ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 62
ಸಾರ
ಸಂಜಯನು ಧೃತರಾಷ್ಟ್ರನೇ ಈ ಶೋಕಕ್ಕೆ ಕಾರಣನೆಂದು ಮಾತನಾಡಿದುದು (1-23).
07062001 ಸಂಜಯ ಉವಾಚ।
07062001a ಹಂತ ತೇ ಸಂಪ್ರವಕ್ಷ್ಯಾಮಿ ಸರ್ವಂ ಪ್ರತ್ಯಕ್ಷದರ್ಶಿವಾನ್।
07062001c ಶುಶ್ರೂಷಸ್ವ ಸ್ಥಿರೋ ಭೂತ್ವಾ ತವ ಹ್ಯಪನಯೋ ಮಹಾನ್।।
ಸಂಜಯನು ಹೇಳಿದನು: “ನಿಲ್ಲು! ಪ್ರತ್ಯಕ್ಷವಾಗಿ ಕಂಡ ಎಲ್ಲವನ್ನೂ ನಾನು ನಿನಗೆ ಹೇಳುತ್ತೇನೆ. ಸ್ಥಿರನಾಗಿ ಕೇಳುವಂಥವನಾಗು. ನಿನ್ನದೂ ದೊಡ್ಡ ತಪ್ಪಾಗಿದೆ.
07062002a ಗತೋದಕೇ ಸೇತುಬಂಧೋ ಯಾದೃಕ್ತಾದೃಗಯಂ ತವ।
07062002c ವಿಲಾಪೋ ನಿಷ್ಫಲೋ ರಾಜನ್ಮಾ ಶುಚೋ ಭರತರ್ಷಭ।।
ರಾಜನ್! ನೀರು ಹರಿದಹೋದ ನಂತರ ಸೇತುವೆಯನ್ನು ಕಟ್ಟುವುದು ಎಷ್ಟು ನಿಷ್ಪ್ರಯೋಜಕವೋ ಹಾಗೆ ನಿನ್ನ ವಿಲಾಪವೂ ನಿಷ್ಫಲವಾದುದು. ಭರತರ್ಷಭ! ಶೋಕಿಸಬೇಡ!
07062003a ಅನತಿಕ್ರಮಣೀಯೋಽಯಂ ಕೃತಾಂತಸ್ಯಾದ್ಭುತೋ ವಿಧಿಃ।
07062003c ಮಾ ಶುಚೋ ಭರತಶ್ರೇಷ್ಠ ದಿಷ್ಟಂ ಏತತ್ಪುರಾತನಂ।।
ಕೃತಾಂತನ ಈ ಅದ್ಭುತವಿಧಿಯನ್ನು ಅತಿಕ್ರಮಿಸುವುದು ಅಸಾಧ್ಯ. ಭರತಶ್ರೇಷ್ಠ! ಶೋಕಿಸದಿರು. ಇದು ಹಳೆಯ ಕಥೆ.
07062004a ಯದಿ ಹಿ ತ್ವಂ ಪುರಾ ದ್ಯೂತಾತ್ಕುಂತೀಪುತ್ರಂ ಯುಧಿಷ್ಠಿರಂ।
07062004c ನಿವರ್ತಯೇಥಾಃ ಪುತ್ರಾಂಶ್ಚ ನ ತ್ವಾಂ ವ್ಯಸನಮಾವ್ರಜೇತ್।।
ಒಂದು ವೇಳೆ ಹಿಂದೆ ನೀನು ದ್ಯೂತದಿಂದ ಕುಂತೀಪುತ್ರ ಯುಧಿಷ್ಠಿರ ಮತ್ತು ನಿನ್ನ ಪುತ್ರರು ಹಿಂದೆ ಸರಿಯುವಂತೆ ಮಾಡಿದ್ದಿದ್ದರೆ ನೀನು ಈ ವ್ಯಸನವನ್ನು ಅನುಭವಿಸಬೇಕಾಗಿರಲಿಲ್ಲ.
07062005a ಯುದ್ಧಕಾಲೇ ಪುನಃ ಪ್ರಾಪ್ತೇ ತದೈವ ಭವತಾ ಯದಿ।
07062005c ನಿವರ್ತಿತಾಃ ಸ್ಯುಃ ಸಂರಬ್ಧಾ ನ ತ್ವಾಂ ವ್ಯಸನಮಾವ್ರಜೇತ್।।
ಪುನಃ ಯುದ್ಧಕಾಲವು ಪ್ರಾಪ್ತವಾದಾಗಲೂ ಕೂಡ ಒಂದುವೇಳೆ ನೀನು ಸಂರಬ್ಧರಾಗಿದ್ದ ಎರಡೂ ಪಕ್ಷಗಳೂ ಹಿಂದೆ ಸರಿಯುವಂತೆ ಮಾಡಿದ್ದರೆ ನೀನು ಈ ವ್ಯಸನವನ್ನು ಅನುಭವಿಸಬೇಕಾಗಿರಲಿಲ್ಲ.
07062006a ದುರ್ಯೋಧನಂ ಚಾವಿಧೇಯಂ ಬಧ್ನೀತೇತಿ ಪುರಾ ಯದಿ।
07062006c ಕುರೂನಚೋದಯಿಷ್ಯಸ್ತ್ವಂ ನ ತ್ವಾಂ ವ್ಯಸನಮಾವ್ರಜೇತ್।।
ಒಂದುವೇಳೆ ಹಿಂದೆ ನೀನು ಅವಿಧೇಯನಾದ ದುರ್ಯೋಧನನನ್ನು ಸಂಹರಿಸಿ ಎಂದು ಕುರುಗಳಿಗೆ ಆದೇಶವಿತ್ತಿದ್ದರೆ ನೀನು ಈ ವ್ಯಸನವನ್ನು ಅನುಭವಿಸಬೇಕಾಗಿರಲಿಲ್ಲ.
07062007a ತತ್ತೇ ಬುದ್ಧಿವ್ಯಭೀಚಾರಮುಪಲಪ್ಸ್ಯಂತಿ ಪಾಂಡವಾಃ।
07062007c ಪಾಂಚಾಲಾ ವೃಷ್ಣಯಃ ಸರ್ವೇ ಯೇ ಚಾನ್ಯೇಽಪಿ ಮಹಾಜನಾಃ।।
ಹಾಗೆ ಮಾಡಿದ್ದರೆ ಪಾಂಡವರು, ಪಾಂಚಾಲರು, ವೃಷ್ಣಿಯರು ಮತ್ತು ಇನ್ನೂ ಇತರ ಮಹಾಜನರು ನಿನ್ನ ಬುದ್ಧಿಯು ವ್ಯಭಿಚಾರಗೈಯುತ್ತಿದೆಯೆನ್ನುವುದನ್ನು ತಿಳಿಯುತ್ತಿರಲಿಲ್ಲ.
07062008a ಸ ಕೃತ್ವಾ ಪಿತೃಕರ್ಮ ತ್ವಂ ಪುತ್ರಂ ಸಂಸ್ಥಾಪ್ಯ ಸತ್ಪಥೇ।
07062008c ವರ್ತೇಥಾ ಯದಿ ಧರ್ಮೇಣ ನ ತ್ವಾಂ ವ್ಯಸನಮಾವ್ರಜೇತ್।।
ನೀನು ತಂದೆಯ ಕರ್ಮವನ್ನು ಪೂರೈಸಿ ಮಗನನ್ನು ಸತ್ಪಥದಲ್ಲಿ ಇರಿಸಿ ಧರ್ಮದಲ್ಲಿ ನಡೆದುಕೊಳ್ಳುತ್ತಿದ್ದರೆ ಈ ವ್ಯಸನವನ್ನು ಅನುಭವಿಸಬೇಕಾಗಿರಲಿಲ್ಲ.
07062009a ತ್ವಂ ತು ಪ್ರಾಜ್ಞತಮೋ ಲೋಕೇ ಹಿತ್ವಾ ಧರ್ಮಂ ಸನಾತನಂ।
07062009c ದುರ್ಯೋಧನಸ್ಯ ಕರ್ಣಸ್ಯ ಶಕುನೇಶ್ಚಾನ್ವಗಾ ಮತಂ।।
ಲೋಕದಲ್ಲಿ ಅತ್ಯಂತ ಪ್ರಾಜ್ಞನಾದ ನೀನು ಸನಾತನ ಧರ್ಮವನ್ನು ಬಿಸುಟು ದುರ್ಯೋಧನ, ಕರ್ಣ ಮತ್ತು ಶಕುನಿಯರ ಮತವನ್ನು ಅನುಸರಿಸಿದೆ.
07062010a ತತ್ತೇ ವಿಲಪಿತಂ ಸರ್ವಂ ಮಯಾ ರಾಜನ್ನಿಶಾಮಿತಂ।
07062010c ಅರ್ಥೇ ನಿವಿಶಮಾನಸ್ಯ ವಿಷಮಿಶ್ರಂ ಯಥಾ ಮಧು।।
ರಾಜನ್! ಈ ಎಲ್ಲ ವಿಲಾಪಗಳೂ ವಿಷಯಗಳಿಗೆ ಅಂಟಿಕೊಂಡಿರುವವನ ವಿಷಮಿಶ್ರಿತ ಜೇತುತುಪ್ಪದಂತೆ ಎಂದು ನನಗೆ ಅನಿಸುತ್ತಿದೆ.
07062011a ನ ತಥಾ ಮನ್ಯತೇ ಕೃಷ್ಣೋ ರಾಜಾನಂ ಪಾಂಡವಂ ಪುರಾ।
07062011c ನ ಭೀಷ್ಮಂ ನೈವ ಚ ದ್ರೋಣಂ ಯಥಾ ತ್ವಾಂ ಮನ್ಯತೇ ನೃಪ।।
ನೃಪ! ಮೊದಮೊದಲು ಕೃಷ್ಣನು ನಿನಗೆ ಮನ್ನಣೆ ನೀಡುವಷ್ಟು ಪಾಂಡವ ರಾಜನಿಗಾಗಲೀ, ಭೀಷ್ಮನಿಗಾಗಲೀ, ದ್ರೋಣನಿಗಾಗಲೀ ನೀಡುತ್ತಿರಲಿಲ್ಲ.
07062012a ವ್ಯಜಾನತ ಯದಾ ತು ತ್ವಾಂ ರಾಜಧರ್ಮಾದಧಶ್ಚ್ಯುತಂ।
07062012c ತದಾ ಪ್ರಭೃತಿ ಕೃಷ್ಣಸ್ತ್ವಾಂ ನ ತಥಾ ಬಹು ಮನ್ಯತೇ।।
ನೀನು ರಾಜಧರ್ಮದಿಂದ ಚ್ಯುತನಾಗಿದ್ದೀಯೆಂದು ಅವನಿಗೆ ತಿಳಿದಾಗಿನಿಂದ ಕೃಷ್ಣನು ನಿನ್ನನ್ನು ಬಹಳವಾಗಿ ಮನ್ನಿಸುತ್ತಿಲ್ಲ.
07062013a ಪರುಷಾಣ್ಯುಚ್ಯಮಾನಾಂಶ್ಚ ಯಥಾ ಪಾರ್ಥಾನುಪೇಕ್ಷಸೇ।
07062013c ತಸ್ಯಾನುಬಂಧಃ ಪ್ರಾಪ್ತಸ್ತ್ವಾಂ ಪುತ್ರಾಣಾಂ ರಾಜ್ಯಕಾಮುಕಂ।।
ರಾಜ್ಯವನ್ನು ಬಯಸಿದ ನಿನ್ನ ಪುತ್ರರು ಪಾರ್ಥರನ್ನು ಅನುಪೇಕ್ಷಿಸಿ ಕ್ರೂರಮಾತುಗಳನ್ನು ಆಡಿದ್ದರು. ಅದರ ಫಲವನ್ನು ನೀನು ಪಡೆಯುತ್ತಿದ್ದೀಯೆ.
07062014a ಪಿತೃಪೈತಾಮಹಂ ರಾಜ್ಯಮಪವೃತ್ತಂ ತದಾನಘ।
07062014c ಅಥ ಪಾರ್ಥೈರ್ಜಿತಾಂ ಕೃತ್ಸ್ನಾಂ ಪೃಥಿವೀಂ ಪ್ರತ್ಯಪದ್ಯಥಾಃ।।
ಅನಘ! ಪಿತೃ-ಪಿತಾಮಹರ ಈ ರಾಜ್ಯವು ಆಪತ್ತಿನಲ್ಲಿದೆ. ಈಗ ಪಾರ್ಥರಿಂದ ಜಯಿಸಲ್ಪಟ್ಟ ಇಡೀ ಪೃಥ್ವಿಯನ್ನು ಒಂದುಗೂಡಿಸು.
07062015a ಪಾಂಡುನಾವರ್ಜಿತಂ ರಾಜ್ಯಂ ಕೌರವಾಣಾಂ ಯಶಸ್ತಥಾ।
07062015c ತತಶ್ಚಾಭ್ಯಧಿಕಂ ಭೂಯಃ ಪಾಂಡವೈರ್ಧರ್ಮಚಾರಿಭಿಃ।।
ಪಾಂಡುವು ರಾಜ್ಯವನ್ನೂ ಕೌರವರ ಯಶಸ್ಸನ್ನೂ ಗಳಿಸಿದ್ದನು. ಧರ್ಮಚಾರಿಗಳಾದ ಪಾಂಡವರು ಅದನ್ನು ಇನ್ನೂ ಹೆಚ್ಚಿಸಿದರು.
07062016a ತೇಷಾಂ ತತ್ತಾದೃಶಂ ಕರ್ಮ ತ್ವಾಮಾಸಾದ್ಯ ಸುನಿಷ್ಫಲಂ।
07062016c ಯತ್ಪಿತ್ರ್ಯಾದ್ಭ್ರಂಶಿತಾ ರಾಜ್ಯಾತ್ತ್ವಯೇಹಾಮಿಷಗೃದ್ಧಿನಾ।।
ಆದರೆ ಅವರು ನಿನ್ನ ಸಂಗದಲ್ಲಿ ಬಂದು ಅವರ ಆ ಕರ್ಮವು ನಿಷ್ಫಲವಾಯಿತು. ಆಸೆಬುರುಕನಾದ ನಿನ್ನಿಂದ ಅವರು ತಮ್ಮ ಪಿತ್ರಾರ್ಜಿತ ರಾಜ್ಯವನ್ನೂ ಕಳೆದುಕೊಂಡರು.
07062017a ಯತ್ಪುನರ್ಯುದ್ಧಕಾಲೇ ತ್ವಂ ಪುತ್ರಾನ್ಗರ್ಹಯಸೇ ನೃಪ।
07062017c ಬಹುಧಾ ವ್ಯಾಹರನ್ದೋಷಾನ್ನ ತದದ್ಯೋಪಪದ್ಯತೇ।।
ನೃಪ! ಈಗ ಪುನಃ ಯುದ್ಧದ ಸಮಯದಲ್ಲಿ ನೀನು ನಿನ್ನ ಮಕ್ಕಳನ್ನು ಅವರ ಅನೇಕ ವ್ಯವಹಾರ ದೋಷಗಳನ್ನು ಎತ್ತಿ ತೋರಿಸುತ್ತಾ ದೂರುತ್ತಿದ್ದೀಯೆ. ಇದು ಸರಿಯಲ್ಲ.
07062018a ನ ಹಿ ರಕ್ಷಂತಿ ರಾಜಾನೋ ಯುಧ್ಯಂತೋ ಜೀವಿತಂ ರಣೇ।
07062018c ಚಮೂಂ ವಿಗಾಹ್ಯ ಪಾರ್ಥಾನಾಂ ಯುಧ್ಯಂತೇ ಕ್ಷತ್ರಿಯರ್ಷಭಾಃ।।
ರಣದಲ್ಲಿ ಯುದ್ಧಮಾಡುತ್ತಿರುವಾಗ ರಾಜರು ತಮ್ಮ ಜೀವವನ್ನೂ ರಕ್ಷಿಸಿಕೊಳ್ಳುವುದಿಲ್ಲ. ಈ ಕ್ಷತ್ರಿಯರ್ಷಭರು ಪಾಂಡವರ ಸೇನೆಗಳನ್ನು ನುಗ್ಗಿ ಯುದ್ಧಮಾಡುತ್ತಿದ್ದಾರೆ.
07062019a ಯಾಂ ತು ಕೃಷ್ಣಾರ್ಜುನೌ ಸೇನಾಂ ಯಾಂ ಸಾತ್ಯಕಿವೃಕೋದರೌ।
07062019c ರಕ್ಷೇರನ್ಕೋ ನು ತಾಂ ಯುಧ್ಯೇಚ್ಚಮೂಮನ್ಯತ್ರ ಕೌರವೈಃ।।
ಕೌರವರಲ್ಲದೇ ಬೇರೆ ಯಾರು ತಾನೇ ಕೃಷ್ಣಾರ್ಜುನರು ಮತ್ತು ಸಾತ್ಯಕಿ-ವೃಕೋದರರು ರಕ್ಷಿಸುತ್ತಿರುವ ಸೇನೆಯನ್ನು ಎದುರಿಸಿ ಯುದ್ಧಮಾಡಿಯಾರು?
07062020a ಯೇಷಾಂ ಯೋದ್ಧಾ ಗುಡಾಕೇಶೋ ಯೇಷಾಂ ಮಂತ್ರೀ ಜನಾರ್ದನಃ।
07062020c ಯೇಷಾಂ ಚ ಸಾತ್ಯಕಿರ್ಗೋಪ್ತಾ ಯೇಷಾಂ ಗೋಪ್ತಾ ವೃಕೋದರಃ।।
07062021a ಕೋ ಹಿ ತಾನ್ವಿಷಹೇದ್ಯೋದ್ಧುಂ ಮರ್ತ್ಯಧರ್ಮಾ ಧನುರ್ಧರಃ।
07062021c ಅನ್ಯತ್ರ ಕೌರವೇಯೇಭ್ಯೋ ಯೇ ವಾ ತೇಷಾಂ ಪದಾನುಗಾಃ।।
ನಿನ್ನನ್ನು ಅನುಸರಿಸಿ ನಡೆಯುವ ಕೌರವರನ್ನು ಬಿಟ್ಟರೆ ಬೇರೆ ಯಾವ ಮರ್ತ್ಯಧರ್ಮಕ್ಕೊಳಗಾದ ಧನುರ್ಧರನು ಆ ಸೇನೆಯನ್ನು - ಯಾರ ಯೋಧನು ಗುಡಾಕೇಶನೋ, ಯಾರ ಮಂತ್ರಿಯು ಜನಾರ್ದನನೋ, ಯಾರ ರಕ್ಷಕರು ಸಾತ್ಯಕಿ-ವೃಕೋದರರೋ - ಎದುರಿಸಿ ಯುದ್ಧಮಾಡಲು ಬಯಸುತ್ತಾರೆ?
07062022a ಯಾವತ್ತು ಶಕ್ಯತೇ ಕರ್ತುಮನುರಕ್ತೈರ್ಜನಾಧಿಪೈಃ।
07062022c ಕ್ಷತ್ರಧರ್ಮರತೈಃ ಶೂರೈಸ್ತಾವತ್ಕುರ್ವಂತಿ ಕೌರವಾಃ।।
ಅನುರಕ್ತರಾದ, ಕ್ಷತ್ರಧರ್ಮರತರಾದ, ಶೂರರಾದ ಕೌರವ ಜನಾಧಿಪರು ಏನು ಶಕ್ಯವೋ ಅವೆಲ್ಲವನ್ನೂ ಮಾಡುತ್ತಿದ್ದಾರೆ.
07062023a ಯಥಾ ತು ಪುರುಷವ್ಯಾಘ್ರೈರ್ಯುದ್ಧಂ ಪರಮಸಂಕಟಂ।
07062023c ಕುರೂಣಾಂ ಪಾಂಡವೈಃ ಸಾರ್ಧಂ ತತ್ಸರ್ವಂ ಶೃಣು ತತ್ತ್ವತಃ।।
ಈಗ ಕುರು ಮತ್ತು ಪಾಂಡವ ಪುರುಷವ್ಯಾಘ್ರರ ನಡುವೆ ನಡೆದ ಪರಮ ಸಂಕಟದ ಯುದ್ಧವನ್ನು ಎಲ್ಲವನ್ನೂ ನಡೆದ ಹಾಗೆ ಕೇಳು!”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಂಜಯವಾಕ್ಯೇ ದ್ವಿಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಂಜಯವಾಕ್ಯ ಎನ್ನುವ ಅರವತ್ತೆರಡನೇ ಅಧ್ಯಾಯವು.