053 ಅರ್ಜುನವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಪ್ರತಿಜ್ಞಾ ಪರ್ವ

ಅಧ್ಯಾಯ 53

ಸಾರ

ಕೌರವ ಶಿಬಿರದಲ್ಲಿ ನಡೆದುದನ್ನು ವರದಿ ಮಾಡುತ್ತಾ ಕೃಷ್ಣನು “ಒಟ್ಟಿಗೇ ಆ ನರವ್ಯಾಘ್ರರನ್ನು ಜಯಿಸುವುದು ಶಕ್ಯವಿಲ್ಲವೆನಿಸುತ್ತದೆ” ಎಂದು ಅರ್ಜುನನಿಗೆ ಹೇಳಿದುದು (1-30). ಅರ್ಜುನನ ಧೈರ್ಯಯುಕ್ತ ಮಾತುಗಳು (31-56).

07053001 ಸಂಜಯ ಉವಾಚ।
07053001a ಪ್ರತಿಜ್ಞಾತೇ ತು ಪಾರ್ಥೇನ ಸಿಂಧುರಾಜವಧೇ ತದಾ।
07053001c ವಾಸುದೇವೋ ಮಹಾಬಾಹುರ್ಧನಂಜಯಮಭಾಷತ।।

ಸಂಜಯನು ಹೇಳಿದನು: “ಪಾರ್ಥನು ಸಿಂಧುರಾಜನ ವಧೆಯ ಪ್ರತಿಜ್ಞೆಯನ್ನು ಮಾಡಲು ಮಹಾಬಾಹು ವಾಸುದೇವನು ಧನಂಜಯನಿಗೆ ಹೇಳಿದನು:

07053002a ಭ್ರಾತೄಣಾಂ ಮತಮಾಜ್ಞಾಯ ತ್ವಯಾ ವಾಚಾ ಪ್ರತಿಶ್ರುತಂ।
07053002c ಸೈಂಧವಂ ಶ್ವೋಽಸ್ಮಿ ಹಂತೇತಿ ತತ್ಸಾಹಸತಮಂ ಕೃತಂ।।

“ಸಹೋದರರ ಅಭಿಪ್ರಾಯಗಳನ್ನು ತಿಳಿಯದೆಯೇ ನೀನು “ನಾಳೆ ಸೈಂಧವನನ್ನು ಕೊಲ್ಲುತ್ತೇನೆ!” ಎಂದು ಅತಿಸಾಹಸ ಕಾರ್ಯವನ್ನು ಮಾತಿನ ಮೂಲಕ ಕೇಳಿಸಿಬಿಟ್ಟೇ!

07053003a ಅಸಮ್ಮಂತ್ರ್ಯ ಮಯಾ ಸಾರ್ಧಮತಿಭಾರೋಽಯಮುದ್ಯತಃ।
07053003c ಕಥಂ ನು ಸರ್ವಲೋಕಸ್ಯ ನಾವಹಾಸ್ಯಾ ಭವೇಮಹಿ।।

ನನ್ನೊಡನೆ ಕೂಡ ವಿಚಾರಿಸದೇ ನೀನು ಅತಿಭಾರವಾದ ಈ ಕಾರ್ಯವನ್ನು ವಹಿಸಿಕೊಂಡಿರುವೆ. ಈಗ ನಾವು ಸರ್ವಲೋಕದ ಅಪಹಾಸ್ಯಕ್ಕೆ ಒಳಗಾಗದಂತೆ ಹೇಗೆ ಮುಂದುವರೆಯಬೇಕು?

07053004a ಧಾರ್ತರಾಷ್ಟ್ರಸ್ಯ ಶಿಬಿರೇ ಮಯಾ ಪ್ರಣಿಹಿತಾಶ್ಚರಾಃ।
07053004c ತ ಇಮೇ ಶೀಘ್ರಮಾಗಮ್ಯ ಪ್ರವೃತ್ತಿಂ ವೇದಯಂತಿ ನಃ।।

ಧಾರ್ತರಾಷ್ಟ್ರನ ಶಿಬಿರಕ್ಕೆ ನಾನು ಕಳುಹಿಸಿದ ಚರರು ಶೀಘ್ರವಾಗಿ ಬಂದು ಅಲ್ಲಿ ನಡೆದುದನ್ನು ನನಗೆ ತಿಳಿಸಿದ್ದಾರೆ.

07053005a ತ್ವಯಾ ವೈ ಸಂಪ್ರತಿಜ್ಞಾತೇ ಸಿಂಧುರಾಜವಧೇ ತದಾ।
07053005c ಸಿಂಹನಾದಃ ಸವಾದಿತ್ರಃ ಸುಮಹಾನಿಹ ತೈಃ ಶ್ರುತಃ।।

ನೀನು ಸಿಂಧುರಾಜವಧೆಯ ಪ್ರತಿಜ್ಞೆ ಮಾಡಿದಾಗ ಇಲ್ಲಿ ಆದ ಮಹಾ ಸಿಂಹನಾದವನ್ನು ಅವರು ಕೇಳಿದರು.

07053006a ತೇನ ಶಬ್ದೇನ ವಿತ್ರಸ್ತಾ ಧಾರ್ತರಾಷ್ಟ್ರಾಃ ಸಸೈಂಧವಾಃ।
07053006c ನಾಕಸ್ಮಾತ್ಸಿಂಹನಾದೋಽಯಮಿತಿ ಮತ್ವಾ ವ್ಯವಸ್ಥಿತಾಃ।।

ಆ ಶಬ್ಧದಿಂದ ಭಯಗೊಂಡ ಸೈಂಧವನೊಂದಿಗೆ ಧಾರ್ತರಾಷ್ಟ್ರರು ಇದು ಅಕಸ್ಮಾತ್ತಾಗಿ ಕೇಳಿಬಂದ ಸಿಂಹನಾದವಲ್ಲವೆಂದು ಅಭಿಪ್ರಾಯಪಟ್ಟು ಒಟ್ಟು ಗೂಡಿದರು.

07053007a ಸುಮಹಾಂ ಶಬ್ದಸಂಪಾತಃ ಕೌರವಾಣಾಂ ಮಹಾಭುಜ।
07053007c ಆಸೀನ್ನಾಗಾಶ್ವಪತ್ತೀನಾಂ ರಥಘೋಷಶ್ಚ ಭೈರವಃ।।

ಮಹಾಭುಜ! ಕೌರವರ ಸೇನೆಗಳಲ್ಲಿಯೂ ಆನೆ-ಕುದುರೆ-ಪದಾತಿಗಳ ಮತ್ತು ರಥಘೋಷದ ಭೈರವ ಶಬ್ಧವು ಕೇಳಿಬಂದಿತು.

07053008a ಅಭಿಮನ್ಯುವಧಂ ಶ್ರುತ್ವಾ ಧ್ರುವಮಾರ್ತೋ ಧನಂಜಯಃ।
07053008c ರಾತ್ರೌ ನಿರ್ಯಾಸ್ಯತಿ ಕ್ರೋಧಾದಿತಿ ಮತ್ವಾ ವ್ಯವಸ್ಥಿತಾಃ।।

ಅಭಿಮನ್ಯುವಿನ ವಧೆಯನ್ನು ಕೇಳಿ ಆರ್ತನಾದ ಧನಂಜಯನು ನಿಶ್ಚಯವಾಗಿ ಕ್ರೋಧದಿಂದ ರಾತ್ರಿಯೇ ಯುದ್ಧಕ್ಕೆ ಹೊರಡುತ್ತಾನೆ ಎಂದು ಯೋಚಿಸಿ ಅವರು ಸನ್ನದ್ಧರಾಗಿದ್ದರು.

07053009a ತೈರ್ಯತದ್ಭಿರಿಯಂ ಸತ್ಯಾ ಶ್ರುತಾ ಸತ್ಯವತಸ್ತವ।
07053009c ಪ್ರತಿಜ್ಞಾ ಸಿಂಧುರಾಜಸ್ಯ ವಧೇ ರಾಜೀವಲೋಚನ।।

ರಾಜೀವಲೋಚನ! ಆಗ ಅವರು ಸತ್ಯವತನಾದ ನೀನು ಸಿಂಧುರಾಜನ ವಧೆಯ ಕುರಿತು ಮಾಡಿದ ಪ್ರತಿಜ್ಞೆಯ ಸತ್ಯವನ್ನು ಕೇಳಿ ತಿಳಿದುಕೊಂಡರು.

07053010a ತತೋ ವಿಮನಸಃ ಸರ್ವೇ ತ್ರಸ್ತಾಃ ಕ್ಷುದ್ರಮೃಗಾ ಇವ।
07053010c ಆಸನ್ಸುಯೋಧನಾಮಾತ್ಯಾಃ ಸ ಚ ರಾಜಾ ಜಯದ್ರಥಃ।।
07053011a ಅಥೋತ್ಥಾಯ ಸಹಾಮಾತ್ಯೈರ್ದೀನಃ ಶಿಬಿರಮಾತ್ಮನಃ।
07053011c ಆಯಾತ್ಸೌವೀರಸಿಂಧೂನಾಮೀಶ್ವರೋ ಭೃಶದುಃಖಿತಃ।।

ಆಗ ಸುಯೋಧನ ಮತ್ತು ಅವನ ಅಮಾತ್ಯರು ಕ್ಷುದ್ರಮೃಗಗಳಂತೆ ಭಯಗೊಂಡು ವಿಮನಸ್ಕರಾಗಿ ಕುಳಿತುಕೊಂಡರು. ಆಗ ದೀನ ಸೌವೀರ ಸಿಂಧುಗಳ ಒಡೆಯ ರಾಜಾ ಜಯದ್ರಥನು ತುಂಬಾ ದುಃಖಿತನಾಗಿ ಎದ್ದು ಅಮಾತ್ಯರೊಡಗೂಡಿ ತನ್ನ ಶಿಬಿರಕ್ಕೆ ತೆರಳಿದನು.

07053012a ಸ ಮಂತ್ರಕಾಲೇ ಸಮ್ಮಂತ್ರ್ಯ ಸರ್ವಾ ನೈಃಶ್ರೇಯಸೀಃ ಕ್ರಿಯಾಃ।
07053012c ಸುಯೋಧನಮಿದಂ ವಾಕ್ಯಮಬ್ರವೀದ್ರಾಜಸಂಸದಿ।।

ಅವನು ಯೋಚಿಸಬೇಕಾದ ಸಮಯದಲ್ಲಿ ಶ್ರೇಯಸ್ಸುಂಟುಮಾಡುವ ಎಲ್ಲ ಕ್ರಿಯೆಗಳ ಕುರಿತು ಮಂತ್ರಾಲೋಚನೆ ಮಾಡಿ ರಾಜಸಂಸದಿಗೆ ಬಂದು ಸುಯೋಧನನಿಗೆ ಈ ಮಾತನ್ನಾಡಿದನು:

07053013a ಮಾಮಸೌ ಪುತ್ರಹಂತೇತಿ ಶ್ವೋಽಭಿಯಾತಾ ಧನಂಜಯಃ।
07053013c ಪ್ರತಿಜ್ಞಾತೋ ಹಿ ಸೇನಾಯಾ ಮಧ್ಯೇ ತೇನ ವಧೋ ಮಮ।।

“ತನ್ನ ಮಗನನ್ನು ಕೊಂದವನು ನಾನು ಎಂದು ತಿಳಿದು ಧನಂಜಯನು ನಾಳೆ ಯುದ್ಧದಲ್ಲಿ ನನ್ನನ್ನು ಎದುರಿಸುವನಿದ್ದಾನೆ. ಅವನ ಸೇನೆಯ ಮಧ್ಯೆ ನನ್ನನ್ನು ವಧಿಸುವ ಪ್ರತಿಜ್ಞೆಯನ್ನೂ ಮಾಡಿದ್ದಾನೆ.

07053014a ತಾಂ ನ ದೇವಾ ನ ಗಂಧರ್ವಾ ನಾಸುರೋರಗರಾಕ್ಷಸಾಃ।
07053014c ಉತ್ಸಹಂತೇಽನ್ಯಥಾ ಕರ್ತುಂ ಪ್ರತಿಜ್ಞಾಂ ಸವ್ಯಸಾಚಿನಃ।।

ಸವ್ಯಸಾಚಿಯ ಪ್ರತಿಜ್ಞೆಯನ್ನು ದೇವತೆಗಳಾಗಲೀ, ಗಂಧರ್ವರಾಗಲೀ, ಅಸುರ-ಉರಗ-ರಾಕ್ಷಸರಾಗಲೀ ಸುಳ್ಳುಮಾಡಲು ಉತ್ಸುಕರಾಗಿಲ್ಲ.

07053015a ತೇ ಮಾಂ ರಕ್ಷತ ಸಂಗ್ರಾಮೇ ಮಾ ವೋ ಮೂರ್ಧ್ನಿ ಧನಂಜಯಃ।
07053015c ಪದಂ ಕೃತ್ವಾಪ್ನುಯಾಲ್ಲಕ್ಷ್ಯಂ ತಸ್ಮಾದತ್ರ ವಿಧೀಯತಾಂ।।

ಆದುದರಿಂದ ನೀವೆಲ್ಲರೂ ಸಂಗ್ರಾಮದಲ್ಲಿ ನನ್ನನ್ನು ರಕ್ಷಿಸಬೇಕು. ನಿಮ್ಮ ನೆತ್ತಿಯ ಮೇಲೆ ಕಾಲಿಟ್ಟು ಧನಂಜಯನು ತನ್ನ ಗುರಿಯನ್ನು ಹೊಡೆಯಲು ಬಿಡಬೇಡಿ!

07053016a ಅಥ ರಕ್ಷಾ ನ ಮೇ ಸಂಖ್ಯೇ ಕ್ರಿಯತೇ ಕುರುನಂದನ।
07053016c ಅನುಜಾನೀಹಿ ಮಾಂ ರಾಜನ್ಗಮಿಷ್ಯಾಮಿ ಗೃಹಾನ್ಪ್ರತಿ।।

ಕುರುನಂದನ! ಯುದ್ಧದಲ್ಲಿ ನೀನು ನನ್ನನ್ನು ರಕ್ಷಿಸಲಾರೆ ಎಂದಾದರೆ ರಾಜನ್! ನನಗೆ ಅನುಜ್ಞೆಯನ್ನು ನೀಡು. ನಾನು ನನ್ನ ಮನೆಗೆ ಹೋಗುತ್ತೇನೆ.”

07053017a ಏವಮುಕ್ತಸ್ತ್ವವಾಕ್ಶೀರ್ಷೋ ವಿಮನಾಃ ಸ ಸುಯೋಧನಃ।
07053017c ಶ್ರುತ್ವಾಭಿಶಪ್ತವಂತಂ ತ್ವಾಂ ಧ್ಯಾನಂ ಏವಾನ್ವಪದ್ಯತ।।

ಹೀಗೆ ಹೇಳಲು ಸುಯೋಧನನು ವಿಮನಸ್ಕನಾಗಿ ತಲೆತಗ್ಗಿಸಿ ಯೋಚಿಸಿದನು. ಅವನು ಹೀಗೆ ಶಪಿತನಾದುದನ್ನು ಕೇಳಿ ಸುಮ್ಮನಾಗಿ ಯೋಚಿಸತೊಡಗಿದನು.

07053018a ತಮಾರ್ತಮಭಿಸಂಪ್ರೇಕ್ಷ್ಯ ರಾಜಾ ಕಿಲ ಸ ಸೈಂಧವಃ।
07053018c ಮೃದು ಚಾತ್ಮಹಿತಂ ಚೈವ ಸಾಪೇಕ್ಷಮಿದಮುಕ್ತವಾನ್।।

ರಾಜನು ದುಃಖಿತನಾಗಿರುವುದನ್ನು ನೋಡಿ ಸೈಂಧವನು ತನಗೆ ಒಳ್ಳೆಯದಾಗುವ ರೀತಿಯಲ್ಲಿ ಮೃದುವಾಗಿ ಹೀಗೆ ಹೇಳಿದನು:

07053019a ನಾಹಂ ಪಶ್ಯಾಮಿ ಭವತಾಂ ತಥಾವೀರ್ಯಂ ಧನುರ್ಧರಂ।
07053019c ಯೋಽರ್ಜುನಸ್ಯಾಸ್ತ್ರಮಸ್ತ್ರೇಣ ಪ್ರತಿಹನ್ಯಾನ್ಮಹಾಹವೇ।।

“ಮಹಾಹವದಲ್ಲಿ ಅರ್ಜುನನ ಅಸ್ತ್ರಗಳನ್ನು ಅಸ್ತ್ರಗಳಿಂದ ಪ್ರತಿಯಾಗಿ ಹೊಡೆಯಬಲ್ಲ, ಅವನಷ್ಟು ವೀರ್ಯವಂತನಾದ ಧನುರ್ಧರನನ್ನು ನಿನ್ನ ಕಡೆಯವರಲ್ಲಿ ಯಾರನ್ನೂ ನಾನು ಕಾಣುತ್ತಿಲ್ಲ.

07053020a ವಾಸುದೇವಸಹಾಯಸ್ಯ ಗಾಂಡೀವಂ ಧುನ್ವತೋ ಧನುಃ।
07053020c ಕೋಽರ್ಜುನಸ್ಯಾಗ್ರತಸ್ತಿಷ್ಠೇತ್ಸಾಕ್ಷಾದಪಿ ಶತಕ್ರತುಃ।।

ವಾಸುದೇವನನ್ನು ಸಹಾಯಕನಾಗಿ ಪಡೆದಿರುವ, ಗಾಂಡೀವ ಧನುಸ್ಸನ್ನು ಟೇಂಕರಿಸುವ ಅರ್ಜುನನ ಎದುರು ಸಾಕ್ಷಾತ್ ಶತಕ್ರತುವೇ ನಿಲ್ಲದಿರುವಾಗ ಬೇರೆ ಯಾರಿಗೆ ತಾನೇ ಇದು ಸಾಧ್ಯ?

07053021a ಮಹೇಶ್ವರೋಽಪಿ ಪಾರ್ಥೇನ ಶ್ರೂಯತೇ ಯೋಧಿತಃ ಪುರಾ।
07053021c ಪದಾತಿನಾ ಮಹಾತೇಜಾ ಗಿರೌ ಹಿಮವತಿ ಪ್ರಭುಃ।।

ಹಿಂದೆ ಹಿಮಾಲಯ ಗಿರಿಯಲ್ಲಿ ಮಹಾತೇಜಸ್ವಿ ಪ್ರಭೂ ಮಹೇಶ್ವರನೂ ಕೂಡ ಪಾರ್ಥನೊಂದಿಗೆ ನಿಂತೇ ಯುದ್ಧಮಾಡಿದನೆಂದು ಕೇಳಿದ್ದೇವೆ.

07053022a ದಾನವಾನಾಂ ಸಹಸ್ರಾಣಿ ಹಿರಣ್ಯಪುರವಾಸಿನಾಂ।
07053022c ಜಘಾನೇಕರಥೇನೈವ ದೇವರಾಜಪ್ರಚೋದಿತಃ।।

ದೇವರಾಜನಿಂದ ಉತ್ತೇಜಿತನಾದ ಅವನು ಒಬ್ಬನೇ ರಥದಲ್ಲಿ ಹಿರಣ್ಯಪುರವಾಸಿನೀ ಸಹಸ್ರಾರು ದಾನವರನ್ನು ಸಂಹರಿಸಿದನು.

07053023a ಸಮಾಯುಕ್ತೋ ಹಿ ಕೌಂತೇಯೋ ವಾಸುದೇವೇನ ಧೀಮತಾ।
07053023c ಸಾಮರಾನಪಿ ಲೋಕಾಂಸ್ತ್ರೀನ್ನಿಹನ್ಯಾದಿತಿ ಮೇ ಮತಿಃ।।

ಧೀಮತ ವಾಸುದೇವನಿಂದೊಡಗೂಡಿ ಕೌಂತೇಯನು ಅಮರರೊಂದಿಗೆ ಈ ಮೂರು ಲೋಕಗಳನ್ನೂ ನಾಶಗೊಳಿಸಬಲ್ಲ ಎಂದು ನನಗನ್ನಿಸುತ್ತದೆ.

07053024a ಸೋಽಹಮಿಚ್ಚಾಮ್ಯನುಜ್ಞಾತುಂ ರಕ್ಷಿತುಂ ವಾ ಮಹಾತ್ಮನಾ।
07053024c ದ್ರೋಣೇನ ಸಹಪುತ್ರೇಣ ವೀರೇಣ ಯದಿ ಮನ್ಯಸೇ।।

ಆದುದರಿಂದ ನೀನು ತಿಳಿದಂತೆ ನನಗೆ ಹೋಗಲು ಅನುಜ್ಞೆಯನ್ನು ನೀಡು ಅಥವಾ ವೀರ ಪುತ್ರನೊಂದಿಗೆ ಮಹಾತ್ಮ ದ್ರೋಣನು ನನ್ನನ್ನು ರಕ್ಷಿಸಲಿ.”

07053025a ಸ ರಾಜ್ಞಾ ಸ್ವಯಮಾಚಾರ್ಯೋ ಭೃಶಮಾಕ್ರಂದಿತೋಽರ್ಜುನ।
07053025c ಸಂವಿಧಾನಂ ಚ ವಿಹಿತಂ ರಥಾಶ್ಚ ಕಿಲ ಸಜ್ಜಿತಾಃ।।

ಅರ್ಜುನ! ಆಗ ಸ್ವಯಂ ರಾಜನು ತುಂಬಾ ಕಳವಳಗೊಂಡು ಆಚಾರ್ಯನೊಂದಿಗೆ ಒಪ್ಪಂದವನ್ನು ಮಾಡಿಕೊಂಡು ರಥಗಳನ್ನು ಸಜ್ಜುಗೊಳಿಸಲು ಆದೇಶವಿತ್ತಿದ್ದಾನೆ.

07053026a ಕರ್ಣೋ ಭೂರಿಶ್ರವಾ ದ್ರೌಣಿರ್ವೃಷಸೇನಶ್ಚ ದುರ್ಜಯಃ।
07053026c ಕೃಪಶ್ಚ ಮದ್ರರಾಜಶ್ಚ ಷಡೇತೇಽಸ್ಯ ಪುರೋಗಮಾಃ।।

ಕರ್ಣ, ಭೂರಿಶ್ರವ, ದ್ರೌಣಿ, ವೃಷಸೇನ, ದುರ್ಜಯ ಮತ್ತು ಮದ್ರರಾಜ ಈ ಆರು ಮಂದಿ ಎದುರಿರುತ್ತಾರೆ.

07053027a ಶಕಟಃ ಪದ್ಮಪಶ್ಚಾರ್ಧೋ ವ್ಯೂಹೋ ದ್ರೋಣೇನ ಕಲ್ಪಿತಃ।
07053027c ಪದ್ಮಕರ್ಣಿಕಮಧ್ಯಸ್ಥಃ ಸೂಚೀಪಾಶೇ ಜಯದ್ರಥಃ।
07053027e ಸ್ಥಾಸ್ಯತೇ ರಕ್ಷಿತೋ ವೀರೈಃ ಸಿಂಧುರಾಡ್ಯುದ್ಧದುರ್ಮದೈಃ।।

ಅರ್ಧ ಶಕಟ ಮತ್ತೊಂದು ಅರ್ಧ ಪದ್ಮಾಕಾರದ ವ್ಯೋಹವನ್ನು ದ್ರೋಣನು ಕಲ್ಪಿಸಿದ್ದಾನೆ. ಪದ್ಮಕರ್ಣಿಕದ ಮಧ್ಯದಲ್ಲಿ ಸೂಜಿಭಾಗದಲ್ಲಿ ಜಯದ್ರಥನಿರುತ್ತಾನೆ. ಹೀಗೆ ಸಿಂಧುರಾಜನು ಯುದ್ಧದುರ್ಮದ ವೀರರಿಂದ ರಕ್ಷಿಸಲ್ಪಟ್ಟಿದ್ದಾನೆ.

07053028a ಧನುಷ್ಯಸ್ತ್ರೇ ಚ ವೀರ್ಯೇ ಚ ಪ್ರಾಣೇ ಚೈವ ತಥೋರಸಿ।
07053028c ಅವಿಷಹ್ಯತಮಾ ಹ್ಯೇತೇ ನಿಶ್ಚಿತಾಃ ಪಾರ್ಥ ಷಡ್ರಥಾಃ।
07053028e ಏತಾನಜಿತ್ವಾ ಸಗಣಾನ್ನೈವ ಪ್ರಾಪ್ಯೋ ಜಯದ್ರಥಃ।।

ಪಾರ್ಥ! ಧನುಸ್ಸು, ಅಸ್ತ್ರ, ವೀರ್ಯ, ಪ್ರಾಣ ಮತ್ತು ಹುಟ್ಟಿನಲ್ಲಿ ಹೆಚ್ಚಿನವರಾದ ಈ ಷಡ್ರಥರನ್ನು ಸುಲಭವಾಗಿ ಗೆಲ್ಲಲಾರೆವು ಎನ್ನುವುದು ಖಂಡಿತ. ಸೇನೆಗಳೊಂದಿಗೆ ಇವರನ್ನು ಗೆಲ್ಲದೇ ಜಯದ್ರಥನನ್ನು ನಾವು ತಲುಪಲಾರೆವು.

07053029a ತೇಷಾಂ ಏಕೈಕಶೋ ವೀರ್ಯಂ ಷಣ್ಣಾಂ ತ್ವಮನುಚಿಂತಯ।
07053029c ಸಹಿತಾ ಹಿ ನರವ್ಯಾಘ್ರಾ ನ ಶಕ್ಯಾ ಜೇತುಮಂಜಸಾ।।

ಆ ಆರರಲ್ಲಿ ಒಬ್ಬೊಬ್ಬರ ವೀರ್ಯದ ಕುರಿತೂ ಯೋಚಿಸು. ಒಟ್ಟಿಗೇ ಆ ನರವ್ಯಾಘ್ರರನ್ನು ಜಯಿಸುವುದು ಶಕ್ಯವಿಲ್ಲವೆನಿಸುತ್ತದೆ.

07053030a ಭೂಯಶ್ಚ ಚಿಂತಯಿಷ್ಯಾಮಿ ನೀತಿಮಾತ್ಮಹಿತಾಯ ವೈ।
07053030c ಮಂತ್ರಜ್ಞೈಃ ಸಚಿವೈಃ ಸಾರ್ಧಂ ಸುಹೃದ್ಭಿಃ ಕಾರ್ಯಸಿದ್ಧಯೇ।।

ಇನ್ನೊಮ್ಮೆ ನಾವು ಕಾರ್ಯಸಿದ್ಧಿಗಾಗಿ ಮತ್ತು ನಮ್ಮ ಹಿತದ ನೀತಿಯ ಕುರಿತು ಸಚಿವರೊಂದಿಗೆ ಮತ್ತು ಸುಹೃದಯರೊಂದಿಗೆ ಮಂತ್ರಾಲೋಚನೆ ಮಾಡಬೇಕೆಂದು ಯೋಚಿಸುತ್ತಿದ್ದೇನೆ.”

07053031 ಅರ್ಜುನ ಉವಾಚ।
07053031a ಷಡ್ರಥಾನ್ಧಾರ್ತರಾಷ್ಟ್ರಸ್ಯ ಮನ್ಯಸೇ ಯಾನ್ಬಲಾಧಿಕಾನ್।
07053031c ತೇಷಾಂ ವೀರ್ಯಂ ಮಮಾರ್ಧೇನ ನ ತುಲ್ಯಮಿತಿ ಲಕ್ಷಯೇ।।

ಅರ್ಜುನನು ಹೇಳಿದನು: “ಯಾರ ಬಲವು ಅಧಿಕವೆಂದು ನೀನು ಅಭಿಪ್ರಾಯಪಡುತ್ತಿದ್ದೀಯೋ ಧಾರ್ತರಾಷ್ಟ್ರನ ಆ ಷಡ್ರಥರ ವೀರ್ಯವು ನನ್ನ ಅರ್ಧಕ್ಕೂ ಸಮನಿಲ್ಲ ಎಂದು ನನಗನ್ನಿಸುತ್ತದೆ.

07053032a ಅಸ್ತ್ರಮಸ್ತ್ರೇಣ ಸರ್ವೇಷಾಮೇತೇಷಾಂ ಮಧುಸೂದನ।
07053032c ಮಯಾ ದ್ರಕ್ಷ್ಯಸಿ ನಿರ್ಭಿನ್ನಂ ಜಯದ್ರಥವಧೈಷಿಣಾ।।

ಮಧುಸೂದನ! ಜಯದ್ರಥನನ್ನು ವಧಿಸಲು ಬಯಸಿದ ನಾನು ಅವರೆಲ್ಲರ ಅಸ್ತ್ರಗಳನ್ನೂ ಅಸ್ತ್ರಗಳಿಂದ ತುಂಡುಮಾಡುವುದನ್ನು ನೀನು ನೋಡುವೆಯಂತೆ!

07053033a ದ್ರೋಣಸ್ಯ ಮಿಷತಃ ಸೋಽಹಂ ಸಗಣಸ್ಯ ವಿಲಪ್ಯತಃ।
07053033c ಮೂರ್ಧಾನಂ ಸಿಂಧುರಾಜಸ್ಯ ಪಾತಯಿಷ್ಯಾಮಿ ಭೂತಲೇ।।

ಸೇನೆಗಳೊಂದಿಗೆ ದ್ರೋಣನು ನೋಡುತ್ತಾ ವಿಲಪಿಸಲು ನಾನು ಸಿಂಧುರಾಜನ ರುಂಡವನ್ನು ನೆಲಕ್ಕುರುಳಿಸುತ್ತೇನೆ!

07053034a ಯದಿ ಸಾಧ್ಯಾಶ್ಚ ರುದ್ರಾಶ್ಚ ವಸವಶ್ಚ ಸಹಾಶ್ವಿನಃ।
07053034c ಮರುತಶ್ಚ ಸಹೇಂದ್ರೇಣ ವಿಶ್ವೇದೇವಾಸ್ತಥಾಸುರಾಃ।।
07053035a ಪಿತರಃ ಸಹಗಂಧರ್ವಾಃ ಸುಪರ್ಣಾಃ ಸಾಗರಾದ್ರಯಃ।
07053035c ದ್ಯೌರ್ವಿಯತ್ಪೃಥಿವೀ ಚೇಯಂ ದಿಶಶ್ಚ ಸದಿಗೀಶ್ವರಾಃ।।
07053036a ಗ್ರಾಮ್ಯಾರಣ್ಯಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ।
07053036c ತ್ರಾತಾರಃ ಸಿಂಧುರಾಜಸ್ಯ ಭವಂತಿ ಮಧುಸೂದನ।।
07053037a ತಥಾಪಿ ಬಾಣೈರ್ನಿಹತಂ ಶ್ವೋ ದ್ರಷ್ಟಾಸಿ ರಣೇ ಮಯಾ।

ಒಂದುವೇಳೆ ಸಾಧ್ಯರೂ, ರುದ್ರರೂ, ಅಶ್ವಿನಿಗಳೊಡನೆ ವಸುಗಳೂ, ಇಂದ್ರನೊಂದಿಗೆ ಮರುತರೂ, ವಿಶ್ವೇದೇವರೂ, ಹಾಗೆಯೇ ಅಸುರರೂ, ಗಂಧರ್ವರೊಡನೆ ಪಿತೃಗಳೂ, ಸುಪರ್ಣರೂ, ಸಾಗರ-ಪರ್ವತಗಳೂ, ಆಕಾಶ, ಭೂಮಿ, ದಿಕ್ಪಾಲಕರೊಂದಿಗೆ ದಿಕ್ಕುಗಳೂ, ಗ್ರಾಮ-ಅರಣ್ಯಗಳೂ, ಸ್ಥಾವರ-ಚರ ಭೂತಗಳೂ ಸಿಂಧುರಾಜನನ್ನು ರಕ್ಷಿಸಲು ಬಂದರೂ, ಮಧುಸೂದನ, ನಾಳೆ ರಣದಲ್ಲಿ ನನ್ನ ಬಾಣಗಳಿಂದ ಅವನು ಹತನಾಗುವುದನ್ನು ನೀನು ನೋಡುತ್ತೀಯೆ!

07053037c ಸತ್ಯೇನ ತೇ ಶಪೇ ಕೃಷ್ಣ ತಥೈವಾಯುಧಮಾಲಭೇ।।
07053038a ಯಶ್ಚ ಗೋಪ್ತಾ ಮಹೇಷ್ವಾಸಸ್ತಸ್ಯ ಪಾಪಸ್ಯ ದುರ್ಮತೇಃ।
07053038c ತಮೇವ ಪ್ರಥಮಂ ದ್ರೋಣಮಭಿಯಾಸ್ಯಾಮಿ ಕೇಶವ।।

ಕೃಷ್ಣ! ನನ್ನ ಆಯುಧವನ್ನು ಮುಟ್ಟಿಕೊಂಡು ಸತ್ಯವಾಗಿ ನಾನು ಈ ಶಪಥವನ್ನು ಮಾಡುತ್ತಿದ್ದೇನೆ. ಕೇಶವ! ಆ ಪಾಪಿ ದುರ್ಮತಿ ಮಹೇಷ್ವಾಸನ ರಕ್ಷಕನಾಗಿರುವ ದ್ರೋಣನನ್ನೇ ಮೊಟ್ಟಮೊದಲಿಗೆ ಎದುರಿಸುತ್ತೇನೆ.

07053039a ತಸ್ಮಿನ್ದ್ಯೂತಮಿದಂ ಬದ್ಧಂ ಮನ್ಯತೇ ಸ್ಮ ಸುಯೋಧನಃ।
07053039c ತಸ್ಮಾತ್ತಸ್ಯೈವ ಸೇನಾಗ್ರಂ ಭಿತ್ತ್ವಾ ಯಾಸ್ಯಾಮಿ ಸೈಂಧವಂ।।

ಇವನೇ ದ್ಯೂತದ ಪಣವೆಂದು ಸುಯೋಧನನು ತಿಳಿದಿದ್ದಾನೆ. ಆದುದರಿಂದ ಅವನ ಸೇನೆಯ ಅಗ್ರಭಾಗವನ್ನು ಭೇದಿಸಿಯೇ ನಾನು ಸೈಂಧವನನ್ನು ಕೊಲ್ಲುತ್ತೇನೆ.

07053040a ದ್ರಷ್ಟಾಸಿ ಶ್ವೋ ಮಹೇಷ್ವಾಸಾನ್ನಾರಾಚೈಸ್ತಿಗ್ಮತೇಜನೈಃ।
07053040c ಶೃಂಗಾಣೀವ ಗಿರೇರ್ವಜ್ರೈರ್ದಾರ್ಯಮಾಣಾನ್ಮಯಾ ಯುಧಿ।।

ವಜ್ರದಿಂದ ಗಿರಿಶೃಂಗಗಳನ್ನು ಸೀಳುವಂತೆ ಆ ಮಹೇಷ್ವಾಸರನ್ನು ನಾಳೆ ಯುದ್ಧದಲ್ಲಿ ನನ್ನ ತಿಗ್ಮತೇಜಸ್ವೀ ನಾರಾಚಗಳಿಂದ ಸೀಳುವುದನ್ನು ನೀನು ನೋಡುವೆ!

07053041a ನರನಾಗಾಶ್ವದೇಹೇಭ್ಯೋ ವಿಸ್ರವಿಷ್ಯತಿ ಶೋಣಿತಂ।
07053041c ಪತದ್ಭ್ಯಃ ಪತಿತೇಭ್ಯಶ್ಚ ವಿಭಿನ್ನೇಭ್ಯಃ ಶಿತೈಃ ಶರೈಃ।।

ನಿಶಿತ ಶರಗಳಿಂದ ಒಡೆದು ಕೆಳಗೆ ಬೀಳುವ ಮತ್ತು ಬಿದ್ದ ಆನೆ, ಕುದುರೆ ಮತ್ತು ನರರ ಶರೀರಗಳಿಂದ ರಕ್ತವು ಹರಿಯುತ್ತದೆ.

07053042a ಗಾಂಡೀವಪ್ರೇಷಿತಾ ಬಾಣಾ ಮನೋನಿಲಸಮಾ ಜವೇ।
07053042c ನೃನಾಗಾಶ್ವಾನ್ವಿದೇಹಾಸೂನ್ಕರ್ತಾರಶ್ಚ ಸಹಸ್ರಶಃ।।

ಗಾಂಡೀವದಿಂದ ಪ್ರಯೋಗಿಸಲ್ಪಟ್ಟ, ಮನಸ್ಸು ಮತ್ತು ವಾಯುವೇಗಗಳನ್ನುಳ್ಳ ಬಾಣಗಳು ಸಹಸ್ರಾರು ನರ-ಆನೆ-ಕುದುರೆಗಳ ದೇಹಗಳನ್ನು ಕತ್ತರಿಸಲಿವೆ.

07053043a ಯಮಾತ್ಕುಬೇರಾದ್ವರುಣಾದ್ರುದ್ರಾದಿಂದ್ರಾಚ್ಚ ಯನ್ಮಯಾ।
07053043c ಉಪಾತ್ತಮಸ್ತ್ರಂ ಘೋರಂ ವೈ ತದ್ದ್ರಷ್ಟಾರೋ ನರಾ ಯುಧಿ।।

ಯಮ, ಕುಬೇರ, ವರುಣ, ರುದ್ರ ಮತ್ತು ಇಂದ್ರರಿಂದ ನಾನು ಯಾವ ಅಸ್ತ್ರಗಳನ್ನು ಪಡೆದಿದ್ದೆನೋ ಆ ಘೋರ ಅಸ್ತ್ರಗಳನ್ನು ನರರು ನಾಳೆ ಯುದ್ಧದಲ್ಲಿ ನೋಡಲಿದ್ದಾರೆ.

07053044a ಬ್ರಾಹ್ಮೇಣಾಸ್ತ್ರೇಣ ಚಾಸ್ತ್ರಾಣಿ ಹನ್ಯಮಾನಾನಿ ಸಂಯುಗೇ।
07053044c ಮಯಾ ದ್ರಷ್ಟಾಸಿ ಸರ್ವೇಷಾಂ ಸೈಂಧವಸ್ಯಾಭಿರಕ್ಷಿಣಾಂ।।

ಸೈಂಧವನನ್ನು ರಕ್ಷಿಸುವವರೆಲ್ಲರೂ ಸಂಯುಗದಲ್ಲಿ ಅಸ್ತ್ರಗಳು ನನ್ನ ಬ್ರಹ್ಮಾಸ್ತ್ರದಿಂದ ನಾಶವಾಗುವುದನ್ನು ನೋಡಲಿದ್ದಾರೆ.

07053045a ಶರವೇಗಸಮುತ್ಕೃತ್ತೈ ರಾಜ್ಞಾಂ ಕೇಶವ ಮೂರ್ಧಭಿಃ।
07053045c ಆಸ್ತೀರ್ಯಮಾಣಾಂ ಪೃಥಿವೀಂ ದ್ರಷ್ಟಾಸಿ ಶ್ವೋ ಮಯಾ ಯುಧಿ।।

ಕೇಶವ! ನಾಳೆ ಯುದ್ಧದಲ್ಲಿ ನನ್ನ ಶರವೇಗದಿಂದ ರಾಜರ ರುಂಡಗಳು ತುಂಡಾಗಿ ಭೂಮಿಯ ಮೇಲೆ ಚೆಲ್ಲಿ ಬೀಳುವುದನ್ನು ನೀನು ನೋಡಲಿರುವೆ.

07053046a ಕ್ರವ್ಯಾದಾಂಸ್ತರ್ಪಯಿಷ್ಯಾಮಿ ದ್ರಾವಯಿಷ್ಯಾಮಿ ಶಾತ್ರವಾನ್।
07053046c ಸುಹೃದೋ ನಂದಯಿಷ್ಯಾಮಿ ಪಾತಯಿಷ್ಯಾಮಿ ಸೈಂಧವಂ।।

ಕ್ರವ್ಯಾದಗಳನ್ನು ತೃಪ್ತಿಪಡಿಸುತ್ತೇನೆ. ಶತ್ರುಗಳನ್ನು ಓಡಿಸುತ್ತೇನೆ. ಸ್ನೇಹಿತರನ್ನು ಸಂತೋಷಗೊಳಿಸುತ್ತೇನೆ. ಸೈಂಧವನನ್ನು ಉರುಳಿಸುತ್ತೇನೆ.

07053047a ಬಹ್ವಾಗಸ್ಕೃತ್ಕುಸಂಬಂಧೀ ಪಾಪದೇಶಸಮುದ್ಭವಃ।
07053047c ಮಯಾ ಸೈಂಧವಕೋ ರಾಜಾ ಹತಃ ಸ್ವಾಂ ಶೋಚಯಿಷ್ಯತಿ।।

ಬಹಳಷ್ಟು ಕೆಟ್ಟದ್ದನ್ನು ಮಾಡಿರುವ, ಕೆಟ್ಟ ಸಂಬಂಧೀ, ಪಾಪದೇಶದಲ್ಲಿ ಹುಟ್ಟಿದ ರಾಜ ಸೈಂಧವನು ನನ್ನಿಂದ ಹತನಾಗಿ ತಾನೇ ಶೋಕಿಸುವವನಿದ್ದಾನೆ.

07053048a ಸರ್ವಕ್ಷೀರಾನ್ನಭೋಕ್ತಾರಃ ಪಾಪಾಚಾರಾ ರಣಾಜಿರೇ।
07053048c ಮಯಾ ಸರಾಜಕಾ ಬಾಣೈರ್ನುನ್ನಾ ನಂಕ್ಷ್ಯಂತಿ ಸೈಂಧವಾಃ।।

ಸದಾ ಕ್ಷೀರಾನ್ನವನ್ನೇ ಉಣ್ಣುತ್ತಾ ಬಂದ ಆ ಪಾಪಾಚಾರೀ ಸೈಂಧವನು ರಾಜರೊಂದಿಗೆ ರಣದಲ್ಲಿ ನನ್ನ ಬಾಣಗಳಿಂದ ಸಾಯುತ್ತಾನೆ.

07053049a ತಥಾ ಪ್ರಭಾತೇ ಕರ್ತಾಸ್ಮಿ ಯಥಾ ಕೃಷ್ಣ ಸುಯೋಧನಃ।
07053049c ನಾನ್ಯಂ ಧನುರ್ಧರಂ ಲೋಕೇ ಮಂಸ್ಯತೇ ಮತ್ಸಮಂ ಯುಧಿ।।

ಕೃಷ್ಣ! ನಾಳೆ ಬೆಳಿಗ್ಗೆ ಯುದ್ಧದಲ್ಲಿ ನನ್ನ ಸರಿಸಮನಾದ ಧನುರ್ಧರನು ಬೇರೆ ಯಾರೂ ಇಲ್ಲ ಎಂದು ಸುಯೋಧನನು ಯೋಚಿಸುವಂತೆ ಮಾಡುತ್ತೇನೆ.

07053050a ಗಾಂಡೀವಂ ಚ ಧನುರ್ದಿವ್ಯಂ ಯೋದ್ಧಾ ಚಾಹಂ ನರರ್ಷಭ।
07053050c ತ್ವಂ ಚ ಯಂತಾ ಹೃಷೀಕೇಶ ಕಿಂ ನು ಸ್ಯಾದಜಿತಂ ಮಯಾ।।

ನರರ್ಷಭ! ಹೃಷೀಕೇಶ! ದಿವ್ಯ ಗಾಂಡೀವ ಧನುಸ್ಸಿನೊಡನೆ ಯುದ್ಧಮಾಡುವ ಮತ್ತು ನೀನೇ ಸಾರಥಿಯಾಗಿರುವ ನನ್ನನ್ನು ಯಾರುತಾನೇ ಗೆದ್ದಾರು?

07053051a ಯಥಾ ಹಿ ಲಕ್ಷ್ಮ ಚಂದ್ರೇ ವೈ ಸಮುದ್ರೇ ಚ ಯಥಾ ಜಲಂ।
07053051c ಏವಮೇತಾಂ ಪ್ರತಿಜ್ಞಾಂ ಮೇ ಸತ್ಯಾಂ ವಿದ್ಧಿ ಜನಾರ್ದನ।।

ಜನಾರ್ದನ! ಚಂದ್ರನಲ್ಲಿ ಲಕ್ಷ್ಮಿಯಿರುವಂತೆ ಮತ್ತು ಸಮುದ್ರದಲ್ಲಿ ನೀರಿರುವಂತೆ ನನ್ನ ಪ್ರತಿಜ್ಞೆಯಲ್ಲಿಯೂ ಸತ್ಯವಿದೆಯೆಂದು ತಿಳಿ.

07053052a ಮಾವಮಂಸ್ಥಾ ಮಮಾಸ್ತ್ರಾಣಿ ಮಾವಮಂಸ್ಥಾ ಧನುರ್ದೃಢಂ।
07053052c ಮಾವಮಂಸ್ಥಾ ಬಲಂ ಬಾಹ್ವೋರ್ಮಾವಮಂಸ್ಥಾ ಧನಂಜಯಂ।।

ನನ್ನ ಅಸ್ತ್ರಗಳನ್ನು ಅವಮಾನಿಸಬೇಡ! ನನ್ನ ದೃಢ ಧನುಸ್ಸನ್ನು ಅವಮಾನಿಸಬೇಡ! ನನ್ನ ಬಾಹುಗಳ ಬಲವನ್ನು ಅವಮಾನಿಸಬೇಡ! ಈ ಧನಂಜಯನನ್ನು ಅವಮಾನಿಸಬೇಡ!

07053053a ಯಥಾ ಹಿ ಯಾತ್ವಾ ಸಂಗ್ರಾಮೇ ನ ಜೀಯೇ ವಿಜಯಾಮಿ ಚ।
07053053c ತೇನ ಸತ್ಯೇನ ಸಂಗ್ರಾಮೇ ಹತಂ ವಿದ್ಧಿ ಜಯದ್ರಥಂ।।

ಸೋಲನ್ನಪ್ಪದೇ ವಿಜಯಿಯಾಗುವ ಹಾಗೆ ನಾನು ಸಂಗ್ರಾಮವನ್ನು ಪ್ರವೇಶಿಸುತ್ತೇನೆ. ಅದೇ ಸತ್ಯದಿಂದ ಸಂಗ್ರಾಮದಲ್ಲಿ ಜಯದ್ರಥನನ್ನು ಕೊಲ್ಲುತ್ತೇನೆ ಎಂದು ತಿಳಿ.

07053054a ಧ್ರುವಂ ವೈ ಬ್ರಾಹ್ಮಣೇ ಸತ್ಯಂ ಧ್ರುವಾ ಸಾಧುಷು ಸನ್ನತಿಃ।
07053054c ಶ್ರೀರ್ಧ್ರುವಾ ಚಾಪಿ ದಕ್ಷೇಷು ಧ್ರುವೋ ನಾರಾಯಣೇ ಜಯಃ।।

ಬ್ರಾಹ್ಮಣರಲ್ಲಿ ಸತ್ಯವು ನಿಶ್ಚಿತವಾದುದು. ಸಾಧುಗಳಲ್ಲಿ ಸನ್ನತಿಯು ನಿಶ್ಚಿತವಾದುದು. ದಕ್ಷರಲ್ಲಿ ಸಂಪತ್ತು ನಿಶ್ಚಿತವಾದುದು. ಮತ್ತು ನಾರಾಯಣನಲ್ಲಿ ಜಯವು ನಿಶ್ಚಿತವಾದುದು.””

07053055 ಸಂಜಯ ಉವಾಚ।
07053055a ಏವಮುಕ್ತ್ವಾ ಹೃಷೀಕೇಶಂ ಸ್ವಯಮಾತ್ಮಾನಮಾತ್ಮನಾ।
07053055c ಸಂದಿದೇಶಾರ್ಜುನೋ ನರ್ದನ್ವಾಸವಿಃ ಕೇಶವಂ ಪ್ರಭುಂ।।

ಸಂಜಯನು ಹೇಳಿದನು: “ಹೀಗೆ ಹೃಷೀಕೇಶನಿಗೆ ಮತ್ತು ಸ್ವಯಂ ತಾನೇ ತನಗೆ ಹೇಳಿಕೊಂಡು ವಾಸವಿ ಅರ್ಜುನನು ಗಾಢ ಧ್ವನಿಯಲ್ಲಿ ಮತ್ತೊಮ್ಮೆ ಪ್ರಭು ಕೇಶವನಿಗೆ ಹೇಳಿದನು:

07053056a ಯಥಾ ಪ್ರಭಾತಾಂ ರಜನೀಂ ಕಲ್ಪಿತಃ ಸ್ಯಾದ್ರಥೋ ಮಮ।
07053056c ತಥಾ ಕಾರ್ಯಂ ತ್ವಯಾ ಕೃಷ್ಣ ಕಾರ್ಯಂ ಹಿ ಮಹದುದ್ಯತಂ।।

“ಕೃಷ್ಣ! ರಾತ್ರಿಯು ಕಳೆದು ಪ್ರಭಾತದಲ್ಲಿಯೇ ನನ್ನ ರಥವನ್ನು ಸಿದ್ಧಗೊಳಿಸಬೇಕು. ನಾವು ವಹಿಸಿಕೊಂಡಿರುವ ಕಾರ್ಯವು ಮಹತ್ತರವಾದುದು!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಪ್ರತಿಜ್ಞಾ ಪರ್ವಣಿ ಅರ್ಜುನವಾಕ್ಯೇ ತ್ರಿಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಪ್ರತಿಜ್ಞಾ ಪರ್ವದಲ್ಲಿ ಅರ್ಜುನವಾಕ್ಯ ಎನ್ನುವ ಐವತ್ಮೂರನೇ ಅಧ್ಯಾಯವು.