ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 67
ಸಾರ
ಹಿಂಬಾಲಿಸಿ ಬಂದ ದ್ರೋಣನೊಡನೆ ಅರ್ಜುನನ ಯುದ್ಧ (1-15). ಅರ್ಜುನ-ಕೃತವರ್ಮರ ಯುದ್ಧ (16-34). ವರುಣ ದೇವ ಮತ್ತು ಮಹಾನದೀ ಪರ್ಣಾಶಾಳ ಮಗ ಶ್ರುತಾಯುಧನು ವರುಣನಿತ್ತಿದ್ದ ಗದೆಯನ್ನು ಯುದ್ದಮಾಡದೇ ಇದ್ದಿದ್ದ ಕೃಷ್ಣನ ಮೇಲೆ ಪ್ರಯೋಗಿಸಲು ಅದು ತಿರುಗಿ ಶ್ರುತಾಯುಧನನ್ನೇ ವಧಿಸಿದುದು (35-54).-ಕಾಂಬೋಜ ರಾಜಪುತ್ರ ಸುದಕ್ಷಿಣನನ್ನು ಅರ್ಜುನನು ವಧಿಸಿದುದು (59-71).
07067001 ಸಂಜಯ ಉವಾಚ।
07067001a ಸನ್ನಿರುದ್ಧಸ್ತು ತೈಃ ಪಾರ್ಥೋ ಮಹಾಬಲಪರಾಕ್ರಮಃ।
07067001c ದ್ರುತಂ ಸಮನುಯಾತಶ್ಚ ದ್ರೋಣೇನ ರಥಿನಾಂ ವರಃ।।
ಸಂಜಯನು ಹೇಳಿದನು: “ಮಹಾಬಲಪರಾಕ್ರಮಿಯಾದ ಪಾರ್ಥನನ್ನು ನಿನ್ನವರು ತಡೆದು ನಿಲ್ಲಿಸಿದರು. ರಥಿಗಳಲ್ಲಿ ಶ್ರೇಷ್ಠನಾದ ಅವನನ್ನು ದ್ರೋಣನೂ ಅನುಸರಿಸಿ ಬಂದನು.
07067002a ಕಿರನ್ನಿಷುಗಣಾಂಸ್ತಿಕ್ಷ್ಣಾನ್ಸ್ವರಶ್ಮೀನಿವ ಭಾಸ್ಕರಃ।
07067002c ತಾಪಯಾಮಾಸ ತತ್ಸೈನ್ಯಂ ದೇಹಂ ವ್ಯಾಧಿಗಣೋ ಯಥಾ।।
ವ್ಯಾಧಿಗಣಗಳು ದೇಹವನ್ನು ಹೇಗೋ ಹಾಗೆ ತನ್ನದೇ ರಶ್ಮಿಗಳಿರುವ ಭಾಸ್ಕರನಂತೆ ಅವನು ತೀಕ್ಷ್ಣವಾದ ಶರಗಣಗಳನ್ನು ಚೆಲ್ಲಿ ಆ ಸೈನ್ಯವನ್ನು ಪರಿತಾಪಗೊಳಿಸಿದನು.
07067003a ಅಶ್ವೋ ವಿದ್ಧೋ ಧ್ವಜಶ್ಚಿನ್ನಃ ಸಾರೋಹಃ ಪತಿತೋ ಗಜಃ।
07067003c ಚತ್ರಾಣಿ ಚಾಪವಿದ್ಧಾನಿ ರಥಾಶ್ಚಕ್ರೈರ್ವಿನಾ ಕೃತಾಃ।।
ಅಶ್ವಗಳು ಗಾಯಗೊಂಡವು. ಧ್ವಜಗಳು ತುಂಡಾದವು. ಆರೋಹಿಗಳೊಡನೆ ಆನೆಗಳು ಉರುಳಿದವು. ಚತ್ರಗಳು ಚಾಪಗಳು ತುಂಡಾದವು. ರಥಗಳು ಚಕ್ರಗಳಿಲ್ಲದಂತಾದವು.
07067004a ವಿದ್ರುತಾನಿ ಚ ಸೈನ್ಯಾನಿ ಶರಾರ್ತಾನಿ ಸಮಂತತಃ।
07067004c ಇತ್ಯಾಸೀತ್ತುಮುಲಂ ಯುದ್ಧಂ ನ ಪ್ರಾಜ್ಞಾಯತ ಕಿಂ ಚನ।।
ಶರಗಳಿಂದ ಆರ್ತವಾದ ಸೇನೆಗಳು ಎಲ್ಲಕಡೆ ಓಡುತ್ತಿದ್ದವು. ಎಂತಹ ತುಮುಲ ಯುದ್ಧನಡೆಯಿತೆಂದರೆ ಏನೊಂದೂ ತಿಳಿಯುತ್ತಿರಲಿಲ್ಲ.
07067005a ತೇಷಾಮಾಯಚ್ಚತಾಂ ಸಂಖ್ಯೇ ಪರಸ್ಪರಮಜಿಹ್ಮಗೈಃ।
07067005c ಅರ್ಜುನೋ ಧ್ವಜಿನೀಂ ರಾಜನ್ನಭೀಕ್ಷ್ಣಂ ಸಮಕಂಪಯತ್।।
ರಾಜನ್! ಅವರು ಪರಸ್ಪರರನ್ನು ಕರೆಯುತ್ತಾ ರಣದಲ್ಲಿ ಅರ್ಜುನನನ್ನು ಜಿಹ್ಮಗಗಳಿಂದ ಒಂದೇ ಸಮನೆ ಹೊಡೆಯುತ್ತಿರಲು ಅವನೂ ಕೂಡ ಅವರನ್ನು ನಡುಗುವಂತೆ ಮಾಡಿದನು.
07067006a ಸತ್ಯಾಂ ಚಿಕೀರ್ಷಮಾಣಸ್ತು ಪ್ರತಿಜ್ಞಾಂ ಸತ್ಯಸಂಗರಃ।
07067006c ಅಭ್ಯದ್ರವದ್ರಥಶ್ರೇಷ್ಠಂ ಶೋಣಾಶ್ವಂ ಶ್ವೇತವಾಹನಃ।।
ಆಗ ಪ್ರತಿಜ್ಞೆಯನ್ನು ಸತ್ಯವಾಗಿಸಲು ಬಯಸಿದ ಸತ್ಯಸಂಗರನಾದ ಶ್ವೇತಾಶ್ವನು ರಥಶ್ರೇಷ್ಠ ಶೋಣಾಶ್ವ (ದ್ರೋಣ) ನನ್ನು ಆಕ್ರಮಣಿಸಿದನು.
07067007a ತಂ ದ್ರೋಣಃ ಪಂಚವಿಂಶತ್ಯಾ ಮರ್ಮಭಿದ್ಭಿರಜಿಹ್ಮಗೈಃ।
07067007c ಅಂತೇವಾಸಿನಮಾಚಾರ್ಯೋ ಮಹೇಷ್ವಾಸಂ ಸಮರ್ದಯತ್।।
ಆಚಾರ್ಯ ದ್ರೋಣನು ಅಂತೇವಾಸಿ(ಶಿಷ್ಯ)ಯಾಗಿದ್ದ ಆ ಮಹೇಷ್ವಾಸನ ಮರ್ಮಗಳನ್ನು ಇಪ್ಪತ್ತೈದು ಜಿಹ್ಮಗಗಳಿಂದ ಹೊಡೆದನು.
07067008a ತಂ ತೂರ್ಣಮಿವ ಬೀಭತ್ಸುಃ ಸರ್ವಶಸ್ತ್ರಭೃತಾಂ ವರಃ।
07067008c ಅಭ್ಯಧಾವದಿಷೂನಸ್ಯನ್ನಿಷುವೇಗವಿಘಾತಕಾನ್।।
ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠನಾದ ಬೀಭತ್ಸುವು ಬೇಗನೆ ಅವನ ಬಾಣಗಳ ವೇಗವನ್ನು ನಿರಸನಗೊಳಿಸಲು ಒಂದೇ ಸಮನೆ ಬಾಣಗಳನ್ನು ಪ್ರಯೋಗಿಸಿದನು.
07067009a ತಸ್ಯಾಶು ಕ್ಷಿಪತೋ ಭಲ್ಲಾನ್ಭಲ್ಲೈಃ ಸನ್ನತಪರ್ವಭಿಃ।
07067009c ಪ್ರತ್ಯವಿಧ್ಯದಮೇಯಾತ್ಮಾ ಬ್ರಹ್ಮಾಸ್ತ್ರಂ ಸಮುದೀರಯನ್।।
ಅವನು ಎಸೆಯುತ್ತಿದ್ದ ಭಲ್ಲಗಳನ್ನು ಸನ್ನತಪರ್ವ ಭಲ್ಲಗಳಿಂದ ಪ್ರತಿಯಾಗಿ ಹೊಡೆದು ಆ ಅಮೇಯಾತ್ಮನು ಬ್ರಹ್ಮಾಸ್ತ್ರವನ್ನು ಪ್ರಕಟಿಸಿದನು.
07067010a ತದದ್ಭುತಮಪಶ್ಯಾಮ ದ್ರೋಣಸ್ಯಾಚಾರ್ಯಕಂ ಯುಧಿ।
07067010c ಯತಮಾನೋ ಯುವಾ ನೈನಂ ಪ್ರತ್ಯವಿಧ್ಯದ್ಯದರ್ಜುನಃ।।
ಯುದ್ಧದಲ್ಲಿ ಆಚಾರ್ಯ ದ್ರೋಣನ ಆ ಅದ್ಭುತವನ್ನು ನೋಡಿದೆವು. ಎಷ್ಟೇ ಪ್ರಯತ್ನಿಸಿದರು ಅರ್ಜುನನಿಗೆ ಅವನನ್ನು ಗಾಯಗೊಳಿಸಲು ಆಗಲಿಲ್ಲ.
07067011a ಕ್ಷರನ್ನಿವ ಮಹಾಮೇಘೋ ವಾರಿಧಾರಾಃ ಸಹಸ್ರಶಃ।
07067011c ದ್ರೋಣಮೇಘಃ ಪಾರ್ಥಶೈಲಂ ವವರ್ಷ ಶರವೃಷ್ಟಿಭಿಃ।।
ಮಹಾಮೇಘವು ಸಹಸ್ರಾರು ನೀರ ಧಾರೆಗಳನ್ನು ಸುರಿಸುವಂತೆ ದ್ರೋಣವೆಂಬ ಮೇಘವು ಪಾರ್ಥವೆಂಬ ಪರ್ವತದ ಮೇಲೆ ಶರವೃಷ್ಟಿಗಳನ್ನು ಸುರಿಸಿತು.
07067012a ಅರ್ಜುನಃ ಶರವರ್ಷಂ ತದ್ಬ್ರಹ್ಮಾಸ್ತ್ರೇಣೈವ ಮಾರಿಷ।
07067012c ಪ್ರತಿಜಗ್ರಾಹ ತೇಜಸ್ವೀ ಬಾಣೈರ್ಬಾಣಾನ್ವಿಶಾತಯನ್।।
ಮಾರಿಷ! ತೇಜಸ್ವೀ ಅರ್ಜುನನು ಆ ಶರವರ್ಷವನ್ನು ಬ್ರಹ್ಮಾಸ್ತ್ರದಿಂದಲೇ ಎದುರಿಸಿ ಬಾಣಗಳನ್ನು ಬಾಣಗಳಿಂದ ನಿರಸನಗೊಳಿಸಿದನು.
07067013a ದ್ರೋಣಸ್ತು ಪಂಚವಿಂಶತ್ಯಾ ಶ್ವೇತವಾಹನಮಾರ್ದಯತ್।
07067013c ವಾಸುದೇವಂ ಚ ಸಪ್ತತ್ಯಾ ಬಾಹ್ವೋರುರಸಿ ಚಾಶುಗೈಃ।।
ದ್ರೋಣನಾದರೋ ಇಪ್ಪತ್ತೈದರಿಂದ ಶ್ವೇತವಾಹನನನ್ನು ಹೊಡೆದನು. ಮತ್ತು ವಾಸುದೇವನನ್ನು ಬಾಹುಗಳು ಮತ್ತು ಎದೆಯಲ್ಲಿ ಏಳು ಆಶುಗಗಳಿಂದ ಹೊಡೆದನು.
07067014a ಪಾರ್ಥಸ್ತು ಪ್ರಹಸನ್ಧೀಮಾನಾಚಾರ್ಯಂ ಸ ಶರೌಘಿಣಂ।
07067014c ವಿಸೃಜಂತಂ ಶಿತಾನ್ಬಾಣಾನವಾರಯತ ತಂ ಯುಧಿ।।
ಧೀಮಂತ ಪಾರ್ಥನಾದರೋ ಜೋರಾಗಿ ನಕ್ಕು ಅ ಶರೌಘಗಳನ್ನು ಪ್ರಯೋಗಿಸುತ್ತಿದ್ದ ಆಚಾರ್ಯನ ನಿಶಿತ ಬಾಣಗಳನ್ನು ಯುದ್ಧದಲ್ಲಿ ತಡೆದನು.
07067015a ಅಥ ತೌ ವಧ್ಯಮಾನೌ ತು ದ್ರೋಣೇನ ರಥಸತ್ತಮೌ।
07067015c ಆವರ್ಜಯೇತಾಂ ದುರ್ಧರ್ಷಂ ಯುಗಾಂತಾಗ್ನಿಮಿವೋತ್ಥಿತಂ।।
ಆಗ ದ್ರೋಣನಿಂದ ಪ್ರಹರಿಸಲ್ಪಡುತ್ತಿದ್ದ ರಥಸತ್ತಮರಿಬ್ಬರೂ ಯುಗಾಂತದ ಅಗ್ನಿಯಂತೆ ಉರಿಯುತ್ತಿದ್ದ ದುರ್ಧರ್ಷ ದ್ರೋಣನನ್ನು ಅವಲೋಕಿಸಲಿಲ್ಲ.
07067016a ವರ್ಜಯನ್ನಿಶಿತಾನ್ಬಾಣಾನ್ದ್ರೋಣಚಾಪವಿನಿಃಸೃತಾನ್।
07067016c ಕಿರೀಟಮಾಲೀ ಕೌಂತೇಯೋ ಭೋಜಾನೀಕಂ ನ್ಯಪಾತಯತ್।।
ದ್ರೋಣನ ಚಾಪದಿಂದ ಬರುತ್ತಿದ್ದ ನಿಶಿತ ಬಾಣಗಳನ್ನು ಅವಲೋಕಿಸದೇ ಕಿರೀಟಮಾಲೀ ಕೌಂತೇಯನು ಭೋಜನ ಸೇನೆಯ ಮೇಲೆ ಆಕ್ರಮಣ ಮಾಡಿದನು.
07067017a ಸೋಽಂತರಾ ಕೃತವರ್ಮಾಣಂ ಕಾಂಬೋಜಂ ಚ ಸುದಕ್ಷಿಣಂ।
07067017c ಅಭ್ಯಯಾದ್ವರ್ಜಯನ್ದ್ರೋಣಂ ಮೈನಾಕಮಿವ ಪರ್ವತಂ।।
ಮೈನಾಕ ಪರ್ವತದಂತಿದ್ದ ದ್ರೋಣನನ್ನು ದೂರವಿಟ್ಟು ಅವನು ಕೃತವರ್ಮ ಮತ್ತು ಕಾಂಬೋಜದ ಸುದಕ್ಷಿಣರ ಮಧ್ಯೆ ನಿಂತು ಯುದ್ಧಮಾಡತೊಡಗಿದನು.
07067018a ತತೋ ಭೋಜೋ ನರವ್ಯಾಘ್ರಂ ದುಃಸಹಃ ಕುರುಸತ್ತಮ।
07067018c ಅವಿಧ್ಯತ್ತೂರ್ಣಮವ್ಯಗ್ರೋ ದಶಭಿಃ ಕಂಕಪತ್ರಿಭಿಃ।।
ಕುರುಸತ್ತಮ! ಆಗ ಅವ್ಯಗ್ರನಾದ ದುಃಸಹ ಭೋಜನು ಬೇಗನೇ ನರವ್ಯಾಘ್ರನನ್ನು ಹತ್ತು ಕಂಕಪತ್ರಿಗಳಿಂದ ಹೊಡೆದನು.
07067019a ತಮರ್ಜುನಃ ಶಿತೇನಾಜೌ ರಾಜನ್ ವಿವ್ಯಾಧ ಪತ್ರಿಣಾ।
07067019c ಪುನಶ್ಚಾನ್ಯೈಸ್ತ್ರಿಭಿರ್ಬಾಣೈರ್ಮೋಹಯನ್ನಿವ ಸಾತ್ವತಂ।।
ರಾಜನ್! ಅವನನ್ನು ಅರ್ಜುನನು ನೂರು ಪತ್ರಿಗಳಿಂದ ಹೊಡೆದನು. ಪುನಃ ಅವನು ಅನ್ಯ ಮೂರುಗಳಿಂದ ಸಾತ್ವತನನ್ನು ಮೂರ್ಛೆಗೊಳಿಸುವಂತೆ ಹೊಡೆದನು.
07067020a ಭೋಜಸ್ತು ಪ್ರಹಸನ್ ಪಾರ್ಥಂ ವಾಸುದೇವಂ ಚ ಮಾಧವಂ।
07067020c ಏಕೈಕಂ ಪಂಚವಿಂಶತ್ಯಾ ಸಾಯಕಾನಾಂ ಸಮಾರ್ಪಯತ್।।
ಭೋಜನಾದರೋ ಜೋರಾಗಿ ನಕ್ಕು ಪಾರ್ಥ ಮತ್ತು ವಾಸುದೇವ ಮಾಧವ ಒಬ್ಬೊಬ್ಬರನ್ನೂ ಇಪ್ಪತ್ತೈದು ಸಾಯಕಗಳಿಂದ ಹೊಡೆದನು.
07067021a ತಸ್ಯಾರ್ಜುನೋ ಧನುಶ್ಚಿತ್ತ್ವಾ ವಿವ್ಯಾಧೈನಂ ತ್ರಿಸಪ್ತಭಿಃ।
07067021c ಶರೈರಗ್ನಿಶಿಖಾಕಾರೈಃ ಕ್ರುದ್ಧಾಶೀವಿಷಸನ್ನಿಭೈಃ।।
ಅರ್ಜುನನು ಅವನ ಧನುಸ್ಸನ್ನು ಕತ್ತರಿಸಿ ಇಪ್ಪತ್ತೊಂದು ಕ್ರುದ್ಧ ಸರ್ಪದ ವಿಷದಂತಿರುವ ಅಗ್ನಿ ಶಿಖೆಯ ಆಕಾರದ ಶರಗಳಿಂದ ಹೊಡೆದನು.
07067022a ಅಥಾನ್ಯದ್ಧನುರಾದಾಯ ಕೃತವರ್ಮಾ ಮಹಾರಥಃ।
07067022c ಪಂಚಭಿಃ ಸಾಯಕೈಸ್ತೂರ್ಣಂ ವಿವ್ಯಾಧೋರಸಿ ಭಾರತ।।
ಭಾರತ! ಆಗ ಮಹಾರಥ ಕೃತವರ್ಮನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಬೇಗನೇ ಐದು ಸಾಯಕಗಳಿಂದ ಅವನ ಎದೆಗೆ ಹೊಡೆದನು.
07067023a ಪುನಶ್ಚ ನಿಶಿತೈರ್ಬಾಣೈಃ ಪಾರ್ಥಂ ವಿವ್ಯಾಧ ಪಂಚಭಿಃ।
07067023c ತಂ ಪಾರ್ಥೋ ನವಭಿರ್ಬಾಣೈರಾಜಘಾನ ಸ್ತನಾಂತರೇ।।
ಅವನು ಪುನಃ ಐದು ನಿಶಿತ ಬಾಣಗಳಿಂದ ಪಾರ್ಥನನ್ನು ಹೊಡೆದನು. ಅವನನ್ನು ಪಾರ್ಥನು ಎದೆಗೆ ಗುರಿಯಿಟ್ಟು ಒಂಭತ್ತು ಬಾಣಗಳಿಂದ ಹೊಡೆದನು.
07067024a ವಿಷಕ್ತಂ ದೃಶ್ಯ ಕೌಂತೇಯಂ ಕೃತವರ್ಮರಥಂ ಪ್ರತಿ।
07067024c ಚಿಂತಯಾಮಾಸ ವಾರ್ಷ್ಣೇಯೋ ನ ನಃ ಕಾಲಾತ್ಯಯೋ ಭವೇತ್।।
ಕೌಂತೇಯನು ಕೃತವರ್ಮನ ರಥದ ಬಳಿಯಲ್ಲಿಯೇ ತಡೆಯಲ್ಪಟ್ಟಿದ್ದುದನ್ನು ನೋಡಿ ವಾರ್ಷ್ಣೇಯನು ನಾವು ಕಾಲದ ವ್ಯಯಮಾಡಬಾರದಲ್ಲ ಎಂದು ಚಿಂತಿಸಿದನು.
07067025a ತತಃ ಕೃಷ್ಣೋಽಬ್ರವೀತ್ಪಾರ್ಥಂ ಕೃತವರ್ಮಣಿ ಮಾ ದಯಾಂ।
07067025c ಕುರುಸಾಂಬಂಧಿಕಂ ಕೃತ್ವಾ ಪ್ರಮಥ್ಯೈನಂ ವಿಶಾತಯ।।
ಆಗ ಕೃಷ್ಣನು ಪಾರ್ಥನಿಗೆ ಹೇಳಿದನು: “ಕೃತವರ್ಮನ ಮೇಲೆ ದಯೆ ಬೇಡ! ಕುರುಗಳ ಸಂಬಂಧಿಯನ್ನಾಗಿ ಮಾಡಿಕೊಂಡು ಅವನನ್ನು ಸದೆಬಡಿ!”
07067026a ತತಃ ಸ ಕೃತವರ್ಮಾಣಂ ಮೋಹಯಿತ್ವಾರ್ಜುನಃ ಶರೈಃ।
07067026c ಅಭ್ಯಗಾಜ್ಜವನೈರಶ್ವೈಃ ಕಾಂಬೋಜಾನಾಮನೀಕಿನೀಂ।।
ಆಗ ಅರ್ಜುನನು ಶರಗಳಿಂದ ಕೃತವರ್ಮನನ್ನು ಮೂರ್ಛೆಗೊಳಿಸಿ, ವೇಗಶಾಲೀ ಕುದುರೆಗಳಿಂದ ಕಾಂಬೋಜರ ಸೇನೆಯನ್ನು ಆಕ್ರಮಣಿಸಿದನು.
07067027a ಅಮರ್ಷಿತಸ್ತು ಹಾರ್ದಿಖ್ಯಃ ಪ್ರವಿಷ್ಟೇ ಶ್ವೇತವಾಹನೇ।
07067027c ವಿಧುನ್ವನ್ಸಶರಂ ಚಾಪಂ ಪಾಂಚಾಲ್ಯಾಭ್ಯಾಂ ಸಮಾಗತಃ।।
ಶ್ವೇತವಾಹನನು ಸೇನೆಯನ್ನು ಪ್ರವೇಶಿಸಿದುದನ್ನು ನೋಡಿ ಹಾರ್ದಿಖ್ಯನು ಅತ್ಯಂತ ಕುಪಿತನಾದನು. ಶರಗಳೊಂದಿಗೆ ಚಾಪವನ್ನು ಟೇಂಕರಿಸುತ್ತಾ ಅವನು ಇಬ್ಬರು ಪಾಂಚಾಲ್ಯರನ್ನು ಎದುರಿಸಿದನು.
07067028a ಚಕ್ರರಕ್ಷೌ ತು ಪಾಂಚಾಲ್ಯಾವರ್ಜುನಸ್ಯ ಪದಾನುಗೌ।
07067028c ಪರ್ಯವಾರಯದಾಯಾಂತೌ ಕೃತವರ್ಮಾ ರಥೇಷುಭಿಃ।।
ಕೃತವರ್ಮನು ತನ್ನ ರಥ ಮತ್ತು ಶರಗಳಿಂದ ಅರ್ಜುನನ ಹಿಂದೆಯೇ ಹೋಗುತ್ತಿದ್ದ ಚಕ್ರರಕ್ಷಕರಾಗಿದ್ದ ಉತ್ತಮೌಜ-ಯುಧಾಮನ್ಯು ಪಾಂಚಾಲರನ್ನು ತಡೆದನು.
07067029a ತಾವವಿಧ್ಯತ್ತತೋ ಭೋಜಃ ಸರ್ವಪಾರಶವೈಃ ಶರೈಃ।
07067029c ತ್ರಿಭಿರೇವ ಯುಧಾಮನ್ಯುಂ ಚತುರ್ಭಿಶ್ಚೋತ್ತಮೌಜಸಂ।।
ಭೋಜನು ಯುಧಾಮನ್ಯುವನ್ನು ಮೂರು ನಿಶಿತ ಶರಗಳಿಂದಲೂ ಉತ್ತಮೌಜಸನನ್ನು ನಾಲ್ಕರಿಂದಲೂ ಹೊಡೆದನು.
07067030a ತಾವಪ್ಯೇನಂ ವಿವ್ಯಧತುರ್ದಶಭಿರ್ದಶಭಿಃ ಶರೈಃ।
07067030c ಸಂಚಿಚ್ಚಿದತುರಪ್ಯಸ್ಯ ಧ್ವಜಂ ಕಾರ್ಮುಕಮೇವ ಚ।।
ಅವರೂ ಕೂಡ ಅವನನ್ನು ಹತ್ತು ಹತ್ತು ಶರಗಳಿಂದ ಹೊಡೆದರು ಮತ್ತು ಅವನ ಧ್ವಜ-ಧನುಸ್ಸುಗಳನ್ನು ಕತ್ತರಿಸಿದರು.
07067031a ಅಥಾನ್ಯದ್ಧನುರಾದಾಯ ಹಾರ್ದಿಕ್ಯಃ ಕ್ರೋಧಮೂರ್ಚಿತಃ।
07067031c ಕೃತ್ವಾ ವಿಧನುಷೌ ವೀರೌ ಶರವರ್ಷೈರವಾಕಿರತ್।।
ಆಗ ಕ್ರೋಧಮೂರ್ಛಿತನಾದ ಹಾರ್ದಿಕ್ಯನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಆ ವೀರರಿಬ್ಬರನ್ನೂ ಧನುಸ್ಸು ಇಲ್ಲದವರಂತೆ ಮಾಡಿ ಶರವರ್ಷಗಳಿಂದ ಮುಚ್ಚಿದನು.
07067032a ತಾವನ್ಯೇ ಧನುಷೀ ಸಜ್ಯೇ ಕೃತ್ವಾ ಭೋಜಂ ವಿಜಘ್ನತುಃ।
07067032c ತೇನಾಂತರೇಣ ಬೀಭತ್ಸುರ್ವಿವೇಶಾಮಿತ್ರವಾಹಿನೀಂ।।
ಅವರು ಅನ್ಯ ಧನುಸ್ಸುಗಳನ್ನು ತೆಗೆದುಕೊಂಡು ಭೋಜನನ್ನು ತುಂಬಾ ಹೊಡೆದು ಗಾಯಗೊಳಿಸಿದರು. ಆ ಮಧ್ಯದಲ್ಲಿ ಬೀಭತ್ಸುವು ಶತ್ರುಸೇನೆಯನ್ನು ಪ್ರವೇಶಿಸಿದನು.
07067033a ನ ಲೇಭಾತೇ ತು ತೌ ದ್ವಾರಂ ವಾರಿತೌ ಕೃತವರ್ಮಣಾ।
07067033c ಧಾರ್ತರಾಷ್ಟ್ರೇಷ್ವನೀಕೇಷು ಯತಮಾನೌ ನರರ್ಷಭೌ।।
ದ್ವಾರದಲ್ಲಿಯೇ ಕೃತವರ್ಮನಿಂದ ತಡೆಯಲ್ಪಟ್ಟ ಅವರಿಬ್ಬರು ನರರ್ಷಭರಿಗೆ ಎಷ್ಟೇ ಪ್ರಯತ್ನಪಟ್ಟರೂ ಧಾರ್ತರಾಷ್ಟ್ರರ ಸೇನೆಗಳನ್ನು ಪ್ರವೇಶಿಸಲು ಆಗಲಿಲ್ಲ.
07067034a ಅನೀಕಾನ್ಯರ್ದಯನ್ಯುದ್ಧೇ ತ್ವರಿತಃ ಶ್ವೇತವಾಹನಃ।
07067034c ನಾವಧೀತ್ಕೃತವರ್ಮಾಣಂ ಪ್ರಾಪ್ತಮಪ್ಯರಿಸೂದನಃ।।
ಶ್ವೇತವಾಹನನು ಯುದ್ಧದಲ್ಲಿ ತ್ವರೆಮಾಡಿ ಸೇನೆಗಳನ್ನು ನಾಶಪಡಿಸುತ್ತಿದ್ದರೂ, ಆ ಅರಿಸೂದನನು ಸಿಕ್ಕಿದ್ದ ಕೃತವರ್ಮನನ್ನು ವಧಿಸಲಿಲ್ಲ.
07067035a ತಂ ದೃಷ್ಟ್ವಾ ತು ತಥಾಯಾಂತಂ ಶೂರೋ ರಾಜಾ ಶ್ರುತಾಯುಧಃ।
07067035c ಅಭ್ಯದ್ರವತ್ಸಂಕ್ರುದ್ಧೋ ವಿಧುನ್ವಾನೋ ಮಹದ್ಧನುಃ।।
ಹಾಗೆ ಮುಂದುವರೆದು ಬರುತ್ತಿದ್ದ ಅವನನ್ನು ನೋಡಿ ಶೂರ, ರಾಜಾ ಶ್ರುತಾಯುಧನು ಸಂಕ್ರುದ್ಧನಾಗಿ ಮಹಾಧನುಸ್ಸನ್ನು ಮಿಡಿಯುತ್ತಾ ಆಕ್ರಮಣಿಸಿದನು.
07067036a ಸ ಪಾರ್ಥಂ ತ್ರಿಭಿರಾನರ್ಚತ್ಸಪ್ತತ್ಯಾ ಚ ಜನಾರ್ದನಂ।
07067036c ಕ್ಷುರಪ್ರೇಣ ಸುತೀಕ್ಷ್ಣೇನ ಪಾರ್ಥಕೇತುಮತಾಡಯತ್।।
ಅವನು ಪಾರ್ಥನನ್ನು ಮೂರರಿಂದ ಮತ್ತು ಜನಾರ್ದನನನ್ನು ಎಪ್ಪತ್ತರಿಂದ ಹೊಡೆದು, ತೀಕ್ಷ್ಣ ಕ್ಷುರಪ್ರದಿಂದ ಪಾರ್ಥನ ಕೇತುವನ್ನು ಹಾರಿಸಿದನು.
07067037a ತಮರ್ಜುನೋ ನವತ್ಯಾ ತು ಶರಾಣಾಂ ನತಪರ್ವಣಾಂ।
07067037c ಆಜಘಾನ ಭೃಶಂ ಕ್ರುದ್ಧಸ್ತೋತ್ತ್ರೈರಿವ ಮಹಾದ್ವಿಪಂ।।
ಆಗ ಅರ್ಜುನನು ಕ್ರುದ್ಧನಾಗಿ ಮಾವಟಿಗನು ಮಹಾ ಆನೆಯನ್ನು ಚುಚ್ಚುವಂತೆ ಅವನನ್ನು ತೊಂಭತ್ತು ನತಪರ್ವ ಶರಗಳಿಂದ ಜೋರಾಗಿ ಹೊಡೆದನು.
07067038a ಸ ತನ್ನ ಮಮೃಷೇ ರಾಜನ್ಪಾಂಡವೇಯಸ್ಯ ವಿಕ್ರಮಂ।
07067038c ಅಥೈನಂ ಸಪ್ತಸಪ್ತತ್ಯಾ ನಾರಾಚಾನಾಂ ಸಮಾರ್ಪಯತ್।।
ರಾಜನ್! ಪಾಂಡವೇಯನ ವಿಕ್ರಮವನ್ನು ಅವನಿಗೆ ಸಹಿಸಲಾಗಲಿಲ್ಲ. ಅವನನ್ನು ಎಪ್ಪತ್ತೇಳು ಬಾಣಗಳಿಂದ ಹೊಡೆದನು.
07067039a ತಸ್ಯಾರ್ಜುನೋ ಧನುಶ್ಚಿತ್ತ್ವಾ ಶರಾವಾಪಂ ನಿಕೃತ್ಯ ಚ।
07067039c ಆಜಘಾನೋರಸಿ ಕ್ರುದ್ಧಃ ಸಪ್ತಭಿರ್ನತಪರ್ವಭಿಃ।।
ಕ್ರುದ್ಧನಾದ ಅರ್ಜುನನು ಅವನ ಧನುಸ್ಸನ್ನು ಕತ್ತರಿಸಿ, ಬತ್ತಳಿಕೆಯನ್ನೂ ತುಂಡುಮಾಡಿ ಎದೆಗೆ ಗುರಿಯಿಟ್ಟು ಏಳು ನತಪರ್ವಗಳನ್ನು ಪ್ರಯೋಗಿಸಿದನು.
07067040a ಅಥಾನ್ಯದ್ಧನುರಾದಾಯ ಸ ರಾಜಾ ಕ್ರೋಧಮೂರ್ಚಿತಃ।
07067040c ವಾಸವಿಂ ನವಭಿರ್ಬಾಣೈರ್ಬಾಹ್ವೋರುರಸಿ ಚಾರ್ಪಯತ್।।
ಆಗ ರಾಜನು ಕ್ರೋಧಮೂರ್ಛಿತನಾಗಿ ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ವಾಸವಿಯ ಬಾಹು-ಎದೆಗಳಿಗೆ ಗುರಿಯಿಟ್ಟು ಒಂಭತ್ತು ಬಾಣಗಳನ್ನು ಬಿಟ್ಟನು.
07067041a ತತೋಽರ್ಜುನಃ ಸ್ಮಯನ್ನೇವ ಶ್ರುತಾಯುಧಮರಿಂದಮಃ।
07067041c ಶರೈರನೇಕಸಾಹಸ್ರೈಃ ಪೀಡಯಾಮಾಸ ಭಾರತ।।
ಭಾರತ! ಆಗ ಅರಿಂದಮ ಅರ್ಜುನನು ನಸುನಗುತ್ತಲೇ ಶ್ರುತಾಯುಧನನ್ನು ಅನೇಕ ಸಹಸ್ರ ಶರಗಳಿಂದ ಪೀಡಿಸತೊಡಗಿದನು.
07067042a ಅಶ್ವಾಂಶ್ಚಾಸ್ಯಾವಧೀತ್ತೂರ್ಣಂ ಸಾರಥಿಂ ಚ ಮಹಾರಥಃ।
07067042c ವಿವ್ಯಾಧ ಚೈನಂ ಸಪ್ತತ್ಯಾ ನಾರಾಚಾನಾಂ ಮಹಾಬಲಃ।।
ಆ ಮಹಾರಥ ಮಹಾಬಲನು ಅವನ ಕುದುರೆಗಳನ್ನೂ ಸಾರಥಿಯನ್ನೂ ಕೊಂದು ಅವನನ್ನು ಎಪ್ಪತ್ತು ನಾರಾಚಗಳಿಂದ ಹೊಡೆದನು.
07067043a ಹತಾಶ್ವಂ ರಥಮುತ್ಸೃಜ್ಯ ಸ ತು ರಾಜಾ ಶ್ರುತಾಯುಧಃ।
07067043c ಅಭ್ಯದ್ರವದ್ರಣೇ ಪಾರ್ಥಂ ಗದಾಮುದ್ಯಮ್ಯ ವೀರ್ಯವಾನ್।।
ವೀರ್ಯವಾನ್ ರಾಜಾ ಶ್ರುತಾಯುಧನು ಕುದುರೆಗಳನ್ನು ಕಳೆದುಕೊಂಡು ರಥದಿಂದ ಹಾರಿ ಗದೆಯನ್ನು ಮೇಲೆತ್ತಿ ಹಿಡಿದು ರಣದಲ್ಲಿ ಪಾರ್ಥನ ಮೇಲೆ ನುಗ್ಗಿದನು.
07067044a ವರುಣಸ್ಯಾತ್ಮಜೋ ವೀರಃ ಸ ತು ರಾಜಾ ಶ್ರುತಾಯುಧಃ।
07067044c ಪರ್ಣಾಶಾ ಜನನೀ ಯಸ್ಯ ಶೀತತೋಯಾ ಮಹಾನದೀ।।
ಆ ವೀರ ರಾಜಾ ಶ್ರುತಾಯುಧನಾದರೋ ವರುಣನ ಮಗನಾಗಿದ್ದನು. ಅವನ ಜನನಿಯು ಶೀತಲ ನೀರಿನ ಮಹಾನದೀ ಪರ್ಣಾಶಾ.
07067045a ತಸ್ಯ ಮಾತಾಬ್ರವೀದ್ವಾಕ್ಯಂ ವರುಣಂ ಪುತ್ರಕಾರಣಾತ್।
07067045c ಅವಧ್ಯೋಽಯಂ ಭವೇಲ್ಲೋಕೇ ಶತ್ರೂಣಾಂ ತನಯೋ ಮಮ।।
ಪುತ್ರನಿಗೋಸ್ಕರವಾಗಿ ಅವನ ತಾಯಿಯು ವರುಣನಿಗೆ ಈ ಮಾತನ್ನು ಕೇಳಿಕೊಂಡಿದ್ದಳು: “ನನ್ನ ಮಗನು ಲೋಕದಲ್ಲಿ ಶತ್ರುಗಳಿಗೆ ಅವಧ್ಯನಾಗಲಿ!”
07067046a ವರುಣಸ್ತ್ವಬ್ರವೀತ್ಪ್ರೀತೋ ದದಾಮ್ಯಸ್ಮೈ ವರಂ ಹಿತಂ।
07067046c ದಿವ್ಯಮಸ್ತ್ರಂ ಸುತಸ್ತೇಽಯಂ ಯನಾವಧ್ಯೋ ಭವಿಷ್ಯತಿ।।
ಆಗ ವರುಣನು ಪ್ರೀತನಾಗಿ ಹೇಳಿದನ್ನು: “ನಿನಗೆ ಹಿತವಾದ ಈ ವರವನ್ನು ಕೊಡುತ್ತೇನೆ. ಈ ದಿವ್ಯ ಅಸ್ತ್ರದಿಂದ ನಿನ್ನ ಈ ಮಗನು ಅವಧ್ಯನಾಗುತ್ತಾನೆ.
07067047a ನಾಸ್ತಿ ಚಾಪ್ಯಮರತ್ವಂ ವೈ ಮನುಷ್ಯಸ್ಯ ಕಥಂ ಚನ।
07067047c ಸರ್ವೇಣಾವಶ್ಯಮರ್ತವ್ಯಂ ಜಾತೇನ ಸರಿತಾಂ ವರೇ।।
ನದಿಗಳಲ್ಲಿ ಶ್ರೇಷ್ಠಳೇ! ಮನುಷ್ಯರಿಗೆ ಎಂದೂ ಅಮರತ್ವವೆನ್ನುವುದು ಇಲ್ಲ. ಹುಟ್ಟಿದ ಎಲ್ಲರೂ ಅವಶ್ಯವಾಗಿ ಸಾಯುತ್ತಾರೆ.
07067048a ದುರ್ಧರ್ಷಸ್ತ್ವೇಷ ಶತ್ರೂಣಾಂ ರಣೇಷು ಭವಿತಾ ಸದಾ।
07067048c ಅಸ್ತ್ರಸ್ಯಾಸ್ಯ ಪ್ರಭಾವಾದ್ವೈ ವ್ಯೇತು ತೇ ಮಾನಸೋ ಜ್ವರಃ।।
ಈ ಅಸ್ತ್ರದ ಪ್ರಭಾವದಿಂದ ಇವನು ಸದಾ ರಣದಲ್ಲಿ ಶತ್ರುಗಳಿಗೆ ದುರ್ಧರ್ಷನಾಗಿರುತ್ತಾನೆ. ನಿನ್ನ ಮನಸ್ಸಿನ ಜ್ವರವನ್ನು ಕಳೆದುಕೋ!”
07067049a ಇತ್ಯುಕ್ತ್ವಾ ವರುಣಃ ಪ್ರಾದಾದ್ಗದಾಂ ಮಂತ್ರಪುರಸ್ಕೃತಾಂ।
07067049c ಯಾಮಾಸಾದ್ಯ ದುರಾಧರ್ಷಃ ಸರ್ವಲೋಕೇ ಶ್ರುತಾಯುಧಃ।।
ಹೀಗೆ ಹೇಳಿ ವರುಣನು ಮಂತ್ರಪುರಸ್ಕೃತವಾದ ಗದೆಯನ್ನು ಕೊಟ್ಟಿದ್ದನು. ಅದನ್ನು ಪಡೆದು ಶ್ರುತಾಯುಧನು ಸರ್ವಲೋಕಗಳಲ್ಲಿ ದುರಾಧರ್ಷನಾಗಿದ್ದನು.
07067050a ಉವಾಚ ಚೈನಂ ಭಗವಾನ್ಪುನರೇವ ಜಲೇಶ್ವರಃ।
07067050c ಅಯುಧ್ಯತಿ ನ ಮೋಕ್ತವ್ಯಾ ಸಾ ತ್ವಯ್ಯೇವ ಪತೇದಿತಿ।।
ಭಗವಾನ್ ಜಲೇಶ್ವರನು ಪುನಃ ಇನ್ನೂ ಹೇಳಿದ್ದನು: “ಯುದ್ಧಮಾಡದೇ ಇರುವವನ ಮೇಲೆ ಇದನ್ನು ಪ್ರಯೋಗಿಸಬಾರದು. ಆಗ ಅದು ನಿನ್ನಮೇಲೆಯೇ ಬೀಳುತ್ತದೆ!” ಎಂದು.
07067051a ಸ ತಯಾ ವೀರಘಾತಿನ್ಯಾ ಜನಾರ್ದನಮತಾಡಯತ್।
07067051c ಪ್ರತಿಜಗ್ರಾಹ ತಾಂ ಕೃಷ್ಣಃ ಪೀನೇನಾಂಸೇನ ವೀರ್ಯವಾನ್।।
ಅವನು ವೀರರನ್ನು ಘಾತಿಗೊಳಿಸಬಲ್ಲ ಆ ಗದೆಯಿಂದ ಜನಾರ್ದನನನ್ನು ಹೊಡೆದನು. ವೀರ್ಯವಾನ್ ಕೃಷ್ಣನು ಅದನ್ನು ತನ್ನ ದಪ್ಪ ಭುಜದ ಮೇಲೆ ಸ್ವೀಕರಿಸಿದನು.
07067052a ನಾಕಂಪಯತ ಶೌರಿಂ ಸಾ ವಿಂಧ್ಯಂ ಗಿರಿಮಿವಾನಿಲಃ।
07067052c ಪ್ರತ್ಯಭ್ಯಯಾತ್ತಂ ವಿಪ್ರೋಢಾ ಕೃತ್ಯೇವ ದುರಧಿಷ್ಠಿತಾ।।
ಗಾಳಿಯು ವಿಂಧ್ಯ ಗಿರಿಯನ್ನು ಹೇಗೆ ನಡುಗಿಸಲಾರದೋ ಹಾಗೆ ಅದು ಶೌರಿಯನ್ನು ನಡುಗಿಸಲೂ ಇಲ್ಲ. ಆದರೆ ಹಿಂದೆ ಹೇಳಿದ್ದಂತೆಯೇ ಅದು ಮಾಡಿತು. ಹಿಂದಿರುಗಿ ಕಟ್ಟುಪಾಡನ್ನು ಆಚರಿಸದೇ ಇರುವವನ ಮೇಲೆ ಎರಗಿತು.
07067053a ಜಘಾನ ಚಾಸ್ಥಿತಂ ವೀರಂ ಶ್ರುತಾಯುಧಮಮರ್ಷಣಂ।
07067053c ಹತ್ವಾ ಶ್ರುತಾಯುಧಂ ವೀರಂ ಜಗತೀಮನ್ವಪದ್ಯತ।।
ಅಲ್ಲಿ ನಿಂತಿದ್ದ ವೀರ ಅಮರ್ಷಣ ಶ್ರುತಾಯುಧನನ್ನು ಹೊಡೆಯಿತು. ವೀರ ಶ್ರುತಾಯುಧನನ್ನು ಸಂಹರಿಸಿ ಜಗತ್ತಿನಿಂದ ಕಣ್ಮರೆಯಾಯಿತು.
07067054a ಹಾಹಾಕಾರೋ ಮಹಾಂಸ್ತತ್ರ ಸೈನ್ಯಾನಾಂ ಸಮಜಾಯತ।
07067054c ಸ್ವೇನಾಸ್ತ್ರೇಣ ಹತಂ ದೃಷ್ಟ್ವಾ ಶ್ರುತಾಯುಧಮರಿಂದಮಂ।।
ತನ್ನದೇ ಅಸ್ತ್ರದಿಂದ ಅರಿಂದಮ ಶ್ರುತಾಯುಧನು ಹತನಾದುದನ್ನು ನೋಡಿ ಅಲ್ಲಿ ಸೇನೆಗಳಲ್ಲಿ ಮಹಾ ಹಾಹಾಕಾರವುಂಟಾಯಿತು.
07067055a ಅಯುಧ್ಯಮಾನಾಯ ಹಿ ಸಾ ಕೇಶವಾಯ ನರಾಧಿಪ।
07067055c ಕ್ಷಿಪ್ತಾ ಶ್ರುತಾಯುಧೇನಾಥ ತಸ್ಮಾತ್ತಮವಧೀದ್ಗದಾ।।
ನರಾಧಿಪ! ಯುದ್ಧ ಮಾಡದೇ ಇದ್ದ ಕೇಶವನ ಮೇಲೆ ಆ ಗದೆಯನ್ನು ಪ್ರಯೋಗಿಸಿದುದರಿಂದ ಅದೇ ಗದೆಯಿಂದ ಶ್ರುತಾಯುಧನು ಹತನಾದನು.
07067056a ಯಥೋಕ್ತಂ ವರುಣೇನಾಜೌ ತಥಾ ಸ ನಿಧನಂ ಗತಃ।
07067056c ವ್ಯಸುಶ್ಚಾಪ್ಯಪತದ್ಭೂಮೌ ಪ್ರೇಕ್ಷತಾಂ ಸರ್ವಧನ್ವಿನಾಂ।।
ವರುಣನು ಹೇಗೆ ಹೇಳಿದ್ದನೋ ಹಾಗೆಯೇ ಅವನು ನಿಧನವನ್ನು ಹೊಂದಿದನು. ಎಲ್ಲ ಧನ್ವಿಗಳು ನೋಡುತ್ತಿದ್ದಂತೆಯೇ ಅವನು ಅಸುನೀಗಿ ಭೂಮಿಯ ಮೇಲೆ ಬಿದ್ದನು.
07067057a ಪತಮಾನಸ್ತು ಸ ಬಭೌ ಪರ್ಣಾಶಾಯಾಃ ಪ್ರಿಯಃ ಸುತಃ।
07067057c ಸಂಭಗ್ನ ಇವ ವಾತೇನ ಬಹುಶಾಖೋ ವನಸ್ಪತಿಃ।।
ಪರ್ಣಾಶಳ ಆ ಪ್ರಿಯಸುತನು ಬೀಳುವಾಗ ಭಿರುಗಾಳಿಯಿಂದ ಮುರಿದು ಬಿದ್ದ ಬಹು ಶಾಖೆಗಳನ್ನುಳ್ಳ ವೃಕ್ಷದಂತೆ ತೋರಿದನು.
07067058a ತತಃ ಸರ್ವಾಣಿ ಸೈನ್ಯಾನಿ ಸೇನಾಮುಖ್ಯಾಶ್ಚ ಸರ್ವಶಃ।
07067058c ಪ್ರಾದ್ರವಂತ ಹತಂ ದೃಷ್ಟ್ವಾ ಶ್ರುತಾಯುಧಮರಿಂದಮಂ।।
ಆಗ ಅರಿಂದಮ ಶ್ರುತಾಯುಧನು ಹತನಾದುದನ್ನು ನೋಡಿ ಎಲ್ಲ ಸೇನೆಗಳೂ, ಸೇನಾಪ್ರಮುಖರೂ ಓಡತೊಡಗಿದರು.
07067059a ತಥ ಕಾಂಬೋಜರಾಜಸ್ಯ ಪುತ್ರಃ ಶೂರಃ ಸುದಕ್ಷಿಣಃ।
07067059c ಅಭ್ಯಯಾಜ್ಜವನೈರಶ್ವೈಃ ಫಲ್ಗುನಂ ಶತ್ರುಸೂದನಂ।।
ಆಗ ಕಾಂಬೋಜರಾಜನ ಶೂರ ಪುತ್ರ ಸುದಕ್ಷಿಣನು ವೇಗ ಕುದುರೆಗಳೊಂದಿಗೆ ಬಂದು ಶತ್ರುಸೂದನ ಫಲ್ಗುನನನ್ನು ಆಕ್ರಮಣಿಸಿದನು.
07067060a ತಸ್ಯ ಪಾರ್ಥಃ ಶರಾನ್ಸಪ್ತ ಪ್ರೇಷಯಾಮಾಸ ಭಾರತ।
07067060c ತೇ ತಂ ಶೂರಂ ವಿನಿರ್ಭಿದ್ಯ ಪ್ರಾವಿಶನ್ಧರಣೀತಲಂ।।
ಭಾರತ! ಪಾರ್ಥನು ಅವನ ಮೇಲೆ ಏಳು ಶರಗಳನ್ನು ಪ್ರಯೋಗಿಸಿದನು. ಅವು ಆ ಶೂರನನ್ನು ಭೇದಿಸಿ ಧರಣೀತಲವನ್ನು ಪ್ರವೇಶಿಸಿದವು.
07067061a ಸೋಽತಿವಿದ್ಧಃ ಶರೈಸ್ತೀಕ್ಷ್ಣೈರ್ಗಾಂಡೀವಪ್ರೇಷಿತೈರ್ಮೃಧೇ।
07067061c ಅರ್ಜುನಂ ಪ್ರತಿವಿವ್ಯಾಧ ದಶಭಿಃ ಕಂಕಪತ್ರಿಭಿಃ।।
ರಣದಲ್ಲಿ ಗಾಂಡೀವದಿಂದ ಬಿಡಲ್ಪಟ್ಟ ತೀಕ್ಷ್ಣ ಶರಗಳಿಂದ ಅತಿಯಾಗಿ ಗಾಯಗೊಂಡ ಅವನು ಹತ್ತು ಕಂಕಪತ್ರಿಗಳಿಂದ ಅರ್ಜುನನನ್ನು ತಿರುಗಿ ಹೊಡೆದನು.
07067062a ವಾಸುದೇವಂ ತ್ರಿಭಿರ್ವಿದ್ಧ್ವಾ ಪುನಃ ಪಾರ್ಥಂ ಚ ಪಂಚಭಿಃ।
07067062c ತಸ್ಯ ಪಾರ್ಥೋ ಧನುಶ್ಚಿತ್ತ್ವಾ ಕೇತುಂ ಚಿಚ್ಚೇದ ಮಾರಿಷ।।
ಅವನು ವಾಸುದೇವನನ್ನು ಮೂರರಿಂದ ಹೊಡೆದು ಪುನಃ ಪಾರ್ಥನನ್ನು ಐದರಿಂದ ಹೊಡೆದನು. ಮಾರಿಷ! ಪಾರ್ಥನು ಅವನ ಧನುಸ್ಸನ್ನು ಕತ್ತರಿಸಿ ಕೇತುವನ್ನು ತುಂಡರಿಸಿದನು.
07067063a ಭಲ್ಲಾಭ್ಯಾಂ ಭೃಶತೀಕ್ಷ್ಣಾಭ್ಯಾಂ ತಂ ಚ ವಿವ್ಯಾಧ ಪಾಂಡವಃ।
07067063c ಸ ತು ಪಾರ್ಥಂ ತ್ರಿಭಿರ್ವಿದ್ಧ್ವಾ ಸಿಂಹನಾದಮಥಾನದತ್।।
ಪಾಂಡವನು ಅವನನ್ನು ತುಂಬಾ ತೀಕ್ಷ್ಣವಾದ ಎರಡು ಭಲ್ಲಗಳಿಂದ ಹೊಡೆದನು. ಅವನಾದರೋ ಪಾರ್ಥನನ್ನು ಮೂರರಿಂದ ಹೊಡೆದು ಜೋರಾಗಿ ಸಿಂಹನಾದಗೈದನು.
07067064a ಸರ್ವಪಾರಶವೀಂ ಚೈವ ಶಕ್ತಿಂ ಶೂರಃ ಸುದಕ್ಷಿಣಃ।
07067064c ಸಘಂಟಾಂ ಪ್ರಾಹಿಣೋದ್ಘೋರಾಂ ಕ್ರುದ್ಧೋ ಗಾಂಡೀವಧನ್ವನೇ।।
ಆಗ ಕ್ರುದ್ಧನಾದ ಶೂರ ಸುದಕ್ಷಿಣನು ಘಂಟೆಗಳಿಂದ ಕೂಡಿದ ಲೋಹಮಯವಾದ ಘೋರ ಶಕ್ತಿಯನ್ನು ಗಾಂಡೀವಧನ್ವಿಯ ಮೇಲೆ ಪ್ರಯೋಗಿಸಿದನು.
07067065a ಸಾ ಜ್ವಲಂತೀ ಮಹೋಲ್ಕೇವ ತಮಾಸಾದ್ಯ ಮಹಾರಥಂ।
07067065c ಸವಿಸ್ಫುಲಿಂಗಾ ನಿರ್ಭಿದ್ಯ ನಿಪಪಾತ ಮಹೀತಲೇ।।
ಅದು ಮಹಾ ಉಲ್ಕೆಯಂತೆ ಉರಿಯುತ್ತಾ ಬೆಂಕಿಯ ಕಿಡಿಗಳನ್ನು ಕಾರುತ್ತಾ ಆ ಮಹಾರಥನನ್ನು ತಲುಪಿ ಭೇದಿಸಿ ನೆಲದ ಮೇಲೆ ಬಿದ್ದಿತು.
07067066a ತಂ ಚತುರ್ದಶಭಿಃ ಪಾರ್ಥೋ ನಾರಾಚೈಃ ಕಂಕಪತ್ರಿಭಿಃ।
07067066c ಸಾಶ್ವಧ್ವಜಧನುಹ್ಸೂತಂ ವಿವ್ಯಾಧಾಚಿಂತ್ಯವಿಕ್ರಮಃ।
07067066e ರಥಂ ಚಾನ್ಯೈಃ ಸುಬಹುಭಿಶ್ಚಕ್ರೇ ವಿಶಕಲಂ ಶರೈಃ।।
ಆಗ ಅಚಿಂತ್ಯವಿಕ್ರಮಿ ಪಾರ್ಥನು ಹದಿನಾಲ್ಕು ಕಂಕಪತ್ರಿ ನಾರಾಚಗಳಿಂದ ಅವನನ್ನು ಕುದುರೆ-ಧ್ವಜ-ಧನುಸ್ಸುಗಳನ್ನೂ ಸೇರಿಸಿ ಹೊಡೆದನು. ಇತರ ಅನೇಕ ಶರಗಳಿಂದ ಅವನ ರಥವನ್ನೂ ನುಚ್ಚುನೂರು ಮಾಡಿದನು.
07067067a ಸುದಕ್ಷಿಣಂ ತು ಕಾಂಬೋಜಂ ಮೋಘಸಂಕಲ್ಪವಿಕ್ರಮಂ।
07067067c ಬಿಭೇದ ಹೃದಿ ಬಾಣೇನ ಪೃಥುಧಾರೇಣ ಪಾಂಡವಃ।।
ವಿಕ್ರಮದಿಂದ ಮಾಡಿದ ಸಂಕಲ್ಪದಲ್ಲಿ ಯಶಸ್ವಿಯಾಗದೇ ಇದ್ದ ಕಾಂಬೋಜ ಸುದಕ್ಷಿಣನ ಹೃದಯವನ್ನು ಪಾಂಡವನು ಬಹಳ ಘೋರ ಬಾಣದಿಂದ ಭೇದಿಸಿದನು.
07067068a ಸ ಭಿನ್ನಮರ್ಮಾ ಸ್ರಸ್ತಾಂಗಃ ಪ್ರಭ್ರಷ್ಟಮುಕುಟಾಂಗದಃ।
07067068c ಪಪಾತಾಭಿಮುಖಃ ಶೂರೋ ಯಂತ್ರಮುಕ್ತ ಇವ ಧ್ವಜಃ।।
ಆ ಶೂರನು ಕವಚವು ತುಂಡಾಗಿ, ರಕ್ತದಿಂದ ಅಂಗಾಂಗಗಳು ತೋಯ್ದು, ಮುಕುಟ-ಅಂಗದಗಳನ್ನು ಕಳೆದುಕೊಂಡು ಯಂತ್ರದಿಂದ ಬೀಳಿಸಲ್ಪಟ್ಟ ಧ್ವಜದಂತೆ ಅಭಿಮುಖನಾಗಿ ಭೂಮಿಯ ಮೇಲೆ ಬಿದ್ದನು.
07067069a ಗಿರೇಃ ಶಿಖರಜಃ ಶ್ರೀಮಾನ್ಸುಶಾಖಃ ಸುಪ್ರತಿಷ್ಠಿತಃ।
07067069c ನಿರ್ಭಗ್ನ ಇವ ವಾತೇನ ಕರ್ಣಿಕಾರೋ ಹಿಮಾತ್ಯಯೇ।
07067070a ಶೇತೇ ಸ್ಮ ನಿಹತೋ ಭೂಮೌ ಕಾಂಬೋಜಾಸ್ತರಣೋಚಿತಃ।।
ಪರ್ವತ ಶಿಖದಲ್ಲಿ ಹುಟ್ಟಿದ್ದ ಚೆನ್ನಾಗಿ ಊರಿಕೊಂಡಿದ್ದ ಬಹುರೆಂಬೆಗಳಿಂದ ಸಮೃದ್ಧವಾಗಿದ ಕರ್ಣಿಕಾರ ವೃಕ್ಷವು ಛಳಿಗಾಲದ ಕೊನೆಯಲ್ಲಿ ಭಿರುಗಾಳಿಯಿಂದ ತುಂಡಾಗಿ ಬೀಳುವ ಹಾಗೆ ಹಂಸತೂಲಿಕಾತಲ್ಪದಲ್ಲಿ ಮಲಗಬೇಕಾಗಿದ್ದ ಕಾಂಬೋಜನು ನಿಹತನಾಗಿ ನೆಲದ ಮೇಲೆ ಮಲಗಿದನು.
07067070c ಸುದರ್ಶನೀಯಸ್ತಾಮ್ರಾಕ್ಷಃ ಕರ್ಣಿನಾ ಸ ಸುದಕ್ಷಿಣಃ।
07067070e ಪುತ್ರಃ ಕಾಂಬೋಜರಾಜಸ್ಯ ಪಾರ್ಥೇನ ವಿನಿಪಾತಿತಃ।।
ನೋಡಲು ಸುಂದರನಾಗಿದ್ದ ಕೆಂಪು ಕಣ್ಣುಗಳ ಕಾಂಬೋಜರಾಜನ ಮಗ ಸುದಕ್ಷಿಣನು ಪಾರ್ಥನಿಂದ ಬೀಳಿಸಲ್ಪಟ್ಟನು.
07067071a ತತಃ ಸರ್ವಾಣಿ ಸೈನ್ಯಾನಿ ವ್ಯದ್ರವಂತ ಸುತಸ್ಯ ತೇ।
07067071c ಹತಂ ಶ್ರುತಾಯುಧಂ ದೃಷ್ಟ್ವಾ ಕಾಂಬೋಜಂ ಚ ಸುದಕ್ಷಿಣಂ।।
ಹತರಾದ ಶ್ರುತಾಯುಧ ಮತ್ತು ಕಾಂಬೋಜ ಸುದಕ್ಷಿಣರನ್ನು ನೋಡಿ ನಿನ್ನ ಮಗನ ಸೇನೆಗಳೆಲ್ಲವೂ ಓಡತೊಡಗಿದವು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಶೃತಾಯುಧಸುದಕ್ಷಿಣವಧೇ ಸಪ್ತಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಶೃತಾಯುಧಸುದಕ್ಷಿಣವಧ ಎನ್ನುವ ಅರವತ್ತೇಳನೇ ಅಧ್ಯಾಯವು.