ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 90
ಸಾರ
ಕೃತವರ್ಮನ ಪರಾಕ್ರಮ (1-50).
07090001 ಸಂಜಯ ಉವಾಚ।
07090001a ಆತ್ಮಾಪರಾಧಾತ್ಸಂಭೂತಂ ವ್ಯಸನಂ ಭರತರ್ಷಭ।
07090001c ಪ್ರಾಪ್ಯ ಪ್ರಾಕೃತವದ್ವೀರ ನ ತ್ವಂ ಶೋಚಿತುಮರ್ಹಸಿ।।
ಸಂಜಯನು ಹೇಳಿದನು: “ತಾನೇ ಮಾಡಿದ ಅಪರಾಧದಿಂದ ಹುಟ್ಟಿದ ವ್ಯಸನವನ್ನು ಪಡೆದು ವೀರನಾದ ನೀನು ಸಾಮಾನ್ಯರಂತೆ ಶೋಕಿಸಕೂಡದು25.
07090002a ತವ ನಿರ್ಗುಣತಾಂ ಜ್ಞಾತ್ವಾ ಪಕ್ಷಪಾತಂ ಸುತೇಷು ಚ।
07090002c ದ್ವೈಧೀಭಾವಂ ತಥಾ ಧರ್ಮೇ ಪಾಂಡವೇಷು ಚ ಮತ್ಸರಂ।
07090002e ಆರ್ತಪ್ರಲಾಪಾಂಶ್ಚ ಬಹೂನ್ಮನುಜಾಧಿಪಸತ್ತಮ।।
07090003a ಸರ್ವಲೋಕಸ್ಯ ತತ್ತ್ವಜ್ಞಃ ಸರ್ವಲೋಕಗುರುಃ ಪ್ರಭುಃ।
07090003c ವಾಸುದೇವಸ್ತತೋ ಯುದ್ಧಂ ಕುರೂಣಾಮಕರೋನ್ಮಹತ್।।
ಮನುಜಾಧಿಪಸತ್ತಮ! ನಿನ್ನ ನಿರ್ಗುಣತೆಗಳನ್ನು26 ತಿಳಿದು, ಮಕ್ಕಳಲ್ಲಿ ಪಕ್ಷಪಾತಮಾಡುತ್ತಿರುವೆಯೆಂದು, ಧರ್ಮದ ಕುರಿತು ನಿನ್ನ ದ್ವಂದ್ವವಿದೆಯೆಂದು27, ಪಾಂಡವರಲ್ಲಿ ಅಸೂಯೆಯಿದೆಯೆಂದು, ಬಹಳ ಆರ್ತಪ್ರಲಾಪಮಾಡುತ್ತೀಯೆಂದು ಸರ್ವಲೋಕಗಳ ತತ್ತ್ವಜ್ಞ ಸರ್ವಲೋಕಗಳ ಗುರು ಪ್ರಭು ವಾಸುದೇವನು ಕುರುಗಳ ಈ ಮಹಾ ಯುದ್ಧವನ್ನು ರಚಿಸಿದ್ದಾನೆ.
07090004a ಆತ್ಮಾಪರಾಧಾತ್ಸುಮಹಾನ್ಪ್ರಾಪ್ತಸ್ತೇ ವಿಪುಲಃ ಕ್ಷಯಃ।
07090004c ನ ಹಿ ತೇ ಸುಕೃತಂ ಕಿಂ ಚಿದಾದೌ ಮಧ್ಯೇ ಚ ಭಾರತ।
07090004e ದೃಶ್ಯತೇ ಪೃಷ್ಠತಶ್ಚೈವ ತ್ವನ್ಮೂಲೋ ಹಿ ಪರಾಜಯಃ।।
ಭಾರತ! ನಿನ್ನದೇ ಮಹಾ ಅಪರಾಧದಿಂದ ಈ ವಿಪುಲ ಕ್ಷಯವು ನಡೆಯುತ್ತಿರುವುದು. ನೀನು ಆದಿಯುಲ್ಲಾಗಲೀ ಮಧ್ಯದಲ್ಲಿಯಾಗಲೀ ಒಂದಿಷ್ಟೂ ಒಳ್ಳೆಯ ಕೆಲಸವನ್ನು ಮಾಡಿರದೇ ಇರುವುದರಿಂದ ಅಂತ್ಯದಲ್ಲಿ ಇದನ್ನು ನೋಡುತ್ತಿದ್ದೀಯೆ. ಪರಾಜಯಕ್ಕೆ ನೀನೇ ಕಾರಣ.
07090005a ತಸ್ಮಾದದ್ಯ ಸ್ಥಿರೋ ಭೂತ್ವಾ ಜ್ಞಾತ್ವಾ ಲೋಕಸ್ಯ ನಿರ್ಣಯಂ।
07090005c ಶೃಣು ಯುದ್ಧಂ ಯಥಾ ವೃತ್ತಂ ಘೋರಂ ದೇವಾಸುರೋಪಮಂ।।
ಆದುದರಿಂದ ಇಂದು ಲೋಕದ ನಿರ್ಣಯವನ್ನು ಅರ್ಥಮಾಡಿಕೊಂಡು ಸ್ಥಿರನಾಗಿದ್ದುಕೊಂಡು ದೇವಾಸುರರ ಯುದ್ಧದಂತೆ ನಡೆಯುತ್ತಿರುವ ಘೋರ ಯುದ್ಧವು ನಡೆದಹಾಗೆ ಕೇಳು.
07090006a ಪ್ರವಿಷ್ಟೇ ತವ ಸೈನ್ಯಂ ತು ಶೈನೇಯೇ ಸತ್ಯವಿಕ್ರಮೇ।
07090006c ಭೀಮಸೇನಮುಖಾಃ ಪಾರ್ಥಾಃ ಪ್ರತೀಯುರ್ವಾಹಿನೀಂ ತವ।।
ಸತ್ಯವಿಕ್ರಮ ಶೈನೇಯನು ನಿನ್ನ ಸೇನೆಯನ್ನು ಪ್ರವೇಶಿಸಿದ ನಂತರ ಭೀಮಸೇನ ಪ್ರಮುಖರಾದ ಪಾರ್ಥರು ನಿನ್ನ ಸೇನೆಯನ್ನು ಆಕ್ರಮಣಿಸಿದರು.
07090007a ಆಗಚ್ಚತಸ್ತಾನ್ಸಹಸಾ ಕ್ರುದ್ಧರೂಪಾನ್ಸಹಾನುಗಾನ್।
07090007c ದಧಾರೈಕೋ ರಣೇ ಪಾಂಡೂನ್ಕೃತವರ್ಮಾ ಮಹಾರಥಃ।।
ಅನುಗರೊಂದಿಗೆ ಕ್ರುದ್ಧರಾಗಿ ಒಮ್ಮೆಲೇ ಎರಗಿದ ಪಾಂಡವರನ್ನು ರಣದಲ್ಲಿ ಮಹಾರಥ ಕೃತವರ್ಮನು ಒಬ್ಬನೇ ಎದುರಿಸಿದನು.
07090008a ಯಥೋದ್ವೃತ್ತಂ ಧಾರಯತೇ ವೇಲಾ ವೈ ಸಲಿಲಾರ್ಣವಂ।
07090008c ಪಾಂಡುಸೈನ್ಯಂ ತಥಾ ಸಂಖ್ಯೇ ಹಾರ್ದಿಕ್ಯಃ ಸಮವಾರಯತ್।।
ಉಕ್ಕಿಬರುವ ಸಾಗರದ ನೀರನ್ನು ದಡವು ತಡೆಹಿಡಿಯುವಂತೆ ಹಾರ್ದಿಕ್ಯನು ಪಾಂಡುಸೇನೆಯನ್ನು ರಣದಲ್ಲಿ ತಡೆಹಿಡಿದನು.
07090009a ತತ್ರಾದ್ಭುತಮಮನ್ಯಂತ ಹಾರ್ದಿಕ್ಯಸ್ಯ ಪರಾಕ್ರಮಂ।
07090009c ಯದೇನಂ ಸಹಿತಾಃ ಪಾರ್ಥಾ ನಾತಿಚಕ್ರಮುರಾಹವೇ।।
ಆಹವದಲ್ಲಿ ಪಾರ್ಥರು ಒಟ್ಟಿಗೇ ಅತಿಕ್ರಮಿಸಲಾಗದ ಹಾರ್ದಿಕ್ಯನ ಪರಾಕ್ರಮವನ್ನು ನಾವು ಅದ್ಭುತವೆಂದೇ ಪರಿಗಣಿಸಿದೆವು.
07090010a ತತೋ ಭೀಮಸ್ತ್ರಿಭಿರ್ವಿದ್ಧ್ವಾ ಕೃತವರ್ಮಾಣಮಾಯಸೈಃ।
07090010c ಶಂಖಂ ದಧ್ಮೌ ಮಹಾಬಾಹುರ್ಹರ್ಷಯನ್ಸರ್ವಪಾಂಡವಾನ್।।
ಆಗ ಮಹಾಬಾಹು ಭೀಮನು ಕೃತವರ್ಮನನ್ನು ಮೂರು ಆಯಸಗಳಿಂದ ಹೊಡೆದು ಪಾಂಡವರನ್ನು ಹರ್ಷಗೊಳಿಸುತ್ತಾ ಶಂಖವನ್ನು ಊದಿದನು.
07090011a ಸಹದೇವಸ್ತು ವಿಂಶತ್ಯಾ ಧರ್ಮರಾಜಶ್ಚ ಪಂಚಭಿಃ।
07090011c ಶತೇನ ನಕುಲಶ್ಚಾಪಿ ಹಾರ್ದಿಕ್ಯಂ ಸಮವಿಧ್ಯತ।।
ಸಹದೇವನು ಇಪ್ಪತ್ತರಿಂದ, ಧರ್ಮರಾಜನು ಐದರಿಂದ, ನಕುಲನು ನೂರರಿಂದ ಹಾರ್ದಿಕ್ಯನನ್ನು ಹೊಡೆದರು.
07090012a ದ್ರೌಪದೇಯಾಸ್ತ್ರಿಸಪ್ತತ್ಯಾ ಸಪ್ತಭಿಶ್ಚ ಘಟೋತ್ಕಚಃ।
07090012c ಧೃಷ್ಟದ್ಯುಮ್ನಸ್ತ್ರಿಭಿಶ್ಚಾಪಿ ಕೃತವರ್ಮಾಣಮಾರ್ದಯತ್।
07090012e ವಿರಾಟೋ ದ್ರುಪದಶ್ಚೈವ ಯಾಜ್ಞಸೇನಿಶ್ಚ ಪಂಚಭಿಃ।।
ದ್ರೌಪದೇಯರು ಎಪ್ಪತ್ಮೂರರಿಂದ, ಘಟೋತ್ಕಚನು ಎಪ್ಪತ್ತರಿಂದ ಮತ್ತು ಧೃಷ್ಟದ್ಯುಮ್ನನು ಮೂರರಿಂದ, ವಿರಾಟ ಮತ್ತು ಯಾಜ್ಞಸೇನಿ ದ್ರುಪದರು ಐದರಿಂದ ಕೃತವರ್ಮನನ್ನು ಹೊಡೆದರು.
07090013a ಶಿಖಂಡೀ ಚಾಪಿ ಹಾರ್ದಿಕ್ಯಂ ವಿದ್ಧ್ವಾ ಪಂಚಭಿರಾಶುಗೈಃ।
07090013c ಪುನರ್ವಿವ್ಯಾಧ ವಿಂಶತ್ಯಾ ಸಾಯಕಾನಾಂ ಹಸನ್ನಿವ।।
ಶಿಖಂಡಿಯೂ ಕೂಡ ಹಾರ್ದಿಕ್ಯನನ್ನು ಐದು ಆಶುಗಗಳಿಂದ ಹೊಡೆದು ಪುನಃ ನಗುತ್ತಾ ಅವನ ಮೇಲೆ ಇಪ್ಪತ್ತು ಸಾಯಕಗಳನ್ನು ಪ್ರಯೋಗಿಸಿದನು.
07090014a ಕೃತವರ್ಮಾ ತತೋ ರಾಜನ್ಸರ್ವತಸ್ತಾನ್ಮಹಾರಥಾನ್।
07090014c ಏಕೈಕಂ ಪಂಚಭಿರ್ವಿದ್ಧ್ವಾ ಭೀಮಂ ವಿವ್ಯಾಧ ಸಪ್ತಭಿಃ।
07090014e ಧನುರ್ಧ್ವಜಂ ಚ ಸಮ್ಯತ್ತೋ ರಥಾದ್ಭೂಮಾವಪಾತಯತ್।।
ರಾಜನ್! ಆಗ ಕೃತವರ್ಮನು ಸುತ್ತುವರೆದಿದ್ದ ಆ ಒಬ್ಬೊಬ್ಬ ಮಹಾರಥರನ್ನೂ ಐದೈದು ಬಾಣಗಳಿಂದ ಹೊಡೆದು ಭೀಮನನ್ನು ಏಳರಿಂದ ಹೊಡೆದನು. ಅವನ ಧ್ವಜವನ್ನೂ ಧನುಸ್ಸನ್ನೂ ರಥದಿಂದ ಭೂಮಿಗೆ ಬೀಳಿಸಿದನು.
07090015a ಅಥೈನಂ ಚಿನ್ನಧನ್ವಾನಂ ತ್ವರಮಾಣೋ ಮಹಾರಥಃ।
07090015c ಆಜಘಾನೋರಸಿ ಕ್ರುದ್ಧಃ ಸಪ್ತತ್ಯಾ ನಿಶಿತೈಃ ಶರೈಃ।।
ಆಗ ಮಹಾರಥ ಕೃತವರ್ಮನು ಕ್ರುದ್ಧನಾಗಿ ತ್ವರೆಮಾಡಿ ಧನುಸ್ಸನ್ನು ಕಳೆದುಕೊಂಡಿದ್ದ ಭೀಮಸೇನನ ಎದೆಗೆ ಎಪ್ಪತ್ತು ನಿಶಿತ ಬಾಣಗಳಿಂದ ಹೊಡೆದನು.
07090016a ಸ ಗಾಢವಿದ್ಧೋ ಬಲವಾನ್ ಹಾರ್ದಿಕ್ಯಸ್ಯ ಶರೋತ್ತಮೈಃ।
07090016c ಚಚಾಲ ರಥಮಧ್ಯಸ್ಥಃ ಕ್ಷಿತಿಕಂಪೇ ಯಥಾಚಲಃ।।
ಬಲವಾನ್ ಹಾರ್ದಿಕ್ಯನ ಉತ್ತಮ ಶರಗಳಿಂದ ಆಳವಾಗಿ ಗಾಯಗೊಂಡ ರಥದ ಮಧ್ಯದಲ್ಲಿದ್ದ ಭೀಮನು ಭೂಕಂಪದಲ್ಲಿ ಪರ್ವತದಂತೆ ನಡುಗಿದನು.
07090017a ಭೀಮಸೇನಂ ತಥಾ ದೃಷ್ಟ್ವಾ ಧರ್ಮರಾಜಪುರೋಗಮಾಃ।
07090017c ವಿಸೃಜಂತಃ ಶರಾನ್ಘೋರಾನ್ಕೃತವರ್ಮಾಣಮಾರ್ದಯನ್।।
ಭೀಮಸೇನನು ಹಾಗಾದುದನ್ನು ನೋಡಿ ಧರ್ಮರಾಜನೇ ಮೊದಲಾದವರು ಕೃತವರ್ಮನ ಮೇಲೆ ಘೋರ ಬಾಣಗಳನ್ನು ಪ್ರಯೋಗಿಸಿದರು.
07090018a ತಂ ತಥಾ ಕೋಷ್ಠಕೀಕೃತ್ಯ ರಥವಂಶೇನ ಮಾರಿಷ।
07090018c ವಿವ್ಯಧುಃ ಸಾಯಕೈರ್ಹೃಷ್ಟಾ ರಕ್ಷಾರ್ಥಂ ಮಾರುತೇರ್ಮೃಧೇ।।
ಮಾರಿಷ! ಅವರು ಮಾರುತಿಯನ್ನು ರಕ್ಷಿಸಲೋಸುಗ ಹೃಷ್ಟರಾಗಿ ಕೃತವರ್ಮನನ್ನು ರಥಸಮೂಹಗಳ ಮಧ್ಯೆ ಸೇರಿಸಿಕೊಂಡು ಸಾಯಕಗಳಿಂದ ಅವನನ್ನು ಹೊಡೆದರು.
07090019a ಪ್ರತಿಲಭ್ಯ ತತಃ ಸಂಜ್ಞಾಂ ಭೀಮಸೇನೋ ಮಹಾಬಲಃ।
07090019c ಶಕ್ತಿಂ ಜಗ್ರಾಹ ಸಮರೇ ಹೇಮದಂಡಾಮಯಸ್ಮಯೀಂ।
07090019e ಚಿಕ್ಷೇಪ ಚ ರಥಾತ್ತೂರ್ಣಂ ಕೃತವರ್ಮರಥಂ ಪ್ರತಿ।।
ಆಗ ಮಹಾಬಲ ಭೀಮಸೇನನು ಪುನಃ ಪ್ರಜ್ಞೆಯನ್ನು ಪಡೆದು ಸುವರ್ಣಮಯ ದಂಡದಿಂದ ಕೂಡಿದ ಲೋಹಮಹವಾಗಿದ್ದ ಶಕ್ತಿಯನ್ನು ಸಮರದಲ್ಲಿ ಕೈಗೆತ್ತಿಕೊಂಡು ಶೀಘ್ರವಾಗಿ ತನ್ನ ರಥದಿಂದ ಕೃತವರ್ಮನ ರಥದ ಕಡೆ ಎಸೆದನು.
07090020a ಸಾ ಭೀಮಭುಜನಿರ್ಮುಕ್ತಾ ನಿರ್ಮುಕ್ತೋರಗಸನ್ನಿಭಾ।
07090020c ಕೃತವರ್ಮಾಣಮಭಿತಃ ಪ್ರಜಜ್ವಾಲ ಸುದಾರುಣಾ।।
ಭೀಮನ ಭುಜದಿಂದ ಹೊರಟ ಪೊರೆಬಿಟ್ಟ ಸರ್ಪದಂತಿದ್ದ ಆ ಸುದಾರುಣ ಶಕ್ತ್ಯಾಯುಧವು ಪ್ರಜ್ವಲಿಸುತ್ತಾ ಕೃತವರ್ಮನ ಸಮೀಪಕ್ಕೆ ಬಂದಿತು.
07090021a ತಾಮಾಪತಂತೀಂ ಸಹಸಾ ಯುಗಾಂತಾಗ್ನಿಸಮಪ್ರಭಾಂ।
07090021c ದ್ವಾಭ್ಯಾಂ ಶರಾಭ್ಯಾಂ ಹಾರ್ದಿಕ್ಯೋ ನಿಚಕರ್ತ ದ್ವಿಧಾ ತದಾ।।
ತನ್ನ ಮೇಲೆ ರಭಸದಿಂದ ಬೀಳಲಿದ್ದ ಪ್ರಳಯಕಾಲದ ಅಗ್ನಿಯ ಪ್ರಭೆಗೆ ಸಮನಾಗಿದ್ದ ಆ ಶಕ್ತಿಯನ್ನು ಹಾರ್ದಿಕ್ಯನು ಎರಡು ಬಾಣಗಳಿಂದ ಎರಡಾಗಿ ಕತ್ತರಿಸಿದನು.
07090022a ಸಾ ಚಿನ್ನಾ ಪತಿತಾ ಭೂಮೌ ಶಕ್ತಿಃ ಕನಕಭೂಷಣಾ।
07090022c ದ್ಯೋತಯಂತೀ ದಿಶೋ ರಾಜನ್ಮಹೋಲ್ಕೇವ ದಿವಶ್ಚ್ಯುತಾ।
07090022e ಶಕ್ತಿಂ ವಿನಿಹತಾಂ ದೃಷ್ಟ್ವಾ ಭೀಮಶ್ಚುಕ್ರೋಧ ವೈ ಭೃಶಂ।।
ರಾಜನ್! ಕತ್ತರಿಸಲ್ಪಟ್ಟ ಆ ಕನಕಭೂಷಣ ಶಕ್ತಿಯು ದಿವದಿಂದ ಚ್ಯುತಗೊಂಡ ಮಹಾ ಉಲ್ಕೆಯಂತೆ ದಿಕ್ಕುಗಳನ್ನು ಬೆಳಗಿಸುತ್ತಾ ಭೂಮಿಯ ಮೇಲೆ ಬಿದ್ದಿತು. ಶಕ್ತಿಯು ವಿನಾಶವಾದುದನ್ನು ಕಂಡು ಭೀಮನು ತುಂಬಾ ಕುಪಿತನಾದನು.
07090023a ತತೋಽನ್ಯದ್ಧನುರಾದಾಯ ವೇಗವತ್ಸುಮಹಾಸ್ವನಂ।
07090023c ಭೀಮಸೇನೋ ರಣೇ ಕ್ರುದ್ಧೋ ಹಾರ್ದಿಕ್ಯಂ ಸಮವಾರಯತ್।।
ಆಗ ರಣದಲ್ಲಿ ಕ್ರುದ್ಧನಾದ ಭೀಮಸೇನನು ಮಹಾಶಬ್ಧವುಳ್ಳ ವೇಗವತ್ತಾದ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಹಾರ್ದಿಕ್ಯನನ್ನು ಹೊಡೆದನು.
07090024a ಅಥೈನಂ ಪಂಚಭಿರ್ಬಾಣೈರಾಜಘಾನ ಸ್ತನಾಂತರೇ।
07090024c ಭೀಮೋ ಭೀಮಬಲೋ ರಾಜಂಸ್ತವ ದುರ್ಮಂತ್ರಿತೇನ ಹ।।
ರಾಜನ್! ನಿನ್ನ ದುರ್ಮಂತ್ರದಿಂದಾಗಿ ಅತಿ ಬಲಶಾಲಿಯಾಗಿರುವ ಭೀಮನು ಐದು ಬಾಣಗಳಿಂದ ಅವನ ವಕ್ಷಸ್ಥಳಕ್ಕೆ ಹೊಡೆದನು.
07090025a ಭೋಜಸ್ತು ಕ್ಷತಸರ್ವಾಂಗೋ ಭೀಮಸೇನೇನ ಮಾರಿಷ।
07090025c ರಕ್ತಾಶೋಕ ಇವೋತ್ಫುಲ್ಲೋ ವ್ಯಭ್ರಾಜತ ರಣಾಜಿರೇ।।
ಮಾರಿಷ! ಭೋಜನಾದರೋ ಭೀಮಸೇನನಿಂದ ಸರ್ವಾಂಗಗಳಲ್ಲಿಯೂ ಗಾಯಗೊಂಡು ಕೆಂಪು ಹೂಬಿಟ್ಟ ಅಶೋಕವೃಕ್ಷದಂತೆ ರಣಾಜಿರದಲ್ಲಿ ಪ್ರಕಾಶಿಸಿದನು.
07090026a ತತಃ ಕ್ರುದ್ಧಸ್ತ್ರಿಭಿರ್ಬಾಣೈರ್ಭೀಮಸೇನಂ ಹಸನ್ನಿವ।
07090026c ಅಭಿಹತ್ಯ ದೃಢಂ ಯುದ್ಧೇ ತಾನ್ಸರ್ವಾನ್ಪ್ರತ್ಯವಿಧ್ಯತ।।
07090027a ತ್ರಿಭಿಸ್ತ್ರಿಭಿರ್ಮಹೇಷ್ವಾಸೋ ಯತಮಾನಾನ್ಮಹಾರಥಾನ್।
07090027c ತೇಽಪಿ ತಂ ಪ್ರತ್ಯವಿಧ್ಯಂತ ಸಪ್ತಭಿಃ ಸಪ್ತಭಿಃ ಶರೈಃ।।
ಆಗ ಕ್ರುದ್ಧನಾದ ಕೃತವರ್ಮನು ನಗುತ್ತಿರುವನೋ ಎಂಬಂತೆ ಭೀಮಸೇನನನ್ನು ದೃಢವಾಗಿ ಪ್ರಹರಿಸಿದನು. ಹಾಗೆಯೇ ತನ್ನೊಡನೆ ಪ್ರಯತ್ನಪಟ್ಟು ಯುದ್ಧಮಾಡುತ್ತಿದ್ದ ಆ ಎಲ್ಲ ಮಹಾರಥರನ್ನು ಮೂರು ಮೂರು ಬಾಣಗಳಿಂದ ಹೊಡೆದನು. ಅವರೂ ಕೂಡ ತಿರುಗಿ ಅವನನ್ನು ಏಳೇಳು ಬಾಣಗಳಿಂದ ಹೊಡೆದರು.
07090028a ಶಿಖಂಡಿನಸ್ತತಃ ಕ್ರುದ್ಧಃ ಕ್ಷುರಪ್ರೇಣ ಮಹಾರಥಃ।
07090028c ಧನುಶ್ಚಿಚ್ಚೇದ ಸಮರೇ ಪ್ರಹಸನ್ನಿವ ಭಾರತ।।
ಭಾರತ! ಅನಂತರ ಆ ಮಹಾರಥನು ಕ್ರುದ್ಧನಾಗಿ ನಗುತ್ತಾ ಕ್ಷುರಪ್ರದಿಂದ ಶಿಖಂಡಿಯ ಧನುಸ್ಸನ್ನು ತುಂಡರಿಸಿದನು.
07090029a ಶಿಖಂಡೀ ತು ತತಃ ಕ್ರುದ್ಧಶ್ಚಿನ್ನೇ ಧನುಷಿ ಸತ್ವರಂ।
07090029c ಅಸಿಂ ಜಗ್ರಾಹ ಸಮರೇ ಶತಚಂದ್ರಂ ಚ ಭಾಸ್ವರಂ।।
ಭಾರವುಳ್ಳ ಧನುಸ್ಸು ತುಂಡಾಗಲು ಕ್ರುದ್ಧನಾದ ಶಿಖಂಡಿಯು ಸಮರದಲ್ಲಿ ನೂರುಚಂದ್ರಗಳಂತೆ ಹೊಳೆಯುತ್ತಿದ್ದ ಖಡ್ಗವನ್ನು ಕೈಯಲ್ಲಿ ತೆಗೆದುಕೊಂಡನು.
07090030a ಭ್ರಾಮಯಿತ್ವಾ ಮಹಾಚರ್ಮ ಚಾಮೀಕರವಿಭೂಷಿತಂ।
07090030c ತಮಸಿಂ ಪ್ರೇಷಯಾಮಾಸ ಕೃತವರ್ಮರಥಂ ಪ್ರತಿ।।
ಸುವರ್ಣಭೂಷಿತ ವಿಶಾಲ ಗುರಾಣಿಯನ್ನು ತಿರುಗಿಸುತ್ತಾ ಕತ್ತಿಯನ್ನು ಕೃತವರ್ಮನ ರಥದ ಕಡೆ ಎಸೆದನು.
07090031a ಸ ತಸ್ಯ ಸಶರಂ ಚಾಪಂ ಚಿತ್ತ್ವಾ ಸಂಖ್ಯೇ ಮಹಾನಸಿಃ।
07090031c ಅಭ್ಯಗಾದ್ಧರಣೀಂ ರಾಜಂಶ್ಚ್ಯುತಂ ಜ್ಯೋತಿರಿವಾಂಬರಾತ್।।
ರಾಜನ್! ಆ ಮಹಾಖಡ್ಗವು ಶರದೊಂದಿಗೆ ಅವನ ಧನುಸ್ಸನ್ನು ತುಂಡರಿಸಿ ಅಂಬರದಿಂದ ಬಿದ್ದ ನಕ್ಷತ್ರದೋಪಾದಿಯಲ್ಲಿ ಭೂಮಿಯ ಮೇಲೆ ಬಿದ್ದಿತು.
07090032a ಏತಸ್ಮಿನ್ನೇವ ಕಾಲೇ ತು ತ್ವರಮಾಣಾ ಮಹಾರಥಾಃ।
07090032c ವಿವ್ಯಧುಃ ಸಾಯಕೈರ್ಗಾಢಂ ಕೃತವರ್ಮಾಣಮಾಹವೇ।।
ಇದೇ ಸಮಯದಲ್ಲಿ ಮಹಾರಥರು ಆಹವದಲ್ಲಿ ತ್ವರೆಮಾಡಿ ಕೃತವರ್ಮನನ್ನು ಸಾಯಕಗಳಿಂದ ಗಾಢವಾಗಿ ಹೊಡೆದರು.
07090033a ಅಥಾನ್ಯದ್ಧನುರಾದಾಯ ತ್ಯಕ್ತ್ವಾ ತಚ್ಚ ಮಹದ್ಧನುಃ।
07090033c ವಿಶೀರ್ಣಂ ಭರತಶ್ರೇಷ್ಠ ಹಾರ್ದಿಕ್ಯಃ ಪರವೀರಹಾ।।
07090034a ವಿವ್ಯಾಧ ಪಾಂಡವಾನ್ಯುದ್ಧೇ ತ್ರಿಭಿಸ್ತ್ರಿಭಿರಜಿಹ್ಮಗೈಃ।
07090034c ಶಿಖಂಡಿನಂ ಚ ವಿವ್ಯಾಧ ತ್ರಿಭಿಃ ಪಂಚಭಿರೇವ ಚ।।
ಭರತಶ್ರೇಷ್ಠ! ಪರವೀರಹ ಹಾರ್ದಿಕ್ಯನು ತುಂಡಾದ ಧನುಸ್ಸನ್ನು ತೊರೆದು ಇನ್ನೊಂದು ಮಹಾ ಧನುಸ್ಸನ್ನು ತೆಗೆದುಕೊಂಡು ಯುದ್ಧದಲ್ಲಿ ಪಾಂಡವರನ್ನು ಮೂರು ಮೂರು ಜಿಹ್ಮಗಗಳಿಂದ ಹೊಡೆದನು. ಶಿಖಂಡಿಯನ್ನು ಮೂರು ಮತ್ತು ಐದು ಬಾಣಗಳಿಂದ ಹೊಡೆದನು.
07090035a ಧನುರನ್ಯತ್ಸಮಾದಾಯ ಶಿಖಂಡೀ ತು ಮಹಾಯಶಾಃ।
07090035c ಅವಾರಯತ್ಕೂರ್ಮನಖೈರಾಶುಗೈರ್ಹೃದಿಕಾತ್ಮಜಂ।।
ಮಹಾಯಶಸ್ವೀ ಶಿಖಂಡಿಯಾದರೋ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಆಮೆಯ ಉಗುರಿನಂತೆ ಮೊನಚಾದ ಆಶುಗಗಳಿಂದ ಹಾರ್ದಿಕಾತ್ಮಜನನ್ನು ಹೊಡೆದನು.
07090036a ತತಃ ಕ್ರುದ್ಧೋ ರಣೇ ರಾಜನ್ ಹೃದಿಕಸ್ಯಾತ್ಮಸಂಭವಃ।
07090036c ಅಭಿದುದ್ರಾವ ವೇಗೇನ ಯಾಜ್ಞಸೇನಿಂ ಮಹಾರಥಂ।।
07090037a ಭೀಷ್ಮಸ್ಯ ಸಮರೇ ರಾಜನ್ಮೃತ್ಯೋರ್ಹೇತುಂ ಮಹಾತ್ಮನಃ।
07090037c ವಿದರ್ಶಯನ್ಬಲಂ ಶೂರಃ ಶಾರ್ದೂಲ ಇವ ಕುಂಜರಂ।।
ರಾಜನ್! ಆಗ ಹೃದಿಕನ ಆತ್ಮಸಂಭವ ಶೂರನು ರಣದಲ್ಲಿ ಕ್ರುದ್ಧನಾಗಿ ವೇಗದಿಂದ ಆನೆಯನ್ನು ಆಕ್ರಮಣಿಸುವ ಸಿಂಹದಂತೆ ಸಮರದಲ್ಲಿ ಮಹಾತ್ಮ ಭೀಷ್ಮನ ಮೃತ್ಯುವಿಗೆ ಕಾರಣನಾದ ಮಹಾರಥ ಯಾಜ್ಞಸೇನಿಯನ್ನು ಆಕ್ರಮಣಿಸಿದನು.
07090038a ತೌ ದಿಶಾಗಜಸಂಕಾಶೌ ಜ್ವಲಿತಾವಿವ ಪಾವಕೌ।
07090038c ಸಮಾಸೇದತುರನ್ಯೋನ್ಯಂ ಶರಸಂಘೈರರಿಂದಮೌ।।
ದಿಗ್ಗಜಗಳಂತಿದ್ದ, ಅಗ್ನಿಗಳಂತೆ ಪ್ರಜ್ವಲಿಸುತ್ತಿದ್ದ ಆ ಇಬ್ಬರು ಅರಿಂದಮರೂ ಅನ್ಯೋನ್ಯರನ್ನು ಶರಸಂಘಗಳಿಂದ ಸಂಘರ್ಷಿಸಿದರು.
07090039a ವಿಧುನ್ವಾನೌ ಧನುಃಶ್ರೇಷ್ಠೇ ಸಂದಧಾನೌ ಚ ಸಾಯಕಾನ್।
07090039c ವಿಸೃಜಂತೌ ಚ ಶತಶೋ ಗಭಸ್ತೀನಿವ ಭಾಸ್ಕರೌ।।
ತಮ್ಮ ತಮ್ಮ ಶ್ರೇಷ್ಠ ಧನುಸ್ಸುಗಳನ್ನು ಟೇಂಕರಿಸುತ್ತಾ ಸಾಯಕಗಳನ್ನು ಹೂಡುತ್ತಾ ಇಬ್ಬರು ಸೂರ್ಯರು ತಮ್ಮ ತಮ್ಮ ಕಿರಣಗಳನ್ನು ಪಸರಿಸುವಂತೆ ನೂರಾರು ಬಾಣಗಳನ್ನು ಪರಸ್ಪರರ ಮೇಲೆ ಸುರಿಸಿದರು.
07090040a ತಾಪಯಂತೌ ಶರೈಸ್ತೀಕ್ಷ್ಣೈರನ್ಯೋನ್ಯಂ ತೌ ಮಹಾರಥೌ।
07090040c ಯುಗಾಂತಪ್ರತಿಮೌ ವೀರೌ ರೇಜತುರ್ಭಾಸ್ಕರಾವಿವ।।
ಆ ಇಬ್ಬರು ಅಪ್ರತಿಮ ವೀರ ಮಹಾರಥರು ತೀಕ್ಷ್ಣ ಶರಗಳಿಂದ ಅನ್ಯೋನ್ಯರನ್ನು ಸಂತಾಪಗೊಳಿಸುತ್ತಾ ಪ್ರಳಯಕಾಲದ ಭಾಸ್ಕರರಂತೆ ಪ್ರಕಾಶಿಸಿದರು.
07090041a ಕೃತವರ್ಮಾ ತು ರಭಸಂ ಯಾಜ್ಞಸೇನಿಂ ಮಹಾರಥಂ।
07090041c ವಿದ್ಧ್ವೇಷೂಣಾಂ ತ್ರಿಸಪ್ತತ್ಯಾ ಪುನರ್ವಿವ್ಯಾಧ ಸಪ್ತಭಿಃ।।
ಕೃತವರ್ಮನಾದರೋ ಮಹಾರಥ ಯಾಜ್ಞಸೇನಿಯನ್ನು ರಭಸದಿಂದ ಎಪ್ಪತ್ಮೂರು ಬಾಣಗಳಿಂದ ಹೊಡೆದು ಪುನಃ ಏಳು ಬಾಣಗಳಿಂದ ಹೊಡೆದನು.
07090042a ಸ ಗಾಢವಿದ್ಧೋ ವ್ಯಥಿತೋ ರಥೋಪಸ್ಥ ಉಪಾವಿಶತ್।
07090042c ವಿಸೃಜನ್ಸಶರಂ ಚಾಪಂ ಮೂರ್ಚಯಾಭಿಪರಿಪ್ಲುತಃ।।
ಅದರಿಂದ ವಿಪರೀತವಾಗಿ ಗಾಯಗೊಂಡ ಶಿಖಂಡಿಯು ವ್ಯಥಿತನಾಗಿ ರಥದಲ್ಲಿ ಆಸನದ ಪಕ್ಕಕ್ಕೆ ಜರುಗಿ ಕುಳಿತನು. ಧನುರ್ಬಾಣಗಳನ್ನು ಬಿಟ್ಟು ಮೂರ್ಛಿತನಾದನು.
07090043a ತಂ ವಿಷಣ್ಣಂ ರಥೇ ದೃಷ್ಟ್ವಾ ತಾವಕಾ ಭರತರ್ಷಭ।
07090043c ಹಾರ್ದಿಕ್ಯಂ ಪೂಜಯಾಮಾಸುರ್ವಾಸಾಂಸ್ಯಾದುಧುವುಶ್ಚ ಹ।।
ಭರತರ್ಷಭ! ರಥದಲ್ಲಿ ವಿಷಣ್ಣನಾಗಿದ್ದ ಶಿಖಂಡಿಯನ್ನು ನೋಡಿ ನಿನ್ನವರು ಹಾರ್ದಿಕ್ಯನನ್ನು ಗೌರವಿಸಿ ಅಂಗವಸ್ತ್ರಗಳನ್ನು ಮೇಲಕ್ಕೆ ಹಾರಿಸಿದರು.
07090044a ಶಿಖಂಡಿನಂ ತಥಾ ಜ್ಞಾತ್ವಾ ಹಾರ್ದಿಕ್ಯಶರಪೀಡಿತಂ।
07090044c ಅಪೋವಾಹ ರಣಾದ್ಯಂತಾ ತ್ವರಮಾಣೋ ಮಹಾರಥಂ।।
ಶಿಖಂಡಿಯು ಹಾರ್ದಿಕ್ಯನ ಶರಗಳಿಂದ ಹಾಗೆ ಪೀಡಿತನಾದುದನ್ನು ಕಂಡು ಅವನ ಸಾರಥಿಯು ಆ ಮಹಾರಥನನ್ನು ತ್ವರೆಮಾಡಿ ರಣದಿಂದ ದೂರಕ್ಕೆ ಕೊಂಡೊಯ್ದನು.
07090045a ಸಾದಿತಂ ತು ರಥೋಪಸ್ಥೇ ದೃಷ್ಟ್ವಾ ಪಾರ್ಥಾಃ ಶಿಖಂಡಿನಂ।
07090045c ಪರಿವವ್ರೂ ರಥೈಸ್ತೂರ್ಣಂ ಕೃತವರ್ಮಾಣಮಾಹವೇ।।
ರಥದಲ್ಲಿ ಒರಗಿದ್ದ ಶಿಖಂಡಿಯನ್ನು ನೋಡಿದ ಪಾರ್ಥರು ತಕ್ಷಣವೇ ಆಹವದಲ್ಲಿ ರಥಗಳಿಂದ ಕೃತವರ್ಮನನ್ನು ಸುತ್ತುವರೆದರು.
07090046a ತತ್ರಾದ್ಭುತಂ ಪರಂ ಚಕ್ರೇ ಕೃತವರ್ಮಾ ಮಹಾರಥಃ।
07090046c ಯದೇಕಃ ಸಮರೇ ಪಾರ್ಥಾನ್ವಾರಯಾಮಾಸ ಸಾನುಗಾನ್।।
ಅಲ್ಲಿ ಮಹಾರಥ ಕೃತವರ್ಮನು ಸಮರದಲ್ಲಿ ಒಬ್ಬನೇ ಅನುಯಾಯಿಗಳೊಡನಿದ್ದ ಪಾರ್ಥರನ್ನು ತಡೆದು ಪರಮ ಅದ್ಭುತ ಕೃತ್ಯವನ್ನೆಸಗಿದನು.
07090047a ಪಾರ್ಥಾನ್ಜಿತ್ವಾಜಯಚ್ಚೇದೀನ್ಪಾಂಚಾಲಾನ್ಸೃಂಜಯಾನಪಿ।
07090047c ಕೇಕಯಾಂಶ್ಚ ಮಹಾವೀರ್ಯಾನ್ಕೃತವರ್ಮಾ ಮಹಾರಥಃ।।
ಮಹಾರಥ ಕೃತವರ್ಮನು ಚೇದಿ-ಪಾಂಚಾಲ-ಸೃಂಜಯ-ಕೇಕಯ ಮಹಾವೀರ್ಯರನ್ನು ಸೋಲಿಸಿ ಪಾರ್ಥರನ್ನೂ ಗೆದ್ದನು.
07090048a ತೇ ವಧ್ಯಮಾನಾಃ ಸಮರೇ ಹಾರ್ದಿಕ್ಯೇನ ಸ್ಮ ಪಾಂಡವಾಃ।
07090048c ಇತಶ್ಚೇತಶ್ಚ ಧಾವಂತೋ ನೈವ ಚಕ್ರುರ್ಧೃತಿಂ ರಣೇ।।
ಸಮರದಲ್ಲಿ ಹಾರ್ದಿಕ್ಯನಿಂದ ವಧಿಸಲ್ಪಡುತ್ತಿದ್ದ ಪಾಂಡವ ಯೋಧರು ರಣಾಂಗಣದಲ್ಲಿ ನಿಲ್ಲುವ ಮನಸ್ಸು ಮಾಡದೇ ಇಲ್ಲಿಂದಲ್ಲಿಗೆ ಓಡುತ್ತಿದ್ದರು.
07090049a ಜಿತ್ವಾ ಪಾಂಡುಸುತಾನ್ಯುದ್ಧೇ ಭೀಮಸೇನಪುರೋಗಮಾನ್।
07090049c ಹಾರ್ದಿಕ್ಯಃ ಸಮರೇಽತಿಷ್ಠದ್ವಿಧೂಮ ಇವ ಪಾವಕಃ।।
ಭೀಮಸೇನನ ನಾಯಕತ್ವದಲ್ಲಿದ್ದ ಪಾಂಡುಸುತರನ್ನು ಯುದ್ಧದಲ್ಲಿ ಗೆದ್ದು ಹಾರ್ದಿಕ್ಯನು ರಣದಲ್ಲಿ ಹೊಗೆಯಿಲ್ಲದ ಬೆಂಕಿಯಂತೆ ಪ್ರಕಾಶಿಸಿದನು.
07090050a ತೇ ದ್ರಾವ್ಯಮಾಣಾಃ ಸಮರೇ ಹಾರ್ದಿಕ್ಯೇನ ಮಹಾರಥಾಃ।
07090050c ವಿಮುಖಾಃ ಸಮಪದ್ಯಂತ ಶರವೃಷ್ಟಿಭಿರರ್ದಿತಾಃ।।
ಸಮರದಲ್ಲಿ ಹಾರ್ದಿಕ್ಯನಿಂದ ಪಲಾಯನಗೊಳಿಸಲ್ಪಟ್ಟ ಆ ಮಹಾರಥರು ಅವನ ಶರವೃಷ್ಟಿಯಿಂದ ಪೀಡಿತರಾಗಿ ವಿಮುಖರಾದರು."
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ಕೃತವರ್ಮಪರಾಕ್ರಮೇ ನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶೇ ಕೃತವರ್ಮಪರಾಕ್ರಮ ಎನ್ನುವ ತೊಂಭತ್ತನೇ ಅಧ್ಯಾಯವು.