ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಪ್ರತಿಜ್ಞಾ ಪರ್ವ
ಅಧ್ಯಾಯ 60
ಸಾರ
ಹದಿನಾಲ್ಕನೇ ದಿನದ ಬೆಳಿಗ್ಗೆ ಅರ್ಜುನನು ಯುದ್ಧಕ್ಕೆ ಹೊರಟಿದುದು (1-25). ಯುಧಿಷ್ಠಿರನನ್ನು ರಕ್ಷಿಸಬೇಕೆಂದೂ ಯಾವುದೇ ಕಾರಣಕ್ಕಾಗಿ ತನ್ನ ಸಹಾಯಕ್ಕೆ ಬರಕೂಡದೆಂದೂ ಅರ್ಜುನನು ಸಾತ್ಯಕಿಗೆ ಹೇಳಿದುದು (26-34).
07060001 ಸಂಜಯ ಉವಾಚ।
07060001a ತಥಾ ಸಂಭಾಷತಾಂ ತೇಷಾಂ ಪ್ರಾದುರಾಸೀದ್ಧನಂಜಯಃ।
07060001c ದಿದೃಕ್ಷುರ್ಭರತಶ್ರೇಷ್ಠಂ ರಾಜಾನಂ ಸಸುಹೃದ್ಗಣಂ।।
ಸಂಜಯನು ಹೇಳಿದನು: “ಅವರು ಹೀಗೆ ಮಾತನಾಡಿಕೊಳ್ಳುತ್ತಿರಲು ಸುಹೃದ್ಗಣಗಳೊಂದಿಗಿದ್ದ ರಾಜ ಭರತಶ್ರೇಷ್ಠನನ್ನು ಕಾಣಲು ಅರ್ಜುನನು ಆಗಮಿಸಿದನು.
07060002a ತಂ ಪ್ರವಿಷ್ಟಂ ಶುಭಾಂ ಕಕ್ಷ್ಯಾಮಭಿವಾದ್ಯಾಗ್ರತಃ ಸ್ಥಿತಂ।
07060002c ಸಮುತ್ಥಾಯಾರ್ಜುನಂ ಪ್ರೇಮ್ಣಾ ಸಸ್ವಜೇ ಪಾಂಡವರ್ಷಭಃ।।
ಆ ಶುಭ ಕ್ಷಕ್ಷೆಯನ್ನು ಪ್ರವೇಶಿಸಿ ಎದಿರು ನಮಸ್ಕರಿಸಿ ನಿಂತಿದ್ದ ಅರ್ಜುನನನ್ನು ಪಾಂಡವರ್ಷಭನು ಪ್ರೇಮದಿಂದ ಮೇಲೆತ್ತಿ ಅಪ್ಪಿಕೊಂಡನು.
07060003a ಮೂರ್ಧ್ನಿ ಚೈನಮುಪಾಘ್ರಾಯ ಪರಿಷ್ವಜ್ಯ ಚ ಬಾಹುನಾ।
07060003c ಆಶಿಷಃ ಪರಮಾಃ ಪ್ರೋಚ್ಯ ಸ್ಮಯಮಾನೋಽಭ್ಯಭಾಷತ।।
ನೆತ್ತಿಯನ್ನು ಆಘ್ರಾಣಿಸಿ, ಬಾಹುಗಳಿಂದ ಬಿಗಿದಪ್ಪಿ, ಪರಮ ಆಶೀರ್ವಚನವನ್ನು ಹೇಳಿ ನಸುನಗುತ್ತಾ ಹೇಳಿದನು:
07060004a ವ್ಯಕ್ತಮರ್ಜುನ ಸಂಗ್ರಾಮೇ ಧ್ರುವಸ್ತೇ ವಿಜಯೋ ಮಹಾನ್।
07060004c ಯಾದೃಗ್ರೂಪಾ ಹಿ ತೇ ಚಾಯಾ ಪ್ರಸನ್ನಶ್ಚ ಜನಾರ್ದನಃ।।
“ಅರ್ಜುನ! ಇಂದಿನ ಮಹಾ ಸಂಗ್ರಾಮದಲ್ಲಿ ನಿನ್ನ ವಿಜಯವು ನಿಶ್ಚಯ. ಅದನ್ನು ಸೂಚಿಸುವಂತೆ ನಿನ್ನ ರೂಪದಲ್ಲಿ ಕಾಂತಿಯಿದೆ ಮತ್ತು ಜನಾರ್ದನನೂ ಪ್ರಸನ್ನನಾಗಿದ್ದಾನೆ.”
07060005a ತಮಬ್ರವೀತ್ತತೋ ಜಿಷ್ಣುರ್ಮಹದಾಶ್ಚರ್ಯಮುತ್ತಮಂ।
07060005c ದೃಷ್ಟವಾನಸ್ಮಿ ಭದ್ರಂ ತೇ ಕೇಶವಸ್ಯ ಪ್ರಸಾದಜಂ।।
ಅವನಿಗೆ ಜಿಷ್ಣುವು ಹೇಳಿದನು: “ನಿನಗೆ ಮಂಗಳವಾಗಲಿ. ಕೇಶವನ ಪ್ರಸಾದದಿಂದುಂಟಾದ ಒಂದು ಉತ್ತಮ ಮಹದಾಶ್ಚರ್ಯವನ್ನು ನೋಡಿದೆನು!”
07060006a ತತಸ್ತತ್ಕಥಯಾಮಾಸ ಯಥಾದೃಷ್ಟಂ ಧನಂಜಯಃ।
07060006c ಆಶ್ವಾಸನಾರ್ಥಂ ಸುಹೃದಾಂ ತ್ರ್ಯಂಬಕೇನ ಸಮಾಗಮಂ।।
ಆಗ ಧನಂಜಯನು ಸುಹೃದರಿಗೆ ಆಶ್ವಾಸನೆಯನ್ನು ನೀಡಲೋಸುಗ ತ್ರ್ಯಂಬಕನೊಂದಿಗಿನ ಸಮಾಗಮವನ್ನು ಕಂಡಹಾಗೆ ವರ್ಣಿಸಿ ಹೇಳಿದನು.
07060007a ತತಃ ಶಿರೋಭಿರವನಿಂ ಸ್ಪೃಷ್ಟ್ವಾ ಸರ್ವೇ ಚ ವಿಸ್ಮಿತಾಃ।
07060007c ನಮಸ್ಕೃತ್ಯ ವೃಷಾಂಕಾಯ ಸಾಧು ಸಾಧ್ವಿತ್ಯಥಾಬ್ರುವನ್।।
ಆಗ ಎಲ್ಲರೂ ವಿಸ್ಮಿತರಾಗಿ ಶಿರದಿಂದ ನೆಲವನ್ನು ಮುಟ್ಟಿ ವೃಷಾಂಕನನ್ನು ನಮಸ್ಕರಿಸಿ “ಸಾಧು! ಸಾಧು!” ಎಂದರು.
07060008a ಅನುಜ್ಞಾತಾಸ್ತತಃ ಸರ್ವೇ ಸುಹೃದೋ ಧರ್ಮಸೂನುನಾ।
07060008c ತ್ವರಮಾಣಾಃ ಸುಸನ್ನದ್ಧಾ ಹೃಷ್ಟಾ ಯುದ್ಧಾಯ ನಿರ್ಯಯುಃ।।
ಅನಂತರ ಎಲ್ಲ ಸುಹೃದರೂ ಧರ್ಮಸೂನುವಿನ ಅಪ್ಪಣೆಯನ್ನು ಪಡೆದು ಹೃಷ್ಟರಾಗಿ, ತ್ವರೆಮಾಡಿ ಸುಸನ್ನದ್ಧರಾಗಿ ಯುದ್ಧಕ್ಕೆ ಹೊರಟರು.
07060009a ಅಭಿವಾದ್ಯ ತು ರಾಜಾನಂ ಯುಯುಧಾನಾಚ್ಯುತಾರ್ಜುನಾಃ।
07060009c ಹೃಷ್ಟಾ ವಿನಿರ್ಯಯುಸ್ತೇ ವೈ ಯುಧಿಷ್ಠಿರನಿವೇಶನಾತ್।।
ರಾಜನನ್ನು ಅಭಿವಂದಿಸಿ ಯುಯುಧಾನ, ಅಚ್ಯುತ, ಅರ್ಜುನರೂ ಯುಧಿಷ್ಠಿರನ ನಿವೇಶನದಿಂದ ಹೃಷ್ಟರಾಗಿ ಹೊರಟರು.
07060010a ರಥೇನೈಕೇನ ದುರ್ಧರ್ಷೌ ಯುಯುಧಾನಜನಾರ್ದನೌ।
07060010c ಜಗ್ಮತುಃ ಸಹಿತೌ ವೀರಾವರ್ಜುನಸ್ಯ ನಿವೇಶನಂ।।
ಒಂದೇ ರಥದಲ್ಲಿ ದುರ್ಧರ್ಷರಾದ ಯುಯುಧಾನ-ಜನಾರ್ದನರು ಒಟ್ಟಿಗೇ ವೀರ ಅರ್ಜುನನ ನಿವೇಶನಕ್ಕೆ ಹೋದರು.
07060011a ತತ್ರ ಗತ್ವಾ ಹೃಷೀಕೇಶಃ ಕಲ್ಪಯಾಮಾಸ ಸೂತವತ್।
07060011c ರಥಂ ರಥವರಸ್ಯಾಜೌ ವಾನರರ್ಷಭಲಕ್ಷಣಂ।।
ಅಲ್ಲಿಗೆ ಹೋಗಿ ಹೃಷೀಕೇಶನು ಸೂತನಂತೆ ರಥವರನ ವಾನರರ್ಷಭಧ್ವಜವುಳ್ಳ ರಥವನ್ನು ಸಜ್ಜುಗೊಳಿಸಿದನು.
07060012a ಸ ಮೇಘಸಮನಿರ್ಘೋಷಸ್ತಪ್ತಕಾಂಚನಸಪ್ರಭಃ।
07060012c ಬಭೌ ರಥವರಃ ಕ್ಲಪ್ತಃ ಶಿಶುರ್ದಿವಸಕೃದ್ಯಥಾ।।
ಮೇಘಸಮ ನಿರ್ಘೋಷವುಳ್ಳ, ಪುಟವಿಟ್ಟ ಕಾಂಚನದ ಪ್ರಭೆಯುಳ್ಳ ಆ ರಥವು ಬೆಳಗಿನ ಸೂರ್ಯನಂತೆ ಪ್ರಕಾಶಮಾನವಾಗಿ ಕಾಣುತ್ತಿತ್ತು.
07060013a ತತಃ ಪುರುಷಶಾರ್ದೂಲಃ ಸಜ್ಜಃ ಸಜ್ಜಂ ಪುರಃಸರಃ।
07060013c ಕೃತಾಹ್ನಿಕಾಯ ಪಾರ್ಥಾಯ ನ್ಯವೇದಯತ ತಂ ರಥಂ।।
ಆಗ ಸುಸಜ್ಜಿತರಲ್ಲಿ ಶ್ರೇಷ್ಠನಾದ ಪುರುಷ ಶಾರ್ದೂಲನು ಆಹ್ನೀಕವನ್ನು ಮಾಡಿ ರಥವನ್ನು ಪಾರ್ಥನಿಗೆ ನಿವೇದಿಸಿದನು.
07060014a ತಂ ತು ಲೋಕೇ ವರಃ ಪುಂಸಾಂ ಕಿರೀಟೀ ಹೇಮವರ್ಮಭೃತ್।
07060014c ಬಾಣಬಾಣಾಸನೀ ವಾಹಂ ಪ್ರದಕ್ಷಿಣಮವರ್ತತ।।
ಲೋಕದಲ್ಲಿ ಪುರುಷಶ್ರೇಷ್ಠ ಕಿರೀಟಿಯು ಬಂಗಾರದ ಕವಚವನ್ನು ತೊಟ್ಟು, ಧನುರ್ಬಾಣಗಳನ್ನು ಹಿಡಿದು, ರಥವನ್ನು ಪ್ರದಕ್ಷಿಣೆ ಮಾಡಿದನು.
07060015a ತತೋ ವಿದ್ಯಾವಯೋವೃದ್ಧೈಃ ಕ್ರಿಯಾವದ್ಭಿರ್ಜಿತೇಂದ್ರಿಯೈಃ।
07060015c ಸ್ತೂಯಮಾನೋ ಜಯಾಶೀಭಿರಾರುರೋಹ ಮಹಾರಥಂ।।
ಅನಂತರ ವಿದ್ಯೆ-ವಯಸ್ಸು-ಕ್ರಿಯೆಗಳಲ್ಲಿ ವೃದ್ಧ ಜಿತೇಂದ್ರಿಯರು ಜಯವನ್ನು ಆಶಿಸಿ ಸ್ತುತಿಸುತ್ತಿರಲು ಅವನು ಆ ಮಹಾರಥವನ್ನೇರಿದನು.
07060016a ಜೈತ್ರೈಃ ಸಾಂಗ್ರಾಮಿಕೈರ್ಮಂತ್ರೈಃ ಪೂರ್ವಮೇವ ರಥೋತ್ತಮಂ।
07060016c ಅಭಿಮಂತ್ರಿತಮರ್ಚಿಷ್ಮಾನುದಯಂ ಭಾಸ್ಕರೋ ಯಥಾ।।
ಮೊದಲೇ ವಿಜಯ ಸಾಧಕವಾದ ಯುದ್ಧಸಂಬಂಧ ಮಂತ್ರಗಳಿಂದ ಅಭಿಮಂತ್ರಿಸಲ್ಪಟ್ಟಿದ್ದ ಆ ಉತ್ತಮ ರಥವನ್ನೇರಿ ಅವನು ಉದಯಿಸುತ್ತಿರುವ ಭಾಸ್ಕರನಂತೆ ಪ್ರಕಾಶಿಸುತ್ತಿದ್ದನು.
07060017a ಸ ರಥೇ ರಥಿನಾಂ ಶ್ರೇಷ್ಠಃ ಕಾಂಚನೇ ಕಾಂಚನಾವೃತಃ।
07060017c ವಿಬಭೌ ವಿಮಲೋಽರ್ಚಿಷ್ಮಾನ್ಮೇರಾವಿವ ದಿವಾಕರಃ।।
ಆ ಕಾಂಚನ ರಥದಲ್ಲಿ ಕಾಂಚನದಿಂದ ಆವೃತನಾಗಿದ್ದ ಆ ರಥಿಗಳಲ್ಲಿ ಶ್ರೇಷ್ಠನು ಮೇರು ಪರ್ವತವನ್ನೇರಿದ ವಿಮಲ, ಅರ್ಚಿಷ್ಮಾನ್ ದಿವಾಕರನಂತೆ ಹೊಳೆಯುತ್ತಿದ್ದನು.
07060018a ಅನ್ವಾರುರೋಹತುಃ ಪಾರ್ಥಂ ಯುಯುಧಾನಜನಾರ್ದನೌ।
07060018c ಶರ್ಯಾತೇರ್ಯಜ್ಞಮಾಯಾಂತಂ ಯಥೇಂದ್ರಂ ದೇವಮಶ್ವಿನೌ।।
ಶರ್ಯಾತಿಯ ಯಜ್ಞಕ್ಕೆ ಹೋಗುತ್ತಿದ್ದ ಇಂದ್ರನನ್ನು ಅಶ್ವಿನೀ ದೇವತೆಗಳು ಅನುಸರಿಸಿ ಹೋಗುತ್ತಿದ್ದಂತೆ ಯುಯುಧಾನ-ಜನಾರ್ದನರಿಬ್ಬರೂ ಪಾರ್ಥನನ್ನು ಅನುಸರಿಸಿ ರಥಾರೋಹಣ ಮಾಡಿದರು.
07060019a ಅಥ ಜಗ್ರಾಹ ಗೋವಿಂದೋ ರಶ್ಮೀನ್ರಶ್ಮಿವತಾಂ ವರಃ।
07060019c ಮಾತಲಿರ್ವಾಸವಸ್ಯೇವ ವೃತ್ರಂ ಹಂತುಂ ಪ್ರಯಾಸ್ಯತಃ।।
ಆಗ ವೃತ್ರನ ಸಂಹಾರಕ್ಕೆ ವಾಸವನು ಹೊರಡುವಾಗ ಮಾತಲಿಯು ಹೇಗೋ ಹಾಗೆ ಕಡಿವಾಣಗಳನ್ನು ಹಿಡಿಯುವವರಲ್ಲಿ ಶ್ರೇಷ್ಠ ಗೋವಿಂದನು ಕಡಿವಾಣಗಳನ್ನು ಹಿಡಿದನು.
07060020a ಸ ತಾಭ್ಯಾಂ ಸಹಿತಃ ಪಾರ್ಥೋ ರಥಪ್ರವರಮಾಸ್ಥಿತಃ।
07060020c ಸಹಿತೋ ಬುಧಶುಕ್ರಾಭ್ಯಾಂ ತಮೋ ನಿಘ್ನನ್ಯಥಾ ಶಶೀ।।
ಅಂಧಕಾರವನ್ನು ನಾಶಗೊಳಿಸಲು ಬುಧ ಮತ್ತು ಶುಕ್ರರ ಜೊತೆಗೂಡಿ ಹೊರಟ ಶಶಿಯಂತೆ ಪಾರ್ಥನು ಅವರಿಬ್ಬರೊಡನೆ ಪ್ರವರ ರಥದಲ್ಲಿ ಕುಳಿತಿದ್ದನು.
07060021a ಸೈಂಧವಸ್ಯ ವಧಪ್ರೇಪ್ಸುಃ ಪ್ರಯಾತಃ ಶತ್ರುಪೂಗಹಾ।
07060021c ಸಹಾಂಬುಪತಿಮಿತ್ರಾಭ್ಯಾಂ ಯಥೇಂದ್ರಸ್ತಾರಕಾಮಯೇ।।
ತಾರಕಾಸುರನ ವಧೆಗೆ ಮಿತ್ರಾವರುಣರೊಡನೆ ಇಂದ್ರನು ಹೊರಟಂತೆ ಸೈಂಧವನನ್ನು ವಧಿಸಲು ಬಯಸಿ ಆ ಶತ್ರುಸೇನಾನಾಶಕನು ಹೊರಟನು.
07060022a ತತೋ ವಾದಿತ್ರನಿರ್ಘೋಷೈರ್ಮಂಗಲ್ಯೈಶ್ಚ ಸ್ತವೈಃ ಶುಭೈಃ।
07060022c ಪ್ರಯಾಂತಮರ್ಜುನಂ ಸೂತಾ ಮಾಗಧಾಶ್ಚೈವ ತುಷ್ಟುವುಃ।।
ಹೊರಟಿರುವ ಅರ್ಜುನನನ್ನು ವಾದ್ಯನಿರ್ಘೋಷಗಳಿಂದ, ಮಂಗಲ ಶುಭ ಸ್ತವಗಳಿಂದ ಸೂತ ಮಾಗಧರು ಸಂತೋಷಗೊಳಿಸಿದರು.
07060023a ಸಜಯಾಶೀಃ ಸಪುಣ್ಯಾಹಃ ಸೂತಮಾಗಧನಿಸ್ವನಃ।
07060023c ಯುಕ್ತೋ ವಾದಿತ್ರಘೋಷೇಣ ತೇಷಾಂ ರತಿಕರೋಽಭವತ್।।
ಜಯದ ಆಶೀರ್ವಾದಗಳು, ಪುಣ್ಯಾಹ ವಾಚನಗಳು, ಸೂತಮಾಗಧರ ಸ್ತುತಿಗಳೊಂದಿಗೆ ವಾದ್ಯಘೋಷಗಳು ಸೇರಿ ಅವರನ್ನು ರಮಿಸಿದವು.
07060024a ತಮನುಪ್ರಯತೋ ವಾಯುಃ ಪುಣ್ಯಗಂಧವಹಃ ಶುಚಿಃ।
07060024c ವವೌ ಸಂಹರ್ಷಯನ್ಪಾರ್ಥಂ ದ್ವಿಷತಶ್ಚಾಪಿ ಶೋಷಯನ್।।
ಅವನು ಹೊರಟಾಗ ಪುಣ್ಯಗಂಧವನ್ನು ಹೊತ್ತ ಶುಚಿ ಗಾಳಿಯು ಹಿಂದಿನಿಂದ ಅವನು ಹೊರಟ ದಿಕ್ಕಿನಲ್ಲಿ, ಪಾರ್ಥನನ್ನು ಹರ್ಷಗೊಳಿಸುತ್ತ ಮತ್ತು ಶತ್ರುಗಳನ್ನು ಶೋಷಿಸುತ್ತಾ ಬೀಸುತ್ತಿತ್ತು.
07060025a ಪ್ರಾದುರಾಸನ್ನಿಮಿತ್ತಾನಿ ವಿಜಯಾಯ ಬಹೂನಿ ಚ।
07060025c ಪಾಂಡವಾನಾಂ ತ್ವದೀಯಾನಾಂ ವಿಪರೀತಾನಿ ಮಾರಿಷ।।
ಮಾರಿಷ! ಆಗ ಪಾಂಡವರ ವಿಜಯದ ಮತ್ತು ನಿನ್ನವರ ಸೋಲನ್ನು ಸೂಚಿಸುವ ಅನೇಕ ನಿಮಿತ್ತಗಳು ನಡೆದವು.
07060026a ದೃಷ್ಟ್ವಾರ್ಜುನೋ ನಿಮಿತ್ತಾನಿ ವಿಜಯಾಯ ಪ್ರದಕ್ಷಿಣಂ।
07060026c ಯುಯುಧಾನಂ ಮಹೇಷ್ವಾಸಮಿದಂ ವಚನಮಬ್ರವೀತ್।।
ಅರ್ಜುನನು ತನ್ನ ಬಲಬಾಗದಲ್ಲಿ ವಿಜಯದ ನಿಮಿತ್ತಗಳನ್ನು ನೋಡಿ ಮಹೇಷ್ವಾಸ ಯುಯುಧಾನನಿಗೆ ಈ ಮಾತನ್ನಾಡಿದನು:
07060027a ಯುಯುಧಾನಾದ್ಯ ಯುದ್ಧೇ ಮೇ ದೃಶ್ಯತೇ ವಿಜಯೋ ಧ್ರುವಃ।
07060027c ಯಥಾ ಹೀಮಾನಿ ಲಿಂಗಾನಿ ದೃಶ್ಯಂತೇ ಶಿನಿಪುಂಗವ।।
“ಯುಯುಧಾನ! ಶಿನಿಪುಂಗವ! ಈ ಸೂಚನೆಗಳನ್ನು ನೋಡಿದರೆ ಇಂದು ಯುದ್ಧದಲ್ಲಿ ನನಗೆ ವಿಜಯವು ನಿಶ್ಚಿತವೆಂದು ತೋರುತ್ತಿದೆ.
07060028a ಸೋಽಹಂ ತತ್ರ ಗಮಿಷ್ಯಾಮಿ ಯತ್ರ ಸೈಂಧವಕೋ ನೃಪಃ।
07060028c ಯಿಯಾಸುರ್ಯಮಲೋಕಾಯ ಮಮ ವೀರ್ಯಂ ಪ್ರತೀಕ್ಷತೇ।।
ಯಮಲೋಕಕ್ಕೆ ಹೋಗಲು ಬಯಸಿ ನನ್ನ ವೀರ್ಯವನ್ನು ನೋಡಲು ಬಯಸುವ ನೃಪ ಸೈಂಧವನು ಎಲ್ಲಿದ್ದಾನೋ ಅಲ್ಲಿಗೆ ಹೋಗುತ್ತೇನೆ.
07060029a ಯಥಾ ಪರಮಕಂ ಕೃತ್ಯಂ ಸೈಂಧವಸ್ಯ ವಧೇ ಮಮ।
07060029c ತಥೈವ ಸುಮಹತ್ಕೃತ್ಯಂ ಧರ್ಮರಾಜಸ್ಯ ರಕ್ಷಣೇ।।
ನಾನು ಹೇಗೆ ಸೈಂಧವನ ವಧೆಯೆಂಬ ಪರಮ ಕೃತ್ಯವನ್ನು ಮಾಡಲಿರುವೆನೋ ಹಾಗೆಯೇ ಧರ್ಮರಾಜನ ರಕ್ಷಣೆಯೂ ಕೂಡ ಮಹಾ ಕೃತ್ಯವಾಗಿದೆ.
07060030a ಸ ತ್ವಮದ್ಯ ಮಹಾಬಾಹೋ ರಾಜಾನಂ ಪರಿಪಾಲಯ।
07060030c ಯಥೈವ ಹಿ ಮಯಾ ಗುಪ್ತಸ್ತ್ವಯಾ ಗುಪ್ತೋ ಭವೇತ್ತಥಾ।।
ಮಹಾಬಾಹೋ! ಇಂದು ನೀನು ರಾಜನನ್ನು ಪರಿಪಾಲಿಸು. ನಾನು ಹೇಗೆ ಅವನನ್ನು ರಕ್ಷಿಸುತ್ತೇನೋ ಹಾಗೆ ಅವನು ನಿನ್ನಿಂದಲೂ ರಕ್ಷಿಸಲ್ಪಡಲಿ.
07060031a ತ್ವಯಿ ಚಾಹಂ ಪರಾಶ್ವಸ್ಯ ಪ್ರದ್ಯುಮ್ನೇ ವಾ ಮಹಾರಥೇ।
07060031c ಶಕ್ನುಯಾಂ ಸೈಂಧವಂ ಹಂತುಮನಪೇಕ್ಷೋ ನರರ್ಷಭ।।
ನರರ್ಷಭ! ನಾನು ನಿನ್ನಮೇಲೆ ಅಥವಾ ಮಹಾರಥಿ ಪ್ರದ್ಯುಮ್ನನ ಮೇಲೆ ಭರವಸೆಯಿಡಬಲ್ಲೆನು. ಇತರರ ಸಹಾಯವನ್ನು ಬಯಸದೇ ನಾನು ಸೈಂಧವನನ್ನು ಸಂಹರಿಸಲು ಶಕ್ಯ.
07060032a ಮಯ್ಯಪೇಕ್ಷಾ ನ ಕರ್ತವ್ಯಾ ಕಥಂ ಚಿದಪಿ ಸಾತ್ವತ।
07060032c ರಾಜನ್ಯೇವ ಪರಾ ಗುಪ್ತಿಃ ಕಾರ್ಯಾ ಸರ್ವಾತ್ಮನಾ ತ್ವಯಾ।।
ಸಾತ್ವತ! ಯಾವುದೇ ಕಾರಣಕ್ಕಾಗಿ ನೀನು ನನಗಾಗಿ ಬರಬೇಕಾಗಿಲ್ಲ. ರಾಜನ ರಕ್ಷಣೆಯೇ ನಿನ್ನ ಪರಮ ಕಾರ್ಯ. ಅದನ್ನು ಸರ್ವಾತ್ಮನಾಗಿ ನಿರ್ವಹಿಸು.
07060033a ನ ಹಿ ಯತ್ರ ಮಹಾಬಾಹುರ್ವಾಸುದೇವೋ ವ್ಯವಸ್ಥಿತಃ।
07060033c ಕಿಂ ಚಿದ್ವ್ಯಾಪದ್ಯತೇ ತತ್ರ ಯತ್ರಾಹಮಪಿ ಚ ಧ್ರುವಂ।।
ಎಲ್ಲಿ ಮಹಾದೇವ ವಾಸುದೇವನಿರುವನೋ ಎಲ್ಲಿ ನಾನೂ ಇರುವೆನೋ ಅಲ್ಲಿ ಯಾವುದೇ ರೀತಿಯ ಆಪತ್ತು ಇರುವುದಿಲ್ಲವೆಂಬುದು ನಿಶ್ಚಿತ.”
07060034a ಏವಮುಕ್ತಸ್ತು ಪಾರ್ಥೇನ ಸಾತ್ಯಕಿಃ ಪರವೀರಹಾ।
07060034c ತಥೇತ್ಯುಕ್ತ್ವಾಗಮತ್ತತ್ರ ಯತ್ರ ರಾಜಾ ಯುಧಿಷ್ಠಿರಃ।।
ಪಾರ್ಥನು ಹೀಗೆ ಹೇಳಲು ಪರವೀರಹ ಸಾತ್ಯಕಿಯು ಹಾಗೆಯೇ ಆಗಲೆಂದು ಹೇಳಿ ರಾಜಾ ಯುಧಿಷ್ಠಿರನಿರುವಲ್ಲಿಗೆ ಹೋದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಪ್ರತಿಜ್ಞಾ ಪರ್ವಣಿ ಅರ್ಜುನವಾಕ್ಯೇ ಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಪ್ರತಿಜ್ಞಾ ಪರ್ವದಲ್ಲಿ ಅರ್ಜುನವಾಕ್ಯ ಎನ್ನುವ ಅರವತ್ತನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಪ್ರತಿಜ್ಞಾ ಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಪ್ರತಿಜ್ಞಾ ಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-6/18, ಉಪಪರ್ವಗಳು-68/100, ಅಧ್ಯಾಯಗಳು-1037/1995, ಶ್ಲೋಕಗಳು-35529/73784.