ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 87
ಸಾರ
ಅರ್ಜುನನಿದ್ದೆಡೆಗೆ ಹೋಗುತ್ತೇನೆಂದು ಸಾತ್ಯಕಿಯು ಯುಧಿಷ್ಠಿರನಿಗೆ ಹೇಳಿದುದು (1-52). ರಥವನ್ನು ಸಿದ್ಧಪಡಿಸಿ, ತಾನೂ ಸಿದ್ಧನಾಗಿ, ಭೀಮಸೇನನಿಗೆ ಯುಧಿಷ್ಠಿರನನ್ನು ರಕ್ಷಿಸುವಂತೆ ಹೇಳಿ ಬೀಳ್ಕೊಂಡು ಸಾತ್ಯಕಿಯು ಕೌರವ ಸೇನೆಯನ್ನು ಪ್ರವೇಶಿಸಿದುದು (53-75).
07087001 ಸಂಜಯ ಉವಾಚ।
07087001a ಧರ್ಮರಾಜಸ್ಯ ತದ್ವಾಕ್ಯಂ ನಿಶಮ್ಯ ಶಿನಿಪುಂಗವಃ।
07087001c ಪಾರ್ಥಾಚ್ಚ ಭಯಮಾಶಂಕನ್ಪರಿತ್ಯಾಗಾನ್ಮಹೀಪತೇಃ।।
ಸಂಜಯನು ಹೇಳಿದನು: “ಧರ್ಮರಾಜನ ಆ ಮಾತನ್ನು ಕೇಳಿ ಶಿನಿಪುಂಗವನು ಮಹೀಪತಿಯನ್ನು ಬಿಟ್ಟುಹೋದರೆ ಪಾರ್ಥನು ಏನು ಹೇಳುವನೋ ಎಂದು ಹೆದರಿ ಶಂಕಿಸಿದನು.
07087002a ಅಪವಾದಂ ಹ್ಯಾತ್ಮನಶ್ಚ ಲೋಕಾದ್ರಕ್ಷನ್ವಿಶೇಷತಃ।
07087002c ನ ಮಾಂ ಭೀತ ಇತಿ ಬ್ರೂಯುರಾಯಾಂತಂ ಫಲ್ಗುನಂ ಪ್ರತಿ।।
ಭೀತಿಯಿಂದ ನಾನು ಫಲ್ಗುನನ್ನು ರಕ್ಷಿಸಲು ಹೋಗಲಿಲ್ಲ ಎಂದು ಜನರು ನನ್ನ ಮೇಲೆ ವಿಶೇಷ ಅಪರಾಧವನ್ನು ಹೊರಿಸದಿರಲಿ ಎಂದು ಅಂದುಕೊಂಡನು.
07087003a ನಿಶ್ಚಿತ್ಯ ಬಹುಧೈವಂ ಸ ಸಾತ್ಯಕಿರ್ಯುದ್ಧದುರ್ಮದಃ।
07087003c ಧರ್ಮರಾಜಮಿದಂ ವಾಕ್ಯಮಬ್ರವೀತ್ಪುರುಷರ್ಷಭ।।
ಪುರುಷರ್ಷಭ! ಬಹುವಿಧದಲ್ಲಿ ಯೋಚಿಸಿ ನಿರ್ಧರಿಸಿ ಯುದ್ಧದುರ್ಮದ ಸಾತ್ಯಕಿಯು ಧರ್ಮರಾಜನಿಗೆ ಈ ಮಾತನ್ನಾಡಿದನು:
07087004a ಕೃತಾಂ ಚೇನ್ಮನ್ಯಸೇ ರಕ್ಷಾಂ ಸ್ವಸ್ತಿ ತೇಽಸ್ತು ವಿಶಾಂ ಪತೇ।
07087004c ಅನುಯಾಸ್ಯಾಮಿ ಬೀಭತ್ಸುಂ ಕರಿಷ್ಯೇ ವಚನಂ ತವ।।
“ವಿಶಾಂಪತೇ! ನಿನ್ನ ರಕ್ಷಣೆಗೆ ವ್ಯವಸ್ಥೆ ಮಾಡಿಯಾಗಿದೆ ಎಂದು ನಿನಗನ್ನಿಸಿದರೆ, ನಿನ್ನ ಮಾತಿನಂತೆ ಮಾಡುತ್ತೇನೆ. ಬೀಭತ್ಸುವನ್ನು ಅನುಸರಿಸಿ ಹೋಗುತ್ತೇನೆ. ನಿನಗೆ ಮಂಗಳವಾಗಲಿ!
07087005a ನ ಹಿ ಮೇ ಪಾಂಡವಾತ್ಕಶ್ಚಿತ್ತ್ರಿಷು ಲೋಕೇಷು ವಿದ್ಯತೇ।
07087005c ಯೋ ವೈ ಪ್ರಿಯತರೋ ರಾಜನ್ಸತ್ಯಮೇತದ್ಬ್ರವೀಮಿ ತೇ।।
ರಾಜನ್! ಆ ಪಾಂಡವನಿಗಿಂತ ಪ್ರಿಯರಾದವರು ಈ ಮೂರು ಲೋಕಗಳಲ್ಲಿ ಯಾರೂ ಇಲ್ಲ. ನಿಜವನ್ನೇ ನಿನಗೆ ಹೇಳುತ್ತಿದ್ದೇನೆ.
07087006a ತಸ್ಯಾಹಂ ಪದವೀಂ ಯಾಸ್ಯೇ ಸಂದೇಶಾತ್ತವ ಮಾನದ।
07087006c ತ್ವತ್ಕೃತೇ ನ ಚ ಮೇ ಕಿಂ ಚಿದಕರ್ತವ್ಯಂ ಕಥಂ ಚನ।।
ಮಾನದ! ನಿನ್ನ ಸಂದೇಶದಂತೆ ನಾನು ಅವನಿದ್ದಲ್ಲಿಗೆ ಹೋಗುತ್ತೇನೆ. ನೀನು ಏನು ಹೇಳಿದರೂ ಅದನ್ನು ನಾನು ಎಂದೂ ಮಾಡದೇ ಇರುವುದಿಲ್ಲ.
07087007a ಯಥಾ ಹಿ ಮೇ ಗುರೋರ್ವಾಕ್ಯಂ ವಿಶಿಷ್ಟಂ ದ್ವಿಪದಾಂ ವರ।
07087007c ತಥಾ ತವಾಪಿ ವಚನಂ ವಿಶಿಷ್ಟತರಮೇವ ಮೇ।।
ದ್ವಿಪದರಲ್ಲಿ ಶ್ರೇಷ್ಠ! ಹಿರಿಯರ ವಾಕ್ಯವು ನನಗೆ ವಿಶಿಷ್ಟವಾದುದು. ಅದರಲ್ಲೂ ನಿನ್ನ ವಚನವು ನನಗೆ ಅತ್ಯಂತ ವಿಶಿಷ್ಟವಾದುದು.
07087008a ಪ್ರಿಯೇ ಹಿ ತವ ವರ್ತೇತೇ ಭ್ರಾತರೌ ಕೃಷ್ಣಪಾಂಡವೌ।
07087008c ತಯೋಃ ಪ್ರಿಯೇ ಸ್ಥಿತಂ ಚೈವ ವಿದ್ಧಿ ಮಾಂ ರಾಜಪುಂಗವ।।
ರಾಜಪುಂಗವ! ಸಹೋದರರಾದ ಕೃಷ್ಣ-ಪಾಂಡವರು ನಿನ್ನ ಮಾತಿನಂತೆಯೇ ನಡೆದುಕೊಳ್ಳುವವರು. ನಿನಗೆ ಪ್ರಿಯವಾದುದರಲ್ಲಿಯೇ ತೊಡಗಿರುತ್ತಾರೆ. ಅದು ನನಗೆ ತಿಳಿದಿದೆ.
07087009a ತವಾಜ್ಞಾಂ ಶಿರಸಾ ಗೃಹ್ಯ ಪಾಂಡವಾರ್ಥಮಹಂ ಪ್ರಭೋ।
07087009c ಭಿತ್ತ್ವೇದಂ ದುರ್ಭಿದಂ ಸೈನ್ಯಂ ಪ್ರಯಾಸ್ಯೇ ನರಸತ್ತಮ।।
ಪ್ರಭೋ! ನರಸತ್ತಮ! ನಿನ್ನ ಆಜ್ಞೆಯನ್ನು ಶಿರಸಾ ಧರಿಸಿ ಪಾಂಡವನಿಗೋಸ್ಕರವಾಗಿ ನಾನು ದುರ್ಭೇದ್ಯವಾದ ಈ ಸೇನೆಯನ್ನು ಭೇದಿಸಿ ಹೋಗುತ್ತೇನೆ.
07087010a ದ್ರೋಣಾನೀಕಂ ವಿಶಾಮ್ಯೇಷ ಕ್ರುದ್ಧೋ ಝಷ ಇವಾರ್ಣವಂ।
07087010c ತತ್ರ ಯಾಸ್ಯಾಮಿ ಯತ್ರಾಸೌ ರಾಜನ್ರಾಜಾ ಜಯದ್ರಥಃ।।
07087011a ಯತ್ರ ಸೇನಾಂ ಸಮಾಶ್ರಿತ್ಯ ಭೀತಸ್ತಿಷ್ಠತಿ ಪಾಂಡವಾತ್।
07087011c ಗುಪ್ತೋ ರಥವರಶ್ರೇಷ್ಠೈರ್ದ್ರೌಣಿಕರ್ಣಕೃಪಾದಿಭಿಃ।।
ತಿಮಿಂಗಿಲವು ಸಮುದ್ರವನ್ನು ಹೇಗೋ ಹಾಗೆ ಈ ದ್ರೋಣಸೇನೆಯನ್ನು ಪ್ರವೇಶಿಸಿ ಎಲ್ಲಿ ಪಾಂಡವನಿಗೆ ಹೆದರಿ ರಥವರಶ್ರೇಷ್ಠರಾದ ದ್ರೌಣಿ-ಕರ್ಣ-ಕೃಪಾದಿಗಳಿಂದ ರಕ್ಷಿತನಾಗಿ, ಸೇನೆಗಳನ್ನು ಆಶ್ರಯಿಸಿ ರಾಜಾ ಜಯದ್ರಥನು ನಿಂತಿದ್ದಾನೋ ಅಲ್ಲಿಗೆ ಹೋಗುತ್ತೇನೆ.
07087012a ಇತಸ್ತ್ರಿಯೋಜನಂ ಮನ್ಯೇ ತಮಧ್ವಾನಂ ವಿಶಾಂ ಪತೇ।
07087012c ಯತ್ರ ತಿಷ್ಠತಿ ಪಾರ್ಥೋಽಸೌ ಜಯದ್ರಥವಧೋದ್ಯತಃ।।
ವಿಶಾಂಪತೇ! ಜಯದ್ರಥನ ವಧೆಗೆ ಸಿದ್ಧನಾಗಿ ಪಾರ್ಥನು ನಿಂತಿರುವ ಸ್ಥಳವು ಇಲ್ಲಿಂದ ಮೂರು ಯೋಜನೆಗಳಿವೆ ಎಂದು ನನಗನ್ನಿಸುತ್ತದೆ.
07087013a ತ್ರಿಯೋಜನಗತಸ್ಯಾಪಿ ತಸ್ಯ ಯಾಸ್ಯಾಮ್ಯಹಂ ಪದಂ।
07087013c ಆಸೈಂಧವವಧಾದ್ರಾಜನ್ಸುದೃಢೇನಾಂತರಾತ್ಮನಾ।।
ರಾಜನ್! ಮೂರು ಯೋಜನೆಗಳು ಹೋಗಬೇಕಾದರೂ ನಾನು ಅಂತರಾತ್ಮದಲ್ಲಿ ಸುದೃಢನಾಗಿದ್ದು ಸೈಂಧವನ ವಧೆಯಾಗುವವರೆಗೆ ಅಲ್ಲಿ ಇರುತ್ತೇನೆ.
07087014a ಅನಾದಿಷ್ಟಸ್ತು ಗುರುಣಾ ಕೋ ನು ಯುಧ್ಯೇತ ಮಾನವಃ।
07087014c ಆದಿಷ್ಟಸ್ತು ತ್ವಯಾ ರಾಜನ್ಕೋ ನ ಯುಧ್ಯೇತ ಮಾದೃಶಃ।
07087014e ಅಭಿಜಾನಾಮಿ ತಂ ದೇಶಂ ಯತ್ರ ಯಾಸ್ಯಾಮ್ಯಹಂ ಪ್ರಭೋ।।
ಹಿರಿಯರ ಆದೇಶವಿಲ್ಲದೇ ಯಾವ ಮನುಷ್ಯನು ಯುದ್ಧಮಾಡುತ್ತಾನೆ? ರಾಜನ್! ನಿನ್ನಿಂದ ಆದೇಶವನ್ನು ಪಡೆದು ನನ್ನಂತಹ ಯಾರು ತಾನೇ ಯುದ್ಧಮಾಡುವುದಿಲ್ಲ? ಪ್ರಭೋ! ನಾನು ಎಲ್ಲಿಗೆ ಹೋಗುತ್ತಿರುವೆನೋ ಆ ಪ್ರದೇಶವನ್ನು ನಾನು ತಿಳಿದಿದ್ದೇನೆ.
07087015a ಹುಡಶಕ್ತಿಗದಾಪ್ರಾಸಖಡ್ಗಚರ್ಮರ್ಷ್ಟಿತೋಮರಂ।
07087015c ಇಷ್ವಸ್ತ್ರವರಸಂಬಾಧಂ ಕ್ಷೋಭಯಿಷ್ಯೇ ಬಲಾರ್ಣವಂ।।
ಕೊಡಲಿ, ಶಕ್ತಿ, ಗದೆ, ಪ್ರಾಸ, ಖಡ್ಗ, ಚರ್ಮ, ಋಷ್ಟಿ, ತೋಮರ, ಮತ್ತು ಶ್ರೇಷ್ಠ ಶರಗಳಿಂದ ಈ ಸೇನಾಸಾಗರವನ್ನು ಬಾಧಿಸಿ ಕ್ಷೋಭೆಗೊಳಿಸುತ್ತೇನೆ.
07087016a ಯದೇತತ್ಕುಂಜರಾನೀಕಂ ಸಾಹಸ್ರಮನುಪಶ್ಯಸಿ।
07087016c ಕುಲಮಂಜನಕಂ ನಾಮ ಯತ್ರೈತೇ ವೀರ್ಯಶಾಲಿನಃ।।
ಇದೇನು ನೋಡುತ್ತಿರುವೆಯಲ್ಲ ಆ ಸಹಸ್ರ ಆನೆಗಳ ಸೇನೆಯು ವೀರ್ಯಶಾಲಿ ಅಂಜನಕ ಎಂಬ ಹೆಸರಿನ ಕುಲದವು.
07087017a ಆಸ್ಥಿತಾ ಬಹುಭಿರ್ಮ್ಲೇಚ್ಚೈರ್ಯುದ್ಧಶೌಂಡೈಃ ಪ್ರಹಾರಿಭಿಃ।
07087017c ನಾಗಾ ಮೇಘನಿಭಾ ರಾಜನ್ ಕ್ಷರಂತ ಇವ ತೋಯದಾಃ।।
ರಾಜನ್! ನೀರು ಸುರಿಸುವ ಮೋಡಗಳಂತೆ ಮದೋದಕವನ್ನು ಸುರಿಸುವ ಈ ಆನೆಗಳ ಮೇಲೆ ಅನೇಕ ಯುದ್ಧಶೌಂಡ ಪ್ರಹಾರಿ ಮ್ಲೇಚ್ಛರು ಇದ್ದಾರೆ.
07087018a ನೈತೇ ಜಾತು ನಿವರ್ತೇರನ್ಪ್ರೇಷಿತಾ ಹಸ್ತಿಸಾದಿಭಿಃ।
07087018c ಅನ್ಯತ್ರ ಹಿ ವಧಾದೇಷಾಂ ನಾಸ್ತಿ ರಾಜನ್ ಪರಾಜಯಃ।।
ರಾಜನ್! ಮಾವುತರಿಂದ ಕಳುಹಿಸಲ್ಪಡದೇ ಇವು ಪಲಾಯನಮಾಡುವುದಿಲ್ಲ. ಇವುಗಳನ್ನು ಕೊಲ್ಲದೆಯೇ ಪರಾಜಯಗೊಳಿಸಲಾಗುವುದಿಲ್ಲ.
07087019a ಅಥ ಯಾನ್ರಥಿನೋ ರಾಜನ್ಸಮಂತಾದನುಪಶ್ಯಸಿ।
07087019c ಏತೇ ರುಕ್ಮರಥಾ ನಾಮ ರಾಜಪುತ್ರಾ ಮಹಾರಥಾಃ।।
ರಾಜನ್! ಅದೋ ನೀನು ನೋಡುತ್ತಿರುವ ರಥಿಗಳ ಗುಂಪಿದೆಯಲ್ಲ ಅದು ರುಕ್ಮರಥರೆಂಬ ಹೆಸರಿನ ಮಹಾರಥ ರಾಜಪುತ್ರರು.
07087020a ರಥೇಷ್ವಸ್ತ್ರೇಷು ನಿಪುಣಾ ನಾಗೇಷು ಚ ವಿಶಾಂ ಪತೇ।
07087020c ಧನುರ್ವೇದೇ ಗತಾಃ ಪಾರಂ ಮುಷ್ಟಿಯುದ್ಧೇ ಚ ಕೋವಿದಾಃ।।
ವಿಶಾಂಪತೇ! ಅವರು ರಥಯುದ್ಧದಲ್ಲಿ, ಅಸ್ತ್ರಗಳಲ್ಲಿ ಮತ್ತು ಆನೆಗಳ ಮೇಲಿಂದ ಯುದ್ಧಮಾಡುವುದರಲ್ಲಿ ನಿಪುಣರು; ಧನುರ್ವೇದದಲ್ಲಿ ಪಾರಂಗತರು ಮತ್ತು ಮುಷ್ಟಿಯುದ್ಧದಲ್ಲಿ ಕೋವಿದರು.
07087021a ಗದಾಯುದ್ಧವಿಶೇಷಜ್ಞಾ ನಿಯುದ್ಧಕುಶಲಾಸ್ತಥಾ।
07087021c ಖಡ್ಗಪ್ರಹರಣೇ ಯುಕ್ತಾಃ ಸಂಪಾತೇ ಚಾಸಿಚರ್ಮಣೋಃ।।
ಗದಾಯುದ್ಧದಲ್ಲಿ ವಿಶೇಷಜ್ಞರಾದ ಅವರು ಸಮೀಪಯುದ್ಧದಲ್ಲಿಯೂ ಕುಶಲರು. ಖಡ್ಗಪ್ರಹರಣದಲ್ಲಿ ಮತ್ತು ಖಡ್ಗ-ಗುರಾಣಿಗಳ ಪ್ರಹಾರದಲ್ಲಿ ಪರಿಣತರು.
07087022a ಶೂರಾಶ್ಚ ಕೃತವಿದ್ಯಾಶ್ಚ ಸ್ಪರ್ಧಂತೇ ಚ ಪರಸ್ಪರಂ।
07087022c ನಿತ್ಯಂ ಚ ಸಮರೇ ರಾಜನ್ವಿಜಿಗೀಷಂತಿ ಮಾನವಾನ್।।
ರಾಜನ್! ತರಬೇತಿ ಹೊಂದಿದ ಆ ಶೂರರು ಪರಸ್ಪರರೊಡನೆ ಸ್ಪರ್ಧಿಸುತ್ತಾರೆ. ನಿತ್ಯವೂ ಸಮರದಲ್ಲಿ ಮನುಷ್ಯರನ್ನು ಗೆಲ್ಲುತ್ತಾರೆ.
07087023a ಕರ್ಣೇನ ವಿಜಿತಾ ರಾಜನ್ದುಃಶಾಸನಮನುವ್ರತಾಃ।
07087023c ಏತಾಂಸ್ತು ವಾಸುದೇವೋಽಪಿ ರಥೋದಾರಾನ್ಪ್ರಶಂಸತಿ।।
ರಾಜನ್! ಕರ್ಣನಿಂದ ಸೋಲಿಸಲ್ಪಟ್ಟ, ದುಃಶಾಸನನನ್ನು ಅನುಸರಿಸುವ ಈ ರಥೋದಾರರನ್ನು ವಾಸುದೇವನೂ ಕೂಡ ಪ್ರಶಂಸಿಸುತ್ತಾನೆ.
07087024a ಸತತಂ ಪ್ರಿಯಕಾಮಾಶ್ಚ ಕರ್ಣಸ್ಯೈತೇ ವಶೇ ಸ್ಥಿತಾಃ।
07087024c ತಸ್ಯೈವ ವಚನಾದ್ರಾಜನ್ನಿವೃತ್ತಾಃ ಶ್ವೇತವಾಹನಾತ್।।
ಸತತವೂ ಕರ್ಣನ ವಶದಲ್ಲಿದ್ದುಕೊಂಡು ಅವನಿಗೆ ಪ್ರಿಯವಾದುದನ್ನೇ ಬಯಸುವ ಅವರು ಅವನದೇ ಮಾತಿನಂತೆ ಶ್ವೇತವಾಹನನೆಡೆಗೆ ತೆರಳಿದ್ದಾರೆ.
07087025a ತೇ ನ ಕ್ಷತಾ ನ ಚ ಶ್ರಾಂತಾ ದೃಢಾವರಣಕಾರ್ಮುಕಾಃ।
07087025c ಮದರ್ಥಂ ವಿಷ್ಠಿತಾ ನೂನಂ ಧಾರ್ತರಾಷ್ಟ್ರಸ್ಯ ಶಾಸನಾತ್।।
ಆಯಾಸಗೊಳ್ಳದ ಮತ್ತು ಗಾಯಗೊಳ್ಳದ ಅವರು ದೃಢ ಕವಚ-ಕಾರ್ಮುಕಗಳನ್ನು ಹಿಡಿದು ಧಾರ್ತರಾಷ್ಟ್ರನ ಶಾಸನದಂತೆ ನನಗಾಗಿಯೇ ಕಾದುಕೊಂಡಿರುವಂತಿದ್ದಾರೆ.
07087026a ಏತಾನ್ಪ್ರಮಥ್ಯ ಸಂಗ್ರಾಮೇ ಪ್ರಿಯಾರ್ಥಂ ತವ ಕೌರವ।
07087026c ಪ್ರಯಾಸ್ಯಾಮಿ ತತಃ ಪಶ್ಚಾತ್ಪದವೀಂ ಸವ್ಯಸಾಚಿನಃ।।
ಕೌರವ! ನಿನಗೆ ಪ್ರೀತಿಗಾಗಿ ಇವರನ್ನು ಸಂಗ್ರಾಮದಲ್ಲಿ ಮಥಿಸಿ ನಂತರ ಸವ್ಯಸಾಚಿಯ ಬಳಿಗೆ ಹೋಗುತ್ತೇನೆ.
07087027a ಯಾಂಸ್ತ್ವೇತಾನಪರಾನ್ರಾಜನ್ನಾಗಾನ್ಸಪ್ತಶತಾನಿ ಚ।
07087027c ಪ್ರೇಕ್ಷಸೇ ವರ್ಮಸಂಚನ್ನಾನ್ಕಿರಾತೈಃ ಸಮಧಿಷ್ಠಿತಾನ್।।
ರಾಜನ್! ಅಲ್ಲಿರುವ ಇತರ ಏಳು ನೂರು ಆನೆಗಳನ್ನು ನೋಡು! ಕವಚಧಾರಿಗಳಾದ ಕಿರಾತರು ಅವುಗಳನ್ನು ಏರಿದ್ದಾರೆ.
07087028a ಕಿರಾತರಾಜೋ ಯಾನ್ಪ್ರಾದಾದ್ಗೃಹೀತಃ ಸವ್ಯಸಾಚಿನಾ।
07087028c ಸ್ವಲಂಕೃತಾಂಸ್ತಥಾ ಪ್ರೇಷ್ಯಾನಿಚ್ಚಂ ಜೀವಿತಮಾತ್ಮನಃ।।
ಅಲಂಕೃತನಾಗಿರುವ ಆ ಕಿರಾತರಾಜನು ಹಿಂದೆ ಸವ್ಯಸಾಚಿಗೆ ಸೇವಕರನ್ನಿತ್ತು ತನ್ನ ಜೀವವನ್ನು ಉಳಿಸಿಕೊಂಡಿದ್ದನು.
07087029a ಆಸನ್ನೇತೇ ಪುರಾ ರಾಜಂಸ್ತವ ಕರ್ಮಕರಾ ದೃಢಂ।
07087029c ತ್ವಾಮೇವಾದ್ಯ ಯುಯುತ್ಸಂತೇ ಪಶ್ಯ ಕಾಲಸ್ಯ ಪರ್ಯಯಂ।।
ರಾಜನ್! ಹಿಂದೆ ಇವನು ನಿನ್ನ ದೃಢ ಸೇವಕನಾಗಿದ್ದನು. ಆದರೆ ಇಂದು ನಿನ್ನೊಡನೆ ಯುದ್ಧಮಾಡುತ್ತಿದ್ದಾನೆ. ಕಾಲದ ಪರ್ಯಯವನ್ನು ನೋಡು!
07087030a ತೇಷಾಮೇತೇ ಮಹಾಮಾತ್ರಾಃ ಕಿರಾತಾ ಯುದ್ಧದುರ್ಮದಾಃ।
07087030c ಹಸ್ತಿಶಿಕ್ಷಾವಿದಶ್ಚೈವ ಸರ್ವೇ ಚೈವಾಗ್ನಿಯೋನಯಃ।।
ಈ ಯುದ್ಧದುರ್ಮದ ಕಿರಾತರು ದೊಡ್ಡ ದೇಹದವರು. ಆನೆಗಳನ್ನು ಪಳಗಿಸುವುದರಲ್ಲಿ ಪರಿಣಿತರು. ಎಲ್ಲರೂ ಅಗ್ನಿಯಂತಹ ಕಣ್ಣುಳ್ಳವರು.
07087031a ಏತೇ ವಿನಿರ್ಜಿತಾಃ ಸರ್ವೇ ಸಂಗ್ರಾಮೇ ಸವ್ಯಸಾಚಿನಾ।
07087031c ಮದರ್ಥಮದ್ಯ ಸಂಯತ್ತಾ ದುರ್ಯೋಧನವಶಾನುಗಾಃ।।
ಇವರೆಲ್ಲರೂ ಸಂಗ್ರಾಮದಲ್ಲಿ ಸವ್ಯಸಾಚಿಯಿಂದ ಸೋತು, ದುರ್ಯೋಧನನ ವಶಕ್ಕೆ ಬಂದು ನನಗಾಗಿ ಇಂದು ಸೇರಿ ಕಾಯುತ್ತಿದ್ದಾರೆ.
07087032a ಏತಾನ್ಭಿತ್ತ್ವಾ ಶರೈ ರಾಜನ್ಕಿರಾತಾನ್ಯುದ್ಧದುರ್ಮದಾನ್।
07087032c ಸೈಂಧವಸ್ಯ ವಧೇ ಯುಕ್ತಮನುಯಾಸ್ಯಾಮಿ ಪಾಂಡವಂ।।
ರಾಜನ್! ಈ ಯುದ್ಧದುರ್ಮದ ಕಿರಾತರನ್ನು ಶರಗಳಿಂದ ಭೇದಿಸಿ ಸೈಂಧವನ ವಧೆಯಲ್ಲಿ ತೊಡಗಿರುವ ಪಾಂಡವನ ಬಳಿ ಹೋಗುತ್ತೇನೆ.
07087033a ಯೇ ತ್ವೇತೇ ಸುಮಹಾನಾಗಾ ಅಂಜನಸ್ಯ ಕುಲೋದ್ಭವಾಃ।
07087033c ಕರ್ಕಶಾಶ್ಚ ವಿನೀತಾಶ್ಚ ಪ್ರಭಿನ್ನಕರಟಾಮುಖಾಃ।।
ಈ ಅಂಜನ ಕುಲದಲ್ಲಿ ಹುಟ್ಟಿದ ಬಾಯಿಯಿಂದ ಮದೋದಕವನ್ನು ಸುರಿಸುತ್ತಿರುವ ಮಹಾ ಆನೆಗಳು ಕರ್ಕಶವಾಗಿವೆ ಮತ್ತು ವಿನೀತವಾದವು ಕೂಡ.
07087034a ಜಾಂಬೂನದಮಯೈಃ ಸರ್ವೈರ್ವರ್ಮಭಿಃ ಸುವಿಭೂಷಿತಾಃ।
07087034c ಲಬ್ಧಲಕ್ಷ್ಯಾ ರಣೇ ರಾಜನ್ನೈರಾವಣಸಮಾ ಯುಧಿ।।
ರಾಜನ್! ಬಂಗಾರದ ಕವಚಗಳಿಂದ ವಿಭೂಷಿತಗೊಂಡ ಅವೆಲ್ಲವೂ ರಣದಲ್ಲಿ ಐರಾವತದಂತೆ ಗುರಿಯಿಟ್ಟು ಹೋರಾಡುತ್ತವೆ.
07087035a ಉತ್ತರಾತ್ಪರ್ವತಾದೇತೇ ತೀಕ್ಷ್ಣೈರ್ದಸ್ಯುಭಿರಾಸ್ಥಿತಾಃ।
07087035c ಕರ್ಕಶೈಃ ಪ್ರವರೈರ್ಯೋಧೈಃ ಕಾರ್ಷ್ಣಾಯಸತನುಚ್ಚದೈಃ।।
ಅವು ಉತ್ತರ ಪರ್ವತದೇಶದಿಂದ ಬಂದಿವೆ. ಅವುಗಳನ್ನು ತೀಕ್ಷ್ಣ ಕರ್ಕಶ, ಶ್ರೇಷ್ಠಯೋಧರಾದ ದಸ್ಯುಗಳನ್ನು ಉಕ್ಕಿನ ಕವಚಗಳನ್ನು ಧರಿಸಿ ಏರಿದ್ದಾರೆ.
07087036a ಸಂತಿ ಗೋಯೋನಯಶ್ಚಾತ್ರ ಸಂತಿ ವಾನರಯೋನಯಃ।
07087036c ಅನೇಕಯೋನಯಶ್ಚಾನ್ಯೇ ತಥಾ ಮಾನುಷಯೋನಯಃ।।
ಅವರಲ್ಲಿ ಗೋವಿನ ಯೋನಿಯಲ್ಲಿ, ವಾನರ ಯೋನಿಯಲ್ಲಿ, ಮತ್ತು ಅನೇಕ ಯೋನಿಗಳಲ್ಲಿ ಜನಿಸಿದ, ಮನುಷ್ಯ ಯೋನಿಯವರೂ ಇದ್ದಾರೆ.
07087037a ಅನೀಕಮಸತಾಮೇತದ್ಧೂಮವರ್ಣಮುದೀರ್ಯತೇ।
07087037c ಮ್ಲೇಚ್ಚಾನಾಂ ಪಾಪಕತೄಣಾಂ ಹಿಮವದ್ದುರ್ಗವಾಸಿನಾಂ।।
ಹಿಮಾಲಯದ ದುರ್ಗಗಳಲ್ಲಿ ವಾಸಿಸುವ ಆ ಪಾಪಕರ್ಮಿಗಳ, ಕೆಟ್ಟವರ ಸೇನೆಯು ದೂರದಿಂದ ಹೊಗೆಯ ಬಣ್ಣವನ್ನು ಹೊಂದಿರುವಂತೆ ಕಾಣಿಸುತ್ತದೆ.
07087038a ಏತದ್ದುರ್ಯೋಧನೋ ಲಬ್ಧ್ವಾ ಸಮಗ್ರಂ ನಾಗಮಂಡಲಂ।
07087038c ಕೃಪಂ ಚ ಸೌಮದತ್ತಿಂ ಚ ದ್ರೋಣಂ ಚ ರಥಿನಾಂ ವರಂ।।
07087039a ಸಿಂಧುರಾಜಂ ತಥಾ ಕರ್ಣಮವಮನ್ಯತ ಪಾಂಡವಾನ್।
07087039c ಕೃತಾರ್ಥಮಥ ಚಾತ್ಮಾನಂ ಮನ್ಯತೇ ಕಾಲಚೋದಿತಃ।।
ಇವರ ಈ ಸಮಗ್ರ ಗಜಸೇನೆಯನ್ನು ಪಡೆದು, ಮತ್ತು ಕೃಪ, ಸೌಮದತ್ತಿ, ರಥಿಗಳಲ್ಲಿ ಶ್ರೇಷ್ಠ ದ್ರೋಣ, ಸಿಂಧುರಾಜ, ಮತ್ತು ಕರ್ಣರನ್ನು ಪಡೆದು ದುರ್ಯೋಧನನು ಪಾಂಡವರನ್ನು ಕೀಳಾಗಿ ಕಾಣುತ್ತಾನೆ. ಕಾಲದಿಂದ ಪ್ರಚೋದಿತನಾಗಿ ತನ್ನನ್ನು ತಾನೇ ಕೃತಾರ್ಥನಾದೆನೆಂದು ತಿಳಿದುಕೊಂಡಿದ್ದಾನೆ.
07087040a ತೇ ಚ ಸರ್ವೇಽನುಸಂಪ್ರಾಪ್ತಾ ಮಮ ನಾರಾಚಗೋಚರಂ।
07087040c ನ ವಿಮೋಕ್ಷ್ಯಂತಿ ಕೌಂತೇಯ ಯದ್ಯಪಿ ಸ್ಯುರ್ಮನೋಜವಾಃ।।
ಇವರೆಲ್ಲರೂ ನನ್ನ ನಾರಾಚಗಳ ದಾರಿಯಲ್ಲಿ ಬರುತ್ತಾರೆ. ಕೌಂತೇಯ! ಒಂದುವೇಳೆ ಇವರು ಮನೋವೇಗವನ್ನು ಹೊಂದಿದ್ದರೂ ನನ್ನಿಂದ ತಪ್ಪಿಸಿಕೊಳ್ಳಲಾರರು.
07087041a ತೇನ ಸಂಭಾವಿತಾ ನಿತ್ಯಂ ಪರವೀರ್ಯೋಪಜೀವಿನಾ।
07087041c ವಿನಾಶಮುಪಯಾಸ್ಯಂತಿ ಮಚ್ಚರೌಘನಿಪೀಡಿತಾಃ।।
ನಿತ್ಯವೂ ಇತರರ ವೀರ್ಯವನ್ನವಲಂಬಿಸಿ ಜೀವಿಸುವ ಅವನನ್ನು ಸೇರಿರುವ ಅವರು ನನ್ನ ಶರೌಘಗಳಿಂದ ಪೀಡಿತನಾಗಿ ವಿನಾಶಹೊಂದುತ್ತಾನೆ.
07087042a ಯೇ ತ್ವೇತೇ ರಥಿನೋ ರಾಜನ್ದೃಶ್ಯಂತೇ ಕಾಂಚನಧ್ವಜಾಃ।
07087042c ಏತೇ ದುರ್ವಾರಣಾ ನಾಮ ಕಾಂಬೋಜಾ ಯದಿ ತೇ ಶ್ರುತಾಃ।।
ರಾಜನ್! ಈ ಮೂವರು ಕಾಂಚನಧ್ವಜವುಳ್ಳ ರಥಿಗಳು ಕಾಣುತ್ತಾರಲ್ಲಾ ಅವರು ತಡೆಯಲಸಾದ್ಯವಾದ ಕಾಂಬೋಜರೆಂಬ ಹೆಸರುಳ್ಳವರು. ನೀನು ಇವರ ಕುರಿತು ಕೇಳಿರಬಹುದು.
07087043a ಶೂರಾಶ್ಚ ಕೃತವಿದ್ಯಾಶ್ಚ ಧನುರ್ವೇದೇ ಚ ನಿಷ್ಠಿತಾಃ।
07087043c ಸಂಹತಾಶ್ಚ ಭೃಶಂ ಹ್ಯೇತೇ ಅನ್ಯೋನ್ಯಸ್ಯ ಹಿತೈಷಿಣಃ।।
ಅವರು ಶೂರರು, ವಿದ್ಯಾವಂತರು, ಧನುರ್ವೇದದಲ್ಲಿ ನಿಷ್ಠೆಯನ್ನಿಟ್ಟುಕೊಂಡಿರುವವರು. ಅನ್ಯೋನ್ಯರ ಹಿತೈಷಿಗಳಾದ ಇವರು ತುಂಬಾ ಸಂಘಟಿತರಾಗಿದ್ದಾರೆ.
07087044a ಅಕ್ಷೌಹಿಣ್ಯಶ್ಚ ಸಂರಬ್ಧಾ ಧಾರ್ತರಾಷ್ಟ್ರಸ್ಯ ಭಾರತ।
07087044c ಯತ್ತಾ ಮದರ್ಥಂ ತಿಷ್ಠಂತಿ ಕುರುವೀರಾಭಿರಕ್ಷಿತಾಃ।।
ಭಾರತ! ಕುರುವೀರರಿಂದ ರಕ್ಷಿತವಾದ ಧಾರ್ತರಾಷ್ಟ್ರನ ಅಕ್ಷೌಹಿಣಿಯೂ ಕೂಡ ಸಂರಬ್ಧವಾಗಿ ನನಗಾಗಿ ಪ್ರಯತ್ನಿಸಿ ನಿಂತಿದೆ.
07087045a ಅಪ್ರಮತ್ತಾ ಮಹಾರಾಜ ಮಾಮೇವ ಪ್ರತ್ಯುಪಸ್ಥಿತಾಃ।
07087045c ತಾಂಸ್ತ್ವಹಂ ಪ್ರಮಥಿಷ್ಯಾಮಿ ತೃಣಾನೀವ ಹುತಾಶನಃ।।
ಮಹಾರಾಜ! ನನ್ನ ಮೇಲೆಯೇ ಕಣ್ಣನ್ನಿಟ್ಟು ಜಾಗರೂಕರಾಗಿ ಕಾಯುತ್ತಿದ್ದಾರೆ. ಹುತಾಶನನು ಹುಲ್ಲುಮೆದೆಯನ್ನು ಹೇಗೋ ಹಾಗೆ ನಾನು ಅವರನ್ನು ನಾಶಗೊಳಿಸುತ್ತೇನೆ.
07087046a ತಸ್ಮಾತ್ಸರ್ವಾನುಪಾಸಂಗಾನ್ಸರ್ವೋಪಕರಣಾನಿ ಚ।
07087046c ರಥೇ ಕುರ್ವಂತು ಮೇ ರಾಜನ್ಯಥಾವದ್ರಥಕಲ್ಪಕಾಃ।।
ಆದುದರಿಂದ ರಾಜನ್! ರಥವನ್ನು ಸಿದ್ಧಗೊಳಿಸುವವರು ಎಲ್ಲ ಉಪಕರಣಗಳನ್ನೂ, ಆಯುಧಗಳನ್ನೂ ಇರಿಸಿ ರಥವನ್ನು ಸಿದ್ಧಪಡಿಸಲಿ.
07087047a ಅಸ್ಮಿಂಸ್ತು ಖಲು ಸಂಗ್ರಾಮೇ ಗ್ರಾಹ್ಯಂ ವಿವಿಧಮಾಯುಧಂ।
07087047c ಯಥೋಪದಿಷ್ಟಮಾಚಾರ್ಯೈಃ ಕಾರ್ಯಃ ಪಂಚಗುಣೋ ರಥಃ।।
ಈ ಸಂಗ್ರಾಮದಲ್ಲಿ ವಿವಿಧ ಆಯುಧಗಳನ್ನು ಹಿಡಿದು ಹೋಗಿರಬೇಕು. ಆಚಾರ್ಯರು ಒಂದು ರಥದಲ್ಲಿ ಎಷ್ಟಿರಬೇಕೆಂದು ಉಪದೇಶಿಸುತ್ತಾರೋ ಅದಕ್ಕೂ ಐದು ಪಟ್ಟು ನನ್ನ ರಥದಲ್ಲಿರಿಸಲಿ.
07087048a ಕಾಂಬೋಜೈರ್ಹಿ ಸಮೇಷ್ಯಾಮಿ ಕ್ರುದ್ಧೈರಾಶೀವಿಷೋಪಮೈಃ।
07087048c ನಾನಾಶಸ್ತ್ರಸಮಾವಾಪೈರ್ವಿವಿಧಾಯುಧಯೋಧಿಭಿಃ।।
ಏಕೆಂದರೆ ಕ್ರುದ್ಧ ಸರ್ಪಗಳ ವಿಷದಂತಿರುವ, ನಾನಾ ಶಸ್ತ್ರಗಳಿಂದ ಕೂಡಿರುವ, ವಿವಿಧ ಆಯುಧಗಳನ್ನು ಹಿಡಿದ ಯೋಧರಿಂದ ಕೂಡಿದ ಕಾಂಬೋಜರನ್ನು ಎದುರಿಸುತ್ತೇನೆ.
07087049a ಕಿರಾತೈಶ್ಚ ಸಮೇಷ್ಯಾಮಿ ವಿಷಕಲ್ಪೈಃ ಪ್ರಹಾರಿಭಿಃ।
07087049c ಲಾಲಿತೈಃ ಸತತಂ ರಾಜ್ಞಾ ದುರ್ಯೋಧನಹಿತೈಷಿಭಿಃ।।
ರಾಜಾ ದುರ್ಯೋಧನನ ಹಿತೈಷಿಗಳಾದ, ಅವನಿಂದ ಲಾಲಿಸಲ್ಪಟ್ಟ, ವಿಷಸಮಾನ ಪ್ರಹಾರಿಗಳಾದ ಕಿರಾತರನ್ನು ಎದುರಿಸುವವನಿದ್ದೇನೆ.
07087050a ಶಕೈಶ್ಚಾಪಿ ಸಮೇಷ್ಯಾಮಿ ಶಕ್ರತುಲ್ಯಪರಾಕ್ರಮೈಃ।
07087050c ಅಗ್ನಿಕಲ್ಪೈರ್ದುರಾಧರ್ಷೈಃ ಪ್ರದೀಪ್ತೈರಿವ ಪಾವಕೈಃ।।
ಪಾವಕನಂತೆ ಉರಿಯುತ್ತಿರುವ, ಅಗ್ನಿಯಂತೆ ದುರಾಧರ್ಷರಾಗಿರುವ, ಶಕ್ರನ ಸಮನಾದ ಪರಾಕ್ರಮವುಳ್ಳ ಶಕರನ್ನು ಕೂಡ ಎದುರಿಸಲಿದ್ದೇನೆ.
07087051a ತಥಾನ್ಯೈರ್ವಿವಿಧೈರ್ಯೋಧೈಃ ಕಾಲಕಲ್ಪೈರ್ದುರಾಸದೈಃ।
07087051c ಸಮೇಷ್ಯಾಮಿ ರಣೇ ರಾಜನ್ಬಹುಭಿರ್ಯುದ್ಧದುರ್ಮದೈಃ।।
ರಾಜನ್! ರಣದಲ್ಲಿ ಕಾಲನಂತೆ ದುರಾಸದರಾಗಿರುವ ಇನ್ನೂ ಅನ್ಯ ವಿವಿಧ ಯೋಧರೊಂದಿಗೆ ಮತ್ತು ಅನೇಕ ಯುದ್ಧ ದುರ್ಮದರೊಂದಿಗೆ ಹೋರಾಡುವವನಿದ್ದೇನೆ.
07087052a ತಸ್ಮಾದ್ವೈ ವಾಜಿನೋ ಮುಖ್ಯಾ ವಿಶ್ರಾಂತಾಃ ಶುಭಲಕ್ಷಣಾಃ।
07087052c ಉಪಾವೃತ್ತಾಶ್ಚ ಪೀತಾಶ್ಚ ಪುನರ್ಯುಜ್ಯಂತು ಮೇ ರಥೇ।।
ಆದುದರಿಂದ ನನ್ನ ರಥಕ್ಕೆ ಪ್ರಮುಖ ಶುಭಲಕ್ಷಣಗಳನ್ನು ಹೊಂದಿದ, ವಿಶ್ರಾಂತಿಹೊಂದಿರುವ, ತಿನಿಸು-ಪಾನೀಯಗಳನ್ನು ತೆಗೆದುಕೊಂಡಿರುವ ಕುದುರೆಗಳನ್ನು ಪುನಃ ಕಟ್ಟಲಿ.”
07087053a ತಸ್ಯ ಸರ್ವಾನುಪಾಸಂಗಾನ್ಸರ್ವೋಪಕರಣಾನಿ ಚ।
07087053c ರಥೇ ಪ್ರಾಸ್ಥಾಪಯದ್ರಾಜಾ ಶಸ್ತ್ರಾಣಿ ವಿವಿಧಾನಿ ಚ।।
ಅನಂತರ ರಾಜನು ಅವನ ರಥದಲ್ಲಿ ಸರ್ವ ಉಪಾಸಂಗಗಳನ್ನೂ, ಸರ್ವ ಉಪಕರಣಗಳನ್ನೂ, ಮತ್ತು ವಿವಿಧ ಶಸ್ತ್ರಗಳನ್ನೂ ಇರಿಸಿದನು.
07087054a ತತಸ್ತಾನ್ಸರ್ವತೋ ಮುಕ್ತ್ವಾ ಸದಶ್ವಾಂಶ್ಚತುರೋ ಜನಾಃ।
07087054c ರಸವತ್ಪಾಯಯಾಮಾಸುಃ ಪಾನಂ ಮದಸಮೀರಿಣಂ।।
ಜನರು ಎಲ್ಲಕಡೆಗಳಿಂದ ಆ ನಾಲ್ಕು ಉತ್ತಮ ಕುದುರೆಗಳನ್ನು ಬಿಚ್ಚಿ, ರಸವತ್ತಾದ ಪಾನೀಯವನ್ನು ಕುಡಿಸಿದರು.
07087055a ಪೀತೋಪವೃತ್ತಾನ್ಸ್ನಾತಾಂಶ್ಚ ಜಗ್ಧಾನ್ನಾನ್ಸಮಲಂಕೃತಾನ್।
07087055c ವಿನೀತಶಲ್ಯಾಂಸ್ತುರಗಾಂಶ್ಚತುರೋ ಹೇಮಮಾಲಿನಃ।।
ಕುಡಿಸಿದ ನಂತರ ತಿರುಗಾಡಿಸಿ, ಬಾಣಗಳನ್ನು ಕಿತ್ತು, ಸ್ನಾನಮಾಡಿಸಿ ಆ ನಾಲ್ಕೂ ಕುದುರೆಗಳನ್ನು ಬಂಗಾರದ ಮಾಲೆಗಳಿಂದ ಅಲಂಕರಿಸಿದರು.
07087056a ತಾನ್ಯತ್ತಾನ್ರುಕ್ಮವರ್ಣಾಭಾನ್ವಿನೀತಾಂ ಶೀಘ್ರಗಾಮಿನಃ।
07087056c ಸಂಹೃಷ್ಟಮನಸೋಽವ್ಯಗ್ರಾನ್ವಿಧಿವತ್ಕಲ್ಪಿತೇ ರಥೇ।।
ಆ ಬೆಳ್ಳಿಯಬಣ್ಣದಿಂದ ಹೊಳೆಯುತ್ತಿದ್ದ, ವಿನೀತರಾದ, ಶೀಘ್ರಗಾಮಿಗಳಾದ, ಸಂಹೃಷ್ಟ ಮನಸ್ಕರಾದ, ಆ ಅವ್ಯಗ್ರ ಕುದುರೆಗಳನ್ನು ವಿಧಿವತ್ತಾಗಿ ರಥಕ್ಕೆ ಕಟ್ಟಲಾಯಿತು.
07087057a ಮಹಾಧ್ವಜೇನ ಸಿಂಹೇನ ಹೇಮಕೇಸರಮಾಲಿನಾ।
07087057c ಸಂವೃತೇ ಕೇತನೈರ್ಹೇಮೈರ್ಮಣಿವಿದ್ರುಮಚಿತ್ರಿತೈಃ।
07087057e ಪಾಂಡುರಾಭ್ರಪ್ರಕಾಶಾಭಿಃ ಪತಾಕಾಭಿರಲಂಕೃತೇ।।
ರಥವನ್ನು ಸಿಂಹದ ಮಹಾಧ್ವಜದಿಂದ, ಹೇಮಕೇಸರ ಮಾಲೆಗಳಿಂದ, ಬಂಗಾರ-ಮಣಿ-ವಿದ್ರುಮ-ಚಿತ್ರಗಳಿಂದ ಕೂಡಿದ ಕೇತುಗಳಿಂದ, ಬಿಳಿಯ ಮೋಡಗಳಂತೆ ಪ್ರಕಾಶಿಸುವ ಪತಾಕೆಗಳಿಂದ ಅಲಂಕರಿಸಿದರು.
07087058a ಹೇಮದಂಡೋಚ್ಚ್ರಿತಚ್ಚತ್ರೇ ಬಹುಶಸ್ತ್ರಪರಿಚ್ಚದೇ।
07087058c ಯೋಜಯಾಮಾಸ ವಿಧಿವದ್ಧೇಮಭಾಂಡವಿಭೂಷಿತಾನ್।।
ಬಂಗಾರದ ದಂಡದ ಮೇಲೆ ಚತ್ರವಿದ್ದಿತು. ಬಹುಶಸ್ತ್ರಗಳಿಂದ ತುಂಬಿದ್ದ ಅದಕ್ಕೆ ವಿಧಿವತ್ತಾಗಿ ಬಂಗಾರದ ತಗಡನ್ನು ಮುಚ್ಚಲಾಯಿತು.
07087059a ದಾರುಕಸ್ಯಾನುಜೋ ಭ್ರಾತಾ ಸೂತಸ್ತಸ್ಯ ಪ್ರಿಯಃ ಸಖಾ।
07087059c ನ್ಯವೇದಯದ್ರಥಂ ಯುಕ್ತಂ ವಾಸವಸ್ಯೇವ ಮಾತಲಿಃ।।
ವಾಸವನಿಗೆ ಮಾತಲಿಯು ಹೇಗೋ ಹಾಗೆ ದಾರುಕನ ತಮ್ಮ, ಅವನ ಪ್ರಿಯಸಖ, ಸೂತನು ರಥವು ಸಿದ್ಧವಾಗಿದೆಯೆಂದು ನಿವೇದಿಸಿದನು.
07087060a ತತಃ ಸ್ನಾತಃ ಶುಚಿರ್ಭೂತ್ವಾ ಕೃತಕೌತುಕಮಂಗಲಃ।
07087060c ಸ್ನಾತಕಾನಾಂ ಸಹಸ್ರಸ್ಯ ಸ್ವರ್ಣನಿಷ್ಕಾನದಾಪಯತ್।
07087060e ಆಶೀರ್ವಾದೈಃ ಪರಿಷ್ವಕ್ತಃ ಸಾತ್ಯಕಿಃ ಶ್ರೀಮತಾಂ ವರಃ।।
ಅನಂತರ ಶ್ರೀಮತರಲ್ಲಿ ಶ್ರೇಷ್ಠ ಸಾತ್ಯಕಿಯು ಸ್ನಾನಮಾಡಿ ಶುಚಿರ್ಭೂತನಾಗಿ, ಕೌತುಕಮಂಗಲವನ್ನು ಮಾಡಿಕೊಂಡು, ಸಾವಿರ ಸ್ನಾತಕರಿಗೆ ಬಂಗಾರದ ಮೊಹರುಗಳನ್ನಿತ್ತು ಅವರ ಆಶೀರ್ವಾದಗಳಿಂದ ಆವೃತನಾದನು.
07087061a ತತಃ ಸ ಮಧುಪರ್ಕಾರ್ಹಃ ಪೀತ್ವಾ ಕೈಲಾವತಂ ಮಧು।
07087061c ಲೋಹಿತಾಕ್ಷೋ ಬಭೌ ತತ್ರ ಮದವಿಹ್ವಲಲೋಚನಃ।।
ಆಗ ಅವನು ಮಧುಪರ್ಕವನ್ನು ಸೇವಿಸಿ, ಕೈಲಾವತ ಮಧುವನ್ನು ಕುಡಿದು ಮದವಿಹ್ವಲಲೋಚನನಾಗಿ ಲೋಹಿತಾಕ್ಷನಾದನು.
07087062a ಆಲಭ್ಯ ವೀರಕಾಂಸ್ಯಂ ಚ ಹರ್ಷೇಣ ಮಹತಾನ್ವಿತಃ।
07087062c ದ್ವಿಗುಣೀಕೃತತೇಜಾ ಹಿ ಪ್ರಜ್ವಲನ್ನಿವ ಪಾವಕಃ।
07087062e ಉತ್ಸಂಗೇ ಧನುರಾದಾಯ ಸಶರಂ ರಥಿನಾಂ ವರಃ।।
ವೀರರು ಮುಟ್ಟಬೇಕಾದ ಕಂಚಿನ ಪಾತ್ರೆಯನ್ನು ಮುಟ್ಟಿ ಹರ್ಷದಿಂದ ಉಬ್ಬಿ ತೇಜಸ್ಸಿನಲ್ಲಿ ದ್ವಿಗುಣಿತನಾಗಿ ಪಾವಕನಂತೆ ಪ್ರಜ್ವಲಿಸಿದನು. ಅನಂತರ ಆ ರಥಿಗಳಲ್ಲಿ ಶ್ರೇಷ್ಠನು ಶರದೊಂದಿಗೆ ಧನುಸ್ಸನ್ನೆತ್ತಿಕೊಂಡನು.
07087063a ಕೃತಸ್ವಸ್ತ್ಯಯನೋ ವಿಪ್ರೈಃ ಕವಚೀ ಸಮಲಂಕೃತಃ।
07087063c ಲಾಜೈರ್ಗಂಧೈಸ್ತಥಾ ಮಾಲ್ಯೈಃ ಕನ್ಯಾಭಿಶ್ಚಾಭಿನಂದಿತಃ।
ವಿಪ್ರರಿಂದ ಸ್ವಸ್ತಿವಾಚನಗಳನ್ನು ಮಾಡಿಸಿಕೊಂಡು ಕವಚದಿಂದ ಸಮಲಂಕೃತಗೊಂಡು ಕನ್ಯೆಯರಿಂದ ಲಾಜ-ಗಂಧ-ಮಾಲೆಗಳಿಂದ ಅಭಿನಂದಿತನಾದನು.
07087064a ಯುಧಿಷ್ಠಿರಸ್ಯ ಚರಣಾವಭಿವಾದ್ಯ ಕೃತಾಂಜಲಿಃ।
07087064c ತೇನ ಮೂರ್ಧನ್ಯುಪಾಘ್ರಾತ ಆರುರೋಹ ಮಹಾರಥಂ।।
ಯುಧಿಷ್ಠಿರನ ಚರಣಗಳಿಗೆ ಕೈಮುಗಿದು ಅಭಿವಂದಿಸಿ, ಅವನು ನೆತ್ತಿಯನ್ನು ಆಘ್ರಾಣಿಸಲು, ಮಹಾರಥವನ್ನು ಏರಿದನು.
07087065a ತತಸ್ತೇ ವಾಜಿನೋ ಹೃಷ್ಟಾಃ ಸುಪುಷ್ಟಾ ವಾತರಂಹಸಃ।
07087065c ಅಜಯ್ಯಾ ಜೈತ್ರಮೂಹುಸ್ತಂ ವಿಕುರ್ವಂತಃ ಸ್ಮ ಸೈಂಧವಾಃ।।
ಆಗ ಅವನ ಹೃಷ್ಟ ಸುಪುಷ್ಟ ಗಾಳಿಯ ವೇಗವುಳ್ಳ ಅಜೇಯ ಸಿಂಧುದೇಶದ ಕುದುರೆಗಳು ಕೆನೆದವು.
07087066a ಅಥ ಹರ್ಷಪರೀತಾಂಗಃ ಸಾತ್ಯಕಿರ್ಭೀಮಮಬ್ರವೀತ್।
07087066c ತ್ವಂ ಭೀಮ ರಕ್ಷ ರಾಜಾನಮೇತತ್ಕಾರ್ಯತಮಂ ಹಿ ತೇ।।
ಆಗ ಹರ್ಷಪರೀತಾಂಗನಾದ ಸಾತ್ಯಕಿಯು ಭೀಮನಿಗೆ ಹೇಳಿದನು: “ಭೀಮ! ನೀನು ರಾಜನನ್ನು ರಕ್ಷಿಸು. ಈಗ ಇದೇ ನಿನ್ನ ಅತಿಮುಖ್ಯ ಕಾರ್ಯವಾಗಿದೆ.
07087067a ಅಹಂ ಭಿತ್ತ್ವಾ ಪ್ರವೇಕ್ಷ್ಯಾಮಿ ಕಾಲಪಕ್ವಮಿದಂ ಬಲಂ।
07087067c ಆಯತ್ಯಾಂ ಚ ತದಾತ್ವೇ ಚ ಶ್ರೇಯೋ ರಾಜ್ಞೋಽಭಿರಕ್ಷಣಂ।।
ಸಮಯವು ಮುಗಿದಿರುವ ಈ ಸೇನೆಯನ್ನು ಭೇದಿಸಿ ಪ್ರವೇಶಿಸುತ್ತೇನೆ. ಈಗ ಮತ್ತು ಅನಂತರ ರಾಜನನ್ನು ರಕ್ಷಿಸುವುದು ಶ್ರೇಯಸ್ಕರವಾದುದು.
07087068a ಜಾನೀಷೇ ಮಮ ವೀರ್ಯಂ ತ್ವಂ ತವ ಚಾಹಮರಿಂದಮ।
07087068c ತಸ್ಮಾದ್ಭೀಮ ನಿವರ್ತಸ್ವ ಮಮ ಚೇದಿಚ್ಚಸಿ ಪ್ರಿಯಂ।।
ಅರಿಂದಮ! ನನ್ನ ವೀರ್ಯವು ನಿನಗೆ ತಿಳಿದಿದೆ. ನಿನ್ನದು ನನಗೆ ತಿಳಿದಿದೆ. ಆದುದರಿಂದ ಭೀಮ! ನನಗೆ ಪ್ರಿಯವಾದುದನ್ನು ಬಯಸುವೆಯಾದರೆ ಹಿಂದಿರುಗು!”
07087069a ತಥೋಕ್ತಃ ಸಾತ್ಯಕಿಂ ಪ್ರಾಹ ವ್ರಜ ತ್ವಂ ಕಾರ್ಯಸಿದ್ಧಯೇ।
07087069c ಅಹಂ ರಾಜ್ಞಃ ಕರಿಷ್ಯಾಮಿ ರಕ್ಷಾಂ ಪುರುಷಸತ್ತಮ।।
ಆಗ ಅವನು ಸಾತ್ಯಕಿಗೆ ಹೇಳಿದನು: “ನಿನ್ನ ಕಾರ್ಯಸಿದ್ಧಿಗೆ ಹೊರಡು! ಪುರುಷಸತ್ತಮ! ನಾನು ರಾಜನ ರಕ್ಷಣೆಯನ್ನು ಮಾಡುತ್ತೇನೆ.”
07087070a ಏವಮುಕ್ತಃ ಪ್ರತ್ಯುವಾಚ ಭೀಮಸೇನಂ ಸ ಮಾಧವಃ।
07087070c ಗಚ್ಚ ಗಚ್ಚ ದ್ರುತಂ ಪಾರ್ಥ ಧ್ರುವೋಽದ್ಯ ವಿಜಯೋ ಮಮ।।
ಹೀಗೆ ಹೇಳಲು ಮಾಧವನು ಭೀಮಸೇನನಿಗೆ ಉತ್ತರಿಸಿದನು: “ಪಾರ್ಥ! ಹೋಗು! ಹೋಗು! ಇಂದು ನನ್ನ ವಿಜಯವು ನಿಶ್ಚಿತವಾಗಿದೆ.
07087071a ಯನ್ಮೇ ಸ್ನಿಗ್ಧೋಽನುರಕ್ತಶ್ಚ ತ್ವಮದ್ಯ ವಶಗಃ ಸ್ಥಿತಃ।
07087071c ನಿಮಿತ್ತಾನಿ ಚ ಧನ್ಯಾನಿ ಯಥಾ ಭೀಮ ವದಂತಿ ಮೇ।।
ನನ್ನಲ್ಲೇ ಅನುರಕ್ತನಾದ ನೀನು ಇಂದು ನನ್ನ ವಶದಲ್ಲಿ ಬಂದಿದ್ದೀಯೆ. ಭೀಮ! ನಿಮಿತ್ತಗಳು ಕೂಡ ಧನ್ಯನಾಗುವೆನೆಂದೇ ನನಗೆ ಹೇಳುತ್ತಿವೆ.
07087072a ನಿಹತೇ ಸೈಂಧವೇ ಪಾಪೇ ಪಾಂಡವೇನ ಮಹಾತ್ಮನಾ।
07087072c ಪರಿಷ್ವಜಿಷ್ಯೇ ರಾಜಾನಂ ಧರ್ಮಾತ್ಮಾನಂ ನ ಸಂಶಯಃ।।
ಪಾಪಿ ಸೈಂಧವನು ಮಹಾತ್ಮ ಪಾಂಡವನಿಂದ ಹತನಾದನಂತರ ಧರ್ಮಾತ್ಮ ರಾಜನನ್ನು ಅಪ್ಪಿಕೊಳ್ಳುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.”
07087073a ಏತಾವದುಕ್ತ್ವಾ ಭೀಮಂ ತು ವಿಸೃಜ್ಯ ಚ ಮಹಾಮನಾಃ।
07087073c ಸಂಪ್ರೈಕ್ಷತ್ತಾವಕಂ ಸೈನ್ಯಂ ವ್ಯಾಘ್ರೋ ಮೃಗಗಣಾನಿವ।।
ಹೀಗೆ ಹೇಳಿ ಭೀಮನನ್ನು ಬೀಳ್ಕೊಂಡು ಆ ಮಹಾಮನನು ಹುಲಿಯೊಂದು ಜಿಂಕೆಗಳ ಹಿಂಡನ್ನು ಎವೆಯಿಕ್ಕದೇ ನಿನ್ನ ಸೇನೆಯನ್ನು ನೋಡಿದನು.
07087074a ತಂ ದೃಷ್ಟ್ವಾ ಪ್ರವಿವಿಕ್ಷಂತಂ ಸೈನ್ಯಂ ತವ ಜನಾಧಿಪ।
07087074c ಭೂಯ ಏವಾಭವನ್ಮೂಢಂ ಸುಭೃಶಂ ಚಾಪ್ಯಕಂಪತ।।
ಜನಾಧಿಪ! ಅವನು ಹಾಗೆ ನಿನ್ನ ಸೇನೆಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರಲು ಅದು ಮೂಢವಾಗಿ ಪುನಃ ಏನು ಮಾಡಬೇಕೆಂದು ತೋಚದೇ ಕಂಪಿಸಿತು.
07087075a ತತಃ ಪ್ರಯಾತಃ ಸಹಸಾ ಸೈನ್ಯಂ ತವ ಸ ಸಾತ್ಯಕಿಃ।
07087075c ದಿದೃಕ್ಷುರರ್ಜುನಂ ರಾಜನ್ಧರ್ಮರಾಜಸ್ಯ ಶಾಸನಾತ್।।
ರಾಜನ್! ಧರ್ಮರಾಜನ ಶಾಸನದಂತೆ ಅರ್ಜುನನನ್ನು ಕಾಣಲು ಒಮ್ಮೆಲೇ ಸಾತ್ಯಕಿಯು ನಿನ್ನ ಸೇನೆಯ ಮೇಲೆರಗಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ಸಪ್ತಾಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶ ಎನ್ನುವ ಎಂಭತ್ತೇಳನೇ ಅಧ್ಯಾಯವು.