ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 61
ಸಾರ
ಅಭಿಮನ್ಯುವಿನ ವಧೆಯ ಮರುದಿನದ ಯುದ್ಧದ ಕುರಿತು ಧೃತರಾಷ್ಟ್ರನು ಸಂಜಯನನ್ನು ಪ್ರಶ್ನಿಸುತ್ತಾ ಶೋಕಿಸುವುದು (1-51).
07061001 ಧೃತರಾಷ್ಟ್ರ ಉವಾಚ।
07061001a ಶ್ವೋಭೂತೇ ಕಿಮಕಾರ್ಷುಸ್ತೇ ದುಃಖಶೋಕಸಮನ್ವಿತಾಃ।
07061001c ಅಭಿಮನ್ಯೌ ಹತೇ ತತ್ರ ಕೇ ವಾಯುಧ್ಯಂತ ಮಾಮಕಾಃ।।
ಧೃತರಾಷ್ಟ್ರನು ಹೇಳಿದನು: “ಅಭಿಮನ್ಯುವಿನ ವಧೆಯ ಮರುದಿನ ದುಃಖಶೋಕಸಮನ್ವಿತರಾದ ಅವರು ಏನು ಮಾಡಿದರು? ನಮ್ಮವರಲ್ಲಿ ಯಾರು ಅಲ್ಲಿ ಅವರೊಂದಿಗೆ ಯುದ್ಧ ಮಾಡಿದರು?
07061002a ಜಾನಂತಸ್ತಸ್ಯ ಕರ್ಮಾಣಿ ಕುರವಃ ಸವ್ಯಸಾಚಿನಃ।
07061002c ಕಥಂ ತತ್ಕಿಲ್ಬಿಷಂ ಕೃತ್ವಾ ನಿರ್ಭಯಾ ಬ್ರೂಹಿ ಮಾಮಕಾಃ।।
ಸವ್ಯಸಾಚಿಯ ಸಾಧನೆಗಳನ್ನು ತಿಳಿದಿದ್ದ ನಮ್ಮವರು ಅಂಥಹ ಪಾಪಕೃತ್ಯವನ್ನು ಮಾಡಿಯೂ ಹೇಗೆ ನಿರ್ಭಯರಾಗಿದ್ದರು ಹೇಳು!
07061003a ಪುತ್ರಶೋಕಾಭಿಸಂತಪ್ತಂ ಕ್ರುದ್ಧಂ ಮೃತ್ಯುಮಿವಾಂತಕಂ।
07061003c ಆಯಾಂತಂ ಪುರುಷವ್ಯಾಘ್ರಂ ಕಥಂ ದದೃಶುರಾಹವೇ।।
ಪುತ್ರಶೋಕಾಭಿಸಂತಪ್ತನಾಗಿ ಕ್ರುದ್ಧನಾಗಿ ಮೃತ್ಯು-ಅಂತಕನಂತೆ ಯುದ್ಧಕ್ಕೆ ಬರುತ್ತಿದ್ದ ಆ ಪುರುಷವ್ಯಾಘ್ರನನ್ನು ಹೇಗೆ ನೋಡಿದರು?
07061004a ಕಪಿರಾಜಧ್ವಜಂ ಸಂಖ್ಯೇ ವಿಧುನ್ವಾನಂ ಮಹದ್ಧನುಃ।
07061004c ದೃಷ್ಟ್ವಾ ಪುತ್ರಪರಿದ್ಯೂನಂ ಕಿಮಕುರ್ವಂತ ಮಾಮಕಾಃ।।
ಕಪಿರಾಜನ ಧ್ವಜವುಳ್ಳ, ಮಹಾಧನುಸ್ಸನ್ನು ಟೇಂಕರಿಸುತ್ತಿದ್ದ ಆ ಶತ್ರುವನ್ನು ನೋಡಿ ನನ್ನ ಮಕ್ಕಳು ಏನು ಮಾಡಿದರು?
07061005a ಕಿಂ ನು ಸಂಜಯ ಸಂಗ್ರಾಮೇ ವೃತ್ತಂ ದುರ್ಯೋಧನಂ ಪ್ರತಿ।
07061005c ಪರಿದೇವೋ ಮಹಾನತ್ರ ಶ್ರುತೋ ಮೇ ನಾಭಿನಂದನಂ।।
ಸಂಜಯ! ಸಂಗ್ರಾಮದಲ್ಲಿ ದುರ್ಯೋಧನನ ಕಡೆಯಲ್ಲಿ ಏನಾಯಿತು? ಅಲ್ಲಿ ಮಹಾ ಪರಿವೇದನೆಯಿದ್ದಂತಿದೆ! ಅವರ ಹರ್ಷದ ಕೂಗು ನನಗೆ ಕೇಳಿಸುತ್ತಿಲ್ಲ!
07061006a ಬಭೂವುರ್ಯೇ ಮನೋಗ್ರಾಹ್ಯಾಃ ಶಬ್ದಾಃ ಶ್ರುತಿಸುಖಾವಹಾಃ।
07061006c ನ ಶ್ರೂಯಂತೇಽದ್ಯ ತೇ ಸರ್ವೇ ಸೈಂಧವಸ್ಯ ನಿವೇಶನೇ।।
ಕೇಳಿದರೆ ಸುಖವನ್ನು ನೀಡುವ, ಮನಸ್ಸಿಗೆ ಹಿಡಿಯುವ ಶಬ್ಧಗಳು ಆಗುತ್ತಿದ್ದವು. ಇಂದು ಅವೆಲ್ಲವೂ ಸೈಂಧವನ ಮನೆಯಿಂದ ಕೇಳಿಬರುತ್ತಿಲ್ಲವಲ್ಲ!
07061007a ಸ್ತುವತಾಂ ನಾದ್ಯ ಶ್ರೂಯಂತೇ ಪುತ್ರಾಣಾಂ ಶಿಬಿರೇ ಮಮ।
07061007c ಸೂತಮಾಗಧಸಂಘಾನಾಂ ನರ್ತಕಾನಾಂ ಚ ಸರ್ವಶಃ।।
ಇಂದು ನನ್ನ ಪುತ್ರರ ಶಿಬಿರದಲ್ಲಿ ಎಲ್ಲಿಂದಲೂ ಸೂತ-ಮಾಗಧರ ಗುಂಪುಗಳು ಸ್ತುತಿಸುವ ಮತ್ತು ನರ್ತಕರ ಶಬ್ಧಗಳು ಕೇಳಿಬರುತ್ತಿಲ್ಲ!
07061008a ಶಬ್ದೇನ ನಾದಿತಾಭೀಕ್ಷ್ಣಮಭವದ್ಯತ್ರ ಮೇ ಶ್ರುತಿಃ।
07061008c ದೀನಾನಾಮದ್ಯ ತಂ ಶಬ್ದಂ ನ ಶೃಣೋಮಿ ಸಮೀರಿತಂ।।
ಮೊದಲು ಆ ನಾದ ಶಬ್ಧಗಳು ನನಗೆ ಒಂದೇಸಮನೆ ಕೇಳಿಬರುತ್ತಿದ್ದವು. ಆದರೆ ಇಂದು ದೀನರಾಗಿರುವ ಅವರ ಶಿಬಿರಗಳಿಂದ ಆ ಶಬ್ಧವನ್ನು ನಾನು ಕೇಳುತ್ತಿಲ್ಲ.
07061009a ನಿವೇಶನೇ ಸತ್ಯಧೃತೇಃ ಸೋಮದತ್ತಸ್ಯ ಸಂಜಯ।
07061009c ಆಸೀನೋಽಹಂ ಪುರಾ ತಾತ ಶಬ್ದಮಶ್ರೌಷಮುತ್ತಮಂ।।
ಮಗೂ! ಸಂಜಯ! ಸತ್ಯಧೃತ ಸೋಮದತ್ತನ ಮನೆಯಿಂದ ಹಿಂದೆ ಉತ್ತಮ ಶಬ್ಧವು ಕೇಳಿಬರುತ್ತಿತ್ತು.
07061010a ತದದ್ಯ ಹೀನಪುಣ್ಯೋಽಹಮಾರ್ತಸ್ವರನಿನಾದಿತಂ।
07061010c ನಿವೇಶನಂ ಹತೋತ್ಸಾಹಂ ಪುತ್ರಾಣಾಂ ಮಮ ಲಕ್ಷಯೇ।।
ಆದರೆ ಇಂದು ಪುಣ್ಯವನ್ನು ಕಳೆದುಕೊಂಡಿರುವ ನಾನು ಆರ್ತಸ್ವರವನ್ನು ಕೇಳುತ್ತಿದ್ದೇನೆ. ನನ್ನ ಮಕ್ಕಳ ಮನೆಗಳು ಹತಾಶವಾಗಿವೆಯೆಂದು ನನಗೆ ಕಾಣುತ್ತಿವೆ.
07061011a ವಿವಿಂಶತೇರ್ದುರ್ಮುಖಸ್ಯ ಚಿತ್ರಸೇನವಿಕರ್ಣಯೋಃ।
07061011c ಅನ್ಯೇಷಾಂ ಚ ಸುತಾನಾಂ ಮೇ ನ ತಥಾ ಶ್ರೂಯತೇ ಧ್ವನಿಃ।।
ವಿವಿಂಶತಿ, ದುರ್ಮುಖ, ಚಿತ್ರಸೇನ, ವಿಕರ್ಣ ಮತ್ತು ನನ್ನ ಇತರ ಮಕ್ಕಳ ಮನೆಗಳಿಂದಲೂ ನನಗೆ ಅಂಥಹ ಧ್ವನಿಯು ಕೇಳಿಸುತ್ತಿಲ್ಲ.
07061012a ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾ ಯಂ ಶಿಷ್ಯಾಃ ಪರ್ಯುಪಾಸತೇ।
07061012c ದ್ರೋಣಪುತ್ರಂ ಮಹೇಷ್ವಾಸಂ ಪುತ್ರಾಣಾಂ ಮೇ ಪರಾಯಣಂ।।
07061013a ವಿತಂಡಾಲಾಪಸಂಲಾಪೈರ್ಹುತಯಾಚಿತವಂದಿತೈಃ।
07061013c ಗೀತೈಶ್ಚ ವಿವಿಧೈರಿಷ್ಟೈ ರಮತೇ ಯೋ ದಿವಾನಿಶಂ।।
07061014a ಉಪಾಸ್ಯಮಾನೋ ಬಹುಭಿಃ ಕುರುಪಾಂಡವಸಾತ್ವತೈಃ।
07061014c ಸೂತ ತಸ್ಯ ಗೃಹೇ ಶಬ್ಧೋ ನಾದ್ಯ ದ್ರೌಣೇರ್ಯಥಾ ಪುರಾ।।
ಸೂತ! ಯಾರನ್ನು ಬ್ರಾಹ್ಮಣ-ಕ್ಷತ್ರಿಯ-ವೈಶ್ಯ ಶಿಷ್ಯರು ಉಪಾಸಿಸುತ್ತಿದ್ದರೋ ಆ ದ್ರೋಣಪುತ್ರ, ಮಹೇಷ್ವಾಸ, ನನ್ನ ಮಕ್ಕಳಲ್ಲಿ ನಿರತನಾಗಿರುವ, ಯಾರು ಹಗಲು-ರಾತ್ರಿ ವಾದ-ವಿವಾದ, ಆಲಾಪ-ಸಲ್ಲಾಪಗಳಲ್ಲಿ, ವಿವಿಧ ಇಷ್ಟ ಗೀತಗಳಿಂದ ರಮಿಸುತ್ತಿದ್ದ, ಅನೇಕ ಕುರು-ಪಾಂಡವ-ಸಾತ್ವತರಿಂದ ಗೌರವಿಸಲ್ಪಡುವ ಆ ದ್ರೌಣಿಯ ಮನೆಯಿಂದ ಮೊದಲಿನಂತೆ ಆ ಶಬ್ಧಗಳು ಕೇಳಿಬರುತ್ತಿಲ್ಲ.
07061015a ದ್ರೋಣಪುತ್ರಂ ಮಹೇಷ್ವಾಸಂ ಗಾಯನಾ ನರ್ತಕಾಶ್ಚ ಯೇ।
07061015c ಅತ್ಯರ್ಥಮುಪತಿಷ್ಠಂತಿ ತೇಷಾಂ ನ ಶ್ರೂಯತೇ ಧ್ವನಿಃ।।
ಮಹೇಷ್ವಾಸ ದ್ರೋಣಪುತ್ರನನ್ನು ಗಾಯಕರು ಮತ್ತು ನರ್ತಕರು ಅನೇಕ ಸಂಖ್ಯೆಗಳಲ್ಲಿ ಸೇವೆಗೈಯುತ್ತಿದ್ದರು. ಅವರ ಧ್ವನಿಯೂ ಕೇಳಿ ಬರುತ್ತಿಲ್ಲ.
07061016a ವಿಂದಾನುವಿಂದಯೋಃ ಸಾಯಂ ಶಿಬಿರೇ ಯೋ ಮಹಾಧ್ವನಿಃ।
07061016c ಶ್ರೂಯತೇ ಸೋಽದ್ಯ ನ ತಥಾ ಕೇಕಯಾನಾಂ ಚ ವೇಶ್ಮಸು।।
ಸಾಯಂಕಾಲ ವಿಂದಾನುವಿಂದರ ಶಿಬಿರದಲ್ಲಿ ಮತ್ತು ಹಾಗೆಯೇ ಕೇಕಯರ ಮನೆಯಲ್ಲಿ ಯಾವ ಮಹಾಧ್ವನಿಯು ಕೇಳಿಬರುತ್ತಿತ್ತೋ ಅದು ಇಂದು ಕೇಳಿಬರುತ್ತಿಲ್ಲ.
07061017a ನಿತ್ಯಪ್ರಮುದಿತಾನಾಂ ಚ ತಾಲಗೀತಸ್ವನೋ ಮಹಾನ್।
07061017c ನೃತ್ಯತಾಂ ಶ್ರೂಯತೇ ತಾತ ಗಣಾನಾಂ ಸೋಽದ್ಯ ನ ಧ್ವನಿಃ।।
ಅಯ್ಯಾ! ನಿತ್ಯವೂ ಚಪ್ಪಾಳೆ-ಗೀತಗಳ ಮಹಾ ಧ್ವನಿಯೊಂದಿಗೆ ಸಂತೋಷಪಡುತ್ತಿದ್ದ, ಕೇಳುತ್ತಾ ಕುಣಿಯುತ್ತಿದ್ದ ಆ ಗಣಗಳ ಧ್ವನಿಯು ಇಂದು ಕೇಳಿಸುತ್ತಿಲ್ಲ.
07061018a ಸಪ್ತತಂತೂನ್ವಿತನ್ವಾನಾ ಯಮುಪಾಸಂತಿ ಯಾಜಕಾಃ।
07061018c ಸೌಮದತ್ತಿಂ ಶ್ರುತನಿಧಿಂ ತೇಷಾಂ ನ ಶ್ರೂಯತೇ ಧ್ವನಿಃ।।
ಯಾರನ್ನು ಏಳು ಎಳೆಗಳನ್ನು ಹಾಸುವ ಯಾಜಕರು ಉಪಾಸಿಸುತ್ತಾರೋ ಆ ಶ್ರುತನಿಧಿ ಸೌಮದತ್ತಿಯ ಮನೆಯಿಂದ ಧ್ವನಿಯು ಕೇಳಿಬರುತ್ತಿಲ್ಲ.
07061019a ಜ್ಯಾಘೋಷೋ ಬ್ರಹ್ಮಘೋಷಶ್ಚ ತೋಮರಾಸಿರಥಧ್ವನಿಃ।
07061019c ದ್ರೋಣಸ್ಯಾಸೀದವಿರತೋ ಗೃಹೇ ತನ್ನ ಶೃಣೋಮ್ಯಹಂ।।
ದ್ರೋಣನ ಮನೆಯಲ್ಲಿ ಅವಿರತವಾಗಿ ಕೇಳಿಬರುತ್ತಿದ್ದ ಶಿಂಜಿನಿಯ ಟೇಂಕಾರ, ಬ್ರಹ್ಮಘೋಷ ಮತ್ತು ಖಡ್ಗ-ತೋಮರಗಳ ಧ್ವನಿಯು ನನಗೆ ಕೇಳುತ್ತಿಲ್ಲ.
07061020a ನಾನಾದೇಶಸಮುತ್ಥಾನಾಂ ಗೀತಾನಾಂ ಯೋಽಭವತ್ಸ್ವನಃ।
07061020c ವಾದಿತ್ರನಾದಿತಾನಾಂ ಚ ಸೋಽದ್ಯ ನ ಶ್ರೂಯತೇ ಮಹಾನ್।।
ಅಲ್ಲಿ ನಡೆಯುತ್ತಿದ್ದ ನಾನಾದೇಶಗಳ ಗೀತೆಗಳ ಮತ್ತು ವಾದ್ಯವನ್ನು ನುಡಿಸುವವರ ಮಹಾನ್ ಧ್ವನಿಯು ಉಂಟಾಗುತ್ತಿತ್ತು. ಅವು ಇಂದು ಕೇಳುತ್ತಿಲ್ಲ.
07061021a ಯದಾ ಪ್ರಭೃತ್ಯುಪಪ್ಲವ್ಯಾಚ್ಚಾಂತಿಮಿಚ್ಚಂ ಜನಾರ್ದನಃ।
07061021c ಆಗತಃ ಸರ್ವಭೂತಾನಾಮನುಕಂಪಾರ್ಥಮಚ್ಯುತಃ।।
07061022a ತತೋಽಹಮಬ್ರುವನ್ಸೂತ ಮಂದಂ ದುರ್ಯೋಧನಂ ತದಾ।
07061022c ವಾಸುದೇವೇನ ತೀರ್ಥೇನ ಪುತ್ರ ಸಂಶಾಮ್ಯ ಪಾಂಡವೈಃ।।
ಸೂತ! ಸರ್ವಭೂತಗಳ ಮೇಲಿನ ಅನುಕಂಪದಿಂದಾಗಿ ಶಾಂತಿಯನ್ನು ಇಚ್ಛಿಸಿ ಉಪಪ್ಲವದಿಂದ ಹೊರಟು ಅಚ್ಯುತ ಜನಾರ್ದನನು ಬಂದಾಗ ನಾನು ಮಂದಬುದ್ಧಿ ದುರ್ಯೋಧನನಿಗೆ ಹೇಳಿದ್ದೆ: “ಪುತ್ರ! ವಾಸುದೇವನ ಮೂಲಕ ಪಾಂಡವರೊಂದಿಗೆ ಶಾಂತಿಯನ್ನು ಪಾಲಿಸು!
07061023a ಕಾಲಪ್ರಾಪ್ತಮಹಂ ಮನ್ಯೇ ಮಾ ತ್ವಂ ದುರ್ಯೋಧನಾತಿಗಾಃ।
07061023c ಶಮೇ ಚೇದ್ಯಾಚಮಾನಂ ತ್ವಂ ಪ್ರತ್ಯಾಖ್ಯಾಸ್ಯಸಿ ಕೇಶವಂ।
07061023e ಹಿತಾರ್ಥಮಭಿಜಲ್ಪಂತಂ ನ ತಥಾಸ್ತ್ಯಪರಾಜಯಃ।।
ಸಮಯವು ಬಂದೊದಗಿದೆ ಎಂದು ನನಗನ್ನಿಸುತ್ತದೆ. ನನ್ನನ್ನು ಮೀರಿ ನಡೆಯಬೇಡ! ಶಾಂತಿಯನ್ನು ಯಾಚಿಸುತ್ತಿರುವ, ನಮ್ಮ ಹಿತಕ್ಕಾಗಿ ಮಾತನಾಡುತ್ತಿರುವ ಕೇಶವನನ್ನು ದೂರಮಾಡಿದರೆ ನಿನಗೆ ಪರಾಜಯವೇ ಸರಿ!”
07061024a ಪ್ರತ್ಯಾಚಷ್ಟ ಸ ದಾಶಾರ್ಹಂ ಋಷಭಂ ಸರ್ವಧನ್ವಿನಾಂ।
07061024c ಅನುನೇಯಾನಿ ಜಲ್ಪಂತಮನಯಾನ್ನಾನ್ವಪದ್ಯತ।।
ಆದರೆ ಅವನು ಒಳ್ಳೆಯದನ್ನೇ ಹೇಳುತ್ತಿದ್ದ ಸರ್ವಧನ್ವಿಗಳಿಗೆ ವೃಷಭನಂತಿದ್ದ ದಾಶಾರ್ಹನನ್ನು ತಿರಸ್ಕರಿಸಿದನು. ಹೀಗೆ ತನಗೆ ಆಪತ್ತನ್ನೇ ತಂದುಕೊಂಡನು.
07061025a ತತೋ ದುಃಶಾಸನಸ್ಯೈವ ಕರ್ಣಸ್ಯ ಚ ಮತಂ ದ್ವಯೋಃ।
07061025c ಅನ್ವವರ್ತತ ಹಿತ್ವಾ ಮಾಂ ಕೃಷ್ಟಃ ಕಾಲೇನ ದುರ್ಮತಿಃ।।
ಸಾವಿನಿಂದ ಸೆಳೆಯಲ್ಪಟ್ಟು ಆ ದುರ್ಮತಿಯು ನನ್ನನ್ನು ತಿರಸ್ಕರಿಸಿ ದುಃಶಾಸನ ಮತ್ತು ಕರ್ಣ ಈ ಇಬ್ಬರ ಮತವನ್ನು ಅನುಸರಿಸಿದನು.
07061026a ನ ಹ್ಯಹಂ ದ್ಯೂತಮಿಚ್ಚಾಮಿ ವಿದುರೋ ನ ಪ್ರಶಂಸತಿ।
07061026c ಸೈಂಧವೋ ನೇಚ್ಚತೇ ದ್ಯೂತಂ ಭೀಷ್ಮೋ ನ ದ್ಯೂತಮಿಚ್ಚತಿ।।
ನಾನು ದ್ಯೂತವನ್ನು ಬಯಸಿರಲಿಲ್ಲ! ವಿದುರನೂ ಅದು ಬೇಡವೆಂದು ಹೇಳಿದ್ದನು. ಸೈಂಧವನು ದ್ಯೂತವನ್ನು ಬಯಸಿರಲಿಲ್ಲ. ಭೀಷ್ಮನೂ ದ್ಯೂತವನ್ನು ಬಯಸಿರಲ್ಲ.
07061027a ಶಲ್ಯೋ ಭೂರಿಶ್ರವಾಶ್ಚೈವ ಪುರುಮಿತ್ರೋ ಜಯಸ್ತಥಾ।
07061027c ಅಶ್ವತ್ಥಾಮಾ ಕೃಪೋ ದ್ರೋಣೋ ದ್ಯೂತಂ ನೇಚ್ಚಂತಿ ಸಂಜಯ।।
ಸಂಜಯ! ಶಲ್ಯ-ಭೂರಿಶ್ರವರೂ, ಪುರುಮಿತ್ರ-ಜಯರೂ, ಅಶ್ವತ್ಥಾಮ-ಕೃಪರೂ ದ್ರೋಣರೂ ದ್ಯೂತವನ್ನು ಇಚ್ಛಿಸಿರಲಿಲ್ಲ.
07061028a ಏತೇಷಾಂ ಮತಮಾಜ್ಞಾಯ ಯದಿ ವರ್ತೇತ ಪುತ್ರಕಃ।
07061028c ಸಜ್ಞಾತಿಮಿತ್ರಃ ಸಸುಹೃಚ್ಚಿರಂ ಜೀವೇದನಾಮಯಃ।।
ಒಂದುವೇಳೆ ನನ್ನ ಮಗನು ಇವರೆಲ್ಲರ ಅಭಿಪ್ರಾಯವನ್ನು ತಿಳಿದುಕೊಂಡು ನಡೆದುಕೊಂಡಿದ್ದರೆ ಜ್ಞಾತಿಮಿತ್ರರೊಂದಿಗೆ, ಸುಹೃದರೊಂದಿಗೆ ದೀರ್ಘಕಾಲ ಆರೋಗ್ಯವಾಗಿ ಜೀವಿಸಬಹುದಾಗಿತ್ತು.
07061029a ಶ್ಲಕ್ಷ್ಣಾ ಮಧುರಸಂಭಾಷಾ ಜ್ಞಾತಿಮಧ್ಯೇ ಪ್ರಿಯಂವದಾಃ।
07061029c ಕುಲೀನಾಃ ಸಮ್ಮತಾಃ ಪ್ರಾಜ್ಞಾಃ ಸುಖಂ ಪ್ರಾಪ್ಸ್ಯಂತಿ ಪಾಂಡವಾಃ।।
ಮೃದುವಾಗಿ ಮಧುರವಾಗಿ ಮಾತನಾಡುವ, ಕುಟುಂಬದವರೊಡನೆ ಪ್ರಿಯವಾಗಿ ಮಾತನಾಡುವ, ಕುಲೀನರೂ, ಸಮ್ಮತರೂ, ಪ್ರಾಜ್ಞರೂ ಆದ ಪಾಂಡವರು ಸುಖವನ್ನು ಪಡೆಯುತ್ತಾರೆ.
07061030a ಧರ್ಮಾಪೇಕ್ಷೋ ನರೋ ನಿತ್ಯಂ ಸರ್ವತ್ರ ಲಭತೇ ಸುಖಂ।
07061030c ಪ್ರೇತ್ಯಭಾವೇ ಚ ಕಲ್ಯಾಣಂ ಪ್ರಸಾದಂ ಪ್ರತಿಪದ್ಯತೇ।।
ಧರ್ಮಾಪೇಕ್ಷನಾದ ಮನುಷ್ಯನು ಸದಾ ಸರ್ವತ್ರ ಸುಖವನ್ನು ಪಡೆಯುತ್ತಾನೆ. ಅವನು ಸಾವಿನ ನಂತರವೂ ಕಲ್ಯಾಣ ಪ್ರಸಾದವನ್ನು ಪಡೆಯುತ್ತಾನೆ.
07061031a ಅರ್ಹಂತ್ಯರ್ಧಂ ಪೃಥಿವ್ಯಾಸ್ತೇ ಭೋಕ್ತುಂ ಸಾಮರ್ಥ್ಯಸಾಧನಾಃ।
07061031c ತೇಷಾಮಪಿ ಸಮುದ್ರಾಂತಾ ಪಿತೃಪೈತಾಮಹೀ ಮಹೀ।।
ಅವರು ಈ ಪೃಥ್ವಿಯನ್ನು ಭೋಗಿಸಲು ಸಾಮರ್ಥ್ಯರಾಗಿದ್ದಾರೆ ಮತ್ತು ಅವರಲ್ಲಿ ಇದಕ್ಕೆ ಸಾಧನವೂ ಇದೆ. ಸಮುದ್ರಾಂತವಾಗಿರುವ ಈ ಭೂಮಿಯು ಅವರ ಪಿತೃ-ಪಿತಾಮಹರದ್ದೂ ಹೌದು.
07061032a ನಿಯುಜ್ಯಮಾನಾಃ ಸ್ಥಾಸ್ಯಂತಿ ಪಾಂಡವಾ ಧರ್ಮವರ್ತ್ಮನಿ।
07061032c ಸಂತಿ ನೋ ಜ್ಞಾತಯಸ್ತಾತ ಯೇಷಾಂ ಶ್ರೋಷ್ಯಂತಿ ಪಾಂಡವಾಃ।।
ಅಯ್ಯಾ! ನಿಯೋಜಿಸಿದ ಕೆಲಸಗಳನ್ನು ಪಾಂಡವರು ಮಾಡಿ ಧರ್ಮದಲ್ಲಿಯೇ ನಡೆದುಕೊಳ್ಳುತ್ತಾರೆ. ನನಗಿದ್ದ ಜ್ಞಾತಿಬಾಂಧವರನ್ನು ಕೂಡ ಪಾಂಡವರು ಕೇಳುತ್ತಾರೆ.
07061033a ಶಲ್ಯಸ್ಯ ಸೋಮದತ್ತಸ್ಯ ಭೀಷ್ಮಸ್ಯ ಚ ಮಹಾತ್ಮನಃ।
07061033c ದ್ರೋಣಸ್ಯಾಥ ವಿಕರ್ಣಸ್ಯ ಬಾಹ್ಲಿಕಸ್ಯ ಕೃಪಸ್ಯ ಚ।।
07061034a ಅನ್ಯೇಷಾಂ ಚೈವ ವೃದ್ಧಾನಾಂ ಭರತಾನಾಂ ಮಹಾತ್ಮನಾಂ।
07061034c ತ್ವದರ್ಥಂ ಬ್ರುವತಾಂ ತಾತ ಕರಿಷ್ಯಂತಿ ವಚೋ ಹಿತಂ।।
ಅಯ್ಯಾ! ಶಲ್ಯ, ಸೋಮದತ್ತ, ಮಹಾತ್ಮ ಭೀಷ್ಮ, ದ್ರೋಣ, ವಿಕರ್ಣ, ಬಾಹ್ಲಿಕ, ಕೃಪ ಮತ್ತು ಇತರ ಮಹಾತ್ಮಾ ಭಾರತ ವೃದ್ಧರ, ಅವರ ಒಳಿತಿಗಾಗಿ ಹೇಳುವ ಹಿತ ವಚನಗಳಂತೆಯೇ ಮಾಡುತ್ತಾರೆ.
07061035a ಕಂ ವಾ ತ್ವಂ ಮನ್ಯಸೇ ತೇಷಾಂ ಯಸ್ತ್ವಾ ಬ್ರೂಯಾದತೋಽನ್ಯಥಾ।
07061035c ಕೃಷ್ಣೋ ನ ಧರ್ಮಂ ಸಂಜಹ್ಯಾತ್ಸರ್ವೇ ತೇ ಚ ತ್ವದನ್ವಯಾಃ।।
ನಾನು ಹೇಳಿದುದಕ್ಕೆ ವಿರೋಧವಾಗಿ ಹೇಳುವ ಬೇರೆ ಯಾರನ್ನಾದರೂ ನೀನು ಕೇಳಿದ್ದೀಯಾ? ಇಲ್ಲವೇ ಇಲ್ಲ. ಏಕೆಂದರೆ ಅವರೆಲ್ಲರೂ ಧರ್ಮದಲ್ಲಿಯೇ ನಡೆಯುವ ಕೃಷ್ಣನನ್ನು ಅನುಸರಿಸುತ್ತಾರೆ.
07061036a ಮಯಾಪಿ ಚೋಕ್ತಾಸ್ತೇ ವೀರಾ ವಚನಂ ಧರ್ಮಸಂಹಿತಂ।
07061036c ನಾನ್ಯಥಾ ಪ್ರಕರಿಷ್ಯಂತಿ ಧರ್ಮಾತ್ಮಾನೋ ಹಿ ಪಾಂಡವಾಃ।।
ಧರ್ಮಯುಕ್ತವಾದ ಮಾತನ್ನು ನಾನೇ ಹೇಳಿದರೂ ಆ ವೀರರು ನನ್ನ ಮಾತನ್ನು ಖಂಡಿತವಾಗಿ ತಿರಸ್ಕರಿಸುವುದಿಲ್ಲ. ಏಕೆಂದರೆ ಪಾಂಡವರು ಧರ್ಮಾತ್ಮರು.
07061037a ಇತ್ಯಹಂ ವಿಲಪನ್ಸೂತ ಬಹುಶಃ ಪುತ್ರಮುಕ್ತವಾನ್।
07061037c ನ ಚ ಮೇ ಶ್ರುತವಾನ್ಮೂಢೋ ಮನ್ಯೇ ಕಾಲಸ್ಯ ಪರ್ಯಯಂ।।
ಸೂತ! ಹೀಗೆ ನಾನು ವಿಲಪಿಸುತ್ತಾ ಮಗನಿಗೆ ಬಹಳಷ್ಟನ್ನು ಹೇಳಿದ್ದೆನು. ಆದರೆ ಆ ಮೂಢನು ನನ್ನನ್ನು ಕೇಳಿಸಿಕೊಳ್ಳಲಿಲ್ಲ. ಇದು ಕಾಲದ ವೈಪರೀತ್ಯವೆಂದೇ ಭಾವಿಸುತ್ತೇನೆ.
07061038a ವೃಕೋದರಾರ್ಜುನೌ ಯತ್ರ ವೃಷ್ಣಿವೀರಶ್ಚ ಸಾತ್ಯಕಿಃ।
07061038c ಉತ್ತಮೌಜಾಶ್ಚ ಪಾಂಚಾಲ್ಯೋ ಯುಧಾಮನ್ಯುಶ್ಚ ದುರ್ಜಯಃ।।
07061039a ಧೃಷ್ಟದ್ಯುಮ್ನಶ್ಚ ದುರ್ಧರ್ಷಃ ಶಿಖಂಡೀ ಚಾಪರಾಜಿತಃ।
07061039c ಅಶ್ಮಕಾಃ ಕೇಕಯಾಶ್ಚೈವ ಕ್ಷತ್ರಧರ್ಮಾ ಚ ಸೌಮಕಿಃ।।
07061040a ಚೈದ್ಯಶ್ಚ ಚೇಕಿತಾನಶ್ಚ ಪುತ್ರಃ ಕಾಶ್ಯಸ್ಯ ಚಾಭಿಭುಃ।
07061040c ದ್ರೌಪದೇಯಾ ವಿರಾಟಶ್ಚ ದ್ರುಪದಶ್ಚ ಮಹಾರಥಃ।
07061040e ಯಮೌ ಚ ಪುರುಷವ್ಯಾಘ್ರೌ ಮಂತ್ರೀ ಚ ಮಧುಸೂದನಃ।।
07061041a ಕ ಏತಾಂ ಜಾತು ಯುಧ್ಯೇತ ಲೋಕೇಽಸ್ಮಿನ್ವೈ ಜಿಜೀವಿಷುಃ।
ಎಲ್ಲಿ ವೃಕೋದರ-ಅರ್ಜುನರು, ವೃಷ್ಣಿವೀರ ಸಾತ್ಯಕಿ, ಪಾಂಚಾಲ್ಯ ಉತ್ತಮೌಜ, ದುರ್ಜಯ ಯುಧಾಮನ್ಯು, ದುರ್ಧರ್ಷ ಧೃಷ್ಟದ್ಯುಮ್ನ, ಅಪರಾಜಿತ ಶಿಖಂಡೀ, ಅಶ್ಮಕರು, ಕೇಕಯರು, ಕ್ಷತ್ರಧರ್ಮ, ಸೌಮಕಿ, ಚೈದ್ಯ, ಚೇಕಿತಾನ, ಕಾಶ್ಯನ ಮಗ ಅಭಿಭು, ದ್ರೌಪದೇಯರು, ವಿರಾಟ, ಮಹಾರಥ ದ್ರುಪದ, ಪುರುಷವ್ಯಾಘ್ರರಾದ ಯಮಳರು, ಮತ್ತು ಮಂತ್ರಿ ಮಧುಸೂದನರಿರುವರೋ ಅವರೊಡನೆ ಈ ಲೋಕದಲ್ಲಿ ಜೀವಿಸ ಬಯಸುವ ಯಾರುತಾನೇ ಯುದ್ಧಮಾಡಿಯಾರು?
07061041c ದಿವ್ಯಮಸ್ತ್ರಂ ವಿಕುರ್ವಾಣಾನ್ಸಂಹರೇಯುರರಿಂದಮಾಃ।।
07061042a ಅನ್ಯೋ ದುರ್ಯೋಧನಾತ್ಕರ್ಣಾಚ್ಚಕುನೇಶ್ಚಾಪಿ ಸೌಬಲಾತ್।
07061042c ದುಃಶಾಸನಚತುರ್ಥಾನಾಂ ನಾನ್ಯಂ ಪಶ್ಯಾಮಿ ಪಂಚಮಂ।।
ದಿವ್ಯಾಸ್ತ್ರಗಳನ್ನು ಪ್ರಯೋಗಿಸಿ ಸಂಹರಿಸುವ ಈ ಅರಿಂದಮರನ್ನು ಎದುರಿಸಲು ದುರ್ಯೋಧನ, ಕರ್ಣ, ಶಕುನಿ ಸೌಬಲ ಮತ್ತು ದುಃಶಾಸನ ಈ ನಾಲ್ಕುಮಂದಿಯನ್ನು ಬಿಟ್ಟು ಬೇರೆ ಯಾವ ಐದನೆಯವನನ್ನೂ ನಾನು ಕಾಣೆನು.
07061043a ಯೇಷಾಮಭೀಶುಹಸ್ತಃ ಸ್ಯಾದ್ವಿಷ್ವಕ್ಸೇನೋ ರಥೇ ಸ್ಥಿತಃ।
07061043c ಸನ್ನದ್ಧಶ್ಚಾರ್ಜುನೋ ಯೋದ್ಧಾ ತೇಷಾಂ ನಾಸ್ತಿ ಪರಾಜಯಃ।।
ಯಾರಕಡೆ ವಿಷ್ವಕ್ಸೇನನೇ ಚಾವಟಿಯನ್ನು ಹಿಡಿದು ರಥದಲ್ಲಿರುವನೋ, ಯಾರ ಯೋಧನು ಸನ್ನದ್ಧನಾದ ಅರ್ಜುನನೋ ಅವರಿಗೆ ಪರಾಜಯವೆನ್ನುವುದು ಇಲ್ಲ.
07061044a ತೇಷಾಂ ಮಮ ವಿಲಾಪಾನಾಂ ನ ಹಿ ದುರ್ಯೋಧನಃ ಸ್ಮರೇತ್।
07061044c ಹತೌ ಹಿ ಪುರುಷವ್ಯಾಘ್ರೌ ಭೀಷ್ಮದ್ರೋಣೌ ತ್ವಮಾತ್ಥ ಮೇ।।
ಆ ನನ್ನ ವಿಲಾಪಗಳು ದುರ್ಯೋಧನನಿಗೆ ನೆನಪೂ ಇಲ್ಲ. ಪುರುಷವ್ಯಾಘ್ರರಾದ ಭೀಷ್ಮ-ದ್ರೋಣರು ಹತರಾದರೆಂದು ನನಗೆ ಹೇಳಿದೆ.
07061045a ತೇಷಾಂ ವಿದುರವಾಕ್ಯಾನಾಮುಕ್ತಾನಾಂ ದೀರ್ಘದರ್ಶಿನಾಂ।
07061045c ದೃಷ್ಟ್ವೇಮಾಂ ಫಲನಿರ್ವೃತ್ತಿಂ ಮನ್ಯೇ ಶೋಚಂತಿ ಪುತ್ರಕಾಃ।।
ದೂರದೃಷ್ಟಿಯ ವಿದುರನು ಹೇಳಿದ ಆ ಮಾತುಗಳು ಫಲವನ್ನು ನೀಡುತ್ತಿರುವುದನ್ನು ಕಂಡು ನನ್ನ ಮಕ್ಕಳು ಶೋಕಿಸುತ್ತಿರಬಹುದೆಂದು ಅನಿಸುತ್ತಿದೆ.
07061046a ಹಿಮಾತ್ಯಯೇ ಯಥಾ ಕಕ್ಷಂ ಶುಷ್ಕಂ ವಾತೇರಿತೋ ಮಹಾನ್।
07061046c ಅಗ್ನಿರ್ದಹೇತ್ತಥಾ ಸೇನಾಂ ಮಾಮಿಕಾಂ ಸ ಧನಂಜಯಃ।।
ಛಳಿಗಾಲದ ಕೊನೆಯಲ್ಲಿ ಒಣಗಿದ ಹುಲ್ಲುರಾಶಿಯನ್ನು ಭಿರುಗಾಳಿಯ ಸಹಾಯದಿಂದ ಅಗ್ನಿಯು ಹೇಗೆ ದಹಿಸುತ್ತಾನೋ ಹಾಗೆ ಆ ಧನಂಜಯನು ನನ್ನ ಸೇನೆಯನ್ನು ದಹಿಸುತ್ತಿದ್ದಾನೆ.
07061047a ಆಚಕ್ಷ್ವ ತದ್ಧಿ ನಃ ಸರ್ವಂ ಕುಶಲೋ ಹ್ಯಸಿ ಸಂಜಯ।
07061047c ಯದುಪಾಯಾತ್ತು ಸಾಯಾಹ್ನೇ ಕೃತ್ವಾ ಪಾರ್ಥಸ್ಯ ಕಿಲ್ಬಿಷಂ।
07061047e ಅಭಿಮನ್ಯೌ ಹತೇ ತಾತ ಕಥಮಾಸೀನ್ ಮನೋ ಹಿ ವಃ।।
ಸಂಜಯ! ನೀನು ಕುಶಲನಾಗಿದ್ದೀಯೆ. ಅಲ್ಲಿ ನಡೆದುದೆಲ್ಲವನ್ನೂ ನನಗೆ ಹೇಳು. ಆ ಸಾಯಂಕಾಲ ಪಾರ್ಥನಿಗೆ ದುಃಖವನ್ನು ಕೊಟ್ಟು ಏನಾಯಿತು? ಅಯ್ಯಾ! ಅಭಿಮನ್ಯುವು ಹತನಾದ ನಂತರ ನಿನ್ನ ಮನಸ್ಸು ಹೇಗಿದ್ದಿತು?
07061048a ನ ಜಾತು ತಸ್ಯ ಕರ್ಮಾಣಿ ಯುಧಿ ಗಾಂಡೀವಧನ್ವನಃ।
07061048c ಅಪಕೃತ್ವಾ ಮಹತ್ತಾತ ಸೋಢುಂ ಶಕ್ಷ್ಯಂತಿ ಮಾಮಕಾಃ।।
ಅಯ್ಯಾ! ಗಾಂಡೀವಧನ್ವಿಯನ್ನು ಅಪಮಾನಿಸಿ ನನ್ನವರು ಯುದ್ಧದಲ್ಲಿ ಅವನ ಮಹಾ ಕರ್ಮಗಳನ್ನು ತಡೆದುಕೊಳ್ಳಲು ಶಕ್ಯರಾಗಿಲ್ಲ.
07061049a ಕಿಂ ನು ದುರ್ಯೋಧನಃ ಕೃತ್ಯಂ ಕರ್ಣಃ ಕೃತ್ಯಂ ಕಿಮಬ್ರವೀತ್।
07061049c ದುಃಶಾಸನಃ ಸೌಬಲಶ್ಚ ತೇಷಾಮೇವಂ ಗತೇ ಅಪಿ।
07061049e ಸರ್ವೇಷಾಂ ಸಮವೇತಾನಾಂ ಪುತ್ರಾಣಾಂ ಮಮ ಸಂಜಯ।।
ದುರ್ಯೋಧನನು ಏನು ಮಾಡಿದನು? ಕರ್ಣನು ಏನು ಹೇಳಿ ಮಾಡಿದನು? ದುಃಶಾಸನ ಮತ್ತು ಸೌಬಲರು ಏನು ಮಾಡಿದರು? ಅಲ್ಲಿ ಸೇರಿದ್ದ ನನ್ನ ಪುತ್ರರೆಲ್ಲರೂ ಏನು ಮಾಡಿದರು?
07061050a ಯದ್ವೃತ್ತಂ ತಾತ ಸಂಗ್ರಾಮೇ ಮಂದಸ್ಯಾಪನಯೈರ್ಭೃಶಂ।
07061050c ಲೋಭಾನುಗತದುರ್ಬುದ್ಧೇಃ ಕ್ರೋಧೇನ ವಿಕೃತಾತ್ಮನಃ।।
07061051a ರಾಜ್ಯಕಾಮಸ್ಯ ಮೂಢಸ್ಯ ರಾಗೋಪಹತಚೇತಸಃ।
07061051c ದುರ್ನೀತಂ ವಾ ಸುನೀತಂ ವಾ ತನ್ಮಮಾಚಕ್ಷ್ವ ಸಂಜಯ।।
ಅಯ್ಯಾ ಸಂಜಯ! ಸಂಗ್ರಾಮದಲ್ಲಿ ಆ ಮಂದಬುದ್ಧಿ, ತುಂಬಾ ಅನ್ಯಾಯಗಳನ್ನು ಮಾಡಿರುವ, ಲೋಭಿ, ದುರ್ಬುದ್ಧಿ, ಕ್ರೋಧದಿಂದ ಮನಸ್ಸನ್ನು ವಿಕಾರಮಾಡಿಕೊಂಡಿರುವ, ರಾಜ್ಯಕಾಮಿ, ಮೂಢ, ಆಸೆಯಿಂದ ಚೇತನವನ್ನೇ ಕಳೆದುಕೊಂಡಿರುವ ಅವನು ಏನನ್ನು - ಸರಿಯಾಗಿರಲಿ ಅಥವಾ ತಪ್ಪಾಗಿರಲಿ – ಮಾಡಿದನು ಎಂದು ನನಗೆ ಹೇಳು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಧೃತರಾಷ್ಟ್ರವಾಕ್ಯೇ ಏಕಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಧೃತರಾಷ್ಟ್ರವಾಕ್ಯ ಎನ್ನುವ ಅರವತ್ತೊಂದನೇ ಅಧ್ಯಾಯವು.