044 ದುರ್ಯೋಧನಪರಾಜಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಅಭಿಮನ್ಯುವಧ ಪರ್ವ

ಅಧ್ಯಾಯ 44

ಸಾರ

ಅಭಿಮನ್ಯುವಿನಿಂದ ಶಲ್ಯನ ಪುತ್ರ ರುಕ್ಮರಥನ ವಧೆ (1-13). ಅಭಿಮನ್ಯುವು ಗಂಧರ್ವಾಸ್ತ್ರವನ್ನು ಪ್ರಯೋಗಿಸಿ ನೂರು ರಾಜಪುತ್ರರನ್ನು ಸಂಹರಿಸಿದುದು; ದುರ್ಯೋಧನನು ವಿಮುಖನಾದುದು (14-30).

07044001 ಸಂಜಯ ಉವಾಚ।
07044001a ಆದದಾನಸ್ತು ಶೂರಾಣಾಮಾಯೂಂಷ್ಯಭವದಾರ್ಜುನಿಃ।
07044001c ಅಂತಕಃ ಸರ್ವಭೂತಾನಾಂ ಪ್ರಾಣಾನ್ ಕಾಲ ಇವಾಗತೇ।।

ಸಂಜಯನು ಹೇಳಿದನು: “ಕಾಲವು ಸಮೀಪಿಸಿದಾಗ ಸರ್ವಭೂತಗಳ ಪ್ರಾಣಗಳನ್ನು ತೆಗೆದುಕೊಳ್ಳುವ ಅಂತಕನಂತೆ ಆರ್ಜುನಿಯು ಶೂರರ ಆಯುಸ್ಸುಗಳನ್ನು ಅಪಹರಿದನು.

07044002a ಸ ಶಕ್ರ ಇವ ವಿಕ್ರಾಂತಃ ಶಕ್ರಸೂನೋಃ ಸುತೋ ಬಲೀ।
07044002c ಅಭಿಮನ್ಯುಸ್ತದಾನೀಕಂ ಲೋಡಯನ್ಬಹ್ವಶೋಭತ।।

ಶಕ್ರನಂತೆಯೇ ಆ ಶಕ್ರನ ಮಗನ ಮಗ ಬಲಶಾಲೀ ವಿಕ್ರಾಂತ ಅಭಿಮನ್ಯುವು ಆ ಸೇನೆಯನ್ನು ಮಥಿಸುತ್ತಾ ಬಹುವಾಗಿ ಶೋಭಿಸಿದನು.

07044003a ಪ್ರವಿಶ್ಯೈವ ತು ರಾಜೇಂದ್ರ ಕ್ಷತ್ರಿಯೇಂದ್ರಾಂತಕೋಪಮಃ।
07044003c ಸತ್ಯಶ್ರವಸಮಾದತ್ತ ವ್ಯಾಘ್ರೋ ಮೃಗಮಿವೋಲ್ಬಣಂ।।

ರಾಜೇಂದ್ರ! ಕ್ಷತ್ರಿಯೇಂದ್ರರಿಗೆ ಅಂತಕನಂತಿದ್ದ ಅವನು ಶತ್ರು ಸೈನ್ಯವನ್ನು ಪ್ರವೇಶಿಸಿ ವ್ಯಾಘ್ರವು ಜಿಂಕೆಯನ್ನು ಹೇಗೋ ಹಾಗೆ ಸತ್ಯಶ್ರವಸನ ಪ್ರಾಣಗಳನ್ನು ಅಪಹರಿಸಿದನು.

07044004a ಸತ್ಯಶ್ರವಸಿ ಚಾಕ್ಷಿಪ್ತೇ ತ್ವರಮಾಣಾ ಮಹಾರಥಾಃ।
07044004c ಪ್ರಗೃಹ್ಯ ವಿಪುಲಂ ಶಸ್ತ್ರಮಭಿಮನ್ಯುಮುಪಾದ್ರವನ್।।

ಸತ್ಯಶ್ರವಸನು ಕೆಳಗುರುಳಲು ಮಹಾರಥರು ತ್ವರೆಮಾಡಿ ವಿಪುಲ ಶಸ್ತ್ರಗಳನ್ನು ಹಿಡಿದು ಅಭಿಮನ್ಯುವನ್ನು ಆಕ್ರಮಣಿಸಿದರು.

07044005a ಅಹಂ ಪೂರ್ವಮಹಂ ಪೂರ್ವಮಿತಿ ಕ್ಷತ್ರಿಯಪುಂಗವಾಃ।
07044005c ಸ್ಪರ್ಧಮಾನಾಃ ಸಮಾಜಗ್ಮುರ್ಜಿಘಾಂಸಂತೋಽರ್ಜುನಾತ್ಮಜಂ।।

“ನಾನು ಮೊದಲು! ನಾನು ಮೊದಲು!” ಎಂದು ಸ್ಪರ್ಧಿಸುತ್ತಾ ಅರ್ಜುನಾತ್ಮಜನನ್ನು ಕೊಲ್ಲಲು ಬಯಸಿ ಕ್ಷತ್ರಿಯಪುಂಗವರು ಮುಂದಾದರು.

07044006a ಕ್ಷತ್ರಿಯಾಣಾಮನೀಕಾನಿ ಪ್ರದ್ರುತಾನ್ಯಭಿಧಾವತಾಂ।
07044006c ಜಗ್ರಾಸ ತಿಮಿರಾಸಾದ್ಯ ಕ್ಷುದ್ರಮತ್ಸ್ಯಾನಿವಾರ್ಣವೇ।।

ತನ್ನ ಮೇಲೆ ಬೀಳಲು ಆತುರದಿಂದ ಮುನ್ನುಗ್ಗುತ್ತಿದ್ದ ಕ್ಷತ್ರಿಯರ ಸೇನೆಗಳನ್ನು ಅವನು ಸಮುದ್ರದಲ್ಲಿ ತಿಮಿಂಗಿಲವು ಕ್ಷುದ್ರಮೀನುಗಳನ್ನು ಹೇಗೋ ಹಾಗೆ ಕಬಳಿಸಿದನು.

07044007a ಯೇ ಕೇ ಚನ ಗತಾಸ್ತಸ್ಯ ಸಮೀಪಮಪಲಾಯಿನಃ।
07044007c ನ ತೇ ಪ್ರತಿನ್ಯವರ್ತಂತ ಸಮುದ್ರಾದಿವ ಸಿಂಧವಃ।।

ಪಲಾಯನ ಮಾಡದೇ ಅವನ ಸಮೀಪಕ್ಕೆ ಯಾರೆಲ್ಲ ಹೋಗುತ್ತಿದ್ದರೂ ಅವರು ಸಮುದ್ರಕ್ಕೆ ಸೇರಿದ ನದಿಗಳಂತೆ ಹಿಂದಿರುಗುತ್ತಿರಲಿಲ್ಲ.

07044008a ಮಹಾಗ್ರಾಹಗೃಹೀತೇವ ವಾತವೇಗಭಯಾರ್ದಿತಾ।
07044008c ಸಮಕಂಪತ ಸಾ ಸೇನಾ ವಿಭ್ರಷ್ಟಾ ನೌರಿವಾರ್ಣವೇ।।

ಮೊಸಳೆಯ ಬಾಯಿಗೆ ಸಿಕ್ಕಿದವರಂತೆ, ಚಂಡಮಾರುತದ ಭಯದಿಂದ ಆರ್ದಿತವಾದವರಂತೆ, ಮತ್ತು ಸಮುದ್ರದಲ್ಲಿ ದಿಕ್ಕುತಪ್ಪಿದ ನೌಕೆಯಂತೆ ಆ ಸೇನೆಯು ನಡುಗಿತು.

07044009a ಅಥ ರುಕ್ಮರಥೋ ನಾಮ ಮದ್ರೇಶ್ವರಸುತೋ ಬಲೀ।
07044009c ತ್ರಸ್ತಾಮಾಶ್ವಾಸಯನ್ಸೇನಾಮತ್ರಸ್ತೋ ವಾಕ್ಯಮಬ್ರವೀತ್।।

ಆಗ ರುಕ್ಮರಥನೆಂಬ ಹೆಸರಿನ ಮದ್ರೇಶ್ವರನ ಬಲಶಾಲೀ ಮಗನು ನಿರ್ಭಯನಾಗಿ ಭಯಗೊಂಡಿದ್ದ ಸೇನೆಗೆ ಆಶ್ವಾಸನೆಯನ್ನು ನೀಡುತ್ತಾ ಹೇಳಿದನು:

07044010a ಅಲಂ ತ್ರಾಸೇನ ವಃ ಶೂರಾ ನೈಷ ಕಶ್ಚಿನ್ಮಯಿ ಸ್ಥಿತೇ।
07044010c ಅಹಮೇನಂ ಗ್ರಹೀಷ್ಯಾಮಿ ಜೀವಗ್ರಾಹಂ ನ ಸಂಶಯಃ।।

“ಭಯಪಡುವುದನ್ನು ಸಾಕುಮಾಡಿ! ಶೂರರೇ! ನಾನಿರುವಾಗ ನಿಮಗೆ ಯಾವುದೇ ರೀತಿಯ ಭಯಕ್ಕೂ ಕಾರಣವಿಲ್ಲ. ನಾನು ಇವನನ್ನು ಜೀವಸಹಿತ ಹಿಡಿಯುತ್ತೇನೆ. ಅದರಲ್ಲಿ ಸಂಶಯವಿಲ್ಲ.”

07044011a ಏವಮುಕ್ತ್ವಾ ತು ಸೌಭದ್ರಮಭಿದುದ್ರಾವ ವೀರ್ಯವಾನ್।
07044011c ಸುಕಲ್ಪಿತೇನೋಹ್ಯಮಾನಃ ಸ್ಯಂದನೇನ ವಿರಾಜತಾ।।

ಹೀಗೆ ಹೇಳಿ ಆ ವೀರ್ಯವಾನನು ಸುಕಲ್ಪಿತ ರಥದಲ್ಲಿ ವಿರಾಜಿಸುತ್ತಾ ಸೌಭದ್ರನನ್ನು ಆಕ್ರಮಿಸಿದನು.

07044012a ಸೋಽಭಿಮನ್ಯುಂ ತ್ರಿಭಿರ್ಬಾಣೈರ್ವಿದ್ಧ್ವಾ ವಕ್ಷಸ್ಯಥಾನದತ್।
07044012c ತ್ರಿಭಿಶ್ಚ ದಕ್ಷಿಣೇ ಬಾಹೌ ಸವ್ಯೇ ಚ ನಿಶಿತೈಸ್ತ್ರಿಭಿಃ।।

ಅವನು ಅಭಿಮನ್ಯುವಿನ ವಕ್ಷಸ್ಥಳಕ್ಕೆ ಮತ್ತು ಮೂರು ಮೂರು ನಿಶಿತ ಶರಗಳಿಂದ ಅವನ ಎಡ-ಬಲ ಬಾಹುಗಳನ್ನೂ ಹೊಡೆದು ಗರ್ಜಿಸಿದನು.

07044013a ಸ ತಸ್ಯೇಷ್ವಸನಂ ಚಿತ್ತ್ವಾ ಫಾಲ್ಗುಣಿಃ ಸವ್ಯದಕ್ಷಿಣೌ।
07044013c ಭುಜೌ ಶಿರಶ್ಚ ಸ್ವಕ್ಷಿಭ್ರು ಕ್ಷಿತೌ ಕ್ಷಿಪ್ರಮಪಾತಯತ್।।

ಆಗ ಫಾಲ್ಗುಣಿಯು ಅವನ ಧನುಸ್ಸನ್ನೂ, ಎಡ-ಬಲ ಭುಜಗಳನ್ನೂ, ಸುಂದರ ಕಣ್ಣು-ಹುಬ್ಬುಗಳಿಂದ ಕೂಡಿದ್ದ ಶಿರವನ್ನೂ ಕತ್ತರಿಸಿ ಭೂಮಿಯ ಮೇಲೆ ಬೀಳಿಸಿದನು.

07044014a ದೃಷ್ಟ್ವಾ ರುಕ್ಮರಥಂ ರುಗ್ಣಂ ಪುತ್ರಂ ಶಲ್ಯಸ್ಯ ಮಾನಿನಂ।
07044014c ಜೀವಗ್ರಾಹಂ ಜಿಘೃಕ್ಷಂತಂ ಸೌಭದ್ರೇಣ ಯಶಸ್ವಿನಾ।।
07044015a ಸಂಗ್ರಾಮದುರ್ಮದಾ ರಾಜನ್ರಾಜಪುತ್ರಾಃ ಪ್ರಹಾರಿಣಃ।
07044015c ವಯಸ್ಯಾಃ ಶಲ್ಯಪುತ್ರಸ್ಯ ಸುವರ್ಣವಿಕೃತಧ್ವಜಾಃ।।
07044016a ತಾಲಮಾತ್ರಾಣಿ ಚಾಪಾನಿ ವಿಕರ್ಷಂತೋ ಮಹಾರಥಾಃ।
07044016c ಆರ್ಜುನಿಂ ಶರವರ್ಷೇಣ ಸಮಂತಾತ್ಪರ್ಯವಾರಯನ್।।

ರಾಜನ್! ಜೀವಂತವಾಗಿ ಹಿಡಿಯಲು ಬಯಸಿದ್ದ ಶಲ್ಯನ ಮಾನಿನೀ ಪುತ್ರ ರುಕ್ಮರಥನು ಯಶಸ್ವಿನೀ ಸೌಭದ್ರನಿಂದಲೇ ಹತನಾದುದನ್ನು ನೋಡಿ, , ಶಲ್ಯಪುತ್ರನ ಮಿತ್ರ ರಾಜಪುತ್ರ ಸಂಗ್ರಾಮದುರ್ಮದ ಪ್ರಹಾರಿ ಮಹಾರಥರು ಸುವರ್ಣಧ್ವಜಗಳೊಂದಿಗೆ ನಾಲ್ಕು ಮೊಳಗಳ ಧನುಸ್ಸುಗಳನ್ನು ಟೇಂಕರಿಸುತ್ತಾ ಆರ್ಜುನಿಯನ್ನು ಶರವರ್ಷಗಳಿಂದ ಎಲ್ಲ ಕಡೆಗಳಿಂದಲೂ ಸುತ್ತುವರೆದರು.

07044017a ಶೂರೈಃ ಶಿಕ್ಷಾಬಲೋಪೇತೈಸ್ತರುಣೈರತ್ಯಮರ್ಷಣೈಃ।
07044017c ದೃಷ್ಟ್ವೈಕಂ ಸಮರೇ ಶೂರಂ ಸೌಭದ್ರಮಪರಾಜಿತಂ।।
07044018a ಚಾದ್ಯಮಾನಂ ಶರವ್ರಾತೈರ್ಹೃಷ್ಟೋ ದುರ್ಯೋಧನೋಽಭವತ್।
07044018c ವೈವಸ್ವತಸ್ಯ ಭವನಂ ಗತಮೇನಮಮನ್ಯತ।।

ಸಮರದಲ್ಲಿ ಶೂರ ಅಪರಾಜಿತ ಸೌಭದ್ರನು ಒಬ್ಬನೇ ಅನೇಕ ಶೂರ-ಶಿಕ್ಷಾಬಲೋಪೇತ-ತರುಣ-ಅಮರ್ಷರ ಶರವೃಷ್ಟಿಯಿಂದ ಮುಸುಕಿದ್ದುದನ್ನು ನೋಡಿ ಹೃಷ್ಟನಾದ ದುರ್ಯೋಧನನು ಅವನು ವೈವಸ್ವತನ ಭವನಕ್ಕೆ ಹೋದನೆಂದೇ ತಿಳಿದನು.

07044019a ಸುವರ್ಣಪುಂಖೈರಿಷುಭಿರ್ನಾನಾಲಿಂಗೈಸ್ತ್ರಿಭಿಸ್ತ್ರಿಭಿಃ।
07044019c ಅದೃಶ್ಯಮಾರ್ಜುನಿಂ ಚಕ್ರುರ್ನಿಮೇಷಾತ್ತೇ ನೃಪಾತ್ಮಜಾಃ।।

ಸುವರ್ಣ ಪುಂಖಗಳಿದ್ದ, ನಾನಾ ಚಿಹ್ನೆಗಳಿಂದೊಡಗೂಡಿದ, ಮೂರು ಮೂರು ತೀಕ್ಷ್ಣ ಶರಗಳಿಂದ ಆ ನೃಪಾತ್ಮಜರು ಆರ್ಜುನಿಯನ್ನು ಒಂದು ನಿಮಿಷ ಕಾಣಿಸದಂತೆಯೇ ಮಾಡಿ ಬಿಟ್ಟರು.

07044020a ಸಸೂತಾಶ್ವಧ್ವಜಂ ತಸ್ಯ ಸ್ಯಂದನಂ ತಂ ಚ ಮಾರಿಷ।
07044020c ಆಚಿತಂ ಸಮಪಶ್ಯಾಮ ಶ್ವಾವಿಧಂ ಶಲಲೈರಿವ।।

ಮಾರಿಷ! ಮುಳ್ಳುಹಂದಿಯ ಶರೀರದಂತೆ ಅವನೂ ಅವನ ಸೂತನೂ, ಕುದುರೆಗಳೂ, ಧ್ವಜವೂ, ರಥವೂ ಬಾಣಗಳಿಂದ ಚುಚ್ಚಿರುವುದನ್ನು ನಾವು ನೋಡಿದೆವು.

07044021a ಸ ಗಾಢವಿದ್ಧಃ ಕ್ರುದ್ಧಶ್ಚ ತೋತ್ತ್ರೈರ್ಗಜ ಇವಾರ್ದಿತಃ।
07044021c ಗಾಂಧರ್ವಮಸ್ತ್ರಮಾಯಚ್ಚದ್ರಥಮಾಯಾಂ ಚ ಯೋಜಯತ್।।

ಆಳವಾಗಿ ಗಾಯಗೊಂಡು ಕ್ರುದ್ಧನಾದ ಅವನು ಅಂಕುಶದಿಂದ ತಿವಿಯಲ್ಪಟ್ಟ ಆನೆಯಂತೆ ಘೀಳಿಟ್ಟನು. ಮತ್ತು ಗಾಂಧರ್ವಾಸ್ತ್ರವನ್ನು ಪ್ರಯೋಗಿಸಿ ರಥಮಾಯೆಯನ್ನು ಬಳಸಿದನು.

07044022a ಅರ್ಜುನೇನ ತಪಸ್ತಪ್ತ್ವಾ ಗಂಧರ್ವೇಭ್ಯೋ ಯದಾಹೃತಂ।
07044022c ತುಂಬುರುಪ್ರಮುಖೇಭ್ಯೋ ವೈ ತೇನಾಮೋಹಯತಾಹಿತಾನ್।।

ಅರ್ಜುನನು ತಪಸ್ಸುಮಾಡಿ ತುಂಬುರು ಪ್ರಮುಖ ಗಂಧರ್ವರಿಂದ ಯಾವ ಅಸ್ತ್ರವನ್ನು ಪಡೆದಿದ್ದನೋ ಅದನ್ನೇ ತನ್ನ ಮಗನಿಗೂ ಉಪದೇಶಿಸಿದ್ದನು. ಅದನ್ನು ಬಳಸಿ ಅವನು ಶತ್ರುಗಳನ್ನು ಮೋಹಿಸಿದನು.

07044023a ಏಕಃ ಸ ಶತಧಾ ರಾಜನ್ದೃಶ್ಯತೇ ಸ್ಮ ಸಹಸ್ರಧಾ।
07044023c ಅಲಾತಚಕ್ರವತ್ಸಂಖ್ಯೇ ಕ್ಷಿಪ್ರಮಸ್ತ್ರಾಣಿ ದರ್ಶಯನ್।।

ರಾಜನ್! ಬೆಂಕಿಯ ಕೊಳ್ಳಿಯ ಚಕ್ರದಂತೆ ಒಬ್ಬನೇ ನೂರಾಗಿರೂ ಸಹಸ್ರವಾಗಿಯೂ ಕಾಣಿಸುತ್ತಾ ಬೇಗನೇ ಅಸ್ತ್ರಗಳನ್ನು ಪ್ರದರ್ಶಿಸಿದನು.

07044024a ರಥಚರ್ಯಾಸ್ತ್ರಮಾಯಾಭಿರ್ಮೋಹಯಿತ್ವಾ ಪರಂತಪಃ।
07044024c ಬಿಭೇದ ಶತಧಾ ರಾಜನ್ ಶರೀರಾಣಿ ಮಹೀಕ್ಷಿತಾಂ।।

ರಾಜನ್! ರಥದ ಚಲನೆ ಮತ್ತು ಅಸ್ತ್ರಗಳಿಂದ ಮೋಹಿಸಿ ಆ ಪರಂತಪನು ನೂರಾರು ಮಹೀಕ್ಷಿತರ ಶರೀರಗಳನ್ನು ಭೇದಿಸಿದನು.

07044025a ಪ್ರಾಣಾಃ ಪ್ರಾಣಭೃತಾಂ ಸಂಖ್ಯೇ ಪ್ರೇಷಿತಾ ನಿಶಿತೈಃ ಶರೈಃ।
07044025c ರಾಜನ್ಪ್ರಾಪುರಮುಂ ಲೋಕಂ ಶರೀರಾಣ್ಯವನಿಂ ಯಯುಃ।।

ರಾಜನ್! ಪ್ರಾಣವಿರುವವರ ಪ್ರಾಣಗಳನ್ನು ರಣದಲ್ಲಿ ನಿಶಿತ ಶರಗಳಿಂದ ಪರಲೋಕಕ್ಕೆ ಕಳುಹಿಸಲು ಶರೀರಗಳು ಭೂಮಿಯ ಮೇಲೆ ಬಿದ್ದವು.

07044026a ಧನೂಂಷ್ಯಶ್ವಾನ್ನಿಯಂತ್ರಂಶ್ಚ ಧ್ವಜಾನ್ಬಾಹೂಂಶ್ಚ ಸಾಂಗದಾನ್।
07044026c ಶಿರಾಂಸಿ ಚ ಶಿತೈರ್ಭಲ್ಲೈಸ್ತೇಷಾಂ ಚಿಚ್ಚೇದ ಫಾಲ್ಗುನಿಃ।।

ಫಾಲ್ಗುನಿಯು ನಿಶಿತ ಭಲ್ಲಗಳಿಂದ ಅವರ ಧನುಸ್ಸುಗಳನ್ನೂ, ಕುದುರೆಗಳನ್ನೂ, ಸಾರಥಿಗಳನ್ನೂ, ಧ್ವಜಗಳನ್ನೂ, ಅಂಗದಗಳೊಡನೆ ಬಾಹುಗಳನ್ನೂ ಶಿರಗಳನ್ನೂ ಕತ್ತರಿಸಿದನು.

07044027a ಚೂತಾರಾಮೋ ಯಥಾ ಭಗ್ನಃ ಪಂಚವರ್ಷಫಲೋಪಗಃ।
07044027c ರಾಜಪುತ್ರಶತಂ ತದ್ವತ್ಸೌಭದ್ರೇಣಾಪತದ್ಧತಂ।।

ಫಲವನ್ನು ಕೊಡಲಿರುವ ಐದುವರ್ಷದ ಮಾವಿನ ಮರವು ಸಿಡುಲಿಗೆ ಸಿಲುಕಿ ಭಗ್ನವಾಗುವಂತೆ ಆ ನೂರು ರಾಜಪುತ್ರರು ಸೌಭದ್ರನಿಂದ ಭಗ್ನರಾಗಿ ಹೋದರು.

07044028a ಕ್ರುದ್ಧಾಶೀವಿಷಸಂಕಾಶಾನ್ಸುಕುಮಾರಾನ್ಸುಖೋಚಿತಾನ್।
07044028c ಏಕೇನ ನಿಹತಾನ್ದೃಷ್ಟ್ವಾ ಭೀತೋ ದುರ್ಯೋಧನೋಽಭವತ್।।

ಕ್ರುದ್ಧ ಸರ್ಪದ ವಿಷದಂತಿದ್ದ ಅ ಸುಖೋಚಿತ ಸುಕುಮಾರರೆಲ್ಲರೂ ಒಬ್ಬನಿಂದನೇ ನಿಹತರಾದುದನ್ನು ನೋಡಿ ದುರ್ಯೋಧನನು ಭೀತನಾದನು.

07044029a ರಥಿನಃ ಕುಂಜರಾನಶ್ವಾನ್ಪದಾತೀಂಶ್ಚಾವಮರ್ದಿತಾನ್।
07044029c ದೃಷ್ಟ್ವಾ ದುರ್ಯೋಧನಃ ಕ್ಷಿಪ್ರಮುಪಾಯಾತ್ತಮಮರ್ಷಿತಃ।।

ರಥಿಗಳು, ಆನೆಗಳು, ಕುದುರೆಗಳು ಮತ್ತು ಪದಾತಿಗಳು ಅವನಿಂದ ನಾಶವಾಗುತ್ತಿರುವುದನ್ನು ನೋಡಿ ಸಹಿಸಿಕೊಳ್ಳಲಾರದೇ ದುರ್ಯೋಧನನು ಬೇಗನೇ ಅವನನ್ನು ಆಕ್ರಮಣಿಸಿದನು.

07044030a ತಯೋಃ ಕ್ಷಣಮಿವಾಪೂರ್ಣಃ ಸಂಗ್ರಾಮಃ ಸಮಪದ್ಯತ।
07044030c ಅಥಾಭವತ್ತೇ ವಿಮುಖಃ ಪುತ್ರಃ ಶರಶತಾರ್ದಿತಃ।।

ಅವರಿಬ್ಬರ ನಡುವೆ ನಡೆದ ಒಂದೇ ಕ್ಷಣದ ಸಂಗ್ರಾಮದಲ್ಲಿ ನೂರಾರು ಶರಗಳಿಂದ ಗಾಯಗೊಂಡ ನಿನ್ನ ಮಗನು ವಿಮುಖನಾದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ದುರ್ಯೋಧನಪರಾಜಯೇ ಚತುಷ್ಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ದುರ್ಯೋಧನಪರಾಜಯ ಎನ್ನುವ ನಲ್ವತ್ನಾಲ್ಕನೇ ಅಧ್ಯಾಯವು.