038 ದುಃಶಾಸನಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಅಭಿಮನ್ಯುವಧ ಪರ್ವ

ಅಧ್ಯಾಯ 38

ಸಾರ

ಅಭಿಮನ್ಯುವಿನ ಪರಾಕ್ರಮವನ್ನು ಕಂಡು ದ್ರೋಣನು ಅವನನ್ನು ಪ್ರಶಂಸಿಸಿದುದು (1-13). ಅದನ್ನು ಕೇಳಿ ಕ್ರುದ್ಧನಾದ ದುರ್ಯೋಧನನು ಅಭಿಮನ್ಯುವನ್ನು ಸಂಹರಿಸಲು ಕುರುವೀರರಿಗೆ ಹೇಳಿದುದು (14-19). ಅಭಿಮನ್ಯು-ದುಃಶಾಸನರ ಯುದ್ಧ (20-30).

07038001 ಧೃತರಾಷ್ಟ್ರ ಉವಾಚ।
07038001a ದ್ವೈಧೀಭವತಿ ಮೇ ಚಿತ್ತಂ ಹ್ರಿಯಾ ತುಷ್ಟ್ಯಾ ಚ ಸಂಜಯ।
07038001c ಮಮ ಪುತ್ರಸ್ಯ ಯತ್ ಸೈನ್ಯಂ ಸೌಭದ್ರಃ ಸಮವಾರಯತ್।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಸೌಭದ್ರನು ನನ್ನ ಪುತ್ರನ ಸೇನೆಯನ್ನು ತಡೆದನೆಂದು ನನ್ನ ಮನಸ್ಸಿನಲ್ಲಿ ನಾಚಿಕೆ ಮತ್ತು ತೃಪ್ತಿ ಈ ಎರಡೂ ಭಾವಗಳು ಉಂಟಾಗುತ್ತಿವೆ.

07038002a ವಿಸ್ತರೇಣೈವ ಮೇ ಶಂಸ ಸರ್ವಂ ಗಾವಲ್ಗಣೇ ಪುನಃ।
07038002c ವಿಕ್ರೀಡಿತಂ ಕುಮಾರಸ್ಯ ಸ್ಕಂದಸ್ಯೇವಾಸುರೈಃ ಸಹ।।

ಗಾವಲ್ಗಣೇ! ಪುನಃ ವಿಸ್ತಾರವಾಗಿ ಸ್ಕಂದನು ಅಸುರರೊಂದಿಗೆ ಹೇಗೋ ಹಾಗೆ ಆಟವಾಡಿದ ಕುಮಾರನ ಕುರಿತು ಎಲ್ಲವನ್ನೂ ಹೇಳು.”

07038003 ಸಂಜಯ ಉವಾಚ।
07038003a ಹಂತ ತೇ ಸಂಪ್ರವಕ್ಷ್ಯಾಮಿ ವಿಮರ್ದಮತಿದಾರುಣಂ।
07038003c ಏಕಸ್ಯ ಚ ಬಹೂನಾಂ ಚ ಯಥಾಸೀತ್ತುಮುಲೋ ರಣಃ।।

ಸಂಜಯನು ಹೇಳಿದನು: “ರಣದಲ್ಲಿ ಅನೇಕರು ಒಬ್ಬನನ್ನು ಮರ್ದಿಸಿದ ಅತಿದಾರುಣ ತುಮುಲ ಯುದ್ಧದ ಕುರಿತು ವರದಿಮಾಡುತ್ತೇನೆ. ತಡೆ.

07038004a ಅಭಿಮನ್ಯುಃ ಕೃತೋತ್ಸಾಹಃ ಕೃತೋತ್ಸಾಹಾನರಿಂದಮಾನ್।
07038004c ರಥಸ್ಥೋ ರಥಿನಃ ಸರ್ವಾಂಸ್ತಾವಕಾನಪ್ಯಹರ್ಷಯತ್।।

ಯುದ್ಧೋತ್ಸಾಹಿ ಅಭಿಮನ್ಯುವು ರಥದಲ್ಲಿ ಕುಳಿದು ರಥಸ್ಥರಾಗಿದ್ದ ನಿನ್ನಕಡೆಯ ಯುದ್ಧೋತ್ಸಾಹೀ ಅರಿಂದಮರೆಲ್ಲರನ್ನೂ ದುಃಖಕ್ಕೀಡುಮಾಡಿದನು.

07038005a ದ್ರೋಣಂ ಕರ್ಣಂ ಕೃಪಂ ಶಲ್ಯಂ ದ್ರೌಣಿಂ ಭೋಜಂ ಬೃಹದ್ಬಲಂ।
07038005c ದುರ್ಯೋಧನಂ ಸೌಮದತ್ತಿಂ ಶಕುನಿಂ ಚ ಮಹಾಬಲಂ।।
07038006a ನಾನಾನೃಪಾನ್ನೃಪಸುತಾನ್ಸೈನ್ಯಾನಿ ವಿವಿಧಾನಿ ಚ।
07038006c ಅಲಾತಚಕ್ರವತ್ಸರ್ವಾಂಶ್ಚರನ್ಬಾಣೈಃ ಸಮಭ್ಯಯಾತ್।।

ದ್ರೋಣ, ಕರ್ಣ, ಕೃಪ, ಶಲ್ಯ, ದ್ರೌಣಿ, ಭೋಜ, ಬೃಹದ್ಬಲ, ದುರ್ಯೋಧನ, ಸೌಮದತ್ತಿ, ಮಹಾಬಲಿ ಶಕುನಿ, ನಾನಾ ನೃಪರು, ನೃಪರ ಮಕ್ಕಳು, ಮತ್ತು ವಿವಿಧ ಸೈನ್ಯಗಳನ್ನು ಬೆಂಕಿಯ ಕೊಳ್ಳಿಯಂತೆ ಎಲ್ಲ ಕಡೆ ಸಂಚರಿಸುತ್ತಾ ಬಾಣಗಳಿಂದ ಮುಚ್ಚಿದನು.

07038007a ನಿಘ್ನನ್ನಮಿತ್ರಾನ್ಸೌಭದ್ರಃ ಪರಮಾಸ್ತ್ರಃ ಪ್ರತಾಪವಾನ್।
07038007c ಅದರ್ಶಯತ ತೇಜಸ್ವೀ ದಿಕ್ಷು ಸರ್ವಾಸು ಭಾರತ।।

ಭಾರತ! ಅಮಿತ್ರರನ್ನು ಸಂಹರಿಸುತ್ತಾ ತೇಜಸ್ವೀ ಪರಮಾಸ್ತ್ರ ಪ್ರತಾಪವಾನ್ ಸೌಭದ್ರನು ಎಲ್ಲ ದಿಕ್ಕುಗಳಲ್ಲಿಯೂ ಕಾಣುತ್ತಿದ್ದನು.

07038008a ತದ್ದೃಷ್ಟ್ವಾ ಚರಿತಂ ತಸ್ಯ ಸೌಭದ್ರಸ್ಯಾಮಿತೌಜಸಃ।
07038008c ಸಮಕಂಪಂತ ಸೈನ್ಯಾನಿ ತ್ವದೀಯಾನಿ ಪುನಃ ಪುನಃ।।

ಅಮಿತೌಜಸ ಸೌಭದ್ರನ ಆ ಚರಿತವನ್ನು ನೋಡಿ ನಿನ್ನ ಸೈನ್ಯಗಳು ಪುನಃ ಪುನಃ ನಡುಗಿದವು.

07038009a ಅಥಾಬ್ರವೀನ್ಮಹಾಪ್ರಾಜ್ಞೋ ಭಾರದ್ವಾಜಃ ಪ್ರತಾಪವಾನ್।
07038009c ಹರ್ಷೇಣೋತ್ಫುಲ್ಲನಯನಃ ಕೃಪಮಾಭಾಷ್ಯ ಸತ್ವರಂ।।
07038010a ಘಟ್ಟಯನ್ನಿವ ಮರ್ಮಾಣಿ ತವ ಪುತ್ರಸ್ಯ ಮಾರಿಷ।
07038010c ಅಭಿಮನ್ಯುಂ ರಣೇ ದೃಷ್ಟ್ವಾ ತದಾ ರಣವಿಶಾರದಂ।।

ಮಾರಿಷ! ಆಗ ಮಹಾಪ್ರಾಜ್ಞ ಪ್ರತಾಪವಾನ್ ಭಾರದ್ವಾಜನು ರಣದಲ್ಲಿ ರಣವಿಶಾರದ ಅಭಿಮನ್ಯುವನ್ನು ನೋಡಿ ಹರ್ಷದಿಂದ ವಿಕಸಿತ ಕಣ್ಣುಗಳಿಂದ ಕೂಡಿದವನಾಗಿ ನಿನ್ನ ಮಗನ ಮರ್ಮಗಳನ್ನು ಇರಿಯುವಂತೆ ತ್ವರೆಮಾಡಿ ಕೃಪನಿಗೆ ಹೇಳಿದನು:

07038011a ಏಷ ಗಚ್ಚತಿ ಸೌಭದ್ರಃ ಪಾರ್ಥಾನಾಮಗ್ರತೋ ಯುವಾ।
07038011c ನಂದಯನ್ಸುಹೃದಃ ಸರ್ವಾನ್ರಾಜಾನಂ ಚ ಯುಧಿಷ್ಠಿರಂ।।
07038012a ನಕುಲಂ ಸಹದೇವಂ ಚ ಭೀಮಸೇನಂ ಚ ಪಾಂಡವಂ।
07038012c ಬಂಧೂನ್ಸಂಬಂಧಿನಶ್ಚಾನ್ಯಾನ್ಮಧ್ಯಸ್ಥಾನ್ಸುಹೃದಸ್ತಥಾ।।

“ಇಗೋ ಇಲ್ಲಿ ಹೋಗುತ್ತಿದ್ದಾನೆ - ಎಲ್ಲ ರಾಜರನ್ನೂ ಸುಹೃದಯರನ್ನೂ, ಯುಧಿಷ್ಠಿರ-ನಕುಲ-ಸಹದೇವ-ಭೀಮಸೇನ ಮತ್ತು ಪಾಂಡವನನ್ನೂ, ಅನ್ಯ ಬಂಧುಗಳನ್ನೂ, ಸಂಬಂಧಿಗಳನ್ನೂ, ಮಧ್ಯಸ್ಥರನ್ನೂ, ಸುಹೃದಯರನ್ನೂ ಆನಂದಿಸುತ್ತಾ - ಯುವಕ ಸೌಭದ್ರನು ಹೋಗುತ್ತಿದ್ದಾನೆ.

07038013a ನಾಸ್ಯ ಯುದ್ಧೇ ಸಮಂ ಮನ್ಯೇ ಕಂ ಚಿದನ್ಯಂ ಧನುರ್ಧರಂ।
07038013c ಇಚ್ಚನ್ ಹನ್ಯಾದಿಮಾಂ ಸೇನಾಂ ಕಿಮರ್ಥಮಪಿ ನೇಚ್ಚತಿ।।

ಯುದ್ಧದಲ್ಲಿ ಇವನ ಸಮನಾದ ಧನುರ್ಧರನು ಬೇರೆ ಯಾರೂ ಇಲ್ಲವೆಂದು ನನಗನ್ನಿಸುತ್ತಿದೆ. ಈ ಸೇನೆಗಳನ್ನು ನಾಶಗೊಳಿಸಲು ಇಚ್ಛಿಸಿದರೂ ಯಾವುದೋ ಕಾರಣಕ್ಕೆ ಇವನು ಹಾಗೆ ಮಾಡಲು ಬಯಸುತ್ತಿಲ್ಲ.”

07038014a ದ್ರೋಣಸ್ಯ ಪ್ರೀತಿಸಂಯುಕ್ತಂ ಶ್ರುತ್ವಾ ವಾಕ್ಯಂ ತವಾತ್ಮಜಃ।
07038014c ಆರ್ಜುನಿಂ ಪ್ರತಿ ಸಂಕ್ರುದ್ಧೋ ದ್ರೋಣಂ ದೃಷ್ಟ್ವಾ ಸ್ಮಯನ್ನಿವ।।
07038015a ಅಥ ದುರ್ಯೋಧನಃ ಕರ್ಣಮಬ್ರವೀದ್ಬಾಹ್ಲಿಕಂ ಕೃಪಂ।
07038015c ದುಃಶಾಸನಂ ಮದ್ರರಾಜಂ ತಾಂಸ್ತಾಂಶ್ಚಾನ್ಯಾನ್ಮಹಾರಥಾನ್।।

ದ್ರೋಣನ ಈ ಪ್ರೀತಿಸಂಯುಕ್ತ ಮಾತನ್ನು ಕೇಳಿ ನಿನ್ನ ಮಗ ದುರ್ಯೋಧನನು ಆರ್ಜುನಿಯ ಕುರಿತು ಕ್ರುದ್ಧನಾಗಿ, ದ್ರೋಣನನ್ನು ನೋಡಿ ನಕ್ಕು, ಕರ್ಣ-ಬಾಹ್ಲಿಕ-ಕೃಪ-ದುಃಶಾಸನ-ಮದ್ರರಾಜ ಮತ್ತು ಇತರ ಮಹಾರಥರಿಗೆ ಹೇಳಿದನು:

07038016a ಸರ್ವಮೂರ್ಧಾವಸಿಕ್ತಾನಾಮಾಚಾರ್ಯೋ ಬ್ರಹ್ಮವಿತ್ತಮಃ।
07038016c ಅರ್ಜುನಸ್ಯ ಸುತಂ ಮೂಢಂ ನಾಭಿಹಂತುಮಿಹೇಚ್ಚತಿ।।

“ಮೂರ್ಧಾಭಿಷಿಕ್ತರಾದ ಎಲ್ಲರಿಗೂ ಆಚಾರ್ಯರಾದ ಈ ಬ್ರಹ್ಮವಿತ್ತಮರು ಅರ್ಜುನನ ಈ ಮೂಢ ಮಗನನ್ನು ಕೊಲ್ಲಲು ಇಚ್ಛಿಸುತ್ತಿಲ್ಲ.

07038017a ನ ಹ್ಯಸ್ಯ ಸಮರೇ ಮುಚ್ಯೇದಂತಕೋಽಪ್ಯಾತತಾಯಿನಃ।
07038017c ಕಿಮಂಗ ಪುನರೇವಾನ್ಯೋ ಮರ್ತ್ಯಃ ಸತ್ಯಂ ಬ್ರವೀಮಿ ವಃ।।

ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಶಸ್ತ್ರಪಾಣಿಗಳಾದ ಇವರೊಂದಿಗೆ ಸಮರದಲ್ಲಿ ಅಂತಕನೂ ಬಿಡಿಸಿಕೊಳ್ಳಲಾರ. ಹೀಗಿರುವಾಗ ಅನ್ಯ ಮರ್ತ್ಯನು ಹೇಗೆ ಉಳಿದಾನು?

07038018a ಅರ್ಜುನಸ್ಯ ಸುತಂ ತ್ವೇಷ ಶಿಷ್ಯತ್ವಾದಭಿರಕ್ಷತಿ।
07038018c ಪುತ್ರಾಃ ಶಿಷ್ಯಾಶ್ಚ ದಯಿತಾಸ್ತದಪತ್ಯಂ ಚ ಧರ್ಮಿಣಾಂ।।

ಅರ್ಜುನನ ಈ ಮಗನನ್ನು ಶಿಷ್ಯತ್ವ ಭಾವದಿಂದ ರಕ್ಷಿಸುತ್ತಿದ್ದಾರೆ. ಧರ್ಮಿಗಳಿಗೆ ಪ್ರಿಯ ಶಿಷ್ಯರ ಮಕ್ಕಳು ತಮ್ಮದೇ ಮಕ್ಕಳಿದ್ದಂತೆ.

07038019a ಸಂರಕ್ಷ್ಯಮಾಣೋ ದ್ರೋಣೇನ ಮನ್ಯತೇ ವೀರ್ಯಮಾತ್ಮನಃ।
07038019c ಆತ್ಮಸಂಭಾವಿತೋ ಮೂಢಸ್ತಂ ಪ್ರಮಥ್ನೀತ ಮಾಚಿರಂ।।

ದ್ರೋಣರಿಂದ ಸಂರಕ್ಷಿತನಾದ ಇವನು ತನ್ನನ್ನೇ ವೀರನೆಂದು ತಿಳಿದುಕೊಂಡಿದ್ದಾನೆ. ಆತ್ಮಸಂಭಾವಿತನಾದ ಈ ಮೂಢನನ್ನು ಕೂಡಲೇ ಸಂಹರಿಸಿರಿ!”

07038020a ಏವಮುಕ್ತಾಸ್ತು ತೇ ರಾಜ್ಞಾ ಸಾತ್ವತೀಪುತ್ರಮಭ್ಯಯುಃ।
07038020c ಸಂರಬ್ಧಾಸ್ತಂ ಜಿಘಾಂಸಂತೋ ಭಾರದ್ವಾಜಸ್ಯ ಪಶ್ಯತಃ।।

ರಾಜನು ಹೀಗೆ ಹೇಳಲು ಭಾರದ್ವಾಜನು ನೋಡುತ್ತಿದ್ದಂತೆಯೇ ಸಾತ್ವತೀಪುತ್ರನನ್ನು ಸಂಹರಿಸಲು ಅವರು ಮುಂದಾದರು.

07038021a ದುಃಶಾಸನಸ್ತು ತಚ್ಚ್ರುತ್ವಾ ದುರ್ಯೋಧನವಚಸ್ತದಾ।
07038021c ಅಬ್ರವೀತ್ಕುರುಶಾರ್ದೂಲೋ ದುರ್ಯೋಧನಮಿದಂ ವಚಃ।।

ದುರ್ಯೋಧನನ ಮಾತನ್ನು ಕೇಳಿ ಕುರುಶಾರ್ದೂಲ ದುಃಶಾಸನನು ದುರ್ಯೋಧನನಿಗೆ ಹೀಗೆ ಹೇಳಿದನು:

07038022a ಅಹಮೇನಂ ಹನಿಷ್ಯಾಮಿ ಮಹಾರಾಜ ಬ್ರವೀಮಿ ತೇ।
07038022c ಮಿಷತಾಂ ಪಾಂಡುಪುತ್ರಾಣಾಂ ಪಾಂಚಾಲಾನಾಂ ಚ ಪಶ್ಯತಾಂ।
07038022e ಗ್ರಸಿಷ್ಯಾಮ್ಯದ್ಯ ಸೌಭದ್ರಂ ಯಥಾ ರಾಹುರ್ದಿವಾಕರಂ।।

“ಮಹಾರಾಜ! ನಿನಗೆ ಹೇಳುತ್ತಿದ್ದೇನೆ! ಪಾಂಡುಪುತ್ರರು ಮತ್ತು ಪಾಂಚಾಲರು ನೋಡುತ್ತಿದ್ದಂತೆಯೇ ನಾನು ಇವನನ್ನು ಕೊಲ್ಲುತ್ತಿದ್ದೇನೆ. ರಾಹುವು ದಿವಾಕರನನ್ನು ಹೇಗೋ ಹಾಗೆ ಇಂದು ನಾನು ಸೌಭದ್ರನನ್ನು ಹಿಡಿಯುತ್ತೇನೆ.”

07038023a ಉತ್ಕ್ರುಶ್ಯ ಚಾಬ್ರವೀದ್ವಾಕ್ಯಂ ಕುರುರಾಜಮಿದಂ ಪುನಃ।
07038023c ಶ್ರುತ್ವಾ ಕೃಷ್ಣೌ ಮಯಾ ಗ್ರಸ್ತಂ ಸೌಭದ್ರಮತಿಮಾನಿನೌ।
07038023e ಗಮಿಷ್ಯತಃ ಪ್ರೇತಲೋಕಂ ಜೀವಲೋಕಾನ್ನ ಸಂಶಯಃ।।

ಹೀಗೆ ಕೂಗಿ ಹೇಳಿ ಪುನಃ ಕುರುರಾಜನಿಗೆ ಇದನ್ನು ಹೇಳಿದನು: “ಸೌಭದ್ರನು ನನ್ನಿಂದ ಗ್ರಸ್ತನಾಗಿದ್ದುದನ್ನು ಕೇಳಿ ಅತಿಮಾನಿನಿಗಳಾದ ಕೃಷ್ಣರಿಬ್ಬರೂ ಜೀವಲೋಕದಿಂದ ಪ್ರೇತಲೋಕಕ್ಕೆ ಹೋಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.

07038024a ತೌ ಚ ಶ್ರುತ್ವಾ ಮೃತೌ ವ್ಯಕ್ತಂ ಪಾಂಡೋಃ ಕ್ಷೇತ್ರೋದ್ಭವಾಃ ಸುತಾಃ।
07038024c ಏಕಾಹ್ನಾ ಸಸುಹೃದ್ವರ್ಗಾಃ ಕ್ಲೈಬ್ಯಾದ್ಧಾಸ್ಯಂತಿ ಜೀವಿತಂ।।

ಅವರಿಬ್ಬರೂ ಮೃತರಾದರೆಂದು ಕೇಳಿ ಪಾಂಡುವಿನ ಕ್ಷೇತ್ರದಲ್ಲಿ ಹುಟ್ಟಿದ ಮಕ್ಕಳು ದೌರ್ಬಲ್ಯದ ಕಾರಣದಿಂದ ಸುಹೃದ್ವರ್ಗಗಳೊಂದಿಗೆ ಒಂದೇ ದಿನದಲ್ಲಿ ಜೀವಬಿಡುತ್ತಾರೆ.

07038025a ತಸ್ಮಾದಸ್ಮಿನ್ ಹತೇ ಶತ್ರೌ ಹತಾಃ ಸರ್ವೇಽಹಿತಾಸ್ತವ।
07038025c ಶಿವೇನ ಧ್ಯಾಹಿ ಮಾ ರಾಜನ್ನೇಷ ಹನ್ಮಿ ರಿಪುಂ ತವ।।

ಆದುದರಿಂದ ರಾಜನ್! ಇವರಿಬ್ಬರು ಹತರಾದರೆಂದರೆ ನಿನ್ನ ಎಲ್ಲ ಅಹಿತರೂ ಹತರಾದಂತೆ. ನನಗೆ ಮಂಗಳವನ್ನು ಕೋರು. ನಿನ್ನ ಈ ಶತ್ರುಗಳನ್ನು ನಾನು ಸಂಹರಿಸುತ್ತೇನೆ.”

07038026a ಏವಮುಕ್ತ್ವಾ ನದನ್ರಾಜನ್ಪುತ್ರೋ ದುಃಶಾಸನಸ್ತವ।
07038026c ಸೌಭದ್ರಮಭ್ಯಯಾತ್ಕ್ರುದ್ಧಃ ಶರವರ್ಷೈರವಾಕಿರನ್।।

ರಾಜನ್! ಹೀಗೆ ಹೇಳಿ ಗರ್ಜಿಸಿ ನಿನ್ನ ಮಗ ದುಃಶಾಸನನು ಕ್ರುದ್ಧನಾಗಿ ಸೌಭದ್ರನನ್ನು ಶರವರ್ಷಗಳಿಂದ ಮುಚ್ಚಿದನು.

07038027a ತಮಭಿಕ್ರುದ್ಧಮಾಯಾಂತಂ ತವ ಪುತ್ರಮರಿಂದಮಃ।
07038027c ಅಭಿಮನ್ಯುಃ ಶರೈಸ್ತೀಕ್ಷ್ಣೈಃ ಷಡ್ವಿಂಶತ್ಯಾ ಸಮರ್ಪಯತ್।।

ಕ್ರುದ್ಧನಾಗಿ ಮೇಲೆ ಬೀಳುತ್ತಿದ್ದ ನಿನ್ನ ಪುತ್ರನನ್ನು ಅರಿಂದಮ ಅಭಿಮನ್ಯುವು ಇಪ್ಪತ್ತಾರು ತೀಕ್ಷ್ಣ ಬಾಣಗಳಿಂದ ಹೊಡೆದನು.

07038028a ದುಃಶಾಸನಸ್ತು ಸಂಕ್ರುದ್ಧಃ ಪ್ರಭಿನ್ನ ಇವ ಕುಂಜರಃ।
07038028c ಅಯೋಧಯತ ಸೌಭದ್ರಮಭಿಮನ್ಯುಶ್ಚ ತಂ ರಣೇ।।

ದುಃಶಾಸನನಾದರೋ ಕುಂಭಸ್ಥಳವು ಒಡೆದ ಆನೆಯಂತೆ ಸಂಕ್ರುದ್ಧನಾಗಿ ರಣದಲ್ಲಿ ಸೌಭದ್ರ ಅಭಿಮನ್ಯುವಿನೊಡನೆ ಯುದ್ಧಮಾಡಿದನು.

07038029a ತೌ ಮಂಡಲಾನಿ ಚಿತ್ರಾಣಿ ರಥಾಭ್ಯಾಂ ಸವ್ಯದಕ್ಷಿಣಂ।
07038029c ಚರಮಾಣಾವಯುಧ್ಯೇತಾಂ ರಥಶಿಕ್ಷಾವಿಶಾರದೌ।।

ರಥಶಿಕ್ಷಾವಿಶಾರದರಾದ ಅವರಿಬ್ಬರೂ ವಿಚಿತ್ರ ರಥಗಳಲ್ಲಿ ಎಡ ಮತ್ತು ಬಲ ಮಂಡಲಗಳಲ್ಲಿ ತಿರುಗುತ್ತಾ ಯುದ್ಧಮಾಡುತ್ತಿದ್ದರು.

07038030a ಅಥ ಪಣವಮೃದಂಗದುಂದುಭೀನಾಂ ಕೃಕರಮಹಾನಕಭೇರಿಝರ್ಝರಾಣಾಂ।
07038030c ನಿನದಮತಿಭೃಶಂ ನರಾಃ ಪ್ರಚಕ್ರುರ್ ಲವಣಜಲೋದ್ಭವಸಿಂಹನಾದಮಿಶ್ರಂ।।

ಆಗ ಪಣವ, ಮೃದಂಗ, ದುಂಧುಭಿ, ಕೃಕರ, ಮಹಾನಕ ಭೇರಿಗಳನ್ನೂ ಝರ್ಝರಗಳನ್ನು ವಾದಕರು ಬಾರಿಸಿದರು. ಆ ನಿನಾದವು ಶಂಖಧ್ವನಿಗಳಿಂದಲೂ ವೀರರ ಸಿಂಹನಾದದಿಂದಲೂ ಕೂಡಿ ಮತ್ತಷ್ಟು ಭಯಂಕರವಾಗಿ ಕೇಳುತ್ತಿತ್ತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ದುಃಶಾಸನಯುದ್ಧೇ ಅಷ್ಟತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ದುಃಶಾಸನಯುದ್ಧ ಎನ್ನುವ ಮೂವತ್ತೆಂಟನೇ ಅಧ್ಯಾಯವು.