ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 80
ಸಾರ
ಪಾಂಡವರ ಮತ್ತು ಕೌರವರ ಧ್ವಜಗಳ ವರ್ಣನೆ (1-29). ಯುದ್ಧವು ಮುಂದುವರೆದುದು (30-38).
07080001 ಧೃತರಾಷ್ಟ್ರ ಉವಾಚ।
07080001a ಧ್ವಜಾನ್ಬಹುವಿಧಾಕಾರಾನ್ಭ್ರಾಜಮಾನಾನತಿಶ್ರಿಯಾ।
07080001c ಪಾರ್ಥಾನಾಂ ಮಾಮಕಾನಾಂ ಚ ತಾನ್ಮಮಾಚಕ್ಷ್ವ ಸಂಜಯ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ಅತಿಯಾದ ಶ್ರೀಯಿಂದ ಬೆಳಗುತ್ತಿರುವ ಬಹುವಿಧದ ಆಕಾರಗಳ ಪಾರ್ಥರ ಮತ್ತು ನನ್ನವರ ಧ್ವಜಗಳ ಕುರಿತು ನನಗೆ ಹೇಳು.”
07080002 ಸಂಜಯ ಉವಾಚ।
07080002a ಧ್ವಜಾನ್ಬಹುವಿಧಾಕಾರಾಂ ಶೃಣು ತೇಷಾಂ ಮಹಾತ್ಮನಾಂ।
07080002c ರೂಪತೋ ವರ್ಣತಶ್ಚೈವ ನಾಮತಶ್ಚ ನಿಬೋಧ ಮೇ।।
ಸಂಜಯನು ಹೇಳಿದನು: “ಆ ಮಹಾತ್ಮರ ಬಹುವಿಧದ ಆಕಾರಗಳನ್ನುಳ್ಳ ಧ್ವಜಗಳ ಕುರಿತು ಕೇಳು. ಅವುಗಳ ರೂಪ, ಬಣ್ಣ ಮತ್ತು ನಾಮಗಳನ್ನೂ ನಾನು ಹೇಳುತ್ತೇನೆ.
07080003a ತೇಷಾಂ ತು ರಥಮುಖ್ಯಾನಾಂ ರಥೇಷು ವಿವಿಧಾ ಧ್ವಜಾಃ।
07080003c ಪ್ರತ್ಯದೃಶ್ಯಂತ ರಾಜೇಂದ್ರ ಜ್ವಲಿತಾ ಇವ ಪಾವಕಾಃ।।
ರಾಜೇಂದ್ರ! ಆ ರಥಮುಖ್ಯರ ರಥಗಳಲ್ಲಿ ಅಗ್ನಿಗಳಂತೆ ಪ್ರಜ್ವಲಿಸುತ್ತಿದ್ದ ವಿವಿಧ ಧ್ವಜಗಳು ಕಾಣಿಸುತ್ತಿದ್ದವು.
07080004a ಕಾಂಚನಾಃ ಕಾಂಚನಾಪೀಡಾಃ ಕಾಂಚನಸ್ರಗಲಂಕೃತಾಃ।
07080004c ಕಾಂಚನಾನೀವ ಶೃಂಗಾಣಿ ಕಾಂಚನಸ್ಯ ಮಹಾಗಿರೇಃ।।
ಕಾಂಚನದ ಮಹಾಗಿರಿಯ ಕಾಂಚನ ಶಿಖರಗಳಂತೆ ಅವು ಸುವರ್ಣಮಯವಾಗಿಯೂ, ಸುವರ್ಣಗಳಿಂದ ಅಲಂಕೃತವಾಗಿಯೂ, ಸುವರ್ಣದ ಮಾಲೆಗಳಿಂದ ಭೂಷಿತವೂ ಆಗಿದ್ದವು.
07080005a ತೇ ಧ್ವಜಾಃ ಸಂವೃತಾಸ್ತೇಷಾಂ ಪತಾಕಾಭಿಃ ಸಮಂತತಃ।
07080005c ನಾನಾವರ್ಣವಿರಾಗಾಭಿರ್ವಿಬಭುಃ ಸರ್ವತೋ ವೃತಾಃ।।
ಆ ಧ್ವಜಗಳು ಎಲ್ಲಕಡೆಗಳಿಂದ ಸುತ್ತಲೂ ನಾನಾ ಬಣ್ಣಗಳ ಪತಾಕೆಗಳಿಂದ ಸುತ್ತುವರೆಯಲ್ಪಟ್ಟು ಶೋಭಿಸುತ್ತಿದ್ದವು.
07080006a ಪತಾಕಾಶ್ಚ ತತಸ್ತಾಸ್ತು ಶ್ವಸನೇನ ಸಮೀರಿತಾಃ।
07080006c ನೃತ್ಯಮಾನಾಃ ವ್ಯದೃಶ್ಯಂತ ರಂಗಮಧ್ಯೇ ವಿಲಾಸಿಕಾಃ।।
ಆ ಪತಾಕೆಗಳು ಗಾಳಿಯಿಂದ ಪಟ ಪಟನೆ ಹಾರಾಡುತ್ತಿದ್ದು ರಂಗಮಧ್ಯದಲ್ಲಿ ನರ್ತಿಸುವ ವಿಲಾಸಿನಿಯರಂತೆ ಕಾಣುತ್ತಿದ್ದವು.
07080007a ಇಂದ್ರಾಯುಧಸವರ್ಣಾಭಾಃ ಪತಾಕಾ ಭರತರ್ಷಭ।
07080007c ದೋಧೂಯಮಾನಾ ರಥಿನಾಂ ಶೋಭಯಂತಿ ಮಹಾರಥಾನ್।।
ಭರತರ್ಷಭ! ಕಾಮನ ಬಿಲ್ಲಿನ ಬಣ್ಣಗಳಿಂದ ಹೊಳೆಯುತ್ತಿದ್ದ ಪತಾಕೆಗಳು ಹಾರಾಡುತ್ತಾ ಮಹಾರಥರ ರಥಗಳನ್ನು ಶೋಭಿಸುತ್ತಿದ್ದವು.
07080008a ಸಿಂಹಲಾಂಗೂಲಮುಗ್ರಾಸ್ಯಂ ಧ್ವಜಂ ವಾನರಲಕ್ಷಣಂ।
07080008c ಧನಂಜಯಸ್ಯ ಸಂಗ್ರಾಮೇ ಪ್ರತ್ಯಪಶ್ಯಾಮ ಭೈರವಂ।।
ಸಿಂಹದ ಪುಚ್ಛವನ್ನು ಹೊಂದಿದ್ದ, ಉಗ್ರವಾದ ಮುಖವುಳ್ಳ ವಾನರ ಚಿಹ್ನೆಯುಳ್ಳ ಧನಂಜಯನ ಭೈರವ ಧ್ವಜವನ್ನು ನೋಡಿದೆವು.
07080009a ಸ ವಾನರವರೋ ರಾಜನ್ಪತಾಕಾಭಿರಲಂಕೃತಃ।
07080009c ತ್ರಾಸಯಾಮಾಸ ತತ್ಸೈನ್ಯಂ ಧ್ವಜೋ ಗಾಂಡೀವಧನ್ವನಃ।।
ರಾಜನ್! ಗಾಂಡೀವಧನ್ವಿಯ ಧ್ವಜದಲ್ಲಿದ್ದ, ಪತಾಕೆಗಳಿಂದ ಅಲಂಕೃತಗೊಂಡಿದ್ದ ಆ ವಾನರವರನು ಸೈನ್ಯವನ್ನು ಭಯಪಡಿಸುತ್ತಿದ್ದನು.
07080010a ತಥೈವ ಸಿಂಹಲಾಂಗೂಲಂ ದ್ರೋಣಪುತ್ರಸ್ಯ ಭಾರತ।
07080010c ಧ್ವಜಾಗ್ರಂ ಸಮಪಶ್ಯಾಮ ಬಾಲಸೂರ್ಯಸಮಪ್ರಭಂ।।
ಭಾರತ! ಹಾಗೆಯೇ ಬಾಲಸೂರ್ಯನ ಪ್ರಭೆಯುಳ್ಳ ದ್ರೋಣಪುತ್ರನ ಸಿಂಹದ ಪುಚ್ಛವುಳ್ಳ ಧ್ವಜವನ್ನು ನೋಡಿದೆವು.
07080011a ಕಾಂಚನಂ ಪವನೋದ್ಧೂತಂ ಶಕ್ರಧ್ವಜಸಮಪ್ರಭಂ।
07080011c ನಂದನಂ ಕೌರವೇಂದ್ರಾಣಾಂ ದ್ರೌಣೇರ್ಲಕ್ಷಣಮುಚ್ಚ್ರಿತಂ।।
ಗಾಳಿಯಲ್ಲಿ ತೇಲುವಂತಿದ್ದ, ಪ್ರಭೆಯಲ್ಲಿ ಶಕ್ರಧ್ವಜಕ್ಕೆ ಸಮನಾದ, ದ್ರೌಣಿಯ ಲಕ್ಷಣಯುಕ್ತವಾದ ಬಂಗಾರದ ಧ್ವಜವು ಕೌರವೇಂದ್ರರನ್ನು ಹರ್ಷಗೊಳಿಸುತ್ತಿತ್ತು.
07080012a ಹಸ್ತಿಕಕ್ಷ್ಯಾ ಪುನರ್ಹೈಮೀ ಬಭೂವಾಧಿರಥೇರ್ಧ್ವಜೇ।
07080012c ಆಹವೇ ಖಂ ಮಹಾರಾಜ ದದೃಶೇ ಪೂರಯನ್ನಿವ।।
ಮಹಾರಾಜ! ಆಧಿರಥ ಕರ್ಣನ ಧ್ವಜದಲ್ಲಿ ಬಂಗಾರದ ಗಜಶಾಲೆಯಿದ್ದಿತು. ಅದು ರಣರಂಗದಲ್ಲಿ ಆಕಾಶವನ್ನೇ ತುಂಬಿಬಿಡುವಂತಿತ್ತು.
07080013a ಪತಾಕೀ ಕಾಂಚನಸ್ರಗ್ವೀ ಧ್ವಜಃ ಕರ್ಣಸ್ಯ ಸಮ್ಯುಗೇ।
07080013c ನೃತ್ಯತೀವ ರಥೋಪಸ್ಥೇ ಶ್ವಸನೇನ ಸಮೀರಿತಃ।।
ಸಂಯುಗದಲ್ಲಿ ಕರ್ಣನ ಕಾಂಚನ ಮಾಲೆಗಳಿಂದ ಅಲಂಕೃತವಾದ ಪತಾಕೆಯಲ್ಲಿದ್ದ ಧ್ವಜವು ಗಾಳಿಯಿಂದ ಹಾರಾಡಿ ರಥದ ಮೇಲೆ ನರ್ತಿಸುತ್ತಿರುವಂತೆ ಕಾಣುತ್ತಿತ್ತು.
07080014a ಆಚಾರ್ಯಸ್ಯ ಚ ಪಾಂಡೂನಾಂ ಬ್ರಾಹ್ಮಣಸ್ಯ ಯಶಸ್ವಿನಃ।
07080014c ಗೋವೃಷೋ ಗೌತಮಸ್ಯಾಸೀತ್ಕೃಪಸ್ಯ ಸುಪರಿಷ್ಕೃತಃ।।
ಪಾಂಡವರ ಆಚಾರ್ಯನೂ ಆಗಿರುವ ಯಶಸ್ವಿ ಬ್ರಾಹ್ಮಣ ಗೌತಮ ಕೃಪನ ಧ್ವಜದಲ್ಲಿ ಸುಪರಿಷ್ಕೃತವಾದ ಎತ್ತಿನ ಹೋರಿಯ ಚಿಹ್ನೆಯಿತ್ತು.
07080015a ಸ ತೇನ ಭ್ರಾಜತೇ ರಾಜನ್ಗೋವೃಷೇಣ ಮಹಾರಥಃ।
07080015c ತ್ರಿಪುರಘ್ನರಥೋ ಯದ್ವದ್ಗೋವೃಷೇಣ ವಿರಾಜತೇ।।
ರಾಜನ್! ಎತ್ತಿನ ಹೋರಿಯ ಧ್ವಜದಿಂದ ಆ ಮಹಾರಥನು ರಥದಲ್ಲಿ ಎತ್ತಿನ ಹೋರಿಯ ರಥದಲ್ಲಿ ಕುಳಿತಿದ್ದ ತ್ರಿಪುರಘ್ನ ಶಿವನಂತೆ ವಿರಾಜಿಸುತ್ತಿದ್ದನು.
07080016a ಮಯೂರೋ ವೃಷಸೇನಸ್ಯ ಕಾಂಚನೋ ಮಣಿರತ್ನವಾನ್।
07080016c ವ್ಯಾಹರಿಷ್ಯನ್ನಿವಾತಿಷ್ಠತ್ಸೇನಾಗ್ರಮಪಿ ಶೋಭಯನ್।।
ವೃಷಸೇನನದು ಕಾಂಚನದ, ಮಣಿರತ್ನಗಳಿಂದ ಅಲಂಕೃತವಾದ ಮಯೂರ ಧ್ವಜ. ಸೇನೆಗಳ ಮೇಲೆ ಹಾರಾಡುತ್ತಿದ್ದ ಅದು ಶೋಭಿಸುತ್ತಿತ್ತು.
07080017a ತೇನ ತಸ್ಯ ರಥೋ ಭಾತಿ ಮಯೂರೇಣ ಮಹಾತ್ಮನಃ।
07080017c ಯಥಾ ಸ್ಕಂದಸ್ಯ ರಾಜೇಂದ್ರ ಮಯೂರೇಣ ವಿರಾಜತಾ।।
ರಾಜೇಂದ್ರ! ಸ್ಕಂದನ ಮಯೂರದಂತೆ ಆ ಮಹಾತ್ಮನ ಮಯೂರವು ರಥದ ಮೇಲೆ ವಿರಾಜಿಸುತ್ತಿತ್ತು.
07080018a ಮದ್ರರಾಜಸ್ಯ ಶಲ್ಯಸ್ಯ ಧ್ವಜಾಗ್ರೇಽಗ್ನಿಶಿಖಾಮಿವ।
07080018c ಸೌವರ್ಣೀಂ ಪ್ರತಿಪಶ್ಯಾಮ ಸೀತಾಮಪ್ರತಿಮಾಂ ಶುಭಾಂ।।
ಮದ್ರರಾಜ ಶಲ್ಯನ ಧ್ವಜಾಗ್ರದಲ್ಲಿ ಅಗ್ನಿಶಿಖೆಯಂತೆ ಸುವರ್ಣಮಯದ ಅಪ್ರತಿಮ ಶುಭವಾದ ನೇಗಿಲನ್ನು ನೋಡಿದೆವು.
07080019a ಸಾ ಸೀತಾ ಭ್ರಾಜತೇ ತಸ್ಯ ರಥಮಾಸ್ಥಾಯ ಮಾರಿಷ।
07080019c ಸರ್ವಬೀಜವಿರೂಢೇವ ಯಥಾ ಸೀತಾ ಶ್ರಿಯಾ ವೃತಾ।।
ಮಾರಿಷ! ಎಲ್ಲ ಬೀಜಗಳನ್ನೇರಿ ಶ್ರೀಯಿಂದ ಆವೃತವಾದ ನೇಗಿಲಿನಂತೆ ಅವನ ರಥದ ಮೇಲೆ ಆ ನೇಗಿಲು ಹೊಳೆಯುತ್ತಿತ್ತು.
07080020a ವರಾಹಃ ಸಿಂಧುರಾಜಸ್ಯ ರಾಜತೋಽಭಿವಿರಾಜತೇ।
07080020c ಧ್ವಜಾಗ್ರೇಽಲೋಹಿತಾರ್ಕಾಭೋ ಹೇಮಜಾಲಪರಿಷ್ಕೃತಃ।।
ಸಿಂಧುರಾಜನ ಧ್ವಜಾಗ್ರದಲ್ಲಿ ಸೂರ್ಯನ ಕೆಂಪಿನ ಹೇಮಜಾಲಗಳಿಂದ ಅಲಂಕೃತವಾದ ರಜತ ವರಾಹವು ವಿರಾಜಿಸುತ್ತಿತ್ತು.
07080021a ಶುಶುಭೇ ಕೇತುನಾ ತೇನ ರಾಜತೇನ ಜಯದ್ರಥಃ।
07080021c ಯಥಾ ದೇವಾಸುರೇ ಯುದ್ಧೇ ಪುರಾ ಪೂಷಾ ಸ್ಮ ಶೋಭತೇ।।
ಆ ರಜತ ಕೇತುವಿನಿಂದಾಗಿ ಜಯದ್ರಥನು ಹಿಂದೆ ದೇವಾಸುರರ ಯುದ್ಧದಲ್ಲಿ ಸೂರ್ಯನು ಹೇಗೋ ಹಾಗೆ ಶೋಭಿಸಿದನು.
07080022a ಸೌಮದತ್ತೇಃ ಪುನರ್ಯೂಪೋ ಯಜ್ಞಶೀಲಸ್ಯ ಧೀಮತಃ।
07080022c ಧ್ವಜಃ ಸೂರ್ಯ ಇವಾಭಾತಿ ಸೋಮಶ್ಚಾತ್ರ ಪ್ರದೃಶ್ಯತೇ।।
ಯಜ್ಞಶೀಲ, ಧೀಮತ ಸೌಮದತ್ತಿಯ ಸೂರ್ಯನಂತೆ ಪ್ರಕಾಶಿಸುತ್ತಿದ್ದ ಧ್ವಜದಲ್ಲಿ ಯೂಪಸ್ತಂಭದ ಮತ್ತು ಚಂದ್ರನ ಚಿಹ್ನೆಗಳು ಕಾಣುತ್ತಿದ್ದವು.
07080023a ಸ ಯೂಪಃ ಕಾಂಚನೋ ರಾಜನ್ಸೌಮದತ್ತೇರ್ವಿರಾಜತೇ।
07080023c ರಾಜಸೂಯೇ ಮಖಶ್ರೇಷ್ಠೇ ಯಥಾ ಯೂಪಃ ಸಮುಚ್ಚ್ರಿತಃ।।
ರಾಜನ್! ಸೌಮದತ್ತಿಯ ಕಾಂಚನದ ಯೂಪವು ಮಖಶ್ರೇಷ್ಠವಾದ ರಾಜಸೂಯದಲ್ಲಿ ಎತ್ತರ ಯೂಪವು ಹೇಗೋ ಹಾಗೆ ವಿರಾಜಿಸುತ್ತಿತ್ತು.
07080024a ಶಲಸ್ಯ ತು ಮಹಾರಾಜ ರಾಜತೋ ದ್ವಿರದೋ ಮಹಾನ್।
07080024c ಕೇತುಃ ಕಾಂಚನಚಿತ್ರಾಂಗೈರ್ಮಯೂರೈರುಪಶೋಭಿತಃ।।
07080025a ಸ ಕೇತುಃ ಶೋಭಯಾಮಾಸ ಸೈನ್ಯಂ ತೇ ಭರತರ್ಷಭ।
ಮಹಾರಾಜ! ಶಲನ ಧ್ವಜದಲ್ಲಿ ದೊಡ್ಡದಾದ ಆನೆಯ ಚಿಹ್ನೆಯಿತ್ತು. ಆ ಕೇತುವು ಬಂಗಾರದ ಚಿತ್ರಾಂಗಗಳಿಂದ ಮಯೂರಗಳಿಂದ ಶೋಭಿಸುತ್ತಿತ್ತು. ಭರತರ್ಷಭ! ಆ ಕೇತುವು ನಿನ್ನ ಸೇನೆಯನ್ನು ಶೋಭೆಗೊಳಿಸುತ್ತಿತ್ತು.
07080025c ಯಥಾ ಶ್ವೇತೋ ಮಹಾನಾಗೋ ದೇವರಾಜಚಮೂಂ ತಥಾ।।
07080026a ನಾಗೋ ಮಣಿಮಯೋ ರಾಜ್ಞೋ ಧ್ವಜಃ ಕನಕಸಂವೃತಃ।
ಬಿಳಿಯ ಮಹಾ ಆನೆಯು ದೇವರಾಜನ ಸೇನೆಯನ್ನು ಹೇಗೋ ಹಾಗೆ ರಾಜನ ಮಣಿಮಯಧ್ವಜದಲ್ಲಿ ಕನಕಸಂವೃತವಾದ ಆನೆಯ ಚಿಹ್ನೆಯಿತ್ತು.
07080026c ಕಿಂಕಿಣೀಶತಸಂಹ್ರಾದೋ ಭ್ರಾಜಂಶ್ಚಿತ್ರೇ ರಥೋತ್ತಮೇ।।
07080027a ವ್ಯಭ್ರಾಜತ ಭೃಶಂ ರಾಜನ್ಪುತ್ರಸ್ತವ ವಿಶಾಂ ಪತೇ।
ವಿಶಾಂಪತೇ! ನೂರಾರು ಸಣ್ಣ ಸಣ್ಣ ಗಂಟೆಗಳ ಕಿಲಕಿಲನಿನಾದದಿಂದ ಕೂಡಿದ ಆ ಧ್ವಜವು ನಿನ್ನ ಮಗನ ಉತ್ತಮ ರಥದಲ್ಲಿ ಶೋಭಾಯಮಾನವಾಗಿ ಕಾಣುತ್ತಿತ್ತು.
07080027c ಧ್ವಜೇನ ಮಹತಾ ಸಂಖ್ಯೇ ಕುರೂಣಾಂ ಋಷಭಸ್ತದಾ।।
07080028a ನವೈತೇ ತವ ವಾಹಿನ್ಯಾಮುಚ್ಚ್ರಿತಾಃ ಪರಮಧ್ವಜಾಃ।
07080028c ವ್ಯದೀಪಯಂಸ್ತೇ ಪೃತನಾಂ ಯುಗಾಂತಾದಿತ್ಯಸಮ್ನಿಭಾಃ।।
ರಣದಲ್ಲಿ ಕುರುವೃಷಭರ ಈ ಒಂಭತ್ತು ಮಹಾ ಪರಮಧ್ವಜಗಳು ನಿನ್ನ ಸೇನೆಯ ಮೇಲೆ ಎತ್ತರದಲ್ಲಿ ಹಾರಾಡುತ್ತಾ ಯುಗಾಂತದ ಆದಿತ್ಯನ ಪ್ರಕಾಶದಂತೆ ನಿನ್ನ ಸೇನೆಗಳನ್ನು ಬೆಳಗಿಸುತ್ತಿದ್ದವು.
07080029a ದಶಮಸ್ತ್ವರ್ಜುನಸ್ಯಾಸೀದೇಕ ಏವ ಮಹಾಕಪಿಃ।
07080029c ಅದೀಪ್ಯತಾರ್ಜುನೋ ಯೇನ ಹಿಮವಾನಿವ ವಹ್ನಿನಾ।।
ಹತ್ತನೆಯದಾದ ಅರ್ಜುನನ ಮಹಾಕಪಿ ಒಬ್ಬನೇ ಅಗ್ನಿಯು ಹಿಮವಂತನನ್ನು ಬೆಳಗಿಸುವಂತೆ ಅರ್ಜುನನನ್ನು ಬೆಳಗಿಸುತ್ತಿದ್ದನು.
07080030a ತತಶ್ಚಿತ್ರಾಣಿ ಶುಭ್ರಾಣಿ ಸುಮಹಾಂತಿ ಮಹಾರಥಾಃ।
07080030c ಕಾರ್ಮುಕಾಣ್ಯಾದದುಸ್ತೂರ್ಣಮರ್ಜುನಾರ್ಥೇ ಪರಂತಪಾಃ।।
ಆಗ ತಕ್ಷಣವೇ ಆ ಮಹಾರಥ ಪರಂತಪರು ಅರ್ಜುನನೊಡನೆ ಹೋರಾಡುವುದಕ್ಕಾಗಿ ವಿಚಿತ್ರವಾದ ಶುಭ್ರವಾದ ದೊಡ್ಡ ಕಾರ್ಮುಕಗಳನ್ನು ಕೈಗೆತ್ತಿಕೊಂಡರು.
07080031a ತಥೈವ ಧನುರಾಯಚ್ಚತ್ಪಾರ್ಥಃ ಶತ್ರುವಿನಾಶನಃ।
07080031c ಗಾಂಡೀವಂ ದಿವ್ಯಕರ್ಮಾ ತದ್ರಾಜನ್ದುರ್ಮಂತ್ರಿತೇ ತವ।।
ರಾಜನ್! ನಿನ್ನ ದುರಾಲೋಚನೆಯ ಫಲವಾಗಿ ದಿವ್ಯಕರ್ಮಿ ಶತ್ರುವಿನಾಶಕ ಪಾರ್ಥನು ಗಾಂಡೀವ ಧನುಸ್ಸನ್ನು ಎತ್ತಿಕೊಂಡನು.
07080032a ತವಾಪರಾಧಾದ್ಧಿ ನರಾ ನಿಹತಾ ಬಹುಧಾ ಯುಧಿ।
07080032c ನಾನಾದಿಗ್ಭ್ಯಃ ಸಮಾಹೂತಾಃ ಸಹಯಾಃ ಸರಥದ್ವಿಪಾಃ।।
ನಿನ್ನ ಅಪರಾಧದಿಂದಾಗಿ ನಾನಾ ದಿಕ್ಕುಗಳಿಂದ ಆಹ್ವಾನಿತರಾದ ಬಹಳಷ್ಟು ನರರು ರಥ-ಕುದುರೆ-ಆನೆಗಳೊಂದಿಗೆ ಯುದ್ಧದಲ್ಲಿ ಹತರಾದರು.
07080033a ತೇಷಾಮಾಸೀದ್ವ್ಯತಿಕ್ಷೇಪೋ ಗರ್ಜತಾಮಿತರೇತರಂ।
07080033c ದುರ್ಯೋಧನಮುಖಾನಾಂ ಚ ಪಾಂಡೂನಾಂ ಋಷಭಸ್ಯ ಚ।।
ಇತರೇತರರ ಮೇಲೆ ಗುರಿಯಿಟ್ಟು ಗರ್ಜಿಸುತ್ತಿರುವ ದುರ್ಯೋಧನ ಪ್ರಮಖರ ಮತ್ತು ಪಾಂಡವ ವೃಷಭನ ಮಧ್ಯೆ ಅತಿ ಘೋರ ಯುದ್ಧವು ನಡೆಯಿತು.
07080034a ತತ್ರಾದ್ಭುತಂ ಪರಂ ಚಕ್ರೇ ಕೌಂತೇಯಃ ಕೃಷ್ಣಸಾರಥಿಃ।
07080034c ಯದೇಕೋ ಬಹುಭಿಃ ಸಾರ್ಧಂ ಸಮಾಗಚ್ಚದಭೀತವತ್।।
ಕೃಷ್ಣಸಾರಥಿ ಕೌಂತೇಯನು ಒಬ್ಬನೇ ಅನೇಕರೊಂದಿಗೆ ಭಯಗೊಳ್ಳದೇ ಹೋರಾಡಿ ಅಲ್ಲಿ ಪರಮ ಅದ್ಭುತವಾದುದನ್ನು ಮಾಡಿದನು.
07080035a ಅಶೋಭತ ಮಹಾಬಾಹುರ್ಗಾಂಡೀವಂ ವಿಕ್ಷಿಪನ್ಧನುಃ।
07080035c ಜಿಗೀಷುಸ್ತಾನ್ನರವ್ಯಾಘ್ರಾಂ ಜಿಘಾಂಸುಶ್ಚ ಜಯದ್ರಥಂ।।
ಆ ನರವ್ಯಾಘ್ರರನ್ನು ಗೆಲ್ಲಲು ಬಯಸಿದ ಜಯದ್ರಥನನ್ನು ಕೊಲ್ಲಲು ಬಯಸಿದ ಆ ಮಹಾಬಾಹುವು ಗಾಂಡೀವ ಧನುಸ್ಸನ್ನು ಸೆಳೆಯುತ್ತಾ ಶೋಭಿಸಿದನು.
07080036a ತತ್ರಾರ್ಜುನೋ ಮಹಾರಾಜ ಶರೈರ್ಮುಕ್ತೈಃ ಸಹಸ್ರಶಃ।
07080036c ಅದೃಶ್ಯಾನಕರೋದ್ಯೋಧಾಂಸ್ತಾವಕಾಂ ಶತ್ರುತಾಪನಃ।।
ಮಹಾರಾಜ! ಅಲ್ಲಿ ಶತ್ರುತಾಪನ ಅರ್ಜುನನು ಪ್ರಯೋಗಿಸಿದ ಸಹಸ್ರಾರು ಶರಗಳು ನಿನ್ನವರ ಯೋಧರೇ ಕಾಣದಂತೆ ಮಾಡಿದವು.
07080037a ತತಸ್ತೇಽಪಿ ನರವ್ಯಾಘ್ರಾಃ ಪಾರ್ಥಂ ಸರ್ವೇ ಮಹಾರಥಾಃ।
07080037c ಅದೃಶ್ಯಂ ಸಮರೇ ಚಕ್ರುಃ ಸಾಯಕೌಘೈಃ ಸಮಂತತಃ।।
ಆಗ ಆ ಮಹಾರಥ ನರವ್ಯಾಘ್ರರೆಲ್ಲರೂ ಕೂಡ ಸಾಯಕಗಳಿಂದ ಎಲ್ಲಕಡೆ ಸಮರದಲ್ಲಿ ಪಾರ್ಥನನ್ನು ಮುಚ್ಚಿ ಅದೃಶ್ಯನನ್ನಾಗಿಸಿದರು.
07080038a ಸಂವೃತೇ ನರಸಿಂಹೈಸ್ತೈಃ ಕುರೂಣಾಂ ಋಷಭೇಽರ್ಜುನೇ।
07080038c ಮಹಾನಾಸೀತ್ಸಮುದ್ಧೂತಸ್ತಸ್ಯ ಸೈನ್ಯಸ್ಯ ನಿಸ್ವನಃ।।
ಕುರುಗಳ ಋಷಭ ಅರ್ಜುನನನ್ನು ಆ ನರಸಿಂಹರು ಸುತ್ತುವರೆದಿರಲು ಆಗ ಆ ಸೇನೆಯ ಮಧ್ಯದಲ್ಲಿ ದೊಡ್ಡದಾದ ಕೋಲಾಹಲ ಶಬ್ಧವೆದ್ದಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಧ್ವಜವರ್ಣನೇ ಆಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಧ್ವಜವರ್ಣನ ಎನ್ನುವ ಎಂಭತ್ತನೇ ಅಧ್ಯಾಯವು.