ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 78
ಸಾರ
ದುರ್ಯೋಧನನಿಗೆ ದ್ರೋಣನು ಕವಚವನ್ನು ತೊಡಿಸಿದ್ದಾನೆ ಎಂದು ಕೃಷ್ಣಾರ್ಜುನರು ಮಾತನಾಡಿಕೊಳ್ಳುವುದು (1-20). ಕವಚದ ಕುರಿತು ತಿಳಿದಿದ್ದ ಅರ್ಜುನನು ದುರ್ಯೋಧನನನ್ನು ಪರಾಜಯಗೊಳಿಸಿದುದು (21-46).
07078001 ಸಂಜಯ ಉವಾಚ।
07078001a ಏವಮುಕ್ತ್ವಾರ್ಜುನಂ ರಾಜಾ ತ್ರಿಭಿರ್ಮರ್ಮಾತಿಗೈಃ ಶರೈಃ।
07078001c ಪ್ರತ್ಯವಿಧ್ಯನ್ಮಹಾವೇಗೈಶ್ಚತುರ್ಭಿಶ್ಚತುರೋ ಹಯಾನ್।।
ಸಂಜಯನು ಹೇಳಿದನು: “ಹೀಗೆ ಹೇಳಿ ರಾಜನು ಅರ್ಜುನನನ್ನು ಮೂರು ಮರ್ಮಾತಿಗ ಶರಗಳಿಂದ ಹೊಡೆದು ಮಹಾವೇಗದಿಂದ ನಾಲ್ಕು ಕುದುರೆಗಳನ್ನೂ ಹೊಡೆದನು.
07078002a ವಾಸುದೇವಂ ಚ ದಶಭಿಃ ಪ್ರತ್ಯವಿಧ್ಯತ್ಸ್ತನಾಂತರೇ।
07078002c ಪ್ರತೋದಂ ಚಾಸ್ಯ ಭಲ್ಲೇನ ಚಿತ್ತ್ವಾ ಭೂಮಾವಪಾತಯತ್।।
ವಾಸುದೇವನನ್ನೂ ಅವನ ಎದೆಗೆ ಗುರಿಯಿಟ್ಟು ಹತ್ತು ಬಾಣಗಳಿಂದ ಹೊಡೆದು, ಭಲ್ಲದಿಂದ ಅವನ ಕೈಯಲ್ಲಿದ್ದ ಬಾರಿಕೋಲನ್ನು ಕಿತ್ತು ಭೂಮಿಗೆ ಬೀಳಿಸಿದನು.
07078003a ತಂ ಚತುರ್ದಶಭಿಃ ಪಾರ್ಥಶ್ಚಿತ್ರಪುಂಖೈಃ ಶಿಲಾಶಿತೈಃ।
07078003c ಅವಿಧ್ಯತ್ತೂರ್ಣಮವ್ಯಗ್ರಸ್ತೇಽಸ್ಯಾಭ್ರಶ್ಯಂತ ವರ್ಮಣಃ।।
ತಕ್ಷಣವೇ ಪಾರ್ಥನು ಅವ್ಯಗ್ರನಾಗಿ ಹದಿನಾಲ್ಕು ಚಿತ್ರಪುಂಖಗಳುಳ್ಳ ಶಿಲಾಶಿತಗಳಿಂದ ಹೊಡೆಯಲು ಅವುಗಳನ್ನು ಅವನ ಕವಚವು ಹಿಂದಿರುಗಿಸಿತು.
07078004a ತೇಷಾಂ ವೈಫಲ್ಯಮಾಲೋಕ್ಯ ಪುನರ್ನವ ಚ ಪಂಚ ಚ।
07078004c ಪ್ರಾಹಿಣೋನ್ನಿಶಿತಾನ್ಬಾಣಾಂಸ್ತೇ ಚಾಭ್ರಶ್ಯಂತ ವರ್ಮಣಃ।।
ಅವುಗಳನ್ನು ವಿಫಲವಾದುದನ್ನು ನೋಡಿ ಪುನಃ ಒಂಭತ್ತು ಮತ್ತು ಐದು ಪ್ರಾಣಗಳನ್ನು ಹಾರಿಸಬಲ್ಲ ನಿಶಿತ ಬಾಣಗಳನ್ನು ಪ್ರಯೋಗಿಸಲು ಅವೂ ಕೂಡ ಅವನ ಕವಚದಿಂದಾಗಿ ನಿರರ್ಥಕವಾದವು.
07078005a ಅಷ್ಟಾವಿಂಶತ್ತು ತಾನ್ಬಾಣಾನಸ್ತಾನ್ವಿಪ್ರೇಕ್ಷ್ಯ ನಿಷ್ಫಲಾನ್।
07078005c ಅಬ್ರವೀತ್ಪರವೀರಘ್ನಃ ಕೃಷ್ಣೋಽರ್ಜುನಮಿದಂ ವಚಃ।।
ಆ ಇಪ್ಪತ್ತೆಂಟು ಬಾಣಗಳು ನಿಷ್ಫಲವಾದುದನ್ನು ನೋಡಿ ಪರವೀರಘ್ನ ಕೃಷ್ಣನು ಅರ್ಜುನನಿಗೆ ಇದನ್ನು ಹೇಳಿದನು:
07078006a ಅದೃಷ್ಟಪೂರ್ವಂ ಪಶ್ಯಾಮಿ ಶಿಲಾನಾಮಿವ ಸರ್ಪಣಂ।
07078006c ತ್ವಯಾ ಸಂಪ್ರೇಷಿತಾಃ ಪಾರ್ಥ ನಾರ್ಥಂ ಕುರ್ವಂತಿ ಪತ್ರಿಣಃ।।
“ಪಾರ್ಥ! ಶಿಲೆಗಳು ಹರಿದುಹೋಗುವಂತೆ ಹಿಂದೆ ಕಂಡಿರದೇ ಇದ್ದುದನ್ನು ನಾನು ನೋಡುತ್ತಿದ್ದೇನೆ. ನೀನು ಪ್ರಯೋಗಿಸಿದ ಪತ್ರಿಗಳು ನಿರರ್ಥಕವಾಗುತ್ತಿವೆ.
07078007a ಕಚ್ಚಿದ್ಗಾಂಡೀವತಃ ಪ್ರಾಣಾಸ್ತಥೈವ ಭರತರ್ಷಭ।
07078007c ಮುಷ್ಟಿಶ್ಚ ತೇ ಯಥಾಪೂರ್ವಂ ಭುಜಯೋಶ್ಚ ಬಲಂ ತವ।।
ಭರತರ್ಷಭ! ಗಾಂಡೀವದಲ್ಲಿದ್ದ ಪ್ರಾಣ ಮತ್ತು ಹಾಗೆಯೇ ನಿನ್ನ ಮುಷ್ಟಿ ಮತ್ತು ಭುಜಗಳ ಬಲವು ಮೊದಲಿನಂತೆಯೇ ಇದೆ ತಾನೇ?
07078008a ನ ಚೇದ್ವಿಧೇರಯಂ ಕಾಲಃ ಪ್ರಾಪ್ತಃ ಸ್ಯಾದದ್ಯ ಪಶ್ಚಿಮಃ।
07078008c ತವ ಚೈವಾಸ್ಯ ಶತ್ರೋಶ್ಚ ತನ್ಮಮಾಚಕ್ಷ್ವ ಪೃಚ್ಚತಃ।।
ಇದು ನಿನ್ನ ಮತ್ತು ಈ ಶತ್ರುವಿನ ಕೊನೆಯ ಭೇಟಿಯಲ್ಲವೇ? ನಾನು ಕೇಳುತ್ತಿದ್ದೇನೆ. ಹೇಳು.
07078009a ವಿಸ್ಮಯೋ ಮೇ ಮಹಾನ್ಪಾರ್ಥ ತವ ದೃಷ್ಟ್ವಾ ಶರಾನಿಮಾನ್।
07078009c ವ್ಯರ್ಥಾನ್ನಿಪತತಃ ಸಂಖ್ಯೇ ದುರ್ಯೋಧನರಥಂ ಪ್ರತಿ।।
ಪಾರ್ಥ! ಈ ರೀತಿ ರಣದಲ್ಲಿ ದುರ್ಯೋಧನನ ರಥದ ಕಡೆ ಕಳುಹಿಸಿದ ಈ ಶರಗಳು ವ್ಯರ್ಥವಾಗಿ ಬೀಳುತ್ತಿವೆಯೆಂದರೆ ನನಗೆ ಮಹಾ ವಿಸ್ಮಯವಾಗುತ್ತಿದೆ.
07078010a ವಜ್ರಾಶನಿಸಮಾ ಘೋರಾಃ ಪರಕಾಯಾವಭೇದಿನಃ।
07078010c ಶರಾಃ ಕುರ್ವಂತಿ ತೇ ನಾರ್ಥಂ ಪಾರ್ಥ ಕಾದ್ಯ ವಿಡಂಬನಾ।।
ಪಾರ್ಥ! ಇಂದು ಇದೇನು ವಿಡಂಬನೆ! ವಜ್ರದಂತೆ ಘೋರವಾಗಿರುವ, ಶತ್ರುಗಳ ಕಾಯವನ್ನು ಭೇದಿಸಬಲ್ಲ ನಿನ್ನ ಈ ಶರಗಳು ಮಾಡಬೇಕಾದುದನ್ನು ಮಾಡುತ್ತಿಲ್ಲವಲ್ಲ!”
07078011 ಅರ್ಜುನ ಉವಾಚ।
07078011a ದ್ರೋಣೇನೈಷಾ ಮತಿಃ ಕೃಷ್ಣ ಧಾರ್ತರಾಷ್ಟ್ರೇ ನಿವೇಶಿತಾ।
07078011c ಅಂತೇ ವಿಹಿತಮಸ್ತ್ರಾಣಾಂ ಏತತ್ಕವಚಧಾರಣಂ।।
ಅರ್ಜುನನು ಹೇಳಿದನು: “ಕೃಷ್ಣ! ನನಗನಿಸುತ್ತದೆ - ಧಾರ್ತರಾಷ್ಟ್ರನಿಗೆ ದ್ರೋಣನು ಕವಚವನ್ನು ತೊಡಿಸಿದ್ದಾನೆ. ಇವನು ಧರಿಸಿರುವ ಈ ಕವಚವು ಅಸ್ತ್ರಗಳಿಗೆ ಅಭೇದ್ಯವಾದುದು.
07078012a ಅಸ್ಮಿನ್ನಂತರ್ಹಿತಂ ಕೃಷ್ಣ ತ್ರೈಲೋಕ್ಯಮಪಿ ವರ್ಮಣಿ।
07078012c ಏಕೋ ದ್ರೋಣೋ ಹಿ ವೇದೈತದಹಂ ತಸ್ಮಾಚ್ಚ ಸತ್ತಮಾತ್।।
ಕೃಷ್ಣ! ಈ ಕವಚದೊಳಗೆ ಮೂರು ಲೋಕಗಳೂ ಅಡಗಿವೆ. ದ್ರೋಣನೊಬ್ಬನಿಗೇ ಇದು ತಿಳಿದಿದೆ. ಮತ್ತು ಆ ಸತ್ತಮನಿಂದ ನಾನೂ ಇದನ್ನು ಕಲಿತಿದ್ದೇನೆ.
07078013a ನ ಶಕ್ಯಮೇತತ್ಕವಚಂ ಬಾಣೈರ್ಭೇತ್ತುಂ ಕಥಂ ಚನ।
07078013c ಅಪಿ ವಜ್ರೇಣ ಗೋವಿಂದ ಸ್ವಯಂ ಮಘವತಾ ಯುಧಿ।।
ಗೋವಿಂದ! ಈ ಕವಚವನ್ನು ಬಾಣಗಳಿಂದ - ಯುದ್ಧದಲ್ಲಿ ಸ್ವಯಂ ಮಘವತನಿಗೂ ವಜ್ರದಿಂದ ಕೂಡ - ಎಂದೂ ಭೇದಿಸಲು ಸಾಧ್ಯವಿಲ್ಲ.
07078014a ಜಾನಂಸ್ತ್ವಮಪಿ ವೈ ಕೃಷ್ಣ ಮಾಂ ವಿಮೋಹಯಸೇ ಕಥಂ।
07078014c ಯದ್ವೃತ್ತಂ ತ್ರಿಷು ಲೋಕೇಷು ಯಚ್ಚ ಕೇಶವ ವರ್ತತೇ।।
ಕೇಶವ! ಮೂರು ಲೋಕಗಳಲ್ಲಿ ನಡೆಯುವ ಎಲ್ಲವೂ ನಿನಗೆ ತಿಳಿದಿದ್ದರೂ ಏಕೆ ಹೀಗೆ ನನ್ನನ್ನು ಮೋಹಗೊಳಿಸುತ್ತಿರುವೆ ಕೃಷ್ಣ!
07078015a ತಥಾ ಭವಿಷ್ಯದ್ಯಚ್ಚೈವ ತತ್ಸರ್ವಂ ವಿದಿತಂ ತವ।
07078015c ನ ತ್ವೇವಂ ವೇದ ವೈ ಕಶ್ಚಿದ್ಯಥಾ ತ್ವಂ ಮಧುಸೂದನ।।
ಹಾಗೆಯೇ ಮುಂದೆ ಆಗುವವೆಲ್ಲವೂ ನಿನಗೆ ತಿಳಿದೇ ಇದೆ. ಮಧುಸೂದನ! ನಿನಗೆ ತಿಳಿಯದೇ ಇರುವುದು ಯಾವುದೂ ಇಲ್ಲ.
07078016a ಏಷ ದುರ್ಯೋಧನಃ ಕೃಷ್ಣ ದ್ರೋಣೇನ ವಿಹಿತಾಮಿಮಾಂ।
07078016c ತಿಷ್ಠತ್ಯಭೀತವತ್ಸಂಖ್ಯೇ ಬಿಭ್ರತ್ಕವಚಧಾರಣಾಂ।।
ಕೃಷ್ಣ! ಈ ದುರ್ಯೋಧನನು ದ್ರೋಣನು ತೊಡಿಸಿದ ಈ ಹೊಳೆಯುವ ಕವಚವನ್ನು ಧರಿಸಿ ರಣದಲ್ಲಿ ಭಯವಿಲ್ಲದೇ ನಿಂತಿದ್ದಾನೆ.
07078017a ಯತ್ತ್ವತ್ರ ವಿಹಿತಂ ಕಾರ್ಯಂ ನೈಷ ತದ್ವೇತ್ತಿ ಮಾಧವ।
07078017c ಸ್ತ್ರೀವದೇಷ ಬಿಭರ್ತ್ಯೇತಾಂ ಯುಕ್ತಾಂ ಕವಚಧಾರಣಾಂ।।
ಆದರೆ ಆ ಕವಚವನ್ನು ಧರಿಸಿದವನು ಏನು ಮಾಡಬೇಕು ಎನ್ನುವುದು ಅವನಿಗೆ ತಿಳಿದಿಲ್ಲ ಮಾಧವ! ಸ್ತ್ರೀಯಂತೆ ಇವನು ಇದನ್ನು ಧರಿಸಿ ಮಿರುಗುತ್ತಿದ್ದಾನೆ ಅಷ್ಟೆ!
07078018a ಪಶ್ಯ ಬಾಹ್ವೋಶ್ಚ ಮೇ ವೀರ್ಯಂ ಧನುಷಶ್ಚ ಜನಾರ್ದನ।
07078018c ಪರಾಜಯಿಷ್ಯೇ ಕೌರವ್ಯಂ ಕವಚೇನಾಪಿ ರಕ್ಷಿತಂ।।
ಜನಾರ್ದನ! ನನ್ನ ಬಾಹುಗಳ ಮತ್ತು ಧನುಸ್ಸಿನ ವೀರ್ಯವನ್ನು ನೋಡು! ಕವಚದಿಂದ ರಕ್ಷಿತನಾಗಿದ್ದರೂ ಕೂಡ ಕೌರವ್ಯನನ್ನು ಪರಾಜಯಗೊಳಿಸುತ್ತೇನೆ.
07078019a ಇದಮಂಗಿರಸೇ ಪ್ರಾದಾದ್ದೇವೇಶೋ ವರ್ಮ ಭಾಸ್ವರಂ।
07078019c ಪುನರ್ದದೌ ಸುರಪತಿರ್ಮಹ್ಯಂ ವರ್ಮ ಸಸಂಗ್ರಹಂ।।
ಹೊಳೆಯುವ ಈ ಕವಚವನ್ನು ದೇವೇಶನು ಅಂಗಿರಸನಿಗೆ ಕೊಟ್ಟಿದ್ದನು. ಪುನಃ ಸುರಪತಿಯು ನನಗೆ ಈ ಕವಚವನ್ನು, ತೊಡುವ ಮಂತ್ರಗಳೊಡನೆ, ನನಗೆ ಕೊಟ್ಟಿದ್ದನು.
07078020a ದೈವಂ ಯದ್ಯಸ್ಯ ವರ್ಮೈತದ್ಬ್ರಹ್ಮಣಾ ವಾ ಸ್ವಯಂ ಕೃತಂ।
07078020c ನೈತದ್ಗೋಪ್ಸ್ಯತಿ ದುರ್ಬುದ್ಧಿಮದ್ಯ ಬಾಣಹತಂ ಮಯಾ।।
ಈ ಕವಚವು ದೈವವಾಗಿದ್ದರೂ, ಸ್ವಯಂ ಬ್ರಹ್ಮನಿಂದ ನಿರ್ಮಿತವಾಗಿದ್ದರೂ, ನನ್ನ ಬಾಣಗಳಿಂದ ಹತನಾಗುವ ಈ ದುರ್ಬುದ್ಧಿಯನ್ನು ಇಂದು ರಕ್ಷಿಸುವುದಿಲ್ಲ!””
07078021 ಸಂಜಯ ಉವಾಚ।
07078021a ಏವಮುಕ್ತ್ವಾರ್ಜುನೋ ಬಾಣಾನಭಿಮಂತ್ರ್ಯ ವ್ಯಕರ್ಷಯತ್।
07078021c ವಿಕೃಷ್ಯಮಾಣಾಂಸ್ತೇನೈವಂ ಧನುರ್ಮಧ್ಯಗತಾಂ ಶರಾನ್।
07078021e ತಾನಸ್ಯಾಸ್ತ್ರೇಣ ಚಿಚ್ಚೇದ ದ್ರೌಣಿಃ ಸರ್ವಾಸ್ತ್ರಘಾತಿನಾ।।
ಸಂಜಯನು ಹೇಳಿದನು: “ಹೀಗೆ ಹೇಳಿ ಅರ್ಜುನನು ಬಾಣಗಳನ್ನು ಅಭಿಮಂತ್ರಿಸಿ, ಶಿಂಜಿನಿಯನ್ನು ಎಳೆದು ಧನುಸ್ಸಿನ ಮಧ್ಯದಲ್ಲಿ ಹೂಡುತ್ತಿರಲು ದ್ರೌಣಿಯು ಆ ಶರಗಳನ್ನು ಸರ್ವಾಸ್ತ್ರಗಳನ್ನೂ ನಿರಸನಗೊಳಿಸಬಲ್ಲ ಅಸ್ತ್ರದಿಂದ ತುಂಡರಿಸಿದನು.
07078022a ತಾನ್ನಿಕೃತ್ತಾನಿಷೂನ್ದೃಷ್ಟ್ವಾ ದೂರತೋ ಬ್ರಹ್ಮವಾದಿನಾ।
07078022c ನ್ಯವೇದಯತ್ಕೇಶವಾಯ ವಿಸ್ಮಿತಃ ಶ್ವೇತವಾಹನಃ।।
ದೂರದಿಂದಲೇ ಆ ಬ್ರಹ್ಮವಾದಿಯು ಅವುಗಳನ್ನು ಕತ್ತರಿಸಿದುದನ್ನು ನೋಡಿ ವಿಸ್ಮಿತನಾದ ಶ್ವೇತವಾಹನನು ಕೇಶವನಿಗೆ ನಿವೇದಿಸಿದನು:
07078023a ನೈತದಸ್ತ್ರಂ ಮಯಾ ಶಕ್ಯಂ ದ್ವಿಃ ಪ್ರಯೋಕ್ತುಂ ಜನಾರ್ದನ।
07078023c ಅಸ್ತ್ರಂ ಮಾಮೇವ ಹನ್ಯಾದ್ಧಿ ಪಶ್ಯ ತ್ವದ್ಯ ಬಲಂ ಮಮ।।
“ಜನಾರ್ದನ! ಈ ಅಸ್ತ್ರವನ್ನು ನಾನು ಎರಡನೆಯ ಬಾರಿ ಪ್ರಯೋಗಿಸಲು ಶಕ್ಯನಿಲ್ಲ. ಈ ಅಸ್ತ್ರವು ನನ್ನನ್ನೇ ನನ್ನ ಬಲವನ್ನೇ ಕೊಂದುಬಿಡುತ್ತದೆ!”
07078024a ತತೋ ದುರ್ಯೋಧನಃ ಕೃಷ್ಣೌ ನವಭಿರ್ನತಪರ್ವಭಿಃ।
07078024c ಅವಿಧ್ಯತ ರಣೇ ರಾಜನ್ ಶರೈರಶೀವಿಷೋಪಮೈಃ।
ಆಗ ರಣದಲ್ಲಿ ರಾಜನ್! ದುರ್ಯೋಧನನು ಕೃಷ್ಣರಿಬ್ಬರನ್ನೂ ಒಂಭತ್ತು ಸರ್ಪಗಳ ವಿಷದಂತಿರುವ ನತಪರ್ವ ಶರಗಳಿಂದ ಹೊಡೆದನು.
07078024e ಭೂಯ ಏವಾಭ್ಯವರ್ಷಚ್ಚ ಸಮರೇ ಕೃಷ್ಣಪಾಂಡವೌ।।
07078025a ಶರವರ್ಷೇಣ ಮಹತಾ ತತೋಽಹೃಷ್ಯಂತ ತಾವಕಾಃ।
07078025c ಚಕ್ರುರ್ವಾದಿತ್ರನಿನದಾನ್ಸಿಂಹನಾದರವಾಂಸ್ತಥಾ।।
ಪುನಃ ಸಮರದಲ್ಲಿ ಕೃಷ್ಣ-ಪಾಂಡವರ ಮೇಲೆ ಶರಗಳನ್ನು ಸುರಿಸಿದನು. ಆ ಮಹಾ ಶರವರ್ಷದಿಂದ ನಿನ್ನವರು ಹರ್ಷಗೊಂಡರು. ಅವರು ವಾದ್ಯಗಳನ್ನು ಬಾರಿಸಿದರು ಮತ್ತು ಸಿಂಹನಾದವನ್ನು ಕೂಗಿದರು.
07078026a ತತಃ ಕ್ರುದ್ಧೋ ರಣೇ ಪಾರ್ಥಃ ಸೃಕ್ಕಣೀ ಪರಿಸಂಲಿಹನ್।
07078026c ನಾಪಶ್ಯತ ತತೋಽಸ್ಯಾಂಗಂ ಯನ್ನ ಸ್ಯಾದ್ವರ್ಮರಕ್ಷಿತಂ।।
07078027a ತತೋಽಸ್ಯ ನಿಶಿತೈರ್ಬಾಣೈಃ ಸುಮುಕ್ತೈರಂತಕೋಪಮೈಃ।
07078027c ಹಯಾಂಶ್ಚಕಾರ ನಿರ್ದೇಹಾನುಭೌ ಚ ಪಾರ್ಷ್ಣಿಸಾರಥೀ।।
ಆಗ ರಣದಲ್ಲಿ ಕ್ರುದ್ಧನಾಗಿ ಪಾರ್ಥನು ಕಟವಾಯಿಯನ್ನು ನೆಕ್ಕುತ್ತಾ ಕವಚವು ರಕ್ಷಿಸುತ್ತಿದ್ದ ಅವನ ಅಂಗಗಳನ್ನು ನೋಡದೆಯೇ ಉತ್ತಮವಾಗಿ ಹೂಡಿದ ಅಂತಕನಂತಿರುವ ನಿಶಿತ ಬಾಣಗಳಿಂದ ಅವನ ಎರಡು ಕುದುರೆಗಳನ್ನೂ ಪಾರ್ಷ್ಣಸಾರಥಿಗಳನ್ನೂ ನಿರ್ದೇಹರನ್ನಾಗಿಸಿದನು.
07078028a ಧನುರಸ್ಯಾಚ್ಚಿನಚ್ಚಿತ್ರಂ ಹಸ್ತಾವಾಪಂ ಚ ವೀರ್ಯವಾನ್।
07078028c ರಥಂ ಚ ಶಕಲೀಕರ್ತುಂ ಸವ್ಯಸಾಚೀ ಪ್ರಚಕ್ರಮೇ।।
ಆ ವೀರ್ಯವಾನ್ ಸವ್ಯಸಾಚಿಯು ಅವನ ಚಿತ್ರ ಧನುಸ್ಸನ್ನೂ, ಹಸ್ತವಾಪವನ್ನೂ ಕತ್ತರಿಸಿ, ರಥವನ್ನೂ ಚೂರು ಚೂರು ಮಾಡಲು ಉಪಕ್ರಮಿಸಿದನು.
07078029a ದುರ್ಯೋಧನಂ ಚ ಬಾಣಾಭ್ಯಾಂ ತೀಕ್ಷ್ಣಾಭ್ಯಾಂ ವಿರಥೀಕೃತಂ।
07078029c ಅವಿಧ್ಯದ್ಧಸ್ತತಲಯೋರುಭಯೋರರ್ಜುನಸ್ತದಾ।।
ಆಗ ತೀಕ್ಷ್ಣವಾದ ಎರಡು ಬಾಣಗಳಿಂದ ದುರ್ಯೋಧನನನ್ನು ವಿರಥನನ್ನಾಗಿ ಮಾಡಿ ಅರ್ಜುನನನು ಅವನ ಎರಡೂ ಅಂಗೈಗಳ ಮಧ್ಯದಲ್ಲಿ ಹೊಡೆದನು.
07078030a ತಂ ಕೃಚ್ಚ್ರಾಮಾಪದಂ ಪ್ರಾಪ್ತಂ ದೃಷ್ಟ್ವಾ ಪರಮಧನ್ವಿನಃ।
07078030c ಸಮಾಪೇತುಃ ಪರೀಪ್ಸಂತೋ ಧನಂಜಯಶರಾರ್ದಿತಂ।।
ಆ ಪರಮಧನ್ವಿಯಿಂದ ಅವನು ಕಷ್ಟಹೊಂದಿದುದನ್ನು ನೋಡಿ ಧನಂಜಯನ ಶರಗಳಿಂದ ಪೀಡಿತನಾದ ಅವನನ್ನು ರಕ್ಷಿಸಲು ಮುಂದಾದರು.
07078031a ತೇ ರಥೈರ್ಬಹುಸಾಹಸ್ರೈಃ ಕಲ್ಪಿತೈಃ ಕುಂಜರೈರ್ಹಯೈಃ।
07078031c ಪದಾತ್ಯೋಘೈಶ್ಚ ಸಂರಬ್ಧೈಃ ಪರಿವವ್ರುರ್ಧನಂಜಯಂ।।
ಅವರು ಅನೇಕ ಸಹಸ್ರ ಸಜ್ಜಾಗಿದ್ದ ರಥಗಳಿಂದ, ಕುದುರೆ-ಆನೆಗಳಿಂದ ಮತ್ತು ಸಂರಬ್ಧ ಪದಾತಿಗಳಿಂದ ಧನಂಜಯನನ್ನು ಸುತ್ತುವರೆದರು.
07078032a ಅಥ ನಾರ್ಜುನಗೋವಿಂದೌ ರಥೋ ವಾಪಿ ವ್ಯದೃಶ್ಯತ।
07078032c ಅಸ್ತ್ರವರ್ಷೇಣ ಮಹತಾ ಜನೌಘೈಶ್ಚಾಪಿ ಸಂವೃತೌ।।
ಮಹಾ ಅಸ್ತ್ರವರ್ಷಗಳಿಂದ ಮತ್ತು ಜನರ ಗುಂಪುಗಳಿಂದ ಆವೃತರಾದ ಅರ್ಜುನ-ಗೋವಿಂದರಾಗಲೀ, ಅವರ ರಥವಾಗಲೀ ಕಾಣಿಸಲಿಲ್ಲ.
07078033a ತತೋಽರ್ಜುನೋಽಸ್ತ್ರವೀರ್ಯೇಣ ನಿಜಘ್ನೇ ತಾಂ ವರೂಥಿನೀಂ।
07078033c ತತ್ರ ವ್ಯಂಗೀಕೃತಾಃ ಪೇತುಃ ಶತಶೋಽಥ ರಥದ್ವಿಪಾಃ।।
ಆಗ ಅರ್ಜುನನು ಅಸ್ತ್ರವೀರ್ಯದಿಂದ ಆ ವರೂಥಿಗಳನ್ನು ಸಂಹರಿಸಿದನು. ಅಲ್ಲಿ ನೂರಾರು ರಥಗಳೂ ಆನೆಗಳು ತುಂಡಾಗಿ ಬಿದ್ದವು.
07078034a ತೇ ಹತಾ ಹನ್ಯಮಾನಾಶ್ಚ ನ್ಯಗೃಹ್ಣಂಸ್ತಂ ರಥೋತ್ತಮಂ।
07078034c ಸ ರಥಸ್ತಂಭಿತಸ್ತಸ್ಥೌ ಕ್ರೋಶಮಾತ್ರಂ ಸಮಂತತಃ।।
ಕೊಲ್ಲಲು ಬಂದವರು ಅವನ ಉತ್ತಮ ರಥದ ಸಮೀಪ ಬರುವ ಮೊದಲೇ ಹತರಾದರು. ಅವರ ರಥವು ಸುತ್ತುವರೆಯಲ್ಪಟ್ಟು ಒಂದು ಕ್ರೋಶ ದೂರದವರೆಗೆ ಹಾಗೆಯೇ ನಿಂತಿತ್ತು.
07078035a ತತೋಽರ್ಜುನಂ ವೃಷ್ಣಿವೀರಸ್ತ್ವರಿತೋ ವಾಕ್ಯಮಬ್ರವೀತ್।
07078035c ಧನುರ್ವಿಸ್ಫಾರಯಾತ್ಯರ್ಥಮಹಂ ಧ್ಮಾಸ್ಯಾಮಿ ಚಾಂಬುಜಂ।।
ಆಗ ತ್ವರೆಮಾಡಿ ವೃಷ್ಣಿವೀರನು ಅರ್ಜುನನಿಗೆ ಹೇಳಿದನು: “ಧನುಸ್ಸನ್ನು ಟೇಂಕರಿಸು. ನಾನು ಶಂಖವನ್ನು ಊದುತ್ತೇನೆ.”
07078036a ತತೋ ವಿಸ್ಫಾರ್ಯ ಬಲವದ್ಗಾಂಡೀವಂ ಜಘ್ನಿವಾನ್ರಿಪೂನ್।
07078036c ಮಹತಾ ಶರವರ್ಷೇಣ ತಲಶಬ್ದೇನ ಚಾರ್ಜುನಃ।।
ಆಗ ಅರ್ಜುನನು ಬಲವಾಗಿ ಗಾಂಡೀವವನ್ನು ಟೇಂಕರಿಸಿ ಮಹಾ ಶರವರ್ಷಗಳಿಂದ ಮತ್ತು ಚಪ್ಪಾಳೆಗಳಿಂದ ಶತ್ರುಗಳನ್ನು ಸಂಹರಿಸಿದನು.
07078037a ಪಾಂಚಜನ್ಯಂ ಚ ಬಲವದ್ದಧ್ಮೌ ತಾರೇಣ ಕೇಶವಃ।
07078037c ರಜಸಾ ಧ್ವಸ್ತಪಕ್ಷ್ಮಾಂತಃ ಪ್ರಸ್ವಿನ್ನವದನೋ ಭೃಶಂ।।
ಧೂಳಿನಿಂದ ಮುಖವು ಮಸುಕಾಗಿದ್ದ ಕೇಶವನು ಜೋರಾಗಿ ಬಲವನ್ನುಪಯೋಗಿಸಿ ಪಾಂಚಜನ್ಯವನ್ನು ಊದಿದನು.
07078038a ತಸ್ಯ ಶಂಖಸ್ಯ ನಾದೇನ ಧನುಷೋ ನಿಸ್ವನೇನ ಚ।
07078038c ನಿಃಸತ್ತ್ವಾಶ್ಚ ಸಸತ್ತ್ವಾಶ್ಚ ಕ್ಷಿತೌ ಪೇತುಸ್ತದಾ ಜನಾಃ।।
ಅವನ ಶಂಖದ ನಾದದಿಂದ ಮತ್ತು ಧನುಸ್ಸಿನ ನಿಸ್ವನದಿಂದ ಸತ್ತ್ವವಿಲ್ಲದ ಮತ್ತು ಸತ್ತ್ವವಿದ್ದ ಜನರು ನೆಲದ ಮೇಲೆ ಬಿದ್ದರು.
07078039a ತೈರ್ವಿಮುಕ್ತೋ ರಥೋ ರೇಜೇ ವಾಯ್ವೀರಿತ ಇವಾಂಬುದಃ।
07078039c ಜಯದ್ರಥಸ್ಯ ಗೋಪ್ತಾರಸ್ತತಃ ಕ್ಷುಬ್ಧಾಃ ಸಹಾನುಗಾಃ।।
ಅವರಿಂದ ವಿಮುಕ್ತವಾದ ಅವರ ರಥವು ಗಾಳಿಯಿಂದ ತೂರಲ್ಪಟ್ಟ ಮೋಡಗಳಿಂದ ಹೊರಬಂದಿತು. ಆಗ ಜಯದ್ರಥನ ಗೋಪ್ತಾರರು ಅವರ ಅನುಯಾಯಿಗಳೊಂದಿಗೆ ತಲ್ಲಣಿಸಿದರು.
07078040a ತೇ ದೃಷ್ಟ್ವಾ ಸಹಸಾ ಪಾರ್ಥಂ ಗೋಪ್ತಾರಃ ಸೈಂಧವಸ್ಯ ತು।
07078040c ಚಕ್ರುರ್ನಾದಾನ್ಬಹುವಿಧಾನ್ಕಂಪಯಂತೋ ವಸುಂಧರಾಂ।।
ಪಾರ್ಥನನ್ನು ನೋಡಿದೊಡನೆಯೇ ಸೈಂಧವನ ರಕ್ಷಕರು ವಸುಂಧರೆಯನ್ನು ನಡುಗಿಸುತ್ತಾ ಬಹುವಿಧದ ನಾದಗೈದರು.
07078041a ಬಾಣಶಬ್ದರವಾಂಶ್ಚೋಗ್ರಾನ್ವಿಮಿಶ್ರಾಂ ಶಂಖನಿಸ್ವನೈಃ।
07078041c ಪ್ರಾದುಶ್ಚಕ್ರುರ್ಮಹಾತ್ಮಾನಃ ಸಿಂಹನಾದರವಾನಪಿ।।
ಬಾಣದ ಶಬ್ಧ, ಉಗ್ರ ಕೂಗುಗಳು ಶಂಖನಿಸ್ವನಗಳೊಂದಿಗೆ ಸೇರಲು ಆ ಮಹಾತ್ಮರು ಸಿಂಹನಾದಗಳನ್ನೂ ಕೂಗಿದರು.
07078042a ತಂ ಶ್ರುತ್ವಾ ನಿನದಂ ಘೋರಂ ತಾವಕಾನಾಂ ಸಮುತ್ಥಿತಂ।
07078042c ಪ್ರದಧ್ಮತುಸ್ತದಾ ಶಂಖೌ ವಾಸುದೇವಧನಂಜಯೌ।।
ನಿಮ್ಮವರಿಂದ ಹೊರಹೊಮ್ಮಿದ ಆ ಘೋರ ನಿನಾದವನ್ನು ಕೇಳಿ ವಾಸುದೇವ-ಧನಂಜಯರು ಶಂಖಗಳನ್ನು ಊದಿದರು.
07078043a ತೇನ ಶಬ್ದೇನ ಮಹತಾ ಪೂರಿತೇಯಂ ವಸುಂಧರಾ।
07078043c ಸಶೈಲಾ ಸಾರ್ಣವದ್ವೀಪಾ ಸಪಾತಾಲಾ ವಿಶಾಂ ಪತೇ।।
ವಿಶಾಂಪತೇ! ಆ ಮಹಾ ಶಬ್ಧದಿಂದ ಶೈಲ-ಸಾಗರ-ದ್ವೀಪ-ಪಾತಾಲಗಳೊಂದಿಗೆ ಈ ಭೂಮಿಯು ತುಂಬಿಕೊಂಡಿತು.
07078044a ಸ ಶಬ್ದೋ ಭರತಶ್ರೇಷ್ಠ ವ್ಯಾಪ್ಯ ಸರ್ವಾ ದಿಶೋ ದಶ।
07078044c ಪ್ರತಿಸಸ್ವಾನ ತತ್ರೈವ ಕುರುಪಾಂಡವಯೋರ್ಬಲೇ।।
ಭರತಶ್ರೇಷ್ಠ! ಆ ಶಬ್ದವು ಸರ್ವ ದಶ ದಿಶಗಳನ್ನೂ ತಲುಪಿ ಅಲ್ಲಿಯೇ ಕುರು-ಪಾಂಡವರ ಸೇನೆಗಳಲ್ಲಿ ಪ್ರತಿಧ್ವನಿಸಿತು.
07078045a ತಾವಕಾ ರಥಿನಸ್ತತ್ರ ದೃಷ್ಟ್ವಾ ಕೃಷ್ಣಧನಂಜಯೌ।
07078045c ಸಂರಂಭಂ ಪರಮಂ ಪ್ರಾಪ್ತಾಸ್ತ್ವರಮಾಣಾ ಮಹಾರಥಾಃ।।
ಅಲ್ಲಿ ನಿನ್ನವರಾದ ರಥಿಗಳನ್ನು ನೋಡಿ ಮಹಾರಥ ಕೃಷ್ಣ-ಧನಂಜಯರು ಪರಮ ಕುಪಿತರಾಗಿ ತ್ವರೆಮಾಡಿ ಮುಂದುವರೆದರು.
07078046a ಅಥ ಕೃಷ್ಣೌ ಮಹಾಭಾಗೌ ತಾವಕಾ ದೃಶ್ಯ ದಂಶಿತೌ।
07078046c ಅಭ್ಯದ್ರವಂತ ಸಂಕ್ರುದ್ಧಾಸ್ತದದ್ಭುತಮಿವಾಭವತ್।।
ಆಗ ಮಹಾಭಾಗರಾದ ಕೃಷ್ಣರಿಬ್ಬರೂ ಕವಚಧಾರಿಗಳಾದ ನಿನ್ನವರನ್ನು ನೋಡಿ ಸಂಕ್ರುದ್ಧರಾಗಿ ಆಕ್ರಮಣಿಸಿದರು. ಅದೊಂದು ಅದ್ಭುತವಾಗಿತ್ತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ದುರ್ಯೋಧನಪರಾಜಯೇ ಅಷ್ಠಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ದುರ್ಯೋಧನಪರಾಜಯ ಎನ್ನುವ ಎಪ್ಪತ್ತೆಂಟನೇ ಅಧ್ಯಾಯವು.