ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 76
ಸಾರ
ದ್ರೋಣ-ಕೃತವರ್ಮರ ಸೇನೆಗಳನ್ನು ದಾಟಿ ಕೃಷ್ಣಾರ್ಜುನರು ಮುಂದುವರೆದು ಸೈಂಧವನ ಹತ್ತಿರ ಬಂದುದು (1-35). ದ್ರೋಣನಿಂದ ಕವಚವನ್ನು ಪಡೆದಿದ್ದ ದುರ್ಯೋಧನನು ಕೃಷ್ಣಾರ್ಜುನರನ್ನು ಆಕ್ರಮಣಿಸಿದುದು (36-42).
07076001 ಸಂಜಯ ಉವಾಚ।
07076001a ಸ್ರಂಸಂತ ಇವ ಮಜ್ಜಾನಸ್ತಾವಕಾನಾಂ ಭಯಾನ್ನೃಪ।
07076001c ತೌ ದೃಷ್ಟ್ವಾ ಸಮತಿಕ್ರಾಂತೌ ವಾಸುದೇವಧನಂಜಯೌ।।
ಸಂಜಯನು ಹೇಳಿದನು: “ನೃಪ! ವಾಸುದೇವ-ಧನಂಜಯರಿಬ್ಬರೂ ದಾಟಿ ಹೋದುದನ್ನು ನೋಡಿ ನಿನ್ನವರು ಭಯದಿಂದ ಓಡಿಹೋದರು.
07076002a ಸರ್ವೇ ತು ಪ್ರತಿಸಂರಬ್ಧಾ ಹ್ರೀಮಂತಃ ಸತ್ತ್ವಚೋದಿತಾಃ।
07076002c ಸ್ಥಿರೀಬೂತಾ ಮಹಾತ್ಮಾನಃ ಪ್ರತ್ಯಗಚ್ಚನ್ಧನಂಜಯಂ।।
ಆದರೆ ಸತ್ತ್ವಚೋದಿತರಾದ ಮಹಾತ್ಮರು ಗಾಬರಿಗೊಳ್ಳದೇ ನಾಚಿಕೆಗೊಂಡು ಮನಸ್ಸನ್ನು ಸ್ಥಿರಗೊಳಿಸಿಕೊಂಡು ಧನಂಜಯನ ಹಿಂದೆ ಹೋದರು.
07076003a ಯೇ ಗತಾಃ ಪಾಂಡವಂ ಯುದ್ಧೇ ಕ್ರೋಧಾಮರ್ಷಸಮನ್ವಿತಾಃ।
07076003c ತೇಽದ್ಯಾಪಿ ನ ನಿವರ್ತಂತೇ ಸಿಂಧವಃ ಸಾಗರಾದಿವ।।
ಆದರೆ ಕ್ರೋಧ ಮತ್ತು ಅಸಹನೆಗಳೊಂದೊಡಗೂಡಿ ಯುದ್ಧದಲ್ಲಿ ಪಾಂಡವನ ಹಿಂದೆ ಹೋದವರು ಸಾಗರದಿಂದ ನದಿಗಳು ಹೇಗೋ ಹಾಗೆ ಹಿಂದಿರುಗಿ ಬರಲೇ ಇಲ್ಲ.
07076004a ಅಸಂತಸ್ತು ನ್ಯವರ್ತಂತ ವೇದೇಭ್ಯ ಇವ ನಾಸ್ತಿಕಾಃ।
07076004c ನರಕಂ ಭಜಮಾನಾಸ್ತೇ ಪ್ರತ್ಯಪದ್ಯಂತ ಕಿಲ್ಬಿಷಂ।।
ಆದರೆ ಅಸಂತರು ನಾಸ್ತಿಕರು ವೇದದಿಂದ ಹಿಂದೆಸರಿಯುವಂತೆ ರಣದಿಂದ ಹಿಂದೆ ಸರಿದು ನರಕವನ್ನು ಆರಿಸಿಕೊಂಡರು ಮತ್ತು ಪಾಪವನ್ನು ಕಟ್ಟಿಕೊಂಡರು.
07076005a ತಾವತೀತ್ಯ ರಥಾನೀಕಂ ವಿಮುಕ್ತೌ ಪುರುಷರ್ಷಭೌ।
07076005c ದದೃಶಾತೇ ಯಥಾ ರಾಹೋರಾಸ್ಯಾನ್ಮುಕ್ತೌ ಪ್ರಭಾಕರೌ।।
ಅವರಿಬ್ಬರು ಪುರುಷರ್ಷಭರೂ ರಥಸೇನೆಯಿಂದ ವಿಮುಕ್ತರಾಗಿ ರಾಹುವಿನ ಬಾಯಿಯಿಂದ ಹೊರಬಂದ ಇಬ್ಬರು ಸೂರ್ಯರಂತೆ ಪ್ರಕಾಶಿಸಿದರು.
07076006a ಮತ್ಸ್ಯಾವಿವ ಮಹಾಜಾಲಂ ವಿದಾರ್ಯ ವಿಗತಜ್ವರೌ।
07076006c ತಥಾ ಕೃಷ್ಣಾವದೃಶ್ಯೇತಾಂ ಸೇನಾಜಾಲಂ ವಿದಾರ್ಯ ತತ್।।
ಕೃಷ್ಣರಿಬ್ಬರೂ ಆ ಸೇನಾಜಾಲದಿಂದ ತಪ್ಪಿಸಿಕೊಂಡು ಹೊರಬಂದಾಗ ಮಹಾಜಾಲದಿಂದ ತಪ್ಪಿಸಿಕೊಂಡ ಮೀನುಗಳಂತೆ ವಿಗತಜ್ವರರಾಗಿ ತೋರಿದರು.
07076007a ವಿಮುಕ್ತೌ ಶಸ್ತ್ರಸಂಬಾಧಾದ್ದ್ರೋಣಾನೀಕಾತ್ಸುದುರ್ಭಿದಾತ್।
07076007c ಅದೃಶ್ಯೇತಾಂ ಮಹಾತ್ಮಾನೌ ಕಾಲಸೂರ್ಯಾವಿವೋದಿತೌ।।
ದುರ್ಭೇದ್ಯವಾಗಿದ್ದ ಶಸ್ತ್ರಗಳಿಂದ ದಟ್ಟವಾಗಿದ್ದ ದ್ರೋಣನ ಸೇನೆಯಿಂದ ಹೊರಬಂದ ಆ ಮಹಾತ್ಮರು ಉದಿಸುತ್ತಿರುವ ಕಾಲಸೂರ್ಯರಂತೆ ಕಂಡುಬಂದರು.
07076008a ಅಸ್ತ್ರಸಂಬಾಧನಿರ್ಮುಕ್ತೌ ವಿಮುಕ್ತೌ ಶಸ್ತ್ರಸಂಕಟಾತ್।
07076008c ಅದೃಶ್ಯೇತಾಂ ಮಹಾತ್ಮಾನೌ ಶತ್ರುಸಂಬಾಧಕಾರಿಣೌ।।
07076009a ವಿಮುಕ್ತೌ ಜ್ವಲನಸ್ಪರ್ಶಾನ್ಮಕರಾಸ್ಯಾಜ್ಝುಷಾವಿವ।
07076009c ವ್ಯಕ್ಷೋಭಯೇತಾಂ ಸೇನಾಂ ತೌ ಸಮುದ್ರಂ ಮಕರಾವಿವ।।
ಅಸ್ತ್ರಗಳ ಬಾಧೆಗಳಿಂದ ನಿರ್ಮುಕ್ತರಾದ, ಶಸ್ತ್ರಸಂಕಟದಿಂದ ವಿಮುಕ್ತರಾದ, ಸ್ವತಃ ಶತ್ರುಗಳನ್ನು ಬಾಧೆಗೊಳಿಸಿದ ಆ ಮಹಾತ್ಮರಿಬ್ಬರೂ ಮುಟ್ಟಿದರೆ ಉರಿಯುವ ಮಕರದ ದವಡೆಗಳಿಂದ ತಪ್ಪಿಸಿಕೊಂಡು ಬಂದವರಂತೆ ಕಂಡರು. ಅವರಿಬ್ಬರೂ ಸೇನೆಯೆಂಬ ಸಮುದ್ರವನ್ನು ಮಕರಗಳಂತೆ ಕ್ಷೋಭೆಗೊಳಿಸಿದ್ದರು.
07076010a ತಾವಕಾಸ್ತವ ಪುತ್ರಾಶ್ಚ ದ್ರೋಣಾನೀಕಸ್ಥಯೋಸ್ತಯೋಃ।
07076010c ನೈತೌ ತರಿಷ್ಯತೋ ದ್ರೋಣಮಿತಿ ಚಕ್ರುಸ್ತದಾ ಮತಿಂ।।
ಅವರಿಬ್ಬರೂ ದ್ರೋಣನ ಸೇನೆಯ ಮಧ್ಯದಲ್ಲಿದ್ದಾಗ ನಿನ್ನವರು ಮತ್ತು ನಿನ್ನ ಮಕ್ಕಳು ಅವರು ದ್ರೋಣನನ್ನು ದಾಟಿ ಬರುವುದಿಲ್ಲವೆಂದು ಅಂದುಕೊಂಡಿದ್ದರು.
07076011a ತೌ ತು ದೃಷ್ಟ್ವಾ ವ್ಯತಿಕ್ರಾಂತೌ ದ್ರೋಣಾನೀಕಂ ಮಹಾದ್ಯುತೀ।
07076011c ನಾಶಶಂಸುರ್ಮಹಾರಾಜ ಸಿಂಧುರಾಜಸ್ಯ ಜೀವಿತಂ।।
ಮಹಾರಾಜ! ಅವರಿಬ್ಬರು ಮಹಾದ್ಯುತಿ ದ್ರೋಣನ ಸೇನೆಯನ್ನು ಅತಿಕ್ರಮಿಸಿದುದನ್ನು ನೋಡಿ ಅವರು ಸಿಂಧುರಾಜನ ಜೀವಿತದ ಆಸೆಯನ್ನೇ ತೊರೆದರು.
07076012a ಆಶಾ ಬಲವತೀ ರಾಜನ್ಪುತ್ರಾಣಾಮಭವತ್ತವ।
07076012c ದ್ರೋಣಹಾರ್ದಿಕ್ಯಯೋಃ ಕೃಷ್ಣೌ ನ ಮೋಕ್ಷ್ಯೇತೇ ಇತಿ ಪ್ರಭೋ।।
ಪ್ರಭೋ! ರಾಜನ್! ಆಗ ದ್ರೋಣ ಮತ್ತು ಹಾರ್ದಿಕ್ಯರಿಂದ ಆ ಕೃಷ್ಣರಿಬ್ಬರೂ ಬಿಡುಗಡೆಹೊಂದುವುದಿಲ್ಲವೆಂದು ಅವರ ಬಲವಾದ ಆಶಯವಾಗಿತ್ತು.
07076013a ತಾಮಾಶಾಂ ವಿಫಲಾಂ ಕೃತ್ವಾ ನಿಸ್ತೀರ್ಣೌ ತೌ ಪರಂತಪೌ।
07076013c ದ್ರೋಣಾನೀಕಂ ಮಹಾರಾಜ ಭೋಜಾನೀಕಂ ಚ ದುಸ್ತರಂ।।
ಅವರ ಆಶಯವನ್ನು ವಿಫಲಗೊಳಿಸಿ ಆ ಇಬ್ಬರು ಪರಂತಪರೂ ದುಸ್ತರವಾದ ದ್ರೋಣನ ಸೇನೆಯನ್ನೂ ಭೋಜನ ಸೇನೆಯನ್ನೂ ದಾಟಿ ಬಂದಿದ್ದರು.
07076014a ಅಥ ದೃಷ್ಟ್ವಾ ವ್ಯತಿಕ್ರಾಂತೌ ಜ್ವಲಿತಾವಿವ ಪಾವಕೌ।
07076014c ನಿರಾಶಾಃ ಸಿಂಧುರಾಜಸ್ಯ ಜೀವಿತಂ ನಾಶಶಂಸಿರೇ।।
ಪ್ರಜ್ವಲಿಸುತ್ತಿರುವ ಪಾವಕರಂತೆ ಅವರಿಬ್ಬರೂ ಅತಿಕ್ರಮಿಸಿ ಬಂದುದನ್ನು ನೋಡಿ ನಿರಾಶರಾದ ಅವರು ಸಿಂಧುರಾಜನ ಜೀವಿತದ ಕುರಿತಾದ ಆಸೆಯನ್ನೇ ತೊರೆದರು.
07076015a ಮಿಥಶ್ಚ ಸಮಭಾಷೇತಾಮಭೀತೌ ಭಯವರ್ಧನೌ।
07076015c ಜಯದ್ರಥವಧೇ ವಾಚಸ್ತಾಸ್ತಾಃ ಕೃಷ್ಣಧನಂಜಯೌ।।
ಅಭೀತರಾದ ಭಯವರ್ಧನರಾದ ಕೃಷ್ಣ-ಧನಂಜಯರು ಆಗ ಜಯದ್ರಥನ ವಧೆಯ ಕುರಿತು ಮಾತನಾಡಿಕೊಂಡರು.
07076016a ಅಸೌ ಮಧ್ಯೇ ಕೃತಃ ಷಡ್ಭಿರ್ಧಾರ್ತರಾಷ್ಟ್ರೈರ್ಮಹಾರಥೈಃ।
07076016c ಚಕ್ಷುರ್ವಿಷಯಸಂಪ್ರಾಪ್ತೋ ನ ನೌ ಮೋಕ್ಷ್ಯತಿ ಸೈಂಧವಃ।।
“ಆರು ಧಾರ್ತರಾಷ್ಟ್ರರ ಮಧ್ಯೆ ಸೈಂಧವನಿದ್ದಾನೆ. ನನ್ನ ದೃಷ್ಟಿಗೆ ಸಿಲುಕಿದರೆ ಅವನು ಜೀವಂತ ಉಳಿಯಲಾರ!
07076017a ಯದ್ಯಸ್ಯ ಸಮರೇ ಗೋಪ್ತಾ ಶಕ್ರೋ ದೇವಗಣೈಃ ಸಹ।
07076017c ತಥಾಪ್ಯೇನಂ ಹನಿಷ್ಯಾವ ಇತಿ ಕೃಷ್ಣಾವಭಾಷತಾಂ।।
ಇಂದು ಸಮರದಲ್ಲಿ ಅವನನ್ನು ದೇವಗಣಗಳ ಸಹಿತ ಶಕ್ರನೇ ರಕ್ಷಿಸುತ್ತಿದ್ದರೂ ನಾವು ಅವನನ್ನು ಸಂಹರಿಸುತ್ತೇವೆ” ಎಂದು ಕೃಷ್ಣರು ಮಾತನಾಡಿಕೊಂಡರು.
07076018a ಇತಿ ಕೃಷ್ಣೌ ಮಹಾಬಾಹೂ ಮಿಥಃ ಕಥಯತಾಂ ತದಾ।
07076018c ಸಿಂಧುರಾಜಮವೇಕ್ಷಂತೌ ತತ್ಪುತ್ರಾಸ್ತವ ಶುಶ್ರುವುಃ।।
ಮಹಾಬಾಹೋ! ಹೀಗೆ ಕೃಷ್ಣರಿಬ್ಬರೂ ಸಿಂಧುರಾಜನನ್ನು ಹುಡುಕುತ್ತಾ ಮಾತನಾಡಿಕೊಳ್ಳಲು ನಿನ್ನ ಪುತ್ರರು ಅದನ್ನು ಕೇಳಿಸಿಕೊಂಡರು.
07076019a ಅತೀತ್ಯ ಮರುಧನ್ವೇವ ಪ್ರಯಾಂತೌ ತೃಷಿತೌ ಗಜೌ।
07076019c ಪೀತ್ವಾ ವಾರಿ ಸಮಾಶ್ವಸ್ತೌ ತಥೈವಾಸ್ತಾಮರಿಂದಮೌ।।
ಬಾಯಾರಿದ ಗಜಗಳೆರಡು ಮರುಭೂಮಿಯನ್ನು ದಾಟಿಬಂದು ನೀರನ್ನು ಕುಡಿದು ಪುನಃ ವಿಶ್ವಾಸಹೊಂದಿದವರಂತೆ ಆ ಇಬ್ಬರು ಅರಿಂದಮರೂ ಕಂಡರು.
07076020a ವ್ಯಾಘ್ರಸಿಂಹಗಜಾಕೀರ್ಣಾನತಿಕ್ರಮ್ಯೇವ ಪರ್ವತಾನ್।
07076020c ಅದೃಶ್ಯೇತಾಂ ಮಹಾಬಾಹೂ ಯಥಾ ಮೃತ್ಯುಜರಾತಿಗೌ।।
ಮಹಾಬಾಹೋ! ಮೃತ್ಯು-ವೃದ್ಧಾಪ್ಯಗಳನ್ನು ದಾಟಿದ ಅವರು ಹುಲಿ-ಸಿಂಹ-ಆನೆಗಳ ಗುಂಪುಗಳಿರುವ ಪರ್ವತಗಳನ್ನು ದಾಟಿಬಂದವರಂತೆ ತೋರಿದರು.
07076021a ತಥಾ ಹಿ ಮುಖವರ್ಣೋಽಯಮನಯೋರಿತಿ ಮೇನಿರೇ।
07076021c ತಾವಕಾ ದೃಶ್ಯ ಮುಕ್ತೌ ತೌ ವಿಕ್ರೋಶಂತಿ ಸ್ಮ ಸರ್ವತಃ।।
ಮುಕ್ತರಾದ ಅವರ ಭಯಂಕರ ಮುಖವರ್ಣವನ್ನು ನೋಡಿ ನಿನ್ನವರೆಲ್ಲರೂ ಎಲ್ಲಕಡೆಗಳಲ್ಲಿ ಕೂಗಿಕೊಂಡರು.
07076022a ದ್ರೋಣಾದಾಶೀವಿಷಾಕಾರಾಜ್ಜ್ವಲಿತಾದಿವ ಪಾವಕಾತ್।
07076022c ಅನ್ಯೇಭ್ಯಃ ಪಾರ್ಥಿವೇಭ್ಯಶ್ಚ ಭಾಸ್ವಂತಾವಿವ ಭಾಸ್ಕರೌ।।
ಪಾವಕನಂತೆ ಮತ್ತು ಘೋರ ಸರ್ಪದ ವಿಷದಂತೆ ಜ್ವಲಿಸುತ್ತಿದ್ದ ದ್ರೋಣನಿಂದ ಮತ್ತು ಇತರ ಪಾರ್ಥಿವರಿಂದ ಹೊರಬಂದ ಅವರಿಬ್ಬರು ಭಾಸ್ಕರರಂತೆ ಪ್ರಕಾಶಿಸುತ್ತಿದ್ದರು.
07076023a ತೌ ಮುಕ್ತೌ ಸಾಗರಪ್ರಖ್ಯಾದ್ದ್ರೋಣಾನೀಕಾದರಿಂದಮೌ।
07076023c ಅದೃಶ್ಯೇತಾಮ್ಮುದಾ ಯುಕ್ತೌ ಸಮುತ್ತೀರ್ಯಾರ್ಣವಂ ಯಥಾ।।
ಸಾಗರವೆಂದು ಕರೆಯಲ್ಪಟ್ಟ ದ್ರೋಣನ ಸೇನೆಯಿಂದ ಮುಕ್ತರಾಗಿ ಬಂದ ಅವರಿಬ್ಬರು ಸಮುದ್ರವನ್ನು ದಾಟಿಬಂದವರಂತೆ ಮುದಿತರಾಗಿ ಕಂಡುಬಂದರು.
07076024a ಶಸ್ತ್ರೌಘಾನ್ಮಹತೋ ಮುಕ್ತೌ ದ್ರೋಣಹಾರ್ದಿಕ್ಯರಕ್ಷಿತಾನ್।
07076024c ರೋಚಮಾನಾವದೃಶ್ಯೇತಾಮಿಂದ್ರಾಗ್ನ್ಯೋಃ ಸದೃಶೌ ರಣೇ।।
ರಣದಲ್ಲಿ ದ್ರೋಣ ಮತ್ತು ಹಾರ್ದಿಕ್ಯರಿಂದ ರಕ್ಷಿತರಾದವರು ಬಿಟ್ಟ ಮಹಾ ಶಸ್ತ್ರೌಘಗಳಿಂದ ಮುಕ್ತರಾದ ಅವರಿಬ್ಬರು ಇಂದ್ರ-ಅಗ್ನಿಯರಂತೆ ತೋರಿದರು.
07076025a ಉದ್ಭಿನ್ನರುಧಿರೌ ಕೃಷ್ಣೌ ಭಾರದ್ವಾಜಸ್ಯ ಸಾಯಕೈಃ।
07076025c ಶಿತೈಶ್ಚಿತೌ ವ್ಯರೋಚೇತಾಂ ಕರ್ಣಿಕಾರೈರಿವಾಚಲೌ।।
ಭಾರದ್ವಾಜನ ನಿಶಿತ ಸಾಯಕಗಳಿಂದ ಗಾಯಗೊಂಡು ರಕ್ತಸೋರುತ್ತಿರುವ ಅವರಿಬ್ಬರು ಕೃಷ್ಣರೂ ಕರ್ಣಿಕ ವೃಕ್ಷಗಳಿರುವ ಪರ್ವತಗಳಂತೆ ಕಂಡರು.
07076026a ದ್ರೋಣಗ್ರಾಹಹ್ರದಾನ್ಮುಕ್ತೌ ಶಕ್ತ್ಯಾಶೀವಿಷಸಂಕಟಾತ್।
07076026c ಅಯಃಶರೋಗ್ರಮಕರಾತ್ ಕ್ಷತ್ರಿಯಪ್ರವರಾಂಭಸಃ।।
07076027a ಜ್ಯಾಘೋಷತಲನಿರ್ಹ್ರಾದಾದ್ಗದಾನಿಸ್ತ್ರಿಂಶವಿದ್ಯುತಃ।
07076027c ದ್ರೋಣಾಸ್ತ್ರಮೇಘಾನ್ನಿರ್ಮುಕ್ತೌ ಸೂರ್ಯೇಂದೂ ತಿಮಿರಾದಿವ।।
ದ್ರೋಣನೇ ಮೊಸಳೆಯಾಗಿದ್ದ, ಶಕ್ತಿಗಳೇ ಸರ್ಪಗಳಾಗಿದ್ದ, ಶರಗಳೇ ಮಕರಗಳಾಗಿದ್ದ, ಕ್ಷತ್ರಿಯ ಪ್ರವರರೇ ನೀರಾಗಿದ್ದ ಮಡುವನ್ನು ದಾಟಿ ಬಂದ; ಶಿಂಜಿನಿಯ ಟೇಂಕಾರ ಮತ್ತು ಚಪ್ಪಾಳೆಗಳೇ ಗುಡುಗಾಗಿದ್ದ, ಗದೆ-ಖಡ್ಗಗಳೇ ಮಿಂಚುಗಳಾಗಿದ್ದ ದ್ರೋಣನ ಅಸ್ತ್ರಗಳೆಂಬ ಮೇಘಗಳಿಂದ ಹೊರಬಂದ ಅವರಿಬ್ಬರೂ ಕತ್ತಲೆಯಿಂದ ಆಚೆ ಬಂದ ಸೂರ್ಯು-ಚಂದ್ರರಂತೆ ಕಂಡರು.
07076028a ಬಾಹುಭ್ಯಾಮಿವ ಸಂತೀರ್ಣೌ ಸಿಂಧುಷಷ್ಠಾಃ ಸಮುದ್ರಗಾಃ।
07076028c ತಪಾಂತೇ ಸರಿತಃ ಪೂರ್ಣಾ ಮಹಾಗ್ರಾಹಸಮಾಕುಲಾಃ।।
07076029a ಇತಿ ಕೃಷ್ಣೌ ಮಹೇಷ್ವಾಸೌ ಯಶಸಾ ಲೋಕವಿಶ್ರುತೌ।
07076029c ಸರ್ವಭೂತಾನ್ಯಮನ್ಯಂತ ದ್ರೋಣಾಸ್ತ್ರಬಲವಿಸ್ಮಯಾತ್।।
ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವ ಮತ್ತು ಮಹಾ ಮೊಸಳೆಗಳ ಸಮಾಕುಲದಿಂದಿರುವ ಸಿಂದುವೇ ಮೊದಲಾದ ಐದು ನದಿಗಳು ಮತ್ತು ಆರನೆಯದಾಗಿ ಸಮುದ್ರವನ್ನು ಎರಡೂ ಬಾಹುಗಳಿಂದ ಈಜಿ ಬಂದಿರುವವರಂತೆ ದ್ರೋಣನ ಅಸ್ತ್ರಬಲದಿಂದ ಉಳಿದು ಬಂದಿರುವ ಆ ಯಶಸ್ಸಿನಲ್ಲಿ ಲೋಕವಿಶ್ರುತರಾದ ಮಹೇಷ್ವಾಸ ಕೃಷ್ಣರು ಎಂದು ಎಲ್ಲ ಭೂತಗಳೂ ಅಂದುಕೊಂಡವು.
07076030a ಜಯದ್ರಥಂ ಸಮೀಪಸ್ಥಮವೇಕ್ಷಂತೌ ಜಿಘಾಂಸಯಾ।
07076030c ರುರುಂ ನಿಪಾನೇ ಲಿಪ್ಸಂತೌ ವ್ಯಾಘ್ರವತ್ತಾವತಿಷ್ಠತಾಂ।।
ಕೊಲ್ಲುವ ಆಸೆಯಿಂದ ಸಮೀಪದಲ್ಲಿದ್ದ ಜಯದ್ರಥನನ್ನು ನೋಡುತ್ತಾ ನಿಂತಿದ್ದ ಅವರಿಬ್ಬರು ರುರು ಜಿಂಕೆಯನ್ನು ತಿನ್ನಲು ಬಾಯಿ ನೆಕ್ಕುತ್ತಿರುವ ಹುಲಿಗಳಂತೆ ಕಂಡರು.
07076031a ಯಥಾ ಹಿ ಮುಖವರ್ಣೋಽಯಮನಯೋರಿತಿ ಮೇನಿರೇ।
07076031c ತವ ಯೋಧಾ ಮಹಾರಾಜ ಹತಮೇವ ಜಯದ್ರಥಂ।।
ಮಹಾರಾಜ! ಅವರ ಮುಖವರ್ಣವೇ ಹಾಗಿರಲು ನಿನ್ನ ಯೋಧರು ಜಯದ್ರಥನು ಹತನಾದನೆಂದೇ ಭಾವಿಸಿದರು.
07076032a ಲೋಹಿತಾಕ್ಷೌ ಮಹಾಬಾಹೂ ಸಮ್ಯತ್ತೌ ಕೃಷ್ಣಪಾಂಡವೌ।
07076032c ಸಿಂಧುರಾಜಮಭಿಪ್ರೇಕ್ಷ್ಯ ಹೃಷ್ಟೌ ವ್ಯನದತಾಂ ಮುಹುಃ।।
ಮಹಾಬಾಹೋ! ಲೋಹಿತಾಕ್ಷರಾದ ಆ ಕೃಷ್ಣ-ಪಾಂಡವರಿಬ್ಬರೂ ಸಿಂಧುರಾಜನನ್ನು ಕಂಡು ಹೃಷ್ಟರಾಗಿ ಮತ್ತೆ ಮತ್ತೆ ಗರ್ಜಿಸಿದರು.
07076033a ಶೌರೇರಭೀಶುಹಸ್ತಸ್ಯ ಪಾರ್ಥಸ್ಯ ಚ ಧನುಷ್ಮತಃ।
07076033c ತಯೋರಾಸೀತ್ಪ್ರತಿಭ್ರಾಜಃ ಸೂರ್ಯಪಾವಕಯೋರಿವ।।
ಕೈಯಲ್ಲಿ ಕಡಿವಾಣಗಳನ್ನು ಹಿಡಿದಿದ್ದ ಶೌರಿ ಮತ್ತು ಧನುಸ್ಸನ್ನು ಹಿಡಿದಿದ್ದ ಪಾರ್ಥ ಇಬ್ಬರೂ ಸೂರ್ಯ-ಪಾವಕರಂತೆ ಪ್ರಕಾಶಿಸಿದರು.
07076034a ಹರ್ಷ ಏವ ತಯೋರಾಸೀದ್ದ್ರೋಣಾನೀಕಪ್ರಮುಕ್ತಯೋಃ।
07076034c ಸಮೀಪೇ ಸೈಂಧವಂ ದೃಷ್ಟ್ವಾ ಶ್ಯೇನಯೋರಾಮಿಷಂ ಯಥಾ।।
ದ್ರೋಣನ ಸೇನೆಯಿಂದ ಮುಕ್ತರಾಗಿ ಸಮೀಪದಲ್ಲಿಯೇ ಸೈಂಧವನನ್ನು ನೋಡಿದ ಅವರಿಗೆ ಆಮಿಷವನ್ನು ಕಂಡ ಗಿಡುಗಗಳಿಗಾಗುವಷ್ಟೇ ಆನಂದವಾಯಿತು.
07076035a ತೌ ತು ಸೈಂಧವಮಾಲೋಕ್ಯ ವರ್ತಮಾನಮಿವಾಂತಿಕೇ।
07076035c ಸಹಸಾ ಪೇತತುಃ ಕ್ರುದ್ಧೌ ಕ್ಷಿಪ್ರಂ ಶ್ಯೇನಾವಿವಾಮಿಷೇ।।
ಸದ್ಯ ಹತ್ತಿರದಲ್ಲಿಯೇ ಇದ್ದ ಸೈಂಧವನನ್ನು ನೋಡಿ ಕ್ರುದ್ಧರಾದ ಅವರಿಬ್ಬರೂ ಆಮಿಷದ ಮೇಲೆ ಗಿಡುಗವು ಬೀಳುವಂತೆ ಕ್ಷಿಪ್ರವಾಗಿ ಅವನ ಮೇಲೆ ಬಿದ್ದರು.
07076036a ತೌ ತು ದೃಷ್ಟ್ವಾ ವ್ಯತಿಕ್ರಾಂತೌ ಹೃಷೀಕೇಶಧನಂಜಯೌ।
07076036c ಸಿಂಧುರಾಜಸ್ಯ ರಕ್ಷಾರ್ಥಂ ಪರಾಕ್ರಾಂತಃ ಸುತಸ್ತವ।।
07076037a ದ್ರೋಣೇನಾಬದ್ಧಕವಚೋ ರಾಜಾ ದುರ್ಯೋಧನಸ್ತದಾ।
07076037c ಯಯಾವೇಕರಥೇನಾಜೌ ಹಯಸಂಸ್ಕಾರವಿತ್ ಪ್ರಭೋ।।
ಪ್ರಭೋ! ಹೃಷೀಕೇಶ-ಧನಂಜಯರು ಅತಿಕ್ರಮಿಸಿದುದನ್ನು ನೋಡಿ ದ್ರೋಣನಿಂದ ಕವಚವನ್ನು ಕಟ್ಟಿಸಿಕೊಂಡಿದ್ದ, ಹಯಸಂಸ್ಕಾರಗಳನ್ನು ತಿಳಿದಿದ್ದ ಪರಾಕ್ರಾಂತನಾಗಿದ್ದ ನಿನ್ನ ಮಗ ರಾಜಾ ದುರ್ಯೋಧನನು ಒಂದೇ ರಥದಲ್ಲಿ ಕುಳಿತು ಸಿಂಧುರಾಜನ ರಕ್ಷಣಾರ್ಥವಾಗಿ ಮುಂದೆ ಬಂದನು.
07076038a ಕೃಷ್ಣಪಾರ್ಥೌ ಮಹೇಷ್ವಾಸೌ ವ್ಯತಿಕ್ರಮ್ಯಾಥ ತೇ ಸುತಃ।
07076038c ಅಗ್ರತಃ ಪುಂಡರೀಕಾಕ್ಷಂ ಪ್ರತೀಯಾಯ ನರಾಧಿಪ।।
ನರಾಧಿಪ! ಮಹೇಷ್ವಾಸ ಕೃಷ್ಣ-ಪಾರ್ಥರನ್ನು ದಾಟಿ ಮುಂದೆ ಹೋಗಿ ಪುನಃ ಹಿಂದಿರುಗಿ ನಿನ್ನ ಮಗನು ಪುಂಡರೀಕಾಕ್ಷನ ಮುಂದೆ ಬಂದನು.
07076039a ತತಃ ಸರ್ವೇಷು ಸೈನ್ಯೇಷು ವಾದಿತ್ರಾಣಿ ಪ್ರಹೃಷ್ಟವತ್।
07076039c ಪ್ರಾವಾದ್ಯನ್ಸಮತಿಕ್ರಾಂತೇ ತವ ಪುತ್ರೇ ಧನಂಜಯಂ।।
ಹೀಗೆ ನಿನ್ನ ಮಗನು ಧನಂಜಯನನ್ನು ಅತಿಕ್ರಮಿಸಿ ಮುಂದೆ ಬರಲು ಎಲ್ಲ ಸೇನೆಗಳಲ್ಲಿ ಸಂತೋಷದಿಂದ ವಾದ್ಯಗಳು ಮೊಳಗಿದವು.
07076040a ಸಿಂಹನಾದರವಾಶ್ಚಾಸಂ ಶಂಖದುಂದುಭಿಮಿಶ್ರಿತಾಃ।
07076040c ದೃಷ್ಟ್ವಾ ದುರ್ಯೋಧನಂ ತತ್ರ ಕೃಷ್ಣಯೋಃ ಪ್ರಮುಖೇ ಸ್ಥಿತಂ।।
ಅಲ್ಲಿ ಕೃಷ್ಣರ ಮುಂದೆ ನಿಂತಿರುವ ದುರ್ಯೋಧನನನ್ನು ನೋಡಿ ಶಂಖದುಂದುಭಿಗಳೊಂದಿಗೆ ಮಿಶ್ರಿತವಾದ ಸಿಂಹನಾದಗಳೂ ಕೇಳಿಬಂದವು.
07076041a ಯೇ ಚ ತೇ ಸಿಂಧುರಾಜಸ್ಯ ಗೋಪ್ತಾರಃ ಪಾವಕೋಪಮಾಃ।
07076041c ತೇ ಪ್ರಹೃಷ್ಯಂತ ಸಮರೇ ದೃಷ್ಟ್ವಾ ಪುತ್ರಂ ತವಾಭಿಭೋ।।
ವಿಭೋ! ಸಮರದಲ್ಲಿ ನಿನ್ನ ಮಗನನ್ನು ನೋಡಿ ಸಿಂಧುರಾಜನ ಪಾವಕೋಪಮ ರಕ್ಷಕರು ಹರ್ಷಿತರಾದರು.
07076042a ದೃಷ್ಟ್ವಾ ದುರ್ಯೋಧನಂ ಕೃಷ್ಣಸ್ತ್ವತಿಕ್ರಾಂತಂ ಸಹಾನುಗಂ।
07076042c ಅಬ್ರವೀದರ್ಜುನಂ ರಾಜನ್ಪ್ರಾಪ್ತಕಾಲಮಿದಂ ವಚಃ।।
ರಾಜನ್! ಅನುಯಾಯಿಗಳೊಂದಿಗೆ ತಮ್ಮನ್ನು ಅತಿಕ್ರಮಿಸಿದ ದುರ್ಯೋಧನನನ್ನು ಕೃಷ್ಣನು ಕಾಲಕ್ಕೆ ತಕ್ಕುದಾದ ಈ ಮಾತನ್ನು ಅರ್ಜುನನಿಗೆ ನುಡಿದನು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ದುರ್ಯೋಧನಾಗಮೇ ಷಟ್ಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ದುರ್ಯೋಧನಾಗಮನ ಎನ್ನುವ ಎಪ್ಪತ್ತಾರನೇ ಅಧ್ಯಾಯವು.