ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಅಭಿಮನ್ಯುವಧ ಪರ್ವ
ಅಧ್ಯಾಯ 41
ಸಾರ
ಜಯದ್ರಥನು ಅಭಿಮನ್ಯುವನ್ನು ಹಿಂಬಾಲಿಸಿ ಹೋಗುತ್ತಿದ್ದ ಪಾಂಡವ ಸೇನೆಯನ್ನು ತಡೆದು ಯುದ್ಧಮಾಡಿದುದು (1-20).
07041001 ಧೃತರಾಷ್ಟ್ರ ಉವಾಚ।
07041001a ಬಾಲಮತ್ಯಂತಸುಖಿನಮವಾರ್ಯಬಲದರ್ಪಿತಂ।
07041001c ಯುದ್ಧೇಷು ಕುಶಲಂ ವೀರಂ ಕುಲಪುತ್ರಂ ತನುತ್ಯಜಂ।।
07041002a ಗಾಹಮಾನಮನೀಕಾನಿ ಸದಶ್ವೈಸ್ತಂ ತ್ರಿಹಾಯನೈಃ।
07041002c ಅಪಿ ಯೌಧಿಷ್ಠಿರಾತ್ಸೈನ್ಯಾತ್ಕಶ್ಚಿದನ್ವಪತದ್ರಥೀ।।
ಧೃತರಾಷ್ಟ್ರನು ಹೇಳಿದನು: “ಬಾಲಕನಾಗಿದ್ದ, ಅತ್ಯಂತ ಸುಖದಲ್ಲಿ ಬೆಳೆದಿದ್ದ, ಸ್ವಬಾಹು ಬಲದಿಂದ ದರ್ಪಿತನಾಗಿದ್ದ, ಯುದ್ಧದಲ್ಲಿ ಕುಶಲ ವೀರ, ಕುಲಪುತ್ರ, ತನುವನ್ನೂ ತ್ಯಜಿಸಿ ಹೋರಾಡುತ್ತಿದ್ದ ಅವನು ಮೂರೇ ವರ್ಷದ ಕುದುರೆಗಳ ಸಹಾಯದಿಂದ ಸೇನೆಗಳನ್ನು ಹೊಕ್ಕು ಯುದ್ಧಮಾಡುತ್ತಿರಲು ಯುಧಿಷ್ಠಿರನ ಕಡೆಯ ಸೇನೆಯಿಂದ ಬೇರೆ ಯಾರೂ ಆ ರಥಿಯನ್ನು ಹಿಂಬಾಲಿಸಿ ಹೋಗಲಿಲ್ಲವೇ?”
07041003 ಸಂಜಯ ಉವಾಚ।
07041003a ಯುಧಿಷ್ಠಿರೋ ಭೀಮಸೇನಃ ಶಿಖಂಡೀ ಸಾತ್ಯಕಿರ್ಯಮೌ।
07041003c ಧೃಷ್ಟದ್ಯುಮ್ನೋ ವಿರಾಟಶ್ಚ ದ್ರುಪದಶ್ಚ ಸಕೇಕಯಃ।
07041003e ಧೃಷ್ಟಕೇತುಶ್ಚ ಸಂರಬ್ಧೋ ಮತ್ಸ್ಯಾಶ್ಚಾನ್ವಪತನ್ರಣೇ।।
ಸಂಜಯನು ಹೇಳಿದನು: “ರಣದಲ್ಲಿ ಅವನನ್ನು ಯುಧಿಷ್ಠಿರ, ಭೀಮಸೇನ, ಶಿಖಂಡಿ, ಸಾತ್ಯಕಿ, ಯಮಳರು, ಧೃಷ್ಟದ್ಯುಮ್ನ, ವಿರಾಟ, ದ್ರುಪದ, ಕೇಕಯರೊಂದಿಗೆ ಧೃಷ್ಟಕೇತುವೂ ಮತ್ಸ್ಯರೂ ಸಂರಬ್ಧರಾಗಿ ಅನುಸರಿಸಿ ಹೋಗುತ್ತಿದ್ದರು.
07041004a ಅಭ್ಯದ್ರವನ್ಪರೀಪ್ಸಂತೋ ವ್ಯೂಢಾನೀಕಾಃ ಪ್ರಹಾರಿಣಃ।
07041004c ತಾನ್ದೃಷ್ಟ್ವಾ ದ್ರವತಃ ಶೂರಾಂಸ್ತ್ವದೀಯಾ ವಿಮುಖಾಭವನ್।।
ವ್ಯೂಹದಲ್ಲಿದ್ದ ಸೇನೆಗಳನ್ನು ಪ್ರಹರಿಸಿ ಆಕ್ರಮಣಿಸಿದುದನ್ನು ನೋಡಿ ನಿನ್ನ ಕಡೆಯ ಶೂರರು ಓಡುತ್ತಾ ವಿಮುಖರಾದರು.
07041005a ತತಸ್ತದ್ವಿಮುಖಂ ದೃಷ್ಟ್ವಾ ತವ ಸೂನೋರ್ಮಹದ್ಬಲಂ।
07041005c ಜಾಮಾತಾ ತವ ತೇಜಸ್ವೀ ವಿಷ್ಟಂಭಯಿಷುರಾದ್ರವತ್।।
ನಿನ್ನ ಮಗನ ಮಹಾಬಲವು ಹಾಗೆ ವಿಮುಖವಾಗುತ್ತಿದ್ದುದನ್ನು ನೋಡಿದ ನಿನ್ನ ಅಳಿಯ ತೇಜಸ್ವಿಯು ಶತ್ರುಗಳನ್ನು ತಡೆಹಿಡಿಯಲು ಧಾವಿಸಿದನು.
07041006a ಸೈಂಧವಸ್ಯ ಮಹಾರಾಜ ಪುತ್ರೋ ರಾಜಾ ಜಯದ್ರಥಃ।
07041006c ಸ ಪುತ್ರಗೃದ್ಧಿನಃ ಪಾರ್ಥಾನ್ಸಹಸೈನ್ಯಾನವಾರಯತ್।।
ಮಹಾರಾಜ! ಸೈಂಧವನ ಮಗ ರಾಜಾ ಜಯದ್ರಥನು ಮಗನನ್ನು ಹಿಂಬಾಲಿಸಿ ಹೋಗುತ್ತಿದ್ದ ಪಾರ್ಥರನ್ನು ಅವರ ಸೇನೆಗಳೊಂದಿಗೆ ತಡೆದನು.
07041007a ಉಗ್ರಧನ್ವಾ ಮಹೇಷ್ವಾಸೋ ದಿವ್ಯಮಸ್ತ್ರಮುದೀರಯನ್।
07041007c ವಾರ್ಧಕ್ಷತ್ರಿರುಪಾಸೇಧತ್ಪ್ರವಣಾದಿವ ಕುಂಜರಾನ್।।
ಓಡಿಬಂದು ಆನೆಗಳನ್ನು ಎದುರಿಸುವ ಸಲಗದಂತೆ ಉಗ್ರಧನ್ವಿ, ಮಹೇಷ್ವಾಸ ವಾರ್ಧಕ್ಷತ್ರಿಯು ದಿವಾಸ್ತ್ರಗಳನ್ನು ಪ್ರಯೋಗಿಸುತ್ತಾ ಆಕ್ರಮಣಿಸಿದನು.”
07041008 ಧೃತರಾಷ್ಟ್ರ ಉವಾಚ।
07041008a ಅತಿಭಾರಮಹಂ ಮನ್ಯೇ ಸೈಂಧವೇ ಸಂಜಯಾಹಿತಂ।
07041008c ಯದೇಕಃ ಪಾಂಡವಾನ್ಕ್ರುದ್ಧಾನ್ಪುತ್ರಗೃದ್ಧೀನವಾರಯತ್।।
ಧೃತರಾಷ್ಟ್ರನು ಹೇಳಿದನು: “ಸಂಜಯ! ಸೈಂಧವನ ಮೇಲೆ ಗುರುತರ ಭಾರವು ಹೊರಿಸಲ್ಪಟ್ಟಿತೆಂದು ನನಗನ್ನಿಸುತ್ತದೆ. ಕ್ರುದ್ಧರಾಗಿ ಮಗನನ್ನು ರಕ್ಷಿಸುತ್ತಿರುವ ಪಾಂಡವರನ್ನು ಅವನೊಬ್ಬನೇ ತಡೆದನೇ?
07041009a ಅತ್ಯದ್ಭುತಮಿದಂ ಮನ್ಯೇ ಬಲಂ ಶೌರ್ಯಂ ಚ ಸೈಂಧವೇ।
07041009c ತದಸ್ಯ ಬ್ರೂಹಿ ಮೇ ವೀರ್ಯಂ ಕರ್ಮ ಚಾಗ್ರ್ಯಂ ಮಹಾತ್ಮನಃ।।
ಸೈಂಧವನ ಈ ಬಲ-ಶೌರ್ಯಗಳು ಅತಿ ಅದ್ಭುತವಾದುದೆಂದು ತಿಳಿಯುತ್ತೇನೆ. ಈ ಮಹಾತ್ಮನ ವೀರ್ಯ ಮತ್ತು ಮುಖ್ಯ ಕರ್ಮಗಳ ಕುರಿತು ನನಗೆ ಹೇಳು.
07041010a ಕಿಂ ದತ್ತಂ ಹುತಮಿಷ್ಟಂ ವಾ ಸುತಪ್ತಮಥ ವಾ ತಪಃ।
07041010c ಸಿಂಧುರಾಜೇನ ಯೇನೈಕಃ ಕ್ರುದ್ಧಾನ್ಪಾರ್ಥಾನವಾರಯತ್।।
ಒಬ್ಬನೇ ಕ್ರೋಧಿತ ಪಾಂಡವರನ್ನು ತಡೆದನೆಂದರೆ ಸಿಂಧುರಾಜನು ಯಾವ ವರವನ್ನು ಪಡೆದಿದ್ದನು? ಅಥವಾ ಯಾವ ಯಜ್ಞವನ್ನು ನಡೆಸಿದ್ದನು? ಅಥವಾ ಯಾರನ್ನು ಕುರಿತು ತಪಸ್ಸನ್ನು ತಪಿಸಿದ್ದನು?”
07041011 ಸಂಜಯ ಉವಾಚ।
07041011a ದ್ರೌಪದೀಹರಣೇ ಯತ್ತದ್ಭೀಮಸೇನೇನ ನಿರ್ಜಿತಃ।
07041011c ಮಾನಾತ್ಸ ತಪ್ತವಾನ್ರಾಜಾ ವರಾರ್ಥೀ ಸುಮಹತ್ತಪಃ।।
ಸಂಜಯನು ಹೇಳಿದನು: “ದ್ರೌಪದೀಹರಣದ ಸಮಯದಲ್ಲಿ ಭೀಮಸೇನನಿಂದ ಪರಾಜಯಗೊಂಡ ಈ ರಾಜನು ಮಾನ್ಯತೆಯಿಂದ ವರವನ್ನು ಅರಸಿ ಮಹಾ ತಪಸ್ಸನ್ನಾಚರಿಸಿದ್ದನು.
07041012a ಇಂದ್ರಿಯಾಣೀಂದ್ರಿಯಾರ್ಥೇಭ್ಯಃ ಪ್ರಿಯೇಭ್ಯಃ ಸನ್ನಿವರ್ತ್ಯ ಸಃ।
07041012c ಕ್ಷುತ್ಪಿಪಾಸಾತಪಸಹಃ ಕೃಶೋ ಧಮನಿಸಂತತಃ।
07041012e ದೇವಮಾರಾಧಯಚ್ಚರ್ವಂ ಗೃಣನ್ಬ್ರಹ್ಮ ಸನಾತನಂ।।
ಇಂದ್ರಿಯಗಳನ್ನು ಇಂದ್ರಿಯಾರ್ಥಗಳಿಂದ ಹಿಂದಿರುಗಿಸಿ, ಪ್ರಿಯವಾದವುಗಳೆಲ್ಲವನ್ನೂ ಹತ್ತಿರಕ್ಕೆ ತೆಗೆದುಕೊಳ್ಳದೇ, ಹಸಿವು-ಬಾಯಾರಿಕೆ-ಬಿಸಿಲನ್ನು ಸಹಿಸಿಕೊಂಡು ತಪಸ್ಸನ್ನಾಚರಿಸಿದ ಅವನು ಕೃಶನಾಗಿ, ಧಮನಿಗಳು ಮಾತ್ರವೇ ಕಾಣಿಸಿಕೊಳ್ಳುತ್ತಿರುವ ಹಾಗೆ ಬ್ರಹ್ಮ, ಸನಾತನ, ದೇವ ಶರ್ವನನ್ನು ಆರಾಧಿಸಿದ್ದನು.
07041013a ಭಕ್ತಾನುಕಂಪೀ ಭಗವಾಂಸ್ತಸ್ಯ ಚಕ್ರೇ ತತೋ ದಯಾಂ।
07041013c ಸ್ವಪ್ನಾಂತೇಽಪ್ಯಥ ಚೈವಾಹ ಹರಃ ಸಿಂಧುಪತೇಃ ಸುತಂ।
07041013e ವರಂ ವೃಣೀಷ್ವ ಪ್ರೀತೋಽಸ್ಮಿ ಜಯದ್ರಥ ಕಿಮಿಚ್ಚಸಿ।।
ಭಕ್ತಾನುಕಂಪಿಯಾದ ಭಗವಾನನು ಅವನ ಮೇಲೆ ದಯೆ ತೋರಿಸಿದನು. ಒಮ್ಮೆ ಸ್ವಪ್ನದ ಕೊನೆಯಲ್ಲಿ ಹರನು ಸಿಂಧುಪತಿಯ ಸುತನಿಗೆ ಕಾಣಿಸಿಕೊಂಡು “ಜಯದ್ರಥ! ನಿನ್ನ ಕುರಿತು ಪ್ರೀತನಾಗಿದ್ದೇನೆ. ವರವನ್ನು ಕೇಳು. ಏನನ್ನು ಇಚ್ಛಿಸುತ್ತೀಯೆ?” ಎಂದು ಕೇಳಿದ್ದನು.
07041014a ಏವಮುಕ್ತಸ್ತು ಶರ್ವೇಣ ಸಿಂಧುರಾಜೋ ಜಯದ್ರಥಃ।
07041014c ಉವಾಚ ಪ್ರಣತೋ ರುದ್ರಂ ಪ್ರಾಂಜಲಿರ್ನಿಯತಾತ್ಮವಾನ್।।
ಶರ್ವನು ಹೀಗೆ ಹೇಳಲು ಸಿಂಧುರಾಜ ಆತ್ಮವಾನ್ ಜಯದ್ರಥನು ರುದ್ರನಿಗೆ ಅಂಜಲೀಬದ್ಧನಾಗಿ ನಮಸ್ಕರಿಸಿ ಹೇಳಿದನು:
07041015a ಪಾಂಡವೇಯಾನಹಂ ಸಂಖ್ಯೇ ಭೀಮವೀರ್ಯಪರಾಕ್ರಮಾನ್।
07041015c ಏಕೋ ರಣೇ ಧಾರಯೇಯಂ ಸಮಸ್ತಾನಿತಿ ಭಾರತ।।
ಭಾರತ! “ನಾನು ರಣದಲ್ಲಿ ಭೀಮವೀರ್ಯಪರಾಕ್ರಮಿಗಳಾದ ಪಾಂಡವ ಸಮಸ್ತರನ್ನು ಒಬ್ಬನೇ ಯುದ್ಧದಲ್ಲಿ ಎದುರಿಸಬಲ್ಲವನಾಗಬೇಕು” ಎಂದು.
07041016a ಏವಮುಕ್ತಸ್ತು ದೇವೇಶೋ ಜಯದ್ರಥಮಥಾಬ್ರವೀತ್।
07041016c ದದಾಮಿ ತೇ ವರಂ ಸೌಮ್ಯ ವಿನಾ ಪಾರ್ಥಂ ಧನಂಜಯಂ।।
07041017a ಧಾರಯಿಷ್ಯಸಿ ಸಂಗ್ರಾಮೇ ಚತುರಃ ಪಾಂಡುನಂದನಾನ್।
07041017c ಏವಮಸ್ತ್ವಿತಿ ದೇವೇಶಮುಕ್ತ್ವಾಬುಧ್ಯತ ಪಾರ್ಥಿವಃ।।
ಹೀಗೇ ಹೇಳಲು ದೇವೇಶನು ಜಯದ್ರಥನಿಗೆ ಹೇಳಿದನು: “ಸೌಮ್ಯ! ನಿನಗೆ ವರವನ್ನು ಕೊಡುತ್ತೇನೆ. ಪಾರ್ಥ ಧನಂಜಯನ ಹೊರತಾಗಿ ನಾಲ್ವರು ಪಾಂಡುನಂದನರನ್ನು ನೀನು ಸಂಗ್ರಾಮದಲ್ಲಿ ಎದುರಿಸಬಲ್ಲೆ!” ಹೀಗೆ ಹೇಳಿ ದೇವೇಶನು ರಾಜನನ್ನು ಎಚ್ಚರಿಸಿದನು.
07041018a ಸ ತೇನ ವರದಾನೇನ ದಿವ್ಯೇನಾಸ್ತ್ರಬಲೇನ ಚ।
07041018c ಏಕಃ ಸಂಧಾರಯಾಮಾಸ ಪಾಂಡವಾನಾಮನೀಕಿನೀಂ।।
ಅವನು ಆ ವರದಾನದಿಂದ ಮತ್ತು ದಿವ್ಯಾಸ್ತ್ರಗಳ ಬಲದಿಂದ ಒಬ್ಬನೇ ಪಾಂಡವರ ಸೇನೆಯನ್ನು ಎದುರಿಸತೊಡಗಿದನು.
07041019a ತಸ್ಯ ಜ್ಯಾತಲಘೋಷೇಣ ಕ್ಷತ್ರಿಯಾನ್ಭಯಮಾವಿಶತ್।
07041019c ಪರಾಂಸ್ತು ತವ ಸೈನ್ಯಸ್ಯ ಹರ್ಷಃ ಪರಮಕೋಽಭವತ್।।
ಅವನ ಧನುಸ್ಸು ಮತ್ತು ಚಪ್ಪಾಳೆಯ ಘೋಷದಿಂದ ಶತ್ರುಪಕ್ಷದ ಕ್ಷತ್ರಿಯರಲ್ಲಿ ಭಯವು ಆವೇಶಗೊಂಡಿತು ಮತ್ತು ನಿನ್ನ ಸೇನೆಯಲ್ಲಿ ಪರಮ ಹರ್ಷವುಂಟಾಯಿತು.
07041020a ದೃಷ್ಟ್ವಾ ತು ಕ್ಷತ್ರಿಯಾ ಭಾರಂ ಸೈಂಧವೇ ಸರ್ವಮರ್ಪಿತಂ।
07041020c ಉತ್ಕ್ರುಶ್ಯಾಭ್ಯದ್ರವನ್ರಾಜನ್ಯೇನ ಯೌಧಿಷ್ಠಿರಂ ಬಲಂ।।
ಭಾರವೆಲ್ಲವೂ ಸೈಂಧವನ ಪಾಲಿಗೆ ಬಂದುದನ್ನು ನೋಡಿ ನಿನ್ನ ಕಡೆಯ ಕ್ಷತ್ರಿಯರು ಜೋರಾಗಿ ಗರ್ಜಿಸುತ್ತಾ ಯುಧಿಷ್ಠಿರನ ಸೇನೆಯನ್ನು ಆಕ್ರಮಿಸಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ಜಯದ್ರಥಯುದ್ಧೇ ಏಕಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ಜಯದ್ರಥಯುದ್ಧ ಎನ್ನುವ ನಲ್ವತ್ತೊಂದನೇ ಅಧ್ಯಾಯವು.