ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 94
ಸಾರ
ಸಾತ್ಯಕಿಯಿಂದ ಸುದರ್ಶನನ ವಧೆ (1-18).
07094001 ಸಂಜಯ ಉವಾಚ।
07094001a ದ್ರೋಣಂ ಸ ಜಿತ್ವಾ ಪುರುಷಪ್ರವೀರಸ್ ತಥೈವ ಹಾರ್ದಿಕ್ಯಮುಖಾಂಸ್ತ್ವದೀಯಾನ್।
07094001c ಪ್ರಹಸ್ಯ ಸೂತಂ ವಚನಂ ಬಭಾಷೇ ಶಿನಿಪ್ರವೀರಃ ಕುರುಪುಂಗವಾಗ್ರ್ಯ।।
ಸಂಜಯನು ಹೇಳಿದನು: “ಕುರುಪುಂಗವಾಗ್ರ್ಯ! ದ್ರೋಣನನ್ನು ಮತ್ತು ಹಾರ್ದಿಕ್ಯನೇ ಮೊದಲಾದ ನಿನ್ನವರನ್ನು ಜಯಿಸಿ ಪುರುಷಪ್ರವೀರ ಶಿನಿಪ್ರವೀರನು ನಗುತ್ತಾ ಸೂತನಿಗೆ ಈ ಮಾತನ್ನಾಡಿದನು:
07094002a ನಿಮಿತ್ತಮಾತ್ರಂ ವಯಮತ್ರ ಸೂತ ದಗ್ಧಾರಯಃ ಕೇಶವಫಲ್ಗುನಾಭ್ಯಾಂ।
07094002c ಹತಾನ್ನಿಹನ್ಮೇಹ ನರರ್ಷಭೇಣ ವಯಂ ಸುರೇಶಾತ್ಮಸಮುದ್ಭವೇನ।।
“ಸೂತ! ಈ ಶತ್ರುಗಳ ಸಂಹಾರದಲ್ಲಿ ನಾವು ನಿಮಿತ್ತಮಾತ್ರ. ಕೇಶವ-ಫಲ್ಗುನರಿಂದ ಇವರು ಈಗಾಗಲೇ ಸುಡಲ್ಪಟ್ಟಿದ್ದಾರೆ. ಸುರೇಶಾತ್ಮಜ ನರರ್ಷಭ ಅರ್ಜುನನಿಂದ ಕೊಲ್ಲಲ್ಪಟ್ಟ ಇವರನ್ನು ನಾವು ಈಗ ನೆಪಮಾತ್ರಕ್ಕೆ ಕೊಲ್ಲುತ್ತಿದ್ದೇವೆ.”
07094003a ತಮೇವಮುಕ್ತ್ವಾ ಶಿನಿಪುಂಗವಸ್ತದಾ ಮಹಾಮೃಧೇ ಸೋಽಗ್ರ್ಯಧನುರ್ಧರೋಽರಿಹಾ।
07094003c ಕಿರನ್ಸಮಂತಾತ್ಸಹಸಾ ಶರಾನ್ಬಲೀ ಸಮಾಪತಚ್ಚ್ಯೇನ ಇವಾಮಿಷಂ ಯಥಾ।।
ಹೀಗೆ ಹೇಳಿ ಅಗ್ರ ಧನುರ್ಧರ ಅರಿನಾಶಿನಿ ಬಲಶಾಲಿ ಶಿನಿಪುಂಗವನು ಮಹಾಮೃಧದಲ್ಲಿ ಎಲ್ಲಕಡೆ ಶರಗಳನ್ನು ಎರಚುತ್ತಾ ಗಿಡುಗವು ಮಾಂಸದ ಮೇಲೆ ಎರಗುವಂತೆ ಶತ್ರುಗಳ ಮೇಲೆ ಎರಗಿದನು.
07094004a ತಂ ಯಾಂತಮಶ್ವೈಃ ಶಶಿಶಂಖವರ್ಣೈರ್ ವಿಗಾಹ್ಯ ಸೈನ್ಯಂ ಪುರುಷಪ್ರವೀರಂ।
07094004c ನಾಶಕ್ನುವನ್ವಾರಯಿತುಂ ಸಮಂತಾದ್ ಆದಿತ್ಯರಶ್ಮಿಪ್ರತಿಮಂ ನರಾಗ್ರ್ಯಂ।।
ಚಂದ್ರ ಮತ್ತು ಶಂಖದ ಬಣ್ಣಗಳ ಕುದುರೆಗಳೊಂದಿಗೆ ಕುರುಸೇನೆಯನ್ನು ಪ್ರವೇಶಿಸುತ್ತಿದ್ದ ಆ ಪುರುಷಪ್ರವೀರ, ಸೂರ್ಯನ ರಶ್ಮಿಯಂತೆ ಬೆಳಗುತ್ತಿದ್ದ ನರಾಗ್ರ್ಯನನ್ನು ಸುತ್ತಲೂ ಯಾರೂ ತಡೆಯಲಾರದಾದರು.
07094005a ಅಸಹ್ಯವಿಕ್ರಾಂತಮದೀನಸತ್ತ್ವಂ ಸರ್ವೇ ಗಣಾ ಭಾರತ ದುರ್ವಿಷಹ್ಯಂ।
07094005c ಸಹಸ್ರನೇತ್ರಪ್ರತಿಮಪ್ರಭಾವಂ ದಿವೀವ ಸೂರ್ಯಂ ಜಲದವ್ಯಪಾಯೇ।।
ಸಹಿಸಲು ಅಸಾಧ್ಯವಾದ ಪರಾಕ್ರಮವನ್ನು ಹೊಂದಿದ್ದ, ಮಹಾಬಲಶಾಲಿಯಾಗಿದ್ದ, ಸಹಸ್ರನೇತ್ರ ಇಂದ್ರನ ಸಮಾನ ಪರಾಕ್ರಮವನ್ನು ಹೊಂದಿದ್ದ, ಮೋಡಗಳಿಲ್ಲದ ಶರತ್ಕಾಲದ ಆಕಾಶದಲ್ಲಿ ಬೆಳಗುವ ಸೂರ್ಯನ ತೇಜಸ್ಸಿಗೆ ಸಮಾನ ತೇಜಸ್ಸನ್ನು ಹೊಂದಿದ್ದ ಸಾತ್ಯಕಿಯನ್ನು ಸಂಘಟಿತರಾದ ನಿನ್ನ ಎಲ್ಲ ಸೈನಿಕರೂ ತಡೆಯಲಾರದೇ ಹೋದರು.
07094006a ಅಮರ್ಷಪೂರ್ಣಸ್ತ್ವತಿಚಿತ್ರಯೋಧೀ ಶರಾಸನೀ ಕಾಂಚನವರ್ಮಧಾರೀ।
07094006c ಸುದರ್ಶನಃ ಸಾತ್ಯಕಿಮಾಪತಂತಂ ನ್ಯವಾರಯದ್ರಾಜವರಃ ಪ್ರಸಹ್ಯ।।
ಆಗ ಕ್ರೋಧಪೂರ್ಣನಾಗಿದ್ದ, ವಿಚಿತ್ರರೀತಿಯಲ್ಲಿ ಯುದ್ಧಮಾಡುತ್ತಿದ್ದ, ಶರಾಸನೀ, ಕಾಂಚನ ಕವಚವನ್ನು ಧರಿಸಿದ್ದ ಸುದರ್ಶನನು ತನ್ನ ಕಡೆಗೆ ಬರುತ್ತಿದ್ದ ಸಾತ್ಯಕಿಯನ್ನು ನಗುತ್ತಾ ಬಲಪೂರ್ವಕವಾಗಿ ತಡೆದನು.
07094007a ತಯೋರಭೂದ್ಭರತ ಸಂಪ್ರಹಾರಃ ಸುದಾರುಣಸ್ತಂ ಸಮಭಿಪ್ರಶಂಸನ್।
07094007c ಯೋಧಾಸ್ತ್ವದೀಯಾಶ್ಚ ಹಿ ಸೋಮಕಾಶ್ಚ ವೃತ್ರೇಂದ್ರಯೋರ್ಯುದ್ಧಮಿವಾಮರೌಘಾಃ।।
ಅವರಿಬ್ಬರ ನಡುವೆ ಸುದಾರುಣವಾದ ಪ್ರಹಾರಗಳುಳ್ಳ ಯುದ್ಧವು ನಡೆಯಿತು. ಅವರ ನಡುವಿನ ಈ ಯುದ್ಧವನ್ನು ವೃತ್ರ-ಇಂದ್ರರ ಯುದ್ಧವನ್ನು ಅಮರಗಣಗಳು ಹೇಗೋ ಹಾಗೆ ನಿನ್ನವರು ಮತ್ತು ಸೋಮಕರು ಪ್ರಶಂಸಿಸುತ್ತಾ ನೋಡತೊಡಗಿದರು.
07094008a ಶರೈಃ ಸುತೀಕ್ಷ್ಣೈಃ ಶತಶೋಽಭ್ಯವಿಧ್ಯತ್ ಸುದರ್ಶನಃ ಸಾತ್ವತಮುಖ್ಯಮಾಜೌ।
07094008c ಅನಾಗತಾನೇವ ತು ತಾನ್ಪೃಷತ್ಕಾಂಶ್ ಚಿಚ್ಚೇದ ಬಾಣೈಃ ಶಿನಿಪುಂಗವೋಽಪಿ।।
ನೂರಾರು ಸುತೀಕ್ಷ್ಣ ಬಾಣಗಳಿಂದ ಸುದರ್ಶನನು ಸಾತ್ವತಮುಖ್ಯನನ್ನು ಹೊಡೆದನು. ಆದರೆ ಅವು ಬರುವುದರೊಳಗೇ ಶಿನಿಪುಂಗವನು ಅವುಗಳನ್ನು ಬಾಣಗಳಿಂದ ತುಂಡರಿಸಿ ಬಿಡುತ್ತಿದ್ದನು.
07094009a ತಥೈವ ಶಕ್ರಪ್ರತಿಮೋಽಪಿ ಸಾತ್ಯಕಿಃ ಸುದರ್ಶನೇ ಯಾನ್ ಕ್ಷಿಪತಿ ಸ್ಮ ಸಾಯಕಾನ್।
07094009c ದ್ವಿಧಾ ತ್ರಿಧಾ ತಾನಕರೋತ್ಸುದರ್ಶನಃ ಶರೋತ್ತಮೈಃ ಸ್ಯಂದನವರ್ಯಮಾಸ್ಥಿತಃ।।
ಹಾಗೆಯೇ ಶಕ್ರಪ್ರತಿಮ ಸಾತ್ಯಕಿಯೂ ಕೂಡ ಸುದರ್ಶನನ ಮೇಲೆ ಯಾವ ಸಾಯಕಗಳನ್ನು ಪ್ರಯೋಗಿಸುತ್ತಿದ್ದನೋ ರಥದಲ್ಲಿ ಕುಳಿತಿದ್ದ ಸುದರ್ಶನನು ಉತ್ತಮ ಶರಗಳಿಂದ ಎರಡು-ಮೂರು ಭಾಗಗಳಾಗಿ ಕತ್ತರಿಸುತ್ತಿದ್ದನು.
07094010a ಸಂಪ್ರೇಕ್ಷ್ಯ ಬಾಣಾನ್ನಿಹತಾಂಸ್ತದಾನೀಂ ಸುದರ್ಶನಃ ಸಾತ್ಯಕಿಬಾಣವೇಗೈಃ।
07094010c ಕ್ರೋಧಾದ್ದಿಧಕ್ಷನ್ನಿವ ತಿಗ್ಮತೇಜಾಃ ಶರಾನಮುಂಚತ್ತಪನೀಯಚಿತ್ರಾನ್।।
ಸಾತ್ಯಕಿಯ ಬಾಣಗಳ ವೇಗದಿಂದ ತಾನು ಬಿಡುತ್ತಿದ್ದ ಬಾಣಗಳು ವ್ಯರ್ಥವಾಗುತ್ತಿರುವುದನ್ನು ಕಂಡು ತೇಜಸ್ವಿ ಸುದರ್ಶನನು ರೋಷದಿಂದ ಸಾತ್ಯಕಿಯನ್ನು ದಹಿಸಿಬಿಡುವನೋ ಎನ್ನುವಂತೆ ಆವೇಶಪೂರ್ಣನಾಗಿ ಸುವರ್ಣ ರೇಖೆಗಳಿಂದ ಚಿತ್ರಿತವಾಗಿದ್ದ ಬಾಣಗಳನ್ನು ಅವನ ಮೇಲೆ ಪ್ರಯೋಗಿಸಿದನು.
07094011a ಪುನಃ ಸ ಬಾಣೈಸ್ತ್ರಿಭಿರಗ್ನಿಕಲ್ಪೈರ್ ಆಕರ್ಣಪೂರ್ಣೈರ್ನಿಶಿತೈಃ ಸುಪುಂಖೈಃ।
07094011c ವಿವ್ಯಾಧ ದೇಹಾವರಣಂ ವಿಭಿದ್ಯ ತೇ ಸಾತ್ಯಕೇರಾವಿವಿಶುಃ ಶರೀರಂ।।
ಪುನಃ ಸುದರ್ಶನನು ಅಗ್ನಿಸ್ವರೂಪದ ಸುಂದರ ಪುಂಖಗಳನ್ನು ಹೊಂದಿದ್ದ ಮೂರು ನಿಶಿತ ಬಾಣಗಳನ್ನು ಕಿವಿಯ ವರೆಗೂ ಸೆಳೆದು ಬಿಡಲು, ಅವು ಸಾತ್ಯಕಿಯ ದೇಹಾವರಣವನ್ನು ಭೇದಿಸಿ ಅವನ ಶರೀರವನ್ನು ಹೊಕ್ಕವು.
07094012a ತಥೈವ ತಸ್ಯಾವನಿಪಾಲಪುತ್ರಃ ಸಂಧಾಯ ಬಾಣೈರಪರೈರ್ಜ್ವಲದ್ಭಿಃ।
07094012c ಆಜಘ್ನಿವಾಂಸ್ತಾನ್ರಜತಪ್ರಕಾಶಾಂಶ್ ಚತುರ್ಭಿರಶ್ವಾಂಶ್ಚತುರಃ ಪ್ರಸಹ್ಯ।।
ಹಾಗೆಯೇ ರಾಜಕುಮಾರ ಸುದರ್ಶನನು ನಗುತ್ತಾ ಪ್ರಜ್ವಲಿಸುತ್ತಿದ್ದ ನಾಲ್ಕು ಬಾಣಗಳನ್ನು ಅನುಸಂಧಾನ ಮಾಡಿ ಬೆಳ್ಳಿಯಂತೆ ಪ್ರಕಾಶಿಸುತ್ತಿದ್ದ ನಾಲ್ಕು ಕುದುರೆಗಳನ್ನೂ ಬಲಪೂರ್ವಕವಾಗಿ ಪ್ರಹರಿಸಿದನು.
07094013a ತಥಾ ತು ತೇನಾಭಿಹತಸ್ತರಸ್ವೀ ನಪ್ತಾ ಶಿನೇರಿಂದ್ರಸಮಾನವೀರ್ಯಃ।
07094013c ಸುದರ್ಶನಸ್ಯೇಷುಗಣೈಃ ಸುತೀಕ್ಷ್ಣೈರ್ ಹಯಾನ್ನಿಹತ್ಯಾಶು ನನಾದ ನಾದಂ।।
ಹೀಗೆ ಅವನಿಂದ ಪ್ರಹರಿಸಲ್ಪಟ್ಟ ತರಸ್ವೀ ಇಂದ್ರಸಮಾನವೀರ್ಯ ಶಿನಿಯ ಮೊಮ್ಮಗನು ತೀಕ್ಷ್ಣ ಬಾಣಗಳಿಂದ ಸುದರ್ಶನನ ಕುದುರೆಗಳನ್ನು ಸಂಹರಿಸಿ ಸಿಂಹನಾದಗೈದನು.
07094014a ಅಥಾಸ್ಯ ಸೂತಸ್ಯ ಶಿರೋ ನಿಕೃತ್ಯ ಭಲ್ಲೇನ ವಜ್ರಾಶನಿಸಮ್ನಿಭೇನ।
07094014c ಸುದರ್ಶನಸ್ಯಾಪಿ ಶಿನಿಪ್ರವೀರಃ ಕ್ಷುರೇಣ ಚಿಚ್ಚೇದ ಶಿರಃ ಪ್ರಸಹ್ಯ।।
ಕೂಡಲೇ ವಜ್ರಾಶನಿಸನ್ನಿಭ ಭಲ್ಲದಿಂದ ಅವನ ಸೂತನ ಶಿರವನ್ನು ಕತ್ತರಿಸಿ ಶಿನಿಪ್ರವೀರನು ಕ್ಷುರದಿಂದ ಸುದರ್ಶನನ ಶಿರವನ್ನು ತುಂಡರಿಸಿ ಗಹಗಹಿಸಿ ನಕ್ಕನು.
07094015a ಸಕುಂಡಲಂ ಪೂರ್ಣಶಶಿಪ್ರಕಾಶಂ ಭ್ರಾಜಿಷ್ಣು ವಕ್ತ್ರಂ ನಿಚಕರ್ತ ದೇಹಾತ್।
07094015c ಯಥಾ ಪುರಾ ವಜ್ರಧರಃ ಪ್ರಸಹ್ಯ ಬಲಸ್ಯ ಸಂಖ್ಯೇಽತಿಬಲಸ್ಯ ರಾಜನ್।।
ರಾಜನ್! ಹಿಂದೆ ವಜ್ರಧರನು ನಗುತ್ತಾ ರಣದಲ್ಲಿ ಬಲನ ಶಿರವನ್ನು ಹೇಗೋ ಹಾಗೆ ಸಾತ್ಯಕಿಯು ಸುದರ್ಶನನ ಪೂರ್ಣಶಶಿಯ ಪ್ರಕಾಶವನ್ನು ಹೊಂದಿದ್ದ, ಭ್ರಾಜಿಷ್ಣು ಕುಂಡಲಯುಕ್ತ ವಕ್ತ್ರವನ್ನು ಅವನ ದೇಹದಿಂದ ಬೇರ್ಪಡಿಸಿದನು.
07094016a ನಿಹತ್ಯ ತಂ ಪಾರ್ಥಿವಪುತ್ರಪೌತ್ರಂ ರಣೇ ಯದೂನಾಂ ಋಷಭಸ್ತರಸ್ವೀ।
07094016c ಮುದಾ ಸಮೇತಃ ಪರಯಾ ಮಹಾತ್ಮಾ ರರಾಜ ರಾಜನ್ಸುರರಾಜಕಲ್ಪಃ।।
ರಣದಲ್ಲಿ ಆ ರಾಜಪುತ್ರ, ರಾಜನ ಮೊಮ್ಮಗನನ್ನು ಸಂಹರಿಸಿ ಯದುಗಳ ವೃಷಭ, ತರಸ್ವೀ ಸುರರಾಜಕಲ್ಪಿ ಮಹಾತ್ಮ ಸಾತ್ಯಕಿಯು ಪರಮ ಸಂತೋಷದಿಂದ ವಿರಾಜಿಸಿದನು.
07094017a ತತೋ ಯಯಾವರ್ಜುನಮೇವ ಯೇನ ನಿವಾರ್ಯ ಸೈನ್ಯಂ ತವ ಮಾರ್ಗಣೌಘೈಃ।
07094017c ಸದಶ್ವಯುಕ್ತೇನ ರಥೇನ ನಿರ್ಯಾಲ್ ಲೋಕಾನ್ ವಿಸಿಸ್ಮಾಪಯಿಷುರ್ನೃವೀರಃ।।
ಲೋಕವನ್ನೇ ಆಶ್ಚರ್ಯಚಕಿತವನ್ನಾಗಿ ಮಾಡುವ ಇಚ್ಛೆಯುಳ್ಳ ನರವೀರ ಸಾತ್ಯಕಿಯು ಉತ್ತಮ ಕುದುರೆಗಳೊಂದಿಗೆ ಅರ್ಜುನನು ಯಾವ ಮಾರ್ಗದಲ್ಲಿ ಹೋಗಿದ್ದನೋ ಅದೇ ಮಾರ್ಗದ ಮೂಲಕವಾಗಿ ತಡೆಯಲು ಬರುತ್ತಿದ್ದ ನಿನ್ನ ಸೇನೆಗಳನ್ನು ನಿವಾರಿಸುತ್ತಾ ಮುಂದುವರೆದನು.
07094018a ತತ್ತಸ್ಯ ವಿಸ್ಮಾಪಯನೀಯಮಗ್ರ್ಯಂ ಅಪೂಜಯನ್ ಯೋಧವರಾಃ ಸಮೇತಾಃ।
07094018c ಯದ್ವರ್ತಮಾನಾನಿಷುಗೋಚರೇಽರೀನ್ ದದಾಹ ಬಾಣೈರ್ಹುತಭುಗ್ಯಥೈವ।।
ವಿಸ್ಮಯನೀಯರಲ್ಲಿ ಅಗ್ರ್ಯನಾದ ಸಾತ್ಯಕಿಯನ್ನು ಯೋಧಶ್ರೇಷ್ಠರು ಒಟ್ಟಾಗಿ ಪ್ರಶಂಸಿಸಿದರು. ಅವನು ತನ್ನ ಮಾರ್ಗದಲ್ಲಿ ಗೋಚರಿಸುತ್ತಿದ್ದ ಅರಿಗಳನ್ನು ಅಗ್ನಿಯಂತಿದ್ದ ತನ್ನ ಬಾಣಗಳಿಂದ ದಹಿಸಿಬಿಡುತ್ತಿದ್ದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ಸುದರ್ಶನವಧೇ ಚತುರ್ನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶೇ ಸುದರ್ಶನವಧ ಎನ್ನುವ ತೊಂಭತ್ನಾಲ್ಕನೇ ಅಧ್ಯಾಯವು.