ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಪ್ರತಿಜ್ಞಾ ಪರ್ವ
ಅಧ್ಯಾಯ 59
ಸಾರ
ಯುದ್ಧದಲ್ಲಿ ಜಯವನ್ನು ಕರುಣಿಸೆಂದು ಯುಧಿಷ್ಠಿರನು ಕೃಷ್ಣನಲ್ಲಿ ಕೇಳಿಕೊಂಡಿದುದು (1-13). ಕೃಷ್ಣನು ಯುಧಿಷ್ಠಿರನಿಗಿತ್ತ ಆಶ್ವಾಸನೆ (14-20).
07059001 ಯುಧಿಷ್ಠಿರ ಉವಾಚ।
07059001a ಸುಖೇನ ರಜನೀ ವ್ಯುಷ್ಟಾ ಕಚ್ಚಿತ್ತೇ ಮಧುಸೂದನ।
07059001c ಕಚ್ಚಿಜ್ಜ್ಞಾನಾನಿ ಸರ್ವಾಣಿ ಪ್ರಸನ್ನಾನಿ ತವಾಚ್ಯುತ।।
ಯುಧಿಷ್ಠಿರನು ಹೇಳಿದನು: “ಮಧುಸೂದನ! ನಿನ್ನ ರಾತ್ರಿಯು ಸುಖವಾಗಿ ಕಳೆಯಿತೇ? ಅಚ್ಯುತ! ನಿನ್ನ ಜ್ಞಾನೇಂದ್ರಿಯಗಳೆಲ್ಲವೂ ಪ್ರಸನ್ನವಾಗಿವೆಯೇ?””
07059002 ಸಂಜಯ ಉವಾಚ।
07059002a ವಾಸುದೇವೋಽಪಿ ತದ್ಯುಕ್ತಂ ಪರ್ಯಪೃಚ್ಚದ್ಯುಧಿಷ್ಠಿರಂ।
07059002c ತತಃ ಕ್ಷತ್ತಾ ಪ್ರಕೃತಯೋ ನ್ಯವೇದಯದುಪಸ್ಥಿತಾಃ।।
ಸಂಜಯನು ಹೇಳಿದನು: “ಕೇಳಿದುದಕ್ಕೆ ವಾಸುದೇವನೂ ಕೂಡ ಯುಧಿಷ್ಠಿರನನ್ನು ಕೇಳಿದನು. ಆಗ ಸೇವಕರು ರಾಜರು ಉಪಸ್ಥಿತರಾಗಿದ್ದಾರೆಂದು ನಿವೇದಿಸಿದರು.
07059003a ಅನುಜ್ಞಾತಶ್ಚ ರಾಜ್ಞಾ ಸ ಪ್ರಾವೇಶಯತ ತಂ ಜನಂ।
07059003c ವಿರಾಟಂ ಭೀಮಸೇನಂ ಚ ಧೃಷ್ಟದ್ಯುಮ್ನಂ ಚ ಸಾತ್ಯಕಿಂ।।
07059004a ಶಿಖಂಡಿನಂ ಯಮೌ ಚೈವ ಚೇಕಿತಾನಂ ಚ ಕೇಕಯಾನ್।
07059004c ಯುಯುತ್ಸುಂ ಚೈವ ಕೌರವ್ಯಂ ಪಾಂಚಾಲ್ಯಂ ಚೋತ್ತಮೌಜಸಂ।।
ರಾಜನ ಅನುಜ್ಞೆಯ ಮೇರೆಗೆ ವಿರಾಟ, ಭೀಮಸೇನ, ಧೃಷ್ಟದ್ಯುಮ್ನ, ಸಾತ್ಯಕಿ, ಶಿಖಂಡಿ, ಯಮಳರು, ಚೇಕಿತಾನ, ಕೇಕಯರು, ಕೌರವ್ಯ ಯುಯುತ್ಸು, ಮತ್ತು ಪಾಂಚಾಲ್ಯ ಉತ್ತಮೌಜಸರನ್ನು ಪ್ರವೇಶಿಸಲಾಯಿತು.
07059005a ಏತೇ ಚಾನ್ಯೇ ಚ ಬಹವಃ ಕ್ಷತ್ರಿಯಾಃ ಕ್ಷತ್ರಿಯರ್ಷಭಂ।
07059005c ಉಪತಸ್ಥುರ್ಮಹಾತ್ಮಾನಂ ವಿವಿಶುಶ್ಚಾಸನೇಷು ತೇ।।
ಇವರಲ್ಲದೇ ಇನ್ನೂ ಅನ್ಯ ಅನೇಕ ಕ್ಷತ್ರಿಯರು ಕ್ಷತ್ರಿಯರ್ಷಭ ಮಹಾತ್ಮನ ಉಪಸ್ಥಿತಿಯಲ್ಲಿ ಪ್ರವೇಶಿಸಿ ಆಸನಗಳಲ್ಲಿ ಕುಳಿತುಕೊಂಡರು.
07059006a ಏಕಸ್ಮಿನ್ನಾಸನೇ ವೀರಾವುಪವಿಷ್ಟೌ ಮಹಾಬಲೌ।
07059006c ಕೃಷ್ಣಶ್ಚ ಯುಯುಧಾನಶ್ಚ ಮಹಾತ್ಮಾನೌ ಮಹಾದ್ಯುತೀ।।
ಒಂದೇ ಆಸನದಲ್ಲಿ ವೀರ ಮಹಾಬಲಶಾಲಿ ಮಹಾತ್ಮ ಮಹಾದ್ಯುತೀ ಕೃಷ್ಣ ಮತ್ತು ಯುಯುಧಾನರು ಕುಳಿತುಕೊಂಡರು.
07059007a ತತೋ ಯುಧಿಷ್ಠಿರಸ್ತೇಷಾಂ ಶೃಣ್ವತಾಂ ಮಧುಸೂದನಂ।
07059007c ಅಬ್ರವೀತ್ಪುಂಡರೀಕಾಕ್ಷಮಾಭಾಷ್ಯ ಮಧುರಂ ವಚಃ।।
ಆಗ ಯುಧಿಷ್ಠಿರನು ಎಲ್ಲರೂ ಕೇಳುವಹಾಗೆ ಮಧುಸೂದನ ಪುಂಡರೀಕಾಕ್ಷನನ್ನು ಉದ್ದೇಶಿಸಿ ಈ ಮಧುರ ಮಾತನ್ನಾಡಿದನು:
07059008a ಏಕಂ ತ್ವಾಂ ವಯಮಾಶ್ರಿತ್ಯ ಸಹಸ್ರಾಕ್ಷಮಿವಾಮರಾಃ।
07059008c ಪ್ರಾರ್ಥಯಾಮೋ ಜಯಂ ಯುದ್ಧೇ ಶಾಶ್ವತಾನಿ ಸುಖಾನಿ ಚ।।
“ಅಮರರು ಹೇಗೆ ಸಹಸ್ರಾಕ್ಷನನ್ನು ಆಶ್ರಯಿಸಿದ್ದಾರೋ ಹಾಗೆ ನಾವೂ ಕೂಡ ನಿನ್ನನ್ನೊಬ್ಬನನ್ನೇ ಯುದ್ಧದಲ್ಲಿ ಜಯ ಮತ್ತು ಶಾಶ್ವತ ಸುಖಗಳಿಗಾಗಿ ಪ್ರಾರ್ಥಿಸುತ್ತಿದ್ದೇವೆ.
07059009a ತ್ವಂ ಹಿ ರಾಜ್ಯವಿನಾಶಂ ಚ ದ್ವಿಷದ್ಭಿಶ್ಚ ನಿರಾಕ್ರಿಯಾಂ।
07059009c ಕ್ಲೇಶಾಂಶ್ಚ ವಿವಿಧಾನ್ ಕೃಷ್ಣ ಸರ್ವಾಂಸ್ತಾನಪಿ ವೇತ್ಥ ನಃ।।
ಕೃಷ್ಣ! ಶತ್ರುಗಳಿಂದ ಮೋಸಗೊಂಡು ರಾಜ್ಯವನ್ನು ಕಳೆದುಕೊಂಡಿದುದು ಮತ್ತು ನಾವು ವಿವಿಧ ಕ್ಲೇಶಗಳನ್ನು ಅನುಭವಿಸಿದ್ದುದು ಇವೆಲ್ಲವೂ ನಿನಗೆ ತಿಳಿದೇ ಇದೆ.
07059010a ತ್ವಯಿ ಸರ್ವೇಶ ಸರ್ವೇಷಾಮಸ್ಮಾಕಂ ಭಕ್ತವತ್ಸಲ।
07059010c ಸುಖಮಾಯತ್ತಮತ್ಯರ್ಥಂ ಯಾತ್ರಾ ಚ ಮಧುಸೂದನ।।
ಸರ್ವೇಶ! ಭಕ್ತವತ್ಸಲ! ಮಧುಸೂದನ! ನಮ್ಮದೆಲ್ಲವೂ- ನಮ್ಮ ಸುಖ, ಜೀವನ ನಿರ್ವಹಣೆ ಮತ್ತು ಯಾತ್ರೆ ಎಲ್ಲವೂ ನಿನ್ನದೇ!
07059011a ಸ ತಥಾ ಕುರು ವಾರ್ಷ್ಣೇಯ ಯಥಾ ತ್ವಯಿ ಮನೋ ಮಮ।
07059011c ಅರ್ಜುನಸ್ಯ ಯಥಾ ಸತ್ಯಾ ಪ್ರತಿಜ್ಞಾ ಸ್ಯಾಚ್ಚಿಕೀರ್ಷಿತಾ।।
ವಾರ್ಷ್ಣೇಯ! ನನ್ನ ಮನಸ್ಸು ನಿನ್ನಲ್ಲಿಯೇ ಇರುವಂತೆ ಮಾಡು! ಅರ್ಜುನನು ಬಯಸಿದಂತೆ ಅವನ ಪ್ರತಿಜ್ಞೆಯು ಸತ್ಯವಾಗುವಂತೆ ಮಾಡು!
07059012a ಸ ಭವಾಂಸ್ತಾರಯತ್ವಸ್ಮಾದ್ದುಃಖಾಮರ್ಷಮಹಾರ್ಣವಾತ್।
07059012c ಪಾರಂ ತಿತೀರ್ಷತಾಮದ್ಯ ಪ್ಲವೋ ನೋ ಭವ ಮಾಧವ।।
ಮಾಧವ! ದುಃಖ-ಕೋಪಮಯ ಮಹಾಸಾಗರವನ್ನು ದಾಟಲಿಚ್ಚಿಸುವ ನಮಗೆ ಇಂದು ನಮ್ಮನ್ನು ಪಾರುಗೊಳಿಸಲು ನೀನೊಂದು ನೌಕೆಯಾಗು.
07059013a ನ ಹಿ ತತ್ಕುರುತೇ ಸಂಖ್ಯೇ ಕಾರ್ತವೀರ್ಯಸಮಸ್ತ್ವಪಿ।
07059013c ರಥೀ ಯತ್ಕುರುತೇ ಕೃಷ್ಣ ಸಾರಥಿರ್ಯತ್ನಮಾಸ್ಥಿತಃ।।
ಕೃಷ್ಣ! ಯುದ್ಧದಲ್ಲಿ ರಥಿಕನಾದ ಕಾರ್ತವೀರ್ಯಸಮನು ಕೂಡ ಮಾಡಲಾಗದುದನ್ನು ರಥದಲ್ಲಿ ಕುಳಿತ ಸಾರಥಿಯು ಮಾಡಬಲ್ಲನು!”
07059014 ವಾಸುದೇವ ಉವಾಚ।
07059014a ಸಾಮರೇಷ್ವಪಿ ಲೋಕೇಷು ಸರ್ವೇಷು ನ ತಥಾವಿಧಃ।
07059014c ಶರಾಸನಧರಃ ಕಶ್ಚಿದ್ಯಥಾ ಪಾರ್ಥೋ ಧನಂಜಯಃ।।
ವಾಸುದೇವನು ಹೇಳಿದನು: “ಅಮರ ಲೋಕವನ್ನೂ ಸೇರಿ ಎಲ್ಲ ಲೋಕಗಳಲ್ಲಿ ಪಾರ್ಥ ಧನಂಜಯನಂತಿರುವ ಧನುರ್ಧರನು ಯಾರೂ ಇಲ್ಲ.
07059015a ವೀರ್ಯವಾನಸ್ತ್ರಸಂಪನ್ನಃ ಪರಾಕ್ರಾಂತೋ ಮಹಾಬಲಃ।
07059015c ಯುದ್ಧಶೌಂಡಃ ಸದಾಮರ್ಷೀ ತೇಜಸಾ ಪರಮೋ ನೃಣಾಂ।।
07059016a ಸ ಯುವಾ ವೃಷಭಸ್ಕಂಧೋ ದೀರ್ಘಬಾಹುರ್ಮಹಾಬಲಃ।
07059016c ಸಿಂಹರ್ಷಭಗತಿಃ ಶ್ರೀಮಾನ್ದ್ವಿಷತಸ್ತೇ ಹನಿಷ್ಯತಿ।।
ಆ ವೀರ್ಯವಾನ, ಅಸ್ತ್ರಸಂಪನ್ನ, ಪರಾಕ್ರಾಂತ, ಮಹಾಬಲ, ಯುದ್ಧಶೌಂಡ, ಸದಾಮರ್ಷೀ, ತೇಜಸ್ಸಿನಿಂದ ಮನುಷ್ಯರಲ್ಲಿಯೇ ಶ್ರೇಷ್ಠನಾದ, ಆ ಯುವಕ, ವೃಷಭಸ್ಕಂಧ, ದೀರ್ಘಬಾಹು, ಮಹಾಬಲ, ಸಿಂಹದಂತೆ ನಡೆಯುವ ಶ್ರೀಮಾನನು ನಿನ್ನ ಶತ್ರುವನ್ನು ಸಂಹರಿಸುತ್ತಾನೆ.
07059017a ಅಹಂ ಚ ತತ್ಕರಿಷ್ಯಾಮಿ ಯಥಾ ಕುಂತೀಸುತೋಽರ್ಜುನಃ।
07059017c ಧಾರ್ತರಾಷ್ಟ್ರಸ್ಯ ಸೈನ್ಯಾನಿ ಧಕ್ಷ್ಯತ್ಯಗ್ನಿರಿವೋತ್ಥಿತಃ।।
ನಾನೂ ಕೂಡ ಕುಂತೀಸುತ ಅರ್ಜುನನು ಧಾರ್ತರಾಷ್ಟ್ರನ ಸೇನೆಗಳನ್ನು ಅಗ್ನಿಯು ಕಟ್ಟಿಗೆಯನ್ನು ಹೇಗೋ ಹಾಗೆ ಸುಟ್ಟುಬಿಡುವಂತೆ ಮಾಡುತ್ತೇನೆ.
07059018a ಅದ್ಯ ತಂ ಪಾಪಕರ್ಮಾಣಂ ಕ್ಷುದ್ರಂ ಸೌಭದ್ರಘಾತಿನಂ।
07059018c ಅಪುನರ್ದರ್ಶನಂ ಮಾರ್ಗಮಿಷುಭಿಃ ಕ್ಷೇಪ್ಸ್ಯತೇಽರ್ಜುನಃ।।
ಇಂದು ಅರ್ಜುನನು ಆ ಪಾಪಕರ್ಮಿ, ಕ್ಷುದ್ರ, ಸೌಭದ್ರಘಾತಿಯು ಪುನಃ ಕಾಣಲು ಸಿಗದಂತಹ ಮಾರ್ಗಕ್ಕೆ ಬಾಣಗಳಿಂದ ಕಳುಹಿಸುವವನಿದ್ದಾನೆ.
07059019a ತಸ್ಯಾದ್ಯ ಗೃಧ್ರಾಃ ಶ್ಯೇನಾಶ್ಚ ವಡಗೋಮಾಯವಸ್ತಥಾ।
07059019c ಭಕ್ಷಯಿಷ್ಯಂತಿ ಮಾಂಸಾನಿ ಯೇ ಚಾನ್ಯೇ ಪುರುಷಾದಕಾಃ।।
ಇಂದು ಅವನ ಮಾಂಸಗಳನ್ನು ಹದ್ದುಗಳು, ನರಿಗಳು, ತೋಳಗಳು ಮತ್ತು ಇತರ ಮಾಂಸಭಕ್ಷಕರು ಭಕ್ಷಿಸುತ್ತಾರೆ.
07059020a ಯದ್ಯಸ್ಯ ದೇವಾ ಗೋಪ್ತಾರಃ ಸೇಂದ್ರಾಃ ಸರ್ವೇ ತಥಾಪ್ಯಸೌ।
07059020c ರಾಜಧಾನೀಂ ಯಮಸ್ಯಾದ್ಯ ಹತಃ ಪ್ರಾಪ್ಸ್ಯತಿ ಸಂಕುಲೇ।।
ಅವನ ರಕ್ಷಣೆಗೆ ಇಂದು ಇಂದ್ರನೊಂದಿಗೆ ದೇವತೆಗಳೇ ಬಂದರೂ ಸಂಕುಲ ಯುದ್ಧದಲ್ಲಿ ಅವನು ಇಂದು ಹತನಾಗಿ ಯಮನ ರಾಜಧಾನಿಗೆ ಹೋಗುವುದು ನಿಶ್ಚಯ.
07059021a ನಿಹತ್ಯ ಸೈಂಧವಂ ಜಿಷ್ಣುರದ್ಯ ತ್ವಾಮುಪಯಾಸ್ಯತಿ।
07059021c ವಿಶೋಕೋ ವಿಜ್ವರೋ ರಾಜನ್ ಭವ ಭೂತಿಪುರಸ್ಕೃತಃ।।
ಇಂದು ಸೈಂಧವನನ್ನು ಸಂಹರಿಸಿ ಜಿಷ್ಣುವು ನಿನ್ನ ಬಳಿ ಬರುತ್ತಾನೆ. ರಾಜನ್! ಐಶ್ವರ್ಯಸಂಪನ್ನನಾಗಿರುವ ನೀನು ಶೋಕರಹಿತನಾಗು. ವ್ಯಾಕುಲಗೊಳ್ಳಬೇಡ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಪ್ರತಿಜ್ಞಾ ಪರ್ವಣಿ ಶ್ರೀಕೃಷ್ಣವಾಕ್ಯೇ ಏಕೋನಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಪ್ರತಿಜ್ಞಾ ಪರ್ವದಲ್ಲಿ ಶ್ರೀಕೃಷ್ಣವಾಕ್ಯ ಎನ್ನುವ ಐವತ್ತೊಂಭತ್ತನೇ ಅಧ್ಯಾಯವು.