054 ಸುಭದ್ರಾಶ್ವಾಸನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಪ್ರತಿಜ್ಞಾ ಪರ್ವ

ಅಧ್ಯಾಯ 54

ಸಾರ

ದಾರುಣ ಉತ್ಪಾತ ದರ್ಶನ (1-8). ಶ್ರೀಕೃಷ್ಣನು ಸುಭದ್ರೆಯನ್ನು ಸಂತವಿಸಿದ್ದುದು (9-26).

07054001 ಸಂಜಯ ಉವಾಚ।
07054001a ತಾಂ ನಿಶಾಂ ದುಃಖಶೋಕಾರ್ತೌ ಶ್ವಸಂತಾವಿವ ಚೋರಗೌ।
07054001c ನಿದ್ರಾಂ ನೈವೋಪಲೇಭಾತೇ ವಾಸುದೇವಧನಂಜಯೌ।।

ಸಂಜಯನು ಹೇಳಿದನು: “ವಾಸುದೇವ-ಧನಂಜಯರು ದುಃಖಶೋಕಾರ್ತರಾಗಿ ಸರ್ಪಗಳಂತೆ ನಿಟ್ಟುಸಿರು ಬಿಡುತ್ತಾ ನಿದ್ರೆಯನ್ನು ಪಡೆಯಲಾರದೇ ಹೋದರು.

07054002a ನರನಾರಾಯಣೌ ಕ್ರುದ್ಧೌ ಜ್ಞಾತ್ವಾ ದೇವಾಃ ಸವಾಸವಾಃ।
07054002c ವ್ಯಥಿತಾಶ್ಚಿಂತಯಾಮಾಸುಃ ಕಿಂ ಸ್ವಿದೇತದ್ಭವಿಷ್ಯತಿ।।

ನರ-ನಾರಾಯಣರು ಕ್ರುದ್ಧರಾಗಿದ್ದಾರೆ ಎನ್ನುವುದನ್ನು ತಿಳಿದು ವಾಸವನೊಂದಿಗೆ ದೇವತೆಗಳು ವ್ಯಥಿತರಾಗಿ ಮುಂದೇನು ನಡೆಯಲಿದೆ? ಎಂದು ಚಿಂತಿಸತೊಡಗಿದರು.

07054003a ವವುಶ್ಚ ದಾರುಣಾ ವಾತಾ ರೂಕ್ಷಾ ಗೋರಾಭಿಶಂಸಿನಃ।
07054003c ಸಕಬಂಧಸ್ತಥಾದಿತ್ಯೇ ಪರಿಘಃ ಸಮದೃಶ್ಯತ।।

ಭಯಸೂಚಕವಾದ ದಾರುಣ ಕ್ರೂರ ಗಾಳಿಯು ಬೀಸತೊಡಗಿತು. ಸೂರ್ಯನ ಸುತ್ತಲೂ ದುಂಡಾದ ಪರಿಧಿಯು ಕಬಂಧದೊಡನೆ ಕಾಣಿಸಿಕೊಂಡಿತು.

07054004a ಶುಷ್ಕಾಶನ್ಯಶ್ಚ ನಿಷ್ಪೇತುಃ ಸನಿರ್ಘಾತಾಃ ಸವಿದ್ಯುತಃ।
07054004c ಚಚಾಲ ಚಾಪಿ ಪೃಥಿವೀ ಸಶೈಲವನಕಾನನಾ।।

ಮಿಂಚಿನೊಡನೆ ಗರ್ಜಿಸುತ್ತಾ ಒಣ ಸಿಡಿಲುಗಳು ಸಿಡಿದವು. ಶೈಲ-ವನ-ಕಾನನಗಳೊಂದಿಗೆ ಭೂಮಿಯು ನಡುಗಿತು.

07054005a ಚುಕ್ಷುಭುಶ್ಚ ಮಹಾರಾಜ ಸಾಗರಾ ಮಕರಾಲಯಾಃ।
07054005c ಪ್ರತಿಸ್ರೋತಃ ಪ್ರವೃತ್ತಾಶ್ಚ ತಥಾ ಗಂತುಂ ಸಮುದ್ರಗಾಃ।।

ಮಹಾರಾಜ! ಮಕರಾಲಯ ಸಾಗರಗಳು ಅಲ್ಲೋಲಕಲ್ಲೋಲಗೊಂಡವು. ಸಮುದ್ರದ ಕಡೆ ಹರಿಯುತ್ತಿದ್ದ ನದಿಗಳು ಹಿಂದಿರುಗಿ ಅವು ಹುಟ್ಟಿದ ಕಡೆ ಹರಿಯತೊಡಗಿದವು.

07054006a ರಥಾಶ್ವನರನಾಗಾನಾಂ ಪ್ರವೃತ್ತಮಧರೋತ್ತರಂ।
07054006c ಕ್ರವ್ಯಾದಾನಾಂ ಪ್ರಮೋದಾರ್ಥಂ ಯಮರಾಷ್ಟ್ರವಿವೃದ್ಧಯೇ।।

ಯಮನ ರಾಷ್ಟ್ರನ ವೃದ್ಧಿಗಾಗಿ ಮತ್ತು ಕ್ರವ್ಯಾದಗಳ ಸಂತೋಷಾರ್ಥವಾಗಿ ಅಶ್ವ-ಗಜ-ರಥ-ಪದಾತಿ ಸೈನಿಕರ ಎರಡು ತುಟಿಗಳೂ ಅದುರತೊಡಗಿದವು.

07054007a ವಾಹನಾನಿ ಶಕೃನ್ಮೂತ್ರೇ ಮುಮುಚೂ ರುರುದುಶ್ಚ ಹ।
07054007c ತಾನ್ದೃಷ್ಟ್ವಾ ದಾರುಣಾನ್ಸರ್ವಾನುತ್ಪಾತಾಽಲ್ಲೋಮಹರ್ಷಣಾನ್।।

ಆ ಎಲ್ಲ ರೋಮಾಂಚಕಾರೀ ದಾರುಣ ಉತ್ಪಾತಗಳನ್ನು ನೋಡಿ ವಾಹನಗಳು ರೋದಿಸಿದವು ಮತ್ತು ಮಲಮೂತ್ರಗಳನ್ನು ವಿಸರ್ಜಿಸಿದವು.

07054008a ಸರ್ವೇ ತೇ ವ್ಯಥಿತಾಃ ಸೈನ್ಯಾಸ್ತ್ವದೀಯಾ ಭರತರ್ಷಭ।
07054008c ಶ್ರುತ್ವಾ ಮಹಾಬಲಸ್ಯೋಗ್ರಾಂ ಪ್ರತಿಜ್ಞಾಂ ಸವ್ಯಸಾಚಿನಃ।।

ಭರತರ್ಷಭ! ನಿನ್ನ ಸೇನೆಯವರೆಲ್ಲರೂ ಮಹಾಬಲ ಸವ್ಯಸಾಚಿಯ ಉಗ್ರ ಪ್ರತಿಜ್ಞೆಯನ್ನು ಕೇಳಿ ವ್ಯಥಿತರಾದರು.

07054009a ಅಥ ಕೃಷ್ಣಂ ಮಹಾಬಾಹುರಬ್ರವೀತ್ಪಾಕಶಾಸನಿಃ।
07054009c ಆಶ್ವಾಸಯ ಸುಭದ್ರಾಂ ತ್ವಂ ಭಗಿನೀಂ ಸ್ನುಷಯಾ ಸಹ।।

ಆಗ ಮಹಾಬಾಹು ಪಾಕಶಾಸನಿಯು ಕೃಷ್ಣನಿಗೆ ಹೇಳಿದನು: “ಸೊಸೆಯೊಂದಿಗಿರುವ ನಿನ್ನ ತಂಗಿ ಸುಭದ್ರೆಯನ್ನು ಸಂತವಿಸು!

07054010a ಸ್ನುಷಾ ಶ್ವಶ್ವ್ರಾನಘಾಯಸ್ತೇ ವಿಶೋಕೇ ಕುರು ಮಾಧವ।
07054010c ಸಾಮ್ನಾ ಸತ್ಯೇನ ಯುಕ್ತೇನ ವಚಸಾಶ್ವಾಸಯ ಪ್ರಭೋ।।

ಮಾಧವ! ಪ್ರಭೋ! ಸೊಸೆಯ ಮತ್ತು ಅವಳ ಸಖಿಯರ ಶೋಕವನ್ನು ಸಾಂತ್ವನದ ಮತ್ತು ಸತ್ಯದಿಂದ ಕೂಡಿದ ಮಾತುಗಳಿಂದ ದೂರಮಾಡು!”

07054011a ತತೋಽರ್ಜುನಗೃಹಂ ಗತ್ವಾ ವಾಸುದೇವಃ ಸುದುರ್ಮನಾಃ।
07054011c ಭಗಿನೀಂ ಪುತ್ರಶೋಕಾರ್ತಾಮಾಶ್ವಾಸಯತ ದುಃಖಿತಾಂ।।

ಆಗ ವಾಸುದೇವನು ದುಃಖದಿಂದ ಅರ್ಜುನನ ಮನೆಗೆ ಹೋಗಿ ಪುತ್ರಶೋಕದಿಂದ ಆರ್ತಳಾಗಿ ದುಃಖಿತಳಾಗಿದ್ದ ತಂಗಿಯನ್ನು ಸಂತವಿಸಿದನು:

07054012a ಮಾ ಶೋಕಂ ಕುರು ವಾರ್ಷ್ಣೇಯಿ ಕುಮಾರಂ ಪ್ರತಿ ಸಸ್ನುಷಾ।
07054012c ಸರ್ವೇಷಾಂ ಪ್ರಾಣಿನಾಂ ಭೀರು ನಿಷ್ಠೈಷಾ ಕಾಲನಿರ್ಮಿತಾ।।

“ವಾರ್ಷ್ಣೇಯೀ! ಸೊಸೆಯೊಂದಿಗೆ ಕುಮಾರನಿಗಾಗಿ ಶೋಕಿಸಬೇಡ! ಭೀರು! ಪ್ರಾಣಿಗಳೆಲ್ಲವೂ ಕಾಲನಿರ್ಮಿತವಾದ ಈ ಪರಿಸ್ಥಿತಿಗೆ ಬಂದೇ ಬರುತ್ತವೆ.

07054013a ಕುಲೇ ಜತಸ್ಯ ವೀರಸ್ಯ ಕ್ಷತ್ರಿಯಸ್ಯ ವಿಶೇಷತಃ।
07054013c ಸದೃಶಂ ಮರಣಂ ಹ್ಯೇತತ್ತವ ಪುತ್ರಸ್ಯ ಮಾ ಶುಚಃ।।

ವಿಶೇಷವಾಗಿ ವೀರ ಕ್ಷತ್ರಿಯರ ಕುಲದಲ್ಲಿ ಹುಟ್ಟಿದ ಈ ನಿನ್ನ ಪುತ್ರನ ಮರಣವು ಅವನಿಗೆ ತಕ್ಕುದಾಗಿದೆ. ಶೋಕಿಸಬೇಡ!

07054014a ದಿಷ್ಟ್ಯಾ ಮಹಾರಥೋ ವೀರಃ ಪಿತುಸ್ತುಲ್ಯಪರಾಕ್ರಮಃ।
07054014c ಕ್ಷಾತ್ರೇಣ ವಿಧಿನಾ ಪ್ರಾಪ್ತೋ ವೀರಾಭಿಲಷಿತಾಂ ಗತಿಂ।।

ಅದೃಷ್ಟದಿಂದ ತನ್ನ ತಂದೆಯ ಪರಾಕ್ರಮಕ್ಕೆ ಸಮನಾದ ವೀರ ಮಹಾರಥನು ಕ್ಷಾತ್ರ ವೀರರು ಬಯಸುವ ಗತಿಯನ್ನು ವಿಧಿವತ್ತಾಗಿಯೇ ಪಡೆದಿದ್ದಾನೆ.

07054015a ಜಿತ್ವಾ ಸುಬಹುಶಃ ಶತ್ರೂನ್ಪ್ರೇಷಯಿತ್ವಾ ಚ ಮೃತ್ಯವೇ।
07054015c ಗತಃ ಪುಣ್ಯಕೃತಾಂ ಲೋಕಾನ್ಸರ್ವಕಾಮದುಹೋಽಕ್ಷಯಾನ್।।

ಬಹಳಷ್ಟು ಶತ್ರುಗಳನ್ನು ಗೆದ್ದು, ಮೃತ್ಯುಲೋಕಗಳಿಗೂ ಕಳುಹಿಸಿ ಅವನು ಸರ್ವಕಾಮಗಳನ್ನೂ ಪೂರೈಸಬಲ್ಲ ಪುಣ್ಯಕೃತರ ಅಕ್ಷಯ ಲೋಕಗಳಿಗೆ ಹೋಗಿದ್ದಾನೆ.

07054016a ತಪಸಾ ಬ್ರಹ್ಮಚರ್ಯೇಣ ಶ್ರುತೇನ ಪ್ರಜ್ಞಯಾಪಿ ಚ।
07054016c ಸಂತೋ ಯಾಂ ಗತಿಮಿಚ್ಚಂತಿ ಪ್ರಾಪ್ತಸ್ತಾಂ ತವ ಪುತ್ರಕಃ।।

ತಪಸ್ಸು, ಬ್ರಹ್ಮಚರ್ಯ, ಶಾಸ್ತ್ರಜ್ಞಾನ ಮತ್ತು ಪ್ರಜ್ಞೆಯ ಮೂಲಕ ಸಂತರು ಯಾವ ಗತಿಯನ್ನು ಬಯಸುತ್ತಾರೋ ಆ ಗತಿಯನ್ನೇ ನಿನ್ನ ಮಗನು ಪಡೆದಿದ್ದಾನೆ.

07054017a ವೀರಸೂರ್ವೀರಪತ್ನೀ ತ್ವಂ ವೀರಶ್ವಶುರಬಾಂಧವಾ।
07054017c ಮಾ ಶುಚಸ್ತನಯಂ ಭದ್ರೇ ಗತಃ ಸ ಪರಮಾಂ ಗತಿಂ।।

ಭದ್ರೇ! ವೀರಮಾತೆಯಾದ, ವೀರನ ಪತ್ನಿಯಾದ, ವೀರಪುತ್ರಿಯಾದ, ವೀರರನ್ನೇ ಬಾಂಧವರನ್ನಾಗಿ ಪಡೆದಿರುವ ನೀನು ಮಗನ ಕುರಿತು ಶೋಕಿಸಬೇಡ. ಅವನು ಪರಮ ಗತಿಯನ್ನು ಪಡೆದಿದ್ದಾನೆ.

07054018a ಪ್ರಾಪ್ಸ್ಯತೇ ಚಾಪ್ಯಸೌ ಕ್ಷುದ್ರಃ ಸೈಂಧವೋ ಬಾಲಘಾತಕಃ।
07054018c ಅಸ್ಯಾವಲೇಪಸ್ಯ ಫಲಂ ಸಸುಹೃದ್ಗಣಬಾಂಧವಃ।।

ಕ್ಷುದ್ರ ಬಾಲಘಾತಕ ಸೈಂಧವನು ತನ್ನ ಸುಹೃದ್ಗಣ-ಬಾಂಧವರೊಂದಿಗೆ ಈ ಪಾಪದ ಫಲವನ್ನು ಪಡೆಯುತ್ತಾನೆ.

07054019a ವ್ಯುಷ್ಟಾಯಾಂ ತು ವರಾರೋಹೇ ರಜನ್ಯಾಂ ಪಾಪಕರ್ಮಕೃತ್।
07054019c ನ ಹಿ ಮೋಕ್ಷ್ಯತಿ ಪಾರ್ಥಾತ್ಸ ಪ್ರವಿಷ್ಟೋಽಪ್ಯಮರಾವತೀಂ।।

ವರಾರೋಹೇ! ಈ ರಾತ್ರಿ ಕಳೆದರೆ ಆ ಪಾಪಕರ್ಮಿಯು ಅಮರಾವತಿಯಲ್ಲಿ ಹೊಕ್ಕಿಕೊಂಡರೂ ಪಾರ್ಥನಿಂದ ಬಿಡುಗಡೆ ಹೊಂದಲಾರ!

07054020a ಶ್ವಃ ಶಿರಃ ಶ್ರೋಷ್ಯಸೇ ತಸ್ಯ ಸೈಂಧವಸ್ಯ ರಣೇ ಹೃತಂ।
07054020c ಸಮಂತಪಂಚಕಾದ್ಬಾಹ್ಯಂ ವಿಶೋಕಾ ಭವ ಮಾ ರುದಃ।।

ಸೈಂಧವನ ಶಿರಸ್ಸು ರಣದಲ್ಲಿ ಹಾರಿಹೋಗಿ ಸಮಂತಪಂಚಕದ ಹೊರಗೆ ಬಿದ್ದಿತು ಎನ್ನುವುದನ್ನು ನೀನು ನಾಳೆಯೇ ಕೇಳುವೆ. ಶೋಕರಹಿತಳಾಗಿರು. ರೋದಿಸಬೇಡ!

07054021a ಕ್ಷತ್ರಧರ್ಮಂ ಪುರಸ್ಕೃತ್ಯ ಗತಃ ಶೂರಃ ಸತಾಂ ಗತಿಂ।
07054021c ಯಾಂ ವಯಂ ಪ್ರಾಪ್ನುಯಾಮೇಹ ಯೇ ಚಾನ್ಯೇ ಶಸ್ತ್ರಜೀವಿನಃ।।

ಕ್ಷತ್ರಧರ್ಮವನ್ನು ಆದರಿಸಿ ಅವನು ಶೂರ ಸಂತರ ಗತಿಯನ್ನು ಪಡೆದಿದ್ದಾನೆ. ನಾವು ಮತ್ತು ಅನ್ಯ ಶಸ್ತ್ರಜೀವಿಗಳೂ ಕೂಡ ಇದೇ ಗತಿಯನ್ನು ಪಡೆಯುತ್ತೇವೆ.

07054022a ವ್ಯೂಢೋರಸ್ಕೋ ಮಹಾಬಾಹುರನಿವರ್ತೀ ವರಪ್ರಣುತ್।
07054022c ಗತಸ್ತವ ವರಾರೋಹೇ ಪುತ್ರಃ ಸ್ವರ್ಗಂ ಜ್ವರಂ ಜಹಿ।।

ವರಾರೋಹೇ! ವಿಶಾಲ ಹೆಗಲಿನ, ಯುದ್ಧದಲ್ಲಿ ಬೆನ್ನುತೋರಿಸದ, ಶತ್ರುಗಳನ್ನು ಗೆದ್ದ ನಿನ್ನ ಮಗ ಆ ಮಹಾಬಾಹುವು ಸ್ವರ್ಗಕ್ಕೆ ಹೋಗಿದ್ದಾನೆ. ಪರಿತಪಿಸುವುದನ್ನು ಬಿಡು!

07054023a ಅನು ಜಾತಶ್ಚ ಪಿತರಂ ಮಾತೃಪಕ್ಷಂ ಚ ವೀರ್ಯವಾನ್।
07054023c ಸಹಸ್ರಶೋ ರಿಪೂನ್ ಹತ್ವಾ ಹತಃ ಶೂರೋ ಮಹಾರಥಃ।।

ಆ ಶೂರ ಮಹಾರಥ ವೀರ್ಯವಾನನು ತಂದೆ ಮತ್ತು ತಾಯಿಯ ಕುಲಗಳನ್ನು ಅನುಸರಿಸಿ ಸಹಸ್ರಾರು ಶತ್ರುಗಳನ್ನು ಸಂಹರಿಸಿ ಹತನಾದನು.

07054024a ಆಶ್ವಾಸಯ ಸ್ನುಷಾಂ ರಾಜ್ಞಿ ಮಾ ಶುಚಃ ಕ್ಷತ್ರಿಯೇ ಭೃಷಂ।
07054024c ಶ್ವಃ ಪ್ರಿಯಂ ಸುಮಹಚ್ಚ್ರುತ್ವಾ ವಿಶೋಕಾ ಭವ ನಂದಿನಿ।।

ರಾಣಿ! ಕ್ಷತ್ರಿಯೇ! ನಿನ್ನ ಸೊಸೆಯನ್ನು ಸಂತವಿಸು. ತುಂಬಾ ದುಃಖಿಸಬೇಡ. ನಂದಿನಿ! ನಾಳೆಯೇ ನೀನು ಅತ್ಯಂತ ಪ್ರಿಯವಾರ್ತೆಯನ್ನು ಕೇಳುವೆ. ವಿಶೋಕಳಾಗು!

07054025a ಯತ್ಪಾರ್ಥೇನ ಪ್ರತಿಜ್ಞಾತಂ ತತ್ತಥಾ ನ ತದನ್ಯಥಾ।
07054025c ಚಿಕೀರ್ಷಿತಂ ಹಿ ತೇ ಭರ್ತುರ್ನ ಭವೇಜ್ಜಾತು ನಿಷ್ಫಲಂ।।

ಪಾರ್ಥನು ಪ್ರತಿಜ್ಞೆಮಾಡಿದಂತೆಯೇ ನಡೆಯುತ್ತದೆ. ಅನ್ಯಥಾ ಅಲ್ಲ. ನಿನ್ನ ಗಂಡನು ಬಯಸಿದುದು ಎಂದೂ ನಿಷ್ಫಲವಾಗುವುದಿಲ್ಲ.

07054026a ಯದಿ ಚ ಮನುಜಪನ್ನಗಾಃ ಪಿಶಾಚಾ ರಜನಿಚರಾಃ ಪತಗಾಃ ಸುರಾಸುರಾಶ್ಚ।
07054026c ರಣಗತಮಭಿಯಾಂತಿ ಸಿಂಧುರಾಜಂ ನ ಸ ಭವಿತಾ ಸಹ ತೈರಪಿ ಪ್ರಭಾತೇ।।

ಒಂದುವೇಳೆ ಮನುಷ್ಯರು, ಪನ್ನಗರು, ಪಿಶಾಚಿಗಳು, ರಜನೀಚರರು, ಪಕ್ಷಿಗಳು, ಸುರಾಸುರರೂ ಕೂಡ ರಣರಂಗದಲ್ಲಿ ಸೇರಿ ಸಿಂಧುರಾಜನನ್ನು ರಕ್ಷಿಸಲು ಬಂದರೂ ಬೆಳಿಗ್ಗೆ ಅವರೆಲ್ಲರೊಡನೆಯೂ ಅವನು ಉಳಿಯುವುದಿಲ್ಲ!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಪ್ರತಿಜ್ಞಾ ಪರ್ವಣಿ ಸುಭದ್ರಾಶ್ವಾಸನೇ ಚತುಷ್ಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಪ್ರತಿಜ್ಞಾ ಪರ್ವದಲ್ಲಿ ಸುಭದ್ರಾಶ್ವಾಸನ ಎನ್ನುವ ಐವತ್ನಾಲ್ಕನೇ ಅಧ್ಯಾಯವು.