ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 99
ಸಾರ
ಸಾತ್ಯಕಿಯಿಂದ ದುಃಶಾಸನನ ಪರಾಜಯ (1-28).
07099001 ಸಂಜಯ ಉವಾಚ।
07099001a ತತೋ ದುಃಶಾಸನೋ ರಾಜನ್ ಶೈನೇಯಂ ಸಮುಪಾದ್ರವತ್।
07099001c ಕಿರಂ ಶರಸಹಸ್ರಾಣಿ ಪರ್ಜನ್ಯ ಇವ ವೃಷ್ಟಿಮಾನ್।।
ಸಂಜಯನು ಹೇಳಿದನು: “ರಾಜನ್! ಅನಂತರ ದುಃಶಾಸನನು ಮಳೆಗರೆಯುತ್ತಿರುವ ಮೋಡದಂತೆ ಸಹಸ್ರಾರು ಬಾಣಗಳನ್ನು ಸುರಿಸುತ್ತಾ ಶೈನೇಯ ಸಾತ್ಯಕಿಯನ್ನು ಆಕ್ರಮಣಿಸಿದನು.
07099002a ಸ ವಿದ್ಧ್ವಾ ಸಾತ್ಯಕಿಂ ಷಷ್ಟ್ಯಾ ತಥಾ ಷೋಡಶಭಿಃ ಶರೈಃ।
07099002c ನಾಕಂಪಯತ್ ಸ್ಥಿತಂ ಯುದ್ಧೇ ಮೈನಾಕಮಿವ ಪರ್ವತಂ।।
ಸಾತ್ಯಕಿಯನ್ನು ಅರವತ್ತು ಮತ್ತು ಹಾಗೆಯೇ ಹದಿನಾರು ಶರಗಳಿಂದ ಹೊಡೆದರೂ ಯುದ್ಧದಲ್ಲಿ ಮೈನಾಕಪರ್ವತದಂತೆ ಸ್ಥಿರನಾಗಿ ನಿಂತಿದ್ದ ಅವನನ್ನು ಅಲುಗಾಡಿಸಲೂ ಆಗಲಿಲ್ಲ.
07099003a ಸ ತು ದುಃಶಾಸನಂ ವೀರಃ ಸಾಯಕೈರಾವೃಣೋದ್ಭೃಶಂ।
07099003c ಮಶಕಂ ಸಮನುಪ್ರಾಪ್ತಮೂರ್ಣನಾಭಿರಿವೋರ್ಣಯಾ।।
ಆ ವೀರನು ಉಕ್ಕಿಬರುತ್ತಿರುವ ಸಾಗರದಂತೆ ಆಕ್ರಮಣಿಸುತ್ತಿರುವ ದುಃಶಾಸನನನ್ನು ಸಾಯಕಗಳಿಂದ ತುಂಬಾ ಗಾಯಗೊಳಿಸಿದನು.
07099004a ದೃಷ್ಟ್ವಾ ದುಃಶಾಸನಂ ರಾಜಾ ತಥಾ ಶರಶತಾಚಿತಂ।
07099004c ತ್ರಿಗರ್ತಾಂಶ್ಚೋದಯಾಮಾಸ ಯುಯುಧಾನರಥಂ ಪ್ರತಿ।।
ದುಃಶಾಸನನು ಹಾಗೆ ಬಾಣಗಳಿಂದ ಪೀಡಿತನಾದುದನ್ನು ನೋಡಿ ರಾಜಾ ದುರ್ಯೋಧನನು ಯುಯುಧಾನ ಸಾತ್ಯಕಿಯ ರಥದ ಕಡೆ ಧಾವಿಸುವಂತೆ ತ್ರಿಗರ್ತರನ್ನು ಪ್ರಚೋದಿಸಿದನು.
07099005a ತೇಽಗಚ್ಚನ್ಯುಯುಧಾನಸ್ಯ ಸಮೀಪಂ ಕ್ರೂರಕಾರಿಣಃ।
07099005c ತ್ರಿಗರ್ತಾನಾಂ ತ್ರಿಸಾಹಸ್ರಾ ರಥಾ ಯುದ್ಧವಿಶಾರದಾಃ।।
ಆ ಕ್ರೂರಕರಿಣೀ ಯುದ್ಧವಿಶಾರದ ತ್ರಿಗರ್ತರು ಮೂರು ಸಾವಿರ ರಥಗಳನ್ನು ಕೂಡಿಕೊಂಡು ಯುಯುಧಾನನ ಬಳಿ ಹೋದರು.
07099006a ತೇ ತು ತಂ ರಥವಂಶೇನ ಮಹತಾ ಪರ್ಯವಾರಯನ್।
07099006c ಸ್ಥಿರಾಂ ಕೃತ್ವಾ ಮತಿಂ ಯುದ್ಧೇ ಭೂತ್ವಾ ಸಂಶಪ್ತಕಾ ಮಿಥಃ।।
ಅವರು ಯುದ್ಧದಲ್ಲಿ ಸ್ಥಿರಬುದ್ಧಿಯನ್ನಿರಿಸಿಕೊಂಡು ಪಲಾಯನಮಾಡುವುದಿಲ್ಲವೆಂದು ಶಪಥವನ್ನು ತೊಟ್ಟು ಆ ಮಹಾ ರಥಗುಂಪಿನಿಂದ ಸಾತ್ಯಕಿಯನ್ನು ಸುತ್ತುವರೆದರು.
07099007a ತೇಷಾಂ ಪ್ರಯತತಾಂ ಯುದ್ಧೇ ಶರವರ್ಷಾಣಿ ಮುಂಚತಾಂ।
07099007c ಯೋಧಾನ್ಪಂಚಶತಾನ್ಮುಖ್ಯಾನಗ್ರಾನೀಕೇ ವ್ಯಪೋಥಯತ್।।
ಬಾಣಗಳ ಮಳೆಯನ್ನು ಸುರಿಸುತ್ತಾ ಯುದ್ಧದಲ್ಲಿ ಪ್ರಯತ್ನಪಡುತ್ತಿದ್ದ ಅವರ ಸೇನೆಗಳ ಎದುರಿರುವ ಐನೂರು ಯೋಧರನ್ನು ಸಾತ್ಯಕಿಯು ಉರುಳಿಸಿಬಿಟ್ಟನು.
07099008a ತೇಽಪತಂತ ಹತಾಸ್ತೂರ್ಣಂ ಶಿನಿಪ್ರವರಸಾಯಕೈಃ।
07099008c ಮಹಾಮಾರುತವೇಗೇನ ರುಗ್ಣಾ ಇವ ಮಹಾದ್ರುಮಾಃ।।
ಕೂಡಲೇ ಅವರು ವೇಗವಾಗಿ ಬೀಸುತ್ತಿದ್ದ ಮಹಾಚಂಡಮಾರುತಕ್ಕೆ ಸಿಲುಕಿ ಮುರಿದುಬಿದ್ದ ಮಹಾಮರಗಳಂತೆ ಶಿನಿಪ್ರವರನ ಸಾಯಕಗಳಿಗೆ ಸಿಲುಕಿ ಹತರಾಗಿ ಬಿದ್ದರು.
07099009a ರಥೈಶ್ಚ ಬಹುಧಾ ಚಿನ್ನೈರ್ಧ್ವಜೈಶ್ಚೈವ ವಿಶಾಂ ಪತೇ।
07099009c ಹಯೈಶ್ಚ ಕನಕಾಪೀಡೈಃ ಪತಿತೈಸ್ತತ್ರ ಮೇದಿನೀ।।
ವಿಶಾಂಪತೇ! ಅನೇಕ ರಥಗಳು ಮತ್ತು ಧ್ವಜಗಳೂ ತುಂಡಾಗಿ ಮತ್ತು ಬಂಗಾರದಿಂದ ಅಲಂಕೃತ ಕುದುರೆಗಳು ಹತವಾಗಿ ರಣಭೂಮಿಯಮೇಲೆ ಬಿದ್ದಿದ್ದವು.
07099010a ಶೈನೇಯಶರಸಂಕೃತ್ತೈಃ ಶೋಣಿತೌಘಪರಿಪ್ಲುತೈಃ।
07099010c ಅಶೋಭತ ಮಹಾರಾಜ ಕಿಂಶುಕೈರಿವ ಪುಷ್ಪಿತೈಃ।।
ಮಹಾರಾಜ! ಶೈನೇಯನ ಶರಗಳಿಂದ ಗಾಯಗೊಂಡು ರಕ್ತದಿಂದ ತೋಯ್ದುಹೋಗಿದ್ದ ಅವು ಹೂಬಿಟ್ಟ ಕಿಂಶುಕ ವೃಕ್ಷಗಳಂತೆ ಶೋಭಿಸಿದವು.
07099011a ತೇ ವಧ್ಯಮಾನಾಃ ಸಮರೇ ಯುಯುಧಾನೇನ ತಾವಕಾಃ।
07099011c ತ್ರಾತಾರಂ ನಾಧ್ಯಗಚ್ಚಂತ ಪಂಕಮಗ್ನಾ ಇವ ದ್ವಿಪಾಃ।।
ಸಮರದಲ್ಲಿ ಯುಯುಧಾನನಿಂದ ವಧಿಸಲ್ಪಡುತ್ತಿದ್ದ ನಿನ್ನವರು ಕೆಸರಿನಲ್ಲಿ ಸಿಲುಕಿದ್ದ ಆನೆಗಳಂತೆ ತ್ರಾತಾರನ್ಯಾರನ್ನೂ ಪಡೆಯಲಿಲ್ಲ.
07099012a ತತಸ್ತೇ ಪರ್ಯವರ್ತಂತ ಸರ್ವೇ ದ್ರೋಣರಥಂ ಪ್ರತಿ।
07099012c ಭಯಾತ್ಪತಗರಾಜಸ್ಯ ಗರ್ತಾನೀವ ಮಹೋರಗಾಃ।।
ಆಗ ಅವರೆಲ್ಲರೂ ಪತಗರಾಜನ ಭಯದಿಂದ ಬಿಲಗಳನ್ನು ಸೇರುವ ಮಹೋರಗಗಳಂತೆ ದ್ರೋಣನ ರಥದ ಬಳಿ ಸೇರಿದರು.
07099013a ಹತ್ವಾ ಪಂಚಶತಾನ್ಯೋಧಾನ್ ಶರೈರಾಶೀವಿಷೋಪಮೈಃ।
07099013c ಪ್ರಾಯಾತ್ಸ ಶನಕೈರ್ವೀರೋ ಧನಂಜಯರಥಂ ಪ್ರತಿ।।
ವಿಷಸರ್ಪಗಳಂತಿರುವ ಶರಗಳಿಂದ ಆ ಐನೂರು ಯೋಧರನ್ನು ಸಂಹರಿಸಿ ವೀರ ಸಾತ್ಯಕಿಯು ನಿಧಾನವಾಗಿ ಧನಂಜಯನ ರಥದ ಕಡೆ ಪ್ರಯಾಣಿಸಿದನು.
07099014a ತಂ ಪ್ರಯಾಂತಂ ನರಶ್ರೇಷ್ಠಂ ಪುತ್ರೋ ದುಃಶಾಸನಸ್ತವ।
07099014c ವಿವ್ಯಾಧ ನವಭಿಸ್ತೂರ್ಣಂ ಶರೈಃ ಸನ್ನತಪರ್ವಭಿಃ।।
ಮುಂದೆ ಸಾಗುತ್ತಿದ್ದ ಆ ನರಶ್ರೇಷ್ಠನನ್ನು ನಿನ್ನ ಮಗ ದುಶಾಸನನು ಕೂಡಲೇ ಒಂಭತ್ತು ಸನ್ನತಪರ್ವ ಶರಗಳಿಂದ ಹೊಡೆದನು.
07099015a ಸ ತು ತಂ ಪ್ರತಿವಿವ್ಯಾಧ ಪಂಚಭಿರ್ನಿಶಿತೈಃ ಶರೈಃ।
07099015c ರುಕ್ಮಪುಂಖೈರ್ಮಹೇಷ್ವಾಸೋ ಗಾರ್ಧ್ರಪತ್ರೈರಜಿಹ್ಮಗೈಃ।।
ಮಹೇಷ್ವಾಸ ಸಾತ್ಯಕಿಯಾದರೋ ಅವನನ್ನು ಐದು ರುಕ್ಮಪುಂಖಗಳ, ಹದ್ದಿನ ಗರಿಗಳ ನಿಶಿತ ಜಿಹ್ಮಗ ಶರಗಳಿಂದ ತಿರುಗಿ ಹೊಡೆದನು.
07099016a ಸಾತ್ಯಕಿಂ ತು ಮಹಾರಾಜ ಪ್ರಹಸನ್ನಿವ ಭಾರತ।
07099016c ದುಃಶಾಸನಸ್ತ್ರಿಭಿರ್ವಿದ್ಧ್ವಾ ಪುನರ್ವಿವ್ಯಾಧ ಪಂಚಭಿಃ।।
ಮಹಾರಾಜ! ಭಾರತ! ದುಃಶಾಸನನಾದರೋ ನಗುತ್ತಿರುವನೋ ಎನ್ನುವಂತೆ ಸಾತ್ಯಕಿಯನ್ನು ಮೂರರಿಂದ ಹೊಡೆದು ಪುನಃ ಐದರಿಂದ ಹೊಡೆದನು.
07099017a ಶೈನೇಯಸ್ತವ ಪುತ್ರಂ ತು ವಿದ್ಧ್ವಾ ಪಂಚಭಿರಾಶುಗೈಃ।
07099017c ಧನುಶ್ಚಾಸ್ಯ ರಣೇ ಚಿತ್ತ್ವಾ ವಿಸ್ಮಯನ್ನರ್ಜುನಂ ಯಯೌ।।
ಶೈನೇಯನು ನಿನ್ನ ಮಗನನ್ನು ಐದು ಆಶುಗಗಳಿಂದ ಹೊಡೆದು ಮತ್ತು ರಣದಲ್ಲಿ ಅವನ ಧನುಸ್ಸನ್ನು ಕತ್ತರಿಸಿ ವಿಸ್ಮಯನನ್ನಾಗಿಸಿ ಅರ್ಜುನನ ಕಡೆ ಹೋದನು.
07099018a ತತೋ ದುಃಶಾಸನಃ ಕ್ರುದ್ಧೋ ವೃಷ್ಣಿವೀರಾಯ ಗಚ್ಚತೇ।
07099018c ಸರ್ವಪಾರಶವೀಂ ಶಕ್ತಿಂ ವಿಸಸರ್ಜ ಜಿಘಾಂಸಯಾ।।
ವೃಷ್ಣಿವೀರನು ಹಾಗೆ ಹೋಗಲು ಕ್ರುದ್ಧನಾದ ದುಃಶಾಸನನು ಅವನನ್ನು ಕೊಲ್ಲಲು ಬಯಸಿ ಸರ್ವವೂ ಉಕ್ಕಿನ ಮಯವಾಗಿದ್ದ ಶಕ್ತಿಯನ್ನು ಅವನ ಮೇಲೆ ಪ್ರಯೋಗಿಸಿದನು.
07099019a ತಾಂ ತು ಶಕ್ತಿಂ ತದಾ ಘೋರಾಂ ತವ ಪುತ್ರಸ್ಯ ಸಾತ್ಯಕಿಃ।
07099019c ಚಿಚ್ಚೇದ ಶತಧಾ ರಾಜನ್ನಿಶಿತೈಃ ಕಂಕಪತ್ರಿಭಿಃ।।
ರಾಜನ್! ನಿನ್ನ ಮಗನ ಆ ಘೋರ ಶಕ್ತಿಯನ್ನಾದರೋ ಸಾತ್ಯಕಿಯು ನಿಶಿತ ಕಂಕಪತ್ರಿಗಳಿಂದ ನೂರುತುಂಡುಗಳನ್ನಾಗಿ ಕತ್ತರಿಸಿದನು.
07099020a ಅಥಾನ್ಯದ್ಧನುರಾದಾಯ ಪುತ್ರಸ್ತವ ಜನೇಶ್ವರ।
07099020c ಸಾತ್ಯಕಿಂ ದಶಭಿರ್ವಿದ್ಧ್ವಾ ಸಿಂಹನಾದಂ ನನಾದ ಹ।।
ಜನೇಶ್ವರ! ಆಗ ನಿನ್ನ ಮಗನು ಇನ್ನೊಂದು ಧನುಸ್ಸೆನ್ನೆತ್ತಿಕೊಂಡು ಸಾತ್ಯಕಿಯನ್ನು ಹತ್ತು ಬಾಣಗಳಿಂದ ಹೊಡೆದು ಸಿಂಹನಾದಗೈದನು.
07099021a ಸಾತ್ಯಕಿಸ್ತು ರಣೇ ಕ್ರುದ್ಧೋ ಮೋಹಯಿತ್ವಾ ಸುತಂ ತವ।
07099021c ಶರೈರಗ್ನಿಶಿಖಾಕಾರೈರಾಜಘಾನ ಸ್ತನಾಂತರೇ।
07099021e ಸರ್ವಾಯಸೈಸ್ತೀಕ್ಷ್ಣವಕ್ತ್ರೈರಷ್ಟಾಭಿರ್ವಿವ್ಯಧೇ ಪುನಃ।।
ರಣದಲ್ಲಿ ಕ್ರುದ್ಧನಾದ ಸಾತ್ಯಕಿಯಾದರೋ ನಿನ್ನ ಮಗನನ್ನು ಮೂರ್ಛೆಗೊಳಿಸುತ್ತಾ ಅಗ್ನಿಶಿಖೆಗಳ ಆಕಾರದಲ್ಲಿದ್ದ ಶರಗಳನ್ನು ಅವನ ಎದೆಗೆ ಗುರಿಯಿಟ್ಟು ಹೊಡೆದನು. ಪುನಃ ಎಂಟು ತೀಕ್ಷ್ಣಮುಖಗಳುಳ್ಳ ಉಕ್ಕಿನ ಬಾಣಗಳಿಂದ ಹೊಡೆದನು.
07099022a ದುಃಶಾಸನಸ್ತು ವಿಂಶತ್ಯಾ ಸಾತ್ಯಕಿಂ ಪ್ರತ್ಯವಿಧ್ಯತ।
07099022c ಸಾತ್ವತೋಽಪಿ ಮಹಾರಾಜ ತಂ ವಿವ್ಯಾಧ ಸ್ತನಾಂತರೇ।
07099022e ತ್ರಿಭಿರೇವ ಮಹಾವೇಗೈಃ ಶರೈಃ ಸನ್ನತಪರ್ವಭಿಃ।।
ಅದಕ್ಕೆ ಪ್ರತಿಯಾಗಿ ದುಃಶಾಸನನೂ ಕೂಡ ಸಾತ್ಯಕಿಯನ್ನು ಇಪ್ಪತ್ತು ಬಾಣಗಳಿಂದ ಹೊಡೆದನು. ಮಹಾರಾಜ! ತಿರುಗಿ ಸಾತ್ವತನೂ ಕೂಡ ಮಹಾವೇಗದಿಂದ ಅವನ ಎದೆಗೆ ಮೂರು ಸನ್ನತಪರ್ವ ಶರಗಳಿಂದ ಹೊಡೆದನು.
07099023a ತತೋಽಸ್ಯ ವಾಹಾನ್ನಿಶಿತೈಃ ಶರೈರ್ಜಘ್ನೇ ಮಹಾರಥಃ।
07099023c ಸಾರಥಿಂ ಚ ಸುಸಂಕ್ರುದ್ಧಃ ಶರೈಃ ಸನ್ನತಪರ್ವಭಿಃ।।
ಆಗ ತುಂಬಾ ಕ್ರೋಧಿತನಾದ ಮಹಾರಥ ಸಾತ್ಯಕಿಯು ದುಃಶಾಸನನ ಕುದುರೆಗಳನ್ನು ನಿಶಿತ ಬಾಣಗಳಿಂದ ಮತ್ತು ಸಾರಥಿಯನ್ನು ಕೂಡ ಸನ್ನತ ಪರ್ವ ಶರಗಳಿಂದ ಹೊಡೆದು ಸಂಹರಿಸಿದನು.
07099024a ಧನುರೇಕೇನ ಭಲ್ಲೇನ ಹಸ್ತಾವಾಪಂ ಚ ಪಂಚಭಿಃ।
07099024c ಧ್ವಜಂ ಚ ರಥಶಕ್ತಿಂ ಚ ಭಲ್ಲಾಭ್ಯಾಂ ಪರಮಾಸ್ತ್ರವಿತ್।
07099024e ಚಿಚ್ಚೇದ ವಿಶಿಖೈಸ್ತೀಕ್ಷ್ಣೈಸ್ತಥೋಭೌ ಪಾರ್ಷ್ಣಿಸಾರಥೀ।।
ಒಂದೇ ಭಲ್ಲದಿಂದ ಅವನ ಧನುಸ್ಸನ್ನೂ, ಹಸ್ತಾವಾಪವನ್ನೂ ಕತ್ತರಿಸಿ, ಎರಡು ಭಲ್ಲಗಳಿಂದ ಧ್ವಜವನ್ನೂ ರಥಶಕ್ತಿಯನ್ನೂ ತುಂಡರಿಸಿ ಆ ಪರಮಾಸ್ತ್ರವಿದುವು ತೀಕ್ಷ್ಣ ವಿಶಿಖಗಳಿಂದ ಅವನ ಇಬ್ಬರು ಪಾರ್ಷ್ಣಿಸಾರಥಿಗಳನ್ನೂ ಸಂಹರಿಸಿದನು.
07099025a ಸ ಚಿನ್ನಧನ್ವಾ ವಿರಥೋ ಹತಾಶ್ವೋ ಹತಸಾರಥಿಃ।
07099025c ತ್ರಿಗರ್ತಸೇನಾಪತಿನಾ ಸ್ವರಥೇನಾಪವಾಹಿತಃ।।
ಧನುಸ್ಸು ಮುರಿದು ವಿರಥನಾದ, ಕುದುರೆ-ಸಾರಥಿಗಳನ್ನು ಕಳೆದುಕೊಂಡ ದುಃಶಾಸನನನ್ನು ತ್ರಿಗರ್ತಸೇನಾಪತಿಯು ತನ್ನ ರಥದಲ್ಲಿ ಏರಿಸಿಕೊಂಡನು.
07099026a ತಮಭಿದ್ರುತ್ಯ ಶೈನೇಯೋ ಮುಹೂರ್ತಮಿವ ಭಾರತ।
07099026c ನ ಜಘಾನ ಮಹಾಬಾಹುರ್ಭೀಮಸೇನವಚಃ ಸ್ಮರನ್।।
ಭಾರತ! ಮಹಾಬಾಹು ಭೀಮಸೇನನ ಮಾತನ್ನು ನೆನಪಿಸಿಕೊಂಡು ಒಂದು ಕ್ಷಣ ದೊರಕಿದ್ದರೂ ಶೈನೇಯನು ದುಃಶಾಸನನನ್ನು ಕೊಲ್ಲಲಿಲ್ಲ.
07099027a ಭೀಮಸೇನೇನ ಹಿ ವಧಃ ಸುತಾನಾಂ ತವ ಭಾರತ।
07099027c ಪ್ರತಿಜ್ಞಾತಃ ಸಭಾಮಧ್ಯೇ ಸರ್ವೇಷಾಮೇವ ಸಂಯುಗೇ।।
ಭಾರತ! ಸಂಯುಗದಲ್ಲಿ ನಿನ್ನ ಎಲ್ಲ ಮಕ್ಕಳ ವಧೆಯನ್ನೂ ತಾನೇ ಮಾಡುತ್ತೇನೆಂದು ಸಭಾಮಧ್ಯದಲ್ಲಿ ಭೀಮಸೇನನು ಪ್ರತಿಜ್ಞೆಮಾಡಿದ್ದನು.
07099028a ತಥಾ ದುಃಶಾಸನಂ ಜಿತ್ವಾ ಸಾತ್ಯಕಿಃ ಸಂಯುಗೇ ಪ್ರಭೋ।
07099028c ಜಗಾಮ ತ್ವರಿತೋ ರಾಜನ್ಯೇನ ಯಾತೋ ಧನಂಜಯಃ।।
ಪ್ರಭೋ! ರಾಜನ್! ಹಾಗೆ ಸಂಯುಗದಲ್ಲಿ ದುಃಶಾಸನನನ್ನು ಗೆದ್ದ ಸಾತ್ಯಕಿಯು ತ್ವರೆಮಾಡಿ ಧನಂಜಯನು ಹೋಗಿರುವಲ್ಲಿಗೆ ಹೋದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ದುಃಶಾಸನಪರಾಜಯೇ ಏಕೋನಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶೇ ದುಃಶಾಸನಪರಾಜಯ ಎನ್ನುವ ತೊಂಭತ್ತೊಂಭತ್ತನೇ ಅಧ್ಯಾಯವು.