070 ಸಂಕುಲಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಜಯದ್ರಥವಧ ಪರ್ವ

ಅಧ್ಯಾಯ 70

ಸಾರ

ದ್ರೋಣ-ಧೃಷ್ಟದ್ಯುಮ್ನರ ಯುದ್ಧ (1-34). ಸಂಕುಲ ಯುದ್ಧ (35-51).

07070001 ಸಂಜಯ ಉವಾಚ।
07070001a ಪ್ರವಿಷ್ಟಯೋರ್ಮಹಾರಾಜ ಪಾರ್ಥವಾರ್ಷ್ಣೇಯಯೋಸ್ತದಾ।
07070001c ದುರ್ಯೋಧನೇ ಪ್ರಯಾತೇ ಚ ಪೃಷ್ಠತಃ ಪುರುಷರ್ಷಭೇ।।
07070002a ಜವೇನಾಭ್ಯದ್ರವನ್ದ್ರೋಣಂ ಮಹತಾ ನಿಸ್ವನೇನ ಚ।
07070002c ಪಾಂಡವಾಃ ಸೋಮಕೈಃ ಸಾರ್ಧಂ ತತೋ ಯುದ್ಧಮವರ್ತತ।।

ಸಂಜಯನು ಹೇಳಿದನು: “ಮಹಾರಾಜ! ವ್ಯೂಹವನ್ನು ಪ್ರವೇಶಿಸಿದ್ದ ಪುರುಷರ್ಷಭ ಪಾರ್ಥ-ವಾರ್ಷ್ಣೇಯರ ಹಿಂದೆ ದುರ್ಯೋಧನನು ಹೋದ ನಂತರ ಪಾಂಡವರು ಸೋಮಕರೊಡಗೂಡಿ ಮಹಾ ಶಬ್ಧಗಳಿಂದ ವೇಗವಾಗಿ ದ್ರೋಣನನ್ನು ಆಕ್ರಮಣಿಸಿದರು. ಆಗ ಅವರೊಡನೆ ಯುದ್ಧವು ನಡೆಯಿತು.

07070003a ತದ್ಯುದ್ಧಮಭವದ್ಘೋರಂ ತುಮುಲಂ ಲೋಮಹರ್ಷಣಂ।
07070003c ಪಾಂಚಾಲಾನಾಂ ಕುರೂಣಾಂ ಚ ವ್ಯೂಹಸ್ಯ ಪುರತೋಽದ್ಭುತಂ।।

ಆಗ ವ್ಯೂಹದ ಮುಂದೆಯೇ ಪಾಂಚಾಲರ ಮತ್ತು ಕುರುಗಳ ನಡುವೆ ಘೋರವಾದ ಅದ್ಭುತವಾದ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು.

07070004a ರಾಜನ್ಕದಾ ಚಿನ್ನಾಸ್ಮಾಭಿರ್ದೃಷ್ಟಂ ತಾದೃಂ ನ ಚ ಶ್ರುತಂ।
07070004c ಯಾದೃಂ ಮಧ್ಯಗತೇ ಸೂರ್ಯೇ ಯುದ್ಧಮಾಸೀದ್ವಿಶಾಂ ಪತೇ।।

ವಿಶಾಂಪತೇ! ರಾಜನ್! ಸೂರ್ಯನು ಮಧ್ಯಾಹ್ನಕ್ಕೇರಲು ನಾವು ಎಂದೂ ಕಂಡಿರದಂತಹ ಮತ್ತು ಕೇಳಿರದಂತಹ ಯುದ್ಧವು ನಡೆಯಿತು.

07070005a ಧೃಷ್ಟದ್ಯುಮ್ನಮುಖಾಃ ಪಾರ್ಥಾ ವ್ಯೂಢಾನೀಕಾಃ ಪ್ರಹಾರಿಣಃ।
07070005c ದ್ರೋಣಸ್ಯ ಸೈನ್ಯಂ ತೇ ಸರ್ವೇ ಶರವರ್ಷೈರವಾಕಿರನ್।।

ಸೇನೆಗಳ ವ್ಯೂಹದೊಂದಿಗೆ ಪ್ರಹಾರಿಗಳಾದ ಪಾರ್ಥರು ಎಲ್ಲರೂ ಧೃಷ್ಟದ್ಯುಮ್ನನನನ್ನು ಮುಂದಿರಿಸಿಕೊಂಡು ದ್ರೋಣನ ಸೈನ್ಯವನ್ನು ಶರವರ್ಷಗಳಿಂದ ಮುಸುಕಿದರು.

07070006a ವಯಂ ದ್ರೋಣಂ ಪುರಸ್ಕೃತ್ಯ ಸರ್ವಶಸ್ತ್ರಭೃತಾಂ ವರಂ।
07070006c ಪಾರ್ಷತಪ್ರಮುಖಾನ್ಪಾರ್ಥಾನಭ್ಯವರ್ಷಾಮ ಸಾಯಕೈಃ।।

ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠನಾದ ದ್ರೋಣನನ್ನು ಮುಂದಿರಿಸಿಕೊಂಡು ನಾವು ಪಾರ್ಷತ ಪ್ರಮುಖರಾದ ಪಾರ್ಥರ ಮೇಲೆ ಸಾಯಕಗಳನ್ನು ಸುರಿಸಿದೆವು.

07070007a ಮಹಾಮೇಘಾವಿವೋದೀರ್ಣೌ ಮಿಶ್ರವಾತೌ ಹಿಮಾತ್ಯಯೇ।
07070007c ಸೇನಾಗ್ರೇ ವಿಪ್ರಕಾಶೇತೇ ರುಚಿರೇ ರಥಭೂಷಿತೇ।।

ಸುಂದರವಾಗಿ ಅಲಂಕೃತ ರಥಗಳಲ್ಲಿ ಸೇನೆಗಳ ಅಗ್ರಭಾಗಗಳಲ್ಲಿದ್ದ ಅವರಿಬ್ಬರೂ ಬೇಸಿಗೆಯಲ್ಲಿ ವಿರುದ್ಧ ದಿಕ್ಕುಗಳಲ್ಲಿ ಬೀಸುವ ಚಂಡಮಾರುತದಿಂದ ಪರಸ್ಪರ ತಾಗುವ ಮಹಾ ಮೇಘಗಳಂತೆ ಪ್ರಕಾಶಿಸುತ್ತಿದ್ದರು.

07070008a ಸಮೇತ್ಯ ತು ಮಹಾಸೇನೇ ಚಕ್ರತುರ್ವೇಗಮುತ್ತಮಂ।
07070008c ಜಾಹ್ನವೀಯಮುನೇ ನದ್ಯೌ ಪ್ರಾವೃಷೀವೋಲ್ಬಣೋದಕೇ।।

ಮಳೆಗಾಲದಲ್ಲಿ ಪ್ರವಾಹತುಂಬಿ ರಭಸದಿಂದ ಪರಸ್ಪರರ ಕಡೆ ಹರಿಯುವ ಜಾಹ್ನವೀ-ಯಮುನಾ ನದಿಗಳಂತೆ ಆ ಎರಡು ಮಹಾಸೇನೆಗಳು ಅತಿ ವೇಗದಿಂದ ಪರಸ್ಪರರನ್ನು ಕೂಡಿ ಯುದ್ಧ ಮಾಡಿದವು.

07070009a ನಾನಾಶಸ್ತ್ರಪುರೋವಾತೋ ದ್ವಿಪಾಶ್ವರಥಸಂವೃತಃ।
07070009c ಗದಾವಿದ್ಯುನ್ಮಹಾರೌದ್ರಃ ಸಂಗ್ರಾಮಜಲದೋ ಮಹಾನ್।।
07070010a ಭಾರದ್ವಾಜಾನಿಲೋದ್ಧೂತಃ ಶರಧಾರಾಸಹಸ್ರವಾನ್।
07070010c ಅಭ್ಯವರ್ಷನ್ಮಹಾರೌದ್ರಃ ಪಾಂಡುಸೇನಾಗ್ನಿಮುದ್ಧತಂ।।

ನಾನಾ ಶಸ್ತ್ರಗಳೇ ಮೊದಲು ಬೀಸುವ ಚಂಡಮಾರುತವಾಗಿ, ಆನೆ-ಕುದುರೆ-ರಥಗಳ ಸಂಕುಲಗಳೆಂಬ ಮಿಂಚು ಮತ್ತು ಮಹಾರೌದ್ರ ಗದೆಗಳೇ ಮಹಾ ಮೇಘಗಳಾಗಿರಲು, ಭಾರದ್ವಾಜನೆಂಬ ಚಂಡಮಾರುತದಿಂದ ಹೊತ್ತುತಂದ ಸಹಸ್ರಾರು ಶರಗಳ ಧಾರೆಗಳನ್ನು ಪಾಂಡುಸೇನೆಯಿಂದ ಉಂಟಾದ ಮಹಾರೌದ್ರ ಅಗ್ನಿಯ ಮೇಲೆ ಸುರಿಸಿ ಆರಿಸಲು ಪ್ರಯತ್ನಿಸುತ್ತಿರುವಂತಿತ್ತು.

07070011a ಸಮುದ್ರಮಿವ ಘರ್ಮಾಂತೇ ವಿವಾನ್ಘೋರೋ ಮಹಾನಿಲಃ।
07070011c ವ್ಯಕ್ಷೋಭಯದನೀಕಾನಿ ಪಾಂಡವಾನಾಂ ದ್ವಿಜೋತ್ತಮಃ।।

ಬೇಸಗೆಯ ಕೊನೆಯಲ್ಲಿ ಘೋರವಾದ ಚಂಡಮಾರುತವು ಸಮುದ್ರವನ್ನು ಕ್ಷೋಭೆಗೊಳಿಸುವಂತೆ ದ್ವಿಜೋತ್ತಮನು ಪಾಂಡವರ ಸೇನೆಗಳನ್ನು ಅಲ್ಲೋಲಕಲ್ಲೋಲಗೊಳಿಸಿದನು.

07070012a ತೇಽಪಿ ಸರ್ವಪ್ರಯತ್ನೇನ ದ್ರೋಣಮೇವ ಸಮಾದ್ರವನ್।
07070012c ಬಿಭಿತ್ಸಂತೋ ಮಹಾಸೇತುಂ ವಾರ್ಯೋಘಾಃ ಪ್ರಬಲಾ ಇವ।।

ಅವರೂ ಕೂಡ ಪ್ರಬಲವಾದ ಅಲೆಗಳೊಂದಿಗೆ ಮಹಾಸೇತುವೆಯನ್ನು ಕೊಚ್ಚಿಕೊಂಡು ಹೋಗಲು ಪ್ರಯತ್ನಿಸುವಂತೆ ಸರ್ವ ಪ್ರಯತ್ನದಿಂದ ದ್ರೋಣನನ್ನು ಆಕ್ರಮಣಿಸಿದರು.

07070013a ವಾರಯಾಮಾಸ ತಾನ್ದ್ರೋಣೋ ಜಲೌಘಾನಚಲೋ ಯಥಾ।
07070013c ಪಾಂಡವಾನ್ಸಮರೇ ಕ್ರುದ್ಧಾನ್ಪಾಂಚಾಲಾಂಶ್ಚ ಸಕೇಕಯಾನ್।।

ಜೋರಾಗಿ ಬಂದು ಅಪ್ಪಳಿಸುವ ಅಲೆಗಳನ್ನು ಪರ್ವತವು ಹೇಗೆ ತಡೆಯುತ್ತದೆಯೋ ಹಾಗೆ ದ್ರೋಣನು ಸಮರದಲ್ಲಿ ಕ್ರುದ್ಧರಾಗಿದ್ದ ಪಾಂಡವರನ್ನೂ, ಪಾಂಚಾಲರನ್ನೂ, ಕೇಕಯರನ್ನೂ ತಡೆದನು.

07070014a ಅಥಾಪರೇಽಪಿ ರಾಜಾನಃ ಪರಾವೃತ್ಯ ಸಮಂತತಃ।
07070014c ಮಹಾಬಲಾ ರಣೇ ಶೂರಾಃ ಪಾಂಚಾಲಾನನ್ವವಾರಯನ್।।

ಇತರ ಮಹಾಬಲಶಾಲೀ ಶೂರ ರಾಜರೂ ಕೂಡ ರಣದಲ್ಲಿ ಎಲ್ಲ ಕಡೆಗಳಿಂದ ಮುತ್ತಿಗೆ ಹಾಕುತ್ತಾ ಪಾಂಚಾಲರನ್ನು ತಡೆದರು.

07070015a ತತೋ ರಣೇ ನರವ್ಯಾಘ್ರಃ ಪಾರ್ಷತಃ ಪಾಂಡವೈಃ ಸಹ।
07070015c ಸಂಜಘಾನಾಸಕೃದ್ದ್ರೋಣಂ ಬಿಭಿತ್ಸುರರಿವಾಹಿನೀಂ।।

ಆಗ ರಣದಲ್ಲಿ ನರವ್ಯಾಘ್ರ ಪಾರ್ಷತನು ಪಾಂಡವರೊಂದಿಗೆ ಅರಿಸೇನೆಯನ್ನು ಒಡೆಯಲು ಬಯಸಿ ದ್ರೋಣನನ್ನು ಹೊಡೆಯಲು ಪ್ರಾರಂಭಿಸಿದನು.

07070016a ಯಥೈವ ಶರವರ್ಷಾಣಿ ದ್ರೋಣೋ ವರ್ಷತಿ ಪಾರ್ಷತೇ।
07070016c ತಥೈವ ಶರವರ್ಷಾಣಿ ಧೃಷ್ಟದ್ಯುಮ್ನೋಽಭ್ಯವರ್ಷತ।।

ದ್ರೋಣನು ಹೇಗೆ ಪಾರ್ಷತನ ಮೇಲೆ ಶರವರ್ಷಗಳನ್ನು ಸುರಿಸುತ್ತಿದ್ದನೋ ಹಾಗೆ ಧೃಷ್ಟದ್ಯುಮ್ನನೂ ಕೂಡ ಶರವರ್ಷಗಳನ್ನು ಸುರಿಸಿದನು.

07070017a ಸನಿಸ್ತ್ರಿಂಶಪುರೋವಾತಃ ಶಕ್ತಿಪ್ರಾಸರ್ಷ್ಟಿಸಂವೃತಃ।
07070017c ಜ್ಯಾವಿದ್ಯುಚ್ಚಾಪಸಂಹ್ರಾದೋ ಧೃಷ್ಟದ್ಯುಮ್ನಬಲಾಹಕಃ।।
07070018a ಶರಧಾರಾಶ್ಮವರ್ಷಾಣಿ ವ್ಯಸೃಜತ್ಸರ್ವತೋದಿಶಂ।
07070018c ನಿಘ್ನನ್ರಥವರಾಶ್ವೌಘಾಂಶ್ಚಾದಯಾಮಾಸ ವಾಹಿನೀಂ।।

ಖಡ್ಗ ತೋಮರಗಳೇ ಮೊದಲು ಬೀಸುವ ಚಂಡಮಾರುತವಾಗಿ, ಶಕ್ತಿ-ಪ್ರಾಸ-ಋಷ್ಟಿಗಳಿಂದ ಸಜ್ಜಾಗಿ, ಶಿಂಜಿನಿಯೇ ಮಿಂಚು ಮತ್ತು ಚಾಪದ ಟೇಂಕಾರವೇ ಗುಡುಗಾಗಿರುವ, ಧೃಷ್ಟದ್ಯುಮ್ನನೆಂಬ ಮೋಡವು, ಶರಧಾರೆಗಳೇ ಮಳೆಗಲ್ಲುಗಳನ್ನಾಗಿಸಿ ಎಲ್ಲಕಡೆ ಚೆಲ್ಲುತ್ತ ರಥಶ್ರೇಷ್ಠರ ಸಮೂಹಗಳನ್ನು ಸಂಹರಿಸುತ್ತಾ ಸೇನೆಯನ್ನು ಮುಸುಕಿತು.

07070019a ಯಂ ಯಮಾರ್ಚಚ್ಚರೈರ್ದ್ರೋಣಃ ಪಾಂಡವಾನಾಂ ರಥವ್ರಜಂ।
07070019c ತತಸ್ತತಃ ಶರೈರ್ದ್ರೋಣಮಪಾಕರ್ಷತ ಪಾರ್ಷತಃ।।

ಎಲ್ಲೆಲ್ಲಿ ದ್ರೋಣನು ಪಾಂಡವರ ರಥದ ಸಾಲನ್ನು ಶರಗಳಿಂದ ಹೊಡೆದು ಮುನ್ನುಗ್ಗಲು ಪ್ರಯತ್ನಿಸುತ್ತಿದ್ದನೋ ಅಲ್ಲಲ್ಲಿ ಪಾರ್ಷತನು ಶರಗಳಿಂದ ದ್ರೋಣನನ್ನು ತಡೆಯುತ್ತಿದ್ದನು.

07070020a ತಥಾ ತು ಯತಮಾನಸ್ಯ ದ್ರೋಣಸ್ಯ ಯುಧಿ ಭಾರತ।
07070020c ಧೃಷ್ಟದ್ಯುಮ್ನಂ ಸಮಾಸಾದ್ಯ ತ್ರಿಧಾ ಸೈನ್ಯಮಭಿದ್ಯತ।।

ಭಾರತ! ಯುದ್ಧದಲ್ಲಿ ದ್ರೋಣನು ಎಷ್ಟೇ ಪ್ರಯತ್ನಿಸಿದರೂ ಧೃಷ್ಟಧ್ಯುಮ್ನನನ್ನು ಸಮೀಪಿಸಿ ಸೇನೆಯು ಮೂರಾಗಿ ಒಡೆಯಿತು.

07070021a ಭೋಜಮೇಕೇ ನ್ಯವರ್ತಂತ ಜಲಸಂಧಮಥಾಪರೇ।
07070021c ಪಾಂಡವೈರ್ಹನ್ಯಮಾನಾಶ್ಚ ದ್ರೋಣಮೇವಾಪರೇಽವ್ರಜನ್।।

ಒಂದು ಭೋಜನ ಹಿಂದೆ ಹೋಯಿತು, ಇನ್ನೊಂದು ಜಲಸಂಧನ ಹಿಂದೆ ಹೋಯಿತು. ಇನ್ನೊಂದು ಭಾಗವು ಪಾಂಡವರನ್ನು ಸದೆಬಡಿಯುತ್ತಿದ್ದ ದ್ರೋಣನನ್ನು ಹಿಂಬಾಲಿಸಿತು.

07070022a ಸೈನ್ಯಾನ್ಯಘಟಯದ್ಯಾನಿ ದ್ರೋಣಸ್ತು ರಥಿನಾಂ ವರಃ।
07070022c ವ್ಯಧಮಚ್ಚಾಪಿ ತಾನ್ಯಸ್ಯ ಧೃಷ್ಟದ್ಯುಮ್ನೋ ಮಹಾರಥಃ।।

ರಥಿಗಳಲ್ಲಿ ಶ್ರೇಷ್ಠ ದ್ರೋಣನು ಸೇನೆಗಳನ್ನು ಸಂಘಟಿಸುತ್ತಿದ್ದ ಹಾಗೆಯೇ ಮಹಾರಥ ಧೃಷ್ಟದ್ಯುಮ್ನನು ಅವನ್ನು ಧ್ವಂಸಿಸುತ್ತಿದ್ದನು.

07070023a ಧಾರ್ತರಾಷ್ಟ್ರಾಸ್ತ್ರಿಧಾಭೂತಾ ವಧ್ಯಂತೇ ಪಾಂಡುಸೃಂಜಯೈಃ।
07070023c ಅಗೋಪಾಃ ಪಶವೋಽರಣ್ಯೇ ಬಹುಭಿಃ ಶ್ವಾಪದೈರಿವ।।

ಅರಣ್ಯದಲ್ಲಿ ರಕ್ಷಕರಿಲ್ಲದೆ ಹಸುಗಳು ಅನೇಕ ಹಿಂಸ್ರಮೃಗಗಳಿಂದ ವಧಿಸಲ್ಪಡುವಂತೆ ಧಾರ್ತರಾಷ್ಟ್ರರ ಸೇನೆಯು ಪಾಂಡು-ಸೃಂಜಯರಿಂದ ವಧಿಸಲ್ಪಡುತ್ತಿತ್ತು.

07070024a ಕಾಲಃ ಸಂಗ್ರಸತೇ ಯೋಧಾನ್ಧೃಷ್ಟದ್ಯುಮ್ನೇನ ಮೋಹಿತಾನ್।
07070024c ಸಂಗ್ರಾಮೇ ತುಮುಲೇ ತಸ್ಮಿನ್ನಿತಿ ಸಮ್ಮೇನಿರೇ ಜನಾಃ।।

ಕಾಲನೇ ಧೃಷ್ಟದ್ಯುಮ್ನನ ಮೂಲಕ ಯೋಧರನ್ನು ಮೋಹಿಸಿ ಕಬಳಿಸುತ್ತಿದ್ದಾನೋ ಏನೋ ಎಂದು ಆ ತುಮುಲ ಸಂಗ್ರಾಮವನ್ನು ವೀಕ್ಷಿಸುವ ಜನರು ಅಂದುಕೊಂಡರು.

07070025a ಕುನೃಪಸ್ಯ ಯಥಾ ರಾಷ್ಟ್ರಂ ದುರ್ಭಿಕ್ಷವ್ಯಾಧಿತಸ್ಕರೈಃ।
07070025c ದ್ರಾವ್ಯತೇ ತದ್ವದಾಪನ್ನಾ ಪಾಂಡವೈಸ್ತವ ವಾಹಿನೀ।।

ದುಷ್ಟ ನೃಪನ ರಾಷ್ಟ್ರವು ಹೇಗೆ ದುರ್ಭಿಕ್ಷ, ವ್ಯಾಧಿ ಮತ್ತು ಚೋರರ ಭಯದಿಂದ ಆಪತ್ತಿಗಳಗಾಗುವುದೋ ಹಾಗೆ ನಿನ್ನ ಸೇನೆಯು ಪಾಂಡವ ಸೇನೆಯನ್ನು ಎದುರಿಸಿ ಪಡೆದು ಪಲಾಯನ ಮಾಡಿತು.

07070026a ಅರ್ಕರಶ್ಮಿಪ್ರಭಿನ್ನೇಷು ಶಸ್ತ್ರೇಷು ಕವಚೇಷು ಚ।
07070026c ಚಕ್ಷೂಂಷಿ ಪ್ರತಿಹನ್ಯಂತೇ ಸೈನ್ಯೇನ ರಜಸಾ ತಥಾ।।

ಸೇನೆಗಳ ಶಸ್ತ್ರ ಮತ್ತು ಕವಚಗಳ ಮೇಲೆ ಸೂರ್ಯನ ಕಿರಣಗಳು ಬಿದ್ದು ಅವುಗಳ ಹೊಳಪು ಕಣ್ಣುಗಳನ್ನು ಕೋರೈಸುತ್ತಿದ್ದವು ಮತ್ತು ಧೂಳು ಕಣ್ಣುಗಳನ್ನು ಮುಸುಕಿತ್ತು.

07070027a ತ್ರಿಧಾಭೂತೇಷು ಸೈನ್ಯೇಷು ವಧ್ಯಮಾನೇಷು ಪಾಂಡವೈಃ।
07070027c ಅಮರ್ಷಿತಸ್ತತೋ ದ್ರೋಣಃ ಪಾಂಚಾಲಾನ್ವ್ಯಧಮಚ್ಚರೈಃ।।

ಮೂರು ಭಾಗಗಳಾದ ಸೈನ್ಯವನ್ನು ಪಾಂಡವರು ವಧಿಸುತ್ತಿರಲು ಕುಪಿತನಾದ ದ್ರೋಣನು ಪಾಂಚಾಲರನ್ನು ಶರಗಳಿಂದ ಸಂಹರಿಸತೊಡಗಿದನು.

07070028a ಮೃದ್ನತಸ್ತಾನ್ಯನೀಕಾನಿ ನಿಘ್ನತಶ್ಚಾಪಿ ಸಾಯಕೈಃ।
07070028c ಬಭೂವ ರೂಪಂ ದ್ರೋಣಸ್ಯ ಕಾಲಾಗ್ನೇರಿವ ದೀಪ್ಯತಃ।।

ಅವನ ಸಾಯಕಗಳಿಂದ ಸಂಹರಿಸಲ್ಪಟ್ಟ ಆ ಸೇನೆಗಳು ಮಣ್ಣು ಮುಕ್ಕಿದವು. ಅಗ ದ್ರೋಣನ ರೂಪವು ಉರಿಯುತ್ತಿರುವ ಕಾಲಾಗ್ನಿಯಂತೆ ಆಯಿತು.

07070029a ರಥಂ ನಾಗಂ ಹಯಂ ಚಾಪಿ ಪತ್ತಿನಶ್ಚ ವಿಶಾಂ ಪತೇ।
07070029c ಏಕೈಕೇನೇಷುಣಾ ಸಂಖ್ಯೇ ನಿರ್ಬಿಭೇದ ಮಹಾರಥಃ।।

ವಿಶಾಂಪತೇ! ಆ ಮಹಾರಥನು ರಥ, ಆನೆ, ಕುದುರೆ, ಪದಾತಿಗಳನ್ನು ಒಂದೊಂದೇ ಬಾಣಗಳಿಂದ ರಣದಲ್ಲಿ ಸಂಹರಿಸಿದನು.

07070030a ಪಾಂಡವಾನಾಂ ತು ಸೈನ್ಯೇಷು ನಾಸ್ತಿ ಕಶ್ಚಿತ್ಸ ಭಾರತ।
07070030c ದಧಾರ ಯೋ ರಣೇ ಬಾಣಾನ್ದ್ರೋಣಚಾಪಚ್ಯುತಾಂ ಶಿತಾನ್।।

ಭಾರತ! ಆಗ ರಣದಲ್ಲಿ ದ್ರೋಣನ ಚಾಪದಿಂದ ಹೊರಡುತ್ತಿದ್ದ ನಿಶಿತ ಬಾಣಗಳನ್ನು ಸಹಿಸಿಕೊಳ್ಳುವವರು ಪಾಂಡವರ ಸೇನೆಯಲ್ಲಿ ಯಾರೂ ಇರಲಿಲ್ಲ.

07070031a ತತ್ಪಚ್ಯಮಾನಮರ್ಕೇಣ ದ್ರೋಣಸಾಯಕತಾಪಿತಂ।
07070031c ಬಭ್ರಾಮ ಪಾರ್ಷತಂ ಸೈನ್ಯಂ ತತ್ರ ತತ್ರೈವ ಭಾರತ।।

ಭಾರತ! ಸೂರ್ಯನಿಂದ ಬೇಯಿಸಲ್ಪಡುತ್ತಿದ್ದವರಂತೆ ದ್ರೋಣನ ಸಾಯಕಗಳಿಂದ ಬೆಂದು ಪಾರ್ಷತನ ಸೇನೆಯು ಅಲ್ಲಲ್ಲಿಯೇ ತಿರುಗತೊಡಗಿತು.

07070032a ತಥೈವ ಪಾರ್ಷತೇನಾಪಿ ಕಾಲ್ಯಮಾನಂ ಬಲಂ ತವ।
07070032c ಅಭವತ್ಸರ್ವತೋ ದೀಪ್ತಂ ಶುಷ್ಕಂ ವನಮಿವಾಗ್ನಿನಾ।।

ಹಾಗೆಯೇ ಪಾರ್ಷತನಿಂದ ಸಂಹರಿಸಲ್ಪಡುತ್ತಿದ್ದ ನಿನ್ನ ಸೇನೆಯು ಉರಿಯುತ್ತಿರುವ ಅಗ್ನಿಯಿಂದ ಎಲ್ಲ ಕಡೆಗಳಲ್ಲಿ ಸುಟ್ಟುಹೋಗುತ್ತಿರುವ ಒಣ ವನದಂತಾಯಿತು.

07070033a ವಧ್ಯಮಾನೇಷು ಸೈನ್ಯೇಷು ದ್ರೋಣಪಾರ್ಷತಸಾಯಕೈಃ।
07070033c ತ್ಯಕ್ತ್ವಾ ಪ್ರಾಣಾನ್ಪರಂ ಶಕ್ತ್ಯಾ ಪ್ರಾಯುಧ್ಯಂತ ಸ್ಮ ಸೈನಿಕಾಃ।।

ದ್ರೋಣ ಮತ್ತು ಪಾರ್ಷತರ ಸಾಯಕಗಳಿಂದ ವಧಿಸಲ್ಪಡುತ್ತಿದ್ದ ಸೇನೆಗಳಲ್ಲಿ ಸೈನಿಕರು ಪ್ರಾಣಗಳನ್ನೂ ತೊರೆದು ಪರಮ ಶಕ್ತಿಯಿಂದ ಯುದ್ಧಮಾಡುತ್ತಿದ್ದರು.

07070034a ತಾವಕಾನಾಂ ಪರೇಷಾಂ ಚ ಯುಧ್ಯತಾಂ ಭರತರ್ಷಭ।
07070034c ನಾಸೀತ್ಕಶ್ಚಿನ್ಮಹಾರಾಜ ಯೋಽತ್ಯಾಕ್ಷೀತ್ಸಮ್ಯುಗಂ ಭಯಾತ್।।

ಭರತರ್ಷಭ! ಮಹಾರಾಜ! ಯುದ್ಧಮಾಡುತ್ತಿರುವ ನಿಮ್ಮವರಲ್ಲಿ ಅಥವಾ ಅವರಲ್ಲಿ ಭಯದಿಂದ ಸಂಗ್ರಾಮವನ್ನು ಬಿಟ್ಟು ಓಡಿ ಹೋದವರು ಯಾರೂ ಇರಲಿಲ್ಲ.

07070035a ಭೀಮಸೇನಂ ತು ಕೌಂತೇಯಂ ಸೋದರ್ಯಾಃ ಪರ್ಯವಾರಯನ್।
07070035c ವಿವಿಂಶತಿಶ್ಚಿತ್ರಸೇನೋ ವಿಕರ್ಣಶ್ಚ ಮಹಾರಥಃ।।
07070036a ವಿಂದಾನುವಿಂದಾವಾವಂತ್ಯೌ ಕ್ಷೇಮಧೂರ್ತಿಶ್ಚ ವೀರ್ಯವಾನ್।
07070036c ತ್ರಯಾಣಾಂ ತವ ಪುತ್ರಾಣಾಂ ತ್ರಯ ಏವಾನುಯಾಯಿನಃ।।

ಕೌಂತೇಯ ಭೀಮಸೇನನನ್ನಾದರೋ ಸೋದರರಾದ ಮಹಾರಥ ವಿವಿಂಶತಿ-ಚಿತ್ರಸೇನ-ವಿಕರ್ಣರೂ, ಅವಂತಿಯ ವಿಂದಾನುವಿಂದರೂ, ವೀರ್ಯವಾನ್ ಕ್ಷೇಮಧೂರ್ತಿಯೂ - ನಿನ್ನ ಮೂವರು ಪುತ್ರರೂ ಮತ್ತು ಅವರ ಮೂವರು ಅನುಯಾಯಿಗಳೂ - ಸುತ್ತುವರೆದರು.

07070037a ಬಾಹ್ಲೀಕರಾಜಸ್ತೇಜಸ್ವೀ ಕುಲಪುತ್ರೋ ಮಹಾರಥಃ।
07070037c ಸಹಸೇನಃ ಸಹಾಮಾತ್ಯೋ ದ್ರೌಪದೇಯಾನವಾರಯತ್।।

ಕುಲಪುತ್ರ ಮಹಾರಥಿ ತೇಜಸ್ವೀ ರಾಜಾ ಬಾಹ್ಲೀಕನು ಸೇನೆಯೊಂದಿಗೆ ಅಮಾತ್ಯರೊಂದಿಗೆ ದ್ರೌಪದೇಯರನ್ನು ತಡೆದನು.

07070038a ಶೈಬ್ಯೋ ಗೋವಾಸನೋ ರಾಜಾ ಯೋಧೈರ್ದಶಶತಾವರೈಃ।
07070038c ಕಾಶ್ಯಸ್ಯಾಭಿಭುವಃ ಪುತ್ರಂ ಪರಾಕ್ರಾಂತಮವಾರಯತ್।।

ಶೈಭ್ಯ ಗೋವಾಸನ ರಾಜನು ಒಂದುಸಾವಿರ ಯೋಧರೊಂದಿಗೆ ಕಾಶ್ಯ ಅಭಿಭುವಿನ ಪರಾಕ್ರಾಂತ ಮಗನನ್ನು ತಡೆದನು.

07070039a ಅಜಾತಶತ್ರುಂ ಕೌಂತೇಯಂ ಜ್ವಲಂತಮಿವ ಪಾವಕಂ।
07070039c ಮದ್ರಾಣಾಮೀಶ್ವರಃ ಶಲ್ಯೋ ರಾಜಾ ರಾಜಾನಮಾವೃಣೋತ್।।

ಪಾವಕನಂತೆ ಪ್ರಜ್ವಲಿಸುತ್ತಿದ್ದ ಕೌಂತೇಯ ಅಜಾತಶತ್ರು ರಾಜನನ್ನು ಮದ್ರರ ಈಶ್ವರ ಶಲ್ಯರಾಜನು ಎದುರಿಸಿದನು.

07070040a ದುಃಶಾಸನಸ್ತ್ವವಸ್ಥಾಪ್ಯ ಸ್ವಮನೀಕಮಮರ್ಷಣಃ।
07070040c ಸಾತ್ಯಕಿಂ ಪ್ರಯಯೌ ಕ್ರುದ್ಧಃ ಶೂರೋ ರಥವರಂ ಯುಧಿ।।

ಕ್ರುದ್ಧನಾಗಿದ್ದ ಅಮರ್ಷಣ, ಶೂರ ದುಃಶಾಸನನು ತನ್ನ ಸೇನೆಯನ್ನು ವ್ಯವಸ್ಥೆಯಲ್ಲಿರಿಸಿಕೊಂಡು ಯುದ್ಧದಲ್ಲಿ ರಥವರ ಸಾತ್ಯಕಿಯನ್ನು ಎದುರಿಸಿದನು.

07070041a ಸ್ವಕೇನಾಹಮನೀಕೇನ ಸನ್ನದ್ಧಕವಚಾವೃತಃ।
07070041c ಚತುಃಶತೈರ್ಮಹೇಷ್ವಾಸೈಶ್ಚೇಕಿತಾನಮವಾರಯಂ।।

ಸ್ವತಃ ನಾನೂ8 ಕೂಡ ಸೇನೆಯೊಂದಿಗೆ ಸನ್ನದ್ಧನಾಗಿ ಕವಚವನ್ನು ತೊಟ್ಟು ನಾಲ್ಕುನೂರು ಮಹೇಷ್ವಾಸರೊಂದಿಗೆ ಚೇಕಿತಾನನನ್ನು ತಡೆದೆನು.

07070042a ಶಕುನಿಸ್ತು ಸಹಾನೀಕೋ ಮಾದ್ರೀಪುತ್ರಮವಾರಯತ್।
07070042c ಗಾಂಧಾರಕೈಃ ಸಪ್ತಶತೈಶ್ಚಾಪಶಕ್ತಿಶರಾಸಿಭಿಃ।।

ಶಕುನಿಯಾದರೋ ಏಳುನೂರು ಗಾಂಧಾರರ ಸೇನೆಯೊಡಗೂಡಿ ಚಾಪ-ಶಕ್ತಿ-ಖಡ್ಗಗಳೊಂದಿಗೆ ಮಾದ್ರೀಪುತ್ರರನ್ನು ತಡೆದನು.

07070043a ವಿಂದಾನುವಿಂದಾವಾವಂತ್ಯೌ ವಿರಾಟಂ ಮತ್ಸ್ಯಮಾರ್ಚತಾಂ।
07070043c ಪ್ರಾಣಾಂಸ್ತ್ಯಕ್ತ್ವಾ ಮಹೇಷ್ವಾಸೌ ಮಿತ್ರಾರ್ಥೇಽಭ್ಯುದ್ಯತೌ ಯುಧಿ।।

ಅವಂತಿಯ ಮಹೇಷ್ವಾಸ ವಿಂದಾನುವಿಂದರು ಮಿತ್ರರಿಗಾಗಿ ಪ್ರಾಣಗಳನ್ನು ತ್ಯಜಿಸಿ ಯುದ್ಧದಲ್ಲಿ ವಿರಾಟ ಮತ್ಸ್ಯನನ್ನು ಬಾಣಗಳಿಂದ ಹೊಡೆದು ಯದ್ಧಮಾಡುತ್ತಿದ್ದರು.

07070044a ಶಿಖಂಡಿನಂ ಯಾಜ್ಞಸೇನಿಂ ರುಂಧಾನಮಪರಾಜಿತಂ।
07070044c ಬಾಹ್ಲಿಕಃ ಪ್ರತಿಸಂಯತ್ತಃ ಪರಾಕ್ರಾಂತಮವಾರಯತ್।।

ದಾರಿಯನ್ನು ಮಾಡಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದ ಅಪರಾಜಿತ ಪರಾಕ್ರಂತ ಯಾಜ್ಞಸೇನಿ ಶಿಖಂಡಿಯನ್ನು ಬಾಹ್ಲೀಕನು ಪ್ರಯತ್ನಿಸಿ ತಡೆದನು.

07070045a ಧೃಷ್ಟದ್ಯುಮ್ನಂ ಚ ಪಾಂಚಾಲ್ಯಂ ಕ್ರೂರೈಃ ಸಾರ್ಧಂ ಪ್ರಭದ್ರಕೈಃ।
07070045c ಆವಂತ್ಯಃ ಸಹ ಸೌವೀರೈಃ ಕ್ರುದ್ಧರೂಪಮವಾರಯತ್।।

ಅಂತಿಯವನು ಸೌವೀರರೊಂದಿಗೆ ಕ್ರೂರರಾದ ಪ್ರಭದ್ರಕರೊಡನಿದ್ದ ಕ್ರುದ್ಧ ರೂಪಿ ಪಾಂಚಾಲ್ಯ ಧೃಷ್ಟದ್ಯುಮ್ನನನ್ನು ತಡೆದನು.

07070046a ಘಟೋತ್ಕಚಂ ತಥಾ ಶೂರಂ ರಾಕ್ಷಸಂ ಕ್ರೂರಯೋಧಿನಂ।
07070046c ಅಲಾಯುಧೋಽದ್ರವತ್ತೂರ್ಣಂ ಕ್ರುದ್ಧಮಾಯಾಂತಮಾಹವೇ।।

ಕ್ರೂರಯೋಧಿನಿ ಕ್ರುದ್ಧನಾಗಿ ವೇಗವಾಗಿ ರಣದಲ್ಲಿ ಬರುತ್ತಿದ್ದ ರಾಕ್ಷಸ ಶೂರ ಘಟೋತ್ಕಚನನ್ನು ಅಲಾಯುಧನು ಆಕ್ರಮಣಿಸಿದನು.

07070047a ಅಲಂಬುಸಂ ರಾಕ್ಷಸೇಂದ್ರಂ ಕುಂತಿಭೋಜೋ ಮಹಾರಥಃ।
07070047c ಸೈನ್ಯೇನ ಮಹತಾ ಯುಕ್ತಃ ಕ್ರುದ್ಧರೂಪಮವಾರಯತ್।।

ಕ್ರುದ್ರರೂಪಿ ರಾಕ್ಷಸೇಂದ್ರ ಅಲಂಬುಸನನ್ನು ಮಹಾ ಸೇನೆಯೊಡಗೂಡಿ ಮಹಾರಥ ಕುಂತಿಭೋಜನು ತಡೆದನು.

07070048a ಸೈಂಧವಃ ಪೃಷ್ಠತಸ್ತ್ವಾಸೀತ್ಸರ್ವಸೈನ್ಯಸ್ಯ ಭಾರತ।
07070048c ರಕ್ಷಿತಃ ಪರಮೇಷ್ವಾಸೈಃ ಕೃಪಪ್ರಭೃತಿಭೀ ರಥೈಃ।।

ಭಾರತ! ಸೈಂಧವನು ಕೃಪನೇ ಮೊದಲಾದ ಪರಮೇಷ್ವಾಸ ರಥರಿಂದ ರಕ್ಷಿತನಾಗಿ ಎಲ್ಲ ಸೇನೆಗಳ ಹಿಂದೆ ಇದ್ದನು.

07070049a ತಸ್ಯಾಸ್ತಾಂ ಚಕ್ರರಕ್ಷೌ ದ್ವೌ ಸೈಂಧವಸ್ಯ ಬೃಹತ್ತಮೌ।
07070049c ದ್ರೌಣಿರ್ದಕ್ಷಿಣತೋ ರಾಜನ್ ಸೂತಪುತ್ರಶ್ಚ ವಾಮತಃ।।

ರಾಜನ್! ಸೈಂಧವನ ಬೃಹತ್ತಮ ಚಕ್ರಗಳನ್ನು ಬಲದಲ್ಲಿ ದ್ರೌಣಿಯೂ ಎಡದಲ್ಲಿ ಸೂತಪುತ್ರನೂ ರಕ್ಷಿಸುತ್ತಿದ್ದರು.

07070050a ಪೃಷ್ಠಗೋಪಾಸ್ತು ತಸ್ಯಾಸನ್ಸೌಮದತ್ತಿಪುರೋಗಮಾಃ।
07070050c ಕೃಪಶ್ಚ ವೃಷಸೇನಶ್ಚ ಶಲಃ ಶಲ್ಯಶ್ಚ ದುರ್ಜಯಃ।।
07070051a ನೀತಿಮಂತೋ ಮಹೇಷ್ವಾಸಾಃ ಸರ್ವೇ ಯುದ್ಧವಿಶಾರದಾಃ।
07070051c ಸೈಂಧವಸ್ಯ ವಿಧಾಯೈವಂ ರಕ್ಷಾಂ ಯುಯುಧಿರೇ ತದಾ।।

ಸೌಮದತ್ತಿಯ ನಾಯಕತ್ವದಲ್ಲಿ ನೀತಿವಂತರಾದ ಮಹೇಷ್ವಾಸರಾದ ಎಲ್ಲ ಯುದ್ಧವಿಶಾರದರಾದ ಕೃಪ, ವೃಷಸೇನ, ಶಲ, ಶಲ್ಯ ಮತ್ತು ದುರ್ಜಯರು ಸೈಂಧವನ ಹಿಂಭಾಗದ ರಕ್ಷಕರಾಗಿದ್ದರು. ಸೈಂಧವನಿಗೆ ರಕ್ಷಣೆಯ ಈ ವ್ಯವಸ್ಥೆಯನ್ನು ಮಾಡಿ ಅವರು ಯುದ್ಧಮಾಡಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಂಕುಲಯುದ್ಧೇ ಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಂಕುಲಯುದ್ಧ ಎನ್ನುವ ಎಪ್ಪತ್ತನೇ ಅಧ್ಯಾಯವು.