ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 83
ಸಾರ
ದ್ರೌಪದೇಯರು ಸೋಮದತ್ತಿಯ ಮಗ ಶಲನನ್ನು ವಧಿಸಿದುದು (1-12). ಭೀಮಸೇನನಿಂದ ಬಕನ ತಮ್ಮ ಅಲಂಬುಸನ ಪರಾಜಯ (13-39).
07083001 ಸಂಜಯ ಉವಾಚ।
07083001a ದ್ರೌಪದೇಯಾನ್ಮಹೇಷ್ವಾಸಾನ್ಸೌಮದತ್ತಿರ್ಮಹಾಯಶಾಃ।
07083001c ಏಕೈಕಂ ಪಂಚಭಿರ್ವಿದ್ಧ್ವಾ ಪುನರ್ವಿವ್ಯಾಧ ಸಪ್ತಭಿಃ।।
ಸಂಜಯನು ಹೇಳಿದನು: “ಮಹಾಯಶಸ್ವಿ ಸೌಮದತ್ತಿ (ಶಲ9) ಯು ಮಹೇಷ್ವಾಸ ದ್ರೌಪದೇಯರು ಒಬ್ಬೊಬ್ಬರನ್ನೂ ಐದೈದು ಬಾಣಗಳಿಂದ ಹೊಡೆದು ಪುನಃ ಏಳರಿಂದ ಗಾಯಗೊಳಿಸಿದನು.
07083002a ತೇ ಪೀಡಿತಾ ಭೃಶಂ ತೇನ ರೌದ್ರೇಣ ಸಹಸಾ ವಿಭೋ।
07083002c ಪ್ರಮೂಢಾ ನೈವ ವಿವಿದುರ್ಮೃಧೇ ಕೃತ್ಯಂ ಸ್ಮ ಕಿಂ ಚನ।।
ವಿಭೋ! ರೌದ್ರನಾದ ಅವನಿಂದ ಒಮ್ಮೆಲೇ ತುಂಬಾ ಪೀಡಿತರಾದ ಅವರು ಯುದ್ಧದಲ್ಲಿ ಏನು ಮಾಡಬೇಕೆಂದು ತಿಳಿಯದೇ ಸ್ವಲ್ಪ ಹೊತ್ತು ವಿಮೂಢರಾದರು.
07083003a ನಾಕುಲಿಸ್ತು ಶತಾನೀಕಃ ಸೌಮದತ್ತಿಂ ನರರ್ಷಭಂ।
07083003c ದ್ವಾಭ್ಯಾಂ ವಿದ್ಧ್ವಾನದದ್ಧೃಷ್ಟಃ ಶರಾಭ್ಯಾಂ ಶತ್ರುತಾಪನಃ।।
ಶತ್ರುತಾಪನ ನಾಕುಲಿ ಶತಾನೀಕನಾದರೋ ನರರ್ಷಭ ಸೌಮದತ್ತಿಯನ್ನು ಎರಡು ಬಾಣಗಳಿಂದ ಪ್ರಹರಿಸಿ ಹೃಷ್ಟನಾಗಿ ನಾದಗೈದನು.
07083004a ತಥೇತರೇ ರಣೇ ಯತ್ತಾಸ್ತ್ರಿಭಿಸ್ತ್ರಿಭಿರಜಿಹ್ಮಗೈಃ।
07083004c ವಿವ್ಯಧುಃ ಸಮರೇ ತೂರ್ಣಂ ಸೌಮದತ್ತಿಮಮರ್ಷಣಂ।।
ಆಗ ಇತರರು ಸಮರದಲ್ಲಿ ತಕ್ಷಣವೇ ಮೂರು ಮೂರು ಜಿಹ್ಮಗಗಳಿಂದ ಪ್ರಯತ್ನಪಟ್ಟು ಅಸಹನಶೀಲ ಸೌಮದತ್ತಿಯನ್ನು ಹೊಡೆದರು.
07083005a ಸ ತಾನ್ಪ್ರತಿ ಮಹಾರಾಜ ಚಿಕ್ಷಿಪೇ ಪಂಚ ಸಾಯಕಾನ್।
07083005c ಏಕೈಕಂ ಹೃದಿ ಚಾಜಘ್ನೇ ಏಕೈಕೇನ ಮಹಾಯಶಾಃ।।
ಮಹಾರಾಜ! ಆ ಮಹಾಯಶನೂ ಕೂಡ ಅವುಗಳಿಗೆ ಪ್ರತಿಯಾಗಿ ಐದು ಸಾಯಕಗಳನ್ನು ಪ್ರಯೋಗಿಸಿ ಒಂದೊಂದರಿಂದ ಒಬ್ಬೊಬ್ಬರ ಹೃದಯವನ್ನೂ ಹೊಡೆದನು.
07083006a ತತಸ್ತೇ ಭ್ರಾತರಃ ಪಂಚ ಶರೈರ್ವಿದ್ಧಾ ಮಹಾತ್ಮನಾ।
07083006c ಪರಿವಾರ್ಯ ರಥೈರ್ವೀರಂ ವಿವ್ಯಧುಃ ಸಾಯಕೈರ್ಭೃಶಂ।।
ಆ ಮಹಾತ್ಮನ ಶರಗಳಿಂದ ಗಾಯಗೊಂಡ ಆ ಐವರು ಸಹೋದರರು ರಥಗಳಿಂದ ಆ ವೀರನ ರಥವನ್ನು ಸುತ್ತುವರೆದು ಸಾಯಕಗಳಿಂದ ಬಹುವಾಗಿ ಅವನನ್ನು ಪ್ರಹರಿಸಿದರು.
07083007a ಆರ್ಜುನಿಸ್ತು ಹಯಾಂಸ್ತಸ್ಯ ಚತುರ್ಭಿರ್ನಿಶಿತೈಃ ಶರೈಃ।
07083007c ಪ್ರೇಷಯಾಮಾಸ ಸಂಕ್ರುದ್ಧೋ ಯಮಸ್ಯ ಸದನಂ ಪ್ರತಿ।।
ಆರ್ಜುನಿ10ಯಾದರೋ ಸಂಕ್ರುದ್ಧನಾಗಿ ಅವನ ಕುದುರೆಗಳನ್ನು ನಾಲ್ಕು ನಿಶಿತ ಶರಗಳಿಂದ ಯಮಸದನಕ್ಕೆ ಕಳುಹಿಸಿಕೊಟ್ಟನು.
07083008a ಭೈಮಸೇನಿರ್ಧನುಶ್ಚಿತ್ತ್ವಾ ಸೌಮದತ್ತೇರ್ಮಹಾತ್ಮನಃ।
07083008c ನನಾದ ಬಲವನ್ನಾದಂ ವಿವ್ಯಾಧ ಚ ಶಿತೈಃ ಶರೈಃ।।
ಭೈಮಸೇನಿ11ಯು ಮಹಾತ್ಮ ಸೌಮದತ್ತಿಯ ಧನುಸ್ಸನ್ನು ಕತ್ತರಿಸಿ ನಿಶಿತ ಶರಗಳಿಂದ ಅವನನ್ನು ಹೊಡೆದು ಜೋರಾಗಿ ಸಿಂಹನಾದಗೈದನು.
07083009a ಯೌಧಿಷ್ಠಿರೋ ಧ್ವಜಂ ತಸ್ಯ ಚಿತ್ತ್ವಾ ಭೂಮಾವಪಾತಯತ್।
07083009c ನಾಕುಲಿಶ್ಚಾಶ್ವಯಂತಾರಂ ರಥನೀಡಾದಪಾಹರತ್।।
ಯುಧಿಷ್ಠಿರನ ಮಗ12ನು ಅವನ ಧ್ವಜವನ್ನು ತುಂಡರಿಸಿ ಬೀಳಿಸಿದನು. ನಕುಲನ ಮಗನು ಅವನ ಸಾರಥಿಯನ್ನು ರಥದಿಂದ ಕೆಳಗೆ ಉರುಳಿಸಿದನು.
07083010a ಸಾಹದೇವಿಸ್ತು ತಂ ಜ್ಞಾತ್ವಾ ಭ್ರಾತೃಭಿರ್ವಿಮುಖೀಕೃತಂ।
07083010c ಕ್ಷುರಪ್ರೇಣ ಶಿರೋ ರಾಜನ್ನಿಚಕರ್ತ ಮಹಾಮನಾಃ।।
ರಾಜನ್! ಮಹಾಮನಸ್ವಿ ಸಹದೇವನ ಮಗ13ನಾದರೋ ತನ್ನ ಸಹೋದರರು ಅವನನ್ನು ಪರಾಙ್ಮುಖಗೊಳಿಸಿದ್ದಾರೆಂದು ತಿಳಿದು ಕ್ಷುರಪ್ರದಿಂದ ಅವನ ಶಿರವನ್ನು ಕತ್ತರಿಸಿದನು.
07083011a ತಚ್ಚಿರೋ ನ್ಯಪತದ್ಭೂಮೌ ತಪನೀಯವಿಭೂಷಿತಂ।
07083011c ಭ್ರಾಜಯಂತಂ ರಣೋದ್ದೇಶಂ ಬಾಲಸೂರ್ಯಸಮಪ್ರಭಂ।।
ಬಂಗಾರದಿಂದ ವಿಭೂಷಿತವಾಗಿದ್ದ ಆ ನೃಪತಿಯ ಶಿರವು ಬಾಲಸೂರ್ಯನ ಸಮನಾದ ಪ್ರಭೆಯಿಂದ ರಣಭೂಮಿಯನ್ನು ಪ್ರಕಾಶಗೊಳಿಸುತ್ತಾ ಭೂಮಿಯ ಮೇಲೆ ಬಿದ್ದಿತು.
07083012a ಸೌಮದತ್ತೇಃ ಶಿರೋ ದೃಷ್ಟ್ವಾ ನಿಪತತ್ತನ್ಮಹಾತ್ಮನಃ।
07083012c ವಿತ್ರಸ್ತಾಸ್ತಾವಕಾ ರಾಜನ್ಪ್ರದುದ್ರುವುರನೇಕಧಾ।।
ರಾಜನ್! ಕೆಳಗೆಬಿದ್ದ ಸೌಮದತ್ತಿಯ ಶಿರಸ್ಸನ್ನು ನೋಡಿ ನಿನ್ನವರು ಬೆದರಿ ಅನೇಕ ದಾರಿಗಳಲ್ಲಿ ಓಡಿಹೋದರು.
07083013a ಅಲಂಬುಸಸ್ತು ಸಮರೇ ಭೀಮಸೇನಂ ಮಹಾಬಲಂ।
07083013c ಯೋಧಯಾಮಾಸ ಸಂಕ್ರುದ್ಧೋ ಲಕ್ಷ್ಮಣಂ ರಾವಣಿರ್ಯಥಾ।।
ಅಲಂಬುಸ14ನಾದರೋ ಸಂಕ್ರುದ್ಧನಾಗಿ ಸಮರದಲ್ಲಿ ರಾವಣಿ ಇಂದ್ರಜಿತುವು ಲಕ್ಷ್ಮಣನನ್ನು ಹೇಗೋ ಹಾಗೆ ಮಹಾಬಲ ಭೀಮಸೇನನೊಂದಿಗೆ ಯುದ್ಧಮಾಡತೊಡಗಿದನು.
07083014a ಸಂಪ್ರಯುದ್ಧೌ ರಣೇ ದೃಷ್ಟ್ವಾ ತಾವುಭೌ ನರರಾಕ್ಷಸೌ।
07083014c ವಿಸ್ಮಯಃ ಸರ್ವಭೂತಾನಾಂ ಪ್ರಹರ್ಷಶ್ಚಾಭವತ್ತದಾ।।
ಆ ಇಬ್ಬರು ನರ-ರಾಕ್ಷಸರೂ ರಣದಲ್ಲಿ ಯುದ್ಧಕ್ಕೆ ತೊಡಗಿರುವುದನ್ನು ನೋಡಿ ಸರ್ವಭೂತಗಳಿಗೆ ವಿಸ್ಮಯವೂ ಹರ್ಷವೂ ಉಂಟಾಯಿತು.
07083015a ಆರ್ಷ್ಯಶೃಂಗಿಂ ತತೋ ಭೀಮೋ ನವಭಿರ್ನಿಶಿತೈಃ ಶರೈಃ।
07083015c ವಿವ್ಯಾಧ ಪ್ರಹಸನ್ರಾಜನ್ರಾಕ್ಷಸೇಂದ್ರಮಮರ್ಷಣಂ।।
ರಾಜನ್! ಆಗ ಭೀಮನು ಜೋರಾಗಿ ನಗುತ್ತಾ ಒಂಭತ್ತು ನಿಶಿತ ಶರಗಳಿಂದ ಅಸಹನಶೀಲ ರಾಕ್ಷಸೇಂದ್ರ ಆರ್ಷ್ಯಶೃಂಗಿ15ಯನ್ನು ಹೊಡೆದನು.
07083016a ತದ್ರಕ್ಷಃ ಸಮರೇ ವಿದ್ಧಂ ಕೃತ್ವಾ ನಾದಂ ಭಯಾವಹಂ।
07083016c ಅಭ್ಯದ್ರವತ್ತತೋ ಭೀಮಂ ಯೇ ಚ ತಸ್ಯ ಪದಾನುಗಾಃ।।
ಸಮರದಲ್ಲಿ ಪ್ರಹೃತನಾದ ಆ ರಾಕ್ಷಸನು ಭಯಾನಕವಾಗಿ ಗರ್ಜನೆ ಮಾಡುತ್ತಾ ಭೀಮ ಮತ್ತು ಅವನ ಅನುಯಾಯಿಗಳ ಮೇಲೆ ಎರಗಿದನು.
07083017a ಸ ಭೀಮಂ ಪಂಚಭಿರ್ವಿದ್ಧ್ವಾ ಶರೈಃ ಸನ್ನತಪರ್ವಭಿಃ।
07083017c ಭೀಮಾನುಗಾಂ ಜಘಾನಾಶು ರಥಾಂಸ್ತ್ರಿಂಶದರಿಂದಮಃ।
07083017e ಪುನಶ್ಚತುಃಶತಾನ್ ಹತ್ವಾ ಭೀಮಂ ವಿವ್ಯಾಧ ಪತ್ರಿಣಾ।।
ಆ ಅರಿಂದಮನು ಭೀಮನನ್ನು ಐದು ಸನ್ನತಪರ್ವ ಶರಗಳಿಂದ ಹೊಡೆದು ಭೀಮನನ್ನು ಅನುಸರಿಸಿ ಬಂದಿದ್ದ ಮುನ್ನೂರು ರಥಿಕರನ್ನು ಸಂಹರಿಸಿದನು. ಪುನಃ ನಾಲ್ಕುನೂರು ಮಂದಿಯನ್ನು ಸಂಹರಿಸಿ ಭೀಮನನ್ನು ಪತ್ರಿಗಳಿಂದ ಹೊಡೆದನು.
07083018a ಸೋಽತಿವಿದ್ಧಸ್ತದಾ ಭೀಮೋ ರಾಕ್ಷಸೇನ ಮಹಾಬಲಃ।
07083018c ನಿಷಸಾದ ರಥೋಪಸ್ಥೇ ಮೂರ್ಚಯಾಭಿಪರಿಪ್ಲುತಃ।।
ಹಾಗೆ ರಾಕ್ಷಸನಿಂದ ಗಾಯಗೊಂಡ ಮಹಾಬಲ ಭೀಮನು ಒಂದು ಕ್ಷಣ ಮೂರ್ಛೆಹೋಗಿ ರಥದಲ್ಲಿಯೇ ಒರಗಿದನು.
07083019a ಪ್ರತಿಲಭ್ಯ ತತಃ ಸಂಜ್ಞಾಂ ಮಾರುತಿಃ ಕ್ರೋಧಮೂರ್ಚಿತಃ।
07083019c ವಿಕೃಷ್ಯ ಕಾರ್ಮುಕಂ ಘೋರಂ ಭಾರಸಾಧನಮುತ್ತಮಂ।
07083019e ಅಲಂಬುಸಂ ಶರೈಸ್ತೀಕ್ಷ್ಣೈರರ್ದಯಾಮಾಸ ಸರ್ವತಃ।।
ಆಗ ಪುನಃ ಸಂಜ್ಞೆಗಳನ್ನು ಪಡೆದುಕೊಂಡು ಮಾರುತಿಯು ಕ್ರೋಧಮೂರ್ಛಿತನಾಗಿ, ಭಾರವನ್ನು ಹೊರಬಲ್ಲ ಉತ್ತಮ ಘೋರ ಕಾರ್ಮುಕವನ್ನು ಎಳೆದು ತೀಕ್ಷ್ಣ ಶರಗಳಿಂದ ಅಲಂಬುಸನನ್ನು ಎಲ್ಲಕಡೆಗಳಿಂದ ಹೊಡೆಯತೊಡಗಿದನು.
07083020a ಸ ವಿದ್ಧೋ ಬಹುಭಿರ್ಬಾಣೈರ್ನೀಲಾಂಜನಚಯೋಪಮಃ।
07083020c ಶುಶುಭೇ ಸರ್ವತೋ ರಾಜನ್ಪ್ರದೀಪ್ತ ಇವ ಕಿಂಶುಕಃ।।
ರಾಜನ್! ಅಂಜನದ ರಾಶಿಯಂತೆ ನೀಲ ಮೈವರ್ಣದ ಅವನು ಅನೇಕ ಬಾಣಗಳಿಂದ ಗಾಯಗೊಂಡು ಕುಂಶುಕದ ಮರದಂತೆ ಎಲ್ಲಕಡೆಗಳಲ್ಲಿ ಶೋಭಿಸಿದನು.
07083021a ಸ ವಧ್ಯಮಾನಃ ಸಮರೇ ಭೀಮಚಾಪಚ್ಯುತೈಃ ಶರೈಃ।
07083021c ಸ್ಮರನ್ಭ್ರಾತೃವಧಂ ಚೈವ ಪಾಂಡವೇನ ಮಹಾತ್ಮನಾ।।
07083022a ಘೋರಂ ರೂಪಮಥೋ ಕೃತ್ವಾ ಭೀಮಸೇನಮಭಾಷತ।
ಭೀಮಸೇನನ ಚಾಪದಿಂದ ಬಿಡಲ್ಪಟ್ಟ ಶರಗಳಿಂದ ಗಾಯಗೊಂಡ ಅವನು ಮಹಾತ್ಮ ಪಾಂಡವನಿಂದಾದ ತನ್ನ ಸಹೋದರನ ವಧೆಯನ್ನು ಸ್ಮರಿಸಿಕೊಂಡು, ಘೋರರೂಪವನ್ನು ತಾಳಿ ಭೀಮಸೇನನಿಗೆ ಹೇಳಿದನು:
07083022c ತಿಷ್ಠೇದಾನೀಂ ರಣೇ ಪಾರ್ಥ ಪಶ್ಯ ಮೇಽದ್ಯ ಪರಾಕ್ರಮಂ।।
07083023a ಬಕೋ ನಾಮ ಸುದುರ್ಬುದ್ಧೇ ರಾಕ್ಷಸಪ್ರವರೋ ಬಲೀ।
07083023c ಪರೋಕ್ಷಂ ಮಮ ತದ್ವೃತ್ತಂ ಯದ್ಭ್ರಾತಾ ಮೇ ಹತಸ್ತ್ವಯಾ।।
“ಪಾರ್ಥ! ಈ ರಣದಲ್ಲಿ ನಿಲ್ಲು! ಇಂದು ನನ್ನ ಪರಾಕ್ರಮವನ್ನು ನೋಡು! ಸುದುರ್ಬುದ್ಧೇ! ನನ್ನ ಪರೋಕ್ಷದಲ್ಲಿ ನನ್ನ ಸಹೋದರ ಬಕನೆಂಬ ಹೆಸರಿನ ಬಲಶಾಲೀ ರಾಕ್ಷಸಪ್ರವರನನ್ನು ಸಂಹರಿಸಿದ್ದೀಯೆ!”
07083024a ಏವಮುಕ್ತ್ವಾ ತತೋ ಭೀಮಮಂತರ್ಧಾನಗತಸ್ತದಾ।
07083024c ಮಹಾತಾ ಶರವರ್ಷೇಣ ಭೃಶಂ ತಂ ಸಮವಾಕಿರತ್।।
ಭೀಮನಿಗೆ ಹೀಗೆ ಹೇಳಿ ಅವನು ಅಂತರ್ಧಾನನಾಗಿ ಮಹಾ ಶರವರ್ಷಗಳಿಂದ ಅವನನ್ನು ತುಂಬಾ ಮುಸುಕಿ ಹಾಕಿದನು.
07083025a ಭೀಮಸ್ತು ಸಮರೇ ರಾಜನ್ನದೃಶ್ಯೇ ರಾಕ್ಷಸೇ ತದಾ।
07083025c ಆಕಾಶಂ ಪೂರಯಾಮಾಸ ಶರೈಃ ಸನ್ನತಪರ್ವಭಿಃ।।
ರಾಜನ್! ರಾಕ್ಷಸನು ಅದೃಶ್ಯನಾಗಲು ಭೀಮನಾದರೋ ಆಕಾಶವನ್ನು ಸನ್ನತಪರ್ವ ಶರಗಳಿಂದ ತುಂಬಿಬಿಟ್ಟನು.
07083026a ಸ ವಧ್ಯಮಾನೋ ಭೀಮೇನ ನಿಮೇಷಾದ್ರಥಮಾಸ್ಥಿತಃ।
07083026c ಜಗಾಮ ಧರಣೀಂ ಕ್ಷುದ್ರಃ ಖಂ ಚೈವ ಸಹಸಾಗಮತ್।।
ಭೀಮನಿಂದ ಹೊಡೆಯಲ್ಪಟ್ಟ ಆ ಕ್ಷುದ್ರನು ಆಕಾಶವನ್ನೇರಿದ್ದರೂ ನಿಮಿಷಮಾತ್ರದಲ್ಲಿ ಭೂಮಿಗಿಳಿದು ಒಮ್ಮೆಲೇ ರಥವನ್ನೇರಿದನು.
07083027a ಉಚ್ಚಾವಚಾನಿ ರೂಪಾಣಿ ಚಕಾರ ಸುಬಹೂನಿ ಚ।
07083027c ಉಚ್ಚಾವಚಾಸ್ತಥಾ ವಾಚೋ ವ್ಯಾಜಹಾರ ಸಮಂತತಃ।।
ಪುನಃ ಮೇಲೇರಿ ಅನೇಕ ರೂಪಗಳನ್ನು ಧರಿಸಿ, ಜೋರಾಗಿ ಗರ್ಜಿಸುತ್ತಾ, ಎಲ್ಲಾಕಡೆ ಸಂಚರಿಸುತ್ತಿದ್ದನು.
07083028a ತೇನ ಪಾಂಡವಸೈನ್ಯಾನಾಂ ಮೃದಿತಾ ಯುಧಿ ವಾರಣಾಃ।
07083028c ಹಯಾಶ್ಚ ಬಹವೋ ರಾಜನ್ಪತ್ತಯಶ್ಚ ತಥಾ ಪುನಃ।
07083028e ರಥೇಭ್ಯೋ ರಥಿನಃ ಪೇತುಸ್ತಸ್ಯ ನುನ್ನಾಃ ಸ್ಮ ಸಾಯಕೈಃ।।
ರಾಜನ್! ಅವನ ಸಾಯಕಗಳಿಂದ ಯುದ್ಧದಲ್ಲಿ ಪಾಂಡವಸೇನೆಯ ಅನೇಕ ಆನೆಗಳು, ಕುದುರೆಗಳು ಮತ್ತು ಪದಾತಿಗಳು ಹತವಾದವು; ರಥಗಳಿಂದ ರಥಿಗಳು ಕೆಳಗುರುಳಿದರು.
07083029a ಶೋಣಿತೋದಾಂ ರಥಾವರ್ತಾಂ ಹಸ್ತಿಗ್ರಾಹಸಮಾಕುಲಾಂ।
07083029c ಚತ್ರಹಂಸಾಂ ಕರ್ದಮಿನೀಂ ಬಾಹುಪನ್ನಗಸಂಕುಲಾಂ।।
07083030a ನದೀಂ ಪ್ರವರ್ತಯಾಮಾಸ ರಕ್ಷೋಗಣಸಮಾಕುಲಾಂ।
07083030c ವಹಂತೀಂ ಬಹುಧಾ ರಾಜಂಶ್ಚೇದಿಪಾಂಚಾಲಸೃಂಜಯಾನ್।।
ರಾಜನ್! ಆ ರಾಕ್ಷಸನು ರಕ್ತವೇ ನೀರಾದ, ರಥಗಳೇ ಸುಳಿಗಳಾಗಿರುವ, ಆನೆಗಳೇ ಮೊಸಳೆಗಳ ಸಮಾಕುಲಗಳಂತಿರುವ, ಚತ್ರಗಳೇ ಹಂಸಗಳಂತಿರುವ, ಕೆಸರಿರುವ, ಬಾಹುಗಳೇ ಹಾವುಗಳ ಸಂಕುಲಗಳಂತಿರುವ, ಅನೇಕ ಚೇದಿ-ಪಾಂಚಾಲ-ಸೃಂಜಯರು ತೇಲುತ್ತಿರುವ ನದಿಯನ್ನೇ ಹರಿಸಿದನು.
07083031a ತಂ ತಥಾ ಸಮರೇ ರಾಜನ್ವಿಚರಂತಮಭೀತವತ್।
07083031c ಪಾಂಡವಾ ಭೃಶಸಂವಿಗ್ನಾಃ ಪ್ರಾಪಶ್ಯಂಸ್ತತ್ಸ್ಯ ವಿಕ್ರಮಂ।।
ರಾಜನ್! ಹೀಗೆ ಸಮರದಲ್ಲಿ ಭೀತಿಯಿಲ್ಲದೇ ಸಂಚರಿಸುತ್ತಿದ್ದ ಅವನ ವಿಕ್ರಮವನ್ನು ಪಾಂಡವರು ತುಂಬಾ ಸಂವಿಗ್ನರಾಗಿ ನೋಡತೊಡಗಿದರು.
07083032a ತಾವಕಾನಾಂ ತು ಸೈನ್ಯಾನಾಂ ಪ್ರಹರ್ಷಃ ಸಮಜಾಯತ।
07083032c ವಾದಿತ್ರನಿನದಶ್ಚೋಗ್ರಃ ಸುಮಹಾಽಲ್ಲೋಮಹರ್ಷಣಃ।।
ನಿನ್ನವರ ಸೇನೆಗಳಲ್ಲಂತೂ ತುಂಬಾ ಹರ್ಷದ ವಾದ್ಯದ ಜೋರಾದ ಧ್ವನಿಯು, ಲೋಮಹರ್ಷಣ ಮಹಾಧ್ವನಿಯು ಹುಟ್ಟಿಕೊಂಡಿತು.
07083033a ತಂ ಶ್ರುತ್ವಾ ನಿನದಂ ಘೋರಂ ತವ ಸೈನ್ಯಸ್ಯ ಪಾಂಡವಃ।
07083033c ನಾಮೃಷ್ಯತ ಯಥಾ ನಾಗಸ್ತಲಶಬ್ದಂ ಸಮೀರಿತಂ।।
ನಿನ್ನ ಸೇನೆಯ ಆ ಘೋರ ನಿನಾದವನ್ನು ಕೇಳಿ ಚಪ್ಪಾಳೆಯ ಶಬ್ಧವನ್ನು ಆನೆಗಳು ಸಹಿಸಿಕೊಳ್ಳಲಾರದಂತೆ ಪಾಂಡವನು ಸಹಿಸಿಕೊಳ್ಳಲಿಲ್ಲ.
07083034a ತತಃ ಕ್ರೋಧಾಭಿತಾಮ್ರಾಕ್ಷೋ ನಿರ್ದಹನ್ನಿವ ಪಾವಕಃ।
07083034c ಸಂದಧೇ ತ್ವಾಷ್ಟ್ರಮಸ್ತ್ರಂ ಸ ಸ್ವಯಂ ತ್ವಷ್ಟೇವ ಮಾರಿಷ।।
ಮಾರಿಷ! ಆಗ ಕ್ರೋಧದಿಂದ ಕಣ್ಣುಗಳು ಕೆಂಪಾದ ಅವನು ಸುಡುತ್ತಿರುವ ಪಾವಕನಂತೆ, ಸ್ವಯಂ ತ್ವಷ್ಟನಂತೆ ತ್ವಾಷ್ಟ್ರ ಅಸ್ತ್ರವನ್ನು ಹೂಡಿದನು.
07083035a ತತಃ ಶರಸಹಸ್ರಾಣಿ ಪ್ರಾದುರಾಸನ್ಸಮಂತತಃ।
07083035c ತೈಃ ಶರೈಸ್ತವ ಸೈನ್ಯಸ್ಯ ವಿದ್ರಾವಃ ಸುಮಹಾನಭೂತ್।।
ಆಗ ಸಾವಿರಾರು ಶರಗಳು ಸುತ್ತಲೂ ಹೊರಬಂದು ಹರಡಿಕೊಂಡವು. ಆ ಶರಗಳಿಂದಾಗಿ ನಿನ್ನ ಸೈನ್ಯವು ಓಡಿಹೋಯಿತು. ಅದೊಂದು ಅತಿ ದೊಡ್ಡದಾಗಿತ್ತು.
07083036a ತದಸ್ತ್ರಂ ಪ್ರೇಷಿತಂ ತೇನ ಭೀಮಸೇನೇನ ಸಂಯುಗೇ।
07083036c ರಾಕ್ಷಸಸ್ಯ ಮಹಾಮಾಯಾಂ ಹತ್ವಾ ರಾಕ್ಷಸಮಾರ್ದಯತ್।।
ಸಂಯುಗದಲ್ಲಿ ಆ ಅಸ್ತ್ರವನ್ನು ಪ್ರಯೋಗಿಸಿ ಭೀಮಸೇನನು ರಾಕ್ಷಸನ ಮಹಾಮಾಯೆಯನ್ನು ನಾಶಗೊಳಿಸಿ ರಾಕ್ಷಸನನ್ನು ಪೀಡಿಸಿದನು.
07083037a ಸ ವಧ್ಯಮಾನೋ ಬಹುಧಾ ಭೀಮಸೇನೇನ ರಾಕ್ಷಸಃ।
07083037c ಸಂತ್ಯಜ್ಯ ಸಮ್ಯುಗೇ ಭೀಮಂ ದ್ರೋಣಾನೀಕಮುಪಾದ್ರವತ್।।
ಭೀಮಸೇನನಿಂದ ಬಹಳವಾಗಿ ವಧಿಸಲ್ಪಟ್ಟ ರಾಕ್ಷಸನು ಸಂಯುಗದಲ್ಲಿ ಭೀಮನನ್ನು ಬಿಟ್ಟು ದ್ರೋಣನ ಸೇನೆಯ ಕಡೆ ಓಡಿ ಹೋದನು.
07083038a ತಸ್ಮಿಂಸ್ತು ನಿರ್ಜಿತೇ ರಾಜನ್ರಾಕ್ಷಸೇಂದ್ರೇ ಮಹಾತ್ಮನಾ।
07083038c ಅನಾದಯನ್ಸಿಂಹನಾದೈಃ ಪಾಂಡವಾಃ ಸರ್ವತೋದಿಶಂ।।
ರಾಜನ್! ಹೀಗೆ ಆ ರಾಕ್ಷಸೇಂದ್ರನನ್ನು ಮಹಾತ್ಮನು ಸೋಲಿಸಲು ಪಾಂಡವರು ಎಲ್ಲ ದಿಕ್ಕುಗಳಲ್ಲಿ ಸಿಂಹನಾದಗೈದರು.
07083039a ಅಪೂಜಯನ್ಮಾರುತಿಂ ಚ ಸಂಹೃಷ್ಟಾಸ್ತೇ ಮಹಾಬಲಂ।
07083039c ಪ್ರಹ್ರಾದಂ ಸಮರೇ ಜಿತ್ವಾ ಯಥಾ ಶಕ್ರಂ ಮರುದ್ಗಣಾಃ।।
ಸಮರದಲ್ಲಿ ಪ್ರಹ್ರಾದನನ್ನು ಗೆದ್ದ ಶಕ್ರನನ್ನು ಮರುದ್ಗಣಗಳು ಹೇಗೋ ಹಾಗೆ ಸಂತೋಷದಿಂದ ಆ ಮಹಾಬಲ ಮಾರುತಿಯನ್ನು ಗೌರವಿಸಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಅಲಂಬುಷಪರಾಜಯೇ ತ್ರ್ಯಾಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಅಲಂಬುಷಪರಾಜಯ ಎನ್ನುವ ಎಂಭತ್ಮೂರನೇ ಅಧ್ಯಾಯವು.