ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಅಭಿಮನ್ಯುವಧ ಪರ್ವ
ಅಧ್ಯಾಯ 47
ಸಾರ
ದ್ರೋಣನ ಸೂಚನೆಯಂತೆ ಷಣ್ಮಹಾರಥರು ಅಭಿಮನ್ಯುವಿನ ಧನುಸ್ಸನ್ನು ತುಂಡರಿಸಿ ವಿರಥನನ್ನಾಗಿಸಿದುದು (1-34). ಖಡ್ಗ-ಗುರಾಣಿಗಳನ್ನು ಹಿಡಿದು ಆಕಾಶವನ್ನೇರಿದ ಅಭಿಮನ್ಯುವಿನ ಆಯುಧಗಳನ್ನು ತುಂಡರಿಸಲು ಅವನು ಪುನಃ ಭೂಮಿಗಿಳಿದು ರಥಚಕ್ರವನ್ನು ಹಿಡಿದು ಪದಾತಿಯಾಗಿಯೇ ಯುದ್ಧವನ್ನು ಮುಂದುವರಿಸಿದುದು (35-40).
07047001 ಸಂಜಯ ಉವಾಚ।
07047001a ಸ ಕರ್ಣಂ ಕರ್ಣಿನಾ ಕರ್ಣೇ ಪುನರ್ವಿವ್ಯಾಧ ಫಾಲ್ಗುನಿಃ।
07047001c ಶರೈಃ ಪಂಚಾಶತಾ ಚೈನಮವಿಧ್ಯತ್ಕೋಪಯನ್ಭೃಶಂ।।
ಸಂಜಯನು ಹೇಳಿದನು: “ಪುನಃ ಫಾಲ್ಗುನಿಯು ಕರ್ಣನ ಕಿವಿಗಳಿಗೆ ಡೊಂಕಾದ ಶರದಿಂದ ಹೊಡೆದನು. ಅವನು ಇನ್ನೂ ತುಂಬಾ ಕೋಪಗೊಂಡು ಐವತ್ತು ಶರಗಳಿಂದ ಅವನನ್ನು ಹೊಡೆದನು.
07047002a ಪ್ರತಿವಿವ್ಯಾಧ ರಾಧೇಯಸ್ತಾವದ್ಭಿರಥ ತಂ ಪುನಃ।
07047002c ಸ ತೈರಾಚಿತಸರ್ವಾಂಗೋ ಬಹ್ವಶೋಭತ ಭಾರತ।।
ರಾಧೇಯನೂ ಅಷ್ಟೇ ಬಾಣಗಳಿಂದ ಅವನನ್ನು ಪ್ರಹರಿಸಿದನು. ಭಾರತ! ಸರ್ವಾಂಗಗಳಲ್ಲಿ ಬಾಣಗಳಿಂದ ಚುಚ್ಚಲ್ಪಟ್ಟಿದ್ದ ಅಭಿಮನ್ಯುವು ಆಗ ಬಹಳವಾಗಿ ಶೋಭಿಸಿದನು.
07047003a ಕರ್ಣಂ ಚಾಪ್ಯಕರೋತ್ಕ್ರುದ್ಧೋ ರುಧಿರೋತ್ಪೀಡವಾಹಿನಂ।
07047003c ಕರ್ಣೋಽಪಿ ವಿಬಭೌ ಶೂರಃ ಶರೈಶ್ಚಿತ್ರೋಽಸೃಗಾಪ್ಲುತಃ।।
ಅವನೂ ಕೂಡ ಕ್ರುದ್ಧನಾಗಿ ಕರ್ಣನು ಗಾಯಗೊಂಡು ರಕ್ತವನ್ನು ಸುರಿಸುವಂತೆ ಮಾಡಿದನು. ಶೂರ ಕರ್ಣನೂ ಕೂಡ ಶರಗಳಿಂದ ಗಾಯಗೊಂಡು ರಕ್ತದಿಂದ ತೋಯ್ದು ಬಹಳವಾಗಿ ಶೋಭಿಸಿದನು.
07047004a ತಾವುಭೌ ಶರಚಿತ್ರಾಂಗೌ ರುಧಿರೇಣ ಸಮುಕ್ಷಿತೌ।
07047004c ಬಭೂವತುರ್ಮಹಾತ್ಮಾನೌ ಪುಷ್ಪಿತಾವಿವ ಕಿಂಶುಕೌ।।
ಅವರಿಬ್ಬರು ಮಹಾತ್ಮರೂ ಶರಗಳಿಂದ ಚುಚ್ಚಲ್ಪಟ್ಟು, ರಕ್ತದಿಂದ ತೋಯ್ದು ಹೂಬಿಟ್ಟ ಮುತ್ತುಗದ ಮರಗಳಂತೆ ಕಂಡರು.
07047005a ಅಥ ಕರ್ಣಸ್ಯ ಸಚಿವಾನ್ಷಟ್ಶೂರಾಂಶ್ಚಿತ್ರಯೋಧಿನಃ।
07047005c ಸಾಶ್ವಸೂತಧ್ವಜರಥಾನ್ಸೌಭದ್ರೋ ನಿಜಘಾನ ಹ।।
ಆಗ ಸೌಭದ್ರನು ಕರ್ಣನ ಶೂರರೂ ಚಿತ್ರಯೋಧಿಗಳೂ ಆದ ಆರು ಸಚಿರವರನ್ನು ಅವರ ಅಶ್ವ-ಸೂತ-ಧ್ವಜ-ರಥಗಳೊಂದಿಗೆ ಸಂಹರಿಸಿದನು.
07047006a ಅಥೇತರಾನ್ಮಹೇಷ್ವಾಸಾನ್ದಶಭಿರ್ದಶಭಿಃ ಶರೈಃ।
07047006c ಪ್ರತ್ಯವಿಧ್ಯದಸಂಭ್ರಾಂತಸ್ತದದ್ಭುತಮಿವಾಭವತ್।।
ಮತ್ತೆ ಸಂಭ್ರಾಂತನಾಗದೇ ಇತರ ಮಹೇಷ್ವಾಸರನ್ನು ಹತ್ತು ಹತ್ತು ಶರಗಳಿಂದ ಹೊಡೆದನು. ಅದೊಂದು ಅದ್ಭುತವಾಗಿತ್ತು.
07047007a ಮಾಗಧಸ್ಯ ಪುನಃ ಪುತ್ರಂ ಹತ್ವಾ ಷಡ್ಭಿರಜಿಹ್ಮಗೈಃ।
07047007c ಸಾಶ್ವಂ ಸಸೂತಂ ತರುಣಮಶ್ವಕೇತುಮಪಾತಯತ್।।
ಪುನಃ ಅವನು ಆರು ಜಿಹ್ಮಗಗಳಿಂದ ಮಾಗಧನ ಮಗನನ್ನು ಹೊಡೆದು ಕುದುರೆಗಳು ಮತ್ತು ಸಾರಥಿಗಳೊಂದಿಗೆ ಅಶ್ವಕೇತುವನ್ನು ಉರುಳಿಸಿದನು.
07047008a ಮಾರ್ತಿಕಾವತಕಂ ಭೋಜಂ ತತಃ ಕುಂಜರಕೇತನಂ।
07047008c ಕ್ಷುರಪ್ರೇಣ ಸಮುನ್ಮಥ್ಯ ನನಾದ ವಿಸೃಜಂ ಶರಾನ್।।
ಅನಂತರ ಆನೆಯ ಧ್ವಜವನ್ನು ಹೊಂದಿದ್ದ ಮಾರ್ತಿಕಾವತದ ರಾಜ ಭೋಜನನ್ನು ಕ್ಷುರಪ್ರದಿಂದ ಸಂಹರಿಸಿ ಶರಗಳನ್ನು ಪ್ರಯೋಗಿಸುತ್ತಾ ಸಿಂಹನಾದಗೈದನು.
07047009a ತಸ್ಯ ದೌಃಶಾಸನಿರ್ವಿದ್ಧ್ವಾ ಚತುರ್ಭಿಶ್ಚತುರೋ ಹಯಾನ್।
07047009c ಸೂತಮೇಕೇನ ವಿವ್ಯಾಧ ದಶಭಿಶ್ಚಾರ್ಜುನಾತ್ಮಜಂ।।
ದುಃಶಾಸನನ ಮಗನು ಅವನ ನಾಲ್ಕು ಕುದುರೆಗಳನ್ನು ನಾಲ್ಕರಿಂದ, ಸೂತನನ್ನು ಒಂದರಿಂದ ಮತ್ತು ಹತ್ತರಿಂದ ಅರ್ಜುನನ ಮಗನನ್ನು ಹೊಡೆದನು.
07047010a ತತೋ ದೌಃಶಾಸನಿಂ ಕಾರ್ಷ್ಣಿರ್ವಿದ್ಧ್ವಾ ಸಪ್ತಭಿರಾಶುಗೈಃ।
07047010c ಸಂರಂಭಾದ್ರಕ್ತನಯನೋ ವಾಕ್ಯಮುಚ್ಚೈರಥಾಬ್ರವೀತ್।।
ಆಗ ಕಾರ್ಷ್ಣಿಯು ದೌಃಶಾಸನಿಯನ್ನು ಏಳು ಆಶುಗಗಳಿಂದ ಹೊಡೆದು ಕ್ರೋಧದಿಂದ ಕೆಂಪಾದ ಕಣ್ಣುಗಳುಳ್ಳವನಾಗಿ ಜೋರಾಗಿ ಕೂಗಿ ಹೇಳಿದನು:
07047011a ಪಿತಾ ತವಾಹವಂ ತ್ಯಕ್ತ್ವಾ ಗತಃ ಕಾಪುರುಷೋ ಯಥಾ।
07047011c ದಿಷ್ಟ್ಯಾ ತ್ವಮಪಿ ಜಾನೀಷೇ ಯೋದ್ಧುಂ ನ ತ್ವದ್ಯ ಮೋಕ್ಷ್ಯಸೇ।।
“ನಿನ್ನ ತಂದೆಯು ಹೇಡಿಯಂತೆ ಹೇಗೆ ಯುದ್ಧವನ್ನು ಬಿಟ್ಟು ಹೋದನೋ ಹಾಗೆ ನೀನೂ ಸಹ ಯುದ್ಧಮಾಡಲು ಕಲಿತಿರುವೆಯಲ್ಲವೇ? ಆದರೆ ಇಂದು ನಿನ್ನನ್ನು ಜೀವಸಹಿತವಾಗಿ ಬಿಡುವುದಿಲ್ಲ!”
07047012a ಏತಾವದುಕ್ತ್ವಾ ವಚನಂ ಕರ್ಮಾರಪರಿಮಾರ್ಜಿತಂ।
07047012c ನಾರಾಚಂ ವಿಸಸರ್ಜಾಸ್ಮೈ ತಂ ದ್ರೌಣಿಸ್ತ್ರಿಭಿರಾಚ್ಚಿನತ್।।
ಹೀಗೆ ಹೇಳಿ ಅವನು ಕಮ್ಮಾರನಿಂದ ಪರಿಷ್ಕೃತ ನಾರಾಚವನ್ನು ಅವನ ಮೇಲೆ ಪ್ರಯೋಗಿಸಲು ದ್ರೌಣಿಯು ಅದನ್ನು ಮೂರು ಬಾಣಗಳಿಂದ ಕತ್ತರಿಸಿದನು.
07047013a ತಸ್ಯಾರ್ಜುನಿರ್ಧ್ವಜಂ ಚಿತ್ತ್ವಾ ಶಲ್ಯಂ ತ್ರಿಭಿರತಾಡಯತ್।
07047013c ತಂ ಶಲ್ಯೋ ನವಭಿರ್ಬಾಣೈರ್ಗಾರ್ಧ್ರಪತ್ರೈರತಾಡಯತ್।।
ಆರ್ಜುನಿಯು ಅವನ ಧ್ವಜವನ್ನು ಕತ್ತರಿಸಿ ಮೂರರಿಂದ ಶಲ್ಯನನ್ನು ಹೊಡೆದನು. ಅವನನ್ನು ಶಲ್ಯನು ಒಂಭತ್ತು ಹದ್ದಿನ ಗರಿಗಳನ್ನುಳ್ಳ ಶರಗಳಿಂದ ಹೊಡೆದನು.
07047014a ತಸ್ಯಾರ್ಜುನಿರ್ಧ್ವಜಂ ಚಿತ್ತ್ವಾ ಉಭೌ ಚ ಪಾರ್ಷ್ಣಿಸಾರಥೀ।
07047014c ತಂ ವಿವ್ಯಾಧಾಯಸೈಃ ಷಡ್ಭಿಃ ಸೋಽಪಕ್ರಾಮದ್ರಥಾಂತರಂ।।
ಆರ್ಜುನಿಯು ಅವನ ಧ್ವಜವನ್ನು ತುಂಡರಿಸಿ, ಪಾರ್ಶ್ವರಕ್ಷಕರಿಬ್ಬರನ್ನೂ ಸಂಹರಿಸಿ, ಆರು ಲೋಹಮಯ ಬಾಣಗಳಿಂದ ಶಲ್ಯನನ್ನು ಪ್ರಹರಿಸಿದನು. ಅವನು ಬೇರೆಯೇ ರಥವನ್ನೇರಿದನು.
07047015a ಶತ್ರುಂಜಯಂ ಚಂದ್ರಕೇತುಂ ಮೇಘವೇಗಂ ಸುವರ್ಚಸಂ।
07047015c ಸೂರ್ಯಭಾಸಂ ಚ ಪಂಚೈತಾನ್ ಹತ್ವಾ ವಿವ್ಯಾಧ ಸೌಬಲಂ।।
ಅನಂತರ ಶತ್ರುಂಜಯ, ಚಂದ್ರಕೇತು, ಮೇಘವೇಗ, ಸುವರ್ಚಸ ಮತ್ತು ಸೌರ್ಯಭಾಸ ಈ ಐವರನ್ನು ಸಂಹರಿಸಿ, ಸೌಬಲನನ್ನು ಹೊಡೆದನು.
07047016a ತಂ ಸೌಬಲಸ್ತ್ರಿಭಿರ್ವಿದ್ಧ್ವಾ ದುರ್ಯೋಧನಮಥಾಬ್ರವೀತ್।
07047016c ಸರ್ವ ಏನಂ ಪ್ರಮಥ್ನೀಮಃ ಪುರೈಕೈಕಂ ಹಿನಸ್ತಿ ನಃ।।
ಸೌಬಲನು ಅವನನ್ನು ಮೂರು ಬಾಣಗಳಿಂದ ಹೊಡೆದು ದುರ್ಯೋಧನನಿಗೆ ಹೇಳಿದನು: “ಇವನು ನಮ್ಮಲ್ಲಿ ಒಬ್ಬೊಬ್ಬರನ್ನೇ ಆರಿಸಿಕೊಂಡು ಸಂಹರಿಸುವ ಮೊದಲು ನಾವೆಲ್ಲರೂ ಒಟ್ಟಾಗಿ ಸೇರಿ ಇವನನ್ನು ಸಂಹರಿಸೋಣ!”
07047017a ಅಥಾಬ್ರವೀತ್ತದಾ ದ್ರೋಣಂ ಕರ್ಣೋ ವೈಕರ್ತನೋ ವೃಷಾ।
07047017c ಪುರಾ ಸರ್ವಾನ್ಪ್ರಮಥ್ನಾತಿ ಬ್ರೂಹ್ಯಸ್ಯ ವಧಮಾಶು ನಃ।।
ಆಗ ವೈಕರ್ತನ ಕರ್ಣನೂ ಕೂಡ ದ್ರೋಣನೊಡನೆ ಇದರ ಕುರಿತೇ ಕೇಳಿದನು: “ಇವನು ಸರ್ವರನ್ನೂ ಕೊಲ್ಲುವ ಮೊದಲೇ ಇವನನ್ನು ವಧಿಸುವ ಉಪಾಯವನ್ನು ಹೇಳಿ.”
07047018a ತತೋ ದ್ರೋಣೋ ಮಹೇಷ್ವಾಸಃ ಸರ್ವಾಂಸ್ತಾನ್ಪ್ರತ್ಯಭಾಷತ।
07047018c ಅಸ್ತಿ ವೋಽಸ್ಯಾಂತರಂ ಕಶ್ಚಿತ್ಕುಮಾರಸ್ಯ ಪ್ರಪಶ್ಯತಿ।।
ಆಗ ಮಹೇಷ್ವಾಸ ದ್ರೋಣನು ಅವರೆಲ್ಲರಿಗೆ ಉತ್ತರಿಸಿದನು: “ಕುಮಾರನಲ್ಲಿ ಯಾವುದೇ ರೀತಿಯ ಸ್ವಲ್ಪ ದೋಷವೂ ಇಲ್ಲದಿರುವುದನ್ನು ನೀವು ನೋಡಿದಿರಿ.
07047019a ಅನ್ವಸ್ಯ ಪಿತರಂ ಹ್ಯದ್ಯ ಚರತಃ ಸರ್ವತೋದಿಶಂ।
07047019c ಶೀಘ್ರತಾಂ ನರಸಿಂಹಸ್ಯ ಪಾಂಡವೇಯಸ್ಯ ಪಶ್ಯತ।।
ತನ್ನ ತಂದೆಯಂತೆ ಇಂದು ಎಲ್ಲ ದಿಕ್ಕುಗಳಲ್ಲಿಯೂ ಸಂಚರಿಸುತ್ತಿರುವ ಈ ಪಾಂಡವೇಯ ನರಸಿಂಹನ ಶೀಘ್ರತೆಯನ್ನು ನೋಡಿರಿ.
07047020a ಧನುರ್ಮಂಡಲಮೇವಾಸ್ಯ ರಥಮಾರ್ಗೇಷು ದೃಶ್ಯತೇ।
07047020c ಸಂದಧಾನಸ್ಯ ವಿಶಿಖಾಂ ಶೀಘ್ರಂ ಚೈವ ವಿಮುಂಚತಃ।।
ರಥಮಾರ್ಗಗಳಲ್ಲಿ ಇವನ ಧನುರ್ಮಂಡಲವೇ ಕಾಣುತ್ತದೆ. ಇವನು ಶೀಘ್ರವಾಗಿ ವಿಶಿಖೆಗಳನ್ನು ಸಂಧಾನಮಾಡುತ್ತಾನೆ ಮತ್ತು ಬಿಡುತ್ತಾನೆ ಕೂಡ!
07047021a ಆರುಜನ್ನಿವ ಮೇ ಪ್ರಾಣಾನ್ಮೋಹಯನ್ನಪಿ ಸಾಯಕೈಃ।
07047021c ಪ್ರಹರ್ಷಯತಿ ಮಾ ಭೂಯಃ ಸೌಭದ್ರಃ ಪರವೀರಹಾ।।
ಸಾಯಕಗಳಿಂದ ನನ್ನ ಪ್ರಾಣಗಳನ್ನು ಸಂಕಟಗೊಳಿಸಿ ಮೋಹಿತನನ್ನಾಗಿಸುತ್ತಿದ್ದರೂ ಪರವೀರಹ ಸೌಭದ್ರನು ಬಾರಿ ಬಾರಿಗೂ ನನಗೆ ಹರ್ಷವನ್ನು ನೀಡುತ್ತಿದ್ದಾನೆ.
07047022a ಅತಿ ಮಾ ನಂದಯತ್ಯೇಷ ಸೌಭದ್ರೋ ವಿಚರನ್ರಣೇ।
07047022c ಅಂತರಂ ಯಸ್ಯ ಸಂರಬ್ಧಾ ನ ಪಶ್ಯಂತಿ ಮಹಾರಥಾಃ।।
ರಣದಲ್ಲಿ ಸಂಚರಿಸುತ್ತಿರುವ ಈ ಸೌಭದ್ರನು ನನಗೆ ಅತಿಯಾದ ಆನಂದವನ್ನು ನೀಡುತ್ತಿದ್ದಾನೆ. ಇವನಿಂದ ಗಾಯಗೊಂಡ ಮಹಾರಥರೂ ಕೂಡ ಇವನಲ್ಲಿ ದೋಷವನ್ನು ಕಾಣುವುದಿಲ್ಲ.
07047023a ಅಸ್ಯತೋ ಲಘುಹಸ್ತಸ್ಯ ದಿಶಃ ಸರ್ವಾ ಮಹೇಷುಭಿಃ।
07047023c ನ ವಿಶೇಷಂ ಪ್ರಪಶ್ಯಾಮಿ ರಣೇ ಗಾಂಡೀವಧನ್ವನಃ।।
ರಣದಲ್ಲಿ ಹಸ್ತ ಲಾಘವದಿಂದ ಎಲ್ಲ ದಿಕ್ಕುಗಳನ್ನೂ ಬಾಣಗಳಿಂದ ಮುಚ್ಚುತ್ತಿರುವ ಇವನು ಮತ್ತು ಗಾಂಡೀವಧನ್ವಿಯ ನಡುವೆ ಯಾವ ವ್ಯತ್ಯಾಸವನ್ನೂ ನಾನು ಕಾಣತ್ತಿಲ್ಲ!”
07047024a ಅಥ ಕರ್ಣಃ ಪುನರ್ದ್ರೋಣಮಾಹಾರ್ಜುನಿಶರಾರ್ದಿತಃ।
07047024c ಸ್ಥಾತವ್ಯಮಿತಿ ತಿಷ್ಠಾಮಿ ಪೀಡ್ಯಮಾನೋಽಭಿಮನ್ಯುನಾ।।
ಆಗ ಆರ್ಜುನಿಯ ಶರಗಳಿಂದ ಪೀಡಿತನಾಗುತ್ತಿದ್ದ ಕರ್ಣನು ಪುನಃ ದ್ರೋಣನಿಗೆ ಹೇಳಿದನು: “ಅಭಿಮನ್ಯುವಿನಿಂದ ಪೀಡಿತನಾಗಿದ್ದರೂ ಓಡಿಹೋಗಬಾರದೆಂದು ನಿಂತಿದ್ದೇನೆ.
07047025a ತೇಜಸ್ವಿನಃ ಕುಮಾರಸ್ಯ ಶರಾಃ ಪರಮದಾರುಣಾಃ।
07047025c ಕ್ಷಿಣ್ವಂತಿ ಹೃದಯಂ ಮೇಽದ್ಯ ಘೋರಾಃ ಪಾವಕತೇಜಸಃ।।
ಈ ತೇಜಸ್ವೀ ಕುಮಾರನ ಪರಮದಾರುಣ ಘೋರ ಪಾವಕನ ತೇಜಸ್ಸುಳ್ಳ ಶರಗಳು ಇಂದು ನನ್ನ ಹೃದಯವನ್ನು ಸೀಳುತ್ತಿವೆ.”
07047026a ತಮಾಚಾರ್ಯೋಽಬ್ರವೀತ್ಕರ್ಣಂ ಶನಕೈಃ ಪ್ರಹಸನ್ನಿವ।
07047026c ಅಭೇದ್ಯಮಸ್ಯ ಕವಚಂ ಯುವಾ ಚಾಶುಪರಾಕ್ರಮಃ।।
ಕರ್ಣನಿಗೆ ಆಚಾರ್ಯನು ನಗುತ್ತಿರುವಂತೆ ಮೆಲ್ಲಗೆ ಹೇಳಿದನು: “ಇವನ ಕವಚವು ಅಭೇದ್ಯವಾದುದು. ಇವನಿನ್ನೂ ಯುವಕ. ತನ್ನ ಪರಾಕ್ರಮವನ್ನು ಬಹುಬೇಗ ಪ್ರಕಟಿಸುವ ಸಾಮರ್ಥ್ಯವುಳ್ಳವನು.
07047027a ಉಪದಿಷ್ಟಾ ಮಯಾ ಅಸ್ಯ ಪಿತುಃ ಕವಚಧಾರಣಾ।
07047027c ತಾಮೇಷ ನಿಖಿಲಾಂ ವೇತ್ತಿ ಧ್ರುವಂ ಪರಪುರಂಜಯಃ।।
ಇವನ ತಂದೆಗೆ ನಾನು ಕವಚಧಾರಣವಿಧಿಯನ್ನು ಹೇಳಿಕೊಟ್ಟಿದ್ದೆನು. ಅದನ್ನೇ ಸಂಪೂರ್ಣವಾಗಿ ಈ ಪರಪುರಂಜಯನು ತಿಳಿದುಕೊಂಡಿದ್ದಾನೆ ಎನ್ನುವುದು ಸತ್ಯ.
07047028a ಶಕ್ಯಂ ತ್ವಸ್ಯ ಧನುಶ್ಚೇತ್ತುಂ ಜ್ಯಾಂ ಚ ಬಾಣೈಃ ಸಮಾಹಿತೈಃ।
07047028c ಅಭೀಶವೋ ಹಯಾಶ್ಚೈವ ತಥೋಭೌ ಪಾರ್ಷ್ಣಿಸಾರಥೀ।।
ಆದರೆ ಏಕಾಗ್ರಚಿತ್ತವುಳ್ಳವರು ಇವನ ಧನುಸ್ಸನ್ನೂ ಶಿಂಜಿನಿಯನ್ನೂ ಬಾಣಗಳಿಂದ ಕತ್ತರಿಸಲು ಸಾಧ್ಯವಿದೆ. ಅನಂತರ ಕುದುರೆಗಳ ಕಡಿವಾಣಗಳನ್ನು ಕತ್ತರಿಸಿ ಅವುಗಳನ್ನೂ ಪಾರ್ಶ್ವಸಾರಥಿಗಳನ್ನೂ ಸಂಹರಿಸಬಹುದು.
07047029a ಏತತ್ಕುರು ಮಹೇಷ್ವಾಸ ರಾಧೇಯ ಯದಿ ಶಕ್ಯತೇ।
07047029c ಅಥೈನಂ ವಿಮುಖೀಕೃತ್ಯ ಪಶ್ಚಾತ್ಪ್ರಹರಣಂ ಕುರು।।
ಮಹೇಷ್ವಾಸ! ರಾಧೇಯ! ಸಧ್ಯವಾದರೆ ಇದನ್ನು ಮಾಡು! ಹೀಗೆ ಇವನನ್ನು ವಿಮುಖನಾಗುವಂತೆ ಮಾಡಿ ನಂತರ ಅವನ ಮೇಲೆ ಪ್ರಹರಣ ಮಾಡು.
07047030a ಸಧನುಷ್ಕೋ ನ ಶಕ್ಯೋಽಯಮಪಿ ಜೇತುಂ ಸುರಾಸುರೈಃ।
07047030c ವಿರಥಂ ವಿಧನುಷ್ಕಂ ಚ ಕುರುಷ್ವೈನಂ ಯದೀಚ್ಚಸಿ।।
ಧನುಸ್ಸಿನೊಂದಿರುವ ಇವನನ್ನು ಗೆಲ್ಲಲು ಸುರಾಸುರರಿಗೂ ಶಕ್ಯವಿಲ್ಲ. ಆದುದರಿಂದ ಇಚ್ಛಿಸುವೆಯಾದರೆ ಇವನನ್ನು ವಿರಥನನ್ನಾಗಿಯೂ ಧನುಸ್ಸು ಇಲ್ಲದವನನ್ನಾಗಿಯೂ ಮಾಡು!”
07047031a ತದಾಚಾರ್ಯವಚಃ ಶ್ರುತ್ವಾ ಕರ್ಣೋ ವೈಕರ್ತನಸ್ತ್ವರನ್।
07047031c ಅಸ್ಯತೋ ಲಘುಹಸ್ತಸ್ಯ ಪೃಷತ್ಕೈರ್ಧನುರಾಚ್ಚಿನತ್।।
ಆಚಾರ್ಯನ ಆ ಮಾತನ್ನು ಕೇಳಿ ವೈಕರ್ತನ ಕರ್ಣನು ತ್ವರೆಮಾಡಿ ಶೀಘ್ರ ಬಾಣಗಳಿಂದ ಆ ಲಘುಹಸ್ತನ ಧನುಸ್ಸನ್ನು ಕತ್ತರಿಸಿದನು.
07047032a ಅಶ್ವಾನಸ್ಯಾವಧೀದ್ಭೋಜೋ ಗೌತಮಃ ಪಾರ್ಷ್ಣಿಸಾರಥೀ।
07047032c ಶೇಷಾಸ್ತು ಚಿನ್ನಧನ್ವಾನಂ ಶರವರ್ಷೈರವಾಕಿರನ್।।
ಆಗ ಭೋಜ ಕೃತವರ್ಮನು ಅವನ ಕುದುರೆಗಳನ್ನೂ, ಗೌತಮನು ಪಾರ್ಶ್ವಸಾರಥಿಗಳನ್ನು ಸಂಹರಿಸಿದರು. ಉಳಿದವರು ಧನುಸ್ಸನ್ನು ಕಳೆದುಕೊಂಡಿದ್ದ ಅವನನ್ನು ಶರವರ್ಷಗಳಿಂದ ಮುಚ್ಚಿದರು.
07047033a ತ್ವರಮಾಣಾಸ್ತ್ವರಾಕಾಲೇ ವಿರಥಂ ಷಣ್ಮಹಾರಥಾಃ।
07047033c ಶರವರ್ಷೈರಕರುಣಾ ಬಾಲಮೇಕಮವಾಕಿರನ್।।
ಅವಸರ ಮಾಡಬೇಕಾಗಿದ್ದ ಆ ಸಮಯದಲ್ಲಿ ಷಣ್ಮಹಾರಥರು ತ್ವರೆಮಾಡಿ ವಿರಥನಾಗಿದ್ದ ಏಕಾಕಿಯಾಗಿದ್ದ ಬಾಲಕನನ್ನು ನಿಷ್ಕರುಣೆಯಿಂದ ಶರವರ್ಷಗಳಿಂದ ಮುಚ್ಚಿಬಿಟ್ಟರು.
07047034a ಸ ಚಿನ್ನಧನ್ವಾ ವಿರಥಃ ಸ್ವಧರ್ಮಮನುಪಾಲಯನ್।
07047034c ಖಡ್ಗಚರ್ಮಧರಃ ಶ್ರೀಮಾನುತ್ಪಪಾತ ವಿಹಾಯಸಂ।।
ಆ ಚಿನ್ನಧನ್ವಿ ವಿರಥ ಶ್ರೀಮಾನನು ಸ್ವಧರ್ಮವನ್ನು ಅನುಸರಿಸಿ ಖಡ್ಗ-ಗುರಾಣಿಗಳನ್ನು ಹಿಡಿದು ಆಕಾಶಕ್ಕೆ ಹಾರಿದನು.
07047035a ಮಾರ್ಗೈಃ ಸ ಕೈಶಿಕಾದ್ಯೈಶ್ಚ ಲಾಘವೇನ ಬಲೇನ ಚ।
07047035c ಆರ್ಜುನಿರ್ವ್ಯಚರದ್ವ್ಯೋಮ್ನಿ ಭೃಶಂ ವೈ ಪಕ್ಷಿರಾಡಿವ।।
ಕೈಶಿಕಾದಿ ಮಾರ್ಗಗಳಿಂದಲೂ ಲಘುತ್ವ ಮತ್ತು ಬಲದಿಂದ ಆರ್ಜುನಿಯು ಪಕ್ಷಿಯಂತೆ ಆಕಾಶದಲ್ಲಿ ಚೆನ್ನಾಗಿ ಸಂಚರಿಸಬಲ್ಲವನಾಗಿದ್ದನು.
07047036a ಮಯ್ಯೇವ ನಿಪತತ್ಯೇಷ ಸಾಸಿರಿತ್ಯೂರ್ಧ್ವದೃಷ್ಟಯಃ।
07047036c ವಿವ್ಯಧುಸ್ತಂ ಮಹೇಷ್ವಾಸಾಃ ಸಮರೇ ಚಿದ್ರದರ್ಶಿನಃ।।
ಖಡ್ಗವನ್ನು ಹಿಡಿದಿರುವ ಅವನು ನನ್ನ ಮೇಲೆಯೇ ಬೀಳುತ್ತಾನೆ ಎಂದು ಸಮರದಲ್ಲಿ ಮಹೇಷ್ವಾಸರು ಭಾವಿಸಿಕೊಂಡು ಮೇಲೆ ನೋಡುತ್ತಿದ್ದರು.
07047037a ತಸ್ಯ ದ್ರೋಣೋಽಚ್ಚಿನನ್ಮುಷ್ಟೌ ಖಡ್ಗಂ ಮಣಿಮಯತ್ಸರುಂ।
07047037c ರಾಧೇಯೋ ನಿಶಿತೈರ್ಬಾಣೈರ್ವ್ಯಧಮಚ್ಚರ್ಮ ಚೋತ್ತಮಂ।।
ದ್ರೋಣನು ಅವನ ಮುಷ್ಟಿಯಲ್ಲಿದ್ದ ಮಣಿಮಯ ಹಿಡಿಯಿದ್ದ ಖಡ್ಗವನ್ನು ಕತ್ತರಿಸಿದನು. ರಾಧೇಯನು ನಿಶಿತ ಬಾಣಗಳಿಂದ ಅವನ ಉತ್ತಮ ಗುರಾಣಿಯನ್ನು ಸೀಳಿದನು.
07047038a ವ್ಯಸಿಚರ್ಮೇಷುಪೂರ್ಣಾಂಗಃ ಸೋಽಂತರಿಕ್ಷಾತ್ಪುನಃ ಕ್ಷಿತಿಂ।
07047038c ಆಸ್ಥಿತಶ್ಚಕ್ರಮುದ್ಯಮ್ಯ ದ್ರೋಣಂ ಕ್ರುದ್ಧೋಽಭ್ಯಧಾವತ।।
ಖಡ್ಗ-ಗುರಾಣಿಗಳನ್ನು ಕಳೆದುಕೊಂಡು, ಸಂಪೂರ್ಣ ಅಂಗಗಳಲ್ಲಿ ಬಾಣಗಳಿಂದ ಚುಚ್ಚಲ್ಪಟ್ಟಿದ್ದ ಅವನು ಪುನಃ ಭೂಮಿಗಿಳಿದನು. ಅಲ್ಲಿದ್ದ ಚಕ್ರವನ್ನೇ ಹಿಡಿದು ಕ್ರುದ್ಧನಾಗಿ ದ್ರೋಣನ ಕಡೆ ಧಾವಿಸಿದನು.
07047039a ಸ ಚಕ್ರರೇಣೂಜ್ಜ್ವಲಶೋಭಿತಾಂಗೋ ಬಭಾವತೀವೋನ್ನತಚಕ್ರಪಾಣಿಃ।
07047039c ರಣೇಽಭಿಮನ್ಯುಃ ಕ್ಷಣದಾಸುಭದ್ರಃ ಸ ವಾಸುಭದ್ರಾನುಕೃತಿಂ ಪ್ರಕುರ್ವನ್।।
ಆಗ ಚಕ್ರದ ಧೂಳು ಮತ್ತು ಕಾಂತಿಯಿಂದ ಶೋಭಿತಾಂಗನಾಗಿದ್ದ ಅವನು ಚಕ್ರವನ್ನು ಎತ್ತಿ ಹಿಡಿತು ಅತೀವವಾಗಿ ಪ್ರಕಾಶಿಸುತ್ತಿದ್ದನು. ರಣದಲ್ಲಿ ವಾಸುದೇವನ ನಡುಗೆಯನ್ನೇ ಅನುಕರಿಸುತ್ತಿದ್ದ ಅಭಿಮನ್ಯುವು ಒಂದು ಕ್ಷಣ ಘೋರನಾಗಿ ಕಂಡನು.
07047040a ಸ್ರುತರುಧಿರಕೃತೈಕರಾಗವಕ್ತ್ರೋ ಭ್ರುಕುಟಿಪುಟಾಕುಟಿಲೋಽತಿಸಿಂಹನಾದಃ।
07047040c ಪ್ರಭುರಮಿತಬಲೋ ರಣೇಽಭಿಮನ್ಯುರ್ ನೃಪವರಮಧ್ಯಗತೋ ಭೃಶಂ ವ್ಯರಾಜತ್।।
ಸುರಿಯುತ್ತಿದ್ದ ರಕ್ತದಿಂದ ಅವನ ವಸ್ತ್ರಗಳು ಕೆಂಪಾಗಿದ್ದವು. ಗಂಟಿಕ್ಕಿಕೊಂಡಿದ್ದ ಅವನ ಹುಬ್ಬುಗಳ ಮಧ್ಯವು ಸ್ಪಷ್ಟವಾಗಿ ಕಾಣುತ್ತಿರಲು ಅವನು ಸಿಂಹನಾದಗೈದನು. ರಣದಲ್ಲಿ ನೃಪವರರ ಮಧ್ಯದಲ್ಲಿ ಆ ಪ್ರಭು, ಅಮಿತ ಬಲಶಾಲಿ, ಅಭಿಮನ್ಯುವು ತುಂಬಾ ವಿರಾಜಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ಅಭಿಮನ್ಯುವಿರಥಕರಣೇ ಸಪ್ತಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ಅಭಿಮನ್ಯುವಿರಥಕರಣ ಎನ್ನುವ ನಲ್ವತ್ತೇಳನೇ ಅಧ್ಯಾಯವು.