043 ಅಭಿಮನ್ಯುಪರಾಕ್ರಮಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಅಭಿಮನ್ಯುವಧ ಪರ್ವ

ಅಧ್ಯಾಯ 43

ಸಾರ

ಅಭಿಮನ್ಯುವಿನ ಯುದ್ಧ (1-21).

07043001 ಸಂಜಯ ಉವಾಚ।
07043001a ಸೈಂಧವೇನ ನಿರುದ್ಧೇಷು ಜಯಗೃದ್ಧಿಷು ಪಾಂಡುಷು।
07043001c ಸುಘೋರಮಭವದ್ಯುದ್ಧಂ ತ್ವದೀಯಾನಾಂ ಪರೈಃ ಸಹ।।

ಸಂಜಯನು ಹೇಳಿದನು: “ವಿಜಯೇಚ್ಛಿಗಳಾದ ಪಾಂಡವರು ಸೈಂಧವನಿಂದ ತಡೆಯಲ್ಪಡಲು ನಿನ್ನವರ ಮತ್ತು ಶತ್ರುಗಳ ನಡುವೆ ಅತಿ ಘೋರ ಯುದ್ಧವು ನಡೆಯಿತು.

07043002a ಪ್ರವಿಶ್ಯ ತ್ವಾರ್ಜುನಿಃ ಸೇನಾಂ ಸತ್ಯಸಂಧೋ ದುರಾಸದಾಂ।
07043002c ವ್ಯಕ್ಷೋಭಯತ ತೇಜಸ್ವೀ ಮಕರಃ ಸಾಗರಂ ಯಥಾ।।

ಅಷ್ಟರಲ್ಲಿ ಸತ್ಯಸಂಧ ತೇಜಸ್ವಿ ಆರ್ಜುನಿಯು ನಿನ್ನ ದುರಾಸದ ಸೇನೆಯನ್ನು ಪ್ರವೇಶಿಸಿ ಮೊಸಳೆಯು ಸಮುದ್ರವನ್ನು ಹೇಗೋ ಹಾಗೆ ಅಲ್ಲೋಲಕಲ್ಲೋಲಗೊಳಿಸಿದನು.

07043003a ತಂ ತಥಾ ಶರವರ್ಷೇಣ ಕ್ಷೋಭಯಂತಮರಿಂದಮಂ।
07043003c ಯಥಾಪ್ರಧಾನಾಃ ಸೌಭದ್ರಮಭ್ಯಯುಃ ಕುರುಸತ್ತಮಾಃ।।

ಶರವರ್ಷದಿಂದ ಕ್ಷೋಭೆಗೊಳಿಸುತ್ತಿದ್ದ ಅರಿಂದಮ ಸೌಭದ್ರನನ್ನು ಕುರುಸತ್ತಮ ಪ್ರಧಾನರು ಒಟ್ಟಾಗಿ ಆಕ್ರಮಿಸಿದರು.

07043004a ತೇಷಾಂ ತಸ್ಯ ಚ ಸಮ್ಮರ್ದೋ ದಾರುಣಃ ಸಮಪದ್ಯತ।
07043004c ಸೃಜತಾಂ ಶರವರ್ಷಾಣಿ ಪ್ರಸಕ್ತಮಮಿತೌಜಸಾಂ।।

ಒಟ್ಟಾಗಿ ಸೇರಿ ಶರವರ್ಷಗಳನ್ನು ಸೃಷ್ಟಿಸುತ್ತಿದ್ದ ಅಮಿತೌಜಸರಾದ ನಿನ್ನವರ ಮತ್ತು ಅವನ ನಡುವೆ ದಾರುಣ ಯುದ್ಧವು ನಡೆಯಿತು.

07043005a ರಥವ್ರಜೇನ ಸಂರುದ್ಧಸ್ತೈರಮಿತ್ರೈರಥಾರ್ಜುನಿಃ।
07043005c ವೃಷಸೇನಸ್ಯ ಯಂತಾರಂ ಹತ್ವಾ ಚಿಚ್ಚೇದ ಕಾರ್ಮುಕಂ।।

ಶತ್ರುಪಕ್ಷದ ರಥಸಮೂಹಗಳಿಂದ ಸುತ್ತುವರೆಯಲ್ಪಟ್ಟ ಆರ್ಜುನಿಯು ರಥಿ ವೃಷಸೇನನ ಸಾರಥಿಯನ್ನೂ ಧನುಸ್ಸನ್ನೂ ಕತ್ತರಿಸಿದನು.

07043006a ತಸ್ಯ ವಿವ್ಯಾಧ ಬಲವಾನ್ ಶರೈರಶ್ವಾನಜಿಹ್ಮಗೈಃ।
07043006c ವಾತಾಯಮಾನೈರಥ ತೈರಶ್ವೈರಪಹೃತೋ ರಣಾತ್।।

ಬಲವಾನನು ಜಿಹ್ಮಗ ಶರಗಳಿಂದ ಅವನ ಕುದುರೆಗಳನ್ನೂ ಹೊಡೆಯಲು ವಾಯುವೇಗಸಮನಾದ ಕುದುರೆಗಳು ಅವನ ರಥವನ್ನು ರಣದಿಂದ ಕೊಂಡೊಯ್ದವು.

07043007a ತೇನಾಂತರೇಣಾಭಿಮನ್ಯೋರ್ಯಂತಾಪಾಸಾರಯದ್ರಥಂ।
07043007c ರಥವ್ರಜಾಸ್ತತೋ ಹೃಷ್ಟಾಃ ಸಾಧು ಸಾಧ್ವಿತಿ ಚುಕ್ರುಶುಃ।।

ಅದರ ಮಧ್ಯದಲ್ಲಿ ಅಭಿಮನ್ಯುವಿನ ಸಾರಥಿಯು ರಥವನ್ನು ಮಹಾರಥರ ಮಧ್ಯದಿಂದ ಬೇರೊಂದು ಕಡೆ ಕೊಂಡೊಯ್ಯಲು ಅದನ್ನು ನೋಡಿದ ರಥಸಮೂಹಗಳು ಹೃಷ್ಟರಾಗಿ “ಸಾಧು! ಸಾಧು!” ಎಂದು ಕೂಗಿದರು.

07043008a ತಂ ಸಿಂಹಮಿವ ಸಂಕ್ರುದ್ಧಂ ಪ್ರಮಥ್ನಂತಂ ಶರೈರರೀನ್।
07043008c ಆರಾದಾಯಾಂತಮಭ್ಯೇತ್ಯ ವಸಾತೀಯೋಽಭ್ಯಯಾದ್ದ್ರುತಂ।।

ಸಿಂಹದಂತೆ ಸಂಕ್ರುದ್ಧನಾಗಿ ಶರಗಳಿಂದ ಅರಿಗಳನ್ನು ಸಂಹರಿಸುತ್ತಿದ್ದ ಅವನನ್ನು ದೂರದಿಂದಲೇ ನೋಡಿದ ವಸಾತೀಯನು ಬೇಗನೆ ಮುಂದೆ ಬಂದು ಎದುರಿಸಿದನು.

07043009a ಸೋಽಭಿಮನ್ಯುಂ ಶರೈಃ ಷಷ್ಟ್ಯಾ ರುಕ್ಮಪುಂಖೈರವಾಕಿರತ್।
07043009c ಅಬ್ರವೀಚ್ಚ ನ ಮೇ ಜೀವಂ ಜೀವತೋ ಯುಧಿ ಮೋಕ್ಷ್ಯಸೇ।।

ಅವನು ಅಭಿಮನ್ಯುವನ್ನು ಅರವತ್ತು ರುಕ್ಮಪುಂಖಗಳಿಂದ ಮುಚ್ಚಿ “ನಾನು ಜೀವಿಸಿರುವಾಗ ನೀನು ಜೀವಸಹಿತವಾಗಿ ಹೋಗಲಾರೆ!” ಎಂದು ಹೇಳಿದನು.

07043010a ತಮಯಸ್ಮಯವರ್ಮಾಣಮಿಷುಣಾ ಆಶುಪಾತಿನಾ।
07043010c ವಿವ್ಯಾಧ ಹೃದಿ ಸೌಭದ್ರಃ ಸ ಪಪಾತ ವ್ಯಸುಃ ಕ್ಷಿತೌ।।

ಆಗ ಸೌಭದ್ರನು ಉಕ್ಕಿನ ಕವಚವನ್ನು ಧರಿಸಿದ್ದ ಅವನ ಹೃದಯಕ್ಕೆ ಗುರಿಯಿಟ್ಟು ದೂರಲಕ್ಷ್ಯವಿರುವ ಬಾಣದಿಂದ ಹೊಡೆಯಲು ಅವನು ಅಸುನೀಗಿ ಭೂಮಿಯ ಮೇಲೆ ಬಿದ್ದನು.

07043011a ವಸಾತ್ಯಂ ನಿಹತಂ ದೃಷ್ಟ್ವಾ ಕ್ರುದ್ಧಾಃ ಕ್ಷತ್ರಿಯಪುಂಗವಾಃ।
07043011c ಪರಿವವ್ರುಸ್ತದಾ ರಾಜಂಸ್ತವ ಪೌತ್ರಂ ಜಿಘಾಂಸವಃ।।

ರಾಜನ್! ವಸಾತಿಯು ಹತನಾದುದನ್ನು ನೋಡಿ ಕ್ರುದ್ಧ ಕ್ಷತ್ರಿಯಪುಂಗವರು ನಿನ್ನ ಮೊಮ್ಮಗನನ್ನು ಸಂಹರಿಸಲು ಸುತ್ತುವರೆದರು.

07043012a ವಿಸ್ಫಾರಯಂತಶ್ಚಾಪಾನಿ ನಾನಾರೂಪಾಣ್ಯನೇಕಶಃ।
07043012c ತದ್ಯುದ್ಧಮಭವದ್ರೌದ್ರಂ ಸೌಭದ್ರಸ್ಯಾರಿಭಿಃ ಸಹ।।

ನಾನಾ ರೂಪದ ಅನೇಕ ಚಾಪಗಳನ್ನು ಠೇಂಕರಿಸುತ್ತಿದ್ದ ಅರಿಗಳೊಡನೆ ಸೌಭದ್ರನ ರೌದ್ರ ಯುದ್ಧವು ನಡೆಯಿತು.

07043013a ತೇಷಾಂ ಶರಾನ್ಸೇಷ್ವಸನಾಂ ಶರೀರಾಣಿ ಶಿರಾಂಸಿ ಚ।
07043013c ಸಕುಂಡಲಾನಿ ಸ್ರಗ್ವೀಣಿ ಕ್ರುದ್ಧಶ್ಚಿಚ್ಚೇದ ಫಾಲ್ಗುನಿಃ।।

ಕ್ರುದ್ಧನಾದ ಫಾಲ್ಗುನಿಯು ಅವರ ಶರಗಳನ್ನೂ, ಧನುಸ್ಸುಗಳನ್ನೂ, ಶರೀರಗಳನ್ನೂ, ಕರ್ಣಕುಂಡಲ-ಹಾರಗಳೊಂದಿಗೆ ಶಿರಗಳನ್ನೂ ಕತ್ತರಿಸಿದನು.

07043014a ಸಖಡ್ಗಾಃ ಸಾಂಗುಲಿತ್ರಾಣಾಃ ಸಪಟ್ಟಿಶಪರಶ್ವಧಾಃ।
07043014c ಅದೃಶ್ಯಂತ ಭುಜಾಶ್ಚಿನ್ನಾ ಹೇಮಾಭರಣಭೂಷಿತಾಃ।।

ಖಡ್ಗಗಳೊಂದಿಗೆ, ಅಂಗುಲಿತ್ರಾಣಗಳೊಂದಿಗೆ, ಪಟ್ಟಿಶ-ಪರಶಾಯುಧಗಳೊಂದಿಗೆ ಹೇಮಾಭರಣ ಭೂಷಿತ ಭುಜಗಳು ಅದೃಶ್ಯವಾಗುತ್ತಿದ್ದವು.

07043015a ಸ್ರಗ್ಭಿರಾಭರಣೈರ್ವಸ್ತ್ರೈಃ ಪತಿತೈಶ್ಚ ಮಹಾಧ್ವಜೈಃ।
07043015c ವರ್ಮಭಿಶ್ಚರ್ಮಭಿರ್ಹಾರೈರ್ಮುಕುಟೈಶ್ಚತ್ರಚಾಮರೈಃ।।
07043016a ಅಪಸ್ಕರೈರಧಿಷ್ಠಾನೈರೀಷಾದಂಡಕಬಂಧುರೈಃ।
07043016c ಅಕ್ಷೈರ್ವಿಮಥಿತೈಶ್ಚಕ್ರೈರ್ಭಗ್ನೈಶ್ಚ ಬಹುಧಾ ಯುಗೈಃ।।
07043017a ಅನುಕರ್ಷೈಃ ಪತಾಕಾಭಿಸ್ತಥಾ ಸಾರಥಿವಾಜಿಭಿಃ।
07043017c ರಥೈಶ್ಚ ಭಗ್ನೈರ್ನಾಗೈಶ್ಚ ಹತೈಃ ಕೀರ್ಣಾಭವನ್ಮಹೀ।।

ಮಹಿಯ ಮೇಲೆ ಮಾಲೆಗಳು, ಆಭರಣಗಳು, ವಸ್ತ್ರಗಳು, ಕೆಳಗೆ ಬಿದ್ದಿದ್ದ ಮಹಾಧ್ವಜಗಳು, ಕವಚಗಳು, ಗುರಾಣಿಗಳು, ಹಾರಗಳು, ಮುಕುಟಗಳು, ಚತ್ರ-ಚಾಮರಗಳು, ಯುದ್ಧ ಸಾಮಗ್ರಿಗಳು, ಆಸನಗಳು, ಈಷಾದಂಡಗಳು, ಮೂಕಿಕಂಬಗಳು, ಅಚ್ಚುಮರಗಳು, ಮುರಿದುಹೋದ ಚಕ್ರಗಳು, ಭಗ್ನವಾದ ಅನೇಕ ನೊಗಗಳು, ಹರಿದುಹೋದ ಪತಾಕೆಗಳು, ಅಸುನೀಗಿ ಮಲಗಿದ್ದ ಸಾರಥಿ-ಕುದುರೆಗಳು, ಮುರಿದ ರಥಗಳು, ಮತ್ತು ಹತವಾದ ಆನೆಗಳು ಹರಡಿ ಬಿದ್ದಿದ್ದವು.

07043018a ನಿಹತೈಃ ಕ್ಷತ್ರಿಯೈಃ ಶೂರೈರ್ನಾನಾಜನಪದೇಶ್ವರೈಃ।
07043018c ಜಯಗೃದ್ಧೈರ್ವೃತಾ ಭೂಮಿರ್ದಾರುಣಾ ಸಮಪದ್ಯತ।।

ಜಯವನ್ನು ಬಯಸಿದ್ದ ಶೂರ ನಾನಾಜನಪದೇಶ್ವರ ಕ್ಷತ್ರಿಯರು ಹತರಾಗಿ ಬಿದ್ದಿದ್ದ ಭೂಮಿಯು ದಾರುಣವಾಗಿ ಕಂಡಿತು.

07043019a ದಿಶೋ ವಿಚರತಸ್ತಸ್ಯ ಸರ್ವಾಶ್ಚ ಪ್ರದಿಶಸ್ತಥಾ।
07043019c ರಣೇಽಭಿಮನ್ಯೋಃ ಕ್ರುದ್ಧಸ್ಯ ರೂಪಮಂತರಧೀಯತ।।

ರಣದಲ್ಲಿ ಕ್ರುದ್ಧನಾಗಿ ಎಲ್ಲ ದಿಕ್ಕು-ಉಪದಿಕ್ಕುಗಳಲ್ಲಿ ಸಂಚರಿಸುತ್ತಿದ್ದ ಅಭಿಮನ್ಯುವಿನ ರೂಪವು ಮಧ್ಯ-ಮಧ್ಯದಲ್ಲಿ ಕಾಣಿಸುತ್ತಲೇ ಇರಲಿಲ್ಲ.

07043020a ಕಾಂಚನಂ ಯದ್ಯದಸ್ಯಾಸೀದ್ವರ್ಮ ಚಾಭರಣಾನಿ ಚ।
07043020c ಧನುಷಶ್ಚ ಶರಾಣಾಂ ಚ ತದಪಶ್ಯಾಮ ಕೇವಲಂ।।

ಕೇವಲ ಅವನ ಥಳಥಳಿಸುವ ಬಂಗಾರದ ಕವಚ, ಆಭರಣಗಳು, ಧನುಸ್ಸು ಮತ್ತು ಶರಗಳನ್ನು ನೋಡುತ್ತಿದ್ದೆವು.

07043021a ತಂ ತದಾ ನಾಶಕತ್ಕಶ್ಚಿಚ್ಚಕ್ಷುರ್ಭ್ಯಾಮಭಿವೀಕ್ಷಿತುಂ।
07043021c ಆದದಾನಂ ಶರೈರ್ಯೋಧಾನ್ಮಧ್ಯೇ ಸೂರ್ಯಮಿವ ಸ್ಥಿತಂ।।

ಸೂರ್ಯನಂತೆ ರಣದ ಮಧ್ಯದಲ್ಲಿ ನಿಂತು ಬಾಣಗಳಿಂದ ಯೋಧರ ಪ್ರಾಣಗಳನ್ನು ಹೀರುತ್ತಿದ್ದ ಅವನನ್ನು ಆಗ ಕಣ್ಣುಗಳನ್ನು ತೆರೆದು ನೋಡಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ಅಭಿಮನ್ಯುಪರಾಕ್ರಮೇ ತ್ರಿಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ಅಭಿಮನ್ಯುಪರಾಕ್ರಮ ಎನ್ನುವ ನಲ್ವತ್ಮೂರನೇ ಅಧ್ಯಾಯವು.