052 ಜಯದ್ರಥಾಶ್ವಾಸಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಪ್ರತಿಜ್ಞಾ ಪರ್ವ

ಅಧ್ಯಾಯ 52

ಸಾರ

ಅರ್ಜುನನ ಪ್ರತಿಜ್ಞೆಯ ಕುರಿತು ಕೇಳಿದ ಜಯದ್ರಥನು ಭಯದಿಂದ ತನಗೆ ರಕ್ಷಣೆಯನ್ನು ನೀಡದಿದ್ದರೆ ತಾನು ಮನೆಗೆ ತೆರಳುತ್ತೇನೆಂದು ಕುರುರಾಜಸಭೆಯಲ್ಲಿ ಹೇಳಿಕೊಂಡಿದುದು (1-12). ದುರ್ಯೋಧನ ಮತ್ತು ದ್ರೋಣರಿಂದ ಆಶ್ವಾಸಿತನಾದ ಜಯದ್ರಥನು ಭಯವನ್ನು ತೊರೆದು ಪಾರ್ಥನೊಂದಿಗೆ ಯುದ್ಧಮಾಡುವ ಮನಸ್ಸು ಮಾಡಿದುದು (13-33).

07052001 ಸಂಜಯ ಉವಾಚ।
07052001a ಶ್ರುತ್ವಾ ತು ತಂ ಮಹಾಶಬ್ದಂ ಪಾಂಡೂನಾಂ ಪುತ್ರಗೃದ್ಧಿನಾಂ।
07052001c ಚಾರೈಃ ಪ್ರವೇದಿತೇ ತತ್ರ ಸಮುತ್ಥಾಯ ಜಯದ್ರಥಃ।।

ಸಂಜಯನು ಹೇಳಿದನು: “ಪುತ್ರಶೋಕದಿಂದಿದ್ದ ಪಾಂಡವರ ಆ ಮಹಾಶಬ್ಧವನ್ನು ಚಾರರಿಂದ ಕೇಳಿ ಅಲ್ಲಿ ಜಯದ್ರಥನು ಸಂಕಟದಿಂದ ಮೇಲೆದ್ದನು.

07052002a ಶೋಕಸಮ್ಮೂಢಹೃದಯೋ ದುಃಖೇನಾಭಿಹತೋ ಭೃಶಂ।
07052002c ಮಜ್ಜಮಾನ ಇವಾಗಾಧೇ ವಿಪುಲೇ ಶೋಕಸಾಗರೇ।।
07052003a ಜಗಾಮ ಸಮಿತಿಂ ರಾಜ್ಞಾಂ ಸೈಂಧವೋ ವಿಮೃಶನ್ಬಹು।
07052003c ಸ ತೇಷಾಂ ನರದೇವಾನಾಂ ಸಕಾಶೇ ಪರಿದೇವಯನ್।।

ಶೋಕಸಮ್ಮೂಢಹೃದಯನಾಗಿ, ದುಃಖದಿಂದ ತುಂಬಾ ಪೀಡಿತನಾಗಿ, ವಿಪುಲ ಅಗಾಧ ಶೋಕಸಾಗರದಲ್ಲಿ ಮುಳುಗಿದವನಾಗಿ, ಸೈಂಧವನು ರಾಜರ ಸಭೆಗೆ ನಡೆದನು. ಅಲ್ಲಿ ನರದೇವರ ಮುಂದೆ ಅವನು ವಿಲಪಿಸಿದನು.

07052004a ಅಭಿಮನ್ಯೋಃ ಪಿತುರ್ಭೀತಃ ಸವ್ರೀಡೋ ವಾಕ್ಯಮಬ್ರವೀತ್।
07052004c ಯೋಽಸೌ ಪಾಂಡೋಃ ಕಿಲ ಕ್ಷೇತ್ರೇ ಜಾತಃ ಶಕ್ರೇಣ ಕಾಮಿನಾ।।
07052005a ಸ ನಿನೀಷತಿ ದುರ್ಬುದ್ಧಿರ್ಮಾಂ ಕಿಲೈಕಂ ಯಮಕ್ಷಯಂ।
07052005c ತತ್ಸ್ವಸ್ತಿ ವೋಽಸ್ತು ಯಾಸ್ಯಾಮಿ ಸ್ವಗೃಹಂ ಜೀವಿತೇಪ್ಸಯಾ।।

ಅಭಿಮನ್ಯುವಿನ ತಂದೆಗೆ ಹೆದರಿ ಭಯಪಡುತ್ತಾ ಈ ಮಾತನ್ನಾಡಿದನು: “ಪಾಂಡುವಿನ ಕ್ಷೇತ್ರದಲ್ಲಿ ಕಾಮಿ ಶಕ್ರನಿಂದ ಯಾವನು ಹುಟ್ಟಿದ್ದಾನೋ ಆ ದುರ್ಬುದ್ಧಿಯು ನನ್ನೊಬ್ಬನನ್ನೇ ಯಮಕ್ಷಯಕ್ಕೆ ಕಳುಹಿಸಲು ಇಚ್ಛಿಸಿದ್ದಾನೆ. ಬದುಕಿರುವ ಇಚ್ಛೆಯಿಂದ ನಾನು ನನ್ನ ಮನೆಗೆ ತೆರಳುತ್ತೇನೆ. ನಿಮಗೆ ಮಂಗಳವಾಗಲಿ!

07052006a ಅಥ ವಾ ಸ್ಥ ಪ್ರತಿಬಲಾಸ್ತ್ರಾತುಂ ಮಾಂ ಕ್ಷತ್ರಿಯರ್ಷಭಾಃ।
07052006c ಪಾರ್ಥೇನ ಪ್ರಾರ್ಥಿತಂ ವೀರಾಸ್ತೇ ದದಂತು ಮಮಾಭಯಂ।।

ಕ್ಷತ್ರಿಯರ್ಷಭರೇ! ಅಥವಾ ಅವನಿಗೆ ಸರಿಸಾಟಿಯಾದ ಬಲದಿಂದ ನನ್ನನ್ನು ರಕ್ಷಿಸಬೇಕು. ಪಾರ್ಥನ ಪ್ರತಿಜ್ಞೆಗೆ ಪ್ರತಿಯಾಗಿ ವೀರರಾದ ನೀವು ನನಗೆ ಅಭಯವನ್ನು ನೀಡಬೇಕು.

07052007a ದ್ರೋಣದುರ್ಯೋಧನಕೃಪಾಃ ಕರ್ಣಮದ್ರೇಶಬಾಹ್ಲಿಕಾಃ।
07052007c ದುಃಶಾಸನಾದಯಃ ಶಕ್ತಾಸ್ತ್ರಾತುಮಪ್ಯಂತಕಾದ್ರಿತಂ।।

ದ್ರೋಣ, ದುರ್ಯೋಧನ, ಕೃಪ, ಕರ್ಣ, ಮದ್ರೇಶ, ಬಾಹ್ಲಿಕರು ಮತ್ತು ದುಃಶಾಸನಾದಿಗಳು ಕಂಟಕವೊದಗಿರುವ ನನ್ನನ್ನು ಯಮನ ಬಾಧೆಯಿಂದಲೂ ಪಾರುಮಾಡಬಲ್ಲರು.

07052008a ಕಿಮಂಗ ಪುನರೇಕೇನ ಫಲ್ಗುನೇನ ಜಿಘಾಂಸತಾ।
07052008c ನ ತ್ರಾಯೇಯುರ್ಭವಂತೋ ಮಾಂ ಸಮಸ್ತಾಃ ಪತಯಃ ಕ್ಷಿತೇಃ।।

ಹಾಗಿರುವಾಗ ನನ್ನೊಬ್ಬನನ್ನೇ ಕೊಲ್ಲಲು ಬಯಸಿರುವ ಫಲ್ಗುನನು ಯಾವ ಲೆಖ್ಕಕ್ಕೆ? ಭೂಮಂಡಲಕ್ಕೇ ಒಡೆಯರಾಗಿರುವ ನೀವೆಲ್ಲರೂ ಸೇರಿ ನನ್ನೊಬ್ಬನನ್ನು ರಕ್ಷಿಸಲಾರಿರೇ?

07052009a ಪ್ರಹರ್ಷಂ ಪಾಂಡವೇಯಾನಾಂ ಶ್ರುತ್ವಾ ಮಮ ಮಹದ್ಭಯಂ।
07052009c ಸೀದಂತೀವ ಚ ಮೇಽಂಗಾನಿ ಮುಮೂರ್ಷೋರಿವ ಪಾರ್ಥಿವಾಃ।।

ಪಾಂಡವೇಯರ ಹರ್ಷದ ಕೂಗನ್ನು ಕೇಳಿ ನನಗೆ ಮಹಾಭಯವಾಗುತ್ತಿದೆ. ಪಾರ್ಥಿವರೇ! ಸಾಯುವವನಿಗೆ ಆಗುವಂತೆ ನನ್ನ ಅಂಗಗಳು ಶಿಥಿಲಗೊಳ್ಳುತ್ತಿವೆ.

07052010a ವಧೋ ನೂನಂ ಪ್ರತಿಜ್ಞಾತೋ ಮಮ ಗಾಂಡೀವಧನ್ವನಾ।
07052010c ತಥಾ ಹಿ ಹೃಷ್ಟಾಃ ಕ್ರೋಶಂತಿ ಶೋಕಕಾಲೇಽಪಿ ಪಾಂಡವಾಃ।।

ಗಾಂಡೀವ ಧನ್ವಿಯು ಪ್ರತಿಜ್ಞೆ ಮಾಡಿದುದರಿಂದ ನನ್ನ ವಧೆಯು ನಿಶ್ಚಿತವಾಗಿಬಿಟ್ಟಿದೆ. ಆದುದರಿಂದಲೇ ಶೋಕಪಡಬೇಕಾಗಿದ್ದ ಸಮಯದಲ್ಲಿಯೂ ಪಾಂಡವರು ಸಂತೋಷದಿಂದ ಕೂಗುತ್ತಿದ್ದಾರೆ.

07052011a ನ ದೇವಾ ನ ಚ ಗಂಧರ್ವಾ ನಾಸುರೋರಗರಾಕ್ಷಸಾಃ।
07052011c ಉತ್ಸಹಂತೇಽನ್ಯಥಾ ಕರ್ತುಂ ಕುತ ಏವ ನರಾಧಿಪಾಃ।।

“ದೇವತೆಗಳಾಗಲೀ, ಗಂಧರ್ವರಾಗಲೀ, ಅಸುರ-ಉರಗ-ರಾಕ್ಷಸರಾಗಲೀ ಇದನ್ನು ಸುಳ್ಳಾಗಿಸಲು ಉತ್ಸುಕರಿಲ್ಲದಿರುವಾಗ ಇನ್ನು ನರಾಧಿಪರು ಯಾವ ಲೆಖ್ಕಕ್ಕೆ?” ಎಂದು ಹೇಳಿಕೊಳ್ಳುತ್ತಿದ್ದಾರೆ.

07052012a ತಸ್ಮಾನ್ಮಾಮನುಜಾನೀತ ಭದ್ರಂ ವೋಽಸ್ತು ನರರ್ಷಭಾಃ।
07052012c ಅದರ್ಶನಂ ಗಮಿಷ್ಯಾಮಿ ನ ಮಾಂ ದ್ರಕ್ಷ್ಯಂತಿ ಪಾಂಡವಾಃ।।

ಆದುದರಿಂದ ನರರ್ಷಭರೇ! ನನಗೆ ಅನುಜ್ಞೆಯನ್ನು ನೀಡಿ. ನಿಮಗೆ ಮಂಗಳವಾಗಲಿ! ಪಾಂಡವರು ಪತ್ತೇ ಹಚ್ಚದ ಹಾಗೆ ಕಣ್ಣುತಪ್ಪಿಸಿಕೊಂಡು ಹೋಗುತ್ತೇನೆ!”

07052013a ಏವಂ ವಿಲಪಮಾನಂ ತಂ ಭಯಾದ್ವ್ಯಾಕುಲಚೇತಸಂ।
07052013c ಆತ್ಮಕಾರ್ಯಗರೀಯಸ್ತ್ವಾದ್ರಾಜಾ ದುರ್ಯೋಧನೋಽಬ್ರವೀತ್।।

ತನ್ನ ಕಾರ್ಯಸಾಧನೆಯೇ ಹೆಚ್ಚಿನದೆಂದು ತಿಳಿದ ರಾಜಾ ದುರ್ಯೋಧನನು ಹೀಗೆ ಭಯದಿಂದ ವ್ಯಾಕುಲಗೊಂಡ ಬುದ್ಧಿಯುಳ್ಳವನಾಗಿ ವಿಲಪಿಸುತ್ತಿದ್ದ ಅವನಿಗೆ ಹೇಳಿದನು:

07052014a ನ ಭೇತವ್ಯಂ ನರವ್ಯಾಘ್ರ ಕೋ ಹಿ ತ್ವಾ ಪುರುಷರ್ಷಭ।
07052014c ಮಧ್ಯೇ ಕ್ಷತ್ರಿಯವೀರಾಣಾಂ ತಿಷ್ಠಂತಂ ಪ್ರಾರ್ಥಯೇದ್ಯುಧಿ।।
07052015a ಅಹಂ ವೈಕರ್ತನಃ ಕರ್ಣಶ್ಚಿತ್ರಸೇನೋ ವಿವಿಂಶತಿಃ।
07052015c ಭೂರಿಶ್ರವಾಃ ಶಲಃ ಶಲ್ಯೋ ವೃಷಸೇನೋ ದುರಾಸದಃ।।
07052016a ಪುರುಮಿತ್ರೋ ಜಯೋ ಭೋಜಃ ಕಾಂಬೋಜಶ್ಚ ಸುದಕ್ಷಿಣಃ।
07052016c ಸತ್ಯವ್ರತೋ ಮಹಾಬಾಹುರ್ವಿಕರ್ಣೋ ದುರ್ಮುಖಃ ಸಹಃ।।
07052017a ದುಃಶಾಸನಃ ಸುಬಾಹುಶ್ಚ ಕಲಿಂಗಶ್ಚಾಪ್ಯುದಾಯುಧಃ।
07052017c ವಿಂದಾನುವಿಂದಾವಾವಂತ್ಯೌ ದ್ರೋಣೋ ದ್ರೌಣಿಃ ಸಸೌಬಲಃ।।

“ನರವ್ಯಾಘ್ರ! ಪುರುರ್ಷಭ! ಹೆದರಬೇಡ! ಈ ಕ್ಷತ್ರಿಯ ವೀರರಾದ - ನಾನು, ವೈಕರ್ತನ ಕರ್ಣ, ಚಿತ್ರಸೇನ, ವಿವಿಂಶತಿ, ಭೂರಿಶ್ರವ, ಶಲ, ಶಲ್ಯ, ದುರಾಸದ ವೃಷಸೇನ, ಪುರುಮಿತ್ರ, ಜಯ, ಭೋಜ, ಕಾಂಭೋಜ, ಸುದಕ್ಷಿಣ, ಸತ್ಯವ್ರತ, ಮಹಾಬಾಹು ವಿಕರ್ಣ, ದುರ್ಮುಖ, ಜೊತೆಗೆ ದುಃಶಾಸನ, ಸುಬಾಹು, ಕಲಿಂಗ, ಯುಧಾಯುಧ, ಅವಂತಿಯ ವಿಂದಾನುವಿಂದರು, ದ್ರೋಣ, ದ್ರೌಣಿ, ಸೌಬಲ - ಇವರ ಮಧ್ಯೆ ನಿಂತಿರುವ ನಿನ್ನೊಡನೆ ಹೋರಾಡಲು ಯಾರು ತಾನೇ ಬಯಸುತ್ತಾರೆ?

07052018a ತ್ವಂ ಚಾಪಿ ರಥಿನಾಂ ಶ್ರೇಷ್ಠಃ ಸ್ವಯಂ ಶೂರೋಽಮಿತದ್ಯುತಿಃ।
07052018c ಸ ಕಥಂ ಪಾಂಡವೇಯೇಭ್ಯೋ ಭಯಂ ಪಶ್ಯಸಿ ಸೈಂಧವ।।

ರಥಿಗಳಲ್ಲಿ ಶ್ರೇಷ್ಠ, ಅಮಿತದ್ಯುತಿ, ಶೂರ ಸ್ವಯಂ ನೀನು ಹೇಗೆ ಪಾಂಡವೇಯರಿಂದ ಭಯವನ್ನು ಕಾಣುತ್ತಿರುವೆ?

07052019a ಅಕ್ಷೌಹಿಣ್ಯೋ ದಶೈಕಾ ಚ ಮದೀಯಾಸ್ತವ ರಕ್ಷಣೇ।
07052019c ಯತ್ತಾ ಯೋತ್ಸ್ಯಂತಿ ಮಾ ಭೈಸ್ತ್ವಂ ಸೈಂಧವ ವ್ಯೇತು ತೇ ಭಯಂ।।

ನನ್ನ ಈ ಹನ್ನೊಂದು ಅಕ್ಷೌಹಿಣೀ ಸೇನೆಗಳೂ ನಿನ್ನ ರಕ್ಷಣೆಯನ್ನೇ ಗುರಿಯಾಗಿಟ್ಟುಕೊಂಡು ಪ್ರಯತ್ನಿಸಿ ಹೋರಾಡುತ್ತವೆ. ಸೈಂಧವ! ನೀನು ಭಯಪಟ್ಟುಕೊಳ್ಳಬೇಡ! ನಿನ್ನ ಭಯವನ್ನು ಹೊರಹಾಕು!”

07052020a ಏವಮಾಶ್ವಾಸಿತೋ ರಾಜನ್ಪುತ್ರೇಣ ತವ ಸೈಂಧವಃ।
07052020c ದುರ್ಯೋಧನೇನ ಸಹಿತೋ ದ್ರೋಣಂ ರಾತ್ರಾವುಪಾಗಮತ್।।

ರಾಜನ್! ನಿನ್ನ ಮಗನಿಂದ ಹೀಗೆ ಆಶ್ವಾಸನೆಯನ್ನು ಪಡೆದ ಸೈಂಧವನು ದುರ್ಯೋಧನನನ್ನೊಡಗೂಡಿ ರಾತ್ರಿ ದ್ರೋಣನ ಬಳಿ ಹೋದನು.

07052021a ಉಪಸಂಗ್ರಹಣಂ ಕೃತ್ವಾ ದ್ರೋಣಾಯ ಸ ವಿಶಾಂ ಪತೇ।
07052021c ಉಪೋಪವಿಶ್ಯ ಪ್ರಣತಃ ಪರ್ಯಪೃಚ್ಚದಿದಂ ತದಾ।।

ವಿಶಾಂಪತೇ! ಅಲ್ಲಿ ಅವನು ದ್ರೋಣನಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಅನುಮತಿಯನ್ನು ಪಡೆದು ಸಮೀಪದಲ್ಲಿ ಕುಳಿತು ವಿನಯಾನ್ವಿತನಾಗಿ ಕೇಳಿದನು:

07052022a ನಿಮಿತ್ತೇ ದೂರಪಾತಿತ್ವೇ ಲಘುತ್ವೇ ದೃಢವೇಧನೇ।
07052022c ಮಮ ಬ್ರವೀತು ಭಗವಾನ್ವಿಶೇಷಂ ಫಲ್ಗುನಸ್ಯ ಚ।।

“ಭಗವನ್! ಲಕ್ಷ್ಯಭೇದನದಲ್ಲಿ, ದೂರ ಎಸೆಯುವುದರಲ್ಲಿ, ಕೈಚಳಕದಲ್ಲಿ, ದೃಢವಾಗಿ ಹೊಡೆಯುವುದರಲ್ಲಿ ನನಗೆ ಮತ್ತು ಫಲ್ಗುನನಿಗೆ ಇರುವ ವ್ಯತ್ಯಾಸವನ್ನು ಹೇಳಿ.

07052023a ವಿದ್ಯಾವಿಶೇಷಮಿಚ್ಚಾಮಿ ಜ್ಞಾತುಮಾಚಾರ್ಯ ತತ್ತ್ವತಃ।
07052023c ಮಮಾರ್ಜುನಸ್ಯ ಚ ವಿಭೋ ಯಥಾತತ್ತ್ವಂ ಪ್ರಚಕ್ಷ್ವ ಮೇ।।

ಆಚಾರ್ಯ! ವಿಭೋ! ಧನುರ್ವಿದ್ಯೆಯಲ್ಲಿ ನನಗೂ ಅರ್ಜುನನಿಗೂ ಇರುವ ವ್ಯತ್ಯಾಸವನ್ನು ಯಥಾವತ್ತಾಗಿ ತಿಳಿಯ ಬಯಸಿದ್ದೇನೆ. ಇದನ್ನು ನಿಮಗೆ ತಿಳಿದಹಾಗೆ ಹೇಳಿ.”

07052024 ದ್ರೋಣ ಉವಾಚ।
07052024a ಸಮಮಾಚಾರ್ಯಕಂ ತಾತ ತವ ಚೈವಾರ್ಜುನಸ್ಯ ಚ।
07052024c ಯೋಗಾದ್ದುಃಖೋಚಿತತ್ವಾಚ್ಚ ತಸ್ಮಾತ್ತ್ವತ್ತೋಽಧಿಕೋಽರ್ಜುನಃ।।

ದ್ರೋಣನು ಹೇಳಿದನು: “ಅಯ್ಯಾ! ನಾನು ನಿನಗೆ ಮತ್ತು ಅರ್ಜುನ ಇಬ್ಬರಿಗೂ ಸಮನಾಗಿಯೇ ಆಚಾರ್ಯತ್ವವನ್ನು ಮಾಡಿದ್ದೇನೆ. ಆದರೆ, ಯೋಗ ಮತ್ತು ಪಟ್ಟ ದುಃಖಗಳಿಂದಾಗಿ ಅರ್ಜುನನು ನಿನಗಿಂತಲೂ ಅಧಿಕನು.

07052025a ನ ತು ತೇ ಯುಧಿ ಸಂತ್ರಾಸಃ ಕಾರ್ಯಃ ಪಾರ್ಥಾತ್ಕಥಂ ಚನ।
07052025c ಅಹಂ ಹಿ ರಕ್ಷಿತಾ ತಾತ ಭಯಾತ್ತ್ವಾಂ ನಾತ್ರ ಸಂಶಯಃ।।

ಆದರೆ ನೀನು ಯುದ್ಧದಲ್ಲಿ ಎಂದೂ ಪಾರ್ಥನಿಂದ ಹೆದರಬೇಕಾಗಿಲ್ಲ. ಅಯ್ಯಾ! ಈ ಭಯದಿಂದ ನಾನು ನಿನ್ನನ್ನು ರಕ್ಷಿಸುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.

07052026a ನ ಹಿ ಮದ್ಬಾಹುಗುಪ್ತಸ್ಯ ಪ್ರಭವಂತ್ಯಮರಾ ಅಪಿ।
07052026c ವ್ಯೂಹಿಷ್ಯಾಮಿ ಚ ತಂ ವ್ಯೂಹಂ ಯಂ ಪಾರ್ಥೋ ನ ತರಿಷ್ಯತಿ।।

ನನ್ನ ಬಾಹುಗಳಿಂದ ರಕ್ಷಿಸಲ್ಪಟ್ಟವನನ್ನು ಅಮರರೂ ಕೂಡ ಆಳಲಾರರು! ಪಾರ್ಥನು ಸೀಳಲಾರದಂಥಹ ವ್ಯೂಹವನ್ನು ನಾನು ರಚಿಸುತ್ತೇನೆ.

07052027a ತಸ್ಮಾದ್ಯುಧ್ಯಸ್ವ ಮಾ ಭೈಸ್ತ್ವಂ ಸ್ವಧರ್ಮಮನುಪಾಲಯ।
07052027c ಪಿತೃಪೈತಾಮಹಂ ಮಾರ್ಗಮನುಯಾಹಿ ನರಾಧಿಪ।।

ಆದುದರಿಂದ ನರಾಧಿಪ! ಪಿತೃಪಿತಾಮಹರ ಮಾರ್ಗವನ್ನು ಅನುಸರಿಸಿ, ಸ್ವಧರ್ಮವನ್ನು ಪಾಲಿಸಿ, ಯುದ್ಧಮಾಡು! ಭಯಪಡಬೇಡ!

07052028a ಅಧೀತ್ಯ ವಿಧಿವದ್ವೇದಾನಗ್ನಯಃ ಸುಹುತಾಸ್ತ್ವಯಾ।
07052028c ಇಷ್ಟಂ ಚ ಬಹುಭಿರ್ಯಜ್ಞೈರ್ನ ತೇ ಮೃತ್ಯುಭಯಾದ್ಭಯಂ।।

ವೇದಗಳನ್ನು ವಿಧಿವತ್ತಾಗಿ ಅಧ್ಯಯನ ಮಾಡಿ ಅಗ್ನಿಯಲ್ಲಿ ನೀನು ಆಹುತಿಗಳನ್ನಿತ್ತಿರುವೆ. ಬಹಳಷ್ಟು ಯಜ್ಞಗಳನ್ನೂ ಇಷ್ಟಿಗಳನ್ನೂ ಮಾಡಿರುವೆ. ಆದುದರಿಂದ ನಿನಗೆ ಮೃತ್ಯುಭಯದ ಭಯವು ಇರಬಾರದು.

07052029a ದುರ್ಲಭಂ ಮಾನುಷೈರ್ಮಂದೈರ್ಮಹಾಭಾಗ್ಯಮವಾಪ್ಯ ತು।
07052029c ಭುಜವೀರ್ಯಾರ್ಜಿತಾಽಲ್ಲೋಕಾನ್ದಿವ್ಯಾನ್ಪ್ರಾಪ್ಸ್ಯಸ್ಯನುತ್ತಮಾನ್।।

ಮಂದ ಮನುಷ್ಯರಿಗೆ ದುರ್ಲಭವಾದ ಮಹಾಭಾಗ್ಯವನ್ನು ನೀನು ಪಡೆದಿರುವೆ. ಭುಜವೀರ್ಯದಿಂದ ದಿವ್ಯ ಲೋಕಗಳನ್ನು ಗೆದ್ದು ಅನುತ್ತಮವಾದುದನ್ನು ಪಡೆಯುತ್ತೀಯೆ.

07052030a ಕುರವಃ ಪಾಂಡವಾಶ್ಚೈವ ವೃಷ್ಣಯೋಽನ್ಯೇ ಚ ಮಾನವಾಃ।
07052030c ಅಹಂ ಚ ಸಹ ಪುತ್ರೇಣ ಅಧ್ರುವಾ ಇತಿ ಚಿಂತ್ಯತಾಂ।।

ಕೌರವರು, ಪಾಂಡವರು, ವೃಷ್ಣಿಗಳು ಮತ್ತು ಅನ್ಯ ಮಾನವರು, ಪುತ್ರನೊಂದಿಗೆ ನಾನೂ ಕೂಡ ಚಿರರಲ್ಲ. ಇದರ ಕುರಿತು ಯೋಚಿಸು.

07052031a ಪರ್ಯಾಯೇಣ ವಯಂ ಸರ್ವೇ ಕಾಲೇನ ಬಲಿನಾ ಹತಾಃ।
07052031c ಪರಲೋಕಂ ಗಮಿಷ್ಯಾಮಃ ಸ್ವೈಃ ಸ್ವೈಃ ಕರ್ಮಭಿರನ್ವಿತಾಃ।।

ಒಬ್ಬೊಬ್ಬರಾಗಿ ನಾವೆಲ್ಲರೂ ಬಲಶಾಲಿ ಕಾಲನಿಂದ ಹತರಾಗಿ ತಮ್ಮ ತಮ್ಮ ಕರ್ಮಗಳಿಗನುಗುಣವಾದ ಪರಲೋಕಕ್ಕೆ ಹೋಗುತ್ತೇವೆ.

07052032a ತಪಸ್ತಪ್ತ್ವಾ ತು ಯಾಽಲ್ಲೋಕಾನ್ಪ್ರಾಪ್ನುವಂತಿ ತಪಸ್ವಿನಃ।
07052032c ಕ್ಷತ್ರಧರ್ಮಾಶ್ರಿತಾಃ ಶೂರಾಃ ಕ್ಷತ್ರಿಯಾಃ ಪ್ರಾಪ್ನುವಂತಿ ತಾನ್।।

ತಪಸ್ಸನ್ನು ತಪಿಸಿ ತಪಸ್ವಿಗಳು ಯಾವ ಲೋಕಗಳನ್ನು ಪಡೆಯುತ್ತಾರೋ ಆ ಲೋಕಗಳನ್ನೇ ಕ್ಷತ್ರಧರ್ಮಾಶ್ರಿತ ಶೂರ ಕ್ಷತ್ರಿಯರು ಪಡೆಯುತ್ತಾರೆ.””

07052033 ಸಂಜಯ ಉವಾಚ।
07052033a ಏವಮಾಶ್ವಾಸಿತೋ ರಾಜನ್ಭಾರದ್ವಾಜೇನ ಸೈಂಧವಃ।
07052033c ಅಪಾನುದದ್ಭಯಂ ಪಾರ್ಥಾದ್ಯುದ್ಧಾಯ ಚ ಮನೋ ದಧೇ।।

ಸಂಜಯನು ಹೇಳಿದನು: “ರಾಜನ್! ಭಾರದ್ವಾಜನಿಂದ ಹೀಗೆ ಆಶ್ವಾಸಿತನಾದ ಸೈಂದವನು ಆ ಭಯವನ್ನು ತೊರೆದು ಪಾರ್ಥನೊಂದಿಗೆ ಯುದ್ಧಮಾಡುವ ಮನಸ್ಸು ಮಾಡಿಕೊಂಡನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಪ್ರತಿಜ್ಞಾ ಪರ್ವಣಿ ಜಯದ್ರಥಾಶ್ವಾಸೇ ದ್ವಿಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಪ್ರತಿಜ್ಞಾ ಪರ್ವದಲ್ಲಿ ಜಯದ್ರಥಾಶ್ವಾಸ ಎನ್ನುವ ಐವತ್ತೆರಡನೇ ಅಧ್ಯಾಯವು.