ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಪ್ರತಿಜ್ಞಾ ಪರ್ವ
ಅಧ್ಯಾಯ 58
ಸಾರ
ಯುದ್ಧದ ಹದಿನಾಲ್ಕನೆಯ ದಿನದ ಬೆಳಿಗ್ಗೆ ಯುಧಿಷ್ಠಿರನು ಸಜ್ಜಾದುದು (1-33).
07058001 ಸಂಜಯ ಉವಾಚ।
07058001a ತಯೋಃ ಸಂವದತೋರೇವ ಕೃಷ್ಣದಾರುಕಯೋಸ್ತದಾ।
07058001c ಸಾತ್ಯಗಾದ್ರಜನೀ ರಾಜನ್ನಥ ರಾಜಾನ್ವಬುಧ್ಯತ।।
ಸಂಜಯನು ಹೇಳಿದನು: “ರಾಜನ್! ಕೃಷ್ಣ ಮತ್ತು ದಾರುಕರ ಸಂವಾದವು ನಡೆಯುತ್ತಿದ್ದಂತೆಯೇ ರಾತ್ರಿಯು ಕಳೆಯಲು ರಾಜನು ಎಚ್ಚೆತ್ತನು.
07058002a ಪಠಂತಿ ಪಾಣಿಸ್ವನಿಕಾ ಮಾಗಧಾ ಮಧುಪರ್ಕಿಕಾಃ।
07058002c ವೈತಾಲಿಕಾಶ್ಚ ಸೂತಾಶ್ಚ ತುಷ್ಟುವುಃ ಪುರುಷರ್ಷಭಂ।।
ಆ ಪುರುಷರ್ಷಭನನ್ನು ಪಾಣಿಸ್ವನಿಕರು, ಮಾಗಧರು, ಮಧುಪರ್ಕಿಕರು, ವೈತಾಲಿಕರು, ಮತ್ತು ಸೂತರು ಸಂತುಷ್ಟಗೊಳಿಸಿದರು.
07058003a ನರ್ತಕಾಶ್ಚಾಪ್ಯನೃತ್ಯಂತ ಜಗುರ್ಗೀತಾನಿ ಗಾಯಕಾಃ।
07058003c ಕುರುವಂಶಸ್ತವಾರ್ಥಾನಿ ಮಧುರಂ ರಕ್ತಕಂಠಿನಃ।।
ನರ್ತಕರು ನಾಟ್ಯಮಾಡಿದರು. ಇಂಪಾದ ಕಂಠದ ಗಾಯಕರು ಕುರುವಂಶದ ಕೀರ್ತಿಯನ್ನು ಹೇಳುವ ಮಧುರ ಗೀತೆಗಳನ್ನು ಹಾಡಿದರು.
07058004a ಮೃದಂಗಾ ಝರ್ಝರಾ ಭೇರ್ಯಃ ಪಣವಾನಕಗೋಮುಖಾಃ।
07058004c ಆಡಂಬರಾಶ್ಚ ಶಂಖಾಶ್ಚ ದುಂದುಭ್ಯಶ್ಚ ಮಹಾಸ್ವನಾಃ।।
ಮೃದಂಗ, ಝರ್ಝರ, ಭೇರಿ, ಪಣವಾನಕ, ಗೋಮುಖ, ಆಡಂಬರ, ಶಂಖ ಮತ್ತು ದುಂದುಭಿಗಳನ್ನು ಜೋರಾಗಿ ನುಡಿಸಲಾಯಿತು.
07058005a ಏವಮೇತಾನಿ ಸರ್ವಾಣಿ ತಥಾನ್ಯಾನ್ಯಪಿ ಭಾರತ।
07058005c ವಾದಯಂತಿ ಸ್ಮ ಸಂಹೃಷ್ಟಾಃ ಕುಶಲಾಃ ಸಾಧುಶಿಕ್ಷಿತಾಃ।।
ಭಾರತ! ಇವು ಎಲ್ಲ ಮತ್ತು ಇನ್ನೂ ಅನ್ಯ ವಾದ್ಯಗಳನ್ನು ಕುಶಲರೂ ಚೆನ್ನಾಗಿ ಪಳಗಿದವರೂ ಸಂಹೃಷ್ಟರಾಗಿ ಬಾರಿಸಿದರು.
07058006a ಸ ಮೇಘಸಮನಿರ್ಘೋಷೋ ಮಹಾಂ ಶಬ್ದೋಽಸ್ಪೃಶದ್ದಿವಂ।
07058006c ಪಾರ್ಥಿವಪ್ರವರಂ ಸುಪ್ತಂ ಯುಧಿಷ್ಠಿರಮಬೋಧಯತ್।।
ಮೇಘದಂತೆ ಮೊಳಗುತ್ತಿದ್ದ ನಿರ್ಘೋಷ ಮತ್ತು ದಿವವನ್ನು ಮುಟ್ಟುತ್ತಿದ್ದ ಮಹಾ ಶಬ್ಧವು ಮಲಗಿದ್ದ ಆ ಪಾರ್ಥಿವಪ್ರವರ ಯುಧಿಷ್ಠಿರನನ್ನು ಎಚ್ಚರಿಸಿತು.
07058007a ಪ್ರತಿಬುದ್ಧಃ ಸುಖಂ ಸುಪ್ತೋ ಮಹಾರ್ಹೇ ಶಯನೋತ್ತಮೇ।
07058007c ಉತ್ಥಾಯಾವಶ್ಯಕಾರ್ಯಾರ್ಥಂ ಯಯೌ ಸ್ನಾನಗೃಹಂ ತತಃ।।
ಅತಿ ಬೆಲೆಬಾಳುವ ಉತ್ತಮ ಶಯನದಲ್ಲಿ ಸುಖವಾಗಿ ಮಲಗಿದ್ದ ಅವನು ಎಚ್ಚೆತ್ತನು. ಅನಂತರ ಅವಶ್ಯಕಾರ್ಯಗಳಿಗಾಗಿ ಎದ್ದು ಸ್ನಾನಗೃಹಕ್ಕೆ ತೆರಳಿದನು.
07058008a ತತಃ ಶುಕ್ಲಾಂಬರಾಃ ಸ್ನಾತಾಸ್ತರುಣಾಷ್ಟೋತ್ತರಂ ಶತಂ।
07058008c ಸ್ನಾಪಕಾಃ ಕಾಂಚನೈಃ ಕುಂಭೈಃ ಪೂರ್ಣೈಃ ಸಮುಪತಸ್ಥಿರೇ।।
ಆಗ ನೂರಾಎಂಟು ಬಿಳಿಯ ವಸ್ತ್ರಗಳನ್ನುಟ್ಟಿದ್ದ ಸ್ನಾನಮಾಡಿಸುವ ತರುಣರು ಸ್ನಾನಮಾಡಿಸಲು ತುಂಬಿದ ಬಂಗಾರದ ಕೊಡಗಳಿಂದ ಸಿದ್ಧರಾಗಿದ್ದರು.
07058009a ಭದ್ರಾಸನೇ ಸೂಪವಿಷ್ಟಃ ಪರಿಧಾಯಾಂಬರಂ ಲಘು।
07058009c ಸಸ್ನೌ ಚಂದನಸಂಯುಕ್ತೈಃ ಪಾನೀಯೈರಭಿಮಂತ್ರಿತೈಃ।।
ತೆಳು ಬಟ್ಟೆಯನ್ನುಟ್ಟು ಭದ್ರಾಸನದಲ್ಲಿ ಸುಖವಾಗಿ ಕುಳಿತ ಅವನಿಗೆ ಅವರು ಅಭಿಮಂತ್ರಿಸಿದ ಚಂದನಯುಕ್ತ ನೀರಿನಿಂದ ಸ್ನಾನಮಾಡಿಸಿದರು.
07058010a ಉತ್ಸಾದಿತಃ ಕಷಾಯೇಣ ಬಲವದ್ಭಿಃ ಸುಶಿಕ್ಷಿತೈಃ।
07058010c ಆಪ್ಲುತಃ ಸಾಧಿವಾಸೇನ ಜಲೇನ ಚ ಸುಗಂಧಿನಾ।।
ಚೆನ್ನಾಗಿ ಪಳಗಿದ ಬಲವಂತರು ಅವನ ಅಂಗಾಂಗಗಳನ್ನು ಔಷಧ-ಸುಗಂಧ ಯುಕ್ತ ನೀರಿನಿಂದ ಚೆನ್ನಾಗಿ ತಿಕ್ಕಿದರು.
07058011a ಹರಿಣಾ ಚಂದನೇನಾಂಗಮನುಲಿಪ್ಯ ಮಹಾಭುಜಃ।
07058011c ಸ್ರಗ್ವೀ ಚಾಕ್ಲಿಷ್ಟವಸನಃ ಪ್ರಾಙ್ಮುಖಃ ಪ್ರಾಂಜಲಿಃ ಸ್ಥಿತಃ।।
ಅರಿಷಿಣ ಚಂದನಗಳಿಂದ ಅಂಗಗಳನ್ನು ಲೇಪಿಸಿಯಾದ ನಂತರ ಮಹಾಭುಜನು ಹಾರವನ್ನು ಧರಿಸಿ, ಶುಚಿ ವಸ್ತ್ರಗಳನ್ನು ತೊಟ್ಟು ಕೈಜೋಡಿಸಿ ಪೂರ್ವಾಭಿಮುಖನಾಗಿ ನಿಂತನು.
07058012a ಜಜಾಪ ಜಪ್ಯಂ ಕೌಂತೇಯಃ ಸತಾಂ ಮಾರ್ಗಮನುಷ್ಠಿತಃ।
07058012c ತತೋಽಗ್ನಿಶರಣಂ ದೀಪ್ತಂ ಪ್ರವಿವೇಶ ವಿನೀತವತ್।।
ಕೌಂತೇಯನು ಸಂತರ ಮಾರ್ಗವನ್ನು ಅನುಸರಿಸಿ ಜಪವನ್ನು ಜಪಿಸಿದನು. ಅನಂತರ ಉರಿಯುತ್ತಿರುವ ಅಗ್ನಿಯಿರುವ ಕೊಠಡಿಯನ್ನು ವಿನೀತನಾಗಿ ಪ್ರವೇಶಿಸಿದನು.
07058013a ಸಮಿದ್ಧಂ ಸ ಪವಿತ್ರಾಭಿರಗ್ನಿಮಾಹುತಿಭಿಸ್ತಥಾ।
07058013c ಮಂತ್ರಪೂತಾಭಿರರ್ಚಿತ್ವಾ ನಿಶ್ಚಕ್ರಾಮ ಗೃಹಾತ್ತತಃ।।
ಪವಿತ್ರ ಸಮಿದ್ಧೆಯನ್ನು ಅಗ್ನಿಯಲ್ಲಿ ಆಹುತಿಯನ್ನಿತ್ತು, ಮಂತ್ರಪೂತಗಳಿಂದ ಅರ್ಚಿಸಿ ನಂತರ ಆ ಕೊಠಡಿಯಿಂದ ಹೊರಬಂದನು.
07058014a ದ್ವಿತೀಯಾಂ ಪುರುಷವ್ಯಾಘ್ರಃ ಕಕ್ಷ್ಯಾಂ ನಿಷ್ಕ್ರಮ್ಯ ಪಾರ್ಥಿವಃ।
07058014c ತತ್ರ ವೇದವಿದೋ ವಿಪ್ರಾನಪಶ್ಯದ್ಬ್ರಾಹ್ಮಣರ್ಷಭಾನ್।।
ಆ ಪಾರ್ಥಿವ ಪುರುಷವ್ಯಾಘ್ರನು ಎರಡನೆಯ ಕಕ್ಷವನ್ನು ಪ್ರವೇಶಿಸಿ ಅಲ್ಲಿ ವೇದವಿದ ವಿಪ್ರರನ್ನೂ ಬ್ರಾಹ್ಮಣರ್ಷಭರನ್ನೂ ನೋಡಿದನು.
07058015a ದಾಂತಾನ್ವೇದವ್ರತಸ್ನಾತಾನ್ಸ್ನಾತಾನವಭೃಥೇಷು ಚ।
07058015c ಸಹಸ್ರಾನುಚರಾನ್ಸೌರಾನಷ್ಟೌ ದಶಶತಾನಿ ಚ।।
ಶಾಂತರಾಗಿದ್ದ ಅವರು ವೇದವ್ರತ ಸ್ನಾನಮಾಡಿದ್ದರು ಮತ್ತು ಅವಭೃತ ಸ್ನಾನವನ್ನೂ ಮಾಡಿದ್ದರು. ಆ ಸೌರರು ಒಂದುಸಾವಿರವಿದ್ದರು. ಅವರ ಅನುಚರರು ಎಂಟು ಸಾವಿರವಿದ್ದರು.
07058016a ಅಕ್ಷತೈಃ ಸುಮನೋಭಿಶ್ಚ ವಾಚಯಿತ್ವಾ ಮಹಾಭುಜಃ।
07058016c ತಾನ್ದ್ವಿಜಾನ್ಮಧುಸರ್ಪಿರ್ಭ್ಯಾಂ ಫಲೈಃ ಶ್ರೇಷ್ಠೈಃ ಸುಮಂಗಲೈಃ।।
07058017a ಪ್ರಾದಾತ್ಕಾಂಚನಮೇಕೈಕಂ ನಿಷ್ಕಂ ವಿಪ್ರಾಯ ಪಾಂಡವಃ।
07058017c ಅಲಂಕೃತಂ ಚಾಶ್ವಶತಂ ವಾಸಾಂಸೀಷ್ಟಾಶ್ಚ ದಕ್ಷಿಣಾಃ।।
ಅವರು ಅಕ್ಷತೆ ಮತ್ತು ಸುಮನೋಹರ ಆಶೀರ್ವಾದಗಳನ್ನು ಪಠಿಸುತ್ತಿರಲು ಮಹಾಭುಜ ಪಾಂಡವನು ಆ ದ್ವಿಜರಿಗೆ ಜೇನು, ತುಪ್ಪ, ಶ್ರೇಷ್ಠ ಸುಮಂಗಲ ಫಲಗಳನ್ನು ಇತ್ತು, ಒಬ್ಬೊಬ್ಬರಿಗೂ ಒಂದೊಂದು ಬಂಗಾರದ ನಿಷ್ಕವನ್ನೂ, ಅಲಂಕರಿಸಲ್ಪಟ್ಟ ಒಂದು ನೂರು ಕುದುರೆಗಳನ್ನೂ, ವಸ್ತ್ರಗಳನ್ನೂ ದಕ್ಷಿಣೆಗಳನ್ನೂ ನೀಡಿದನು.
07058018a ತಥಾ ಗಾಃ ಕಪಿಲಾ ದೋಗ್ಧ್ರೀಃ ಸರ್ಷಭಾಃ ಪಾಂಡುನಂದನಃ।
07058018c ಹೇಮಶೃಂಗೀ ರೂಪ್ಯಖುರಾ ದತ್ತ್ವಾ ಚಕ್ರೇ ಪ್ರದಕ್ಷಿಣಂ।।
ಹಾಗೆಯೇ ಪಾಂಡುನಂದನನು ಕೋಡುಗಳನ್ನು ಬಂಗಾರದಿಂದಲೂ ಖುರಗಳನ್ನು ಬೆಳ್ಳಿಯಿಂದಲೂ ಅಲಂಕರಿಸಲ್ಪಟ್ಟ, ಹಾಲುಕೊಡುವ ಕಪಿಲ ಗೋವುಗಳನ್ನು, ಕರುಳೊಂದಿಗೆ ಕೊಟ್ಟು ಪ್ರದಕ್ಷಿಣೆ ಹಾಕಿದನು.
07058019a ಸ್ವಸ್ತಿಕಾನ್ವರ್ಧಮಾನಾಂಶ್ಚ ನಂದ್ಯಾವರ್ತಾಂಶ್ಚ ಕಾಂಚನಾನ್।
07058019c ಮಾಲ್ಯಂ ಚ ಜಲಕುಂಭಾಂಶ್ಚ ಜ್ವಲಿತಂ ಚ ಹುತಾಶನಂ।।
07058020a ಪೂರ್ಣಾನ್ಯಕ್ಷತಪಾತ್ರಾಣಿ ರುಚಕಾನ್ರೋಚನಾಂಸ್ತಥಾ।
07058020c ಸ್ವಲಂಕೃತಾಃ ಶುಭಾಃ ಕನ್ಯಾ ದಧಿಸರ್ಪಿರ್ಮಧೂದಕಂ।।
07058021a ಮಂಗಲ್ಯಾನ್ಪಕ್ಷಿಣಶ್ಚೈವ ಯಚ್ಚಾನ್ಯದಪಿ ಪೂಜಿತಂ।
07058021c ದೃಷ್ಟ್ವಾ ಸ್ಪೃಷ್ಟ್ವಾ ಚ ಕೌಂತೇಯೋ ಬಾಹ್ಯಾಂ ಕಕ್ಷ್ಯಾಮಗಾತ್ತತಃ।।
ಅನಂತರ ಕೌಂತೇಯನು ಆನಂದವನ್ನು ವೃದ್ಧಿಸುವ ಸ್ವಸ್ತಿಕಗಳನ್ನೂ, ಕಾಂಚನದ ನಂದ್ಯಾವರ್ತಗಳನ್ನೂ, ಮಾಲೆಗಳನ್ನೂ, ಜಲಕುಂಭಗಳನ್ನೂ, ಜ್ವಲಿಸುವ ಹುತಾಶನನನ್ನೂ, ಪೂರ್ಣವಾಗಿರುವ ನಕ್ಷತ್ರ ಪಾತ್ರೆಗಳನ್ನೂ, ಬಿಸಿಲಿನಲ್ಲಿ ಒಣಗಿಸಿದ ಅಕ್ಕಿಯನ್ನೂ, ಅಲಂಕೃತ ಶುಭ ಕನ್ಯೆಯರನ್ನೂ, ಮೊಸರು-ತುಪ್ಪ-ಜೇನು-ನೀರನ್ನೂ, ಮಂಗಲ ಪಕ್ಷಿಗಳನ್ನೂ, ಇತರ ಪೂಜಿತ ವಸ್ತುಗಳನ್ನೂ ನೋಡಿ ಮುಟ್ಟುತ್ತಾ ಹೊರಗಿನ ಕಕ್ಷಕ್ಕೆ ಬಂದನು.
07058022a ತತಸ್ತಸ್ಯ ಮಹಾಬಾಹೋಸ್ತಿಷ್ಠತಃ ಪರಿಚಾರಕಾಃ।
07058022c ಸೌವರ್ಣಂ ಸರ್ವತೋಭದ್ರಂ ಮುಕ್ತಾವೈಡೂರ್ಯಮಂಡಿತಂ।।
07058023a ಪರಾರ್ಧ್ಯಾಸ್ತರಣಾಸ್ತೀರ್ಣಂ ಸೋತ್ತರಚ್ಚದಂ ಋದ್ಧಿಮತ್।
07058023c ವಿಶ್ವಕರ್ಮಕೃತಂ ದಿವ್ಯಮುಪಜಹ್ರುರ್ವರಾಸನಂ।।
ಅಲ್ಲಿ ಮಹಾಬಾಹುವನ್ನು ಅವನ ಪರಿಚಾರಕರು ಬಂಗಾರದ, ಮುತ್ತು-ವೈಡೂರ್ಯಗಳನ್ನು ಕೂಡಿಸಿದ್ದ, ಅತಿ ಅಮೂಲ್ಯವಾದ ರತ್ನಗಂಬಳಿಯನ್ನು ಹೊದೆಸಿದ್ದ, ಅದರ ಮೇಲೆ ಮತ್ತೊಂದು ಮೃದು ವಸ್ತ್ರವನ್ನು ಹಾಸಿದ್ದ, ವಿಶ್ವಕರ್ಮನಿಂದ ನಿರ್ಮಿತವಾಗಿದ್ದ ದಿವ್ಯ ಸರ್ವತೋಭದ್ರ ವರಾಸನದ ಮೇಲೆ ಕುಳ್ಳಿರಿಸಿದರು.
07058024a ತತ್ರ ತಸ್ಯೋಪವಿಷ್ಟಸ್ಯ ಭೂಷಣಾನಿ ಮಹಾತ್ಮನಃ।
07058024c ಉಪಜಹ್ರುರ್ಮಹಾರ್ಹಾಣಿ ಪ್ರೇಷ್ಯಾಃ ಶುಭ್ರಾಣಿ ಸರ್ವಶಃ।।
ಅಲ್ಲಿ ಅವನು ಕುಳಿತುಕೊಳ್ಳಲು ಎಲ್ಲ ಕಡೆಗಳಿಂದ ಮಹಾ ಅಮೂಲ್ಯ ಶುಭ್ರ ಭೂಷಣಗಳನ್ನು ತಂದರು.
07058025a ಯುಕ್ತಾಭರಣವೇಷಸ್ಯ ಕೌಂತೇಯಸ್ಯ ಮಹಾತ್ಮನಃ।
07058025c ರೂಪಮಾಸೀನ್ಮಹಾರಾಜ ದ್ವಿಷತಾಂ ಶೋಕವರ್ಧನಂ।।
ಮಹಾರಾಜ! ಆಭರಣ ಉಡುಪುಗಳನ್ನು ಧರಿಸಿದ್ದ ಮಹಾತ್ಮ ಕೌಂತೇಯನ ರೂಪವು ಶತ್ರುಗಳ ಶೋಕವನ್ನು ಹೆಚ್ಚಿಸುವಂತಿತ್ತು.
07058026a ಪಾಂಡರೈಶ್ಚಂದ್ರರಶ್ಮ್ಯಾಭೈರ್ಹೇಮದಂಡೈಶ್ಚ ಚಾಮರೈಃ।
07058026c ದೋಧೂಯಮಾನಃ ಶುಶುಭೇ ವಿದ್ಯುದ್ಭಿರಿವ ತೋಯದಃ।।
ಚಂದ್ರನ ಕಿರಣಗಳಂತೆ ಬೆಳ್ಳಗಿದ್ದ ಬಂಗಾರದ ದಂಡವಿದ್ದ ಚಾಮರಗಳನ್ನು ಬೀಸುತ್ತಿರಲು ಅವನು ಮಿಂಚಿನಿಂದ ಕೂಡಿದ ಮೋಡದಂತೆ ಶೋಭಿಸಿದನು.
07058027a ಸಂಸ್ತೂಯಮಾನಃ ಸೂತೈಶ್ಚ ವಂದ್ಯಮಾನಶ್ಚ ಬಂದಿಭಿಃ।
07058027c ಉಪಗೀಯಮಾನೋ ಗಂಧರ್ವೈರಾಸ್ತೇ ಸ್ಮ ಕುರುನಂದನಃ।।
ಸ್ತುತಿಸುತ್ತಿದ್ದ ಸೂತರು, ವಂದಿಸುತ್ತಿದ್ದ ಬಂದಿಗಳು, ಹಾಡುತ್ತಿದ್ದ ಗಂಧರ್ವರು ಕುರುನಂದನನನ್ನು ಸಂತೋಷಗೊಳಿಸಿದರು.
07058028a ತತೋ ಮುಹೂರ್ತಾದಾಸೀತ್ತು ಬಂದಿನಾಂ ನಿಸ್ವನೋ ಮಹಾನ್।
07058028c ನೇಮಿಘೋಷಶ್ಚ ರಥಿನಾಂ ಖುರಘೋಷಶ್ಚ ವಾಜಿನಾಂ।।
ಆಗ ಮುಹೂರ್ತದಲ್ಲಿಯೇ ಬಂದಿಗಳ ಸ್ವರ, ರಥಿಗಳ ಚಕ್ರಗಳ ಘೋಷ, ಕುದುರೆಗಳ ಖುರಗಳ ಶಬ್ಧಗಳು ಜೋರಾದವು.
07058029a ಹ್ರಾದೇನ ಗಜಘಂಟಾನಾಂ ಶಂಖಾನಾಂ ನಿನದೇನ ಚ।
07058029c ನರಾಣಾಂ ಪದಶಬ್ದೈಶ್ಚ ಕಂಪತೀವ ಸ್ಮ ಮೇದಿನೀ।।
ಆನೆಗಳ ಗಂಟೆಗಳ ಬಾರಿಸುವಿಕೆಯಿಂದ, ಶಂಖಗಳ ನಿನಾದದಿಂದ, ಸೈನಿಕರ ಕಾಲ್ನಡುಗೆಯ ಶಬ್ಧಗಳಿಂದ ಮೇದಿನಿಯು ಕಂಪಿಸುವಂತಿತ್ತು.
07058030a ತತಃ ಶುದ್ಧಾಂತಮಾಸಾದ್ಯ ಜಾನುಭ್ಯಾಂ ಭೂತಲೇ ಸ್ಥಿತಃ।
07058030c ಶಿರಸಾ ವಂದನೀಯಂ ತಮಭಿವಂದ್ಯ ಜಗತ್ಪತಿಂ।।
07058031a ಕುಂಡಲೀ ಬದ್ಧನಿಸ್ತ್ರಿಂಶಃ ಸನ್ನದ್ಧಕವಚೋ ಯುವಾ।
07058031c ಅಭಿಪ್ರಣಮ್ಯ ಶಿರಸಾ ದ್ವಾಃಸ್ಥೋ ಧರ್ಮಾತ್ಮಜಾಯ ವೈ।
07058031e ನ್ಯವೇದಯದ್ಧೃಷೀಕೇಶಮುಪಯಾತಂ ಮಹಾತ್ಮನೇ।।
ಆಗ ಕುಂಡಲಗಳನ್ನು ಧರಿಸಿದ್ದ, ಖಡ್ಗವನ್ನು ಒರಸೆಯಲ್ಲಿ ಕಟ್ಟಿಕೊಂಡಿದ್ದ, ಸನ್ನದ್ಧ ಕವಚನಾದ ಯುವಕನು ಬಂದು ಕಾಲುಗಳನ್ನು ನೆಲಕ್ಕೆ ಊರಿ ವಂದನೀಯ ಜಗತ್ಪತಿಯನ್ನು ವಂದಿಸಿ, ದ್ವಾರದಲ್ಲಿ ಹೃಷೀಕೇಶನು ಒಳಬರನು ಕಾದುಕೊಂಡಿದ್ದಾನೆಂದು ಮಹಾತ್ಮ ಧರ್ಮಾತ್ಮಜನಿಗೆ ನಿವೇದಿಸಿದನು.
07058032a ಸೋಽಬ್ರವೀತ್ಪುರುಷವ್ಯಾಘ್ರಃ ಸ್ವಾಗತೇನೈವ ಮಾಧವಂ।
07058032c ಅರ್ಘ್ಯಂ ಚೈವಾಸನಂ ಚಾಸ್ಮೈ ದೀಯತಾಂ ಪರಮಾರ್ಚಿತಂ।।
ಆಗ ಪುರುಷವ್ಯಾಘ್ರನು ಹೇಳಿದನು: “ಮಾಧವನನ್ನು ಸ್ವಾಗತಿಸಿ, ಆ ಪರಮಾರ್ಚಿತನಿಗೆ ಅರ್ಘ್ಯ ಆಸನಗಳನ್ನು ನೀಡಿ!”
07058033a ತತಃ ಪ್ರವೇಶ್ಯ ವಾರ್ಷ್ಣೇಯಮುಪವೇಶ್ಯ ವರಾಸನೇ।
07058033c ಸತ್ಕೃತ್ಯ ಸತ್ಕೃತಸ್ತೇನ ಪರ್ಯಪೃಚ್ಚದ್ಯುಧಿಷ್ಠಿರಃ।।
ಆಗ ವಾರ್ಷ್ಣೇಯನು ಪ್ರವೇಶಿಸಿ ವರಾಸನದಲ್ಲಿ ಕುಳಿತುಕೊಳ್ಳಲು ಸತ್ಕೃತನಾಗಿ ಸತ್ಕರಿಸಿ ಯುಧಿಷ್ಠಿರನು ಅವನನ್ನು ಕೇಳಿದನು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಪ್ರತಿಜ್ಞಾ ಪರ್ವಣಿ ಯುಧಿಷ್ಠಿರಸಜ್ಜತಾಯಾಂ ಅಷ್ಠಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಪ್ರತಿಜ್ಞಾ ಪರ್ವದಲ್ಲಿ ಯುಧಿಷ್ಠಿರಸಜ್ಜತ ಎನ್ನುವ ಐವತ್ತೆಂಟನೇ ಅಧ್ಯಾಯವು.