101 ದ್ರೋಣಪರಾಕ್ರಮಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಜಯದ್ರಥವಧ ಪರ್ವ

ಅಧ್ಯಾಯ 101

ಸಾರ

ದ್ರೋಣನು ಕೇಕಯದ ಬೃಹತ್ಕ್ಷತ್ರನನ್ನು ವಧಿಸಿದುದು (1-21). ದ್ರೋಣನು ಚೇದಿರಾಜ ಧೃಷ್ಟಕೇತುವನ್ನು ಸಂಹರಿಸಿದುದು (22-37). ಧೃಷ್ಟಕೇತುವಿನ ಮಗ, ಜರಾಸಂಧನ ಮಗ ಮತ್ತು ಧೃಷ್ಟದ್ಯುಮ್ನನ ಮಗ ಕ್ಷತ್ರಧರ್ಮನನ್ನು ಸಂಹರಿಸಿ ದ್ರೋಣನು ಚೇಕಿತಾನನನ್ನು ಪರಾಜಯಗೊಳಿಸಿದುದು (38-74).

07101001 ಸಂಜಯ ಉವಾಚ।
07101001a ಅಪರಾಹ್ಣೇ ಮಹಾರಾಜ ಸಂಗ್ರಾಮಃ ಸಮಪದ್ಯತ।
07101001c ಪರ್ಜನ್ಯಸಮನಿರ್ಘೋಷಃ ಪುನರ್ದ್ರೋಣಸ್ಯ ಸೋಮಕೈಃ।।

ಸಂಜಯನು ಹೇಳಿದನು: “ಮಹಾರಾಜ! ಆ ದಿನದ ಅಪರಾಹ್ಣದಲ್ಲಿ ದ್ರೋಣ ಮತ್ತು ಸೋಮಕರ ನಡುವೆ ಮೋಡಗಳ ಗುಡುಗಿನಂತೆ ಮೊಳಗುತ್ತಿರುವ ಸಂಗ್ರಾಮವು ಪುನಃ ನಡೆಯಿತು.

07101002a ಶೋಣಾಶ್ವಂ ರಥಮಾಸ್ಥಾಯ ನರವೀರಃ ಸಮಾಹಿತಃ।
07101002c ಸಮರೇಽಭ್ಯದ್ರವತ್ಪಾಂಡೂನ್ಜವಮಾಸ್ಥಾಯ ಮಧ್ಯಮಂ।।

ಆ ನರವೀರನು ಸಮರದಲ್ಲಿ ಸಮಾಹಿತನಾಗಿ ಕೆಂಪು ಕುದುರೆಗಳನ್ನು ಕಟ್ಟಿದ್ದ ರಥವನ್ನೇರಿ ಮಧ್ಯಮ ವೇಗವನ್ನು ಬಳಸಿ ಪಾಂಡವರನ್ನು ಆಕ್ರಮಣಿಸಿದನು.

07101003a ತವ ಪ್ರಿಯಹಿತೇ ಯುಕ್ತೋ ಮಹೇಷ್ವಾಸೋ ಮಹಾಬಲಃ।
07101003c ಚಿತ್ರಪುಂಖೈಃ ಶಿತೈರ್ಬಾಣೈಃ ಕಲಶೋತ್ತಮಸಂಭವಃ।।
07101004a ವರಾನ್ವರಾನ್ ಹಿ ಯೋಧಾನಾಂ ವಿಚಿನ್ವನ್ನಿವ ಭಾರತ।
07101004c ಅಕ್ರೀಡತ ರಣೇ ರಾಜನ್ಭಾರದ್ವಾಜಃ ಪ್ರತಾಪವಾನ್।।

ಭಾರತ! ರಾಜನ್! ನಿನ್ನ ಪ್ರಿಯ-ಹಿತಗಳಲ್ಲಿ ನಿರತನಾದ ಆ ಮಹೇಷ್ವಾಸ ಮಹಾಬಲ ಕಲಶೋತ್ತಮಸಂಭವ ಪ್ರತಾಪವಾನ್ ಭಾರದ್ವಾಜನು ರಣದಲ್ಲಿ ಆಟವಾಡುತ್ತಿರುವನೋ ಎಂಬಂತೆ ಬಣ್ಣದ ಪುಂಖಗಳುಳ್ಳ ನಿಶಿತ ಬಾಣಗಳಿಂದ ಶ್ರೇಷ್ಠ ಶ್ರೇಷ್ಠ ಯೋಧರನ್ನು ತುಂಡರಿಸಿದನು.

07101005a ತಮಭ್ಯಯಾದ್ಬೃಹತ್ಕ್ಷತ್ರಃ ಕೇಕಯಾನಾಂ ಮಹಾರಥಃ।
07101005c ಭ್ರಾತೄಣಾಂ ವೀರಪಂಚಾನಾಂ ಜ್ಯೇಷ್ಠಃ ಸಮರಕರ್ಕಶಃ।।

ಆಗ ಕೇಕಯರ ಮಹಾರಥ ಐವರು ಸಹೋದರರ ವೀರ ಜ್ಯೇಷ್ಠ, ಸಮರ ಕರ್ಕಶ ಬೃಹತ್ಕ್ಷತ್ರನು ದ್ರೋಣನನ್ನು ಎದುರಿಸಿದನು.

07101006a ವಿಮುಂಚನ್ವಿಶಿಖಾಂಸ್ತೀಕ್ಷ್ಣಾನಾಚಾರ್ಯಂ ಚಾದಯನ್ಭೃಶಂ।
07101006c ಮಹಾಮೇಘೋ ಯಥಾ ವರ್ಷಂ ವಿಮುಂಚನ್ಗಂಧಮಾದನೇ।।

ತೀಕ್ಷ್ಣವಾದ ವಿಶಿಖಗಳನ್ನು ಬಿಡುತ್ತಾ ಅವನು ಮಹಾಮೇಘವು ಗಂಧಮಾದನ ಪರ್ವತದ ಮೇಲೆ ಮಳೆಸುರಿಸುವಂತೆ ಆಚಾರ್ಯನ ಮೇಲೆ ಸುರಿಸಿ ಮುಚ್ಚಿಬಿಟ್ಟನು.

07101007a ತಸ್ಯ ದ್ರೋಣೋ ಮಹಾರಾಜ ಸ್ವರ್ಣಪುಂಖಾಂ ಶಿಲಾಶಿತಾನ್।
07101007c ಪ್ರೇಷಯಾಮಾಸ ಸಂಕ್ರುದ್ಧಃ ಸಾಯಕಾನ್ದಶ ಸಪ್ತ ಚ।।

ಮಹಾರಾಜ! ಕ್ರುದ್ಧನಾದ ದ್ರೋಣನು ಅವನ ಮೇಲೆ ಸ್ವರ್ಣಪುಂಖಗಳುಳ್ಳ, ಕಲ್ಲಿನ ಮೇಲೆ ಮಸೆದ ಹದಿನೇಳು ಸಾಯಕಗಳನ್ನು ಪ್ರಯೋಗಿಸಿದನು.

07101008a ತಾಂಸ್ತು ದ್ರೋಣಧನುರ್ಮುಕ್ತಾನ್ಘೋರಾನಾಶೀವಿಷೋಪಮಾನ್।
07101008c ಏಕೈಕಂ ದಶಭಿರ್ಬಾಣೈರ್ಯುಧಿ ಚಿಚ್ಚೇದ ಹೃಷ್ಟವತ್।।

ಯುದ್ಧದಲ್ಲಿ ದ್ರೋಣನು ಬಿಟ್ಟ ಆ ಘೋರ ಸರ್ಪದ ವಿಷಗಳಂತಿರುವ ಒಂದೊಂದು ಬಾಣಗಳನ್ನೂ ಬೃಹತ್ಕ್ಷತ್ರನು ಸಂತೋಷದಿಂದ ಹತ್ತು ಬಾಣಗಳಿಂದ ಕತ್ತರಿಸಿದನು.

07101009a ತಸ್ಯ ತಲ್ಲಾಘವಂ ದೃಷ್ಟ್ವಾ ಪ್ರಹಸನ್ದ್ವಿಜಸತ್ತಮಃ।
07101009c ಪ್ರೇಷಯಾಮಾಸ ವಿಶಿಖಾನಷ್ಟೌ ಸನ್ನತಪರ್ವಣಃ।।

ಅವನ ಆ ಕೈಚಳಕವನ್ನು ನೋಡಿ ನಕ್ಕ ದ್ವಿಜಸತ್ತಮನು ಎಂಟು ಸನ್ನತಪರ್ವ ವಿಶಿಖಗಳನ್ನು ಪ್ರಯೋಗಿಸಿದನು.

07101010a ತಾನ್ದೃಷ್ಟ್ವಾ ಪತತಃ ಶೀಘ್ರಂ ದ್ರೋಣಚಾಪಚ್ಯುತಾಂ ಶರಾನ್।
07101010c ಅವಾರಯಚ್ಚರೈರೇವ ತಾವದ್ಭಿರ್ನಿಶಿತೈರ್ದೃಢೈಃ।।

ದ್ರೋಣನಿಂದ ಬಿಡಲ್ಪಟ್ಟ ಆ ಶರಗಳು ಬೀಳುವುದನ್ನು ನೋಡಿ ಬೃಹತ್ಕ್ಷತ್ರನು ಅವುಗಳನ್ನು ದೃಢ ನಿಶಿತ ಶರಗಳಿಂದಲೇ ತಡೆದುಬಿಟ್ಟನು.

07101011a ತತೋಽಭವನ್ಮಹಾರಾಜ ತವ ಸೈನ್ಯಸ್ಯ ವಿಸ್ಮಯಃ।
07101011c ಬೃಹತ್ಕ್ಷತ್ರೇಣ ತತ್ಕರ್ಮ ಕೃತಂ ದೃಷ್ಟ್ವಾ ಸುದುಷ್ಕರಂ।।

ಮಹಾರಾಜ! ಆಗ ಬೃಹತ್ಕ್ಷತ್ರನು ಮಾಡಿದ ಆ ಸುದುಷ್ಕರ ಕೆಲಸವನ್ನು ನೋಡಿ ನಿನ್ನ ಸೈನ್ಯವು ವಿಸ್ಮಯಗೊಂಡಿತು.

07101012a ತತೋ ದ್ರೋಣೋ ಮಹಾರಾಜ ಕೇಕಯಂ ವೈ ವಿಶೇಷಯನ್।
07101012c ಪ್ರಾದುಶ್ಚಕ್ರೇ ರಣೇ ದಿವ್ಯಂ ಬ್ರಾಹ್ಮಮಸ್ತ್ರಂ ಮಹಾತಪಾಃ।।

ಮಹಾರಾಜ! ಆಗ ಮಹಾತಪ ದ್ರೋಣನು ರಣದಲ್ಲಿ ಕೇಕಯನನ್ನು ಮೀರಿಸುತ್ತಾ ದಿವ್ಯ ಬ್ರಹ್ಮಾಸ್ತ್ರವನ್ನು ಹೂಡಿ ಪ್ರಯೋಗಿಸಿದನು.

07101013a ತದಸ್ಯ ರಾಜನ್ಕೈಕೇಯಃ ಪ್ರತ್ಯವಾರಯದಚ್ಯುತಃ।
07101013c ಬ್ರಾಹ್ಮೇಣೈವ ಮಹಾಬಾಹುರಾಹವೇ ಸಮುದೀರಿತಂ।।

ರಾಜನ್! ಮಹಾಬಾಹು ಅಚ್ಯುತ ಕೈಕೇಯನು ರಣದಲ್ಲಿ ಅದನ್ನು ತಿರುಗಿ ಬ್ರಹ್ಮಾಸ್ತ್ರದಿಂದಲೇ ತಡೆದನು.

07101014a ಪ್ರತಿಹನ್ಯ ತದಸ್ತ್ರಂ ತು ಭಾರದ್ವಾಜಸ್ಯ ಸಂಯುಗೇ।
07101014c ವಿವ್ಯಾಧ ಬ್ರಾಹ್ಮಣಂ ಷಷ್ಟ್ಯಾ ಸ್ವರ್ಣಪುಂಖೈಃ ಶಿಲಾಶಿತೈಃ।।

ಸಂಯುಗದಲ್ಲಿ ಭಾರದ್ವಾಜನ ಆ ಅಸ್ತ್ರವನ್ನು ಪ್ರತಿಸಂಹರಿಸಿ ಬೃಹತ್ಕ್ಷತ್ರನು ಆ ಬ್ರಾಹ್ಮಣನನ್ನು ಅರವತ್ತು ಸ್ವರ್ಣಪುಂಖ ಶಿಲಾಶಿತಗಳಿಂದ ಹೊಡೆದನು.

07101015a ತಂ ದ್ರೋಣೋ ದ್ವಿಪದಾಂ ಶ್ರೇಷ್ಠೋ ನಾರಾಚೇನ ಸಮರ್ಪಯತ್।
07101015c ಸ ತಸ್ಯ ಕವಚಂ ಭಿತ್ತ್ವಾ ಪ್ರಾವಿಶದ್ಧರಣೀತಲಂ।।

ದ್ವಿಪದರಲ್ಲಿ ಶ್ರೇಷ್ಠ ದ್ರೋಣನು ಅವನನ್ನು ನಾರಾಚದಿಂದ ಹೊಡೆಯಲು ಅದು ಅವನ ಕವಚವನ್ನು ಭೇದಿಸಿ ಧರಣೀತಲವನ್ನು ಪ್ರವೇಶಿಸಿತು.

07101016a ಕೃಷ್ಣಸರ್ಪೋ ಯಥಾ ಮುಕ್ತೋ ವಲ್ಮೀಕಂ ನೃಪಸತ್ತಮ।
07101016c ತಥಾಭ್ಯಗಾನ್ಮಹೀಂ ಬಾಣೋ ಭಿತ್ತ್ವಾ ಕೈಕೇಯಮಾಹವೇ।।

ನೃಪಸತ್ತಮ! ಕೃಷ್ಣಸರ್ಪವು ಹೇಗೆ ಹುತ್ತದಿಂದ ಹೊರಬರುತ್ತದೆಯೋ ಹಾಗೆ ಆಹವದಲ್ಲಿ ಆ ಬಾಣವು ಕೈಕೇಯನನ್ನು ಭೇದಿಸಿ ಭೂಮಿಯನ್ನು ಹೊಕ್ಕಿತು.

07101017a ಸೋಽತಿವಿದ್ಧೋ ಮಹಾರಾಜ ದ್ರೋಣೇನಾಸ್ತ್ರವಿದಾ ಭೃಶಂ।
07101017c ಕ್ರೋಧೇನ ಮಹತಾವಿಷ್ಟೋ ವ್ಯಾವೃತ್ಯ ನಯನೇ ಶುಭೇ।।
07101018a ದ್ರೋಣಂ ವಿವ್ಯಾಧ ಸಪ್ತತ್ಯಾ ಸ್ವರ್ಣಪುಂಖೈಃ ಶಿಲಾಶಿತೈಃ।
07101018c ಸಾರಥಿಂ ಚಾಸ್ಯ ಭಲ್ಲೇನ ಬಾಹ್ವೋರುರಸಿ ಚಾರ್ಪಯತ್।।

ಮಹಾರಾಜ! ಅಸ್ತ್ರವಿದ ದ್ರೋಣನಿಂದ ಹಾಗೆ ತುಂಬಾ ಗಾಯಗೊಂಡ ಬೃಹತ್ಕ್ಷತ್ರನು ಮಹಾ ಕ್ರೋಧದಿಂದ ಆವಿಷ್ಟನಾಗಿ ಶುಭನಯನಗಳನ್ನು ತಿರುಗಿಸುತ್ತಾ ದ್ರೋಣನನ್ನು ಎಪ್ಪತ್ತು ಸ್ವರ್ಣಪುಂಖ ಶಿಲಾಶಿತಗಳಿಂದ ಹೊಡೆದನು ಮತ್ತು ಭಲ್ಲದಿಂದ ಅವನ ಸಾರಥಿಯ ಬಾಹು-ಎದೆಗಳಿಗೆ ಹೊಡೆದನು.

07101019a ದ್ರೋಣಸ್ತು ಬಹುಧಾ ವಿದ್ಧೋ ಬೃಹತ್ಕ್ಷತ್ರೇಣ ಮಾರಿಷ।
07101019c ಅಸೃಜದ್ವಿಶಿಖಾಂಸ್ತೀಕ್ಷ್ಣಾನ್ಕೇಕಯಸ್ಯ ರಥಂ ಪ್ರತಿ।।

ಮಾರಿಷ! ಬೃಹತ್ಕ್ಷತ್ರನಿಂದ ಬಹುವಾಗಿ ಗಾಯಗೊಂಡ ದ್ರೋಣನಾದರೋ ಕೇಕಯನ ರಥದ ಮೇಲೆ ತೀಕ್ಷ್ಣ ವಿಶಿಖಗಳನ್ನು ಬಿಟ್ಟನು.

07101020a ವ್ಯಾಕುಲೀಕೃತ್ಯ ತಂ ದ್ರೋಣೋ ಬೃಹತ್ಕ್ಷತ್ರಂ ಮಹಾರಥಂ।
07101020c ವ್ಯಸೃಜತ್ಸಾಯಕಂ ತೀಕ್ಷ್ಣಂ ಕೇಕಯಂ ಪ್ರತಿ ಭಾರತ।।

ಭಾರತ! ಮಹಾರಥ ಬೃಹತ್ಕ್ಷತ್ರನನ್ನು ವ್ಯಾಕುಲಗೊಳಿಸಿ ದ್ರೋಣನು ಕೇಕಯನ ಮೇಲೆ ತೀಕ್ಷ್ಣ ಸಾಯಕವನ್ನು ಪ್ರಯೋಗಿಸಿದನು.

07101021a ಸ ಗಾಢವಿದ್ಧಸ್ತೇನಾಶು ಮಹಾರಾಜ ಸ್ತನಾಂತರೇ।
07101021c ರಥಾತ್ಪುರುಷಶಾರ್ದೂಲಃ ಸಂಭಿನ್ನಹೃದಯೋಽಪತತ್।।

ಮಹಾರಾಜ! ಅದು ಅವನ ಎದೆಯನ್ನು ಗಾಢವಾಗಿ ಚುಚ್ಚಿಕೊಳ್ಳಲು ಪುರುಷಶಾರ್ದೂಲ ಬೃಹತ್ಕ್ಷತ್ರನು ಹೃದಯವು ಒಡೆದು ರಥದಿಂದ ಕೆಳಕ್ಕೆ ಬಿದ್ದನು.

07101022a ಬೃಹತ್ಕ್ಷತ್ರೇ ಹತೇ ರಾಜನ್ಕೇಕಯಾನಾಂ ಮಹಾರಥೇ।
07101022c ಶೈಶುಪಾಲಿಃ ಸುಸಂಕ್ರುದ್ಧೋ ಯಂತಾರಮಿದಮಬ್ರವೀತ್।।

ರಾಜನ್! ಕೇಕಯರ ಮಹಾರಥ ಬೃಹತ್ಕ್ಷತ್ರನು ಹತನಾಗಲು ಶಿಶುಪಾಲನ ಮಗ ಧೃಷ್ಟಕೇತುವು ಸುಸಂಕ್ರುದ್ಧನಾಗಿ ತನ್ನ ಸಾರಥಿಗೆ ಹೇಳಿದನು:

07101023a ಸಾರಥೇ ಯಾಹಿ ಯತ್ರೈಷ ದ್ರೋಣಸ್ತಿಷ್ಠತಿ ದಂಶಿತಃ।
07101023c ವಿನಿಘ್ನನ್ಕೇಕಯಾನ್ಸರ್ವಾನ್ಪಾಂಚಾಲಾನಾಂ ಚ ವಾಹಿನೀಂ।।

“ಸಾರಥೇ! ಕೇಕಯರೆಲ್ಲರನ್ನೂ ಮತ್ತು ಪಾಂಚಾಲರ ವಾಹಿನಿಯನ್ನೂ ಸಂಹರಿಸಿ ಕವಚಧರಿಸಿದ ದ್ರೋಣನು ಎಲ್ಲಿ ನಿಂತಿರುವನೋ ಅಲ್ಲಿಗೆ ರಥವನ್ನೊಯ್ಯಿ!”

07101024a ತಸ್ಯ ತದ್ವಚನಂ ಶ್ರುತ್ವಾ ಸಾರಥೀ ರಥಿನಾಂ ವರಂ।
07101024c ದ್ರೋಣಾಯ ಪ್ರಾಪಯಾಮಾಸ ಕಾಂಬೋಜೈರ್ಜವನೈರ್ಹಯೈಃ।।

ಅವನ ಆ ಮಾತನ್ನು ಕೇಳಿ ಸಾರಥಿಯು ರಥಿಗಳಲ್ಲಿ ಶ್ರೇಷ್ಠ ಧೃಷ್ಟಕೇತುವನ್ನು ಕಾಂಬೋಜದ ವೇಗಯುಕ್ತ ಕುದುರೆಗಳ ಸಹಾಯದಿಂದ ದ್ರೋಣನಿದ್ದಲ್ಲಿಗೆ ತಲುಪಿಸಿದನು.

07101025a ಧೃಷ್ಟಕೇತುಶ್ಚ ಚೇದೀನಾಂ ಋಷಭೋಽತಿಬಲೋದಿತಃ।
07101025c ಸಹಸಾ ಪ್ರಾಪತದ್ದ್ರೋಣಂ ಪತಂಗ ಇವ ಪಾವಕಂ।।

ಚೇದಿಗಳ ವೃಷಭ, ಅತಿಬಲೋದಿತ ಧೃಷ್ಟಕೇತುವಾದರೋ ಬೆಂಕಿಯನ್ನು ಹೊಗುವ ಪತಂಗದಂತೆ ಒಮ್ಮೆಲೇ ದ್ರೊಣನ ಮೇಲೆ ಎರಗಿದನು.

07101026a ಸೋಽಭ್ಯವಿಧ್ಯತ್ತತೋ ದ್ರೋಣಂ ಷಷ್ಟ್ಯಾ ಸಾಶ್ವರಥಧ್ವಜಂ।
07101026c ಪುನಶ್ಚಾನ್ಯೈಃ ಶರೈಸ್ತೀಕ್ಷ್ಣೈಃ ಸುಪ್ತಂ ವ್ಯಾಘ್ರಂ ತುದನ್ನಿವ।।

ಅಶ್ವ-ರಥ-ಧ್ವಜಗಳೊಂದಿಗೆ ದ್ರೋಣನನ್ನು ಅರವತ್ತು ಬಾಣಗಳಿಂದ ಹೊಡೆದು ಅವನು ಮಲಗಿರುವ ಹುಲಿಯನ್ನು ತಿವಿದು ಎಬ್ಬಿಸುವಂತೆ ಪುನಃ ಇತರ ತೀಕ್ಷ್ಣ ಶರಗಳಿಂದ ಹೊಡೆದನು.

07101027a ತಸ್ಯ ದ್ರೋಣೋ ಧನುರ್ಮಧ್ಯೇ ಕ್ಷುರಪ್ರೇಣ ಶಿತೇನ ಹ।
07101027c ಚಿಚ್ಚೇದ ರಾಜ್ಞೋ ಬಲಿನೋ ಯತಮಾನಸ್ಯ ಸಂಯುಗೇ।।

ಆಗ ಸಂಯುಗದಲ್ಲಿ ಹೋರಾಡುತ್ತಿದ್ದ ರಾಜರಲ್ಲಿಯೇ ಬಲಶಾಲೀ ಧೃಷ್ಟಕೇತುವಿನ ಧನುಸ್ಸನ್ನು ಮಧ್ಯದಲ್ಲಿಯೇ ದ್ರೋಣನು ತುಂಡರಿಸಿದನು.

07101028a ಅಥಾನ್ಯದ್ಧನುರಾದಾಯ ಶೈಶುಪಾಲಿರ್ಮಹಾರಥಃ।
07101028c ವಿವ್ಯಾಧ ಸಾಯಕೈರ್ದ್ರೋಣಂ ಪುನಃ ಸುನಿಶಿತೈರ್ದೃಢೈಃ।।

ಆಗ ಮಹಾರಥ ಶೈಶುಪಾಲಿಯು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಪುನಃ ದ್ರೋಣನನ್ನು ನಿಶಿತ ದೃಢ ಸಾಯಕಗಳಿಂದ ಹೊಡೆದನು.

07101029a ತಸ್ಯ ದ್ರೋಣೋ ಹಯಾನ್ ಹತ್ವಾ ಸಾರಥಿಂ ಚ ಮಹಾಬಲಃ।
07101029c ಅಥೈನಂ ಪಂಚವಿಂಶತ್ಯಾ ಸಾಯಕಾನಾಂ ಸಮಾರ್ಪಯತ್।।

ಮಹಾಬಲ ದ್ರೋಣನು ಅವನ ಕುದುರೆಗಳನ್ನೂ ಸಾರಥಿಯನ್ನೂ ಸಂಹರಿಸಿ, ಧೃಷ್ಟಕೇತುವಿನ ಮೇಲೆ ಇಪ್ಪತ್ತೈದು ಸಾಯಕಗಳನ್ನು ಪ್ರಯೋಗಿಸಿದನು.

07101030a ವಿರಥೋ ವಿಧನುಷ್ಕಶ್ಚ ಚೇದಿರಾಜೋಽಪಿ ಸಂಯುಗೇ।
07101030c ಗದಾಂ ಚಿಕ್ಷೇಪ ಸಂಕ್ರುದ್ಧೋ ಭಾರದ್ವಾಜರಥಂ ಪ್ರತಿ।।

ರಣದಲ್ಲಿ ರಥ-ಧನುಸ್ಸುಗಳನ್ನು ಕಳೆದುಕೊಂಡ ಚೇದಿರಾಜನೂ ಕೂಡ ಸಂಕ್ರುದ್ಧನಾಗಿ ಭಾರಧ್ವಾಜನ ರಥದ ಮೇಲೆ ಗದೆಯನ್ನು ಎಸೆದನು.

07101031a ತಾಮಾಪತಂತೀಂ ಸಹಸಾ ಘೋರರೂಪಾಂ ಭಯಾವಹಾಂ।
07101031c ಅಶ್ಮಸಾರಮಯೀಂ ಗುರ್ವೀಂ ತಪನೀಯವಿಭೂಷಿತಾಂ।
07101031e ಶರೈರನೇಕಸಾಹಸ್ರೈರ್ಭಾರದ್ವಾಜೋ ನ್ಯಪಾತಯತ್।।

ಒಮ್ಮೆಲೇ ಬೀಳುತ್ತಿರುವ ಆ ಘೋರರೂಪದ ಭಯಾವಹ ಉಕ್ಕಿನಿಂದ ಮಾಡಲ್ಪಟ್ಟ ಬಂಗಾರದಿಂದ ವಿಭೂಷಿತ ಭಾರ ಗದೆಯನ್ನು ಭಾರದ್ವಾಜನು ಒಂದೇ ಶರದಿಂದ ಸಹಸ್ರ ಚೂರುಗಳನ್ನಾಗಿಸಿ ಬೀಳಿಸಿದನು.

07101032a ಸಾ ಪಪಾತ ಗದಾ ಭೂಮೌ ಭಾರದ್ವಾಜೇನ ಸಾದಿತಾ।
07101032c ರಕ್ತಮಾಲ್ಯಾಂಬರಧರಾ ತಾರೇವ ನಭಸಸ್ತಲಾತ್।।

ಭಾರದ್ವಾಜನಿಂದ ಒಡೆಯಲ್ಪಟ್ಟ ಆ ಗದೆಯು ಕೆಂಪುಮಾಲೆಯನ್ನು ಧರಿಸಿದ ತಾರೆಯು ನಭಸ್ತಲದಿಂದ ಬೀಳುವಂತೆ ಭೂಮಿಯ ಮೇಲೆ ಬಿದ್ದಿತು.

07101033a ಗದಾಂ ವಿನಿಹತಾಂ ದೃಷ್ಟ್ವಾ ಧೃಷ್ಟಕೇತುರಮರ್ಷಣಃ।
07101033c ತೋಮರಂ ವ್ಯಸೃಜತ್ತೂರ್ಣಂ ಶಕ್ತಿಂ ಚ ಕನಕೋಜ್ಜ್ವಲಾಂ।।

ಗದೆಯು ನಾಶವಾದುದನ್ನು ನೋಡಿ ಅಮರ್ಷಣ ಧೃಷ್ಟಕೇತುವು ತಕ್ಷಣವೇ ಬಂಗಾರದಂತೆ ಪ್ರಜ್ವಲಿಸುತ್ತಿದ್ದ ತೋಮರ ಶಕ್ತಿಯನ್ನು ಎಸೆದನು.

07101034a ತೋಮರಂ ತು ತ್ರಿಭಿರ್ಬಾಣೈರ್ದ್ರೋಣಶ್ಚಿತ್ತ್ವಾ ಮಹಾಮೃಧೇ।
07101034c ಶಕ್ತಿಂ ಚಿಚ್ಚೇದ ಸಹಸಾ ಕೃತಹಸ್ತೋ ಮಹಾಬಲಃ।।

ದ್ರೋಣನಾದರೋ ಮಹಾರಣದಲ್ಲಿ ಆ ತೋಮರವನ್ನು ಮೂರು ಬಾಣಗಳಿಂದ ತುಂಡರಿಸಿ ಕೂಡಲೇ ಪಳಗಿದ ಕೈಯಿದ್ದ ಆ ಮಹಾಬಲನು ಶಕ್ತಿಯನ್ನೂ ಕತ್ತರಿಸಿದನು.

07101035a ತತೋಽಸ್ಯ ವಿಶಿಖಂ ತೀಕ್ಷ್ಣಂ ವಧಾರ್ಥಂ ವಧಕಾಂಕ್ಷಿಣಃ।
07101035c ಪ್ರೇಷಯಾಮಾಸ ಸಮರೇ ಭಾರದ್ವಾಜಃ ಪ್ರತಾಪವಾನ್।।

ಆಗ ಧೃಷ್ಟಕೇತುವಿನ ವಧೆಯನ್ನು ಬಯಸಿದ ಪ್ರತ್ಮವಾನ್ ಭಾರದ್ವಾಜನು ಸಮರದಲ್ಲಿ ಅವನ ವಧೆಗೋಸ್ಕರ ತೀಕ್ಷ್ಣ ವಿಶಿಖವನ್ನು ಪ್ರಯೋಗಿಸಿದನು.

07101036a ಸ ತಸ್ಯ ಕವಚಂ ಭಿತ್ತ್ವಾ ಹೃದಯಂ ಚಾಮಿತೌಜಸಃ।
07101036c ಅಭ್ಯಗಾದ್ಧರಣೀಂ ಬಾಣೋ ಹಂಸಃ ಪದ್ಮಸರೋ ಯಥಾ।।

ಆ ಅಮಿತೌಜಸ ಬಾಣವು ಅವನ ಕವಚವನ್ನು ಭೇದಿಸಿ ಹೃದಯವನ್ನು ಸೀಳಿ ಹಂಸವು ಪದ್ಮಸರೋವರವನ್ನು ಹೇಗೋ ಹಾಗೆ ಭೂಮಿಯನ್ನು ಸೇರಿತು.

07101037a ಪತಂಗಂ ಹಿ ಗ್ರಸೇಚ್ಚಾಷೋ ಯಥಾ ರಾಜನ್ಬುಭುಕ್ಷಿತಃ।
07101037c ತಥಾ ದ್ರೋಣೋಽಗ್ರಸಚ್ಚೂರೋ ಧೃಷ್ಟಕೇತುಂ ಮಹಾಮೃಧೇ।।

ರಾಜನ್! ಹಸಿದ ಹಲ್ಲಿಯು ಪತಂಗವನ್ನು ಹೇಗೆ ನುಂಗಿಬಿಡುತ್ತದೆಯೋ ಹಾಗೆ ಆ ಮಹಾರಣದಲ್ಲಿ ಶೂರ ದ್ರೋಣನು ಧೃಷ್ಟಕೇತುವನ್ನು ನುಂಗಿಬಿಟ್ಟನು.

07101038a ನಿಹತೇ ಚೇದಿರಾಜೇ ತು ತತ್ಖಂಡಂ ಪಿತ್ರ್ಯಮಾವಿಶತ್।
07101038c ಅಮರ್ಷವಶಮಾಪನ್ನಃ ಪುತ್ರೋಽಸ್ಯ ಪರಮಾಸ್ತ್ರವಿತ್।।

ಚೇದಿರಾಜನು ಹೀಗೆ ಹತನಾಗಲು ಪರಮಾಸ್ತ್ರಗಳನ್ನು ತಿಳಿದಿದ್ದ ಅವನ ಮಗನು ತುಂಬಾ ಕೋಪದಿಂದ ಆವೇಶಗೊಂಡು ತಂದೆಯನ್ನು ಸಂಹರಿಸಿದ ದ್ರೋಣನನ್ನು ಆಕ್ರಮಣಿಸಿದನು.

07101039a ತಮಪಿ ಪ್ರಹಸನ್ದ್ರೋಣಃ ಶರೈರ್ನಿನ್ಯೇ ಯಮಕ್ಷಯಂ।
07101039c ಮಹಾವ್ಯಾಘ್ರೋ ಮಹಾರಣ್ಯೇ ಮೃಗಶಾವಂ ಯಥಾ ಬಲೀ।।

ಮಹಾರಣ್ಯದಲ್ಲಿ ಮಹಾವ್ಯಾಘ್ರವೊಂದು ಜಿಂಕೆಯ ಮರಿಯನ್ನು ಹೇಗೋ ಹಾಗೆ ಬಲಶಾಲೀ ದ್ರೋಣನು ಶರಗಳಿಂದ ಅವನನ್ನು ಯಮಲೋಕಕ್ಕೆ ಕಳುಹಿಸಿದನು.

07101040a ತೇಷು ಪ್ರಕ್ಷೀಯಮಾಣೇಷು ಪಾಂಡವೇಯೇಷು ಭಾರತ।
07101040c ಜರಾಸಂಧಸುತೋ ವೀರಃ ಸ್ವಯಂ ದ್ರೋಣಮುಪಾದ್ರವತ್।।

ಭಾರತ! ಪಾಂಡವರ ಸೇನೆಯು ಹಾಗೆ ಕ್ಷೀಣವಾಗುತ್ತಿರಲು ಜರಾಸಂಧನ ವೀರ ಮಗನು ಸ್ವಯಂ ತಾನೇ ದ್ರೋಣನನ್ನು ಆಕ್ರಮಣಿಸಿದನು.

07101041a ಸ ತು ದ್ರೋಣಂ ಮಹಾರಾಜ ಚಾದಯನ್ಸಾಯಕೈಃ ಶಿತೈಃ।
07101041c ಅದೃಶ್ಯಮಕರೋತ್ತೂರ್ಣಂ ಜಲದೋ ಭಾಸ್ಕರಂ ಯಥಾ।।

ಮಹಾರಾಜ! ಅವನಾದರೋ ಕೂಡಲೇ ದ್ರೋಣನನ್ನು ಹರಿತ ಸಾಯಕಗಳಿಂದ ಮುಚ್ಚಿ ಮೋಡವು ಸೂರ್ಯನನ್ನು ಹೇಗೋ ಹಾಗೆ ಅವನನ್ನು ಕಾಣದಂತಾಗಿಸಿಬಿಟ್ಟನು.

07101042a ತಸ್ಯ ತಲ್ಲಾಘವಂ ದೃಷ್ಟ್ವಾ ದ್ರೋಣಃ ಕ್ಷತ್ರಿಯಮರ್ದನಃ।
07101042c ವ್ಯಸೃಜತ್ಸಾಯಕಾಂಸ್ತೂರ್ಣಂ ಶತಶೋಽಥ ಸಹಸ್ರಶಃ।।

ಅವನ ಕೈಚಳಕವನ್ನು ನೋಡಿ ಕ್ಷತ್ರಿಯಮರ್ದನ ದ್ರೋಣನು ಕೂಡಲೇ ಅವನ ಮೇಲೆ ನೂರಾರು ಸಹಸ್ರಾರು ಸಾಯಕಗಳನ್ನು ಪ್ರಯೋಗಿಸಿದನು.

07101043a ಚಾದಯಿತ್ವಾ ರಣೇ ದ್ರೋಣೋ ರಥಸ್ಥಂ ರಥಿನಾಂ ವರಂ।
07101043c ಜಾರಾಸಂಧಿಮಥೋ ಜಘ್ನೇ ಮಿಷತಾಂ ಸರ್ವಧನ್ವಿನಾಂ।।

ರಣದಲ್ಲಿ ರಥವನ್ನೇರಿದ್ದ ರಥಿಗಳಲ್ಲಿ ಶ್ರೇಷ್ಠ ಜರಾಸಂಧನ ಮಗನನ್ನು36 ಸರ್ವಧನ್ವಿಗಳೂ ನೋಡುತ್ತಿರುವಂತೆಯೇ ದ್ರೋಣನು ಸಂಹರಿಸಿದನು.

07101044a ಯೋ ಯಃ ಸ್ಮ ಲೀಯತೇ ದ್ರೋಣಂ ತಂ ತಂ ದ್ರೋಣೋಽಂತಕೋಪಮಃ।
07101044c ಆದತ್ತ ಸರ್ವಭೂತಾನಿ ಪ್ರಾಪ್ತೇ ಕಾಲೇ ಯಥಾಂತಕಃ।।

ಅಂತ್ಯವು ಪ್ರಾಪ್ತವಾದಾಗ ಸರ್ವಭೂತಗಳನ್ನೂ ಅಂತಕನು ಹೇಗೆ ನುಂಗುವನೋ ಹಾಗೆ ಅಂತಕನಂತಿದ್ದ ದ್ರೋಣನು ತನ್ನನ್ನು ಯಾರ್ಯಾರು ಎದುರಿಸಿದರೋ ಅವರೆಲ್ಲರನ್ನೂ ಸಂಹರಿಸಿಬಿಟ್ಟನು.

07101045a ತತೋ ದ್ರೋಣೋ ಮಹೇಷ್ವಾಸೋ ನಾಮ ವಿಶ್ರಾವ್ಯ ಸಂಯುಗೇ।
07101045c ಶರೈರನೇಕಸಾಹಸ್ರೈಃ ಪಾಂಡವೇಯಾನ್ವ್ಯಮೋಹಯತ್।।

ಆಗ ಮಹೇಷ್ವಾಸ ದ್ರೋಣನು ರಣದಲ್ಲಿ ತನ್ನ ಹೆಸರನ್ನು ಕೂಗಿ ಕೇಳಿಸುತ್ತಾ ಅನೇಕ ಸಹಸ್ರ ಶರಗಳಿಂದ ಪಾಂಡವೇಯರನ್ನು ಮೂರ್ಛೆಗೊಳಿಸಿದನು.

07101046a ತತೋ ದ್ರೋಣಾಂಕಿತಾ ಬಾಣಾಃ ಸ್ವರ್ಣಪುಂಖಾಃ ಶಿಲಾಶಿತಾಃ।
07101046c ನರಾನ್ನಾಗಾನ್ ಹಯಾಂಶ್ಚೈವ ನಿಜಘ್ನುಃ ಸರ್ವತೋ ರಣೇ।।

ಆಗ ಸ್ವರ್ಣಪುಂಖಗಳ ದ್ರೋಣಾಂಕಿತ ಶಿಲಾಶಿತ ಬಾಣಗಳು ರಣದ ಎಲ್ಲಕಡೆ ಮನುಷ್ಯರನ್ನು, ಆನೆಗಳನ್ನು ಮತ್ತು ಕುದುರೆಗಳನ್ನೂ ಸಂಹರಿಸಿದವು.

07101047a ತೇ ವಧ್ಯಮಾನಾ ದ್ರೋಣೇನ ಶಕ್ರೇಣೇವ ಮಹಾಸುರಾಃ।
07101047c ಸಮಕಂಪಂತ ಪಾಂಚಾಲಾ ಗಾವಃ ಶೀತಾರ್ದಿತಾ ಇವ।।

ಶಕ್ರನ ಆಕ್ರಮಣಕ್ಕೊಳಗಾದ ಮಹಾಸುರರಂತೆ ದ್ರೋಣನಿಂದ ವಧಿಸಲ್ಪಡುತ್ತಿದ್ದ ಪಾಂಚಾಲರು, ಛಳಿಯಿಂದ ಪೀಡಿತ ಗೋವುಗಳಂತೆ ನಡುಗತೊಡಗಿದರು.

07101048a ತತೋ ನಿಷ್ಟಾನಕೋ ಘೋರಃ ಪಾಂಡವಾನಾಮಜಾಯತ।
07101048c ದ್ರೋಣೇನ ವಧ್ಯಮಾನೇಷು ಸೈನ್ಯೇಷು ಭರತರ್ಷಭ।।

ಭರತರ್ಷಭ! ದ್ರೋಣನಿಂದ ವಧಿಸಲ್ಪಡುತ್ತಿರುವ ಪಾಂಡವರ ಸೇನೆಗಳಲ್ಲಿ ಘೋರ ಆಕ್ರಂದನವು ಕೇಳಿ ಬಂದಿತು.

07101049a ಮೋಹಿತಾಃ ಶರವರ್ಷೇಣ ಭಾರದ್ವಾಜಸ್ಯ ಸಂಯುಗೇ।
07101049c ಊರುಗ್ರಾಹಗೃಹೀತಾ ಹಿ ಪಾಂಚಾಲಾನಾಂ ಮಹಾರಥಾಃ।।

ಸಂಯುಗದಲ್ಲಿ ಭಾರದ್ವಾಜನ ಶರವರ್ಷಗಳಿಂದ ಪೀಡಿತರಾದ ಪಾಂಚಾಲ ಮಹಾರಥರು ಮೊಸಳೆಯ ಬಾಯಿಗೆ ಸಿಕ್ಕ ತೊಡೆಗಳುಳ್ಳವರಂತೆ ಸ್ತಬ್ಧರಾಗಿಬಿಟ್ಟಿದ್ದರು.

07101050a ಚೇದಯಶ್ಚ ಮಹಾರಾಜ ಸೃಂಜಯಾಃ ಸೋಮಕಾಸ್ತಥಾ।
07101050c ಅಭ್ಯದ್ರವಂತ ಸಂಹೃಷ್ಟಾ ಭಾರದ್ವಾಜಂ ಯುಯುತ್ಸಯಾ।।

ಮಹಾರಾಜ! ಆಗ ಚೇದಿದೇಶದವರು, ಸೃಂಜಯರು ಮತ್ತು ಸೋಮಕರು ಯುದ್ಧದ ಉತ್ಸಾಹದಿಂದ ಸಂಹೃಷ್ಟರಾಗಿ ಭಾರದ್ವಾಜನನ್ನು ಆಕ್ರಮಣಿಸಿದರು.

07101051a ಹತ ದ್ರೋಣಂ ಹತ ದ್ರೋಣಮಿತಿ ತೇ ದ್ರೋಣಮಭ್ಯಯುಃ।
07101051c ಯತಂತಃ ಪುರುಷವ್ಯಾಘ್ರಾಃ ಸರ್ವಶಕ್ತ್ಯಾ ಮಹಾದ್ಯುತಿಂ।
07101051e ನಿನೀಷಂತೋ ರಣೇ ದ್ರೋಣಂ ಯಮಸ್ಯ ಸದನಂ ಪ್ರತಿ।।

“ದ್ರೋಣನನ್ನು ಕೊಲ್ಲಿ! ದ್ರೋಣನನ್ನು ಕೊಲ್ಲಿ!” ಎಂದು ಹೇಳುತ್ತಾ ದ್ರೋಣನನ್ನು ಯಮಸದನಕ್ಕೆ ಕಳುಹಿಸಬೇಕೆಂದು ಬಯಸಿ ಪ್ರಯತ್ನಿಸುತ್ತಾ ಆ ಪುರುಷವ್ಯಾಘ್ರರು ಸರ್ವಶಕ್ತಿಯನ್ನುಪಯೋಗಿಸಿ ಮಹಾದ್ಯುತಿ ದ್ರೋಣನ ಮೇಲೆ ಎರಗಿದರು.

07101052a ಯತಮಾನಾಂಸ್ತು ತಾನ್ವೀರಾನ್ಭಾರದ್ವಾಜಃ ಶಿಲೀಮುಖೈಃ।
07101052c ಯಮಾಯ ಪ್ರೇಷಯಾಮಾಸ ಚೇದಿಮುಖ್ಯಾನ್ವಿಶೇಷತಃ।।

ಪ್ರಯತಿಸುತ್ತಿದ್ದ ಆ ವೀರರನ್ನು, ಅವರಲ್ಲೂ ವಿಶೇಷವಾಗಿ ಚೇದಿಪ್ರಮುಖರನ್ನು ಭಾರದ್ವಾಜನು ಶಿಲೀಮುಖಿಗಳಿಂದ ಯಮಲೋಕಕ್ಕೆ ಕಳುಹಿಸಿದನು.

07101053a ತೇಷು ಪ್ರಕ್ಷೀಯಮಾಣೇಷು ಚೇದಿಮುಖ್ಯೇಷು ಭಾರತ।
07101053c ಪಾಂಚಾಲಾಃ ಸಮಕಂಪಂತ ದ್ರೋಣಸಾಯಕಪೀಡಿತಾಃ।।

ಭಾರತ! ಚೇದಿಪ್ರಮುಖರು ಕಡಿಮೆಯಾಗುತ್ತಿರುವುದನ್ನು ಕಂಡು ದ್ರೋಣನ ಸಾಯಕಗಳಿಂದ ಪೀಡಿತರಾದ ಪಾಂಚಾಲರು ನಡುಗಿದರು.

07101054a ಪ್ರಾಕ್ರೋಶನ್ಭೀಮಸೇನಂ ತೇ ಧೃಷ್ಟದ್ಯುಮ್ನರಥಂ ಪ್ರತಿ।
07101054c ದೃಷ್ಟ್ವಾ ದ್ರೋಣಸ್ಯ ಕರ್ಮಾಣಿ ತಥಾರೂಪಾಣಿ ಮಾರಿಷ।।

ಮಾರಿಷ! ದ್ರೋಣನ ಆ ರೀತಿಯ ಕೃತ್ಯಗಳನ್ನು ನೋಡಿ ಅವರು ಧೃಷ್ಟದ್ಯುಮ್ನನ ರಥದ ಬಳಿಯಿದ್ದ ಭೀಮಸೇನನನ್ನು ಕೂಗಿ ಕರೆದರು:

07101055a ಬ್ರಾಹ್ಮಣೇನ ತಪೋ ನೂನಂ ಚರಿತಂ ದುಶ್ಚರಂ ಮಹತ್।
07101055c ತಥಾ ಹಿ ಯುಧಿ ವಿಕ್ರಾಂತೋ ದಹತಿ ಕ್ಷತ್ರಿಯರ್ಷಭಾನ್।।

“ಬಹಳಷ್ಟು ತಪಸ್ಸನ್ನು ಆಚರಿಸಿದ ಈ ಬ್ರಾಹ್ಮಣನು ಕೆಟ್ಟದಾಗಿ ನಡೆದುಕೊಂಡು ಯುದ್ಧದಲ್ಲಿ ವಿಕ್ರಮದಿಂದ ಕ್ಷತ್ರಿಯರ್ಷಭರನ್ನು ಸುಡುತ್ತಿದ್ದಾನೆ!

07101056a ಧರ್ಮೋ ಯುದ್ಧಂ ಕ್ಷತ್ರಿಯಸ್ಯ ಬ್ರಾಹ್ಮಣಸ್ಯ ಪರಂ ತಪಃ।
07101056c ತಪಸ್ವೀ ಕೃತವಿದ್ಯಶ್ಚ ಪ್ರೇಕ್ಷಿತೇನಾಪಿ ನಿರ್ದಹೇತ್।।

ಕ್ಷತ್ರಿಯನ ಧರ್ಮ ಯುದ್ಧ. ಬ್ರಾಹ್ಮಣನ ಧರ್ಮ ತಪಸ್ಸು. ತಪಸ್ವಿಯಾದ ಮತ್ತು ಯುದ್ಧದಲ್ಲಿ ಪಾರಂಗತನಾದವನು ಕಣ್ಣಿನ ನೋಟದಿಂದಲೇ ಸುಟ್ಟುಬಿಡಬಹುದು.

07101057a ದ್ರೋಣಾಸ್ತ್ರಮಗ್ನಿಸಂಸ್ಪರ್ಶಂ ಪ್ರವಿಷ್ಟಾಃ ಕ್ಷತ್ರಿಯರ್ಷಭಾಃ।
07101057c ಬಹವೋ ದುಸ್ತರಂ ಘೋರಂ ಯತ್ರಾದಹ್ಯಂತ ಭಾರತ।।

ಭಾರತ! ದ್ರೋಣನ ಅಸ್ತ್ರವೆಂಬ ಅಗ್ನಿಯು ತಾಗಿ ಅನೇಕ ಕ್ಷತ್ರಿಯರ್ಷಭರು ದುಸ್ತರ ಘೋರ ಅಗ್ನಿಯಲ್ಲಿ ಸುಟ್ಟುಹೋಗುತ್ತಿದ್ದಾರೆ.

07101058a ಯಥಾಬಲಂ ಯಥೋತ್ಸಾಹಂ ಯಥಾಸತ್ತ್ವಂ ಮಹಾದ್ಯುತಿಃ।
07101058c ಮೋಹಯನ್ಸರ್ವಭೂತಾನಿ ದ್ರೋಣೋ ಹಂತಿ ಬಲಾನಿ ನಃ।।

ಮಹಾದ್ಯುತಿ ದ್ರೋಣನು ಬಲವಿದ್ದಷ್ಟು, ಉತ್ಸಾಹವಿದ್ದಷ್ಟು, ಸತ್ತ್ವವಿದ್ದಷ್ಟೂ ಹೋರಾಡುತ್ತಿರುವ ನಮ್ಮ ಸೇನೆಗಳಲ್ಲಿ ಸರ್ವರನ್ನೂ ಮೂರ್ಛೆಗೊಳಿಸಿ ಸಂಹರಿಸುತ್ತಿದ್ದಾನೆ.”

07101059a ತೇಷಾಂ ತದ್ವಚನಂ ಶ್ರುತ್ವಾ ಕ್ಷತ್ರಧರ್ಮಾ ವ್ಯವಸ್ಥಿತಃ।
07101059c ಅರ್ಧಚಂದ್ರೇಣ ಚಿಚ್ಚೇದ ದ್ರೋಣಸ್ಯ ಸಶರಂ ಧನುಃ।।

ಅವರ ಆ ಮಾತನ್ನು ಕೇಳಿ ಅಲ್ಲಿಯೇ ನಿಂತಿದ್ದ ಕ್ಷತ್ರಧರ್ಮನು ಅರ್ಧಚಂದ್ರದಿಂದ ದ್ರೋಣನ ಧನುಸ್ಸನ್ನು ಬಾಣದೊಂದಿಗೆ ಕತ್ತರಿಸಿದನು.

07101060a ಸ ಸಂರಬ್ಧತರೋ ಭೂತ್ವಾ ದ್ರೋಣಃ ಕ್ಷತ್ರಿಯಮರ್ದನಃ।
07101060c ಅನ್ಯತ್ಕಾರ್ಮುಕಮಾದಾಯ ಭಾಸ್ವರಂ ವೇಗವತ್ತರಂ।।

ಆಗ ಗಾಭರಿಗೊಂಡು ಕ್ಷತ್ರಿಯಮರ್ದನ ದ್ರೋಣನು ಇನ್ನೊಂದು ಹೊಳೆಯುವ ವೇಗವತ್ತರ ಬಿಲ್ಲನ್ನು ಎತ್ತಿಕೊಂಡನು.

07101061a ತತ್ರಾಧಾಯ ಶರಂ ತೀಕ್ಷ್ಣಂ ಭಾರಘ್ನಂ ವಿಮಲಂ ದೃಢಂ।
07101061c ಆಕರ್ಣಪೂರ್ಣಮಾಚಾರ್ಯೋ ಬಲವಾನಭ್ಯವಾಸೃಜತ್।।

ಆಗ ಒಂದು ತೀಕ್ಷ್ಣ, ಭಾರವಾದುದನ್ನೂ ಹೊಡೆಯಬಲ್ಲ, ವಿಮಲ ಮತ್ತು ದೃಢ ಬಾಣವೊಂದನ್ನು ಹೂಡಿ ಆಚಾರ್ಯನು ಆಕರ್ಣಪೂರ್ಣವಾಗಿ ಎಳೆದು ಪ್ರಯೋಗಿಸಿದನು.

07101062a ಸ ಹತ್ವಾ ಕ್ಷತ್ರಧರ್ಮಾಣಂ ಜಗಾಮ ಧರಣೀತಲಂ।
07101062c ಸ ಭಿನ್ನಹೃದಯೋ ವಾಹಾದಪತನ್ಮೇದಿನೀತಲೇ।।

ಅದು ಕ್ಷತ್ರಧರ್ಮನನ್ನು ಸಂಹರಿಸಿ ನೆಲವನ್ನು ಹೊಕ್ಕಿತು. ಅವನು ಹೃದಯವು ಒಡೆದು ವಾಹನದಿಂದ ಭೂಮಿಯ ಮೇಲೆ ಬಿದ್ದನು.

07101063a ತತಃ ಸೈನ್ಯಾನ್ಯಕಂಪಂತ ಧೃಷ್ಟದ್ಯುಮ್ನಸುತೇ ಹತೇ।
07101063c ಅಥ ದ್ರೋಣಂ ಸಮಾರೋಹಚ್ಚೇಕಿತಾನೋ ಮಹಾರಥಃ।।

ಧೃಷ್ಟದ್ಯುಮ್ನನ ಮಗ ಕ್ಷತ್ರಧರ್ಮನು ಹಾಗೆ ಹತನಾಗಲು ಸೇನೆಗಳು ನಡುಗಿದವು. ಆಗ ಮಹಾರಥ ಚೇಕಿತಾನನು ದ್ರೋಣನ ಮೇಲೆ ಎರಗಿದನು.

07101064a ಸ ದ್ರೋಣಂ ದಶಭಿರ್ಬಾಣೈಃ ಪ್ರತ್ಯವಿಧ್ಯತ್ಸ್ತನಾಂತರೇ।
07101064c ಚತುರ್ಭಿಃ ಸಾರಥಿಂ ಚಾಸ್ಯ ಚತುರ್ಭಿಶ್ಚತುರೋ ಹಯಾನ್।।

ಅವನು ದ್ರೋಣನ ಎದೆಗೆ ಗುರಿಯಿಟ್ಟು ಹತ್ತು ಬಾಣಗಳಿಂದ ಹೊಡೆದನು. ನಾಲ್ಕರಿಂದ ಸಾರಥಿಯನ್ನೂ ಮತ್ತು ನಾಲ್ಕರಿಂದ ನಾಲ್ಕು ಕುದುರೆಗಳನ್ನೂ ಹೊಡೆದನು.

07101065a ತಸ್ಯಾಚಾರ್ಯಃ ಷೋಡಶಭಿರವಿಧ್ಯದ್ದಕ್ಷಿಣಂ ಭುಜಂ।
07101065c ಧ್ವಜಂ ಷೋಡಶಭಿರ್ಬಾಣೈರ್ಯಂತಾರಂ ಚಾಸ್ಯ ಸಪ್ತಭಿಃ।।

ಆಚಾರ್ಯನು ಚೇಕಿತಾನನ ಬಲಭುಜಕ್ಕೆ ಹದಿನಾರು ಬಾಣಗಳಿಂದ ಹೊಡೆದು, ಇನ್ನೂ ಹದಿನಾರರಿಂದ ಧ್ವಜವನ್ನೂ, ಏಳರಿಂದ ಸಾರಥಿಯನ್ನೂ ಹೊಡೆದನು.

07101066a ತಸ್ಯ ಸೂತೇ ಹತೇ ತೇಽಶ್ವಾ ರಥಮಾದಾಯ ವಿದ್ರುತಾಃ।
07101066c ಸಮರೇ ಶರಸಂವೀತಾ ಭಾರದ್ವಾಜೇನ ಮಾರಿಷ।।

ಮಾರಿಷ! ಸಮರದಲ್ಲಿ ಭಾರದ್ವಾಜನ ಬಾಣಗಳಿಂದ ಹೊಡೆಯಲ್ಪಟ್ಟು ಚೇಕಿತಾನನ ಸೂತನು ಹತನಾಗಲು ಕುದುರೆಗಳು ಅವನ ರಥವನ್ನೊಯ್ದು ದಿಕ್ಕಾಪಾಲಾಗಿ ಓಡತೊಡಗಿದವು.

07101067a ಚೇಕಿತಾನರಥಂ ದೃಷ್ಟ್ವಾ ವಿದ್ರುತಂ ಹತಸಾರಥಿಂ।
07101067c ಪಾಂಚಾಲಾನ್ಪಾಂಡವಾಂಶ್ಚೈವ ಮಹದ್ಭಯಮಥಾವಿಶತ್।।

ಸಾರಥಿಯನ್ನು ಕಳೆದುಕೊಂಡು ಒಡಿಹೋಗುತ್ತಿರುವ ಚೇಕಿತಾನನ ರಥವನ್ನು ಕಂಡು ಪಾಂಚಾಲರು ಮತ್ತು ಪಾಂಡವರನ್ನು ಮಹಾ ಭಯವು ಆವರಿಸಿತು.

07101068a ತಾನ್ಸಮೇತಾನ್ರಣೇ ಶೂರಾಂಶ್ಚೇದಿಪಾಂಚಾಲಸೃಂಜಯಾನ್।
07101068c ಸಮಂತಾದ್ದ್ರಾವಯನ್ದ್ರೋಣೋ ಬಹ್ವಶೋಭತ ಮಾರಿಷ।।

ಮಾರಿಷ! ರಣದಲ್ಲಿ ಶೂರ ಪಾಂಚಾಲ-ಸೃಂಜಯರು ಒಟ್ಟಿಗೇ ಸುತ್ತಲಿನಿಂದ ಆಕ್ರಮಣ ಮಾಡಲು ದ್ರೋಣನು ತುಂಬಾ ಶೋಭಿಸಿದನು.

07101069a ಆಕರ್ಣಪಲಿತಃ ಶ್ಯಾಮೋ ವಯಸಾಶೀತಿಕಾತ್ಪರಃ।
07101069c ರಣೇ ಪರ್ಯಚರದ್ದ್ರೋಣೋ ವೃದ್ಧಃ ಷೋಡಶವರ್ಷವತ್।।

ವಯಸ್ಸಿನಲ್ಲಿ ಎಂಭತ್ತು37 ವರ್ಷಕ್ಕೂ ಹೆಚ್ಚಿನ, ಶ್ಯಾಮವರ್ಣದ, ಕಿವಿಯವರೆಗೂ ಇಳಿಬಿದ್ದಿದ್ದ ಬಿಳಿಕೂದಲಿನ ವೃದ್ಧ ದ್ರೋಣನು ಹದಿನಾರು ವರ್ಷದವನಂತೆ ರಣದಲ್ಲಿ ಸಂಚರಿಸುತ್ತಿದ್ದನು.

07101070a ಅಥ ದ್ರೋಣಂ ಮಹಾರಾಜ ವಿಚರಂತಮಭೀತವತ್।
07101070c ವಜ್ರಹಸ್ತಮಮನ್ಯಂತ ಶತ್ರವಃ ಶತ್ರುಸೂದನಂ।।

ಮಹಾರಾಜ! ಭೀತಿಯಿಲ್ಲದೇ ಸಂಚರಿಸುತ್ತಿದ್ದ ಶತ್ರುಸೂದನ ದ್ರೋಣನನ್ನು ಶತ್ರುಗಳೂ ಕೂಡ ಇವನು ವಜ್ರಹಸ್ತ ಇಂದ್ರನೇ ಹೌದು ಎಂದು ಅಂದುಕೊಂಡರು.

07101071a ತತೋಽಬ್ರವೀನ್ಮಹಾರಾಜ ದ್ರುಪದೋ ಬುದ್ಧಿಮಾನ್ನೃಪ।
07101071c ಲುಬ್ಧೋಽಯಂ ಕ್ಷತ್ರಿಯಾನ್ಹಂತಿ ವ್ಯಾಘ್ರಃ ಕ್ಷುದ್ರಮೃಗಾನಿವ।।

ಮಹಾರಾಜ! ಆಗ ಬುದ್ಧಿಮಾನ್ ನೃಪ ದ್ರುಪದನು ಹೇಳಿದನು: “ಲುಬ್ಧನಾಗಿರುವ ಇವನು ಹುಲಿಯು ಕ್ಷುದ್ರಮೃಗಗಳನ್ನು ಕೊಲ್ಲುವಂತೆ ಕ್ಷತ್ರಿಯರನ್ನು ಸಂಹರಿಸುತ್ತಾನೆ.

07101072a ಕೃಚ್ಚ್ರಾನ್ದುರ್ಯೋಧನೋ ಲೋಕಾನ್ಪಾಪಃ ಪ್ರಾಪ್ಸ್ಯತಿ ದುರ್ಮತಿಃ।
07101072c ಯಸ್ಯ ಲೋಭಾದ್ವಿನಿಹತಾಃ ಸಮರೇ ಕ್ಷತ್ರಿಯರ್ಷಭಾಃ।।

ಯಾರ ಲೋಭದಿಂದಾಗಿ ಈ ಸಮರದಲ್ಲಿ ಕ್ಷತ್ರಿಯರ್ಷಭರು ಹತರಾಗುತ್ತಿದ್ದಾರೋ ಆ ದುರ್ಮತಿ ದುರ್ಯೋಧನನು ಪಾಪ ಲೋಕಗಳನ್ನೂ ಕಷ್ಟಗಳನ್ನೂ ಅನುಭವಿಸುತ್ತಾನೆ.

07101073a ಶತಶಃ ಶೇರತೇ ಭೂಮೌ ನಿಕೃತ್ತಾ ಗೋವೃಷಾ ಇವ।
07101073c ರುಧಿರೇಣ ಪರೀತಾಂಗಾಃ ಶ್ವಸೃಗಾಲಾದನೀಕೃತಾಃ।।

ಅವನಿಂದಾಗಿಯೇ ಈ ಕ್ಷತ್ರಿಯರು ಗಾಯಗೊಂಡ ಗೂಳಿಗಳಂತೆ ರಕ್ತದಿಂದ ತೋಯ್ದು ಭೂಮಿಯ ಮೇಲೆ ಮಲಗಿ ನಾಯಿ-ನರಿಗಳ ಪಾಲಾಗಿದ್ದಾರೆ!”

07101074a ಏವಮುಕ್ತ್ವಾ ಮಹಾರಾಜ ದ್ರುಪದೋಽಕ್ಷೌಹಿಣೀಪತಿಃ।
07101074c ಪುರಸ್ಕೃತ್ಯ ರಣೇ ಪಾರ್ಥಾನ್ದ್ರೋಣಮಭ್ಯದ್ರವದ್ದ್ರುತಂ।।

ಮಹಾರಾಜ! ಹೀಗೆ ಹೇಳಿ ಅಕ್ಷೌಹಿಣೀಪತಿ ದ್ರುಪದನು ರಣದಲ್ಲಿ ಪಾರ್ಥರನ್ನು ಮುಂದಿಟ್ಟುಕೊಂಡು ದ್ರೋಣನನ್ನು ಆಕ್ರಮಣಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ದ್ರೋಣಪರಾಕ್ರಮೇ ಏಕಾಧಿಕಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ದ್ರೋಣಪರಾಕ್ರಮ ಎನ್ನುವ ನೂರಾಒಂದನೇ ಅಧ್ಯಾಯವು.