ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 86
ಸಾರ
ಅರ್ಜುನನು ಯುಧಿಷ್ಠಿರನನ್ನು ರಕ್ಷಿಸು ಎಂದು ಹೇಳಿ ಒಪ್ಪಿಸಿ ಹೋಗಿದುದರಿಂದ ತಾನು ಅವನನ್ನು ಬಿಟ್ಟು ಅರ್ಜುನನ ಹಿಂದೆ ಹೋಗುವುದು ಸರಿಯೆನಿಸುವುದಿಲ್ಲವೆಂದು ಸಾತ್ಯಕಿಯು ಯುಧಿಷ್ಠಿರನಿಗೆ ಹೇಳಿದುದು (1-38). ಭೀಮಸೇನ-ಧೃಷ್ಟದ್ಯುಮ್ನ ಮೊದಲಾದವರು ತನ್ನನ್ನು ದ್ರೋಣನಿಂದ ರಕ್ಷಿಸುತ್ತಾರೆ ಎಂದು ಹೇಳಿ ಯುಧಿಷ್ಠಿರನು ಸಾತ್ಕಕಿಗೆ ಅರ್ಜುನನ ಸಹಾಯಕ್ಕೆ ಹೋಗೆಂದು ಹೇಳಿದುದು (39-50).
07086001 ಸಂಜಯ ಉವಾಚ।
07086001a ಪ್ರೀತಿಯುಕ್ತಂ ಚ ಹೃದ್ಯಂ ಚ ಮಧುರಾಕ್ಷರಮೇವ ಚ।
07086001c ಕಾಲಯುಕ್ತಂ ಚ ಚಿತ್ರಂ ಚ ಸ್ವತಯಾ ಚಾಭಿಭಾಷಿತಂ।।
07086002a ಧರ್ಮರಾಜಸ್ಯ ತದ್ವಾಕ್ಯಂ ನಿಶಮ್ಯ ಶಿನಿಪುಂಗವಃ।
07086002c ಸಾತ್ಯಕಿರ್ಭರತಶ್ರೇಷ್ಠ ಪ್ರತ್ಯುವಾಚ ಯುಧಿಷ್ಠಿರಂ।।
ಸಂಜಯನು ಹೇಳಿದನು: “ಭರತಶ್ರೇಷ್ಠ! ಪ್ರೀತಿಯುಕ್ತವಾದ, ಹೃದಯಂಗಮವಾದ, ಮಧುರ ಅಕ್ಷರಗಳಿಂದ ಕೂಡಿದ, ಕಾಲಕ್ಕೆ ಸರಿಯಾದ, ವಿಚಿತ್ರವಾಗಿ ಮತ್ತು ಸ್ವತಃ ತಾನೇ ಮಾತನಾಡಿದ ಧರ್ಮರಾಜನ ಆ ಮಾತನ್ನು ಕೇಳಿ ಶಿನಿಪುಂಗವ ಸಾತ್ಯಕಿಯು ಯುಧಿಷ್ಠಿರನಿಗೆ ಉತ್ತರಿಸಿದನು:
07086003a ಶ್ರುತಂ ತೇ ಗದತೋ ವಾಕ್ಯಂ ಸರ್ವಮೇತನ್ಮಯಾಚ್ಯುತ।
07086003c ನ್ಯಾಯಯುಕ್ತಂ ಚ ಚಿತ್ರಂ ಚ ಫಲ್ಗುನಾರ್ಥೇ ಯಶಸ್ಕರಂ।।
“ಅಚ್ಯುತ! ನೀನು ಹೇಳಿದ ನ್ಯಾಯಯುಕ್ತವಾದ, ವಿಚಿತ್ರವಾದ, ಫಲ್ಗುನನಿಗೆ ಯಶಸ್ಸನ್ನುಂಟುಮಾಡುವಂತಹ ಎಲ್ಲ ಮಾತುಗಳನ್ನೂ ನಾನು ಕೇಳಿದೆ.
07086004a ಏವಂವಿಧೇ ತಥಾ ಕಾಲೇ ಮದೃಶಂ ಪ್ರೇಕ್ಷ್ಯ ಸಮ್ಮತಂ।
07086004c ವಕ್ತುಮರ್ಹಸಿ ರಾಜೇಂದ್ರ ಯಥಾ ಪಾರ್ಥಂ ತಥೈವ ಮಾಂ।।
ರಾಜೇಂದ್ರ! ಇಂಥಹ ಸಮಯದಲ್ಲಿ ನನ್ನಂತವನು ಪಾರ್ಥ ಮತ್ತು ನನಗೆ ಸಮ್ಮತವಾಗಿರುವುದೇನೆಂದು ನೋಡಿ ಹೇಳಬೇಕಾಗುತ್ತದೆ.
07086005a ನ ಮೇ ಧನಂಜಯಸ್ಯಾರ್ಥೇ ಪ್ರಾಣಾ ರಕ್ಷ್ಯಾಃ ಕಥಂ ಚನ।
07086005c ತ್ವತ್ಪ್ರಯುಕ್ತಃ ಪುನರಹಂ ಕಿಂ ನ ಕುರ್ಯಾಂ ಮಹಾಹವೇ।।
ಧನಂಜಯನಿಗಾಗಿ ನಾನು ನನ್ನ ಪ್ರಾಣಗಳನ್ನು ಎಂದೂ ರಕ್ಷಿಸಿಕೊಳ್ಳುವುದಿಲ್ಲ. ಹೀಗಿರುವಾಗ ಮಹಾಹವದಲ್ಲಿ ನಾನು ನಿನಗಾಗಿ ಏನನ್ನು ಮಾಡದೇ ಇರಬಲ್ಲೆ?
07086006a ಲೋಕತ್ರಯಂ ಯೋಧಯೇಯಂ ಸದೇವಾಸುರಮಾನುಷಂ।
07086006c ತ್ವತ್ಪ್ರಯುಕ್ತೋ ನರೇಂದ್ರೇಹ ಕಿಮುತೈತತ್ಸುದುರ್ಬಲಂ।।
ನರೇಂದ್ರ! ನಿನಗೋಸ್ಕರವಾಗಿ ದೇವಾಸುರಮಾನುಷ ಈ ಮೂರುಲೋಕಗಳೊಡನೆಯೂ ಯುದ್ಧಮಾಡಬಲ್ಲೆ. ಈ ಸುದುರ್ಬಲರೊಂದಿಗೆ ಇನ್ನೇನು?
07086007a ಸುಯೋಧನಬಲಂ ತ್ವದ್ಯ ಯೋಧಯಿಷ್ಯೇ ಸಮಂತತಃ।
07086007c ವಿಜೇಷ್ಯೇ ಚ ರಣೇ ರಾಜನ್ಸತ್ಯಮೇತದ್ಬ್ರವೀಮಿ ತೇ।।
ರಾಜನ್! ಇಂದು ರಣದಲ್ಲಿ ಎಲ್ಲಕಡೆಗಳಿಂದ ಸುಯೋಧನನ ಸೇನೆಯೊಂದಿಗೆ ಯುದ್ಧಮಾಡಿ ಜಯಿಸುತ್ತೇನೆ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ.
07086008a ಕುಶಲ್ಯಹಂ ಕುಶಲಿನಂ ಸಮಾಸಾದ್ಯ ಧನಂಜಯಂ।
07086008c ಹತೇ ಜಯದ್ರಥೇ ರಾಜನ್ಪುನರೇಷ್ಯಾಮಿ ತೇಽಂತಿಕಂ।।
ರಾಜನ್! ಕುಶಲಿ ನಾನು ಕುಶಲಿ ಧನಂಜಯನ ಬಳಿಸಾರಿ ಜಯದ್ರಥನನು ಹತನಾದನಂತರವೇ ಹಿಂದಿರುಗುತ್ತೇನೆ.
07086009a ಅವಶ್ಯಂ ತು ಮಯಾ ಸರ್ವಂ ವಿಜ್ಞಾಪ್ಯಸ್ತ್ವಂ ನರಾಧಿಪ।
07086009c ವಾಸುದೇವಸ್ಯ ಯದ್ವಾಕ್ಯಂ ಫಲ್ಗುನಸ್ಯ ಚ ಧೀಮತಃ।।
ಆದರೆ ನರಾಧಿಪ! ನಾನು ನಿನಗೆ ವಾಸುದೇವನ ಮತ್ತು ಧೀಮತ ಫಲ್ಗುನನ ಮಾತುಗಳೆಲ್ಲವನ್ನೂ ವಿಜ್ಞಾಪಿಸುವುದು ಅವಶ್ಯವಾಗಿದೆ.
07086010a ದೃಢಂ ತ್ವಭಿಪರೀತೋಽಹಮರ್ಜುನೇನ ಪುನಃ ಪುನಃ।
07086010c ಮಧ್ಯೇ ಸರ್ವಸ್ಯ ಸೈನ್ಯಸ್ಯ ವಾಸುದೇವಸ್ಯ ಶೃಣ್ವತಃ।।
ಸರ್ವ ಸೇನೆಗಳ ಮಧ್ಯೆ ವಾಸುದೇವನು ಕೇಳುವಂತೆ ಅರ್ಜುನನು ನನಗೆ ಪುನಃ ಪುನಃ ದೃಢವಾಗಿ ಆದೇಶವನ್ನಿತ್ತಿದ್ದನು:
07086011a ಅದ್ಯ ಮಾಧವ ರಾಜಾನಮಪ್ರಮತ್ತೋಽನುಪಾಲಯ।
07086011c ಆರ್ಯಾಂ ಯುದ್ಧೇ ಮತಿಂ ಕೃತ್ವಾ ಯಾವದ್ಧನ್ಮಿ ಜಯದ್ರಥಂ।।
“ಮಾಧವ! ಇಂದು ನಾನು ಜಯದ್ರಥನನ್ನು ಕೊಂದು ಬರುವವರೆಗೂ ರಾಜನನ್ನು ಅಪ್ರಮತ್ತನಾಗಿ ಆರ್ಯನಂತೆ ಯುದ್ಧದಲ್ಲಿ ಬುದ್ಧಿಯನ್ನಿರಿಸಿ ಪರಿಪಾಲಿಸು.
07086012a ತ್ವಯಿ ವಾಹಂ ಮಹಾಬಾಹೋ ಪ್ರದ್ಯುಮ್ನೇ ವಾ ಮಹಾರಥೇ।
07086012c ನೃಪಂ ನಿಕ್ಷಿಪ್ಯ ಗಚ್ಚೇಯಂ ನಿರಪೇಕ್ಷೋ ಜಯದ್ರಥಂ।।
ಮಹಾಬಾಹೋ! ನಿನ್ನಲ್ಲಿ ಅಥವಾ ಮಹಾರಥ ಪ್ರದ್ಯುಮ್ನನ ಬಳಿ ನೃಪನನ್ನಿಟ್ಟು ನಾನು ನಿರಪೇಕ್ಷನಾಗಿ ಜಯದ್ರಥನಿದ್ದಲ್ಲಿಗೆ ಹೋಗಬಹುದು.
07086013a ಜಾನೀಷೇ ಹಿ ರಣೇ ದ್ರೋಣಂ ರಭಸಂ ಶ್ರೇಷ್ಠಸಮ್ಮತಂ।
07086013c ಪ್ರತಿಜ್ಞಾ ಚಾಪಿ ತೇ ನಿತ್ಯಂ ಶ್ರುತಾ ದ್ರೋಣಸ್ಯ ಮಾಧವ।।
ಮಾಧವ! ರಣದಲ್ಲಿ ಶ್ರೇಷ್ಠಸಮ್ಮತ ದ್ರೋಣನ ರಭಸವನ್ನು ತಿಳಿದಿದ್ದೀಯೆ. ಹಾಗೆಯೇ ನಿತ್ಯವೂ ಅವನು ಮಾಡಿಕೊಂಡು ಬಂದಿರುವ ಪ್ರತಿಜ್ಞೆಯನ್ನೂ ಕೇಳಿದ್ದೀಯೆ.
07086014a ಗ್ರಹಣಂ ಧರ್ಮರಾಜಸ್ಯ ಭಾರದ್ವಾಜೋಽನುಗೃಧ್ಯತಿ।
07086014c ಶಕ್ತಶ್ಚಾಪಿ ರಣೇ ದ್ರೋಣೋ ನಿಗೃಹೀತುಂ ಯುಧಿಷ್ಠಿರಂ।।
ಭಾರದ್ವಾಜನು ಧರ್ಮರಾಜನನ್ನು ಸೆರೆಹಿಡಿಯಲು ನೋಡುತ್ತಿದ್ದಾನೆ. ರಣದಲ್ಲಿ ಯುಧಿಷ್ಠಿರನನ್ನು ಸೆರೆಹಿಡಿಯಲು ದ್ರೋಣನು ಶಕ್ತನೂ ಕೂಡ.
07086015a ಏವಂ ತ್ವಯಿ ಸಮಾಧಾಯ ಧರ್ಮರಾಜಂ ನರೋತ್ತಮಂ।
07086015c ಅಹಮದ್ಯ ಗಮಿಷ್ಯಾಮಿ ಸೈಂಧವಸ್ಯ ವಧಾಯ ಹಿ।।
ನರೋತ್ತಮ! ಹೀಗಿದ್ದಾಗ ನಾನು ಧರ್ಮರಾಜನನ್ನು ಇಂದು ನಿನಗೆ ಒಪ್ಪಿಸಿ ಸೈಂಧವನ ವಧೆಗಾಗಿ ಹೋಗುತ್ತಿದ್ದೇನೆ.
07086016a ಜಯದ್ರಥಮಹಂ ಹತ್ವಾ ಧ್ರುವಮೇಷ್ಯಾಮಿ ಮಾಧವ।
07086016c ಧರ್ಮರಾಜಂ ಯಥಾ ದ್ರೋಣೋ ನಿಗೃಹ್ಣೀಯಾದ್ರಣೇ ಬಲಾತ್।।
ಮಾಧವ! ಒಂದುವೇಳೆ ದ್ರೋಣನು ಧರ್ಮರಾಜನನ್ನು ಬಲಾತ್ಕಾರವಾಗಿ ಸೆರೆಹಿಡಿಯದಿದ್ದರೆ ಖಂಡಿತವಾಗಿಯೂ ನಾನು ಜಯದ್ರಥನನ್ನು ಸಂಹರಿಸಿ ಹಿಂದಿರುಗುತ್ತೇನೆ.
07086017a ನಿಗೃಹೀತೇ ನರಶ್ರೇಷ್ಠೇ ಭಾರದ್ವಾಜೇನ ಮಾಧವ।
07086017c ಸೈಂಧವಸ್ಯ ವಧೋ ನ ಸ್ಯಾನ್ಮಮಾಪ್ರೀತಿಸ್ತಥಾ ಭವೇತ್।।
ಮಾಧವ! ನರಶ್ರೇಷ್ಠನು ಭಾರದ್ವಾಜನಿಂದ ಸೆರೆಹಿಡಿಯಲ್ಪಟ್ಟರೆ ಸೈಂಧವನ ವಧೆಯು ನಡೆಯುವುದಿಲ್ಲ. ನನಗೆ ಒಳ್ಳೆಯದಾಗದಿರುವುದು ನಡೆದುಹೋಗುತ್ತದೆ.
07086018a ಏವಂ ಗತೇ ನರಶ್ರೇಷ್ಠ ಪಾಂಡವೇ ಸತ್ಯವಾದಿನಿ।
07086018c ಅಸ್ಮಾಕಂ ಗಮನಂ ವ್ಯಕ್ತಂ ವನಂ ಪ್ರತಿ ಭವೇತ್ಪುನಃ।।
ಈ ನರಶ್ರೇಷ್ಠ ಸತ್ಯವಾದಿ ಪಾಂಡವನು ಹೊರಟುಹೋದರೆ ನಾವು ಪುನಃ ವನಕ್ಕೆ ಹೋಗಬೇಕಾಗುತ್ತದೆ.
07086019a ಸೋಽಯಂ ಮಮ ಜಯೋ ವ್ಯಕ್ತಂ ವ್ಯರ್ಥ ಏವ ಭವಿಷ್ಯತಿ।
07086019c ಯದಿ ದ್ರೋಣೋ ರಣೇ ಕ್ರುದ್ಧೋ ನಿಗೃಹ್ಣೀಯಾದ್ಯುಧಿಷ್ಠಿರಂ।।
ಒಂದುವೇಳೆ ರಣದಲ್ಲಿ ಕ್ರುದ್ಧ ದ್ರೋಣನು ಯುಧಿಷ್ಠಿರನನ್ನು ಹಿಡಿದಿದ್ದೇ ಆದರೆ ನನ್ನ ವಿಜಯವೂ ಕೂಡ ವ್ಯರ್ಥವೇ ಆಗಿಬಿಡುತ್ತದೆ.
07086020a ಸ ತ್ವಮದ್ಯ ಮಹಾಬಾಹೋ ಪ್ರಿಯಾರ್ಥಂ ಮಮ ಮಾಧವ।
07086020c ಜಯಾರ್ಥಂ ಚ ಯಶೋರ್ಥಂ ಚ ರಕ್ಷ ರಾಜಾನಮಾಹವೇ।।
ಆದುದರಿಂದ ಮಾಧವ! ಮಹಾಬಾಹೋ! ನನಗೆ ಬೇಕಾಗಿ, ಜಯ ಮತ್ತು ಯಶಸ್ಸಿಗಾಗಿ ರಾಜನನ್ನು ಯುದ್ಧದಲ್ಲಿ ರಕ್ಷಿಸು!”
07086021a ಸ ಭವಾನ್ಮಯಿ ನಿಕ್ಷೇಪೋ ನಿಕ್ಷಿಪ್ತಃ ಸವ್ಯಸಾಚಿನಾ।
07086021c ಭಾರದ್ವಾಜಾದ್ಭಯಂ ನಿತ್ಯಂ ಪಶ್ಯಮಾನೇನ ತೇ ಪ್ರಭೋ।।
ಪ್ರಭೋ! ಭಾರದ್ವಾಜನಿಂದ ನಿತ್ಯವೂ ನಿನಗಿರುವ ಭಯವನ್ನು ನೋಡಿಯೇ ಸವ್ಯಸಾಚಿಯು ನಿನ್ನನ್ನು ನ್ಯಾಸರೂಪದಲ್ಲಿ ನನ್ನ ಬಳಿ ಇರಿಸಿದ್ದಾನೆ.
07086022a ತಸ್ಯಾಪಿ ಚ ಮಹಾಬಾಹೋ ನಿತ್ಯಂ ಪಶ್ಯತಿ ಸಂಯುಗೇ।
07086022c ನಾನ್ಯಂ ಹಿ ಪ್ರತಿಯೋದ್ಧಾರಂ ರೌಕ್ಮಿಣೇಯಾದೃತೇ ಪ್ರಭೋ।
07086022e ಮಾಂ ವಾಪಿ ಮನ್ಯತೇ ಯುದ್ಧೇ ಭಾರದ್ವಾಜಸ್ಯ ಧೀಮತಃ।।
ಮಹಾಬಾಹೋ! ಪ್ರಭೋ! ಯುದ್ಧದಲ್ಲಿ ಧೀಮತ ಭಾರದ್ವಾಜನೊಡನೆ ಪ್ರತಿಯಾಗಿ ಯುದ್ಧಮಾಡುವವನು ರೌಕ್ಮಿಣೇಯನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಎಂದು ನಾನು ನಿತ್ಯವೂ ಕಾಣುತ್ತೇನೆ. ಅವನಂತೆ ನನ್ನನ್ನೂ ಪರಿಗಣಿಸುತ್ತಾರೆ.
07086023a ಸೋಽಹಂ ಸಂಭಾವನಾಂ ಚೈತಾಮಾಚಾರ್ಯವಚನಂ ಚ ತತ್।
07086023c ಪೃಷ್ಠತೋ ನೋತ್ಸಹೇ ಕರ್ತುಂ ತ್ವಾಂ ವಾ ತ್ಯಕ್ತುಂ ಮಹೀಪತೇ।।
ಆದುದರಿಂದ ನಾನು ಆಚಾರ್ಯನ ವಚನದಂತೆ ಮಾಡುವುದು ಲೇಸು. ಮಹೀಪತೇ! ನಿನ್ನನ್ನು ಹಿಂದೆಮಾಡುವ ಅಥವಾ ಬಿಟ್ಟುಹೋಗುವ ಕೆಲಸವನ್ನು ಮಾಡಲು ಬಯಸುವುದಿಲ್ಲ.
07086024a ಆಚಾರ್ಯೋ ಲಘುಹಸ್ತತ್ವಾದಭೇದ್ಯಕವಚಾವೃತಃ।
07086024c ಉಪಲಭ್ಯ ರಣೇ ಕ್ರೀಡೇದ್ಯಥಾ ಶಕುನಿನಾ ಶಿಶುಃ।।
ಆಚಾರ್ಯನು ಅಭೇದ್ಯ ಕವಚದಿಂದ ಮತ್ತು ಕೈಚಳಕದಿಂದ ನಿನ್ನನ್ನು ರಣದಲ್ಲಿ ಹಿಡಿದು ಬಾಲಕನು ದಾರಕ್ಕೆ ಕಟ್ಟಿದ ಪಕ್ಷಿಯೊಡನೆ ಹೇಗೋ ಹಾಗೆ ಆಡುತ್ತಾನೆ.
07086025a ಯದಿ ಕಾರ್ಷ್ಣಿರ್ಧನುಷ್ಪಾಣಿರಿಹ ಸ್ಯಾನ್ಮಕರಧ್ವಜಃ।
07086025c ತಸ್ಮೈ ತ್ವಾಂ ವಿಸೃಜೇಯಂ ವೈ ಸ ತ್ವಾಂ ರಕ್ಷೇದ್ಯಥಾರ್ಜುನಃ।।
ಒಂದುವೇಳೆ ಕಾರ್ಷ್ಣಿ16 ಮಕರಧ್ವಜನು ಇಲ್ಲಿ ಇರುತ್ತಿದ್ದರೆ ನಾನು ರಕ್ಷಣೆಗೆ ನಿನ್ನನ್ನು ಅವನಿಗೆ ಒಪ್ಪಿಸಿ ಅರ್ಜುನನ ರಕ್ಷಣೆಗೆ ಹೋಗುತ್ತಿದ್ದೆ.
07086026a ಕುರು ತ್ವಮಾತ್ಮನೋ ಗುಪ್ತಿಂ ಕಸ್ತೇ ಗೋಪ್ತಾ ಗತೇ ಮಯಿ।
07086026c ಯಃ ಪ್ರತೀಯಾದ್ರಣೇ ದ್ರೋಣಂ ಯಾವದ್ಗಚ್ಚಾಮಿ ಪಾಂಡವಂ।।
ನೀನು ನಿನ್ನನ್ನು ರಕ್ಷಿಸಿಕೊಳ್ಳಬೇಕು. ನಾನು ಪಾಂಡವನ ಕಡೆ ಹೋದರೆ ರಣದಲ್ಲಿ ದ್ರೋಣನನ್ನು ಎದುರಿಸಿ ಯುದ್ಧಮಾಡಿ ನಿನ್ನನ್ನು ರಕ್ಷಿಸುವವರು ಯಾರು?
07086027a ಮಾ ಚ ತೇ ಭಯಮದ್ಯಾಸ್ತು ರಾಜನ್ನರ್ಜುನಸಂಭವಂ।
07086027c ನ ಸ ಜಾತು ಮಹಾಬಾಹುರ್ಭಾರಮುದ್ಯಮ್ಯ ಸೀದತಿ।।
ರಾಜನ್! ಅರ್ಜುನನ ಕಾರಣದಿಂದಾಗಿ ನಿನಗೆ ಇಂದು ಯಾವ ಭಯವೂ ಬೇಕಾಗಿಲ್ಲ. ಆ ಮಹಾಬಾಹುವು ಎಂತಹ ಕಷ್ಟದಲ್ಲಿಯೂ ಕುಸಿಯುವುದಿಲ್ಲ.
07086028a ಯೇ ಚ ಸೌವೀರಕಾ ಯೋಧಾಸ್ತಥಾ ಸೈಂಧವಪೌರವಾಃ।
07086028c ಉದೀಚ್ಯಾ ದಾಕ್ಷಿಣಾತ್ಯಾಶ್ಚ ಯೇ ಚಾನ್ಯೇಽಪಿ ಮಹಾರಥಾಃ।।
07086029a ಯೇ ಚ ಕರ್ಣಮುಖಾ ರಾಜನ್ರಥೋದಾರಾಃ ಪ್ರಕೀರ್ತಿತಾಃ।
07086029c ಏತೇಽರ್ಜುನಸ್ಯ ಕ್ರುದ್ಧಸ್ಯ ಕಲಾಂ ನಾರ್ಹಂತಿ ಷೋಡಶೀಂ।।
ಈ ಸೌವೀರಕ ಯೋಧರು, ಹಾಗೆಯೇ ಸೈಂಧವ-ಪೌರವರು, ಉತ್ತರದವರು, ದಕ್ಷಿಣದವರು, ಅನ್ಯ ಮಹಾರಥರು, ಕರ್ಣನೇ ಮೊದಲಾದ ರಥೋದಾರರೆಂದು ಹೇಳಿಸಿಕೊಂಡವರು ಕ್ರುದ್ಧನಾದ ಈ ಅರ್ಜುನನ ಹದಿನಾರರಲ್ಲಿ ಒಂದಂಶಕ್ಕೂ ಸಮರಲ್ಲ.
07086030a ಉದ್ಯುಕ್ತಾ ಪೃಥಿವೀ ಸರ್ವಾ ಸಸುರಾಸುರಮಾನುಷಾ।
07086030c ಸರಾಕ್ಷಸಗಣಾ ರಾಜನ್ಸಕಿನ್ನರಮಹೋರಗಾ।।
07086031a ಜಂಗಮಾಃ ಸ್ಥಾವರೈಃ ಸಾರ್ಧಂ ನಾಲಂ ಪಾರ್ಥಸ್ಯ ಸಂಯುಗೇ।
07086031c ಏವಂ ಜ್ಞಾತ್ವಾ ಮಹಾರಾಜ ವ್ಯೇತು ತೇ ಭೀರ್ಧನಂಜಯೇ।।
ಭೂಮಿಯ ಎಲ್ಲರೂ ಮೇಲೆದ್ದು, ಸುರಾಸುರಮನುಷ್ಯರೊಂದಿಗೆ ರಾಕ್ಷಸಗಣಗಳೂ, ಕಿನ್ನರ ಮಹೋರಗಗಳೂ, ಸ್ಥಾವರ ಜಂಗಮಗಳೂ ಸೇರಿ ಒಟ್ಟಾದರೂ ಅವರು ಸಂಯುಗದಲ್ಲಿ ಪಾರ್ಥನನ್ನು ಮೀರಿಸಲಾರರು. ಮಹಾರಾಜ! ಇದನ್ನು ತಿಳಿದು ಧನಂಜಯನಿಗಾಗಿ ನೀನು ಹೆದರಿ ಕಂಪಿಸಬೇಕಾಗಿಲ್ಲ.
07086032a ಯತ್ರ ವೀರೌ ಮಹೇಷ್ವಾಸೌ ಕೃಷ್ಣೌ ಸತ್ಯಪರಾಕ್ರಮೌ।
07086032c ನ ತತ್ರ ಕರ್ಮಣೋ ವ್ಯಾಪತ್ಕಥಂ ಚಿದಪಿ ವಿದ್ಯತೇ।।
ಎಲ್ಲಿ ವೀರ ಮಹೇಷ್ವಾಸ ಸತ್ಯಪರಾಕ್ರಮಿ ಕೃಷ್ಣರೀರ್ವರು ಇರುವರೋ ಅಲ್ಲಿ ಎಂದೂ ಆಪತ್ತಿನ ವಿಷಯವು ಬರುವುದಿಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು.
07086033a ದೈವಂ ಕೃತಾಸ್ತ್ರತಾಂ ಯೋಗಮಮರ್ಷಮಪಿ ಚಾಹವೇ।
07086033c ಕೃತಜ್ಞತಾಂ ದಯಾಂ ಚೈವ ಭ್ರಾತುಸ್ತ್ವಮನುಚಿಂತಯ।।
ನಿನ್ನ ತಮ್ಮನ ದೈವತ್ವ17ವನ್ನೂ, ಅಸ್ತ್ರಗಳಲ್ಲಿ ಪರಿಣಿತಿಯನ್ನೂ, ಯುದ್ಧದಲ್ಲಿ ಅವನ ಯೋಗತ್ವ ಮತ್ತು ಅಸಹನೆ, ಕೃತಜ್ಞತೆ, ದಯೆಗಳನ್ನು ಜ್ಞಾಪಿಸಿಕೋ!
07086034a ಮಯಿ ಚಾಪ್ಯಪಯಾತೇ ವೈ ಗಚ್ಚಮಾನೇಽರ್ಜುನಂ ಪ್ರತಿ।
07086034c ದ್ರೋಣೇ ಚಿತ್ರಾಸ್ತ್ರತಾಂ ಸಂಖ್ಯೇ ರಾಜಂಸ್ತ್ವಮನುಚಿಂತಯ।।
ರಾಜನ್! ಒಂದುವೇಳೆ ನಾನು ಅರ್ಜುನನಿದ್ದಲ್ಲಿಗೆ ಹೋದರೆ ದ್ರೋಣನು ರಣದಲ್ಲಿ ಪ್ರಯೋಗಿಸುವ ಚಿತ್ರಾಸ್ತ್ರಗಳ ಕುರಿತು ಯೋಚಿಸು!
07086035a ಆಚಾರ್ಯೋ ಹಿ ಭೃಶಂ ರಾಜನ್ನಿಗ್ರಹೇ ತವ ಗೃಧ್ಯತಿ।
07086035c ಪ್ರತಿಜ್ಞಾಮಾತ್ಮನೋ ರಕ್ಷನ್ಸತ್ಯಾಂ ಕರ್ತುಂ ಚ ಭಾರತ।।
ಭಾರತ! ರಾಜನ್! ಆಚಾರ್ಯನು ನಿನ್ನನ್ನು ಹಿಡಿಯಲು ತುಂಬಾ ಆತುರನಾಗಿದ್ದಾನೆ. ತನ್ನನ್ನು ರಕ್ಷಿಸಿಕೊಂಡು ಪ್ರತಿಜ್ಞೆಯನ್ನು ಸತ್ಯವನ್ನಾಗಿಸಲು ಪ್ರಯತ್ನಿಸುತ್ತಾನೆ.
07086036a ಕುರುಷ್ವಾದ್ಯಾತ್ಮನೋ ಗುಪ್ತಿಂ ಕಸ್ತೇ ಗೋಪ್ತಾ ಗತೇ ಮಯಿ।
07086036c ಯಸ್ಯಾಹಂ ಪ್ರತ್ಯಯಾತ್ಪಾರ್ಥ ಗಚ್ಚೇಯಂ ಫಲ್ಗುನಂ ಪ್ರತಿ।।
ನಿನ್ನನ್ನು ನೀನು ರಕ್ಷಿತನನ್ನಾಗಿ ಮಾಡಿಕೋ18! ನಾನು ಹೋದರೆ ನಿನ್ನನ್ನು ಯಾರು ರಕ್ಷಿಸುತ್ತಾರೆ? ಪಾರ್ಥ! ನಿನ್ನನ್ನು ಯಾರಿಗೆ ಒಪ್ಪಿಸಿ ನಾನು ಫಲ್ಗುನನಿದ್ದಲ್ಲಿಗೆ ಹೋಗಲಿ?
07086037a ನ ಹ್ಯಹಂ ತ್ವಾ ಮಹಾರಾಜ ಅನಿಕ್ಷಿಪ್ಯ ಮಹಾಹವೇ।
07086037c ಕ್ವ ಚಿದ್ಯಾಸ್ಯಾಮಿ ಕೌರವ್ಯ ಸತ್ಯಮೇತದ್ಬ್ರವೀಮಿ ತೇ।।
ಮಹಾರಾಜ! ಕೌರವ್ಯ! ಈ ಮಹಾಹವದಲ್ಲಿ ನಿನ್ನನ್ನು ಬೇರೆ ಯಾರಿಗಾದರೂ ಒಪ್ಪಿಸದೇ ನಾನು ಹೋಗುವುದಿಲ್ಲ. ನಾನು ನಿಜವಾದುದನ್ನೇ ನಿನಗೆ ಹೇಳುತ್ತಿದ್ದೇನೆ.
07086038a ಏತದ್ವಿಚಾರ್ಯ ಬಹುಶೋ ಬುದ್ಧ್ಯಾ ಬುದ್ಧಿಮತಾಂ ವರ।
07086038c ದೃಷ್ಟ್ವಾ ಶ್ರೇಯಃ ಪರಂ ಬುದ್ಧ್ಯಾ ತತೋ ರಾಜನ್ಪ್ರಶಾಧಿ ಮಾಂ।।
ಬುದ್ಧಿವಂತರಲ್ಲಿ ಶ್ರೇಷ್ಠ! ಇವೆಲ್ಲವನ್ನು ಬಹಳಬಾರಿ ಬುದ್ಧಿಯನ್ನುಪಯೋಗಿಸಿ ಯೋಚಿಸು! ರಾಜನ್! ಪರಮ ಶ್ರೇಯಸ್ಕರವಾದು ಏನೆಂದು ಬುದ್ಧಿಯಿಂದ ಕಂಡುಕೊಂಡು ನನಗೆ ಆದೇಶವನ್ನು ನೀಡು!”
07086039 ಯುಧಿಷ್ಠಿರ ಉವಾಚ।
07086039a ಏವಮೇತನ್ಮಹಾಬಾಹೋ ಯಥಾ ವದಸಿ ಮಾಧವ।
07086039c ನ ತು ಮೇ ಶುಧ್ಯತೇ ಭಾವಃ ಶ್ವೇತಾಶ್ವಂ ಪ್ರತಿ ಮಾರಿಷ।।
ಯುಧಿಷ್ಠಿರನು ಹೇಳಿದನು: “ಮಹಾಬಾಹೋ! ಮಾಧವ! ಮಾರಿಷ! ನೀನು ಹೇಳಿದುದೆಲ್ಲವೂ ಸರಿಯೇ! ಆದರೆ ಶ್ವೇತಾಶ್ವ ಅರ್ಜುನನ19 ಕುರಿತು ನನ್ನ ಭಾವವು ಅಳುಕದೇ ಇರುವುದಿಲ್ಲ.
07086040a ಕರಿಷ್ಯೇ ಪರಮಂ ಯತ್ನಮಾತ್ಮನೋ ರಕ್ಷಣಂ ಪ್ರತಿ।
07086040c ಗಚ್ಚ ತ್ವಂ ಸಮನುಜ್ಞಾತೋ ಯತ್ರ ಯಾತೋ ಧನಂಜಯಃ।।
ನನ್ನ ರಕ್ಷಣೆಯ ಕುರಿತು ಪರಮ ಯತ್ನವನ್ನು ಮಾಡುತ್ತೇನೆ. ನೀನು ಅಪ್ಪಣೆಯಂತೆ ಧನಂಜಯನು ಎಲ್ಲಿ ಯುದ್ಧಮಾಡುತ್ತಿದ್ದಾನೋ ಅಲ್ಲಿಗೆ ಹೋಗು.
07086041a ಆತ್ಮಸಂರಕ್ಷಣಂ ಸಂಖ್ಯೇ ಗಮನಂ ಚಾರ್ಜುನಂ ಪ್ರತಿ।
07086041c ವಿಚಾರ್ಯೈತದ್ದ್ವಯಂ ಬುದ್ಧ್ಯಾ ಗಮನಂ ತತ್ರ ರೋಚಯೇ।।
ರಣದಲ್ಲಿ ನನ್ನ ಆತ್ಮರಕ್ಷಣೆ ಮತ್ತು ಅರ್ಜುನನ ಬಳಿ ಹೋಗುವುದು - ಈ ಎರಡನ್ನೂ ಬುದ್ಧಿಯಿಂದ ವಿಚಾರಿಸಿ, ಅಲ್ಲಿಗೆ ಹೋಗುವುದೇ ಸರಿಯೆಂದು ಬಯಸಿದ್ದೇನೆ.
07086042a ಸ ತ್ವಮಾತಿಷ್ಠ ಯಾನಾಯ ಯತ್ರ ಯಾತೋ ಧನಂಜಯಃ।
07086042c ಮಮಾಪಿ ರಕ್ಷಣಂ ಭೀಮಃ ಕರಿಷ್ಯತಿ ಮಹಾಬಲಃ।।
ಧನಂಜಯನು ಎಲ್ಲಿ ಯುದ್ಧಮಾಡುತ್ತಿದ್ದಾನೋ ಅಲ್ಲಿಗೆ ಹೋಗಲು ಸಿದ್ಧನಾಗು. ಮಹಾಬಲ ಭೀಮನು ನನ್ನ ರಕ್ಷಣೆಯನ್ನು ಮಾಡುತ್ತಾನೆ.
07086043a ಪಾರ್ಷತಶ್ಚ ಸಸೋದರ್ಯಃ ಪಾರ್ಥಿವಾಶ್ಚ ಮಹಾಬಲಾಃ।
07086043c ದ್ರೌಪದೇಯಾಶ್ಚ ಮಾಂ ತಾತ ರಕ್ಷಿಷ್ಯಂತಿ ನ ಸಂಶಯಃ।।
ಅಯ್ಯಾ! ಸೋದರರೊಂದಿಗೆ ಪಾರ್ಷತ, ಮಹಾಬಲ ಪಾರ್ಥಿವರು ಮತ್ತು ದ್ರೌಪದೇಯರೂ ನನ್ನನ್ನು ರಕ್ಷಿಸುತ್ತಾರೆ. ಅದರಲ್ಲಿ ಸಂಶಯವಿಲ್ಲ.
07086044a ಕೇಕಯಾ ಭ್ರಾತರಃ ಪಂಚ ರಾಕ್ಷಸಶ್ಚ ಘಟೋತ್ಕಚಃ।
07086044c ವಿರಾಟೋ ದ್ರುಪದಶ್ಚೈವ ಶಿಖಂಡೀ ಚ ಮಹಾರಥಃ।।
07086045a ಧೃಷ್ಟಕೇತುಶ್ಚ ಬಲವಾನ್ಕುಂತಿಭೋಜಶ್ಚ ಮಾರಿಷ।
07086045c ನಕುಲಃ ಸಹದೇವಶ್ಚ ಪಾಂಚಾಲಾಃ ಸೃಂಜಯಾಸ್ತಥಾ।
07086045e ಏತೇ ಸಮಾಹಿತಾಸ್ತಾತ ರಕ್ಷಿಷ್ಯಂತಿ ನ ಸಂಶಯಃ।।
ಮಾರಿಷ! ಅಯ್ಯಾ! ಐವರು ಕೇಕಯ ಸಹೋದರರು, ರಾಕ್ಷಸ ಘಟೋತ್ಕಚ, ವಿರಾಟ, ದ್ರುಪದ, ಮಹಾರಥ ಶಿಖಂಡೀ, ಬಲವಾನ್ ಧೃಷ್ಟಕೇತು, ಕುಂತಿಭೋಜ, ನಕುಲ, ಸಹದೇವ ಮತ್ತು ಪಾಂಚಾಲ-ಸೃಂಜಯರು ಒಟ್ಟಾಗಿ ನನ್ನನ್ನು ರಕ್ಷಿಸುತ್ತಾರೆ. ಅದರಲ್ಲಿ ಸಂಶಯವಿಲ್ಲ.
07086046a ನ ದ್ರೋಣಃ ಸಹ ಸೈನ್ಯೇನ ಕೃತವರ್ಮಾ ಚ ಸಂಯುಗೇ।
07086046c ಸಮಾಸಾದಯಿತುಂ ಶಕ್ತೋ ನ ಚ ಮಾಂ ಧರ್ಷಯಿಷ್ಯತಿ।।
ಸೈನ್ಯಸಮೇತ ದ್ರೋಣನಾಗಲೀ ಕೃತವರ್ಮನಾಗಲೀ ಸಂಯುಗದಲ್ಲಿ ನನ್ನ ಬಳಿ ಬರಲೂ ಶಕ್ತರಾಗುವುದಿಲ್ಲ. ನನ್ನನ್ನು ಸೋಲಿಸುವುದು ಹೇಗೆ?
07086047a ಧೃಷ್ಟದ್ಯುಮ್ನಶ್ಚ ಸಮರೇ ದ್ರೋಣಂ ಕ್ರುದ್ಧಂ ಪರಂತಪಃ।
07086047c ವಾರಯಿಷ್ಯತಿ ವಿಕ್ರಮ್ಯ ವೇಲೇವ ಮಕರಾಲಯಂ।।
ಪರಂತಪ ಧೃಷ್ಟದ್ಯುಮ್ನನು ಕ್ರುದ್ಧ ದ್ರೋಣನನ್ನು ವಿಕ್ರಮದಿಂದ ತೀರವು ಸಮುದ್ರವನ್ನು ತಡೆಯುವಂತೆ ನಿಲ್ಲಿಸುವನು.
07086048a ಯತ್ರ ಸ್ಥಾಸ್ಯತಿ ಸಂಗ್ರಾಮೇ ಪಾರ್ಷತಃ ಪರವೀರಹಾ।
07086048c ನ ದ್ರೋಣಸೈನ್ಯಂ ಬಲವತ್ಕ್ರಾಮೇತ್ತತ್ರ ಕಥಂ ಚನ।।
ರಣರಂಗದಲ್ಲಿ ಎಲ್ಲಿ ಪರವೀರಹ ಪಾರ್ಷತನು ನಿಲ್ಲುತ್ತಾನೋ ಅಲ್ಲಿ ಎಂದೂ ದ್ರೋಣ ಸೇನೆಯು ಬಲಾತ್ಕಾರವಾಗಿ ಅತಿಕ್ರಮಿಸಲು ಸಾಧ್ಯವಿಲ್ಲ.
07086049a ಏಷ ದ್ರೋಣವಿನಾಶಾಯ ಸಮುತ್ಪನ್ನೋ ಹುತಾಶನಾತ್।
07086049c ಕವಚೀ ಸ ಶರೀ ಖಡ್ಗೀ ಧನ್ವೀ ಚ ವರಭೂಷಣಃ।।
ಇವನು ದ್ರೋಣನ ವಿನಾಶಕ್ಕಾಗಿಯೇ ಕವಚ, ಧನುರ್ಬಾಣಗಳು, ಖಡ್ಗ ಮತ್ತು ಶ್ರೇಷ್ಠ ಭೂಷಣಗಳನ್ನು ದರಿಸಿ ಅಗ್ನಿಯಿಂದ ಸಮುತ್ಪನ್ನನಾದನು.
07086050a ವಿಶ್ರಬ್ಧೋ ಗಚ್ಚ ಶೈನೇಯ ಮಾ ಕಾರ್ಷೀರ್ಮಯಿ ಸಂಭ್ರಮಂ।
07086050c ಧೃಷ್ಟದ್ಯುಮ್ನೋ ರಣೇ ಕ್ರುದ್ಧೋ ದ್ರೋಣಮಾವಾರಯಿಷ್ಯತಿ।।
ಶೈನೇಯ! ವಿಶ್ವಾಸದಿಂದ ಹೋಗು. ನಾನಿಲ್ಲದಿದ್ದರೆ ಇಲ್ಲಿ ಹೇಗೋ ಎಂದು ಭ್ರಾಂತನಾಗದಿರು. ಕ್ರುದ್ಧನಾದ ಧೃಷ್ಟದ್ಯುಮ್ನನು ರಣದಲ್ಲಿ ದ್ರೋಣರನ್ನು ತಡೆಯುತ್ತಾನೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಯುಧಿಷ್ಠಿರಸಾತ್ಯಕಿವಾಕ್ಯೇ ಷಷ್ಠಾಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಯುಧಿಷ್ಠಿರಸಾತ್ಯಕಿವಾಕ್ಯ ಎನ್ನುವ ಎಂಭತ್ತಾರನೇ ಅಧ್ಯಾಯವು.