033 ಚಕ್ರವ್ಯೂಹನಿರ್ಮಾಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಅಭಿಮನ್ಯುವಧ ಪರ್ವ

ಅಧ್ಯಾಯ 33

ಸಾರ

ಅಭಿಮನ್ಯುವಿನ ಗುಣಗಳ ವರ್ಣನೆ (1-10). ಚಕ್ರವ್ಯೂಹ ನಿರ್ಮಾಣ (11-20).

07033001 ಸಂಜಯ ಉವಾಚ।
07033001a ಸಮರೇಽತ್ಯುಗ್ರಕರ್ಮಾಣಃ ಕರ್ಮಭಿರ್ವ್ಯಂಜಿತಶ್ರಮಾಃ।
07033001c ಸಕೃಷ್ಣಾಃ ಪಾಂಡವಾಃ ಪಂಚ ದೇವೈರಪಿ ದುರಾಸದಾಃ।।

ಸಂಜಯನು ಹೇಳಿದನು: “ಸಮರದಲ್ಲಿ ಉಗ್ರಕರ್ಮಿಗಳಾದ, ಶ್ರಮಿಸಿ ಕರ್ಮಗಳನ್ನು ಮಾಡಿತೋರಿಸುವ ಐವರು ಪಾಂಡವರು ಕೃಷ್ಣನನ್ನೂ ಸೇರಿ, ದೇವತೆಗಳಿಗೂ ಸೋಲಿಸಲು ಅಸಾಧ್ಯರು.

07033002a ಸತ್ತ್ವಕರ್ಮಾನ್ವಯೈರ್ಬುದ್ಧ್ಯಾ ಪ್ರಕೃತ್ಯಾ ಯಶಸಾ ಶ್ರಿಯಾ।
07033002c ನೈವ ಭೂತೋ ನ ಭವಿತಾ ಕೃಷ್ಣತುಲ್ಯಗುಣಃ ಪುಮಾನ್।।

ಸತ್ತ್ವಗುಣ, ಸತ್ಕರ್ಮ, ವಂಶ, ಬುದ್ಧಿ, ಕೀರ್ತಿ, ಯಶಸ್ಸು ಮತ್ತು ಸಂಪತ್ತು ಇವುಗಳಲ್ಲಿ ಕೃಷ್ಣನಿಗೆ ಸಮನಾದ ಪುರುಷನು ಹಿಂದೆ ಎಂದೂ ಇರಲಿಲ್ಲ. ಮುಂದೆ ಎಂದೂ ಇರಲಾರ.

07033003a ಸತ್ಯಧರ್ಮಪರೋ ದಾತಾ ವಿಪ್ರಪೂಜಾದಿಭಿರ್ಗುಣೈಃ।
07033003c ಸದೈವ ತ್ರಿದಿವಂ ಪ್ರಾಪ್ತೋ ರಾಜಾ ಕಿಲ ಯುಧಿಷ್ಠಿರಃ।।

ಸತ್ಯಧರ್ಮಪರಾಯಣನೂ ಜಿತೇಂದ್ರಿಯನೂ ಆದ ರಾಜಾ ಯುಧಿಷ್ಠಿರನು ಬ್ರಾಹ್ಮಣ ಸತ್ಕಾರವೇ ಮೊದಲಾದ ಸದ್ಗುಣಗಳಿಂದ ಈಗಾಗಲೆ ಸ್ವರ್ಗವನ್ನು ಪಡೆದುಕೊಂಡವನಾಗಿದ್ದಾನೆ.

07033004a ಯುಗಾಂತೇ ಚಾಂತಕೋ ರಾಜನ್ಜಾಮದಗ್ನ್ಯಶ್ಚ ವೀರ್ಯವಾನ್।
07033004c ರಣಸ್ಥೋ ಭೀಮಸೇನಶ್ಚ ಕಥ್ಯಂತೇ ಸದೃಶಾಸ್ತ್ರಯಃ।।

ರಾಜನ್! ಯುಂಗಾಂತದಲ್ಲಿ ಯಮ, ವೀರ್ಯವಾನ್ ಜಾಮದಗ್ನಿ ಮತ್ತು ರಣದಲ್ಲಿರುವ ಭೀಮಸೇನ ಈ ಮೂವರೂ ಒಂದೇ ಸಮರೆಂದು ಹೇಳುತ್ತಾರೆ.

07033005a ಪ್ರತಿಜ್ಞಾಕರ್ಮದಕ್ಷಸ್ಯ ರಣೇ ಗಾಂಡೀವಧನ್ವನಃ।
07033005c ಉಪಮಾಂ ನಾಧಿಗಚ್ಚಾಮಿ ಪಾರ್ಥಸ್ಯ ಸದೃಶೀಂ ಕ್ಷಿತೌ।।

ರಣದಲ್ಲಿ ಪ್ರತಿಜ್ಞಾಪೂರ್ವಕವಾಗಿ ಕರ್ಮಗಳನ್ನು ಮಾಡಲು ದಕ್ಷನಾದ ಗಾಂಡೀವ ಧನ್ವಿ ಪಾರ್ಥನಿಗೆ ಸದೃಶ ಉಪಮೆಯು ನನಗೆ ಪ್ರಪಂಚದಲ್ಲಿ ಯಾರೂ ಸಿಕ್ಕಿರುವುದಿಲ್ಲ.

07033006a ಗುರುವಾತ್ಸಲ್ಯಮತ್ಯಂತಂ ನೈಭೃತ್ಯಂ ವಿನಯೋ ದಮಃ।
07033006c ನಕುಲೇಽಪ್ರಾತಿರೂಪ್ಯಂ ಚ ಶೌರ್ಯಂ ಚ ನಿಯತಾನಿ ಷಟ್।।

ಅತ್ಯಂತ ಗುರುವಾತ್ಸಲ್ಯ, ಮಂತ್ರಾಲೋಚನೆಯನ್ನು ರಹಸ್ಯವಾಗಿಟ್ಟುಕೊಳ್ಳುವುದು, ವಿನಯ, ಇಂದ್ರಿಯ ಸಂಯಮ, ಅಪ್ರತಿಮ ರೂಪ-ಶೌರ್ಯ ಮತ್ತು ಸಂಯಮ ಈ ಆರು ಗುಣಗಳು ನಕುಲನಲ್ಲಿವೆ.

07033007a ಶ್ರುತಗಾಂಭೀರ್ಯಮಾಧುರ್ಯಸತ್ತ್ವವೀರ್ಯಪರಾಕ್ರಮೈಃ।
07033007c ಸದೃಶೋ ದೇವಯೋರ್ವೀರಃ ಸಹದೇವಃ ಕಿಲಾಶ್ವಿನೋಃ।।

ಪಾಂಡಿತ್ಯ, ಗಾಂಭೀರ್ಯ, ಮಾಧುರ್ಯ, ಸತ್ತ್ವ, ವೀರ-ಪರಾಕ್ರಮಗಳಲ್ಲಿ ವೀರ ಸಹದೇವನು ದೇವ ಅಶ್ವಿನಿಯರ ಸದೃಶ.

07033008a ಯೇ ಚ ಕೃಷ್ಣೇ ಗುಣಾಃ ಸ್ಫೀತಾಃ ಪಾಂಡವೇಷು ಚ ಯೇ ಗುಣಾಃ।
07033008c ಅಭಿಮನ್ಯೌ ಕಿಲೈಕಸ್ಥಾ ದೃಶ್ಯಂತೇ ಗುಣಸಂಚಯಾಃ।।

ಕೃಷ್ಣನಲ್ಲಿ ಯಾವ ಉಜ್ಜ್ವಲ ಗುಣಗಳಿವೆಯೋ, ಪಾಂಡವರಲ್ಲಿ ಯಾವ ಗುಣಗಳಿವೆಯೋ ಆ ಗುಣಸಂಚಯಗಳೆಲ್ಲವೂ ಅಭಿಮನ್ಯುವಿನಲ್ಲಿ ಇದ್ದುದು ಕಂಡುಬರುತ್ತಿತ್ತು.

07033009a ಯುಧಿಷ್ಠಿರಸ್ಯ ಧೈರ್ಯೇಣ ಕೃಷ್ಣಸ್ಯ ಚರಿತೇನ ಚ।
07033009c ಕರ್ಮಭಿರ್ಭೀಮಸೇನಸ್ಯ ಸದೃಶೋ ಭೀಮಕರ್ಮಣಃ।।

ಧೈರ್ಯದಲ್ಲಿ ಯುಧಿಷ್ಠಿರನ, ಚಾರಿತ್ರ್ಯಲ್ಲಿ ಕೃಷ್ಣನ, ಕರ್ಮಗಳಲ್ಲಿ ಭೀಮಕರ್ಮಿ ಭೀಮಸೇನನ ಸದೃಶನಾಗಿದ್ದನು.

07033010a ಧನಂಜಯಸ್ಯ ರೂಪೇಣ ವಿಕ್ರಮೇಣ ಶ್ರುತೇನ ಚ।
07033010c ವಿನಯಾತ್ಸಹದೇವಸ್ಯ ಸದೃಶೋ ನಕುಲಸ್ಯ ಚ।।

ರೂಪ-ವಿಕ್ರಮಗಳಲ್ಲಿ ಧನಂಜಯನ, ಮತ್ತು ಪಾಂಡಿತ್ಯ-ವಿನಯಗಳಲ್ಲಿ ಸಹದೇವ-ನಕುಲರ ಸದೃಶನಾಗಿದ್ದನು.”

07033011 ಧೃತರಾಷ್ಟ್ರ ಉವಾಚ।
07033011a ಅಭಿಮನ್ಯುಮಹಂ ಸೂತ ಸೌಭದ್ರಮಪರಾಜಿತಂ।
07033011c ಶ್ರೋತುಮಿಚ್ಚಾಮಿ ಕಾರ್ತ್ಸ್ನ್ಯೆನ ಕಥಮಾಯೋಧನೇ ಹತಃ।।

ಧೃತರಾಷ್ಟ್ರನು ಹೇಳಿದನು: “ಸೂತ! ಅಪರಾಜಿತ ಸೌಭದ್ರ ಅಭಿಮನ್ಯುವು ಹತನಾದುದನ್ನು ಸಂಪೂರ್ಣವಾಗಿ ಕೇಳಲು ಬಯಸುತ್ತೇನೆ. ಯುದ್ಧಮಾಡುತ್ತಿರುವಾಗ ಅವನು ಹೇಗೆ ಹತನಾದ?”

07033012 ಸಂಜಯ ಉವಾಚ।
07033012a ಚಕ್ರವ್ಯೂಹೋ ಮಹಾರಾಜ ಆಚಾರ್ಯೇಣಾಭಿಕಲ್ಪಿತಃ।
07033012c ತತ್ರ ಶಕ್ರೋಪಮಾಃ ಸರ್ವೇ ರಾಜಾನೋ ವಿನಿವೇಶಿತಾಃ।।

ಸಂಜಯನು ಹೇಳಿದನು: “ಮಹಾರಾಜ! ಆಚಾರ್ಯರು ರಚಿಸಿದ ಚಕ್ರವ್ಯೂಹದಲ್ಲಿ ಇಂದ್ರಸಮಾನ ರಾಜರೆಲ್ಲರೂ ಪ್ರತಿಷ್ಠಿತರಾಗಿದ್ದರು.

07033013a ಸಂಘಾತೋ ರಾಜಪುತ್ರಾಣಾಂ ಸರ್ವೇಷಾಮಭವತ್ತದಾ।
07033013c ಕೃತಾಭಿಸಮಯಾಃ ಸರ್ವೇ ಸುವರ್ಣವಿಕೃತಧ್ವಜಾಃ।।

ಆಗ ಅಲ್ಲಿ ಎಲ್ಲ ಪ್ರತಿಜ್ಞೆಮಾಡಿದ್ದ, ಸುವರ್ಣವಿಕೃತಧ್ವಜ ರಾಜಪುತ್ರರ ಒಕ್ಕೂಟವು ಸೇರಿತ್ತು.

07033014a ರಕ್ತಾಂಬರಧರಾಃ ಸರ್ವೇ ಸರ್ವೇ ರಕ್ತವಿಭೂಷಣಾಃ।
07033014c ಸರ್ವೇ ರಕ್ತಪತಾಕಾಶ್ಚ ಸರ್ವೇ ವೈ ಹೇಮಮಾಲಿನಃ।।

ಎಲ್ಲರೂ ಕೆಂಪು ವಸ್ತ್ರಗಳನ್ನು ಧರಿಸಿದ್ದರು. ಎಲ್ಲರೂ ಕೆಂಪು ಆಭರಣಗಳನ್ನು ಧರಿಸಿದ್ದರು. ಎಲ್ಲರಿಗೂ ಕೆಂಪು ಧ್ವಜಗಳಿದ್ದವು. ಎಲ್ಲರೂ ಚಿನ್ನದ ಮಾಲೆಗಳನ್ನು ಧರಿಸಿದ್ದರು.

07033015a ತೇಷಾಂ ದಶಸಹಸ್ರಾಣಿ ಬಭೂವುರ್ದೃಢಧನ್ವಿನಾಂ।
07033015c ಪೌತ್ರಂ ತವ ಪುರಸ್ಕೃತ್ಯ ಲಕ್ಷ್ಮಣಂ ಪ್ರಿಯದರ್ಶನಂ।।

ನಿನ್ನ ಮೊಮ್ಮಗ ಪ್ರಿಯದರ್ಶನ ಲಕ್ಷ್ಮಣನನ್ನು ಮುಂದೆ ಇರಿಸಿಕೊಂಡಿದ್ದ ಆ ದೃಢಧನ್ವಿಗಳ ಸಂಖ್ಯೆ ಹತ್ತುಸಾವಿರವಾಗಿತ್ತು.

07033016a ಅನ್ಯೋನ್ಯಸಮದುಃಖಾಸ್ತೇ ಅನ್ಯೋನ್ಯಸಮಸಾಹಸಾಃ।
07033016c ಅನ್ಯೋನ್ಯಂ ಸ್ಪರ್ಧಮಾನಾಶ್ಚ ಅನ್ಯೋನ್ಯಸ್ಯ ಹಿತೇ ರತಾಃ।।

ಒಬ್ಬನಿಗಾಗುವ ದುಃಖವು ಎಲ್ಲರಿಗೂ ಸಮಾನವೆಂದು ಭಾವಿಸಿದ್ದರು. ಸಾಹಸದಲ್ಲಿ ಅನ್ಯೋನ್ಯರ ಸಮನಾಗಿದ್ದರು. ಅನ್ಯೋನ್ಯರೊಂದಿಗೆ ಸ್ಪರ್ಧಿಸುತ್ತಿದ್ದರು. ಮತ್ತು ಅನ್ಯೋನ್ಯರ ಹಿತಾಸಕ್ತಿಯುಳ್ಳವರಾಗಿದ್ದರು.

07033017a ಕರ್ಣದುಃಶಾಸನಕೃಪೈರ್ವೃತೋ ರಾಜಾ ಮಹಾರಥೈಃ।
07033017c ದೇವರಾಜೋಪಮಃ ಶ್ರೀಮಾನ್ ಶ್ವೇತಚ್ಚತ್ರಾಭಿಸಂವೃತಃ।
07033017e ಚಾಮರವ್ಯಜನಾಕ್ಷೇಪೈರುದಯನ್ನಿವ ಭಾಸ್ಕರಃ।।
07033018a ಪ್ರಮುಖೇ ತಸ್ಯ ಸೈನ್ಯಸ್ಯ ದ್ರೋಣೋಽವಸ್ಥಿತನಾಯಕೇ।

ಕರ್ಣ-ದುಃಶಾಸನರಿಂದ ಮತ್ತು ಮಹಾರಥ ರಾಜರಿಂದ ಪರಿವೃತನಾಗಿ, ದೇವರಾಜನಂತಿದ್ದ ಶ್ರೀಮಾನ್ ಶ್ವೇತಚತ್ರದಡಿಯಲ್ಲಿ, ಚಾಮರ ಬೀಸಣಿಗೆಗಳನ್ನು ಬೀಸುತ್ತಿರಲು, ಉದಯಿಸುತ್ತಿರುವ ಭಾಸ್ಕರನಂತೆ ಆ ಸೈನ್ಯದ ಪ್ರಮುಖ ನಾಯಕನಾಗಿ ದ್ರೋಣನು ವ್ಯವಸ್ಥಿತನಾಗಿದ್ದನು.

07033018c ಸಿಂಧುರಾಜಸ್ತಥಾತಿಷ್ಠಚ್ಚ್ರೀಮಾನ್ಮೇರುರಿವಾಚಲಃ।।
07033019a ಸಿಂಧುರಾಜಸ್ಯ ಪಾರ್ಶ್ವಸ್ಥಾ ಅಶ್ವತ್ಥಾಮಪುರೋಗಮಾಃ।

ಅಲ್ಲಿ ಮೇರು ಪರ್ವತದಂತೆ ಶ್ರೀಮಾನ್ ಸಿಂಧುರಾಜನು ನಿಂತಿದ್ದನು. ಸಿಂಧುರಾಜನ ಪಕ್ಕದಲ್ಲಿ ಅಶ್ವತ್ಥಾಮನೇ ಮೊದಲಾದವರು ನಿಂತಿದ್ದರು.

07033019c ಸುತಾಸ್ತವ ಮಹಾರಾಜ ತ್ರಿಂಶತ್ತ್ರಿದಶಸನ್ನಿಭಾಃ।।
07033020a ಗಾಂಧಾರರಾಜಃ ಕಿತವಃ ಶಲ್ಯೋ ಭೂರಿಶ್ರವಾಸ್ತಥಾ।
07033020c ಪಾರ್ಶ್ವತಃ ಸಿಂಧುರಾಜಸ್ಯ ವ್ಯರಾಜಂತ ಮಹಾರಥಾಃ।।

ಮಹಾರಾಜ! ದೇವ ಸನ್ನಿಭರಾದ ನಿನ್ನ ಮೂವತ್ತು ಮಕ್ಕಳೂ, ಜೂಜುಗಾರ ಗಾಂಧಾರರಾಜನೂ, ಮಹಾರಥ ಶಲ್ಯ-ಭೂರಿಶ್ರವರೂ ಸಿಂಧುರಾಜನ ಪಕ್ಕದಲ್ಲಿ ವಿರಾಜಮಾನರಾಗಿದ್ದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ಚಕ್ರವ್ಯೂಹನಿರ್ಮಾಣೇ ತ್ರಯಸ್ತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ಚಕ್ರವ್ಯೂಹನಿರ್ಮಾಣ ಎನ್ನುವ ಮೂವತ್ಮೂರನೇ ಅಧ್ಯಾಯವು.