ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 68
ಸಾರ
ಅರ್ಜುನನಿಂದ ಶ್ರುತಾಯು-ಅಚ್ಯುತಾಯು ಮತ್ತು ಅವರ ಮಕ್ಕಳಾದ ಆಯುತಾಯು-ದೀರ್ಘಾಯುಗಳ ವಧೆ (1-29). ಅರ್ಜುನನ ಪರಾಕ್ರಮ (30-55). ಅಂಬಷ್ಠರಾಜ ಶ್ರುತಾಯುವನ್ನು ಅರ್ಜುನನು ವಧಿಸಿದುದು (56-66).
07068001 ಸಂಜಯ ಉವಾಚ।
07068001a ಹತೇ ಸುದಕ್ಷಿಣೇ ರಾಜನ್ವೀರೇ ಚೈವ ಶ್ರುತಾಯುಧೇ।
07068001c ಜವೇನಾಭ್ಯದ್ರವನ್ಪಾರ್ಥಂ ಕುಪಿತಾಃ ಸೈನಿಕಾಸ್ತವ।।
ಸಂಜಯನು ಹೇಳಿದನು: “ರಾಜನ್! ವೀರರಾದ ಸುದಕ್ಷಿಣ ಮತ್ತು ಶ್ರುತಾಯುಧರು ಹತರಾಗಲು ಕುಪಿತರಾದ ನಿನ್ನ ಸೈನಿಕರು ವೇಗದಿಂದ ಪಾರ್ಥನನ್ನು ಆಕ್ರಮಣಿಸಿದರು.
07068002a ಅಭೀಷಾಹಾಃ ಶೂರಸೇನಾಃ ಶಿಬಯೋಽಥ ವಸಾತಯಃ।
07068002c ಅಭ್ಯವರ್ಷಂಸ್ತತೋ ರಾಜನ್ಶರವರ್ಷೈರ್ಧನಂಜಯಂ।।
ರಾಜನ್! ಅಭೀಷಾಹರು, ಶೂರಸೇನರು, ಶಿಬಯರು ಮತ್ತು ವಸಾತಯರು ಧನಂಜಯನ ಮೇಲೆ ಶರವರ್ಷಗಳನ್ನು ಸುರಿಸಿದರು.
07068003a ತೇಷಾಂ ಷಷ್ಟಿಶತಾನಾರ್ಯಾನ್ಪ್ರಾಮಥ್ನಾತ್ಪಾಂಡವಃ ಶರೈಃ।
07068003c ತೇ ಸ್ಮ ಭೀತಾಃ ಪಲಾಯಂತ ವ್ಯಾಘ್ರಾತ್ ಕ್ಷುದ್ರಮೃಗಾ ಇವ।।
ಆ ಆರುಸಾವಿರ ಆರ್ಯರನ್ನು ಪಾಂಡವನು ಶರಗಳಿಂದ ನಾಶಪಡಿಸಿದನು. ಅವರಾದರೋ ವ್ಯಾಘ್ರದಿಂದ ಭೀತಿಗೊಂಡ ಕ್ಷುದ್ರಮೃಗಗಳಂತೆ ಪಲಾಯನಗೈದರು.
07068004a ತೇ ನಿವೃತ್ಯ ಪುನಃ ಪಾರ್ಥಂ ಸರ್ವತಃ ಪರ್ಯವಾರಯನ್।
07068004c ರಣೇ ಸಪತ್ನಾನ್ನಿಘ್ನಂತಂ ಜಿಗೀಷಂತನ್ಪರಾನ್ಯುಧಿ।।
ಹಿಂದಿರುಗಿ ಬಂದು ಪುನಃ ರಣಯುದ್ಧದಲ್ಲಿ ದಾಯಾದಿ ಶತ್ರುಗಳನ್ನು ಕೊಲ್ಲಲು ಬಯಸಿದ್ದ ಪಾರ್ಥನನ್ನು ಎಲ್ಲ ಕಡೆಗಳಿಂದ ಸುತ್ತುವರೆದರು.
07068005a ತೇಷಾಮಾಪತತಾಂ ತೂರ್ಣಂ ಗಾಂಡೀವಪ್ರೇಷಿತೈಃ ಶರೈಃ।
07068005c ಶಿರಾಂಸಿ ಪಾತಯಾಮಾಸ ಬಾಹೂಂಶ್ಚೈವ ಧನಂಜಯಃ।।
ಧನಂಜಯನು ಬೇಗನೇ ಗಾಂಡೀವದಿಂದ ಬಿಡಲ್ಪಟ್ಟ ಶರಗಳಿಂದ ಅವರ ಬಾಹುಗಳನ್ನೂ ಶಿರಗಳನ್ನೂ ಬೀಳಿಸಿದನು.
07068006a ಶಿರೋಭಿಃ ಪತಿತೈಸ್ತತ್ರ ಭೂಮಿರಾಸೀನ್ನಿರಂತರಾ।
07068006c ಅಭ್ರಚ್ಚಾಯೇವ ಚೈವಾಸೀದ್ಧ್ವಾಂಕ್ಷಗೃಧ್ರವಡೈರ್ಯುಧಿ।।
ಅಲ್ಲಿ ನಿರಂತರವಾಗಿ ಬೀಳುತ್ತಿದ್ದ ಶರಗಳಿಂದ ಭೂಮಿಯು ತುಂಬಿಹೋಗಿತ್ತು. ಹದ್ದು-ಕಾಗೆ-ಗಿಡುಗಗಳು ಮೇಲೆ ಹಾರಾಡಿಕೊಂಡಿದ್ದು ಚಪ್ಪರಗಳಂತೆ ನೆರಳನ್ನು ನೀಡುತ್ತಿದ್ದವು.
07068007a ತೇಷು ತೂತ್ಸಾದ್ಯಮಾನೇಷು ಕ್ರೋಧಾಮರ್ಷಸಮನ್ವಿತೌ।
07068007c ಶ್ರುತಾಯುಶ್ಚಾಚ್ಯುತಾಯುಶ್ಚ ಧನಂಜಯಮಯುಧ್ಯತಾಂ।।
ಅವರ ಜನರು ಹಾಗೆ ನಾಶವಾಗುತ್ತಿರಲು ಕ್ರೋಧ-ಅಸಹನೆಯಿಂದ ಕೂಡಿದ ಶ್ರುತಾಯು ಮತ್ತು ಅಚ್ಯುತಾಯು ಇಬ್ಬರೂ ಧನಂಜಯನನ್ನು ಎದುರಿಸಿ ಯುದ್ಧ ಮಾಡಿದರು.
07068008a ಬಲಿನೌ ಸ್ಪರ್ಧಿನೌ ವೀರೌ ಕುಲಜೌ ಬಾಹುಶಾಲಿನೌ।
07068008c ತಾವೇನಂ ಶರವರ್ಷಾಣಿ ಸವ್ಯದಕ್ಷಿಣಮಸ್ಯತಾಂ।।
ಬಲಿಗಳಾದ, ಸ್ಪರ್ಧಿಗಳಾದ, ಕುಲಜರಾದ, ಬಾಹುಶಾಲಿಗಳಾದ ಆ ವೀರರಿಬ್ಬರೂ ಅವನ ಎಡ-ಬಲಗಳಲ್ಲಿ ಶರವರ್ಷಗಳನ್ನು ಸುರಿಸಿದರು.
07068009a ತ್ವರಾಯುಕ್ತೌ ಮಹಾರಾಜ ಪ್ರಾರ್ಥಯಾನೌ ಮಹದ್ಯಶಃ।
07068009c ಅರ್ಜುನಸ್ಯ ವಧಪ್ರೇಪ್ಸೂ ಪುತ್ರಾರ್ಥೇ ತವ ಧನ್ವಿನೌ।।
07068010a ತಾವರ್ಜುನಂ ಸಹಸ್ರೇಣ ಪತ್ರಿಣಾಂ ನತಪರ್ವಣಾಂ।
07068010c ಪೂರಯಾಮಾಸತುಃ ಕ್ರುದ್ಧೌ ತಡಾಗಂ ಜಲದೌ ಯಥಾ।।
ಮಹಾರಾಜ! ಅವಸರದಲ್ಲಿದ್ದ, ಮಹಾ ಯಶಸ್ಸನ್ನು ಬಯಸಿದ್ದ, ನಿನ್ನ ಮಗನಿಗಾಗಿ ಅರ್ಜುನನ ವಧೆಯನ್ನು ಬಯಸಿದ್ದ ಆ ಇಬ್ಬರು ಧನ್ವಿಗಳೂ ಕ್ರುದ್ಧರಾಗಿ ಎರಡು ದೊಡ್ಡ ದೊಡ್ಡ ಮೋಡಗಳು ಸರೋವರವೊಂದರ ಮೇಲೆ ಬಿದ್ದು ತುಂಬಿಬಿಡುವಂತೆ ಸಹಸ್ರಾರು ಪತ್ರಿ ನತಪರ್ವಗಳನ್ನು ಅರ್ಜುನನ ಮೇಲೆ ಸುರಿಸಿದರು.
07068011a ಶ್ರುತಾಯುಶ್ಚ ತತಃ ಕ್ರುದ್ಧಸ್ತೋಮರೇಣ ಧನಂಜಯಂ।
07068011c ಆಜಘಾನ ರಥಶ್ರೇಷ್ಠಃ ಪೀತೇನ ನಿಶಿತೇನ ಚ।।
ಆಗ ಕ್ರುದ್ಧನಾದ ರಥಶ್ರೇಷ್ಠ ಶ್ರುತಾಯುವು ಹರಿತವಾದ ಹಿತ್ತಾಳೆಯ ತೋಮರದಿಂದ ಧನಂಜಯನನ್ನು ಹೊಡೆದನು.
07068012a ಸೋಽತಿವಿದ್ಧೋ ಬಲವತಾ ಶತ್ರುಣಾ ಶತ್ರುಕರ್ಶನಃ।
07068012c ಆಜಗಾಮ ಪರಂ ಮೋಹಂ ಮೋಹಯನ್ಕೇಶವಂ ರಣೇ।।
ಬಲಶಾಲಿ ಶತ್ರುವಿನಿಂದ ಅತಿಯಾದ ನೋವನ್ನನುಭವಿಸಿದ ಅರ್ಜುನನು ರಣದಲ್ಲಿ ಕೇಶವನನ್ನೂ ದುಗುಡಗೊಳಿಸುತ್ತಾ ಮೂರ್ಛಿತನಾದನು.
07068013a ಏತಸ್ಮಿನ್ನೇವ ಕಾಲೇ ತು ಸೋಽಚ್ಯುತಾಯುರ್ಮಹಾರಥಃ।
07068013c ಶೂಲೇನ ಭೃಶತೀಕ್ಷ್ಣೇನ ತಾಡಯಾಮಾಸ ಪಾಂಡವಂ।।
ಇದೇ ಸಮಯದಲ್ಲಿ ಮಹಾರಥ ಅಚ್ಯುತಾಯುವು ತುಂಬಾ ತೀಕ್ಷ್ಣವಾಗಿದ್ದ ಶೂಲದಿಂದ ಅರ್ಜುನನನ್ನು ಹೊಡೆಯತೊಡಗಿದನು.
07068014a ಕ್ಷತೇ ಕ್ಷಾರಂ ಸ ಹಿ ದದೌ ಪಾಂಡವಸ್ಯ ಮಹಾತ್ಮನಃ।
07068014c ಪಾರ್ಥೋಽಪಿ ಭೃಶಸಂವಿದ್ಧೋ ಧ್ವಜಯಷ್ಟಿಂ ಸಮಾಶ್ರಿತಃ।।
ಹೀಗೆ ಮಹಾತ್ಮ ಪಾಂಡವನ ಗಾಯದ ಮೇಲೆ ಉಪ್ಪನ್ನು ಎರಚಿದನು. ಪಾರ್ಥನಾದರೋ ತುಂಬಾ ಗಾಯಗೊಂಡು ಧ್ವಜಸ್ತಂಭಕ್ಕೆ ಒರಗಿದನು.
07068015a ತತಃ ಸರ್ವಸ್ಯ ಸೈನ್ಯಸ್ಯ ತಾವಕಸ್ಯ ವಿಶಾಂ ಪತೇ।
07068015c ಸಿಂಹನಾದೋ ಮಹಾನಾಸೀದ್ಧತಂ ಮತ್ವಾ ಧನಂಜಯಂ।।
ವಿಶಾಂಪತೇ! ಆಗ ನಿನ್ನ ಸೇನೆಗಳಲೆಲ್ಲ ಧನಂಜಯನು ಹತನಾದನೆಂದು ತಿಳಿದು ಮಹಾ ಸಿಂಹನಾದವುಂಟಾಯಿತು.
07068016a ಕೃಷ್ಣಶ್ಚ ಭೃಶಸಂತಪ್ತೋ ದೃಷ್ಟ್ವಾ ಪಾರ್ಥಂ ವಿಚೇತಸಂ।
07068016c ಆಶ್ವಾಸಯತ್ಸುಹೃದ್ಯಾಭಿರ್ವಾಗ್ಭಿಸ್ತತ್ರ ಧನಂಜಯಂ।।
ಕೃಷ್ಣನೂ ಕೂಡ ಪಾರ್ಥನು ಮೂರ್ಛಿತನಾದುದನ್ನು ನೋಡಿ ತುಂಬಾ ಸಂತಪ್ತನಾಗಿ ಸ್ನೇಹಿತ ಧನಂಜಯನನ್ನು ನೀರಿನಿಂದ ಆರೈಸಿದನು.
07068017a ತತಸ್ತೌ ರಥಿನಾಂ ಶ್ರೇಷ್ಠೌ ಲಬ್ಧಲಕ್ಷೌ ಧನಂಜಯಂ।
07068017c ವಾಸುದೇವಂ ಚ ವಾರ್ಷ್ಣೇಯಂ ಶರವರ್ಷೈಃ ಸಮಂತತಃ।।
ಆಗ ಆ ಇಬ್ಬರು ರಥಿಗಳಲ್ಲಿ ಶ್ರೇಷ್ಠರೂ ಧನಂಜಯ ಮತ್ತು ವಾರ್ಷ್ಣೇಯ ವಾಸುದೇವರನ್ನು ಗುರಿಯಾಗಿಟ್ಟುಕೊಂಡು ಎಲ್ಲ ಕಡೆಗಳಿಂದ ಶರವರ್ಷಗಳನ್ನು ಸುರಿಸಿದರು.
07068018a ಸಚಕ್ರಕೂಬರರಥಂ ಸಾಶ್ವಧ್ವಜಪತಾಕಿನಂ।
07068018c ಅದೃಶ್ಯಂ ಚಕ್ರತುರ್ಯುದ್ಧೇ ತದದ್ಭುತಮಿವಾಭವತ್।।
ಚಕ್ರ-ಕೂಬರ-ರಥದೊಂದಿಗೆ ಮತ್ತು ಅಶ್ವ-ಧ್ವಜ-ಪತಾಕೆಗಳೊಂದಿಗೆ ಅವರು ಯುದ್ಧದಲ್ಲಿ ಅದೃಶ್ಯರಾಗಿಬಿಟ್ಟರು! ಅದೊಂದು ಅದ್ಭುತವಾಗಿತ್ತು.
07068019a ಪ್ರತ್ಯಾಶ್ವಸ್ತಸ್ತು ಬೀಭತ್ಸುಃ ಶನಕೈರಿವ ಭಾರತ।
07068019c ಪ್ರೇತರಾಜಪುರಂ ಪ್ರಾಪ್ಯ ಪುನಃ ಪ್ರತ್ಯಾಗತೋ ಯಥಾ।।
ಭಾರತ! ಮೆಲ್ಲನೇ ಬೀಭತ್ಸುವು ಪ್ರೇತರಾಜನ ಪುರಕ್ಕೆ ಹೋಗಿ ಪುನಃ ಹಿಂದಿರುಗಿ ಬಂದನೋ ಎನ್ನುವಂತೆ ಎಚ್ಚೆತ್ತನು.
07068020a ಸಂಚನ್ನಂ ಶರಜಾಲೇನ ರಥಂ ದೃಷ್ಟ್ವಾ ಸಕೇಶವಂ।
07068020c ಶತ್ರೂ ಚಾಭಿಮುಖೌ ದೃಷ್ಟ್ವಾ ದೀಪ್ಯಮಾನಾವಿವಾನಲೌ।।
07068021a ಪ್ರಾದುಶ್ಚಕ್ರೇ ತತಃ ಪಾರ್ಥಃ ಶಾಕ್ರಮಸ್ತ್ರಂ ಮಹಾರಥಃ।
ಕೇಶವನೊಂದಿಗೆ ರಥವು ಶರಜಾಲಗಳಿಂದ ಮುಚ್ಚಿಹೋಗಿರುವುದನ್ನು ಮತ್ತು ಎದಿರು ಅಗ್ನಿ-ವಾಯುಗಳಂತೆ ದೀಪ್ಯಮಾನರಾಗಿ ನಿಂತಿರುವ ಶತ್ರುಗಳನ್ನೂ ಕಂಡು ಮಹಾರಥ ಪಾರ್ಥನು ಶಕ್ರಾಸ್ತ್ರವನ್ನು ಪ್ರಯೋಗಿಸ ತೊಡಗಿದನು.
07068021c ತಸ್ಮಾದಾಸನ್ಸಹಸ್ರಾಣಿ ಶರಾಣಾಂ ನತಪರ್ವಣಾಂ।।
07068022a ತೇ ಜಘ್ನುಸ್ತೌ ಮಹೇಷ್ವಾಸೌ ತಾಭ್ಯಾಂ ಸೃಷ್ಟಾಂಶ್ಚ ಸಾಯಕಾನ್।
07068022c ವಿಚೇರುರಾಕಾಶಗತಾಃ ಪಾರ್ಥಬಾಣವಿದಾರಿತಾಃ।।
ಅದರಿಂದ ಸಹಸ್ರಾರು ನತಪರ್ವಣ ಶರಗಳು ಉದ್ಭವಿಸಿದವು. ಅವು ಆ ಇಬ್ಬರು ಮಹೇಷ್ವಾಸರನ್ನೂ ಹೊಡೆದವು. ಅವರು ಬಿಟ್ಟ ಬಾಣಗಳು ಪಾರ್ಥನ ಬಾಣಗಳಿಂದ ತುಂಡಾಗಿ ಆಕಾಶಕ್ಕೆ ಹಾರಿದವು.
07068023a ಪ್ರತಿಹತ್ಯ ಶರಾಂಸ್ತೂರ್ಣಂ ಶರವೇಗೇನ ಪಾಂಡವಃ।
07068023c ಪ್ರತಸ್ಥೇ ತತ್ರ ತತ್ರೈವ ಯೋಧಯನ್ವೈ ಮಹಾರಥಾನ್।।
ಅವರ ಶರಗಳನ್ನು ವೇಗದ ಶರಗಳಿಂದ ತುಂಡರಿಸಿ ಪಾಂಡವನು ಅಲ್ಲಲ್ಲಿಯೇ ಆ ಮಹಾರಥರೊಂದಿಗೆ ಹೋರಾಡಿದನು.
07068024a ತೌ ಚ ಫಲ್ಗುನಬಾಣೌಘೈರ್ವಿಬಾಹುಶಿರಸೌ ಕೃತೌ।
07068024c ವಸುಧಾಮನ್ವಪದ್ಯೇತಾಂ ವಾತನುನ್ನಾವಿವ ದ್ರುಮೌ।।
ಫಲ್ಗುನನ ಬಾಣಗಳಿಂದ ಬಾಹು-ಶಿರಸ್ಸುಗಳ್ಳು ಕತ್ತರಿಸಲ್ಪಟ್ಟು ಅವರಿಬ್ಬರೂ ಭಿರುಗಾಳಿಗೆ ಸಿಕ್ಕ ಮರಗಳಂತೆ ನೆಲದ ಮೇಲೆ ಬಿದ್ದರು.
07068025a ಶ್ರುತಾಯುಷಶ್ಚ ನಿಧನಂ ವಧಶ್ಚೈವಾಚ್ಯುತಾಯುಷಃ।
07068025c ಲೋಕವಿಸ್ಮಾಪನಮಭೂತ್ಸಮುದ್ರಸ್ಯೇವ ಶೋಷಣಂ।।
ನೋಡುವವರಿಗೆ ಶ್ರುತಾಯು ಮತ್ತು ಅಚ್ಯುತಾಯುಗಳ ನಿಧನವು ಸಮುದ್ರವನ್ನು ಒಣಗಿಸಿದಷ್ಟೇ ವಿಸ್ಮಯದಾಯಕವಾಗಿತ್ತು.
07068026a ತಯೋಃ ಪದಾನುಗಾನ್ ಹತ್ವಾ ಪುನಃ ಪಂಚಶತಾನ್ರಥಾನ್।
07068026c ಅಭ್ಯಗಾದ್ಭಾರತೀಂ ಸೇನಾಂ ನಿಘ್ನನ್ಪಾರ್ಥೋ ವರಾನ್ವರಾನ್।।
ಅವರ ಪದಾನುಗರಾದ ಐದುನೂರು ರಥರನ್ನು ಸಂಹರಿಸಿ ಪಾರ್ಥನು ಭಾರತೀ ಸೇನೆಯನ್ನು ಹೊಕ್ಕು ಶ್ರೇಷ್ಠರಲ್ಲಿ ಶ್ರೇಷ್ಠರನ್ನೂ ಸಂಹರಿಸಿದನು.
07068027a ಶ್ರುತಾಯುಷಂ ಚ ನಿಹತಂ ಪ್ರೇಕ್ಷ್ಯ ಚೈವಾಚ್ಯುತಾಯುಷಂ।
07068027c ಅಯುತಾಯುಶ್ಚ ಸಂಕ್ರುದ್ಧೋ ದೀರ್ಘಾಯುಶ್ಚೈವ ಭಾರತ।।
ಭಾರತ! ಶ್ರುತಾಯು ಮತ್ತು ಅಚ್ಯುತಾಯು ಇವರು ಹತರಾದುದನ್ನು ನೋಡಿ ಆಯುತಾಯು ಮತ್ತು ದೀರ್ಘಾಯುಗಳು ಕೂಡ ಸಂಕ್ರುದ್ಧರಾದರು.
07068028a ಪುತ್ರೌ ತಯೋರ್ನರಶ್ರೇಷ್ಠೌ ಕೌಂತೇಯಂ ಪ್ರತಿಜಗ್ಮತುಃ।
07068028c ಕಿರಂತೌ ವಿವಿಧಾನ್ಬಾಣಾನ್ಪಿತೃವ್ಯಸನಕರ್ಶಿತೌ।।
ಅವರಿಬ್ಬರ ಮಕ್ಕಳಾದ ಆ ನರಶ್ರೇಷ್ಠರು ಪಿತೃಗಳ ನಿಯೋಗದಿಂದ ಚಿಂತಿತರಾಗಿ ವಿವಿಧ ಬಾಣಗಳನ್ನು ಚೆಲ್ಲುತ್ತಾ ಕೌಂತೇಯನನ್ನು ತಿರುಗಿ ಆಕ್ರಮಣಿಸಿದರು.
07068029a ತಾವರ್ಜುನೋ ಮುಹೂರ್ತೇನ ಶರೈಃ ಸನ್ನತಪರ್ವಭಿಃ।
07068029c ಪ್ರೇಷಯತ್ಪರಮಕ್ರುದ್ಧೋ ಯಮಸ್ಯ ಸದನಂ ಪ್ರತಿ।।
ಅರ್ಜುನನು ಪರಮಕ್ರುದ್ಧನಾಗಿ ಅವರನ್ನು ಕ್ಷಣದಲ್ಲಿಯೇ ಸನ್ನತಪರ್ವ ಶರಗಳಿಂದ ಯಮನ ಸದನಕ್ಕೆ ಕಳುಹಿಸಿದನು.
07068030a ಲೋಡಯಂತಮನೀಕಾನಿ ದ್ವಿಪಂ ಪದ್ಮಸರೋ ಯಥಾ।
07068030c ನಾಶಕ್ನುವನ್ವಾರಯಿತುಂ ಪಾರ್ಥಂ ಕ್ಷತ್ರಿಯಪುಂಗವಾಃ।।
ಸಲಗವು ಪದ್ಮಸರೋವರನ್ನು ಹೇಗೋ ಹಾಗೆ ಸೇನೆಗಳನ್ನು ಕದಡುತ್ತಿದ್ದ ಪಾರ್ಥನನ್ನು ತಡೆಯಲು ಕ್ಷತ್ರಿಯಪುಂಗವರಿಗೆ ಅಸಾಧ್ಯವಾಯಿತು.
07068031a ಅಂಗಾಸ್ತು ಗಜವಾರೇಣ ಪಾಂಡವಂ ಪರ್ಯವಾರಯನ್।
07068031c ಕ್ರುದ್ಧಾಃ ಸಹಸ್ರಶೋ ರಾಜನ್ಶಿಖಿತಾ ಹಸ್ತಿಸಾದಿನಃ।।
07068032a ದುರ್ಯೋಧನಸಮಾದಿಷ್ಟಾಃ ಕುಂಜರೈಃ ಪರ್ವತೋಪಮೈಃ।
07068032c ಪ್ರಾಚ್ಯಾಶ್ಚ ದಾಕ್ಷಿಣಾತ್ಯಾಶ್ಚ ಕಲಿಂಗಪ್ರಮುಖಾ ನೃಪಾಃ।।
ರಾಜನ್! ಆಗ ಅಂಗದೇಶಕ್ಕೆ ಸೇರಿದ್ದ ಕ್ರುದ್ಧರಾದ ಸಹಸ್ರಾರು ಪ್ರಶಿಕ್ಷಿತ ಗಜಾರೋಹೀ ಯೋಧರು ತಮ್ಮ ಗಜಸೇನೆಯೊಂದಿಗೆ ಮತ್ತು ದುರ್ಯೋಧನನು ಕಳುಹಿಸಿದ್ದ ಪರ್ವತೋಪಮ ಆನೆಗಳೊಂದಿಗೆ ಪೂರ್ವದವರು ಮತ್ತು ದಕ್ಷಿಣದವರು ಹಾಗೂ ಕಲಿಂಗ ಪ್ರಮುಖ ನೃಪರು ಪಾಂಡವನನ್ನು ಸುತ್ತುವರೆದರು.
07068033a ತೇಷಾಮಾಪತತಾಂ ಶೀಘ್ರಂ ಗಾಂಡೀವಪ್ರೇಷಿತೈಃ ಶರೈಃ।
07068033c ನಿಚಕರ್ತ ಶಿರಾಂಸ್ಯುಗ್ರೌ ಬಾಹೂನಪಿ ಸುಭೂಷಣಾನ್।।
ಗಾಂಡೀವದಿಂದ ಹೊರಟ ಉಗ್ರ ಶರಗಳು ಮೇಲೆ ಬೀಳುತ್ತಿದ್ದ ಅವುಗಳ ಶಿರಗಳನ್ನೂ ಮತ್ತು ಅಲಂಕೃತವಾಗಿದ್ದ ಬಾಹುಗಳನ್ನೂ ಶೀಘ್ರವಾಗಿ ಕತ್ತರಿಸಿದವು.
07068034a ತೈಃ ಶಿರೋಭಿರ್ಮಹೀ ಕೀರ್ಣಾ ಬಾಹುಭಿಶ್ಚ ಸಹಾಂಗದೈಃ।
07068034c ಬಭೌ ಕನಕಪಾಷಾಣಾ ಭುಜಗೈರಿವ ಸಂವೃತಾ।।
ರಣಭೂಮಿಯಲ್ಲಿ ಹರಡಿಹೋಗಿದ್ದ ಅವರ ಶಿರಗಳೂ ಅಂಗದಗಳೊಂದಿಗಿನ ಬಾಹುಗಳೂ ಸರ್ಪಗಳಿಂದ ಆವೃತವಾದ ಬಂಗಾರದ ಕಲ್ಲುಗಳಂತೆ ಕಾಣುತ್ತಿದ್ದವು.
07068035a ಬಾಹವೋ ವಿಶಿಖೈಶ್ಚಿನ್ನಾಃ ಶಿರಾಂಸ್ಯುನ್ಮಥಿತಾನಿ ಚ।
07068035c ಚ್ಯವಮಾನಾನ್ಯದೃಶ್ಯಂತ ದ್ರುಮೇಭ್ಯ ಇವ ಪಕ್ಷಿಣಃ।।
ವೃಕ್ಷಗಳಿಂದ ಪಕ್ಷಿಗಳು ಕೆಳಕ್ಕೆ ಬೀಳುವಂತೆ ವಿಶಿಖಗಳಿಂದ ಕತ್ತರಿಸಲ್ಪಟ್ಟ ಬಾಹುಗಳು ಮತ್ತು ಶಿರಸ್ಸುಗಳು ಆನೆಗಳ ಮೇಲಿಂದ ತೊಪತೊಪನೆ ಬೀಳುತ್ತಿರುವುದು ಕಂಡುಬಂದಿತು.
07068036a ಶರೈಃ ಸಹಸ್ರಶೋ ವಿದ್ಧಾ ದ್ವಿಪಾಃ ಪ್ರಸ್ರುತಶೋಣಿತಾಃ।
07068036c ವ್ಯದೃಶ್ಯಂತಾದ್ರಯಃ ಕಾಲೇ ಗೈರಿಕಾಂಬುಸ್ರವಾ ಇವ।।
ಮಳೆಗಾಲದಲ್ಲಿ ಪರ್ವತಗಳಿಂದ ಗೈರಿಕಾದಿ ಧಾತು ಮಿಶ್ರಿತ ಕೆಂಪು ಬಣ್ಣದ ನೀರು ಹರಿದು ಬರುವಂತೆ ಸಾವಿರಾರು ಶರಗಳಿಂದ ಹೊಡೆಯಲ್ಪಟ್ಟ ಆನೆಗಳ ಶರೀರಗಳಿಂದ ರಕ್ತವು ಹರಿದು ಬರುತ್ತಿರುವುದು ಕಾಣುತ್ತಿತ್ತು.
07068037a ನಿಹತಾಃ ಶೇರತೇ ಸ್ಮಾನ್ಯೇ ಬೀಭತ್ಸೋರ್ನಿಶಿತೈಃ ಶರೈಃ।
07068037c ಗಜಪೃಷ್ಠಗತಾ ಮ್ಲೇಚ್ಚಾ ನಾನಾವಿಕೃತದರ್ಶನಾಃ।।
ನಾನಾರೀತಿಯಲ್ಲಿ ವಿಕೃತರಾಗಿ ಕಾಣುತ್ತಿದ್ದ ಮ್ಲೇಚ್ಛರು ಬೀಭತ್ಸುವಿನ ನಿಶಿತ ಶರಗಳಿಂದ ಹತರಾಗಿ ಆನೆಗಳ ಮೇಲೆಯೇ ಮಲಗಿದ್ದರು.
07068038a ನಾನಾವೇಷಧರಾ ರಾಜನ್ನಾನಾಶಸ್ತ್ರೌಘಸಂವೃತಾಃ।
07068038c ರುಧಿರೇಣಾನುಲಿಪ್ತಾಂಗಾ ಭಾಂತಿ ಚಿತ್ರೈಃ ಶರೈರ್ಹತಾಃ।।
ರಾಜನ್! ನಾನಾ ವಿಧದ ವೇಷಗಳನ್ನು ಧರಿಸಿದ್ದ, ನಾನಾ ಶಸ್ತ್ರ ಸಮೂಹಗಳಿಂದ ಕೂಡಿದ್ದ ಅವರು ವಿಚಿತ್ರ ಶರಗಳಿಂದ ಹತರಾಗಿ ರಕ್ತದಿಂದ ತೋಯ್ದ ಅಂಗಗಳಿಂದ ಹೊಳೆಯುತ್ತಿದ್ದರು.
07068039a ಶೋಣಿತಂ ನಿರ್ವಮಂತಿ ಸ್ಮ ದ್ವಿಪಾಃ ಪಾರ್ಥಶರಾಹತಾಃ।
07068039c ಸಹಸ್ರಶಶ್ಚಿನ್ನಗಾತ್ರಾಃ ಸಾರೋಹಾಃ ಸಪದಾನುಗಾಃ।।
ಸವಾರರು ಮತ್ತು ಅನುಚರರೊಂದಿಗೆ ಸಹಸ್ರಾರು ಆನೆಗಳು ಪಾರ್ಥನ ಶರಗಳಿಂದ ಹತರಾಗಿ, ಶರೀರಗಳು ಚೂರು ಚೂರಾಗಿ ರಕ್ತವನ್ನು ಕಾರುತ್ತಿದ್ದವು.
07068040a ಚುಕ್ರುಶುಶ್ಚ ನಿಪೇತುಶ್ಚ ಬಭ್ರಮುಶ್ಚಾಪರೇ ದಿಶಃ।
07068040c ಭೃಶಂ ತ್ರಸ್ತಾಶ್ಚ ಬಹುಧಾ ಸ್ವಾನೇನ ಮಮೃದುರ್ಗಜಾಃ।
07068040e ಸಾಂತರಾಯುಧಿಕಾ ಮತ್ತಾ ದ್ವಿಪಾಸ್ತೀಕ್ಷ್ಣವಿಷೋಪಮಾಃ।।
ಕೆಲವು ಕೂಗಿಕೊಳ್ಳುತ್ತಿದ್ದವು, ಕೆಲವು ಬಿದ್ದಿದ್ದವು, ಇನ್ನು ಕೆಲವು ದಿಕ್ಕು ದಿಕ್ಕುಗಳಲ್ಲಿ ಓಡುತ್ತಿದ್ದವು. ಅನೇಕ ಆನೆಗಳು ತುಂಬಾ ನೋವನ್ನು ಅನುಭವಿಸಿ ಭಯದಿಂದ ತಮ್ಮವರನ್ನೇ ತುಳಿದು ಧ್ವಂಸಮಾಡಿದವು. ಕೆಲವು ತೀಕ್ಷ್ಣ ವಿಷವನ್ನು ಅಡಗಿಸಿಟ್ಟುಕೊಂಡಿರುವ ಸರ್ಪಗಳಂತೆ ಆಯುಧಪಾಣಿಗಳನ್ನು ಹೊಟ್ಟೆಯ ಕೆಳಗೆ ಅಡಗಿಸಿಕೊಂಡಿಕೊಂಡಿದ್ದವು.
07068041a ವಿದಂತ್ಯಸುರಮಾಯಾಂ ಯೇ ಸುಘೋರಾ ಘೋರಚಕ್ಷುಷಃ।
07068041c ಯವನಾಃ ಪಾರದಾಶ್ಚೈವ ಶಕಾಶ್ಚ ಸುನಿಕೈಃ ಸಹ।।
07068042a ಗೋಯೋನಿಪ್ರಭವಾ ಮ್ಲೇಚ್ಚಾಃ ಕಾಲಕಲ್ಪಾಃ ಪ್ರಹಾರಿಣಃ।
07068042c ದಾರ್ವಾಭಿಸಾರಾ ದರದಾಃ ಪುಂಡ್ರಾಶ್ಚ ಸಹ ಬಾಹ್ಲಿಕೈಃ।।
ಘೋರರಾದ, ಘೋರದೃಷ್ಠಿಯುಳ್ಳ ಯವನರು, ಪಾರದರು, ಶಕರು, ಸುನಿಕರೊಂದಿಗೆ ಗೋಯೋನಿಯಲ್ಲಿ ಜನಿಸಿದ ಮ್ಲೇಚ್ಛರು, ಪ್ರಹಾರಿಗಳಾದ ಕಾಲಕಲ್ಪರು, ದಾರ್ವಾಭಿಸಾರರು, ದರದರು, ಬಾಹ್ಲಿಕರೊಂದಿಗೆ ಪೌಂಡ್ರರು ಅಸುರಮಾಯೆಯನ್ನು ಬಳಸಿ ಯುದ್ಧ ಮಾಡುತ್ತಿದ್ದರು.
07068043a ನ ತೇ ಸ್ಮ ಶಕ್ಯಾಃ ಸಂಖ್ಯಾತುಂ ವ್ರಾತಾಃ ಶತಸಹಸ್ರಶಃ।
07068043c ವೃಷ್ಟಿಸ್ತಥಾವಿಧಾ ಹ್ಯಾಸೀಚ್ಚಲಭಾನಾಮಿವಾಯತಿಃ।।
ಲೆಖ್ಕಮಾಡಲೂ ಸಾಧ್ಯವಾಗದ ನೂರಾರು ಸಹಸ್ರಾರು ವ್ರಾತಗಳು ಮಿಡಿತೆಗಳ ಹಿಂಡಿನಂತೆ ತೋರುತ್ತಿದ್ದವು.
07068044a ಅಭ್ರಚ್ಚಾಯಾಮಿವ ಶರೈಃ ಸೈನ್ಯೇ ಕೃತ್ವಾ ಧನಂಜಯಃ।
07068044c ಮುಂಡಾರ್ಧಮುಂಡಜಟಿಲಾನಶುಚೀಂ ಜಟಿಲಾನನಾನ್।
07068044e ಮ್ಲೇಚ್ಚಾನಶಾತಯತ್ಸರ್ವಾನ್ಸಮೇತಾನಸ್ತ್ರಮಾಯಯಾ।।
ಬಾಣಗಳಿಂದ ಸೇನೆಯ ಮೇಲೆ ಚಪ್ಪರವನ್ನೇ ನಿರ್ಮಿಸಿ ಧನಂಜಯನು ಅಸ್ತ್ರಮಾಯೆಯಿಂದ ಅರ್ಧಮುಂಡನ ಮಾಡಿಕೊಂಡಿದ್ದ, ಜಟಾಧಾರಿಗಳಾಗಿದ್ದ, ಅಶುಚಿಯರಾಗಿದ್ದ, ಗಡ್ಡಬಿಟ್ಟುಕೊಂಡಿದ್ದ ಮ್ಲೇಚ್ಛರೆಲ್ಲರನ್ನೂ ಒಟ್ಟಿಗೇ ನಾಶಪಡಿಸಿದನು.
07068045a ಶರೈಶ್ಚ ಶತಶೋ ವಿದ್ಧಾಸ್ತೇ ಸಂಘಾಃ ಸಂಘಚಾರಿಣಃ।
07068045c ಪ್ರಾದ್ರವಂತ ರಣೇ ಭೀತಾ ಗಿರಿಗಹ್ವರವಾಸಿನಃ।।
ನೂರಾರು ಶರಗಳಿಂದ ಗಾಯಗೊಂಡ ಆ ಗಿರಿಗಹ್ವರ ವಾಸಿಗಳು ಭೀತರಾಗಿ ರಣದಿಂದ ಗುಂಪು ಗುಂಪಾಗಿ ಓಡತೊಡಗಿದರು.
07068046a ಗಜಾಶ್ವಸಾದಿಮ್ಲೇಚ್ಚಾನಾಂ ಪತಿತಾನಾಂ ಶತೈಃ ಶರೈಃ।
07068046c ವಡಾಃ ಕಂಕಾ ವೃಕಾ ಭೂಮಾವಪಿಬನ್ರುಧಿರಂ ಮುದಾ।।
ನೂರಾರು ಶರಗಳಿಂದ ಬೀಳಿಸಲ್ಪಟ್ಟಿದ್ದ ಆನೆ-ಕುದುರೆಗಳ ಸವಾರಿ ಮ್ಲೇಚ್ಛರ ರಕ್ತವನ್ನು ಬಕಪಕ್ಷಿಗಳು, ಕಾಗೆಗಳು ಮತ್ತು ತೋಳಗಳು ಸಂತೋಷದಿಂದ ಕುಡಿಯುತ್ತಿದ್ದವು.
07068047a ಪತ್ತ್ಯಶ್ವರಥನಾಗೈಶ್ಚ ಪ್ರಚ್ಚನ್ನಕೃತಸಂಕ್ರಮಾಂ।
07068047c ಶರವರ್ಷಪ್ಲವಾಂ ಘೋರಾಂ ಕೇಶಶೈವಲಶಾಡ್ವಲಾಂ।
07068047e ಪ್ರಾವರ್ತಯನ್ನದೀಮುಗ್ರಾಂ ಶೋಣಿತೌಘತರಂಗಿಣೀಂ।।
ಪದಾತಿ-ಅಶ್ವ-ಗಜ-ರಥಗಳ ಸಮೂಹಗಳಿಂದ ಮುಚ್ಚಿಹೋಗಿದ್ದ, ಒಂದೇ ಸಮನೆ ಸುರಿಯುತ್ತಿದ್ದ ಶರವರ್ಷಗಳೇ ದೋಣಿಯಾಗುಳ್ಳ, ಕೇಶಗಳೇ ಪಾಚಿಹುಲ್ಲಾಗಿರುವ, ರಕ್ತವೇ ಸುರುಳಿಗಳೊಂದಿಗೆ ಅಲೆಅಲೆಯಾಗಿ ಹರಿಯುತ್ತಿರುವ ಘೋರವಾದ ಉಗ್ರವಾದ ನದಿಯು ಹುಟ್ಟಿಕೊಂಡಿತು.
07068048a ಶಿರಸ್ತ್ರಾಣಕ್ಷುದ್ರಮತ್ಸ್ಯಾಂ ಯುಗಾಂತೇ ಕಾಲಸಂಭೃತಾಂ।
07068048c ಅಕರೋದ್ಗಜಸಂಬಾಧಾಂ ನದೀಮುತ್ತರಶೋಣಿತಾಂ।
07068048e ದೇಹೇಭ್ಯೋ ರಾಜಪುತ್ರಾಣಾಂ ನಾಗಾಶ್ವರಥಸಾದಿನಾಂ।।
ಶಿರಸ್ತ್ರಾಣಗಳೇ ಸಣ್ಣ ಸಣ್ಣ ಮೀನುಗಳಾಗಿದ್ದವು. ಯುಗಾಂತದಲ್ಲಿ ಹುಟ್ಟುವ ಕಾಲನಂತೆ ಇದ್ದ ಆನೆಗಳ ಶರೀರಗಳಿಂದ ತುಂಬಿಕೊಂಡಿದ್ದ ಆ ರಕ್ತದ ನದಿಯು ರಾಜಪುತ್ರರ, ಆನೆ-ಕುದುರೆಗಳ ಆರೋಹಿ ಯೋಧರ ದೇಹಗಳಿಂದ ಸುರಿಯುತ್ತಿದ್ದ ರಕ್ತದಿಂದ ಮಾಡಲ್ಪಟ್ಟಿತ್ತು.
07068049a ಯಥಾ ಸ್ಥಲಂ ಚ ನಿಮ್ನಂ ಚ ನ ಸ್ಯಾದ್ವರ್ಷತಿ ವಾಸವೇ।
07068049c ತಥಾಸೀತ್ಪೃಥಿವೀ ಸರ್ವಾ ಶೋಣಿತೇನ ಪರಿಪ್ಲುತಾ।।
ಇಂದ್ರನು ಮಳೆಗಳೆಯುವಾಗ ಭೂಮಿಯ ಹಳ್ಳ-ತಿಟ್ಟುಗಳು ಒಂದೇ ಸಮನಾಗಿ ಕಾಣುವಂತೆ ರಕ್ತದಿಂದ ತುಂಬಿಹೋಗಿದ್ದ ರಣಭೂಮಿಯೆಲ್ಲವೂ ಒಂದೇ ಸಮನಾಗಿ ತೋರುತ್ತಿತ್ತು.
07068050a ಷಟ್ಸಹಸ್ರಾನ್ವರಾನ್ವೀರಾನ್ಪುನರ್ದಶಶತಾನ್ವರಾನ್।
07068050c ಪ್ರಾಹಿಣೋನ್ಮೃತ್ಯುಲೋಕಾಯ ಕ್ಷತ್ರಿಯಾನ್ ಕ್ಷತ್ರಿಯರ್ಷಭಃ।।
ಆ ಕ್ಷತ್ರಿಯರ್ಷಭನು ಆರು ಸಾವಿರ ವೀರಶ್ರೇಷ್ಠರನ್ನೂ, ಪುನಃ ಒಂದು ಸಾವಿರ ಶ್ರೇಷ್ಠ ಕ್ಷತ್ರಿಯರನ್ನು ಮೃತ್ಯುಲೋಕಕ್ಕೆ ಕಳುಹಿಸಿದನು.
07068051a ಶರೈಃ ಸಹಸ್ರಶೋ ವಿದ್ಧಾ ವಿಧಿವತ್ಕಲ್ಪಿತಾ ದ್ವಿಪಾಃ।
07068051c ಶೇರತೇ ಭೂಮಿಮಾಸಾದ್ಯ ಶೈಲಾ ವಜ್ರಹತಾ ಇವ।।
ವಜ್ರದಿಂದ ಹತವಾದ ಪರ್ವತಗಳಂತೆ ಶರಗಳಿಂದ ಹೊಡೆಯಲ್ಪಟ್ಟ ಸಹಸ್ರಾರು ಆನೆಗಳು ನೆಲಕ್ಕುರುಳಿ ವಿಧಿವತ್ತಾಗಿ ಮಲಗಿಕೊಂಡಿವೆಯೋ ಎಂದು ತೋರುತ್ತಿದ್ದವು.
07068052a ಸ ವಾಜಿರಥಮಾತಂಗಾನ್ನಿಘ್ನನ್ವ್ಯಚರದರ್ಜುನಃ।
07068052c ಪ್ರಭಿನ್ನ ಇವ ಮಾತಂಗೋ ಮೃದ್ನನ್ನಡವನಂ ಯಥಾ।।
ಮದಿಸಿದ ಸಲಗವು ಬೆಂಡಿನ ವನವನ್ನು ನಾಶಪಡಿಸುವಂತೆ ಆ ಆನೆ-ಕುದುರೆ-ರಥಗಳನ್ನು ನಾಶಗೊಳಿಸುತ್ತಾ ಅರ್ಜುನನು ತಿರುಗುತ್ತಿದ್ದನು.
07068053a ಭೂರಿದ್ರುಮಲತಾಗುಲ್ಮಂ ಶುಷ್ಕೇಂಧನತೃಣೋಲಪಂ।
07068053c ನಿರ್ದಹೇದನಲೋಽರಣ್ಯಂ ಯಥಾ ವಾಯುಸಮೀರಿತಃ।।
07068054a ಸೈನ್ಯಾರಣ್ಯಂ ತವ ತಥಾ ಕೃಷ್ಣಾನಿಲಸಮೀರಿತಃ।
07068054c ಶರಾರ್ಚಿರದಹತ್ಕ್ರುದ್ಧಃ ಪಾಂಡವಾಗ್ನಿರ್ಧನಂಜಯಃ।।
ಹೇರಳವಾದ ಮರ-ಬಳ್ಳಿ-ಪೊದರುಗಳಿರುವ ಮತ್ತು ಒಣಗಿದ ಕಟ್ಟಿಗೆ-ಹುಲ್ಲು-ಬಳ್ಳಿಗಳಿರುವ ಅರಣ್ಯವನ್ನು ವಾಯುವಿನ ಸಹಾಯದಿಂದ ಅಗ್ನಿಯು ಹೇಗೆ ಸುಡುವನೋ ಹಾಗೆ ನಿನ್ನ ಸೇನೆಯೆಂಬ ಅರಣ್ಯವನ್ನು ಕೃಷ್ಣನೆಂಬ ಅನಿಲನ ಸಹಾಯದಿಂದ ಕ್ರುದ್ಧನಾದ ಪಾಂಡವ ಧನಂಜಯನ ರೂಪದ ಅಗ್ನಿಯು ಬಾಣಗಳೆಂಬ ಜ್ವಾಲೆಗಳಿಂದ ದಹಿಸಿದನು.
07068055a ಶೂನ್ಯಾನ್ಕುರ್ವನ್ರಥೋಪಸ್ಥಾನ್ಮಾನವೈಃ ಸಂಸ್ತರನ್ಮಹೀಂ।
07068055c ಪ್ರಾನೃತ್ಯದಿವ ಸಂಬಾಧೇ ಚಾಪಹಸ್ತೋ ಧನಂಜಯಃ।।
ರಥಗಳ ಆಸನಗಳನ್ನು ಬರಿದು ಮಾಡುತ್ತಾ ಅಸುನೀಗಿದ ನರರಿಂದ ಭೂಮಿಯನ್ನು ತುಂಬುತ್ತಾ ಚಾಪವನ್ನು ಹಿಡಿದ ಧನಂಜಯನು ರಣರಂಗದಲ್ಲಿ ನರ್ತಿಸುತ್ತಿರುವನೋ ಎಂದು ಕಾಣುತ್ತಿದ್ದನು.
07068056a ವಜ್ರಕಲ್ಪೈಃ ಶರೈರ್ಭೂಮಿಂ ಕುರ್ವನ್ನುತ್ತರಶೋಣಿತಾಂ।
07068056c ಪ್ರಾವಿಶದ್ಭಾರತೀಂ ಸೇನಾಂ ಸಂಕ್ರುದ್ಧೋ ವೈ ಧನಂಜಯಃ।
ವಜ್ರದಂತಿದ್ದ ಬಾಣಗಳಿಂದ ರಣಾಂಗಣವನ್ನು ರಕ್ತದಲ್ಲಿ ಮುಳುಗಿಸಿ ಸಂಕ್ರುದ್ಧನಾದ ಧನಂಜಯನು ಭಾರತೀ ಸೇನೆಯನ್ನು ಪ್ರವೇಶಿಸಿದನು.
07068056e ತಂ ಶ್ರುತಾಯುಸ್ತಥಾಂಬಷ್ಠೋ ವ್ರಜಮಾನಂ ನ್ಯವಾರಯತ್।।
07068057a ತಸ್ಯಾರ್ಜುನಃ ಶರೈಸ್ತೀಕ್ಷ್ಣೈಃ ಕಂಕಪತ್ರಪರಿಚ್ಚದೈಃ।
07068057c ನ್ಯಪಾತಯದ್ಧಯಾನ್ ಶೀಘ್ರಂ ಯತಮಾನಸ್ಯ ಮಾರಿಷ।
07068057e ಧನುಶ್ಚಾಸ್ಯಾಪರೈಶ್ಚಿತ್ತ್ವಾ ಶರೈಃ ಪಾರ್ಥೋ ವಿಚಕ್ರಮೇ।।
ಮುಂದುವರಿಯುತ್ತಿದ್ದ ಅವನನ್ನು ಅಂಬಷ್ಠ ಶ್ರುತಾಯು7ವು ತಡೆದನು. ಮಾರಿಷ! ಪ್ರಯತ್ನಿಸುತ್ತಿದ್ದ ಅವನ ಕುದುರೆಗಳನ್ನು ಅರ್ಜುನನು ಶೀಘ್ರವಾಗಿ ತೀಕ್ಷ್ಣ ಕಂಕಪತ್ರಗಳಿಂದ ಹೊದಿಸಲ್ಪಟ್ಟಿದ್ದ ಬಾಣಗಳಿಂದ ಬೀಳಿಸಿದನು. ಅನ್ಯ ಬಾಣಗಳಿಂದ ಅವನ ಧನುಸ್ಸನ್ನೂ ಕತ್ತರಿಸಿ ಅರ್ಜುನನು ತನ್ನ ವಿಕ್ರಮವನ್ನು ಪ್ರದರ್ಶಿಸಿದನು.
07068058a ಅಂಬಷ್ಠಸ್ತು ಗದಾಂ ಗೃಹ್ಯ ಕ್ರೋಧಪರ್ಯಾಕುಲೇಕ್ಷಣಃ।
07068058c ಆಸಸಾದ ರಣೇ ಪಾರ್ಥಂ ಕೇಶವಂ ಚ ಮಹಾರಥಂ।।
ಆಗ ಅಂಬಷ್ಠನು ಗದೆಯನ್ನು ಹಿಡಿದು ಕ್ರೋಧದಿಂದ ಕಣ್ಣುಗಳನ್ನು ತಿರುಗಿಸುತ್ತಾ ರಣದಲ್ಲಿ ಪಾರ್ಥ ಮತ್ತು ಮಹಾರಥ ಕೇಶವನನ್ನು ಸಮೀಪಿಸಿದನು.
07068059a ತತಃ ಸ ಪ್ರಹಸನ್ವೀರೋ ಗದಾಮುದ್ಯಮ್ಯ ಭಾರತ।
07068059c ರಥಮಾವಾರ್ಯ ಗದಯಾ ಕೇಶವಂ ಸಮತಾಡಯತ್।।
ಭಾರತ! ಆಗ ಆ ವೀರನು ಜೋರಾಗಿ ನಗುತ್ತ ಗದೆಯನ್ನು ಎತ್ತಿ ರಥವನ್ನು ತಡೆದು ಗದೆಯಿಂದ ಕೇಶವನನ್ನು ಹೊಡೆದನು.
07068060a ಗದಯಾ ತಾಡಿತಂ ದೃಷ್ಟ್ವಾ ಕೇಶವಂ ಪರವೀರಹಾ।
07068060c ಅರ್ಜುನೋ ಭೃಶಸಂಕ್ರುದ್ಧಃ ಸೋಽಂಬಷ್ಠಂ ಪ್ರತಿ ಭಾರತ।।
ಭಾರತ! ಗದೆಯಿಂದ ಕೇಶವನನ್ನು ಹೊಡೆದುದನ್ನು ನೋಡಿ ಪರವೀರಹ ಅರ್ಜುಜನು ಅಂಬಷ್ಠನ ಮೇಲೆ ತುಂಬಾ ಕ್ರುದ್ಧನಾದನು.
07068061a ತತಃ ಶರೈರ್ಹೇಮಪುಂಖೈಃ ಸಗದಂ ರಥಿನಾಂ ವರಂ।
07068061c ಚಾದಯಾಮಾಸ ಸಮರೇ ಮೇಘಃ ಸೂರ್ಯಮಿವೋದಿತಂ।।
ಆಗ ಸಮರದಲ್ಲಿ ಹೇಮಪುಂಖದ ಶರಗಳಿಂದ ಗದೆಯೊಂದಿಗೆ ಆ ರಥಿಗಳಲ್ಲಿ ಶ್ರೇಷ್ಠನನ್ನು ಮೇಘವು ಉದಿಸುವ ಸೂರ್ಯನನ್ನು ಹೇಗೋ ಹಾಗೆ ಮುಚ್ಚಿಬಿಟ್ಟನು.
07068062a ತತೋಽಪರೈಃ ಶರೈಶ್ಚಾಪಿ ಗದಾಂ ತಸ್ಯ ಮಹಾತ್ಮನಃ।
07068062c ಅಚೂರ್ಣಯತ್ತದಾ ಪಾರ್ಥಸ್ತದದ್ಭುತಮಿವಾಭವತ್।।
ಇತರ ಶರಗಳಿಂದ ಆ ಮಹಾತ್ಮ ಅರ್ಜುನನು ಅವನ ಗದೆಯನ್ನೂ ಚೂರು ಚೂರು ಮಾಡಿದನು. ಅದು ಅದ್ಭುತವಾಗಿತ್ತು.
07068063a ಅಥ ತಾಂ ಪತಿತಾಂ ದೃಷ್ಟ್ವಾ ಗೃಹ್ಯಾನ್ಯಾಂ ಮಹತೀಂ ಗದಾಂ।
07068063c ಅರ್ಜುನಂ ವಾಸುದೇವಂ ಚ ಪುನಃ ಪುನರತಾಡಯತ್।।
ಅದು ಕೆಳಗೆ ಬಿದ್ದುದನ್ನು ನೋಡಿ ಅವನು ಇನ್ನೊಂದು ದೊಡ್ಡ ಗದೆಯನ್ನು ಎತ್ತಿಕೊಂಡು ಅರ್ಜುನ ಮತ್ತು ವಾಸುದೇವರನ್ನು ಪುನಃ ಪುನಃ ಹೊಡೆದನು.
07068064a ತಸ್ಯಾರ್ಜುನಃ ಕ್ಷುರಪ್ರಾಭ್ಯಾಂ ಸಗದಾವುದ್ಯತೌ ಭುಜೌ।
07068064c ಚಿಚ್ಚೇದೇಂದ್ರಧ್ವಜಾಕಾರೌ ಶಿರಶ್ಚಾನ್ಯೇನ ಪತ್ರಿಣಾ।।
ಅರ್ಜುನನು ಎರಡು ಕ್ಷುರಪ್ರಗಳಿಂದ ಎತ್ತಿದ ಇಂದ್ರಧ್ವಜದ ಆಕಾರದ ಅವನ ಭುಜಗಳೆರಡನ್ನೂ ಗದೆಯೊಂದಿಗೆ ಕತ್ತರಿಸಿದನು. ಇನ್ನೊಂದು ಪತ್ರಿಯಿಂದ ಅವನ ಶಿರವನ್ನು ತುಂಡರಿಸಿದನು.
07068065a ಸ ಪಪಾತ ಹತೋ ರಾಜನ್ವಸುಧಾಮನುನಾದಯನ್।
07068065c ಇಂದ್ರಧ್ವಜ ಇವೋತ್ಸೃಷ್ಟೋ ಯಂತ್ರನಿರ್ಮುಕ್ತಬಂಧನಃ।।
ರಾಜನ್! ಯಂತ್ರದ ಬಂಧನದಿಂದ ಕಳಚಿದ ಇಂದ್ರಧ್ವಜದಂತೆ ಅವನು ಜೋರಾಗಿ ಕೂಗುತ್ತಾ ಹತನಾಗಿ ನೆಲದ ಮೇಲೆ ಬಿದ್ದನು.
07068066a ರಥಾನೀಕಾವಗಾಢಶ್ಚ ವಾರಣಾಶ್ವಶತೈರ್ವೃತಃ।
07068066c ಸೋಽದೃಶ್ಯತ ತದಾ ಪಾರ್ಥೋ ಘನೈಃ ಸೂರ್ಯ ಇವಾವೃತಃ।।
ಗಾಢವಾದ ರಥಗಳ ಸೇನೆ, ಆನೆ-ಕುದುರೆಗಳಿಂದ ಆವೃತನಾಗಿದ್ದ ಪಾರ್ಥನು ಆಗ ಘನ ಮೋಡಗಳಿಂದ ಆವೃತನಾದ ಸೂರ್ಯನಂತೆ ಕಂಡನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಅಂಬಷ್ಠವಧೇ ಅಷ್ಠಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಅಂಬಷ್ಠವಧ ಎನ್ನುವ ಅರವತ್ತೆಂಟನೇ ಅಧ್ಯಾಯವು.