ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 92
ಸಾರ
ಸಾತ್ಯಕಿಯಿಂದ ದುರ್ಯೋಧನನ ಪರಾಜಯ (1-24). ಸಾತ್ಯಕಿಯು ಕೃತವರ್ಮನನ್ನು ಪರಾಜಯಗೊಳಿಸಿದುದು (25-44).
07092001 ಸಂಜಯ ಉವಾಚ।
07092001a ತೇ ಕಿರಂತಃ ಶರವ್ರಾತಾನ್ಸರ್ವೇ ಯತ್ತಾಃ ಪ್ರಹಾರಿಣಃ।
07092001c ತ್ವರಮಾಣಾ ಮಹಾರಾಜ ಯುಯುಧಾನಮಯೋಧಯನ್।।
ಸಂಜಯನು ಹೇಳಿದನು: “ಮಹಾರಾಜ! ಪ್ರಹಾರಕುಶಲ ಅವರೆಲ್ಲರೂ ಬಾಣಗಳ ಸಮೂಹಗಳನ್ನು ಪ್ರಯೋಗಿಸುತ್ತಾ ತ್ವರೆಮಾಡಿ ಯುಯುಧಾನನೊಡನೆ ಯುದ್ಧ ಮಾಡಿದರು.
07092002a ತಂ ದ್ರೋಣಃ ಸಪ್ತಸಪ್ತತ್ಯಾ ಜಘಾನ ನಿಶಿತೈಃ ಶರೈಃ।
07092002c ದುರ್ಮರ್ಷಣೋ ದ್ವಾದಶಭಿರ್ದುಃಸ್ಸಹೋ ದಶಭಿಃ ಶರೈಃ।।
ಅವನನ್ನು ದ್ರೋಣನು ಎಪ್ಪತ್ತೇಳು ನಿಶಿತ ಬಾಣಗಳಿಂದ, ದುರ್ಮರ್ಷಣನು ಹನ್ನೆರಡು ಮತ್ತು ದುಃಸ್ಸಹನು ಹತ್ತು ಬಾಣಗಳಿಂದ ಹೊಡೆದರು.
07092003a ವಿಕರ್ಣಶ್ಚಾಪಿ ನಿಶಿತೈಸ್ತ್ರಿಂಶದ್ಭಿಃ ಕಂಕಪತ್ರಿಭಿಃ।
07092003c ವಿವ್ಯಾಧ ಸವ್ಯೇ ಪಾರ್ಶ್ವೇ ತು ಸ್ತನಾಭ್ಯಾಮಂತರೇ ತಥಾ।।
ಹಾಗೆಯೇ ವಿಕರ್ಣನೂ ಕೂಡ ರಣಹದ್ದಿನ ರೆಕ್ಕೆಗಳ ಮೂವತ್ತು ನಿಶಿತ ಕಂಕಪತ್ರಗಳಿಂದ ಅವನ ಎಡಪಾರ್ಶ್ವವನ್ನೂ ಮತ್ತು ವಕ್ಷಸ್ಥಳವನ್ನೂ ಪ್ರಹರಿಸಿದನು.
07092004a ದುರ್ಮುಖೋ ದಶಭಿರ್ಬಾಣೈಸ್ತಥಾ ದುಃಶಾಸನೋಽಷ್ಟಭಿಃ।
07092004c ಚಿತ್ರಸೇನಶ್ಚ ಶೈನೇಯಂ ದ್ವಾಭ್ಯಾಂ ವಿವ್ಯಾಧ ಮಾರಿಷ।।
ಮಾರಿಷ! ದುರ್ಮುಖನು ಹತ್ತು ಬಾಣಗಳಿಂದ, ಹಾಗೆಯೇ ದುಃಶಾಸನನು ಎಂಟು ಬಾಣಗಳಿಂದ ಮತ್ತು ಚಿತ್ರಸೇನನು ಎರಡರಿಂದ ಶೈನೇಯನನ್ನು ಹೊಡೆದರು.
07092005a ದುರ್ಯೋಧನಶ್ಚ ಮಹತಾ ಶರವರ್ಷೇಣ ಮಾಧವಂ।
07092005c ಅಪೀಡಯದ್ರಣೇ ರಾಜನ್ ಶೂರಾಶ್ಚಾನ್ಯೇ ಮಹಾರಥಾಃ।।
ರಾಜನ್! ದುರ್ಯೋಧನನೂ ಮತ್ತು ರಣದಲ್ಲಿದ್ದ ಅನ್ಯ ಮಹಾರಥ ಶೂರರೂ ಮಾಧವನನ್ನು ಮಹಾ ಶರವರ್ಷದಿಂದ ಪೀಡಿಸಿದರು.
07092006a ಸರ್ವತಃ ಪ್ರತಿವಿದ್ಧಸ್ತು ತವ ಪುತ್ರೈರ್ಮಹಾರಥೈಃ।
07092006c ತಾನ್ಪ್ರತ್ಯವಿಧ್ಯಚ್ಚೈನೇಯಃ ಪೃಥಕ್ಪೃಥಗಜಿಹ್ಮಗೈಃ।।
ನಿನ್ನ ಮಹಾರಥ ಪುತ್ರರಿಂದ ಎಲ್ಲ ಕಡೆಗಳಿಂದ ಹೀಗೆ ಹೊಡೆಯಲ್ಪಟ್ಟ ಶೈನೇಯನು ಅವರಿಗೆ ಪ್ರತಿಯಾಗಿ ಪ್ರತ್ಯೇಕ ಪ್ರತ್ಯೇಕವಾಗಿ ಒಬ್ಬೊಬ್ಬರನ್ನೂ ಜಿಹ್ಮಗಗಳಿಂದ ಹೊಡೆದನು.
07092007a ಭಾರದ್ವಾಜಂ ತ್ರಿಭಿರ್ಬಾಣೈರ್ದುಃಸಹಂ ನವಭಿಸ್ತಥಾ।
07092007c ವಿಕರ್ಣಂ ಪಂಚವಿಂಶತ್ಯಾ ಚಿತ್ರಸೇನಂ ಚ ಸಪ್ತಭಿಃ।।
07092008a ದುರ್ಮರ್ಷಣಂ ದ್ವಾದಶಭಿಶ್ಚತುರ್ಭಿಶ್ಚ ವಿವಿಂಶತಿಂ।
07092008c ಸತ್ಯವ್ರತಂ ಚ ನವಭಿರ್ವಿಜಯಂ ದಶಭಿಃ ಶರೈಃ।।
ಭಾರದ್ವಾಜನನ್ನು ಮೂರು ಬಾಣಗಳಿಂದ, ದುಃಸ್ಸಹನನ್ನು ಒಂಭತ್ತರಿಂದ, ವಿಕರ್ಣನನ್ನು ಇಪ್ಪತ್ತೈದರಿಂದ, ಚಿತ್ರಸೇನನನ್ನು ಏಳರಿಂದ, ದುರ್ಮರ್ಷಣನನ್ನು ಹನ್ನೆರಡರಿಂದ, ವಿವಿಂಶತಿಯನ್ನು ನಾಲ್ಕರಿಂದ, ಸತ್ಯವ್ರತನನ್ನು ಒಂಭತ್ತರಿಂದ ಮತ್ತು ವಿಜಯನನ್ನು ಹತ್ತು ಶರಗಳಿಂದ ಹೊಡೆದನು.
07092009a ತತೋ ರುಕ್ಮಾಂಗದಂ ಚಾಪಂ ವಿಧುನ್ವಾನೋ ಮಹಾರಥಃ।
07092009c ಅಭ್ಯಯಾತ್ಸಾತ್ಯಕಿಸ್ತೂರ್ಣಂ ಪುತ್ರಂ ತವ ಮಹಾರಥಂ।।
ಆಗ ತಕ್ಷಣವೇ ಮಹಾರಥಿ ಸಾತ್ಯಕಿಯು ಧನುಸ್ಸನ್ನು ಟೇಂಕರಿಸುತ್ತಾ ನಿನ್ನ ಮಗ ರುಕ್ಮಾಂಗದ ಮಹಾರಥ ದುರ್ಯೋಧನನನ್ನು ಎದುರಿಸಿದನು.
07092010a ರಾಜಾನಂ ಸರ್ವಲೋಕಸ್ಯ ಸರ್ವಶಸ್ತ್ರಭೃತಾಂ ವರಂ।
07092010c ಶರೈರಭ್ಯಾಹನದ್ಗಾಢಂ ತತೋ ಯುದ್ಧಮಭೂತ್ತಯೋಃ।।
ಸರ್ವಲೋಕಗಳಿಗೂ ರಾಜನಾಗಿದ್ದ, ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠನಾಗಿದ್ದ ಅವನನ್ನು ಸಾತ್ಯಕಿಯು ಶರಗಳಿಂದ ಗಾಢವಾಗಿ ಪ್ರಹರಿಸಿದನು. ಹೀಗೆ ಅವರಿಬ್ಬರ ನಡುವೆ ಯುದ್ಧವು ನಡೆಯಿತು.
07092011a ವಿಮುಂಚಂತೌ ಶರಾಂಸ್ತೀಕ್ಷ್ಣಾನ್ಸಂದಧಾನೌ ಚ ಸಾಯಕಾನ್।
07092011c ಅದೃಶ್ಯಂ ಸಮರೇಽನ್ಯೋನ್ಯಂ ಚಕ್ರತುಸ್ತೌ ಮಹಾರಥೌ।।
ಆ ಇಬ್ಬರು ಮಹಾರಥರು ತೀಕ್ಷ್ಣ ಶರಗಳನ್ನು ಅನುಸಂಧಾನ ಮಾಡುತ್ತಾ, ಪ್ರಹರಿಸುತ್ತಾ, ಸಮರದಲ್ಲಿ ಅನ್ಯೋನ್ಯರನ್ನು ಬಾಣಗಳಿಂದ ಮುಚ್ಚಿ ಅದೃಶ್ಯರನ್ನಾಗಿಸಿಬಿಟ್ಟರು.
07092012a ಸಾತ್ಯಕಿಃ ಕುರುರಾಜೇನ ನಿರ್ವಿದ್ಧೋ ಬಹ್ವಶೋಭತ।
07092012c ಅಸ್ರವದ್ರುಧಿರಂ ಭೂರಿ ಸ್ವರಸಂ ಚಂದನೋ ಯಥಾ।।
ಕುರುರಾಜನಿಂದ ಬಹಳವಾಗಿ ಗಾಯಗೊಂಡ ಸಾತ್ಯಕಿಯು ರಕ್ತವನ್ನು ಸುರಿಸುತ್ತಾ ಕೆಂಪು ರಸವನ್ನು ಸುರಿಸುವ ಚಂದನ ವೃಕ್ಷದಂತೆ ಶೋಭಿಸಿದನು.
07092013a ಸಾತ್ವತೇನ ಚ ಬಾಣೌಘೈರ್ನಿರ್ವಿದ್ಧಸ್ತನಯಸ್ತವ।
07092013c ಶಾತಕುಂಭಮಯಾಪೀಡೋ ಬಭೌ ಯೂಪ ಇವೋಚ್ಚ್ರಿತಃ।।
ಸಾತ್ವತನ ಬಾಣಗಳ ಗುಂಪುಗಳಿಂದ ಗಾಯಗೊಂಡ ನಿನ್ನ ಮಗನು ಸುವರ್ಣಮಯ ಶಿರೋಭೂಷಣವಿರುವ ಎತ್ತರ ಯೂಪಸ್ಥಂಭದಂತೆ ಶೋಭಿಸಿದನು.
07092014a ಮಾಧವಸ್ತು ರಣೇ ರಾಜನ್ಕುರುರಾಜಸ್ಯ ಧನ್ವಿನಃ।
07092014c ಧನುಶ್ಚಿಚ್ಚೇದ ಸಹಸಾ ಕ್ಷುರಪ್ರೇಣ ಹಸನ್ನಿವ।
07092014e ಅಥೈನಂ ಚಿನ್ನಧನ್ವಾನಂ ಶರೈರ್ಬಹುಭಿರಾಚಿನೋತ್।।
ರಾಜನ್! ಮಾಧವನಾದರೋ ರಣದಲ್ಲಿ ಒಮ್ಮೆಲೇ ನಗುತ್ತಾ ಧನ್ವಿ ಕುರುರಾಜನ ಧನುಸ್ಸನ್ನು ಕ್ಷುರಪ್ರದಿಂದ ಕತ್ತರಿಸಿದನು. ಕೂಡಲೇ ಧನುಸ್ಸನ್ನು ಕಳೆದುಕೊಂಡ ಅವನನ್ನು ಬಹಳ ಶರಗಳಿಂದ ಪ್ರಹರಿಸಿದನು.
07092015a ನಿರ್ಭಿನ್ನಶ್ಚ ಶರೈಸ್ತೇನ ದ್ವಿಷತಾ ಕ್ಷಿಪ್ರಕಾರಿಣಾ।
07092015c ನಾಮೃಷ್ಯತ ರಣೇ ರಾಜಾ ಶತ್ರೋರ್ವಿಜಯಲಕ್ಷಣಂ।।
ಕ್ಷಿಪ್ರಕಾರೀ ಶತ್ರುವಿನ ಶರಗಳಿಂದ ತನ್ನ ಧನುಸ್ಸು ತುಂಡಾದುದನ್ನು ಮತ್ತು ಶತ್ರುವಿನ ವಿಜಯಲಕ್ಷಣವನ್ನು ರಾಜ ದುರ್ಯೋಧನನು ಸಹಿಸಿಕೊಳ್ಳಲಿಲ್ಲ.
07092016a ಅಥಾನ್ಯದ್ಧನುರಾದಾಯ ಹೇಮಪೃಷ್ಠಂ ದುರಾಸದಂ।
07092016c ವಿವ್ಯಾಧ ಸಾತ್ಯಕಿಂ ತೂರ್ಣಂ ಸಾಯಕಾನಾಂ ಶತೇನ ಹ।।
ಆಗ ಅವನು ಹೇಮಪೃಷ್ಠದ ಇನ್ನೊಂದು ದುರಾಸದ ಧನುಸ್ಸನ್ನು ತೆಗೆದುಕೊಂಡು ತಕ್ಷಣವೇ ನೂರು ಸಾಯಕಗಳಿಂದ ಸಾತ್ಯಕಿಯನ್ನು ಹೊಡೆದನು.
07092017a ಸೋಽತಿವಿದ್ಧೋ ಬಲವತಾ ಪುತ್ರೇಣ ತವ ಧನ್ವಿನಾ।
07092017c ಅಮರ್ಷವಶಮಾಪನ್ನಸ್ತವ ಪುತ್ರಮಪೀಡಯತ್।।
ನಿನ್ನ ಬಲವಂತ ಮಗ ಧನ್ವಿಯಿಂದ ಅತಿಯಾಗಿ ಗಾಯಗೊಂಡ ಸಾತ್ಯಕಿಯು ಸಹಿಸಿಕೊಳ್ಳಲಾಗದೇ ನಿನ್ನ ಮಗನನ್ನೂ ಬಹಳವಾಗಿ ಪೀಡಿಸಿದನು.
07092018a ಪೀಡಿತಂ ನೃಪತಿಂ ದೃಷ್ಟ್ವಾ ತವ ಪುತ್ರಾ ಮಹಾರಥಾಃ।
07092018c ಸಾತ್ವತಂ ಶರವರ್ಷೇಣ ಚಾದಯಾಮಾಸುರಂಜಸಾ।।
ನೃಪತಿಯು ಪೀಡಿತನಾಗಿದ್ದುದನ್ನು ನೋಡಿ ನಿನ್ನ ಮಹಾರಥ ಮಕ್ಕಳು ಸಾತ್ವತನನ್ನು ಶರವರ್ಷಗಳಿಂದ ಮುಚ್ಚಿಬಿಟ್ಟರು.
07092019a ಸ ಚಾದ್ಯಮಾನೋ ಬಹುಭಿಸ್ತವ ಪುತ್ರೈರ್ಮಹಾರಥೈಃ।
07092019c ಏಕೈಕಂ ಪಂಚಭಿರ್ವಿದ್ಧ್ವಾ ಪುನರ್ವಿವ್ಯಾಧ ಸಪ್ತಭಿಃ।।
ನಿನ್ನ ಮಹಾರಥ ಪುತ್ರರಿಂದ ಬಹಳವಾಗಿ ಗಾಯಗೊಂಡ ಸಾತ್ಯಕಿಯು ಒಬ್ಬೊಬ್ಬರನ್ನೂ ಐದೈದು ಮತ್ತು ಪುನಃ ಏಳೇಳರಿಂದ ಹೊಡೆದನು.
07092020a ದುರ್ಯೋಧನಂ ಚ ತ್ವರಿತೋ ವಿವ್ಯಾಧಾಷ್ಟಭಿರಾಶುಗೈಃ।
07092020c ಪ್ರಹಸಂಶ್ಚಾಸ್ಯ ಚಿಚ್ಚೇದ ಕಾರ್ಮುಕಂ ರಿಪುಭೀಷಣಂ।।
ತ್ವರೆಮಾಡಿ ದುರ್ಯೋಧನನನ್ನು ಎಂಟು ಆಶುಗಗಳಿಂದ ಹೊಡೆದು ನಗುತ್ತಾ ರಿಪುಭೀಷಣವಾಗಿದ್ದ ಅವನ ಧನುಸ್ಸನ್ನು ತುಂಡರಿಸಿದನು.
07092021a ನಾಗಂ ಮಣಿಮಯಂ ಚೈವ ಶರೈರ್ಧ್ವಜಮಪಾತಯತ್।
07092021c ಹತ್ವಾ ತು ಚತುರೋ ವಾಹಾಂಶ್ಚತುರ್ಭಿರ್ನಿಶಿತೈಃ ಶರೈಃ।
07092021e ಸಾರಥಿಂ ಪಾತಯಾಮಾಸ ಕ್ಷುರಪ್ರೇಣ ಮಹಾಯಶಾಃ।।
ಅನಂತರ ಆನೆಯ ಚಿಹ್ನೆಯುಳ್ಳ ಮಣಿಮಯವಾದ ಅವನ ಧ್ವಜವನ್ನು ಶರಗಳಿಂದ ಕೆಳಗುರುಳಿಸಿದನು. ಮತ್ತು ಆ ಮಹಾಯಶಸ್ವಿಯು ನಿಶಿತ ಶರಗಳಿಂದ ನಾಲ್ಕು ಕುದುರೆಗಳನ್ನೂ ಕೊಂದು ಕ್ಷುರಪ್ರದಿಂದ ಸಾರಥಿಯನ್ನೂ ಕೆಳಗುರುಳಿಸಿದನು.
07092022a ಏತಸ್ಮಿನ್ನಂತರೇ ಚೈವ ಕುರುರಾಜಂ ಮಹಾರಥಂ।
07092022c ಅವಾಕಿರಚ್ಚರೈರ್ಹೃಷ್ಟೋ ಬಹುಭಿರ್ಮರ್ಮಭೇದಿಭಿಃ।।
ಇದರ ಮಧ್ಯದಲ್ಲಿಯೇ ಮಹಾರಥ ಕುರುರಾಜನನ್ನು ಹೃಷ್ಟ ಸಾತ್ಯಕಿಯು ಅನೇಕ ಮರ್ಮಭೇದಿ ಬಾಣಗಳಿಂದ ಮುಚ್ಚಿಬಿಟ್ಟನು.
07092023a ಸ ವಧ್ಯಮಾನಃ ಸಮರೇ ಶೈನೇಯಸ್ಯ ಶರೋತ್ತಮೈಃ।
07092023c ಪ್ರಾದ್ರವತ್ಸಹಸಾ ರಾಜನ್ಪುತ್ರೋ ದುರ್ಯೋಧನಸ್ತವ।
ರಾಜನ್! ಸಮರದಲ್ಲಿ ಶೈನೇಯನ ಉತ್ತಮ ಶರಗಳಿಂದ ಗಾಯಗೊಂಡ ನಿನ್ನ ಮಗ ದುರ್ಯೋಧನನು ತಕ್ಷಣವೇ ಓಡಿಹೋದನು.
07092023e ಆಪ್ಲುತಶ್ಚ ತತೋ ಯಾನಂ ಚಿತ್ರಸೇನಸ್ಯ ಧನ್ವಿನಃ।।
07092024a ಹಾಹಾಭೂತಂ ಜಗಚ್ಚಾಸೀದ್ದೃಷ್ಟ್ವಾ ರಾಜಾನಮಾಹವೇ।
07092024c ಗ್ರಸ್ಯಮಾನಂ ಸಾತ್ಯಕಿನಾ ಖೇ ಸೋಮಮಿವ ರಾಹುಣಾ।।
ಓಡಿಹೋಗುವಾಗ ಧನ್ವಿ ಚಿತ್ರಸೇನನ ರಥವನ್ನು ಏರಿದನು. ಆಕಾಶದಲ್ಲಿ ರಾಹುವಿನಿಂದ ಗ್ರಸ್ತನಾದ ಸೋಮನಂತೆ ಆಹವದಲ್ಲಿ ಸಾತ್ಯಕಿಯಿಂದ ಗ್ರಸ್ತನಾದ ರಾಜನನ್ನು ನೋಡಿ ಹಾಹಾಕಾರವುಂಟಾಯಿತು.
07092025a ತಂ ತು ಶಬ್ದಂ ಮಹಚ್ಚ್ರುತ್ವಾ ಕೃತವರ್ಮಾ ಮಹಾರಥಃ।
07092025c ಅಭ್ಯಯಾತ್ಸಹಸಾ ತತ್ರ ಯತ್ರಾಸ್ತೇ ಮಾಧವಃ ಪ್ರಭುಃ।।
07092026a ವಿಧುನ್ವಾನೋ ಧನುಃಶ್ರೇಷ್ಠಂ ಚೋದಯಂಶ್ಚೈವ ವಾಜಿನಃ।
07092026c ಭರ್ತ್ಸಯನ್ಸಾರಥಿಂ ಚೋಗ್ರಂ ಯಾಹಿ ಯಾಹೀತಿ ಸತ್ವರಃ।।
ಆ ಮಹಾಶಬ್ಧವನ್ನು ಕೇಳಿ ಮಹಾರಥ ಕೃತವರ್ಮನು ಧನುಸ್ಸನ್ನು ಟೇಂಕರಿಸಿ ಅಲ್ಲಾಡಿಸುತ್ತಾ, ಕುದುರೆಗಳನ್ನು ಬೇಗ ಹೋಗುವಂತೆ ಚಪ್ಪರಿಸುತ್ತಾ, “ಬೇಗ ಹೋಗು!” ಎಂದು ಸಾರಥಿಯನ್ನು ಗದರಿಸುತ್ತಾ ತಕ್ಷಣವೇ ಪ್ರಭು ಮಾಧವನು ಎಲ್ಲಿದ್ದನೋ ಅಲ್ಲಿಗೆ ಧಾವಿಸಿ ಬಂದನು.
07092027a ತಮಾಪತಂತಂ ಸಂಪ್ರೇಕ್ಷ್ಯ ವ್ಯಾದಿತಾಸ್ಯಮಿವಾಂತಕಂ।
07092027c ಯುಯುಧಾನೋ ಮಹಾರಾಜ ಯಂತಾರಮಿದಮಬ್ರವೀತ್।।
ಮಹಾರಾಜ! ಬಾಯ್ದೆರೆದ ಅಂತಕನಂತೆಯೇ ತನ್ನ ಮೇಲೆ ಬೀಳಲು ಬರುತ್ತಿದ್ದ ಅವನನ್ನು ನೋಡಿ ಯುಯುಧಾನನು ಸಾರಥಿಗೆ ಹೀಗೆ ಹೇಳಿದನು:
07092028a ಕೃತವರ್ಮಾ ರಥೇನೈಷ ದ್ರುತಮಾಪತತೇ ಶರೀ।
07092028c ಪ್ರತ್ಯುದ್ಯಾಹಿ ರಥೇನೈನಂ ಪ್ರವರಂ ಸರ್ವಧನ್ವಿನಾಂ।।
“ಕೃತವರ್ಮನು ಕೈಯಲ್ಲಿ ಬಾಣವನ್ನು ಹಿಡಿದು ರಥದಲ್ಲಿ ಕುಳಿತು ತೀವ್ರ ವೇಗದಿಂದ ನನ್ನ ಕಡೆಗೇ ಬರುತ್ತಿದ್ದಾನೆ. ಸರ್ವಧನುಷ್ಮಂತರಲ್ಲಿ ಶ್ರೇಷ್ಠನಾದ ಅವನನ್ನು ನಮ್ಮ ರಥದೊಂದಿಗೆ ಎದುರಿಸು!”
07092029a ತತಃ ಪ್ರಜವಿತಾಶ್ವೇನ ವಿಧಿವತ್ಕಲ್ಪಿತೇನ ಚ।
07092029c ಆಸಸಾದ ರಣೇ ಭೋಜಂ ಪ್ರತಿಮಾನಂ ಧನುಷ್ಮತಾಂ।।
ಅನಂತರ ವಿಧಿವತ್ತಾಗಿ ಸಜ್ಜುಗೊಳಿಸಿದ್ದ ವೇಗದ ಕುದುರೆಗಳಿಂದ ಯುಕ್ತವಾಗಿದ್ದ ರಥದಲ್ಲಿ ಕುಳಿತು ಸಾತ್ಯಕಿಯು ಧನುಷ್ಮಂತರಿಗೆ ಆದರ್ಶಪ್ರಾಯನಾಗಿದ್ದ ಭೋಜನ ಸಮೀಪಕ್ಕೆ ಹೋದನು.
07092030a ತತಃ ಪರಮಸಂಕ್ರುದ್ಧೌ ಜ್ವಲಂತಾವಿವ ಪಾವಕೌ।
07092030c ಸಮೇಯಾತಾಂ ನರವ್ಯಾಘ್ರೌ ವ್ಯಾಘ್ರಾವಿವ ತರಸ್ವಿನೌ।।
ಆಗ ಪರಮ ಕ್ರುದ್ಧರಾಗಿದ್ದ, ಪ್ರಜ್ವಲಿಸುವ ಅಗ್ನಿಗಳಂತೆಯೇ ಕಾಣುತ್ತಿದ್ದ, ವೇಗಶಾಲಿಗಳಾದ, ಆ ನರಶ್ರೇಷ್ಠ ಸಾತ್ಯಕಿ-ಕೃತವರ್ಮರಿಬ್ಬರೂ ಕೊಬ್ಬಿದ ಎರಡು ವ್ಯಾಘ್ರಗಳೋಪಾದಿಯಲ್ಲಿ ಯುದ್ಧಕ್ಕೆ ತೊಡಗಿದರು.
07092031a ಕೃತವರ್ಮಾ ತು ಶೈನೇಯಂ ಷಡ್ವಿಂಶತ್ಯಾ ಸಮಾರ್ಪಯತ್।
07092031c ನಿಶಿತೈಃ ಸಾಯಕೈಸ್ತೀಕ್ಷ್ಣೈರ್ಯಂತಾರಂ ಚಾಸ್ಯ ಸಪ್ತಭಿಃ।।
ಕೃತವರ್ಮನಾದರೋ ಶೈನೇಯನನ್ನು ಇಪ್ಪತ್ತಾರು ಬಾಣಗಳಿಂದ ಪ್ರಹರಿಸಿ ಅವನ ಸಾರಥಿಯನ್ನು ನಿಶಿತ ತೀಕ್ಷ್ಣ ಏಳು ಬಾಣಗಳಿಂದ ಹೊಡೆದನು.
07092032a ಚತುರಶ್ಚ ಹಯೋದಾರಾಂಶ್ಚತುರ್ಭಿಃ ಪರಮೇಷುಭಿಃ।
07092032c ಅವಿಧ್ಯತ್ಸಾಧುದಾಂತಾನ್ವೈ ಸೈಂಧವಾನ್ಸಾತ್ವತಸ್ಯ ಹ।।
ಪುನಃ ನಾಲ್ಕು ಶ್ರೇಷ್ಠ ಬಾಣಗಳಿಂದ ಸಾತ್ವತನ ಸುಶಿಕ್ಷಿತವೂ ವಿನೀತವೂ ಆಗಿದ್ದ ಸಿಂಧುದೇಶದ ನಾಲ್ಕು ಕುದುರೆಗಳನ್ನೂ ಗಾಯಗೊಳಿಸಿದನು.
07092033a ರುಕ್ಮಧ್ವಜೋ ರುಕ್ಮಪೃಷ್ಠಂ ಮಹದ್ವಿಸ್ಫಾರ್ಯ ಕಾರ್ಮುಕಂ।
07092033c ರುಕ್ಮಾಂಗದೀ ರುಕ್ಮವರ್ಮಾ ರುಕ್ಮಪುಂಖಾನವಾಕಿರತ್।।
ಬಂಗಾರದ ಧ್ವಜವುಳ್ಳ, ಬಂಗಾರದ ಅಂಗದವನ್ನು ತೊಟ್ಟಿದ್ದ, ಬಂಗಾರದ ಕವಚವನ್ನು ತೊಟ್ಟಿದ್ದ ಕೃತವರ್ಮನು ಬಂಗಾರದ ಬೆನ್ನುಳ್ಳ ಧನುಸ್ಸನ್ನು ಟೇಂಕರಿಸಿ ಬಂಗಾರದ ರೆಕ್ಕೆಗಳನ್ನು ಹೊಂದಿದ್ದ ಬಾಣಗಳಿಂದ ಸಾತ್ಯಕಿಯನ್ನು ಮುಚ್ಚಿ ಬಿಟ್ಟನು.
07092034a ತತೋಽಶೀತಿಂ ಶಿನೇಃ ಪೌತ್ರಃ ಸಾಯಕಾನ್ಕೃತವರ್ಮಣೇ।
07092034c ಪ್ರಾಹಿಣೋತ್ತ್ವರಯಾ ಯುಕ್ತೋ ದ್ರಷ್ಟುಕಾಮೋ ಧನಂಜಯಂ।।
ಧನಂಜಯನನ್ನು ನೋಡುವ ಅವಸರದಲ್ಲಿದ್ದ ಶಿನಿಯ ಮೊಮ್ಮೊಗನು ಎಂಭತ್ತು ಬಾಣಗಳನ್ನು ಕೃತವರ್ಮನ ಮೇಲೆ ಪ್ರಯೋಗಿಸಿದನು.
07092035a ಸೋಽತಿವಿದ್ಧೋ ಬಲವತಾ ಶತ್ರುಣಾ ಶತ್ರುತಾಪನಃ।
07092035c ಸಮಕಂಪತ ದುರ್ಧರ್ಷಃ ಕ್ಷಿತಿಕಂಪೇ ಯಥಾಚಲಃ।।
ಬಲಿಷ್ಠ ಶತ್ರುವಿನ ಬಾಣಗಳಿಂದ ಬಹಳವಾಗಿ ಗಾಯಗೊಂಡ ದುರ್ಧರ್ಷ ಶತ್ರುತಾಪನ ಕೃತವರ್ಮನು ಭೂಕಂಪವಾದಾಗ ಪರ್ವತವು ನಡುಗುವಂತೆ ತತ್ತರಿಸಿದನು.
07092036a ತ್ರಿಷಷ್ಟ್ಯಾ ಚತುರೋಽಸ್ಯಾಶ್ವಾನ್ಸಪ್ತಭಿಃ ಸಾರಥಿಂ ಶರೈಃ।
07092036c ವಿವ್ಯಾಧ ನಿಶಿತೈಸ್ತೂರ್ಣಂ ಸಾತ್ಯಕಿಃ ಕೃತವರ್ಮಣಃ।।
ಅದೇ ಸಮಯದಲ್ಲಿ ಸಾತ್ಯಕಿಯು ತಕ್ಷಣವೇ ಅರವತ್ಮೂರು ನಿಶಿತ ಬಾಣಗಳಿಂದ ಕೃತವರ್ಮನ ಕುದುರೆಗಳನ್ನೂ, ಏಳು ಬಾಣಗಳಿಂದ ಅವನ ಸಾರಥಿಯನ್ನೂ ಹೊಡೆದನು.
07092037a ಸುವರ್ಣಪುಂಖಂ ವಿಶಿಖಂ ಸಮಾಧಾಯ ಸ ಸಾತ್ಯಕಿಃ।
07092037c ವ್ಯಸೃಜತ್ತಂ ಮಹಾಜ್ವಾಲಂ ಸಂಕ್ರುದ್ಧಮಿವ ಪನ್ನಗಂ।।
ಅನಂತರ ಸಾತ್ಯಕಿಯು ಚಿನ್ನದ ರೆಕ್ಕೆಗಳನ್ನು ಹೊಂದಿದ್ದ ಕೋಪಗೊಂಡ ಸರ್ಪದಂತಿದ್ದ ಮಹಾಜ್ವಾಲೆಯಿಂದ ಯುಕ್ತವಾಗಿದ್ದ ವಿಶಿಖವನ್ನು ಹೂಡಿ ಕೃತವರ್ಮನ ಮೇಲೆ ಪ್ರಯೋಗಿಸಿದನು.
07092038a ಸೋಽವಿಶತ್ ಕೃತವರ್ಮಾಣಂ ಯಮದಂಡೋಪಮಃ ಶರಃ।
07092038c ಜಾಂಬೂನದವಿಚಿತ್ರಂ ಚ ವರ್ಮ ನಿರ್ಭಿದ್ಯ ಭಾನುಮತ್।
07092038e ಅಭ್ಯಗಾದ್ಧರಣೀಮುಗ್ರೋ ರುಧಿರೇಣ ಸಮುಕ್ಷಿತಃ।।
ಯಮದಂಡ ಸದೃಶವಾಗಿದ್ದ ಅತ್ಯುಗ್ರವಾಗಿದ್ದ ಆ ಬಾಣವು ಸುವರ್ಣಮಯವೂ, ಚಿತ್ರಿತವೂ, ಪ್ರಕಾಶಮಾನವೂ ಆಗಿದ್ದ ಕೃತವರ್ಮನ ಕವಚವನ್ನು ಭೇದಿಸಿ, ಅವನ ಶರೀರವನ್ನು ಹೊಕ್ಕು, ರಕ್ತದಲ್ಲಿ ತೋಯ್ದು ಹೊರಬಂದು ಭೂಮಿಯ ಮೇಲೆ ಬಿದ್ದಿತು.
07092039a ಸಂಜಾತರುಧಿರಶ್ಚಾಜೌ ಸಾತ್ವತೇಷುಭಿರರ್ದಿತಃ।
07092039c ಪ್ರಚಲನ್ಧನುರುತ್ಸೃಜ್ಯ ನ್ಯಪತತ್ಸ್ಯಂದನೋತ್ತಮೇ।।
ಸಾತ್ವತನ ಬಾಣದಿಂದ ಗಾಯಗೊಂಡ ಕೃತವರ್ಮನ ದೇಹದಿಂದ ರಕ್ತವು ಧಾರಾಕಾರವಾಗಿ ಸುರಿಯತೊಡಗಿತು. ಶಕ್ತಿಗುಂದಿದ ಅವನ ಕೈಗಳಿಂದ ಧನುರ್ಬಾಣಗಳು ಜಾರಿದವು. ಅವನೂ ಕೂಡ ಉತ್ತಮ ರಥದಲ್ಲಿ ಕುಸಿದು ಬಿದ್ದನು.
07092040a ಸ ಸಿಂಹದಂಷ್ಟ್ರೋ ಜಾನುಭ್ಯಾಮಾಪನ್ನೋಽಮಿತವಿಕ್ರಮಃ।
07092040c ಶರಾರ್ದಿತಃ ಸಾತ್ಯಕಿನಾ ರಥೋಪಸ್ಥೇ ನರರ್ಷಭಃ।।
ಸಿಂಹದಂಥ ಹಲ್ಲುಗಳುಳ್ಳ28 ಅಮಿತವಿಕ್ರಮಿ ಸಾತ್ಯಕಿಯ ಬಾಣಗಳಿಂದ ಪೀಡಿತನಾದ ನರರ್ಷಭ ಕೃತವರ್ಮನು ಮಂಡಿಗಳನ್ನು ಊರಿದ್ದಂತೆಯೇ ಆಸನದಲ್ಲಿ ಪಕ್ಕಕ್ಕೆ ಬಿದ್ದನು.
07092041a ಸಹಸ್ರಬಾಹೋಃ ಸದೃಶಮಕ್ಷೋಭ್ಯಮಿವ ಸಾಗರಂ।
07092041c ನಿವಾರ್ಯ ಕೃತವರ್ಮಾಣಂ ಸಾತ್ಯಕಿಃ ಪ್ರಯಯೌ ತತಃ।।
ಸಹಸ್ರಬಾಹು ಕಾರ್ತವೀರ್ಯಾರ್ಜುನನಿಗೆ ಸಮಾನನಾಗಿದ್ದ, ಸಾಗರೋಪಾದಿಯಲ್ಲಿ ಕದಲಿಸಲು ಅಶಕ್ಯನಾಗಿದ್ದ ಕೃತವರ್ಮನನ್ನು ಪರಾಜಯಗೊಳಿಸಿ ಸಾತ್ಯಕಿಯು ಅಲ್ಲಿಂದ ಹೊರಟುಬಿಟ್ಟನು.
07092042a ಖಡ್ಗಶಕ್ತಿಧನುಃಕೀರ್ಣಾಂ ಗಜಾಶ್ವರಥಸಂಕುಲಾಂ।
07092042c ಪ್ರವರ್ತಿತೋಗ್ರರುಧಿರಾಂ ಶತಶಃ ಕ್ಷತ್ರಿಯರ್ಷಭೈಃ।।
07092043a ಪ್ರೇಕ್ಷತಾಂ ಸರ್ವಸೈನ್ಯಾನಾಂ ಮಧ್ಯೇನ ಶಿನಿಪುಂಗವಃ।
07092043c ಅಭ್ಯಗಾದ್ವಾಹಿನೀಂ ಭಿತ್ತ್ವಾ ವೃತ್ರಹೇವಾಸುರೀಂ ಚಮೂಂ।।
ಖಡ್ಗ-ಶಕ್ತಿ-ಧನುಸ್ಸುಗಳಿಂದ ತುಂಬಿಹೋಗಿದ್ದ, ಗಜ-ಅಶ್ವ-ರಥ ಸಂಕುಲಗಳಿಂದ ಕೂಡಿದ್ದ, ನೂರಾರು ಕ್ಷತ್ರಿಯರ್ಷಭರಿಂದ ಪ್ರವರ್ತಿತವಾದ, ಭಯಂಕರ ರಕ್ತದ ಕೋಡಿಯೇ ಹರಿದುಹೋಗುತ್ತಿದ್ದ ಆ ಸೇನೆಯ ಮಧ್ಯದಿಂದಲೇ ಎಲ್ಲರೂ ನೋಡುತ್ತಿದ್ದಂತೆಯೇ, ಇಂದ್ರನು ಅಸುರರ ಸೇನೆಯನ್ನು ಹೇಗೋ ಹಾಗೆ, ಶಿನಿಪುಂಗವನು ಹೊರಟುಹೋದನು.
07092044a ಸಮಾಶ್ವಾಸ್ಯ ಚ ಹಾರ್ದಿಕ್ಯೋ ಗೃಹ್ಯ ಚಾನ್ಯನ್ಮಹದ್ಧನುಃ।
07092044c ತಸ್ಥೌ ತತ್ರೈವ ಬಲವಾನ್ವಾರಯನ್ಯುಧಿ ಪಾಂಡವಾನ್।।
ಬಲವಾನ್ ಹಾರ್ದಿಕ್ಯನಾದರೋ ಚೇತರಿಸಿಕೊಂಡು ಮತ್ತೊಂದು ಮಹಾಧನುಸ್ಸನ್ನು ಕೈಗೆತ್ತಿಕೊಂಡು ಪಾಂಡವರು ಮುಂದೆ ಹೋಗದಂತೆ ತಡೆಯುತ್ತಾ ಅಲ್ಲಿಯೇ ನಿಂತನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ದುರ್ಯೋಧನಕೃತವರ್ಮಪರಾಜಯೇ ದ್ವಿನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶೇ ದುರ್ಯೋಧನಕೃತವರ್ಮಪರಾಜಯ ಎನ್ನುವ ತೊಂಭತ್ತೆರಡನೇ ಅಧ್ಯಾಯವು.