088 ಸಾತ್ಯಕಿಪ್ರವೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಜಯದ್ರಥವಧ ಪರ್ವ

ಅಧ್ಯಾಯ 88

ಸಾರ

ಸಾತ್ಯಕಿಯು ದ್ರೋಣನೊಡನೆ ಯುದ್ಧಮಾಡಿ ಅವನನ್ನು ಬಿಟ್ಟು ಮುಂದುವರಿದುದು (1-36). ಸಾತ್ಯಕಿ-ಕೃತವರ್ಮರ ಯುದ್ಧ; ಸಾತ್ಯಕಿಯು ಕಾಂಬೋಜರನ್ನು ಆಕ್ರಮಣಿಸಿ ಮುಂದುವರಿದುದು (37-52). ಭೀಮನು ಕೃತವರ್ಮನನ್ನು ಎದುರಿಸಿದುದು (53-59).

07088001 ಸಂಜಯ ಉವಾಚ।
07088001a ಪ್ರಯಾತೇ ತವ ಸೈನ್ಯಂ ತು ಯುಯುಧಾನೇ ಯುಯುತ್ಸಯಾ।
07088001c ಧರ್ಮರಾಜೋ ಮಹಾರಾಜ ಸ್ವೇನಾನೀಕೇನ ಸಂವೃತಃ।
07088001e ಪ್ರಾಯಾದ್ದ್ರೋಣರಥಪ್ರೇಪ್ಸುರ್ಯುಯುಧಾನಸ್ಯ ಪೃಷ್ಠತಃ।।

ಸಂಜಯನು ಹೇಳಿದನು: “ಮಹಾರಾಜ! ಯುದ್ಧಮಾಡಲು ಉತ್ಸಾಹದಿಂದ ನಿನ್ನ ಸೈನ್ಯದ ಕಡೆ ಯುಯುಧಾನನು ಹೊರಡಲು ಧರ್ಮರಾಜನು ಯುಯುಧಾನನ ಹಿಂದೆ ತನ್ನ ಸೇನೆಯಿಂದ ಪರಿವೃತನಾಗಿ ದ್ರೋಣನ ರಥದ ಕಡೆ ಹೊರಟನು.

07088002a ತತಃ ಪಾಂಚಾಲರಾಜಸ್ಯ ಪುತ್ರಃ ಸಮರದುರ್ಮದಃ।
07088002c ಪ್ರಾಕ್ರೋಶತ್ಪಾಂಡವಾನೀಕೇ ವಸುದಾನಶ್ಚ ಪಾರ್ಥಿವಃ।।

ಆಗ ಪಾಂಚಾಲರಾಜನ ಮಗ ಸಮರದುರ್ಮದ ಮತ್ತು ಪಾರ್ಥಿವ ವಸುದಾನರು ಪಾಂಡವರ ಸೇನೆಗೆ ಕೂಗಿ ಹೇಳಿದರು:

07088003a ಆಗಚ್ಚತ ಪ್ರಹರತ ದ್ರುತಂ ವಿಪರಿಧಾವತ।
07088003c ಯಥಾ ಸುಖೇನ ಗಚ್ಚೇತ ಸಾತ್ಯಕಿರ್ಯುದ್ಧದುರ್ಮದಃ।।
07088004a ಮಹಾರಥಾ ಹಿ ಬಹವೋ ಯತಿಷ್ಯಂತ್ಯಸ್ಯ ನಿರ್ಜಯೇ।

“ಬೇಗ ಬನ್ನಿ! ಯುದ್ಧದುರ್ಮದ ಸಾತ್ಯಕಿಯು ಸುಲಭವಾಗಿ ಹೋಗಬಲ್ಲಂತೆ ಮಾಡಲು ವೇಗದಿಂದ ಆಕ್ರಮಿಸಿ. ಅನೇಕ ಮಹಾರಥರು ಅವನನ್ನು ಜಯಿಸಲು ಪ್ರಯತ್ನಿಸುತ್ತಾರೆ!”

07088004c ಇತಿ ಬ್ರುವಂತೋ ವೇಗೇನ ಸಮಾಪೇತುರ್ಬಲಂ ತವ।।
07088005a ವಯಂ ಪ್ರತಿಜಿಗೀಷಂತಸ್ತತ್ರ ತಾನ್ಸಮಭಿದ್ರುತಾಃ।
07088005c ತತಃ ಶಬ್ದೋ ಮಹಾನಾಸೀದ್ಯುಯುಧಾನರಥಂ ಪ್ರತಿ।।

ಹೀಗೆ ಹೇಳುತ್ತಾ ವೇಗದಿಂದ ನಿನ್ನ ಸೇನೆಯ ಮೇಲೆ ಆಕ್ರಮಣಿಸಿ “ಅವನನ್ನು ಗೆಲ್ಲಲು ಬಯಸುವವರನ್ನು ಸೋಲಿಸುತ್ತೇವೆ!” ಎಂದು ಎರಗಿದರು. ಆಗ ಯುಯುಧಾನನ ರಥದ ಬಳಿ ಮಹಾ ಶಬ್ಧವುಂಟಾಯಿತು.

07088006a ಪ್ರಕಂಪ್ಯಮಾನಾ ಮಹತೀ ತವ ಪುತ್ರಸ್ಯ ವಾಹಿನೀ।
07088006c ಸಾತ್ವತೇನ ಮಹಾರಾಜ ಶತಧಾಭಿವ್ಯದೀರ್ಯತ।।

ಮಹಾರಾಜ! ಕಂಪಿಸುತ್ತಿದ್ದ ನಿನ್ನ ಮಗನ ಮಹಾ ಸೇನೆಯು ಸಾತ್ವತನಿಂದ ನೂರು ವಾಹಿನಿಗಳಾಗಿ ಒಡೆಯಲ್ಪಟ್ಟಿತು.

07088007a ತಸ್ಯಾಂ ವಿದೀರ್ಯಮಾಣಾಯಾಂ ಶಿನೇಃ ಪೌತ್ರೋ ಮಹಾರಥಃ।
07088007c ಸಪ್ತ ವೀರಾನ್ಮಹೇಷ್ವಾಸಾನಗ್ರಾನೀಕೇ ವ್ಯಪೋಥಯತ್।।

ಅವರು ಹೀಗೆ ಒಡೆದು ಹೋಗಲು ಶಿನಿಯ ಮೊಮ್ಮಗ ಮಹಾರಥನು ಸೇನೆಯ ಎದುರಿನಲ್ಲಿದ್ದ ಏಳು ಮಹೇಷ್ವಾಸ ವೀರರನ್ನು ಉರುಳಿಸಿದನು.

07088008a ತೇ ಭೀತಾ ಮೃದ್ಯಮಾನಾಶ್ಚ ಪ್ರಮೃಷ್ಟಾ ದೀರ್ಘಬಾಹುನಾ।
07088008c ಆಯೋಧನಂ ಜಹುರ್ವೀರಾ ದೃಷ್ಟ್ವಾ ತಮತಿಮಾನುಷಂ।।

ಆ ದೀರ್ಘಬಾಹುವಿನಿಂದ ಸದೆಬಡಿಯಲ್ಪಟ್ಟ ಆ ವೀರರು ಹೆದರಿ, ಅವನ ಅತಿಮಾನುಷತ್ವವನ್ನು ಕಂಡು ಯುದ್ಧಮಾಡುವುದನ್ನೇ ತೊರೆದರು.

07088009a ರಥೈರ್ವಿಮಥಿತಾಕ್ಷೈಶ್ಚ ಭಗ್ನನೀಡೈಶ್ಚ ಮಾರಿಷ।
07088009c ಚಕ್ರೈರ್ವಿಮಥಿತೈಶ್ಚಿನ್ನೈರ್ಧ್ವಜೈಶ್ಚ ವಿನಿಪಾತಿತೈಃ।।
07088010a ಅನುಕರ್ಷೈಃ ಪತಾಕಾಭಿಃ ಶಿರಸ್ತ್ರಾಣೈಃ ಸಕಾಂಚನೈಃ।
07088010c ಬಾಹುಭಿಶ್ಚಂದನಾದಿಗ್ಧೈಃ ಸಾಂಗದೈಶ್ಚ ವಿಶಾಂ ಪತೇ।।
07088011a ಹಸ್ತಿಹಸ್ತೋಪಮೈಶ್ಚಾಪಿ ಭುಜಗಾಭೋಗಸನ್ನಿಭೈಃ।
07088011c ಊರುಭಿಃ ಪೃಥಿವೀ ಚನ್ನಾ ಮನುಜಾನಾಂ ನರೋತ್ತಮ।।

ಮಾರಿಷ! ವಿಶಾಂಪತೇ! ನರೋತ್ತಮ! ನುಚ್ಚುನೂರಾದ ರಥಗಳಿಂದ, ಮುರಿದ ನೊಗಗಳಿಂದ, ಪುಡಿಪುಡಿಯಾದ ಚಕ್ರಗಳಿಂದ, ತುಂಡಾಗಿ ಬಿದ್ದ ಧ್ವಜಗಳಿಂದ, ಅನುಕರ್ಷಗಳಿಂದ, ಪತಾಕೆಗಳಿಂದ, ಕಾಂಚನದ ಶಿರಸ್ತ್ರಾಣಗಳಿಂದ, ಚಂದನಲೇಪಿತ ಅಂಗದಗಳೊಂದಿಗಿನ, ಆನೆಯ ಸೊಂಡಲಿನಂತಿರುವ ಬಾಹುಗಳಿಂದ, ಹಾವಿನ ಹೆಡೆಗಳಂತಿರುವ ಮನುಷ್ಯರ ಭುಜಗಳಿಂದ, ತೊಡೆಗಳಿಂದ ಭೂಮಿಯು ಸುಂದರವಾಗಿ ಕಾಣುತ್ತಿತ್ತು.

07088012a ಶಶಾಂಕಸನ್ನಿಕಾಶೈಶ್ಚ ವದನೈಶ್ಚಾರುಕುಂಡಲೈಃ।
07088012c ಪತಿತೈರ್ವೃಷಭಾಕ್ಷಾಣಾಂ ಬಭೌ ಭಾರತ ಮೇದಿನೀ।।

ಭಾರತ! ಬಿದ್ದಿರುವ ವೃಷಭಾಕ್ಷಣರ ಚಂದ್ರನ ಪ್ರಭೆಯುಳ್ಳ, ಸುಂದರ ಕುಂಡಲಗಳಿಂದ ಅಲಂಕೃತಗೊಂಡ ಮುಖಗಳಿಂದ ಮೇದಿನಿಯು ಶೋಭಿಸುತ್ತಿತ್ತು.

07088013a ಗಜೈಶ್ಚ ಬಹುಧಾ ಚಿನ್ನೈಃ ಶಯಾನೈಃ ಪರ್ವತೋಪಮೈಃ।
07088013c ರರಾಜಾತಿಭೃಶಂ ಭೂಮಿರ್ವಿಕೀರ್ಣೈರಿವ ಪರ್ವತೈಃ।।

ಪರ್ವತೋಪಮ ಅನೇಕ ಆನೆಗಳು ನಾಶಗೊಂಡು ಮಲಗಿದ್ದಿರಲು ಭೂಮಿಯು ಪರ್ವತಗಳು ಬಿದ್ದು ಹರಡಿರುವಂತೆ ತುಂಬಾ ರಾರಾಜಿಸುತ್ತಿತ್ತು.

07088014a ತಪನೀಯಮಯೈರ್ಯೋಕ್ತ್ರೈರ್ಮುಕ್ತಾಜಾಲವಿಭೂಷಿತೈಃ।
07088014c ಉರಶ್ಚದೈರ್ವಿಚಿತ್ರೈಶ್ಚ ವ್ಯಶೋಭಂತ ತುರಂಗಮಾಃ।
07088014e ಗತಸತ್ತ್ವಾ ಮಹೀಂ ಪ್ರಾಪ್ಯ ಪ್ರಮೃಷ್ಟಾ ದೀರ್ಘಬಾಹುನಾ।।

ಬಂಗಾರದಿಂದ ಮಾಡಲಟ್ಟ ಮುಕ್ತಾಜಾಲಗಳಿಂದ ವಿಭೂಷಿತವಾದ, ಬಣ್ಣ ಬಣ್ಣದ ಜೀನುಗಳಿಂದ ಶೋಭಿಸುತ್ತಿದ್ದ ತುರಂಗಮಗಳು ಆ ದೀರ್ಘಬಾಹುವಿನಿಂದ ಜೀವವನ್ನು ಕಳೆದುಕೊಂಡು ನೆಲವನ್ನು ಮುಕ್ಕಿದ್ದವು.

07088015a ನಾನಾವಿಧಾನಿ ಸೈನ್ಯಾನಿ ತವ ಹತ್ವಾ ತು ಸಾತ್ವತಃ।
07088015c ಪ್ರವಿಷ್ಟಸ್ತಾವಕಂ ಸೈನ್ಯಂ ದ್ರಾವಯಿತ್ವಾ ಚಮೂಂ ಭೃಶಂ।।

ನಿನ್ನ ನಾನಾವಿಧದ ಸೇನೆಗಳನ್ನು ನಾಶಗೊಳಿಸಿ ಸಾತ್ವತನು, ನಿನ್ನ ಸೇನೆಯನ್ನು ಪಲಾಯನಗೊಳಿಸಿ, ನಿನ್ನ ಸೇನೆಯನ್ನು ಪ್ರವೇಶಿಸಿದನು.

07088016a ತತಸ್ತೇನೈವ ಮಾರ್ಗೇಣ ಯೇನ ಯಾತೋ ಧನಂಜಯಃ।
07088016c ಇಯೇಷ ಸಾತ್ಯಕಿರ್ಗಂತುಂ ತತೋ ದ್ರೋಣೇನ ವಾರಿತಃ।।

ಯಾವ ಮಾರ್ಗದಿಂದ ಧನಂಜಯನು ಹೋಗಿದ್ದನೋ ಅದೇ ಮಾರ್ಗದಲ್ಲಿ ಹೋಗಲು ಪ್ರಯತ್ನಿಸುತ್ತಿದ್ದ ಸಾತ್ಯಕಿಯನ್ನು ದ್ರೋಣನು ತಡೆದನು.

07088017a ಭರದ್ವಾಜಂ ಸಮಾಸಾದ್ಯ ಯುಯುಧಾನಸ್ತು ಮಾರಿಷ।
07088017c ನಾಭ್ಯವರ್ತತ ಸಂಕ್ರುದ್ಧೋ ವೇಲಾಮಿವ ಜಲಾಶಯಃ।।

ಮಾರಿಷ! ಭರಧ್ವಾಜನನ್ನು ಎದುರಿಸಿದ ಯುಯುಧಾನನಾದರೋ ಸಂಕ್ರುದ್ಧನಾಗಿ ಅಲೆಗಳನ್ನು ಜಲಾಶಯವು ಹೇಗೋ ಹಾಗೆ ಹಿಂದೆಸರಿಯಲಿಲ್ಲ.

07088018a ನಿವಾರ್ಯ ತು ರಣೇ ದ್ರೋಣೋ ಯುಯುಧಾನಂ ಮಹಾರಥಂ।
07088018c ವಿವ್ಯಾಧ ನಿಶಿತೈರ್ಬಾಣೈಃ ಪಂಚಭಿರ್ಮರ್ಮಭೇದಿಭಿಃ।।

ಮಹಾರಥ ಯುಯುಧಾನನನ್ನು ರಣದಲ್ಲಿ ತಡೆದು ದ್ರೋಣನು ಅವನನ್ನು ಐದು ಮರ್ಮಭೇದಿ ನಿಶಿತ ಬಾಣಗಳಿಂದ ಹೊಡೆದನು.

07088019a ಸಾತ್ಯಕಿಸ್ತು ರಣೇ ದ್ರೋಣಂ ರಾಜನ್ವಿವ್ಯಾಧ ಸಪ್ತಭಿಃ।
07088019c ಹೇಮಪುಂಖೈಃ ಶಿಲಾಧೌತೈಃ ಕಂಕಬರ್ಹಿಣವಾಜಿತೈಃ।।

ರಾಜನ್! ಸಾತ್ಯಕಿಯಾದರೋ ರಣದಲ್ಲಿ ದ್ರೋಣನನ್ನು ಏಳು ಹೇಮಪುಂಖಗಳ ಶಿಲಾಧೌತ ಕಂಕಬರ್ಹಿಣ ಬಾಣಗಳಿಂದ ಹೊಡೆದನು.

07088020a ತಂ ಷಡ್ಭಿಃ ಸಾಯಕೈರ್ದ್ರೋಣಃ ಸಾಶ್ವಯಂತಾರಮಾರ್ದಯತ್।
07088020c ಸ ತಂ ನ ಮಮೃಷೇ ದ್ರೋಣಂ ಯುಯುಧಾನೋ ಮಹಾರಥಃ।।

ದ್ರೋಣನು ಕುದುರೆ-ಸಾರಥಿಗಳೊಂದಿಗೆ ಅವನನ್ನು ಆರು ಸಾಯಕಗಳಿಂದ ಹೊಡೆದನು. ಆಗ ಮಹಾರಥ ಯುಯುಧಾನನು ದ್ರೋಣನನ್ನು ಸಹಿಸಿಕೊಳ್ಳಲಿಲ್ಲ.

07088021a ಸಿಂಹನಾದಂ ತತಃ ಕೃತ್ವಾ ದ್ರೋಣಂ ವಿವ್ಯಾಧ ಸಾತ್ಯಕಿಃ।
07088021c ದಶಭಿಃ ಸಾಯಕೈಶ್ಚಾನ್ಯೈಃ ಷಡ್ಭಿರಷ್ಟಾಭಿರೇವ ಚ।।

ಆಗ ಸಿಂಹನಾದವನ್ನು ಮಾಡಿ ದ್ರೋಣನನ್ನು ಹತ್ತು ಸಾಯಕಗಳಿಂದ ಮತ್ತು ಅನ್ಯ ಹದಿನಾಲ್ಕರಿಂದ ಹೊಡೆದನು.

07088022a ಯುಯುಧಾನಃ ಪುನರ್ದ್ರೋಣಂ ವಿವ್ಯಾಧ ದಶಭಿಃ ಶರೈಃ।
07088022c ಏಕೇನ ಸಾರಥಿಂ ಚಾಸ್ಯ ಚತುರ್ಭಿಶ್ಚತುರೋ ಹಯಾನ್।
07088022e ಧ್ವಜಮೇಕೇನ ಬಾಣೇನ ವಿವ್ಯಾಧ ಯುಧಿ ಮಾರಿಷ।।

ಮಾರಿಷ! ಪುನಃ ಯುಯುಧಾನನು ಹತ್ತು ಶರಗಳಿಂದ ಹೊಡೆದನು. ಒಂದರಿಂದ ಸಾರಥಿಯನ್ನೂ, ನಾಲ್ಕರಿಂದ ನಾಲ್ಕು ಕುದುರೆಗಳನ್ನೂ, ಒಂದು ಬಾಣದಿಂದ ಧ್ವಜವನ್ನೂ ಹೊಡೆದನು.

07088023a ತಂ ದ್ರೋಣಃ ಸಾಶ್ವಯಂತಾರಂ ಸರಥಧ್ವಜಮಾಶುಗೈಃ।
07088023c ತ್ವರನ್ಪ್ರಾಚ್ಚಾದಯದ್ಬಾಣೈಃ ಶಲಭಾನಾಮಿವ ವ್ರಜೈಃ।।

ದ್ರೋಣನು ತ್ವರೆಮಾಡಿ ಅವನನ್ನು, ಕುದುರೆ-ಸಾರಥಿ-ರಥ-ಧ್ವಜಗಳನ್ನು ಮಿಡಿತೆಯ ಹಿಂಡಿನಂತಿರುವ ಆಶುಗ ಬಾಣಗಳಿಂದ ಮುಚ್ಚಿಬಿಟ್ಟನು.

07088024a ತಥೈವ ಯುಯುಧಾನೋಽಪಿ ದ್ರೋಣಂ ಬಹುಭಿರಾಶುಗೈಃ।
07088024c ಪ್ರಾಚ್ಚಾದಯದಸಂಭ್ರಾಂತಸ್ತತೋ ದ್ರೋಣ ಉವಾಚ ಹ।।

ಹಾಗೆಯೇ ಯುಯುಧಾನನೂ ಕೂಡ ಅನೇಕ ಆಶುಗಗಳಿಂದ ದ್ರೋಣನನ್ನು ಮುಸುಕಿದನು. ಆಗ ಸಂಭ್ರಾಂತನಾದ ದ್ರೋಣನು ಹೇಳಿದನು:

07088025a ತವಾಚಾರ್ಯೋ ರಣಂ ಹಿತ್ವಾ ಗತಃ ಕಾಪುರುಷೋ ಯಥಾ।
07088025c ಯುಧ್ಯಮಾನಂ ಹಿ ಮಾಂ ಹಿತ್ವಾ ಪ್ರದಕ್ಷಿಣಮವರ್ತತ।।

“ನಿನ್ನ ಆಚಾರ್ಯನು ಕಾಪುರುಷನಂತೆ ರಣವನ್ನು ತೊರೆದು ಹೊರಟುಹೋದನು. ಯುದ್ಧಮಾಡುತ್ತಿದ್ದ ನನ್ನನ್ನು ಪ್ರದಕ್ಷಿಣೆಮಾಡಿ ಮುಂದೆಸಾರಿದನು.

07088026a ತ್ವಂ ಹಿ ಮೇ ಯುಧ್ಯತೋ ನಾದ್ಯ ಜೀವನ್ಮೋಕ್ಷ್ಯಸಿ ಮಾಧವ।
07088026c ಯದಿ ಮಾಂ ತ್ವಂ ರಣೇ ಹಿತ್ವಾ ನ ಯಾಸ್ಯಾಚಾರ್ಯವದ್ದ್ರುತಂ।।

ಮಾಧವ! ಒಂದುವೇಳೆ ನಿನ್ನ ಆಚಾರ್ಯನಂತೆ ನನ್ನನ್ನು ರಣದಲ್ಲಿ ಬಿಟ್ಟು ಹೋಗದೇ ನನ್ನೊಡನೆ ಯುದ್ಧಮಾಡಿದರೆ ಇಂದು ನೀನು ಜೀವಂತ ಉಳಿಯುವುದಿಲ್ಲ20!”

07088027 ಸಾತ್ಯಕಿರುವಾಚ।
07088027a ಧನಂಜಯಸ್ಯ ಪದವೀಂ ಧರ್ಮರಾಜಸ್ಯ ಶಾಸನಾತ್।
07088027c ಗಚ್ಚಾಮಿ ಸ್ವಸ್ತಿ ತೇ ಬ್ರಹ್ಮನ್ನ ಮೇ ಕಾಲಾತ್ಯಯೋ ಭವೇತ್।।

ಸಾತ್ಯಕಿಯು ಹೇಳಿದನು: “ಬ್ರಹ್ಮನ್! ನಿನಗೆ ಮಂಗಳವಾಗಲಿ! ಧರ್ಮರಾಜನ ಶಾಸನದಂತೆ ಧನಂಜಯನ ಬಳಿ ಹೋಗುತ್ತಿದ್ದೇನೆ. ಕಾಲವು ಕಳೆದುಹೋಗುತ್ತಿದೆ!21””

07088028 ಸಂಜಯ ಉವಾಚ।
07088028a ಏತಾವದುಕ್ತ್ವಾ ಶೈನೇಯ ಆಚಾರ್ಯಂ ಪರಿವರ್ಜಯನ್।
07088028c ಪ್ರಯಾತಃ ಸಹಸಾ ರಾಜನ್ಸಾರಥಿಂ ಚೇದಮಬ್ರವೀತ್।।

ಸಂಜಯನು ಹೇಳಿದನು: “ರಾಜನ್! ಶೈನೇಯನು ಹೀಗೆ ಹೇಳಿ ಆಚಾರ್ಯನನ್ನು ಅಲ್ಲಿಯೇ ಬಿಟ್ಟು ಒಮ್ಮೆಲೇ ಹೊರಟು ಹೋಗುವಾಗ ಸಾರಥಿಗೆ ಇದನ್ನು ಹೇಳಿದನು:

07088029a ದ್ರೋಣಃ ಕರಿಷ್ಯತೇ ಯತ್ನಂ ಸರ್ವಥಾ ಮಮ ವಾರಣೇ।
07088029c ಯತ್ತೋ ಯಾಹಿ ರಣೇ ಸೂತ ಶೃಣು ಚೇದಂ ವಚಃ ಪರಂ।।

“ಸೂತ! ನನ್ನನ್ನು ತಡೆಯುವಲ್ಲಿ ದ್ರೋಣನು ಸರ್ವಥಾ ಪ್ರಯತ್ನಮಾಡುತ್ತಾನೆ. ಪ್ರಯತ್ನ ಪಟ್ಟು ರಣದಲ್ಲಿ ಓಡಿಸು! ಇನ್ನೂ ಹೆಚ್ಚಿನ ಈ ಮಾತನ್ನು ಕೇಳು!

07088030a ಏತದಾಲೋಕ್ಯತೇ ಸೈನ್ಯಮಾವಂತ್ಯಾನಾಂ ಮಹಾಪ್ರಭಂ।
07088030c ಅಸ್ಯಾನಂತರತಸ್ತ್ವೇತದ್ದಾಕ್ಷಿಣಾತ್ಯಂ ಮಹಾಬಲಂ।।

ಇಲ್ಲಿಂದ ಮಹಾಪ್ರಭೆಯುಳ್ಳ ಅವಂತಿಯವ ಸೇನೆಯು ಕಾಣುತ್ತಿದೆ. ಅದರ ನಂತರ ದಾಕ್ಷಿಣಾತ್ಯರ ಮಹಾಸೇನೆಯಿದೆ.

07088031a ತದನಂತರಮೇತಚ್ಚ ಬಾಹ್ಲಿಕಾನಾಂ ಬಲಂ ಮಹತ್।
07088031c ಬಾಹ್ಲಿಕಾಭ್ಯಾಶತೋ ಯುಕ್ತಂ ಕರ್ಣಸ್ಯಾಪಿ ಮಹದ್ಬಲಂ।।

ಅದರ ನಂತರವಿರುವುದು ಬಾಹ್ಲಿಕರ ಮಹಾ ಸೇನೆ. ಬಾಹ್ಲಿಕರ ಹತ್ತಿರವಿರುವುದು ಕರ್ಣನಿಂದೊಡಗೂಡಿದ ಮಹಾಸೇನೆ.

07088032a ಅನ್ಯೋನ್ಯೇನ ಹಿ ಸೈನ್ಯಾನಿ ಭಿನ್ನಾನ್ಯೇತಾನಿ ಸಾರಥೇ।
07088032c ಅನ್ಯೋನ್ಯಂ ಸಮುಪಾಶ್ರಿತ್ಯ ನ ತ್ಯಕ್ಷ್ಯಂತಿ ರಣಾಜಿರಂ।।

ಸಾರಥೇ! ಆ ಸೇನೆಗಳು ಒಂದಕ್ಕಿಂದ ಒಂದು ಭಿನ್ನವಾಗಿವೆ. ಅನ್ಯೋನ್ಯರನ್ನು ಅವಲಂಬಿಸಿಕೊಂಡಿರುವುದರಿಂದ ಅವು ರಣರಂಗವನ್ನು ಬಿಟ್ಟುಕೊಡುವುದಿಲ್ಲ.

07088033a ಏತದಂತರಮಾಸಾದ್ಯ ಚೋದಯಾಶ್ವಾನ್ಪ್ರಹೃಷ್ಟವತ್।
07088033c ಮಧ್ಯಮಂ ಜವಮಾಸ್ಥಾಯ ವಹ ಮಾಮತ್ರ ಸಾರಥೇ।।
07088034a ಬಾಹ್ಲಿಕಾ ಯತ್ರ ದೃಶ್ಯಂತೇ ನಾನಾಪ್ರಹರಣೋದ್ಯತಾಃ।
07088034c ದಾಕ್ಷಿಣಾತ್ಯಾಶ್ಚ ಬಹವಃ ಸೂತಪುತ್ರಪುರೋಗಮಾಃ।।
07088035a ಹಸ್ತ್ಯಶ್ವರಥಸಂಬಾಧಂ ಯಚ್ಚಾನೀಕಂ ವಿಲೋಕ್ಯತೇ।
07088035c ನಾನಾದೇಶಸಮುತ್ಥೈಶ್ಚ ಪದಾತಿಭಿರಧಿಷ್ಠಿತಂ।।

ಸಾರಥೇ! ಇವುಗಳ ಮಧ್ಯದ ಜಾಗವನ್ನು ಬಳಸಿ ಸಂತೋಷದಿಂದ ಕುದುರೆಗಳನ್ನು ಓಡಿಸು. ಮಧ್ಯಮವೇಗವನ್ನು ಬಳಲಿ ನನ್ನನ್ನು ಅಲ್ಲಿಗೆ - ಎಲ್ಲಿ ನಾನಾಪ್ರಹರಣಗಳನ್ನು ಎತ್ತಿಹಿಡಿದಿರುವ ಬಾಹ್ಲಿಕರು ಕಾಣುತ್ತಾರೋ, ಅನೇಕ ದಾಕ್ಷಿಣಾತ್ಯರು ಇರುವರೋ, ಸೂತಪುತ್ರನ ನಾಯಕತ್ವದಲ್ಲಿ ಕಾಣುತ್ತಿರುವ ಆನೆ-ಕುದುರೆ-ರಥಗಳಿಂದ ಕೂಡಿದ ನಾನಾ ದೇಶಗಳಿಂದ ಒಂದುಗೂಡಿಸಿದ ಪದಾತಿಗಳಿಂದ ಕೂಡಿದ ಯಾವ ಸೇನೆಯು ಕಾಣಿಸುತ್ತದೆಯೋ ಅಲ್ಲಿಗೆ - ಕೊಂಡೊಯ್ಯಿ.”

07088036a ಏತಾವದುಕ್ತ್ವಾ ಯಂತಾರಂ ಬ್ರಹ್ಮಾಣಂ ಪರಿವರ್ಜಯನ್।
07088036c ಸ ವ್ಯತೀಯಾಯ ಯತ್ರೋಗ್ರಂ ಕರ್ಣಸ್ಯ ಸುಮಹದ್ಬಲಂ।।

ಹೀಗೆ ಸಾರಥಿಗೆ ಹೇಳಿ ಬ್ರಾಹ್ಮಣನನ್ನು ಪರಿತ್ಯಜಿಸಿ ಅವನು ಎಲ್ಲಿ ಕರ್ಣನ ಉಗ್ರ ಮಹಾಸೇನೆಯಿದೆಯೋ ಅಲ್ಲಿಗೆ ಹೊರಟನು.

07088037a ತಂ ದ್ರೋಣೋಽನುಯಯೌ ಕ್ರುದ್ಧೋ ವಿಕಿರನ್ವಿಶಿಖಾನ್ಬಹೂನ್।
07088037c ಯುಯುಧಾನಂ ಮಹಾಬಾಹುಂ ಗಚ್ಚಂತಮನಿವರ್ತಿನಂ।।

ಹಾಗೆ ಹೋಗುತ್ತಿರುವ ಆ ಮಹಾಬಾಹು ಯುಯುಧಾನನನ್ನು ಕ್ರುದ್ಧನಾದ ದ್ರೋಣನು ಅನೇಕ ವಿಶಿಖಗಳನ್ನು ಹರಡುತ್ತಾ ಹಿಂಬಾಲಿಸಿ ಹೋದನು.

07088038a ಕರ್ಣಸ್ಯ ಸೈನ್ಯಂ ಸುಮಹದಭಿಹತ್ಯ ಶಿತೈಃ ಶರೈಃ।
07088038c ಪ್ರಾವಿಶದ್ಭಾರತೀಂ ಸೇನಾಮಪರ್ಯಂತಾಂ ಸ ಸಾತ್ಯಕಿಃ।।

ಕರ್ಣನ ಸೇನೆಯನ್ನು ನಿಶಿತ ಶರಗಳಿಂದ ಜೋರಾಗಿ ಹೊಡೆದು ಆ ಸಾತ್ಯಕಿಯು ಅಪಾರವಾದ ಭಾರತೀಸೇನೆಯನ್ನು ಪ್ರವೇಶಿಸಿದನು.

07088039a ಪ್ರವಿಷ್ಟೇ ಯುಯುಧಾನೇ ತು ಸೈನಿಕೇಷು ದ್ರುತೇಷು ಚ।
07088039c ಅಮರ್ಷೀ ಕೃತವರ್ಮಾ ತು ಸಾತ್ಯಕಿಂ ಪರ್ಯವಾರಯತ್।।

ಯುಯುಧಾನನು ಪ್ರವೇಶಿಸಿಸಲು ಸೈನಿಕರು ಓಡತೊಡಗಿದರು. ಆಗ ಅಸಹನಶೀಲ ಕೃತವರ್ಮನು ಸಾತ್ಯಕಿಯನ್ನು ಮುತ್ತಿದನು.

07088040a ತಮಾಪತಂತಂ ವಿಶಿಖೈಃ ಷಡ್ಭಿರಾಹತ್ಯ ಸಾತ್ಯಕಿಃ।
07088040c ಚತುರ್ಭಿಶ್ಚತುರೋಽಸ್ಯಾಶ್ವಾನಾಜಘಾನಾಶು ವೀರ್ಯವಾನ್।।

ಮೇಲೆ ಎರಗುತ್ತಿದ್ದ ಅವನನ್ನು ಸಾತ್ಯಕಿಯು ಆರು ವಿಶಿಖಗಳಿಂದ ಹೊಡೆದನು ಮತ್ತು ಆ ವೀರ್ಯವಾನನು ನಾಲ್ಕರಿಂದ ಅವನ ನಾಲ್ಕು ಕುದುರೆಗಳನ್ನು ಹೊಡೆದನು.

07088041a ತತಃ ಪುನಃ ಷೋಡಶಭಿರ್ನತಪರ್ವಭಿರಾಶುಗೈಃ।
07088041c ಸಾತ್ಯಕಿಃ ಕೃತವರ್ಮಾಣಂ ಪ್ರತ್ಯವಿಧ್ಯತ್ ಸ್ತನಾಂತರೇ।।

ಅನಂತರ ಪುನಃ ಹದಿನಾರು ನತಪರ್ವ ಆಶುಗಗಳಿಂದ ಸಾತ್ಯಕಿಯು ಕೃತವರ್ಮನ ಎದೆಗೆ ಹೊಡೆದನು.

07088042a ಸ ತುದ್ಯಮಾನೋ ವಿಶಿಖೈರ್ಬಹುಭಿಸ್ತಿಗ್ಮತೇಜನೈಃ।
07088042c ಸಾತ್ವತೇನ ಮಹಾರಾಜ ಕೃತವರ್ಮಾ ನ ಚಕ್ಷಮೇ।।

ಮಹಾರಾಜ! ಸಾತ್ವತನ ಬಹಳ ತೀಕ್ಷ್ಣ ತೇಜಸ್ಸುಳ್ಳ ಅನೇಕ ವಿಶಿಖಗಳಿಂದ ಪೆಟ್ಟುತಿಂದ ಕೃತವರ್ಮನು ಸಹಿಸಿಕೊಳ್ಳಲಿಲ್ಲ.

07088043a ಸ ವತ್ಸದಂತಂ ಸಂಧಾಯ ಜಿಹ್ಮಗಾನಲಸನ್ನಿಭಂ।
07088043c ಆಕೃಷ್ಯ ರಾಜನ್ನಾಕರ್ಣಾದ್ವಿವ್ಯಾಧೋರಸಿ ಸಾತ್ಯಕಿಂ।।

ರಾಜನ್! ಅವನು ಅಗ್ನಿಯ ಜ್ವಾಲೆಗೆ ಸಮನಾದ ವತ್ಸದಂತವನ್ನು ಹೂಡಿ ಕಿವಿಯವರೆಗೂ ಎಳೆದು ಸಾತ್ಯಕಿಯ ಎದೆಗೆ ಹೊಡೆದನು.

07088044a ಸ ತಸ್ಯ ದೇಹಾವರಣಂ ಭಿತ್ತ್ವಾ ದೇಹಂ ಚ ಸಾಯಕಃ।
07088044c ಸಪತ್ರಪುಂಖಃ ಪೃಥಿವೀಂ ವಿವೇಶ ರುಧಿರೋಕ್ಷಿತಃ।।

ಅದು ಅವನ ದೇಹದ ಕವಚವನ್ನು ಮತ್ತು ಶರೀರವನ್ನು ಭೇದಿಸಿ ಪತ್ರಪುಂಖಗಳೊಂದಿಗೆ ರಕ್ತದಲ್ಲಿ ತೋಯ್ದು ಭೂಮಿಯನ್ನು ಪ್ರವೇಶಿಸಿತು.

07088045a ಅಥಾಸ್ಯ ಬಹುಭಿರ್ಬಾಣೈರಚ್ಚಿನತ್ಪರಮಾಸ್ತ್ರವಿತ್।
07088045c ಸಮಾರ್ಗಣಗುಣಂ ರಾಜನ್ಕೃತವರ್ಮಾ ಶರಾಸನಂ।।

ರಾಜನ್! ಆಗ ಪರಮಾಸ್ತ್ರವಿದು ಕೃತವರ್ಮನು ಅನೇಕ ಬಾಣಗಳಿಂದ ಮಾರ್ಗಣಗಳಿಂದೊಡಗೂಡಿದ ಅವನ ಧನುಸ್ಸನ್ನು ಕತ್ತರಿಸಿದನು.

07088046a ವಿವ್ಯಾಧ ಚ ರಣೇ ರಾಜನ್ಸಾತ್ಯಕಿಂ ಸತ್ಯವಿಕ್ರಮಂ।
07088046c ದಶಭಿರ್ವಿಶಿಖೈಸ್ತೀಕ್ಷ್ಣೈರಭಿಕ್ರುದ್ಧಃ ಸ್ತನಾಂತರೇ।।

ರಾಜನ್! ರಣದಲ್ಲಿ ಕ್ರುದ್ಧನಾಗಿ ಅವನು ಸತ್ಯವಿಕ್ರಮಿ ಸಾತ್ಯಕಿಯ ಎದೆಗೆ ಹತ್ತು ತೀಕ್ಷ್ಣ ವಿಶಿಖಗಳಿಂದ ಹೊಡೆದನು.

07088047a ತತಃ ಪ್ರಶೀರ್ಣೇ ಧನುಷಿ ಶಕ್ತ್ಯಾ ಶಕ್ತಿಮತಾಂ ವರಃ।
07088047c ಅಭ್ಯಹನ್ದಕ್ಷಿಣಂ ಬಾಹುಂ ಸಾತ್ಯಕಿಃ ಕೃತವರ್ಮಣಃ।।

ಧನುಸ್ಸು ತುಂಡಾಗಿ ಹೋಗಲು ಶಕ್ತಿಮತರಲ್ಲಿ ಶ್ರೇಷ್ಠ ಸಾತ್ಯಕಿಯು ಶಕ್ತಿಯಿಂದ ಕೃತವರ್ಮನ ಬಲತೋಳಿಗೆ ಹೊಡೆದನು.

07088048a ತತೋಽನ್ಯತ್ಸುದೃಢಂ ವೀರೋ ಧನುರಾದಾಯ ಸಾತ್ಯಕಿಃ।
07088048c ವ್ಯಸೃಜದ್ವಿಶಿಖಾಂಸ್ತೂರ್ಣಂ ಶತಶೋಽಥ ಸಹಸ್ರಶಃ।।

ಅನಂತರ ವೀರ ಸಾತ್ಯಕಿಯು ತಕ್ಷಣವೇ ಇನ್ನೊಂದು ಸುದೃಢವಾದ ಧನುಸ್ಸನ್ನು ತೆಗೆದುಕೊಂಡು ನೂರಾರು ಸಹಸ್ರಾರು ವಿಶಿಖಗಳನ್ನು ಬಿಟ್ಟನು.

07088049a ಸರಥಂ ಕೃತವರ್ಮಾಣಂ ಸಮಂತಾತ್ಪರ್ಯವಾಕಿರತ್।
07088049c ಚಾದಯಿತ್ವಾ ರಣೇಽತ್ಯರ್ಥಂ ಹಾರ್ದಿಕ್ಯಂ ತು ಸ ಸಾತ್ಯಕಿಃ।।

ಕೃತವರ್ಮನ ರಥವನ್ನು ಎಲ್ಲ ಕಡೆಗಳಿಂದ ಆಕ್ರಮಣಿಸಿ, ಆ ಸಾತ್ಯಕಿಯು ರಣದಲ್ಲಿ ಹಾರ್ದಿಕ್ಯನನ್ನು ಸಂಪೂರ್ಣವಾಗಿ ಮುಚ್ಚಿಬಿಟ್ಟನು.

07088050a ಅಥಾಸ್ಯ ಭಲ್ಲೇನ ಶಿರಃ ಸಾರಥೇಃ ಸಮಕೃಂತತ।
07088050c ಸ ಪಪಾತ ಹತಃ ಸೂತೋ ಹಾರ್ದಿಕ್ಯಸ್ಯ ಮಹಾರಥಾತ್।।

ಆಗ ಭಲ್ಲದಿಂದ ಸಾರಥಿಯ ಶಿರವನ್ನು ಕತ್ತರಿಸಲು ಹಾರ್ದಿಕ್ಯನ ಸೂತನು ಮಹಾರಥದಿಂದ ಹತನಾಗಿ ಬಿದ್ದನು.

07088050e ತತಸ್ತೇ ಯಂತರಿ ಹತೇ ಪ್ರಾದ್ರವಂಸ್ತುರಗಾ ಭೃಶಂ।।
07088051a ಅಥ ಭೋಜಸ್ತ್ವಸಂಭ್ರಾಂತೋ ನಿಗೃಹ್ಯ ತುರಗಾನ್ಸ್ವಯಂ।
07088051c ತಸ್ಥೌ ಶರಧನುಷ್ಪಾಣಿಸ್ತತ್ಸೈನ್ಯಾನ್ಯಭ್ಯಪೂಜಯನ್।।
07088052a ಸ ಮುಹೂರ್ತಮಿವಾಶ್ವಸ್ಯ ಸದಶ್ವಾನ್ಸಮಚೋದಯತ್।
07088052c ವ್ಯಪೇತಭೀರಮಿತ್ರಾಣಾಮಾವಹತ್ ಸುಮಹದ್ಭಯಂ।

ಸಾರಥಿಯು ಹತನಾಗಲು ಕುದುರೆಗಳು ತುಂಬಾ ಓಡತೊಡಗಿದವು. ಆಗ ಭೋಜನು ಸಂಭ್ರಾಂತನಾಗದೇ ಸ್ವಯಂ ತಾನೇ ಕುದುರೆಗಳನ್ನು ನಿಯಂತ್ರಿಸಿ, ಧನುಸ್ಸನ್ನು ಹಿಡಿದು ರಥದಲ್ಲಿ ಕುಳಿತನು. ಅವನನ್ನು ಸೇನೆಗಳು ಶ್ಲಾಘಿಸಿದವು. ಕ್ಷಣಕಾಲ ಸುಧಾರಿಸಿಕೊಂಡು ಕುದುರೆಗಳನ್ನು ಚಪ್ಪರಿಸಿ, ಹೇಡಿಗಳಿಗೂ ಶತ್ರುಗಳಿಗೂ ಮಹಾಭಯವನ್ನುಂಟುಮಾಡಿದನು.

07088052e ಸಾತ್ಯಕಿಶ್ಚಾಭ್ಯಗಾತ್ತಸ್ಮಾತ್ಸ ತು ಭೀಮಮುಪಾದ್ರವತ್।।
07088053a ಯುಯುಧಾನೋಽಪಿ ರಾಜೇಂದ್ರ ದ್ರೋಣಾನೀಕಾದ್ವಿನಿಃಸೃತಃ।
07088053c ಪ್ರಯಯೌ ತ್ವರಿತಸ್ತೂರ್ಣಂ ಕಾಂಬೋಜಾನಾಂ ಮಹಾಚಮೂಂ।।

ಅಷ್ಟರಲ್ಲಿಯೇ ಸಾತ್ಯಕಿಯು ಅಲ್ಲಿಂದ ಹೋದನು. ಆದರೆ ಭೀಮನು ಕೃತವರ್ಮನನ್ನು ಆಕ್ರಮಣಿಸಿದನು. ರಾಜೇಂದ್ರ! ಯುಯುಧಾನನಾದರೋ ದ್ರೋಣನ ಸೇನೆಯಿಂದ ಬಿಡುಗಡೆಹೊಂದಿ ತಕ್ಷಣವೇ ತ್ವರೆಮಾಡಿ ಕಾಂಬೋಜರ ಮಹಾಸೇನೆಯತ್ತ ತೆರಳಿದನು.

07088054a ಸ ತತ್ರ ಬಹುಭಿಃ ಶೂರೈಃ ಸನ್ನಿರುದ್ಧೋ ಮಹಾರಥೈಃ।
07088054c ನ ಚಚಾಲ ತದಾ ರಾಜನ್ಸಾತ್ಯಕಿಃ ಸತ್ಯವಿಕ್ರಮಃ।।

ಅಲ್ಲಿ ಅವನು ಶೂರರಾದ ಅನೇಕ ಮಹಾರಥರಿಂದ ತಡೆಯಲಟ್ಟನು. ರಾಜನ್! ಆಗ ಸತ್ಯವಿಕ್ರಮಿ ಸಾತ್ಯಕಿಯು ಸ್ವಲ್ಪವೂ ವಿಚಲಿತನಾಗಲಿಲ್ಲ.

07088055a ಸಂಧಾಯ ಚ ಚಮೂಂ ದ್ರೋಣೋ ಭೋಜೇ ಭಾರಂ ನಿವೇಶ್ಯ ಚ।
07088055c ಅನ್ವಧಾವದ್ರಣೇ ಯತ್ತೋ ಯುಯುಧಾನಂ ಯುಯುತ್ಸಯಾ।।

ದ್ರೋಣನು ಸೇನೆಗಳನ್ನು ಒಂದುಗೂಡಿಸಿ ಅವುಗಳ ಭಾರವನ್ನು ಭೋಜನಿಗೆ ಒಪ್ಪಿಸಿ ಯುಯುಧಾನನೊಡನೆ ಯುದ್ಧಮಾಡಲು ಬಯಸಿ ಅವನ ಹಿಂದೆ ಹೋದನು.

07088056a ತಥಾ ತಮನುಧಾವಂತಂ ಯುಯುಧಾನಸ್ಯ ಪೃಷ್ಠತಃ।
07088056c ನ್ಯವಾರಯಂತ ಸಂಕ್ರುದ್ಧಾಃ ಪಾಂಡುಸೈನ್ಯೇ ಬೃಹತ್ತಮಾಃ।।

ಹಾಗೆ ಯುಯುಧಾನನ ಹಿಂದೆ ಹೋಗುತ್ತಿದ್ದ ಅವನನ್ನು ಪಾಂಡವರ ಬೃಹತ್ತಮ ಸಂಕ್ರುದ್ಧ ಸೇನೆಯು ತಡೆಯಿತು.

07088057a ಸಮಾಸಾದ್ಯ ತು ಹಾರ್ದಿಕ್ಯಂ ರಥಾನಾಂ ಪ್ರವರಂ ರಥಂ।
07088057c ಪಾಂಚಾಲಾ ವಿಗತೋತ್ಸಾಹಾ ಭೀಮಸೇನಪುರೋಗಮಾಃ।
07088057e ವಿಕ್ರಮ್ಯ ವಾರಿತಾ ರಾಜನ್ವೀರೇಣ ಕೃತವರ್ಮಣಾ।।

ರಾಜನ್! ರಥಿಗಳಲ್ಲಿ ಪ್ರವರನಾದ ಹಾರ್ದಿಕ್ಯನ ರಥದ ಬಳಿ ಭೀಮಸೇನನನ್ನು ಮುಂದಿಟ್ಟುಕೊಂಡು ಹೋದ ಪಾಂಚಾಲರು ವೀರ ಕೃತವರ್ಮನ ವಿಕ್ರಮದಿಂದ ತಡೆಯಲ್ಪಟ್ಟು ಉತ್ಸಾಹವನ್ನು ಕಳೆದುಕೊಂಡರು.

07088058a ಯತಮಾನಾಂಸ್ತು ತಾನ್ಸರ್ವಾನೀಷದ್ವಿಗತಚೇತಸಃ।
07088058c ಅಭಿತಸ್ತಾಂ ಶರೌಘೇಣ ಕ್ಲಾಂತವಾಹಾನವಾರಯತ್।।

ಪ್ರಯತ್ನಿಸುತ್ತಿದ್ದ ಆ ಎಲ್ಲ ಸೇನೆಗಳನ್ನೂ ಅವನು ಶರೌಘಗಳಿಂದ ಹೊಡೆದು ಮೂರ್ಛೆಗೊಳಿಸಿ ಸೋಲಿಸಿ ತಡೆದನು.

07088059a ನಿಗೃಹೀತಾಸ್ತು ಭೋಜೇನ ಭೋಜಾನೀಕೇಪ್ಸವೋ ರಣೇ।
07088059c ಅತಿಷ್ಠನ್ನಾರ್ಯವದ್ವೀರಾಃ ಪ್ರಾರ್ಥಯಂತೋ ಮಹದ್ಯಶಃ।।

ಭೋಜ ಕೃತವರ್ಮನಿಂದ ಹೀಗೆ ತಡೆಹಿಡಿಯಲ್ಪಟ್ಟ ಆ ವೀರರು ಮಹಾಯಶಸ್ಸನ್ನು ಬಯಸುತ್ತಾ ರಣದಲ್ಲಿ ಭೋಜನ ಸೇನೆಯೊಂದಿಗೆ ಯುದ್ಧಮಾಡತೊಡಗಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ಜಯದ್ರಥವಧಪರ್ವಣಿ ಸಾತ್ಯಕಿಪ್ರವೇಶೇ ಅಷ್ಠಾಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ಜಯದ್ರಥವಧಪರ್ವದಲ್ಲಿ ಸಾತ್ಯಕಿಪ್ರವೇಶ ಎನ್ನುವ ಎಂಭತ್ತೆಂಟನೇ ಅಧ್ಯಾಯವು.