065 ದುಃಶಾಸನಸೈನ್ಯಪರಾಭವಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಜಯದ್ರಥವಧ ಪರ್ವ

ಅಧ್ಯಾಯ 65

ಸಾರ

ದುಃಶಾಸನನ ಗಜಸೇನೆಯೊಂದಿಗೆ ಅರ್ಜುನನ ಯುದ್ಧ; ಗಜಸೇನೆಯ ವಿನಾಶ (1-32).

07065001 ಧೃತರಾಷ್ಟ್ರ ಉವಾಚ।
07065001a ತಸ್ಮಿನ್ಪ್ರಭಗ್ನೇ ಸೈನ್ಯಾಗ್ರೇ ವಧ್ಯಮಾನೇ ಕಿರೀಟಿನಾ।
07065001c ಕೇ ನು ತತ್ರ ರಣೇ ವೀರಾಃ ಪ್ರತ್ಯುದೀಯುರ್ಧನಂಜಯಂ।।

ಧೃತರಾಷ್ಟ್ರನು ಹೇಳಿದನು: “ಕಿರೀಟಿಯಿಂದ ವಧಿಸಲ್ಪಟ್ಟ ಆ ಸೇನೆಯ ಅಗ್ರಭಾಗವು ಒಡೆದುಹೋಗಲು ಅಲ್ಲಿ ರಣದಲ್ಲಿ ಯಾವ ವೀರನು ಧನಂಜಯನನ್ನು ಎದುರಿಸಿ ಯುದ್ಧಮಾಡಿದನು?

07065002a ಆಹೋ ಸ್ವಿಚ್ಚಕಟವ್ಯೂಹಂ ಪ್ರವಿಷ್ಟಾ ಮೋಘನಿಶ್ಚಯಾಃ।
07065002c ದ್ರೋಣಮಾಶ್ರಿತ್ಯ ತಿಷ್ಠಂತಃ ಪ್ರಾಕಾರಮಕುತೋಭಯಾಃ।।

ಅಯ್ಯೋ! ನಿಶ್ಚಯಗಳು ಕೈಗೊಳ್ಳದೇ ದ್ರೋಣವನ್ನು ಆಶ್ರಯಿಸಿ ನಿಂತಿದ್ದವರು ಪ್ರಾಕಾರ‌ದಂತಿದ್ದ ಭಯವಿಲ್ಲದಿದ್ದ ಶಕಟವ್ಯೂಹವನ್ನು ಪ್ರವೇಶಿಸಿದರೇ?”

07065003 ಸಂಜಯ ಉವಾಚ।
07065003a ತಥಾರ್ಜುನೇನ ಸಂಭಗ್ನೇ ತಸ್ಮಿಂಸ್ತವ ಬಲೇ ತದಾ।
07065003c ಹತವೀರೇ ಹತೋತ್ಸಾಹೇ ಪಲಾಯನಕೃತಕ್ಷಣೇ।।

ಸಂಜಯನು ಹೇಳಿದನು: “ಹಾಗೆ ಅರ್ಜುನನಿಂದ ನಿನ್ನ ಸೇನೆಯು ನುಚ್ಚುನೂರಾಗಿ ವೀರರು ಹತರಾಗಲು, ಉತ್ಸಾಹವನ್ನು ಕಳೆದುಕೊಂಡ ಅವರು ಪಲಾಯನಕ್ಕೆ ಸಮಯ ಕಾಯುತ್ತಿದ್ದರು.

07065004a ಪಾಕಶಾಸನಿನಾಭೀಕ್ಷ್ಣಂ ವಧ್ಯಮಾನೇ ಶರೋತ್ತಮೈಃ।
07065004c ನ ತತ್ರ ಕಶ್ಚಿತ್ಸಂಗ್ರಾಮೇ ಶಶಾಕಾರ್ಜುನಮೀಕ್ಷಿತುಂ।।

ಪಾಕಶಾಸನಿಯು ಎದಿರು ಬಂದವರೆಲ್ಲರನ್ನೂ ಉತ್ತಮ ಶರಗಳಿಂದ ವಧಿಸುತ್ತಿದ್ದನು. ಆಗ ಸಂಗ್ರಾಮದಲ್ಲಿ ಅರ್ಜುನನನ್ನು ನೋಡಲು ಯಾರಿಗೂ ಶಕ್ಯವಾಗುತ್ತಿರಲಿಲ್ಲ.

07065005a ತತಸ್ತವ ಸುತೋ ರಾಜನ್ದೃಷ್ಟ್ವಾ ಸೈನ್ಯಂ ತಥಾಗತಂ।
07065005c ದುಃಶಾಸನೋ ಭೃಶಂ ಕ್ರುದ್ಧೋ ಯುದ್ಧಾಯಾರ್ಜುನಮಭ್ಯಯಾತ್।।

ಆಗ ರಾಜನ್! ನಿನ್ನ ಮಗ ದುಃಶಾಸನನು ಸೈನ್ಯವು ಹಾಗಾದುದನ್ನು ನೋಡಿ ತುಂಬಾ ಕ್ರುದ್ಧನಾಗಿ ಯುದ್ಧದಲ್ಲಿ ಅರ್ಜುನನನ್ನು ಎದುರಿಸಿದನು.

07065006a ಸ ಕಾಂಚನವಿಚಿತ್ರೇಣ ಕವಚೇನ ಸಮಾವೃತಃ।
07065006c ಜಾಂಬೂನದಶಿರಸ್ತ್ರಾಣಃ ಶೂರಸ್ತೀವ್ರಪರಾಕ್ರಮಃ।।

ಅವನು ಕಾಂಚನದ ವಿಚಿತ್ರ ಕವಚದಿಂದ ಆವೃತನಾಗಿದ್ದನು. ಆ ತೀವ್ರಪರಾಕ್ರಮಿಯು ಬಂಗಾರದ ಶಿರಸ್ತ್ರಾಣವನ್ನು ಧರಿಸಿದ್ದನು.

07065007a ನಾಗಾನೀಕೇನ ಮಹತಾ ಗ್ರಸನ್ನಿವ ಮಹೀಮಿಮಾಂ।
07065007c ದುಃಶಾಸನೋ ಮಹಾರಾಜ ಸವ್ಯಸಾಚಿನಮಾವೃಣೋತ್।।

ಮಹಾರಾಜ! ಇಡೀ ಭೂಮಿಯನ್ನೇ ನುಂಗಿಬಿಡುವಂತಿದ್ದ ಮಹಾ ಗಜಸೇನೆಯೊಂದಿಗೆ ದುಃಶಾಸನನು ಸವ್ಯಸಾಚಿಯನ್ನು ಆಕ್ರಮಣಿಸಿದನು.

07065008a ಹ್ರಾದೇನ ಗಜಘಂಟಾನಾಂ ಶಂಖಾನಾಂ ನಿನದೇನ ಚ।
07065008c ಜ್ಯಾಕ್ಷೇಪನಿನದೈಶ್ಚೈವ ವಿರಾವೇಣ ಚ ದಂತಿನಾಂ।।
07065009a ಭೂರ್ದಿಶಶ್ಚಾಂತರಿಕ್ಷಂ ಚ ಶಬ್ದೇನಾಸೀತ್ಸಮಾವೃತಂ।
07065009c ಸ ಮುಹೂರ್ತಂ ಪ್ರತಿಭಯೋ ದಾರುಣಃ ಸಮಪದ್ಯತ।।

ಆನೆಗಳ ಘಂಟೆಗಳ ಮತ್ತು ಶಂಖಗಳ ನಿನಾದದಿಂದ, ಟೇಂಕಾರ ಧ್ವನಿಯಿಂದ ಮತ್ತು ಆನೆಗಳ ಘೀಳಿನಿಂದ ಭೂಮಿ-ದಿಕ್ಕು-ಅಂತರಿಕ್ಷಗಳು ಶಬ್ಧದಿಂದ ತುಂಬಿಕೊಂಡವು. ಆ ಮುಹೂರ್ತವು ಭಯವನ್ನುಂಟು ಮಾಡುವ ದಾರುಣ ಸಮಯವಾಯಿತು.

07065010a ತಾನ್ದೃಷ್ಟ್ವಾ ಪತತಸ್ತೂರ್ಣಮಂಕುಶೈರಭಿಚೋದಿತಾನ್।
07065010c ವ್ಯಾಲಂಬಹಸ್ತಾನ್ಸಂರಬ್ಧಾನ್ಸಪಕ್ಷಾನಿವ ಪರ್ವತಾನ್।।
07065011a ಸಿಂಹನಾದೇನ ಮಹತಾ ನರಸಿಂಹೋ ಧನಂಜಯಃ।
07065011c ಗಜಾನೀಕಮಮಿತ್ರಾಣಾಮಭಿತೋ ವ್ಯಧಮಚ್ಚರೈಃ।।

ಅಂಕುಶಗಳಿಂದ ಚೋದಿತರಾಗಿ ತನ್ನ ಮೇಲೆ ಬೇಗನೆ ಬಂದು ಬೀಳುತ್ತಿದ್ದ ಕೋಪದಿಂದ ಆವೇಶಗೊಂಡಿರುವ, ರೆಕ್ಕೆಗಳುಳ್ಳ ಪರ್ವತಗಳಂತಿದ್ದ ಆ ಆನೆಗಳನ್ನು ನೋಡಿ ನರಸಿಂಹ ಧನಂಜಯನು ಜೋರಾಗಿ ಸಿಂಹನಾದಗೈದು, ಅಮಿತ್ರರ ಆ ಗಜಸೇನೆಯನ್ನು ಶರಗಳಿಂದ ವಧಿಸಲು ಉಪಕ್ರಮಿಸಿದನು.

07065012a ಮಹೋರ್ಮಿಣಮಿವೋದ್ಧೂತಂ ಶ್ವಸನೇನ ಮಹಾರ್ಣವಂ।
07065012c ಕಿರೀಟೀ ತದ್ಗಜಾನೀಕಂ ಪ್ರಾವಿಶನ್ಮಕರೋ ಯಥಾ।।

ಭಿರುಗಾಳಿಗೆ ಸಿಲುಕಿದ ಸಮುದ್ರವು ದೊಡ್ಡ ದೊಡ್ಡ ಅಲೆಗಳೊಂದಿಗೆ ಮೇಲುಕ್ಕಿ ಬರುವಂತಿದ್ದ ಆ ಗಜಸೇನೆಯನ್ನು ಕಿರೀಟಿಯು ಮೊಸಳೆಯೋಪಾದಿಯಲ್ಲಿ ಪ್ರವೇಶಿಸಿದನು.

07065013a ಕಾಷ್ಠಾತೀತ ಇವಾದಿತ್ಯಃ ಪ್ರತಪನ್ಯುಗಸಂಕ್ಷಯೇ।
07065013c ದದೃಶೇ ದಿಕ್ಷು ಸರ್ವಾಸು ಪಾರ್ಥಃ ಪರಪುರಂಜಯಃ।।

ಯುಗಸಂಕ್ಷಯದಲ್ಲಿ ಆದಿತ್ಯನು ಎಲ್ಲೆಮೀರಿ ಸುಡುವಂತೆ ಪರಪುರಂಜಯ ಪಾರ್ಥನು ಎಲ್ಲ ದಿಕ್ಕುಗಳನ್ನೂ ಸುಡುವಂತೆ ಕಂಡುಬಂದನು.

07065014a ಖುರಶಬ್ದೇನ ಚಾಶ್ವಾನಾಂ ನೇಮಿಘೋಷೇಣ ತೇನ ಚ।
07065014c ತೇನ ಚೋತ್ಕ್ರುಷ್ಟಶಬ್ದೇನ ಜ್ಯಾನಿನಾದೇನ ತೇನ ಚ।
07065014e ದೇವದತ್ತಸ್ಯ ಘೋಷೇಣ ಗಾಂಡೀವನಿನದೇನ ಚ।।
07065015a ಮಂದವೇಗತರಾ ನಾಗಾ ಬಭೂವುಸ್ತೇ ವಿಚೇತಸಃ।
07065015c ಶರೈರಾಶೀವಿಷಸ್ಪರ್ಶೈರ್ನಿರ್ಭಿನ್ನಾಃ ಸವ್ಯಸಾಚಿನಾ।।

ಅಶ್ವಗಳ ಗೊರಸಿನ ಶಬ್ಧಗಳಿಂದ, ರಥಚಕ್ರದ ಘೋಷಗಳಿಂದ, ಟೇಂಕಾರದ ಉತ್ಕೃಷ್ಟ ನಿನಾದದಿಂದ, ದೇವದತ್ತ ಶಂಖದ ಘೋಷದಿಂದ, ಗಾಂಡೀವದ ನಿನಾದದಿಂದ ಆನೆಗಳ ವೇಗವು ಕುಂಠಿತವಾಯಿತು. ವಿಷಸರ್ಪಗಳಂತಿದ್ದ ಸವ್ಯಸಾಚಿಯ ಶರಗಳು ತಾಗಿ ಅವು ನಿರ್ಭಿನ್ನವಾಗಿ ಮೂರ್ಛೆಹೋದವು.

07065016a ತೇ ಗಜಾ ವಿಶಿಖೈಸ್ತೀಕ್ಷ್ಣೈರ್ಯುಧಿ ಗಾಂಡೀವಚೋದಿತೈಃ।
07065016c ಅನೇಕಶತಸಾಹಸ್ರೈಃ ಸರ್ವಾಂಗೇಷು ಸಮರ್ಪಿತಾಃ।।
07065017a ಆರಾವಂ ಪರಮಂ ಕೃತ್ವಾ ವಧ್ಯಮಾನಾಃ ಕಿರೀಟಿನಾ।
07065017c ನಿಪೇತುರನಿಶಂ ಭೂಮೌ ಚಿನ್ನಪಕ್ಷಾ ಇವಾದ್ರಯಃ।।

ಯುದ್ಧದಲ್ಲಿ ಗಾಂಡೀವದಿಂದ ಬಿಡಲ್ಪಟ್ಟ ತೀಕ್ಷ್ಣ ವಿಶಿಖಗಳಿಂದ ಸರ್ವಾಂಗಗಳಲ್ಲಿ ಗಾಯಗೊಂಡು ಅನೇಕ ನೂರು ಸಾವಿರ ಆನೆಗಳು ಜೋರಾಗಿ ಕೂಗಿಕೊಳ್ಳುತ್ತಾ ರೆಕ್ಕೆಗಳನ್ನು ಕತ್ತರಿಸಲ್ಪಟ್ಟ ಗಿರಿಪರ್ವತಗಳಂತೆ ಕಿರೀಟಿಯಿಂದ ವಧಿಸಲ್ಪಟ್ಟು ಭೂಮಿಯ ಮೇಲೆ ಬಿದ್ದವು.

07065018a ಅಪರೇ ದಂತವೇಷ್ಟೇಷು ಕುಂಭೇಷು ಚ ಕಟೇಷು ಚ।
07065018c ಶರೈಃ ಸಮರ್ಪಿತಾ ನಾಗಾಃ ಕ್ರೌಂಚವದ್ವ್ಯನದನ್ಮುಹುಃ।।

ಕೆಲವು ಆನೆಗಳು ದಂತಗಳ ಕೆಳಭಾಗದಲ್ಲಿಯೂ, ಕುಂಭಸ್ಥಳದಲ್ಲಿ, ಮತ್ತು ಕಪೋಲಗಳಲ್ಲಿ ಬಾಣಗಳಿಂದ ಚುಚ್ಚಲ್ಪಟ್ಟು ಕ್ರೌಂಚಪಕ್ಷಿಗಳಂತೆ ಮತ್ತೆ ಮತ್ತೆ ಕಿರುಚುತ್ತಿದ್ದವು.

07065019a ಗಜಸ್ಕಂಧಗತಾನಾಂ ಚ ಪುರುಷಾಣಾಂ ಕಿರೀಟಿನಾ।
07065019c ಆಚ್ಚಿದ್ಯಂತೋತ್ತಮಾಂಗಾನಿ ಭಲ್ಲೈಃ ಸನ್ನತಪರ್ವಭಿಃ।।

ಕಿರೀಟಿಯು ಆನೆಗಳ ಹೆಗಲ ಮೇಲಿದ್ದ ಪುರುಷರ ಶಿರಗಳನ್ನು ಸನ್ನತಪರ್ವ ಭಲ್ಲಗಳಿಂದ ಕತ್ತರಿಸುತ್ತಿದ್ದನು.

07065020a ಸಕುಂಡಲಾನಾಂ ಪತತಾಂ ಶಿರಸಾಂ ಧರಣೀತಲೇ।
07065020c ಪದ್ಮಾನಾಮಿವ ಸಂಘಾತೈಃ ಪಾರ್ಥಶ್ಚಕ್ರೇ ನಿವೇದನಂ।।

ಧರಣೀತಲದಲ್ಲಿ ಕುಂಡಲಗಳೊಂದಿಗೆ ಬೀಳುತ್ತಿದ್ದ ಶಿರಸ್ಸುಗಳು ಪಾರ್ಥನು ಪದ್ಮಗಳ ರಾಶಿಗಳಿಂದ ಭೂಮಿಯನ್ನು ಪೂಜಿಸುತ್ತಿರುವನೋ ಎಂಬಂತೆ ತೋರುತ್ತಿದ್ದವು.

07065021a ಯಂತ್ರಬದ್ಧಾ ವಿಕವಚಾ ವ್ರಣಾರ್ತಾ ರುಧಿರೋಕ್ಷಿತಾಃ।
07065021c ಭ್ರಮತ್ಸು ಯುಧಿ ನಾಗೇಷು ಮನುಷ್ಯಾ ವಿಲಲಂಬಿರೇ।।

ರಣದಲ್ಲಿ ತಿರುಗುತ್ತಿದ್ದ ಆನೆಗಳ ಮೇಲೆ ಯಂತ್ರಗಳಿಗೆ ಕಟ್ಟಲ್ಪಟ್ಟಿರುವರೋ ಎಂಬಂತೆ ಕವಚಗಳನ್ನು ಕಳೆದುಕೊಂಡು, ಗಾಯಗಳಿಂದ ಆರ್ತರಾಗಿ, ರಕ್ತದಿಂದ ತೋಯ್ದು ಮನುಷ್ಯರು ನೇತಾಡುತ್ತಿದ್ದರು.

07065022a ಕೇ ಚಿದೇಕೇನ ಬಾಣೇನ ಸುಮುಕ್ತೇನ ಪತತ್ರಿಣಾ।
07065022c ದ್ವೌ ತ್ರಯಶ್ಚ ವಿನಿರ್ಭಿನ್ನಾ ನಿಪೇತುರ್ಧರಣೀತಲೇ।।

ಚೆನ್ನಾಗಿ ಪ್ರಯೋಗಿಸಲ್ಪಟ್ಟ ಒಂದೇ ಪತತ್ರಿಯಿಂದ ಕೆಲವೊಮ್ಮೆ ಒಬ್ಬರೇ ತುಂಡಾಗಿ ಮತ್ತು ಇನ್ನು ಕೆಲವೊಮ್ಮೆ ಇಬ್ಬರು ಮೂರುಮಂದಿ ಒಟ್ಟಿಗೇ ಕತ್ತರಿಸಲ್ಪಟ್ಟು ಬೀಳುತ್ತಿದ್ದರು.

07065023a ಮೌರ್ವೀಂ ಧನುರ್ಧ್ವಜಂ ಚೈವ ಯುಗಾನೀಷಾಸ್ತಥೈವ ಚ।
07065023c ರಥಿನಾಂ ಕುಟ್ಟಯಾಮಾಸ ಭಲ್ಲೈಃ ಸನ್ನತಪರ್ವಭಿಃ।।

ಅವನು ಸನ್ನತಪರ್ವ ಭಲ್ಲಗಳಿಂದ ರಥಿಗಳ ಶಿಂಜಿನಿಯನ್ನೂ, ಧನುಸ್ಸು-ಧ್ವಜಗಳನ್ನೂ, ನೊಗ-ಈಷಾದಂಡಗಳನ್ನೂ ತುಂಡರಿಸಿದನು.

07065024a ನ ಸಂದಧನ್ನ ಚಾಪ್ಯಸ್ಯನ್ನ ವಿಮುಂಚನ್ನ ಚೋದ್ಧರನ್।
07065024c ಮಂಡಲೇನೈವ ಧನುಷಾ ನೃತ್ಯನ್ಪಾರ್ಥಃ ಸ್ಮ ದೃಶ್ಯತೇ।।

ಧನುಸ್ಸನ್ನು ಮಂಡಲಾಕಾರವಾಗಿರಿಸಿಕೊಂಡ ಪಾರ್ಥನು ನರ್ತಿಸುತ್ತಿರುವವನಂತೆ ತೋರುತ್ತಿದ್ದನು. ಅವನು ಚಾಪಕ್ಕೆ ಬಾಣಗಳನ್ನು ಹೂಡುವುದೂ, ಪ್ರಯೋಗಿಸುವುದೂ ಕಾಣುತ್ತಲೇ ಇರಲಿಲ್ಲ.

07065025a ಅತಿವಿದ್ಧಾಶ್ಚ ನಾರಾಚೈರ್ವಮಂತೋ ರುಧಿರಂ ಮುಖೈಃ।
07065025c ಮುಹೂರ್ತಾನ್ನಿಪತಂತ್ಯನ್ಯೇ ವಾರಣಾ ವಸುಧಾತಲೇ।।

ನಾರಾಚಗಳಿಂದ ಅತಿಯಾಗಿ ಗಾಯಗೊಂಡು ಬಾಯಿಯಿಂದ ರಕ್ತವನ್ನು ಕಾರುತ್ತಾ ಅನ್ಯ ಆನೆಗಳು ವಸುಧಾತಲದಲ್ಲಿ ಬೀಳುತ್ತಿದ್ದವು.

07065026a ಉತ್ಥಿತಾನ್ಯಗಣೇಯಾನಿ ಕಬಂಧಾನಿ ಸಮಂತತಃ।
07065026c ಅದೃಶ್ಯಂತ ಮಹಾರಾಜ ತಸ್ಮಿನ್ಪರಮಸಂಕುಲೇ।।

ಮಹಾರಾಜ! ಆ ಪರಮ ಸಂಕುಲಯುದ್ಧದಲ್ಲಿ ಅಗಣಿತ ಕಬಂಧಗಳು ಮೇಲೆದ್ದು ಕುಣಿಯುತ್ತಿರುವುದು ಎಲ್ಲ ಕಡೆ ಕಂಡುಬಂದಿತು.

07065027a ಸಚಾಪಾಃ ಸಾಂಗುಲಿತ್ರಾಣಾಃ ಸಖಡ್ಗಾಃ ಸಾಂಗದಾ ರಣೇ।
07065027c ಅದೃಶ್ಯಂತ ಭುಜಾಶ್ಚಿನ್ನಾ ಹೇಮಾಭರಣಭೂಷಿತಾಃ।।

ಚಾಪಗಳೊಂದಿಗೆ, ಅಂಗುಲಿತ್ರಾಣಗಳೊಂದಿಗೆ, ಖಡ್ಗಗಳೊಂದಿಗೆ, ಅಂಗದಗಳೊಂದಿಗೆ ಹೇಮಾಭರಣ ಭೂಷಿತ ಭುಜಗಳು ತುಂಡಾಗಿ ಬಿದ್ದಿರುವುದು ಕಂಡುಬಂದಿತು.

07065028a ಸೂಪಸ್ಕರೈರಧಿಷ್ಠಾನೈರೀಷಾದಂಡಕಬಂಧುರೈಃ।
07065028c ಚಕ್ರೈರ್ವಿಮಥಿತೈರಕ್ಷೈ ಭಗ್ನೈಶ್ಚ ಬಹುಧಾ ಯುಗೈಃ।।
07065029a ವರ್ಮಚಾಪಶರೈಶ್ಚೈವ ವ್ಯವಕೀರ್ಣೈಸ್ತತಸ್ತತಃ।
07065029c ಸ್ರಗ್ಭಿರಾಭರಣೈರ್ವಸ್ತ್ರೈಃ ಪತಿತೈಶ್ಚ ಮಹಾಧ್ವಜೈಃ।।
07065030a ನಿಹತೈರ್ವಾರಣೈರಶ್ವೈಃ ಕ್ಷತ್ರಿಯೈಶ್ಚ ನಿಪಾತಿತೈಃ।
07065030c ಅದೃಶ್ಯತ ಮಹೀ ತತ್ರ ದಾರುಣಪ್ರತಿದರ್ಶನಾ।।

ಛಿನ್ನ ಛಿನ್ನವಾದ ರಥೋಪಕರಣಗಳಿಂದಲೂ, ಆಸನಗಳಿಂದಲೂ, ಈಷಾದಂಡಗಳಿಂದಲೂ, ನೊಗಗಳಿಂದಲೂ, ಅಲ್ಲಲ್ಲಿ ಹರಡಿ ಬಿದ್ದಿರುವ ಕವಚ-ಚಾಪ-ಶರಗಳಿಂದಲೂ, ಕೆಳಗೆ ಬಿದ್ದಿದ್ದ ಹಾರ-ಆಭರಣ-ವಸ್ತ್ರಗಳಿಂದಲೂ, ಧ್ವಜಗಳಿಂದಲೂ, ಹತರಾಗಿ ಬಿದ್ದಿದ್ದ ಆನೆ-ಕುದುರೆ-ಕ್ಷತ್ರಿಯರಿಂದಲೂ ಆ ರಣಭೂಮಿಯು ನೋಡಲು ದಾರುಣವಾಗಿ ತೋರುತ್ತಿತ್ತು.

07065031a ಏವಂ ದುಃಶಾಸನಬಲಂ ವಧ್ಯಮಾನಂ ಕಿರೀಟಿನಾ।
07065031c ಸಂಪ್ರಾದ್ರವನ್ಮಹಾರಾಜ ವ್ಯಥಿತಂ ವೈ ಸನಾಯಕಂ।।

ಮಹಾರಾಜ! ಹೀಗೆ ಕಿರೀಟಿಯಿಂದ ವಧಿಸಲ್ಪಟ್ಟ ಆ ದುಃಶಾಸನನ ಸೇನೆಯು ವ್ಯಥಿತಗೊಂಡು ನಾಯಕನೊಂದಿಗೆ ಓಡಿಹೋಯಿತು.

07065032a ತತೋ ದುಃಶಾಸನಸ್ತ್ರಸ್ತಃ ಸಹಾನೀಕಃ ಶರಾರ್ದಿತಃ।
07065032c ದ್ರೋಣಂ ತ್ರಾತಾರಮಾಕಾಂಕ್ಷಂ ಶಕಟವ್ಯೂಹಮಭ್ಯಗಾತ್।।

ಆಗ ಶರಾರ್ದಿತನಾದ ದುಃಶಾಸನನು ಸೇನೆಯೊಂದಿಗೆ ದ್ರೋಣನನ್ನು ರಕ್ಷಕನಾಗಿ ಬಯಸುತ್ತಾ ಶಕಟವ್ಯೂಹವನ್ನು ಪ್ರವೇಶಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ದುಃಶಾಸನಸೈನ್ಯಪರಾಭವೇ ಪಂಚಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ದುಃಶಾಸನಸೈನ್ಯಪರಾಭವ ಎನ್ನುವ ಅರವತ್ತೈದನೇ ಅಧ್ಯಾಯವು.