ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 85
ಸಾರ
ದ್ರೋಣನಿಂದ ಪೀಡಿತನಾಗುತ್ತಿದ್ದ ಸಾತ್ಯಕಿಯನ್ನು ನೋಡಿ ಯುಧಿಷ್ಠಿರನು ಸರ್ವಸೈನ್ಯಗಳೊಂಡನೆ ದ್ರೋಣನನ್ನು ಆಕ್ರಮಣಿಸಿದ್ದುದು (1-18). ದ್ರೋಣನ ಪರಾಕ್ರಮ (19-35). ಪಾಂಚಜನ್ಯದ ಧ್ವನಿಯನ್ನು ಕೇಳಿ ಮತ್ತು ಗಾಂಡೀವದ ಟೇಂಕಾರವನ್ನು ಕೇಳದೇ ಯುಧಿಷ್ಠಿರನು ಚಿಂತಿತನಾಗಿ ಸಾತ್ಯಕಿಗೆ ಅರ್ಜುನನ ಸಹಾಯಕ್ಕೆ ಹೋಗೆಂದು ಹೇಳಿದುದು (36-101).
07085001 ಧೃತರಾಷ್ಟ್ರ ಉವಾಚ।
07085001a ಭಾರದ್ವಾಜಂ ಕಥಂ ಯುದ್ಧೇ ಯುಯುಧಾನೋಽಭ್ಯವಾರಯತ್।
07085001c ಸಂಜಯಾಚಕ್ಷ್ವ ತತ್ತ್ವೇನ ಪರಂ ಕೌತೂಹಲಂ ಹಿ ಮೇ।।
ಧೃತರಾಷ್ಟ್ರನು ಹೇಳಿದನು: “ಭಾರದ್ವಾಜನು ಯುದ್ಧದಲ್ಲಿ ಯುಯುಧಾನನನ್ನು ಹೇಗೆ ತಡೆದನು? ಸಂಜಯ! ಅದನ್ನು ಸರಿಯಾಗಿ ಹೇಳು. ಅದರಲ್ಲಿ ನನಗೆ ತುಂಬಾ ಕುತೂಹಲವಿದೆ.”
07085002 ಸಂಜಯ ಉವಾಚ।
07085002a ಶೃಣು ರಾಜನ್ಮಹಾಪ್ರಾಜ್ಞ ಸಂಗ್ರಾಮಂ ಲೋಮಹರ್ಷಣಂ।
07085002c ದ್ರೋಣಸ್ಯ ಪಾಂಡವೈಃ ಸಾರ್ಧಂ ಯುಯುಧಾನಪುರೋಗಮೈಃ।।
ಸಂಜಯನು ಹೇಳಿದನು: “ರಾಜನ್! ಯುಯುಧಾನನ ನೇತೃತ್ವದಲ್ಲಿ ಪಾಂಡವರೊಂದಿಗೆ ಮಹಾಪ್ರಾಜ್ಞ ದ್ರೋಣನು ನಡೆಸಿದ ಲೋಮಹರ್ಷಣ ಸಂಗ್ರಾಮದ ಕುರಿತು ಕೇಳು.
07085003a ವಧ್ಯಮಾನಂ ಬಲಂ ದೃಷ್ಟ್ವಾ ಯುಯುಧಾನೇನ ಮಾರಿಷ।
07085003c ಅಭ್ಯದ್ರವತ್ಸ್ವಯಂ ದ್ರೋಣಃ ಸಾತ್ಯಕಿಂ ಸತ್ಯವಿಕ್ರಮಂ।।
ಮಾರಿಷ! ಯುಯುಧಾನನಿಂದ ಸೇನೆಯು ನಾಶಗೊಳ್ಳುತ್ತಿರುವುದನ್ನು ನೋಡಿ ಸ್ವಯಂ ದ್ರೋಣನು ಸತ್ಯವಿಕ್ರಮ ಸಾತ್ಯಕಿಯನ್ನು ಆಕ್ರಮಣಿಸಿದನು.
07085004a ತಮಾಪತಂತಂ ಸಹಸಾ ಭಾರದ್ವಾಜಂ ಮಹಾರಥಂ।
07085004c ಸಾತ್ಯಕಿಃ ಪಂಚವಿಂಶತ್ಯಾ ಕ್ಷುದ್ರಕಾಣಾಂ ಸಮಾರ್ಪಯತ್।।
ಒಮ್ಮೆಲೇ ಮೇಲೆ ಬೀಳುತ್ತಿದ್ದ ಮಹಾರಥ ಭಾರದ್ವಾಜನನ್ನು ಸಾತ್ಯಕಿಯು ಇಪ್ಪತ್ತೈದು ಕ್ಷುದ್ರಕಗಳಿಂದ ಹೊಡೆದನು.
07085005a ದ್ರೋಣೋಽಪಿ ಯುಧಿ ವಿಕ್ರಾಂತೋ ಯುಯುಧಾನಂ ಸಮಾಹಿತಃ।
07085005c ಅವಿಧ್ಯತ್ಪಂಚಭಿಸ್ತೂರ್ಣಂ ಹೇಮಪುಂಖೈಃ ಶಿಲಾಶಿತೈಃ।।
ಯುದ್ಧದಲ್ಲಿ ವಿಕ್ರಾಂತನಾದ ಸಮಾಹಿತನಾದ ದ್ರೋಣನೂ ಕೂಡ ಕೂಡಲೇ ಯುಯುಧಾನನನ್ನು ಐದು ಹೇಮಪುಂಖ ಶಿಲಾಶಿತಗಳಿಂದ ಹೊಡೆದನು.
07085006a ತೇ ವರ್ಮ ಭಿತ್ತ್ವಾ ಸುದೃಢಂ ದ್ವಿಷತ್ಪಿಶಿತಭೋಜನಾಃ।
07085006c ಅಭ್ಯಗುರ್ಧರಣೀಂ ರಾಜನ್ಶ್ವಸಂತ ಇವ ಪನ್ನಗಾಃ।।
ರಾಜನ್! ಶತ್ರುವಿನ ರಕ್ತವನ್ನು ಕುಡಿಯಬಲ್ಲ ಅವು ಅವನ ಸುದೃಢ ಕವಚವನ್ನು ಭೇದಿಸಿ, ಬುಸುಗುಟ್ಟುವ ಸರ್ಪಗಳಂತೆ ಭೂಮಿಯನ್ನು ಹೊಕ್ಕವು.
07085007a ದೀರ್ಘಬಾಹುರಭಿಕ್ರುದ್ಧಸ್ತೋತ್ತ್ರಾರ್ದಿತ ಇವ ದ್ವಿಪಃ।
07085007c ದ್ರೋಣಂ ಪಂಚಾಶತಾವಿಧ್ಯನ್ನಾರಾಚೈರಗ್ನಿಸನ್ನಿಭೈಃ।।
ಅಂಕುಶದಿಂದ ಪೀಡಿತ ಸಲಗದಂತೆ ಕ್ರುದ್ಧನಾದ ಆ ದೀರ್ಘಬಾಹುವು ದ್ರೋಣನನ್ನು ಐನೂರು ಅಗ್ನಿಸನ್ನಿಭ ನಾರಾಚಗಳಿಂದ ಹೊಡೆದನು.
07085008a ಭಾರದ್ವಾಜೋ ರಣೇ ವಿದ್ಧೋ ಯುಯುಧಾನೇನ ಸತ್ವರಂ।
07085008c ಸಾತ್ಯಕಿಂ ಬಹುಭಿರ್ಬಾಣೈರ್ಯತಮಾನಮವಿಧ್ಯತ।।
ರಣದಲ್ಲಿ ಯುಯುಧಾನನಿಂದ ಪ್ರಹರಿಸಲ್ಪಟ್ಟ ಭಾರದ್ವಾಜನು ಪ್ರಯತ್ನಪಟ್ಟು ಸಾತ್ಯಕಿಯನ್ನು ಅನೇಕ ಬಾಣಗಳಿಂದ ಹೊಡೆದನು.
07085009a ತತಃ ಕ್ರುದ್ಧೋ ಮಹೇಷ್ವಾಸೋ ಭೂಯ ಏವ ಮಹಾಬಲಃ।
07085009c ಸಾತ್ವತಂ ಪೀಡಯಾಮಾಸ ಶತೇನ ನತಪರ್ವಣಾ।।
ಆಗ ಪುನಃ ಕ್ರುದ್ಧನಾದ ಆ ಮಹಾಬಲ ಮಹೇಷ್ವಾಸನು ನೂರಾರು ನತಪರ್ವಗಳಿಂದ ಸಾತ್ವತನನ್ನು ಪೀಡಿಸಿದನು.
07085010a ಸ ವಧ್ಯಮಾನಃ ಸಮರೇ ಭಾರದ್ವಾಜೇನ ಸಾತ್ಯಕಿಃ।
07085010c ನಾಭ್ಯಪದ್ಯತ ಕರ್ತವ್ಯಂ ಕಿಂ ಚಿದೇವ ವಿಶಾಂ ಪತೇ।।
ವಿಶಾಂಪತೇ! ಭಾರದ್ವಾಜನಿಂದ ಸಮರದಲ್ಲಿ ಪ್ರಹರಿಸಲ್ಪಡುತ್ತಿದ್ದ ಸಾತ್ಯಕಿಯು ತನ್ನ ಕರ್ತವ್ಯದಿಂದ ಸ್ವಲ್ಪವೂ ಹಿಂಜರಿಯಲಿಲ್ಲ.
07085011a ವಿಷಣ್ಣವದನಶ್ಚಾಪಿ ಯುಯುಧಾನೋಽಭವನ್ನೃಪ।
07085011c ಭಾರದ್ವಾಜಂ ರಣೇ ದೃಷ್ಟ್ವಾ ವಿಸೃಜಂತಂ ಶಿತಾನ್ಶರಾನ್।।
ನೃಪ! ರಣದಲ್ಲಿ ನಿಶಿತಶರಗಳನ್ನು ಬಿಡುತ್ತಿರುವ ಭಾರದ್ವಾಜನನ್ನು ನೋಡಿ ಯುಯುಧಾನನು ವಿಷಣ್ಣವದನನಾದನು.
07085012a ತಂ ತು ಸಂಪ್ರೇಕ್ಷ್ಯ ತೇ ಪುತ್ರಾಃ ಸೈನಿಕಾಶ್ಚ ವಿಶಾಂ ಪತೇ।
07085012c ಪ್ರಹೃಷ್ಟಮನಸೋ ಭೂತ್ವಾ ಸಿಂಹವದ್ವ್ಯನದನ್ಮುಹುಃ।।
ವಿಶಾಂಪತೇ! ಅವನನ್ನು ಹಾಗೆ ನೋಡಿದ ನಿನ್ನ ಪುತ್ರರು ಮತ್ತು ಸೈನಿಕರು ಪ್ರಹೃಷ್ಟಮನಸ್ಕರಾಗಿ ಪುನಃ ಪುನಃ ಸಿಂಹನಾದಗೈದರು.
07085013a ತಂ ಶ್ರುತ್ವಾ ನಿನದಂ ಘೋರಂ ಪೀಡ್ಯಮಾನಂ ಚ ಮಾಧವಂ।
07085013c ಯುಧಿಷ್ಠಿರೋಽಬ್ರವೀದ್ರಾಜನ್ಸರ್ವಸೈನ್ಯಾನಿ ಭಾರತ।।
ರಾಜನ್! ಭಾರತ! ಆ ಘೋರ ನಿನಾದವನ್ನು ಮತ್ತು ಮಾಧವನನ್ನು ಪೀಡಿಸುತ್ತಿರುವುದನ್ನು ಕೇಳಿ ಯುಧಿಷ್ಠಿರನು ತನ್ನ ಸರ್ವ ಸೇನೆಗಳಿಗೆ ಹೇಳಿದನು:
07085014a ಏಷ ವೃಷ್ಣಿವರೋ ವೀರಃ ಸಾತ್ಯಕಿಃ ಸತ್ಯಕರ್ಮಕೃತ್।
07085014c ಗ್ರಸ್ಯತೇ ಯುಧಿ ವೀರೇಣ ಭಾನುಮಾನಿವ ರಾಹುಣಾ।
07085014e ಅಭಿದ್ರವತ ಗಚ್ಚಧ್ವಂ ಸಾತ್ಯಕಿರ್ಯತ್ರ ಯುಧ್ಯತೇ।।
“ಇಗೋ! ವೃಷ್ಣಿವರ ವೀರ ಸತ್ಯಕರ್ಮಕರ್ತ ಸಾತ್ಯಕಿಯು ಯುದ್ಧದಲ್ಲಿ ರಾಹುವಿನಿಂದ ಸೂರ್ಯನು ಹೇಗೋ ಹಾಗೆ ವೀರನಿಂದ ಕಬಳಿಸಲ್ಪಡುತ್ತಿದ್ದಾನೆ. ಸಾತ್ಯಕಿಯು ಎಲ್ಲಿ ಯುದ್ಧಮಾಡುತ್ತಿದ್ದಾನೋ ಅಲ್ಲಿಗೆ ಧಾವಿಸಿ ಹೋಗಿ.”
07085015a ಧೃಷ್ಟದ್ಯುಮ್ನಂ ಚ ಪಾಂಚಾಲ್ಯಮಿದಮಾಹ ಜನಾಧಿಪ।
07085015c ಅಭಿದ್ರವ ದ್ರುತಂ ದ್ರೋಣಂ ಕಿಂ ನು ತಿಷ್ಠಸಿ ಪಾರ್ಷತ।
07085015e ನ ಪಶ್ಯಸಿ ಭಯಂ ಘೋರಂ ದ್ರೋಣಾನ್ನಃ ಸಮುಪಸ್ಥಿತಂ।।
ಜನಾಧಿಪನು ಪಾಂಚಾಲ್ಯ ಧೃಷ್ಟದ್ಯುಮ್ನನಿಗೆ ಇದನ್ನು ಹೇಳಿದನು: “ಪಾರ್ಷತ! ಇನ್ನೂ ಏಕೆ ನಿಂತಿದ್ದೀಯೆ? ದ್ರೋಣನಿರುವಲ್ಲಿ ಬೇಗ ಹೋಗು! ಬರಲಿರುವ ಘೋರ ಭಯವನ್ನು ದ್ರೋಣನು ಇನ್ನೂ ಕಂಡಿರಲಿಕ್ಕಿಲ್ಲ.
07085016a ಅಸೌ ದ್ರೋಣೋ ಮಹೇಷ್ವಾಸೋ ಯುಯುಧಾನೇನ ಸಂಯುಗೇ।
07085016c ಕ್ರೀಡತೇ ಸೂತ್ರಬದ್ಧೇನ ಪಕ್ಷಿಣಾ ಬಾಲಕೋ ಯಥಾ।।
ಈ ಮಹೇಷ್ವಾಸ ದ್ರೋಣನು ಸಂಯುಗದಲ್ಲಿ ಯುಯುಧಾನನೊಡನೆ ದಾರಕ್ಕೆ ಕಟ್ಟಿದ ಪಕ್ಷಿಯೊಡನೆ ಬಾಲಕನು ಆಡುವಂತೆ ಆಡುತ್ತಿದ್ದಾನೆ!
07085017a ತತ್ರೈವ ಸರ್ವೇ ಗಚ್ಚಂತು ಭೀಮಸೇನಮುಖಾ ರಥಾಃ।
07085017c ತ್ವಯೈವ ಸಹಿತಾ ಯತ್ತಾ ಯುಯುಧಾನರಥಂ ಪ್ರತಿ।।
ಭೀಮಸೇನನೇ ಮೊದಲಾದ ಎಲ್ಲ ರಥರೂ, ನಿನ್ನನ್ನೂ ಸೇರಿ, ಯುಯುಧಾನನ ರಥದ ಕಡೆಗೇ ಹೋಗಲಿ.
07085018a ಪೃಷ್ಠತೋಽನುಗಮಿಷ್ಯಾಮಿ ತ್ವಾಮಹಂ ಸಹಸೈನಿಕಃ।
07085018c ಸಾತ್ಯಕಿಂ ಮೋಕ್ಷಯಸ್ವಾದ್ಯ ಯಮದಂಷ್ಟ್ರಾಂತರಂ ಗತಂ।।
ಸೈನಿಕರೊಡನೆ ನಾನು ನಿಮ್ಮನ್ನು ಹಿಂಬಾಲಿಸಿ ಬರುತ್ತೇನೆ. ಯಮನ ದವಡೆಗಳಲ್ಲಿ ಸಿಲುಕಿರುವ ಸಾತ್ಯಕಿಯನ್ನು ಬಿಡಿಸಿ!”
07085019a ಏವಮುಕ್ತ್ವಾ ತತೋ ರಾಜಾ ಸರ್ವಸೈನ್ಯೇನ ಪಾಂಡವಃ।
07085019c ಅಭ್ಯದ್ರವದ್ರಣೇ ದ್ರೋಣಂ ಯುಯುಧಾನಸ್ಯ ಕಾರಣಾತ್।।
ಹೀಗೆ ಹೇಳಿ ರಾಜಾ ಪಾಂಡವನು ಸರ್ವಸೈನ್ಯಗಳೊಡನೆ ರಣದಲ್ಲಿ ಯುಯುಧಾನನ ಕಾರಣದಿಂದಾಗಿ ದ್ರೋಣನನ್ನು ಆಕ್ರಮಣಿಸಿದನು.
07085020a ತತ್ರಾರಾವೋ ಮಹಾನಾಸೀದ್ದ್ರೋಣಮೇಕಂ ಯುಯುತ್ಸತಾಂ।
07085020c ಪಾಂಡವಾನಾಂ ಚ ಭದ್ರಂ ತೇ ಸೃಂಜಯಾನಾಂ ಚ ಸರ್ವಶಃ।।
ನಿನಗೆ ಮಂಗಳವಾಗಲಿ! ಆಗ ಅಲ್ಲಿ ದ್ರೋಣನೊಬ್ಬನೊಡನೆ ಪಾಂಡವರ ಮತ್ತು ಸೃಂಜಯರೊಡನೆ ಯುದ್ಧವು ನಡೆಯಿತು.
07085021a ತೇ ಸಮೇತ್ಯ ನರವ್ಯಾಘ್ರಾ ಭಾರದ್ವಾಜಂ ಮಹಾರಥಂ।
07085021c ಅಭ್ಯವರ್ಷಂ ಶರೈಸ್ತೀಕ್ಷ್ಣೈಃ ಕಂಕಬರ್ಹಿಣವಾಜಿತೈಃ।।
ಆ ನರವ್ಯಾಘ್ರರೆಲ್ಲ ಸೇರಿ ಮಹಾರಥ ಭಾರದ್ವಾಜನ ಮೇಲೆ ತೀಕ್ಷ್ಣವಾದ ಕಂಕ ಮತ್ತು ನವಿಲುಗರಿಗಳಿಂದ ಮಾಡಲ್ಪಟ್ಟ ಶರಗಳನ್ನು ಸುರಿಸಿದರು.
07085022a ಸ್ಮಯನ್ನೇವ ತು ತಾನ್ವೀರಾನ್ದ್ರೋಣಃ ಪ್ರತ್ಯಗ್ರಹೀತ್ಸ್ವಯಂ।
07085022c ಅತಿಥೀನಾಗತಾನ್ಯದ್ವತ್ಸಲಿಲೇನಾಸನೇನ ಚ।।
ನಸುನಗುತ್ತಾಲೇ ಸ್ವಯಂ ದ್ರೋಣನು ಆ ವೀರರನ್ನು ಬಂದಿರುವ ಅತಿಥಿಗಳನ್ನು ನೀರು-ಆಸನಗಳನ್ನಿತ್ತು ಬರಮಾಡಿಕೊಳ್ಳುವಂತೆ ಬರಮಾಡಿಕೊಂಡನು.
07085023a ತರ್ಪಿತಾಸ್ತೇ ಶರೈಸ್ತಸ್ಯ ಭಾರದ್ವಾಜಸ್ಯ ಧನ್ವಿನಃ।
07085023c ಆತಿಥೇಯಗೃಹಂ ಪ್ರಾಪ್ಯ ನೃಪತೇಽತಿಥಯೋ ಯಥಾ।।
ನೃಪತೇ! ಅತಿಥಿಗೃಹವನ್ನು ಸೇರಿದ ಅತಿಥಿಗಳು ಹೇಗೋ ಹಾಗೆ ಅವರು ಧನ್ವಿ ಭಾರದ್ವಾಜನ ಶರಗಳಿಂದ ತೃಪ್ತರಾದರು.
07085024a ಭಾರದ್ವಾಜಂ ಚ ತೇ ಸರ್ವೇ ನ ಶೇಕುಃ ಪ್ರತಿವೀಕ್ಷಿತುಂ।
07085024c ಮಧ್ಯಂದಿನಮನುಪ್ರಾಪ್ತಂ ಸಹಸ್ರಾಂಶುಮಿವ ಪ್ರಭೋ।।
ಪ್ರಭೋ! ಮಧ್ಯಾಹ್ನವನ್ನು ತಲುಪಿದ ಸಹಸ್ರಾಂಶು ಸೂರ್ಯನಂತಿರುವ ಆ ಭಾರದ್ವಾಜನನ್ನು ಅವರೆಲ್ಲರೂ ನೋಡಲೂ ಕೂಡ ಶಕ್ಯರಾಗಿರಲಿಲ್ಲ.
07085025a ತಾಂಸ್ತು ಸರ್ವಾನ್ಮಹೇಷ್ವಾಸಾನ್ದ್ರೋಣಃ ಶಸ್ತ್ರಭೃತಾಂ ವರಃ।
07085025c ಅತಾಪಯಚ್ಚರವ್ರಾತೈರ್ಗಭಸ್ತಿಭಿರಿವಾಂಶುಮಾನ್।।
ಆ ಎಲ್ಲ ಮಹೇಷ್ವಾಸರನ್ನೂ ಶಸ್ತ್ರಭೃತರಲ್ಲಿ ಶ್ರೇಷ್ಠನಾದ ದ್ರೋಣನು ಸೂರ್ಯನು ತನ್ನ ಕಿರಣಗಳಿಂದ ಭುವನಗಳನ್ನು ಸುಡುವಂತೆ ಶರವ್ರಾತಗಳಿಂದ ಸುಟ್ಟನು.
07085026a ವಧ್ಯಮಾನಾ ರಣೇ ರಾಜನ್ಪಾಂಡವಾಃ ಸೃಂಜಯಾಸ್ತಥಾ।
07085026c ತ್ರಾತಾರಂ ನಾಧ್ಯಗಚ್ಚಂತ ಪಂಕಮಗ್ನಾ ಇವ ದ್ವಿಪಾಃ।।
ರಾಜನ್! ಹೀಗೆ ರಣದಲ್ಲಿ ವಧಿಸಲ್ಪಡುತ್ತಿದ್ದ ಆ ಪಾಂಡವ-ಸೃಂಜಯರು ಕೆಸರಿನಲ್ಲಿ ಹುಗಿದುಹೋದ ಆನೆಗಳಂತೆ ತ್ರಾತಾರನನ್ನು ಕಾಣದೇ ಹೋದರು.
07085027a ದ್ರೋಣಸ್ಯ ಚ ವ್ಯದೃಶ್ಯಂತ ವಿಸರ್ಪಂತೋ ಮಹಾಶರಾಃ।
07085027c ಗಭಸ್ತಯ ಇವಾರ್ಕಸ್ಯ ಪ್ರತಪಂತಃ ಸಮಂತತಃ।।
ದ್ರೋಣನಿಂದ ಹರಿದು ಬರುತ್ತಿದ್ದ ಆ ಮಹಾಶರಗಳು ಸೂರ್ಯನ ಕಿರಣಗಳಂತೆ ಎಲ್ಲಕಡೆ ಸುಡುತ್ತಿದ್ದವು.
07085028a ತಸ್ಮಿನ್ದ್ರೋಣೇನ ನಿಹತಾಃ ಪಾಂಚಾಲಾಃ ಪಂಚವಿಂಶತಿಃ।
07085028c ಮಹಾರಥಸಮಾಖ್ಯಾತಾ ಧೃಷ್ಟದ್ಯುಮ್ನಸ್ಯ ಸಮ್ಮತಾಃ।।
ಅಲ್ಲಿ ದ್ರೋಣನು– ಮಹಾರಥರೆಂದು ಸಮಾಖ್ಯಾತರಾದ ಮತ್ತು ಧೃಷ್ಟದ್ಯುಮ್ನನಿಂದ ಸಮ್ಮತರಾದ ಇಪ್ಪತ್ತೈದು ಪಾಂಚಾಲರನ್ನು ಸಂಹರಿಸಿದನು.
07085029a ಪಾಂಡೂನಾಂ ಸರ್ವಸೈನ್ಯೇಷು ಪಾಂಚಾಲಾನಾಂ ತಥೈವ ಚ।
07085029c ದ್ರೋಣಂ ಸ್ಮ ದದೃಶುಃ ಶೂರಂ ವಿನಿಘ್ನಂತಂ ವರಾನ್ವರಾನ್।।
ಪಾಂಡವರ ಮತ್ತು ಪಾಂಚಾಲರ ಎಲ್ಲ ಸೇನೆಗಳಲ್ಲಿ ಶ್ರೇಷ್ಠ ಶ್ರೇಷ್ಠರಾದವರನ್ನು ಶೂರನು ಸಂಹರಿಸುತ್ತಿರುವುದು ಕಾಣುತ್ತಿತ್ತು.
07085030a ಕೇಕಯಾನಾಂ ಶತಂ ಹತ್ವಾ ವಿದ್ರಾವ್ಯ ಚ ಸಮಂತತಃ।
07085030c ದ್ರೋಣಸ್ತಸ್ಥೌ ಮಹಾರಾಜ ವ್ಯಾದಿತಾಸ್ಯ ಇವಾಂತಕಃ।।
ಮಹಾರಾಜ! ಕೇಕಯರ ನೂರರನ್ನು ಸಂಹಸಿ, ಉಳಿದವರು ಎಲ್ಲಕಡೆ ಓಡಿ ಹೋಗುತ್ತಿರಲು ದ್ರೋಣನು ಅಲ್ಲಿ ಬಾಯಿಕಳೆದ ಅಂತಕನಂತೆ ನಿಂತಿದ್ದನು.
07085031a ಪಾಂಚಾಲಾನ್ಸೃಂಜಯಾನ್ಮತ್ಸ್ಯಾನ್ಕೇಕಯಾನ್ಪಾಂಡವಾನಪಿ।
07085031c ದ್ರೋಣೋಽಜಯನ್ಮಹಾಬಾಹುಃ ಶತಶೋಽಥ ಸಹಸ್ರಶಃ।।
ಮಹಾಬಾಹು ದ್ರೋಣನು ನೂರಾರು ಸಹಸ್ರಾರು ಪಾಂಚಾಲ-ಸೃಂಜಯ-ಮತ್ಸ್ಯ-ಕೇಕಯ-ಪಾಂಡವರನ್ನು ಗೆದ್ದನು.
07085032a ತೇಷಾಂ ಸಮಭವಚ್ಚಬ್ದೋ ವಧ್ಯತಾಂ ದ್ರೋಣಸಾಯಕೈಃ।
07085032c ವನೌಕಸಾಮಿವಾರಣ್ಯೇ ದಹ್ಯತಾಂ ಧೂಮಕೇತುನಾ।।
ದ್ರೋಣನ ಸಾಯಕಗಳು ಅವರನ್ನು ವಧಿಸುತ್ತಿರುವಾಗ ಕೇಳಿಬಂದ ಶಬ್ಧವು ಅರಣ್ಯದಲ್ಲಿ ವನವಾಸಿಗಳು ಬೆಂಕಿಯಿಂದ ಸುಟ್ಟುಹೋಗುವಾಗ ಕೇಳುವ ಶಬ್ಧದಂತಿತ್ತು.
07085033a ತತ್ರ ದೇವಾಃ ಸಗಂಧರ್ವಾಃ ಪಿತರಶ್ಚಾಬ್ರುವನ್ನೃಪ।
07085033c ಏತೇ ದ್ರವಂತಿ ಪಾಂಚಾಲಾಃ ಪಾಂಡವಾಶ್ಚ ಸಸೈನಿಕಾಃ।।
ಅಲ್ಲಿ ಗಂಧರ್ವರು ಮತ್ತು ಪಿತೃಗಳೊಂದಿಗೆ ದೇವತೆಗಳು “ಇದೋ! ಪಾಂಚಾಲರು ಮತ್ತು ಪಾಂಡವರು ಸೈನಿಕರೊಂದಿಗೆ ಓಡಿ ಹೋಗುತ್ತಿದ್ದಾರೆ!” ಎಂದು ಹೇಳಿಕೊಂಡರು.
07085034a ತಂ ತಥಾ ಸಮರೇ ದ್ರೋಣಂ ನಿಘ್ನಂತಂ ಸೋಮಕಾನ್ರಣೇ।
07085034c ನ ಚಾಪ್ಯಭಿಯಯುಃ ಕೇ ಚಿದಪರೇ ನೈವ ವಿವ್ಯಧುಃ।।
ಹೀಗೆ ಸಮರದಲ್ಲಿ ದ್ರೋಣನು ಸೋಮಕರನ್ನು ಸಂಹರಿಸುತ್ತಿರುವಾಗ ರಣದಲ್ಲಿ ಯಾರೂ ಅವನನ್ನು ಎದುರಿಸಲಿಲ್ಲ ಮತ್ತು ಯಾರೂ ಅವನನ್ನು ಗಾಯಗೊಳಿಸಲಿಲ್ಲ.
07085035a ವರ್ತಮಾನೇ ತಥಾ ರೌದ್ರೇ ತಸ್ಮಿನ್ವೀರವರಕ್ಷಯೇ।
07085035c ಅಶೃಣೋತ್ಸಹಸಾ ಪಾರ್ಥಃ ಪಾಂಚಜನ್ಯಸ್ಯ ನಿಸ್ವನಂ।।
07085036a ಪೂರಿತೋ ವಾಸುದೇವೇನ ಶಂಖರಾಟ್ಸ್ವನತೇ ಭೃಶಂ।
ಹಾಗೆ ರೌದ್ರವಾದ ವೀರಶ್ರೇಷ್ಠರ ವಿನಾಶವು ನಡೆಯುತ್ತಿರಲು ಪಾರ್ಥ (ಯುಧಿಷ್ಠಿರ) ನು ಒಮ್ಮೆಲೇ ಪಾಂಚಜನ್ಯದ ಧ್ವನಿಯನ್ನು ಕೇಳಿದನು. ವಾಸುದೇವನಿಂದ ಊದಲ್ಪಟ್ಟ ಆ ಶಂಖರಾಜನ ಧ್ವನಿಯು ಜೋರಾಗಿತ್ತು.
07085036c ಯುಧ್ಯಮಾನೇಷು ವೀರೇಷು ಸೈಂಧವಸ್ಯಾಭಿರಕ್ಷಿಷು।
07085036e ನದತ್ಸು ಧಾರ್ತರಾಷ್ಟ್ರೇಷು ವಿಜಯಸ್ಯ ರಥಂ ಪ್ರತಿ।।
07085037a ಗಾಂಡೀವಸ್ಯ ಚ ನಿರ್ಘೋಷೇ ವಿಪ್ರನಷ್ಟೇ ಸಮಂತತಃ।
07085037c ಕಶ್ಮಲಾಭಿಹತೋ ರಾಜಾ ಚಿಂತಯಾಮಾಸ ಪಾಂಡವಃ।।
ಯುದ್ಧಮಾಡುತ್ತಿದ್ದ ಸೈಂಧವನ ರಕ್ಷಕ ವೀರ ಧಾರ್ತರಾಷ್ಟ್ರರು ವಿಜಯ (ಅರ್ಜುನ) ನ ರಥದ ಬಳಿ ಕೂಗಾಡುತ್ತಿದ್ದುದರಿಂದ ಗಾಂಡೀವದ ನಿರ್ಘೋಷವು ಎಲ್ಲಕಡೆ ಕೇಳಿಬರುತ್ತಿರಲಿಲ್ಲ. ಆಗ ರಾಜಾ ಪಾಂಡವನು ಎಚ್ಚರ ತಪ್ಪಿ ಚಿಂತಿತನಾದನು:
07085038a ನ ನೂನಂ ಸ್ವಸ್ತಿ ಪಾರ್ಥಸ್ಯ ಯಥಾ ನದತಿ ಶಂಖರಾಟ್।
07085038c ಕೌರವಾಶ್ಚ ಯಥಾ ಹೃಷ್ಟಾ ವಿನದಂತಿ ಮುಹುರ್ಮುಹುಃ।।
“ಶಂಖರಾಜನು ಹೇಗೆ ಧ್ವನಿಸುತ್ತಿರುವನೋ ಮತ್ತು ಹೇಗೆ ಕೌರವರು ಮತ್ತೆ ಮತ್ತೆ ಕೂಗಾಡುತ್ತಿದ್ದಾರೆ ಅಂದರೆ ಪಾರ್ಥನಿಗೆ ಏನೋ ಒಳ್ಳೆಯದಾಗಿರಲಿಕ್ಕಿಲ್ಲ!”
07085039a ಏವಂ ಸಂಚಿಂತಯಿತ್ವಾ ತು ವ್ಯಾಕುಲೇನಾಂತರಾತ್ಮನಾ।
07085039c ಅಜಾತಶತ್ರುಃ ಕೌಂತೇಯಃ ಸಾತ್ವತಂ ಪ್ರತ್ಯಭಾಷತ।।
ಹೀಗೆ ಚಿಂತಿಸುತ್ತಾ ಒಳಗಿಂದೊಳಗೇ ವ್ಯಾಕುಲನಾಗಿ ಅಜಾತಶತ್ರು ಕೌಂತೇಯನು ಸಾತ್ವತ ಸಾತ್ಯಕಿಗೆ ಹೇಳಿದನು:
07085040a ಬಾಷ್ಪಗದ್ಗದಯಾ ವಾಚಾ ಮುಹ್ಯಮಾನೋ ಮುಹುರ್ಮುಹುಃ।
07085040c ಕೃತ್ಯಸ್ಯಾನಂತರಾಪೇಕ್ಷೀ ಶೈನೇಯಂ ಶಿನಿಪುಂಗವಂ।।
ಮತ್ತೆ ಮತ್ತೆ ಮೂರ್ಛೆಹೋಗುತ್ತಾ ಕಣ್ಣೀರಿನಿಂದ ಗದ್ಗದ ಕಂಠನಾಗಿ ಮುಂದೆ ಮಾಡಬೇಕಾದನ್ನು ಅಪೇಕ್ಷಿಸುತ್ತಾ ಶಿನಿಪುಂಗವ ಶೈನೇಯನಿಗೆ ಹೇಳಿದನು.
07085041a ಯಃ ಸ ಧರ್ಮಃ ಪುರಾ ದೃಷ್ಟಃ ಸದ್ಭಿಃ ಶೈನೇಯ ಶಾಶ್ವತಃ।
07085041c ಸಾಂಪರಾಯೇ ಸುಹೃತ್ಕೃತ್ಯೇ ತಸ್ಯ ಕಾಲೋಽಯಮಾಗತಃ।।
“ಶೈನೇಯ! ಹಿಂದೆ ಸದಾಚಾರಿಗಳು ಯಾವುದನ್ನು ಶಾಶ್ವತ ಧರ್ಮವೆಂದು ಕಂಡುಕೊಂಡಿದ್ದರೋ ಆ ಆಪತ್ತಿನಲ್ಲಿರುವ ಸುಹೃದಯರಿಗೆ ಮಾಡಬೇಕಾದ ಕರ್ತವ್ಯದ ಕಾಲವು ಬಂದೊದಗಿದೆ.
07085042a ಸರ್ವೇಷ್ವಪಿ ಚ ಯೋಧೇಷು ಚಿಂತಯನ್ಶಿನಿಪುಂಗವ।
07085042c ತ್ವತ್ತಃ ಸುಹೃತ್ತಮಂ ಕಂ ಚಿನ್ನಾಭಿಜಾನಾಮಿ ಸಾತ್ಯಕೇ।।
ಶಿನಿಪುಂಗವ! ಸಾತ್ಯಕೇ! ಎಲ್ಲ ಯೋಧರ ಕುರಿತು ಯೋಚಿಸಿದರೂ ನಿನ್ನಂತಹ ಉತ್ತಮನಾದ ಬೇರೆ ಯಾರನ್ನೂ ನಾನು ತಿಳಿಯೆನು.
07085043a ಯೋ ಹಿ ಪ್ರೀತಮನಾ ನಿತ್ಯಂ ಯಶ್ಚ ನಿತ್ಯಮನುವ್ರತಃ।
07085043c ಸ ಕಾರ್ಯೇ ಸಾಂಪರಾಯೇ ತು ನಿಯೋಜ್ಯ ಇತಿ ಮೇ ಮತಿಃ।।
ಯಾರು ನಿತ್ಯವೂ ಪ್ರೀತಮನಸ್ಕನಾಗಿರುತ್ತಾನೋ, ನಿತ್ಯವೂ ಅನುವ್ರತನಾಗಿರುತ್ತಾನೋ ಅವನಿಗೇ ಆಪತ್ತಿನಲ್ಲಿ ಕಾರ್ಯವನ್ನು ನಿಯೋಜಿಸಬೇಕು ಎಂದು ನನ್ನ ಅಭಿಪ್ರಾಯ.
07085044a ಯಥಾ ಚ ಕೇಶವೋ ನಿತ್ಯಂ ಪಾಂಡವಾನಾಂ ಪರಾಯಣಂ।
07085044c ತಥಾ ತ್ವಮಪಿ ವಾರ್ಷ್ಣೇಯ ಕೃಷ್ಣತುಲ್ಯಪರಾಕ್ರಮಃ।।
ವಾರ್ಷ್ಣೇಯ! ಕೇಶವನು ಹೇಗೆ ನಿತ್ಯವೂ ಪಾಂಡವರನ್ನೇ ನೆನೆಯುತ್ತಿರುತ್ತಾನೋ ಹಾಗೆ ಪರಾಕ್ರಮದಲ್ಲಿ ಕೃಷ್ಣನ ಸಮನಾದ ನೀನೂ ಕೂಡ.
07085045a ಸೋಽಹಂ ಭಾರಂ ಸಮಾಧಾಸ್ಯೇ ತ್ವಯಿ ತಂ ವೋಢುಮರ್ಹಸಿ।
07085045c ಅಭಿಪ್ರಾಯಂ ಚ ಮೇ ನಿತ್ಯಂ ನ ವೃಥಾ ಕರ್ತುಮರ್ಹಸಿ।।
ನಾನು ನಿನ್ನ ಮೇಲೆ ಒಂದು ಭಾರವನ್ನು ಹೊರಿಸುತ್ತಿದ್ದೇನೆ. ಅದನ್ನು ನೀನು ಹೊರಬೇಕು. ಎಂದೂ ಇದನ್ನು ನಿರ್ವಹಿಸದೇ ಇರಬಾರದೆಂದು ನನ್ನ ಅಭಿಪ್ರಾಯ.
07085046a ಸ ತ್ವಂ ಭ್ರಾತುರ್ವಯಸ್ಯಸ್ಯ ಗುರೋರಪಿ ಚ ಸಂಯುಗೇ।
07085046c ಕುರು ಕೃಚ್ಚ್ರೇ ಸಹಾಯಾರ್ಥಮರ್ಜುನಸ್ಯ ನರರ್ಷಭ।।
ನರರ್ಷಭ! ಅರ್ಜುನನು ನಿನಗೆ ಅಣ್ಣನಂತೆ. ಗೆಳೆಯನಂತೆ. ಮತ್ತು ಗುರುವಿನಂತೆ ಕೂಡ. ಕಷ್ಟದಲ್ಲಿರುವ ಅವನಿಗೆ ನೀನು ಸಹಾಯಮಾಡು.
07085047a ತ್ವಂ ಹಿ ಸತ್ಯವ್ರತಃ ಶೂರೋ ಮಿತ್ರಾಣಾಮಭಯಂಕರಃ।
07085047c ಲೋಕೇ ವಿಖ್ಯಾಯಸೇ ವೀರ ಕರ್ಮಭಿಃ ಸತ್ಯವಾಗಿತಿ।।
ನೀನು ಸತ್ಯವ್ರತ, ಶೂರ, ಮಿತ್ರರಿಗೆ ಅಭಯವನ್ನುಂಟುಮಾಡುವವನು. ವೀರ! ಲೋಕದಲ್ಲಿ ನೀನು ಸತ್ಯ ಕರ್ಮ ಮತ್ತು ಮಾತುಗಳಿಗೆ ವಿಖ್ಯಾತನಾಗಿದ್ದೀಯೆ.
07085048a ಯೋ ಹಿ ಶೈನೇಯ ಮಿತ್ರಾರ್ಥೇ ಯುಧ್ಯಮಾನಸ್ತ್ಯಜೇತ್ತನುಂ।
07085048c ಪೃಥಿವೀಂ ವಾ ದ್ವಿಜಾತಿಭ್ಯೋ ಯೋ ದದ್ಯಾತ್ಸಮಮೇವ ತತ್।।
ಶೈನೇಯ! ಯಾರು ಮಿತ್ರನಿಗಾಗಿ ಯುದ್ಧಮಾಡುತ್ತಾ ದೇಹವನ್ನು ತ್ಯಜಿಸುತ್ತಾನೋ ಅವನು ದ್ವಿಜಾತಿಯವರಿಗೆ ಭೂಮಿಯನ್ನು ದಾನವನ್ನಾಗಿತ್ತವನಿಗೆ ಸಮ.
07085049a ಶ್ರುತಾಶ್ಚ ಬಹವೋಽಸ್ಮಾಭೀ ರಾಜಾನೋ ಯೇ ದಿವಂ ಗತಾಃ।
07085049c ದತ್ತ್ವೇಮಾಂ ಪೃಥಿವೀಂ ಕೃತ್ಸ್ನಾಂ ಬ್ರಾಹ್ಮಣೇಭ್ಯೋ ಯಥಾವಿಧಿ।।
ನಾವೂ ಕೂಡ ಬಹಳಷ್ಟು ರಾಜರು ಈ ಭೂಮಿಯನ್ನು ಸಂಪೂರ್ಣವಾಗಿ ಯಥಾವಿಧಿಯಾಗಿ ಬ್ರಾಹ್ಮಣರಿಗೆ ಕೊಟ್ಟು ಸ್ವರ್ಗಕ್ಕೆ ಹೋಗಿದುದನ್ನು ಕೇಳಿದ್ದೇವೆ.
07085050a ಏವಂ ತ್ವಾಮಪಿ ಧರ್ಮಾತ್ಮನ್ಪ್ರಯಾಚೇಽಹಂ ಕೃತಾಂಜಲಿಃ।
07085050c ಪೃಥಿವೀದಾನತುಲ್ಯಂ ಸ್ಯಾದಧಿಕಂ ವಾ ಫಲಂ ವಿಭೋ।।
ಧರ್ಮಾತ್ಮನ್! ವಿಭೋ! ಹೀಗೆ ನೀನೂ ಕೂಡ ಭೂದಾನಕ್ಕೆ ಸಮಾನವಾದ ಅಥವಾ ಅದಕ್ಕೂ ಅಧಿಕವಾದ ಫಲವನ್ನು ಪಡೆ ಎಂದು ಕೈಮುಗಿದು ಕೇಳಿಕೊಳ್ಳುತ್ತಿದ್ದೇನೆ.
07085051a ಏಕ ಏವ ಸದಾ ಕೃಷ್ಣೋ ಮಿತ್ರಾಣಾಮಭಯಂಕರಃ।
07085051c ರಣೇ ಸಂತ್ಯಜತಿ ಪ್ರಾಣಾನ್ದ್ವಿತೀಯಸ್ತ್ವಂ ಚ ಸಾತ್ಯಕೇ।।
ಒಬ್ಬನಿದ್ದಾನೆ- ರಣದಲ್ಲಿ ಪ್ರಾಣಗಳನ್ನು ತೊರೆದೂ ಸದಾ ಮಿತ್ರರಿಗೆ ಅಭಯವನ್ನುಂಟುಮಾಡುವ ಕೃಷ್ಣ. ಇನ್ನೊಬ್ಬನು ನೀನು ಸಾತ್ಯಕಿ.
07085052a ವಿಕ್ರಾಂತಸ್ಯ ಚ ವೀರಸ್ಯ ಯುದ್ಧೇ ಪ್ರಾರ್ಥಯತೋ ಯಶಃ।
07085052c ಶೂರ ಏವ ಸಹಾಯಃ ಸ್ಯಾನ್ನೇತರಃ ಪ್ರಾಕೃತೋ ಜನಃ।।
ಯಶಸ್ಸನ್ನು ಬಯಸುವ ವೀರ ವಿಕ್ರಾಂತನಿಗೆ ಯುದ್ಧದಲ್ಲಿ ಶೂರನು ಮಾತ್ರ ಸಹಾಯಮಾಡಬಲ್ಲ, ಸಾಧಾರಣ ಜನರಲ್ಲ.
07085053a ಈದೃಶೇ ತು ಪರಾಮರ್ದೇ ವರ್ತಮಾನಸ್ಯ ಮಾಧವ।
07085053c ತ್ವದನ್ಯೋ ಹಿ ರಣೇ ಗೋಪ್ತಾ ವಿಜಯಸ್ಯ ನ ವಿದ್ಯತೇ।।
ಮಾಧವ! ನಡೆಯುತ್ತಿರುವ ಈ ಸಂಕಟದಲ್ಲಿ ನೀನು ಮಾತ್ರ ರಣದಲ್ಲಿ ವಿಜಯನನ್ನು ರಕ್ಷಿಸಬಲ್ಲೆ. ಬೇರೆ ಯಾರೂ ಇಲ್ಲ.
07085054a ಶ್ಲಾಘನ್ನೇವ ಹಿ ಕರ್ಮಾಣಿ ಶತಶಸ್ತವ ಪಾಂಡವಃ।
07085054c ಮಮ ಸಂಜನಯನ್ ಹರ್ಷಂ ಪುನಃ ಪುನರಕೀರ್ತಯತ್।।
ನಿನ್ನ ನೂರಾರು ಕರ್ಮಗಳನ್ನು ಹೊಗಳುತ್ತಾ ಪಾಂಡವ ಅರ್ಜುನನು ನನಗೆ ನಿನ್ನ ಕುರಿತು ಹರ್ಷದಿಂದ ಕಣ್ಣುಗಳು ತೇವಗೊಂಡಿರಲು ಪುನಃ ಪುನಃ ವರ್ಣಿಸಿದ್ದನು.
07085055a ಲಘ್ವಸ್ತ್ರಶ್ಚಿತ್ರಯೋಧೀ ಚ ತಥಾ ಲಘುಪರಾಕ್ರಮಃ।
07085055c ಪ್ರಾಜ್ಞಃ ಸರ್ವಾಸ್ತ್ರವಿಚ್ಚೂರೋ ಮುಹ್ಯತೇ ನ ಚ ಸಮ್ಯುಗೇ।।
07085056a ಮಹಾಸ್ಕಂಧೋ ಮಹೋರಸ್ಕೋ ಮಹಾಬಾಹುರ್ಮಹಾಧನುಃ।
07085056c ಮಹಾಬಲೋ ಮಹಾವೀರ್ಯಃ ಸ ಮಹಾತ್ಮಾ ಮಹಾರಥಃ।।
07085057a ಶಿಷ್ಯೋ ಮಮ ಸಖಾ ಚೈವ ಪ್ರಿಯೋಽಸ್ಯಾಹಂ ಪ್ರಿಯಶ್ಚ ಮೇ।
07085057c ಯುಯುಧಾನಃ ಸಹಾಯೋ ಮೇ ಪ್ರಮಥಿಷ್ಯತಿ ಕೌರವಾನ್।।
“ಯುಯುಧಾನನು ಅಸ್ತ್ರಗಳಲ್ಲಿ ಚಾಕಚಕ್ಯತೆಯುಳ್ಳವನು. ಚಿತ್ರಯೋಧೀ. ಹಾಗೆಯೇ ಲಘು ಪರಾಕ್ರಮಿ. ಪ್ರಾಜ್ಞ. ಸರ್ವಾಸ್ತ್ರಗಳನ್ನೂ ತಿಳಿದವನು. ಯುದ್ಧದಲ್ಲಿ ಎಂದೂ ಮರುಳಾಗದವನು. ಅವನು ವಿಶಾಲ ಭುಜವುಳ್ಳವನು. ವಿಶಾಲ ಎದೆಯುಳ್ಳವನು. ಮಹಾಬಾಹು ಮತ್ತು ಮಹಾಧನುಸ್ಸುಳ್ಳವನು. ನನ್ನ ಶಿಷ್ಯ ಮತ್ತು ಸಖನೂ ಕೂಡ. ನಾನು ಅವನಿಗೆ ಪ್ರಿಯನಾಗಿದ್ದೇನೆ. ಅವನು ನನಗೆ ಪ್ರಿಯನಾಗಿದ್ದಾನೆ. ಕೌರವರನ್ನು ಸದೆಬಡಿಯುವುದರಲ್ಲಿ ಅವನು ನನಗೆ ಸಹಾಯ ಮಾಡುತ್ತಾನೆ.
07085058a ಅಸ್ಮದರ್ಥಂ ಚ ರಾಜೇಂದ್ರ ಸನ್ನಹ್ಯೇದ್ಯದಿ ಕೇಶವಃ।
07085058c ರಾಮೋ ವಾಪ್ಯನಿರುದ್ಧೋ ವಾ ಪ್ರದ್ಯುಮ್ನೋ ವಾ ಮಹಾರಥಃ।।
07085059a ಗದೋ ವಾ ಸಾರಣೋ ವಾಪಿ ಸಾಂಬೋ ವಾ ಸಹ ವೃಷ್ಣಿಭಿಃ।
07085059c ಸಹಾಯಾರ್ಥಂ ಮಹಾರಾಜ ಸಂಗ್ರಾಮೋತ್ತಮಮೂರ್ಧನಿ।।
07085060a ತಥಾಪ್ಯಹಂ ನರವ್ಯಾಘ್ರಂ ಶೈನೇಯಂ ಸತ್ಯವಿಕ್ರಮಂ।
07085060c ಸಾಹಾಯ್ಯೇ ವಿನಿಯೋಕ್ಷ್ಯಾಮಿ ನಾಸ್ತಿ ಮೇಽನ್ಯೋ ಹಿ ತತ್ಸಮಃ।।
ರಾಜೇಂದ್ರ! ನಮಗಾಗಿ ಒಂದುವೇಳೆ ಕೇಶವ, ರಾಮ, ಅನಿರುದ್ಧ, ಮಹಾರಥ ಪ್ರದ್ಯುಮ್ನ, ಗದ, ಸಾರಣ, ಸಾಂಬ ಅಥವಾ ಇತರ ವೃಷ್ಣಿಗಳು ಸಹಾಯಕ್ಕೆಂದು ಉತ್ತಮ ಸಂಗ್ರಾಮದಲ್ಲಿ ಸನ್ನದ್ದರಾಗಿದ್ದರೆ ಆಗಲೂ ಕೂಡ ನಾನು ನರವ್ಯಾಘ್ರ ಶೈನೇಯ ಸತ್ಯವಿಕ್ರಮನನ್ನು ಸಹಾಯಕ್ಕೆಂದು ಆರಿಸಿಕೊಳ್ಳುತ್ತೇನೆ. ಏಕೆಂದರೆ ಅವನ ಸರಿಸಮನಾದವನು ಬೇರೆ ಇಲ್ಲ.”
07085061a ಇತಿ ದ್ವೈತವನೇ ತಾತ ಮಾಮುವಾಚ ಧನಂಜಯಃ।
07085061c ಪರೋಕ್ಷಂ ತ್ವದ್ಗುಣಾಂಸ್ತಥ್ಯಾನ್ಕಥಯನ್ನಾರ್ಯಸಂಸದಿ।।
ಅಯ್ಯಾ! ಹೀಗೆ ದ್ವೈತವನದಲ್ಲಿ ಧನಂಜಯನು ನೀನಿಲ್ಲದಿರುವಾಗ ಒಮ್ಮೆ ಆರ್ಯರ ಸಂಸದಿಯಲ್ಲಿ ನಿನ್ನ ಗುಣಗಳನ್ನು ಹೊಗಳುತ್ತಾ ಹೇಳಿದ್ದನು.
07085062a ತಸ್ಯ ತ್ವಮೇವಂ ಸಂಕಲ್ಪಂ ನ ವೃಥಾ ಕರ್ತುಮರ್ಹಸಿ।
07085062c ಧನಂಜಯಸ್ಯ ವಾರ್ಷ್ಣೇಯ ಮಮ ಭೀಮಸ್ಯ ಚೋಭಯೋಃ।।
ವಾರ್ಷ್ಣೇಯ! ಆ ಧನಂಜಯನ ಹಾಗೂ ನನ್ನ ಮತ್ತು ಭೀಮರಿಬ್ಬರ ಸಂಕಲ್ಪಗಳನ್ನು ನೀನು ಹಾಳುಮಾಡಬಾರದು.
07085063a ಯಚ್ಚಾಪಿ ತೀರ್ಥಾನಿ ಚರನ್ನಗಚ್ಚಂ ದ್ವಾರಕಾಂ ಪ್ರತಿ।
07085063c ತತ್ರಾಹಮಪಿ ತೇ ಭಕ್ತಿಮರ್ಜುನಂ ಪ್ರತಿ ದೃಷ್ಟವಾನ್।।
ತೀರ್ಥಗಳಲ್ಲಿ ತಿರುಗಾಡಿ ದ್ವಾರಕೆಯ ಕಡೆ ಬಂದಿದ್ದಾಗ ಅಲ್ಲಿ ಕೂಡ ಅರ್ಜುನನ ಕುರಿತು ನಿನಗಿರುವ ಭಕ್ತಿಯನ್ನು ನಾನು ನೋಡಿದ್ದೇನೆ.
07085064a ನ ತತ್ಸೌಹೃದಮನ್ಯೇಷು ಮಯಾ ಶೈನೇಯ ಲಕ್ಷಿತಂ।
07085064c ಯಥಾ ತ್ವಮಸ್ಮಾನ್ಭಜಸೇ ವರ್ತಮಾನಾನುಪಪ್ಲವೇ।।
ಶೈನೇಯ! ನಾವು ಉಪಪ್ಲವದಲ್ಲಿ ಇರುವಾಗ ನೀನು ನಮ್ಮನ್ನು ಪ್ರೀತಿಸುವಷ್ಟು ಬೇರೆ ಯಾರನ್ನೂ ನಾನು ಕಂಡಿರಲಿಲ್ಲ.
07085065a ಸೋಽಭಿಜಾತ್ಯಾ ಚ ಭಕ್ತ್ಯಾ ಚ ಸಖ್ಯಸ್ಯಾಚಾರ್ಯಕಸ್ಯ ಚ।
07085065c ಸೌಹೃದಸ್ಯ ಚ ವೀರ್ಯಸ್ಯ ಕುಲೀನತ್ವಸ್ಯ ಮಾಧವ।।
07085066a ಸತ್ಯಸ್ಯ ಚ ಮಹಾಬಾಹೋ ಅನುಕಂಪಾರ್ಥಮೇವ ಚ।
07085066c ಅನುರೂಪಂ ಮಹೇಷ್ವಾಸ ಕರ್ಮ ತ್ವಂ ಕರ್ತುಮರ್ಹಸಿ।।
ಮಾಧವ! ಮಹಾಬಾಹೋ! ಮಹೇಷ್ವಾಸ! ಉತ್ತಮ ಕುಲದಲ್ಲಿ ಜನ್ಮವಿತ್ತಿದ್ದೀಯೆ. ನಿನ್ನ ಭಕ್ತಿ, ಸಖ್ಯ, ಆಚಾರ್ಯಕತ್ವ, ಸೌಹೃದತ್ವ, ವೀರ್ಯ ಮತ್ತು ಸತ್ಯ-ಅನುಕಂಪಗಳಿಗೆ ಅನುರೂಪವಾದ ಕರ್ಮವನ್ನು ನೀನು ಮಾಡಬೇಕು.
07085067a ಸೋಯೋಧನೋ ಹಿ ಸಹಸಾ ಗತೋ ದ್ರೋಣೇನ ದಂಶಿತಃ।
07085067c ಪೂರ್ವಮೇವ ತು ಯಾತಾಸ್ತೇ ಕೌರವಾಣಾಂ ಮಹಾರಥಾಃ।।
ಸುಯೋಧನನು ತ್ವರೆಮಾಡಿ ದ್ರೋಣನಿಂದ ಕವಚವನ್ನು ಕಟ್ಟಿಸಿಕೊಂಡು ಮತ್ತು ಅದಕ್ಕೆ ಮೊದಲೇ ಕೌರವ ಮಹಾರಥರು ಹೋಗಿದ್ದಾರೆ.
07085068a ಸುಮಹಾನ್ನಿನದಶ್ಚೈವ ಶ್ರೂಯತೇ ವಿಜಯಂ ಪ್ರತಿ।
07085068c ಸ ಶೈನೇಯ ಜವೇನಾತ್ರ ಗಂತುಮರ್ಹಸಿ ಮಾಧವ।।
ವಿಜಯ ಅರ್ಜುನನ ಕಡೆಯಿಂದ ಮಹಾ ನಿನಾದವು ಕೇಳಿ ಬರುತ್ತಿದೆ. ಶೈನೇಯ! ಮಾಧವ! ವೇಗದಿಂದ ಅಲ್ಲಿಗೆ ಹೋಗಬೇಕಾಗಿದೆ.
07085069a ಭೀಮಸೇನೋ ವಯಂ ಚೈವ ಸಂಯತ್ತಾಃ ಸಹಸೈನಿಕಾಃ।
07085069c ದ್ರೋಣಮಾವಾರಯಿಷ್ಯಾಮೋ ಯದಿ ತ್ವಾಂ ಪ್ರತಿ ಯಾಸ್ಯತಿ।।
ಅವನ ಕಡೆ ನೀನು ಹೋದರೆ ಭೀಮಸೇನ ಮತ್ತು ಸೈನಿಕರೊಂದಿಗೆ ನಾವು ಪ್ರಯತ್ನಪಟ್ಟು ದ್ರೋಣನನ್ನು ತಡೆಯುತ್ತೇವೆ.
07085070a ಪಶ್ಯ ಶೈನೇಯ ಸೈನ್ಯಾನಿ ದ್ರವಮಾಣಾನಿ ಸಂಯುಗೇ।
07085070c ಮಹಾಂತಂ ಚ ರಣೇ ಶಬ್ದಂ ದೀರ್ಯಮಾಣಾಂ ಚ ಭಾರತೀಂ।।
ಶೈನೇಯ! ರಣರಂಗದಲ್ಲಿ ಸೈನ್ಯಗಳು ಓಡಿಹೋಗುತ್ತಿರುವುದನ್ನು ನೋಡು! ರಣದಲ್ಲಿ ಮಹಾ ಶಬ್ಧವು ಕೇಳಿಬರುತ್ತಿದೆ. ಭಾರತೀಸೇನೆಯು ಸೀಳಿಹೋದಂತೆ ತೋರುತ್ತಿದೆ.
07085071a ಮಹಾಮಾರುತವೇಗೇನ ಸಮುದ್ರಮಿವ ಪರ್ವಸು।
07085071c ಧಾರ್ತರಾಷ್ಟ್ರಬಲಂ ತಾತ ವಿಕ್ಷಿಪ್ತಂ ಸವ್ಯಸಾಚಿನಾ।।
ಅಯ್ಯಾ! ಪರ್ವದಲ್ಲಿ ಮಹಾ ಚಂಡಮಾರುತದ ವೇಗದಿಂದ ಸಮುದ್ರವು ಹೇಗೋ ಹಾಗೆ ಸವ್ಯಸಾಚಿಯಿಂದ ಧಾರ್ತರಾಷ್ಟ್ರನ ಬಲವು ಅಲ್ಲೋಲಕಲ್ಲೋಲಗೊಂಡಿದೆ.
07085072a ರಥೈರ್ವಿಪರಿಧಾವದ್ಭಿರ್ಮನುಷ್ಯೈಶ್ಚ ಹಯೈಶ್ಚ ಹ।
07085072c ಸೈನ್ಯಂ ರಜಃಸಮುದ್ಧೂತಮೇತತ್ಸಂಪರಿವರ್ತತೇ।।
ಅತ್ತಿತ್ತ ರಭಸದಿಂದ ಓಡಾಡುತ್ತಿರುವ ರಥ-ಕುದುರೆ-ಮನುಷ್ಯರಿಂದ ಮೇಲೆದ್ದ ಧೂಳಿನಿಂದ ಸೈನ್ಯವು ಮುಚ್ಚಿಹೋಗಿಬಿಟ್ಟಿದೆ.
07085073a ಸಂವೃತಃ ಸಿಂಧುಸೌವೀರೈರ್ನಖರಪ್ರಾಸಯೋಧಿಭಿಃ।
07085073c ಅತ್ಯಂತಾಪಚಿತೈಃ ಶೂರೈಃ ಫಲ್ಗುನಃ ಪರವೀರಹಾ।।
ಪರವೀರಹ ಫಲ್ಗುನನು ನಖರ-ಪ್ರಾಸಗಳಿಂದ ಯುದ್ಧಮಾಡುತ್ತಿರುವ ಸಂಘಟಿತರಾಗಿರುವ ಸಿಂಧು-ಸೌವೀರ ಶೂರರಿಂದ ಸುತ್ತುವರೆಯಲ್ಪಟ್ಟಿದ್ದಾನೆ.
07085074a ನೈತದ್ಬಲಮಸಂವಾರ್ಯ ಶಕ್ಯೋ ಹಂತುಂ ಜಯದ್ರಥಃ।
07085074c ಏತೇ ಹಿ ಸೈಂಧವಸ್ಯಾರ್ಥೇ ಸರ್ವೇ ಸಂತ್ಯಕ್ತಜೀವಿತಾಃ।।
ಸೈಂಧವನಿಗಾಗಿ ಜೀವವನ್ನೇ ತೊರೆದು ಇರುವ ಈ ಸೈನ್ಯವನ್ನು ದಾಟದೇ ಜಯದ್ರಥನನ್ನು ಕೊಲ್ಲುವುದು ಅಶಕ್ಯ.
07085075a ಶರಶಕ್ತಿಧ್ವಜವನಂ ಹಯನಾಗಸಮಾಕುಲಂ।
07085075c ಪಶ್ಯೈತದ್ಧಾರ್ತರಾಷ್ಟ್ರಾಣಾಮನೀಕಂ ಸುದುರಾಸದಂ।।
ಶರ-ಶಕ್ತಿ-ಧ್ವಜಗಳ ವನದಂತಿರುವ, ಕುದುರೆ-ಆನೆಗಳ ಸಮಾಕುಲಗಳಿಂದ ಕೂಡಿರುವ, ತುಂಬಾ ದುರಾಸದವಾಗಿರುವ ಧಾರ್ತರಾಷ್ಟ್ರರ ಈ ಸೇನೆಯನ್ನಾದರೂ ನೋಡು!
07085076a ಶೃಣು ದುಂದುಭಿನಿರ್ಘೋಷಂ ಶಂಖಶಬ್ದಾಂಶ್ಚ ಪುಷ್ಕಲಾನ್।
07085076c ಸಿಂಹನಾದರವಾಂಶ್ಚೈವ ರಥನೇಮಿಸ್ವನಾಂಸ್ತಥಾ।।
ದುಂದುಭಿಗಳ ನಿರ್ಘೋಷವನ್ನೂ, ಪುಷ್ಕಲ ಶಂಖಶಬ್ಧಗಳನ್ನೂ, ಸಿಂಹನಾದ ಕೂಗುಗಳನ್ನೂ, ರಥಚಕ್ರಗಳ ಧ್ವನಿಗಳನ್ನೂ ಕೇಳು!
07085077a ನಾಗಾನಾಂ ಶೃಣು ಶಬ್ದಂ ಚ ಪತ್ತೀನಾಂ ಚ ಸಹಸ್ರಶಃ।
07085077c ಸಾದಿನಾಂ ದ್ರವತಾಂ ಚೈವ ಶೃಣು ಕಂಪಯತಾಂ ಮಹೀಂ।।
ಸಹಸ್ರಾರು ಆನೆಗಳ ಮತ್ತು ಪದಾತಿಗಳ ಶಬ್ಧವನ್ನು ಕೇಳು. ಓಡುತ್ತಿರುವ ಅಶ್ವಾರೋಹಿಗಳಿಂದ ಭೂಮಿಯು ಕಂಪಿಸುತ್ತಿರುವುದನ್ನೂ ಕೇಳು.
07085078a ಪುರಸ್ತಾತ್ಸೈಂಧವಾನೀಕಂ ದ್ರೋಣಾನೀಕಸ್ಯ ಪೃಷ್ಠತಃ।
07085078c ಬಹುತ್ವಾದ್ಧಿ ನರವ್ಯಾಘ್ರ ದೇವೇಂದ್ರಮಪಿ ಪೀಡಯೇತ್।।
ಮುಂದೆ ಸೈಂಧವನ ಸೇನೆಯಿದೆ. ಹಿಂದೆ ದ್ರೋಣನ ಸೇನೆಯಿದೆ. ನರವ್ಯಾಘ್ರ! ಈ ಬಹುಸೇನೆಗಳು ದೇವೇಂದ್ರನನ್ನೂ ಪೀಡಿಸಬಲ್ಲವು ಎಂದು ತಿಳಿ.
07085079a ಅಪರ್ಯಂತೇ ಬಲೇ ಮಗ್ನೋ ಜಹ್ಯಾದಪಿ ಚ ಜೀವಿತಂ।
07085079c ತಸ್ಮಿಂಶ್ಚ ನಿಹತೇ ಯುದ್ಧೇ ಕಥಂ ಜೀವೇತ ಮಾದೃಶಃ।
07085079e ಸರ್ವಥಾಹಮನುಪ್ರಾಪ್ತಃ ಸುಕೃಚ್ಚ್ರಂ ಬತ ಜೀವಿತಂ।।
ಅಪಾರವಾದ ಈ ಸೇನೆಯಲ್ಲಿ ಮುಳುಗಿಹೋದ ಅವನು ಜೀವಿತವನ್ನೂ ತೊರೆಯಬಹುದು. ಯುದ್ಧದಲ್ಲಿ ಅವನು ಹತನಾದರೆ ನನ್ನಂತವನು ಹೇಗೆ ಜೀವಿಸಿಯಾನು? ನೀನು ಬದುಕಿರುವಾಗಲೇ ನಾನು ಸರ್ವಥ ಮಹಾ ಸಂಕಟದಲ್ಲಿ ಸಿಲುಕಿಕೊಂಡಿದ್ದೇನೆ.
07085080a ಶ್ಯಾಮೋ ಯುವಾ ಗುಡಾಕೇಶೋ ದರ್ಶನೀಯಶ್ಚ ಪಾಂಡವಃ।
07085080c ಲಘ್ವಸ್ತ್ರಶ್ಚಿತ್ರಯೋಧೀ ಚ ಪ್ರವಿಷ್ಟಸ್ತಾತ ಭಾರತೀಂ।।
07085081a ಸೂರ್ಯೋದಯೇ ಮಹಾಬಾಹುರ್ದಿವಸಶ್ಚಾತಿವರ್ತತೇ।
ಶ್ಯಾಮಲವರ್ಣದ ಯುವಕ ಗುಡಾಕೇಶ ಸುಂದರ ಅಸ್ತ್ರಗಳಲ್ಲಿ ಪರಿಣಿತ ಚಿತ್ರಯೋಧೀ ಪಾಂಡವನು ಸೂರ್ಯೋದಯದಲ್ಲಿಯೇ ಭಾರತೀ ಸೇನೆಯನ್ನು ಪ್ರವೇಶಿಸಿದ್ದನು. ಮಹಾಬಾಹು! ದಿವಸವು ಕಳೆಯುತ್ತಾ ಬಂದಿದೆ.
07085081c ತನ್ನ ಜಾನಾಮಿ ವಾರ್ಷ್ಣೇಯ ಯದಿ ಜೀವತಿ ವಾ ನ ವಾ।
07085081e ಕುರೂಣಾಂ ಚಾಪಿ ತತ್ಸೈನ್ಯಂ ಸಾಗರಪ್ರತಿಮಂ ಮಹತ್।।
ವಾರ್ಷ್ಣೇಯ! ಅವನು ಜೀವಿತನಾಗಿರುವನೋ ಇಲ್ಲವೋ ಎನ್ನುವುದು ನನಗೆ ತಿಳಿದಿಲ್ಲ. ಕುರುಗಳ ಆ ಸೇನೆಯಾದರೋ ಸಾಗರದಂತೆ ವಿಶಾಲವಾಗಿದೆ.
07085082a ಏಕ ಏವ ಚ ಬೀಭತ್ಸುಃ ಪ್ರವಿಷ್ಟಸ್ತಾತ ಭಾರತೀಂ।
07085082c ಅವಿಷಹ್ಯಾಂ ಮಹಾಬಾಹುಃ ಸುರೈರಪಿ ಮಹಾಮೃಧೇ।।
ಅಯ್ಯಾ! ಯುದ್ಧದಲ್ಲಿ ದೇವತೆಗಳಿಂದಲೂ ಎದುರಿಸಲಾಗದ ಭಾರತೀ ಸೇನೆಯನ್ನು ಮಹಾಬಾಹು ಬೀಭತ್ಸುವು ಒಬ್ಬನೇ ಪ್ರವೇಶಿಸಿದ್ದಾನೆ.
07085083a ನ ಚ ಮೇ ವರ್ತತೇ ಬುದ್ಧಿರದ್ಯ ಯುದ್ಧೇ ಕಥಂ ಚನ।
07085083c ದ್ರೋಣೋಽಪಿ ರಭಸೋ ಯುದ್ಧೇ ಮಮ ಪೀಡಯತೇ ಬಲಂ।
07085083e ಪ್ರತ್ಯಕ್ಷಂ ತೇ ಮಹಾಬಾಹೋ ಯಥಾಸೌ ಚರತಿ ದ್ವಿಜಃ।।
ನನಗೀಗ ಯುದ್ಧದಲ್ಲಿ ಆಸಕ್ತಿಯೇ ಹೊರಟು ಹೋಗಿದೆ. ದ್ರೋಣರು ರಭಸದಿಂದ ಯುದ್ಧಮಾಡುತ್ತಾ ನನ್ನ ಸೇನೆಯನ್ನು ಪೀಡಿಸುತ್ತಿದ್ದಾರೆ. ಮಹಾಬಾಹೋ! ಈ ದ್ವಿಜನು ಹೇಗೆ ಸಂಚರಿಸುತ್ತಿದ್ದಾನೆ ಎನ್ನುವುದನ್ನು ನೀನೇ ನೋಡುತ್ತಿರುವೆ.
07085084a ಯುಗಪಚ್ಚ ಸಮೇತಾನಾಂ ಕಾರ್ಯಾಣಾಂ ತ್ವಂ ವಿಚಕ್ಷಣಃ।
07085084c ಮಹಾರ್ಥಂ ಲಘುಸಮ್ಯುಕ್ತಂ ಕರ್ತುಮರ್ಹಸಿ ಮಾಧವ।।
ಮಾಧವ! ಹೀಗೆ ಎರಡು ಕಾರ್ಯಗಳೂ ಒಟ್ಟಿಗೇ ಬಂದೊದಗಿದಾಗ ವಿವೇಕಿಯಾದ ನೀನು ಹಗುರವಾದುದನ್ನು ಬಿಟ್ಟು ಮಹಾರ್ಥವಿದ್ದುದನ್ನು ಮಾಡಬೇಕು.
07085085a ತಸ್ಯ ಮೇ ಸರ್ವಕಾರ್ಯೇಷು ಕಾರ್ಯಮೇತನ್ಮತಂ ಸದಾ।
07085085c ಅರ್ಜುನಸ್ಯ ಪರಿತ್ರಾಣಂ ಕರ್ತವ್ಯಮಿತಿ ಸಂಯುಗೇ।।
ಸರ್ವಕಾರ್ಯಗಳಲ್ಲಿ ಅರ್ಜುನನ ರಕ್ಷಣೆಯು ಸದಾ ಮಹತ್ತರವಾದುದು ಎಂದು ನನಗನ್ನಿಸುತ್ತದೆ. ಯುದ್ಧದಲ್ಲಿ ಅದು ನಿನ್ನ ಕರ್ತವ್ಯವಾಗಿದೆ.
07085086a ನಾಹಂ ಶೋಚಾಮಿ ದಾಶಾರ್ಹಂ ಗೋಪ್ತಾರಂ ಜಗತಃ ಪ್ರಭುಂ।
07085086c ಸ ಹಿ ಶಕ್ತೋ ರಣೇ ತಾತ ತ್ರೀಽಲ್ಲೋಕಾನಪಿ ಸಂಗತಾನ್।।
07085087a ವಿಜೇತುಂ ಪುರುಷವ್ಯಾಘ್ರ ಸತ್ಯಮೇತದ್ಬ್ರವೀಮಿ ತೇ।
07085087c ಕಿಂ ಪುನರ್ಧಾರ್ತರಾಷ್ಟ್ರಸ್ಯ ಬಲಂ ಏತತ್ಸುದುರ್ಬಲಂ।।
ಅಯ್ಯಾ! ದಾಶಾರ್ಹ, ಜಗತ್ತಿನ ಪ್ರಭು, ರಕ್ಷಕನು ರಣದಲ್ಲಿ ಶಕ್ತನಿಲ್ಲವೆಂದು ನಾನು ಯೋಚಿಸುತ್ತಿಲ್ಲ. ಪುರುಷವ್ಯಾಘ್ರ! ಮೂರುಲೋಕಗಳು ಒಟ್ಟಾಗಿ ಬಂದರೂ ಅವನು ಜಯಿಸಬಲ್ಲ. ಸತ್ಯವನ್ನು ಹೇಳುತ್ತಿದ್ದೇನೆ. ಇನ್ನು ದರ್ಬಲವಾಗಿರುವ ಧಾರ್ತರಾಷ್ಟ್ರನ ಸೇನೆಯು ಯಾವ ಲೆಖ್ಕಕ್ಕೆ?
07085088a ಅರ್ಜುನಸ್ತ್ವೇವ ವಾರ್ಷ್ಣೇಯ ಪೀಡಿತೋ ಬಹುಭಿರ್ಯುಧಿ।
07085088c ಪ್ರಜಹ್ಯಾತ್ಸಮರೇ ಪ್ರಾಣಾಂಸ್ತಸ್ಮಾದ್ವಿಂದಾಮಿ ಕಶ್ಮಲಂ।।
ವಾರ್ಷ್ಣೇಯ! ಅರ್ಜುನನಾದರೋ ಯುದ್ಧದಲ್ಲಿ ಅನೇಕರಿಂದ ಪೀಡಿತನಾಗಿದ್ದಾನೆ. ಹೀಗಿರುವಾಗ ಅವನು ಸಮರದಲ್ಲಿ ಪ್ರಾಣವನ್ನೇ ತ್ಯಜಿಸಬಹುದು. ಇದರಿಂದಾಗಿ ನಾನು ತುಂಬಾ ಅಸ್ವಸ್ಥನಾಗಿದ್ದೇನೆ.
07085089a ತಸ್ಯ ತ್ವಂ ಪದವೀಂ ಗಚ್ಚ ಗಚ್ಚೇಯುಸ್ತ್ವಾದೃಶಾ ಯಥಾ।
07085089c ತಾದೃಶಸ್ಯೇದೃಶೇ ಕಾಲೇ ಮಾದೃಶೇನಾಭಿಚೋದಿತಃ।।
ನೀನು ಅವನು ಇರುವಲ್ಲಿಗೆ ಹೋಗು! ಅವನಂಥವನು ಕಷ್ಟದಲ್ಲಿರುವಾಗ ನನ್ನಂಥವನು ಹೇಳಿದಂತೆ ನಿನ್ನಂಥವನು ಮಾಡಬೇಕಾದ ಸಮಯವಿದು.
07085090a ರಣೇ ವೃಷ್ಣಿಪ್ರವೀರಾಣಾಂ ದ್ವಾವೇವಾತಿರಥೌ ಸ್ಮೃತೌ।
07085090c ಪ್ರದ್ಯುಮ್ನಶ್ಚ ಮಹಾಬಾಹುಸ್ತ್ವಂ ಚ ಸಾತ್ವತ ವಿಶ್ರುತಃ।।
ರಣದಲ್ಲಿ ವೃಷ್ಣಿಪ್ರವೀರರಲ್ಲಿ ಇಬ್ಬರೇ ಅತಿರಥರೆಂದು ಕೇಳಿಕೊಂಡು ಬಂದಿದ್ದೇವೆ. ಮಹಾಬಾಹು ಪ್ರದ್ಯುಮ್ನ ಮತ್ತು ಸಾತ್ವತನಾದ ನೀನು.
07085091a ಅಸ್ತ್ರೇ ನಾರಾಯಣಸಮಃ ಸಂಕರ್ಷಣಸಮೋ ಬಲೇ।
07085091c ವೀರತಾಯಾಂ ನರವ್ಯಾಘ್ರ ಧನಂಜಯಸಮೋ ಹ್ಯಸಿ।।
ಅಸ್ತ್ರಗಳಲ್ಲಿ ನಾರಾಯಣನ ಸಮನಾಗಿರುವೆ. ಬಲದಲ್ಲಿ ಸಂಕರ್ಷಣನ ಸಮನಾಗಿರುವೆ. ವೀರತನದಲ್ಲಿ ನರವ್ಯಾಘ್ರ! ನೀನು ಧನಂಜಯನ ಸಮನಾಗಿರುವೆ.
07085092a ಭೀಷ್ಮದ್ರೋಣಾವತಿಕ್ರಮ್ಯ ಸರ್ವಯುದ್ಧವಿಶಾರದಂ।
07085092c ತ್ವಾಮದ್ಯ ಪುರುಷವ್ಯಾಘ್ರಂ ಲೋಕೇ ಸಂತಃ ಪ್ರಚಕ್ಷತೇ।।
ಭೀಷ್ಮ-ದ್ರೋಣರನ್ನು ಬಿಟ್ಟರೆ ಇಂದು ನೀನೇ ಪುರುಷವ್ಯಾಘ್ರ, ಸರ್ವಯುದ್ಧವಿಶಾರದನೆಂದು ಲೋಕದ ಸಂತರು ಹೇಳುತ್ತಾರೆ.
07085093a ನಾಸಾಧ್ಯಂ ವಿದ್ಯತೇ ಲೋಕೇ ಸಾತ್ಯಕೇರಿತಿ ಮಾಧವ।
07085093c ತತ್ತ್ವಾಂ ಯದಭಿವಕ್ಷ್ಯಾಮಿ ತತ್ಕುರುಷ್ವ ಮಹಾಬಲ।।
ಮಾಧವ! ಮಹಾಬಲ! ಸಾತ್ಯಕಿಗೆ ಅಸಾಧ್ಯವೆನ್ನುವುದೇ ಇಲ್ಲ ಎಂದು ಲೋಕದಲ್ಲಿ ತಿಳಿದುಕೊಂಡಿದ್ದಾರೆ. ಆದುದರಿಂದ ನಾನು ಕೇಳಿಕೊಂಡಂತೆ ಮಾಡು.
07085094a ಸಂಭಾವನಾ ಹಿ ಲೋಕಸ್ಯ ತವ ಪಾರ್ಥಸ್ಯ ಚೋಭಯೋಃ।
07085094c ನಾನ್ಯಥಾ ತಾಂ ಮಹಾಬಾಹೋ ಸಂಪ್ರಕರ್ತುಮಿಹಾರ್ಹಸಿ।।
ಮಹಾಬಾಹೋ! ಜನರಿಗೆ ನಿನ್ನ ಮತ್ತು ಪಾರ್ಥ ಇಬ್ಬರ ಮೇಲೂ ಈ ಸದ್ಭಾವನೆಯಿದೆ. ಇದಕ್ಕೆ ಹೊರತಾಗಿ ನೀನು ಮಾಡಬಾರದು.
07085095a ಪರಿತ್ಯಜ್ಯ ಪ್ರಿಯಾನ್ಪ್ರಾಣಾನ್ರಣೇ ವಿಚರ ವೀರವತ್।
07085095c ನ ಹಿ ಶೈನೇಯ ದಾಶಾರ್ಹಾ ರಣೇ ರಕ್ಷಂತಿ ಜೀವಿತಂ।।
ಶೈನೇಯ! ರಣದಲ್ಲಿ ಪ್ರಿಯ ಪ್ರಾಣಗಳನ್ನು ಪರಿತ್ಯಜಿಸಿ ವೀರನಂತೆ ವಿಚರಿಸು. ದಾಶಾರ್ಹರು ರಣದಲ್ಲಿ ಜೀವವನ್ನು ರಕ್ಷಿಸಿಕೊಳ್ಳುವುದಿಲ್ಲ.
07085096a ಅಯುದ್ಧಮನವಸ್ಥಾನಂ ಸಂಗ್ರಾಮೇ ಚ ಪಲಾಯನಂ।
07085096c ಭೀರೂಣಾಮಸತಾಂ ಮಾರ್ಗೋ ನೈಷ ದಾಶಾರ್ಹಸೇವಿತಃ।।
ಯುದ್ಧಮಾಡದೇ ಇರುವುದು ಮತ್ತು ಸಂಗ್ರಾಮದಿಂದ ಪಲಾಯನ ಮಾಡುವುದು ಇವು ಹೇಡಿಗಳ ಮತ್ತು ಕೆಟ್ಟವರ ಮಾರ್ಗಗಳು. ದಾಶಾರ್ಹರು ಹೋಗುವವುಗಳಲ್ಲ.
07085097a ತವಾರ್ಜುನೋ ಗುರುಸ್ತಾತ ಧರ್ಮಾತ್ಮಾ ಶಿನಿಪುಂಗವ।
07085097c ವಾಸುದೇವೋ ಗುರುಶ್ಚಾಪಿ ತವ ಪಾರ್ಥಸ್ಯ ಧೀಮತಃ।।
ಶಿನಿಪುಂಗವ! ಧರ್ಮಾತ್ಮಾ! ಅಯ್ಯಾ! ಅರ್ಜುನನು ನಿನ್ನ ಗುರು. ಧೀಮತ ವಾಸುದೇವನು ನಿನ್ನ ಮತ್ತು ಪಾರ್ಥನ ಗುರು.
07085098a ಕಾರಣದ್ವಯಮೇತದ್ಧಿ ಜಾನಾನಸ್ತ್ವಾಹಮಬ್ರುವಂ।
07085098c ಮಾವಮಂಸ್ಥಾ ವಚೋ ಮಹ್ಯಂ ಗುರುಸ್ತವ ಗುರೋರ್ಹ್ಯಹಂ।।
ಈ ಎರಡು ಕಾರಣಗಳಿಂದ ನಿನ್ನನ್ನೇ ನಾನು ಈ ಕೆಲಸಕ್ಕೆ ಹೇಳುತ್ತಿದ್ದೇನೆ. ನನ್ನ ಈ ಮಾತನ್ನು ನಿರಾದರಿಸಬೇಡ. ನಾನು ನಿನ್ನ ಗುರುವಿಗೂ ಗುರು.
07085099a ವಾಸುದೇವಮತಂ ಚೈತನ್ಮಮ ಚೈವಾರ್ಜುನಸ್ಯ ಚ।
07085099c ಸತ್ಯಂ ಏತನ್ಮಯೋಕ್ತಂ ತೇ ಯಾಹಿ ಯತ್ರ ಧನಂಜಯಃ।।
ವಾಸುದೇವನ ಮತವೇ ನನ್ನ ಮತ್ತು ಅರ್ಜುನನದೂ ಹೌದು. ಸತ್ಯವನ್ನು ಹೇಳುತ್ತಿದ್ದೇನೆ. ಧನಂಜಯನಿರುವಲ್ಲಿಗೆ ಹೋಗು.
07085100a ಏತದ್ವಚನಮಾಜ್ಞಾಯ ಮಮ ಸತ್ಯಪರಾಕ್ರಮ।
07085100c ಪ್ರವಿಶೈತದ್ಬಲಂ ತಾತ ಧಾರ್ತರಾಷ್ಟ್ರಸ್ಯ ದುರ್ಮತೇಃ।।
ತಾತ! ಸತ್ಯಪರಾಕ್ರಮ! ನನ್ನ ಈ ಮಾತನ್ನು ತಿಳಿದುಕೊಂಡು ದುರ್ಮತಿ ಧಾರ್ತರಾಷ್ಟ್ರನ ಸೇನೆಯನ್ನು ಪ್ರವೇಶಿಸು.
07085101a ಪ್ರವಿಶ್ಯ ಚ ಯಥಾನ್ಯಾಯಂ ಸಂಗಮ್ಯ ಚ ಮಹಾರಥೈಃ।
07085101c ಯಥಾರ್ಹಮಾತ್ಮನಃ ಕರ್ಮ ರಣೇ ಸಾತ್ವತ ದರ್ಶಯ।।
ಸಾತ್ವತ! ಸೇನೆಯೊಳಗೆ ಪ್ರವೇಶಿಸಿ ಯಥಾನ್ಯಾಯವಾಗಿ ಮಹಾರಥರೊಡನೆ ಯುದ್ಧಮಾಡಿ ರಣದಲ್ಲಿ ನಿನಗೆ ಅರ್ಹವಾಗಿರುವ ಕರ್ಮಗಳನ್ನು ಮಾಡಿ ತೋರಿಸು!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಯುಧಿಷ್ಠಿರವಾಕ್ಯೇ ಪಂಚಾಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಯುಧಿಷ್ಠಿರವಾಕ್ಯ ಎನ್ನುವ ಎಂಭತ್ತೈದನೇ ಅಧ್ಯಾಯವು.