ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 77
ಸಾರ
ಎದುರಾದ ದುರ್ಯೋಧನನನ್ನು ಕೊಲ್ಲಲು ಕೃಷ್ಣನು ಅರ್ಜುನನಿಗೆ ಹೇಳಿದುದು (1-18). ದುರ್ಯೋಧನನ ಮಾತು (19-38).
07077001 ವಾಸುದೇವ ಉವಾಚ।
07077001a ಸುಯೋಧನಮತಿಕ್ರಾಂತಮೇನಂ ಪಶ್ಯ ಧನಂಜಯ।
07077001c ಆಪದ್ಗತಮಿಮಂ ಮನ್ಯೇ ನಾಸ್ತ್ಯಸ್ಯ ಸದೃಶೋ ರಥಃ।।
ವಾಸುದೇವನು ಹೇಳಿದನು: “ಧನಂಜಯ! ನಮ್ಮನ್ನು ಅತಿಕ್ರಮಿಸಿರುವ ಸುಯೋಧನನನ್ನು ನೋಡು! ಇದನ್ನು ಅತ್ಯದ್ಭುತವೆಂದು ಪರಿಗಣಿಸುತ್ತೇನೆ. ಇವನ ಸದೃಶನಾದ ರಥನಿಲ್ಲ!
07077002a ದೂರಪಾತೀ ಮಹೇಷ್ವಾಸಃ ಕೃತಾಸ್ತ್ರೋ ಯುದ್ಧದುರ್ಮದಃ।
07077002c ದೃಢಾಸ್ತ್ರಶ್ಚಿತ್ರಯೋಧೀ ಚ ಧಾರ್ತರಾಷ್ಟ್ರೋ ಮಹಾಬಲಃ।।
ಈ ಧಾರ್ತರಾಷ್ಟ್ರನು ದೂರ ಬಾಣವನ್ನು ಬೀಳಿಸಬಲ್ಲ. ಮಹೇಷ್ವಾಸ. ಕೃತಾಸ್ತ್ರ. ಯುದ್ಧ ದುರ್ಮದ. ದೃಢಾಸ್ತ್ರ. ಚಿತ್ರಯೋಧೀ ಮತ್ತು ಮಹಾಬಲಶಾಲೀ.
07077003a ಅತ್ಯಂತಸುಖಸಂವೃದ್ಧೋ ಮಾನಿತಶ್ಚ ಮಹಾರಥೈಃ।
07077003c ಕೃತೀ ಚ ಸತತಂ ಪಾರ್ಥ ನಿತ್ಯಂ ದ್ವೇಷ್ಟಿ ಚ ಪಾಂಡವಾನ್।।
ಪಾರ್ಥ! ಇವನು ಅತ್ಯಂತ ಸುಖದಲ್ಲಿ ಬೆಳೆದವನು. ಮಹಾರಥರಿಂದಲೂ ಗೌರವಿಸಲ್ಪಡುವವನು. ಯಶಸ್ವಿಯಾದ ಇವನು ನಿತ್ಯವೂ ಪಾಂಡವರನ್ನು ದ್ವೇಷಿಸುತ್ತಾ ಬಂದವನು.
07077004a ತೇನ ಯುದ್ಧಮಹಂ ಮನ್ಯೇ ಪ್ರಾಪ್ತಕಾಲಂ ತವಾನಘ।
07077004c ಅತ್ರ ವೋ ದ್ಯೂತಮಾಯಾತಂ ವಿಜಯಾಯೇತರಾಯ ವಾ।।
ಅನಘ! ಅವನೊಂದಿಗೆ ನೀನು ಯುದ್ಧಮಾಡುವ ಸರಿಯಾದ ಸಮಯ ಬಂದೊದಗಿದೆಯೆಂದು ನನಗನ್ನಿಸುತ್ತದೆ. ಅಲ್ಲಿ ದ್ಯೂತದಲ್ಲಿ ಪಣವಿದ್ದಂತೆ ಇವನ ಮೇಲೆ ಜಯವಿದೆ ಅಥವಾ ಇನ್ನೊಂದಿದೆ.
07077005a ಅತ್ರ ಕ್ರೋಧವಿಷಂ ಪಾರ್ಥ ವಿಮುಂಚ ಚಿರಸಂಭೃತಂ।
07077005c ಏಷ ಮೂಲಮನರ್ಥಾನಾಂ ಪಾಂಡವಾನಾಂ ಮಹಾರಥಃ।।
ಪಾರ್ಥ! ತುಂಬಾ ಸಮಯದಿಂದ ಸಂಗ್ರಹಿಸಿಟ್ಟುಕೊಂಡಿರುವ ನಿನ್ನ ಕ್ರೋಧವೆಂಬ ವಿಷವನ್ನು ಇವನ ಮೇಲೆ ಎರಚು. ಪಾಂಡವರ ಅನರ್ಥಗಳಿಗೆ ಈ ಮಹಾರಥನೇ ಮೂಲ.
07077006a ಸೋಽಯಂ ಪ್ರಾಪ್ತಸ್ತವಾಕ್ಷೇಪಂ ಪಶ್ಯ ಸಾಫಲ್ಯಮಾತ್ಮನಃ।
07077006c ಕಥಂ ಹಿ ರಾಜಾ ರಾಜ್ಯಾರ್ಥೀ ತ್ವಯಾ ಗಚ್ಚೇತ ಸಮ್ಯುಗಂ।।
ಈಗ ಇವನು ನಿನ್ನ ಬಾಣಗಳ ಸಿಲುಕಿನಲ್ಲಿಯೇ ಇದ್ದಾನೆ. ನೋಡು. ನಿನ್ನನ್ನು ನೀನೇ ಸಾಫಲ್ಯನಾಗಿಸಿಕೋ! ರಾಜ್ಯವನ್ನು ಬಯಸುವ ಈ ರಾಜನು ರಣದಲ್ಲಿ ನಿನ್ನ ಎದುರಿಗೆ ಏಕೆ ಬಂದಿದ್ದಾನೆ?
07077007a ದಿಷ್ಟ್ಯಾ ತ್ವಿದಾನೀಂ ಸಂಪ್ರಾಪ್ತ ಏಷ ತೇ ಬಾಣಗೋಚರಂ।
07077007c ಸ ಯಥಾ ಜೀವಿತಂ ಜಹ್ಯಾತ್ತಥಾ ಕುರು ಧನಂಜಯ।।
ಅದೃಷ್ಟ! ಇಂದು ಇವನು ನಿನ್ನ ಬಾಣಗಳಿಗೆ ಗೋಚರನಾಗಿ ಒದಗಿದ್ದಾನೆ. ಧನಂಜಯ! ಅವನ ಜೀವಿತವನ್ನು ಅಪಹರಿಸುವಂತೆ ಮಾಡು.
07077008a ಐಶ್ವರ್ಯಮದಸಮ್ಮೂಢೋ ನೈಷ ದುಃಖಮುಪೇಯಿವಾನ್।
07077008c ನ ಚ ತೇ ಸಮ್ಯುಗೇ ವೀರ್ಯಂ ಜಾನಾತಿ ಪುರುಷರ್ಷಭ।।
ಪುರುಷರ್ಷಭ! ಐಶ್ವರ್ಯ ಮದದಿಂದ ಸಮ್ಮೂಢನಾಗಿರುವ ಇವನು ದುಃಖವೆನ್ನುವುದನ್ನೇ ಅನುಭವಿಸಿಲ್ಲ. ಅವನು ಸಂಯುಗದಲ್ಲಿ ನಿನ್ನ ವೀರ್ಯವನ್ನೂ ತಿಳಿದಿಲ್ಲ.
07077009a ತ್ವಾಂ ಹಿ ಲೋಕಾಸ್ತ್ರಯಃ ಪಾರ್ಥ ಸಸುರಾಸುರಮಾನುಷಾಃ।
07077009c ನೋತ್ಸಹಂತೇ ರಣೇ ಜೇತುಂ ಕಿಮುತೈಕಃ ಸುಯೋಧನಃ।।
ಪಾರ್ಥ! ಸುರಾಸುರಮನುಷ್ಯರೊಡನೆ ಮೂರು ಲೋಕಗಳೂ ರಣದಲ್ಲಿ ನಿನ್ನನ್ನು ಜಯಿಸಲು ಉತ್ಸುಕರಾಗುವುದಿಲ್ಲ. ಇನ್ನು ಒಬ್ಬ ಸುಯೋಧನನೆಲ್ಲಿ?
07077010a ಸ ದಿಷ್ಟ್ಯಾ ಸಮನುಪ್ರಾಪ್ತಸ್ತವ ಪಾರ್ಥ ರಥಾಂತಿಕಂ।
07077010c ಜಹ್ಯೇನಂ ವೈ ಮಹಾಬಾಹೋ ಯಥಾ ವೃತ್ರಂ ಪುರಂದರಃ।।
ಒಳ್ಳೆಯದಾಯಿತು ಪಾರ್ಥ! ಇವನು ನಿನ್ನ ರಥದ ಬಳಿ ಬಂದೊದಗಿದ್ದಾನೆ! ಮಹಾಬಾಹೋ! ಪುರಂದರನು ವೃತ್ರನನ್ನು ಹೇಗೋ ಹಾಗೆ ಇವನನ್ನು ಸಂಹರಿಸು!
07077011a ಏಷ ಹ್ಯನರ್ಥೇ ಸತತಂ ಪರಾಕ್ರಾಂತಸ್ತವಾನಘ।
07077011c ನಿಕೃತ್ಯಾ ಧರ್ಮರಾಜಂ ಚ ದ್ಯೂತೇ ವಂಚಿತವಾನಯಂ।।
ಅನಘ! ಇವನು ಸತತವೂ ನಿಮಗೆ ಅನರ್ಥವನ್ನುಂಟುಮಾಡಲು ಮುಂದಿದ್ದವನು. ಮೋಸದಿಂದ ಇವನು ದ್ಯೂತದಲ್ಲಿ ಧರ್ಮರಾಜನನ್ನು ವಂಚಿಸಿದನು.
07077012a ಬಹೂನಿ ಸುನೃಶಂಸಾನಿ ಕೃತಾನ್ಯೇತೇನ ಮಾನದ।
07077012c ಯುಷ್ಮಾಸು ಪಾಪಮತಿನಾ ಅಪಾಪೇಷ್ವೇವ ನಿತ್ಯದಾ।।
ಮಾನದ! ಅಪಾಪಿಗಳಾದ ನಿಮ್ಮ ಮೇಲೆ ಪಾಪಮತಿಯಾದ ಇವನು ನಿತ್ಯವೂ ಅನೇಕ ಅತಿಕ್ರೂರ ಕೃತ್ಯಗಳನ್ನು ಮಾಡುತ್ತಾ ಬಂದಿದ್ದಾನೆ.
07077013a ತಮನಾರ್ಯಂ ಸದಾ ಕ್ಷುದ್ರಂ ಪುರುಷಂ ಕಾಮಚಾರಿಣಂ।
07077013c ಆರ್ಯಾಂ ಯುದ್ಧೇ ಮತಿಂ ಕೃತ್ವಾ ಜಹಿ ಪಾರ್ಥಾವಿಚಾರಯನ್।।
ಪಾರ್ಥ! ಯುದ್ಧದಲ್ಲಿ ಆರ್ಯನಂತೆ ನಿಶ್ಚಯವನ್ನು ಮಾಡಿ, ವಿಚಾರಮಾಡದೇ ಈ ಅನಾರ್ಯ, ಸದಾ ಕ್ಷುದ್ರನಾಗಿರುವ, ಬೇಕಾದಂತೆ ನಡೆದುಕೊಳ್ಳುವ ಪುರುಷನನ್ನು ಸಂಹರಿಸು!
07077014a ನಿಕೃತ್ಯಾ ರಾಜ್ಯಹರಣಂ ವನವಾಸಂ ಚ ಪಾಂಡವ।
07077014c ಪರಿಕ್ಲೇಶಂ ಚ ಕೃಷ್ಣಾಯಾ ಹೃದಿ ಕೃತ್ವಾ ಪರಾಕ್ರಮ।।
ಪಾಂಡವ! ಮೋಸದಿಂದ ರಾಜ್ಯಹರಣ, ವನವಾಸ, ಕೃಷ್ಣೆಯ ಪರಿಕ್ಲೇಶ ಇವುಗಳನ್ನು ಹೃದಯದಲ್ಲಿಟ್ಟುಕೊಂಡು ಪರಾಕ್ರಮವನ್ನು ತೋರಿಸು!
07077015a ದಿಷ್ಟ್ಯೈಷ ತವ ಬಾಣಾನಾಂ ಗೋಚರೇ ಪರಿವರ್ತತೇ।
07077015c ಪ್ರತಿಘಾತಾಯ ಕಾರ್ಯಸ್ಯ ದಿಷ್ಟ್ಯಾ ಚ ಯತತೇಽಗ್ರತಃ।।
ಅದೃಷ್ಟವಶಾತ್ ಅವನು ನಿನ್ನ ಬಾಣಗಳಿಗೆ ಗೋಚರಿಸಿಯೇ ಇದ್ದಾನೆ. ಇನ್ನೂ ಅದೃಷ್ಟವೆಂದರೆ ಅವನು ನಿನ್ನ ಕಾರ್ಯಕ್ಕೆ ವಿಘ್ನವನ್ನುಂಟು ಮಾಡಲು ನಿನ್ನ ಎದುರಿಗೇ ಬಂದು ನಿಂತಿದ್ದಾನೆ.
07077016a ದಿಷ್ಟ್ಯಾ ಜಾನಾತಿ ಸಂಗ್ರಾಮೇ ಯೋದ್ಧವ್ಯಂ ಹಿ ತ್ವಯಾ ಸಹ।
07077016c ದಿಷ್ಟ್ಯಾ ಚ ಸಫಲಾಃ ಪಾರ್ಥ ಸರ್ವೇ ಕಾಮಾ ಹಿ ಕಾಮಿತಾಃ।।
ಅದೃಷ್ಟವಶಾತ್ ಅವನು ಸಂಗ್ರಾಮದಲ್ಲಿ ನಿನ್ನೊಡನೆ ಯುದ್ಧಮಾಡಬೇಕೆಂದು ತಿಳಿದುಕೊಂಡೇ ಬಂದಿದ್ದಾನೆ. ಪಾರ್ಥ! ಅದೃಷ್ಟವೆಂದರೆ ನೀನು ಬಯಸದೇ ಇದ್ದಿದ್ದರೂ ನಿನ್ನ ಬಯಕೆಗಳನ್ನು ಪೂರೈಸುವ ಸಮಯವು ಬಂದೊದಗಿದೆ.
07077017a ತಸ್ಮಾಜ್ಜಹಿ ರಣೇ ಪಾರ್ಥ ಧಾರ್ತರಾಷ್ಟ್ರಂ ಕುಲಾಧಮಂ।
07077017c ಯಥೇಂದ್ರೇಣ ಹತಃ ಪೂರ್ವಂ ಜಂಭೋ ದೇವಾಸುರೇ ಮೃಧೇ।।
ಹಿಂದೆ ದೇವಾಸುರರ ಯುದ್ಧದಲ್ಲಿ ಇಂದ್ರನು ಜಂಭಾಸುರನನ್ನು ಹೇಗೆ ಕೊಂದನೋ ಹಾಗೆ ಪಾರ್ಥ! ನೀನು ರಣದಲ್ಲಿ ಈ ಕುಲಾಧಮ ಧಾರ್ತರಾಷ್ಟ್ರನನ್ನು ಸಂಹರಿಸು.
07077018a ಅಸ್ಮಿನ್ ಹತೇ ತ್ವಯಾ ಸೈನ್ಯಮನಾಥಂ ಭಿದ್ಯತಾಮಿದಂ।
07077018c ವೈರಸ್ಯಾಸ್ಯಾಸ್ತ್ವವಭೃಥೋ ಮೂಲಂ ಚಿಂಧಿ ದುರಾತ್ಮನಾಂ।।
ಇವನು ಹತನಾಗಲು ನೀನು ಈ ಅನಾಧ ಸೇನೆಯನ್ನೂ ಭೇದಿಸು. ದುರಾತ್ಮರ ಮೂಲವಾಗಿರುವ ಇವನನ್ನು ಚಿಂದಿ ಚಿಂದಿ ಮಾಡಿ ವೈರದ ಅವಭೃತಸ್ನಾನವನ್ನು ಮಾಡು!””
07077019 ಸಂಜಯ ಉವಾಚ।
07077019a ತಂ ತಥೇತ್ಯಬ್ರವೀತ್ಪಾರ್ಥಃ ಕೃತ್ಯರೂಪಮಿದಂ ಮಮ।
07077019c ಸರ್ವಮನ್ಯದನಾದೃತ್ಯ ಗಚ್ಚ ಯತ್ರ ಸುಯೋಧನಃ।।
ಸಂಜಯನು ಹೇಳಿದನು: “ಹಾಗೆಯೇ ಆಗಲೆಂದು ಪಾರ್ಥನು ಹೇಳಿದನು: “ನಾನು ಮಾಡಿ ತೋರಿಸಬೇಕಾದುದು ಇದು. ಬೇರೆ ಎಲ್ಲರನ್ನೂ ಕಡೆಗಣಿಸಿ ಸುಯೋಧನನಿರುವಲ್ಲಿಗೆ ಹೋಗು.
07077020a ಯೇನೈತದ್ದೀರ್ಘಕಾಲಂ ನೋ ಭುಕ್ತಂ ರಾಜ್ಯಮಕಂಟಕಂ।
07077020c ಅಪ್ಯಸ್ಯ ಯುಧಿ ವಿಕ್ರಮ್ಯ ಚಿಂದ್ಯಾಂ ಮೂರ್ಧಾನಮಾಹವೇ।।
ದೀರ್ಘಕಾಲದವರೆಗೆ ಯಾವ ಕಂಟಕವೂ ಇಲ್ಲದೇ ನಮ್ಮ ರಾಜ್ಯವನ್ನು ಭೋಗಿಸಿದ ಇವನನ್ನು ರಣಮೂರ್ಧನಿಯಲ್ಲಿ ಯುದ್ಧದಲ್ಲಿ ವಿಕ್ರಮದಿಂದ ಕತ್ತರಿಸಿಬಿಡುತ್ತೇನೆ.
07077021a ಅಪಿ ತಸ್ಯಾ ಅನರ್ಹಾಯಾಃ ಪರಿಕ್ಲೇಶಸ್ಯ ಮಾಧವ।
07077021c ಕೃಷ್ಣಾಯಾಃ ಶಕ್ನುಯಾಂ ಗಂತುಂ ಪದಂ ಕೇಶಪ್ರಧರ್ಷಣೇ।।
ಮಾಧವ! ಕಷ್ಟಗಳಿಗೆ ಅನರ್ಹಳಾಗಿದ್ದ ಕೃಷ್ಣೆಯ ಕೂದಲನ್ನೆಳೆದುದರ ಪ್ರತೀಕಾರವನ್ನು ನಾನು ಮಾಡಬಲ್ಲೆನೇ?”
07077022a ಇತ್ಯೇವಂ ವಾದಿನೌ ಹೃಷ್ಟೌ ಕೃಷ್ಣೌ ಶ್ವೇತಾನ್ ಹಯೋತ್ತಮಾನ್।
07077022c ಪ್ರೇಷಯಾಮಾಸತುಃ ಸಂಖ್ಯೇ ಪ್ರೇಪ್ಸಂತೌ ತಂ ನರಾಧಿಪಂ।।
ಕೃಷ್ಣಬ್ಬರೂ ಹೃಷ್ಟರಾಗಿ ಹೀಗೆ ಮಾತನಾಡಿಕೊಳ್ಳುತ್ತಾ ಆ ಉತ್ತಮ ಶ್ವೇತಾಶ್ವಗಳನ್ನು ರಣದಲ್ಲಿ ಆ ನರಾಧಿಪನನ್ನೇ ತಮ್ಮ ಲಕ್ಷ್ಯವನ್ನಾಗಿರಿಸಿಕೊಳ್ಳಲು ಅವನಲ್ಲಿಗೆ ಹೋದರು.
07077023a ತಯೋಃ ಸಮೀಪಂ ಸಂಪ್ರಾಪ್ಯ ಪುತ್ರಸ್ತೇ ಭರತರ್ಷಭ।
07077023c ನ ಚಕಾರ ಭಯಂ ಪ್ರಾಪ್ತೇ ಭಯೇ ಮಹತಿ ಮಾರಿಷ।।
ಭರತರ್ಷಭ! ಮಾರಿಷ! ಅವರು ಸಮೀಪಕ್ಕೆ ಬರಲು ನಿನ್ನ ಮಗನು ಮಹಾ ಭಯವು ಪ್ರಾಪ್ತವಾದರೂ ಸ್ವಲ್ಪವೂ ಭಯಪಡಲಿಲ್ಲ.
07077024a ತದಸ್ಯ ಕ್ಷತ್ರಿಯಾಸ್ತತ್ರ ಸರ್ವ ಏವಾಭ್ಯಪೂಜಯನ್।
07077024c ಯದರ್ಜುನಹೃಷೀಕೇಶೌ ಪ್ರತ್ಯುದ್ಯಾತೋಽವಿಚಾರಯನ್।।
ಎದುರಾಗಿ ಬಂದಿರುವ ಅರ್ಜುನ-ಹೃಷೀಕೇಶರನ್ನು ವಿಚಾರ ಮಾಡದೇ ಎದುರಿಸಿದ ಅವನನ್ನು ಅಲ್ಲಿದ್ದ ಕ್ಷತ್ರಿಯರೆಲ್ಲರೂ ಪ್ರಶಂಸಿಸಿದರು.
07077025a ತತಃ ಸರ್ವಸ್ಯ ಸೈನ್ಯಸ್ಯ ತಾವಕಸ್ಯ ವಿಶಾಂ ಪತೇ।
07077025c ಮಹಾನ್ನಾದೋ ಹ್ಯಭೂತ್ತತ್ರ ದೃಷ್ಟ್ವಾ ರಾಜಾನಮಾಹವೇ।।
ವಿಶಾಂಪತೇ! ರಣದಲ್ಲಿ ರಾಜನನ್ನು ನೋಡಿ ನಿನ್ನ ಸೈನ್ಯಗಳಲೆಲ್ಲಾ ಮಹಾನಾದವುಂಟಾಯಿತು.
07077026a ತಸ್ಮಿನ್ಜನಸಮುನ್ನಾದೇ ಪ್ರವೃತ್ತೇ ಭೈರವೇ ಸತಿ।
07077026c ಕದರ್ಥೀಕೃತ್ಯ ತೇ ಪುತ್ರಃ ಪ್ರತ್ಯಮಿತ್ರಮವಾರಯತ್।।
ಹೀಗೆ ಜನರು ಭಯಂಕರ ಕೋಲಾಹಲವನ್ನು ಮಾಡುತ್ತಿರಲು ನಿನ್ನ ಮಗನು ಅಮಿತ್ರರನ್ನು ಕಡೆಗಣಿಸಿ ಎದುರಿಸಿ ತಡೆದನು.
07077027a ಆವಾರಿತಸ್ತು ಕೌಂತೇಯಸ್ತವ ಪುತ್ರೇಣ ಧನ್ವಿನಾ।
07077027c ಸಂರಂಭಮಗಮದ್ಭೂಯಃ ಸ ಚ ತಸ್ಮಿನ್ಪರಂತಪಃ।।
ನಿನ್ನ ಮಗ ಧನ್ವಿಯಿಂದ ತಡೆಯಲ್ಪಟ್ಟ ಪರಂತಪ ಕೌಂತೇಯನು ಅತ್ಯಂತ ಕುಪಿತನಾದನು.
07077028a ತೌ ದೃಷ್ಟ್ವಾ ಪ್ರತಿಸಂರಬ್ಧೌ ದುರ್ಯೋಧನಧನಂಜಯೌ।
07077028c ಅಭ್ಯವೈಕ್ಷಂತ ರಾಜಾನೋ ಭೀಮರೂಪಾಃ ಸಮಂತತಃ।।
ದುರ್ಯೋಧನ-ಧನಂಜಯರು ಪರಸ್ಪರ ಮೇಲೆ ಕುಪಿತರಾದದನ್ನು ಸುತ್ತಲಿದ್ದ ಭೀಮರೂಪದ ರಾಜರು ನೋಡಿದರು.
07077029a ದೃಷ್ಟ್ವಾ ತು ಪಾರ್ಥಂ ಸಂರಬ್ಧಂ ವಾಸುದೇವಂ ಚ ಮಾರಿಷ।
07077029c ಪ್ರಹಸನ್ನಿವ ಪುತ್ರಸ್ತೇ ಯೋದ್ಧುಕಾಮಃ ಸಮಾಹ್ವಯತ್।।
ಮಾರಿಷ! ಕೃದ್ಧರಾಗಿರುವ ಪಾರ್ಥನನ್ನೂ ವಾಸುದೇವನನ್ನೂ ನೋಡಿ ನಿನ್ನ ಮಗನು ಜೋರಾಗಿ ನಕ್ಕು, ಯುದ್ಧಮಾಡಲು ಬಯಸಿ ಆಹ್ವಾನಿಸಿದನು.
07077030a ತತಃ ಪ್ರಹೃಷ್ಟೋ ದಾಶಾರ್ಹಃ ಪಾಂಡವಶ್ಚ ಧನಂಜಯಃ।
07077030c ವ್ಯಾಕ್ರೋಶೇತಾಂ ಮಹಾನಾದಂ ದಧ್ಮತುಶ್ಚಾಂಬುಜೋತ್ತಮೌ।।
ಆಗ ಪ್ರಹೃಷ್ಟರಾದ ದಾಶಾರ್ಹ ಮತ್ತು ಪಾಂಡವ ಧನಂಜಯರು ಮಹಾ ಸಿಂಹನಾದ ಮಾಡಿದರು ಮತ್ತು ಉತ್ತಮ ಶಂಖಗಳನ್ನು ಊದಿದರು.
07077031a ತೌ ಹೃಷ್ಟರೂಪೌ ಸಂಪ್ರೇಕ್ಷ್ಯ ಕೌರವೇಯಾಶ್ಚ ಸರ್ವಶಃ।
07077031c ನಿರಾಶಾಃ ಸಮಪದ್ಯಂತ ಪುತ್ರಸ್ಯ ತವ ಜೀವಿತೇ।।
ಹೃಷ್ಟರೂಪರಾದ ಅವರನ್ನು ನೋಡಿ ಕೌರವೇಯರೆಲ್ಲರು ನಿನ್ನ ಮಗನ ಜೀವಿತದ ಕುರಿತು ನಿರಾಶರಾದರು.
07077032a ಶೋಕಮೀಯುಃ ಪರಂ ಚೈವ ಕುರವಃ ಸರ್ವ ಏವ ತೇ।
07077032c ಅಮನ್ಯಂತ ಚ ಪುತ್ರಂ ತೇ ವೈಶ್ವಾನರಮುಖೇ ಹುತಂ।।
ಇತರರು ಕೂಡ ಶೋಕಿತರಾದರು. ನಿನ್ನ ಮಗನು ರಣಯಜ್ಞದ ವೈಶ್ವಾನರನಲ್ಲಿ ಆಹುತಿಯಾದನೆಂದೇ ಅವರೆಲ್ಲರೂ ಪರಿಗಣಿಸಿದರು.
07077033a ತಥಾ ತು ದೃಷ್ಟ್ವಾ ಯೋಧಾಸ್ತೇ ಪ್ರಹೃಷ್ಟೌ ಕೃಷ್ಣಪಾಂಡವೌ।
07077033c ಹತೋ ರಾಜಾ ಹತೋ ರಾಜೇತ್ಯೂಚುರೇವಂ ಭಯಾರ್ದಿತಾಃ।।
ಪ್ರಹೃಷ್ಟರಾದ ಕೃಷ್ಣ-ಪಾಂಡವರನ್ನು ನೋಡಿ ನಿನ್ನ ಯೋಧರು ಭಯಾದಿತರಾಗಿ “ರಾಜನು ಹತನಾದ! ರಾಜನು ಹತನಾದ!” ಎಂದೂ ಕೂಗತೊಡಗಿದರು.
07077034a ಜನಸ್ಯ ಸಮ್ನಿನಾದಂ ತು ಶ್ರುತ್ವಾ ದುರ್ಯೋಧನೋಽಬ್ರವೀತ್।
07077034c ವ್ಯೇತು ವೋ ಭೀರಹಂ ಕೃಷ್ಣೌ ಪ್ರೇಷಯಿಷ್ಯಾಮಿ ಮೃತ್ಯವೇ।।
ಜನರ ಆ ಕೋಲಾಹಲವನ್ನು ಕೇಳಿ ದುರ್ಯೋಧನನು ಅವರಿಗೆ “ಹೆದರಬೇಡಿ! ಕೃಷ್ಣರಿಬ್ಬರನ್ನೂ ನಾನು ಮೃತ್ಯುವಿಗೆ ಕಳುಹಿಸುತ್ತೇನೆ.” ಎಂದು ಹೇಳಿದನು.
07077035a ಇತ್ಯುಕ್ತ್ವಾ ಸೈನಿಕಾನ್ಸರ್ವಾನ್ಜಯಾಪೇಕ್ಷೀ ನರಾಧಿಪಃ।
07077035c ಪಾರ್ಥಮಾಭಾಷ್ಯ ಸಂರಂಭಾದಿದಂ ವಚನಮಬ್ರವೀತ್।।
ಹೀಗೆ ಸೈನಿಕರೆಲ್ಲರಿಗೆ ಹೇಳಿ ಜಯಾಪೇಕ್ಷೀ ನರಾಧಿಪನು ಕೋಪದಿಂದ ಪಾರ್ಥನಿಗೆ ಈ ಮಾತನ್ನಾಡಿದನು:
07077036a ಪಾರ್ಥ ಯಚ್ಚಿಕ್ಷಿತಂ ತೇಽಸ್ತ್ರಂ ದಿವ್ಯಂ ಮಾನುಷಮೇವ ಚ।
07077036c ತದ್ದರ್ಶಯ ಮಯಿ ಕ್ಷಿಪ್ರಂ ಯದಿ ಜಾತೋಽಸಿ ಪಾಂಡುನಾ।।
“ಪಾರ್ಥ! ನೀನು ಪಾಂಡುವಿಗೇ ಹುಟ್ಟಿದವನಾಗಿದ್ದರೆ ನೀನು ಕಲಿತಿರುವ ದಿವ್ಯವಾದ ಮತ್ತು ಮಾನುಷ ಅಸ್ತ್ರಗಳನ್ನು ನನಗೆ ಬೇಗನೇ ತೋರಿಸು!
07077037a ಯದ್ಬಲಂ ತವ ವೀರ್ಯಂ ಚ ಕೇಶವಸ್ಯ ತಥೈವ ಚ।
07077037c ತತ್ಕುರುಷ್ವ ಮಯಿ ಕ್ಷಿಪ್ರಂ ಪಶ್ಯಾಮಸ್ತವ ಪೌರುಷಂ।।
ನಿನ್ನಲ್ಲಿ ಮತ್ತು ಹಾಗೆಯೇ ಕೇಶವನಲ್ಲಿ ಎಷ್ಟು ಬಲ-ವೀರ್ಯಗಳಿವೆಯೋ ಬೇಗನೆ ನನ್ನ ಎದಿರು ಮಾಡಿ ತೋರಿಸು. ನಿನ್ನ ಪೌರುಷವನ್ನು ನೋಡುತ್ತೇನೆ!
07077038a ಅಸ್ಮತ್ಪರೋಕ್ಷಂ ಕರ್ಮಾಣಿ ಪ್ರವದಂತಿ ಕೃತಾನಿ ತೇ।
07077038c ಸ್ವಾಮಿಸತ್ಕಾರಯುಕ್ತಾನಿ ಯಾನಿ ತಾನೀಹ ದರ್ಶಯ।।
ಪರೋಕ್ಷವಾಗಿ ನೀನು ಮಾಡಿದ ಕರ್ಮಗಳ ಕುರಿತು ಹೇಳಿದುದನ್ನು ಕೇಳಿದ್ದೇನೆ. ಸ್ವಾಮಿಯ ಸತ್ಕಾರಗಳಿಗೆ ಯೋಗ್ಯವಾದ ಅವುಗಳನ್ನು ಇಲ್ಲಿಯೂ ಪ್ರದರ್ಶಿಸು!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ದುರ್ಯೋಧನವಚನೇ ಸಪ್ತಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ದುರ್ಯೋಧನವಚನ ಎನ್ನುವ ಎಪ್ಪತ್ತೇಳನೇ ಅಧ್ಯಾಯವು.