07102044c ಸಮೇತ್ಯ ತಾನ್ನರವ್ಯಾಘ್ರಾಂಸ್ತವ ದಾಸ್ಯಾಮಿ ಸಂವಿದಂ।।
ಆದರೆ ನಿನ್ನ ಆಜ್ಞೆಯನ್ನು ಶಿರಸಾ ವಹಿಸಿ ಅಲ್ಲಿಗೆ ಹೋಗುತ್ತೇನೆ. ಆ ನರವ್ಯಾಘ್ರರನ್ನು ಸೇರಿ ನಿನಗೆ ಸೂಚನೆಯನ್ನು ನೀಡುತ್ತೇನೆ.””
07102045 ಸಂಜಯ ಉವಾಚ।
07102045a ಏತಾವದುಕ್ತ್ವಾ ಪ್ರಯಯೌ ಪರಿದಾಯ ಯುಧಿಷ್ಠಿರಂ।
07102045c ಧೃಷ್ಟದ್ಯುಮ್ನಾಯ ಬಲವಾನ್ಸುಹೃದ್ಭ್ಯಶ್ಚ ಪುನಃ ಪುನಃ।
07102045e ಧೃಷ್ಟದ್ಯುಮ್ನಂ ಚೇದಮಾಹ ಭೀಮಸೇನೋ ಮಹಾಬಲಃ।।
ಸಂಜಯನು ಹೇಳಿದನು: “ಹೀಗೆ ಹೇಳಿ ಬಲವಾನ ಭೀಮಸೇನನು ಯುಧಿಷ್ಠಿರನನ್ನು ಧೃಷ್ಟದ್ಯುಮ್ನ ಮತ್ತು ಇತರ ಸುಹೃದರಿಗೆ ಪುನಃ ಪುನಃ ಒಪ್ಪಿಸುತ್ತಾ ಹೊರಡಲು ಸಿದ್ಧನಾದನು. ಆ ಮಹಾಬಲನು ಧೃಷ್ಟದ್ಯುಮ್ನನಿಗೆ ಹೀಗೆ ಹೇಳಿದನು:
07102046a ವಿದಿತಂ ತೇ ಮಹಾಬಾಹೋ ಯಥಾ ದ್ರೋಣೋ ಮಹಾರಥಃ।
07102046c ಗ್ರಹಣೇ ಧರ್ಮರಾಜಸ್ಯ ಸರ್ವೋಪಾಯೇನ ವರ್ತತೇ।।
“ಮಹಾಬಾಹೋ! ನಿನಗೆ ತಿಳಿದೇ ಇದೆ. ಮಹಾರಥ ದ್ರೋಣನು ಸರ್ವೋಪಾಯಗಳಿಂದ ಧರ್ಮರಾಜನನ್ನು ಬಂಧಿಸುವ ಪ್ರಯತ್ನದಲ್ಲಿದ್ದಾನೆ.
07102047a ನ ಚ ಮೇ ಗಮನೇ ಕೃತ್ಯಂ ತಾದೃಕ್ಪಾರ್ಷತ ವಿದ್ಯತೇ।
07102047c ಯಾದೃಶಂ ರಕ್ಷಣೇ ರಾಜ್ಞಃ ಕಾರ್ಯಮಾತ್ಯಯಿಕಂ ಹಿ ನಃ।।
ಪಾರ್ಷತ! ನನಗೆ ಅಲ್ಲಿಗೆ ಹೋಗುವುದಕ್ಕಿಂತಲೂ ಮಾಡಲಿಕ್ಕೆ ಮುಖ್ಯವಾದುದು ಇಲ್ಲಿದೆ ಎಂದು ತಿಳಿದಿದೆ. ರಾಜನನ್ನು ರಕ್ಷಿಸುವ ಕಾರ್ಯವು ನಮ್ಮೆಲ್ಲರದ್ದೂ ಆಗಿದೆ.
07102048a ಏವಮುಕ್ತೋಽಸ್ಮಿ ಪಾರ್ಥೇನ ಪ್ರತಿವಕ್ತುಂ ಸ್ಮ ನೋತ್ಸಹೇ।
07102048c ಪ್ರಯಾಸ್ಯೇ ತತ್ರ ಯತ್ರಾಸೌ ಮುಮೂರ್ಷುಃ ಸೈಂಧವಃ ಸ್ಥಿತಃ।
07102048e ಧರ್ಮರಾಜಸ್ಯ ವಚನೇ ಸ್ಥಾತವ್ಯಮವಿಶಂಕಯಾ।।
ಆದರೆ ಪಾರ್ಥ ಯುಧಿಷ್ಠಿರನು ಸೈಂಧವನು ಇರುವಲ್ಲಿಗೆ ಹೋಗಬೇಕೆಂದು ಹೇಳಿದ್ದಾನೆ. ಅದಕ್ಕೆ ವಿರುದ್ಧವಾಗಿ ಮಾಡಲು ಮನಸ್ಸಿಲ್ಲ. ಯಾವುದೇ ಶಂಕೆಯಿಲ್ಲದೇ ಧರ್ಮರಾಜನ ಮಾತಿನಂತೆಯೇ ನಡೆದುಕೊಳ್ಳಬೇಕು.
07102049a ಸೋಽದ್ಯ ಯತ್ತೋ ರಣೇ ಪಾರ್ಥಂ ಪರಿರಕ್ಷ ಯುಧಿಷ್ಠಿರಂ।
07102049c ಏತದ್ಧಿ ಸರ್ವಕಾರ್ಯಾಣಾಂ ಪರಮಂ ಕೃತ್ಯಮಾಹವೇ।।
ಆದುದರಿಂದ ನೀನು ರಣದಲ್ಲಿ ಪ್ರಯತ್ನಪೂರ್ವಕವಾಗಿ ಪಾರ್ಥ ಯುಧಿಷ್ಠಿರನನ್ನು ರಕ್ಷಿಸು. ಏಕೆಂದರೆ ಇದೇ ರಣದಲ್ಲಿ ಮಾಡಬೇಕಾದ ಸರ್ವಕಾರ್ಯಗಳಲ್ಲಿ ಅತಿ ಮುಖ್ಯವಾದುದು.”
07102050a ತಮಬ್ರವೀನ್ಮಹಾರಾಜ ಧೃಷ್ಟದ್ಯುಮ್ನೋ ವೃಕೋದರಂ।
07102050c ಈಪ್ಸಿತೇನ ಮಹಾಬಾಹೋ ಗಚ್ಚ ಪಾರ್ಥಾವಿಚಾರಯನ್।।
ಮಹಾರಾಜ! ಆಗ ಧೃಷ್ಟದ್ಯುಮ್ನನು ವೃಕೋದರನಿಗೆ ಹೇಳಿದನು: “ಮಹಾಬಾಹೋ! ಏನನ್ನೂ ವಿಚಾರಿಸದೇ ನೀನು ಇಷ್ಟಪಟ್ಟು47 ಪಾರ್ಥನಲ್ಲಿಗೆ ಹೋಗು.
07102051a ನಾಹತ್ವಾ ಸಮರೇ ದ್ರೋಣೋ ಧೃಷ್ಟದ್ಯುಮ್ನಂ ಕಥಂ ಚನ।
07102051c ನಿಗ್ರಹಂ ಧರ್ಮರಾಜಸ್ಯ ಪ್ರಕರಿಷ್ಯತಿ ಸಂಯುಗೇ।।
ಸಮರದಲ್ಲಿ ಧೃಷ್ಟದ್ಯುಮ್ನನನ್ನು ಸಂಹರಿಸದೇ ದ್ರೋಣನು ಎಂದೂ ರಣದಲ್ಲಿ ಯುಧಿಷ್ಠಿರನನ್ನು ಸೆರೆಹಿಡಿಯಲಾರನು.”
07102052a ತತೋ ನಿಕ್ಷಿಪ್ಯ ರಾಜಾನಂ ಧೃಷ್ಟದ್ಯುಮ್ನಾಯ ಪಾಂಡವಃ।
07102052c ಅಭಿವಾದ್ಯ ಗುರುಂ ಜ್ಯೇಷ್ಠಂ ಪ್ರಯಯೌ ಯತ್ರ ಫಲ್ಗುನಃ।।
ಆಗ ರಾಜನನ್ನು ಧೃಷ್ಟದ್ಯುಮ್ನನಿಗೊಪ್ಪಿಸಿ ಪಾಂಡವ ಭೀಮನು ಗುರು, ಹಿರಿಯಣ್ಣ ಯುಧಿಷ್ಠಿರನಿಗೆ ನಮಸ್ಕರಿಸಿ ಫಲ್ಗುನನಿದ್ದಲ್ಲಿಗೆ ಹೊರಟನು.
07102053a ಪರಿಷ್ವಕ್ತಸ್ತು ಕೌಂತೇಯೋ ಧರ್ಮರಾಜೇನ ಭಾರತ।
07102053c ಆಘ್ರಾತಶ್ಚ ತಥಾ ಮೂರ್ಧ್ನಿ ಶ್ರಾವಿತಶ್ಚಾಶಿಷಃ ಶುಭಾಃ।।
ಭಾರತ! ಕೌಂತೇಯ ಧರ್ಮರಾಜನು ಅವನನ್ನು ಬಿಗಿದಪ್ಪಿ, ನೆತ್ತಿಯನ್ನು ಆಘ್ರಾಣಿಸಿ ಶುಭ ಆಶೀರ್ವಾದಗಳನ್ನಿತ್ತನು.
07102054a ಭೀಮಸೇನೋ ಮಹಾಬಾಹುಃ ಕವಚೀ ಶುಭಕುಂಡಲೀ।
07102054c ಸಾಂಗದಃ ಸತನುತ್ರಾಣಃ ಸಶರೀ ರಥಿನಾಂ ವರಃ।।
ರಥಿಗಳಲ್ಲಿ ಮಹಾಬಾಹು ಭೀಮಸೇನನು ಕವಚವನ್ನು ಧರಿಸಿ, ಶುಭಕುಂಡಲಗಳನ್ನೂ, ಭುಜಕೀರ್ತಿಗಳನ್ನೂ ಧರಿಸಿ, ಕೈಚೀಲಗಳನ್ನು ಹಾಕಿಕೊಂಡನು.
07102055a ತಸ್ಯ ಕಾರ್ಷ್ಣಾಯಸಂ ವರ್ಮ ಹೇಮಚಿತ್ರಂ ಮಹರ್ದ್ಧಿಮತ್।
07102055c ವಿಬಭೌ ಪರ್ವತಶ್ಲಿಷ್ಟಃ ಸವಿದ್ಯುದಿವ ತೋಯದಃ।।
ಕಪ್ಪು ಲೋಹದಿಂದ ಮಾಡಲ್ಪಟ್ಟಿದ್ದ ಅವನ ಕವಚವು ಬಂಗಾರದ ಚಿತ್ರಗಳಿಂದ ಕೂಡಿದ್ದು, ಮಹಾ ಅಮೂಲ್ಯದ್ದಾಗಿತ್ತು. ಅವನ ಮೈಗೆ ಅಂಟಿಕೊಂಡೇ ಇದ್ದ ಅದು ಮಿಂಚಿನಿಂದ ಕೂಡಿದ ಮೇಘದಂತೆ ತೋರುತ್ತಿತ್ತು.
07102056a ಪೀತರಕ್ತಾಸಿತಸಿತೈರ್ವಾಸೋಭಿಶ್ಚ ಸುವೇಷ್ಟಿತಃ।
07102056c ಕಂಠತ್ರಾಣೇನ ಚ ಬಭೌ ಸೇಂದ್ರಾಯುಧ ಇವಾಂಬುದಃ।।
ಹಳದಿ, ಕೆಂಪು, ಕಪ್ಪು ಮತ್ತು ಬಿಳಿಯ ವಸ್ತ್ರಗಳನ್ನು ಧರಿಸಿದ್ದ ಮತ್ತು ಕಂಠತ್ರಾಣವನ್ನು ಧರಿಸಿದ್ದ ಭೀಮಸೇನನು ಕಾಮನಬಿಲ್ಲಿನಿಂದ ಕೂಡಿದ ಮೋಡದಂತೆ ಕಂಗೊಳಿಸಿದನು.
07102057a ಪ್ರಯಾತೇ ಭೀಮಸೇನೇ ತು ತವ ಸೈನ್ಯಂ ಯುಯುತ್ಸಯಾ।
07102057c ಪಾಂಚಜನ್ಯರವೋ ಘೋರಃ ಪುನರಾಸೀದ್ವಿಶಾಂ ಪತೇ।।
ವಿಶಾಂಪತೇ! ಯುದ್ಧೋತ್ಸಾಹದಿಂದ ನಿನ್ನ ಸೇನೆಯ ಕಡೆ ಭೀಮಸೇನನು ಹೊರಡುತ್ತಿರುವ ಪುನಃ ಇನ್ನೊಂದು ಸಲ ಪಾಂಚಜನ್ಯದ ಘೋರ ಧ್ವನಿಯು ಕೇಳಿಸಿತು.
07102058a ತಂ ಶ್ರುತ್ವಾ ನಿನದಂ ಘೋರಂ ತ್ರೈಲೋಕ್ಯತ್ರಾಸನಂ ಮಹತ್।
07102058c ಪುನರ್ಭೀಮಂ ಮಹಾಬಾಹುರ್ಧರ್ಮಪುತ್ರೋಽಭ್ಯಭಾಷತ।।
ಮೂರುಲೋಕಗಳನ್ನೂ ತಲ್ಲಣಿಸುವ ಆ ಘೋರ ನಿನಾದವನ್ನು ಕೇಳಿ ಮಹಾಬಾಹು ಧರ್ಮಪುತ್ರನು ಪುನಃ ಭೀಮನಿಗೆ ಹೇಳಿದನು:
07102059a ಏಷ ವೃಷ್ಣಿಪ್ರವೀರೇಣ ಧ್ಮಾತಃ ಸಲಿಲಜೋ ಭೃಶಂ।
07102059c ಪೃಥಿವೀಂ ಚಾಂತರಿಕ್ಷಂ ಚ ವಿನಾದಯತಿ ಶಂಖರಾಟ್।।
“ಇದು ವೃಷ್ಣಿಪ್ರವೀರ ಕೃಷ್ಣನ ಪಾಂಚಜನ್ಯದ ಧ್ವನಿಯೇ ಹೌದು. ಆ ಶಂಖರಾಜನು ಭೂಮಿ-ಅಂತರಿಕ್ಷಗಳನ್ನು ಮೊಳಗಿಸುತ್ತಿದ್ದಾನೆ.
07102060a ನೂನಂ ವ್ಯಸನಮಾಪನ್ನೇ ಸುಮಹತ್ಸವ್ಯಸಾಚಿನಿ।
07102060c ಕುರುಭಿರ್ಯುಧ್ಯತೇ ಸಾರ್ಧಂ ಸರ್ವೈಶ್ಚಕ್ರಗದಾಧರಃ।।
ಸವ್ಯಸಾಚಿಯು ಮಹಾ ವ್ಯಸನದಲ್ಲಿ ಸಿಲುಕಿಕೊಂಡಿರುವುದರಿಂದಲೇ ಚಕ್ರಗದಾಧರ ಕೃಷ್ಣನೇ ಎಲ್ಲ ಕುರುಗಳೊಂದಿಗೆ ಯುದ್ಧಮಾಡುತ್ತಿದ್ದಾನೆ.
07102061a ನೂನಮಾರ್ಯಾ ಮಹತ್ಕುಂತೀ ಪಾಪಮದ್ಯ ನಿದರ್ಶನಂ।
07102061c ದ್ರೌಪದೀ ಚ ಸುಭದ್ರಾ ಚ ಪಶ್ಯಂತಿ ಸಹ ಬಂಧುಭಿಃ।।
ನಿಶ್ಚಯವಾಗಿಯೂ ಆರ್ಯೆ ಕುಂತಿಯು ಇಂದು ಅನೇಕ ಅಪಶಕುನಗಳನ್ನೇ ಕಂಡಿರಬೇಕು. ದ್ರೌಪದೀ-ಸುಭದ್ರೆಯರೂ ತಮ್ಮ ಬಂಧುಗಳೊಡನೆ ಅವುಗಳನ್ನು ಕಂಡಿರಬಹುದು.
07102062a ಸ ಭೀಮಸ್ತ್ವರಯಾ ಯುಕ್ತೋ ಯಾಹಿ ಯತ್ರ ಧನಂಜಯಃ।
07102062c ಮುಹ್ಯಂತೀವ ಹಿ ಮೇ ಸರ್ವಾ ಧನಂಜಯದಿದೃಕ್ಷಯಾ।
07102062e ದಿಶಃ ಸಪ್ರದಿಶಃ ಪಾರ್ಥ ಸಾತ್ವತಸ್ಯ ಚ ಕಾರಣಾತ್।।
ಆದುದರಿಂದ ಪಾರ್ಥ! ಭೀಮ! ತ್ವರೆಮಾಡಿ ಧನಂಜಯನಿರುವಲ್ಲಿಗೆ ಹೋಗು. ಧನಂಜಯನನ್ನು ನೋಡಲು ಬಯಸಿದ ನನಗೆ ಮತ್ತು ಸಾತ್ವತನ ಕಾರಣದಿಂದಲೂ ಎಲ್ಲ ದಿಕ್ಕು-ಉಪದಿಕ್ಕುಗಳೂ ಅಂಧಕಾರಮಯವಾಗಿ ತೋರುತ್ತಿದೆ.”
07102063a ಗಚ್ಚ ಗಚ್ಚೇತಿ ಚ ಪುನರ್ಭೀಮಸೇನಮಭಾಷತ।
07102063c ಭೃಶಂ ಸ ಪ್ರಹಿತೋ ಭ್ರಾತ್ರಾ ಭ್ರಾತಾ ಭ್ರಾತುಃ ಪ್ರಿಯಂಕರಃ।
07102063e ಆಹತ್ಯ ದುಂದುಭಿಂ ಭೀಮಃ ಶಂಖಂ ಪ್ರಧ್ಮಾಯ ಚಾಸಕೃತ್।।
“ಹೋಗು! ಹೋಗು!” ಎಂದು ಪುನಃ ಅವನು ಭೀಮಸೇನನಿಗೆ ಹೇಳಿದನು. ಅಣ್ಣನಿಗೆ ಪ್ರಿಯವಾದುದನ್ನು ಮಾಡಲು ಹೊರಟ ತಮ್ಮನನ್ನು ಅಣ್ಣನು ಚೆನ್ನಾಗಿ ಬೀಳ್ಕೊಟ್ಟನು. ಹೊರಡುವಾಗ ಭೀಮನು ದುಂದುಭಿಯನ್ನು ಮೊಳಗಿಸಿದನು ಮತ್ತು ಶಂಖವನ್ನು ಊದಿದನು.
07102064a ವಿನದ್ಯ ಸಿಂಹನಾದಂ ಚ ಜ್ಯಾಂ ವಿಕರ್ಷನ್ಪುನಃ ಪುನಃ।
07102064c ದರ್ಶಯನ್ಘೋರಮಾತ್ಮಾನಮಮಿತ್ರಾನ್ಸಹಸಾಭ್ಯಯಾತ್।।
ಸಿಂಹನಾದವನ್ನೂ ಮಾಡಿ ಪುನಃ ಪುನಃ ಧನುಷ್ಟೇಂಕಾರ ಮಾಡುತ್ತಿದ್ದನು. ತನ್ನ ಘೋರರೂಪವನ್ನು ಪ್ರದರ್ಶಿಸುತ್ತಾ ಶತ್ರುಗಳ ಮೇಲೆ ಒಮ್ಮೆಲೇ ಆಕ್ರಮಣಿಸಿದನು.
07102065a ತಮೂಹುರ್ಜವನಾ ದಾಂತಾ ವಿಕುರ್ವಾಣಾ ಹಯೋತ್ತಮಾಃ।
07102065c ವಿಶೋಕೇನಾಭಿಸಂಯತ್ತಾ ಮನೋಮಾರುತರಂಹಸಃ।।
ವಿಶೋಕನೆಂಬ ಸಾರಥಿಯಿಂದ ಸಂಚಾಲಿತವಾದ, ಮನೋವೇಗ-ವಾಯುವೇಗಗಳುಳ್ಳ ಸುಶಿಕ್ಷಿತ ಉತ್ತಮ ಕುದುರೆಗಳು ಸಂತೋಷಸೂಚಕ ಶಬ್ಧಮಾಡುತ್ತಾ ಭೀಮನನ್ನು ಕರೆದೊಯ್ದವು.
07102066a ಆರುಜನ್ವಿರುಜನ್ಪಾರ್ಥೋ ಜ್ಯಾಂ ವಿಕರ್ಷಂಶ್ಚ ಪಾಣಿನಾ।
07102066c ಸೋಽವಕರ್ಷನ್ವಿಕರ್ಷಂಶ್ಚ ಸೇನಾಗ್ರಂ ಸಮಲೋಡಯತ್।।
ಪಾರ್ಥನು ಕೈಯಿಂದ ಧನುಸ್ಸಿನ ಮೌರ್ವಿಯನ್ನು ತೀಡುತ್ತಾ, ಎಳೆಯುತ್ತಾ, ಬಾಣಗಳ ಮಳೆಗರೆಯುತ್ತಾ ಸೇನೆಯ ಅಗ್ರಭಾಗವನ್ನು ಮಥಿಸಿಬಿಟ್ಟನು.
07102067a ತಂ ಪ್ರಯಾಂತಂ ಮಹಾಬಾಹುಂ ಪಾಂಚಾಲಾಃ ಸಹಸೋಮಕಾಃ।
07102067c ಪೃಷ್ಠತೋಽನುಯಯುಃ ಶೂರಾ ಮಘವಂತಮಿವಾಮರಾಃ।।
ಹಾಗೆ ಮುಂದುವರೆಯುತ್ತಿದ್ದ ಮಹಾಬಾಹು ಭೀಮಸೇನನನ್ನು ಇಂದ್ರನನ್ನು ಅಮರರು ಹೇಗೋ ಹಾಗೆ ಶೂರ ಸೋಮಕರೊಂದಿಗೆ ಪಾಂಚಾಲರು ಅವನ ಹಿಂದೆಯೇ ಅನುಸರಿಸಿ ಹೋದರು.
07102068a ತಂ ಸಸೇನಾ ಮಹಾರಾಜ ಸೋದರ್ಯಾಃ ಪರ್ಯವಾರಯನ್।
07102068c ದುಃಶಲಶ್ಚಿತ್ರಸೇನಶ್ಚ ಕುಂಡಭೇದೀ ವಿವಿಂಶತಿಃ।।
07102069a ದುರ್ಮುಖೋ ದುಃಸ್ಸಹಶ್ಚೈವ ವಿಕರ್ಣಶ್ಚ ಶಲಸ್ತಥಾ।
07102069c ವಿಂದಾನುವಿಂದೌ ಸುಮುಖೋ ದೀರ್ಘಬಾಹುಃ ಸುದರ್ಶನಃ।।
07102070a ವೃಂದಾರಕಃ ಸುಹಸ್ತಶ್ಚ ಸುಷೇಣೋ ದೀರ್ಘಲೋಚನಃ।
07102070c ಅಭಯೋ ರೌದ್ರಕರ್ಮಾ ಚ ಸುವರ್ಮಾ ದುರ್ವಿಮೋಚನಃ।।
ಮಹಾರಾಜ! ಅವನನ್ನು ಸೇನಾಸಮೇತರಾಗಿ ದುಃಶಲ, ಚಿತ್ರಸೇನ, ಕುಂಡಭೇದೀ, ವಿವಿಂಶತಿ, ದುರ್ಮುಖ, ದುಃಸ್ಸಹ, ವಿಕರ್ಣ, ಶಲ, ವಿಂದ, ಅನುವಿಂದ, ಸುಮುಖ, ದೀರ್ಘಬಾಹು, ಸುದರ್ಶನ, ವೃಂದಾರಕ, ಸುಹಸ್ತ, ಸುಷೇಣ, ದೀರ್ಘಲೋಚನ, ಅಭಯ, ರೌದ್ರಕರ್ಮ, ಸುವರ್ಮ, ಮತ್ತು ದುರ್ವಿಲೋಚನರು ಸುತ್ತುವರೆದರು.
07102071a ವಿವಿಧೈ ರಥಿನಾಂ ಶ್ರೇಷ್ಠಾಃ ಸಹ ಸೈನ್ಯೈಃ ಸಹಾನುಗೈಃ।
07102071c ಸಂಯತ್ತಾಃ ಸಮರೇ ಶೂರಾ ಭೀಮಸೇನಮುಪಾದ್ರವನ್।।
ಈ ಶೂರ ರಥಶ್ರೇಷ್ಠರು ವಿವಿಧ ಸೇನೆಗಳೊಂದಿಗೆ ಮತ್ತು ಅನುಯಾಯಿಗಳೊಂದಿಗೆ ಸಮರದಲ್ಲಿ ಒಂದಾಗಿ ಭೀಮಸೇನನನ್ನು ಆಕ್ರಮಣಿಸಿದರು.
07102072a ತಾನ್ಸಮೀಕ್ಷ್ಯ ತು ಕೌಂತೇಯೋ ಭೀಮಸೇನಃ ಪರಾಕ್ರಮೀ।
07102072c ಅಭ್ಯವರ್ತತ ವೇಗೇನ ಸಿಂಹಃ ಕ್ಷುದ್ರಮೃಗಾನಿವ।।
ಅವರನ್ನು ನೋಡಿ ಪರಾಕ್ರಮೀ ಕೌಂತೇಯ ಭೀಮಸೇನನು ಸಿಂಹವು ಕ್ಷುದ್ರಮೃಗಗಳನ್ನು ಹೇಗೋ ಹಾಗೆ ವೇಗವಾಗಿ ಅವರ ಮೇಲೆರಗಿದನು.
07102073a ತೇ ಮಹಾಸ್ತ್ರಾಣಿ ದಿವ್ಯಾನಿ ತತ್ರ ವೀರಾ ಅದರ್ಶಯನ್।
07102073c ವಾರಯಂತಃ ಶರೈರ್ಭೀಮಂ ಮೇಘಾಃ ಸೂರ್ಯಮಿವೋದಿತಂ।।
ಆ ವೀರರು ಮಹಾ ದಿವ್ಯಾಸ್ತ್ರಗಳನ್ನು ಪ್ರದರ್ಶಿಸುತ್ತಾ ಉದಯಿಸುತ್ತಿರುವ ಸೂರ್ಯನನ್ನು ಮೇಘಗಳು ಹೇಗೋ ಹಾಗೆ ಭೀಮನನ್ನು ಶರಗಳಿಂದ ತಡೆದರು.
07102074a ಸ ತಾನತೀತ್ಯ ವೇಗೇನ ದ್ರೋಣಾನೀಕಮುಪಾದ್ರವತ್।
07102074c ಅಗ್ರತಶ್ಚ ಗಜಾನೀಕಂ ಶರವರ್ಷೈರವಾಕಿರತ್।।
ವೇಗವಾಗಿ ಅವರನ್ನು ದಾಟಿ ಭೀಮನು ದ್ರೋಣನ ಸೇನೆಯನ್ನು ಆಕ್ರಮಣಿಸಿದನು ಮತ್ತು ಅಲ್ಲಿದ್ದ ಗಜಸೇನೆಯನ್ನು ಶರವರ್ಷಗಳಿಂದ ಮುಚ್ಚಿಬಿಟ್ಟನು.
07102075a ಸೋಽಚಿರೇಣೈವ ಕಾಲೇನ ತದ್ಗಜಾನೀಕಮಾಶುಗೈಃ।
07102075c ದಿಶಃ ಸರ್ವಾಃ ಸಮಭ್ಯಸ್ಯ ವ್ಯಧಮತ್ಪವನಾತ್ಮಜಃ।।
ಸ್ವಲ್ಪವೇ ಸಮಯದಲ್ಲಿ ಆ ಪವನಾತ್ಮಜನು ಆಶುಗಗಳಿಂದ ಆ ಗಜಸೇನೆಯನ್ನು ಎಲ್ಲ ದಿಕ್ಕುಗಳಿಗೂ ಚದುರಿಸಿ ಸಂಹರಿಸಿದನು.
07102076a ತ್ರಾಸಿತಾಃ ಶರಭಸ್ಯೇವ ಗರ್ಜಿತೇನ ವನೇ ಮೃಗಾಃ।
07102076c ಪ್ರಾದ್ರವನ್ದ್ವಿರದಾಃ ಸರ್ವೇ ನದಂತೋ ಭೈರವಾನ್ರವಾನ್।।
ವನದಲ್ಲಿ ಗರ್ಜಿಸುತ್ತಿರುವ ಸಿಂಹಕ್ಕೆ ಹೆದರಿ ಓಡುಹೋಗುವ ಜಿಂಕೆಗಳಂತೆ ಆ ಆನೆಗಳೆಲ್ಲವೂ ಭೈರವ ಕೂಗನ್ನು ಕೂಗಿಕೊಳ್ಳುತ್ತಾ ಓಡಿ ಹೋದವು.
07102077a ಪುನಶ್ಚಾತೀತ್ಯ ವೇಗೇನ ದ್ರೋಣಾನೀಕಮುಪಾದ್ರವತ್।
07102077c ತಮವಾರಯದಾಚಾರ್ಯೋ ವೇಲೇವೋದ್ವೃತ್ತಮರ್ಣವಂ।।
ಅವುಗಳನ್ನು ದಾಟಿ ಪುನಃ ವೇಗದಿಂದ ದ್ರೋಣನ ಸೇನೆಯನ್ನು ಆಕ್ರಮಣಿಸಿದನು. ಮೇಲೇರಿ ಬರುತ್ತಿದ್ದ ಸಮುದ್ರದ ಅಲೆಗಳನ್ನು ದಡವು ತಡೆಯುವಂತೆ ಆಚಾರ್ಯನು ಅವನನ್ನು ತಡೆದನು.
07102078a ಲಲಾಟೇಽತಾಡಯಚ್ಚೈನಂ ನಾರಾಚೇನ ಸ್ಮಯನ್ನಿವ।
07102078c ಊರ್ಧ್ವರಶ್ಮಿರಿವಾದಿತ್ಯೋ ವಿಬಭೌ ತತ್ರ ಪಾಂಡವಃ।।
ದ್ರೋಣನು ನಸುನಗುತ್ತಾ ಭೀಮನ ನೆತ್ತಿಗೆ ನಾರಾಚಗಳಿಂದ ಹೊಡೆಯಲು ಪಾಂಡವನು ಕಿರಣಗಳನ್ನು ಸೂಸುವ ಆದಿತ್ಯನಂತೆ ಕಂಗೊಳಿಸಿದನು.
07102079a ಸ ಮನ್ಯಮಾನಸ್ತ್ವಾಚಾರ್ಯೋ ಮಮಾಯಂ ಫಲ್ಗುನೋ ಯಥಾ।
07102079c ಭೀಮಃ ಕರಿಷ್ಯತೇ ಪೂಜಾಮಿತ್ಯುವಾಚ ವೃಕೋದರಂ।।
ಫಲ್ಗುನನಂತೆ ಭೀಮನೂ ಕೂಡ ತನ್ನನ್ನು ಗೌರವಿಸಿ ಮುಂದುವರೆಯುತ್ತಾನೆಂದು ತಿಳಿದುಕೊಂಡ ಆಚಾರ್ಯನು ವೃಕೋದರನಿಗೆ ಹೀಗೆ ಹೇಳಿದನು.
07102080a ಭೀಮಸೇನ ನ ತೇ ಶಕ್ಯಂ ಪ್ರವೇಷ್ಟುಮರಿವಾಹಿನೀಂ।
07102080c ಮಾಮನಿರ್ಜಿತ್ಯ ಸಮರೇ ಶತ್ರುಮಧ್ಯೇ ಮಹಾಬಲ।।
“ಭೀಮಸೇನ! ಮಹಾಬಲ! ಸಮರದಲ್ಲಿ ಶತ್ರುಗಳ ಮಧ್ಯದಲ್ಲಿ ನನ್ನನ್ನು ಗೆಲ್ಲದೇ ಈ ಅರಿವಾಹಿನಿಯನ್ನು ಪ್ರವೇಶಿಸಲು ಶಕ್ಯನಾಗುವುದಿಲ್ಲ.
07102081a ಯದಿ ತೇ ಸೋಽನುಜಃ ಕೃಷ್ಣಃ ಪ್ರವಿಷ್ಟೋಽನುಮತೇ ಮಮ।
07102081c ಅನೀಕಂ ನ ತು ಶಕ್ಯಂ ಭೋಃ ಪ್ರವೇಷ್ಟುಮಿಹ ವೈ ತ್ವಯಾ।।
ನಿನ್ನ ತಮ್ಮ ಕೃಷ್ಣ ಅರ್ಜುನನು48 ನನ್ನ ಅನುಮತಿಯನ್ನು ಪಡೆದು ಪ್ರವೇಶಿಸಿದನೆಂದರೆ ನಿನಗೆ ಇದನ್ನು ಪ್ರವೇಶಿಸಲು ಸಾಧ್ಯವಿಲ್ಲ!”
07102082a ಅಥ ಭೀಮಸ್ತು ತಚ್ಚ್ರುತ್ವಾ ಗುರೋರ್ವಾಕ್ಯಮಪೇತಭೀಃ।
07102082c ಕ್ರುದ್ಧಃ ಪ್ರೋವಾಚ ವೈ ದ್ರೋಣಂ ರಕ್ತತಾಮ್ರೇಕ್ಷಣಃ ಶ್ವಸನ್।।
ಭೀಮನಾದರೋ ಗುರುವಿನ ಆ ಮಾತನ್ನು ಕೇಳಿ ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ನಿಟ್ಟುಸಿರು ಬಿಡುತ್ತಾ ದ್ರೋಣನಿಗೆ ಹೇಳಿದನು:
07102083a ತವಾರ್ಜುನೋ ನಾನುಮತೇ ಬ್ರಹ್ಮಬಂಧೋ ರಣಾಜಿರಂ।
07102083c ಪ್ರವಿಷ್ಟಃ ಸ ಹಿ ದುರ್ಧರ್ಷಃ ಶಕ್ರಸ್ಯಾಪಿ ವಿಶೇದ್ಬಲಂ।।
“ಬ್ರಹ್ಮಬಂಧೋ! ಅರ್ಜುನನು ನಿನ್ನ ಅನುಮತಿಯನ್ನು ತೆಗೆದುಕೊಂಡು ರಣವನ್ನು ಪ್ರವೇಶಿಸಿಲ್ಲ! ಶಕ್ರನಿಗೂ ದುರ್ಧರ್ಷನಾದ ಅವನು ತನ್ನದೇ ಬಲದಿಂದ ಸೇನೆಯನ್ನು ಪ್ರವೇಶಿಸಿದ್ದಾನೆ.
07102084a ಯೇನ ವೈ ಪರಮಾಂ ಪೂಜಾಂ ಕುರ್ವತಾ ಮಾನಿತೋ ಹ್ಯಸಿ।
07102084c ನಾರ್ಜುನೋಽಹಂ ಘೃಣೀ ದ್ರೋಣ ಭೀಮಸೇನೋಽಸ್ಮಿ ತೇ ರಿಪುಃ।।
ಈ ರೀತಿಯ ಪರಮ ಪೂಜೆಯನ್ನು ಮಾಡಿದನೆಂದರೆ ಅವನು ನಿನ್ನನ್ನು ಗೌರವಿಸುತ್ತಾನೆಂದು ಅರ್ಥ. ಆದರೆ ದ್ರೋಣ! ನಾನು ದಯಾವಂತನಾದ ಅರ್ಜುನನಲ್ಲ. ನಿನ್ನ ಶತ್ರುವಾದ ಭೀಮಸೇನ!
07102085a ಪಿತಾ ನಸ್ತ್ವಂ ಗುರುರ್ಬಂಧುಸ್ತಥಾ ಪುತ್ರಾ ಹಿ ತೇ ವಯಂ।
07102085c ಇತಿ ಮನ್ಯಾಮಹೇ ಸರ್ವೇ ಭವಂತಂ ಪ್ರಣತಾಃ ಸ್ಥಿತಾಃ।।
ನಾವು ನಿನ್ನನ್ನು ನಮ್ಮ ತಂದೆ, ಗುರು ಮತ್ತು ಬಂಧುವೆಂದೂ ಹಾಗೆಯೇ ನಾವು ನಿನ್ನ ಮಕ್ಕಳೆಂದೂ ಎಲ್ಲರೂ ತಿಳಿದುಕೊಂಡು ಬಂದಿದ್ದೆವು ಮತ್ತು ನಿನಗೆ ನಮಸ್ಕರಿಸಿ ನಿಲ್ಲುತ್ತಿದ್ದೆವು.
07102086a ಅದ್ಯ ತದ್ವಿಪರೀತಂ ತೇ ವದತೋಽಸ್ಮಾಸು ದೃಶ್ಯತೇ।
07102086c ಯದಿ ಶತ್ರುಂ ತ್ವಮಾತ್ಮಾನಂ ಮನ್ಯಸೇ ತತ್ತಥಾಸ್ತ್ವಿಹ।
07102086e ಏಷ ತೇ ಸದೃಶಂ ಶತ್ರೋಃ ಕರ್ಮ ಭೀಮಃ ಕರೋಮ್ಯಹಂ।।
ಆದರೆ ಈಗ ನೀನು ನಮ್ಮೊಡನೆ ಮಾತನಾಡುವುದನ್ನು ನೋಡಿದರೆ ಅವೆಲ್ಲವೂ ಬದಲಾದಂತಿವೆ. ನೀನು ನಮ್ಮನ್ನು ಶತ್ರುವೆಂದು ತಿಳಿದುಕೊಂಡಿದ್ದರೆ ಅದು ಹಾಗೆಯೇ ಆಗಲಿ. ಇಗೋ ಶತ್ರುವಾದ ಭೀಮನು ಏನನ್ನು ಮಾಡಬೇಕೋ ಅದನ್ನು ನಾನು ಮಾಡುತ್ತೇನೆ.”
07102087a ಅಥೋದ್ಭ್ರಾಮ್ಯ ಗದಾಂ ಭೀಮಃ ಕಾಲದಂಡಮಿವಾಂತಕಃ।
07102087c ದ್ರೋಣಾಯಾವಸೃಜದ್ರಾಜನ್ಸ ರಥಾದವಪುಪ್ಲುವೇ।।
ಇದನ್ನು ಹೇಳಿದ ಕೂಡಲೇ ಭೀಮನು ಅಂತಕನು ಕಾಲದಂಡವನ್ನು ಹೇಗೋ ಹಾಗೆ ಗದೆಯನ್ನು ದ್ರೋಣನಮೇಲೆ ಎಸೆದನು. ಆದರೆ ಅಷ್ಟರಲ್ಲಿಯೇ ದ್ರೋಣನು ರಥದಿಂದ ಕೆಳಕ್ಕೆ ಹಾರಿಕೊಂಡುಬಿಟ್ಟಿದ್ದನು.
07102088a ಸಾಶ್ವಸೂತಧ್ವಜಂ ಯಾನಂ ದ್ರೋಣಸ್ಯಾಪೋಥಯತ್ತದಾ।
07102088c ಪ್ರಾಮೃದ್ನಾಚ್ಚ ಬಹೂನ್ಯೋಧಾನ್ವಾಯುರ್ವೃಕ್ಷಾನಿವೌಜಸಾ।।
ಆ ಗದೆಯು ದ್ರೋಣನ ರಥವನ್ನು ಕುದುರೆ-ಸಾರಥಿಗಳೊಂದಿಗೆ ಅಪ್ಪಳಿಸಿ ವಾಯುವು ಓಜಸ್ಸಿನಿಂದ ಮರಗಳನ್ನು ಕಡಿದುರುಳಿಸುವಂತೆ ಅನೇಕ ಯೋಧರನ್ನು ಅಪ್ಪಳಿಸಿ ಬೀಳಿಸಿತು.
07102089a ತಂ ಪುನಃ ಪರಿವವ್ರುಸ್ತೇ ತವ ಪುತ್ರಾ ರಥೋತ್ತಮಂ।
07102089c ಅನ್ಯಂ ಚ ರಥಮಾಸ್ಥಾಯ ದ್ರೋಣಃ ಪ್ರಹರತಾಂ ವರಃ।।
ಪುನಃ ಆ ರಥೋತ್ತಮ ಭೀಮನನ್ನು ನಿನ್ನ ಪುತ್ರರು ಆವರಿಸಿದರು. ಪ್ರಹಾರಿಗಳಲ್ಲಿ ಶ್ರೇಷ್ಠ ದ್ರೋಣನು ಇನ್ನೊಂದು ರಥವನ್ನೇರಿದನು.
07102090a ತತಃ ಕ್ರುದ್ಧೋ ಮಹಾರಾಜ ಭೀಮಸೇನಃ ಪರಾಕ್ರಮೀ।
07102090c ಅಗ್ರತಃ ಸ್ಯಂದನಾನೀಕಂ ಶರವರ್ಷೈರವಾಕಿರತ್।।
ಮಹಾರಾಜ! ಆಗ ಕ್ರುದ್ಧ ಪರಾಕ್ರಮೀ ಭೀಮನು ಮುಂದಿದ್ದ ಆ ರಥಸೇನೆಯನ್ನು ಶರವರ್ಷಗಳಿಂದ ಮುಚ್ಚಿಬಿಟ್ಟನು.
07102091a ತೇ ವಧ್ಯಮಾನಾಃ ಸಮರೇ ತವ ಪುತ್ರಾ ಮಹಾರಥಾಃ।
07102091c ಭೀಮಂ ಭೀಮಬಲಂ ಯುದ್ಧೇಽಯೋಧಯಂಸ್ತು ಜಯೈಷಿಣಃ।।
ಸಮರದಲ್ಲಿ ಅವನನ್ನು ಹೊಡೆಯುತ್ತಿದ್ದ ನಿನ್ನ ಮಹಾರಥ ಪುತ್ರರು ಜಯವನ್ನೇ ಬಯಸಿ ಭೀಮನೊಂದಿಗೆ ಭೀಮಬಲದಿಂದ ಯುದ್ಧದಲ್ಲಿ ಹೋರಾಡತೊಡಗಿದರು.
07102092a ತತೋ ದುಃಶಾಸನಃ ಕ್ರುದ್ಧೋ ರಥಶಕ್ತಿಂ ಸಮಾಕ್ಷಿಪತ್।
07102092c ಸರ್ವಪಾರಶವೀಂ ತೀಕ್ಷ್ಣಾಂ ಜಿಘಾಂಸುಃ ಪಾಂಡುನಂದನಂ।।
ಆಗ ಕ್ರುದ್ಧ ದುಃಶಾಸನನು ಪಾಂಡುನಂದನ ಭೀಮನನ್ನು ಸಂಹರಿಲೋಸುಗ, ಎಲ್ಲ ಲೋಹಮಯವಾದ, ತೀಕ್ಷ್ಣ ರಥಶಕ್ತಿಯನ್ನು ಅವನ ಮೇಲೆ ಎಸೆದನು.
07102093a ಆಪತಂತೀಂ ಮಹಾಶಕ್ತಿಂ ತವ ಪುತ್ರಪ್ರಚೋದಿತಾಂ।
07102093c ದ್ವಿಧಾ ಚಿಚ್ಚೇದ ತಾಂ ಭೀಮಸ್ತದದ್ಭುತಮಿವಾಭವತ್।।
ನಿನ್ನ ಪುತ್ರನು ಪ್ರಯೋಗಿಸಿದ ಆ ಮಹಾಶಕ್ತಿಯು ಬೀಳುತ್ತಿರಲು ಭೀಮನು ಅದನ್ನು ಎರಡಾಗಿ ಕತ್ತರಿಸಿದನು. ಅದೊಂದು ಅದ್ಭುತವಾಗಿತ್ತು.
07102094a ಅಥಾನ್ಯೈರ್ನಿಶಿತೈರ್ಬಾಣೈಃ ಸಂಕ್ರುದ್ಧಃ ಕುಂಡಭೇದಿನಂ।
07102094c ಸುಷೇಣಂ ದೀರ್ಘನೇತ್ರಂ ಚ ತ್ರಿಭಿಸ್ತ್ರೀನವಧೀದ್ಬಲೀ।।
ಕೂಡಲೆ ಬಲೀ ಭೀಮನು ಸಂಕ್ರುದ್ಧನಾಗಿ ಕುಂಡಭೇದಿ, ಸುಷೇಣ ಮತ್ತು ದೀರ್ಘನೇತ್ರ ಈ ಮೂವರನ್ನು ಮೂರು ಮೂರು ಅನ್ಯ ನಿಶಿತ ಬಾಣಗಳಿಂದ ವಧಿಸಿದನು.
07102095a ತತೋ ವೃಂದಾರಕಂ ವೀರಂ ಕುರೂಣಾಂ ಕೀರ್ತಿವರ್ಧನಂ।
07102095c ಪುತ್ರಾಣಾಂ ತವ ವೀರಾಣಾಂ ಯುಧ್ಯತಾಮವಧೀತ್ಪುನಃ।।
07102096a ಅಭಯಂ ರೌದ್ರಕರ್ಮಾಣಂ ದುರ್ವಿಮೋಚನಮೇವ ಚ।
07102096c ತ್ರಿಭಿಸ್ತ್ರೀನವಧೀದ್ಭೀಮಃ ಪುನರೇವ ಸುತಾಂಸ್ತವ।।
ಅನಂತರ ಪುನಃ ಕುರುಗಳ ಕೀರ್ತಿವರ್ಧನ ವೀರ ವೃಂದಾರಕನನ್ನು ಕೊಂದು ಯುದ್ಧಮಾಡುತ್ತಿರುವ ನಿನ್ನ ವೀರ ಪುತ್ರರಾದ ಅಭಯ, ರೌದ್ರಕರ್ಮ, ಮತ್ತು ದುರ್ವಿಮೋಚನ ಈ ಮೂವರನ್ನು ಮೂರು ಮೂರು ಬಾಣಗಳಿಂದ ಭೀಮನು ಸಂಹರಿಸಿದನು.
07102097a ವಧ್ಯಮಾನಾ ಮಹಾರಾಜ ಪುತ್ರಾಸ್ತವ ಬಲೀಯಸಾ।
07102097c ಭೀಮಂ ಪ್ರಹರತಾಂ ಶ್ರೇಷ್ಠಂ ಸಮಂತಾತ್ಪರ್ಯವಾರಯನ್।।
ಮಹಾರಾಜ! ವಧಿಸಲ್ಪಡುತ್ತಿದ್ದ ನಿನ್ನ ಪುತ್ರರು ಬಲವನ್ನುಪಯೋಗಿಸಿ ಪ್ರಹರಿಗಳಲ್ಲಿ ಶ್ರೇಷ್ಠ ಭೀಮನನ್ನು ಎಲ್ಲ ಕಡೆಗಳಿಂದ ಸುತ್ತುವರೆದರು.
07102098a ವಿಂದಾನುವಿಂದೌ ಸಹಿತೌ ಸುವರ್ಮಾಣಂ ಚ ತೇ ಸುತಂ।
07102098c ಪ್ರಹಸನ್ನಿವ ಕೌಂತೇಯಃ ಶರೈರ್ನಿನ್ಯೇ ಯಮಕ್ಷಯಂ।।
ಆಗ ಒಟ್ಟಿಗೇ ಇದ್ದ ವಿಂದಾನುವಿಂದರನ್ನೂ, ನಿನ್ನ ಇನ್ನೊಬ್ಬ ಮಗ ಸುವರ್ಮನನ್ನೂ ನಗುತ್ತಾ ಕೌಂತೇಯನು ಶರಗಳಿಂದ ಯಮಕ್ಷಯಕ್ಕೆ ಕಳುಹಿಸಿದನು.
07102099a ತತಃ ಸುದರ್ಶನಂ ವೀರಂ ಪುತ್ರಂ ತೇ ಭರತರ್ಷಭ।
07102099c ವಿವ್ಯಾಧ ಸಮರೇ ತೂರ್ಣಂ ಸ ಪಪಾತ ಮಮಾರ ಚ।।
ಅನಂತರ ಭರತರ್ಷಭ! ಭೀಮನು ಸಮರದಲ್ಲಿ ನಿನ್ನ ವೀರ ಪುತ್ರ ಸುದರ್ಶನನ್ನೂ ಹೊಡೆದನು. ತಕ್ಷಣವೇ ಅವನು ಬಿದ್ದು ಮರಣಹೊಂದಿದನು.
07102100a ಸೋಽಚಿರೇಣೈವ ಕಾಲೇನ ತದ್ರಥಾನೀಕಮಾಶುಗೈಃ।
07102100c ದಿಶಃ ಸರ್ವಾಃ ಸಮಭ್ಯಸ್ಯ ವ್ಯಧಮತ್ಪಾಂಡುನಂದನಃ।।
ಹೀಗೆ ಪಾಂಡುನಂದನನು ಸ್ವಲ್ಪವೇ ಸಮಯದಲ್ಲಿ ಆ ರಥಸೇನೆಯನ್ನು ಆಶುಗಗಳಿಂದ ಎಲ್ಲ ದಿಕ್ಕುಗಳಲ್ಲಿ ಚದುರಿಸಿ ಸಂಹರಿಸಿದನು.
07102101a ತತೋ ವೈ ರಥಘೋಷೇಣ ಗರ್ಜಿತೇನ ಮೃಗಾ ಇವ।
07102101c ವಧ್ಯಮಾನಾಶ್ಚ ಸಮರೇ ಪುತ್ರಾಸ್ತವ ವಿಶಾಂ ಪತೇ।
07102101e ಪ್ರಾದ್ರವನ್ಸರಥಾಃ ಸರ್ವೇ ಭೀಮಸೇನಭಯಾರ್ದಿತಾಃ।।
ವಿಶಾಂಪತೇ! ಆಗ ರಥಘೋಷದಿಂದ ಗರ್ಜಿಸಿ ಮೃಗಗಳಂತೆ ವಧಿಸಲ್ಪಡುತ್ತಿದ್ದ ನಿನ್ನ ಮಕ್ಕಳೆಲ್ಲರೂ ಭೀಮಸೇನನ ಭಯದಿಂದ ಪೀಡಿತರಾಗಿ ರಥಗಳೊಂದಿಗೆ ಸಮರದಿಂದ ಪಲಾಯನಗೈದರು.
07102102a ಅನುಯಾಯ ತು ಕೌಂತೇಯಃ ಪುತ್ರಾಣಾಂ ತೇ ಮಹದ್ಬಲಂ।
07102102c ವಿವ್ಯಾಧ ಸಮರೇ ರಾಜನ್ಕೌರವೇಯಾನ್ಸಮಂತತಃ।।
ರಾಜನ್! ಕೌಂತೇಯನು ನಿನ್ನ ಪುತ್ರ ಕೌರವೇಯರ ಆ ಮಹಾಸೇನೆಯನ್ನು ಸಮರದ ಎಲ್ಲಕಡೆ ಅಟ್ಟಿಸಿಕೊಂಡು ಹೋಗಿ ಸಂಹರಿಸಿದನು.
07102103a ವಧ್ಯಮಾನಾ ಮಹಾರಾಜ ಭೀಮಸೇನೇನ ತಾವಕಾಃ।
07102103c ತ್ಯಕ್ತ್ವಾ ಭೀಮಂ ರಣೇ ಯಾಂತಿ ಚೋದಯಂತೋ ಹಯೋತ್ತಮಾನ್।।
ಮಹಾರಾಜ! ಭೀಮಸೇನನಿಂದ ವಧಿಸಲ್ಪಡುತ್ತಿದ್ದ ನಿನ್ನವರು ರಣದಲ್ಲಿ ಭೀಮನನ್ನು ಬಿಟ್ಟು ಅವರು ಉತ್ತಮ ಕುದುರೆಗಳನ್ನು ಪುಸಲಾಯಿಸುತ್ತಾ ಓಡಿ ಹೋಗುತ್ತಿದ್ದರು.
07102104a ತಾಂಸ್ತು ನಿರ್ಜಿತ್ಯ ಸಮರೇ ಭೀಮಸೇನೋ ಮಹಾಬಲಃ।
07102104c ಸಿಂಹನಾದರವಂ ಚಕ್ರೇ ಬಾಹುಶಬ್ದಂ ಚ ಪಾಂಡವಃ।।
ಸಮರದಲ್ಲಿ ಅವರನ್ನು ಸೋಲಿಸಿ ಮಹಾಬಲ ಪಾಂಡವ ಭೀಮಸೇನನು ಸಿಂಹನಾದಗೈದನು ಮತ್ತು ಬಾಹುಗಳನ್ನು ತಟ್ಟಿ ಶಬ್ಧಮಾಡಿದನು.
07102105a ತಲಶಬ್ದಂ ಚ ಸುಮಹತ್ಕೃತ್ವಾ ಭೀಮೋ ಮಹಾಬಲಃ।
07102105c ವ್ಯತೀತ್ಯ ರಥಿನಶ್ಚಾಪಿ ದ್ರೋಣಾನೀಕಮುಪಾದ್ರವತ್।।
ಜೋರಾಗಿ ಚಪ್ಪಾಳೆಗಳ ಶಬ್ಧವನ್ನು ಮಾಡುತ್ತಾ ಮಹಾಬಲ ಭೀಮನು ರಥಿಗಳನ್ನೂ ದಾಟಿ ದ್ರೋಣನ ಸೇನೆಯನ್ನು ಆಕ್ರಮಣಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಭಿಮಸೇನಪ್ರವೇಶೇ ಭೀಮಪರಾಕ್ರಮೇ ದ್ವಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಭೀಮಸೇನಪ್ರವೇಶೇ ಭೀಮಪರಾಕ್ರಮ ಎನ್ನುವ ನೂರಾಎರಡನೇ ಅಧ್ಯಾಯವು.