082 ಸಂಕುಲಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಜಯದ್ರಥವಧ ಪರ್ವ

ಅಧ್ಯಾಯ 82

ಸಾರ

ಬೃಹತ್ಕ್ಷತ್ರನಿಂದ ಕೇಕಯ ಕ್ಷೇಮಧೂರ್ತಿಯ ವಧೆ (1-8). ಚೇದಿರಾಜ ಧೃಷ್ಟಕೇತುವು ತ್ರಿಗರ್ತರ ವೀರಧನ್ವನನ್ನು ವಧಿಸಿದುದು (9-18). ಸಹದೇವನು ತ್ರಿಗರ್ತ ರಾಜಕುಮಾರ ನಿರಮಿತ್ರನನ್ನು ವಧಿಸಿದುದು (19-29). ಸಾತ್ಯಕಿಯು ಮಗಧ ರಾಜಕುಮಾರ ವ್ಯಾಘ್ರದತ್ತನನ್ನು ವಧಿಸಿದುದು (30-39).

07082001 ಸಂಜಯ ಉವಾಚ।
07082001a ಬೃಹತ್ಕ್ಷತ್ರಮಥಾಯಾಂತಂ ಕೇಕಯಂ ದೃಢವಿಕ್ರಮಂ।
07082001c ಕ್ಷೇಮಧೂರ್ತಿರ್ಮಹಾರಾಜ ವಿವ್ಯಾಧೋರಸಿ ಮಾರ್ಗಣೈಃ।।

ಸಂಜಯನು ಹೇಳಿದನು: “ಮಹಾರಾಜ! ಮುಂದೆ ಬರುತ್ತಿದ್ದ ದೃಢವಿಕ್ರಮಿ ಕೇಕಯನನ್ನು ಕ್ಷೇಮಧೂರ್ತಿಯು ಎದೆಗೆ ಗುರಿಯಿಟ್ಟು ಮಾರ್ಗಣಗಳಿಂದ ಹೊಡೆದನು.

07082002a ಬೃಹತ್ಕ್ಷತ್ರಸ್ತು ತಂ ರಾಜಾ ನವತ್ಯಾ ನತಪರ್ವಣಾಂ।
07082002c ಆಜಘ್ನೇ ತ್ವರಿತೋ ಯುದ್ಧೇ ದ್ರೋಣಾನೀಕಬಿಭಿತ್ಸಯಾ।।

ರಾಜ ಬೃಹತ್ಕ್ಷತ್ರನಾದರೋ ಯುದ್ಧದಲ್ಲಿ ದ್ರೋಣನ ಸೇನೆಯನ್ನು ಭೇದಿಸಲು ಬಯಸಿ ತ್ವರೆಮಾಡಿ ಅವನನ್ನು ತೊಂಭತ್ತು ನತಪರ್ವಗಳಿಂದ ಪ್ರಹರಿಸಿದನು.

07082003a ಕ್ಷೇಮಧೂರ್ತಿಸ್ತು ಸಂಕ್ರುದ್ಧಃ ಕೇಕಯಸ್ಯ ಮಹಾತ್ಮನಃ।
07082003c ಧನುಶ್ಚಿಚ್ಚೇದ ಭಲ್ಲೇನ ಪೀತೇನ ನಿಶಿತೇನ ಚ।।

ಸಂಕ್ರುದ್ಧನಾದ ಕ್ಷೇಮಧೂರ್ತಿಯಾದರೋ ಎಣ್ಣೆಕುಡಿದ ನಿಶಿತ ಭಲ್ಲದಿಂದ ಮಹಾತ್ಮ ಕೇಕಯನ ಧನುಸ್ಸನ್ನು ಕತ್ತರಿಸಿದನು.

07082004a ಅಥೈನಂ ಚಿನ್ನಧನ್ವಾನಂ ಶರೇಣ ನತಪರ್ವಣಾ।
07082004c ವಿವ್ಯಾಧ ಹೃದಯೇ ತೂರ್ಣಂ ಪ್ರವರಂ ಸರ್ವಧನ್ವಿನಾಂ।।

ಮತ್ತು ತಕ್ಷಣವೇ ಧನುಸ್ಸನ್ನು ಕಳೆದುಕೊಂಡ ಆ ಸರ್ವಧನ್ವಿಗಳಲ್ಲಿ ಶ್ರೇಷ್ಠನ ಎದೆಗೆ ನತಪರ್ವ ಶರದಿಂದ ಹೊಡೆದನು.

07082005a ಅಥಾನ್ಯದ್ಧನುರಾದಾಯ ಬೃಹತ್ಕ್ಷತ್ರೋ ಹಸನ್ನಿವ।
07082005c ವ್ಯಶ್ವಸೂತಧ್ವಜಂ ಚಕ್ರೇ ಕ್ಷೇಮಧೂರ್ತಿಂ ಮಹಾರಥಂ।।

ಆಗ ಬೃಹತ್ಕ್ಷತ್ರನು ನಸುನಕ್ಕು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಮಹಾರಥ ಕ್ಷೇಮಧೂರ್ತಿಯನ್ನು ಕುದುರೆ, ಸೂತ ಮತ್ತು ಧ್ವಜಗಳಿಂದ ವಿಹೀನನನ್ನಾಗಿ ಮಾಡಿದನು.

07082006a ತತೋಽಪರೇಣ ಭಲ್ಲೇನ ಪೀತೇನ ನಿಶಿತೇನ ಚ।
07082006c ಜಹಾರ ನೃಪತೇಃ ಕಾಯಾಚ್ಚಿರೋ ಜ್ವಲಿತಕುಂಡಲಂ।।

ಇನ್ನೊಂದು ಎಣ್ಣೆಯನ್ನು ಕುಡಿದ ನಿಶಿತ ಭಲ್ಲದಿಂದ ಆ ನೃಪತಿಯ ಕುಂಡಲಗಳಿಂದ ಪ್ರಕಾಶಿಸುತ್ತಿದ್ದ ಶಿರಸ್ಸನ್ನು ದೇಹದಿಂದ ಕತ್ತರಿಸಿದನು.

07082007a ತಚ್ಚಿನ್ನಂ ಸಹಸಾ ತಸ್ಯ ಶಿರಃ ಕುಂಚಿತಮೂರ್ಧಜಂ।
07082007c ಸಕಿರೀಟಂ ಮಹೀಂ ಪ್ರಾಪ್ಯ ಬಭೌ ಜ್ಯೋತಿರಿವಾಂಬರಾತ್।।

ಗುಂಗುರುಕೂದಲಿನ ಅವನ ತಲೆಯು ಕಿರೀಟದೊಂದಿಗೆ ಕ್ಷಣದಲ್ಲಿಯೇ ತುಂಡಾಗಿ ಅಂಬರದಲ್ಲಿಂದ ನಕ್ಷತ್ರದಂತೆ, ಭೂಮಿಯನ್ನು ಸೇರಿತು.

07082008a ತಂ ನಿಹತ್ಯ ರಣೇ ಹೃಷ್ಟೋ ಬೃಹತ್ಕ್ಷತ್ರೋ ಮಹಾರಥಃ।
07082008c ಸಹಸಾಭ್ಯಪತತ್ಸೈನ್ಯಂ ತಾವಕಂ ಪಾರ್ಥಕಾರಣಾತ್।।

ರಣದಲ್ಲಿ ಅವನನ್ನು ಸಂಹರಿಸಿ ಹೃಷ್ಟನಾದ ಮಹಾರಥ ಬೃಹತ್ಕ್ಷತ್ರನು ಪಾರ್ಥನ ಕಾರಣದಿಂದ ತಕ್ಷಣವೇ ನಿನ್ನ ಸೇನೆಯ ಮೇಲೆ ಎರಗಿದನು.

07082009a ಧೃಷ್ಟಕೇತುಮಥಾಯಾಂತಂ ದ್ರೋಣಹೇತೋಃ ಪರಾಕ್ರಮೀ।
07082009c ವೀರಧನ್ವಾ ಮಹೇಷ್ವಾಸೋ ವಾರಯಾಮಾಸ ಭಾರತ।।

ಭಾರತ! ದ್ರೋಣನ ಸಲುವಾಗಿ ಮುಂದುವರೆಯುತ್ತಿದ್ದ ಪರಾಕ್ರಮೀ ಧೃಷ್ಟಕೇತುವನ್ನು ಮಹೇಷ್ವಾಸ ವೀರಧನ್ವನು ತಡೆದನು.

07082010a ತೌ ಪರಸ್ಪರಮಾಸಾದ್ಯ ಶರದಂಷ್ಟ್ರೌ ತರಸ್ವಿನೌ।
07082010c ಶರೈರನೇಕಸಾಹಸ್ರೈರನ್ಯೋನ್ಯಮಭಿಜಘ್ನತುಃ।।

ಪರಸ್ಪರರನ್ನು ಎದುರಿಸಿದ ಅವರಿಬ್ಬರು ಶರದಂಷ್ಟ್ರ ತರಸ್ವಿಗಳು ಅನೇಕ ಸಹಸ್ರ ಶರಗಳಿಂದ ಅನ್ಯೋನ್ಯರನ್ನು ಹೊಡೆದರು.

07082011a ತಾವುಭೌ ನರಶಾರ್ದೂಲೌ ಯುಯುಧಾತೇ ಪರಸ್ಪರಂ।
07082011c ಮಹಾವನೇ ತೀವ್ರಮದೌ ವಾರಣಾವಿವ ಯೂಥಪೌ।।

ಅವರಿಬ್ಬರು ನರಶಾರ್ದೂಲರೂ ಮಹಾವನದಲ್ಲಿ ತೀವ್ರ ಮದವೇರಿದ ಎರಡು ಸಲಗಗಳಂತೆ ಪರಸ್ಪರರೊಡನೆ ಯುದ್ಧಮಾಡಿದರು.

07082012a ಗಿರಿಗಹ್ವರಮಾಸಾದ್ಯ ಶಾರ್ದೂಲಾವಿವ ರೋಷಿತೌ।
07082012c ಯುಯುಧಾತೇ ಮಹಾವೀರ್ಯೌ ಪರಸ್ಪರಜಿಘಾಂಸಯಾ।।

ಗಿರಿಗಹ್ವರಗಳನ್ನು ಸೇರಿ ರೋಷಿತರಾಗಿ ಪರಸ್ಪರರನ್ನು ಕೊಲ್ಲಲು ಬಯಸಿದ ಶಾರ್ದೂಲಗಳಂತೆ ಆ ಮಹಾವೀರರು ಹೋರಾಡಿದರು.

07082013a ತದ್ಯುದ್ಧಮಾಸೀತ್ತುಮುಲಂ ಪ್ರೇಕ್ಷಣೀಯಂ ವಿಶಾಂ ಪತೇ।
07082013c ಸಿದ್ಧಚಾರಣಸಂಘಾನಾಂ ವಿಸ್ಮಯಾದ್ಭುತದರ್ಶನಂ।।

ವಿಶಾಂಪತೇ! ಆಗ ಪ್ರೇಕ್ಷಣೀಯವಾದ ತುಮುಲ ಯುದ್ಧವು ನಡೆಯಿತು. ಆ ಅದ್ಭುತ ದರ್ಶನದಿಂದ ಸಿದ್ಧ-ಚಾರಣ ಸಂಘಗಳು ವಿಸ್ಮಯಗೊಂಡವು.

07082014a ವೀರಧನ್ವಾ ತತಃ ಕ್ರುದ್ಧೋ ಧೃಷ್ಟಕೇತೋಃ ಶರಾಸನಂ।
07082014c ದ್ವಿಧಾ ಚಿಚ್ಚೇದ ಭಲ್ಲೇನ ಪ್ರಹಸನ್ನಿವ ಭಾರತ।।

ಭಾರತ! ಆಗ ವೀರಧನ್ವನು ಕ್ರುದ್ಧನಾಗಿ, ನಗುತ್ತಿರುವವನಂತೆ ಭಲ್ಲದಿಂದ ಧೃಷ್ಟಕೇತುವಿನ ಧನುಸ್ಸನ್ನು ಎರಡಾಗಿ ತುಂಡರಿಸಿದನು.

07082015a ತದುತ್ಸೃಜ್ಯ ಧನುಶ್ಚಿನ್ನಂ ಚೇದಿರಾಜೋ ಮಹಾರಥಃ।
07082015c ಶಕ್ತಿಂ ಜಗ್ರಾಹ ವಿಪುಲಾಂ ರುಕ್ಮದಂಡಾಮಯಸ್ಮಯೀಂ।।

ತುಂಡಾದ ಆ ಧನುಸ್ಸನ್ನು ಎಸೆದು ಮಹಾರಥ ಚೇದಿರಾಜನು ದಪ್ಪನೆಯ ಉಕ್ಕಿನಿಂದ ಮಾಡಲ್ಪಟ್ಟ, ಬಂಗಾರದ ದಂಡವುಳ್ಳ, ಶಕ್ತಿಯನ್ನು ಹಿಡಿದನು.

07082016a ತಾಂ ತು ಶಕ್ತಿಂ ಮಹಾವೀರ್ಯಾಂ ದೋರ್ಭ್ಯಾಮಾಯಮ್ಯ ಭಾರತ।
07082016c ಚಿಕ್ಷೇಪ ಸಹಸಾ ಯತ್ತೋ ವೀರಧನ್ವರಥಂ ಪ್ರತಿ।।

ಭಾರತ! ಆ ಶಕ್ತಿಯನ್ನು ಎರಡು ಭುಜಗಳಿಂದಲೂ ಮೇಲೆತ್ತಿ ಮಹಾವೀರ್ಯದಿಂದ ಪ್ರಯತ್ನಪಟ್ಟು ತಕ್ಷಣವೇ ವೀರಧನ್ವನ ರಥದ ಮೇಲೆ ಎಸೆದನು.

07082017a ಸ ತಯಾ ವೀರಘಾತಿನ್ಯಾ ಶಕ್ತ್ಯಾ ತ್ವಭಿಹತೋ ಭೃಶಂ।
07082017c ನಿರ್ಭಿನ್ನಹೃದಯಸ್ತೂರ್ಣಂ ನಿಪಪಾತ ರಥಾನ್ಮಹೀಂ।।

ಆ ವೀರಘಾತಿ ಶಕ್ತಿಯಿಂದ ತುಂಬಾ ಗಾಯಗೊಂಡ ಅವನು ತಕ್ಷಣವೇ ಹೃದಯವು ಒಡೆದು ರಥದಿಂದ ನೆಲಕ್ಕೆ ಬಿದ್ದನು.

07082018a ತಸ್ಮಿನ್ವಿನಿಹತೇ ಶೂರೇ ತ್ರಿಗರ್ತಾನಾಂ ಮಹಾರಥೇ।
07082018c ಬಲಂ ತೇಽಭಜ್ಯತ ವಿಭೋ ಪಾಂಡವೇಯೈಃ ಸಮಂತತಃ।।

ವಿಭೋ! ಆ ತ್ರಿಗರ್ತರ ಮಹಾರಥ ಶೂರನು ಹತನಾಗಲು ಪಾಂಡವೇಯರು ನಿನ್ನ ಸೇನೆಯನ್ನು ಎಲ್ಲ ಕಡೆಗಳಿಂದ ಸದೆಬಡಿದರು.

07082019a ಸಹದೇವೇ ತತಃ ಷಷ್ಟಿಂ ಸಾಯಕಾನ್ದುರ್ಮುಖೋಽಕ್ಷಿಪತ್।
07082019c ನನಾದ ಚ ಮಹಾನಾದಂ ತರ್ಜಯನ್ಪಾಂಡವಂ ರಣೇ।।

ಆಗ ದುರ್ಮುಖನು ಸಹದೇವನ ಮೇಲೆ ಅರವತ್ತು ಸಾಯಕಗಳನ್ನು ಪ್ರಯೋಗಿಸಿ ಪಾಂಡವನನ್ನು ಹೆದರಿಸುತ್ತಾ ರಣದಲ್ಲಿ ಮಹಾನಾದವನ್ನು ಗರ್ಜಿಸಿದನು.

07082020a ಮದ್ರೇಯಸ್ತು ತತಃ ಕ್ರುದ್ಧೋ ದುರ್ಮುಖಂ ದಶಭಿಃ ಶರೈಃ।
07082020c ಭ್ರಾತಾ ಭ್ರಾತರಮಾಯಾಂತಂ ವಿವ್ಯಾಧ ಪ್ರಹಸನ್ನಿವ।।

ಭ್ರಾತೃ ಮದ್ರೇಯನಾದರೋ ಆಗ ಕ್ರುದ್ಧನಾಗಿ ಎದುರಿಸಿ ಬರುತ್ತಿದ್ದ ಭ್ರಾತಾ ದುರ್ಮುಖನನ್ನು ನಸುನಗುತ್ತಿರುವನೋ ಎನ್ನುವಂತೆ ಹತ್ತು ಶರಗಳಿಂದ ಹೊಡೆದನು.

07082021a ತಂ ರಣೇ ರಭಸಂ ದೃಷ್ಟ್ವಾ ಸಹದೇವಂ ಮಹಾಬಲಂ।
07082021c ದುರ್ಮುಖೋ ನವಭಿರ್ಬಾಣೈಸ್ತಾಡಯಾಮಾಸ ಭಾರತ।।

ಭಾರತ! ರಣದಲ್ಲಿ ರಭಸನಾಗಿದ್ದ ಆ ಮಹಾಬಲ ಸಹದೇವನನ್ನು ನೋಡಿ ದುರ್ಮುಖನು ಅವನನ್ನು ಒಂಭತ್ತು ಬಾಣಗಳಿಂದ ಹೊಡೆದನು.

07082022a ದುರ್ಮುಖಸ್ಯ ತು ಭಲ್ಲೇನ ಚಿತ್ತ್ವಾ ಕೇತುಂ ಮಹಾಬಲಃ।
07082022c ಜಘಾನ ಚತುರೋ ವಾಹಾಂಶ್ಚತುರ್ಭಿರ್ನಿಶಿತೈಃ ಶರೈಃ।।

ಆ ಮಹಾಬಲನು ಭಲ್ಲದಿಂದ ದುರ್ಮುಖನ ಕೇತುವನ್ನು ತುಂಡರಿಸಿ ನಾಲ್ಕು ನಿಶಿತ ಶರಗಳಿಂದ ಅವನ ನಾಲ್ಕು ಕುದುರೆಗಳನ್ನು ಸಂಹರಿಸಿದನು.

07082023a ಅಥಾಪರೇಣ ಭಲ್ಲೇನ ಪೀತೇನ ನಿಶಿತೇನ ಚ।
07082023c ಚಿಚ್ಚೇದ ಸಾರಥೇಃ ಕಾಯಾಚ್ಚಿರೋ ಜ್ವಲಿತಕುಂಡಲಂ।।

ಅನಂತರ ಇನ್ನೊಂದು, ಎಣ್ಣೆಕುಡಿದ, ನಿಶಿತ ಭಲ್ಲದಿಂದ ಅವನ ಸಾರಥಿಯ ಹೊಳೆಯುವ ಕುಂಡಲಗಳುಳ್ಳ ಶಿರವನ್ನು ಕಾಯದಿಂದ ಕತ್ತರಿಸಿದನು.

07082024a ಕ್ಷುರಪ್ರೇಣ ಚ ತೀಕ್ಷ್ಣೇನ ಕೌರವ್ಯಸ್ಯ ಮಹದ್ಧನುಃ।
07082024c ಸಹದೇವೋ ರಣೇ ಚಿತ್ತ್ವಾ ತಂ ಚ ವಿವ್ಯಾಧ ಪಂಚಭಿಃ।।

ಸಹದೇವನು ತೀಕ್ಷ್ಣವಾದ ಕ್ಷುರಪ್ರದಿಂದ ರಣದಲ್ಲಿ ಕೌರವ್ಯನ ಮಹಾ ಧನುಸ್ಸನ್ನು ಕತ್ತರಿಸಿ ಅವನನ್ನೂ ಐದರಿಂದ ಹೊಡೆದನು.

07082025a ಹತಾಶ್ವಂ ತು ರಥಂ ತ್ಯಕ್ತ್ವಾ ದುರ್ಮುಖೋ ವಿಮನಾಸ್ತದಾ।
07082025c ಆರುರೋಹ ರಥಂ ರಾಜನ್ನಿರಮಿತ್ರಸ್ಯ ಭಾರತ।।

ಭಾರತ! ರಾಜನ್! ಅಶ್ವಗಳು ಹತವಾದ ರಥವನ್ನು ತ್ಯಜಿಸಿ ದುರ್ಮುಖನು ವಿಮನಸ್ಕನಾಗಿ ನಿರಮಿತ್ರನ ರಥವನ್ನು ಏರಿದನು.

07082026a ಸಹದೇವಸ್ತತಃ ಕ್ರುದ್ಧೋ ನಿರಮಿತ್ರಂ ಮಹಾಹವೇ।
07082026c ಜಘಾನ ಪೃತನಾಮಧ್ಯೇ ಭಲ್ಲೇನ ಪರವೀರಹಾ।।

ಆಗ ಪರವೀರಹ ಸಹದೇವನು ಮಹಾಹವದಲ್ಲಿ ಕ್ರುದ್ಧನಾಗಿ ಸೇನೆಗಳ ಮಧ್ಯದಲ್ಲಿ ನಿರಮಿತ್ರನನ್ನು ಭಲ್ಲದಿಂದ ಹೊಡೆದನು.

07082027a ಸ ಪಪಾತ ರಥೋಪಸ್ಥಾನ್ನಿರಮಿತ್ರೋ ಜನೇಶ್ವರಃ।
07082027c ತ್ರಿಗರ್ತರಾಜಸ್ಯ ಸುತೋ ವ್ಯಥಯಂಸ್ತವ ವಾಹಿನೀಂ।।

ಜನೇಶ್ವರ ತ್ರಿಗರ್ತರಾಜನ ಮಗನಾದ ನಿರಮಿತ್ರನು ನಿನ್ನ ಸೇನೆಯನ್ನು ವ್ಯಥೆಗೀಡುಮಾಡುತ್ತಾ ರಥದ ಆಸನದಿಂದ ಕೆಳಗುರುಳಿದನು.

07082028a ತಂ ತು ಹತ್ವಾ ಮಹಾಬಾಹುಃ ಸಹದೇವೋ ವ್ಯರೋಚತ।
07082028c ಯಥಾ ದಾಶರಥೀ ರಾಮಃ ಖರಂ ಹತ್ವಾ ಮಹಾಬಲಂ।।

ಅವನನ್ನು ಸಂಹರಿಸಿ ಮಹಾಬಾಹು ಸಹದೇವನು ಮಹಾಬಲ ಖರನನ್ನು ಸಂಹರಿಸಿ ರಾಮ ದಾಶರಥಿಯು ಹೇಗೋ ಹಾಗೆ ವಿರಾಜಿಸಿದನು.

07082029a ಹಾಹಾಕಾರೋ ಮಹಾನಾಸೀತ್ತ್ರಿಗರ್ತಾನಾಂ ಜನೇಶ್ವರ।
07082029c ರಾಜಪುತ್ರಂ ಹತಂ ದೃಷ್ಟ್ವಾ ನಿರಮಿತ್ರಂ ಮಹಾಬಲಂ।।

ಜನೇಶ್ವರ! ರಾಜಪುತ್ರ ಮಹಾಬಲ ನಿರಮಿತ್ರನು ಹತನಾದುದನ್ನು ನೋಡಿ ತ್ರಿಗರ್ತರಲ್ಲಿ ಮಹಾ ಹಾಹಾಕಾರವುಂಟಾಯಿತು.

07082030a ನಕುಲಸ್ತೇ ಸುತಂ ರಾಜನ್ವಿಕರ್ಣಂ ಪೃಥುಲೋಚನಂ।
07082030c ಮುಹೂರ್ತಾಜ್ಜಿತವಾನ್ಸಂಖ್ಯೇ ತದದ್ಭುತಮಿವಾಭವತ್।।

ರಾಜನ್! ನಕುಲನು ರಣರಂಗದಲ್ಲಿ ನಿನ್ನ ಮಗ ವಿಶಾಲಾಕ್ಷ ವಿಕರ್ಣನನ್ನು ಕ್ಷಣಮಾತ್ರದಲ್ಲಿ ಗೆದ್ದನು. ಅದೊಂದು ಅದ್ಭುತವಾಗಿತ್ತು.

07082031a ಸಾತ್ಯಕಿಂ ವ್ಯಾಘ್ರದತ್ತಸ್ತು ಶರೈಃ ಸನ್ನತಪರ್ವಭಿಃ।
07082031c ಚಕ್ರೇಽದೃಶ್ಯಂ ಸಾಶ್ವಸೂತಂ ಸಧ್ವಜಂ ಪೃತನಾಂತರೇ।।

ರಣದ ಇನ್ನೊಂದು ಕಡೆ ವ್ಯಾಘ್ರದತ್ತನು ಸನ್ನತಪರ್ವ ಶರಗಳಿಂದ ಸಾತ್ಯಕಿಯನ್ನು ಅವನ ಕುದುರೆಗಳು, ಸಾರಥಿ ಮತ್ತು ಧ್ವಜಗಳೊಂದಿಗೆ ಕಾಣದಂತೆ ಮಾಡಿಬಿಟ್ಟನು.

07082032a ತಾನ್ನಿವಾರ್ಯ ಶರಾನ್ಶೂರಃ ಶೈನೇಯಃ ಕೃತಹಸ್ತವತ್।
07082032c ಸಾಶ್ವಸೂತಧ್ವಜಂ ಬಾಣೈರ್ವ್ಯಾಘ್ರದತ್ತಮಪಾತಯತ್।।

ಆ ಶರಗಳನ್ನು ತಡೆದು ಕೈಚಳಕವುಳ್ಳ ಶೂರ ಶೈನೇಯನು ಬಾಣಗಳಿಂದ ವ್ಯಾಘ್ರದತ್ತನನ್ನು ಅವನ ಕುದುರೆಗಳು, ಸಾರಥಿ ಮತ್ತು ಧ್ವಜಗಳಿಂದ ಉರುಳಿಸಿದನು.

07082033a ಕುಮಾರೇ ನಿಹತೇ ತಸ್ಮಿನ್ಮಗಧಸ್ಯ ಸುತೇ ಪ್ರಭೋ।
07082033c ಮಾಗಧಾಃ ಸರ್ವತೋ ಯತ್ತಾ ಯುಯುಧಾನಮುಪಾದ್ರವನ್।।

ಪ್ರಭೋ! ಮಗಧನ ಮಗ ಕುಮಾರನು ಹತನಾಗಲು ಮಾಗಧರು ಪ್ರಯತ್ನಿಸಿ ಯುಯುಧಾನನನ್ನು ಎಲ್ಲಕಡೆಗಳಿಂದ ಆಕ್ರಮಣಿಸಿದರು.

07082034a ವಿಸೃಜಂತಃ ಶರಾಂಶ್ಚೈವ ತೋಮರಾಂಶ್ಚ ಸಹಸ್ರಶಃ।
07082034c ಭಿಂಡಿಪಾಲಾಂಸ್ತಥಾ ಪ್ರಾಸಾನ್ಮುದ್ಗರಾನ್ಮುಸಲಾನಪಿ।।
07082035a ಅಯೋಧಯನ್ರಣೇ ಶೂರಾಃ ಸಾತ್ವತಂ ಯುದ್ಧದುರ್ಮದಂ।

ಆ ಶೂರರು ರಣದಲ್ಲಿ ಯುದ್ಧದುರ್ಮದ ಸಾತ್ವತನೊಂದಿಗೆ ಸಹಸ್ರಾರು ಶರ-ತೋಮರ-ಭಿಂಡಿಪಾಲ-ಪ್ರಾಸ-ಮುದ್ಗರ-ಮುಸಲಗಳನ್ನು ಪ್ರಯೋಗಿಸುತ್ತಾ ಯುದ್ಧಮಾಡಿದರು.

07082035c ತಾಂಸ್ತು ಸರ್ವಾನ್ಸ ಬಲವಾನ್ಸಾತ್ಯಕ್ತಿರ್ಯುದ್ಧದುರ್ಮದಃ।
07082035e ನಾತಿಕೃಚ್ಚ್ರಾದ್ಧಸನ್ನೇವ ವಿಜಿಗ್ಯೇ ಪುರುಷರ್ಷಭ।।

ಪುರುಷರ್ಷಭ! ಅವರೆಲ್ಲರನ್ನೂ ಬಲವಾನ್ ಯುದ್ಧದುರ್ಮದ ಸಾತ್ಯಕಿಯು ಸ್ವಲ್ಪವೂ ಕಷ್ಟಪಡದೇ ನಗುತ್ತಲೇ ಪರಾಜಯಗೊಳಿಸಿದನು.

07082036a ಮಾಗಧಾನ್ದ್ರವತೋ ದೃಷ್ಟ್ವಾ ಹತಶೇಷಾನ್ಸಮಂತತಃ।
07082036c ಬಲಂ ತೇಽಭಜ್ಯತ ವಿಭೋ ಯುಯುಧಾನಶರಾರ್ದಿತಂ।।

ವಿಭೋ! ಹತಶೇಷರಾದ ಮಾಗಧರು ಓಡಿ ಹೋಗುತ್ತಿರುವುದನ್ನು ನೋಡಿ ಯುಯುಧಾನನ ಶರಗಳಿಂದ ಪೀಡಿತರಾದ ನಿನ್ನ ಸೇನೆಯು ಧೃತಿಗೆಟ್ಟಿತು.

07082037a ನಾಶಯಿತ್ವಾ ರಣೇ ಸೈನ್ಯಂ ತ್ವದೀಯಂ ಮಾಧವೋತ್ತಮಃ।
07082037c ವಿಧುನ್ವಾನೋ ಧನುಃಶ್ರೇಷ್ಠಂ ವ್ಯಭ್ರಾಜತ ಮಹಾಯಶಾಃ।।

ಹೀಗೆ ರಣದಲ್ಲಿ ನಿನ್ನ ಸೈನ್ಯವನ್ನು ನಾಶಗೊಳಿಸುತ್ತಾ ಮಾಧವೋತ್ತಮ ಮಹಾಯಶಸ್ವಿಯು ತನ್ನ ಶ್ರೇಷ್ಠ ಧನುಸ್ಸನ್ನು ಟೇಂಕರಿಸುತ್ತಾ ಪ್ರಕಾಶಿಸಿದನು.

07082038a ಭಜ್ಯಮಾನಂ ಬಲಂ ರಾಜನ್ಸಾತ್ವತೇನ ಮಹಾತ್ಮನಾ।
07082038c ನಾಭ್ಯವರ್ತತ ಯುದ್ಧಾಯ ತ್ರಾಸಿತಂ ದೀರ್ಘಬಾಹುನಾ।।

ರಾಜನ್! ಮಹಾತ್ಮ ಸಾತ್ವತನಿಂದ ಸದೆಬಡಿಯಲ್ಪಟ್ಟ ಸೇನೆಯು ಆ ದೀರ್ಘಬಾಹುವಿನಿಂದ ಭಯಗೊಂಡು ಯುದ್ಧಕ್ಕೆ ಹಿಂದಿರುಗಿ ಬರಲಿಲ್ಲ.

07082039a ತತೋ ದ್ರೋಣೋ ಭೃಶಂ ಕ್ರುದ್ಧಃ ಸಹಸೋದ್ವೃತ್ಯ ಚಕ್ಷುಷೀ।
07082039c ಸಾತ್ಯಕಿಂ ಸತ್ಯಕರ್ಮಾಣಂ ಸ್ವಯಮೇವಾಭಿದುದ್ರುವೇ।।

ಆಗ ದ್ರೋಣನು ತುಂಬಾ ಕುಪಿತನಾಗಿ ಒಮ್ಮೆಲೇ ಅವನ ಮೇಲೆ ಕಣ್ಣುಹಾಯಿಸಿ ಆ ಸಾತ್ಯಕಿ ಸತ್ಯಕರ್ಮಿಯನ್ನು ಸ್ವಯಂ ತಾನೇ ಆಕ್ರಮಣಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಂಕುಲಯುದ್ಧೇ ದ್ವಾಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಂಕುಲಯುದ್ಧ ಎನ್ನುವ ಎಂಭತ್ತೆರಡನೇ ಅಧ್ಯಾಯವು.