100 ಸಾತ್ಯಕಿಪ್ರವೇಶೇ ಸಂಕುಲಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಜಯದ್ರಥವಧ ಪರ್ವ

ಅಧ್ಯಾಯ 100

ಸಾರ

ಸಂಕುಲಯುದ್ಧ (1-39).

07100001 ಧೃತರಾಷ್ಟ್ರ ಉವಾಚ।
07100001a ಕಿಂ ತಸ್ಯಾಂ ಮಮ ಸೇನಾಯಾಂ ನಾಸನ್ಕೇ ಚಿನ್ಮಹಾರಥಾಃ।
07100001c ಯೇ ತಥಾ ಸಾತ್ಯಕಿಂ ಯಾಂತಂ ನೈವಾಘ್ನನ್ನಾಪ್ಯವಾರಯನ್।।

ಧೃತರಾಷ್ಟ್ರನು ಹೇಳಿದನು: “ಹಾಗೆ ಅರ್ಜುನನ ಕಡೆಗೆ ಹೋಗುತ್ತಿರುವ ಸಾತ್ಯಕಿಯನ್ನು ಸಂಹರಿಸಬಲ್ಲ ಅಥವಾ ತಡೆಯಬಲ್ಲ ಯಾವ ಮಹಾರಥರೂ ನನ್ನ ಸೇನೆಗಳಲ್ಲಿರಲಿಲ್ಲವೇ?

07100002a ಏಕೋ ಹಿ ಸಮರೇ ಕರ್ಮ ಕೃತವಾನ್ಸತ್ಯವಿಕ್ರಮಃ।
07100002c ಶಕ್ರತುಲ್ಯಬಲೋ ಯುದ್ಧೇ ಮಹೇಂದ್ರೋ ದಾನವೇಷ್ವಿವ।।

ಯುದ್ಧದಲ್ಲಿ ದಾನವರೊಡನೆ ಹೋರಾಡುವ ಮಹೇಂದ್ರನ ಬಲಕ್ಕೆ ಸಮಾನ ಬಲವುಳ್ಳ ಸತ್ಯವಿಕ್ರಮ ಸಾತ್ಯಕಿಯು ಒಬ್ಬನೇ ಸಮರದಲ್ಲಿ ಅದ್ಭುತ ಕರ್ಮವೆಸಗಿದ್ದಾನೆ!

07100003a ಅಥ ವಾ ಶೂನ್ಯಮಾಸೀತ್ತದ್ಯೇನ ಯಾತಃ ಸ ಸಾತ್ಯಕಿಃ।
07100003c ಏಕೋ ವೈ ಬಹುಲಾಃ ಸೇನಾಃ ಪ್ರಮೃದ್ನನ್ಪುರುಷರ್ಷಭಃ।।

ಅಥವಾ ಸಾತ್ಯಕಿಯು ಯಾವ ಮಾರ್ಗದಿಂದ ಹೋಗುತ್ತಿದ್ದನೋ ಆ ಮಾರ್ಗವು ಶ್ಯೂನ್ಯವಾಗಿ ಹೋಗಿತ್ತೇ35? ಆ ಪುರುಷರ್ಭನು ಒಬ್ಬನೇ ಅನೇಕ ಸೇನೆಗಳನ್ನು ಸದೆಬಡಿದನು.

07100004a ಕಥಂ ಚ ಯುಧ್ಯಮಾನಾನಾಮಪಕ್ರಾಂತೋ ಮಹಾತ್ಮನಾಂ।
07100004c ಏಕೋ ಬಹೂನಾಂ ಶೈನೇಯಸ್ತನ್ಮಮಾಚಕ್ಷ್ವ ಸಂಜಯ।।

ಸಂಜಯ! ಶಿನಿಯ ಮೊಮ್ಮಗ ಸಾತ್ಯಕಿಯು ಒಬ್ಬನೇ ಹೇಗೆ ಯುದ್ಧಮಾಡುತ್ತಿದ್ದ ಅನೇಕ ಮಹಾತ್ಮರನ್ನು ಅತಿಕ್ರಮಿಸಿ ಹೋದನೆಂಬುದನ್ನು ನನಗೆ ಹೇಳು!”

07100005 ಸಂಜಯ ಉವಾಚ।
07100005a ರಾಜನ್ಸೇನಾಸಮುದ್ಯೋಗೋ ರಥನಾಗಾಶ್ವಪತ್ತಿಮಾನ್।
07100005c ತುಮುಲಸ್ತವ ಸೈನ್ಯಾನಾಂ ಯುಗಾಂತಸದೃಶೋಽಭವತ್।।

ಸಂಜಯನು ಹೇಳಿದನು: “ರಾಜನ್! ರಥ-ಗಜ-ಅಶ್ವ-ಪದಾತಿಗಳಿಂದ ಸಮೃದ್ಧವಾದ ನಿನ್ನ ಸೇನೆಗಳು ಉದ್ಯೋಗಶೀಲರಾಗಿದ್ದು, ಅವುಗಳ ತುಮುಲವು ಯುಗಾಂತವೋ ಎಂಬಂತೆ ಇದ್ದಿತ್ತು.

07100006a ಆಹ್ಣಿಕೇಷು ಸಮೂಹೇಷು ತವ ಸೈನ್ಯಸ್ಯ ಮಾನದ।
07100006c ನಾಸ್ತಿ ಲೋಕೇ ಸಮಃ ಕಶ್ಚಿತ್ಸಮೂಹ ಇತಿ ಮೇ ಮತಿಃ।।

ಮಾನದ! ನಿನ್ನ ಸೇನಾ ಸಮೂಹಗಳಂತಹ ಸೇನೆಗೆ ಸಮನಾದ ಸಮೂಹವು ಲೋಕಗಳಲ್ಲಿಯೇ ಎಲ್ಲಿಯೂ ಸೇರಿರಲಿಲ್ಲ ಎಂದು ನನ್ನ ಅಭಿಪ್ರಾಯ.

07100007a ತತ್ರ ದೇವಾಃ ಸ್ಮ ಭಾಷಂತೇ ಚಾರಣಾಶ್ಚ ಸಮಾಗತಾಃ।
07100007c ಏತದಂತಾಃ ಸಮೂಹಾ ವೈ ಭವಿಷ್ಯಂತಿ ಮಹೀತಲೇ।।

ಅಲ್ಲಿ ಸೇರಿದ್ದ ದೇವತೆಗಳೂ ಮತ್ತು ಚಾರಣರೂ “ಭೂಮಿಯಲ್ಲಿ ಇಂತಹ ಸೇನಾ ಸಮೂಹವು ಇದೇ ಕೊನೆಯದಾಗುತ್ತದೆ!” ಎಂದು ಹೇಳಿಕೊಳುತ್ತಿದ್ದರು.

07100008a ನ ಚೈವ ತಾದೃಶಃ ಕಶ್ಚಿದ್ವ್ಯೂಹ ಆಸೀದ್ವಿಶಾಂ ಪತೇ।
07100008c ಯಾದೃಗ್ಜಯದ್ರಥವಧೇ ದ್ರೋಣೇನ ವಿಹಿತೋಽಭವತ್।।

ವಿಶಾಂಪತೇ! ಜಯದ್ರಥನ ವಧೆಯ ಸಮಯದಲ್ಲಿ ದ್ರೋಣನು ನಿರ್ಮಿಸಿದ ಅದರಂಥಹ ವ್ಯೂಹವು ಎಂದೂ ರಚನೆಗೊಂಡಿರಲಿಲ್ಲ.

07100009a ಚಂಡವಾತಾಭಿಪನ್ನಾನಾಂ ಸಮುದ್ರಾಣಾಮಿವ ಸ್ವನಃ।
07100009c ರಣೇಽಭವದ್ಬಲೌಘಾನಾಮನ್ಯೋನ್ಯಮಭಿಧಾವತಾಂ।।

ರಣದಲ್ಲಿ ಅನ್ಯೋನ್ಯರನ್ನು ಪ್ರಹರಿಸುತ್ತಿದ್ದ ಆ ಸೇನೆಗಳಿಂದ ಹೊರಟ ಶಬ್ಧವು ಚಂಡಮಾರುತಕ್ಕೆ ಸಿಲುಕಿದ ಸಮುದ್ರದ ಭೋರ್ಗರೆತಕ್ಕೆ ಸಮನಾಗಿತ್ತು.

07100010a ಪಾರ್ಥಿವಾನಾಂ ಸಮೇತಾನಾಂ ಬಹೂನ್ಯಾಸನ್ನರೋತ್ತಮ।
07100010c ತ್ವದ್ಬಲೇ ಪಾಂಡವಾನಾಂ ಚ ಸಹಸ್ರಾಣಿ ಶತಾನಿ ಚ।।

ನರೋತ್ತಮ! ಸೇರಿರುವ ನಿನ್ನ ಮತ್ತು ಪಾಂಡವರ ಸೇನೆಗಳಲ್ಲಿ ನೂರಾರು ಸಹಸ್ರಾರು ಪಾರ್ಥಿವರಿದ್ದರು.

07100011a ಸಂರಬ್ಧಾನಾಂ ಪ್ರವೀರಾಣಾಂ ಸಮರೇ ದೃಢಕರ್ಮಣಾಂ।
07100011c ತತ್ರಾಸೀತ್ಸುಮಹಾಂ ಶಬ್ದಸ್ತುಮುಲೋ ಲೋಮಹರ್ಷಣಃ।।

ಸಮರದಲ್ಲಿ ಕ್ರುದ್ಧರಾಗಿರುವ ದೃಢಕರ್ಮಿ ಪ್ರವೀರರ ರೋಮಾಂಚಕಾರೀ ಮಹಾ ತುಮುಲಶಬ್ಧವು ಉಂಟಾಯಿತು.

07100012a ಅಥಾಕ್ರಂದದ್ಭೀಮಸೇನೋ ಧೃಷ್ಟದ್ಯುಮ್ನಶ್ಚ ಮಾರಿಷ।
07100012c ನಕುಲಃ ಸಹದೇವಶ್ಚ ಧರ್ಮರಾಜಶ್ಚ ಪಾಂಡವಃ।।

ಮಾರಿಷ! ಭೀಮಸೇನ, ಧೃಷ್ಟದ್ಯುಮ್ನ, ನಕುಲ, ಸಹದೇವ ಮತ್ತು ಪಾಂಡವ ಧರ್ಮರಾಜರು ಜೋರಾಗಿ ಕೂಗಿಕೊಳ್ಳುತ್ತಿದ್ದರು:

07100013a ಆಗಚ್ಚತ ಪ್ರಹರತ ಬಲವತ್ಪರಿಧಾವತ।
07100013c ಪ್ರವಿಷ್ಟಾವರಿಸೇನಾಂ ಹಿ ವೀರೌ ಮಾಧವಪಾಂಡವೌ।।

“ಬೇಗಬನ್ನಿರಿ! ಶಕ್ತಿಯನ್ನುಪಯೋಗಿಸಿ ಪ್ರಹರಿಸಿ! ವೀರರಾದ ಮಾಧವ-ಪಾಂಡವರು ಅರಿಸೇನೆಯನ್ನು ಪ್ರವೇಶಿಸಿಬಿಟ್ಟಿದ್ದಾರೆ!

07100014a ಯಥಾ ಸುಖೇನ ಗಚ್ಚೇತಾಂ ಜಯದ್ರಥವಧಂ ಪ್ರತಿ।
07100014c ತಥಾ ಪ್ರಕುರುತ ಕ್ಷಿಪ್ರಮಿತಿ ಸೈನ್ಯಾನ್ಯಚೋದಯತ್।
07100014e ತಯೋರಭಾವೇ ಕುರವಃ ಕೃತಾರ್ಥಾಃ ಸ್ಯುರ್ವಯಂ ಜಿತಾಃ।।

ಜಯದ್ರಥನ ವಧೆಯು ಸುಲಭವಾಗಿ ನಡೆಯುವಂತೆ ಮಾಡಲು ಅವಸರಮಾಡಿರಿ!” ಎಂದು ಸೇನೆಗಳನ್ನು ಯುಧಿಷ್ಠಿರನು ಹುರಿದುಂಬಿಸಿದನು. “ಅವರಿಬ್ಬರೂ ಇಲ್ಲದಿರುವಾಗ ಕುರುಗಳು ನಮ್ಮನ್ನು ಜಯಿಸಿ ಯಶಸ್ವಿಗಳಾಗಿಬಿಡಬಹುದು!

07100015a ತೇ ಯೂಯಂ ಸಹಿತಾ ಭೂತ್ವಾ ತೂರ್ಣಮೇವ ಬಲಾರ್ಣವಂ।
07100015c ಕ್ಷೋಭಯಧ್ವಂ ಮಹಾವೇಗಾಃ ಪವನಾಃ ಸಾಗರಂ ಯಥಾ।।

ಭಿರುಗಾಳಿಯು ಹೇಗೆ ಮಹಾವೇಗದಿಂದ ಬೀಸಿ ಸಾಗರವನ್ನು ಅಲ್ಲೋಲಕಲ್ಲೋಲಮಾಡುವುದೋ ಹಾಗೆ ನೀವು ಎಲ್ಲರೂ ಒಟ್ಟಾಗಿ ಬೇಗನೇ ಕುರುಸೇನೆಯನ್ನು ಕಲಕಿಬಿಡಿ!”

07100016a ಭೀಮಸೇನೇನ ತೇ ರಾಜನ್ಪಾಂಚಾಲ್ಯೇನ ಚ ಚೋದಿತಾಃ।
07100016c ಆಜಘ್ನುಃ ಕೌರವಾನ್ಸಂಖ್ಯೇ ತ್ಯಕ್ತ್ವಾಸೂನಾತ್ಮನಃ ಪ್ರಿಯಾನ್।।

ರಾಜನ್! ಹೀಗೆ ಭೀಮಸೇನ ಮತ್ತು ಪಾಂಚಾಲ್ಯ ಧೃಷ್ಟದ್ಯುಮ್ನರು ಪ್ರಚೋದಿಸಲು ಅವರು ಪ್ರಿಯಪ್ರಾಣಗಳನ್ನೂ ತೊರೆದು ರಣದಲ್ಲಿ ಕೌರವರನ್ನು ಸಂಹರಿಸಿದರು.

07100017a ಇಚ್ಚಂತೋ ನಿಧನಂ ಯುದ್ಧೇ ಶಸ್ತ್ರೈರುತ್ತಮತೇಜಸಃ।
07100017c ಸ್ವರ್ಗಾರ್ಥಂ ಮಿತ್ರಕಾರ್ಯಾರ್ಥಂ ನಾಭ್ಯರಕ್ಷಂತ ಜೀವಿತಂ।।

ಆ ಉತ್ತಮತೇಜಸ್ಸುಳ್ಳವರು ಯುದ್ಧ ಶಸ್ತ್ರಗಳಿಂದ ಸಾವನ್ನು ಬಯಸಿ, ಮಿತ್ರಕಾರ್ಯಾರ್ಥವಾಗಿ ಮತ್ತು ಸ್ವರ್ಗಾರ್ಥವಾಗಿ ತಮ್ಮ ಜೀವವನ್ನೇ ರಕ್ಷಿಸಿಕೊಳ್ಳುತ್ತಿರಲಿಲ್ಲ.

07100018a ತಥೈವ ತಾವಕಾ ರಾಜನ್ಪ್ರಾರ್ಥಯಂತೋ ಮಹದ್ಯಶಃ।
07100018c ಆರ್ಯಾಂ ಯುದ್ಧೇ ಮತಿಂ ಕೃತ್ವಾ ಯುದ್ಧಾಯೈವೋಪತಸ್ಥಿರೇ।।

ರಾಜನ್! ಹಾಗೆಯೇ ನಿನ್ನವರು ಕೂಡ ಮಹಾ ಯಶಸ್ಸನ್ನು ಬಯಸಿ ಯುದ್ಧದಲ್ಲಿಯೇ ಶ್ರೇಷ್ಠ ಬುದ್ಧಿಯನ್ನಿರಿಸಿ ಯುದ್ಧದಲ್ಲಿ ನಿರತರಾಗಿದ್ದರು.

07100019a ತಸ್ಮಿಂಸ್ತು ತುಮುಲೇ ಯುದ್ಧೇ ವರ್ತಮಾನೇ ಮಹಾಭಯೇ।
07100019c ಹತ್ವಾ ಸರ್ವಾಣಿ ಸೈನ್ಯಾನಿ ಪ್ರಾಯಾತ್ಸಾತ್ಯಕಿರರ್ಜುನಂ।।

ಮಹಾಭಯವನ್ನುಂಟುಮಾಡಿ ನಡೆಯುತ್ತಿದ್ದ ಆ ತುಮುಲ ಯುದ್ಧದಲ್ಲಿ ಸರ್ವ ಸೇನೆಗಳನ್ನೂ ಸಂಹರಿಸಿ ಸಾತ್ಯಕಿಯು ಅರ್ಜುನನಿದ್ದಲ್ಲಿಗೆ ನಡೆದನು.

07100020a ಕವಚಾನಾಂ ಪ್ರಭಾಸ್ತತ್ರ ಸೂರ್ಯರಶ್ಮಿವಿಚಿತ್ರಿತಾಃ।
07100020c ದೃಷ್ಟೀಃ ಸಂಖ್ಯೇ ಸೈನಿಕಾನಾಂ ಪ್ರತಿಜಘ್ನುಃ ಸಮಂತತಃ।।

ಅಲ್ಲಿ ಕವಚಗಳ ಮೇಲೆ ಬಿದ್ದ ಸೂರ್ಯನ ರಶ್ಮಿಗಳು ಹೊರಸೂಸಿ ರಣದ ಎಲ್ಲಕಡೆಗಳಲ್ಲಿ ಸೈನಿಕರ ದೃಷ್ಟಿಯನ್ನೇ ಕೋರೈಸಿದವು.

07100021a ತಥಾ ಪ್ರಯತಮಾನೇಷು ಪಾಂಡವೇಯೇಷು ನಿರ್ಭಯಃ।
07100021c ದುರ್ಯೋಧನೋ ಮಹಾರಾಜ ವ್ಯಗಾಹತ ಮಹದ್ಬಲಂ।।

ಮಹಾರಾಜ! ಹಾಗೆ ನಿರ್ಭಯವಾಗಿ ಪ್ರಯತ್ನಿಸಿ ಹೋರಡುತ್ತಿದ್ದ ಪಾಂಡವೇಯರ ಆ ಮಹಾಬಲವನ್ನು ದುರ್ಯೋಧನನು ಪ್ರವೇಶಿಸಿದನು.

07100022a ಸ ಸನ್ನಿಪಾತಸ್ತುಮುಲಸ್ತೇಷಾಂ ತಸ್ಯ ಚ ಭಾರತ।
07100022c ಅಭವತ್ಸರ್ವಸೈನ್ಯಾನಾಮಭಾವಕರಣೋ ಮಹಾನ್।।

ಭಾರತ! ಅವನು ಆಕ್ರಮಣಿಸಲು ಅವನ ಮತ್ತು ಅವರ ನಡುವೆ ನಡೆದ ಮಹಾಯುದ್ಧವು ಸರ್ವಸೈನ್ಯಗಳ ಕ್ಷಯಕರವಾಗಿ ಪರಿಣಮಿಸಿತು.”

07100023 ಧೃತರಾಷ್ಟ್ರ ಉವಾಚ।
07100023a ತಥಾ ಗತೇಷು ಸೈನ್ಯೇಷು ತಥಾ ಕೃಚ್ಚ್ರಗತಃ ಸ್ವಯಂ।
07100023c ಕಚ್ಚಿದ್ದುರ್ಯೋಧನಃ ಸೂತ ನಾಕಾರ್ಷೀತ್ಪೃಷ್ಠತೋ ರಣಂ।।

ಧೃತರಾಷ್ಟ್ರನು ಹೇಳಿದನು: “ಸೂತ! ಸೇನೆಗಳು ಹಾಗೆ ಚದುರಿಹೋಗಿರಲು ಸ್ವಯಂ ತಾನೇ ಬಹಳ ಕಷ್ಟದಲ್ಲಿ ಸಿಲುಕಿದ್ದ ದುರ್ಯೋಧನನು ರಣದಿಂದ ಹಿಮ್ಮೆಟ್ಟಿರಲಿಲ್ಲ ತಾನೇ?

07100024a ಏಕಸ್ಯ ಚ ಬಹೂನಾಂ ಚ ಸನ್ನಿಪಾತೋ ಮಹಾಹವೇ।
07100024c ವಿಶೇಷತೋ ನೃಪತಿನಾ ವಿಷಮಃ ಪ್ರತಿಭಾತಿ ಮೇ।।

ಮಹಾಯುದ್ಧದಲ್ಲಿ ಅನೇಕರೊಂದಿಗೆ ಒಬ್ಬನ, ಅದರಲ್ಲಿಯೂ ರಾಜನಾದವನ, ಯುದ್ಧವು ನಡೆಯುವುದು ಸರಿಯಲ್ಲವೆಂದು ನನಗನ್ನಿಸುತ್ತದೆ.

07100025a ಸೋಽತ್ಯಂತಸುಖಸಂವೃದ್ಧೋ ಲಕ್ಷ್ಮ್ಯಾ ಲೋಕಸ್ಯ ಚೇಶ್ವರಃ।
07100025c ಏಕೋ ಬಹೂನ್ಸಮಾಸಾದ್ಯ ಕಚ್ಚಿನ್ನಾಸೀತ್ಪರಾಙ್ಮುಖಃ।।

ಅತ್ಯಂತ ಸುಖದಲ್ಲಿ ಬೆಳೆದ, ಲೋಕದ ಸಂಪತ್ತಿಗೆ ಒಡೆಯನಾದ ದುರ್ಯೋಧನನು ಒಬ್ಬನೇ ಅನೇಕರನ್ನು ಎದುರಿಸಿ ಪರಾಂಙ್ಮುಖನಾಗಲಿಲ್ಲ ತಾನೇ?”

07100026 ಸಂಜಯ ಉವಾಚ।
07100026a ರಾಜನ್ಸಂಗ್ರಾಮಮಾಶ್ಚರ್ಯಂ ತವ ಪುತ್ರಸ್ಯ ಭಾರತ।
07100026c ಏಕಸ್ಯ ಚ ಬಹೂನಾಂ ಚ ಶೃಣುಷ್ವ ಗದತೋಽದ್ಭುತಂ।।

ಸಂಜಯನು ಹೇಳಿದನು: “ರಾಜನ್! ಭಾರತ! ನಿನ್ನ ಮಗನು ಒಬ್ಬನೇ ಅನೇಕರೊಂದಿಗೆ ನಡೆಸಿದ ಆ ಆಶ್ಚರ್ಯಕರ ಅದ್ಭುತ ಸಂಗ್ರಾಮದ ಕುರಿತು ಕೇಳು.

07100027a ದುರ್ಯೋಧನೇನ ಸಹಸಾ ಪಾಂಡವೀ ಪೃತನಾ ರಣೇ।
07100027c ನಲಿನೀ ದ್ವಿರದೇನೇವ ಸಮಂತಾದ್ವಿಪ್ರಲೋಡಿತಾ।।

ಕಮಲಗಳಿಂದ ಕೂಡಿದ ಸರೋವರವನ್ನು ಆನೆಯೊಂದು ಮಥಿಸಿಬಿಡುವಂತೆ ರಣದಲ್ಲಿ ಪಾಂಡವರ ಸೇನೆಯನ್ನು ದುರ್ಯೋಧನನು ಒಮ್ಮೆಲೇ ಎಲ್ಲ ಕಡೆಗಳಿಂದ ಕದಡಿ ಅಲ್ಲೋಲಕಲ್ಲೋಲಗೊಳಿಸಿಬಿಟ್ಟನು.

07100028a ತಥಾ ಸೇನಾಂ ಕೃತಾಂ ದೃಷ್ಟ್ವಾ ತವ ಪುತ್ರೇಣ ಕೌರವ।
07100028c ಭೀಮಸೇನಪುರೋಗಾಸ್ತಂ ಪಾಂಚಾಲಾಃ ಸಮುಪಾದ್ರವನ್।।

ಕೌರವ! ನಿನ್ನ ಮಗನು ಸೇನೆಗಳನ್ನು ಹಾಗೆ ಮಾಡಿದುದನ್ನು ನೋಡಿ ಭೀಮಸೇನನನ್ನು ಮುಂದಿರಿಸಿಕೊಂಡು ಪಾಂಚಾಲರು ಅವನನ್ನು ಆಕ್ರಮಣಿಸಿದರು.

07100029a ಸ ಭೀಮಸೇನಂ ದಶಭಿರ್ಮಾದ್ರೀಪುತ್ರೌ ತ್ರಿಭಿಸ್ತ್ರಿಭಿಃ।
07100029c ವಿರಾಟದ್ರುಪದೌ ಷಡ್ಭಿಃ ಶತೇನ ಚ ಶಿಖಂಡಿನಂ।।
07100030a ಧೃಷ್ಟದ್ಯುಮ್ನಂ ಚ ವಿಂಶತ್ಯಾ ಧರ್ಮಪುತ್ರಂ ಚ ಸಪ್ತಭಿಃ।
07100030c ಕೇಕಯಾನ್ದಶಭಿರ್ವಿದ್ಧ್ವಾ ದ್ರೌಪದೇಯಾಂಸ್ತ್ರಿಭಿಸ್ತ್ರಿಭಿಃ।।
07100031a ಶತಶಶ್ಚಾಪರಾನ್ಯೋಧಾನ್ಸದ್ವಿಪಾಂಶ್ಚ ರಥಾನ್ರಣೇ।
07100031c ಶರೈರವಚಕರ್ತೋಗ್ರೈಃ ಕ್ರುದ್ಧೋಽಂತಕ ಇವ ಪ್ರಜಾಃ।।

ದುರ್ಯೋಧನನು ಭೀಮಸೇನನನ್ನು ಹತ್ತರಿಂದ, ಮಾದ್ರೀಪುತ್ರರನ್ನು ಮೂರು-ಮೂರರಿಂದ, ವಿರಾಟ-ದ್ರುಪದರನ್ನು ಆರರಿಂದ, ನೂರರಿಂದ ಶಿಖಂಡಿಯನ್ನು. ಧೃಷ್ಟದ್ಯುಮ್ನನನ್ನು ಇಪ್ಪತ್ತರಿಂದ, ಧರ್ಮಪುತ್ರನನ್ನು ಏಳರಿಂದ, ಕೇಕಯರನ್ನು ಹತ್ತರಿಂದ ಮತ್ತು ದ್ರೌಪದೇಯರನ್ನು ಮೂರು-ಮೂರರಿಂದ ಹೊಡೆದು, ರಣದಲ್ಲಿ ಇತರ ಇನ್ನೂ ನೂರಾರು ಆನೆಗಳನ್ನು ರಥಗಳನ್ನು ಮತ್ತು ಯೋಧರನ್ನು ಕ್ರುದ್ಧ ಅಂತಕನಂತೆ ತನ್ನ ಉಗ್ರ ಬಾಣಗಳಿಂದ ಕತ್ತರಿಸಿ ಹಾಕಿದನು.

07100032a ನ ಸಂದಧನ್ವಿಮುಂಚನ್ವಾ ಮಂಡಲೀಕೃತಕಾರ್ಮುಕಃ।
07100032c ಅದೃಶ್ಯತ ರಿಪೂನ್ನಿಘ್ನಂ ಶಿಕ್ಷಯಾಸ್ತ್ರಬಲೇನ ಚ।।

ಅವನು ಧನುಸ್ಸನ್ನು ಮಂಡಲಾಕಾರವಾಗಿ ಹೂಡಿ, ತನ್ನ ಅಸ್ತ್ರಬಲ ಶಿಕ್ಷಣದಿಂದ ಶತ್ರುಗಳನ್ನು ಸಂಹರಿಸುತ್ತಿರುವಂತೆ ಕಂಡನು.

07100033a ತಸ್ಯ ತಾನ್ನಿಘ್ನತಃ ಶತ್ರೂನ್ ಹೇಮಪೃಷ್ಠಂ ಮಹದ್ಧನುಃ।
07100033c ಭಲ್ಲಾಭ್ಯಾಂ ಪಾಂಡವೋ ಜ್ಯೇಷ್ಠಸ್ತ್ರಿಧಾ ಚಿಚ್ಚೇದ ಮಾರಿಷ।।

ಮಾರಿಷ! ಶತ್ರುಗಳನ್ನು ಸಂಹರಿಸುತ್ತಿರುವ ಅವನ ಆ ಬಂಗಾರದ ಬೆನ್ನುಳ್ಳ ಮಹಾಧನುಸ್ಸನ್ನು ಜ್ಯೇಷ್ಠ ಪಾಂಡವ ಯುಧಿಷ್ಠಿರನು ಎರಡು ಭಲ್ಲಗಳಿಂದ ಮೂರು ಭಾಗಗಳನ್ನಾಗಿ ತುಂಡರಿಸಿದನು.

07100034a ವಿವ್ಯಾಧ ಚೈನಂ ಬಹುಭಿಃ ಸಮ್ಯಗಸ್ತೈಃ ಶಿತೈಃ ಶರೈಃ।
07100034c ವರ್ಮಾಣ್ಯಾಶು ಸಮಾಸಾದ್ಯ ತೇ ಭಗ್ನಾಃ ಕ್ಷಿತಿಮಾವಿಶನ್।।

ಇನ್ನೂ ಅನೇಕ ನಿಶಿತ ಶರಗಳಿಂದ ಅವನನ್ನು ಹೊಡೆಯಲು ಅವು ದುರ್ಯೋಧನನ ಕವಚಕ್ಕೆ ತಾಗಿ, ಕವಚವನ್ನು ಸೀಳಿ, ಭೂಮಿಯನ್ನು ಹೊಕ್ಕವು.

07100035a ತತಃ ಪ್ರಮುದಿತಾಃ ಪಾರ್ಥಾಃ ಪರಿವವ್ರುರ್ಯುಧಿಷ್ಠಿರಂ।
07100035c ಯಥಾ ವೃತ್ರವಧೇ ದೇವಾ ಮುದಾ ಶಕ್ರಂ ಮಹರ್ಷಿಭಿಃ।।

ಆಗ ಸಂತೋಷಗೊಂಡ ಪಾರ್ಥರು ವೃತ್ರವಧೆಯ ನಂತರ ದೇವತೆಗಳು ಮತ್ತು ಮಹರ್ಷಿಗಳು ಶಕ್ರನನ್ನು ಹೇಗೋ ಹಾಗೆ ಯುಧಿಷ್ಠಿರನನ್ನು ಸುತ್ತುವರೆದರು.

07100036a ಅಥ ದುರ್ಯೋಧನೋ ರಾಜಾ ದೃಢಮಾದಾಯ ಕಾರ್ಮುಕಂ।
07100036c ತಿಷ್ಠ ತಿಷ್ಠೇತಿ ರಾಜಾನಂ ಬ್ರುವನ್ಪಾಂಡವಮಭ್ಯಯಾತ್।।

ಆಗ ರಾಜಾ ದುರ್ಯೋಧನನು ದೃಢ ಬಿಲ್ಲನ್ನು ಎತ್ತಿಕೊಂಡು “ನಿಲ್ಲು! ನಿಲ್ಲು!” ಎಂದು ಹೇಳುತ್ತಾ ರಾಜಾ ಪಾಂಡವನನ್ನು ಆಕ್ರಮಣಿಸಿದನು.

07100037a ತಂ ತಥಾ ವಾದಿನಂ ರಾಜಂಸ್ತವ ಪುತ್ರಂ ಮಹಾರಥಂ।
07100037c ಪ್ರತ್ಯುದ್ಯಯುಃ ಪ್ರಮುದಿತಾಃ ಪಾಂಚಾಲಾ ಜಯಗೃದ್ಧಿನಃ।।

ರಾಜನ್! ನಿನ್ನ ಮಗ ಮಹಾರಥನು ಹೀಗೆ ಮುಂದುವರೆಯುತ್ತಿರಲು ಜಯವನ್ನು ಬಯಸುತ್ತಿದ್ದ ಪಾಂಚಾಲರು ಸಂತೋಷದಿಂದ ಅವನನ್ನು ಎದುರಿಸಿದರು.

07100038a ತಾನ್ದ್ರೋಣಃ ಪ್ರತಿಜಗ್ರಾಹ ಪರೀಪ್ಸನ್ಯುಧಿ ಪಾಂಡವಂ।
07100038c ಚಂಡವಾತೋದ್ಧುತಾನ್ಮೇಘಾನ್ಸಜಲಾನಚಲೋ ಯಥಾ।।

ಆಗ ಯುದ್ಧದಲ್ಲಿ ಪಾಂಡವರನ್ನು ರಕ್ಷಿಸುತ್ತಿದ್ದ ಅವರನ್ನು ದ್ರೋಣನು ಚಂಡಮಾರುತದಿಂದುಂಟಾದ ಮೇಘಗಳನ್ನೂ ಮೋಡಗಳನ್ನೂ ಸ್ವೀಕರಿಸುವ ಪರ್ವತದಂತೆ ಬರಮಾಡಿಕೊಂಡನು.

07100039a ತತ್ರ ರಾಜನ್ಮಹಾನಾಸೀತ್ಸಂಗ್ರಾಮೋ ಭೂರಿವರ್ಧನಃ।
07100039c ರುದ್ರಸ್ಯಾಕ್ರೀಡಸಂಕಾಶಃ ಸಂಹಾರಃ ಸರ್ವದೇಹಿನಾಂ।।

ರಾಜನ್! ಅಲ್ಲಿ ಭೂರಿವರ್ಧನ ಸರ್ವದೇಹಿಗಳ ಸಂಹಾರಕ ರುದ್ರನ ಕ್ರೀಡೆಯಂತಿರುವ ಮಹಾ ಸಂಗ್ರಾಮವು ನಡೆಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ಸಂಕುಲಯುದ್ಧೇ ಶತತಮೋಽಧ್ಯಾಯಃ ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶೇ ಸಂಕುಲಯುದ್ಧ ಎನ್ನುವ ನೂರನೇ ಅಧ್ಯಾಯವು.