ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಅಭಿಮನ್ಯುವಧ ಪರ್ವ
ಅಧ್ಯಾಯ 50
ಸಾರ
ಸಂಶಪ್ತಕರೊಡನೆ ಯುದ್ಧಮಾಡಿ ಹಿಂದಿರುಗುವ ಅರ್ಜುನನು ಅಶುಭ ಸೂಚನೆಗಳಿಂದ ಉದ್ವಿಗ್ನನಾಗಿ ಕೃಷ್ಣನೊಡನೆ ಮಾತನಾಡುತ್ತಾ ಪಾಂಡವ ಶಿಬಿರವನ್ನು ಪ್ರವೇಶಿಸಿದುದು (1-17). ಅಭಿಮನ್ಯುವನ್ನು ಕಾಣದೇ ಅರ್ಜುನನು ಗತಚೇತನರಾದ ಸಹೋದರರನ್ನು ಕೇಳಿ ವಿಲಪಿಸಿದುದು (18-60). ಕೃಷ್ಣನ ಸಮಾಧಾನಕರ ಮಾತುಗಳು (61-69). ಅರ್ಜುನನು ಪುನಃ ಪಾಂಡವ-ಪಾಂಚಾಲರನ್ನು ಅಭಿಮನ್ಯುವಿನ ಕುರಿತು ಪ್ರಶ್ನಿಸಿದುದು (70-83).
07050001 ಸಂಜಯ ಉವಾಚ।
07050001a ತಸ್ಮಿನ್ನಹನಿ ನಿರ್ವೃತ್ತೇ ಘೋರೇ ಪ್ರಾಣಭೃತಾಂ ಕ್ಷಯೇ।
07050001c ಆದಿತ್ಯೇಽಸ್ತಂಗತೇ ಶ್ರೀಮಾನ್ಸಂಧ್ಯಾಕಾಲ ಉಪಸ್ಥಿತೇ।।
ಸಂಜಯನು ಹೇಳಿದನು: “ಪ್ರಾಣವಿರುವವರ ಕ್ಷಯಕರವಾದ ಆ ಹಗಲು ಕಳೆದು ಆದಿತ್ಯನು ಅಸ್ತಂಗತನಾಗಲು ಶ್ರೀಮಾನ್ ಸಂಧ್ಯಾಕಾಲವು ಸರಿದು ಬಂದಿತು.
07050002a ವ್ಯಪಯಾತೇಷು ಸೈನ್ಯೇಷು ವಾಸಾಯ ಭರತರ್ಷಭ।
07050002c ಹತ್ವಾ ಸಂಶಪ್ತಕವ್ರಾತಾನ್ದಿವ್ಯೈರಸ್ತ್ರೈಃ ಕಪಿಧ್ವಜಃ।।
07050003a ಪ್ರಾಯಾತ್ಸ್ವಶಿಬಿರಂ ಜಿಷ್ಣುರ್ಜೈತ್ರಮಾಸ್ಥಾಯ ತಂ ರಥಂ।
07050003c ಗಚ್ಚನ್ನೇವ ಚ ಗೋವಿಂದಂ ಸನ್ನಕಂಠೋಽಭ್ಯಭಾಷತ।।
ಭರತರ್ಷಭ! ಸೈನ್ಯಗಳು ವಿಶ್ರಾಂತಿಗೆಂದು ತೆರಳಿದವು. ಜಿಷ್ಣು ಕಪಿಧ್ವಜನು ಸಂಶಪ್ತಕರ ಸೇನೆಗಳನ್ನು ದಿವ್ಯಾಸ್ತ್ರಗಳಿಂದ ಸಂಹರಿಸಿ ಚೈತ್ರರಥವನ್ನೇರಿ ತನ್ನ ಶಿಬಿರದ ಕಡೆ ಹೊರಟನು. ಹೋಗುವಾಗ ಅವನು ಗದ್ಗದ ಕಂಠದವನಾಗಿ ಗೋವಿಂದನಿಗೆ ಹೇಳಿದನು:
07050004a ಕಿಂ ನು ಮೇ ಹೃದಯಂ ತ್ರಸ್ತಂ ವಾಕ್ಯಂ ಸಜ್ಜತಿ ಕೇಶವ।
07050004c ಸ್ಪಂದಂತಿ ಚಾಪ್ಯನಿಷ್ಟಾನಿ ಗಾತ್ರಂ ಸೀದತಿ ಚಾಚ್ಯುತ।।
“ಕೇಶವ! ಅಚ್ಯುತ! ಇದೇನು ನನ್ನ ಹೃದಯವು ಭಯಗೊಂಡಿದೆ. ಮಾತುಗಳು ತೊದಲುತ್ತಿವೆ. ಅನಿಷ್ಟಸೂಚಕವಾಗಿ ಸ್ಪಂದಿಸುತ್ತಿವೆ. ಶರೀರವು ಸುಸ್ತಾಗಿದೆ!
07050005a ಅನಿಷ್ಟಂ ಚೈವ ಮೇ ಶ್ಲಿಷ್ಟಂ ಹೃದಯಾನ್ನಾಪಸರ್ಪತಿ।
07050005c ಭುವಿ ಯದ್ದಿಕ್ಷು ಚಾಪ್ಯುಗ್ರಾ ಉತ್ಪಾತಾಸ್ತ್ರಾಸಯಂತಿ ಮಾಂ।।
ಯಾವುದೋ ಅನಿಷ್ಟದ ಚಿಂತೆಯು ನನ್ನ ಮನಸ್ಸನ್ನು ಕಾಡುತ್ತಿದೆ. ಹೃದಯವನ್ನು ಸುತ್ತುಕೊಂಡಿದೆ. ಭೂಮಿಯಲ್ಲಿ ಮತ್ತು ದಿಕ್ಕುಗಳಲ್ಲಿ ಕಾಣುವ ಉಗ್ರ ಉತ್ಪಾತಗಳು ನನಗೆ ಭಯವನ್ನುಂಟು ಮಾಡುತ್ತಿವೆ.
07050006a ಬಹುಪ್ರಕಾರಾ ದೃಶ್ಯಂತೇ ಸರ್ವ ಏವಾವಶಂಸಿನಃ।
07050006c ಅಪಿ ಸ್ವಸ್ತಿ ಭವೇದ್ರಾಜ್ಞಃ ಸಾಮಾತ್ಯಸ್ಯ ಗುರೋರ್ಮಮ।।
ಬಹುಪ್ರಕಾರವಾಗಿ ಕಾಣಿಸಿಕೊಳ್ಳುವ ಈ ಎಲ್ಲವೂ ಅಮಂಗಳವನ್ನೇ ಸೂಚಿಸುತ್ತಿವೆ. ಅಮಾತ್ಯಸಹಿತನಾಗಿ ನನ್ನ ಗುರು ರಾಜನು ಕುಶಲದಿಂದಿರಬಹುದೇ?”
07050007 ವಾಸುದೇವ ಉವಾಚ।
07050007a ವ್ಯಕ್ತಂ ಶಿವಂ ತವ ಭ್ರಾತುಃ ಸಾಮಾತ್ಯಸ್ಯ ಭವಿಷ್ಯತಿ।
07050007c ಮಾ ಶುಚಃ ಕಿಂ ಚಿದೇವಾನ್ಯತ್ತತ್ರಾನಿಷ್ಟಂ ಭವಿಷ್ಯತಿ।।
ವಾಸುದೇವನು ಹೇಳಿದನು: “ಅಮಾತ್ಯರೊಂದಿಗೆ ನಿನ್ನ ಅಣ್ಣನು ಕುಶಲದಿಂದಿರುವನು. ಶೋಕಿಸಬೇಡ! ಬೇರೆ ಯಾವುದೋ ಅನಿಷ್ಟವು ಸಂಭವಿಸಿರಬಹುದು!””
07050008 ಸಂಜಯ ಉವಾಚ।
07050008a ತತಃ ಸಂಧ್ಯಾಮುಪಾಸ್ಯೈವ ವೀರೌ ವೀರಾವಸಾದನೇ।
07050008c ಕಥಯಂತೌ ರಣೇ ವೃತ್ತಂ ಪ್ರಯಾತೌ ರಥಮಾಸ್ಥಿತೌ।।
ಸಂಜಯನು ಹೇಳಿದನು: “ಆಗ ಆ ವೀರರಿಬ್ಬರೂ ವೀರರು ಅವಸಾನರಾದ ರಣಭೂಮಿಯಲ್ಲಿಯೇ ಸಂಧ್ಯಾವಂದನೆಗಳನ್ನು ಮುಗಿಸಿ, ರಥದಲ್ಲಿ ಕುಳಿತು, ರಣದಲ್ಲಿ ನಡೆದುದರ ಕುರಿತು ಮಾತನಾಡಿಕೊಳ್ಳುತ್ತಾ ಪ್ರಯಾಣಿಸಿದರು.
07050009a ತತಃ ಸ್ವಶಿಬಿರಂ ಪ್ರಾಪ್ತೌ ಹತಾನಂದಂ ಹತತ್ವಿಷಂ।
07050009c ವಾಸುದೇವೋಽರ್ಜುನಶ್ಚೈವ ಕೃತ್ವಾ ಕರ್ಮ ಸುದುಷ್ಕರಂ।।
ಸುದುಷ್ಕರ ಕರ್ಮಗಳನ್ನೆಸಗಿ ವಾಸುದೇವಾರ್ಜುನರು ಆನಂದವನ್ನು ಕಳೆದುಕೊಂಡಿದ್ದ ಕಾಂತಿಹೀನವಾಗಿದ್ದ ತಮ್ಮ ಶಿಬಿರವನ್ನು ತಲುಪಿದರು.
07050010a ಧ್ವಸ್ತಾಕಾರಂ ಸಮಾಲಕ್ಷ್ಯ ಶಿಬಿರಂ ಪರವೀರಹಾ।
07050010c ಬೀಭತ್ಸುರಬ್ರವೀತ್ಕೃಷ್ಣಮಸ್ವಸ್ಥಹೃದಯಸ್ತತಃ।।
ಆಗ ನಾಶಗೊಂಡಂತಿದ್ದ ತನ್ನ ಶಿಬಿರವನ್ನು ನೋಡಿ ಪರವೀರಹ ಬೀಭತ್ಸುವು ಅಸ್ವಸ್ಥಹೃದಯನಾಗಿ ಕೃಷ್ಣನಿಗೆ ಹೇಳಿದನು:
07050011a ನಾದ್ಯ ನಂದಂತಿ ತೂರ್ಯಾಣಿ ಮಂಗಲ್ಯಾನಿ ಜನಾರ್ದನ।
07050011c ಮಿಶ್ರಾ ದುಂದುಭಿನಿರ್ಘೋಷೈಃ ಶಂಖಾಶ್ಚಾಡಂಬರೈಃ ಸಹ।
07050011e ವೀಣಾ ವಾ ನಾದ್ಯ ವಾದ್ಯಂತೇ ಶಮ್ಯಾತಾಲಸ್ವನೈಃ ಸಹ।।
“ಇಂದು ಜನಾರ್ದನ! ದುಂದುಭಿ ನಿರ್ಘೋಷಗಳಿಂದ, ಶಂಖ ಮತ್ತು ಡಂಬರುಗಳಿಂದ ಕೂಡಿದ ಮಂಗಳವಾದ್ಯಗಳು ಮೊಳಗುತ್ತಿಲ್ಲ. ತಾಳ ಮೃದಂಗಗಳೊಂದಿಗೆ ವೀಣಾವಾದನವೂ ನಡೆಯುತ್ತಿಲ್ಲ!
07050012a ಮಂಗಲ್ಯಾನಿ ಚ ಗೀತಾನಿ ನ ಗಾಯಂತಿ ಪಠಂತಿ ಚ।
07050012c ಸ್ತುತಿಯುಕ್ತಾನಿ ರಮ್ಯಾಣಿ ಮಮಾನೀಕೇಷು ಬಂದಿನಃ।।
ನನ್ನ ಶಿಬಿರದ ಬಂದಿಗಳು ಮಂಗಲ ಗೀತೆಗಳನ್ನು ಹಾಡುತ್ತಿಲ್ಲ, ಮತ್ತು ರಮ್ಯ ಸ್ತುತಿಯುಕ್ತವಾದವುಗಳನ್ನು ಓದುತ್ತಿಲ್ಲ!
07050013a ಯೋಧಾಶ್ಚಾಪಿ ಹಿ ಮಾಂ ದೃಷ್ಟ್ವಾ ನಿವರ್ತಂತೇ ಹ್ಯಧೋಮುಖಾಃ।
07050013c ಕರ್ಮಾಣಿ ಚ ಯಥಾಪೂರ್ವಂ ಕೃತ್ವಾ ನಾಭಿವದಂತಿ ಮಾಂ।।
ಯೋಧರೂ ಕೂಡ ನನ್ನನ್ನು ನೋಡಿ ಮುಖಕೆಳಗೆ ಮಾಡಿ ಹೋಗುತ್ತಿದ್ದಾರೆ. ಹಿಂದೆ ಅವರು ನನಗೆ ನಮಸ್ಕರಿಸಿ ಯುದ್ಧವಾರ್ತೆಗಳನ್ನು ಹೇಳುತ್ತಿದ್ದರು!
07050014a ಅಪಿ ಸ್ವಸ್ತಿ ಭವೇದದ್ಯ ಭ್ರಾತೃಭ್ಯೋ ಮಮ ಮಾಧವ।
07050014c ನ ಹಿ ಶುಧ್ಯತಿ ಮೇ ಭಾವೋ ದೃಷ್ಟ್ವಾ ಸ್ವಜನಮಾಕುಲಂ।।
ಮಾಧವ! ನಿಶ್ಚಯವಾಗಿಯೂ ನನ್ನ ಅಣ್ಣಂದಿರಿಬ್ಬರೂ ಕುಶಲವಾಗಿರುವರೇ? ನನ್ನವರ ವ್ಯಾಕುಲತೆಯನ್ನು ನೋಡಿ ಈ ಭಾವವು ನನ್ನಿಂದ ದೂರವಾಗುತ್ತಿಲ್ಲ.
07050015a ಅಪಿ ಪಾಂಚಾಲರಾಜಸ್ಯ ವಿರಾಟಸ್ಯ ಚ ಮಾನದ।
07050015c ಸರ್ವೇಷಾಂ ಚೈವ ಯೋಧಾನಾಂ ಸಾಮಗ್ರ್ಯಂ ಸ್ಯಾನ್ಮಮಾಚ್ಯುತ।।
ಅಚ್ಯುತ! ಮಾನದ! ಪಾಂಚಾಲರಾಜನ, ವಿರಾಟನ ಎಲ್ಲ ಯೋಧರೂ ಸಮಗ್ರವಾಗಿ ಕುಶಲದಿಂದಿರುವರೇ?
07050016a ನ ಚ ಮಾಮದ್ಯ ಸೌಭದ್ರಃ ಪ್ರಹೃಷ್ಟೋ ಭ್ರಾತೃಭಿಃ ಸಹ।
07050016c ರಣಾದಾಯಾಂತಮುಚಿತಂ ಪ್ರತ್ಯುದ್ಯಾತಿ ಹಸನ್ನಿವ।।
ಇಂದು ಸಹೋದರರೊಂದಿಗೆ ಅತಿ ಸಂತೋಷದಿಂದ ನಗು ನಗುತ್ತಾ ಸೌಭದ್ರನು ಯುದ್ಧದಿಂದ ಹಿಂದಿರುಗಿದ ನನ್ನನ್ನು ಉಚಿತವಾಗಿ ಎದಿರುಗೊಳ್ಳುತ್ತಲೂ ಇಲ್ಲ!”
07050017a ಏವಂ ಸಂಕಥಯಂತೌ ತೌ ಪ್ರವಿಷ್ಟೌ ಶಿಬಿರಂ ಸ್ವಕಂ।
07050017c ದದೃಶಾತೇ ಭೃಶಾಸ್ವಸ್ಥಾನ್ಪಾಂಡವಾನ್ನಷ್ಟಚೇತಸಃ।।
ಹೀಗೆ ಮಾತನಾಡಿಕೊಳ್ಳುತ್ತಾ ಅವರಿಬ್ಬರೂ ತಮ್ಮ ಶಿಬಿರವನ್ನು ಪ್ರವೇಶಿಸಿ ಅಲ್ಲಿ ತುಂಬಾ ಅಸ್ವಸ್ಥರಾಗಿದ್ದ ಚೇತನವನ್ನು ಕಳೆದುಕೊಂಡಿದ್ದ ಪಾಂಡವರನ್ನು ಕಂಡರು.
07050018a ದೃಷ್ಟ್ವಾ ಭ್ರಾತೄಂಚ ಪುತ್ರಾಂಶ್ಚ ವಿಮನಾ ವಾನರಧ್ವಜಃ।
07050018c ಅಪಶ್ಯಂಶ್ಚೈವ ಸೌಭದ್ರಮಿದಂ ವಚನಮಬ್ರವೀತ್।।
ವಿಮನಸ್ಕರಾಗಿದ್ದ ಸಹೋದರರನ್ನೂ ಮಕ್ಕಳನ್ನೂ ನೋಡಿ ಅಲ್ಲಿ ಸೌಭದ್ರನನ್ನು ಕಾಣದೇ ವಾನರಧ್ವಜನು ಈ ಮಾತನ್ನಾಡಿದನು:
07050019a ಮುಖವರ್ಣೋಽಪ್ರಸನ್ನೋ ವಃ ಸರ್ವೇಷಾಮೇವ ಲಕ್ಷ್ಯತೇ।
07050019c ನ ಚಾಭಿಮನ್ಯುಂ ಪಶ್ಯಾಮಿ ನ ಚ ಮಾಂ ಪ್ರತಿನಂದಥ।।
“ನೀವೆಲ್ಲರೂ ಮುಖವರ್ಣಗಳನ್ನು ಕಳೆದುಕೊಂಡು ಅಪ್ರಸನ್ನರಾಗಿರುವವರಂತೆ ಕಾಣುತ್ತಿದ್ದೀರಿ. ಅಭಿಮನ್ಯುವೂ ನನಗೆ ಕಾಣುತ್ತಿಲ್ಲ. ನನ್ನೊಡನೆ ಸಂತೋಷದಿಂದ ಮಾತನಾಡುತ್ತಿಲ್ಲ!
07050020a ಮಯಾ ಶ್ರುತಶ್ಚ ದ್ರೋಣೇನ ಚಕ್ರವ್ಯೂಹೋ ವಿನಿರ್ಮಿತಃ।
07050020c ನ ಚ ವಸ್ತಸ್ಯ ಭೇತ್ತಾಸ್ತಿ ಋತೇ ಸೌಭದ್ರಮಾಹವೇ।।
ದ್ರೋಣನು ಚಕ್ರವ್ಯೂಹವನ್ನು ನಿರ್ಮಿಸಿದನೆಂದು ನಾನು ಕೇಳಿದ್ದೆ. ಸೌಭದ್ರನಲ್ಲದೇ ನಿಮ್ಮಲ್ಲಿ ಯಾರಿಗೂ ಯುದ್ಧದಲ್ಲಿ ಅದನ್ನು ಭೇದಿಸುವುದು ತಿಳಿದಿರಲಿಲ್ಲ.
07050021a ನ ಚೋಪದಿಷ್ಟಸ್ತಸ್ಯಾಸೀನ್ಮಯಾನೀಕವಿನಿರ್ಗಮಃ।
07050021c ಕಚ್ಚಿನ್ನ ಬಾಲೋ ಯುಷ್ಮಾಭಿಃ ಪರಾನೀಕಂ ಪ್ರವೇಶಿತಃ।।
ನಾನಾದರೋ ಅವನಿಗೆ ವ್ಯೂಹವನ್ನು ಪ್ರವೇಶಿಸುವುದರ ಹೊರತಾಗಿ ನಿರ್ಗಮಿಸುವುದರ ಕುರಿತು ಉಪದೇಶಿಸಿರಲಿಲ್ಲ. ನಿಮ್ಮಲ್ಲಿ ಯಾರೂ ಅವನು ಶತ್ರುವ್ಯೂಹವನ್ನು ಪ್ರವೇಶಿಸುವಂತೆ ಮಾಡಿಲ್ಲ ತಾನೇ?
07050022a ಭಿತ್ತ್ವಾನೀಕಂ ಮಹೇಷ್ವಾಸಃ ಪರೇಷಾಂ ಬಹುಶೋ ಯುಧಿ।
07050022c ಕಚ್ಚಿನ್ನ ನಿಹತಃ ಶೇತೇ ಸೌಭದ್ರಃ ಪರವೀರಹಾ।।
ಮಹೇಷ್ವಾಸ ಪರವೀರಹ ಸೌಭದ್ರನು ಯುದ್ಧದಲ್ಲಿ ಶತ್ರುಗಳ ಸೇನೆಯನ್ನು ಬಹುವಾಗಿ ಭೇದಿಸಿ ಕೊನೆಗೆ ಅಲ್ಲಿಯೇ ಹತನಾಗಿ ಮಲಗಿಲ್ಲ ತಾನೇ?
07050023a ಲೋಹಿತಾಕ್ಷಂ ಮಹಾಬಾಹುಂ ಜಾತಂ ಸಿಂಹಮಿವಾದ್ರಿಷು।
07050023c ಉಪೇಂದ್ರಸದೃಶಂ ಬ್ರೂತ ಕಥಮಾಯೋಧನೇ ಹತಃ।।
ಲೋಹಿತಾಕ್ಷ, ಮಹಾಬಾಹು, ಪರ್ವತಗಳಲ್ಲಿ ಹುಟ್ಟಿದ ಸಿಂಹದಂತಿದ್ದ, ಉಪೇಂದ್ರನಂತಿದ್ದ ಅವನು ಯುದ್ಧಮಾಡುತ್ತಾ ಹೇಗೆ ಹತನಾದನೆಂದು ಹೇಳಿ!
07050024a ಸುಕುಮಾರಂ ಮಹೇಷ್ವಾಸಂ ವಾಸವಸ್ಯಾತ್ಮಜಾತ್ಮಜಂ।
07050024c ಸದಾ ಮಮ ಪ್ರಿಯಂ ಬ್ರೂತ ಕಥಮಾಯೋಧನೇ ಹತಃ।।
ನನಗೆ ಸದಾ ಪ್ರಿಯನಾದ ಸುಕುಮಾರ, ಮಹೇಷ್ವಾಸ, ವಾಸವನ ಮಗನ ಮಗನು ಯುದ್ಧದಲ್ಲಿ ಹೇಗೆ ಹತನಾದನು ಹೇಳಿ!
07050025a ವಾರ್ಷ್ಣೇಯೀದಯಿತಂ ಶೂರಂ ಮಯಾ ಸತತಲಾಲಿತಂ।
07050025c ಅಂಬಾಯಾಶ್ಚ ಪ್ರಿಯಂ ನಿತ್ಯಂ ಕೋಽವಧೀತ್ಕಾಲಚೋದಿತಃ।।
ವಾರ್ಷ್ಣೇಯಿಯ ಮಗ, ಶೂರ, ಸತತವೂ ನನ್ನಿಂದ ಮುದ್ದಿಸಲ್ಪಡುತ್ತಿದ್ದ, ತಾಯಿ ಕುಂತಿಗೂ ನಿತ್ಯವೂ ಪ್ರಿಯನಾದ ಅವನನ್ನು ಕಾಲಚೋದಿತನಾದ ಯಾರು ವಧಿಸಿದರು?
07050026a ಸದೃಶೋ ವೃಷ್ಣಿಸಿಂಹಸ್ಯ ಕೇಶವಸ್ಯ ಮಹಾತ್ಮನಃ।
07050026c ವಿಕ್ರಮಶ್ರುತಮಾಹಾತ್ಮ್ಯೈಃ ಕಥಮಾಯೋಧನೇ ಹತಃ।।
ವಿಕ್ರಮ-ಕೀರ್ತಿ-ಮಹಾತ್ಮೆಗಳಲ್ಲಿ ವೃಷ್ಣಿಸಿಂಹ ಕೇಶವನಂತಿರುವ ಆ ಮಹಾತ್ಮನು ಯುದ್ಧದಲ್ಲಿ ಹೇಗೆ ಹತನಾದನು ಹೇಳಿ!
07050027a ಸುಭದ್ರಾಯಾಃ ಪ್ರಿಯಂ ನಿತ್ಯಂ ದ್ರೌಪದ್ಯಾಃ ಕೇಶವಸ್ಯ ಚ।
07050027c ಯದಿ ಪುತ್ರಂ ನ ಪಶ್ಯಾಮಿ ಯಾಸ್ಯಾಮಿ ಯಮಸಾದನಂ।।
ನಿತ್ಯವೂ ಸುಭದ್ರೆಯ, ದ್ರೌಪದಿಯ ಮತ್ತು ಕೇಶವನ ಪ್ರಿಯನಾದ ನನ್ನ ಮಗನನ್ನು ನಾನೇನಾದರೂ ಕಾಣದೇ ಇದ್ದರೆ ನಾನೂ ಕೂಡ ಯಮಸಾದನಕ್ಕೆ ಹೋಗುತ್ತೇನೆ!
07050028a ಮೃದುಕುಂಚಿತಕೇಶಾಂತಂ ಬಾಲಂ ಬಾಲಮೃಗೇಕ್ಷಣಂ।
07050028c ಮತ್ತದ್ವಿರದವಿಕ್ರಾಂತಂ ಶಾಲಪೋತಮಿವೋದ್ಗತಂ।।
07050029a ಸ್ಮಿತಾಭಿಭಾಷಿಣಂ ದಾಂತಂ ಗುರುವಾಕ್ಯಕರಂ ಸದಾ।
07050029c ಬಾಲ್ಯೇಽಪ್ಯಬಾಲಕರ್ಮಾಣಂ ಪ್ರಿಯವಾಕ್ಯಮಮತ್ಸರಂ।।
07050030a ಮಹೋತ್ಸಾಹಂ ಮಹಾಬಾಹುಂ ದೀರ್ಘರಾಜೀವಲೋಚನಂ।
07050030c ಭಕ್ತಾನುಕಂಪಿನಂ ದಾಂತಂ ನ ಚ ನೀಚಾನುಸಾರಿಣಂ।।
07050031a ಕೃತಜ್ಞಂ ಜ್ಞಾನಸಂಪನ್ನಂ ಕೃತಾಸ್ತ್ರಮನಿವರ್ತಿನಂ।
07050031c ಯುದ್ಧಾಭಿನಂದಿನಂ ನಿತ್ಯಂ ದ್ವಿಷತಾಮಘವರ್ಧನಂ।।
07050032a ಸ್ವೇಷಾಂ ಪ್ರಿಯಹಿತೇ ಯುಕ್ತಂ ಪಿತೄಣಾಂ ಜಯಗೃದ್ಧಿನಂ।
07050032c ನ ಚ ಪೂರ್ವಪ್ರಹರ್ತಾರಂ ಸಂಗ್ರಾಮೇ ನಷ್ಟಸಂಭ್ರಮಂ।
07050032e ಯದಿ ಪುತ್ರಂ ನ ಪಶ್ಯಾಮಿ ಯಾಸ್ಯಾಮಿ ಯಮಸಾದನಂ।।
ಮೃದುವಾದ ಗುಂಗುರು ಕೂದಲುಳ್ಳ, ಜಿಂಕೆಯ ಮರಿಯ ಕಣ್ಣುಗಳನ್ನುಳ್ಳ, ಮತ್ತಗಜದ ನಡುಗೆಯ, ಎಳೆಯ ಸಾಲವೃಕ್ಷದಂತೆ ಎತ್ತರನಾಗಿದ್ದ, ನಗುನಗುತ್ತಲೇ ಮಾತನಾಡುವ, ಶಾಂತಸ್ವಭಾವದ, ಸದಾ ಹಿರಿಯರ ಮಾತಿನಂತೆಯೇ ನಡೆದುಕೊಳ್ಳುತ್ತಿದ್ದ, ಬಾಲಕನಾಗಿದ್ದರೂ ಅಬಾಲರ ಕೃತ್ಯವನ್ನೆಸಗುತ್ತಿದ್ದ, ಪ್ರಿಯವಾಗಿ ಮಾತನಾಡುವ, ಮಾತ್ಸ್ಯರ್ಯವಿಲ್ಲದ, ಬಾಲಕ, ಮಹೋತ್ಸಾಹಿ, ಮಹಾಬಾಹು, ದೀರ್ಘರಾಜೀವಲೋಚನ, ಭಕ್ತಾನುಕಂಪೀ, ಶಾಂತ, ನೀಚರನ್ನು ಅನುಸರಿಸದ, ಕೃತಜ್ಞ, ಜ್ಞಾನಸಂಪನ್ನ, ಕೃತಾಸ್ತ್ರ, ಯುದ್ಧದಲ್ಲಿ ಪಲಾಯನ ಮಾಡದ, ಯುದ್ಧದ ಪ್ರಶಂಸಕ, ನಿತ್ಯವೂ ಶತ್ರುಗಳಿಗೆ ಭಯವನ್ನುಂಟುಮಾಡುತ್ತಿದ್ದ, ತನ್ನವರಿಗೆ ಪ್ರಿಯವೂ ಹಿತವೂ ಆದ ಕಾರ್ಯಗಳಲ್ಲಿ ನಿರತನಾದ, ಪಿತೃಗಳ ಜಯವನ್ನು ಆಶಿಸಿದ, ತನಗೆ ಮೊದಲು ಹೊಡೆಯದೇ ಇದ್ದವನನ್ನು ಹೊಡೆಯದ, ಸಂಗ್ರಾಮದಲ್ಲಿ ಸಂಭ್ರಮವನ್ನು ಕಳೆದುಕೊಳ್ಳದ ಆ ನನ್ನ ಮಗನನ್ನು ನಾನೇನಾದರೂ ಕಾಣದೇ ಇದ್ದರೆ ನಾನೂ ಕೂಡ ಯಮಸಾದನಕ್ಕೆ ಹೋಗುತ್ತೇನೆ!
07050033a ಸುಲಲಾಟಂ ಸುಕೇಶಾಂತಂ ಸುಭ್ರ್ವಕ್ಷಿದಶನಚ್ಚದಂ।
07050033c ಅಪಶ್ಯತಸ್ತದ್ವದನಂ ಕಾ ಶಾಂತಿರ್ಹೃದಯಸ್ಯ ಮೇ।।
ಸುಂದರ ಹಣೆಯುಳ್ಳ, ಸುಂದರ ಮುಂಗುರುಳುಗಳನ್ನುಳ್ಳ, ಸುಂದರ ಹುಬ್ಬು, ಕಣ್ಣು, ಹಲ್ಲುಗಳನ್ನುಳ್ಳ ಆ ಮುಖವನ್ನು ಕಾಣದ ನನ್ನ ಹೃದಯಕ್ಕೆ ಶಾಂತಿಯೆಲ್ಲಿ?
07050034a ತಂತ್ರೀಸ್ವನಸುಖಂ ರಮ್ಯಂ ಪುಂಸ್ಕೋಕಿಲಸಮಧ್ವನಿಂ।
07050034c ಅಶೃಣ್ವತಃ ಸ್ವನಂ ತಸ್ಯ ಕಾ ಶಾಂತಿರ್ಹೃದಯಸ್ಯ ಮೇ।।
ವೀಣಾವಾದನದಂತೆ ಸುಖವನ್ನು ನೀಡುವ, ಗಂಡು ಕೋಗಿಲೆಯ ಧ್ವನಿಯುಳ್ಳ ಅವನ ರಮ್ಯ ಸ್ವರವನ್ನು ಕೇಳದ ನನ್ನ ಹೃದಯಕ್ಕೆ ಶಾಂತಿಯೆಲ್ಲಿ?
07050035a ರೂಪಂ ಚಾಪ್ರತಿರೂಪಂ ತತ್ತ್ರಿದಶೇಷ್ವಪಿ ದುರ್ಲಭಂ।
07050035c ಅಪಶ್ಯತೋಽದ್ಯ ವೀರಸ್ಯ ಕಾ ಶಾಂತಿರ್ಹೃದಯಸ್ಯ ಮೇ।।
ತ್ರಿದಶರಿಗೂ ದುರ್ಲಭವಾದ ಆ ಅಪ್ರತಿಮ ರೂಪಿ ವೀರನ ರೂಪವನ್ನು ಕಾಣದ ನನ್ನ ಹೃದಯಕ್ಕೆ ಇಂದು ಶಾಂತಿಯೆಲ್ಲಿ?
07050036a ಅಭಿವಾದನದಕ್ಷಂ ತಂ ಪಿತೄಣಾಂ ವಚನೇ ರತಂ।
07050036c ನಾದ್ಯಾಹಂ ಯದಿ ಪಶ್ಯಾಮಿ ಕಾ ಶಾಂತಿರ್ಹೃದಯಸ್ಯ ಮೇ।।
ಅಭಿವಾದನದಲ್ಲಿ ದಕ್ಷನಾದ ಪಿತೃಗಳ ವಚನರತನಾದ ಅವನನ್ನು ಇಂದು ನಾನು ಕಾಣದೇ ಇದ್ದರೆ ನನ್ನ ಹೃದಯಕ್ಕೆ ಶಾಂತಿಯೆಲ್ಲಿ?
07050037a ಸುಕುಮಾರಃ ಸದಾ ವೀರೋ ಮಹಾರ್ಹಶಯನೋಚಿತಃ।
07050037c ಭೂಮಾವನಾಥವಚ್ಚೇತೇ ನೂನಂ ನಾಥವತಾಂ ವರಃ।।
ಸುಕುಮಾರನಾದ, ಸದಾ ವೀರನಾದ, ಮಹಾಬೆಲೆಬಾಳುವ ಹಾಸಿಗೆಗಳ ಮೇಲೆ ಮಲಗಲು ಅರ್ಹನಾದ ಅವನು ತನಗೆ ಶ್ರೇಷ್ಠ ರಕ್ಷಕರಿದ್ದರೂ ಇಂದು ಅನಾಥನಂತೆ ನೆಲದ ಮೇಲೆ ಮಲಗಿದ್ದಾನಲ್ಲ!
07050038a ಶಯಾನಂ ಸಮುಪಾಸಂತಿ ಯಂ ಪುರಾ ಪರಮಸ್ತ್ರಿಯಃ।
07050038c ತಮದ್ಯ ವಿಪ್ರವಿದ್ಧಾಂಗಮುಪಾಸಂತ್ಯಶಿವಾಃ ಶಿವಾಃ।।
ಹಿಂದೆ ಶಯನದಲ್ಲಿ ಪರಮ ಸ್ತ್ರೀಯರು ಬಂದು ಯಾರನ್ನು ಉಪಾಸಿಸುತ್ತಿದ್ದರೋ ಅಂಥಹ ಅಂಗಾಂಗಳಲ್ಲಿ ಬಾಣಗಳು ಚುಚ್ಚಿಕೊಂಡಿರುವ ಅವನನ್ನು ಅಮಂಗಳರಾದ ನರಿಗಳು ಉಪಾಸಿಸುತ್ತಿವೆಯಲ್ಲ!
07050039a ಯಃ ಪುರಾ ಬೋಧ್ಯತೇ ಸುಪ್ತಃ ಸೂತಮಾಗಧಬಂದಿಭಿಃ।
07050039c ಬೋಧಯಂತ್ಯದ್ಯ ತಂ ನೂನಂ ಶ್ವಾಪದಾ ವಿಕೃತೈಃ ಸ್ವರೈಃ।।
ಹಿಂದೆ ಮಲಗಿರುವಾಗ ಯಾರನ್ನು ಸೂತಮಾಗದಬಂಧಿಗಳು ಎಚ್ಚರಿಸುತ್ತಿದ್ದರೋ ಅಂತವನನ್ನು ಇಂದು ನರಿ-ನಾಯಿಗಳು ವಿಕೃತ ಸ್ವರಗಳಲ್ಲಿ ಎಚ್ಚರಿಸಲು ಪ್ರಯತ್ನಿಸುತ್ತಿರುವವಲ್ಲ!
07050040a ಚತ್ರಚ್ಚಾಯಾಸಮುಚಿತಂ ತಸ್ಯ ತದ್ವದನಂ ಶುಭಂ।
07050040c ನೂನಮದ್ಯ ರಜೋಧ್ವಸ್ತಂ ರಣೇ ರೇಣುಃ ಕರಿಷ್ಯತಿ।।
ಯಾರ ಶುಭ ವದನವು ಚತ್ರಗಳ ಛಾಯೆಗಳಡಿಯಲ್ಲಿ ರಕ್ಷಿತವಾಗಿತ್ತೋ ಅದು ಇಂದು ರಣದಲ್ಲಿ ಧೂಳು ಮುಕ್ಕಿ ಮಾಸಿದೆಯಲ್ಲ!
07050041a ಹಾ ಪುತ್ರಕಾವಿತೃಪ್ತಸ್ಯ ಸತತಂ ಪುತ್ರದರ್ಶನೇ।
07050041c ಭಾಗ್ಯಹೀನಸ್ಯ ಕಾಲೇನ ಯಥಾ ಮೇ ನೀಯಸೇ ಬಲಾತ್।।
ಹಾ ಪುತ್ರ! ಸತತವೂ ಪುತ್ರನನ್ನು ನೋಡುತ್ತಿದ್ದರೂ ತೃಪ್ತನಾಗದ ಈ ಭಾಗ್ಯಹೀನನನ್ನು ಕಾಲವು ಏಕೆ ಬಲವಂತವಾಗಿ ಕೊಂಡೊಯ್ಯುತ್ತಿಲ್ಲ?
07050042a ಸಾದ್ಯ ಸಮ್ಯಮನೀ ನೂನಂ ಸದಾ ಸುಕೃತಿನಾಂ ಗತಿಃ।
07050042c ಸ್ವಭಾಭಿರ್ಭಾಸಿತಾ ರಮ್ಯಾ ತ್ವಯಾತ್ಯರ್ಥಂ ವಿರಾಜತೇ।।
ಸುಕೃತಿಗಳು ಸದಾ ಹೋಗಲು ಬಯಸುವ ಯಮಸದನವು ಇಂದು ನಿನ್ನಿಂದಾಗಿ ಇನ್ನೂ ಹೆಚ್ಚು ರಮ್ಯವೂ ಪ್ರಕಾಶವುಳ್ಳದ್ದೂ ಆಗಿ ವಿರಾಜಿಸುತ್ತಿರಬಹುದು.
07050043a ನೂನಂ ವೈವಸ್ವತಶ್ಚ ತ್ವಾ ವರುಣಶ್ಚ ಪ್ರಿಯಾತಿಥಿಃ।
07050043c ಶತಕ್ರತುರ್ಧನೇಶಶ್ಚ ಪ್ರಾಪ್ತಮರ್ಚಂತ್ಯಭೀರುಕಂ।।
ನಿನ್ನನ್ನು ಪ್ರಿಯ ಅತಿಥಿಯನ್ನಾಗಿ ಪಡೆದು ವೈವಸ್ವತ, ವರುಣ, ಶತಕ್ರತು ಮತ್ತು ಧನೇಶ್ವರರು ನಿನ್ನನ್ನು ಗೌರವಿಸುತ್ತಿರಬಹುದು.”
07050044a ಏವಂ ವಿಲಪ್ಯ ಬಹುಧಾ ಭಿನ್ನಪೋತೋ ವಣಿಗ್ಯಥಾ।
07050044c ದುಃಖೇನ ಮಹತಾವಿಷ್ಟೋ ಯುಧಿಷ್ಠಿರಮಪೃಚ್ಚತ।।
ಹೀಗೆ ಹಡಗು ಮುರಿದ ವರ್ತಕನಂತೆ ಬಹುವಿಧಗಳಲ್ಲಿ ವಿಪಲಿಸಿ, ಮಹಾ ದುಃಖದಿಂದ ಆವಿಷ್ಟನಾಗಿ ಯುಧಿಷ್ಠಿರನನ್ನು ಕೇಳಿದನು:
07050045a ಕಚ್ಚಿತ್ಸ ಕದನಂ ಕೃತ್ವಾ ಪರೇಷಾಂ ಪಾಂಡುನಂದನ।
07050045c ಸ್ವರ್ಗತೋಽಭಿಮುಖಃ ಸಂಖ್ಯೇ ಯುಧ್ಯಮಾನೋ ನರರ್ಷಭಃ।।
“ಪಾಂಡುನಂದನ! ಆ ನರರ್ಷಭನು ಶತ್ರುಗಳೊಂದಿಗೆ ಕದನ ಮಾಡುತ್ತಾ ರಣದಲ್ಲಿ ಶತ್ರುಗಳಿಗೆ ಎದುರಾಗಿ ಯುದ್ಧಮಾಡುತ್ತಿರುವಾಗಲೇ ಸ್ವರ್ಗಗತನಾದನೇ?
07050046a ಸ ನೂನಂ ಬಹುಭಿರ್ಯತ್ತೈರ್ಯುಧ್ಯಮಾನೋ ನರರ್ಷಭೈಃ।
07050046c ಅಸಹಾಯಃ ಸಹಾಯಾರ್ಥೀ ಮಾಮನುಧ್ಯಾತವಾನ್ಧ್ರುವಂ।।
ಬಹುಸಂಖ್ಯಾತರಾದ ಪ್ರಯತ್ನಶೀಲರಾದ ನರರ್ಷಭರೊಡನೆ ಯುದ್ಧಮಾಡುತ್ತಿರುವಾಗ ಅಸಹಾಯಕನಾಗಿದ್ದಾಗ ಸಹಾಯಕ್ಕಾಗಿ ಖಂಡಿತವಾಗಿಯೂ ನನ್ನನ್ನು ಅವನು ಸ್ಮರಿಸಿಕೊಂಡಿರಬೇಕು.
07050047a ಪೀಡ್ಯಮಾನಃ ಶರೈರ್ಬಾಲಸ್ತಾತ ಸಾಧ್ವಭಿಧಾವ ಮಾಂ।
07050047c ಇತಿ ವಿಪ್ರಲಪನ್ಮನ್ಯೇ ನೃಶಂಸೈರ್ಬಹುಭಿರ್ಹತಃ।।
ಶರಗಳಿಂದ ಪೀಡಿತನಾದಾಗ ಆ ಬಾಲ ಕಂದನು ಈಗ ನಾನು ರಕ್ಷಣೆಗೆ ಬರಬಹುದು ಎಂದು ವಿಲಪಿಸುತ್ತಿರುವಾಗಲೇ ಕ್ರೂರಿಗಳಾದ ಬಹುಜನರಿಂದ ಹತನಾಗಿರಬಹುದು ಎಂದು ಭಾವಿಸುತ್ತೇನೆ.
07050048a ಅಥ ವಾ ಮತ್ಪ್ರಸೂತಶ್ಚ ಸ್ವಸ್ರೀಯೋ ಮಾಧವಸ್ಯ ಚ।
07050048c ಸುಭದ್ರಾಯಾಂ ಚ ಸಂಭೂತೋ ನೈವಂ ವಕ್ತುಮಿಹಾರ್ಹತಿ।।
ಅಥವಾ ನನ್ನ ಮಗ, ಮಾಧವನ ಅಳಿಯ ಮತ್ತು ಸುಭದ್ರೆಗೆ ಹುಟ್ಟಿದವನ ಕುರಿತು ಹೀಗೆ ಮಾತನಾಡುವುದು ಸರಿಯಲ್ಲ!
07050049a ವಜ್ರಸಾರಮಯಂ ನೂನಂ ಹೃದಯಂ ಸುದೃಢಂ ಮಮ।
07050049c ಅಪಶ್ಯತೋ ದೀರ್ಘಬಾಹುಂ ರಕ್ತಾಕ್ಷಂ ಯನ್ನ ದೀರ್ಯತೇ।।
ನಿಜವಾಗಿಯೂ ನನ್ನ ಹೃದಯವು ವಜ್ರದ ಸಾರದಿಂದ ಮಾಡಿದ್ದಿರಬೇಕು. ದೀರ್ಘಬಾಹು ಆ ರಕ್ತಾಕ್ಷನನ್ನು ಕಾಣದೇ ಒಡೆದು ಹೋಗುತ್ತಿಲ್ಲವಲ್ಲ!
07050050a ಕಥಂ ಬಾಲೇ ಮಹೇಷ್ವಾಸೇ ನೃಶಂಸಾ ಮರ್ಮಭೇದಿನಃ।
07050050c ಸ್ವಸ್ರೀಯೇ ವಾಸುದೇವಸ್ಯ ಮಮ ಪುತ್ರೇಽಕ್ಷಿಪಂ ಶರಾನ್।।
ಹೇಗೆ ತಾನೇ ಕ್ರೂರಿಗಳಾದ ಮಹೇಷ್ವಾಸರು ಇನ್ನೂ ಬಾಲಕನಾಗಿದ್ದ ನನ್ನ ಮಗ, ವಾಸುದೇವನ ಅಳಿಯನ ಮೇಲೆ ಮರ್ಮಭೇದೀ ಶರಗಳನ್ನು ಪ್ರಯೋಗಿಸಿದರು?
07050051a ಯೋ ಮಾಂ ನಿತ್ಯಮದೀನಾತ್ಮಾ ಪ್ರತ್ಯುದ್ಗಮ್ಯಾಭಿನಂದತಿ।
07050051c ಉಪಯಾಂತಂ ರಿಪೂನ್ ಹತ್ವಾ ಸೋಽದ್ಯ ಮಾಂ ಕಿಂ ನ ಪಶ್ಯತಿ।।
ನಿತ್ಯವೂ ಶತ್ರುಗಳನ್ನು ಸಂಹರಿಸಿ ಬರುತ್ತಿದ್ದಾಗ ಆ ಅದೀನಾತ್ಮನು ಸಂತೋಷದಿಂದ ಹಾರಿಬಂದು ನನ್ನನ್ನು ಅಭಿನಂದಿಸುತ್ತಿದ್ದನು. ಇಂದು ಏಕೆ ಅವನು ನನ್ನನ್ನು ನೋಡುತ್ತಿಲ್ಲ?
07050052a ನೂನಂ ಸ ಪತಿತಃ ಶೇತೇ ಧರಣ್ಯಾಂ ರುಧಿರೋಕ್ಷಿತಃ।
07050052c ಶೋಭಯನ್ಮೇದಿನೀಂ ಗಾತ್ರೈರಾದಿತ್ಯ ಇವ ಪಾತಿತಃ।।
ಅವನು ರಕ್ತದಿಂದ ತೋಯ್ದು ಭೂಮಿಯ ಮೇಲೆ ಬೀಳಿಸಲ್ಪಟ್ಟ ಆದಿತ್ಯನಂತೆ ತನ್ನ ಶರೀರಕಾಂತಿಯಿಂದ ರಣಾಂಗಣವನ್ನೇ ಶೋಭಾಯಮಾನವನ್ನಾಗಿ ಮಾಡುತ್ತಾ ಅಲ್ಲಿಯೇ ಮಲಗಿರಬಹುದೇ?
07050053a ರಣೇ ವಿನಿಹತಂ ಶ್ರುತ್ವಾ ಶೋಕಾರ್ತಾ ವೈ ವಿನಂಕ್ಷ್ಯತಿ।
07050053c ಸುಭದ್ರಾ ವಕ್ಷ್ಯತೇ ಕಿಂ ಮಾಮಭಿಮನ್ಯುಮಪಶ್ಯತೀ।
07050053e ದ್ರೌಪದೀ ಚೈವ ದುಃಖಾರ್ತೇ ತೇ ಚ ವಕ್ಷ್ಯಾಮಿ ಕಿಂ ನ್ವಹಂ।।
ಅಭಿಮನ್ಯುವು ರಣದಲ್ಲಿ ಹತನಾದುದನ್ನು ಕೇಳಿ ಶೋಕಾರ್ತಳಾಗಿ ಪ್ರಾಣವನ್ನೇ ಬಿಡುವ ಸುಭದ್ರೆಗೆ ನಾನು ಏನು ಹೇಳಲಿ? ಅವನನ್ನು ಕಾಣದೇ ದುಃಖಾರ್ತಳಾದ ದ್ರೌಪದಿಗೆ ನಾನು ಏನು ಹೇಳಲಿ?
07050054a ವಜ್ರಸಾರಮಯಂ ನೂನಂ ಹೃದಯಂ ಯನ್ನ ಯಾಸ್ಯತಿ।
07050054c ಸಹಸ್ರಧಾ ವಧೂಂ ದೃಷ್ಟ್ವಾ ರುದತೀಂ ಶೋಕಕರ್ಶಿತಾಂ।।
ಶೋಕಕರ್ಶಿತಳಾಗಿ ರೋದಿಸುತ್ತಿರುವ ನನ್ನ ಸೊಸೆಯನ್ನು ನೋಡಿಯೂ ನನ್ನ ಹೃದಯವು ಸಹಸ್ರ ಚೂರುಗಳಾಗಿ ಒಡೆಯಲಿಲ್ಲವೆಂದರೆ ಅದು ಖಂಡಿತವಾಗಿಯೂ ವಜ್ರಸಾರಮಯವಾಗಿದ್ದಿರಬೇಕು!
07050055a ಹೃಷ್ಟಾನಾಂ ಧಾರ್ತರಾಷ್ಟ್ರಾಣಾಂ ಸಿಂಹನಾದೋ ಮಯಾ ಶ್ರುತಃ।
07050055c ಯುಯುತ್ಸುಶ್ಚಾಪಿ ಕೃಷ್ಣೇನ ಶ್ರುತೋ ವೀರಾನುಪಾಲಭನ್।।
ಹೃಷ್ಟರಾದ ಧಾರ್ತರಾಷ್ಟ್ರರ ಸಿಂಹನಾದವು ನನಗೆ ಕೇಳಿಸಿತು. ಯುಯುತ್ಸುವು ವೀರರನ್ನು ನಿಂದಿಸಿದುದೂ ಕೃಷ್ಣನಿಗೆ ಕೇಳಿಸಿತು.
07050056a ಅಶಕ್ನುವಂತೋ ಬೀಭತ್ಸುಂ ಬಾಲಂ ಹತ್ವಾ ಮಹಾರಥಾಃ।
07050056c ಕಿಂ ನದಧ್ವಮಧರ್ಮಜ್ಞಾಃ ಪಾರ್ಥೇ ವೈ ದೃಶ್ಯತಾಂ ಬಲಂ।।
“ಮಹಾರಥರೇ! ಅಧರ್ಮಜ್ಞರೇ! ಬೀಭತ್ಸುವನ್ನು ಎದುರಿಸಲು ಸಾಧ್ಯವಾಗದೇ ನೀವೆಲ್ಲ ಬಾಲಕನನ್ನು ವಧಿಸಿ ಸಂತೋಷಪಡುವಿರೇಕೆ? ಪಾರ್ಥನ ಬಲವನ್ನು ನೀವು ನೋಡುವಿರಿ!
07050057a ಕಿಂ ತಯೋರ್ವಿಪ್ರಿಯಂ ಕೃತ್ವಾ ಕೇಶವಾರ್ಜುನಯೋರ್ಮೃಧೇ।
07050057c ಸಿಂಹವನ್ನದತ ಪ್ರೀತಾಃ ಶೋಕಕಾಲ ಉಪಸ್ಥಿತೇ।।
ರಣದಲ್ಲಿ ಕೇಶವಾರ್ಜುನರಿಗೆ ವಿಪ್ರಿಯವಾದುದನ್ನು ಮಾಡಿ ಸಂತೋಷದಿಂದ ಸಿಂಹನಾದವನ್ನು ಮಾಡುತ್ತಿರುವ ನಿಮಗೆ ಶೋಕಕಾಲವು ಉಪಸ್ಥಿತವಾಗಿದೆ.
07050058a ಆಗಮಿಷ್ಯತಿ ವಃ ಕ್ಷಿಪ್ರಂ ಫಲಂ ಪಾಪಸ್ಯ ಕರ್ಮಣಃ।
07050058c ಅಧರ್ಮೋ ಹಿ ಕೃತಸ್ತೀವ್ರಃ ಕಥಂ ಸ್ಯಾದಫಲಶ್ಚಿರಂ।।
ಪಾಪಕರ್ಮದ ಫಲವು ಕ್ಷಿಪ್ರವಾಗಿ ನಿಮಗೆ ಬರಲಿದೆ. ತೀವ್ರವಾದ ಅಧರ್ಮವನ್ನೆಸಗಿರುವವರಿಗೆ ಅದರ ಫಲವು ಹೇಗೆ ತಡವಾಗಿ ದೊರೆಯುತ್ತದೆ?”
07050059a ಇತಿ ತಾನ್ಪ್ರತಿ ಭಾಷನ್ವೈ ವೈಶ್ಯಾಪುತ್ರೋ ಮಹಾಮತಿಃ।
07050059c ಅಪಾಯಾಚ್ಚಸ್ತ್ರಮುತ್ಸೃಜ್ಯ ಕೋಪದುಃಖಸಮನ್ವಿತಃ।।
ಹೀಗೆ ಹೇಳಿ ಆ ಮಹಾಮತಿ ವೈಶ್ಯಾಪುತ್ರನು ಕೋಪ-ದುಃಖಸಮನ್ವಿತನಾಗಿ ಶಸ್ತ್ರಗಳನ್ನು ಬಿಸುಟು ರಣವನ್ನು ಬಿಟ್ಟು ಹೋದನು.
07050060a ಕಿಮರ್ಥಮೇತನ್ನಾಖ್ಯಾತಂ ತ್ವಯಾ ಕೃಷ್ಣ ರಣೇ ಮಮ।
07050060c ಅಧಕ್ಷ್ಯಂ ತಾನಹಂ ಸರ್ವಾಂಸ್ತದಾ ಕ್ರೂರಾನ್ಮಹಾರಥಾನ್।।
ಕೃಷ್ಣ! ಈ ವಿಷಯವನ್ನು ನೀನು ರಣಾಂಗಣದಲ್ಲಿಯೇ ಏಕೆ ನನಗೆ ಹೇಳಲಿಲ್ಲ? ಆಗಲೇ ನಾನು ಆ ಎಲ್ಲ ಕ್ರೂರ ಮಹಾರಥರನ್ನೂ ಸುಟ್ಟುಬಿಡುತ್ತಿರಲಿಲ್ಲವೇ?”
07050061a ನಿಗೃಹ್ಯ ವಾಸುದೇವಸ್ತಂ ಪುತ್ರಾಧಿಭಿರಭಿಪ್ಲುತಂ।
07050061c ಮೈವಮಿತ್ಯಬ್ರವೀತ್ ಕೃಷ್ಣಸ್ತೀವ್ರಶೋಕಸಮನ್ವಿತಂ।।
ಆಗ ಪುತ್ರಶೋಕವೆಂಬ ದುಃಖಸಾಗರದಲ್ಲಿ ಮುಳುಗಿಹೋಗಿದ್ದ, ತೀವ್ರಶೋಕಸಮನ್ವಿತನಾದ ಅವನನ್ನು ಬಿಗಿದಪ್ಪಿ ವಾಸುದೇವ ಕೃಷ್ಣನು “ಹೀಗೆ ದುಃಖಿಸಬೇಡ!” ಎಂದು ಹೇಳಿದನು:
07050062a ಸರ್ವೇಷಾಮೇಷ ವೈ ಪಂಥಾಃ ಶೂರಾಣಾಮನಿವರ್ತಿನಾಂ।
07050062c ಕ್ಷತ್ರಿಯಾಣಾಂ ವಿಶೇಷೇಣ ಯೇಷಾಂ ಯುದ್ಧೇನ ಜೀವಿಕಾ।।
“ಯುದ್ಧದಿಂದ ಓಡಿಹೋಗದೇ ಇರುವ ಎಲ್ಲ ಶೂರರಿಗೂ, ವಿಶೇಷವಾಗಿ ಯುದ್ಧವೇ ಜೀವನವಾಗಿರುವ ಕ್ಷತ್ರಿಯರಿಗೆ, ಕೊನೆಗೆ ಇದೇ ದಾರಿ!
07050063a ಏಷಾ ವೈ ಯುಧ್ಯಮಾನಾನಾಂ ಶೂರಾಣಾಮನಿವರ್ತಿನಾಂ।
07050063c ವಿಹಿತಾ ಧರ್ಮಶಾಸ್ತ್ರಜ್ಞೈರ್ಗತಿರ್ಗತಿಮತಾಂ ವರ।।
ಬುದ್ಧಿವಂತರಲ್ಲಿ ಶ್ರೇಷ್ಠ! ಯುದ್ಧದಿಂದ ಹಿಂದಿರುಗದೇ ಯುದ್ಧಾಸಕ್ತರಾದ ಶೂರರಿಗೂ ಇದೇ ಮಾರ್ಗವು ಧರ್ಮಶಾಸ್ತ್ರಜ್ಞರಿಂದ ವಿಹಿತವಾಗಿದೆ.
07050064a ಧ್ರುವಂ ಯುದ್ಧೇ ಹಿ ಮರಣಂ ಶೂರಾಣಾಮನಿವರ್ತಿನಾಂ।
07050064c ಗತಃ ಪುಣ್ಯಕೃತಾಂ ಲೋಕಾನಭಿಮನ್ಯುರ್ನ ಸಂಶಯಃ।।
ಹಿಂದಿರುಗದ ಶೂರರಿಗೆ ಯುದ್ಧದಲ್ಲಿ ಮರಣವು ನಿಶ್ಚಿತವಾದುದು. ಅಭಿಮನ್ಯುವು ಪುಣ್ಯಕೃತರ ಲೋಕಕ್ಕೆ ಹೋಗಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ.
07050065a ಏತಚ್ಚ ಸರ್ವವೀರಾಣಾಂ ಕಾಂಕ್ಷಿತಂ ಭರತರ್ಷಭ।
07050065c ಸಂಗ್ರಾಮೇಽಭಿಮುಖಾ ಮೃತ್ಯುಂ ಪ್ರಪ್ನುಯಾಮೇತಿ ಮಾನದ।।
ಭರತರ್ಷಭ! ಮಾನದ! ಸಂಗ್ರಾಮದದಲ್ಲಿ ಎದುರುಮುಖರಾಗಿದ್ದಾಗ ಸಾವನ್ನು ಪಡೆಯಬೇಕು ಎನ್ನುವುದು ಎಲ್ಲ ವೀರರ ಬಯಕೆಯಾಗಿರುತ್ತದೆ.
07050066a ಸ ಚ ವೀರಾನ್ರಣೇ ಹತ್ವಾ ರಾಜಪುತ್ರಾನ್ಮಹಾಬಲಾನ್।
07050066c ವೀರೈರಾಕಾಂಕ್ಷಿತಂ ಮೃತ್ಯುಂ ಸಂಪ್ರಾಪ್ತೋಽಭಿಮುಖೋ ರಣೇ।।
ಅವನಾದರೋ ರಣದಲ್ಲಿ ಮಹಾಬಲಶಾಲಿ ವೀರ ರಾಜಪುತ್ರರನ್ನು ಸಂಹರಿಸಿ ವೀರರು ಬಯಸುವ, ರಣದಲ್ಲಿ ಎದುರುಮುಖನಾಗಿರುವಾಗ, ಮೃತ್ಯುವನ್ನು ಪಡೆದಿದ್ದಾನೆ.
07050067a ಮಾ ಶುಚಃ ಪುರುಷವ್ಯಾಘ್ರ ಪೂರ್ವೈರೇಷ ಸನಾತನಃ।
07050067c ಧರ್ಮಕೃದ್ಭಿಃ ಕೃತೋ ಧರ್ಮಃ ಕ್ಷತ್ರಿಯಾಣಾಂ ರಣೇ ಕ್ಷಯಃ।।
ಪುರುಷವ್ಯಾಘ್ರ! ಶೋಕಿಸಬೇಡ! ರಣದಲ್ಲಿ ನಾಶವು ಕ್ಷತ್ರಿಯರ ಧರ್ಮವೆಂದು ಸನಾತನ ಧರ್ಮವನ್ನು ಮಾಡಿದವರು ಹಿಂದೆಯೇ ಮಾಡಿದ್ದಾರೆ.
07050068a ಇಮೇ ತೇ ಭ್ರಾತರಃ ಸರ್ವೇ ದೀನಾ ಭರತಸತ್ತಮ।
07050068c ತ್ವಯಿ ಶೋಕಸಮಾವಿಷ್ಟೇ ನೃಪಾಶ್ಚ ಸುಹೃದಸ್ತವ।।
ಭರತಸತ್ತಮ! ನೀನು ಶೋಕಸಮಾವಿಷ್ಟನಾದೆಯೆಂದರೆ ಈ ನಿನ್ನ ಸಹೋದರರು, ನೃಪರು, ಸುಹೃದಯರು ಎಲ್ಲರೂ ದೀನರಾಗುತ್ತಾರೆ.
07050069a ಏತಾಂಸ್ತ್ವಂ ವಚಸಾ ಸಾಮ್ನಾ ಸಮಾಶ್ವಾಸಯ ಮಾನದ।
07050069c ವಿದಿತಂ ವೇದಿತವ್ಯಂ ತೇ ನ ಶೋಕಂ ಕರ್ತುಮರ್ಹಸಿ।।
ಮಾನದ! ಇವರನ್ನು ನೀನು ಸಮಾಧಾನಪೂರ್ವಕ ಆಶ್ವಾಸನೆಯ ಮಾತುಗಳಿಂದ ಸಂತೈಸು. ತಿಳಿಯಬೇಕಾದುದನ್ನು ತಿಳಿದಿರುವ ನೀನು ಶೋಕಿಸುವುದು ಸರಿಯಲ್ಲ!”
07050070a ಏವಮಾಶ್ವಾಸಿತಃ ಪಾರ್ಥಃ ಕೃಷ್ಣೇನಾದ್ಭುತಕರ್ಮಣಾ।
07050070c ತತೋಽಬ್ರವೀತ್ತದಾ ಭ್ರಾತೄನ್ಸರ್ವಾನ್ಪಾರ್ಥಃ ಸಗದ್ಗದಾನ್।।
ಹೀಗೆ ಅದ್ಭುತ ಕರ್ಮಿ ಕೃಷ್ಣನಿಂದ ಸಂತೈಸಲ್ಪಡಲು ಪಾರ್ಥನು ಗದ್ಗದನಾಗಿ ಸಹೋದರರೆಲ್ಲರಿಗೂ ಹೇಳಿದನು:
07050071a ಸ ದೀರ್ಘಬಾಹುಃ ಪೃಥ್ವಂಸೋ ದೀರ್ಘರಾಜೀವಲೋಚನಃ।
07050071c ಅಭಿಮನ್ಯುರ್ಯಥಾ ವೃತ್ತಃ ಶ್ರೋತುಮಿಚ್ಚಾಮ್ಯಹಂ ತಥಾ।।
“ಆ ದೀರ್ಘಬಾಹು, ವಿಶಾಲ ಭುಜದ, ದೀರ್ಘರಾಜೀವ ಲೋಚನ ಅಭಿಮನ್ಯುವು ಹೇಗೆ ನಡೆದುಕೊಂಡನೆನ್ನುವುದನ್ನು ಕೇಳಲು ಬಯಸುತ್ತೇನೆ.
07050072a ಸನಾಗಸ್ಯಂದನಹಯಾನ್ದ್ರಕ್ಷ್ಯಧ್ವಂ ನಿಹತಾನ್ಮಯಾ।
07050072c ಸಂಗ್ರಾಮೇ ಸಾನುಬಂಧಾಂಸ್ತಾನ್ ಮಮ ಪುತ್ರಸ್ಯ ವೈರಿಣಃ।।
ನನ್ನ ಮಗನ ವೈರಿಯನ್ನು ಸಂಗ್ರಾಮದಲ್ಲಿ ನಾನು ಅವನ ಅನುಬಂಧರನ್ನೂ ಕೂಡಿ, ಅವನ ಆನೆ-ಕುದುರೆ-ರಥಗಳೊಂದಿಗೆ ಭಸ್ಮಮಾಡುತ್ತೇನೆ.
07050073a ಕಥಂ ಚ ವಃ ಕೃತಾಸ್ತ್ರಾಣಾಂ ಸರ್ವೇಷಾಂ ಶಸ್ತ್ರಪಾಣಿನಾಂ।
07050073c ಸೌಭದ್ರೋ ನಿಧನಂ ಗಚ್ಚೇದ್ವಜ್ರಿಣಾಪಿ ಸಮಾಗತಃ।।
ಆದರೆ ಕೃತಾಸ್ತ್ರರಾಗಿರುವ ಶಸ್ತ್ರಪಾಣಿಗಳಾಗಿರುವ ನೀವೆಲ್ಲರೂ ಇರುವಾಗ ರಣದಲ್ಲಿ ವಜ್ರಪಾಣಿಯೇ ಎದುರಾಗಿದ್ದರೂ ಸೌಭದ್ರನು ಹೇಗೆ ನಿಧನನಾದನು?
07050074a ಯದ್ಯೇವಮಹಮಜ್ಞಾಸ್ಯಮಶಕ್ತಾನ್ರಕ್ಷಣೇ ಮಮ।
07050074c ಪುತ್ರಸ್ಯ ಪಾಂಡುಪಾಂಚಾಲಾನ್ಮಯಾ ಗುಪ್ತೋ ಭವೇತ್ತತಃ।।
ಪಾಂಡವ-ಪಾಂಚಾಲರು ನನ್ನ ಮಗನನ್ನು ರಕ್ಷಿಸಲು ಅಸಮರ್ಥರೆಂದು ನನಗೆ ಮೊದಲೇ ತಿಳಿದಿದ್ದರೆ ಅವನನ್ನು ರಕ್ಷಿಸಲು ನಾನೇ ಬರುತ್ತಿದ್ದೆ.
07050075a ಕಥಂ ಚ ವೋ ರಥಸ್ಥಾನಾಂ ಶರವರ್ಷಾಣಿ ಮುಂಚತಾಂ।
07050075c ನೀತೋಽಭಿಮನ್ಯುರ್ನಿಧನಂ ಕದರ್ಥೀಕೃತ್ಯ ವಃ ಪರೈಃ।।
ರಥದಮೇಲೆ ನಿಂತು ಶರವರ್ಷಗಳನ್ನು ಪ್ರಯೋಗಿಸುತ್ತಿರುವ ನಿಮ್ಮನ್ನು ತೃಣೀಕರಿಸಿ ನಮ್ಮ ಶತ್ರುಗಳು ಹೇಗೆ ಅಭಿಮನ್ಯುವನ್ನು ಕೊಂದರು?
07050076a ಅಹೋ ವಃ ಪೌರುಷಂ ನಾಸ್ತಿ ನ ಚ ವೋಽಸ್ತಿ ಪರಾಕ್ರಮಃ।
07050076c ಯತ್ರಾಭಿಮನ್ಯುಃ ಸಮರೇ ಪಶ್ಯತಾಂ ವೋ ನಿಪಾತಿತಃ।।
ಅಯ್ಯೋ! ನಿಮ್ಮಲ್ಲಿ ಪೌರುಷವೂ ಇಲ್ಲ. ಪರಾಕ್ರಮವೂ ಇಲ್ಲ! ನೀವು ನೋಡುತ್ತಿರುವಾಗಲೇ ಸಮರದಲ್ಲಿ ಅಭಿಮನ್ಯುವನ್ನು ಕೆಳಗುರುಳಿಸಿದರಲ್ಲ!
07050077a ಆತ್ಮಾನಮೇವ ಗರ್ಹೇಯಂ ಯದಹಂ ವಃ ಸುದುರ್ಬಲಾನ್।
07050077c ಯುಷ್ಮಾನಾಜ್ಞಾಯ ನಿರ್ಯಾತೋ ಭೀರೂನಕೃತನಿಶ್ರಮಾನ್।।
ನನ್ನನ್ನು ನಾನೇ ನಿಂದಿಸಿಕೊಳ್ಳಬೇಕು. ತಿಳಿಯದೇ ನಿಮ್ಮಂತಹ ದುರ್ಬಲ, ದೃಢನಿಶ್ಚಯವಿಲ್ಲದ ಹೇಡಿಗಳಿಗೆ ಅವನನ್ನು ಒಪ್ಪಿಸಿ ಹೋದೆನಲ್ಲಾ!
07050078a ಆಹೋ ಸ್ವಿದ್ಭೂಷಣಾರ್ಥಾಯ ವರ್ಮಶಸ್ತ್ರಾಯುಧಾನಿ ವಃ।
07050078c ವಾಚಶ್ಚ ವಕ್ತುಂ ಸಂಸತ್ಸು ಮಮ ಪುತ್ರಮರಕ್ಷತಾಂ।।
ಅಯ್ಯೋ! ನಿಮ್ಮ ಈ ಕವಚ-ಶಸ್ತ್ರ-ಆಯುಧಗಳು ಕೇವಲ ಭೂಷಣಕ್ಕಾಗಿಯೇ? ಸಂಸತ್ತುಗಳಲ್ಲಿ ಮಾತುಗಳನ್ನಾಡುವ ನೀವು ನನ್ನ ಮಗನನ್ನು ರಕ್ಷಿಸಲಿಲ್ಲ!”
07050079a ಏವಮುಕ್ತ್ವಾ ತತೋ ವಾಕ್ಯಂ ತಿಷ್ಠಂಶ್ಚಾಪವರಾಸಿಮಾನ್।
07050079c ನ ಸ್ಮಾಶಕ್ಯತ ಬೀಭತ್ಸುಃ ಕೇನ ಚಿತ್ಪ್ರಸಮೀಕ್ಷಿತುಂ।।
ಹೀಗೆ ಹೇಳಿ ಅವನು ಶ್ರೇಷ್ಠ ಚಾಪವನ್ನೂ ಖಡ್ಗವನ್ನೂ ಹಿಡಿದು ಮೇಲೆದ್ದು ನಿಂತನು. ಆಗ ಬೀಭತ್ಸುವನ್ನು ತಲೆಯೆತ್ತಿ ನೋಡಲು ಯಾರಿಗೂ ಸಾಧ್ಯವಾಗಲಿಲ್ಲ.
07050080a ತಮಂತಕಮಿವ ಕ್ರುದ್ಧಂ ನಿಃಶ್ವಸಂತಂ ಮುಹುರ್ಮುಹುಃ।
07050080c ಪುತ್ರಶೋಕಾಭಿಸಂತಪ್ತಮಶ್ರುಪೂರ್ಣಮುಖಂ ತದಾ।।
ಅಂತಕನಂತೆ ಕ್ರುದ್ಧನಾದ, ಮತ್ತೆ ಮತ್ತೆ ನಿಟ್ಟುಸಿರು ಬಿಡುತ್ತಾ ಪುತ್ರಶೋಕಾಭಿಸಂತಪ್ತನಾಗಿ ಅವನ ಮುಖವು ಕಣ್ಣೀರಿನಿಂದ ತುಂಬಿಹೋಗಿತ್ತು.
07050081a ನಾಭಿಭಾಷ್ಟುಂ ಶಕ್ನುವಂತಿ ದ್ರಷ್ಟುಂ ವಾ ಸುಹೃದೋಽರ್ಜುನಂ।
07050081c ಅನ್ಯತ್ರ ವಾಸುದೇವಾದ್ವಾ ಜ್ಯೇಷ್ಟಾದ್ವಾ ಪಾಂಡುನಂದನಾತ್।।
ಅವನು ಅಂತಹ ಪರಿಸ್ಥಿತಿಯಲ್ಲಿದ್ದಾಗ ಅರ್ಜುನನನ್ನು ನೋಡಲು ವಾಸುದೇವ ಮತ್ತು ಜ್ಯೇಷ್ಠ ಪಾಂಡುನಂದನನ ಹೊರತಾಗಿ ಬೇರೆ ಯಾವ ಸುಹೃದರಿಗೂ ಸಾಧ್ಯವಾಗಲಿಲ್ಲ.
07050082a ಸರ್ವಾಸ್ವವಸ್ಥಾಸು ಹಿತಾವರ್ಜುನಸ್ಯ ಮನೋನುಗೌ।
07050082c ಬಹುಮಾನಾತ್ಪ್ರಿಯತ್ವಾಚ್ಚ ತಾವೇನಂ ವಕ್ತುಮರ್ಹತಃ।।
ಸರ್ವಾವಸ್ಥೆಗಳಲ್ಲಿ ಅರ್ಜುನನ ಹಿತವನ್ನೂ ಮನಸ್ಸನ್ನೂ ಅನುಸರಿಸುವುದರಿಂದ, ಆದರ-ಗೌರವಗಳಿಂದ ಮತ್ತು ಪ್ರಿಯತ್ವದಿಂದ ಅವರಿಬ್ಬರು ಮಾತ್ರ ಅವನಲ್ಲಿ ಮಾತನಾಡಬಲ್ಲವರಾಗಿದ್ದರು.
07050083a ತತಸ್ತಂ ಪುತ್ರಶೋಕೇನ ಭೃಶಂ ಪೀಡಿತಮಾನಸಂ।
07050083c ರಾಜೀವಲೋಚನಂ ಕ್ರುದ್ಧಂ ರಾಜಾ ವಚನಮಬ್ರವೀತ್।।
ಆಗ ಪುತ್ರಶೋಕದಿಂದ ತುಂಬಾ ಪೀಡಿತ ಮನಸ್ಕನಾಗಿದ್ದ ಕ್ರುದ್ಧನಾಗಿದ್ದ ಆ ರಾಜೀವಲೋಚನನಿಗೆ ರಾಜನು ಮಾತನಾಡಿದನು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ಅರ್ಜುನಕೋಪೇ ಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ಅರ್ಜುನಕೋಪ ಎನ್ನುವ ಐವತ್ತನೇ ಅಧ್ಯಾಯವು.