ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 75
ಸಾರ
ಅರ್ಜುನನು ಸರೋವರವನ್ನು ನಿರ್ಮಿಸಿ ಶತ್ರುಸೇನೆಗಳನ್ನು ತಡೆಗಟ್ಟಲು ಕೃಷ್ಣನು ಕುದುರೆಗಳನ್ನು ಬಿಚ್ಚಿ, ನಾಟಿಕೊಂಡಿದ್ದ ಬಾಣಗಳನ್ನು ಕಿತ್ತು, ಸ್ನಾನಮಾಡಿಸಿ, ನೀರಿಕುಡಿಸಿ, ಉಪಚರಿಸಿದುದು (1-17). ಕೌರವ ಸೇನೆಯ ವಿಸ್ಮಯ (18-36).
07075001 ಸಂಜಯ ಉವಾಚ।
07075001a ಸಲಿಲೇ ಜನಿತೇ ತಸ್ಮಿನ್ಕೌಂತೇಯೇನ ಮಹಾತ್ಮನಾ।
07075001c ನಿವಾರಿತೇ ದ್ವಿಷತ್ಸೈನ್ಯೇ ಕೃತೇ ಚ ಶರವೇಶ್ಮನಿ।।
07075002a ವಾಸುದೇವೋ ರಥಾತ್ತೂರ್ಣಮವತೀರ್ಯ ಮಹಾದ್ಯುತಿಃ।
07075002c ಮೋಚಯಾಮಾಸ ತುರಗಾನ್ವಿತುನ್ನಾನ್ಕಂಕಪತ್ರಿಭಿಃ।।
ಸಂಜಯನು ಹೇಳಿದನು: “ಮಹಾತ್ಮ ಕೌಂತೇಯನು ನೀರನ್ನು ಹುಟ್ಟಿಸಿ, ಶತ್ರುಸೇನೆಯನ್ನು ತಡೆಗಟ್ಟಿ, ಶರಗೃಹವನ್ನು ನಿರ್ಮಿಸಲು ಮಹಾದ್ಯುತಿ ವಾಸುದೇವನು ತಕ್ಷಣವೇ ರಥದಿಂದ ಇಳಿದು ಕಂಕಪತ್ರಿಗಳಿಂದ ಗಾಯಗೊಂಡಿದ್ದ ಕುದುರೆಗಳನ್ನು ಬಿಚ್ಚಿದನು.
07075003a ಅದೃಷ್ಟಪೂರ್ವಂ ತದ್ದೃಷ್ಟ್ವಾ ಸಿಂಹನಾದೋ ಮಹಾನಭೂತ್।
07075003c ಸಿದ್ಧಚಾರಣಸಂಘಾನಾಂ ಸೈನಿಕಾನಾಂ ಚ ಸರ್ವಶಃ।।
ಹಿಂದೆ ಎಂದೂ ನೋಡಿರದ ಅದನ್ನು ನೋಡಿ ಎಲ್ಲಕಡೆಗಳಲ್ಲಿ ಸಿದ್ಧಚಾರಣರ ಸಮೂಹಗಳ ಮತ್ತು ಸೈನಿಕರ ಮಹಾ ಸಿಂಹನಾದವು ಕೇಳಿಬಂದಿತು.
07075004a ಪದಾತಿನಂ ತು ಕೌಂತೇಯಂ ಯುಧ್ಯಮಾನಂ ನರರ್ಷಭಾಃ।
07075004c ನಾಶಕ್ನುವನ್ವಾರಯಿತುಂ ತದದ್ಭುತಮಿವಾಭವತ್।।
ಪದಾತಿಯಾಗಿ ಯುದ್ಧಮಾಡುತ್ತಿದ್ದ ಕೌಂತೇಯನನ್ನು ತಡೆಯಲು ನರರ್ಷಭರಿಗೆ ಸಾಧ್ಯವಾಗಲಿಲ್ಲ. ಅದೊಂದು ಅದ್ಭುತವಾಗಿತ್ತು.
07075005a ಆಪತತ್ಸು ರಥೌಘೇಷು ಪ್ರಭೂತಗಜವಾಜಿಷು।
07075005c ನಾಸಂಭ್ರಮತ್ತದಾ ಪಾರ್ಥಸ್ತದಸ್ಯ ಪುರುಷಾನತಿ।।
ರಥಸೇನೆಗಳು, ಅನೇಕ ಆನೆ-ಕುದುರೆಗಳು ಮೇಲೆ ಬಂದು ಎರಗಿದರೂ ಅತಿಪುರುಷನಾದ ಪಾರ್ಥನು ಕಿಂಚಿತ್ತೂ ಗಾಬರಿಗೊಳ್ಳಲಿಲ್ಲ.
07075006a ವ್ಯಸೃಜಂತ ಶರೌಘಾಂಸ್ತೇ ಪಾಂಡವಂ ಪ್ರತಿ ಪಾರ್ಥಿವಾಃ।
07075006c ನ ಚಾವ್ಯಥತ ಧರ್ಮಾತ್ಮಾ ವಾಸವಿಃ ಪರವೀರಹಾ।।
ಪಾಂಡವನ ಮೇಲೆ ಪಾರ್ಥಿವರು ಶರೌಘಗಳನ್ನು ಪ್ರಯೋಗಿಸುತ್ತಿದ್ದರೂ ಪರವೀರಹ ಧರ್ಮಾತ್ಮ ವಾಸವಿಯು ವ್ಯಥಿತನಾಗಲಿಲ್ಲ.
07075007a ಸ ತಾನಿ ಶರಜಾಲಾನಿ ಗದಾಃ ಪ್ರಾಸಾಂಶ್ಚ ವೀರ್ಯವಾನ್।
07075007c ಆಗತಾನಗ್ರಸತ್ಪಾರ್ಥಃ ಸರಿತಃ ಸಾಗರೋ ಯಥಾ।।
ಆ ಶರಜಾಲಗಳನ್ನೂ, ಗದೆಗಳನ್ನೂ ಮತ್ತು ಪ್ರಾಸಗಳನ್ನೂ ವೀರ್ಯವಾನ್ ಪಾರ್ಥನು ಸಾಗರವು ಹೇಗೆ ನದಿಗಳನ್ನು ಬರಮಾಡಿಕೊಳ್ಳುತ್ತದೆಯೋ ಹಾಗೆ ಬಂದವುಗಳನ್ನು ನಿರಸನಗೊಳಿಸಿದನು.
07075008a ಅಸ್ತ್ರವೇಗೇನ ಮಹತಾ ಪಾರ್ಥೋ ಬಾಹುಬಲೇನ ಚ।
07075008c ಸರ್ವೇಷಾಂ ಪಾರ್ಥಿವೇಂದ್ರಾಣಾಮಗ್ರಸತ್ತಾಂ ಶರೋತ್ತಮಾನ್।।
ಮಹಾ ಅಸ್ತ್ರವೇಗದಿಂದ ಮತ್ತು ಬಾಹುಬಲದಿಂದ ಪಾರ್ಥನು ಎಲ್ಲ ಪಾರ್ಥಿವೇಂದ್ರರೂ ಕಳುಹಿಸುತ್ತಿದ್ದ ಉತ್ತಮ ಬಾಣಗಳನ್ನೂ ನಾಶಗೊಳಿಸಿದನು.
07075009a ತತ್ತು ಪಾರ್ಥಸ್ಯ ವಿಕ್ರಾಂತಂ ವಾಸುದೇವಸ್ಯ ಚೋಭಯೋಃ।
07075009c ಅಪೂಜಯನ್ಮಹಾರಾಜ ಕೌರವಾಃ ಪರಮಾದ್ಭುತಂ।।
ಆದರೆ ಮಹಾರಾಜ! ಪಾರ್ಥ ಮತ್ತು ವಾಸುದೇವ ಈ ಇಬ್ಬರ ವಿಕ್ರಾಂತವನ್ನು ಪರಮಾದ್ಭುತವನ್ನು ಕೌರವರು ಹೊಗಳಿದರು.
07075010a ಕಿಮದ್ಭುತತರಂ ಲೋಕೇ ಭವಿತಾಪ್ಯಥ ವಾಪ್ಯಭೂತ್।
07075010c ಯದಶ್ವಾನ್ಪಾರ್ಥಗೋವಿಂದೌ ಮೋಚಯಾಮಾಸತೂ ರಣೇ।।
“ರಣದ ಮಧ್ಯದಲ್ಲಿ ಪಾರ್ಥ-ಗೋವಿಂದರು ಕುದುರೆಗಳನ್ನು ಬಿಚ್ಚಿದರು! ಇದಕ್ಕಿಂತಲೂ ಪರಮ ಅದ್ಭುತವಾದುದು ಲೋಕದಲ್ಲಿ ಯಾವುದಿದೆ? ಇಂತಹುದು ಹಿಂದೆ ನಡೆಯಲೂ ಇಲ್ಲ. ಮುಂದೆ ನಡೆಯುವುದೂ ಇಲ್ಲ.”
07075011a ಭಯಂ ವಿಪುಲಮಸ್ಮಾಸು ತಾವಧತ್ತಾಂ ನರೋತ್ತಮೌ।
07075011c ತೇಜೋ ವಿದಧತುಶ್ಚೋಗ್ರಂ ವಿಸ್ರಬ್ಧೌ ರಣಮೂರ್ಧನಿ।।
ರಣಮೂರ್ದನಿಯಲ್ಲಿ ಅತ್ಯುಗ್ರವಾದ ತೇಜಸ್ಸನ್ನು ಪ್ರದರ್ಶಿಸಿ ಆ ನರೋತ್ತಮರು ನಮ್ಮವರಲ್ಲಿ ಅತಿಯಾದ ಭಯವನ್ನು ಉಂಟುಮಾಡಿದರು.
07075012a ಅಥೋತ್ಸ್ಮಯನ್ ಹೃಷೀಕೇಶಃ ಸ್ತ್ರೀಮಧ್ಯ ಇವ ಭಾರತ।
07075012c ಅರ್ಜುನೇನ ಕೃತೇ ಸಂಖ್ಯೇ ಶರಗರ್ಭಗೃಹೇ ತದಾ।।
ಭಾರತ! ಅರ್ಜುನನು ರಣದಲ್ಲಿ ಶರಗಳಿಂದ ನಿರ್ಮಿಸಿದ ಗರ್ಭಗೃಹದಲ್ಲಿ ಹೃಷೀಕೇಶನು ಸ್ತ್ರೀಗಳ ಮಧ್ಯದಲ್ಲಿಯೋ ಎಂಬಂತೆ ನಸುನಗುತ್ತಾ ಇದ್ದನು.
07075013a ಉಪಾವರ್ತಯದವ್ಯಗ್ರಸ್ತಾನಶ್ವಾನ್ ಪುಷ್ಕರೇಕ್ಷಣಃ।
07075013c ಮಿಷತಾಂ ಸರ್ವಸೈನ್ಯಾನಾಂ ತ್ವದೀಯಾನಾಂ ವಿಶಾಂ ಪತೇ।।
ವಿಶಾಂಪತೇ! ಪುಷ್ಕರೇಕ್ಷಣನು ನಿನ್ನಕಡೆಯ ಎಲ್ಲ ಸೇನೆಗಳೂ ನೋಡುತ್ತಿದ್ದಂತೆಯೇ ಸ್ವಲ್ವವೂ ಉದ್ವೇಗಗೊಳ್ಳದೇ ಕುದುರೆಗಳನ್ನು ಅಡ್ಡಾಡಿಸಿದನು.
07075014a ತೇಷಾಂ ಶ್ರಮಂ ಚ ಗ್ಲಾನಿಂ ಚ ವೇಪಥುಂ ವಮಥುಂ ವ್ರಣಾನ್।
07075014c ಸರ್ವಂ ವ್ಯಪಾನುದತ್ಕೃಷ್ಣಃ ಕುಶಲೋ ಹ್ಯಶ್ವಕರ್ಮಣಿ।।
ಕುದುರೆಗಳ ಕೆಲಸದಲ್ಲಿ ಕುಶಲನಾಗಿದ್ದ ಕೃಷ್ಣನು ಅವುಗಳ ಪರಿಶ್ರಮ, ಬಳಲಿಕೆ, ವೇಪನ-ಕಂಪನಗಳನ್ನೂ ಗಾಯಗಳನ್ನೂ ಸಂಪೂರ್ಣವಾಗಿ ಹೋಗಲಾಡಿಸಿದನು.
07075015a ಶಲ್ಯಾನುದ್ಧೃತ್ಯ ಪಾಣಿಭ್ಯಾಂ ಪರಿಮೃಜ್ಯ ಚ ತಾನ್ ಹಯಾನ್।
07075015c ಉಪಾವೃತ್ಯ ಯಥಾನ್ಯಾಯಂ ಪಾಯಯಾಮಾಸ ವಾರಿ ಸಃ।।
ಬಾಣಗಳನ್ನು ಎರಡೂ ಕೈಗಳಿಂದ ನಿಧಾನವಾಗಿ ಕಿತ್ತು, ಮೈತೊಳೆಯಿಸಿ, ನೆಲದ ಮೇಲೆ ಹೊರಳಾಡಿಸಿ, ಯಥಾನ್ಯಾಯವಾಗಿ ನೀರು ಕುಡಿಸಿದನು.
07075016a ಸ ತಾಽಲ್ಲಬ್ಧೋದಕಾನ್ಸ್ನಾತಾಂ ಜಗ್ಧಾನ್ನಾನ್ವಿಗತಕ್ಲಮಾನ್।
07075016c ಯೋಜಯಾಮಾಸ ಸಂಹೃಷ್ಟಃ ಪುನರೇವ ರಥೋತ್ತಮೇ।।
ನೀರನ್ನು ಕುಡಿದು, ಸ್ನಾನಮಾಡಿ, ಮೇಯ್ದು, ಆಯಾಸವನ್ನು ಕಳೆದುಕೊಂಡ ಅವುಗಳನ್ನು ಸಂಹೃಷ್ಟನಾಗಿ ಪುನಃ ಆ ಉತ್ತಮ ರಥಕ್ಕೆ ಕಟ್ಟಿದನು.
07075017a ಸ ತಂ ರಥವರಂ ಶೌರಿಃ ಸರ್ವಶಸ್ತ್ರಭೃತಾಂ ವರಃ।
07075017c ಸಮಾಸ್ಥಾಯ ಮಹಾತೇಜಾಃ ಸಾರ್ಜುನಃ ಪ್ರಯಯೌ ದ್ರುತಂ।।
ಆ ಶ್ರೇಷ್ಠ ರಥವನ್ನು ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠನಾದ ಶೌರಿಯು ಮಹಾತೇಜಸ್ವಿ ಅರ್ಜುನನೊಂದಿಗೆ ಏರಿ ವೇಗವಾಗಿ ಹೊರಟನು.
07075018a ರಥಂ ರಥವರಸ್ಯಾಜೌ ಯುಕ್ತಂ ಲಬ್ಧೋದಕೈರ್ಹಯೈಃ।
07075018c ದೃಷ್ಟ್ವಾ ಕುರುಬಲಶ್ರೇಷ್ಠಾಃ ಪುನರ್ವಿಮನಸೋಽಭವನ್।।
ನೀರು ಕುಡಿಸಿದ ಕುದುರೆಗಳಿಂದ ಯುಕ್ತವಾದ ರಥದಲ್ಲಿ ಆ ರಥವರರಿಬ್ಬರೂ ಹೋಗುತ್ತಿರುವುದನ್ನು ನೋಡಿ ಕುರುಬಲಶ್ರೇಷ್ಠರು ಪುನಃ ವಿಮನಸ್ಕರಾದರು.
07075019a ವಿನಿಃಶ್ವಸಂತಸ್ತೇ ರಾಜನ್ಭಗ್ನದಂಷ್ಟ್ರಾ ಇವೋರಗಾಃ।
07075019c ಧಿಗಹೋ ಧಿಗ್ಗತಃ ಪಾರ್ಥಃ ಕೃಷ್ಣಶ್ಚೇತ್ಯಬ್ರುವನ್ಪೃಥಕ್।।
ರಾಜನ್! ಹಲ್ಲುಮುರಿದ ಉರಗಗಳಂತೆ ನಿಟ್ಟುಸಿರು ಬಿಡುತ್ತಿದ್ದ ಅವರು ಮತ್ತೆ ಮತ್ತೆ “ನಮಗೆ ಧಿಕ್ಕಾರ! ಧಿಕ್ಕಾರ! ಪಾರ್ಥ ಕೃಷ್ಣರು ಹೊರಟೇ ಹೋದರಲ್ಲ!” ಎಂದು ಅಂದುಕೊಳ್ಳುತ್ತಿದ್ದರು.
07075020a ಸರ್ವಕ್ಷತ್ರಸ್ಯ ಮಿಷತೋ ರಥೇನೈಕೇನ ದಂಶಿತೌ।
07075020c ಬಾಲಕ್ರೀಡನಕೇನೇವ ಕದರ್ಥೀಕೃತ್ಯ ನೋ ಬಲಂ।।
ಎಲ್ಲ ಕ್ಷತ್ರಿಯರೂ ನೋಡುತ್ತಿದ್ದಂತೆ ಒಂದೇ ರಥದಲ್ಲಿ ಕುಳಿತು ಕವಚಧಾರಿಗಳಾದ ಅವರಿಬ್ಬರು ನಮ್ಮ ಸೇನೆಯನ್ನು ಬಾಲಕ್ರೀಡೆಯಂತೆ ತಿರಸ್ಕರಿಸಿ ಮುಂದುವರೆದರು.
07075021a ಕ್ರೋಶತಾಂ ಯತಮಾನಾನಾಮಸಂಸಕ್ತೌ ಪರಂತಪೌ।
07075021c ದರ್ಶಯಿತ್ವಾತ್ಮನೋ ವೀರ್ಯಂ ಪ್ರಯಾತೌ ಸರ್ವರಾಜಸು।।
ಕೂಗಿಕೊಳ್ಳುತ್ತಿದ್ದರೂ ಪ್ರಯತ್ನಿಸುತ್ತಿದ್ದರೂ ಅವರೊಡನೆ ಯುದ್ಧಮಾಡದೇ ಆ ಪರಂತಪರು ಎಲ್ಲರಾಜರಿಗೆ ತಮ್ಮ ವೀರ್ಯವನ್ನು ತೋರಿಸುತ್ತಾ ಮುಂದುವರೆದರು.
07075022a ತೌ ಪ್ರಯಾತೌ ಪುನರ್ದೃಷ್ಟ್ವಾ ತದಾನ್ಯೇ ಸೈನಿಕಾಬ್ರುವನ್।
07075022c ತ್ವರಧ್ವಂ ಕುರವಃ ಸರ್ವೇ ವಧೇ ಕೃಷ್ಣಕಿರೀಟಿನೋಃ।।
ಅವರು ಹೋಗುತ್ತಿರುವುದನ್ನು ನೋಡಿ ಅನ್ಯ ಸೈನಿಕರು ಪುನಃ ಹೇಳಿದರು: “ತತ್ವರೆಮಾಡಿ! ಎಲ್ಲರೂ ಸೇರಿ ಕೃಷ್ಣ-ಕಿರೀಟಿಯರನ್ನು ವಧಿಸೋಣ!
07075023a ರಥಂ ಯುಕ್ತ್ವಾ ಹಿ ದಾಶಾರ್ಹೋ ಮಿಷತಾಂ ಸರ್ವಧನ್ವಿನಾಂ।
07075023c ಜಯದ್ರಥಾಯ ಯಾತ್ಯೇಷ ಕದರ್ಥೀಕೃತ್ಯ ನೋ ರಣೇ।।
ಸರ್ವಧನ್ವಿಗಳು ನೋಡುತ್ತಿದ್ದಂತೆಯೇ ದಾಶಾರ್ಹನು ರಥವನ್ನು ಕಟ್ಟಿ ರಣದಲ್ಲಿ ನಮ್ಮನ್ನು ತಿರಸ್ಕರಿಸಿ ಜಯದ್ರಥನ ಕಡೆ ಹೋಗುತ್ತಿದ್ದಾನೆ!”
07075024a ತತ್ರ ಕೇ ಚಿನ್ಮಿಥೋ ರಾಜನ್ಸಮಭಾಷಂತ ಭೂಮಿಪಾಃ।
07075024c ಅದೃಷ್ಟಪೂರ್ವಂ ಸಂಗ್ರಾಮೇ ತದ್ದೃಷ್ಟ್ವಾ ಮಹದದ್ಭುತಂ।।
ರಾಜನ್! ಸಂಗ್ರಾಮದಲ್ಲಿ ಹಿಂದೆಂದೂ ನೋಡಿರದ ಆ ಮಹಾ ಅದ್ಭುತವನ್ನು ನೋಡಿ ಅಲ್ಲಿದ್ದ ಕೆಲವು ಭೂಮಿಪರು ಯೋಚಿಸುತ್ತಿದ್ದರು.
07075025a ಸರ್ವಸೈನ್ಯಾನಿ ರಾಜಾ ಚ ಧೃತರಾಷ್ಟ್ರೋಽತ್ಯಯಂ ಗತಃ।
07075025c ದುರ್ಯೋಧನಾಪರಾಧೇನ ಕ್ಷತ್ರಂ ಕೃತ್ಸ್ನಾ ಚ ಮೇದಿನೀ।।
“ದುರ್ಯೋಧನನ ಅಪರಾಧದಿಂದ ರಾಜಾ ಧೃತರಾಷ್ಟ್ರನೂ ಅವನ ಸಂಪೂರ್ಣ ಸೇನೆಗಳೂ ಮತ್ತು ಮೇದಿನಿಯ ಸರ್ವ ಕ್ಷತ್ರಿಯರೂ ಮಹಾ ವಿಪತ್ತಿಗೆ ಒಳಗಾಗಿದ್ದಾರೆ!
07075026a ವಿಲಯಂ ಸಮನುಪ್ರಾಪ್ತಾ ತಚ್ಚ ರಾಜಾ ನ ಬುಧ್ಯತೇ।
07075026c ಇತ್ಯೇವಂ ಕ್ಷತ್ರಿಯಾಸ್ತತ್ರ ಬ್ರುವಂತ್ಯನ್ಯೇ ಚ ಭಾರತ।।
ಇವರು ವಿಲಯವನ್ನು ಹೊಂದುತ್ತಿದ್ದಾರೆ ಎನ್ನುವುದು ರಾಜನಿಗೆ ತಿಳಿದಿಲ್ಲ!” ಭಾರತ! ಅಲ್ಲಿರುವ ಅನ್ಯ ಕ್ಷತ್ರಿಯರು ಹೀಗೆ ಹೇಳಿಕೊಳ್ಳುತ್ತಿದ್ದರು.
07075027a ಸಿಂಧುರಾಜಸ್ಯ ಯತ್ಕೃತ್ಯಂ ಗತಸ್ಯ ಯಮಸಾದನಂ।
07075027c ತತ್ಕರೋತು ವೃಥಾದೃಷ್ಟಿರ್ಧಾರ್ತರಾಷ್ಟ್ರೋಽನುಪಾಯವಿತ್।।
“ದೃಷ್ಟಿಯಿಲ್ಲದ ಧಾರ್ತರಾಷ್ಟ್ರನು ಸಿಂಧುರಾಜನು ಯಮಸಾದನಕ್ಕೆ ಹೋದನಂತರ ಮಾಡಬೇಕಾದ ಕಾರ್ಯಗಳ ಕುರಿತು ಉಪಾಯಗಳನ್ನು ಮಾಡಲಿ!”
07075028a ತತಃ ಶೀಘ್ರತರಂ ಪ್ರಾಯಾತ್ಪಾಂಡವಃ ಸೈಂಧವಂ ಪ್ರತಿ।
07075028c ನಿವರ್ತಮಾನೇ ತಿಗ್ಮಾಂಶೌ ಹೃಷ್ಟೈಃ ಪೀತೋದಕೈರ್ಹಯೈಃ।।
ಸೂರ್ಯನು ಇಳಿಮುಖನಾಗಿರಲು ಪಾಂಡವನು ನೀರನ್ನು ಕುಡಿದು ಹರ್ಷಿತಗೊಂಡಿದ್ದ ಕುದುರೆಗಳೊಂದಿಗೆ ಅತ್ಯಂತ ಶೀಘ್ರವಾಗಿ ಸೈಂಧವನ ಕಡೆ ಹೋದನು.
07075029a ತಂ ಪ್ರಯಾಂತಂ ಮಹಾಬಾಹುಂ ಸರ್ವಶಸ್ತ್ರಭೃತಾಂ ವರಂ।
07075029c ನಾಶಕ್ನುವನ್ವಾರಯಿತುಂ ಯೋಧಾಃ ಕ್ರುದ್ಧಮಿವಾಂತಕಂ।।
ಅಂತಕನಂತೆ ಕ್ರುದ್ಧನಾಗಿ ಹೋಗುತ್ತಿರುವ ಆ ಮಹಾಬಾಹು ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠನನ್ನು ಯೋಧರು ತಡೆಯಲು ಶಕ್ತರಾಗಲಿಲ್ಲ.
07075030a ವಿದ್ರಾವ್ಯ ತು ತತಃ ಸೈನ್ಯಂ ಪಾಂಡವಃ ಶತ್ರುತಾಪನಃ।
07075030c ಯಥಾ ಮೃಗಗಣಾನ್ಸಿಂಹಃ ಸೈಂಧವಾರ್ಥೇ ವ್ಯಲೋಡಯತ್।।
ಸಿಂಹವು ಜಿಂಕೆಗಳ ಗುಂಪನ್ನು ಮಥಿಸಿಬಿಡುವಂತೆ ಶತ್ರುತಾಪನ ಪಾಂಡವನು ಸೈಂಧವನಿಗಾಗಿ ನಿನ್ನ ಸೇನೆಯನ್ನು ತರುಬಿ ಓಡಿಸಿದನು.
07075031a ಗಾಹಮಾನಸ್ತ್ವನೀಕಾನಿ ತೂರ್ಣಮಶ್ವಾನಚೋದಯತ್।
07075031c ಬಲಾಕವರ್ಣಾನ್ದಾಶಾರ್ಹಃ ಪಾಂಚಜನ್ಯಂ ವ್ಯನಾದಯತ್।।
ಸೇನೆಗಳ ಮಧ್ಯದಲ್ಲಿ ಬಲಾಕವರ್ಣದ ಕುದುರೆಗಳನ್ನು ಇನ್ನೂ ಜೋರಾಗಿ ಚಪ್ಪರಿಸಿ ಓಡಿಸುತ್ತಾ ದಾಶಾರ್ಹನು ಪಾಂಚಜನ್ಯವನ್ನು ಊದಿದನು.
07075032a ಕೌಂತೇಯೇನಾಗ್ರತಃ ಸೃಷ್ಟಾ ನ್ಯಪತನ್ಪೃಷ್ಠತಃ ಶರಾಃ।
07075032c ತೂರ್ಣಾತ್ತೂರ್ಣತರಂ ಹ್ಯಶ್ವಾಸ್ತೇಽವಹನ್ವಾತರಂಹಸಃ।।
ಕೌಂತೇಯನು ಬಿಟ್ಟ ಬಾಣಗಳೆಲ್ಲವೂ ಅವನ ಹಿಂದೆ ಬೀಳುತ್ತಿದ್ದವು. ಬಾಣಗಳ ವೇಗಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಆ ಗಾಳಿಯ ವೇಗವುಳ್ಳ ಕುದುರೆಗಳು ಓಡುತ್ತಿದ್ದವು.
07075033a ವಾತೋದ್ಧೂತಪತಾಕಾಂತಂ ರಥಂ ಜಲದನಿಸ್ವನಂ।
07075033c ಘೋರಂ ಕಪಿಧ್ವಜಂ ದೃಷ್ಟ್ವಾ ವಿಷಣ್ಣಾ ರಥಿನೋಽಭವನ್।।
ಗಾಳಿಯಲ್ಲಿ ಹಾರಾಡುತ್ತಿದ್ದ ಪತಾಕೆಗಳನ್ನೂ, ರಥದ ಗುಡುಗಿನ ಶಬ್ಧವನ್ನೂ, ಘೋರವಾದ ಕಪಿಧ್ವಜವನ್ನೂ ನೋಡಿ ರಥಿಗಳು ವಿಷಣ್ಣರಾದರು.
07075034a ದಿವಾಕರೇಽಥ ರಜಸಾ ಸರ್ವತಃ ಸಂವೃತೇ ಭೃಶಂ।
07075034c ಶರಾರ್ತಾಶ್ಚ ರಣೇ ಯೋಧಾ ನ ಕೃಷ್ಣೌ ಶೇಕುರೀಕ್ಷಿತುಂ।।
ಎಲ್ಲಕಡೆಗಳಲ್ಲಿ ಮುಸುಕಿತ ಧೂಳಿನಿಂದ ದಿವಾಕರನೂ ಕಾಣದಿರಲಾಗಿ, ರಣದಲ್ಲಿ ಶರಗಳಿಂದ ಆರ್ತರಾದ ಯೋಧರು ಕೃಷ್ಣರೀರ್ವರನ್ನೂ ನೋಡಲೂ ಶಕ್ಯರಾಗಿರಲಿಲ್ಲ.
07075035a ತತೋ ನೃಪತಯಃ ಕ್ರುದ್ಧಾಃ ಪರಿವವ್ರುರ್ಧನಂಜಯಂ।
07075035c ಕ್ಷತ್ರಿಯಾ ಬಹವಶ್ಚಾನ್ಯೇ ಜಯದ್ರಥವಧೈಷಿಣಂ।।
ಆಗ ಕ್ರುದ್ಧರಾದ ನೃಪತಿಗಳೂ ಅನೇಕ ಅನ್ಯ ಕ್ಷತ್ರಿಯರೂ ಜಯದ್ರಥನನ್ನು ವಧಿಸಲು ಇಚ್ಛಿಸಿದ್ದ ಧನಂಜಯನನ್ನು ಸುತ್ತುಗಟ್ಟಿದರು.
07075036a ಅಪನೀಯತ್ಸು ಶಲ್ಯೇಷು ಧಿಷ್ಠಿತಂ ಪುರುಷರ್ಷಭಂ।
07075036c ದುರ್ಯೋಧನಸ್ತ್ವಗಾತ್ಪಾರ್ಥಂ ತ್ವರಮಾಣೋ ಮಹಾಹವೇ।।
ಅವರು ಪ್ರಯೋಗಿಸುತ್ತಿದ್ದ ಬಾಣಗಳಿಂದ ಆ ಪುರುಷರ್ಷಭನ ಗಮನವು ಕುಂಠಿತವಾಗಲು ದುರ್ಯೋಧನನು ಪಾರ್ಥನನ್ನು ಮಹಾಹವದಲ್ಲಿ ತ್ವರೆಮಾಡಿ ಹಿಂಬಾಲಿಸಿ ಬರುತ್ತಿದ್ದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸೈನ್ಯವಿಸ್ಮಯೇ ಪಂಚಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸೈನ್ಯವಿಸ್ಮಯ ಎನ್ನುವ ಎಪ್ಪತ್ತೈದನೇ ಅಧ್ಯಾಯವು.