ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 98
ಸಾರ
ಪಲಾಯನ ಮಾಡಿಬಂದ ದುಃಶಾಸನನನ್ನು ಟೀಕಿಸಿ ದ್ರೋಣನು ಹಿಂದಿರುಗಿ ಸಾತ್ಯಕಿಯೊಡನೆ ಯುದ್ಧಮಾಡಲು ಹೇಳಿ ಕಳುಹಿಸಿದುದು (1-23). ದ್ರೋಣನು ವೀರಕೇತುವೇ ಮೊದಲಾದ ಪಾಂಚಾಲರನ್ನು ಸಂಹರಿಸಿದುದು (24-41). ದ್ರೋಣ-ಧೃಷ್ಟದ್ಯುಮ್ನರ ಯುದ್ಧ (42-58).
07098001 ಸಂಜಯ ಉವಾಚ।
07098001a ದುಃಶಾಸನರಥಂ ದೃಷ್ಟ್ವಾ ಸಮೀಪೇ ಪರ್ಯವಸ್ಥಿತಂ।
07098001c ಭಾರದ್ವಾಜಸ್ತತೋ ವಾಕ್ಯಂ ದುಃಶಾಸನಮಥಾಬ್ರವೀತ್।।
ಸಂಜಯನು ಹೇಳಿದನು: “ದುಃಶಾಸನನ ರಥವು ಸಮೀಪದಲ್ಲಿಯೇ ನಿಂತಿರುವುದನ್ನು ನೋಡಿ ಭಾರದ್ವಾಜನು ದುಃಶಾಸನನಿಗೆ ಈ ಮಾತುಗಳನ್ನಾಡಿದನು:
07098002a ದುಃಶಾಸನ ರಥಾಃ ಸರ್ವೇ ಕಸ್ಮಾದೇತೇ ಪ್ರವಿದ್ರುತಾಃ।
07098002c ಕಚ್ಚಿತ್ ಕ್ಷೇಮಂ ತು ನೃಪತೇಃ ಕಚಿವಿಜ್ಜೀವತಿ ಸೈಂಧವಃ।।
“ದುಃಶಾಸನ! ಈ ಮಹಾರಥರೆಲ್ಲರೂ ಏಕೆ ಇಲ್ಲಿಗೆ ಓಡಿ ಧಾವಿಸಿ ಬರುತ್ತಿದ್ದಾರೆ? ನೃಪತಿ ದುರ್ಯೋಧನನು ಕ್ಷೇಮದಿಂದಿರುವನೇ? ಸೈಂಧವನು ಬದುಕಿದ್ದಾನೆಯೇ?
07098003a ರಾಜಪುತ್ರೋ ಭವಾನತ್ರ ರಾಜಭ್ರಾತಾ ಮಹಾರಥಃ।
07098003c ಕಿಮರ್ಥಂ ದ್ರವಸೇ ಯುದ್ಧೇ ಯೌವರಾಜ್ಯಮವಾಪ್ಯ ಹಿ।।
ನೀನು ರಾಜಪುತ್ರ. ರಾಜನ ಸಹೋದರ. ಮಹಾರಥ. ಯುವರಾಜತ್ವವನ್ನು ಪಡೆದು ಹೀಗೆ ಏಕೆ ಯುದ್ಧದಿಂದ ಓಡಿ ಬಂದಿರುವೆ?
07098004a ಸ್ವಯಂ ವೈರಂ ಮಹತ್ಕೃತ್ವಾ ಪಾಂಚಾಲೈಃ ಪಾಂಡವೈಃ ಸಹ।
07098004c ಏಕಂ ಸಾತ್ಯಕಿಮಾಸಾದ್ಯ ಕಥಂ ಭೀತೋಽಸಿ ಸಂಯುಗೇ।।
ಪಾಂಚಾಲರು ಮತ್ತು ಪಾಂಡವರೊಂದಿಗೆ ಮಹಾ ವೈರವನ್ನು ಸ್ವಯಂ ನೀನೇ ಕಟ್ಟಿಕೊಂಡು ಈಗ ಏಕೆ ಯುದ್ಧದಲ್ಲಿ ಸಾತ್ಯಕಿಯೊಬ್ಬನನ್ನೇ ಎದುರಿಸಿ ಭಯಪಟ್ಟಿರುವೆ?
07098005a ನ ಜಾನೀಷೇ ಪುರಾ ತ್ವಂ ತು ಗೃಹ್ಣನ್ನಕ್ಷಾನ್ದುರೋದರೇ।
07098005c ಶರಾ ಹ್ಯೇತೇ ಭವಿಷ್ಯಂತಿ ದಾರುಣಾಶೀವಿಷೋಪಮಾಃ।।
ಹಿಡಿದಿದ್ದ ದಾಳಗಳೇ ಮುಂದೆ ಯುದ್ಧದಲ್ಲಿ ದಾರುಣ ಸರ್ಪವಿಷದಂತಿರುವ ಬಾಣಗಳಾಗುತ್ತವೆ ಎಂದು ನಿನಗೆ ಹಿಂದೆ ತಿಳಿದಿರಲಿಲ್ಲವೇ?
07098006a ಅಪ್ರಿಯಾಣಾಂ ಚ ವಚನಂ ಪಾಂಡವೇಷು ವಿಶೇಷತಃ।
07098006c ದ್ರೌಪದ್ಯಾಶ್ಚ ಪರಿಕ್ಲೇಶಸ್ತ್ವನ್ಮೂಲೋ ಹ್ಯಭವತ್ಪುರಾ।।
ಹಿಂದೆ ನೀನು ಪಾಂಡವರಿಗೆ ಅಪ್ರಿಯ ಮಾತುಗಳನ್ನಾಡಿದೆ32. ಅದರಲ್ಲೂ ವಿಶೇಷವಾಗಿ ದ್ರೌಪದಿಯ ಕಷ್ಟಗಳಿಗೆ ಕಾರಣನಾದೆ.
07098007a ಕ್ವ ತೇ ಮಾನಶ್ಚ ದರ್ಪಶ್ಚ ಕ್ವ ಚ ತದ್ವೀರ ಗರ್ಜಿತಂ।
07098007c ಆಶೀವಿಷಸಮಾನ್ಪಾರ್ಥಾನ್ಕೋಪಯಿತ್ವಾ ಕ್ವ ಯಾಸ್ಯಸಿ।।
ಅಂದಿನ ನಿನ್ನ ಅಭಿಮಾನವು ಈಗ ಎಲ್ಲಿ ಹೋಯಿತು? ದರ್ಪವೆಲ್ಲಿ ಹೋಯಿತು? ವೀರ್ಯವೆಲ್ಲಿ ಅಡಗಿಹೋಯಿತು? ಅಂದಿನ ಗರ್ಜನೆಯು ಈಗ ಎಲ್ಲಿ ಹೋಯಿತು? ವಿಷಸರ್ಪಸದೃಶ ಪಾರ್ಥರನ್ನು ಈ ರೀತಿ ಕೋಪಗೊಳಿಸಿ ಈಗ ಎಲ್ಲಿ ಹೋಗುತ್ತಿರುವೆ?
07098008a ಶೋಚ್ಯೇಯಂ ಭಾರತೀ ಸೇನಾ ರಾಜಾ ಚೈವ ಸುಯೋಧನಃ।
07098008c ಯಸ್ಯ ತ್ವಂ ಕರ್ಕಶೋ ಭ್ರಾತಾ ಪಲಾಯನಪರಾಯಣಃ।।
ಈಗ ಭಾರತೀಸೇನೆಗಾಗಿ ಶೋಕಿಸಬೇಕಾಗಿದೆ. ರಾಜಾ ಸುಯೋಧನನಿಗಾಗಿ ಶೋಕಿಸಬೇಕಾಗಿದೆ. ಏಕೆಂದರೆ ಅವನ ತಮ್ಮನಾದ ಕರ್ಕಶ ನೀನು ಯುದ್ಧದಿಂದ ಪಲಾಯನಮಾಡುತ್ತಿರುವೆ!
07098009a ನನು ನಾಮ ತ್ವಯಾ ವೀರ ದೀರ್ಯಮಾಣಾ ಭಯಾರ್ದಿತಾ।
07098009c ಸ್ವಬಾಹುಬಲಮಾಸ್ಥಾಯ ರಕ್ಷಿತವ್ಯಾ ಹ್ಯನೀಕಿನೀ।
07098009e ಸ ತ್ವಮದ್ಯ ರಣಂ ತ್ಯಕ್ತ್ವಾ ಭೀತೋ ಹರ್ಷಯಸೇ ಪರಾನ್।।
ವೀರ! ಸೀಳಿಹೋಗಿರುವ ಭಯಾರ್ದಿತರ ಈ ಸೇನೆಗಳನ್ನು ಸ್ವಬಾಹುಬಲವನ್ನುಪಯೋಗಿಸಿ ನೀನು ರಕ್ಷಿಸಬೇಕಲ್ಲವೇ? ಭೀತನಾಗಿ ರಣವನ್ನು ತೊರೆದು ನೀನು ಶತ್ರುಗಳಿಗೆ ಆನಂದವನ್ನುಂಟುಮಾಡುತ್ತಿದ್ದೀಯೆ.
07098010a ವಿದ್ರುತೇ ತ್ವಯಿ ಸೈನ್ಯಸ್ಯ ನಾಯಕೇ ಶತ್ರುಸೂದನ।
07098010c ಕೋಽನ್ಯಃ ಸ್ಥಾಸ್ಯತಿ ಸಂಗ್ರಾಮೇ ಭೀತೋ ಭೀತೇ ವ್ಯಪಾಶ್ರಯೇ।।
ಶತ್ರುಸೂದನ! ಸೈನ್ಯದ ನಾಯಕನಾಗಿರುವ ನೀನೇ ಓಡಿಹೋದರೆ ಬೇರೆ ಯಾರುತಾನೇ ಸಂಗ್ರಾಮದಲ್ಲಿ ಉಳಿದಾರು? ಯಾರ ಆಶ್ರಯದಲ್ಲಿರುವರೋ ಅವರೇ ಭೀತರಾದರೆ ಇಡೀ ಸೇನೆಯೇ ಭೀತಿಗೊಳ್ಳುವುದಿಲ್ಲವೇ?
07098011a ಏಕೇನ ಸಾತ್ವತೇನಾದ್ಯ ಯುಧ್ಯಮಾನಸ್ಯ ಚಾನಘ।
07098011c ಪಲಾಯನೇ ತವ ಮತಿಃ ಸಂಗ್ರಾಮಾದ್ಧಿ ಪ್ರವರ್ತತೇ।।
ಅನಘ! ಇಂದು ಸಾತ್ವತನೊಬ್ಬನೊಡನೆ ಯುದ್ಧಮಾಡುವಾಗಲೇ ನೀನು ಸಂಗ್ರಾಮದಿಂದ ಪಲಾಯನದ ಕುರಿತು ಮನಸ್ಸು ಮಾಡಿದೆ.
07098012a ಯದಾ ಗಾಂಡೀವಧನ್ವಾನಂ ಭೀಮಸೇನಂ ಚ ಕೌರವ।
07098012c ಯಮೌ ಚ ಯುಧಿ ದ್ರಷ್ಟಾಸಿ ತದಾ ತ್ವಂ ಕಿಂ ಕರಿಷ್ಯಸಿ।।
ಕೌರವ! ಇನ್ನು ಗಾಂಡೀವ ಧನ್ವಿ ಅರ್ಜುನ, ಭೀಮಸೇನ ಮತ್ತು ಯಮಳರಾದ ನಕುಲ-ಸಹದೇವರನ್ನು ಯುದ್ಧದಲ್ಲಿ ಎದುರಿಸಿದರೆ ಆಗ ನೀನು ಏನು ಮಾಡುವೆ?
07098013a ಯುಧಿ ಫಲ್ಗುನಬಾಣಾನಾಂ ಸೂರ್ಯಾಗ್ನಿಸಮತೇಜಸಾಂ।
07098013c ನ ತುಲ್ಯಾಃ ಸಾತ್ಯಕಿಶರಾ ಯೇಷಾಂ ಭೀತಃ ಪಲಾಯಸೇ।।
ಯಾವುದರಿಂದ ನೀನು ಭೀತನಾಗಿ ಪಲಾಯನಮಾಡುತ್ತಿರುವೆಯೋ ಆ ಸಾತ್ಯಕಿಯ ಶರಗಳು ಯುದ್ಧದಲ್ಲಿ ಸೂರ್ಯಾಗ್ನಿಸಮ ತೇಜಸ್ಸುಳ್ಳ ಫಲ್ಗುನನ ಬಾಣಗಳ ತುಲನೆಗೆ ಸಮನಾದವುಗಳಲ್ಲ. 3307098014a ಯದಿ ತಾವತ್ಕೃತಾ ಬುದ್ಧಿಃ ಪಲಾಯನಪರಾಯಣಾ।
07098014c ಪೃಥಿವೀ ಧರ್ಮರಾಜಸ್ಯ ಶಮೇನೈವ ಪ್ರದೀಯತಾಂ।।
ಒಂದುವೇಳೆ ನೀನು ಪಲಾಯನ ಮಾಡುವ ನಿರ್ಧಾರವನ್ನೇ ಮಾಡಿದ್ದರೆ ಈ ಭೂಮಿಯನ್ನು ಧರ್ಮರಾಜನಿಗೆ ಶಾಂತಿಯಿಂದ ನೀಡಬೇಕು.
07098015a ಯಾವತ್ಫಲ್ಗುನನಾರಾಚಾ ನಿರ್ಮುಕ್ತೋರಗಸನ್ನಿಭಾಃ।
07098015c ನಾವಿಶಂತಿ ಶರೀರಂ ತೇ ತಾವತ್ಸಂಶಾಮ್ಯ ಪಾಂಡವೈಃ।।
ಫಲ್ಗುನನು ಬಿಟ್ಟ ಉರಗಸನ್ನಿಭ ನಾರಾಚಗಳು ನಿನ್ನ ಶರೀರವನ್ನು ಹೊಗುವ ಮೊದಲೇ ಪಾಂಡವರೊಂದಿಗೆ ಸಂಧಿಮಾಡಿಕೋ!
07098016a ಯಾವತ್ತೇ ಪೃಥಿವೀಂ ಪಾರ್ಥಾ ಹತ್ವಾ ಭ್ರಾತೃಶತಂ ರಣೇ।
07098016c ನಾಕ್ಷಿಪಂತಿ ಮಹಾತ್ಮಾನಸ್ತಾವತ್ಸಂಶಾಮ್ಯ ಪಾಂಡವೈಃ।।
ರಣದಲ್ಲಿ ನೂರು ಸಹೋದರರನ್ನೂ ಕೊಂದು ಆ ಮಹಾತ್ಮರು ಈ ಭೂಮಿಯನ್ನು ಕಿತ್ತುಕೊಳ್ಳುವುದರೊಳಗಾಗಿ ಪಾಂಡವರೊಡನೆ ಸಂಧಿಮಾಡಿಕೋ!
07098017a ಯಾವನ್ನ ಕ್ರುಧ್ಯತೇ ರಾಜಾ ಧರ್ಮಪುತ್ರೋ ಯುಧಿಷ್ಠಿರಃ।
07098017c ಕೃಷ್ಣಶ್ಚ ಸಮರಶ್ಲಾಘೀ ತಾವತ್ಸಂಶಾಮ್ಯ ಪಾಂಡವೈಃ।।
ಧರ್ಮಪುತ್ರ ರಾಜಾ ಯುಧಿಷ್ಠಿರ ಮತ್ತು ಸಮರಶ್ಲಾಘೀ ಕೃಷ್ಣರು ಕ್ರುದ್ಧರಾಗುವ ಮೊದಲೇ ಪಾಂಡವರೊಡನೆ ಸಂಧಿಮಾಡಿಕೋ!
07098018a ಯಾವದ್ಭೀಮೋ ಮಹಾಬಾಹುರ್ವಿಗಾಹ್ಯ ಮಹತೀಂ ಚಮೂಂ।
07098018c ಸೋದರಾಂಸ್ತೇ ನ ಮೃದ್ನಾತಿ ತಾವತ್ಸಂಶಾಮ್ಯ ಪಾಂಡವೈಃ।।
ಮಹಾಬಾಹು ಭೀಮನು ಈ ಮಹಾಸೇನೆಯನ್ನು ಒಳಹೊಕ್ಕಿ ನಿನ್ನ ಸೋದರರನ್ನು ಸದೆಬಡಿಯುವುದರೊಳಗಾಗಿ ಪಾಂಡವರೊಡನೆ ಸಂಧಿಮಾಡಿಕೋ!
07098019a ಪೂರ್ವಮುಕ್ತಶ್ಚ ತೇ ಭ್ರಾತಾ ಭೀಷ್ಮೇಣ ಸ ಸುಯೋಧನಃ।
07098019c ಅಜೇಯಾಃ ಪಾಂಡವಾಃ ಸಂಖ್ಯೇ ಸೌಮ್ಯ ಸಂಶಾಮ್ಯ ಪಾಂಡವೈಃ।
07098019e ನ ಚ ತತ್ಕೃತವಾನ್ಮಂದಸ್ತವ ಭ್ರಾತಾ ಸುಯೋಧನಃ।।
ಹಿಂದೆ ನಿನ್ನ ಅಣ್ಣ ಸುಯೋಧನನಿಗೆ ಭೀಷ್ಮನು “ಸೌಮ್ಯ! ಯುದ್ಧದಲ್ಲಿ ಪಾಂಡವರು ಅಜೇಯರು. ಪಾಂಡವರೊಂದಿಗೆ ಸಂಧಿಮಾಡಿಕೋ!” ಎಂದು ಹೇಳಿದ್ದನು. ಆದರೆ ನಿನ್ನ ಅಣ್ಣ ಮೂಢ ಸುಯೋಧನನು ಹಾಗೆ ಮಾಡಲಿಲ್ಲ!
07098020a ಸ ಯುದ್ಧೇ ಧೃತಿಮಾಸ್ಥಾಯ ಯತ್ತೋ ಯುಧ್ಯಸ್ವ ಪಾಂಡವೈಃ।
07098020c ಗಚ್ಚ ತೂರ್ಣಂ ರಥೇನೈವ ತತ್ರ ತಿಷ್ಠತಿ ಸಾತ್ಯಕಿಃ।।
ಆದುದರಿಂದ ಯುದ್ಧದಲ್ಲಿ ಧೈರ್ಯವನ್ನು ತಂದುಕೊಂಡು ಪ್ರಯತ್ನಪಟ್ಟು ಪಾಂಡವರೊಂದಿಗೆ ಯುದ್ಧಮಾಡು. ಬೇಗನೇ ಇದೇ ರಥದಲ್ಲಿ ಸಾತ್ಯಕಿಯೆಲ್ಲಿ ನಿಂತಿರುವನೋ ಅಲ್ಲಿಗೆ ಹೋಗು!
07098021a ತ್ವಯಾ ಹೀನಂ ಬಲಂ ಹ್ಯೇತದ್ವಿದ್ರವಿಷ್ಯತಿ ಭಾರತ।
07098021c ಆತ್ಮಾರ್ಥಂ ಯೋಧಯ ರಣೇ ಸಾತ್ಯಕಿಂ ಸತ್ಯವಿಕ್ರಮಂ।।
ಭಾರತ! ನೀನಿಲ್ಲದೇ ನಮ್ಮ ಸೇನೆಯು ದಿಕ್ಕಾಪಾಲಾಗಿ ಓಡಿಹೋಗುತ್ತಿದೆ. ನಿನಗಾಗಿಯಾದರೂ34 ರಣದಲ್ಲಿ ಸತ್ಯವಿಕ್ರಮಿ ಸಾತ್ಯಕಿಯೊಂದಿಗೆ ಯುದ್ಧಮಾಡು!”
07098022a ಏವಮುಕ್ತಸ್ತವ ಸುತೋ ನಾಬ್ರವೀತ್ಕಿಂ ಚಿದಪ್ಯಸೌ।
07098022c ಶ್ರುತಂ ಚಾಶ್ರುತವತ್ಕೃತ್ವಾ ಪ್ರಾಯಾದ್ಯೇನ ಸ ಸಾತ್ಯಕಿಃ।।
ಇಷ್ಟು ಹೇಳಿದರೂ ನಿನ್ನ ಮಗನು ಏನನ್ನೂ ಮಾತನಾಡಲಿಲ್ಲ. ಕೇಳಿದರೂ ಕೇಳದಂತೆ ಮಾಡಿ ಸಾತ್ಯಕಿಯು ಹೋದ ದಾರಿಯಲ್ಲಿ ಹೊರಟು ಹೋದನು.
07098023a ಸೈನ್ಯೇನ ಮಹತಾ ಯುಕ್ತೋ ಮ್ಲೇಚ್ಚಾನಾಮನಿವರ್ತಿನಾಂ।
07098023c ಆಸಾದ್ಯ ಚ ರಣೇ ಯತ್ತೋ ಯುಯುಧಾನಮಯೋಧಯತ್।।
ಯುದ್ಧದಿಂದ ಹಿಮ್ಮೆಟ್ಟದಿದ್ದ ಮ್ಲೇಚ್ಛರ ಮಹಾ ಸೇನೆಯನ್ನು ಕೂಡಿಕೊಂಡು ದುಃಶಾಸನನು ಯುಯುಧಾನ ಸಾತ್ಯಕಿಯೊಡನೆ ಯುದ್ಧಮಾಡತೊಡಗಿದನು.
07098024a ದ್ರೋಣೋಽಪಿ ರಥಿನಾಂ ಶ್ರೇಷ್ಠಃ ಪಾಂಚಾಲಾನ್ಪಾಂಡವಾಂಸ್ತಥಾ।
07098024c ಅಭ್ಯದ್ರವತ ಸಂಕ್ರುದ್ಧೋ ಜವಮಾಸ್ಥಾಯ ಮಧ್ಯಮಂ।।
ರಥಿಗಳಲ್ಲಿ ಶ್ರೇಷ್ಠ ದ್ರೋಣನೂ ಕೂಡ ಮಧ್ಯಮ ವೇಗವನ್ನು ಬಳಸಿ ಸಂಕ್ರುದ್ಧನಾಗಿ ಪಾಂಚಾಲ-ಪಾಂಡವರನ್ನು ಆಕ್ರಮಣಿಸಿದನು.
07098025a ಪ್ರವಿಶ್ಯ ಚ ರಣೇ ದ್ರೋಣಃ ಪಾಂಚಾಲಾನಾಂ ವರೂಥಿನೀಂ।
07098025c ದ್ರಾವಯಾಮಾಸ ಯೋಧಾನ್ವೈ ಶತಶೋಽಥ ಸಹಸ್ರಶಃ।।
ರಣದಲ್ಲಿ ಪಾಂಚಾಲರ ಸೇನೆಯನ್ನು ಪ್ರವೇಶಿಸಿ ದ್ರೋಣನು ನೂರಾರು ಸಾವಿರಾರು ಯೋಧರನ್ನು ಪಲಾಯನಗೊಳಿಸಿದನು.
07098026a ತತೋ ದ್ರೋಣೋ ಮಹಾರಾಜ ನಾಮ ವಿಶ್ರಾವ್ಯ ಸಂಯುಗೇ।
07098026c ಪಾಂಡುಪಾಂಚಾಲಮತ್ಸ್ಯಾನಾಂ ಪ್ರಚಕ್ರೇ ಕದನಂ ಮಹತ್।।
ಆಗ ಮಹಾರಾಜ! ದ್ರೋಣನು ಸಂಯುಗದಲ್ಲಿ ತನ್ನ ಹೆಸರನ್ನು ಕೂಗಿ ಹೇಳಿಕೊಳ್ಳುತ್ತಾ ಪಾಂಡವ-ಪಾಂಚಾಲ-ಮತ್ಸ್ಯರೊಂದಿಗೆ ಮಹಾ ಕದನವನ್ನು ನಡೆಸಿದನು.
07098027a ತಂ ಜಯಂತಮನೀಕಾನಿ ಭಾರದ್ವಾಜಂ ತತಸ್ತತಃ।
07098027c ಪಾಂಚಾಲಪುತ್ರೋ ದ್ಯುತಿಮಾನ್ವೀರಕೇತುಃ ಸಮಭ್ಯಯಾತ್।।
ಅಲ್ಲಲ್ಲಿ ಸೇನೆಗಳನ್ನು ಸೋಲಿಸುತ್ತಿದ್ದ ಭಾರದ್ವಾಜನನ್ನು ಪಾಂಚಾಲಪುತ್ರ ದ್ಯುತಿಮಾನ ವೀರಕೇತುವು ಎದುರಿಸಿದನು.
07098028a ಸ ದ್ರೋಣಂ ಪಂಚಭಿರ್ವಿದ್ಧ್ವಾ ಶರೈಃ ಸನ್ನತಪರ್ವಭಿಃ।
07098028c ಧ್ವಜಮೇಕೇನ ವಿವ್ಯಾಧ ಸಾರಥಿಂ ಚಾಸ್ಯ ಸಪ್ತಭಿಃ।।
ಅವನು ದ್ರೋಣನನ್ನು ಐದು ಸನ್ನತಪರ್ವಶರಗಳಿಂದ ಹೊಡೆದು ಒಂದರಿಂದ ಅವನ ಧ್ವಜವನ್ನೂ ಏಳರಿಂದ ಸಾರಥಿಯನ್ನೂ ಹೊಡೆದನು.
07098029a ತತ್ರಾದ್ಭುತಂ ಮಹಾರಾಜ ದೃಷ್ಟವಾನಸ್ಮಿ ಸಂಯುಗೇ।
07098029c ಯದ್ದ್ರೋಣೋ ರಭಸಂ ಯುದ್ಧೇ ಪಾಂಚಾಲ್ಯಂ ನಾಭ್ಯವರ್ತತ।।
ಮಹಾರಾಜ! ಅವರ ಯುದ್ಧದಲ್ಲಿ ನಾನು ಅದ್ಭುತವನ್ನು ಕಂಡೆ. ದ್ರೋಣನಿಗೆ ರಭಸವಾಗಿ ಯುದ್ಧಮಾಡುತ್ತಿದ್ದ ಆ ಪಾಂಚಾಲ್ಯನನ್ನು ಅತಿಕ್ರಮಿಸಿ ಹೋಗಲಾಗಲಿಲ್ಲ.
07098030a ಸನ್ನಿರುದ್ಧಂ ರಣೇ ದ್ರೋಣಂ ಪಾಂಚಾಲಾ ವೀಕ್ಷ್ಯ ಮಾರಿಷ।
07098030c ಆವವ್ರುಃ ಸರ್ವತೋ ರಾಜನ್ಧರ್ಮಪುತ್ರಜಯೈಷಿಣಃ।।
ಮಾರಿಷ! ರಾಜನ್! ರಣದಲ್ಲಿ ದ್ರೋಣನನ್ನು ಪಾಂಚಾಲನು ತಡೆದುದನ್ನು ನೋಡಿ ಧರ್ಮಪುತ್ರನ ಹಿತೈಷಿಗಳು ದ್ರೋಣನನ್ನು ಸುತ್ತಲಿನಿಂದ ಆಕ್ರಮಣಿಸಿದರು.
07098031a ತೇ ಶರೈರಗ್ನಿಸಂಕಾಶೈಸ್ತೋಮರೈಶ್ಚ ಮಹಾಧನೈಃ।
07098031c ಶಸ್ತ್ರೈಶ್ಚ ವಿವಿಧೈ ರಾಜನ್ದ್ರೋಣಮೇಕಮವಾಕಿರನ್।।
ರಾಜನ್! ಅವರು ಅಗ್ನಿಸಂಕಾಶ ಶರಗಳಿಂದಲೂ, ಬಹು ಮೂಲ್ಯ ತೋಮರಗಳಿಂದಲೂ, ವಿವಿಧ ಶಸ್ತ್ರಗಳಿಂದಲೂ ದ್ರೋಣನೊಬ್ಬನನ್ನೇ ಮುಚ್ಚಿಬಿಟ್ಟರು.
07098032a ನಿಹತ್ಯ ತಾನ್ಬಾಣಗಣಾನ್ದ್ರೋಣೋ ರಾಜನ್ಸಮಂತತಃ।
07098032c ಮಹಾಜಲಧರಾನ್ವ್ಯೋಮ್ನಿ ಮಾತರಿಶ್ವಾ ವಿವಾನಿವ।।
ರಾಜನ್! ದ್ರೋಣನು ಆಕಾಶದಲ್ಲಿ ಅಪಾರ ಮಳೆನೀರಿನಿಂದ ತುಂಬಿದ ಮೋಡಗಳನ್ನು ಚದುರಿಸುವ ವಾಯುದೇವನಂತೆ ಎಲ್ಲೆಡೆಯಿಂದ ಮುಸುಕಿದ ಆ ಬಾಣಗಣಗಳನ್ನು ನಾಶಗೊಳಿಸಿದನು.
07098033a ತತಃ ಶರಂ ಮಹಾಘೋರಂ ಸೂರ್ಯಪಾವಕಸನ್ನಿಭಂ।
07098033c ಸಂದಧೇ ಪರವೀರಘ್ನೋ ವೀರಕೇತುರಥಂ ಪ್ರತಿ।।
ಅನಂತರ ಪರವೀರಘ್ನ ದ್ರೋಣನು ಸೂರ್ಯ-ಪಾವಕರಂತಿರುವ ಮಹಾಘೋರ ಬಾಣವನ್ನು ವೀರಕೇತುವಿನ ರಥದ ಕಡೆ ಹೂಡಿ ಹೊಡೆದನು.
07098034a ಸ ಭಿತ್ತ್ವಾ ತು ಶರೋ ರಾಜನ್ಪಾಂಚಾಲ್ಯಂ ಕುಲನಂದನಂ।
07098034c ಅಭ್ಯಗಾದ್ಧರಣೀಂ ತೂರ್ಣಂ ಲೋಹಿತಾರ್ದ್ರೋ ಜ್ವಲನ್ನಿವ।।
ರಾಜನ್! ಆ ಶರವು ಪಾಂಚಾಲ್ಯ ಕುಲನಂದನನನ್ನು ಭೇದಿಸಿ ಕೂಡಲೇ ರಕ್ತದಿಂದ ತೋಯ್ದು ಪ್ರಜ್ವಲಿಸುತ್ತಿರುವಂತೆ ಭೂಮಿಯ ಮೇಲೆ ಬಿದ್ದಿತು.
07098035a ತತೋಽಪತದ್ರಥಾತ್ತೂರ್ಣಂ ಪಾಂಚಾಲ್ಯಃ ಕುಲನಂದನಃ।
07098035c ಪರ್ವತಾಗ್ರಾದಿವ ಮಹಾಂಶ್ಚಂಪಕೋ ವಾಯುಪೀಡಿತಃ।।
ಆಗ ಕೂಡಲೇ ಪಾಂಚಾಲರ ಕುಲನಂದನ ವೀರಕೇತುವು ಚಂಡಮಾರುತದಿಂದ ಹೊಡೆಯಲ್ಪಟ್ಟ ದೊಡ್ಡ ಸಂಪಿಗೆಯ ಮರವು ಪರ್ವತದ ಮೇಲಿಂದ ಕೆಳಕ್ಕೆ ಬೀಳುವಂತೆ ರಥದಿಂದ ಬಿದ್ದನು.
07098036a ತಸ್ಮಿನ್ ಹತೇ ಮಹೇಷ್ವಾಸೇ ರಾಜಪುತ್ರೇ ಮಹಾಬಲೇ।
07098036c ಪಾಂಚಾಲಾಸ್ತ್ವರಿತಾ ದ್ರೋಣಂ ಸಮಂತಾತ್ಪರ್ಯವಾರಯನ್।।
ಆ ಮಹೇಷ್ವಾಸ ಮಹಾಬಲಿ ರಾಜಪುತ್ರನು ಹತನಾಗಲು ಪಾಂಚಾಲರು ತ್ವರೆಮಾಡಿ ದ್ರೋಣನನ್ನು ಎಲ್ಲಕಡೆಗಳಿಂದ ಸುತ್ತುವರೆದರು.
07098037a ಚಿತ್ರಕೇತುಃ ಸುಧನ್ವಾ ಚ ಚಿತ್ರವರ್ಮಾ ಚ ಭಾರತ।
07098037c ತಥಾ ಚಿತ್ರರಥಶ್ಚೈವ ಭ್ರಾತೃವ್ಯಸನಕರ್ಷಿತಾಃ।।
07098038a ಅಭ್ಯದ್ರವಂತ ಸಹಿತಾ ಭಾರದ್ವಾಜಂ ಯುಯುತ್ಸವಃ।
07098038c ಮುಂಚಂತಃ ಶರವರ್ಷಾಣಿ ತಪಾಂತೇ ಜಲದಾ ಇವ।।
ಭ್ರಾತೃವ್ಯಸನದಿಂದ ದುಃಖಿತರಾದ ಚಿತ್ರಕೇತು, ಸುಧನ್ವಾ, ಚಿತ್ರವರ್ಮ ಮತ್ತು ಚಿತ್ರರಥರು ಸಂಘಟಿತರಾಗಿ ಭಾರದ್ವಾಜನೊಂದಿಗೆ ಯುದ್ಧಮಾಡಲು ಉತ್ಸುಕರಾಗಿ ಬೇಸಗೆಯ ಕೊನೆಯಲ್ಲಿ ಮೋಡಗಳು ಮಳೆಗರೆಯುವಂತೆ ಬಾಣಗಳ ಮಳೆಗರೆಯುತ್ತಾ ದ್ರೋಣನನ್ನು ಆಕ್ರಮಣಿಸಿದರು.
07098039a ಸ ವಧ್ಯಮಾನೋ ಬಹುಧಾ ರಾಜಪುತ್ರೈರ್ಮಹಾರಥೈಃ।
07098039c ವ್ಯಶ್ವಸೂತರಥಾಂಶ್ಚಕ್ರೇ ಕುಮಾರಾನ್ಕುಪಿತೋ ರಣೇ।।
ಆ ಮಹಾರಥ ರಾಜಪುತ್ರರಿಂದ ಬಹಳವಾಗಿ ಪೀಡಿಸಲ್ಪಟ್ಟ ದ್ರೋಣನು ರಣದಲ್ಲಿ ಕುಪಿತನಾಗಿ ಆ ಕುಮಾರರನ್ನು ಅಶ್ವ-ಸೂತ-ರಥ ವಿಹೀನರನ್ನಾಗಿ ಮಾಡಿದನು.
07098040a ತಥಾಪರೈಃ ಸುನಿಶಿತೈರ್ಭಲ್ಲೈಸ್ತೇಷಾಂ ಮಹಾಯಶಾಃ।
07098040c ಪುಷ್ಪಾಣೀವ ವಿಚಿನ್ವನ್ ಹಿ ಸೋತ್ತಮಾಂಗಾನ್ಯಪಾತಯತ್।।
ಮಹಾಯಶಸ್ವಿ ದ್ರೋಣನು ಸುನಿಶ್ಚಿತವಾದ ಇತರ ಭಲ್ಲಗಳಿಂದ ಗಿಡಗಳಿಂದ ಹೂವನ್ನು ಕೊಯ್ಯುವಂತೆ ಅವರ ಉತ್ತಮಾಂಗ (ತಲೆ) ಗಳನ್ನು ಕತ್ತರಿಸಿ ಬೀಳಿಸಿದನು.
07098041a ತೇ ರಥೇಭ್ಯೋ ಹತಾಃ ಪೇತುಃ ಕ್ಷಿತೌ ರಾಜನ್ಸುವರ್ಚಸಃ।
07098041c ದೇವಾಸುರೇ ಪುರಾ ಯುದ್ಧೇ ಯಥಾ ದೈತೇಯದಾನವಾಃ।।
ರಾಜನ್! ಹಿಂದೆ ದೇವಾಸುರರ ಯುದ್ಧದಲ್ಲಿ ದೈತ್ಯ-ದಾನವರು ರಥಗಳಿಂದ ಕೆಳಗುರುಳಿದಂತೆ ಆ ಸುವರ್ಚಸ ಪಂಚಾಲರಾಜಕುಮಾರರು ಹತರಾಗಿ ರಥಗಳಿಂದ ಭೂಮಿಯ ಮೇಲೆ ಬಿದ್ದರು.
07098042a ತಾನ್ನಿಹತ್ಯ ರಣೇ ರಾಜನ್ಭಾರದ್ವಾಜಃ ಪ್ರತಾಪವಾನ್।
07098042c ಕಾರ್ಮುಕಂ ಭ್ರಾಮಯಾಮಾಸ ಹೇಮಪೃಷ್ಠಂ ದುರಾಸದಂ।।
ರಾಜನ್! ರಣದಲ್ಲಿ ಅವರನ್ನು ಸಂಹರಿಸಿ ಪ್ರತಾಪವಾನ್ ಭಾರದ್ವಾಜನು ಬಂಗಾರದ ಬೆನ್ನುಳ್ಳ ತನ್ನ ದುರಾಸದ ಧನುಸ್ಸನ್ನು ತಿರುಗಿಸತೊಡಗಿದನು.
07098043a ಪಾಂಚಾಲಾನ್ನಿಹತಾನ್ದೃಷ್ಟ್ವಾ ದೇವಕಲ್ಪಾನ್ಮಹಾರಥಾನ್।
07098043c ಧೃಷ್ಟದ್ಯುಮ್ನೋ ಭೃಶಂ ಕ್ರುದ್ಧೋ ನೇತ್ರಾಭ್ಯಾಂ ಪಾತಯಂ ಜಲಂ।
07098043e ಅಭ್ಯವರ್ತತ ಸಂಗ್ರಾಮೇ ಕ್ರುದ್ಧೋ ದ್ರೋಣರಥಂ ಪ್ರತಿ।।
ದೇವತೆಗಳಿಗೆ ಸಮಾನರಾದ ಆ ಮಹಾರಥ ಪಾಂಚಾಲರು ಹತರಾದುದನ್ನು ನೋಡಿ ತುಂಬಾ ಕ್ರುದ್ಧನಾಗಿ, ನೇತ್ರಗಳೆರಡರಿಂದ ನೀರನ್ನು ಸುರಿಸುತ್ತಾ ಧೃಷ್ಟದ್ಯುಮ್ನನು ಸಂಗ್ರಾಮದಲ್ಲಿ ದ್ರೋಣನ ರಥದ ಮೇಲೆ ಆಕ್ರಮಣಿಸಿದನು.
07098044a ತತೋ ಹಾ ಹೇತಿ ಸಹಸಾ ನಾದಃ ಸಮಭವನ್ನೃಪ।
07098044c ಪಾಂಚಾಲ್ಯೇನ ರಣೇ ದೃಷ್ಟ್ವಾ ದ್ರೋಣಮಾವಾರಿತಂ ಶರೈಃ।।
ನೃಪ! ರಣದಲ್ಲಿ ಪಾಂಚಾಲ್ಯನು ದ್ರೋಣನನ್ನು ಶರಗಳಿಂದ ಮುಸುಕಿದುದನ್ನು ನೋಡಿ ಒಮ್ಮೆಲೇ ಹಾಹಾಕಾರವುಂಟಾಯಿತು.
07098045a ಸಂಚಾದ್ಯಮಾನೋ ಬಹುಧಾ ಪಾರ್ಷತೇನ ಮಹಾತ್ಮನಾ।
07098045c ನ ವಿವ್ಯಥೇ ತತೋ ದ್ರೋಣಃ ಸ್ಮಯನ್ನೇವಾನ್ವಯುಧ್ಯತ।।
ಮಹಾತ್ಮ ಪಾರ್ಷತನಿಂದ ಬಹಳವಾಗಿ ಮುಚ್ಚಲ್ಪಟ್ಟರೂ ದ್ರೋಣನು ವ್ಯಥಿತನಾಗಲಿಲ್ಲ. ನಗುತ್ತಲೇ ಅವನೊಡನೆ ಯುದ್ಧಮಾಡತೊಡಗಿದನು.
07098046a ತತೋ ದ್ರೋಣಂ ಮಹಾರಾಜ ಪಾಂಚಾಲ್ಯಃ ಕ್ರೋಧಮೂರ್ಚಿತಃ।
07098046c ಆಜಘಾನೋರಸಿ ಕ್ರುದ್ಧೋ ನವತ್ಯಾ ನತಪರ್ವಣಾಂ।।
ಆಗ ಮಹಾರಾಜ! ಕ್ರೋಧಮೂರ್ಛಿತ ಪಾಂಚಾಲ್ಯನು ದ್ರೋಣನನ್ನು ಕ್ರುದ್ಧನಾಗಿ ತೊಂಭತ್ತು ನತಪರ್ವಣ ಶರಗಳಿಂದ ಎದೆಯ ಮೇಲೆ ಪ್ರಹರಿಸಿದನು.
07098047a ಸ ಗಾಢವಿದ್ಧೋ ಬಲಿನಾ ಭಾರದ್ವಾಜೋ ಮಹಾಯಶಾಃ।
07098047c ನಿಷಸಾದ ರಥೋಪಸ್ಥೇ ಕಶ್ಮಲಂ ಚ ಜಗಾಮ ಹ।।
ಬಲಶಾಲಿ ಧೃಷ್ಟದ್ಯುಮ್ನನಿಂದ ಗಾಢವಾಗಿ ಹೊಡೆಯಲ್ಪಟ್ಟ ಮಹಾಯಶಸ್ವಿ ದ್ರೋಣನು ರಥಪೀಠದ ಪಕ್ಕಕ್ಕೆ ಸರಿದು ಕುಳಿತು ಮೂರ್ಛೆಹೋದನು.
07098048a ತಂ ವೈ ತಥಾಗತಂ ದೃಷ್ಟ್ವಾ ಧೃಷ್ಟದ್ಯುಮ್ನಃ ಪರಾಕ್ರಮೀ।
07098048c ಸಮುತ್ಸೃಜ್ಯ ಧನುಸ್ತೂರ್ಣಮಸಿಂ ಜಗ್ರಾಹ ವೀರ್ಯವಾನ್।।
ಅವನು ಹಾಗಾದುದನ್ನು ನೋಡಿ ವೀರ್ಯವಾನ್ ಪರಾಕ್ರಮೀ ಧೃಷ್ಟದ್ಯುಮ್ನನು ಕೂಡಲೇ ಧನುಸ್ಸನ್ನು ಬಿಸುಟು ಖಡ್ಗವನ್ನು ಕೈಗೆತ್ತಿಕೊಂಡನು.
07098049a ಅವಪ್ಲುತ್ಯ ರಥಾಚ್ಚಾಪಿ ತ್ವರಿತಃ ಸ ಮಹಾರಥಃ।
07098049c ಆರುರೋಹ ರಥಂ ತೂರ್ಣಂ ಭಾರದ್ವಾಜಸ್ಯ ಮಾರಿಷ।
07098049e ಹರ್ತುಮೈಚ್ಚಚ್ಚಿರಃ ಕಾಯಾತ್ಕ್ರೋಧಸಂರಕ್ತಲೋಚನಃ।।
ಮಾರಿಷ! ಬೇಗನೇ ತನ್ನ ರಥದಿಂದ ಹಾರಿ ತ್ವರೆಮಾಡಿ ಕ್ರೋಧದಿಂದ ಕೆಂಗಣ್ಣನಾಗಿದ್ದ ಆ ಮಹಾರಥ ಧೃಷ್ಟದ್ಯುಮ್ನನು ದ್ರೋಣನ ಶಿರವನ್ನು ದೇಹದಿಂದ ಅಪಹರಿಸಲು ಬಯಸಿ ಭಾರದ್ವಾಜನ ರಥವನ್ನೇರಿದನು.
07098050a ಪ್ರತ್ಯಾಶ್ವಸ್ತಸ್ತತೋ ದ್ರೋಣೋ ಧನುರ್ಗೃಹ್ಯ ಮಹಾಬಲಃ।
07098050c ಶರೈರ್ವೈತಸ್ತಿಕೈ ರಾಜನ್ನಿತ್ಯಮಾಸನ್ನಯೋಧಿಭಿಃ।
07098050e ಯೋಧಯಾಮಾಸ ಸಮರೇ ಧೃಷ್ಟದ್ಯುಮ್ನಂ ಮಹಾರಥಂ।।
ರಾಜನ್! ಅಷ್ಟರಲ್ಲಿಯೇ ಮಹಾಬಲ ದ್ರೋಣನು ಸುಧಾರಿಸಿಕೊಂಡು ಧನುಸ್ಸನ್ನೆತ್ತಿಕೊಂಡು ಹತ್ತಿರದ ಲಕ್ಷ್ಯವನ್ನು ಭೇದಿಸುವ ವೈತಸ್ತಿಕ ಬಾಣಗಳಿಂದ ಸಮರದಲ್ಲಿ ಮಹಾರಥ ಧೃಷ್ಟದ್ಯುಮ್ನನೊಂದಿಗೆ ಯುದ್ಧಮಾಡತೊಡಗಿದನು.
07098051a ತೇ ಹಿ ವೈತಸ್ತಿಕಾ ನಾಮ ಶರಾ ಆಸನ್ನಯೋಧಿನಃ।
07098051c ದ್ರೋಣಸ್ಯ ವಿದಿತಾ ರಾಜನ್ಧೃಷ್ಟದ್ಯುಮ್ನಮವಾಕ್ಷಿಪನ್।।
ರಾಜನ್! ದೃಷ್ಟದ್ಯುಮ್ನನ ಮೇಲೆ ಬಿಟ್ಟ, ಹತ್ತಿರದಲ್ಲಿರುವ ಯೋಧರನ್ನು ಭೇದಿಸಬಲ್ಲ ಆ ವೈತಸ್ತಿಕ ಎಂಬ ಹೆಸರಿನ ಬಾಣಗಳನ್ನು ದ್ರೋಣನೇ ನಿರ್ಮಿಸಿದ್ದನು.
07098052a ಸ ವಧ್ಯಮಾನೋ ಬಹುಭಿಃ ಸಾಯಕೈಸ್ತೈರ್ಮಹಾಬಲಃ।
07098052c ಅವಪ್ಲುತ್ಯ ರಥಾತ್ತೂರ್ಣಂ ಭಗ್ನವೇಗಃ ಪರಾಕ್ರಮೀ।।
ಅನೇಕ ಸಾಯಕಗಳಿಂದ ಪ್ರಹರಿಸಲ್ಪಟ್ಟು ಭಗ್ನವೇಗನಾದ ಮಹಾಬಲ ಪರಾಕ್ರಮೀ ಧೃಷ್ಟದ್ಯುಮ್ನನು ಬೇಗನೇ ದ್ರೋಣನ ರಥದಿಂದ ಧುಮುಕಿದನು.
07098053a ಆರುಹ್ಯ ಸ್ವರಥಂ ವೀರಃ ಪ್ರಗೃಹ್ಯ ಚ ಮಹದ್ಧನುಃ।
07098053c ವಿವ್ಯಾಧ ಸಮರೇ ದ್ರೋಣಂ ಧೃಷ್ಟದ್ಯುಮ್ನೋ ಮಹಾರಥಃ।।
ಆ ವೀರ ಮಹಾರಥ ಧೃಷ್ಟದ್ಯುಮ್ನನು ತನ್ನದೇ ರಥವನ್ನೇರಿ ಮಹಾಧನುಸ್ಸನ್ನು ಹಿಡಿದು ಸಮರದಲ್ಲಿ ದ್ರೋಣನನ್ನು ಹೊಡೆದನು.
07098054a ತದದ್ಭುತಂ ತಯೋರ್ಯುದ್ಧಂ ಭೂತಸಂಘಾ ಹ್ಯಪೂಜಯನ್।
07098054c ಕ್ಷತ್ರಿಯಾಶ್ಚ ಮಹಾರಾಜ ಯೇ ಚಾನ್ಯೇ ತತ್ರ ಸೈನಿಕಾಃ।।
ಮಹಾರಾಜ! ಅವರಿಬ್ಬರ ಅದ್ಭುತ ಯುದ್ಧವನ್ನು ಪ್ರಾಣಿಗಣಗಳೆಲ್ಲವೂ, ಕ್ಷತ್ರಿಯರೂ ಮತ್ತು ಅಲ್ಲಿದ್ದ ಇತರ ಸೈನಿಕರೂ ಪ್ರಶಂಸಿಸಿದರು.
07098055a ಅವಶ್ಯಂ ಸಮರೇ ದ್ರೋಣೋ ಧೃಷ್ಟದ್ಯುಮ್ನೇನ ಸಂಗತಃ।
07098055c ವಶಮೇಷ್ಯತಿ ನೋ ರಾಜ್ಞಃ ಪಾಂಚಾಲಾ ಇತಿ ಚುಕ್ರುಶುಃ।।
“ಧೃಷ್ಟದ್ಯುಮ್ನನೊಡನೆ ಯುದ್ಧಮಾಡುತ್ತಿರುವ ದ್ರೋಣನು ಅವಶ್ಯವಾಗಿಯೂ ನಮ್ಮ ರಾಜನ ವಶನಾಗಿದ್ದಾನೆ!” ಎಂದು ಪಾಂಚಾಲರು ಕೂಗಿಕೊಳ್ಳುತ್ತಿದ್ದರು.
07098056a ದ್ರೋಣಸ್ತು ತ್ವರಿತೋ ಯುದ್ಧೇ ಧೃಷ್ಟದ್ಯುಮ್ನಸ್ಯ ಸಾರಥೇಃ।
07098056c ಶಿರಃ ಪ್ರಚ್ಯಾವಯಾಮಾಸ ಫಲಂ ಪಕ್ವಂ ತರೋರಿವ।
07098056e ತತಸ್ತೇ ಪ್ರದ್ರುತಾ ವಾಹಾ ರಾಜಂಸ್ತಸ್ಯ ಮಹಾತ್ಮನಃ।।
ಆಗ ದ್ರೋಣನಾದರೋ ತಡಮಾಡದೇ ಯುದ್ಧದಲ್ಲಿ ಧೃಷ್ಟದ್ಯುಮ್ನನ ಸಾರಥಿಯ ಶಿರವನ್ನು – ಮರದಲ್ಲಿರುವ ಹಣ್ಣನ್ನು ಕೆಳಗೆ ಬೀಳಿಸುವಂತೆ - ದೇಹದಿಂದ ಕೆಳಕ್ಕೆ ಕೆಡವಿದನು. ರಾಜನ್! ಆಗ ಮಹಾತ್ಮ ಧೃಷ್ಟದ್ಯುಮ್ನನ ಕುದುರೆಗಳು ದಿಕ್ಕಾಪಾಲಾಗಿ ಓಡಿಹೋದವು.
07098057a ತೇಷು ಪ್ರದ್ರವಮಾಣೇಷು ಪಾಂಚಾಲಾನ್ಸೃಂಜಯಾಂಸ್ತಥಾ।
07098057c ವ್ಯದ್ರಾವಯದ್ರಣೇ ದ್ರೋಣಸ್ತತ್ರ ತತ್ರ ಪರಾಕ್ರಮೀ।।
ಅವುಗಳು ಓಡಿಹೋಗಲು ಪರಾಕ್ರಮೀ ದ್ರೋಣನು ರಣದಲ್ಲಿದ್ದ ಪಾಂಚಾಲ ಸೃಂಜಯರೊಡನೆ ಅಲ್ಲಲ್ಲಿ ಯುದ್ಧಮಾಡತೊಡಗಿದನು.
07098058a ವಿಜಿತ್ಯ ಪಾಂಡುಪಾಂಚಾಲಾನ್ಭಾರದ್ವಾಜಃ ಪ್ರತಾಪವಾನ್।
07098058c ಸ್ವಂ ವ್ಯೂಹಂ ಪುನರಾಸ್ಥಾಯ ಸ್ಥಿರೋಽಭವದರಿಂದಮಃ।
07098058e ನ ಚೈನಂ ಪಾಂಡವಾ ಯುದ್ಧೇ ಜೇತುಮುತ್ಸಹಿರೇ ಪ್ರಭೋ।।
ಪಾಂಡವ-ಪಾಂಚಾಲರನ್ನು ಗೆದ್ದು ಪ್ರತಾಪವಾನ್ ಭಾರದ್ವಾಜ ಅರಿಂದಮನು ತನ್ನ ವ್ಯೂಹವನ್ನು ಪುನಃ ಸ್ಥಿರವಾಗಿರುವಂತೆ ಮಾಡಿದರು. ಪ್ರಭೋ! ಆಗ ಪಾಂಡವರು ಅವನೊಡನೆ ಯುದ್ಧಮಾಡಲು ಉತ್ಸಾಹಿತರಾಗಿರಲಿಲ್ಲ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ದ್ರೋಣಪರಾಕ್ರಮೇ ಅಷ್ಠನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶೇ ದ್ರೋಣಪರಾಕ್ರಮ ಎನ್ನುವ ತೊಂಭತ್ತೆಂಟನೇ ಅಧ್ಯಾಯವು.