ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 89
ಸಾರ
ತನ್ನ ಶ್ರೇಷ್ಠ ಸೇನೆಯನ್ನು ಒಂದೇ ರಥದಲ್ಲಿ ಅರ್ಜುನ-ಸಾತ್ಯಕಿಯರು ಭೇದಿಸಿ ಹೋದರೆಂದು ಕೇಳಿದ ಧೃತರಾಷ್ಟ್ರನ ವಿಷಾದ; ಸಂಜಯನನ್ನು ಮುಂದೇನಾಯಿತೆಂದು ಪ್ರಶ್ನಿಸಿದುದು (1-43).
07089001 ಧೃತರಾಷ್ಟ್ರ ಉವಾಚ।
07089001a ಏವಂ ಬಹುವಿಧಂ ಸೈನ್ಯಮೇವಂ ಪ್ರವಿಚಿತಂ ವರಂ।
07089001c ವ್ಯೂಢಮೇವಂ ಯಥಾನ್ಯಾಯಮೇವಂ ಬಹು ಚ ಸಂಜಯ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ನಮ್ಮ ಸೇನೆಯು ಬಹುವಿಧದ ಶ್ರೇಷ್ಠತೆಗಳನ್ನು ಪಡೆದಿದೆ; ಯಥಾನ್ಯಾಹವಾಗಿ ವ್ಯೂಹರಚನೆಯಾಗಿದೆ. ದೊಡ್ಡದಾಗಿಯೂ ಇದೆ.
07089002a ನಿತ್ಯಂ ಪೂಜಿತಮಸ್ಮಾಭಿರಭಿಕಾಮಂ ಚ ನಃ ಸದಾ।
07089002c ಪ್ರೌಢಮತ್ಯದ್ಭುತಾಕಾರಂ ಪುರಸ್ತಾದ್ದೃಢವಿಕ್ರಮಂ।।
ನಮ್ಮಿಂದ ನಿತ್ಯವೂ ಅದು ಗೌರವಿಸಲ್ಪಟ್ಟಿದೆ. ಅದೂ ಕೂಡ ಸದಾ ನಮ್ಮನ್ನು ಇಷ್ಟಪಡುತ್ತದೆ. ಅದು ಪ್ರೌಢವಾಗಿದೆ. ಅದ್ಭುತ ಆಕಾರದಲ್ಲಿದೆ. ಮೊದಲಿನಿಂದಲೂ ದೃಢವಿಕ್ರಮವಾಗಿದೆ.
07089003a ನಾತಿವೃದ್ಧಮಬಾಲಂ ಚ ನ ಕೃಶಂ ನಾತಿಪೀವರಂ।
07089003c ಲಘುವೃತ್ತಾಯತಪ್ರಾಣಂ ಸಾರಗಾತ್ರಮನಾಮಯಂ।।
ಸೈನಿಕರು ಅತಿ ವೃದ್ಧರೂ ಅಲ್ಲ. ಅತಿ ಬಾಲಕರೂ ಅಲ್ಲ. ಅತಿ ಕೃಶರೂ ಅಲ್ಲ. ಅತಿಯಾಗಿ ದಪ್ಪನಾಗಿರುವವರೂ ಅಲ್ಲ. ಹಗುರಾಗಿದ್ದಾರೆ. ಗಟ್ಟಿ ಮುಟ್ಟಾಗಿದ್ದಾರೆ. ಆರೋಗ್ಯವಂತರಾಗಿದ್ದಾರೆ.
07089004a ಆತ್ತಸನ್ನಾಹಸಂಪನ್ನಂ ಬಹುಶಸ್ತ್ರಪರಿಚ್ಚದಂ।
07089004c ಶಸ್ತ್ರಗ್ರಹಣವಿದ್ಯಾಸು ಬಹ್ವೀಷು ಪರಿನಿಷ್ಠಿತಂ।।
ಅವರು ಉತ್ತಮ ಕವಚ ಶಿರಸ್ತ್ರಾಣಗಳನ್ನು ಧರಿಸಿದ್ದಾರೆ. ಅನೇಕ ಶಸ್ತ್ರಗಳಿಂದ ಸುಸಜ್ಜಿತರಾಗಿದ್ದಾರೆ. ಅವರು ಶಸ್ತ್ರಗಳನ್ನು ಹಿಡಿಯುವುದರಲ್ಲಿ ಮತ್ತು ಪ್ರಯೋಗಿಸುವುದರಲ್ಲಿ ಪರಿಣಿತರು.
07089005a ಆರೋಹೇ ಪರ್ಯವಸ್ಕಂದೇ ಸರಣೇ ಸಾಂತರಪ್ಲುತೇ।
07089005c ಸಂಯಕ್ಪ್ರಹರಣೇ ಯಾನೇ ವ್ಯಪಯಾನೇ ಚ ಕೋವಿದಂ।।
ಅವರು ಆನೆಗಳ ಬೆನ್ನಮೇಲೆ ಏರುವುದರಲ್ಲಿ, ಕೆಳಗೆ ಹಾರುವುದರಲ್ಲಿ, ಹಿಂದೆ ಹೋಗುವುದರಲ್ಲಿ, ಮತ್ತು ಮುಂದೆ ಹೋಗುವುದರಲ್ಲಿ ಕೋವಿದರು.
07089006a ನಾಗೇಷ್ವಶ್ವೇಷು ಬಹುಶೋ ರಥೇಷು ಚ ಪರೀಕ್ಷಿತಂ।
07089006c ಪರೀಕ್ಷ್ಯ ಚ ಯಥಾನ್ಯಾಯಂ ವೇತನೇನೋಪಪಾದಿತಂ।।
ಅನೇಕ ಬಾರಿ ಅವರನ್ನು ಆನೆಗಳೊಂದಿಗೆ, ಕುದುರೆಗಳೊಂದಿಗೆ ಮುತ್ತು ರಥಗಳೊಂದಿಗೆ ಪರೀಕ್ಷಿಸಲಾಗಿದೆ. ಪರೀಕ್ಷಿಸಿಯೇ ಅವರಿಗೆ ಯಥಾನ್ಯಾಯವಾದ ವೇತನವನ್ನು ನೀಡಲಾಗುತ್ತಿದೆ.
07089007a ನ ಗೋಷ್ಠ್ಯಾ ನೋಪಚಾರೇಣ ನ ಸಂಬಂಧನಿಮಿತ್ತತಃ।
07089007c ನಾನಾಹೂತೋ ನ ಹ್ಯಭೃತೋ ಮಮ ಸೈನ್ಯೇ ಬಭೂವ ಹ।।
ನನ್ನ ಸೇನೆಯಲ್ಲಿರುವವರು ಕುಲದಿಂದ ಆಯ್ಕೆಗೊಂಡಿಲ್ಲ; ಯಾರ ಹೇಳಿಕೆಯಿಂದಲೂ ಬಂದಿಲ್ಲ; ಅಥವಾ ಸಂಬಂಧಿಕರೆಂದು ಬಂದಿಲ್ಲ. ಅವರನ್ನು ಬಲಾತ್ಕಾರಾಗಿ ವೇತನವಿಲ್ಲದೇ ಸೇನೆಗೆ ಸೇರಿಸಿಲ್ಲ.
07089008a ಕುಲೀನಾರ್ಯಜನೋಪೇತಂ ತುಷ್ಟಪುಷ್ಟಮನುದ್ಧತಂ।
07089008c ಕೃತಮಾನೋಪಕಾರಂ ಚ ಯಶಸ್ವಿ ಚ ಮನಸ್ವಿ ಚ।।
ನನ್ನ ಸೇನೆಯಲ್ಲಿರುವವರು ಕುಲೀನರು. ಆರ್ಯಜನರು. ತುಷ್ಟಪುಷ್ಟರು. ಉಪಕಾರವನ್ನು ಮಾಡುವವರು. ಯಶಸ್ವಿಗಳು. ಮನಸ್ವಿಗಳು ಕೂಡ.
07089009a ಸಚಿವೈಶ್ಚಾಪರೈರ್ಮುಖ್ಯೈರ್ಬಹುಭಿರ್ಮುಖ್ಯಕರ್ಮಭಿಃ।
07089009c ಲೋಕಪಾಲೋಪಮೈಸ್ತಾತ ಪಾಲಿತಂ ನರಸತ್ತಮೈಃ।।
ಅಯ್ಯಾ! ಅವರು ಸಚಿವರು ಮತ್ತು ಅನೇಕ ಇತರ ಮುಖ್ಯರಿಂದ, ಮತ್ತು ಲೋಕಪಾಲಕರಂತಿರುವ ಮುಖ್ಯ ಕರ್ಮಚಾರಿಗಳಿಂದ ಪಾಲಿತರಾಗಿದ್ದಾರೆ.
07089010a ಬಹುಭಿಃ ಪಾರ್ಥಿವೈರ್ಗುಪ್ತಮಸ್ಮತ್ಪ್ರಿಯಚಿಕೀರ್ಷುಭಿಃ।
07089010c ಅಸ್ಮಾನಭಿಸೃತೈಃ ಕಾಮಾತ್ಸಬಲೈಃ ಸಪದಾನುಗೈಃ।।
ನಮಗೆ ಪ್ರಿಯವಾದುದನ್ನು ಮಾಡಲು ಬಯಸಿ ಮತ್ತು ಅವರ ಲಾಭಕ್ಕಾಗಿ ನಮ್ಮ ಪಕ್ಷದಲ್ಲಿರುವ ಅನೇಕ ಪಾರ್ಥಿವರು ಅವರ ಸೇನೆಗಳು ಮತ್ತು ಅನುಯಾಯಿಗಳೊಂದಿಗೆ ನಮ್ಮ ಸೈನಿಕರನ್ನೂ ರಕ್ಷಿಸುತ್ತಿದ್ದಾರೆ.
07089011a ಮಹೋದಧಿಮಿವಾಪೂರ್ಣಮಾಪಗಾಭಿಃ ಸಮಂತತಃ।
07089011c ಅಪಕ್ಷೈಃ ಪಕ್ಷಿಸಂಕಾಶೈ ರಥೈರಶ್ವೈಶ್ಚ ಸಂವೃತಂ।।
ನಮ್ಮ ಈ ಸೇನೆಯು ಎಲ್ಲ ಕಡೆಗಳಿಂದ ನದಿಗಳು ಹರಿದುಬಂದು ಸೇರುವ ಸಾಗರದಂತಿದೆ. ರೆಕ್ಕೆಗಳಿಲ್ಲದಿದ್ದರೂ ನಮ್ಮಲ್ಲಿರುವ ರಥ-ಕುದುರೆಗಳು ಪಕ್ಷಿಗಳಂತೆ ಆಕಾಶಗಾಮಿಗಳಾಗಿವೆ.
07089012a ಯೋಧಾಕ್ಷಯ್ಯಜಲಂ ಭೀಮಂ ವಾಹನೋರ್ಮಿತರಂಗಿಣಂ।
07089012c ಕ್ಷೇಪಣ್ಯಸಿಗದಾಶಕ್ತಿಶರಪ್ರಾಸಝಷಾಕುಲಂ।।
ಯೋಧರೇ ಈ ಸಾಗರದ ಅಕ್ಷಯವಾದ ಭಯಂಕರ ನೀರಿನಂತಿದ್ದಾರೆ. ಆನೆ-ಕುದುರೆ-ರಥವಾಹನಗಳು ಅಲೆಗಳ ತರಂಗಿಣಿಗಳಂತಿವೆ. ಭಿಂದಿಪಾಲ, ಖಡ್ಗ, ಗದೆ, ಶಕ್ತಿ, ಶರ, ಪ್ರಾಸಗಳು ಅದರ ಮೀನುಗಳಂತಿವೆ.
07089013a ಧ್ವಜಭೂಷಣಸಂಬಾಧಂ ರತ್ನಪಟ್ಟೇನ ಸಂಚಿತಂ।
07089013c ವಾಹನೈರಪಿ ಧಾವದ್ಭಿರ್ವಾಯುವೇಗವಿಕಂಪಿತಂ।।
ಧ್ವಜಗಳೂ ಭೂಷಣಗಳೇ ಸಾಗರದ ಆಳದಲ್ಲಿರುವ ರತ್ನಸಂಚಯಗಳಂತಿವೆ. ವಾಹನಗಳ ಓಡಾಡುವಿಕೆಯಿಂದ ಉಂಟಾದ ಭೀರುಗಾಳಿಯಿಂದ ಈ ಸಮುದ್ರವು ಅಲ್ಲೋಲಕಲ್ಲೋಲಗೊಂಡಂತಿದೆ.
07089014a ದ್ರೋಣಗಂಭೀರಪಾತಾಲಂ ಕೃತವರ್ಮಮಹಾಹ್ರದಂ।
07089014c ಜಲಸಂಧಮಹಾಗ್ರಾಹಂ ಕರ್ಣಚಂದ್ರೋದಯೋದ್ಧತಂ।।
ಈ ಸೇನಾಸಾಗರಕ್ಕೆ ದ್ರೋಣನು ಆಳವಾದ ಪಾತಾಲದಂತಿದ್ದಾನೆ. ಕೃತವರ್ಮನೇ ಮಹಾ ಮಡುವು. ಜಲಸಂಧನೇ ಮಹಾ ಮೊಸಳೆ. ಕರ್ಣನೆಂಬ ಚಂದ್ರನಿಂದಾಗಿ ಈ ಸೇನಾಸಮುದ್ರವು ಉಕ್ಕಿ ಬರುತ್ತಿದೆ.
07089015a ಗತೇ ಸೈನ್ಯಾರ್ಣವಂ ಭಿತ್ತ್ವಾ ತರಸಾ ಪಾಂಡವರ್ಷಭೇ।
07089015c ಸಂಜಯೈಕರಥೇನೈವ ಯುಯುಧಾನೇ ಚ ಮಾಮಕಂ।।
07089016a ತತ್ರ ಶೇಷಂ ನ ಪಶ್ಯಾಮಿ ಪ್ರವಿಷ್ಟೇ ಸವ್ಯಸಾಚಿನಿ।
07089016c ಸಾತ್ವತೇ ಚ ರಥೋದಾರೇ ಮಮ ಸೈನ್ಯಸ್ಯ ಸಂಜಯ।।
ಸಂಜಯ! ರಥೋದಾರ ಸಾತ್ವತ ಯುಯುಧಾನನು ಈ ಸೇನಾಸಮುದ್ರವನ್ನು ಒಂದೇ ರಥದಿಂದ ಭೇದಿಸಿ ಶೀಘ್ರಗತಿಯಲ್ಲಿ ಪಾಂಡವರ್ಷಭ ಸವ್ಯಸಾಚಿಯನ್ನು ಸೇರಿದನು ಎಂದರೆ ಅಲ್ಲಿ ನನ್ನ ಸೇನೆಯಲ್ಲಿ ಇನ್ನೇನೂ ಉಳಿದಿರಲಿಕ್ಕಿಲ್ಲವೆಂದು ನನಗನ್ನಿಸುತ್ತದೆ.
07089017a ತೌ ತತ್ರ ಸಮತಿಕ್ರಾಂತೌ ದೃಷ್ಟ್ವಾಭೀತೌ ತರಸ್ವಿನೌ।
07089017c ಸಿಂಧುರಾಜಂ ಚ ಸಂಪ್ರೇಕ್ಷ್ಯ ಗಾಂಡೀವಸ್ಯೇಷುಗೋಚರೇ।।
07089018a ಕಿಂ ತದಾ ಕುರವಃ ಕೃತ್ಯಂ ವಿದಧುಃ ಕಾಲಚೋದಿತಾಃ।
07089018c ದಾರುಣೈಕಾಯನೇ ಕಾಲೇ ಕಥಂ ವಾ ಪ್ರತಿಪೇದಿರೇ।।
ಅತ್ಯಂತ ವೇಗಶಾಲಿಗಳಾದ ಎಲ್ಲರನ್ನು ಅತಿಕ್ರಮಿಸಿ ಮುಂದೆ ಅಭೀತರಾಗಿ ಹೋದ ಅರ್ಜುನ-ಸಾತ್ಯಕಿಯರನ್ನು ನೋಡಿ ಮತ್ತು ಸಿಂಧುರಾಜನು ಗಾಂಡೀವದ ಗುರಿಯಾಗುವಷ್ಟು ಹತ್ತಿರದಲ್ಲಿದ್ದುದನ್ನು ನೋಡಿ ಕಾಲಚೋದಿತರಾದ ಕುರುಗಳು ಯಾವ ಕಾರ್ಯವನ್ನು ಕೈಗೊಂಡರು? ಅಥವಾ ಆ ದಾರುಣ ಸಮಯವನ್ನು ಹೇಗೆ ದಾಟಿದರು?
07089019a ಗ್ರಸ್ತಾನ್ ಹಿ ಕೌರವಾನ್ಮನ್ಯೇ ಮೃತ್ಯುನಾ ತಾತ ಸಂಗತಾನ್।
07089019c ವಿಕ್ರಮೋ ಹಿ ರಣೇ ತೇಷಾಂ ನ ತಥಾ ದೃಶ್ಯತೇಽದ್ಯ ವೈ।।
ಅಯ್ಯಾ! ಅಲ್ಲಿ ಸೇರಿದ್ದ ಕೌರವರು ಮೃತ್ಯುವಶರಾಗಿದ್ದರೆಂದು ನನಗನ್ನಿಸುತ್ತದೆ. ರಣದಲ್ಲಿ ಅವರ ವಿಕ್ರಮವೂ ಮೊದಲಿನಷ್ಟು ಇದ್ದಂತೆ ಕಾಣುವುದಿಲ್ಲ.
07089020a ಅಕ್ಷತೌ ಸಂಯುಗೇ ತತ್ರ ಪ್ರವಿಷ್ಟೌ ಕೃಷ್ಣಪಾಂಡವೌ।
07089020c ನ ಚ ವಾರಯಿತಾ ಕಶ್ಚಿತ್ತಯೋರಸ್ತೀಹ ಸಂಜಯ।।
ಸಂಜಯ! ಕೃಷ್ಣಾರ್ಜುನರು ರಣದಲ್ಲಿ ನಮ್ಮ ಸೇನೆಯನ್ನು ಸ್ವಲ್ಪವೂ ಗಾಯಗೊಳ್ಳದೆಯೇ ಪ್ರವೇಶಿಸಿದರು. ಅವರನ್ನು ತಡೆಯುವವರು ಅಲ್ಲಿ ಯಾರೂ ಇರಲಿಲ್ಲ.
07089021a ಭೃತಾಶ್ಚ ಬಹವೋ ಯೋಧಾಃ ಪರೀಕ್ಷ್ಯೈವ ಮಹಾರಥಾಃ।
07089021c ವೇತನೇನ ಯಥಾಯೋಗ್ಯಂ ಪ್ರಿಯವಾದೇನ ಚಾಪರೇ।।
ಅನೇಕ ಯೋಧರೂ ಮಹಾರಥರೂ ಪರೀಕ್ಷೆಗೊಳಗಾಗಿಯೇ ಆಯ್ಕೆಗೊಂಡಿದ್ದಾರೆ. ಯಥಾಯೋಗ್ಯವಾದ ವೇತನವನ್ನೂ ಇತರರಿಗೆ22 ಪ್ರಿಯವಾದ ಮಾತುಗಳಿಂದಲೂ ತೃಪ್ತಿಪಡಿಸಲಾಗುತ್ತಿದೆ.
07089022a ಅಕಾರಣಭೃತಸ್ತಾತ ಮಮ ಸೈನ್ಯೇ ನ ವಿದ್ಯತೇ।
07089022c ಕರ್ಮಣಾ ಹ್ಯನುರೂಪೇಣ ಲಭ್ಯತೇ ಭಕ್ತವೇತನಂ।।
ಅಯ್ಯಾ! ಅಕಾರಣವಾಗಿ ನನ್ನ ಸೈನ್ಯದಲ್ಲಿ ಯಾರೂ ಇಲ್ಲ. ಎಲ್ಲರಿಗೂ ಅವರವರ ಕೆಲಸಗಳಿಗೆ ಅನುರೂಪವಾದ ವೇತನ ಭತ್ಯಗಳನ್ನು ಪಡೆಯುತ್ತಿದ್ದಾರೆ.
07089023a ನ ಚ ಯೋಧೋಽಭವತ್ಕಶ್ಚಿನ್ಮಮ ಸೈನ್ಯೇ ತು ಸಂಜಯ।
07089023c ಅಲ್ಪದಾನಭೃತಸ್ತಾತ ನ ಕುಪ್ಯಭೃತಕೋ ನರಃ।।
ಅಯ್ಯಾ! ಸಂಜಯ! ನನ್ನ ಸೈನ್ಯದಲ್ಲಿ ಕಡಿಮೆ ವೇತನವನ್ನು ಪಡೆಯುವ ಅಥವಾ ವೇತನವನ್ನೇ ಪಡೆಯದ ಯಾವ ಯೋಧ-ನರನೂ ಇಲ್ಲ.
07089024a ಪೂಜಿತಾ ಹಿ ಯಥಾಶಕ್ತ್ಯಾ ದಾನಮಾನಾಸನೈರ್ಮಯಾ।
07089024c ತಥಾ ಪುತ್ರೈಶ್ಚ ಮೇ ತಾತ ಜ್ಞಾತಿಭಿಶ್ಚ ಸಬಾಂಧವೈಃ।।
ಅಯ್ಯಾ! ನಾನು, ನನ್ನ ಮಕ್ಕಳು, ಮತ್ತು ಜ್ಞಾತಿಬಾಂಧವರೂ ಕೂಡ ಅವರನ್ನು ದಾನ, ಸಮ್ಮಾನ, ಆಸನಗಳನ್ನಿತ್ತು ಗೌರವಿಸಿದ್ದೇವೆ.
07089025a ತೇ ಚ ಪ್ರಾಪ್ಯೈವ ಸಂಗ್ರಾಮೇ ನಿರ್ಜಿತಾಃ ಸವ್ಯಸಾಚಿನಾ।
07089025c ಶೈನೇಯೇನ ಪರಾಮೃಷ್ಟಾಃ ಕಿಮನ್ಯದ್ಭಾಗಧೇಯತಃ।।
ಹಾಗಿದ್ದರೂ ಸಹ ಸಂಗ್ರಾಮದಲ್ಲಿ ಅವರು ಸವ್ಯಸಾಚಿಯಿಂದ ಗೆಲ್ಲಲ್ಪಟ್ಟರು. ಶೈನೇಯನ ಅವ್ಯಾಹತ ದಾಳಿಗೆ ಒಳಗಾದರು. ಅದಕ್ಕೆ ಅದೃಷ್ಟವೇ ಕಾರಣವಲ್ಲದೇ ಮತ್ತಾವ ಕಾರಣವಿದೆ?
07089026a ರಕ್ಷ್ಯತೇ ಯಶ್ಚ ಸಂಗ್ರಾಮೇ ಯೇ ಚ ಸಂಜಯ ರಕ್ಷಿಣಃ।
07089026c ಏಕಃ ಸಾಧಾರಣಃ ಪಂಥಾ ರಕ್ಷ್ಯಸ್ಯ ಸಹ ರಕ್ಷಿಭಿಃ।।
ಸಂಜಯ! ಸಂಗ್ರಾಮದಲ್ಲಿ ಯಾರು ರಕ್ಷಿಸಲ್ಪಡುತ್ತಿದ್ದಾರೋ ಆ ರಕ್ಷಣೀಯರು ಮತ್ತು ಯಾರು ರಕ್ಷಿಸುತ್ತಿದ್ದಾರೋ ಆ ರಕ್ಷಕರು ಇಬ್ಬರೂ ಸಾಧಾರಣ ಒಂದೇ ಮಾರ್ಗದಲ್ಲಿ ಹೋಗುತ್ತಿದ್ದಾರೆ23.
07089027a ಅರ್ಜುನಂ ಸಮರೇ ದೃಷ್ಟ್ವಾ ಸೈಂಧವಸ್ಯಾಗ್ರತಃ ಸ್ಥಿತಂ।
07089027c ಪುತ್ರೋ ಮಮ ಭೃಶಂ ಮೂಢಃ ಕಿಂ ಕಾರ್ಯಂ ಪ್ರತ್ಯಪದ್ಯತ।।
ಸಮರದಲ್ಲಿ ಸೈಂಧವನ ಎದುರೇ ನಿಂತಿರುವ ಅರ್ಜುನನನ್ನು ನೋಡಿ ತುಂಬಾ ಮೂಢರಾಗಿರುವ ನನ್ನ ಮಗ(ದುರ್ಯೋಧನ)ನು (ಸೈಂಧವನ ರಕ್ಷಣೆಗಾಗಿ) ಯಾವ ಕಾರ್ಯವನ್ನು ಕೈಗೊಂಡನು?
07089028a ಸಾತ್ಯಕಿಂ ಚ ರಣೇ ದೃಷ್ಟ್ವಾ ಪ್ರವಿಶಂತಮಭೀತವತ್।
07089028c ಕಿಂ ನು ದುರ್ಯೋಧನಃ ಕೃತ್ಯಂ ಪ್ರಾಪ್ತಕಾಲಮಮನ್ಯತ।।
ಭಯವಿಲ್ಲದೇ ರಣವನ್ನು ಪ್ರವೇಶಿಸಿದ ಸಾತ್ಯಕಿಯನ್ನು ನೋಡಿ ದುರ್ಯೋಧನನು ಆ ಸಮಯದಲ್ಲಿ ಏನನ್ನು ಮಾಡುವುದು ಉಚಿತವೆಂದು ಅಂದುಕೊಂಡನು?
07089029a ಸರ್ವಶಸ್ತ್ರಾತಿಗೌ ಸೇನಾಂ ಪ್ರವಿಷ್ಟೌ ರಥಸತ್ತಮೌ।
07089029c ದೃಷ್ಟ್ವಾ ಕಾಂ ವೈ ಧೃತಿಂ ಯುದ್ಧೇ ಪ್ರತ್ಯಪದ್ಯಂತ ಮಾಮಕಾಃ।।
ಎಲ್ಲ ಶಸ್ತ್ರಗಳನ್ನೂ ಅತಿಕ್ರಮಿಸಿ ಸೇನೆಯನ್ನು ಪ್ರವೇಶಿಸಿದ ಆ ರಥಸತ್ತಮ (ಅರ್ಜುನ-ಸಾತ್ಯಕಿಯ)ರನ್ನು ನೋಡಿ ನನ್ನವರು ಯುದ್ಧದಲ್ಲಿ ಏನೆಂದು ನಿರ್ಧರಿಸಿದರು24?
07089030a ದೃಷ್ಟ್ವಾ ಕೃಷ್ಣಂ ತು ದಾಶಾರ್ಹಮರ್ಜುನಾರ್ಥೇ ವ್ಯವಸ್ಥಿತಂ।
07089030c ಶಿನೀನಾಂ ಋಷಭಂ ಚೈವ ಮನ್ಯೇ ಶೋಚಂತಿ ಪುತ್ರಕಾಃ।।
ಅರ್ಜುನನಿಗೋಸ್ಕರವಾಗಿ ನಿಂತಿರುವ ದಾಶಾರ್ಹ ಕೃಷ್ಣ ಮತ್ತು ಶಿನಿಗಳ ವೃಷಭ ಸಾತ್ಯಕಿಯನ್ನು ನೋಡಿ ನನ್ನ ಮಕ್ಕಳು ಶೋಕಿಸುತ್ತಿದ್ದಿರಬಹುದು ಎಂದು ನನಗನ್ನಿಸುತ್ತದೆ.
07089031a ದೃಷ್ಟ್ವಾ ಸೇನಾಂ ವ್ಯತಿಕ್ರಾಂತಾಂ ಸಾತ್ವತೇನಾರ್ಜುನೇನ ಚ।
07089031c ಪಲಾಯಮಾನಾಂಶ್ಚ ಕುರೂನ್ಮನ್ಯೇ ಶೋಚಂತಿ ಪುತ್ರಕಾಃ।।
ಸೇನೆಗಳನ್ನು ಅತಿಕ್ರಮಿಸಿದ ಸಾತ್ವತ-ಅರ್ಜುನರನ್ನೂ ಮತ್ತು ಪಲಾಯನಮಾಡುತ್ತಿರುವ ಕುರುಗಳನ್ನೂ ನೋಡಿ ನನ್ನ ಮಕ್ಕಳು ಶೋಕಿಸುತ್ತಿದ್ದಿರಬಹುದು ಎಂದು ನನಗನ್ನಿಸುತ್ತದೆ.
07089032a ವಿದ್ರುತಾನ್ರಥಿನೋ ದೃಷ್ಟ್ವಾ ನಿರುತ್ಸಾಹಾನ್ದ್ವಿಷಜ್ಜಯೇ।
07089032c ಪಲಾಯನೇ ಕೃತೋತ್ಸಾಹಾನ್ಮನ್ಯೇ ಶೋಚಂತಿ ಪುತ್ರಕಾಃ।।
ಶತ್ರುಗಳನ್ನು ಜಯಿಸುವುದರಲ್ಲಿ ನಿರುತ್ಸಾಹರಾಗಿ, ಪಲಾಯನದಲ್ಲಿ ಉತ್ಸಾಹಿತರಾಗಿ ಓಡಿಹೋಗುತ್ತಿರುವ ರಥಿಗಳನ್ನು ನೋಡಿ ನನ್ನ ಮಕ್ಕಳು ಶೋಕಿಸುತ್ತಿದ್ದಿರಬಹುದು ಎಂದು ನನಗನ್ನಿಸುತ್ತದೆ.
07089033a ಶೂನ್ಯಾನ್ಕೃತಾನ್ರಥೋಪಸ್ಥಾನ್ಸಾತ್ವತೇನಾರ್ಜುನೇನ ಚ।
07089033c ಹತಾಂಶ್ಚ ಯೋಧಾನ್ಸಂದೃಶ್ಯ ಮನ್ಯೇ ಶೋಚಂತಿ ಪುತ್ರಕಾಃ।।
ಸಾತ್ವತ-ಅರ್ಜುನರು ರಥಗಳ ಆಸನಗಳನ್ನು ಶೂನ್ಯವನ್ನಾಗಿ ಮಾಡುತ್ತಿರುವುದನ್ನು ನೋಡಿ ಮತ್ತು ಯೋಧರನ್ನು ಸಂಹರಿಸುತ್ತಿರುವುದನ್ನು ನೋಡಿ ನನ್ನ ಮಕ್ಕಳು ಶೋಕಿಸುತ್ತಿದ್ದಿರಬಹುದು ಎಂದು ನನಗನ್ನಿಸುತ್ತದೆ.
07089034a ವ್ಯಶ್ವನಾಗರಥಾನ್ದೃಷ್ಟ್ವಾ ತತ್ರ ವೀರಾನ್ಸಹಸ್ರಶಃ।
07089034c ಧಾವಮಾನಾನ್ರಣೇ ವ್ಯಗ್ರಾನ್ಮನ್ಯೇ ಶೋಚಂತಿ ಪುತ್ರಕಾಃ।।
ಗಜಾಶ್ವ-ರಥಗಳಿಂದ ವಿಹೀನರಾಗಿ ಉದ್ವಿಗ್ನರಾಗಿ ಓಡಿಹೋಗುತ್ತಿರುವ ಸಹಸ್ರಾರು ವೀರಯೋಧರನ್ನು ಕಂಡು ನನ್ನ ಮಕ್ಕಳು ಶೋಕಿಸುತ್ತಿದ್ದಿರಬಹುದು ಎಂದು ನನಗನ್ನಿಸುತ್ತದೆ.
07089035a ವಿವೀರಾಂಶ್ಚ ಕೃತಾನಶ್ವಾನ್ವಿರಥಾಂಶ್ಚ ಕೃತಾನ್ನರಾನ್।
07089035c ತತ್ರ ಸಾತ್ಯಕಿಪಾರ್ಥಾಭ್ಯಾಂ ಮನ್ಯೇ ಶೋಚಂತಿ ಪುತ್ರಕಾಃ।।
ಅಲ್ಲಿ ಸಾತ್ಯಕಿ-ಪಾರ್ಥರು ಕುದುರೆಗಳನ್ನು ವೀರರಹಿತರನ್ನಾಗಿಯೂ, ರಥಗಳನ್ನು ಮನುಷ್ಯ ರಹಿತವನ್ನಾಗಿ ಮಾಡಿದುದನ್ನು ನೋಡಿ ನನ್ನ ಮಕ್ಕಳು ಶೋಕಿಸುತ್ತಿದ್ದಿರಬಹುದು ಎಂದು ನನಗನ್ನಿಸುತ್ತದೆ.
07089036a ಪತ್ತಿಸಂಘಾನ್ರಣೇ ದೃಷ್ಟ್ವಾ ಧಾವಮಾನಾಂಶ್ಚ ಸರ್ವಶಃ।
07089036c ನಿರಾಶಾ ವಿಜಯೇ ಸರ್ವೇ ಮನ್ಯೇ ಶೋಚಂತಿ ಪುತ್ರಕಾಃ।।
ರಣದ ಎಲ್ಲಕಡೆ ಎಲ್ಲ ಪದಾತಿಗಣಗಳೂ ವಿಜಯದಲ್ಲಿ ನಿರಾಶರಾಗಿ ಓಡಿಹೋಗುತ್ತಿರುವುದನ್ನು ನೋಡಿ ನನ್ನ ಮಕ್ಕಳು ಶೋಕಿಸುತ್ತಿದ್ದಿರಬಹುದು ಎಂದು ನನಗನ್ನಿಸುತ್ತದೆ.
07089037a ದ್ರೋಣಸ್ಯ ಸಮತಿಕ್ರಾಂತಾವನೀಕಮಪರಾಜಿತೌ।
07089037c ಕ್ಷಣೇನ ದೃಷ್ಟ್ವಾ ತೌ ವೀರೌ ಮನ್ಯೇ ಶೋಚಂತಿ ಪುತ್ರಕಾಃ।।
ಆ ಇಬ್ಬರು ಅಪರಾಜಿತ ವೀರರು ಕ್ಷಣಮಾತ್ರದಲ್ಲಿ ದ್ರೋಣನ ಸೇನೆಯನ್ನು ಅತಿಕ್ರಮಿಸಿ ಬಂದುದನ್ನು ನೋಡಿ ನನ್ನ ಮಕ್ಕಳು ಶೋಕಿಸುತ್ತಿದ್ದಿರಬಹುದು ಎಂದು ನನಗನ್ನಿಸುತ್ತದೆ.
07089038a ಸಮ್ಮೂಢೋಽಸ್ಮಿ ಭೃಶಂ ತಾತ ಶ್ರುತ್ವಾ ಕೃಷ್ಣಧನಂಜಯೌ।
07089038c ಪ್ರವಿಷ್ಟೌ ಮಾಮಕಂ ಸೈನ್ಯಂ ಸಾತ್ವತೇನ ಸಹಾಚ್ಯುತೌ।।
ಅಯ್ಯಾ! ಅಚ್ಯುತರಾದ ಕೃಷ್ಣ-ಧನಂಜಯರು ಮತ್ತು ಜೊತೆಗೆ ಸಾತ್ವತನೂ ಕೂಡ ನನ್ನ ಸೇನೆಯನ್ನು ಪ್ರವೇಶಿಸಿದರು ಎನ್ನುವುದನ್ನು ಕೇಳಿ ನಾನು ತುಂಬಾ ಸಮ್ಮೂಢನಾಗಿಬಿಟ್ಟಿದ್ದೇನೆ.
07089039a ತಸ್ಮಿನ್ಪ್ರವಿಷ್ಟೇ ಪೃತನಾಂ ಶಿನೀನಾಂ ಪ್ರವರೇ ರಥೇ।
07089039c ಭೋಜಾನೀಕಂ ವ್ಯತಿಕ್ರಾಂತೇ ಕಥಮಾಸನ್ ಹಿ ಕೌರವಾಃ।।
ಶಿನಿಗಳಲ್ಲಿ ಶ್ರೇಷ್ಠನಾದ ಸಾತ್ಯಕಿಯು ರಥದಲ್ಲಿ ಕುಳಿತು ಸೇನೆಗಳನ್ನು ಪ್ರವೇಶಿಸಿ ಭೋಜ ಕೃತವರ್ಮನ ಸೇನೆಯನ್ನು ಅತಿಕ್ರಮಿಸಲು ಕೌರವರು ಏನು ಮಾಡಿದರು?
07089040a ತಥಾ ದ್ರೋಣೇನ ಸಮರೇ ನಿಗೃಹೀತೇಷು ಪಾಂಡುಷು।
07089040c ಕಥಂ ಯುದ್ಧಮಭೂತ್ತತ್ರ ತನ್ಮಮಾಚಕ್ಷ್ವ ಸಂಜಯ।।
ಸಂಜಯ! ದ್ರೋಣನು ಪಾಂಡವರನ್ನು ಸಮರದಲ್ಲಿ ನಿಗ್ರಹಿಸಿದ ನಂತರ ಅಲ್ಲಿ ಯುದ್ಧವು ಹೇಗೆ ಮುಂದುವರೆಯಿತು ಎನ್ನುವುದನ್ನು ನನಗೆ ಹೇಳು.
07089041a ದ್ರೋಣೋ ಹಿ ಬಲವಾನ್ಶೂರಃ ಕೃತಾಸ್ತ್ರೋ ದೃಢವಿಕ್ರಮಃ।
07089041c ಪಾಂಚಾಲಾಸ್ತಂ ಮಹೇಷ್ವಾಸಂ ಪ್ರತ್ಯಯುಧ್ಯನ್ಕಥಂ ರಣೇ।।
07089042a ಬದ್ಧವೈರಾಸ್ತಥಾ ದ್ರೋಣೇ ಧರ್ಮರಾಜಜಯೈಷಿಣಃ।
07089042c ಭಾರದ್ವಾಜಸ್ತಥಾ ತೇಷು ಕೃತವೈರೋ ಮಹಾರಥಃ।।
ದ್ರೋಣನು ಬಲವಂತ, ಶೂರ, ಕೃತಾಸ್ತ್ರ ಮತ್ತು ದೃಢವಿಕ್ರಮಿ. ಅವನ ಬದ್ಧವೈರಿಗಳಾದ ಧರ್ಮರಾಜನ ವಿಜಯಾಕಾಂಕ್ಷಿಗಳಾದ ಪಾಂಚಾಲರು ಆ ಮಹೇಷ್ವಾಸ ದ್ರೋಣನನ್ನು ರಣದಲ್ಲಿ ಎದುರಿಸಿ ಹೇಗೆ ಯುದ್ಧಮಾಡಿದರು? ಅವರೊಂದಿಗೆ ವೈರವನ್ನು ಸಾಧಿಸುತ್ತಿದ್ದ ಭಾರದ್ವಾಜನು ಹೇಗೆ ಯುದ್ಧಮಾಡಿದನು?
07089043a ಅರ್ಜುನಶ್ಚಾಪಿ ಯಚ್ಚಕ್ರೇ ಸಿಂಧುರಾಜವಧಂ ಪ್ರತಿ।
07089043c ತನ್ಮೇ ಸರ್ವಂ ಸಮಾಚಕ್ಷ್ವ ಕುಶಲೋ ಹ್ಯಸಿ ಸಂಜಯ।।
ಸಿಂಧುರಾಜನ ವಧೆಗಾಗಿ ಅರ್ಜುನನು ಏನು ಮಾಡಿದನು? ಇವೆಲ್ಲವನ್ನೂ ನನಗೆ ಹೇಳು ಸಂಜಯ! ವಿಷಯನಿರೂಪಣೆಯಲ್ಲಿ ನೀನು ಕುಶಲನಾಗಿರುವೆ!”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ಧೃತರಾಷ್ಟ್ರಪ್ರಶ್ನೇ ಏಕೋನನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶೇ ಧೃತರಾಷ್ಟ್ರಪ್ರಶ್ನೆ ಎನ್ನುವ ಎಂಭತ್ತೊಂಭತ್ತನೇ ಅಧ್ಯಾಯವು.