036 ಅಭಿಮನ್ಯುಪರಾಕ್ರಮಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಅಭಿಮನ್ಯುವಧ ಪರ್ವ

ಅಧ್ಯಾಯ 36

ಸಾರ

ಏಕಾಂಗಿಯಾಗಿ ಹಲವಾರು ಕೌರವ ಮಹಾರಥರೊಡನೆ ಯುದ್ಧಮಾಡುತ್ತಿದ್ದ ಅಭಿಮನ್ಯುವು ಅಶ್ಮಕರಾಜನನ್ನು ಸಂಹರಿಸಿ ಶಲ್ಯನನ್ನು ಮೂರ್ಛೆಗೊಳಿಸಿದುದು; ಕೌರವ ಸೇನೆಯ ಪಲಾಯನ (1-36).

07036001 ಸಂಜಯ ಉವಾಚ।
07036001a ತಾಂ ಪ್ರಭಗ್ನಾಂ ಚಮೂಂ ದೃಷ್ಟ್ವಾ ಸೌಭದ್ರೇಣಾಮಿತೌಜಸಾ।
07036001c ದುರ್ಯೋಧನೋ ಭೃಶಂ ಕ್ರುದ್ಧಃ ಸ್ವಯಂ ಸೌಭದ್ರಮಭ್ಯಯಾತ್।।

ಸಂಜಯನು ಹೇಳಿದನು: “ಅಮಿತೌಜಸ ಸೌಭದ್ರನಿಂದ ತನ್ನ ಸೇನೆಯು ಭಗ್ನವಾದುದನ್ನು ನೋಡಿ ಕ್ರುದ್ಧನಾದ ದುರ್ಯೋಧನನು ಸ್ವಯಂ ತಾನೇ ಸೌಭದ್ರನ ಮೇಲೆ ಆಕ್ರಮಣಿಸಿದನು.

07036002a ತತೋ ರಾಜಾನಮಾವೃತ್ತಂ ಸೌಭದ್ರಂ ಪ್ರತಿ ಸಂಯುಗೇ।
07036002c ದೃಷ್ಟ್ವಾ ದ್ರೋಣೋಽಬ್ರವೀದ್ಯೋಧಾನ್ಪರ್ಯಾಪ್ನುತ ನರಾಧಿಪಂ।।

ಆಗ ಸೌಭದ್ರನ್ನು ಎದುರಿಸಲು ಮುಂದಾಗುತ್ತಿರುವ ರಾಜನನ್ನು ನೋಡಿ ದ್ರೋಣನು ನರಾಧಿಪನನ್ನು ಸರ್ವಥಾ ರಕ್ಷಿಸಬೇಕೆಂದು ಯೋಧರಿಗೆ ಆದೇಶವನ್ನಿತ್ತನು.

07036003a ಪುರಾಭಿಮನ್ಯುರ್ಲಕ್ಷ್ಯಂ ನಃ ಪಶ್ಯತಾಂ ಹಂತಿ ವೀರ್ಯವಾನ್।
07036003c ತಮಾದ್ರವತ ಮಾ ಭೈಷ್ಟ ಕ್ಷಿಪ್ರಂ ರಕ್ಷತ ಕೌರವಂ।।

“ವೀರ್ಯವಾನ್ ಅಭಿಮನ್ಯುವು ನಾವು ನೋಡುತ್ತಿರುವಂತೆಯೇ ಮೊದಲು ಗುರಿಯಿಟ್ಟು ಅವನನ್ನು ಸಂಹರಿಸಿಬಿಡುತ್ತಾನೆ. ಆದುದರಿಂದ ಅವನ ಕಡೆ ಓಡಿ ಹೋಗಿ. ಹೆದರಬೇಡಿ. ಬೇಗನೇ ಕೌರವನನ್ನು ರಕ್ಷಿಸಿರಿ!”

07036004a ತತಃ ಕೃತಜ್ಞಾ ಬಲಿನಃ ಸುಹೃದೋ ಜಿತಕಾಶಿನಃ।
07036004c ತ್ರಾಸ್ಯಮಾನಾ ಭಯಾದ್ವೀರಂ ಪರಿವವ್ರುಸ್ತವಾತ್ಮಜಂ।।

ಆಗ ಕೃತಜ್ಞ ಬಲಶಾಲಿ ಸುಹೃದ ಜಯಶೀಲ ಯೋಧರು ಭಯದಿಂದ ಬಿಡುಗಡೆಗೊಳಿಸಲು ನಿನ್ನ ಮಗ ವೀರನನ್ನು ಸುತ್ತುವರೆದರು.

07036005a ದ್ರೋಣೋ ದ್ರೌಣಿಃ ಕೃಪಃ ಕರ್ಣಃ ಕೃತವರ್ಮಾ ಚ ಸೌಬಲಃ।
07036005c ಬೃಹದ್ಬಲೋ ಮದ್ರರಾಜೋ ಭೂರಿರ್ಭೂರಿಶ್ರವಾಃ ಶಲಃ।।
07036006a ಪೌರವೋ ವೃಷಸೇನಶ್ಚ ವಿಸೃಜಂತಃ ಶಿತಾಂ ಶರಾನ್।
07036006c ಸೌಭದ್ರಂ ಶರವರ್ಷೇಣ ಮಹತಾ ಸಮವಾಕಿರನ್।।

ದ್ರೋಣ, ದ್ರೌಣಿ, ಕೃಪ, ಕರ್ಣ, ಕೃತವರ್ಮ, ಸೌಬಲ, ಬೃಹದ್ಬಲ, ಮದ್ರರಾಜ, ಭೂರಿಶ್ರವ, ಶಲ, ಪೌರವ, ವೃಷಸೇನರು ನಿಶಿತ ಶರಗಳನ್ನು ಪ್ರಯೋಗಿಸುತ್ತಾ ಸೌಭದ್ರನನ್ನು ಮಹಾ ಶರವರ್ಷದಿಂದ ಮುಚ್ಚಿದರು.

07036007a ಸಮ್ಮೋಹಯಿತ್ವಾ ತಮಥ ದುರ್ಯೋಧನಮಮೋಚಯನ್।
07036007c ಆಸ್ಯಾದ್ ಗ್ರಾಸಮಿವಾಕ್ಷಿಪ್ತಂ ಮಮೃಷೇ ನಾರ್ಜುನಾತ್ಮಜಃ।।

ಹಾಗೆ ಅವನನ್ನು ಸಮ್ಮೋಹಗೊಳಿಸಿ ದುರ್ಯೋಧನನನ್ನು ವಿಮೋಚನಗೊಳಿಸಿದರು. ಹೀಗೆ ಕೈಗೆ ಸಿಕ್ಕಿದುದನ್ನು ಕೆಳಗೆ ಬೀಳಿಸಿದುದನ್ನು ಅರ್ಜುನನ ಮಗನು ಸಹಿಸಿಕೊಳ್ಳಲಿಲ್ಲ.

07036008a ತಾಂ ಶರೌಘೇಣ ಮಹತಾ ಸಾಶ್ವಸೂತಾನ್ಮಹಾರಥಾನ್।
07036008c ವಿಮುಖೀಕೃತ್ಯ ಸೌಭದ್ರಃ ಸಿಂಹನಾದಮಥಾನದತ್।।

ಸೌಭದ್ರನು ಮಹಾ ಶರಜಾಲದಿಂದ ಆ ಮಹಾರಥರನ್ನು, ಅಶ್ವ-ಸೂತರೊಂದಿಗೆ ವಿಮುಖರನ್ನಾಗಿ ಮಾಡಿ ಸಿಂಹನಾದಗೈದನು.

07036009a ತಸ್ಯ ನಾದಂ ತತಃ ಶ್ರುತ್ವಾ ಸಿಂಹಸ್ಯೇವಾಮಿಷೈಷಿಣಃ।
07036009c ನಾಮೃಷ್ಯಂತ ಸುಸಂರಬ್ಧಾಃ ಪುನರ್ದ್ರೋಣಮುಖಾ ರಥಾಃ।।

ಮಾಂಸವನ್ನು ಬಯಸಿದ ಸಿಂಹದಂತಿದ್ದ ಅವನ ಆ ಗರ್ಜನೆಯನ್ನು ಕೇಳಿ ದ್ರೋಣಮುಖರಾದ ರಥರು ಸಂರಬ್ಧರಾಗಿ ಸಹಿಸಿಕೊಳ್ಳಲಿಲ್ಲ.

07036010a ತ ಏನಂ ಕೋಷ್ಠಕೀಕೃತ್ಯ ರಥವಂಶೇನ ಮಾರಿಷ।
07036010c ವ್ಯಸೃಜನ್ನಿಷುಜಾಲಾನಿ ನಾನಾಲಿಂಗಾನಿ ಸಂಘಶಃ।।

ಮಾರಿಷ! ರಥಗಳ ಸಮೂಹದಿಂದ ಅವನನ್ನು ಇಕ್ಕಟ್ಟಾದ ಜಾಗದಲ್ಲಿರುವಂತೆ ಮಾಡಿ ಅವನ ಮೇಲೆ ಒಟ್ಟಾಗಿ ನಾನಾ ಚಿಹ್ನೆಗಳ ಬಾಣಗಳ ಜಾಲಗಳನ್ನು ಪ್ರಯೋಗಿಸಿದರು.

07036011a ತಾನ್ಯಂತರಿಕ್ಷೇ ಚಿಚ್ಚೇದ ಪೌತ್ರಸ್ತವ ಶಿತೈಃ ಶರೈಃ।
07036011c ತಾಂಶ್ಚೈವ ಪ್ರತಿವಿವ್ಯಾಧ ತದದ್ಭುತಮಿವಾಭವತ್।।

ಅವುಗಳನ್ನು ಅಂತರಿಕ್ಷದಲ್ಲಿಯೇ ನಿನ್ನ ಮೊಮ್ಮಗನು ನಿಶಿತ ಶರಗಳಿಂದ ತುಂಡರಿಸಿದನು ಮತ್ತು ಅಲ್ಲದೇ ಅವರನ್ನೂ ತಿರುಗಿ ಹೊಡೆದನು. ಅದೊಂದು ಅದ್ಭುತವಾಗಿತ್ತು.

07036012a ತತಸ್ತೇ ಕೋಪಿತಾಸ್ತೇನ ಶರೈರಾಶೀವಿಷೋಪಮೈಃ।
07036012c ಪರಿವವ್ರುರ್ಜಿಘಾಂಸಂತಃ ಸೌಭದ್ರಮಪಲಾಯಿನಂ।।

ಆಗ ಕುಪಿತರಾದ ಸರ್ಪವಿಷದಂತಿರುವ ಬಾಣಗಳಿಂದ ಅವನನ್ನು ಕೊಲ್ಲಲು ಬಯಸಿ ಪಲಾಯನ ಮಾಡದೇ ಇದ್ದ ಸೌಭದ್ರನನ್ನು ಸುತ್ತುವರೆದರು.

07036013a ಸಮುದ್ರಮಿವ ಪರ್ಯಸ್ತಂ ತ್ವದೀಯಂ ತದ್ಬಲಾರ್ಣವಂ।
07036013c ಅಭಿಮನ್ಯುರ್ದಧಾರೈಕೋ ವೇಲೇವ ಮಕರಾಲಯಂ।।

ಎಲ್ಲಕಡೆಗಳಲ್ಲೂ ವ್ಯಾಪ್ತವಾಗಿರುವ ಸಮುದ್ರವನ್ನು ತೀರಪ್ರದೇಶವು ತಡೆಹಿಡಿದಿರುವಂತೆ ಅಭಿಮನ್ಯು ಒಬ್ಬನೇ ಸಮುದ್ರದಂತಿದ್ದ ನಿನ್ನ ಸೇನೆಯನ್ನು ತಡೆಹಿಡಿದನು.

07036014a ಶೂರಾಣಾಂ ಯುಧ್ಯಮಾನಾನಾಂ ನಿಘ್ನತಾಮಿತರೇತರಂ।
07036014c ಅಭಿಮನ್ಯೋಃ ಪರೇಷಾಂ ಚ ನಾಸೀತ್ಕಶ್ಚಿತ್ಪರಾಙ್ಮುಖಃ।।

ಇತರೇತರರನ್ನು ಹೊಡೆಯುತ್ತಾ ಯುದ್ಧಮಾಡುತ್ತಿದ್ದ ಶೂರ ಅಭಿಮನ್ಯು ಮತ್ತು ಇತರರಲ್ಲಿ ಯಾರೂ ಪರಾಙ್ಮುಖರಾಗಲಿಲ್ಲ.

07036015a ತಸ್ಮಿಂಸ್ತು ಘೋರೇ ಸಂಗ್ರಾಮೇ ವರ್ತಮಾನೇ ಭಯಂಕರೇ।
07036015c ದುಃಸಹೋ ನವಭಿರ್ಬಾಣೈರಭಿಮನ್ಯುಮವಿಧ್ಯತ।।
07036016a ದುಃಶಾಸನೋ ದ್ವಾದಶಭಿಃ ಕೃಪಃ ಶಾರದ್ವತಸ್ತ್ರಿಭಿಃ।
07036016c ದ್ರೋಣಸ್ತು ಸಪ್ತದಶಭಿಃ ಶರೈರಾಶೀವಿಷೋಪಮೈಃ।।
07036017a ವಿವಿಂಶತಿಸ್ತು ವಿಂಶತ್ಯಾ ಕೃತವರ್ಮಾ ಚ ಸಪ್ತಭಿಃ।
07036017c ಬೃಹದ್ಬಲಸ್ತಥಾಷ್ಟಾಭಿರಶ್ವತ್ಥಾಮಾ ಚ ಸಪ್ತಭಿಃ।।
07036018a ಭೂರಿಶ್ರವಾಸ್ತ್ರಿಭಿರ್ಬಾಣೈರ್ಮದ್ರೇಶಃ ಷಡ್ಭಿರಾಶುಗೈಃ।
07036018c ದ್ವಾಭ್ಯಾಂ ಶರಾಭ್ಯಾಂ ಶಕುನಿಸ್ತ್ರಿಭಿರ್ದುರ್ಯೋಧನೋ ನೃಪಃ।।

ಭಯಂಕರವಾಗಿ ನಡೆಯುತ್ತಿರುವ ಆ ಘೋರ ಸಂಗ್ರಾಮದಲ್ಲಿ ದುಃಸಹನು ಒಂಭತ್ತು ಬಾಣಗಳಿಂದ, ದುಃಶಾಸನನು ಹನ್ನೆರಡು, ಕೃಪ ಶಾರದ್ವತನು ಮೂರು, ದ್ರೋಣನು ಸರ್ಪಸಮಾನ ಏಳು ಶರಗಳಿಂದ, ವಿವಂಶತಿಯು ಇಪ್ಪತ್ತು, ಕೃತವರ್ಮನು ಏಳು, ಭೂರಿಶ್ರವನು ಏಳು ಬಾಣಗಳಿಂದ, ಮದ್ರೇಶನು ಆರು ಆಶುಗಗಳಿಂದ, ಮತ್ತು ಶಕುನಿ-ನೃಪ ದುರ್ಯೋಧನರು ಎರೆಡೆರಡು ಶರಗಳಿಂದ ಅಭಿಮನ್ಯುವನ್ನು ಹೊಡೆದರು.

07036019a ಸ ತು ತಾನ್ಪ್ರತಿವಿವ್ಯಾಧ ತ್ರಿಭಿಸ್ತ್ರಿಭಿರಜಿಹ್ಮಗೈಃ।
07036019c ನೃತ್ಯನ್ನಿವ ಮಹಾರಾಜ ಚಾಪಹಸ್ತಃ ಪ್ರತಾಪವಾನ್।।

ಮಹಾರಾಜ! ಚಾಪವನ್ನು ಹಿಡಿದು ನರ್ತಿಸುತ್ತಿರುವನೋ ಎನ್ನುವಂತೆ ಆ ಪ್ರತಾಪವಂತನು ಅವರು ಒಬ್ಬೊಬ್ಬರನ್ನೂ ಮೂರು ಮೂರು ಜಿಹ್ಮಗಗಳಿಂದ ತಿರುಗಿ ಹೊಡೆದನು.

07036020a ತತೋಽಭಿಮನ್ಯುಃ ಸಂಕ್ರುದ್ಧಸ್ತಾಪ್ಯಮಾನಸ್ತವಾತ್ಮಜೈಃ।
07036020c ವಿದರ್ಶಯನ್ವೈ ಸುಮಹಚ್ಚಿಕ್ಷೌರಸಕೃತಂ ಬಲಂ।।

ಆಗ ಕಾಡುತ್ತಿದ್ದ ನಿನ್ನ ಮಕ್ಕಳಿಂದ ಕ್ರುದ್ಧನಾಗಿ ತನ್ನ ಸ್ವಾಭಾವಿಕವಾದ ಮಹಾ ಬಲವನ್ನು ಪ್ರದರ್ಶಿಸತೊಡಗಿದನು.

07036021a ಗರುಡಾನಿಲರಂಹೋಭಿರ್ಯಂತುರ್ವಾಕ್ಯಕರೈರ್ಹಯೈಃ।
07036021c ದಾಂತೈರಶ್ಮಕದಾಯಾದಂ ತ್ವರಮಾಣೋಽಭ್ಯಹಾರಯತ್।
07036021e ವಿವ್ಯಾಧ ಚೈನಂ ದಶಭಿರ್ಬಾಣೈಸ್ತಿಷ್ಠೇತಿ ಚಾಬ್ರವೀತ್।।

ಆಗ ಗರುಡ ಮತ್ತು ವಾಯುವೇಗಗಳಿಗೆ ಸಮಾನ ವೇಗವುಳ್ಳ ಸುಶಿಕ್ಷಿತ ಕುದುರೆಗಳಿಂದ ಎಳೆಯಲ್ಪಟ್ಟ ರಥದಲ್ಲಿ ಕುಳಿತು ಅಶ್ಮಕನ ಮಗನು ತ್ವರೆಮಾಡಿ ಆಕ್ರಮಣಿಸಿ ಹತ್ತು ಬಾಣಗಳಿಂದ ಹೊಡೆದು “ನಿಲ್ಲು! ನಿಲ್ಲು!” ಎಂದು ಕೂಗಿದನು.

07036022a ತಸ್ಯಾಭಿಮನ್ಯುರ್ದಶಭಿರ್ಬಾಣೈಃ ಸೂತಂ ಹಯಾನ್ಧ್ವಜಂ।
07036022c ಬಾಹೂ ಧನುಃ ಶಿರಶ್ಚೋರ್ವ್ಯಾಂ ಸ್ಮಯಮಾನೋಽಭ್ಯಪಾತಯತ್।।

ಅಭಿಮನ್ಯುವು ನಸುನಗುತ್ತಾ ಹತ್ತು ಬಾಣಗಳಿಂದ ಅವನ ಸೂತನನ್ನೂ, ಧ್ವಜವನ್ನೂ, ತೋಳುಗಳನ್ನೂ, ಧನುಸ್ಸನ್ನೂ, ತಲೆ-ತೊಡೆಗಳನ್ನೂ ಕತ್ತರಿಸಿ ಬೀಳಿಸಿದನು.

07036023a ತತಸ್ತಸ್ಮಿನ್ ಹತೇ ವೀರೇ ಸೌಭದ್ರೇಣಾಶ್ಮಕೇಶ್ವರೇ।
07036023c ಸಂಚಚಾಲ ಬಲಂ ಸರ್ವಂ ಪಲಾಯನಪರಾಯಣಂ।।

ಹಾಗೆ ವೀರ ಆಶ್ಮಕೇಶ್ವರನು ಸೌಭದ್ರನಿಂದ ಹತನಾಗಲು ಸರ್ವ ಸೇನೆಗಳೂ ಪಲಾಯನಪರರಾದರು.

07036024a ತತಃ ಕರ್ಣಃ ಕೃಪೋ ದ್ರೋಣೋ ದ್ರೌಣಿರ್ಗಾಂಧಾರರಾಟ್ಶಲಃ।
07036024c ಶಲ್ಯೋ ಭೂರಿಶ್ರವಾಃ ಕ್ರಾಥಃ ಸೋಮದತ್ತೋ ವಿವಿಂಶತಿಃ।।
07036025a ವೃಷಸೇನಃ ಸುಷೇಣಶ್ಚ ಕುಂಡಭೇದೀ ಪ್ರತರ್ದನಃ।
07036025c ವೃಂದಾರಕೋ ಲಲಿತ್ಥಶ್ಚ ಪ್ರಬಾಹುರ್ದೀರ್ಘಲೋಚನಃ।
07036025e ದುರ್ಯೋಧನಶ್ಚ ಸಂಕ್ರುದ್ಧಃ ಶರವರ್ಷೈರವಾಕಿರನ್।।

ಆಗ ಕರ್ಣ, ಕೃಪ, ದ್ರೋಣ, ದ್ರೌಣಿ, ಗಾಂಧಾರರಾಜ, ಶಲ, ಶಲ್ಯ, ಭೂರಿಶ್ರವ, ಕ್ರಾಥ, ಸೋಮದತ್ತ, ವಿವಿಂಶತಿ, ವೃಷಸೇನ, ಸುಷೇಣ, ಕುಂಡಭೇದಿ, ಪ್ರತರ್ದನ, ವೃಂದಾರಕ, ಲಲಿತ್ಥ, ಪ್ರಬಾಹು, ದೀರ್ಘಲೋಚನ ಮತ್ತು ದುರ್ಯೋಧನರು ಸಂಕ್ರುದ್ಧರಾಗಿ ಅವನನ್ನು ಶರವರ್ಷಗಳಿಂದ ಮುಚ್ಚಿದರು.

07036026a ಸೋಽತಿಕ್ರುದ್ಧೋ ಮಹೇಷ್ವಾಸೈರಭಿಮನ್ಯುರಜಿಹ್ಮಗೈಃ।
07036026c ಶರಮಾದತ್ತ ಕರ್ಣಾಯ ಪರಕಾಯಾವಭೇದನಂ।।

ಆ ಮಹೇಷ್ವಾಸರಿಂದ ಅತಿ ಕ್ರುದ್ಧನಾದ ಅಭಿಮನ್ಯುವು ಕವಚ-ದೇಹಗಳೆರಡನ್ನೂ ಭೇದಿಸಬಲ್ಲ ಜಿಹ್ಮಗ ಶರವನ್ನು ತೆಗೆದುಕೊಂಡು ಕರ್ಣನ ಮೇಲೆ ಪ್ರಯೋಗಿಸಿದನು.

07036027a ತಸ್ಯ ಭಿತ್ತ್ವಾ ತನುತ್ರಾಣಂ ದೇಹಂ ನಿರ್ಭಿದ್ಯ ಚಾಶುಗಃ।
07036027c ಪ್ರಾವಿಶದ್ಧರಣೀಂ ರಾಜನ್ವಲ್ಮೀಕಮಿವ ಪನ್ನಗಃ।।

ರಾಜನ್! ಅದು ಅವನ ಕವಚವನ್ನು ಒಡೆದು ದೇಹವನ್ನು ಭೇದಿಸಿ ಹಾವು ಬಿಲದೊಳಗೆ ಹೊಗುವಂತೆ ನೆಲವನ್ನು ಹೊಕ್ಕಿತು.

07036028a ಸ ತೇನಾತಿಪ್ರಹಾರೇಣ ವ್ಯಥಿತೋ ವಿಹ್ವಲನ್ನಿವ।
07036028c ಸಂಚಚಾಲ ರಣೇ ಕರ್ಣಃ ಕ್ಷಿತಿಕಂಪೇ ಯಥಾಚಲಃ।।

ಅದರ ಅತಿ ಪ್ರಹಾರದಿಂದ ವ್ಯಥಿತನಾದ ಕರ್ಣನು ವಿಹ್ವಲನಾಗಿ ಭೂಕಂಪವಾದಾಗ ಪರ್ವತಗಳು ಹೇಗೆ ಅಲ್ಲಾಡುವವೋ ಹಾಗೆ ತೂಕಾಡಿದನು.

07036029a ಅಥಾನ್ಯೈರ್ನಿಶಿತೈರ್ಬಾಣೈಃ ಸುಷೇಣಂ ದೀರ್ಘಲೋಚನಂ।
07036029c ಕುಂಡಭೇದಿಂ ಚ ಸಂಕ್ರುದ್ಧಸ್ತ್ರಿಭಿಸ್ತ್ರೀನವಧೀದ್ಬಲೀ।।

ಆಗ ಬಲಿ ಅಭಿಮನ್ಯುವು ಸಂಕ್ರುದ್ಧನಾಗಿ ಮೂರು ಮೂರು ನಿಶಿತ ಬಾಣಗಳಿಂದ ಸುಷೇಣ, ದೀರ್ಘಲೋಚನ, ಮತ್ತು ಕುಂಡಭೇದಿಯರನ್ನು ಹೊಡೆದನು.

07036030a ಕರ್ಣಸ್ತಂ ಪಂಚವಿಂಶತ್ಯಾ ನಾರಾಚಾನಾಂ ಸಮರ್ಪಯತ್।
07036030c ಅಶ್ವತ್ಥಾಮಾ ಚ ವಿಂಶತ್ಯಾ ಕೃತವರ್ಮಾ ಚ ಸಪ್ತಭಿಃ।।

ಕರ್ಣನು ಇಪ್ಪತ್ತೈದು ನಾರಾಚಗಳನ್ನು, ಅಶ್ವತ್ಥಾಮನು ಇಪ್ಪತ್ತು ಮತ್ತು ಕೃತವರ್ಮನು ಏಳನ್ನು ಅವನ ಮೇಲೆ ಪ್ರಯೋಗಿಸಿದರು.

07036031a ಸ ಶರಾರ್ದಿತಸರ್ವಾಂಗಃ ಕ್ರುದ್ಧಃ ಶಕ್ರಾತ್ಮಜಾತ್ಮಜಃ।
07036031c ವಿಚರನ್ ದೃಶ್ಯತೇ ಸೈನ್ಯೇ ಪಾಶಹಸ್ತ ಇವಾಂತಕಃ।।

ಎಲ್ಲ ಅಂಗಗಳಲ್ಲಿಯೂ ಗಾಯಗೊಂಡು ಕ್ರುದ್ಧನಾದ ಶಕ್ರನ ಮಗನ ಮಗನು ಹೀಗೆ ಸೈನ್ಯದಲ್ಲಿ ಸಂಚರಿಸುತ್ತಿರುವಾಗ ಪಾಶವನ್ನು ಹಿಡಿದ ಯಮನಂತೆ ಕಂಡುಬಂದನು.

07036032a ಶಲ್ಯಂ ಚ ಬಾಣವರ್ಷೇಣ ಸಮೀಪಸ್ಥಮವಾಕಿರತ್।
07036032c ಉದಕ್ರೋಶನ್ಮಹಾಬಾಹುಸ್ತವ ಸೈನ್ಯಾನಿ ಭೀಷಯನ್।।

ಸಮೀಪದಲ್ಲಿಯೇ ಇದ್ದ ಶಲ್ಯನನ್ನು ಬಾಣದ ಮಳೆಯಿಂದ ಮುಚ್ಚಿ ಆ ಮಹಾಬಾಹುವು ಸೇನೆಗಳನ್ನು ಬೆದರಿಸುವಂತೆ ಜೋರಾಗಿ ಗರ್ಜಿಸಿದನು.

07036033a ತತಃ ಸ ವಿದ್ಧೋಽಸ್ತ್ರವಿದಾ ಮರ್ಮಭಿದ್ಭಿರಜಿಹ್ಮಗೈಃ।
07036033c ಶಲ್ಯೋ ರಾಜನ್ರಥೋಪಸ್ಥೇ ನಿಷಸಾದ ಮುಮೋಹ ಚ।।

ರಾಜನ್! ಆ ಅಸ್ತ್ರವಿದನ ಜಿಹ್ಮಗಗಳಿಂದ ಪೆಟ್ಟುತಿಂದ ಶಲ್ಯನು ರಥದಲ್ಲಿ ಸರಿದು ಕುಳಿತುಕೊಂಡನು ಮತ್ತು ಮೂರ್ಛಿತನಾದನು.

07036034a ತಂ ಹಿ ವಿದ್ಧಂ ತಥಾ ದೃಷ್ಟ್ವಾ ಸೌಭದ್ರೇಣ ಯಶಸ್ವಿನಾ।
07036034c ಸಂಪ್ರಾದ್ರವಚ್ಚಮೂಃ ಸರ್ವಾ ಭಾರದ್ವಾಜಸ್ಯ ಪಶ್ಯತಃ।।

ಯಶಸ್ವಿ ಸೌಭದ್ರನಿಂದ ಅವನೂ ಕೂಡ ಮೂರ್ಛಿತನಾದುದನ್ನು ಕಂಡು ಸೇನೆಗಳೆಲ್ಲವೂ ಭಾರದ್ವಾಜನು ನೋಡುತ್ತಿದ್ದಂತೆಯೇ ಪಲಾಯನ ಮಾಡತೊಡಗಿದವು.

07036035a ಪ್ರೇಕ್ಷಂತಸ್ತಂ ಮಹಾಬಾಹುಂ ರುಕ್ಮಪುಂಖೈಃ ಸಮಾವೃತಂ।
07036035c ತ್ವದೀಯಾಶ್ಚ ಪಲಾಯಂತೇ ಮೃಗಾಃ ಸಿಂಹಾರ್ದಿತಾ ಇವ।।

ರುಕ್ಮಪುಂಖಗಳಿಂದ ಸಮಾವೃತನಾಗಿದ್ದ ಆ ಮಹಾಬಾಹುವನ್ನು ನೋಡಿ ನಿನ್ನವರು ಸಿಂಹಕ್ಕೆ ಬೆದರಿದ ಜಿಂಕೆಗಳಂತೆ ಪಲಾಯನ ಮಾಡಿದರು.

07036036a ಸ ತು ರಣಯಶಸಾಭಿಪೂಜ್ಯಮಾನಃ ಪಿತೃಸುರಚಾರಣಸಿದ್ಧಯಕ್ಷಸಂಘೈಃ।
07036036c ಅವನಿತಲಗತೈಶ್ಚ ಭೂತಸಂಘೈರ್ ಅತಿವಿಬಭೌ ಹುತಭುಗ್ಯಥಾಜ್ಯಸಿಕ್ತಃ।।

ರಣಾಂಗಣದಲ್ಲಿ ಗಳಿಸಿದ ಯಶಸ್ಸಿನಿಂದಾಗಿ ಪಿತೃ-ಸುರ-ಚಾರಣ-ಸಿದ್ಧ-ಯಕ್ಷಗಣಗಳಿಂದ ಮತ್ತು ಭೂಮಿಯ ಮೇಲಿನ ಎಲ್ಲ ಭೂತಗಳಿಂದ ಸಂಪೂಜಿತನಾದ ಅಭಿಮನ್ಯುವು ಆಜ್ಯಧಾರೆಗಳಿಂದ ತೋಯ್ದ ಯಜ್ಞೇಶ್ವರನಂತೆ ಅತಿಯಾಗಿ ಪ್ರಕಾಶಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ಅಭಿಮನ್ಯುಪರಾಕ್ರಮೇ ಷಡ್ ತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ಅಭಿಮನ್ಯುಪರಾಕ್ರಮ ಎನ್ನುವ ಮೂವತ್ತಾರನೇ ಅಧ್ಯಾಯವು.