057 ಅರ್ಜುನಸ್ಯ ಪುನಃ ಪಾಶುಪತಾಸ್ತ್ರಪ್ರಾಪ್ತಿ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಪ್ರತಿಜ್ಞಾ ಪರ್ವ

ಅಧ್ಯಾಯ 57

ಸಾರ

ಅರ್ಜುನನಿಗೆ ಸ್ವಪ್ನದಲ್ಲಿ ಪುನಃ ಪಾಶುಪತಾಸ್ತ್ರ ಪ್ರಾಪ್ತಿಯಾದುದು (1-81).

07057001 ಸಂಜಯ ಉವಾಚ।
07057001a ಕುಂತೀಪುತ್ರಸ್ತು ತಂ ಮಂತ್ರಂ ಸ್ಮರನ್ನೇವ ಧನಂಜಯಃ।
07057001c ಪ್ರತಿಜ್ಞಾಮಾತ್ಮನೋ ರಕ್ಷನ್ಮುಮೋಹಾಚಿಂತ್ಯವಿಕ್ರಮಃ।।

ಸಂಜಯನು ಹೇಳಿದನು: “ಅಚಿಂತ್ಯವಿಕ್ರಮಿ ಕುಂತೀಪುತ್ರ ಧನಂಜಯನು ತನ್ನ ಪ್ರತಿಜ್ಞೆಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ಆ ಮಂತ್ರವನ್ನೇ ಸ್ಮರಿಸುತ್ತಾ ನಿದ್ದೆಹೋದನು.

07057002a ತಂ ತು ಶೋಕೇನ ಸಂತಪ್ತಂ ಸ್ವಪ್ನೇ ಕಪಿವರಧ್ವಜಂ।
07057002c ಆಸಸಾದ ಮಹಾತೇಜಾ ಧ್ಯಾಯಂತಂ ಗರುಡಧ್ವಜಃ।।

ಸ್ವಪ್ನದಲ್ಲಿ ಶೋಕಸಂತಪ್ತನಾಗಿದ್ದ ಕಪಿವರಧ್ವಜನ ಬಳಿ ಮಹಾತೇಜಸ್ವಿ ಗರುಡಧ್ವಜನು ಆಲೋಚಿಸುತ್ತಾ ಬಂದನು.

07057003a ಪ್ರತ್ಯುತ್ಥಾನಂ ತು ಕೃಷ್ಣಸ್ಯ ಸರ್ವಾವಸ್ಥಂ ಧನಂಜಯಃ।
07057003c ನಾಲೋಪಯತ ಧರ್ಮಾತ್ಮಾ ಭಕ್ತ್ಯಾ ಪ್ರೇಮ್ಣಾ ಚ ಸರ್ವದಾ।।

ಕೃಷ್ಣನು ಬಂದಾಗ ಭಕ್ತಿಯಿಂದ ಮತ್ತು ಪ್ರೇಮದಿಂದ ಸರ್ವದಾ ಸರ್ವಾವಸ್ಥೆಯಲ್ಲಿ ಎದ್ದು ನಿಲ್ಲುತ್ತಿದ್ದ ಧರ್ಮಾತ್ಮಾ ಧನಂಜಯನು ಆ ಕ್ರಮಕ್ಕೆ (ಸ್ವಪ್ನಾವಸ್ಥೆಯಲ್ಲಿಯೂ) ಲೋಪವನ್ನು ತರಲಿಲ್ಲ.

07057004a ಪ್ರತ್ಯುತ್ಥಾಯ ಚ ಗೋವಿಂದಂ ಸ ತಸ್ಮಾಯಾಸನಂ ದದೌ।
07057004c ನ ಚಾಸನೇ ಸ್ವಯಂ ಬುದ್ಧಿಂ ಬೀಭತ್ಸುರ್ವ್ಯದಧಾತ್ತದಾ।।

ಬೀಭತ್ಸುವು ಗೋವಿಂದನನ್ನು ವಿನೀತನಾಗಿ ಆದರದಿಂದ ಎದ್ದುನಿಂತು ಬರಮಾಡಿಕೊಂಡು ಆಸನವನ್ನೂ ಸ್ವಯಂ ಬುದ್ಧಿಯನ್ನೂ ಅವನಿಗಿತ್ತನು.

07057005a ತತಃ ಕೃಷ್ಣೋ ಮಹಾತೇಜಾ ಜಾನನ್ಪಾರ್ಥಸ್ಯ ನಿಶ್ಚಯಂ।
07057005c ಕುಂತೀಪುತ್ರಮಿದಂ ವಾಕ್ಯಮಾಸೀನಃ ಸ್ಥಿತಮಬ್ರವೀತ್।।

ಆಗ ಕುಳಿತುಕೊಂಡ ಮಹಾತೇಜಸ್ವಿ ಕೃಷ್ಣನು ಪಾರ್ಥನ ನಿಶ್ಚಯವನ್ನು ತಿಳಿದು ನಿಂತಿರುವ ಕುಂತೀಪುತ್ರನಿಗೆ ಈ ಮಾತನ್ನಾಡಿದನು:

07057006a ಮಾ ವಿಷಾದೇ ಮನಃ ಪಾರ್ಥ ಕೃಥಾಃ ಕಾಲೋ ಹಿ ದುರ್ಜಯಃ।
07057006c ಕಾಲಃ ಸರ್ವಾಣಿ ಭೂತಾನಿ ನಿಯಚ್ಚತಿ ಪರೇ ವಿಧೌ।।

“ಪಾರ್ಥ! ಮನಸ್ಸನ್ನು ವಿಷಾದದಲ್ಲಿ ತೊಡಗಿಸಬೇಡ. ಕಾಲವೆಂಬುದು ಜಯಿಸಲಸಾಧ್ಯವಾದುದು. ಕಾಲವು ಇರುವ ಎಲ್ಲವನ್ನೂ ವಿಧಾತನ ವಿಧಾನದಲ್ಲಿ ತೊಡಗಿಸುತ್ತದೆ.

07057007a ಕಿಮರ್ಥಂ ಚ ವಿಷಾದಸ್ತೇ ತದ್ಬ್ರೂಹಿ ವದತಾಂ ವರ।
07057007c ನ ಶೋಚಿತವ್ಯಂ ವಿದುಷಾ ಶೋಕಃ ಕಾರ್ಯವಿನಾಶನಃ।।

ಮಾತನಾಡುವವರಲ್ಲಿ ಶ್ರೇಷ್ಠ! ಯಾವ ಕಾರಣದಿಂದಾಗಿ ನೀನು ವಿಷಾದಪಡುತ್ತಿರುವೆಯೆನ್ನುವುದನ್ನು ಹೇಳು. ತಿಳಿದವರು ಶೋಕಿಸುವುದಿಲ್ಲ. ಶೋಕವು ಮಾಡಬೇಕಾದ ಕಾರ್ಯವನ್ನು ನಾಶಗೊಳಿಸುವಂಥಹುದು.

07057008a ಶೋಚನ್ನಂದಯತೇ ಶತ್ರೂನ್ಕರ್ಶಯತ್ಯಪಿ ಬಾಂಧವಾನ್।
07057008c ಕ್ಶೀಯತೇ ಚ ನರಸ್ತಸ್ಮಾನ್ನ ತ್ವಂ ಶೋಚಿತುಮರ್ಹಸಿ।।

ಶೋಕವು ಶತ್ರುಗಳಿಗೆ ಆನಂದವನ್ನೀಯುತ್ತದೆ. ಬಾಂಧವರನ್ನು ಸಂಕಟಕ್ಕೀಡುಮಾಡುತ್ತದೆ. ಮನುಷ್ಯನನ್ನು ಕ್ಷೀಣಗೊಳಿಸುತ್ತದೆ. ಆದುದರಿಂದ ನೀನು ಶೋಕಿಸಬಾರದು.”

07057009a ಇತ್ಯುಕ್ತೋ ವಾಸುದೇವೇನ ಬೀಭತ್ಸುರಪರಾಜಿತಃ।
07057009c ಆಬಭಾಷೇ ತದಾ ವಿದ್ವಾನಿದಂ ವಚನಮರ್ಥವತ್।।

ವಾಸುದೇವನು ಹೀಗೆ ಹೇಳಲು, ಅಪರಾಜಿತ ವಿದ್ವಾನ್ ಬೀಭತ್ಸುವು ಅರ್ಥವತ್ತಾದ ಈ ಮಾತುಗಳನ್ನಾಡಿದನು.

07057010a ಮಯಾ ಪ್ರತಿಜ್ಞಾ ಮಹತೀ ಜಯದ್ರಥವಧೇ ಕೃತಾ।
07057010c ಶ್ವೋಽಸ್ಮಿ ಹಂತಾ ದುರಾತ್ಮಾನಂ ಪುತ್ರಘ್ನಮಿತಿ ಕೇಶವ।।

“ಕೇಶವ! ನಾಳೆ ನಾನು ಪುತ್ರಘ್ನ ದುರಾತ್ಮ ಜಯದ್ರಥನನ್ನು ಕೊಲ್ಲುತ್ತೇನೆಂದು ಅವನ ವಧೆಯ ಮಹಾ ಪ್ರತಿಜ್ಞೆಯನ್ನು ಮಾಡಿದ್ದೇನೆ.

07057011a ಮತ್ಪ್ರತಿಜ್ಞಾವಿಘಾತಾರ್ಥಂ ಧಾರ್ತರಾಷ್ಟ್ರೈಃ ಕಿಲಾಚ್ಯುತ।
07057011c ಪೃಷ್ಠತಃ ಸೈಂಧವಃ ಕಾರ್ಯಃ ಸರ್ವೈರ್ಗುಪ್ತೋ ಮಹಾರಥೈಃ।।

ಆದರೆ ಅಚ್ಯುತ! ನನ್ನ ಪ್ರತಿಜ್ಞೆಗೆ ವಿಘ್ನವನ್ನುಂಟುಮಾಡಲೋಸುಗ ಧಾರ್ತರಾಷ್ಟ್ರರು ಎಲ್ಲ ಮಹಾರಥರ ಹಿಂದೆ ಸೈಂಧವನನ್ನು ನಿಲ್ಲಿಸಿಕೊಂಡು ರಕ್ಷಣೆಯ ಕಾರ್ಯವನ್ನು ಮಾಡುತ್ತಾರೆ.

07057012a ದಶ ಚೈಕಾ ಚ ತಾಃ ಕೃಷ್ಣ ಅಕ್ಷೌಹಿಣ್ಯಃ ಸುದುರ್ಜಯಾಃ।
07057012c ಪ್ರತಿಜ್ಞಾಯಾಂ ಚ ಹೀನಾಯಾಂ ಕಥಂ ಜೀವೇತ ಮದ್ವಿಧಃ।।

ಕೃಷ್ಣ! ಜಯಿಸಲಸಾಧ್ಯವಾದ ಆ ಹನ್ನೊಂದು ಅಕ್ಷೌಹಿಣಿಗಳಿಂದಾಗಿ ಪ್ರತಿಜ್ಞೆಯ ಭಂಗವಾದರೆ ನನ್ನಂಥವನು ಹೇಗೆ ತಾನೇ ಜೀವಿಸಿರಬಲ್ಲನು?

07057013a ದುಃಖೋಪಾಯಸ್ಯ ಮೇ ವೀರ ವಿಕಾಂಕ್ಷಾ ಪರಿವರ್ತತೇ।
07057013c ದ್ರುತಂ ಚ ಯಾತಿ ಸವಿತಾ ತತ ಏತದ್ಬ್ರವೀಮ್ಯಹಂ।।

ವೀರ! ದುಃಖಕ್ಕೆ ಕಾರಣವಾದ ನನ್ನ ಈ ಪ್ರತಿಜ್ಞೆಯು ಭಂಗವಾಗಲಿಕ್ಕೇ ಇದೆಯೆಂದು ಅನ್ನಿಸುತ್ತಿದೆ. ಸೂರ್ಯನೂ ಕೂಡ ಈಗ ಬೇಗ ಅಸ್ತನಾಗುತ್ತಾನೆ1. ಆದುದರಿಂದ ನಾನು ಹೇಳುತ್ತಿದ್ದೇನೆ.”

07057014a ಶೋಕಸ್ಥಾನಂ ತು ತಚ್ಚ್ರುತ್ವಾ ಪಾರ್ಥಸ್ಯ ದ್ವಿಜಕೇತನಃ।
07057014c ಸಂಸ್ಪೃಶ್ಯಾಂಭಸ್ತತಃ ಕೃಷ್ಣಃ ಪ್ರಾಙ್ಮುಖಃ ಸಮವಸ್ಥಿತಃ।।
07057015a ಇದಂ ವಾಕ್ಯಂ ಮಹಾತೇಜಾ ಬಭಾಷೇ ಪುಷ್ಕರೇಕ್ಷಣಃ।
07057015c ಹಿತಾರ್ಥಂ ಪಾಂಡುಪುತ್ರಸ್ಯ ಸೈಂಧವಸ್ಯ ವಧೇ ವೃತಃ।।

ಪಾರ್ಥನ ಶೋಕಪರಿಸ್ಥಿತಿಯನ್ನು ಕೇಳಿ ದ್ವಿಜಕೇತನ ಮಹಾತೇಜಸ್ವಿ, ಪುಷ್ಕರೇಕ್ಷಣ ಕೃಷ್ಣನು ಪೂರ್ವಾಭಿಮುಖವಾಗಿ ಕುಳಿತು ಆಚಮನ ಮಾಡಿ ಪಾಂಡುಪುತ್ರನ ಹಿತಾರ್ಥವಾಗಿ ಮತ್ತು ಸೈಂಧವನ ವಧೆಯನ್ನು ಬಯಸಿ ಈ ಮಾತನ್ನಾಡಿದನು:

07057016a ಪಾರ್ಥ ಪಾಶುಪತಂ ನಾಮ ಪರಮಾಸ್ತ್ರಂ ಸನಾತನಂ।
07057016c ಯೇನ ಸರ್ವಾನ್ಮೃಧೇ ದೈತ್ಯಾಂ ಜಘ್ನೇ ದೇವೋ ಮಹೇಶ್ವರಃ।।

“ಪಾರ್ಥ! ಪಾಶುಪತವೆಂಬ ಹೆಸರಿನ ಸನಾತನ ಪರಮಾಸ್ತ್ರವಿದೆ. ಅದರಿಂದಲೇ ದೇವ ಮಹೇಶ್ವರನು ಯುದ್ಧದಲ್ಲಿ ಸರ್ವ ದೈತ್ಯರನ್ನೂ ಸಂಹರಿಸಿದ್ದನು.

07057017a ಯದಿ ತದ್ವಿದಿತಂ ತೇಽದ್ಯ ಶ್ವೋ ಹಂತಾಸಿ ಜಯದ್ರಥಂ।
07057017c ಅಥ ಜ್ಞಾತುಂ ಪ್ರಪದ್ಯಸ್ವ ಮನಸಾ ವೃಷಭಧ್ವಜಂ।।

ಅದು ಇಂದು ನಿನಗೆ ತಿಳಿದಿರುವುದೇ ಆದರೆ ನಾಳೆ ನೀನು ಜಯದ್ರಥನನ್ನು ಕೊಲ್ಲುವೆ. ಅದನ್ನು ತಿಳಿದುಕೊಳ್ಳಲು ನೀನು ಮನಸಾರೆ ವೃಷಭಧ್ವಜನನ್ನು ಪ್ರಾರ್ಥಿಸು.

07057018a ತಂ ದೇವಂ ಮನಸಾ ಧ್ಯಾಯನ್ಜೋಷಮಾಸ್ಸ್ವ ಧನಂಜಯ।
07057018c ತತಸ್ತಸ್ಯ ಪ್ರಸಾದಾತ್ತ್ವಂ ಭಕ್ತಃ ಪ್ರಾಪ್ಸ್ಯಸಿ ತನ್ಮಹತ್।।

ಧನಂಜಯ! ಆ ದೇವನನ್ನು ಮನಸಾ ಧ್ಯಾನಿಸಿ ಮೌನಿಯಾಗು. ಅವನ ಪ್ರಸಾದದಿಂದ ಭಕ್ತನಾದ ನೀನು ಆ ಮಹಾಸ್ತ್ರವನ್ನು ಪಡೆದುಕೊಳ್ಳುವೆ.”

07057019a ತತಃ ಕೃಷ್ಣವಚಃ ಶ್ರುತ್ವಾ ಸಂಸ್ಪೃಶ್ಯಾಂಭೋ ಧನಂಜಯಃ।
07057019c ಭೂಮಾವಾಸೀನ ಏಕಾಗ್ರೋ ಜಗಾಮ ಮನಸಾ ಭವಂ।।

ಆಗ ಕೃಷ್ಣನ ಮಾತನ್ನು ಕೇಳಿ ಧನಂಜಯನು ಆಚಮನ ಮಾಡಿ ನೆಲದ ಮೇಲೆ ಕುಳಿತು ಏಕಾಗ್ರಚಿತ್ತನಾಗಿ ಮನಸಾರೆ ಭವನನ್ನು ಮೊರೆಹೊಕ್ಕನು.

07057020a ತತಃ ಪ್ರಣಿಹಿತೇ ಬ್ರಾಹ್ಮೇ ಮುಹೂರ್ತೇ ಶುಭಲಕ್ಷಣೇ।
07057020c ಆತ್ಮಾನಮರ್ಜುನೋಽಪಶ್ಯದ್ಗಗನೇ ಸಹಕೇಶವಂ।।

ಆಗ ಶುಭಲಕ್ಷಣಸೂಚಕವಾದ ಬ್ರಾಹ್ಮೀ ಮುಹೂರ್ತದಲ್ಲಿ ಅರ್ಜುನನು ಕೇಶವನೊಂದಿಗೆ ತಾನು ಗಗನದಲ್ಲಿ ಹೋಗುತ್ತಿರುವುದನ್ನು ಕಂಡನು.

07057021a ಜ್ಯೋತಿರ್ಭಿಶ್ಚ ಸಮಾಕೀರ್ಣಂ ಸಿದ್ಧಚಾರಣಸೇವಿತಂ।
07057021c ವಾಯುವೇಗಗತಿಃ ಪಾರ್ಥಃ ಖಂ ಭೇಜೇ ಸಹಕೇಶವಃ।।

ಪಾರ್ಥನು ಕೇಶವನೊಂದಿಗೆ ನಕ್ಷತ್ರಗಳು ಹರಡಿ ತುಂಬಿಹೋಗಿದ್ದ ಸಿದ್ಧಚಾರಣಸೇವಿತ ಆಕಾಶವನ್ನು ವಾಯುವೇಗಗತಿಯಲ್ಲಿ ದಾಟಿದನು.

07057022a ಕೇಶವೇನ ಗೃಹೀತಃ ಸ ದಕ್ಷಿಣೇ ವಿಭುನಾ ಭುಜೇ।
07057022c ಪ್ರೇಕ್ಷಮಾಣೋ ಬಹೂನ್ಭಾವಾಂ ಜಗಾಮಾದ್ಭುತದರ್ಶನಾನ್।।

ವಿಭು ಕೇಶವನಿಂದ ಎಡಭುಜದಲ್ಲಿ ಹಿಡಿಯಲ್ಪಟ್ಟು ಅವನು ಅನೇಕ ಭಾವಗಳುಳ್ಳ, ಅದ್ಭುತವಾಗಿ ಕಾಣುತ್ತಿದ್ದವುಗಳನ್ನು ನೋಡಿದನು.

07057023a ಉದೀಚ್ಯಾಂ ದಿಶಿ ಧರ್ಮಾತ್ಮಾ ಸೋಽಪಶ್ಯಚ್ಚ್ವೇತಪರ್ವತಂ।
07057023c ಕುಬೇರಸ್ಯ ವಿಹಾರೇ ಚ ನಲಿನೀಂ ಪದ್ಮಭೂಷಿತಾಂ।।

ಆ ಧರ್ಮಾತ್ಮನು ಉತ್ತರ ದಿಕ್ಕಿನಲ್ಲಿ ಶ್ವೇತಪರ್ವತವನ್ನು ಮತ್ತು ಕುಬೇರನ ವಿಹಾರವಾದ ಪದ್ಮಭೂಷಿತ ಸರೋವರವನ್ನು ನೋಡಿದನು.

07057024a ಸರಿಚ್ಚ್ರೇಷ್ಠಾಂ ಚ ತಾಂ ಗಂಗಾಂ ವೀಕ್ಷಮಾಣೋ ಬಹೂದಕಾಂ।
07057024c ಸದಾಪುಷ್ಪಫಲೈರ್ವೃಕ್ಷೈರುಪೇತಾಂ ಸ್ಫಟಿಕೋಪಲಾಂ।।
07057025a ಸಿಂಹವ್ಯಾಘ್ರಸಮಾಕೀರ್ಣಾಂ ನಾನಾಮೃಗಗಣಾಕುಲಾಂ।
07057025c ಪುಣ್ಯಾಶ್ರಮವತೀಂ ರಮ್ಯಾಂ ಮನೋಜ್ಞಾಂಡಜಸೇವಿತಾಂ।।
07057026a ಮಂದರಸ್ಯ ಪ್ರದೇಶಾಂಶ್ಚ ಕಿನ್ನರೋದ್ಗೀತನಾದಿತಾನ್।
07057026c ಹೇಮರೂಪ್ಯಮಯೈಃ ಶೃಂಗೈರ್ನಾನೌಷಧಿವಿದೀಪಿತಾನ್।।
07057026e ತಥಾ ಮಂದಾರವೃಕ್ಷೈಶ್ಚ ಪುಷ್ಪಿತೈರುಪಶೋಭಿತಾನ್।

ಅನಂತರ ಅವನು ಬಹಳ ನೀರಿರುವ ನದಿಶ್ರೇಷ್ಠೆ ಗಂಗೆಯನ್ನು ನೋಡಿ, ಮುಂದೆ ಸದಾ ಫಲ-ಪುಷ್ಪಗಳಿಂದ ತುಂಬಿರುವ ವೃಕ್ಷಗಳಿಂದ ಕೂಡಿದ, ಸ್ಪಟಿಕ ಶಿಲೆಗಳಿಂದ ಕೂಡಿದ, ಸಿಂಹ-ವ್ಯಾಘ್ರಗಳಿಂದ ತುಂಬಿದ, ನಾನಾ ರೀತಿಯ ಮೃಗಗಣಸಂಕುಲಗಳಿಂದ ಕೂಡಿದ, ರಮ್ಯ ಪುಣ್ಯಾಶ್ರಮಗಳಿಂದ ಕೂಡಿದ, ಮನೋಜ್ಞ ಪಕ್ಷಿಗಳಿದ್ದ, ಕಿನ್ನರರ ಗಾಯನಗಳ ಗುಂಗಿನಲ್ಲಿದ್ದ, ಔಷಧಗಳ ಹೊಳಪಿನಿಂದ ಬಂಗಾರದಂತೆ ಬೆಳಗುತ್ತಿದ್ದ ಶಿಖರವಿದ್ದ, ಪುಷ್ಪಗಳಿಂದ ತುಂಬಿ ಬಗ್ಗಿದ ಮಂದಾರವೃಕ್ಷಗಳಿಂದ ಶೋಭಿಸುವ ಮಂದರ ಪರ್ವತ ಪ್ರದೇಶವನ್ನು ನೋಡಿದನು.

07057027a ಸ್ನಿಗ್ಧಾಂಜನಚಯಾಕಾರಂ ಸಂಪ್ರಾಪ್ತಃ ಕಾಲಪರ್ವತಂ।।
07057027c ಪುಣ್ಯಂ ಹಿಮವತಃ ಪಾದಂ ಮಣಿಮಂತಂ ಚ ಪರ್ವತಂ।

ಕಾಡಿಗೆಯ ರಾಶಿಯಂತೆ ತೋರುತ್ತಿದ್ದ ಕಾಲಪರ್ವತವನ್ನು ತಲುಪಿ ಅಲ್ಲಿಂದ ಪುಣ್ಯ ಮಣಿಮಂತ ಹಿಮವತ್ ಪರ್ವತದ ಬುಡಕ್ಕೆ ಬಂದನು.

07057027e ಬ್ರಹ್ಮತುಂಗಂ ನದೀಶ್ಚಾನ್ಯಾಸ್ತಥಾ ಜನಪದಾನಪಿ।।
07057028a ಸುಶೃಂಗಂ ಶತಶೃಂಗಂ ಚ ಶರ್ಯಾತಿವನಮೇವ ಚ।
07057028c ಪುಣ್ಯಮಶ್ವಶಿರಃಸ್ಥಾನಂ ಸ್ಥಾನಮಾಥರ್ವಣಸ್ಯ ಚ।।
07057029a ವೃಷದಂಶಂ ಚ ಶೈಲೇಂದ್ರಂ ಮಹಾಮಂದರಮೇವ ಚ।
07057029c ಅಪ್ಸರೋಭಿಃ ಸಮಾಕೀರ್ಣಂ ಕಿನ್ನರೈಶ್ಚೋಪಶೋಭಿತಂ।।
07057030a ತಾಂಶ್ಚ ಶೈಲಾನ್ವ್ರಜನ್ಪಾರ್ಥಃ ಪ್ರೇಕ್ಷತೇ ಸಹಕೇಶವಃ।

ಬ್ರಹ್ಮತುಂಗವನ್ನೂ, ಅನ್ಯ ನದಿಗಳನ್ನೂ, ಜನಪದಗಳನ್ನೂ, ಸುಶೃಂಗ-ಶತಶೃಂಗಗಳನ್ನೂ, ಶರ್ಯಾತಿವನವನ್ನೂ, ಅಥರ್ವಣನ ಸ್ಥಾನವಾದ ಪುಣ್ಯಾಶ್ರಮ ಶಿರಸ್ಥಾನವನ್ನೂ, ವೃಷದಂತವನ್ನೂ, ಶೈಲೇಂದ್ರವನ್ನೂ, ಅಪ್ಸರೆಯರಿಂದ ತುಂಬಿರುವ ಕಿನ್ನರರಿಂದ ಶೋಭಿಸುವ ಮಹಾಮಂದರವನ್ನೂ, ಅದರ ಶೈಲಗಳನ್ನು ಪಾರ್ಥನು ಕೇಶವನೊಂದಿಗೆ ನೋಡುತ್ತಾ ಮುಂದುವರೆದನು.

07057030c ಶುಭೈಃ ಪ್ರಸ್ರವಣೈರ್ಜುಷ್ಟಾನ್ ಹೇಮಧಾತುವಿಭೂಷಿತಾನ್।।
07057031a ಚಂದ್ರರಶ್ಮಿಪ್ರಕಾಶಾಂಗೀಂ ಪೃಥಿವೀಂ ಪುರಮಾಲಿನೀಂ।
07057031c ಸಮುದ್ರಾಂಶ್ಚಾದ್ಭುತಾಕಾರಾನಪಶ್ಯದ್ಬಹುಲಾಕರಾನ್।।

ಶುಭ ಪ್ರಸ್ರವಣಗಳಿಂದ ಹರಡಿದ್ದ, ಹೇಮಧಾತುಗಳಿಂದ ವಿಭೂಷಿತವಾಗಿದ್ದ, ಚಂದ್ರನ ರಶ್ಮಿ ಪ್ರಕಾಶದಲ್ಲಿ ಮಿಂದಿದ್ದ, ಪುರಮಾಲಿನೀ ಪೃಥ್ವಿಯನ್ನು, ಅದ್ಭುತ ಆಕಾರದ ಸಮುದ್ರವನ್ನೂ ನೋಡಿದನು.

07057032a ವಿಯದ್ದ್ಯಾಂ ಪೃಥಿವೀಂ ಚೈವ ಪಶ್ಯನ್ವಿಷ್ಣುಪದೇ ವ್ರಜನ್।
07057032c ವಿಸ್ಮಿತಃ ಸಹ ಕೃಷ್ಣೇನ ಕ್ಷಿಪ್ತೋ ಬಾಣ ಇವಾತ್ಯಗಾತ್।।

ಹೀಗೆ ವಿಷ್ಣುಪದ (ಉಚ್ಛತಮ ಎತ್ತರದಲ್ಲಿ) ದಲ್ಲಿ ಬಿಲ್ಲಿನಿಂದ ಪ್ರಯೋಗಿಸಲ್ಪಟ್ಟ ಬಾಣದಂತೆ ಕೃಷ್ಣನೊಡಗೂಡಿ ಹೋಗುತ್ತಾ ಪೃಥಿವ್ಯಾಕಾಶಗಳನ್ನು ಒಮ್ಮೆಗೇ ನೋಡುತ್ತಾ ವಿಸ್ಮಿತನಾದನು.

07057033a ಗ್ರಹನಕ್ಷತ್ರಸೋಮಾನಾಂ ಸೂರ್ಯಾಗ್ನ್ಯೋಶ್ಚ ಸಮತ್ವಿಷಂ।
07057033c ಅಪಶ್ಯತ ತದಾ ಪಾರ್ಥೋ ಜ್ವಲಂತಮಿವ ಪರ್ವತಂ।।

ಆಗ ಪಾರ್ಥನು ಗ್ರಹಗಳು, ನಕ್ಷತ್ರಗಳು, ಚಂದ್ರ, ಸೂರ್ಯ ಮತ್ತು ಅಗ್ನಿಯ ಸಮ ತೇಜಸ್ಸಿನಿಂದ ಉರಿಯುತ್ತಿರುವ ಪರ್ವತವನ್ನು ಕಂಡನು.

07057034a ಸಮಾಸಾದ್ಯ ತು ತಂ ಶೈಲಂ ಶೈಲಾಗ್ರೇ ಸಮವಸ್ಥಿತಂ।
07057034c ತಪೋನಿತ್ಯಂ ಮಹಾತ್ಮಾನಮಪಶ್ಯದ್ವೃಷಭಧ್ವಜಂ।।
07057035a ಸಹಸ್ರಮಿವ ಸೂರ್ಯಾಣಾಂ ದೀಪ್ಯಮಾನಂ ಸ್ವತೇಜಸಾ।
07057035c ಶೂಲಿನಂ ಜಟಿಲಂ ಗೌರಂ ವಲ್ಕಲಾಜಿನವಾಸಸಂ।।
07057036a ನಯನಾನಾಂ ಸಹಸ್ರೈಶ್ಚ ವಿಚಿತ್ರಾಂಗಂ ಮಹೌಜಸಂ।
07057036c ಪಾರ್ವತ್ಯಾ ಸಹಿತಂ ದೇವಂ ಭೂತಸಂಘೈಶ್ಚ ಭಾಸ್ವರೈಃ।।
07057037a ಗೀತವಾದಿತ್ರಸಂಹ್ರಾದೈಸ್ತಾಲಲಾಸ್ಯಸಮನ್ವಿತಂ।
07057037c ವಲ್ಗಿತಾಸ್ಫೋಟಿತೋತ್ಕ್ರುಷ್ಟೈಃ ಪುಣ್ಯಗಂಧೈಶ್ಚ ಸೇವಿತಂ।।
07057038a ಸ್ತೂಯಮಾನಂ ಸ್ತವೈರ್ದಿವ್ಯೈರ್ಮುನಿಭಿರ್ಬ್ರಹ್ಮವಾದಿಭಿಃ।
07057038c ಗೋಪ್ತಾರಂ ಸರ್ವಭೂತಾನಾಮಿಷ್ವಾಸಧರಮಚ್ಯುತಂ।।

ಆ ಶೈಲವನ್ನು ಸಮೀಪಿಸಿ ಶೈಲದ ಶಿಖರದಲ್ಲಿ ಕುಳಿತಿದ್ದ ತಪೋನಿತ್ಯ, ತನ್ನದೇ ತೇಜಸ್ಸಿನಿಂದ ಉರಿಯುತ್ತಿದ್ದ ಸಹಸ್ರ ಸೂರ್ಯರಂತಿದ್ದ, ಶೂಲದಾರಿ, ಜಟಿಲಧಾರಿ, ಗೌರವರ್ಣದ, ವಲ್ಕಲ-ಜಿನಗಳನ್ನು ಧರಿಸಿದ್ದ, ಸಹಸ್ರ ಕಣ್ಣುಗಳಿದ್ದ, ವಿಚಿತ್ರಾಂಗ, ಮಾಹೌಜಸ, ಪಾರ್ವತಿಯ ಸಹಿತ, ಹೊಳೆಯುತ್ತಿರುವ ಭೂತಸಂಘಗಳೊಡನೆ, ಗೀತ-ವಾದ್ಯ-ಹಾಡು-ಚಪ್ಪಾಳೆ-ಕುಣಿತಗಳ ಭುಜಗಳನ್ನು ತಟ್ಟಿ ಗಟ್ಟಿಯಾಗಿ ಕೂಗುವವರ ಮಧ್ಯದಲ್ಲಿದ್ದ, ಪುಣ್ಯಗಂಧಗಳಿಂದ ಸೇವಿಸಲ್ಪಡುತ್ತಿದ್ದ, ಮುನಿಗಳು ಮತ್ತು ಬ್ರಹ್ಮವಾದಿಗಳಿಂದ ದಿವ್ಯ ಸ್ತವಗಳಿಂದ ಸ್ತುತಿಸಲ್ಪಡುತ್ತಿದ್ದ, ಸರ್ವಭೂತಗಳ ಗೋಪ್ತಾರ, ಧನುರ್ಧರ ಮಹಾತ್ಮ ವೃಷಭಧ್ವಜನನ್ನು ಕಂಡನು.

07057039a ವಾಸುದೇವಸ್ತು ತಂ ದೃಷ್ಟ್ವಾ ಜಗಾಮ ಶಿರಸಾ ಕ್ಷಿತಿಂ।
07057039c ಪಾರ್ಥೇನ ಸಹ ಧರ್ಮಾತ್ಮಾ ಗೃಣನ್ಬ್ರಹ್ಮ ಸನಾತನಂ।।

ವಾಸುದೇವನಾದರೋ ಸನಾತನ ಬ್ರಹ್ಮಸ್ವರೂಪನನ್ನು ನೋಡಿದೊಡನೆಯೇ ಪಾರ್ಥನೊಂದಿಗೆ ಸಾಷ್ಟಾಂಗ ನಮಸ್ಕರಿಸಿದನು.

07057040a ಲೋಕಾದಿಂ ವಿಶ್ವಕರ್ಮಾಣಮಜಮೀಶಾನಮವ್ಯಯಂ।
07057040c ಮನಸಃ ಪರಮಾಂ ಯೋನಿಂ ಖಂ ವಾಯುಂ ಜ್ಯೋತಿಷಾಂ ನಿಧಿಂ।।
07057041a ಸ್ರಷ್ಟಾರಂ ವಾರಿಧಾರಾಣಾಂ ಭುವಶ್ಚ ಪ್ರಕೃತಿಂ ಪರಾಂ।
07057041c ದೇವದಾನವಯಕ್ಷಾಣಾಂ ಮಾನವಾನಾಂ ಚ ಸಾಧನಂ।।
07057042a ಯೋಗಿನಾಂ ಪರಮಂ ಬ್ರಹ್ಮ ವ್ಯಕ್ತಂ ಬ್ರಹ್ಮವಿದಾಂ ನಿಧಿಂ।
07057042c ಚರಾಚರಸ್ಯ ಸ್ರಷ್ಟಾರಂ ಪ್ರತಿಹರ್ತಾರಮೇವ ಚ।।
07057043a ಕಾಲಕೋಪಂ ಮಹಾತ್ಮಾನಂ ಶಕ್ರಸೂರ್ಯಗುಣೋದಯಂ।
07057043c ಅವಂದತ ತದಾ ಕೃಷ್ಣೋ ವಾಮ್ಮನೋಬುದ್ಧಿಕರ್ಮಭಿಃ।।

ಲೋಕಕ್ಕೇ ಆದಿಕಾರಣನಾದ, ವಿಶ್ವವನ್ನೇ ರಚಿಸಿದ, ಅಜ, ಈಶಾನ, ಅವ್ಯಯ, ಮನಸ್ಸಿನ ಪರಮ ಯೋನಿ, ಆಕಾಶ-ವಾಯು-ನಕ್ಷತ್ರಗಳ ನಿಧಿ, ಜಲಧಾರೆ-ಭೂಮಿ-ಪ್ರಕೃತಿ-ಮತ್ತು ಅದಕ್ಕೂ ಆಚೆಯವುಗಳ ಸ್ರಷ್ಟಾರ, ದೇವ-ದಾನವ-ಯಕ್ಷರ ಮತ್ತು ಮಾನವರ ಸಾಧನನಾದ, ಯೋಗಿಗಳ ಪರಮ ಬ್ರಹ್ಮನಾದ, ಬ್ರಹ್ಮವಿದರ ವ್ಯಕ್ತ ನಿಧಿಯಾದ, ಚರಾಚರಗಳ ಸ್ರಷ್ಟಾರ ಮತ್ತು ಪ್ರತಿಹರ್ತನೂ ಆದ, ಕಾಲಕೋಪಿ, ಶಕ್ರ ಮತ್ತು ಸೂರ್ಯರ ಗುಣಗಳಿಗೆ ಕಾರಣೀಭೂತನಾದ ಮಹಾತ್ಮನನ್ನು ಕೃಷ್ಣನು ವಾಕ್-ಮನೋ-ಬುದ್ಧಿ-ಕರ್ಮಗಳಿಂದ ವಂದಿಸಿದನು.

07057044a ಯಂ ಪ್ರಪಶ್ಯಂತಿ ವಿದ್ವಾಂಸಃ ಸೂಕ್ಷ್ಮಾಧ್ಯಾತ್ಮಪದೈಷಿಣಃ।
07057044c ತಮಜಂ ಕಾರಣಾತ್ಮಾನಂ ಜಗ್ಮತುಃ ಶರಣಂ ಭವಂ।।
07057045a ಅರ್ಜುನಶ್ಚಾಪಿ ತಂ ದೇವಂ ಭೂಯೋ ಭೂಯೋಽಭ್ಯವಂದತ।
07057045c ಜ್ಞಾತ್ವೈಕಂ ಭೂತಭವ್ಯಾದಿಂ ಸರ್ವಭೂತಭವೋದ್ಭವಂ।।

ಸೂಕ್ಷ್ಮ ಆದ್ಯಾತ್ಮಪದವನ್ನು ಪಡೆಯಲಿಚ್ಚಿಸುವ ವಿದ್ವಾಂಸರು ಯಾರನ್ನು ಶರಣುಹೊಗುತ್ತಾರೋ ಆ ಅಜ, ಕಾರಣ ಸ್ವರೂಪ, ಶರಣ, ಭವ ದೇವನನ್ನು, ಅವನೊಬ್ಬನೇ ಭೂತ-ಭವ್ಯಾದಿಗಳಿಗೆ ಮತ್ತು ಸರ್ವಭೂತಗಳ ಉದ್ಭವಕ್ಕೆ ಕಾರಣನೆಂದು ತಿಳಿದು ಅರ್ಜುನನೂ ಕೂಡ ಬಾರಿಬಾರಿ ವಂದಿಸಿದನು.

07057046a ತತಸ್ತಾವಾಗತೌ ಶರ್ವಃ ಪ್ರೋವಾಚ ಪ್ರಹಸನ್ನಿವ।
07057046c ಸ್ವಾಗತಂ ವಾಂ ನರಶ್ರೇಷ್ಠಾವುತ್ತಿಷ್ಠೇತಾಂ ಗತಕ್ಲಮೌ।

ಆಗ ಶರ್ವನು ನಗುತ್ತಾ ಬಂದಿರುವ ಇಬ್ಬರಿಗೂ ಹೇಳಿದನು: “ನರಶ್ರೇಷ್ಠರೇ! ಸ್ವಾಗತ! ಮೇಲೇಳಿ! ಆಯಾಸವನ್ನು ನೀಗಿಸಿಕೊಳ್ಳಿ.

07057046e ಕಿಂ ಚ ವಾಮೀಪ್ಸಿತಂ ವೀರೌ ಮನಸಃ ಕ್ಷಿಪ್ರಮುಚ್ಯತಾಂ।।
07057047a ಯೇನ ಕಾರ್ಯೇಣ ಸಂಪ್ರಾಪ್ತೌ ಯುವಾಂ ತತ್ಸಾಧಯಾಮಿ ವಾಂ।
07057047c ವ್ರಿಯತಾಮಾತ್ಮನಃ ಶ್ರೇಯಸ್ತತ್ಸರ್ವಂ ಪ್ರದದಾನಿ ವಾಂ।।

ವೀರರೇ! ಏನನ್ನು ಮನಸ್ಸಿನಲ್ಲಿ ಬಯಸಿ ಬಂದಿರುವಿರೋ ಅದನ್ನು ಬೇಗನೇ ಹೇಳಿ. ಯಾವ ಕಾರ್ಯಕ್ಕಾಗಿ ನೀವು ಇಲ್ಲಿಗೆ ಬಂದಿದ್ದೀರೋ ಅದನ್ನು ನಿಮಗೆ ನಾನು ಮಾಡಿಕೊಡುತ್ತೇನೆ. ನಿಮಗೆ ಪ್ರಿಯವಾದ ಶ್ರೇಯಸ್ಕರವಾದ ಎಲ್ಲವನ್ನೂ ನೀಡುತ್ತೇನೆ.”

07057048a ತತಸ್ತದ್ವಚನಂ ಶ್ರುತ್ವಾ ಪ್ರತ್ಯುತ್ಥಾಯ ಕೃತಾಂಜಲೀ।
07057048c ವಾಸುದೇವಾರ್ಜುನೌ ಶರ್ವಂ ತುಷ್ಟುವಾತೇ ಮಹಾಮತೀ।।

ಅವನ ಆ ಮಾತನ್ನು ಕೇಳಿ ಮೇಲೆದ್ದು ಅಂಜಲೀಬದ್ಧರಾಗಿ ಮಹಾಮತಿಗಳಾದ ವಾಸುದೇವ-ಅರ್ಜುನರು ಶರ್ವನನ್ನು ಸ್ತುತಿಸತೊಡಗಿದರು:

07057049a ನಮೋ ಭವಾಯ ಶರ್ವಾಯ ರುದ್ರಾಯ ವರದಾಯ ಚ।
07057049c ಪಶೂನಾಂ ಪತಯೇ ನಿತ್ಯಮುಗ್ರಾಯ ಚ ಕಪರ್ದಿನೇ।।

ಭವ, ಶರ್ವ, ರುದ್ರ, ವರದ, ಪಶುಪತೇ, ನಿತ್ಯ, ಉಗ್ರ, ಕಪರ್ದಿನೇ! ನಿನಗೆ ನಮಸ್ಕಾರ!

07057050a ಮಹಾದೇವಾಯ ಭೀಮಾಯ ತ್ರ್ಯಂಬಕಾಯ ಚ ಶಂಭವೇ।
07057050c ಈಶಾನಾಯ ಭಗಘ್ನಾಯ ನಮೋಽಸ್ತ್ವಂಧಕಘಾತಿನೇ।।

ಮಹಾದೇವ, ಭೀಮ, ತ್ರ್ಯಂಬಕ, ಶಂಭು, ಈಶಾನ, ಭಗಘ್ನ, ಅಂಧಕಘಾತಿನೇ! ನಿನಗೆ ನಮಸ್ಕಾರ!

07057051a ಕುಮಾರಗುರವೇ ನಿತ್ಯಂ ನೀಲಗ್ರೀವಾಯ ವೇಧಸೇ।
07057051c ವಿಲೋಹಿತಾಯ ಧೂಮ್ರಾಯ ವ್ಯಾಧಾಯಾನಪರಾಜಿತೇ।।
07057052a ನಿತ್ಯಂ ನೀಲಶಿಖಂಡಾಯ ಶೂಲಿನೇ ದಿವ್ಯಚಕ್ಷುಷೇ।
07057052c ಹಂತ್ರೇ ಗೋಪ್ತ್ರೇ ತ್ರಿನೇತ್ರಾಯ ವ್ಯಾಧಾಯ ವಸುರೇತಸೇ।।
07057053a ಅಚಿಂತ್ಯಾಯಾಂಬಿಕಾಭರ್ತ್ರೇ ಸರ್ವದೇವಸ್ತುತಾಯ ಚ।
07057053c ವೃಷಧ್ವಜಾಯ ಪಿಂಗಾಯ ಜಟಿನೇ ಬ್ರಹ್ಮಚಾರಿಣೇ।।
07057054a ತಪ್ಯಮಾನಾಯ ಸಲಿಲೇ ಬ್ರಹ್ಮಣ್ಯಾಯಾಜಿತಾಯ ಚ।
07057054c ವಿಶ್ವಾತ್ಮನೇ ವಿಶ್ವಸೃಜೇ ವಿಶ್ವಮಾವೃತ್ಯ ತಿಷ್ಠತೇ।।
07057055a ನಮೋ ನಮಸ್ತೇ ಸೇವ್ಯಾಯ ಭೂತಾನಾಂ ಪ್ರಭವೇ ಸದಾ।
07057055c ಬ್ರಹ್ಮವಕ್ತ್ರಾಯ ಶರ್ವಾಯ ಶಂಕರಾಯ ಶಿವಾಯ ಚ।।

ಕುಮಾರಗುರುವೇ! ನಿತ್ಯನೇ! ನೀಲಗ್ರೀವನೇ! ವೇಧಸನೇ! ವಿಲೋಹಿತನೇ! ಧೂಮ್ರನೇ! ವ್ಯಾಧಿಗಳನ್ನು ಸೋಲಿಸುವವನೇ! ನಿತ್ಯನೇ! ನೀಲಶಿಖಂಡಿಯೇ! ಶೂಲಿನಿಯೇ! ದಿವ್ಯದೃಷ್ಠಿಯುಳ್ಳವನೇ! ಹಂತ್ರನೇ! ಗೋಪ್ತ್ರನೇ! ತ್ರಿನೇತ್ರನೇ! ವ್ಯಾಧನೇ! ವಸುರೇತಸ! ಅಚಿಂತ್ಯ! ಅಂಬಿಕಾಭರ್ತ್ರೇ! ಸರ್ವದೇವಸ್ತುತ! ವೃಷಧ್ವಜ! ಪಿಂಗ! ಜಟಿನೇ! ಬ್ರಹ್ಮಚಾರಿಣೇ! ನೀರಿನಲ್ಲಿ ತಪಸ್ಸು ಮಾಡುವವನೇ! ಬ್ರಹ್ಮಣ್ಯನೇ! ಅಜಿತನೇ! ವಿಶ್ವಾತ್ಮನೇ! ವಿಶ್ವಸೃಜನೇ! ವಿಶ್ವಮಾವೃತನೇ! ತಿಷ್ಠನೇ! ಸೇವ್ಯನೇ! ಭೂತಗಳ ಪ್ರಭುವೇ! ಬ್ರಹ್ಮವಕ್ತ್ರನೇ! ಶರ್ವನೇ! ಶಂಕರನೇ! ಶಿವನೇ! ನಿನಗೆ ನಮೋ ನಮಸ್ತೇ!

07057056a ನಮೋಽಸ್ತು ವಾಚಸ್ಪತಯೇ ಪ್ರಜಾನಾಂ ಪತಯೇ ನಮಃ।
07057056c ನಮೋ ವಿಶ್ವಸ್ಯ ಪತಯೇ ಮಹತಾಂ ಪತಯೇ ನಮಃ।।

ವಾಚಸ್ಪತೆಯೇ ನಿನಗೆ ನಮಸ್ಕಾರ! ಪಜಾಪತಿಯೇ ನಮಸ್ಕಾರ! ವಿಶ್ವಪತಿಯೇ ನಮಸ್ಕಾರ! ಮಹಾಪತಿಯೇ ನಮಸ್ಕಾರ!

07057057a ನಮಃ ಸಹಸ್ರಶಿರಸೇ ಸಹಸ್ರಭುಜಮನ್ಯವೇ।
07057057c ಸಹಸ್ರನೇತ್ರಪಾದಾಯ ನಮೋಽಸಂಖ್ಯೇಯಕರ್ಮಣೇ।।

ಸಹಸ್ರಶಿರಸೇ! ಸಹಸ್ರಭುಜನೇ! ಮನ್ಯವೇ! ನಮಸ್ಕಾರ! ಸಹಸ್ರನೇತ್ರಪಾದನೇ! ಅಸಂಖ್ಯೇಯಕರ್ಮಣೇ! ನಮಸ್ಕಾರ!

07057058a ನಮೋ ಹಿರಣ್ಯವರ್ಣಾಯ ಹಿರಣ್ಯಕವಚಾಯ ಚ।
07057058c ಭಕ್ತಾನುಕಂಪಿನೇ ನಿತ್ಯಂ ಸಿಧ್ಯತಾಂ ನೌ ವರಃ ಪ್ರಭೋ।।

ಹಿರಣ್ಯವರ್ಣನೇ! ಹಿರಣ್ಯಕವಚನೇ! ಭಕ್ತಾನುಕಂಪಿನೇ! ನಿತ್ಯನೇ! ನಿನಗೆ ನಮಸ್ಕಾರ! ನಮ್ಮಿಬ್ಬರಿಗೆ ಸಿದ್ಧಿಯಾಗುವ ವರವನ್ನು ನೀಡು ಪ್ರಭೋ!”

07057059a ಏವಂ ಸ್ತುತ್ವಾ ಮಹಾದೇವಂ ವಾಸುದೇವಃ ಸಹಾರ್ಜುನಃ।
07057059c ಪ್ರಸಾದಯಾಮಾಸ ಭವಂ ತದಾ ಹ್ಯಸ್ತ್ರೋಪಲಬ್ಧಯೇ।।

ಹೀಗೆ ಸ್ತುತಿಸಿ ಅರ್ಜುನನೊಂದಿಗೆ ವಾಸುದೇವನು ಭವ ಮಹಾದೇವನನ್ನು ಅಸ್ತ್ರದ ಪ್ರಾಪ್ತಿಗೋಸ್ಕರ ಪ್ರಸನ್ನಗೊಳಿಸಿದನು.

07057060a ತತೋಽರ್ಜುನಃ ಪ್ರೀತಮನಾ ವವಂದೇ ವೃಷಭಧ್ವಜಂ।
07057060c ದದರ್ಶೋತ್ಫುಲ್ಲನಯನಃ ಸಮಸ್ತಂ ತೇಜಸಾಂ ನಿಧಿಂ।।

ಆಗ ಅರ್ಜುನನು ಹರ್ಷೋತ್ಫುಲ್ಲನಯನನಾಗಿ ಸಮಸ್ತ ತೇಜಸ್ಸುಗಳ ನಿಧಿಯಾಗಿರುವ ವೃಷಭಧ್ವಜನನ್ನು ಪ್ರೀತಿಯಿಂದ ವಂದಿಸಿದನು.

07057061a ತಂ ಚೋಪಹಾರಂ ಸ್ವಕೃತಂ ನೈಶಂ ನೈತ್ಯಕಮಾತ್ಮನಃ।
07057061c ದದರ್ಶ ತ್ರ್ಯಂಬಕಾಭ್ಯಾಶೇ ವಾಸುದೇವನಿವೇದಿತಂ।।

ರಾತ್ರಿ ಉಪಾಹಾರಾರ್ಥವಾಗಿ ತಾನೇ ಯಾವ ಉಪಹಾರವನ್ನು ವಾಸುದೇವನಿಗೆ ನೈವೇದ್ಯ ಮಾಡಿದ್ದನೋ ಅದೇ ಉಪಹಾರವು ತ್ರ್ಯಂಬಕನ ಬಳಿ ಇರುವುದನ್ನು ನೋಡಿದನು2.

07057062a ತತೋಽಭಿಪೂಜ್ಯ ಮನಸಾ ಶರ್ವಂ ಕೃಷ್ಣಂ ಚ ಪಾಂಡವಃ।
07057062c ಇಚ್ಚಾಮ್ಯಹಂ ದಿವ್ಯಮಸ್ತ್ರಮಿತ್ಯಭಾಷತ ಶಂಕರಂ।।

ಆಗ ಪಾಂಡವನು ಶರ್ವನನ್ನೂ ಕೃಷ್ಣನನ್ನೂ ಮನಸಾ ನಮಸ್ಕರಿಸಿ “ದಿವ್ಯಾಸ್ತ್ರವನ್ನು ಇಚ್ಛಿಸುತ್ತೇನೆ!” ಎಂದು ಶಂಕರನಿಗೆ ಹೇಳಿದನು.

07057063a ತತಃ ಪಾರ್ಥಸ್ಯ ವಿಜ್ಞಾಯ ವರಾರ್ಥೇ ವಚನಂ ಪ್ರಭುಃ।
07057063c ವಾಸುದೇವಾರ್ಜುನೌ ದೇವಃ ಸ್ಮಯಮಾನೋಽಭ್ಯಭಾಷತ।।

ಆಗ ವರವಾಗಿ ಪಾರ್ಥನು ಕೇಳಿದುದನ್ನು ಅರಿತ ಪ್ರಭು ದೇವನು ನಸುನಗುತ್ತಾ ವಾಸುದೇವ-ಅರ್ಜುನರಿಗೆ ಹೇಳಿದನು:

07057064a ಸರೋಽಮೃತಮಯಂ ದಿವ್ಯಮಭ್ಯಾಶೇ ಶತ್ರುಸೂದನೌ।
07057064c ತತ್ರ ಮೇ ತದ್ಧನುರ್ದಿವ್ಯಂ ಶರಶ್ಚ ನಿಹಿತಃ ಪುರಾ।।

“ಶತ್ರುಸೂದನರೇ! ಹತ್ತಿರದಲ್ಲಿಯೇ ಅಮೃತಮಯವಾದ ದಿವ್ಯ ಸರೋವರವಿದೆ. ಅಲ್ಲಿ ನಾನು ಹಿಂದೆ ಆ ದಿವ್ಯ ಧನುಸ್ಸನ್ನೂ ಶರವನ್ನೂ ಇರಿಸಿದ್ದೆ.

07057065a ಯೇನ ದೇವಾರಯಃ ಸರ್ವೇ ಮಯಾ ಯುಧಿ ನಿಪಾತಿತಾಃ।
07057065c ತತ ಆನೀಯತಾಂ ಕೃಷ್ಣೌ ಸಶರಂ ಧನುರುತ್ತಮಂ।।

ಅದರಿಂದ ನಾನು ದೇವಶತ್ರುಗಳೆಲ್ಲರನ್ನೂ ಯುದ್ಧದಲ್ಲಿ ಬೀಳಿಸಿದ್ದೆ. ಕೃಷ್ಣರೇ! ಆ ಉತ್ತಮ ಧನುಸ್ಸು-ಶರಗಳನ್ನು ತೆಗೆದುಕೊಂಡು ಬನ್ನಿ!”

07057066a ತಥೇತ್ಯುಕ್ತ್ವಾ ತು ತೌ ವೀರೌ ತಂ ಶರ್ವಂ ಪಾರ್ಷದೈಃ ಸಹ।
07057066c ಪ್ರಸ್ಥಿತೌ ತತ್ಸರೋ ದಿವ್ಯಂ ದಿವ್ಯಾಶ್ಚರ್ಯಶತೈರ್ವೃತಂ।।

ಹಾಗೆಯೇ ಆಗಲೆಂದು ಶರ್ವನಿಗೆ ಹೇಳಿ ಆ ವೀರರಿಬ್ಬರೂ ಶಿವನ ಪಾರ್ಷದರೊಂದಿಗೆ ನೂರಾರು ಆಶ್ಚರ್ಯಗಳಿಂದ ಆವೃತವಾದ ಆ ದಿವ್ಯ ಸರೋವರಕ್ಕೆ ತೆರಳಿದರು.

07057067a ನಿರ್ದಿಷ್ಟಂ ಯದ್ವೃಷಾಂಕೇನ ಪುಣ್ಯಂ ಸರ್ವಾರ್ಥಸಾಧಕಂ।
07057067c ತಜ್ಜಗ್ಮತುರಸಂಭ್ರಾಂತೌ ನರನಾರಾಯಣಾವೃಷೀ।।

ಋಷಿಗಳಾಗಿದ್ದಾಗ ಸರ್ವಾರ್ಥಸಾಧಕ ನಿರ್ದಿಷ್ಟ ಪುಣ್ಯಗಳನ್ನು ಗಳಿಸಿದ್ದ ಆ ನರ-ನಾರಾಯಣ ಋಷಿಗಳು ಸಂಭ್ರಾಂತರಾಗಿ ಅಲ್ಲಿ ತಲುಪಿದರು.

07057068a ತತಸ್ತು ತತ್ಸರೋ ಗತ್ವಾ ಸೂರ್ಯಮಂಡಲಸನ್ನಿಭಂ।
07057068c ನಾಗಮಂತರ್ಜಲೇ ಘೋರಂ ದದೃಶಾತೇಽರ್ಜುನಾಚ್ಯುತೌ।।

ಆ ಸರೋವರಕ್ಕೆ ಹೋಗಿ ಅರ್ಜುನ-ಅಚ್ಯುತರು ಅಂತರ್ಜಲದಲ್ಲಿ ಸೂರ್ಯಮಂಡಲೋಪಾದಿಯಲ್ಲಿರುವ ಘೋರ ನಾಗನನ್ನು ಕಂಡರು.

07057069a ದ್ವಿತೀಯಂ ಚಾಪರಂ ನಾಗಂ ಸಹಸ್ರಶಿರಸಂ ವರಂ।
07057069c ವಮಂತಂ ವಿಪುಲಾಂ ಜ್ವಾಲಾಂ ದದೃಶಾತೇಽಗ್ನಿವರ್ಚಸಂ।।

ಅಗ್ನಿಯ ವರ್ಚಸ್ಸನ್ನು ಪಡೆದಿದ್ದ, ವಿಪುಲ ಜ್ವಾಲೆಗಳನ್ನು ಉಗುಳುತ್ತಿದ್ದ ಸಾವಿರ ಹೆಡೆಗಳ ಇನ್ನೊಂದು ಎರಡನೆಯ ಶ್ರೇಷ್ಠ ನಾಗನನ್ನೂ ನೋಡಿದರು.

07057070a ತತಃ ಕೃಷ್ಣಶ್ಚ ಪಾರ್ಥಶ್ಚ ಸಂಸ್ಪೃಶ್ಯಾಪಃ ಕೃತಾಂಜಲೀ।
07057070c ತೌ ನಾಗಾವುಪತಸ್ಥಾತೇ ನಮಸ್ಯಂತೌ ವೃಷಧ್ವಜಂ।।

ಆಗ ಕೃಷ್ಣ-ಪಾರ್ಥರು ಆಚಮನ ಮಾಡಿ ಕೈಮುಗಿದು ವೃಷಧ್ವಜನಿಗೆ ನಮಸ್ಕರಿಸಿ ಆ ನಾಗಗಳೆರಡನ್ನೂ ಪೂಜಿಸತೊಡಗಿದರು.

07057071a ಗೃಣಂತೌ ವೇದವಿದುಷೌ ತದ್ಬ್ರಹ್ಮ ಶತರುದ್ರಿಯಂ।
07057071c ಅಪ್ರಮೇಯಂ ಪ್ರಣಮಂತೌ ಗತ್ವಾ ಸರ್ವಾತ್ಮನಾ ಭವಂ।।

ವೇದ ವಿದ್ವಾಂಸರಾಗಿದ್ದ ಅವರಿಬ್ಬರೂ ಶತರುದ್ರೀಯ3 ಮಂತ್ರಗಳನ್ನು ಪಠಿಸುತ್ತಾ ಬ್ರಹ್ಮರೂಪ ಅಪ್ರಮೇಯ ಭವನನ್ನು ಸರ್ವಾತ್ಮಗಳಿಂದಲೂ ಮೊರೆಹೊಕ್ಕು ಪ್ರಣಮಿಸಿದರು.

07057072a ತತಸ್ತೌ ರುದ್ರಮಾಹಾತ್ಮ್ಯಾದ್ಧಿತ್ವಾ ರೂಪಂ ಮಹೋರಗೌ।
07057072c ಧನುರ್ಬಾಣಶ್ಚ ಶತ್ರುಘ್ನಂ ತದ್ದ್ವಂದ್ವಂ ಸಮಪದ್ಯತ।।

ಆಗ ರುದ್ರದ ಮಹಾತ್ಮೆಯಿಂದ ಆ ಎರಡೂ ಮಹಾ ಸರ್ಪಗಳು ತಮ್ಮ ರೂಪವನ್ನು ತೊರೆದು ಶತ್ರುಸಂಹಾರಕ ಧನುರ್ಬಾಣಗಳೆರಡಾಗಿ ಪರಿಣಮಿಸಿದವು.

07057073a ತತೋ ಜಗೃಹತುಃ ಪ್ರೀತೌ ಧನುರ್ಬಾಣಂ ಚ ಸುಪ್ರಭಂ।
07057073c ಆಜಹ್ರತುರ್ಮಹಾತ್ಮಾನೌ ದದತುಶ್ಚ ಮಹಾತ್ಮನೇ।।

ಆಗ ಆ ಮಹಾತ್ಮರು ಪ್ರೀತರಾಗಿ ಅತ್ಯಂತ ಪ್ರಭೆಯುಳ್ಳ ಆ ಧನುರ್ಬಾಣಗಳನ್ನು ತೆಗೆದುಕೊಂಡು ಬಂದು ಮಹಾತ್ಮನಿಗೆ ಒಪ್ಪಿಸಿದರು.

07057074a ತತಃ ಪಾರ್ಶ್ವಾದ್ವೃಷಾಂಕಸ್ಯ ಬ್ರಹ್ಮಚಾರೀ ನ್ಯವರ್ತತ।
07057074c ಪಿಂಗಾಕ್ಷಸ್ತಪಸಃ ಕ್ಷೇತ್ರಂ ಬಲವಾನ್ನೀಲಲೋಹಿತಃ।।

ಆಗ ವೃಷಾಂಕನ ಪಕ್ಕದಿಂದ ಹಳದೀ ಬಣ್ಣದ ಕಣ್ಣುಳ್ಳ, ತಪಸ್ಸಿಗೆ ಕ್ಷೇತ್ರಪ್ರಾಯನಾಗಿಯೂ, ಬಲಶಾಲಿಯೂ ಆಗಿದ್ದ ನೀಲಿ ಮತ್ತು ಕೆಂಪು ಬಣ್ಣದ ಬ್ರಹ್ಮಚಾರಿಯೊಬ್ಬನು ಹೊರಬಂದನು.

07057075a ಸ ತದ್ಗೃಹ್ಯ ಧನುಃಶ್ರೇಷ್ಠಂ ತಸ್ಥೌ ಸ್ಥಾನಂ ಸಮಾಹಿತಃ।
07057075c ವ್ಯಕರ್ಷಚ್ಚಾಪಿ ವಿಧಿವತ್ಸಶರಂ ಧನುರುತ್ತಮಂ।।

ಅವನು ಆ ಶ್ರೇಷ್ಠ ಧನುಸ್ಸನ್ನು ಹಿಡಿದು ಸ್ಥಾನದಲ್ಲಿ ಕುಳಿತುಕೊಂಡು ವಿಧಿವತ್ತಾಗಿ ಶರವನ್ನು ಹೂಡಿ ಆ ಉತ್ತಮ ಧನುಸ್ಸನು ಎಳೆದನು.

07057076a ತಸ್ಯ ಮೌರ್ವೀಂ ಚ ಮುಷ್ಟಿಂ ಚ ಸ್ಥಾನಂ ಚಾಲಕ್ಷ್ಯ ಪಾಂಡವಃ।
07057076c ಶ್ರುತ್ವಾ ಮಂತ್ರಂ ಭವಪ್ರೋಕ್ತಂ ಜಗ್ರಾಹಾಚಿಂತ್ಯವಿಕ್ರಮಃ।।

ಅವನು ಶಿಂಜಿನಿಯನ್ನು ಹಿಡಿಯುವ ಮುಷ್ಟಿಯನ್ನೂ ಸ್ಥಾನವನ್ನೂ ಪಾಂಡವನು ವೀಕ್ಷಿಸಿ ತಿಳಿದುಕೊಂಡನು. ಆ ಅಚಿಂತ್ಯ ವಿಕ್ರಮಿಯು ಭವನು ಹೇಳಿದ ಮಂತ್ರವನ್ನೂ ಕೇಳಿ ಗ್ರಹಿಸಿಕೊಂಡನು.

07057077a ಸರಸ್ಯೇವ ಚ ತಂ ಬಾಣಂ ಮುಮೋಚಾತಿಬಲಃ ಪ್ರಭುಃ।
07057077c ಚಕಾರ ಚ ಪುನರ್ವೀರಸ್ತಸ್ಮಿನ್ಸರಸಿ ತದ್ಧನುಃ।।

ಆ ಅತಿಬಲ ಪ್ರಭು ವೀರರು ಪುನಃ ಆ ಬಾಣ-ಧನುಸ್ಸುಗಳನ್ನು ಅದೇ ಸರೋವರದಲ್ಲಿ ವಿಸರ್ಜಿಸಿ ಬಂದರು.

07057078a ತತಃ ಪ್ರೀತಂ ಭವಂ ಜ್ಞಾತ್ವಾ ಸ್ಮೃತಿಮಾನರ್ಜುನಸ್ತದಾ।
07057078c ವರಮಾರಣ್ಯಕಂ ದತ್ತಂ ದರ್ಶನಂ ಶಂಕರಸ್ಯ ಚ।

ಆಗ ಭವನು ಪ್ರೀತನಾದನೆಂದು ತಿಳಿದು ಅರ್ಜುನನು ಅರಣ್ಯಕದಲ್ಲಿ ಶಂಕರನು ನೀಡಿದ್ದ ಶ್ರೇಷ್ಠ ದರ್ಶನವನ್ನು ನೆನಪಿಸಿಕೊಂಡನು.

07057078e ಮನಸಾ ಚಿಂತಯಾಮಾಸ ತನ್ಮೇ ಸಂಪದ್ಯತಾಮಿತಿ।।
07057079a ತಸ್ಯ ತನ್ಮತಮಾಜ್ಞಾಯ ಪ್ರೀತಃ ಪ್ರಾದಾದ್ವರಂ ಭವಃ।
07057079c ತಚ್ಚ ಪಾಶುಪತಂ ಘೋರಂ ಪ್ರತಿಜ್ಞಾಯಾಶ್ಚ ಪಾರಣಂ।।

ಇದು ನನಗೆ ಬರಲಿ ಎಂದು ಅವನು ಮನಸ್ಸಿನಲ್ಲಿಯೇ ಚಿಂತಿಸಿದನು. ಅವನ ಆ ಬಯಕೆಯನ್ನು ತಿಳಿದ ಭವನು ಪ್ರೀತಿಯಿಂದ ಅವನಿಗೆ ಆ ಪ್ರತಿಜ್ಞೆಯನ್ನು ಪಾರುಮಾಡುವ ಮತ್ತು ಆ ಘೋರ ಪಾಶುಪತದ ವರವನ್ನಿತ್ತನು.

07057080a ಸಂಹೃಷ್ಟರೋಮಾ ದುರ್ಧರ್ಷಃ ಕೃತಂ ಕಾರ್ಯಮಮನ್ಯತ।
07057080c ವವಂದತುಶ್ಚ ಸಂಹೃಷ್ಟೌ ಶಿರೋಭ್ಯಾಂ ತೌ ಮಹೇಶ್ವರಂ।।

ಸಂಹೃಷ್ಟನಾಗಿ ರೋಮಾಂಚನಗೊಂಡ ಆ ದುರ್ಧರ್ಷನು ಕಾರ್ಯವು ಯಶಸ್ವಿಯಾಯಿತು ಎಂದು ಅಂದುಕೊಂಡನು. ಅವರಿಬ್ಬರೂ ಸಂಹೃಷ್ಟರಾಗಿ ಮಹೇಶ್ವರನ್ನು ತಲೆಬಾಗಿ ನಮಸ್ಕರಿಸಿದರು.

07057081a ಅನುಜ್ಞಾತೌ ಕ್ಷಣೇ ತಸ್ಮಿನ್ಭವೇನಾರ್ಜುನಕೇಶವೌ।
07057081c ಪ್ರಾಪ್ತೌ ಸ್ವಶಿಬಿರಂ ವೀರೌ ಮುದಾ ಪರಮಯಾ ಯುತೌ।
07057081e ಇಂದ್ರಾವಿಷ್ಣೂ ಯಥಾ ಪ್ರೀತೌ ಜಂಭಸ್ಯ ವಧಕಾಂಕ್ಷಿಣೌ।।

ಕ್ಷಣದಲ್ಲಿಯೇ ಭವನಿಂದ ಅಪ್ಪಣೆ ಪಡೆದು ವೀರ ಅರ್ಜುನ-ಕೇಶವರು ಜಂಭನ ವಧೆಯನ್ನು ಬಯಸಿ ಸಂತೋಷದಿಂದ ಇಂದ್ರ-ವಿಷ್ಣುಗಳು ಹೇಗೋ ಹಾಗೆ ಪರಮಸಂತೋಷಗೊಂಡವರಾಗಿ ತಮ್ಮ ಶಿಬಿರಕ್ಕೆ ಮರಳಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಪ್ರತಿಜ್ಞಾ ಪರ್ವಣಿ ಅರ್ಜುನಸ್ಯ ಪುನಃ ಪಾಶುಪತಾಸ್ತ್ರಪ್ರಾಪ್ತೌ ಸಪ್ತಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಪ್ರತಿಜ್ಞಾ ಪರ್ವದಲ್ಲಿ ಅರ್ಜುನಸ್ಯ ಪುನಃ ಪಾಶುಪತಾಸ್ತ್ರಪ್ರಾಪ್ತಿ ಎನ್ನುವ ಐವತ್ತೇಳನೇ ಅಧ್ಯಾಯವು.