ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 93
ಸಾರ
ಸಾತ್ಯಕಿಯು ದ್ರೋಣನ ರಥವನ್ನು ಓಡಿಸಿ ಪರಾಜಯಗೊಳಿಸಿದುದು (1-35).
07093001 ಸಂಜಯ ಉವಾಚ।
07093001a ಕಾಲ್ಯಮಾನೇಷು ಸೈನ್ಯೇಷು ಶೈನೇಯೇನ ತತಸ್ತತಃ।
07093001c ಭಾರದ್ವಾಜಃ ಶರವ್ರಾತೈರ್ಮಹದ್ಭಿಃ ಸಮವಾಕಿರತ್।।
ಸಂಜಯನು ಹೇಳಿದನು: “ಶೈನೇಯನು ಅಲ್ಲಲ್ಲಿ ಸೇನೆಗಳನ್ನು ನಾಶಪಡಿಸುತ್ತಿರಲು ಭಾರದ್ವಾಜ ದ್ರೋಣನು ಮಹಾ ಶರವ್ರಾತಗಳಿಂದ ಅವನನ್ನು ಮುಚ್ಚಿದನು.
07093002a ಸ ಸಂಪ್ರಹಾರಸ್ತುಮುಲೋ ದ್ರೋಣಸಾತ್ವತಯೋರಭೂತ್।
07093002c ಪಶ್ಯತಾಂ ಸರ್ವಸೈನ್ಯಾನಾಂ ಬಲಿವಾಸವಯೋರಿವ।।
ಆಗ ಎಲ್ಲ ಸೇನೆಗಳೂ ನೋಡುತ್ತಿದ್ದಂತೆ ಬಲಿ ಮತ್ತು ವಾಸವರ ನಡುವೆ ನಡೆದ ಯುದ್ಧದಂಥಹ ಸಂಪ್ರಹಾರ ತುಮುಲ ಯುದ್ಧವು ದ್ರೋಣ ಮತ್ತು ಸಾತ್ಯಕಿಯರ ನಡುವೆ ನಡೆಯಿತು.
07093003a ತತೋ ದ್ರೋಣಃ ಶಿನೇಃ ಪೌತ್ರಂ ಚಿತ್ರೈಃ ಸರ್ವಾಯಸೈಃ ಶರೈಃ।
07093003c ತ್ರಿಭಿರಾಶೀವಿಷಾಕಾರೈರ್ಲಲಾಟೇ ಸಮವಿಧ್ಯತ।।
ದ್ರೋಣನು ಶಿನಿಯ ಮೊಮ್ಮೊಗನ ಹಣೆಗೆ ಮೂರು ಚಿತ್ರಿತ ಲೋಹಮಯ ಸರ್ಪಸದೃಶ ಬಾಣಗಳನ್ನು ಪ್ರಹರಿಸಿದನು.
07093004a ತೈರ್ಲಲಾಟಾರ್ಪಿತೈರ್ಬಾಣೈರ್ಯುಯುಧಾನಸ್ತ್ವಜಿಹ್ಮಗೈಃ।
07093004c ವ್ಯರೋಚತ ಮಹಾರಾಜ ತ್ರಿಶೃಂಗ ಇವ ಪರ್ವತಃ।।
ಮಹಾರಾಜ! ಹಣೆಗೆ ಚುಚ್ಚಿಕೊಂಡ ಆ ಜಿಹ್ಮಗಗಳಿಂದ ಯುಯುಧಾನನು ತ್ರಿಶೃಂಗ ಪರ್ವತದಂತೆ ಶೋಭಿಸಿದನು.
07093005a ತತೋಽಸ್ಯ ಬಾಣಾನಪರಾನಿಂದ್ರಾಶನಿಸಮಸ್ವನಾನ್।
07093005c ಭಾರದ್ವಾಜೋಽಮ್ತರಪ್ರೇಕ್ಷೀ ಪ್ರೇಷಯಾಮಾಸ ಸಂಯುಗೇ।।
ಶತ್ರುವಿನ ದುರ್ಬಲ ಛಿದ್ರವನ್ನೇ ಹುಡುಕುತ್ತಿದ್ದ ದ್ರೋಣನು ಇಂದ್ರನ ವಜ್ರಾಯುಧ ಸಮಾನ ಧ್ವನಿಯಿದ್ದ ಇನ್ನೂ ಅನೇಕ ಬಾಣಗಳನ್ನು ಸಂಯುಗದಲ್ಲಿ ಸಾತ್ಯಕಿಯ ಮೇಲೆ ಸಮಯವರಿತು ಪ್ರಯೋಗಿಸಿದನು.
07093006a ತಾನ್ದ್ರೋಣಚಾಪನಿರ್ಮುಕ್ತಾನ್ದಾಶಾರ್ಹಃ ಪತತಃ ಶರಾನ್।
07093006c ದ್ವಾಭ್ಯಾಂ ದ್ವಾಭ್ಯಾಂ ಸುಪುಂಖಾಭ್ಯಾಂ ಚಿಚ್ಚೇದ ಪರಮಾಸ್ತ್ರವಿತ್।।
ದ್ರೋಣನ ಧನುಸ್ಸಿನಿಂದ ಹೊರಟು ಬೀಳುತ್ತಿದ್ದ ಆ ಶರಗಳನ್ನು ಪರಮಾಸ್ತ್ರವಿದು ದಾಶಾರ್ಹನು ಪುಂಖಗಳುಳ್ಳ ಎರೆಡೆರಡು ಬಾಣಗಳಿಂದ ಕತ್ತರಿಸಿದನು.
07093007a ತಾಮಸ್ಯ ಲಘುತಾಂ ದ್ರೋಣಃ ಸಮವೇಕ್ಷ್ಯ ವಿಶಾಂ ಪತೇ।
07093007c ಪ್ರಹಸ್ಯ ಸಹಸಾವಿಧ್ಯದ್ವಿಂಶತ್ಯಾ ಶಿನಿಪುಂಗವಂ।।
ವಿಶಾಂಪತೇ! ಅವನ ಹಸ್ತಲಾಘವವನ್ನು ನೋಡಿದ ದ್ರೋಣನು ಜೋರಾಗಿ ನಕ್ಕು ತಕ್ಷಣವೇ ಶಿನಿಪುಂಗವನನ್ನು ಇಪ್ಪತ್ತು ಬಾಣಗಳಿಂದ ಹೊಡೆದನು.
07093008a ಪುನಃ ಪಂಚಾಶತೇಷೂಣಾಂ ಶತೇನ ಚ ಸಮಾರ್ಪಯತ್।
07093008c ಲಘುತಾಂ ಯುಯುಧಾನಸ್ಯ ಲಾಘವೇನ ವಿಶೇಷಯನ್।।
ಯುಯುಧಾನನ ಹಸ್ತಲಾಘವವನ್ನು ತನ್ನ ಹಸ್ತಲಾಘವದಿಂದ ಮೀರಿಸುತ್ತಾ ದ್ರೋಣನು ಪುನಃ ಐವತ್ತು ನಿಶಿತ ಬಾಣಗಳಿಂದ ಪ್ರಹರಿಸಿದನು.
07093009a ಸಮುತ್ಪತಂತಿ ವಲ್ಮೀಕಾದ್ಯಥಾ ಕ್ರುದ್ಧಾ ಮಹೋರಗಾಃ।
07093009c ತಥಾ ದ್ರೋಣರಥಾದ್ರಾಜನ್ನುತ್ಪತಂತಿ ತನುಚ್ಚಿದಃ।।
ಕ್ರುದ್ಧ ಮಹಾಸರ್ಪಗಳು ಹುತ್ತದಿಂದ ಹೇಗೆ ಒಂದೊಂದಾಗಿ ಹೊರಬರುತ್ತವೆಯೋ ಹಾಗೆ ದ್ರೋಣನ ರಥದಿಂದ ದೇಹವನ್ನು ಸೀಳಬಲ್ಲ ಬಾಣಗಳು ಹೊರಬರುತ್ತಿದ್ದವು.
07093010a ತಥೈವ ಯುಯುಧಾನೇನ ಸೃಷ್ಟಾಃ ಶತಸಹಸ್ರಶಃ।
07093010c ಅವಾಕಿರನ್ದ್ರೋಣರಥಂ ಶರಾ ರುಧಿರಭೋಜನಾಃ।।
ಅದೇ ರೀತಿಯಲ್ಲಿ ಯುಯುಧಾನನು ಸೃಷ್ಟಿಸಿದ ನೂರಾರು ಸಾವಿರಾರು ರಕ್ತವನ್ನು ಕುಡಿಯುವ ಶರಗಳು ದ್ರೋಣನ ರಥವನ್ನು ಮುತ್ತಿದವು.
07093011a ಲಾಘವಾದ್ದ್ವಿಜಮುಖ್ಯಸ್ಯ ಸಾತ್ವತಸ್ಯ ಚ ಮಾರಿಷ।
07093011c ವಿಶೇಷಂ ನಾಧ್ಯಗಚ್ಚಾಮ ಸಮಾವಾಸ್ತಾಂ ನರರ್ಷಭೌ।।
ಮಾರಿಷ! ದ್ವಿಜಮುಖ್ಯ ದ್ರೋಣ ಮತ್ತು ಸಾತ್ವತ ಇವರಿಬ್ಬರು ನರರ್ಷಭರ ನಡುವೆ ಹಸ್ತ ಲಾಘವದಲ್ಲಿ ನಾವು ಯಾವ ರೀತಿಯ ವ್ಯತ್ಯಾಸವನ್ನೂ ಕಾಣಲಿಲ್ಲ.
07093012a ಸಾತ್ಯಕಿಸ್ತು ತತೋ ದ್ರೋಣಂ ನವಭಿರ್ನತಪರ್ವಭಿಃ।
07093012c ಆಜಘಾನ ಭೃಶಂ ಕ್ರುದ್ಧೋ ಧ್ವಜಂ ಚ ನಿಶಿತೈಃ ಶರೈಃ।
07093012e ಸಾರಥಿಂ ಚ ಶತೇನೈವ ಭಾರದ್ವಾಜಸ್ಯ ಪಶ್ಯತಃ।।
ಅನಂತರ ಸಾತ್ಯಕಿಯು ದ್ರೋಣನನ್ನು ಒಂಭತ್ತು ನತಪರ್ವಗಳಿಂದ ಹೊಡೆದನು. ಮತ್ತು ಅತ್ಯಂತ ಕ್ರುದ್ಧನಾಗಿ ಭಾರದ್ವಾಜನು ನೋಡುತ್ತಿದ್ದಂತೆಯೇ ನೂರು ನಿಶಿತ ಶರಗಳಿಂದ ಅವನ ಧ್ವಜವನ್ನೂ ಸಾರಥಿಯನ್ನೂ ಹೊಡೆದನು.
07093013a ಲಾಘವಂ ಯುಯುಧಾನಸ್ಯ ದೃಷ್ಟ್ವಾ ದ್ರೋಣೋ ಮಹಾರಥಃ।
07093013c ಸಪ್ತತ್ಯಾ ಸಾತ್ಯಕಿಂ ವಿದ್ಧ್ವಾ ತುರಗಾಂಶ್ಚ ತ್ರಿಭಿಸ್ತ್ರಿಭಿಃ।
07093013e ಧ್ವಜಮೇಕೇನ ವಿವ್ಯಾಧ ಮಾಧವಸ್ಯ ರಥೇ ಸ್ಥಿತಂ।।
ಯುಯುಧಾನನ ಹಸ್ತಲಾಘವವನ್ನು ಕಂಡು ಮಹಾರಥ ದ್ರೋಣನು ಸಾತ್ಯಕಿಯನ್ನು ಎಪ್ಪತ್ತು ಬಾಣಗಳಿಂದ ಹೊಡೆದು, ಮೂರರಿಂದ ಕುದುರೆಗಳನ್ನೂ, ಒಂದರಿಂದ ಮಾಧವನ ರಥದಲ್ಲಿದ್ದ ಧ್ವಜವನ್ನೂ ಹೊಡೆದನು.
07093014a ಅಥಾಪರೇಣ ಭಲ್ಲೇನ ಹೇಮಪುಂಖೇನ ಪತ್ರಿಣಾ।
07093014c ಧನುಶ್ಚಿಚ್ಚೇದ ಸಮರೇ ಮಾಧವಸ್ಯ ಮಹಾತ್ಮನಃ।।
ಸಮರದಲ್ಲಿ ದ್ರೋಣನು ಚಿನ್ನದ ರೆಕ್ಕೆಗಳಿದ್ದ ಇನ್ನೊಂದು ಭಲ್ಲದಿಂದ ಮಹಾತ್ಮ ಮಾಧವನ ಧನುಸ್ಸನ್ನು ತುಂಡರಿಸಿದನು.
07093015a ಸಾತ್ಯಕಿಸ್ತು ತತಃ ಕ್ರುದ್ಧೋ ಧನುಸ್ತ್ಯಕ್ತ್ವಾ ಮಹಾರಥಃ।
07093015c ಗದಾಂ ಜಗ್ರಾಹ ಮಹತೀಂ ಭಾರದ್ವಾಜಾಯ ಚಾಕ್ಷಿಪತ್।।
ಆಗ ಮಹಾರಥ ಸಾತ್ಯಕಿಯಾದರೋ ಕ್ರುದ್ಧನಾಗಿ ಧನುಸ್ಸನ್ನು ಬಿಸುಟು ಮಹಾ ಗದೆಯೊಂದನ್ನು ಹಿಡಿದು ಭಾರದ್ವಾಜನ ಮೇಲೆ ಎಸೆದನು.
07093016a ತಾಮಾಪತಂತೀಂ ಸಹಸಾ ಪಟ್ಟಬದ್ಧಾಮಯಸ್ಮಯೀಂ।
07093016c ನ್ಯವಾರಯಚ್ಚರೈರ್ದ್ರೋಣೋ ಬಹುಭಿರ್ಬಹುರೂಪಿಭಿಃ।।
ತನ್ನ ಮೇಲೆ ರಭಸದಿಂದ ಬರುತ್ತಿದ್ದ ಆ ಚಿನ್ನದ ಪಟ್ಟಿಯಿಂದ ಸುತ್ತಲ್ಪಟ್ಟಿದ್ದ ಲೋಹಮಯ ಗದೆಯನ್ನು ದ್ರೋಣನು ಅನೇಕ ಬಹುರೂಪೀ ಬಾಣಗಳಿಂದ ನಿರಸನಗೊಳಿಸಿದನು.
07093017a ಅಥಾನ್ಯದ್ಧನುರಾದಾಯ ಸಾತ್ಯಕಿಃ ಸತ್ಯವಿಕ್ರಮಃ।
07093017c ವಿವ್ಯಾಧ ಬಹುಭಿರ್ವೀರಂ ಭಾರದ್ವಾಜಂ ಶಿಲಾಶಿತೈಃ।।
ಅನಂತರ ಸತ್ಯವಿಕ್ರಮಿ ಸಾತ್ಯಕಿಯು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ವೀರ ಭಾರದ್ವಾಜನನ್ನು ಅನೇಕ ಶಿಲಾಶಿತ ಶರಗಳಿಂದ ಗಾಯಗೊಳಿಸಿದನು.
07093018a ಸ ವಿದ್ಧ್ವಾ ಸಮರೇ ದ್ರೋಣಂ ಸಿಂಹನಾದಮಮುಂಚತ।
07093018c ತಂ ವೈ ನ ಮಮೃಷೇ ದ್ರೋಣಃ ಸರ್ವಶಸ್ತ್ರಭೃತಾಂ ವರಃ।।
ಸಮರದಲ್ಲಿ ದ್ರೋಣನನ್ನು ಹಾಗೆ ಗಾಯಗೊಳಿಸಿ ಸಾತ್ಯಕಿಯು ಸಿಂಹನಾದಗೈದನು. ಆಗ ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠನಾದ ದ್ರೋಣನು ಅವನ ಆ ಕೃತ್ಯವನ್ನು ಸಹಿಸಿಕೊಳ್ಳಲಿಲ್ಲ.
07093019a ತಥಃ ಶಕ್ತಿಂ ಗೃಹೀತ್ವಾ ತು ರುಕ್ಮದಂಡಾಮಯಸ್ಮಯೀಂ।
07093019c ತರಸಾ ಪ್ರೇಷಯಾಮಾಸ ಮಾಧವಸ್ಯ ರಥಂ ಪ್ರತಿ।।
ಚಿನ್ನದ ದಂಡದಿಂದ ಕೂಡಿದ್ದ ಲೋಹಮಯ ಶಕ್ತ್ಯಾಯುಧವನ್ನೆತ್ತಿಕೊಂಡು ಮಾಧವನ ರಥದ ಮೇಲೆ ರಭಸದಿಂದ ಎಸೆದನು.
07093020a ಅನಾಸಾದ್ಯ ತು ಶೈನೇಯಂ ಸಾ ಶಕ್ತಿಃ ಕಾಲಸನ್ನಿಭಾ।
07093020c ಭಿತ್ತ್ವಾ ರಥಂ ಜಗಾಮೋಗ್ರಾ ಧರಣೀಂ ದಾರುಣಸ್ವನಾ।।
ಕಾಲನಂತಿದ್ದ ಆ ಶಕ್ತಿಯು ಶೈನೇಯನನ್ನು ಮುಟ್ಟದೇ ಅವನ ರಥವನ್ನು ಮಾತ್ರ ಭೇದಿಸಿ ಉಗ್ರ ದಾರುಣ ಸ್ವರದೊಂದಿಗೆ ಭೂಮಿಯ ಮೇಲೆ ಬಿದ್ದಿತು.
07093021a ತತೋ ದ್ರೋಣಂ ಶಿನೇಃ ಪೌತ್ರೋ ರಾಜನ್ವಿವ್ಯಾಧ ಪತ್ರಿಣಾ।
07093021c ದಕ್ಷಿಣಂ ಭುಜಮಾಸಾದ್ಯ ಪೀಡಯನ್ಭರತರ್ಷಭ।।
ರಾಜನ್! ಭರತರ್ಷಭ! ಆಗ ಶಿನಿಯ ಮೊಮ್ಮಗನು ದ್ರೋಣನನ್ನು ಪತ್ರಿಗಳಿಂದ ಹೊಡೆದನು. ಅದು ದ್ರೋಣನ ಬಲಭುಜಕ್ಕೆ ತಾಗಿ ಪೀಡೆಯನ್ನುಂಟುಮಾಡಿತು.
07093022a ದ್ರೋಣೋಽಪಿ ಸಮರೇ ರಾಜನ್ಮಾಧವಸ್ಯ ಮಹದ್ಧನುಃ।
07093022c ಅರ್ಧಚಂದ್ರೇಣ ಚಿಚ್ಚೇದ ರಥಶಕ್ತ್ಯಾ ಚ ಸಾರಥಿಂ।।
ರಾಜನ್! ದ್ರೋಣನಾದರೋ ಸಮರದಲ್ಲಿ ಮಾಧವನ ಮಹಾ ಧನುಸ್ಸನ್ನು ಅರ್ಧಚಂದ್ರದಿಂದ ತುಂಡರಿಸಿ ರಥಶಕ್ತಿ29ಯಿಂದ ಸಾರಥಿಯನ್ನು ಹೊಡೆದನು.
07093023a ಮುಮೋಹ ಸರಥಿಸ್ತಸ್ಯ ರಥಶಕ್ತ್ಯಾ ಸಮಾಹತಃ।
07093023c ಸ ರಥೋಪಸ್ಥಮಾಸಾದ್ಯ ಮುಹೂರ್ತಂ ಸಮ್ನ್ಯಷೀದತ।।
ರಥಶಕ್ತಿಯಿಂದ ಪ್ರಹೃತನಾದ ಸಾರಥಿಯು ಮೂರ್ಛೆಹೊಂದಿ ಮುಹೂರ್ತಕಾಲ ರಥಪೀಠದ ಹಿಂಬದಿಯಲ್ಲಿ ಸುಮ್ಮನೇ ಕುಳಿತುಕೊಂಡನು.
07093024a ಚಕಾರ ಸಾತ್ಯಕೀ ರಾಜಂಸ್ತತ್ರ ಕರ್ಮಾತಿಮಾನುಷಂ।
07093024c ಅಯೋಧಯಚ್ಚ ಯದ್ದ್ರೋಣಂ ರಶ್ಮೀಂ ಜಗ್ರಾಹ ಚ ಸ್ವಯಂ।।
ರಾಜನ್! ಆಗ ಸಾತ್ಯಕಿಯು ಅಲ್ಲಿ ಅತಿಮಾನುಷ ಕರ್ಮವನ್ನು ಮಾಡಿದನು. ಸ್ವಯಂ ತಾನೇ ಕುದುರೆಗಳ ಕಡಿವಾಣಗಳನ್ನು ಹಿಡಿದುಕೊಂಡು ದ್ರೋಣನೊಂದಿಗೆ ಯುದ್ಧಮಾಡಿದನು.
07093025a ತತಃ ಶರಶತೇನೈವ ಯುಯುಧಾನೋ ಮಹಾರಥಃ।
07093025c ಅವಿಧ್ಯದ್ಬ್ರಾಹ್ಮಣಂ ಸಂಖ್ಯೇ ಹೃಷ್ಟರೂಪೋ ವಿಶಾಂ ಪತೇ।।
ವಿಶಾಂಪತೇ! ಆಗ ಯುದ್ಧದಲ್ಲಿ ಹೃಷ್ಟರೂಪನಾದ ಮಹಾರಥ ಯುಯುಧಾನನು ಬ್ರಾಹ್ಮಣನನ್ನು ನೂರು ಬಾಣಗಳಿಂದ ಹೊಡೆದನು.
07093026a ತಸ್ಯ ದ್ರೋಣಃ ಶರಾನ್ಪಂಚ ಪ್ರೇಷಯಾಮಾಸ ಭಾರತ।
07093026c ತೇ ತಸ್ಯ ಕವಚಂ ಭಿತ್ತ್ವಾ ಪಪುಃ ಶೋಣಿತಮಾಹವೇ।।
ಭಾರತ! ಆಗ ರಣದಲ್ಲಿ ದ್ರೋಣನು ಅವನ ಮೇಲೆ ಐದು ಬಾಣಗಳನ್ನು ಪ್ರಯೋಗಿಸಲು ಅವು ಅವನ ಕವಚವನ್ನು ಕತ್ತರಿಸಿ ರಕ್ತವನ್ನು ಕುಡಿದವು.
07093027a ನಿರ್ವಿದ್ಧಸ್ತು ಶರೈರ್ಘೋರೈರಕ್ರುಧ್ಯತ್ಸಾತ್ಯಕಿರ್ಭೃಶಂ।
07093027c ಸಾಯಕಾನ್ವ್ಯಸೃಜಚ್ಚಾಪಿ ವೀರೋ ರುಕ್ಮರಥಂ ಪ್ರತಿ।।
ಘೋರ ಶರಗಳಿಂದ ಗಾಯಗೊಂಡ ಸಾತ್ಯಕಿಯು ತುಂಬಾ ಕ್ರುದ್ಧನಾದನು. ಆ ವೀರನು ದ್ರೋಣನ ಬಂಗಾರದ ರಥದ ಮೇಲೆ ಸಾಯಕಗಳ ಮಳೆಯನ್ನೇ ಸುರಿಸಿದನು.
07093028a ತತೋ ದ್ರೋಣಸ್ಯ ಯಂತಾರಂ ನಿಪಾತ್ಯೈಕೇಷುಣಾ ಭುವಿ।
07093028c ಅಶ್ವಾನ್ವ್ಯದ್ರಾವಯದ್ಬಾಣೈರ್ಹತಸೂತಾನ್ಮಹಾತ್ಮನಃ।।
ಅನಂತರ ಅವನು ಒಂದೇ ಬಾಣದಿಂದ ಮಹಾತ್ಮ ದ್ರೋಣನ ಸಾರಥಿಯನ್ನು ಹೊಡೆದು ನೆಲಕ್ಕೆ ಬೀಳಿಸಿದನು. ಮತ್ತು ಸೂತನು ಹತನಾಗಲು ಬಾಣಗಳಿಂದ ಹೊಡೆದು ಕುದುರೆಗಳನ್ನು ಓಡಿಸಿದನು.
07093029a ಸ ರಥಃ ಪ್ರದ್ರುತಃ ಸಂಖ್ಯೇ ಮಂಡಲಾನಿ ಸಹಸ್ರಶಃ।
07093029c ಚಕಾರ ರಾಜತೋ ರಾಜನ್ಭ್ರಾಜಮಾನ ಇವಾಂಶುಮಾನ್।।
ರಾಜನ್! ಬೆಳ್ಳಿಯಂತೆ ಹೊಳೆಯುತ್ತಿದ್ದ ಆ ರಥವು ರಣದಲ್ಲಿ ಸಹಸ್ರಾರು ಸುತ್ತುಗಳನ್ನು ಹಾಕಿ, ಸೂರ್ಯನಂತೆ ಪ್ರಕಾಶಿಸಿತು.
07093030a ಅಭಿದ್ರವತ ಗೃಹ್ಣೀತ ಹಯಾನ್ದ್ರೋಣಸ್ಯ ಧಾವತ।
07093030c ಇತಿ ಸ್ಮ ಚುಕ್ರುಶುಃ ಸರ್ವೇ ರಾಜಪುತ್ರಾಃ ಸರಾಜಕಾಃ।।
ಆಗ ಅಲ್ಲಿದ್ದ ರಾಜರು ಮತ್ತು ರಾಜಪುತ್ರರು ಎಲ್ಲರೂ “ಓಡಿಹೋಗಿ! ಹಿಡಿಯಿರಿ! ದ್ರೋಣನ ಕುದುರೆಗಳನ್ನು ತಡೆಯಿರಿ!” ಎಂದು ಕೂಗಿಕೊಳ್ಳುತ್ತಿದ್ದರು.
07093031a ತೇ ಸಾತ್ಯಕಿಮಪಾಸ್ಯಾಶು ರಾಜನ್ಯುಧಿ ಮಹಾರಥಾಃ।
07093031c ಯತೋ ದ್ರೋಣಸ್ತತಃ ಸರ್ವೇ ಸಹಸಾ ಸಮುಪಾದ್ರವನ್।।
ರಾಜನ್! ಯುದ್ಧದಲ್ಲಿ ಸಾತ್ಯಕಿಯನ್ನು ಅಲ್ಲಿಯೇ ಬಿಟ್ಟು ಮಹಾರಥರೆಲ್ಲರೂ ಕೂಡಲೇ ದ್ರೋಣನ ರಥವು ಹೋಗುತ್ತಿದ್ದ ಕಡೆಗೇ ತಮ್ಮ ರಥಗಳನ್ನೂ ಓಡಿಸಿದರು.
07093032a ತಾನ್ದೃಷ್ಟ್ವಾ ಪ್ರದ್ರುತಾನ್ಸರ್ವಾನ್ಸಾತ್ವತೇನ ಶರಾರ್ದಿತಾನ್।
07093032c ಪ್ರಭಗ್ನಂ ಪುನರೇವಾಸೀತ್ತವ ಸೈನ್ಯಂ ಸಮಾಕುಲಂ।।
ಸಾತ್ವತನ ಶರಗಳಿಂದ ಪೀಡಿತವಾಗಿದ್ದ ನಿನ್ನ ಸೈನ್ಯ ಸಮಾಕುಲವು ಅವರು ಓಡಿ ಹೋಗುತ್ತಿದ್ದುದನ್ನು ನೋಡಿ ಪುನಃ ಪ್ರಭಗ್ನವಾಯಿತು.
07093033a ವ್ಯೂಹಸ್ಯೈವ ಪುನರ್ದ್ವಾರಂ ಗತ್ವಾ ದ್ರೋಣೋ ವ್ಯವಸ್ಥಿತಃ।
07093033c ವಾತಾಯಮಾನೈಸ್ತೈರಶ್ವೈರ್ಹೃತೋ ವೃಷ್ಣಿಶರಾರ್ದಿತೈಃ।।
ವೃಷ್ಣಿಯ ಶರಗಳಿಂದ ಪೀಡಿತಗೊಂಡು ವಾಯುವೇಗದಿಂದ ಓಡಿ ಹೋಗುತ್ತಿದ್ದ ಕುದುರೆಗಳಿಂದಲೇ ಪುನಃ ಹಿಂದಕ್ಕೆ ಕರತರಲ್ಪಟ್ಟ ದ್ರೋಣನು ವ್ಯೂಹದ ಮಹಾದ್ವಾರಕ್ಕೆ ಹೋಗಿ ಪುನಃ ಅಲ್ಲಿಯೇ ವ್ಯವಸ್ಥಿತನಾದನು.
07093034a ಪಾಂಡುಪಾಂಚಾಲಸಂಭಗ್ನಂ ವ್ಯೂಹಮಾಲೋಕ್ಯ ವೀರ್ಯವಾನ್।
07093034c ಶೈನೇಯೇ ನಾಕರೋದ್ಯತ್ನಂ ವ್ಯೂಹಸ್ಯೈವಾಭಿರಕ್ಷಣೇ।।
ಪಾಂಡವರು ಮತ್ತು ಪಾಂಚಾಲರಿಂದ ತನ್ನ ವ್ಯೂಹವು ಭಗ್ನವಾಗುತ್ತಿರುವುದನ್ನು ನೋಡಿ ವೀರ್ಯವಾನ್ ದ್ರೋಣನು ಶೈನೇಯನನ್ನು ಹಿಂಬಾಲಿಸಿ ಹೋಗದೇ ವ್ಯೂಹದ ರಕ್ಷಣೆಯಲ್ಲಿಯೇ ನಿರತನಾದನು.
07093035a ನಿವಾರ್ಯ ಪಾಂಡುಪಾಂಚಾಲಾನ್ದ್ರೋಣಾಗ್ನಿಃ ಪ್ರದಹನ್ನಿವ।
07093035c ತಸ್ಥೌ ಕ್ರೋಧಾಗ್ನಿಸಂದೀಪ್ತಃ ಕಾಲಸೂರ್ಯ ಇವೋದಿತಃ।।
ಕೋಪವೆಂಬ ಕಟ್ಟಿಗೆಯಿಂದ ಪ್ರಜ್ವಲಿಸುತ್ತಿದ್ದ ದ್ರೋಣನು ಪಾಂಡು ಪಾಂಚಾಲ ಯೋಧರನ್ನು ದಹಿಸಿಬಿಡುವನೋ ಎಂಬಂತೆ ವ್ಯೂಹದ ಅಗ್ರಭಾಗದಲ್ಲಿ ನಿಂತು ಪ್ರಳಯಕಾಲದ ಸೂರ್ಯನಂತೆ ಪ್ರಕಾಶಿಸುತ್ತಿದ್ದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ಸಾತ್ಯಕಿಪರಾಕ್ರಮೇ ತ್ರಿನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶೇ ಸಾತ್ಯಕಿಪರಾಕ್ರಮ ಎನ್ನುವ ತೊಂಭತ್ಮೂರನೇ ಅಧ್ಯಾಯವು.