ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 71
ಸಾರ
ಕುರು-ಪಾಂಡವರ ದ್ವಂದ್ವ ಯುದ್ಧ (1-31).
07071001 ಸಂಜಯ ಉವಾಚ।
07071001a ರಾಜನ್ಸಂಗ್ರಾಮಮಾಶ್ಚರ್ಯಂ ಶೃಣು ಕೀರ್ತಯತೋ ಮಮ।
07071001c ಕುರೂಣಾಂ ಪಾಂಡವಾನಾಂ ಚ ಯಥಾ ಯುದ್ಧಮವರ್ತತ।।
ಸಂಜಯನು ಹೇಳಿದನು: “ರಾಜನ್! ಕುರುಗಳ ಮತ್ತು ಪಾಂಡವರ ಯುದ್ಧವು ಹೇಗೆ ನಡೆಯಿತು ಎನ್ನುವುದನ್ನು ನಾನು ಹೇಳುತ್ತೇನೆ. ಈ ಆಶ್ಚರ್ಯದಾಯಕ ಸಂಗ್ರಾಮದ ಕುರಿತು ಕೇಳು.
07071002a ಭಾರದ್ವಾಜಂ ಸಮಾಸಾದ್ಯ ವ್ಯೂಹಸ್ಯ ಪ್ರಮುಖೇ ಸ್ಥಿತಂ।
07071002c ಅಯೋಧಯನ್ರಣೇ ಪಾರ್ಥಾ ದ್ರೋಣಾನೀಕಂ ಬಿಭಿತ್ಸವಃ।।
ದ್ರೋಣನ ಸೇನೆಯನ್ನು ಭೇದಿಸಲೋಸುಗ ರಣದಲ್ಲಿ ಪಾರ್ಥರು ವ್ಯೂಹದ ಎದಿರು ನಿಂತಿದ್ದ ಭಾರದ್ವಾಜನನ್ನು ಎದುರಿಸಿ ಅವನೊಂದಿಗೆ ಯುದ್ಧಮಾಡತೊಡಗಿದರು.
07071003a ರಕ್ಷಮಾಣಾಃ ಸ್ವಕಂ ವ್ಯೂಹಂ ದ್ರೋಣಸ್ಯಾಪಿ ಚ ಸೈನಿಕಾಃ।
07071003c ಅಯೋಧಯನ್ರಣೇ ಪಾರ್ಥಾನ್ಪ್ರಾರ್ಥಯಂತೋ ಮಹದ್ಯಶಃ।।
ತನ್ನ ವ್ಯೂಹವನ್ನೂ ಸೈನಿಕರನ್ನೂ ರಕ್ಷಿಸುತ್ತಾ ರಣದಲ್ಲಿ ಮಹಾ ಯಶಸ್ಸನ್ನು ಬಯಸುತ್ತಾ ದ್ರೋಣನೂ ಕೂಡ ಪಾರ್ಥರೊಂದಿಗೆ ಹೋರಾಡಿದನು.
07071004a ವಿಂದಾನುವಿಂದಾವಾವಂತ್ಯೌ ವಿರಾಟಂ ದಶಭಿಃ ಶರೈಃ।
07071004c ಆಜಘ್ನತುಃ ಸುಸಂಕ್ರುದ್ಧೌ ತವ ಪುತ್ರಹಿತೈಷಿಣೌ।।
ನಿನ್ನ ಪುತ್ರರ ಹಿತೈಷಿಗಳಾದ ಅವಂತಿಯ ವಿಂದಾನುವಿಂದರು ಕ್ರುದ್ಧರಾಗಿ ವಿರಾಟನನ್ನು ಹತ್ತು ಶರಗಳಿಂದ ಹೊಡೆದರು.
07071005a ವಿರಾಟಶ್ಚ ಮಹಾರಾಜ ತಾವುಭೌ ಸಮರೇ ಸ್ಥಿತೌ।
07071005c ಪರಾಕ್ರಾಂತೌ ಪರಾಕ್ರಮ್ಯ ಯೋಧಯಾಮಾಸ ಸಾನುಗೌ।।
ಮಹಾರಾಜ ವಿರಾಟನಾದರೋ ಸಮರದಲ್ಲಿ ಅನುಗರೊಂದಿಗೆ ನಿಂತಿದ್ದ ಆ ಇಬ್ಬರು ಪರಾಕ್ರಾಂತರನ್ನು ಪರಾಕ್ರಮದೊಂದಿಗೆ ಯುದ್ಧಮಾಡತೊಡಗಿದನು.
07071006a ತೇಷಾಂ ಯುದ್ಧಂ ಸಮಭವದ್ದಾರುಣಂ ಶೋಣಿತೋದಕಂ।
07071006c ಸಿಂಹಸ್ಯ ದ್ವಿಪಮುಖ್ಯಾಭ್ಯಾಂ ಪ್ರಭಿನ್ನಾಭ್ಯಾಂ ಯಥಾ ವನೇ।।
ವನದಲ್ಲಿ ಸಿಂಹಕ್ಕೂ ಮದಿಸಿದ ಎರಡು ಸಲಗಗಳಿಗೂ ನಡೆಯುವಂತೆ ಅವರ ನಡುವೆ ನೀರಿನಂತೆ ರಕ್ತವನ್ನು ಸುರಿಸುವ ದಾರುಣವಾದ ಯುದ್ಧವು ನಡೆಯಿತು.
07071007a ಬಾಹ್ಲೀಕಂ ರಭಸಂ ಯುದ್ಧೇ ಯಾಜ್ಞಸೇನಿರ್ಮಹಾಬಲಃ।
07071007c ಆಜಘ್ನೇ ವಿಶಿಖೈಸ್ತೀಕ್ಷ್ಣೈರ್ಘೋರೈರ್ಮರ್ಮಾಸ್ಥಿಭೇದಿಭಿಃ।।
ಯುದ್ಧದಲ್ಲಿ ಮಹಾಬಲ ಯಾಜ್ಞಸೇನಿಯು ಬಾಹ್ಲೀಕನನ್ನು ಮರ್ಮ-ಅಸ್ತಿಗಳನ್ನು ಭೇದಿಸಬಲ್ಲ ಘೋರವಾದ ತೀಕ್ಷ್ಣವಾದ ವಿಶಿಖಗಳಿಂದ ಹೊಡೆದನು.
07071008a ಬಾಹ್ಲೀಕೋ ಯಾಜ್ಞಸೇನಿಂ ತು ಹೇಮಪುಂಖೈಃ ಶಿಲಾಶಿತೈಃ।
07071008c ಆಜಘಾನ ಭೃಶಂ ಕ್ರುದ್ಧೋ ನವಭಿರ್ನತಪರ್ವಭಿಃ।।
ಆಗ ಬಾಹ್ಲೀಕನು ಕ್ರುದ್ಧನಾಗಿ ಯಾಜ್ಞಸೇನಿಯನ್ನು ಒಂಭತ್ತು ಹೇಮಪುಂಖಗಳಿರುವ ಶಿಲಾಶಿತ ನತಪರ್ವಗಳಿಂದ ಜೋರಾಗಿ ಹೊಡೆದನು.
07071009a ತದ್ಯುದ್ಧಮಭವದ್ಘೋರಂ ಶರಶಕ್ತಿಸಮಾಕುಲಂ।
07071009c ಭೀರೂಣಾಂ ತ್ರಾಸಜನನಂ ಶೂರಾಣಾಂ ಹರ್ಷವರ್ಧನಂ।।
ಆಗ ಅಲ್ಲಿ ಹೇಡಿಗಳಿಗೆ ಭಯವನ್ನುಂಟುಮಾಡುವ, ಶೂರರ ಹರ್ಷವನ್ನು ಹೆಚ್ಚಿಸುವ ಶರ-ಶಕ್ತಿ ಸಮೂಹಗಳ ಘೋರ ಯುದ್ಧವು ನಡೆಯಿತು.
07071010a ತಾಭ್ಯಾಂ ತತ್ರ ಶರೈರ್ಮುಕ್ತೈರಂತರಿಕ್ಷಂ ದಿಶಸ್ತಥಾ।
07071010c ಅಭವತ್ಸಂವೃತಂ ಸರ್ವಂ ನ ಪ್ರಾಜ್ಞಾಯತ ಕಿಂ ಚನ।।
ಅವರಿಬ್ಬರೂ ಬಿಡುತ್ತಿದ್ದ ಬಾಣಗಳಿಂದ ಅಂತರಿಕ್ಷ ಮತ್ತು ದಿಕ್ಕುಗಳೂ ಮುಚ್ಚಿಹೋಗಿ ಎಲ್ಲಿ ಏನಾಗುತ್ತದೆಯೆಂದು ಯಾರಿಗೂ ತಿಳಿಯುತ್ತಿರಲಿಲ್ಲ.
07071011a ಶೈಬ್ಯೋ ಗೋವಾಸನೋ ಯುದ್ಧೇ ಕಾಶ್ಯಪುತ್ರಂ ಮಹಾರಥಂ।
07071011c ಸಸೈನ್ಯೋ ಯೋಧಯಾಮಾಸ ಗಜಃ ಪ್ರತಿಗಜಂ ಯಥಾ।।
ಆನೆಯು ಮತ್ತೊಂದು ಆನೆಯೊಂದಿಗೆ ಹೇಗೋ ಹಾಗೆ ಶೈಬ್ಯ ಗೋವಾಸನು ಯುದ್ಧದಲ್ಲಿ ಸೈನ್ಯದೊಂದಿಗೆ ಮಹಾರಥ ಕಾಶ್ಯಪುತ್ರನೊಡನೆ ಯುದ್ಧಮಾಡಿದನು.
07071012a ಬಾಹ್ಲೀಕರಾಜಃ ಸಂರಬ್ಧೋ ದ್ರೌಪದೇಯಾನ್ಮಹಾರಥಾನ್।
07071012c ಮನಃ ಪಂಚೇಂದ್ರಿಯಾಣೀವ ಶುಶುಭೇ ಯೋಧಯನ್ರಣೇ।।
ಮನಸ್ಸು ಪಂಚೇಂದ್ರಿಯಗಳೊಡನೆ ಹೇಗೋ ಹಾಗೆ ಸಂರಬ್ಧನಾದ ಬಾಹ್ಲೀಕ ರಾಜನು ರಣದಲ್ಲಿ ಮಹಾರಥ ದ್ರೌಪದೇಯರೊಡನೆ ಹೋರಾಡುತ್ತಾ ಶೋಭಿಸಿದನು.
07071013a ಅಯೋಧಯಂಸ್ತೇ ಚ ಭೃಶಂ ತಂ ಶರೌಘೈಃ ಸಮಂತತಃ।
07071013c ಇಂದ್ರಿಯಾರ್ಥಾ ಯಥಾ ದೇಹಂ ಶಶ್ವದ್ದೇಹಭೃತಾಂ ವರ।।
ದೇಹಧಾರಿಗಳಲ್ಲಿ ಶ್ರೇಷ್ಠನೇ! ಇಂದ್ರಿಯ ವಿಷಯಗಳು ಹೇಗೆ ದೇಹವನ್ನು ಕಲಕುತ್ತಿರುತ್ತವೆಯೋ ಹಾಗೆ ಯುದ್ಧಮಾಡುತ್ತಿದ್ದ ಅವರು ಅವನನ್ನು ಎಲ್ಲ ಕಡೆಗಳಿಂದ ಶರೌಘಗಳಿಂದ ಪೀಡಿಸುತ್ತಿದ್ದರು.
07071014a ವಾರ್ಷ್ಣೇಯಂ ಸಾತ್ಯಕಿಂ ಯುದ್ಧೇ ಪುತ್ರೋ ದುಃಶಾಸನಸ್ತವ।
07071014c ಆಜಘ್ನೇ ಸಾಯಕೈಸ್ತೀಕ್ಷ್ಣೈರ್ನವಭಿರ್ನತಪರ್ವಭಿಃ।।
ಯುದ್ಧದಲ್ಲಿ ವಾರ್ಷ್ಣೇಯ ಸಾತ್ಯಕಿಯನ್ನು ನಿನ್ನ ಮಗ ದುಃಶಾಸನನು ತೀಕ್ಷ್ಣ ಸಾಯಕಗಳಿಂದ ಮತ್ತು ಒಂಭತ್ತು ನತಪರ್ವಗಳಿಂದ ಹೊಡೆದನು.
07071015a ಸೋಽತಿವಿದ್ಧೋ ಬಲವತಾ ಮಹೇಷ್ವಾಸೇನ ಧನ್ವಿನಾ।
07071015c ಈಷನ್ಮೂರ್ಚಾಂ ಜಗಾಮಾಶು ಸಾತ್ಯಕಿಃ ಸತ್ಯವಿಕ್ರಮಃ।।
ಮಹೇಷ್ವಾಸ ಧನ್ವಿಯಿಂದ ಬಲವತ್ತಾಗಿ ಬಾಣಗಳಿಂದ ಹೊಡೆಯಲ್ಪಟ್ಟು ಅತಿಯಾಗಿ ಗಾಯಗೊಂಡ ಸತ್ಯಮಿಕ್ರಮಿ ಸಾತ್ಯಕಿಯು ಕ್ಷಣಕಾಲ ಮೂರ್ಛಿತನಾದನು.
07071016a ಸಮಾಶ್ವಸ್ತಸ್ತು ವಾರ್ಷ್ಣೇಯಸ್ತವ ಪುತ್ರಂ ಮಹಾರಥಂ।
07071016c ವಿವ್ಯಾಧ ದಶಭಿಸ್ತೂರ್ಣಂ ಸಾಯಕೈಃ ಕಂಕಪತ್ರಿಭಿಃ।।
ತಕ್ಷಣವೇ ಎಚ್ಚೆತ್ತು ವಾರ್ಷ್ಣೇಯನು ಹತ್ತು ಕಂಕಪತ್ರಿ ಸಾಯಕಗಳಿಂದ ನಿನ್ನ ಮಹಾರಥ ಪುತ್ರನನ್ನು ಹೊಡೆದನು.
07071017a ತಾವನ್ಯೋನ್ಯಂ ದೃಢಂ ವಿದ್ಧಾವನ್ಯೋನ್ಯಶರವಿಕ್ಷತೌ।
07071017c ರೇಜತುಃ ಸಮರೇ ರಾಜನ್ಪುಷ್ಪಿತಾವಿವ ಕಿಂಶುಕೌ।।
ರಾಜನ್! ಅನ್ಯೋನ್ಯರನ್ನು ದೃಢವಾಗಿ ಹೊಡೆದು ಗಾಯಗೊಳಿಸಿ ಗಾಯಗೊಂಡ ಅವರಿಬ್ಬರೂ ಸಮರದಲ್ಲಿ ಹೂಬಿಟ್ಟ ಮುತ್ತುಗದ ಮರಗಳಂತೆ ರಾರಾಜಿಸುತ್ತಿದ್ದರು.
07071018a ಅಲಂಬುಸಸ್ತು ಸಂಕ್ರುದ್ಧಃ ಕುಂತಿಭೋಜಶರಾರ್ದಿತಃ।
07071018c ಅಶೋಭತ ಪರಂ ಲಕ್ಷ್ಮ್ಯಾ ಪುಷ್ಪಾಢ್ಯ ಇವ ಕಿಂಶುಕಃ।।
ಕುಂತಿಭೋಜನ ಶರಗಳಿಂದ ಗಾಯಗೊಂಡಿದ್ದ ಅಲಂಬುಸನಾದರೋ ಪರಮ ಸೊಬಗಿನಿಂದ ಹೂಬಿಟ್ಟ ಮುತ್ತುಗದ ಮರದಂತೆ ಶೋಭಿಸಿದನು.
07071019a ಕುಂತಿಭೋಜಂ ತತೋ ರಕ್ಷೋ ವಿದ್ಧ್ವಾ ಬಹುಭಿರಾಯಸೈಃ।
07071019c ಅನದದ್ಭೈರವಂ ನಾದಂ ವಾಹಿನ್ಯಾಃ ಪ್ರಮುಖೇ ತವ।।
ಅವನು ಕುಂತಿಭೋಜನನ್ನು ಅನೇಕ ಆಯಸಗಳಿಂದ ಹೊಡೆದು ಗಾಯಗೊಳಿಸಿ ನಿನ್ನ ಸೇನೆಗಳ ಎದಿರು ಭೈರವ ಕೂಗನ್ನು ಕೂಗಿದನು.
07071020a ತತಸ್ತೌ ಸಮರೇ ಶೂರೌ ಯೋಧಯಂತೌ ಪರಸ್ಪರಂ।
07071020c ದದೃಶುಃ ಸರ್ವಭೂತಾನಿ ಶಕ್ರಜಂಭೌ ಯಥಾ ಪುರಾ।।
ಹಿಂದೆ ಶಕ್ರ-ಜಂಭಾಸುರರಂತೆ ಸಮರದಲ್ಲಿ ಪರಸ್ಪರರೊಡನೆ ಯುದ್ಧಮಾಡುತ್ತಿದ್ದ ಆ ಇಬ್ಬರು ಶೂರರನ್ನು ಎಲ್ಲರೂ ನೋಡಿದರು.
07071021a ಶಕುನಿಂ ರಭಸಂ ಯುದ್ಧೇ ಕೃತವೈರಂ ಚ ಭಾರತ।
07071021c ಮಾದ್ರೀಪುತ್ರೌ ಚ ಸಂರಬ್ಧೌ ಶರೈರರ್ದಯತಾಂ ಮೃಧೇ।।
ಭಾರತ! ವೈರವನ್ನು ಸಾಧಿಸಿದ್ದ ರಭಸದ ಶಕುನಿಯನ್ನು ಸಂಗ್ರಾಮದಲ್ಲಿ ಕ್ರುದ್ಧರಾದ ಮಾದ್ರೀಪುತ್ರರಿಬ್ಬರೂ ಶರಗಳಿಂದ ಅರೆದರು.
07071022a ತನ್ಮೂಲಃ ಸ ಮಹಾರಾಜ ಪ್ರಾವರ್ತತ ಜನಕ್ಷಯಃ।
07071022c ತ್ವಯಾ ಸಂಜನಿತೋಽತ್ಯರ್ಥಂ ಕರ್ಣೇನ ಚ ವಿವರ್ಧಿತಃ।।
07071023a ಉದ್ಧುಕ್ಷಿತಶ್ಚ ಪುತ್ರೇಣ ತವ ಕ್ರೋಧಹುತಾಶನಃ।
07071023c ಯ ಇಮಾಂ ಪೃಥಿವೀಂ ರಾಜನ್ದಗ್ಧುಂ ಸರ್ವಾನ್ಸಮುದ್ಯತಃ।।
ಮಹಾರಾಜ! ರಾಜನ್! ನಿನ್ನಿಂದ ಹುಟ್ಟಿದ, ಕರ್ಣನಿಂದ ವೃದ್ಧಿಸಲ್ಪಟ್ಟ, ನಿನ್ನ ಪುತ್ರರು ಇರಿಸಿಕೊಂಡಿದ್ದ ಕ್ರೋಧವೆಂಬ ಆ ಅಗ್ನಿಯು ಇಡೀ ಭೂಮಿಯನ್ನು ಎಲ್ಲವನ್ನೂ ಭಸ್ಮಮಾಡಲು ತೊಡಗಿತು. ಆ ಮೂಲದಿಂದ ಜನಕ್ಷಯಯವು ನಡೆಯಿತು.
07071024a ಶಕುನಿಃ ಪಾಂಡುಪುತ್ರಾಭ್ಯಾಂ ಕೃತಃ ಸ ವಿಮುಖಃ ಶರೈಃ।
07071024c ನಾಭ್ಯಜಾನತ ಕರ್ತವ್ಯಂ ಯುಧಿ ಕಿಂ ಚಿತ್ ಪರಾಕ್ರಮಂ।।
ಪಾಂಡುಪುತ್ರರಿಬ್ಬರ ಶರಗಳಿಂದ ವಿಮುಖನಾಗಿಸಿಕೊಂಡ, ಯುದ್ಧದಲ್ಲಿ ಸ್ವಲ್ಪವೇ ಪರಾಕ್ರಮವುಳ್ಳ ಶಕುನಿಯು ಏನು ಮಾಡಬೇಕೆಂದು ತಿಳಿಯಲಾರದೇ ಹೋದನು.
07071025a ವಿಮುಖಂ ಚೈನಮಾಲೋಕ್ಯ ಮಾದ್ರೀಪುತ್ರೌ ಮಹಾರಥೌ।
07071025c ವವರ್ಷತುಃ ಪುನರ್ಬಾಣೈರ್ಯಥಾ ಮೇಘೌ ಮಹಾಗಿರಿಂ।।
ಅವನು ವಿಮುಖನಾಗಿದ್ದುದನ್ನು ನೋಡಿ ಮಹಾರಥ ಮಾದ್ರೀಪುತ್ರರು ಮಹಾಗಿರಿಯ ಮೇಲೆ ಮೋಡಗಳು ಹೇಗೋ ಹಾಗೆ ಅವನ ಮೇಲೆ ಪುನಃ ಬಾಣಗಳ ಮಳೆಯನ್ನು ಸುರಿಸಿದರು.
07071026a ಸ ವಧ್ಯಮಾನೋ ಬಹುಭಿಃ ಶರೈಃ ಸನ್ನತಪರ್ವಭಿಃ।
07071026c ಸಂಪ್ರಾಯಾಜ್ಜವನೈರಶ್ವೈರ್ದ್ರೋಣಾನೀಕಾಯ ಸೌಬಲಃ।।
ಅನೇಕ ಸನ್ನತಪರ್ವ ಶರಗಳಿಂದ ಹೊಡೆಯಲ್ಪಟ್ಟ ಸೌಬಲನು ವೇಗವಾಗಿ ಹೋಗುವ ಕುದುರೆಗಳ ಸಹಾಯದಿಂದ ದ್ರೋಣನ ಸೇನೆಯನ್ನು ಬಿಟ್ಟು ಓಡಿಹೋದನು.
07071027a ಘಟೋತ್ಕಚಸ್ತಥಾ ಶೂರಂ ರಾಕ್ಷಸಂ ತಮಲಾಯುಧಂ।
07071027c ಅಭ್ಯಯಾದ್ರಭಸಂ ಯುದ್ಧೇ ವೇಗಮಾಸ್ಥಾಯ ಮಧ್ಯಮಂ।।
ಆಗ ಘಟೋತ್ಕಚನು ಶೂರ ರಾಕ್ಷಸ ತಮಲಾಯುಧ ರಭಸ ಅಲಂಬುಸನನ್ನು ಯುದ್ಧದಲ್ಲಿ ಮಧ್ಯಮ ವೇಗವನ್ನು ಬಳಸಿ ಆಕ್ರಮಣಿಸಿದನು.
07071028a ತಯೋರ್ಯುದ್ಧಂ ಮಹಾರಾಜ ಚಿತ್ರರೂಪಮಿವಾಭವತ್।
07071028c ಯಾದೃಶಂ ಹಿ ಪುರಾ ವೃತ್ತಂ ರಾಮರಾವಣಯೋರ್ಮೃಧೇ।।
ಮಹಾರಾಜ! ಅವರ ಯುದ್ಧವು ಹಿಂದೆ ರಾಮ-ರಾವಣರ ನಡುವೆ ನಡೆದ ಯುದ್ಧದಂತೆ ವಿಚಿತ್ರವಾಗಿ ಕಾಣುತ್ತಿತ್ತು.
07071029a ತತೋ ಯುಧಿಷ್ಠಿರೋ ರಾಜಾ ಮದ್ರರಾಜಾನಮಾಹವೇ।
07071029c ವಿದ್ಧ್ವಾ ಪಂಚಾಶತಾ ಬಾಣೈಃ ಪುನರ್ವಿವ್ಯಾಧ ಸಪ್ತಭಿಃ।।
ಆಗ ರಾಜಾ ಯುಧಿಷ್ಠಿರನು ಆಹವದಲ್ಲಿ ಮದ್ರರಾಜನನ್ನು ಐನೂರು ಬಾಣಗಳಿಂದ ಹೊಡೆದು ಪುನಃ ಏಳರಿಂದ ಹೊಡೆದನು.
07071030a ತತಃ ಪ್ರವವೃತೇ ಯುದ್ಧಂ ತಯೋರತ್ಯದ್ಭುತಂ ನೃಪ।
07071030c ಯಥಾ ಪೂರ್ವಂ ಮಹದ್ಯುದ್ಧಂ ಶಂಬರಾಮರರಾಜಯೋಃ।।
ನೃಪ! ಆಗ ಅವರ ನಡುವೆ ಹಿಂದೆ ಶಂಬರ ಮತ್ತು ಅಮರರಾಜರ ನಡುವೆ ಮಹಾಯುದ್ಧವು ನಡೆದಂತೆ ಅತ್ಯದ್ಭುತ ಯುದ್ಧವು ನಡೆಯಿತು.
07071031a ವಿವಿಂಶತಿಶ್ಚಿತ್ರಸೇನೋ ವಿಕರ್ಣಶ್ಚ ತವಾತ್ಮಜಃ।
07071031c ಅಯೋಧಯನ್ಭೀಮಸೇನಂ ಮಹತ್ಯಾ ಸೇನಯಾ ವೃತಾಃ।।
ನಿನ್ನ ಮಕ್ಕಳಾದ ವಿವಿಂಶತಿ, ಚಿತ್ರಸೇನ ಮತ್ತು ವಿಕರ್ಣರು ಮಹಾಸೇನೆಗಳಿಂದ ಸುತ್ತುವರೆಯಲ್ಪಟ್ಟು ಭೀಮಸೇನನೊಂದಿಗೆ ಯುದ್ಧಮಾಡಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ದ್ವಂದ್ವಯುದ್ಧೇ ಏಕಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ದ್ವಂದ್ವಯುದ್ಧ ಎನ್ನುವ ಎಪ್ಪತ್ತೊಂದನೇ ಅಧ್ಯಾಯವು.