ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 81
ಸಾರ
ಕೌರವ-ಪಾಂಡವರ ದ್ವಂದ್ವಯುದ್ಧ (1-17). ದ್ರೋಣ-ಯುಧಿಷ್ಠಿರರ ಯುದ್ಧ; ಯುಧಿಷ್ಠಿರನ ಪಲಾಯನ (18-46).
07081001 ಧೃತರಾಷ್ಟ್ರ ಉವಾಚ।
07081001a ಅರ್ಜುನೇ ಸೈಂಧವಂ ಪ್ರಾಪ್ತೇ ಭಾರದ್ವಾಜೇನ ಸಂವೃತಾಃ।
07081001c ಪಾಂಚಾಲಾಃ ಕುರುಭಿಃ ಸಾರ್ಧಂ ಕಿಮಕುರ್ವತ ಸಂಜಯ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ಅರ್ಜುನನು ಸೈಂಧವನ ಸಮೀಪಕ್ಕೆ ಹೋಗಲು ಭಾರದ್ವಾಜನಿಂದ ಸುತ್ತುವರೆಯಲ್ಪಟ್ಟಿದ್ದ ಪಾಂಚಾಲರು ಕುರುಗಳೊಂದಿಗೆ ಏನು ಮಾಡಿದರು?”
07081002 ಸಂಜಯ ಉವಾಚ।
07081002a ಅಪರಾಹ್ಣೇ ಮಹಾರಾಜ ಸಂಗ್ರಾಮೇ ಲೋಮಹರ್ಷಣೇ।
07081002c ಪಾಂಚಾಲಾನಾಂ ಕುರೂಣಾಂ ಚ ದ್ರೋಣೇ ದ್ಯೂತಮವರ್ತತ।।
ಸಂಜಯನು ಹೇಳಿದನು: “ಮಹಾರಾಜ! ಸಂಗ್ರಾಮದ ಅಪರಾಹ್ಣದಲ್ಲಿ ದ್ರೋಣನನ್ನೇ ಪಣವಾಗಿಟ್ಟಿದ್ದ ಲೋಮಹರ್ಷಣ ಯುದ್ಧವು ಪಾಂಚಾಲ-ಕುರುಗಳ ಮಧ್ಯೆ ನಡೆಯಿತು.
07081003a ಪಾಂಚಾಲಾ ಹಿ ಜಿಘಾಂಸಂತೋ ದ್ರೋಣಂ ಸಂಹೃಷ್ಟಚೇತಸಃ।
07081003c ಅಭ್ಯವರ್ಷಂತ ಗರ್ಜಂತಃ ಶರವರ್ಷಾಣಿ ಮಾರಿಷ।।
ಮಾರಿಷ! ಹೃಷ್ಟಚೇತಸರಾದ ಪಾಂಚಾಲರು ದ್ರೋಣನನ್ನು ಸಂಹರಿಸಲು ಬಯಸಿ ಗರ್ಜಿಸುತ್ತಾ ಬಾಣಗಳ ಮಳೆಯನ್ನು ಸುರಿಸಿದರು.
07081004a ತತಃ ಸುತುಮುಲಸ್ತೇಷಾಂ ಸಂಗ್ರಾಮೋಽವರ್ತತಾದ್ಭುತಃ।
07081004c ಪಾಂಚಾಲಾನಾಂ ಕುರೂಣಾಂ ಚ ಘೋರೋ ದೇವಾಸುರೋಪಮಃ।।
ಆಗ ಪಾಂಚಾಲರು ಮತ್ತು ಕುರುಗಳ ನಡುವೆ ದೇವಾಸುರರಂತೆ ಘೋರವಾದ ಅದ್ಭುತ ತುಮುಲ ಸಂಗ್ರಾಮವು ನಡೆಯಿತು.
07081005a ಸರ್ವೇ ದ್ರೋಣರಥಂ ಪ್ರಾಪ್ಯ ಪಾಂಚಾಲಾಃ ಪಂಡವೈಃ ಸಹ।
07081005c ತದನೀಕಂ ಬಿಭಿತ್ಸಂತೋ ಮಹಾಸ್ತ್ರಾಣಿ ವ್ಯದರ್ಶಯನ್।।
ಎಲ್ಲ ಪಾಂಚಾಲರೂ ಪಾಂಡವರೊಂದಿಗೆ ದ್ರೋಣನ ರಥವನ್ನು ಸಮೀಪಿಸಿ ಆ ಸೇನೆಯನ್ನು ಬೆದರಿಸುತ್ತಾ ಮಹಾ ಅಸ್ತ್ರಗಳನ್ನು ಪ್ರದರ್ಶಿಸಿದರು.
07081006a ದ್ರೋಣಸ್ಯ ರಥಪರ್ಯಂತಂ ರಥಿನೋ ರಥಮಾಸ್ಥಿತಾಃ।
07081006c ಕಂಪಯಂತೋಽಭ್ಯವರ್ತಂತ ವೇಗಮಾಸ್ಥಾಯ ಮಧ್ಯಮಂ।।
ದ್ರೋಣನ ರಥದ ವರೆಗೂ ರಥಗಳಲ್ಲಿದ್ದ ರಥಿಗಳು ಮಧ್ಯಮ ವೇಗದಲ್ಲಿ ಭೂಮಿಯನ್ನು ನಡುಗಿಸುತ್ತಾ ಮುಂದುವರೆಯುತ್ತಿದ್ದರು.
07081007a ತಮಭ್ಯಗಾದ್ಬೃಹತ್ಕ್ಷತ್ರಃ ಕೇಕಯಾನಾಂ ಮಹಾರಥಃ।
07081007c ಪ್ರವಪನ್ನಿಶಿತಾನ್ಬಾಣಾನ್ಮಹೇಂದ್ರಾಶನಿಸನ್ನಿಭಾನ್।।
ಆಗ ಕೇಕಯರ ಮಹಾರಥ ಬೃಹತ್ಕ್ಷತ್ರನು ಮಹೇಂದ್ರನ ವಜ್ರದಂತಿರುವ ನಿಶಿತ ಬಾಣಗಳನ್ನು ಪ್ರಯೋಗಿಸುತ್ತಾ ಆಕ್ರಮಣಿಸಿದನು.
07081008a ತಂ ತು ಪ್ರತ್ಯುದಿಯಾಚ್ಚೀಘ್ರಂ ಕ್ಷೇಮಧೂರ್ತಿರ್ಮಹಾಯಶಾಃ।
07081008c ವಿಮುಂಚನ್ನಿಶಿತಾನ್ಬಾಣಾಂ ಶತಶೋಽಥ ಸಹಸ್ರಶಃ।।
ಆಗ ಮಹಾಯಶಸ್ವಿ ಕ್ಷೇಮಧೂರ್ತಿಯು ನೂರಾರು ಸಹಸ್ರಾರು ನಿಶಿತ ಬಾಣಗಳನ್ನು ಬಿಡುತ್ತಾ ಶೀಘ್ರವಾಗಿ ಅವನನ್ನು ಎದುರಿಸಿದನು.
07081009a ಧೃಷ್ಟಕೇತುಶ್ಚ ಚೇದೀನಾಂ ಋಷಭೋಽತಿಬಲೋದಿತಃ।
07081009c ತ್ವರಿತೋಽಭ್ಯದ್ರವದ್ದ್ರೋಣಂ ಮಹೇಂದ್ರ ಇವ ಶಂಬರಂ।।
ಅತಿಬಲಾನ್ವಿತನಾದ ಚೇದಿಗಳ ಋಷಭ ಧೃಷ್ಟಕೇತುವು ತ್ವರೆಮಾಡಿ ಶಂಬರನನ್ನು ಮಹೇಂದ್ರನಂತೆ ದ್ರೋಣನನ್ನು ಆಕ್ರಮಣಿಸಿದನು.
07081010a ತಮಾಪತಂತಂ ಸಹಸಾ ವ್ಯಾದಿತಾಸ್ಯಮಿವಾಂತಕಂ।
07081010c ವೀರಧನ್ವಾ ಮಹೇಷ್ವಾಸಸ್ತ್ವರಮಾಣಃ ಸಮಭ್ಯಯಾತ್।।
ಬಾಯಿಕಳೆದ ಅಂತಕನಂತೆ ಒಮ್ಮೆಗೇ ಮೇಲೆಬೀಳುತ್ತಿದ್ದ ಅವನನ್ನು ತ್ವರೆಮಾಡಿ ಮಹೇಷ್ವಾಸ ವೀರಧನ್ವನು ಎದುರಿಸಿದನು.
07081011a ಯುಧಿಷ್ಠಿರಂ ಮಹಾರಾಜ ಜಿಗೀಷುಂ ಸಮವಸ್ಥಿತಂ।
07081011c ಸಹಾನೀಕಂ ತತೋ ದ್ರೋಣೋ ನ್ಯವಾರಯತ ವೀರ್ಯವಾನ್।।
ಮಹಾರಾಜ! ಸೇನೆಗಳೊಂದಿಗೆ ವ್ಯವಸ್ಥಿತನಾದ ಯುಧಿಷ್ಠಿರನನ್ನು ಗೆಲ್ಲಲು ಬಯಸಿ ವೀರ್ಯವಾನ್ ದ್ರೋಣನು ತಡೆದನು.
07081012a ನಕುಲಂ ಕುಶಲಂ ಯುದ್ಧೇ ಪರಾಕ್ರಾಂತಂ ಪರಾಕ್ರಮೀ।
07081012c ಅಭ್ಯಗಚ್ಚತ್ಸಮಾಯಾಂತಂ ವಿಕರ್ಣಸ್ತೇ ಸುತಃ ಪ್ರಭೋ।।
ಪ್ರಭೋ! ನಿನ್ನ ಮಗ ಪರಾಕ್ರಮೀ ವಿಕರ್ಣನು ಯುದ್ಧದಲ್ಲಿ ಕುಶಲನಾದ ಪರಾಕ್ರಾಂತ ನಕುಲನನ್ನು ಎದುರಿಸಿ ಯುದ್ಧಮಾಡಿದನು.
07081013a ಸಹದೇವಂ ತಥಾಯಾಂತಂ ದುರ್ಮುಖಃ ಶತ್ರುಕರ್ಶನಃ।
07081013c ಶರೈರನೇಕಸಾಹಸ್ರೈಃ ಸಮವಾಕಿರದಾಶುಗೈಃ।।
ಹಾಗೆಯೇ ಮುಂದುವರೆದು ಬರುತ್ತಿದ್ದ ಸಹದೇವನನ್ನು ಶತ್ರುಕರ್ಶನ ದುರ್ಮುಖನು ಅನೇಕ ಸಾವಿರ ಆಶುಗ ಶರಗಳಿಂದ ಮುಚ್ಚಿಬಿಟ್ಟನು.
07081014a ಸಾತ್ಯಕಿಂ ತು ನರವ್ಯಾಘ್ರಂ ವ್ಯಾಘ್ರದತ್ತಸ್ತ್ವವಾರಯತ್।
07081014c ಶರೈಃ ಸುನಿಶಿತೈಸ್ತೀಕ್ಷ್ಣೈಃ ಕಂಪಯನ್ವೈ ಮುಹುರ್ಮುಹುಃ।।
ನರವ್ಯಾಘ್ರ ಸಾತ್ಯಕಿಯನ್ನಾದರೋ ವ್ಯಾಘ್ರದತ್ತನು ತೀಕ್ಷ್ಣವಾದ ನಿಶಿತ ಶರಗಳಿಂದ ಪುನಃ ಪುನಃ ಕಂಪಿಸುತ್ತಾ ತಡೆದನು.
07081015a ದ್ರೌಪದೇಯಾನ್ನರವ್ಯಾಘ್ರಾನ್ಮುಂಚತಃ ಸಾಯಕೋತ್ತಮಾನ್।
07081015c ಸಂರಬ್ಧಾನ್ರಥಿನಾಂ ಶ್ರೇಷ್ಠಾನ್ಸೌಮದತ್ತಿರವಾರಯತ್।।
ಸಂರಬ್ಧರಾದ, ರಥಿಗಳಲ್ಲಿ ಶ್ರೇಷ್ಠರಾದ, ನರವ್ಯಾಘ್ರ ದ್ರೌಪದೇಯರು ಸೌಮದತ್ತಿಯನ್ನು ಎದುರಿಸಿದರು.
07081016a ಭೀಮಸೇನಂ ತಥಾ ಕ್ರುದ್ಧಂ ಭೀಮರೂಪೋ ಭಯಾನಕಂ।
07081016c ಪ್ರತ್ಯವಾರಯದಾಯಾಂತಮಾರ್ಷ್ಯಶೃಂಗಿರ್ಮಹಾರಥಃ।।
ಹಾಗೆಯೇ ಕ್ರುದ್ಧನಾಗಿ ಭೀಮರೂಪನಾಗಿ ಭಯಾನಕನಾಗಿ ಕಾಣುತ್ತಾ ಮುಂದೆ ಬರುತ್ತಿದ್ದ ಭೀಮಸೇನನನ್ನು ಮಹಾರಥ ಆರ್ಷ್ಯಶೃಂಗಿಯು ತಡೆದನು.
07081017a ತಯೋಃ ಸಮಭವದ್ಯುದ್ಧಂ ನರರಾಕ್ಷಸಯೋರ್ಮೃಧೇ।
07081017c ಯಾದೃಗೇವ ಪುರಾ ವೃತ್ತಂ ರಾಮರಾವಣಯೋರ್ನೃಪ।।
ನೃಪ! ರಣರಂಗದಲ್ಲಿ ಅವರಿಬ್ಬರು ನರ-ರಾಕ್ಷಸರ ನಡುವೆ, ಹಿಂದೆ ರಾಮ-ರಾವಣರ ನಡುವೆ ನಡೆದಂತೆ, ಯುದ್ಧವು ನಡೆಯಿತು.
07081018a ತತೋ ಯುಧಿಷ್ಠಿರೋ ದ್ರೋಣಂ ನವತ್ಯಾ ನತಪರ್ವಣಾಂ।
07081018c ಆಜಘ್ನೇ ಭರತಶ್ರೇಷ್ಠ ಸರ್ವಮರ್ಮಸು ಭಾರತ।।
ಭರತಶ್ರೇಷ್ಠ! ಭಾರತ! ಆಗ ಯುಧಿಷ್ಠಿರನು ತೊಂಭತ್ತು ನತಪರ್ವಗಳಿಂದ ದ್ರೋಣನ ಸರ್ವಮರ್ಮಗಳಿಗೆ ಹೊಡೆದನು.
07081019a ತಂ ದ್ರೋಣಃ ಪಂಚವಿಂಶತ್ಯಾ ನಿಜಘಾನ ಸ್ತನಾಂತರೇ।
07081019c ರೋಷಿತೋ ಭರತಶ್ರೇಷ್ಠ ಕೌಂತೇಯೇನ ಯಶಸ್ವಿನಾ।।
ಭರತಶ್ರೇಷ್ಠ! ಯಶಸ್ವಿ ಕೌಂತೇಯನಿಂದ ರೋಷಗೊಂಡ ದ್ರೋಣನು ಅವನನ್ನು ಇಪ್ಪತ್ತೈದು ಬಾಣಗಳಿಂದ ಅವನ ಎದೆಯ ಮಧ್ಯೆ ಹೊಡೆದನು.
07081020a ಭೂಯ ಏವ ತು ವಿಂಶತ್ಯಾ ಸಾಯಕಾನಾಂ ಸಮಾಚಿನೋತ್।
07081020c ಸಾಶ್ವಸೂತಧ್ವಜಂ ದ್ರೋಣಃ ಪಶ್ಯತಾಂ ಸರ್ವಧನ್ವಿನಾಂ।।
ಮತ್ತೆ ಇಪ್ಪತ್ತು ಸಾಯಕಗಳನ್ನು ಕಳುಹಿಸಿ ದ್ರೋಣನು ಸರ್ವಧನ್ವಿಗಳೂ ನೋಡುತ್ತಿರುವಂತೆ, ಅವನ ಕುದುರೆ-ಸೂತ-ಧ್ವಜಗಳನ್ನು ತುಂಡರಿಸಿದನು.
07081021a ತಾಂ ಶರಾನ್ದ್ರೋಣಮುಕ್ತಾಂಸ್ತು ಶರವರ್ಷೇಣ ಪಾಂಡವಃ।
07081021c ಅವಾರಯತ ಧರ್ಮಾತ್ಮಾ ದರ್ಶಯನ್ಪಾಣಿಲಾಘವಂ।।
ದ್ರೋಣನು ಬಿಟ್ಟ ಆ ಶರಗಳನ್ನು ಧರ್ಮಾತ್ಮ ಪಾಂಡವನು ಶರವರ್ಷದಿಂದ ತಡೆದು ತನ್ನ ಕೈಚಳಕವನ್ನು ತೋರಿಸಿದನು.
07081022a ತತೋ ದ್ರೋಣೋ ಭೃಶಂ ಕ್ರುದ್ಧೋ ಧರ್ಮರಾಜಸ್ಯ ಸಂಯುಗೇ।
07081022c ಚಿಚ್ಚೇದ ಸಹಸಾ ಧನ್ವೀ ಧನುಸ್ತಸ್ಯ ಮಹಾತ್ಮನಃ।।
ಆಗ ಸಂಯುಗದಲ್ಲಿ ಧರ್ಮರಾಜನ ಮೇಲೆ ತುಂಬಾ ಕ್ರೋಧಿತನಾಗಿ ಧನ್ವೀ ದ್ರೋಣನು ತಕ್ಷಣವೇ ಆ ಮಹಾತ್ಮನ ಧನುಸ್ಸನ್ನು ಕತ್ತರಿಸಿದನು.
07081023a ಅಥೈನಂ ಚಿನ್ನಧನ್ವಾನಂ ತ್ವರಮಾಣೋ ಮಹಾರಥಃ।
07081023c ಶರೈರನೇಕಸಾಹಸ್ರೈಃ ಪೂರಯಾಮಾಸ ಸರ್ವತಃ।।
ಅವನ ಧನುಸ್ಸನ್ನು ಕತ್ತರಿಸಿ ತ್ವರೆಮಾಡಿ ಮಹಾರಥನು ಅವನನ್ನು ಅನೇಕ ಸಹಸ್ರ ಶರಗಳಿಂದ ಸುತ್ತಲೂ ಮುಚ್ಚಿಬಿಟ್ಟನು.
07081024a ಅದೃಶ್ಯಂ ದೃಶ್ಯ ರಾಜಾನಂ ಭಾರದ್ವಾಜಸ್ಯ ಸಾಯಕೈಃ।
07081024c ಸರ್ವಭೂತಾನ್ಯಮನ್ಯಂತ ಹತಮೇವ ಯುಧಿಷ್ಠಿರಂ।।
ಭಾರದ್ವಾಜನ ಸಾಯಕಗಳಿಂದ ರಾಜನು ಅದೃಶ್ಯನಾದುದನ್ನು ನೋಡಿ ಸರ್ವಭೂತಗಳೂ ಯುಧಿಷ್ಠಿರನು ಹತನಾದನೆಂದೇ ತಿಳಿದುಕೊಂಡರು.
07081025a ಕೇ ಚಿಚ್ಚೈನಮಮನ್ಯಂತ ತಥಾ ವೈ ವಿಮುಖೀಕೃತಂ।
07081025c ಹೃತೋ ರಾಜೇತಿ ರಾಜೇಂದ್ರ ಬ್ರಾಹ್ಮಣೇನ ಯಶಸ್ವಿನಾ।।
ರಾಜೇಂದ್ರ! ಕೆಲವರು ಅವನು ಪಲಾಯನ ಮಾಡಿದನೆಂದು ಅಂದುಕೊಂಡರು. ಇನ್ನು ಕೆಲವರು “ಯಶಸ್ವಿ ಬ್ರಾಹ್ಮಣನು ರಾಜನನ್ನು ಕೊಂದುಬಿಟ್ಟನು!” ಎಂದು ಕೊಂಡರು.
07081026a ಸ ಕೃಚ್ಚ್ರಂ ಪರಮಂ ಪ್ರಾಪ್ತೋ ಧರ್ಮರಾಜೋ ಯುಧಿಷ್ಠಿರಃ।
07081026c ತ್ಯಕ್ತ್ವಾ ತತ್ಕಾರ್ಮುಕಂ ಚಿನ್ನಂ ಭಾರದ್ವಾಜೇನ ಸಮ್ಯುಗೇ।
07081026e ಆದದೇಽನ್ಯದ್ಧನುರ್ದಿವ್ಯಂ ಭಾರಘ್ನಂ ವೇಗವತ್ತರಂ।।
ಆ ಪರಮ ಕಷ್ಟವನ್ನು ಅನುಭವಿಸಿದ ಧರ್ಮರಾಜ ಯುಧಿಷ್ಠಿರನು ಸಂಯುಗದಲ್ಲಿ ಭಾರದ್ವಾಜನಿಂದ ಕತ್ತರಿಸಲ್ಪಟ್ಟ ಆ ಧನುಸ್ಸನು ತ್ಯಜಿಸಿ, ಇನ್ನೊಂದು ದಿವ್ಯವಾದ, ಭಾರವತ್ತಾದ, ವೇಗವತ್ತರ ಧನುಸ್ಸನ್ನು ಎತ್ತಿಕೊಂಡನು.
07081027a ತತಸ್ತಾನ್ಸಾಯಕಾನ್ಸರ್ವಾನ್ದ್ರೋಣಮುಕ್ತಾನ್ಸಹಸ್ರಶಃ।
07081027c ಚಿಚ್ಚೇದ ಸಮರೇ ವೀರಸ್ತದದ್ಭುತಮಿವಾಭವತ್।।
ಆಗ ದ್ರೋಣನು ಬಿಟ್ಟ ಆ ಎಲ್ಲ ಸಹಸ್ರಾರು ಸಾಯಕಗಳನ್ನೂ ತುಂಡರಿಸಿ ಆ ವೀರನು ಸಮರದಲ್ಲಿ ಅದ್ಭುತವನ್ನೆಸಗಿದನು.
07081028a ಚಿತ್ತ್ವಾ ಚ ತಾಂ ಶರಾನ್ರಾಜಾ ಕ್ರೋಧಸಂರಕ್ತಲೋಚನಃ।
07081028c ಶಕ್ತಿಂ ಜಗ್ರಾಹ ಸಮರೇ ಗಿರೀಣಾಮಪಿ ದಾರಣೀಂ।
07081028e ಸ್ವರ್ಣದಂಡಾಂ ಮಹಾಘೋರಾಮಷ್ಟಘಂಟಾಂ ಭಯಾವಹಾಂ।।
ಆ ಶರಗಳನ್ನು ತುಂಡರಿಸಿ ರಾಜನು ಕ್ರೋಧದಿಂದ ರಕ್ತಲೋಚನನಾಗಿ ಗಿರಿಗಳನ್ನೂ ಸೀಳಬಲ್ಲಂತಹ, ಬಂಗಾರದ ದಂಡವುಳ್ಳ, ಮಹಾಘೋರವಾದ, ಭಯವನ್ನುಂಟುಮಾಡುವ, ಎಂಟು ಗಂಟೆಗಳನ್ನುಳ್ಳ ಶಕ್ತಿಯನ್ನು ತೆಗೆದುಕೊಂಡನು.
07081029a ಸಮುತ್ಕ್ಷಿಪ್ಯ ಚ ತಾಂ ಹೃಷ್ಟೋ ನನಾದ ಬಲವದ್ಬಲೀ।
07081029c ನಾದೇನ ಸರ್ವಭೂತಾನಿ ತ್ರಾಸಯನ್ನಿವ ಭಾರತ।।
ಅದನ್ನು ಬಿಸುಟು ಆ ಬಲಿಯು ನಾದದಿಂದ ಸರ್ವಭೂತಗಳನ್ನು ಬೆದರಿಸುತ್ತಿರುವನಂತೆ ಸಂತೋಷದಿಂದ ಜೋರಾಗಿ ಕೂಗಿದನು.
07081030a ಶಕ್ತಿಂ ಸಮುದ್ಯತಾಂ ದೃಷ್ಟ್ವಾ ಧರ್ಮರಾಜೇನ ಸಂಯುಗೇ।
07081030c ಸ್ವಸ್ತಿ ದ್ರೋಣಾಯ ಸಹಸಾ ಸರ್ವಭೂತಾನ್ಯಥಾಬ್ರುವನ್।।
ಸಂಯುಗದಲ್ಲಿ ಧರ್ಮರಾಜನು ಶಕ್ತಿಯನ್ನು ಹಿಡಿದಿದ್ದುದನ್ನು ಕಂಡ ಸರ್ವಭೂತಗಳೂ ಒಮ್ಮೆಲೇ “ಸ್ವಸ್ತಿ!” ಎಂದು ದ್ರೋಣನಿಗೆ ಹೇಳಿದರು.
07081031a ಸಾ ರಾಜಭುಜನಿರ್ಮುಕ್ತಾ ನಿರ್ಮುಕ್ತೋರಗಸನ್ನಿಭಾ।
07081031c ಪ್ರಜ್ವಾಲಯಂತೀ ಗಗನಂ ದಿಶಶ್ಚ ವಿದಿಶಸ್ತಥಾ।
07081031e ದ್ರೋಣಾಂತಿಕಮನುಪ್ರಾಪ್ತಾ ದೀಪ್ತಾಸ್ಯಾ ಪನ್ನಗೀ ಯಥಾ।।
ಬಿಡುಗಡೆಗೊಳಿಸಲ್ಪಟ್ಟ ಸರ್ಪದಂತೆ ರಾಜನ ಭುಜದಿಂದ ಹೊರಟ ಆ ಶಕ್ತಿಯು ಗಗನ, ದಿಕ್ಕು, ಉಪದಿಕ್ಕುಗಳನ್ನು ಪ್ರಜ್ವಲಗೊಳಿಸುತ್ತಾ ಉರಿಯುತ್ತಿರುವ ಬಾಯಿಯುಳ್ಳ ಪನ್ನಗಿಯಂತೆ ದ್ರೋಣನ ಬಳಿ ಹೋಯಿತು.
07081032a ತಾಮಾಪತಂತೀಂ ಸಹಸಾ ಪ್ರೇಕ್ಷ್ಯ ದ್ರೋಣೋ ವಿಶಾಂ ಪತೇ।
07081032c ಪ್ರಾದುಶ್ಚಕ್ರೇ ತತೋ ಬ್ರಾಹ್ಮಮಸ್ತ್ರಮಸ್ತ್ರವಿದಾಂ ವರಃ।।
ವಿಶಾಂಪತೇ! ಒಮ್ಮಿಂದೊಮ್ಮೆಲೇ ಬೀಳುತ್ತಿದ್ದ ಅದನ್ನು ನೋಡಿ ಅಸ್ತ್ರವಿದರಲ್ಲಿ ಶ್ರೇಷ್ಠ ದ್ರೋಣನು ಬ್ರಹ್ಮಾಸ್ತ್ರವನ್ನು ಪ್ರಕಟಿಸಿದನು.
07081033a ತದಸ್ತ್ರಂ ಭಸ್ಮಸಾತ್ಕೃತ್ವಾ ತಾಂ ಶಕ್ತಿಂ ಘೋರದರ್ಶನಾಂ।
07081033c ಜಗಾಮ ಸ್ಯಂದನಂ ತೂರ್ಣಂ ಪಾಂಡವಸ್ಯ ಯಶಸ್ವಿನಃ।।
ಆ ಅಸ್ತ್ರವು ಘೋರವಾಗಿ ಕಾಣುತ್ತಿದ್ದ ಆ ಶಕ್ತಿಯನ್ನು ಭಸ್ಮೀಕರಿಸಿ ಬೇಗನೆ ಯಶಸ್ವಿ ಪಾಂಡವನ ರಥದ ಕಡೆ ಹೋಯಿತು.
07081034a ತತೋ ಯುಧಿಷ್ಠಿರೋ ರಾಜಾ ದ್ರೋಣಾಸ್ತ್ರಂ ತತ್ಸಮುದ್ಯತಂ।
07081034c ಅಶಾಮಯನ್ಮಹಾಪ್ರಾಜ್ಞೋ ಬ್ರಹ್ಮಾಸ್ತ್ರೇಣೈವ ಭಾರತ।।
ಭಾರತ! ಆಗ ಮಹಾಪ್ರಾಜ್ಞ ರಾಜಾ ಯುಧಿಷ್ಠಿರನು ದ್ರೋಣನ ಆಸ್ತ್ರವನ್ನು ಬ್ರಹ್ಮಾಸ್ತ್ರದಿಂದಲೇ ಶಾಂತಗೊಳಿಸಿದನು.
07081035a ವಿವ್ಯಾಧ ಚ ರಣೇ ದ್ರೋಣಂ ಪಂಚಭಿರ್ನತಪರ್ವಭಿಃ।
07081035c ಕ್ಷುರಪ್ರೇಣ ಚ ತೀಕ್ಷ್ಣೇನ ಚಿಚ್ಚೇದಾಸ್ಯ ಮಹದ್ಧನುಃ।।
ಅವನು ರಣದಲ್ಲಿ ಐದು ನತಪರ್ವಗಳಿಂದ ದ್ರೋಣನನ್ನು ಹೊಡೆದು, ತೀಕ್ಷ್ಣ ಕ್ಷುರಪ್ರದಿಂದ ಅವನ ಮಹಾಧನುಸ್ಸನ್ನು ಕತ್ತರಿಸಿದನು.
07081036a ತದಪಾಸ್ಯ ಧನುಶ್ಚಿನ್ನಂ ದ್ರೋಣಃ ಕ್ಷತ್ರಿಯಮರ್ದನಃ।
07081036c ಗದಾಂ ಚಿಕ್ಷೇಪ ಸಹಸಾ ಧರ್ಮಪುತ್ರಾಯ ಮಾರಿಷ।।
ಮಾರಿಷ! ಧನುಸ್ಸು ತುಂಡಾಗಲು ಕ್ಷತ್ರಿಯಮರ್ದನ ದ್ರೋಣನು ತಕ್ಷಣವೇ ಧರ್ಮಪುತ್ರನ ಮೇಲೆ ಗದೆಯನ್ನು ಎಸೆದನು.
07081037a ತಾಮಾಪತಂತೀಂ ಸಹಸಾ ಗದಾಂ ದೃಷ್ಟ್ವಾ ಯುಧಿಷ್ಠಿರಃ।
07081037c ಗದಾಮೇವಾಗ್ರಹೀತ್ಕ್ರುದ್ಧಶ್ಚಿಕ್ಷೇಪ ಚ ಪರಂತಪಃ।।
ಮೇಲೆ ಬೀಳುತ್ತಿರುವ ಆ ಗದೆಯನ್ನು ನೋಡಿ ತಕ್ಷಣವೇ ಕ್ರುದ್ಧನಾಗಿ ಪರಂತಪ ಯುಧಿಷ್ಠಿರನು ತಾನೂ ಗದೆಯನ್ನು ತೆಗೆದು ಕೊಂಡು ಬೀಸಿ ಎಸೆದನು.
07081038a ತೇ ಗದೇ ಸಹಸಾ ಮುಕ್ತೇ ಸಮಾಸಾದ್ಯ ಪರಸ್ಪರಂ।
07081038c ಸಂಘರ್ಷಾತ್ಪಾವಕಂ ಮುಕ್ತ್ವಾ ಸಮೇಯಾತಾಂ ಮಹೀತಲೇ।।
ವೇಗವಾಗಿ ಎಸೆಯಲ್ಪಟ್ಟ ಆ ಎರಡೂ ಗದೆಗಳೂ ಪರಸ್ಪರರನ್ನು ತಾಗಿ, ಸಂಘರ್ಷದಿಂದ ಬೆಂಕಿಯನ್ನು ಬಿಟ್ಟು ನೆಲಕ್ಕೆ ಸೇರಿಕೊಂಡವು.
07081039a ತತೋ ದ್ರೋಣೋ ಭೃಶಂ ಕ್ರುದ್ಧೋ ಧರ್ಮರಾಜಸ್ಯ ಮಾರಿಷ।
07081039c ಚತುರ್ಭಿರ್ನಿಶಿತೈಸ್ತೀಕ್ಷ್ಣೈರ್ಹಯಾಂ ಜಘ್ನೇ ಶರೋತ್ತಮೈಃ।।
ಮಾರಿಷ! ಆಗ ದ್ರೋಣನು ತುಂಬಾ ಕ್ರುದ್ಧನಾಗಿ ನಾಲ್ಕು ನಿಶಿತ ತೀಕ್ಷ್ಣ ಉತ್ತಮ ಶರಗಳಿಂದ ಧರ್ಮರಾಜನ ಕುದುರೆಗಳನ್ನು ಸಂಹರಿಸಿದನು.
07081040a ಧನುಶ್ಚೈಕೇನ ಬಾಣೇನ ಚಿಚ್ಚೇದೇಂದ್ರಧ್ವಜೋಪಮಂ।
07081040c ಕೇತುಮೇಕೇನ ಚಿಚ್ಚೇದ ಪಾಂಡವಂ ಚಾರ್ದಯತ್ತ್ರಿಭಿಃ।।
ಇಂದ್ರಧ್ವಜೋಪಮವಾದ ಅವನ ಧನುಸ್ಸನ್ನು ಒಂದೇ ಬಾಣದಿಂದ ಕತ್ತರಿಸಿದನು. ಇನ್ನೊಂದರಿಂದ ಕೇತುವನ್ನು ತುಂಡರಿಸಿ ಮೂರರಿಂದ ಪಾಂಡವನನ್ನು ಗಾಯಗೊಳಿಸಿದನು.
07081041a ಹತಾಶ್ವಾತ್ತು ರಥಾತ್ತೂರ್ಣಮವಪ್ಲುತ್ಯ ಯುಧಿಷ್ಠಿರಃ।
07081041c ತಸ್ಥಾವೂರ್ಧ್ವಭುಜೋ ರಾಜಾ ವ್ಯಾಯುಧೋ ಭರತರ್ಷಭ।।
ಭರತರ್ಷಭ! ಆಗ ಕುದುರೆಗಳನ್ನು ಕಳೆದುಕೊಂಡ ರಥದಿಂದ ತಕ್ಷಣವೇ ಕೆಳಗೆ ಹಾರಿ ರಾಜಾ ಯುಧಿಷ್ಠಿರನು ಭುಜಗಳನ್ನು ಮೇಲೆತ್ತಿ ಆಯುಧಗಳಿಲ್ಲದೇ ನಿಂತುಕೊಂಡನು.
07081042a ವಿರಥಂ ತಂ ಸಮಾಲೋಕ್ಯ ವ್ಯಾಯುಧಂ ಚ ವಿಶೇಷತಃ।
07081042c ದ್ರೋಣೋ ವ್ಯಮೋಹಯಚ್ಚತ್ರೂನ್ಸರ್ವಸೈನ್ಯಾನಿ ಚಾಭಿಭೋ।।
ವಿಭೋ! ಹೀಗೆ ದ್ರೋಣನು ಅವನನ್ನು ವಿರಥನಾಗಿಸಿದುದನ್ನು, ಅದರಲ್ಲೂ ವಿಶೇಷವಾಗಿ ನಿರಾಯುಧನಾಗಿ ಮಾಡಿದುದನ್ನು ನೋಡಿ ಶತ್ರು ಸೇನೆಗಳೆಲ್ಲವೂ ಮೂರ್ಛೆಗೊಂಡವು.
07081043a ಮುಂಚನ್ನಿಷುಗಣಾಂಸ್ತೀಕ್ಷ್ಣಾಽಲ್ಲಘುಹಸ್ತೋ ದೃಢವ್ರತಃ।
07081043c ಅಭಿದುದ್ರಾವ ರಾಜಾನಂ ಸಿಂಹೋ ಮೃಗಮಿವೋಲ್ಬಣಃ।।
ಆಗ ತೀಕ್ಷ್ಣವಾದ ಶರಗುಂಪುಗಳನ್ನು ಪ್ರಯೋಗಿಸುತ್ತಾ ಆ ಲಘುಹಸ್ತ ದೃಢವ್ರತನು ಸಿಂಹವು ಜಿಂಕೆಯ ಮೇಲೆ ಬೀಳುವಂತೆ ರಾಜನ ಮೇಲೆ ಎರಗಿದನು.
07081044a ತಮಭಿದ್ರುತಮಾಲೋಕ್ಯ ದ್ರೋಣೇನಾಮಿತ್ರಘಾತಿನಾ।
07081044c ಹಾ ಹೇತಿ ಸಹಸಾ ಶಬ್ದಃ ಪಾಂಡೂನಾಂ ಸಮಜಾಯತ।।
ಅಮಿತ್ರಘಾತಿ ದ್ರೋಣನಿಂದ ಅವನು ಆಕ್ರಮಣಿಸಲ್ಪಟ್ಟಿದುದನ್ನು ನೋಡಿ ಒಮ್ಮಿಂದೊಮ್ಮೆಲೇ ಪಾಂಡವರ ಕಡೆ ಹಾಹಾಕಾರದ ಶಬ್ಧವು ಕೇಳಿಬಂದಿತು.
07081045a ಹೃತೋ ರಾಜಾ ಹೃತೋ ರಾಜಾ ಭಾರದ್ವಾಜೇನ ಮಾರಿಷ।
07081045c ಇತ್ಯಾಸೀತ್ಸುಮಹಾಂ ಶಬ್ದಃ ಪಾಂಡುಸೈನ್ಯಸ್ಯ ಸರ್ವತಃ।।
ಮಾರಿಷ! “ರಾಜನು ಹತನಾದನು! ಭಾರದ್ವಾಜನಿಂದ ರಾಜನು ಹತನಾದನು!” ಎಂದು ಪಾಂಡವ ಸೇನೆಯ ಎಲ್ಲಕಡೆ ಮಹಾ ಶಬ್ಧವುಂಟಾಯಿತು.
07081046a ತತಸ್ತ್ವರಿತಮಾರುಹ್ಯ ಸಹದೇವರಥಂ ನೃಪಃ।
07081046c ಅಪಾಯಾಜ್ಜವನೈರಶ್ವೈಃ ಕುಂತೀಪುತ್ರೋ ಯುಧಿಷ್ಠಿರಃ।।
ಆಗ ನೃಪ ಕುಂತೀಪುತ್ರ ಯುಧಿಷ್ಠಿರನು ಸಹದೇವನ ರಥವನ್ನೇರಿ ವೇಗ ಅಶ್ವಗಳಿಂದ ಪಲಾಯನಗೈದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಯುಧಿಷ್ಠಿರಾಪಯಾನೇ ಏಕಾಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಯುಧಿಷ್ಠಿರಾಪಯಾನ ಎನ್ನುವ ಎಂಭತ್ತೊಂದನೇ ಅಧ್ಯಾಯವು.