069 ದುರ್ಯೋಧನಕವಚಬಂಧನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಜಯದ್ರಥವಧ ಪರ್ವ

ಅಧ್ಯಾಯ 69

ಸಾರ

ಅರ್ಜುನನು ವ್ಯೂಹವನ್ನು ಭೇದಿಸಿ ಒಳನುಗ್ಗಿದುದನ್ನು ಕಂಡ ದುರ್ಯೋಧನನು “ನೀವು ನನಗೆ ಪಾಂಡವನನ್ನು ನಿಗ್ರಹಿಸುತ್ತೇನೆ ಎನ್ನುವ ವರವನ್ನು ಕೊಟ್ಟಿರದೇ ಇದ್ದರೆ ನಾನು ಮನೆಗೆ ಹೋಗುತ್ತಿದ್ದ ಸಿಂಧುಪತಿಯನ್ನು ತಡೆಯುತ್ತಿರಲಿಲ್ಲ” ಎಂದು ದ್ರೋಣನನ್ನು ನಿಂದಿಸಿ ಮಾತನಾಡಿದುದು (1-18). ಅರ್ಜುನನಿಂದ ದೂರಾಗಿರುವ ಯುಧಿಷ್ಠಿರನನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿರುವ ತಾನು ಅರ್ಜುನನ ಹಿಂದೆ ಹೋಗುವುದಿಲ್ಲ; ನೀನೇ ಅವನನ್ನು ಧೈರ್ಯದಿಂದ ಎದುರಿಸು ಎಂದು ದ್ರೋಣನು ದುರ್ಯೋಧನನಿಗೆ ಹೇಳಿದುದು (19-26). “ನಿಮ್ಮನ್ನೇ ಅತಿಕ್ರಮಿಸಿ ಹೋದ ಆ ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ಧನಂಜಯನನ್ನು ಹೇಗೆ ತಾನೇ ನಾನು ಹಿಂದಿರುಗಿ ಹೋಗಿ ಬಾಧಿಸಬಲ್ಲೆ?” ಎಂಬ ದುರ್ಯೋಧನನ ಪ್ರಶ್ನೆಗೆ ಉತ್ತರವಾಗಿ ದ್ರೋಣನು ದುರ್ಯೋಧನನಿಗೆ ಕವಚವನ್ನು ತೊಡಿಸಿದುದು (27-75).

07069001 ಸಂಜಯ ಉವಾಚ।
07069001a ತತಃ ಪ್ರವಿಷ್ಟೇ ಕೌಂತೇಯೇ ಸಿಂಧುರಾಜಜಿಘಾಂಸಯಾ।
07069001c ದ್ರೋಣಾನೀಕಂ ವಿನಿರ್ಭಿದ್ಯ ಭೋಜಾನೀಕಂ ಚ ದುಸ್ತರಂ।।
07069002a ಕಾಂಬೋಜಸ್ಯ ಚ ದಾಯಾದೇ ಹತೇ ರಾಜನ್ಸುದಕ್ಷಿಣೇ।
07069002c ಶ್ರುತಾಯುಧೇ ಚ ವಿಕ್ರಾಂತೇ ನಿಹತೇ ಸವ್ಯಸಾಚಿನಾ।।
07069003a ವಿಪ್ರದ್ರುತೇಷ್ವನೀಕೇಷು ವಿಧ್ವಸ್ತೇಷು ಸಮಂತತಃ।
07069003c ಪ್ರಭಗ್ನಂ ಸ್ವಬಲಂ ದೃಷ್ಟ್ವಾ ಪುತ್ರಸ್ತೇ ದ್ರೋಣಮಭ್ಯಯಾತ್।।

ಸಂಜಯನು ಹೇಳಿದನು: “ಕೌಂತೇಯನು ಸಿಂಧುರಾಜನನ್ನು ಕೊಲ್ಲಲು ಬಯಸಿ ದ್ರೋಣನ ಸೇನೆಯನ್ನು ಮತ್ತು ದುಸ್ತರವಾದ ಭೋಜನ ಸೇನೆಯನ್ನೂ ಭೇದಿಸಿ ಪ್ರವೇಶಿಸಲು, ಕಾಂಬೋಜ ಮತ್ತು ಅವನ ಮಗ ಸುದಕ್ಷಿಣರು ಹತರಾಗಲು, ಸವ್ಯಸಾಚಿಯಿಂದ ವಿಕ್ರಾಂತ ಶ್ರುತಾಯುಧನೂ ಹತನಾಗಲು, ಸದೆಬಡಿಯಲ್ಪಟ್ಟ ನಿನ್ನ ಸೇನೆಗಳು ಎಲ್ಲ ಕಡೆ ಓಡಿ ಹೋಗುತ್ತಿರಲು, ತನ್ನ ಸೇನೆಯು ಭಗ್ನವಾದುದನ್ನು ನೋಡಿ ನಿನ್ನ ಮಗನು ದ್ರೋಣನ ಬಳಿ ಬಂದನು.

07069004a ತ್ವರನ್ನೇಕರಥೇನೈವ ಸಮೇತ್ಯ ದ್ರೋಣಮಬ್ರವೀತ್।
07069004c ಗತಃ ಸ ಪುರುಷವ್ಯಾಘ್ರಃ ಪ್ರಮಥ್ಯೇಮಾಂ ಮಹಾಚಮೂಂ।।

ತ್ವರೆಮಾಡಿ ರಥದಲ್ಲಿ ಒಬ್ಬನೇ ದ್ರೋಣನ ಬಳಿಬಂದು ಹೇಳಿದನು: “ಪುರುಷವ್ಯಾಘ್ರ! ಈ ಮಹಾಸೇನೆಯು ನುಚ್ಚುನೂರಾಗುತ್ತಿದೆ.

07069005a ಅತ್ರ ಬುದ್ಧ್ಯಾ ಸಮೀಕ್ಷಸ್ವ ಕಿಂ ನು ಕಾರ್ಯಮನಂತರಂ।
07069005c ಅರ್ಜುನಸ್ಯ ವಿಘಾತಾಯ ದಾರುಣೇಽಸ್ಮಿನ್ಜನಕ್ಷಯೇ।।

ದಾರುಣವಾದ ಈ ಜನಕ್ಷಯವು ನಡೆಯುತ್ತಿರುವಾಗ ಅರ್ಜುನನ್ನು ಕೊಲ್ಲಲು ನಾವು ಏನು ಮಾಡಬೇಕೆಂಬುದನ್ನು ಬುದ್ಧಿಯಿಂದ ಕೂಲಂಕುಶವಾಗಿ ವಿಮರ್ಶಿಸಿ.

07069006a ಯಥಾ ಸ ಪುರುಷವ್ಯಾಘ್ರೋ ನ ಹನ್ಯೇತ ಜಯದ್ರಥಃ।
07069006c ತಥಾ ವಿಧತ್ಸ್ವ ಭದ್ರಂ ತೇ ತ್ವಂ ಹಿ ನಃ ಪರಮಾ ಗತಿಃ।।

ಆ ಪುರುಷವ್ಯಾಘ್ರನು ಜಯದ್ರಥನನ್ನು ಕೊಲ್ಲಲಾರದ ಹಾಗೆ ಉಪಾಯವನ್ನು ಮಾಡಿ. ನಿಮಗೆ ಮಂಗಳವಾಗಲಿ! ನೀವೇ ನಮಗೆ ಪರಮ ಗತಿ.

07069007a ಅಸೌ ಧನಂಜಯಾಗ್ನಿರ್ಹಿ ಕೋಪಮಾರುತಚೋದಿತಃ।
07069007c ಸೇನಾಕಕ್ಷಂ ದಹತಿ ಮೇ ವಹ್ನಿಃ ಕಕ್ಷಮಿವೋತ್ಥಿತಃ।।

ಕೋಪವೆಂಬ ಭಿರುಗಾಳಿಯಿಂದ ಪ್ರಚೋದಿತನಾಗಿ ಧನಂಜಯನೆಂಬ ಅಗ್ನಿಯು, ಒಣಪೊದೆಯನ್ನು ಸುಡುವಂತೆ ನನ್ನ ಸೇನೆಯೆಂಬ ಪೊದೆಯನ್ನು ಸುಡುತ್ತಿದೆ.

07069008a ಅತಿಕ್ರಾಂತೇ ಹಿ ಕೌಂತೇಯೇ ಭಿತ್ತ್ವಾ ಸೈನ್ಯಂ ಪರಂತಪ।
07069008c ಜಯದ್ರಥಸ್ಯ ಗೋಪ್ತಾರಃ ಸಂಶಯಂ ಪರಮಂ ಗತಾಃ।।

ಪರಂತಪ! ಸೇನೆಯನ್ನು ಭೇದಿಸಿ ದಾಟಿ ಹೋಗುತ್ತಿರುವ ಕೌಂತೇಯನಿಂದ ಜಯದ್ರಥನನ್ನು ರಕ್ಷಿಸುವುದು ಪರಮ ಸಂಶಯವಾಗಿ ಕಾಣುತ್ತಿದೆ.

07069009a ಸ್ಥಿರಾ ಬುದ್ಧಿರ್ನರೇಂದ್ರಾಣಾಮಾಸೀದ್ಬ್ರಹ್ಮವಿದಾಂ ವರ।
07069009c ನಾತಿಕ್ರಮಿಷ್ಯತಿ ದ್ರೋಣಂ ಜಾತು ಜೀವನ್ಧನಂಜಯಃ।।

ಬ್ರಹ್ಮವಿದರಲ್ಲಿ ಶ್ರೇಷ್ಠ! ದ್ರೋಣರನ್ನು ಅತಿಕ್ರಮಿಸಿ ಧನಂಜಯನು ಜೀವವನ್ನಿಟ್ಟುಕೊಂಡು ಹೋಗುವುದಿಲ್ಲವೆಂದು ನರೇಂದ್ರರ ನಿಶ್ಚಲ ಯೋಚನೆಯಾಗಿತ್ತು.

07069010a ಸೋಽಸೌ ಪಾರ್ಥೋ ವ್ಯತಿಕ್ರಾಂತೋ ಮಿಷತಸ್ತೇ ಮಹಾದ್ಯುತೇ।
07069010c ಸರ್ವಂ ಹ್ಯದ್ಯಾತುರಂ ಮನ್ಯೇ ನೈತದಸ್ತಿ ಬಲಂ ಮಮ।।

ಮಹಾದ್ಯುತೇ! ಆದರೆ ನಿಮ್ಮ ಕಣ್ಣೆದುರಿಗೇ ಪಾರ್ಥನು ನಿಮ್ಮನ್ನೂ ಅತಿಕ್ರಮಿಸಿ ಹೋಗಿದ್ದಾನೆ. ನನ್ನ ಸೇನೆಯು ಉಳಿಯಲಾರದೆಂದು ಅಭಿಪ್ರಾಯಪಟ್ಟು ಎಲ್ಲರೂ ಪೀಡಿತರಾಗಿದ್ದಾರೆ.

07069011a ಜಾನಾಮಿ ತ್ವಾಂ ಮಹಾಭಾಗ ಪಾಂಡವಾನಾಂ ಹಿತೇ ರತಂ।
07069011c ತಥಾ ಮುಹ್ಯಾಮಿ ಚ ಬ್ರಹ್ಮನ್ಕಾರ್ಯವತ್ತಾಂ ವಿಚಿಂತಯನ್।।

ಮಹಾಭಾಗ! ಬ್ರಹ್ಮನ್! ನೀನು ಪಾಂಡವರ ಹಿತದಲ್ಲಿಯೇ ಆಸಕ್ತಿಯನ್ನಿಟ್ಟಿರುವೆಯೆಂದು ನನಗೆ ತಿಳಿದಿದೆ. ಆದುದರಿಂದಲೇ ನೀವು ಎಷ್ಟು ಕಾರ್ಯಮಗ್ನರಾಗಿರುವರೆಂದು ಚಿಂತಿಸಿ ಭ್ರಾಂತನಾಗಿದ್ದೇನೆ.

07069012a ಯಥಾಶಕ್ತಿ ಚ ತೇ ಬ್ರಹ್ಮನ್ವರ್ತಯೇ ವೃತ್ತಿಮುತ್ತಮಾಂ।
07069012c ಪ್ರೀಣಾಮಿ ಚ ಯಥಾಶಕ್ತಿ ತಚ್ಚ ತ್ವಂ ನಾವಬುಧ್ಯಸೇ।।

ಬ್ರಹ್ಮನ್! ನಿಮ್ಮ ಉತ್ತಮ ವೃತ್ತಿಗೆ ಯಥಾಶಕ್ತಿಯಾಗಿ ಏರ್ಪಡಿಸಿದ್ದೇನೆ. ನಿಮ್ಮ ಸಂತೋಷಕ್ಕೂ ಯಥಾಶಕ್ತಿ ಮಾಡುತ್ತಿದ್ದೇನೆ. ಆದರೂ ನೀವು ಅದರ ಕುರಿತು ಯೋಚಿಸುತ್ತಿಲ್ಲ.

07069013a ಅಸ್ಮಾನ್ನ ತ್ವಂ ಸದಾ ಭಕ್ತಾನಿಚ್ಚಸ್ಯಮಿತವಿಕ್ರಮ।
07069013c ಪಾಂಡವಾನ್ಸತತಂ ಪ್ರೀಣಾಸ್ಯಸ್ಮಾಕಂ ವಿಪ್ರಿಯೇ ರತಾನ್।।

ಅಮಿತವಿಕ್ರಮ! ನಾವು ಸದಾ ನಿಮ್ಮ ಭಕ್ತರಾಗಿದ್ದರೂ ನೀವು ನಮ್ಮ ಒಳ್ಳೆಯದನ್ನು ಬಯಸುತ್ತಿಲ್ಲ. ಪಾಂಡವರನ್ನು ಸತತವೂ ಪ್ರೀತಿಸುತ್ತಿರುವಿರಿ ಮತ್ತು ನಮಗೆ ವಿಪ್ರಿಯವಾದುದನ್ನು ಮಾಡುವುದರಲ್ಲಿ ನಿರತರಾಗಿರುವಿರಿ.

07069014a ಅಸ್ಮಾನೇವೋಪಜೀವಂಸ್ತ್ವಮಸ್ಮಾಕಂ ವಿಪ್ರಿಯೇ ರತಃ।
07069014c ನ ಹ್ಯಹಂ ತ್ವಾಂ ವಿಜಾನಾಮಿ ಮಧುದಿಗ್ಧಮಿವ ಕ್ಷುರಂ।।

ನಮ್ಮಿಂದ ನಿಮ್ಮ ಉಪಜೀವವನ್ನು ಪಡೆಯುತ್ತಿದ್ದರೂ ನಮಗೆ ವಿಪ್ರಿಯವಾದುದನ್ನು ಮಾಡುವುದರಲ್ಲಿ ನಿರತರಾಗಿರುವಿರಿ. ನೀವು ಜೇನುತುಪ್ಪದಲ್ಲಿ ಅದ್ದಿಸಿದ ಕತ್ತಿಯೆಂದು ನನಗೆ ತಿಳಿದಿರಲಿಲ್ಲ.

07069015a ನಾದಾಸ್ಯಚ್ಚೇದ್ವರಂ ಮಹ್ಯಂ ಭವಾನ್ಪಾಂಡವನಿಗ್ರಹೇ।
07069015c ನಾವಾರಯಿಷ್ಯಂ ಗಚ್ಚಂತಮಹಂ ಸಿಂಧುಪತಿಂ ಗೃಹಾನ್।।

ನೀವು ನನಗೆ ಪಾಂಡವನನ್ನು ನಿಗ್ರಹಿಸುತ್ತೇನೆ ಎನ್ನುವ ವರವನ್ನು ಕೊಟ್ಟಿರದೇ ಇದ್ದರೆ ನಾನು ಮನೆಗೆ ಹೋಗುತ್ತಿದ್ದ ಸಿಂಧುಪತಿಯನ್ನು ತಡೆಯುತ್ತಿರಲಿಲ್ಲ.

07069016a ಮಯಾ ತ್ವಾಶಂಸಮಾನೇನ ತ್ವತ್ತಸ್ತ್ರಾಣಮಬುದ್ಧಿನಾ।
07069016c ಆಶ್ವಾಸಿತಃ ಸಿಂಧುಪತಿರ್ಮೋಹಾದ್ದತ್ತಶ್ಚ ಮೃತ್ಯವೇ।।

ನನ್ನ ದಡ್ಡತನದಿಂದಾಗಿ ನಿಮ್ಮಿಂದ ರಕ್ಷಣೆಯನ್ನು ನಿರೀಕ್ಷಿಸಿ, ತಿಳಿಯದೇ ಸಿಂಧುಪತಿಗೆ ಆಶ್ವಾಸನೆಯನ್ನಿತ್ತು ಅವನನ್ನು ಮೃತ್ಯುವಿನ ದವಡೆಗೆ ದೂಡಿದಂತಾಯಿತಲ್ಲ!

07069017a ಯಮದಂಷ್ಟ್ರಾಂತರಂ ಪ್ರಾಪ್ತೋ ಮುಚ್ಯೇತಾಪಿ ಹಿ ಮಾನವಃ।
07069017c ನಾರ್ಜುನಸ್ಯ ವಶಂ ಪ್ರಾಪ್ತೋ ಮುಚ್ಯೇತಾಜೌ ಜಯದ್ರಥಃ।।

ಯಮನ ದವಡೆಯಲ್ಲಿ ಸಿಲುಕಿದ ಮನುಷ್ಯನಾದರೂ ಬಿಡುಗಡೆ ಹೊಂದಬಲ್ಲನು. ಆದರೆ ಆರ್ಜುನನ ವಶಕ್ಕೆ ಬಂದ ಜಯದ್ರಥನು ಬಿಡುಗಡೆ ಹೊಂದಲಾರ.

07069018a ಸ ತಥಾ ಕುರು ಶೋಣಾಶ್ವ ಯಥಾ ರಕ್ಷ್ಯೇತ ಸೈಂಧವಃ।
07069018c ಮಮ ಚಾರ್ತಪ್ರಲಾಪಾನಾಂ ಮಾ ಕ್ರುಧಃ ಪಾಹಿ ಸೈಂಧವಂ।।

ಶೋಣಾಶ್ವ! ಸೈಂಧವನನ್ನು ರಕ್ಷಿಸುವಂತೆ ಏನಾದರೂ ಮಾಡಿ. ನನ್ನ ಈ ಆರ್ತ ಪ್ರಲಾಪಗಳಿಂದ ಕ್ರೋಧಿತರಾಗಬೇಡಿ. ಸೈಂಧವನನ್ನು ರಕ್ಷಿಸಿರಿ!”

07069019 ದ್ರೋಣ ಉವಾಚ।
07069019a ನಾಭ್ಯಸೂಯಾಮಿ ತೇ ವಾಚಮಶ್ವತ್ಥಾಮ್ನಾಸಿ ಮೇ ಸಮಃ।
07069019c ಸತ್ಯಂ ತು ತೇ ಪ್ರವಕ್ಷ್ಯಾಮಿ ತಜ್ಜುಷಸ್ವ ವಿಶಾಂ ಪತೇ।।

ದ್ರೋಣನು ಹೇಳಿದನು: “ವಿಶಾಂಪತೇ! ನಿನ್ನ ಮಾತಿನಲ್ಲಿ ನಾನು ತಪ್ಪನ್ನು ಕಾಣುತ್ತಿಲ್ಲ. ನೀನು ನನಗೆ ಅಶ್ವತ್ಥಾಮನ ಸಮನಾಗಿದ್ದೀಯೆ. ಆದರೆ ನಿನಗೆ ನಾನು ಸತ್ಯವನ್ನು ಹೇಳುತ್ತಿದ್ದೇನೆ. ಅದರಂತೆಯೇ ನಡೆದುಕೋ.

07069020a ಸಾರಥಿಃ ಪ್ರವರಃ ಕೃಷ್ಣಃ ಶೀಘ್ರಾಶ್ಚಾಸ್ಯ ಹಯೋತ್ತಮಾಃ।
07069020c ಅಲ್ಪಂ ಚ ವಿವರಂ ಕೃತ್ವಾ ತೂರ್ಣಂ ಯಾತಿ ಧನಂಜಯಃ।।

ಕೃಷ್ಣನು ಎಲ್ಲ ಸಾರಥಿಗಳಲ್ಲಿ ಶ್ರೇಷ್ಠನಾದವನು. ಅವನ ಉತ್ತಮ ಕುದುರೆಗಳು ಶೀಘ್ರವಾಗಿ ಓಡಬಲ್ಲವು. ಸ್ವಲ್ಪವೇ ಜಾಗವನ್ನೂ ಮಾಡಿಕೊಂಡರೂ ಧನಂಜಯನು ವೇಗವಾಗಿ ಹೋಗಬಲ್ಲನು.

07069021a ಕಿಂ ನು ಪಶ್ಯಸಿ ಬಾಣೌಘಾನ್ಕ್ರೋಶಮಾತ್ರೇ ಕಿರೀಟಿನಃ।
07069021c ಪಶ್ಚಾದ್ರಥಸ್ಯ ಪತಿತಾನ್ ಕ್ಷಿಪ್ತಾಂ ಶೀಘ್ರಂ ಹಿ ಗಚ್ಚತಃ।।

ಮುಂದುವರೆಯುತ್ತಿರುವ ಅವನ ಮೇಲೆ ನಾವು ಪ್ರಯೋಗಿಸುವ ಬಾಣಗಳ ಸಮೂಹಗಳು ಅವನಿಗಿಂತ ಎರಡು ಕ್ರೋಶ ಹಿಂದೆಯೇ ಬೀಳುತ್ತಿರುವುದನ್ನು ನೀನು ನೋಡುತ್ತಿಲ್ಲವೇ?

07069022a ನ ಚಾಹಂ ಶೀಘ್ರಯಾನೇಽದ್ಯ ಸಮರ್ಥೋ ವಯಸಾನ್ವಿತಃ।
07069022c ಸೇನಾಮುಖೇ ಚ ಪಾರ್ಥಾನಾಂ ಏತದ್ಬಲಮುಪಸ್ಥಿತಂ।।

ವಯಸ್ಸಾದ ನಾನು ಇಂದು ಅಷ್ಟೊಂದು ಶೀಘ್ರವಾಗಿ ಹೋಗಲು ಅಸಮರ್ಥನಾಗಿದ್ದೇನೆ. ಪಾರ್ಥರ ಸೇನೆಗಳ ಮುಂಬಾಗವೂ ಈಗ ನಮ್ಮ ಸೇನೆಯ ಹತ್ತಿರ ಬಂದುಬಿಟ್ಟಿದೆ!

07069023a ಯುಧಿಷ್ಠಿರಶ್ಚ ಮೇ ಗ್ರಾಹ್ಯೋ ಮಿಷತಾಂ ಸರ್ವಧನ್ವಿನಾಂ।
07069023c ಏವಂ ಮಯಾ ಪ್ರತಿಜ್ಞಾತಂ ಕ್ಷತ್ರಮಧ್ಯೇ ಮಹಾಭುಜ।।

ಮಹಾಭುಜ! ಎಲ್ಲ ಧನ್ವಿಗಳೂ ನೋಡುತ್ತಿರುವಂತೆ ಯುಧಿಷ್ಠಿರನನ್ನು ನಾನು ಸೆರೆಹಿಡಿಯುತ್ತೇನೆ ಎನ್ನುವುದು ಕ್ಷತ್ರಿಯರ ಮಧ್ಯದಲ್ಲಿ ನಾನು ಮಾಡಿದ ಪ್ರತಿಜ್ಞೆಯಾಗಿದೆ.

07069024a ಧನಂಜಯೇನ ಚೋತ್ಸೃಷ್ಟೋ ವರ್ತತೇ ಪ್ರಮುಖೇ ಮಮ।
07069024c ತಸ್ಮಾದ್ವ್ಯೂಹಮುಖಂ ಹಿತ್ವಾ ನಾಹಂ ಯಾಸ್ಯಾಮಿ ಫಲ್ಗುನಂ।।

ಅವನು ಧನಂಜಯನಿಂದ ದೂರನಾಗಿ ಈಗ ನನ್ನ ಎದಿರೇ ಬರುತ್ತಿದ್ದಾನೆ. ಆದುದರಿಂದ ನಾನು ವ್ಯೂಹದ ಮುಂಭಾಗವನ್ನು ಬಿಟ್ಟು ಫಲ್ಗುನನ ಹಿಂದೆ ಹೋಗುವುದಿಲ್ಲ.

07069025a ತುಲ್ಯಾಭಿಜನಕರ್ಮಾಣಂ ಶತ್ರುಮೇಕಂ ಸಹಾಯವಾನ್।
07069025c ಗತ್ವಾ ಯೋಧಯ ಮಾ ಭೈಸ್ತ್ವಂ ತ್ವಂ ಹ್ಯಸ್ಯ ಜಗತಃ ಪತಿಃ।।

ಹುಟ್ಟು ಮತ್ತು ಕರ್ಮಗಳಲ್ಲಿ ನಿನಗೆ ಸಮನಾಗಿರುವ, ಒಬ್ಬಂಟಿಯಾಗಿರುವ ಆ ಶತ್ರುವನ್ನು ನೀನೇ ಸಾಹಾಯವನ್ನು ಪಡೆದು ಹೋರಾಡಬೇಕು. ಹೋಗಿ ಹೋರಾಡು! ಹೆದರ ಬೇಡ! ನೀನು ಈಗ ಜಗತ್ತಿಗೇ ಒಡೆಯನಾಗಿದ್ದೀಯೆ!

07069026a ರಾಜಾ ಶೂರಃ ಕೃತೀ ದಕ್ಷೋ ವೈರಮುತ್ಪಾದ್ಯ ಪಾಂಡವೈಃ।
07069026c ವೀರ ಸ್ವಯಂ ಪ್ರಯಾಹ್ಯಾಶು ಯತ್ರ ಯಾತೋ ಧನಂಜಯಃ।।

ನೀನು ರಾಜ. ಶೂರ. ಕೃತ್ಯಗಳಲ್ಲಿ ಯಶಸ್ವಿಯಾದವನು. ದಕ್ಷ. ಪಾಂಡವರೊಂದಿಗೆ ವೈರವನ್ನು ಬೆಳೆಸಿಕೊಂಡು ಬಂದವನು. ವೀರ! ಧನಂಜಯನು ಎಲ್ಲಿ ಹೋಗುತ್ತಿದ್ದಾನೋ ಅಲ್ಲಿಗೆ ಸ್ವಯಂ ನೀನೇ ಹೋಗಿ ಯುದ್ಧಮಾಡು!”

07069027 ದುರ್ಯೋಧನ ಉವಾಚ।
07069027a ಕಥಂ ತ್ವಾಮಪ್ಯತಿಕ್ರಾಂತಃ ಸರ್ವಶಸ್ತ್ರಭೃತಾಂ ವರಃ।
07069027c ಧನಂಜಯೋ ಮಯಾ ಶಕ್ಯ ಆಚಾರ್ಯ ಪ್ರತಿಬಾಧಿತುಂ।।

ದುರ್ಯೋಧನನು ಹೇಳಿದನು: “ಆಚಾರ್ಯ! ನಿಮ್ಮನ್ನೇ ಅತಿಕ್ರಮಿಸಿ ಹೋದ ಆ ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ಧನಂಜಯನನ್ನು ಹೇಗೆ ತಾನೇ ನಾನು ಹಿಂದಿರುಗಿ ಹೋಗಿ ಬಾಧಿಸಬಲ್ಲೆ?

07069028a ಅಪಿ ಶಕ್ಯೋ ರಣೇ ಜೇತುಂ ವಜ್ರಹಸ್ತಃ ಪುರಂದರಃ।
07069028c ನಾರ್ಜುನಃ ಸಮರೇ ಶಕ್ಯೋ ಜೇತುಂ ಪರಪುರಂಜಯಃ।।

ರಣದಲ್ಲಿ ವಜ್ರಹಸ್ತ ಪುರಂದರನನ್ನಾದರೂ ಗೆಲ್ಲಲು ಶಕ್ಯನಾಗಿರಬಹುದು. ಆದರೆ ಸಮರದಲ್ಲಿ ಪರಪುರಂಜಯ ಅರ್ಜುನನನ್ನು ಗೆಲ್ಲುವುದು ಶಕ್ಯವಿಲ್ಲ.

07069029a ಯೇನ ಭೋಜಶ್ಚ ಹಾರ್ದಿಕ್ಯೋ ಭವಾಂಶ್ಚ ತ್ರಿದಶೋಪಮಃ।
07069029c ಅಸ್ತ್ರಪ್ರತಾಪೇನ ಜಿತೌ ಶ್ರುತಾಯುಶ್ಚ ನಿಬರ್ಹಿತಃ।।
07069030a ಸುದಕ್ಷಿಣಶ್ಚ ನಿಹತಃ ಸ ಚ ರಾಜಾ ಶ್ರುತಾಯುಧಃ।
07069030c ಶ್ರುತಾಯುಶ್ಚಾಚ್ಯುತಾಯುಶ್ಚ ಮ್ಲೇಚ್ಚಾಶ್ಚ ಶತಶೋ ಹತಾಃ।।
07069031a ತಂ ಕಥಂ ಪಾಂಡವಂ ಯುದ್ಧೇ ದಹಂತಮಹಿತಾನ್ಬಹೂನ್।
07069031c ಪ್ರತಿಯೋತ್ಸ್ಯಾಮಿ ದುರ್ಧರ್ಷಂ ತನ್ಮೇ ಶಂಸಾಸ್ತ್ರಕೋವಿದ।।

ಅಸ್ತ್ರಕೋವಿದ! ಯಾರ ಅಸ್ತ್ರಪ್ರತಾಪದಿಂದ ಭೋಜ ಹಾರ್ದಿಕ್ಯ ಮತ್ತು ತ್ರಿದಶರಿಗೆ ಸಮರಾದ ನಿಮ್ಮನ್ನೂ ಸೋಲಿಸಿ, ಶ್ರುತಾಯುವನ್ನು ಸಂಹರಿಸಿ, ಸುದಕ್ಷಿಣನನ್ನೂ ರಾಜಾ ಶ್ರುತಾಯುಧನನ್ನೂ ಸಂಹರಿಸಿ, ಶ್ರುತಾಯು-ಅಚ್ಯುತಾಯು ಇವರನ್ನೂ, ನೂರಾರು ಮ್ಲೇಚ್ಛರನ್ನೂ ಸಂಹರಿಸಿದ, ಅನೇಕರನ್ನು ಅಹಿತವಾಗಿ ಸುಡುತ್ತಿರುವ ದುರ್ಧರ್ಷ ಪಾಂಡವನನ್ನು ಯುದ್ಧದಲ್ಲಿ ನಾನು ಹೇಗೆ ಎದುರಿಸಬಲ್ಲೆ?

07069032a ಕ್ಷಮಂ ಚೇನ್ಮನ್ಯಸೇ ಯುದ್ಧಂ ಮಮ ತೇನಾದ್ಯ ಶಾಧಿ ಮಾಂ।
07069032c ಪರವಾನಸ್ಮಿ ಭವತಿ ಪ್ರೇಷ್ಯಕೃದ್ರಕ್ಷ ಮೇ ಯಶಃ।।

ಇಂದು ನಾನು ಅವನೊಂದಿಗೆ ಯುದ್ಧಮಾಡಲು ಸಮರ್ಥನೆಂದು ನೀವು ಹೇಗೆ ಹೇಳುತ್ತಿರುವಿರಿ? ನಾನು ನಿಮ್ಮ ಗುಲಾಮನಾಗಿದ್ದೇನೆ. ನನ್ನ ಯಶಸ್ಸನ್ನು ರಕ್ಷಿಸಿರಿ!”

07069033 ದ್ರೋಣ ಉವಾಚ।
07069033a ಸತ್ಯಂ ವದಸಿ ಕೌರವ್ಯ ದುರಾಧರ್ಷೋ ಧನಂಜಯಃ।
07069033c ಅಹಂ ತು ತತ್ಕರಿಷ್ಯಾಮಿ ಯಥೈನಂ ಪ್ರಸಹಿಷ್ಯಸಿ।।

ದ್ರೋಣನು ಹೇಳಿದನು: “ಕೌರವ್ಯ! ಸತ್ಯವನ್ನೇ ಹೇಳುತ್ತಿರುವೆ. ಧನಂಜಯನು ದುರಾಧರ್ಷ. ಆದರೆ ಅವನನ್ನು ನೀನು ಸಹಿಸಿಕೊಳ್ಳುವಂತೆ ನಾನು ಮಾಡುತ್ತೇನೆ.

07069034a ಅದ್ಭುತಂ ಚಾದ್ಯ ಪಶ್ಯಂತು ಲೋಕೇ ಸರ್ವಧನುರ್ಧರಾಃ।
07069034c ವಿಷಕ್ತಂ ತ್ವಯಿ ಕೌಂತೇಯಂ ವಾಸುದೇವಸ್ಯ ಪಶ್ಯತಃ।।

ಲೋಕದಲ್ಲಿ ಸರ್ವಧನುರ್ಧರರೂ ಇಂದು ಒಂದು ಅದ್ಭುತವನ್ನು ನೋಡಲಿ! ಕೌಂತೇಯನನ್ನು ನೀನು ತಡೆಯುವುದನ್ನು ವಾಸುದೇವನೂ ನೋಡಲಿ!

07069035a ಏಷ ತೇ ಕವಚಂ ರಾಜಂಸ್ತಥಾ ಬಧ್ನಾಮಿ ಕಾಂಚನಂ।
07069035c ಯಥಾ ನ ಬಾಣಾ ನಾಸ್ತ್ರಾಣಿ ವಿಷಹಿಷ್ಯಂತಿ ತೇ ರಣೇ।।

ರಾಜನ್! ರಣದಲ್ಲಿ ನಿನ್ನನ್ನು ಅಸ್ತ್ರಗಳು ಮತ್ತು ಬಾಣಗಳು ತಾಗದ ಹಾಗೆ ಇದೋ ಈ ಕಾಂಚನ ಕವಚವನ್ನು ಕಟ್ಟುತ್ತೇನೆ.

07069036a ಯದಿ ತ್ವಾಂ ಸಾಸುರಸುರಾಃ ಸಯಕ್ಷೋರಗರಾಕ್ಷಸಾಃ।
07069036c ಯೋಧಯಂತಿ ತ್ರಯೋ ಲೋಕಾಃ ಸನರಾ ನಾಸ್ತಿ ತೇ ಭಯಂ।।

ಒಂದುವೇಳೆ ನೀನು ಸುರಾಸುರ, ಯಕ್ಷೋರಗರಾಕ್ಷಸರು ಮತ್ತು ನರರೊಂದಿಗೆ ಈ ಮೂರೂ ಲೋಕಗಳ ವಿರುದ್ಧ ಯುದ್ಧಮಾಡಿದರೂ ನಿನಗೆ ಭಯವಿರುವುದಿಲ್ಲ.

07069037a ನ ಕೃಷ್ಣೋ ನ ಚ ಕೌಂತೇಯೋ ನ ಚಾನ್ಯಃ ಶಸ್ತ್ರಭೃದ್ರಣೇ।
07069037c ಶರಾನರ್ಪಯಿತುಂ ಕಶ್ಚಿತ್ಕವಚೇ ತವ ಶಕ್ಷ್ಯತಿ।।

ಕೃಷ್ಣನಾಗಲೀ, ಕೌಂತೇಯನಾಗಲೀ, ಅನ್ಯ ಶಸ್ತ್ರಧಾರಿಯಾಗಲೀ ರಣದಲ್ಲಿ ಯಾರೂ ನಿನ್ನ ಈ ಕವಚವನ್ನು ಶರಗಳಿಂದ ಬೇಧಿಸಲಾರರು.

07069038a ಸ ತ್ವಂ ಕವಚಮಾಸ್ಥಾಯ ಕ್ರುದ್ಧಮದ್ಯ ರಣೇಽರ್ಜುನಂ।
07069038c ತ್ವರಮಾಣಃ ಸ್ವಯಂ ಯಾಹಿ ನ ಚಾಸೌ ತ್ವಾಂ ಸಹಿಷ್ಯತೇ।।

ನೀನು ಕವಚವನ್ನು ತೊಟ್ಟು ತ್ವರೆಮಾಡಿ ಸ್ವಯಂ ನೀನೇ ಇಂದು ರಣದಲ್ಲಿ ಕ್ರುದ್ಧನಾದ ಅರ್ಜುನನನ್ನು ಎದುರಿಸು. ಅವನು ನಿನ್ನನ್ನು ಸಹಿಸಿಕೊಳ್ಳಲಾರ!””

07069039 ಸಂಜಯ ಉವಾಚ। 07069039a ಏವಮುಕ್ತ್ವಾ ತ್ವರನ್ದ್ರೋಣಃ ಸ್ಪೃಷ್ಟ್ವಾಂಭೋ ವರ್ಮ ಭಾಸ್ವರಂ।
07069039c ಆಬಬಂಧಾದ್ಭುತತಮಂ ಜಪನ್ಮಂತ್ರಂ ಯಥಾವಿಧಿ।।

ಸಂಜಯನು ಹೇಳಿದನು: “ಹೀಗೆ ಹೇಳಿ ತ್ವರೆಯಲ್ಲಿ ಆಚಮನ ಮಾಡಿ ಯಥಾವಿಧಿಯಾಗಿ ಮಂತ್ರವನ್ನು ಜಪಿಸಿ ಅತ್ಯದ್ಭುತವಾಗಿ ಹೊಳೆಯುತ್ತಿರುವ ಕವಚವನ್ನು ಅವನಿಗೆ ತೊಡಿಸಿದನು.

07069040a ರಣೇ ತಸ್ಮಿನ್ಸುಮಹತಿ ವಿಜಯಾಯ ಸುತಸ್ಯ ತೇ।
07069040c ವಿಸಿಸ್ಮಾಪಯಿಷುರ್ಲೋಕಂ ವಿದ್ಯಯಾ ಬ್ರಹ್ಮವಿತ್ತಮಃ।।

ಆ ಮಹಾರಣದಲ್ಲಿ ನಿನ್ನ ಮಗನ ವಿಜಯಕ್ಕಾಗಿ ಬ್ರಹ್ಮವಿತ್ತಮನು ತನ್ನ ವಿದ್ಯೆಯಿಂದ ಲೋಕವನ್ನು ವಿಸ್ಮಯಗೊಳಿಸಿದನು.

07069041 ದ್ರೋಣ ಉವಾಚ।
07069041a ಕರೋತು ಸ್ವಸ್ತಿ ತೇ ಬ್ರಹ್ಮಾ ಸ್ವಸ್ತಿ ಚಾಪಿ ದ್ವಿಜಾತಯಃ।
07069041c ಸರೀಸೃಪಾಶ್ಚ ಯೇ ಶ್ರೇಷ್ಠಾಸ್ತೇಭ್ಯಸ್ತೇ ಸ್ವಸ್ತಿ ಭಾರತ।।

ದ್ರೋಣನು ಹೇಳಿದನು: “ಭಾರತ! ಬ್ರಹ್ಮನು ನಿನಗೆ ಮಂಗಳವನ್ನುಂಟುಮಾಡಲಿ. ದ್ವಿಜರು ನಿನಗೆ ಮಂಗಳವನ್ನುಂಟು ಮಾಡಲಿ. ಶ್ರೇಷ್ಠರಾದ ನಾಗಗಳೂ ಕೂಡ ನಿನಗೆ ಮಂಗಳವನ್ನುಂಟುಮಾಡಲಿ.

07069042a ಯಯಾತಿರ್ನಹುಷಶ್ಚೈವ ಧುಂಧುಮಾರೋ ಭಗೀರಥಃ।
07069042c ತುಭ್ಯಂ ರಾಜರ್ಷಯಃ ಸರ್ವೇ ಸ್ವಸ್ತಿ ಕುರ್ವಂತು ಸರ್ವಶಃ।।

ಯಯಾತಿ, ನಹುಷ, ದುಂಧುಮಾರ, ಭಗೀರಥ, ಮತ್ತು ಎಲ್ಲ ರಾಜರ್ಷಿಗಳೂ ನಿನ್ನನ್ನು ಎಲ್ಲದರಲ್ಲಿಯೂ ಮಂಗಳವನ್ನುಂಟುಮಾಡಲಿ.

07069043a ಸ್ವಸ್ತಿ ತೇಽಸ್ತ್ವೇಕಪಾದೇಭ್ಯೋ ಬಹುಪಾದೇಭ್ಯ ಏವ ಚ।
07069043c ಸ್ವಸ್ತ್ಯಸ್ತ್ವಪಾದಕೇಭ್ಯಶ್ಚ ನಿತ್ಯಂ ತವ ಮಹಾರಣೇ।।

ಮಹಾರಣ್ಯದಲ್ಲಿ ನಿತ್ಯವೂ ನಿನಗೆ ಒಂದುಕಾಲಿನ, ಅನೇಕ ಕಾಲಿನ ಮತ್ತು ಕಾಲೇ ಇಲ್ಲದಿರುವವು ಮಂಗಳವನ್ನುಂಟುಮಾಡಲಿ.

07069044a ಸ್ವಾಹಾ ಸ್ವಧಾ ಶಚೀ ಚೈವ ಸ್ವಸ್ತಿ ಕುರ್ವಂತು ತೇ ಸದಾ।
07069044c ಲಕ್ಷ್ಮೀರರುಂಧತೀ ಚೈವ ಕುರುತಾಂ ಸ್ವಸ್ತಿ ತೇಽನಘ।।

ಅನಘ! ಸ್ವಾಹಾ, ಸ್ವಧಾ, ಮತ್ತು ಶಚೀ ಇವರೂ ಸದಾ ನಿನಗೆ ಮಂಗಳವನ್ನುಂಟುಮಾಡಲಿ. ಲಕ್ಷ್ಮೀ ಮತ್ತು ಅರುಂಧತಿಯರೂ ಕೂಡ ನಿನಗೆ ಮಂಗಳವನ್ನುಂಟುಮಾಡಲಿ.

07069045a ಅಸಿತೋ ದೇವಲಶ್ಚೈವ ವಿಶ್ವಾಮಿತ್ರಸ್ತಥಾಂಗಿರಾಃ।
07069045c ವಸಿಷ್ಠಃ ಕಶ್ಯಪಶ್ಚೈವ ಸ್ವಸ್ತಿ ಕುರ್ವಂತು ತೇ ನೃಪ।।

ನೃಪ! ಅಸಿತ-ದೇವಲರೂ, ವಿಶ್ವಾಮಿತ್ರ-ಅಂಗಿರಸರೂ, ವಸಿಷ್ಠ-ಕಶ್ಯಪರೂ ನಿನಗೆ ಮಂಗಳವನ್ನುಂಟುಮಾಡಲಿ.

07069046a ಧಾತಾ ವಿಧಾತಾ ಲೋಕೇಶೋ ದಿಶಶ್ಚ ಸದಿಗೀಶ್ವರಾಃ।
07069046c ಸ್ವಸ್ತಿ ತೇಽದ್ಯ ಪ್ರಯಚ್ಚಂತು ಕಾರ್ತ್ತಿಕೇಯಶ್ಚ ಷಣ್ಮುಖಃ।।

ಲೋಕೇಶ್ವರರಾದ ಧಾತಾ-ವಿಧಾತರೂ, ದಿಕ್ಕು-ಉಪದಿಕ್ಕುಗಳ ಈಶ್ವರರೂ, ಕಾರ್ತಿಕೇಯ ಷಣ್ಮುಖನೂ ಇಂದು ನಿನಗೆ ಮಂಗಳವನ್ನು ನೀಡಲಿ.

07069047a ವಿವಸ್ವಾನ್ಭಗವಾನ್ಸ್ವಸ್ತಿ ಕರೋತು ತವ ಸರ್ವಶಃ।
07069047c ದಿಗ್ಗಜಾಶ್ಚೈವ ಚತ್ವಾರಃ ಕ್ಷಿತಿಃ ಖಂ ಗಗನಂ ಗ್ರಹಾಃ।।

ಭಗವಾನ್ ವಿವಸ್ವಂತ, ನಾಲ್ಕು ದಿಗ್ಗಜಗಳೂ, ಭೂಮಿ, ಆಕಾಶ, ಗಗನ ಮತ್ತು ಗ್ರಹಗಳೂ ಸರ್ವಶಃ ನಿನಗೆ ಮಂಗಳವನ್ನುಂಟುಮಾಡಲಿ.

07069048a ಅಧಸ್ತಾದ್ಧರಣೀಂ ಯೋಽಸೌ ಸದಾ ಧಾರಯತೇ ನೃಪ।
07069048c ಸ ಶೇಷಃ ಪನ್ನಗಶ್ರೇಷ್ಠಃ ಸ್ವಸ್ತಿ ತುಭ್ಯಂ ಪ್ರಯಚ್ಚತು।।

ನೃಪ! ಧರಣಿಯನ್ನು ಕೆಳಗಿನಿಂದ ಸದಾ ಯಾರು ಹೊರುತ್ತಾನೋ ಆ ಪನ್ನಗಶ್ರೇಷ್ಠ ಶೇಷನು ನಿನಗೆ ಮಂಗಳವನ್ನು ನೀಡಲಿ.

07069049a ಗಾಂಧಾರೇ ಯುಧಿ ವಿಕ್ರಮ್ಯ ನಿರ್ಜಿತಾಃ ಸುರಸತ್ತಮಾಃ।
07069049c ಪುರಾ ವೃತ್ರೇಣ ದೈತ್ಯೇನ ಭಿನ್ನದೇಹಾಃ ಸಹಸ್ರಶಃ।।

ಗಾಂಧಾರೇ! ಹಿಂದೆ ಸುರಸತ್ತಮರು ಯುದ್ಧದಲ್ಲಿ ದೈತ್ಯ ವೃತ್ರನ ವಿಕ್ರಮದಿಂದ ಗೆಲ್ಲಲ್ಪಟ್ಟು ಸಹಸ್ರಾರು ಭಿನ್ನದೇಹರಾದರು.

07069050a ಹೃತತೇಜೋಬಲಾಃ ಸರ್ವೇ ತದಾ ಸೇಂದ್ರಾ ದಿವೌಕಸಃ।
07069050c ಬ್ರಹ್ಮಾಣಂ ಶರಣಂ ಜಗ್ಮುರ್ವೃತ್ರಾದ್ಭೀತಾ ಮಹಾಸುರಾತ್।।

ಆಗ ತೇಜೋಬಲಗಳನ್ನು ಕಳೆದುಕೊಂಡು ಮಹಾಸುರ ವೃತ್ರನಿಂದ ಭೀತರಾಗಿ ಎಲ್ಲ ದಿವೌಕಸರೂ ಇಂದ್ರನೊಂದಿಗೆ ಬ್ರಹ್ಮನ ಶರಣು ಹೊಕ್ಕರು.

07069051 ದೇವಾ ಊಚುಃ।
07069051a ಪ್ರಮರ್ದಿತಾನಾಂ ವೃತ್ರೇಣ ದೇವಾನಾಂ ದೇವಸತ್ತಮ।
07069051c ಗತಿರ್ಭವ ಸುರಶ್ರೇಷ್ಠ ತ್ರಾಹಿ ನೋ ಮಹತೋ ಭಯಾತ್।।

ದೇವತೆಗಳು ಹೇಳಿದರು: “ದೇವಸತ್ತಮ! ವೃತ್ರನಿಂದ ಸದೆಬಡಿಯಲ್ಪಟ್ಟ ದೇವತೆಗಳಿಗೆ ನೀನೇ ಗತಿ! ಸುರಶ್ರೇಷ್ಠ! ನಮ್ಮನ್ನು ಈ ಮಹಾಭಯದಿಂದ ಪಾರುಮಾಡು!””

07069052 ದ್ರೋಣ ಉವಾಚ।
07069052a ಅಥ ಪಾರ್ಶ್ವೇ ಸ್ಥಿತಂ ವಿಷ್ಣುಂ ಶಕ್ರಾದೀಂಶ್ಚ ಸುರೋತ್ತಮಾನ್।
07069052c ಪ್ರಾಹ ತಥ್ಯಮಿದಂ ವಾಕ್ಯಂ ವಿಷಣ್ಣಾನ್ಸುರಸತ್ತಮಾನ್।।

ದ್ರೋಣನು ಹೇಳಿದನು: “ಆಗ ಅವನು ಪಕ್ಕದಲ್ಲಿಯೇ ನಿಂತಿದ್ದ ವಿಷ್ಣುವಿಗೂ, ವಿಷಣ್ಣರಾಗಿದ್ದ ಶುಕ್ರರೇ ಮೊದಲಾದ ಸುರೋತ್ತಮ ಸುರಸತ್ತಮರಿಗೆ ಇದನ್ನು ಹೇಳಿದನು:

07069053a ರಕ್ಷ್ಯಾ ಮೇ ಸತತಂ ದೇವಾಃ ಸಹೇಂದ್ರಾಃ ಸದ್ವಿಜಾತಯಃ।
07069053c ತ್ವಷ್ಟುಃ ಸುದುರ್ಧರಂ ತೇಜೋ ಯೇನ ವೃತ್ರೋ ವಿನಿರ್ಮಿತಃ।।

“ಇಂದ್ರನೊಂದಿಗೆ ದೇವತೆಗಳನ್ನೂ, ಉತ್ತಮ ದ್ವಿಜಾತಿಯವರನ್ನೂ ನಾನು ಸತತವಾಗಿ ರಕ್ಷಿಸಬೇಕು. ಆದರೆ ಯಾವುದರಿಂದ ವೃತ್ರನು ನಿರ್ಮಿತನಾಗಿರುವನೋ ಆ ತ್ವಷ್ಟನ ತೇಜಸ್ಸು ಸಹಿಸಲು ತುಂಬಾ ಅಸಾಧ್ಯವಾದುದು.

07069054a ತ್ವಷ್ಟ್ರಾ ಪುರಾ ತಪಸ್ತಪ್ತ್ವಾ ವರ್ಷಾಯುತಶತಂ ತದಾ।
07069054c ವೃತ್ರೋ ವಿನಿರ್ಮಿತೋ ದೇವಾಃ ಪ್ರಾಪ್ಯಾನುಜ್ಞಾಂ ಮಹೇಶ್ವರಾತ್।।

ಹಿಂದೆ ತ್ವಷ್ಟನು ಹತ್ತು ಲಕ್ಷ ವರ್ಷಗಳ ತಪಸ್ಸನ್ನು ತಪಿಸಿ ಮಹೇಶ್ವರನ ಅನುಜ್ಞೆಯನ್ನು ಪಡೆದು ವೃತ್ರನನ್ನು ನಿರ್ಮಿಸಿದನು.

07069055a ಸ ತಸ್ಯೈವ ಪ್ರಸಾದಾದ್ವೈ ಹನ್ಯಾದೇವ ರಿಪುರ್ಬಲೀ।
07069055c ನಾಗತ್ವಾ ಶಂಕರಸ್ಥಾನಂ ಭಗವಾನ್ದೃಶ್ಯತೇ ಹರಃ।।

ಅವನದೇ ಪ್ರಸಾದದಿಂದ ಈ ಬಲಶಾಲೀ ರಿಪುವು ಸಂಹರಿಸುತ್ತಿದ್ದಾನೆ. ಶಂಕರನ ಸ್ಥಾನಕ್ಕೆ ಹೋಗದೇ ಭಗವಾನ್ ಹರನನ್ನು ಕಾಣಲಾರಿರಿ.

07069056a ದೃಷ್ಟ್ವಾ ಹನಿಷ್ಯಥ ರಿಪುಂ ಕ್ಷಿಪ್ರಂ ಗಚ್ಚತ ಮಂದರಂ।
07069056c ಯತ್ರಾಸ್ತೇ ತಪಸಾಂ ಯೋನಿರ್ದಕ್ಷಯಜ್ಞವಿನಾಶನಃ।
07069056e ಪಿನಾಕೀ ಸರ್ವಭೂತೇಶೋ ಭಗನೇತ್ರನಿಪಾತನಃ।।

ಅವನನ್ನು ನೋಡಿ ನೀವು ಆ ಶತ್ರುವನ್ನು ಸಂಹರಿಸಬಲ್ಲಿರಿ. ಆದುದರಿಂದ ಕ್ಷಿಪ್ರವಾಗಿ ಮಂದರಕ್ಕೆ ಹೋಗಿ. ಅಲ್ಲಿ ಆ ತಪಸ್ಸಿನ ಯೋನಿ, ದಕ್ಷಯಜ್ಞ ವಿನಾಶಕ, ಪಿನಾಕೀ, ಸರ್ವ ಭೂತೇಶ, ಭಗನೇತ್ರನಿಪಾತಿಯು ಇದ್ದಾನೆ.”

07069057a ತೇ ಗತ್ವಾ ಸಹಿತಾ ದೇವಾ ಬ್ರಹ್ಮಣಾ ಸಹ ಮಂದರಂ।
07069057c ಅಪಶ್ಯಂಸ್ತೇಜಸಾಂ ರಾಶಿಂ ಸೂರ್ಯಕೋಟಿಸಮಪ್ರಭಂ।।

ಆ ದೇವತೆಗಳು ಬ್ರಹ್ಮನೊಂದಿಗೆ ಮಂದರಕ್ಕೆ ಹೋಗಿ ಸೂರ್ಯಕೋಟಿಸಮಪ್ರಭನಾದ ತೇಜಸ್ಸಿನ ರಾಶಿಯನ್ನು ಕಂಡರು.

07069058a ಸೋಽಬ್ರವೀತ್ಸ್ವಾಗತಂ ದೇವಾ ಬ್ರೂತ ಕಿಂ ಕರವಾಣ್ಯಹಂ।
07069058c ಅಮೋಘಂ ದರ್ಶನಂ ಮಹ್ಯಂ ಕಾಮಪ್ರಾಪ್ತಿರತೋಽಸ್ತು ವಃ।।

ಅವನು ಹೇಳಿದನು: “ದೇವತೆಗಳೇ! ಸ್ವಾಗತ! ಹೇಳಿ! ನಾನೇನು ಮಾಡಬೇಕು? ನನ್ನ ಈ ಅಮೋಘ ದರ್ಶನವು ನೀವು ಬಯಸಿದುದನ್ನು ಪಡೆಯುವಂತವರಾಗಿ!”

07069059a ಏವಮುಕ್ತಾಸ್ತು ತೇ ಸರ್ವೇ ಪ್ರತ್ಯೂಚುಸ್ತಂ ದಿವೌಕಸಃ।
07069059c ತೇಜೋ ಹೃತಂ ನೋ ವೃತ್ರೇಣ ಗತಿರ್ಭವ ದಿವೌಕಸಾಂ।।

ಹೀಗೆ ಹೇಳಲು ದಿವೌಕಸರೆಲ್ಲರೂ ಅವನಿಗೆ ಉತ್ತರಿಸಿದರು: “ವೃತ್ರನ ತೇಜಸ್ಸನ್ನು ಅಪಹರಿಸಿ ದಿವೌಕಸರ ಗತಿಯಾಗು!

07069060a ಮೂರ್ತೀರೀಕ್ಷಷ್ವ ನೋ ದೇವ ಪ್ರಹಾರೈರ್ಜರ್ಜರೀಕೃತಾಃ।
07069060c ಶರಣಂ ತ್ವಾಂ ಪ್ರಪನ್ನಾಃ ಸ್ಮ ಗತಿರ್ಭವ ಮಹೇಶ್ವರ।।

ಮಹೇಶ್ವರ! ದೇವ! ಅವನ ಪ್ರಹಾರಗಳಿಂದ ಜರ್ಜರಿತವಾಗಿ ಮಾಡಲ್ಪಟ್ಟ ಈ ಶರೀರಗಳನ್ನು ನೋಡು! ನಾವು ನಿನಗೇ ಶರಣು ಬಂದಿದ್ದೇವೆ. ನಮ್ಮ ಗತಿಯಾಗು!”

07069061 ಮಹೇಶ್ವರ ಉವಾಚ।
07069061a ವಿದಿತಂ ಮೇ ಯಥಾ ದೇವಾಃ ಕೃತ್ಯೇಯಂ ಸುಮಹಾಬಲಾ।
07069061c ತ್ವಷ್ಟುಸ್ತೇಜೋಭವಾ ಘೋರಾ ದುರ್ನಿವಾರ್ಯಾಕೃತಾತ್ಮಭಿಃ।।

ಮಹೇಶ್ವರನು ಹೇಳಿದನು: “ದೇವತೆಗಳೇ! ತ್ವಷ್ಟನ ತೇಜಸ್ಸಿನಿಂದ ಈ ಸುಮಹಾಬಲ ಘೋರ ಕೃತಾತ್ಮರಿಂದಲೂ ತಡೆಯಲು ಅಸಾಧ್ಯನಾದವನು ಮಾಡಲ್ಪಟ್ಟನು ಎನ್ನುವುದು ತಿಳಿದಿದೆ.

07069062a ಅವಶ್ಯಂ ತು ಮಯಾ ಕಾರ್ಯಂ ಸಾಹ್ಯಂ ಸರ್ವದಿವೌಕಸಾಂ।
07069062c ಮಮೇದಂ ಗಾತ್ರಜಂ ಶಕ್ರ ಕವಚಂ ಗೃಹ್ಯ ಭಾಸ್ವರಂ।
07069062e ಬಧಾನಾನೇನ ಮಂತ್ರೇಣ ಮಾನಸೇನ ಸುರೇಶ್ವರ।।

ಆದರೆ ಸರ್ವ ದಿವೌಕಸರಿಗೆ ಸಹಾಯವನ್ನು ಮಾಡುವುದು ನನ್ನ ಅವಶ್ಯ ಕಾರ್ಯವಾಗಿದೆ. ಶಕ್ರ! ನನ್ನ ದೇಹದಿಂದ ಹುಟ್ಟಿದ ಹೊಳೆಯುತ್ತಿರುವ ಕವಚವನ್ನು ತೆಗೆದುಕೋ! ಸುರೇಶ್ವರ! ಮನಸ್ಸಿನಲ್ಲಿಯೇ ಈ ಮಂತ್ರಗಳನ್ನು ಹೇಳಿ ಧರಿಸು!””

07069063 ದ್ರೋಣ ಉವಾಚ।
07069063a ಇತ್ಯುಕ್ತ್ವಾ ವರದಃ ಪ್ರಾದಾದ್ವರ್ಮ ತನ್ಮಂತ್ರಮೇವ ಚ।
07069063c ಸ ತೇನ ವರ್ಮಣಾ ಗುಪ್ತಃ ಪ್ರಾಯಾದ್ವೃತ್ರಚಮೂಂ ಪ್ರತಿ।।

ದ್ರೋಣನು ಹೇಳಿದನು: “ಹೀಗೆ ಹೇಳಿ ವರದನು ಆ ಕವಚವನ್ನೂ ಮಂತ್ರವನ್ನೂ ನೀಡಿದನು. ಅವನು ಆ ಕವಚದಿಂದ ರಕ್ಷಿತನಾಗಿ ವೃತ್ರನ ಸೇನೆಯ ಕಡೆ ಹೋದನು.

07069064a ನಾನಾವಿಧೈಶ್ಚ ಶಸ್ತ್ರೌಘೈಃ ಪಾತ್ಯಮಾನೈರ್ಮಹಾರಣೇ।
07069064c ನ ಸಂಧಿಃ ಶಕ್ಯತೇ ಭೇತ್ತುಂ ವರ್ಮಬಂಧಸ್ಯ ತಸ್ಯ ತು।।

ಮಹಾರಣದಲ್ಲಿ ಬೀಳುವ ನಾನಾವಿಧದ ಶಸ್ತ್ರೌಘಗಳು ತಾಗಿದರೂ ಈ ಕವಚವನ್ನು ಧರಿಸಿದವನನ್ನು ಭೇದಿಸಲು ಸಾಧ್ಯವಿಲ್ಲ.

07069065a ತತೋ ಜಘಾನ ಸಮರೇ ವೃತ್ರಂ ದೇವಪತಿಃ ಸ್ವಯಂ।
07069065c ತಂ ಚ ಮತ್ರಮಯಂ ಬಂಧಂ ವರ್ಮ ಚಾಂಗಿರಸೇ ದದೌ।।

ಆಗ ಸ್ವಯಂ ದೇವಪತಿಯು ವೃತ್ರನನ್ನು ಸಮರದಲ್ಲಿ ಸಂಹರಿಸಿದನು. ಅನಂತರ ಆ ಮಂತ್ರಮಯವಾಗಿ ಕಟ್ಟುವ ಕವಚವನ್ನು ಆಂಗಿರಸನಿಗೆ ನೀಡಿದನು.

07069066a ಅಂಗಿರಾಃ ಪ್ರಾಹ ಪುತ್ರಸ್ಯ ಮಂತ್ರಜ್ಞಸ್ಯ ಬೃಹಸ್ಪತೇಃ।
07069066c ಬೃಹಸ್ಪತಿರಥೋವಾಚ ಅಗ್ನಿವೇಶ್ಯಾಯ ಧೀಮತೇ।।

ಆಂಗಿರಸನು ಅದನ್ನು ಮಂತ್ರಜ್ಞ ಬೃಹಸ್ಪತಿಗೆ ಹೇಳಿದನು. ಬೃಹಸ್ಪತಿಯು ಧೀಮತ ಅಗ್ನಿವೇಶನಿಗೆ ಹೇಳಿದನು.

07069067a ಅಗ್ನಿವೇಶ್ಯೋ ಮಮ ಪ್ರಾದಾತ್ತೇನ ಬಧ್ನಾಮಿ ವರ್ಮ ತೇ।
07069067c ತವಾದ್ಯ ದೇಹರಕ್ಷಾರ್ಥಂ ಮಂತ್ರೇಣ ನೃಪಸತ್ತಮ।।

ನೃಪಸತ್ತಮ! ಅಗ್ನಿವೇಶ್ಯನು ನನಗೆ ನೀಡಿದ ಕವಚವನ್ನು ನಾನು ನಿನಗೆ ಇಂದು ನಿನ್ನ ದೇಹರಕ್ಷಣಾರ್ಥವಾಗಿ ಮಂತ್ರಗಳಿಂದ ಕಟ್ಟಿದ್ದೇನೆ.””

07069068 ಸಂಜಯ ಉವಾಚ।
07069068a ಏವಮುಕ್ತ್ವಾ ತತೋ ದ್ರೋಣಸ್ತವ ಪುತ್ರಂ ಮಹಾದ್ಯುತಿಃ।
07069068c ಪುನರೇವ ವಚಃ ಪ್ರಾಹ ಶನೈರಾಚಾರ್ಯಪುಂಗವಃ।।

ಸಂಜಯನು ಹೇಳಿದನು: “ಹೀಗೆ ನಿನ್ನ ಮಗ ಮಹಾದ್ಯುತಿಗೆ ಹೇಳಿ ಆಚಾರ್ಯಪುಂಗವ ದ್ರೋಣನು ಪುನಃ ಮೆಲ್ಲನೇ ಈ ಮಾತನ್ನಾಡಿದನು:

07069069a ಬ್ರಹ್ಮಸೂತ್ರೇಣ ಬಧ್ನಾಮಿ ಕವಚಂ ತವ ಪಾರ್ಥಿವ।
07069069c ಹಿರಣ್ಯಗರ್ಭೇಣ ಯಥಾ ಬದ್ಧಂ ವಿಷ್ಣೋಃ ಪುರಾ ರಣೇ।।

“ಪಾರ್ಥಿವ! ಹಿಂದೆ ರಣದಲ್ಲಿ ಹಿರಣ್ಯಗರ್ಭನು ವಿಷ್ಣುವಿಗೆ ಹೇಗೆ ಇದನ್ನು ಕಟ್ಟಿದ್ದನೋ ಹಾಗೆ ನಿನಗೆ ನಾನು ಈ ಕವಚವನ್ನು ಬ್ರಹ್ಮಸೂತ್ರದಿಂದ ಕಟ್ಟುತ್ತಿದ್ದೇನೆ.

07069070a ಯಥಾ ಚ ಬ್ರಹ್ಮಣಾ ಬದ್ಧಂ ಸಂಗ್ರಾಮೇ ತಾರಕಾಮಯೇ।
07069070c ಶಕ್ರಸ್ಯ ಕವಚಂ ದಿವ್ಯಂ ತಥಾ ಬಧ್ನಾಮ್ಯಹಂ ತವ।।

ಹೇಗೆ ತಾರಕಸುರನ ಸಂಗ್ರಾಮದಲ್ಲಿ ಬ್ರಹ್ಮನು ಶಕ್ರನಿಗೆ ಕಟ್ಟಿದ್ದನೋ ಹಾಗೆ ಕವಚವನ್ನು ನಿನಗೆ ನಾನು ಕಟ್ಟುತ್ತಿದ್ದೇನೆ.”

07069071a ಬದ್ಧ್ವಾ ತು ಕವಚಂ ತಸ್ಯ ಮಂತ್ರೇಣ ವಿಧಿಪೂರ್ವಕಂ।
07069071c ಪ್ರೇಷಯಾಮಾಸ ರಾಜಾನಂ ಯುದ್ಧಾಯ ಮಹತೇ ದ್ವಿಜಃ।।

ಮಂತ್ರದಿಂದ ವಿಧಿಪೂರ್ವಕವಾಗಿ ಅವನಿಗೆ ಕವಚವನ್ನು ಕಟ್ಟಿ ದ್ವಿಜನು ರಾಜನನ್ನು ಮಹಾ ಯುದ್ಧಕ್ಕೆ ಕಳುಹಿಸಿದನು.

07069072a ಸ ಸನ್ನದ್ಧೋ ಮಹಾಬಾಹುರಾಚಾರ್ಯೇಣ ಮಹಾತ್ಮನಾ।
07069072c ರಥಾನಾಂ ಚ ಸಹಸ್ರೇಣ ತ್ರಿಗರ್ತಾನಾಂ ಪ್ರಹಾರಿಣಾಂ।।
07069073a ತಥಾ ದಂತಿಸಹಸ್ರೇಣ ಮತ್ತಾನಾಂ ವೀರ್ಯಶಾಲಿನಾಂ।
07069073c ಅಶ್ವಾನಾಮಯುತೇನೈವ ತಥಾನ್ಯೈಶ್ಚ ಮಹಾರಥೈಃ।।
07069074a ವೃತಃ ಪ್ರಾಯಾನ್ಮಹಾಬಾಹುರರ್ಜುನಸ್ಯ ರಥಂ ಪ್ರತಿ।
07069074c ನಾನಾವಾದಿತ್ರಘೋಷೇಣ ಯಥಾ ವೈರೋಚನಿಸ್ತಥಾ।।

ಆಚಾರ್ಯ ಮಹಾತ್ಮನಿಂದ ಸನ್ನದ್ಧಗೊಂಡು ಆ ಮಹಾಬಾಹುವು ಪ್ರಹಾರಿಗಳಾದ ಸಹಸ್ರ ತ್ರಿಗರ್ತರ ರಥರೊಂದಿಗೆ, ಹಾಗೆಯೇ ವೀರ್ಯಶಾಲಿಗಳಾದ ಮದಿಸಿದ ಸಹಸ್ರ ಆನೆಗಳಿಂದ, ಹತ್ತು ಸಾವಿರ ಅಶ್ವಗಳಿಂದ ಮತ್ತು ಅಷ್ಟೇ ಮಹಾರಥಿಗಳಿಂದ ಸುತ್ತುವರೆಯಲ್ಪಟ್ಟು, ನಾನಾ ವಾದ್ಯಗಳ ಘೋಷಗಳೊಂದಿಗೆ, ವೈರೋಚನಿಯು ಹೇಗೋ ಹಾಗೆ, ಮಹಾಬಾಹು ಅರ್ಜುನನ ರಥದ ಕಡೆ ಹೊರಟನು.

07069075a ತತಃ ಶಬ್ದೋ ಮಹಾನಾಸೀತ್ಸೈನ್ಯಾನಾಂ ತವ ಭಾರತ।
07069075c ಅಗಾಧಂ ಪ್ರಸ್ಥಿತಂ ದೃಷ್ಟ್ವಾ ಸಮುದ್ರಮಿವ ಕೌರವಂ।।

ಭಾರತ! ಅಗಾಧ ಸಮುದ್ರದಂತೆ ಹೊರಟ ಕೌರವನನ್ನು ನೋಡಿ ನಿನ್ನ ಸೇನೆಯಲ್ಲಿ ಮಹಾ ಶಬ್ಧವುಂಟಾಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ದುರ್ಯೋಧನಕವಚಬಂಧನೇ ಏಕೋನಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ದುರ್ಯೋಧನಕವಚಬಂಧನ ಎನ್ನುವ ಅರವತ್ತೊಂಭತ್ತನೇ ಅಧ್ಯಾಯವು.